01595. ನೆಲ ಕುಸಿಯೆ ನೆಲೆಯೆಲ್ಲಿಹುದೊ…?


01595. ನೆಲ ಕುಸಿಯೆ ನೆಲೆಯೆಲ್ಲಿಹುದೊ…?

______________________________________

ಯಾಕವಿತೆಯೊ, ಹೇಳೊ ಮಾಧವ

– ಶಂಖ ಚಕ್ರ ಮುರಳಿ ಪಿಂಛದ ಬೆನ್ನಲಿ ?

ನಾಚಿಸಿತದಾವ ಅಪರಾಧಿ ಭಾವ ?

ಬರೆಯದ ಕವಿತೆ, ನುಡಿಸದ ರಾಗ ಕಾಡಿತೆ..? || ೦೧ ||

ಯಾಕೆ ತಲೆ ತಗ್ಗಿಸಿ ಕೂತೆಯೊ ಕೃಷ್ಣ

– ಮರೆಮಾಚಿದ ಮೊಗಕೆ ಗರಿ ತೆರೆ ಹಿಡಿದು ?

ಮಾಡಬಾರದಂತದ್ದೇನಿತ್ತೊ ಮಾಡಿದ್ದು ?

ಕೊಳಲ ನುಡಿಸದೆಯೂ ಕೂತಿಹೆ ಉದಾಸ.. || ೦೨ ||

ಖೇದವದೇಕೊ ಮುರಾರಿ ನಗು ಮೊಗವಿಲ್ಲ..

ಒಟ್ಟಾದವೇಕೊ ಮೋದಾಮೋದ ಕದನದಲಿ ?

ಗಾನ ಗಾಯನ ವಿನೋದ ಕುಣಿದಾಟದಲೆ

ರಣರಂಗದಲೆ ಶಂಖ ಚಕ್ರ ನಿಭಾವಣೆಗೆ ಬೇಸತ್ತೆಯ ? || ೦೩ ||

ನೀ ನುಡಿದಾ ಪಾಠವದಲ್ಲವೇನೊ ಶ್ರೀಹರಿ ?

ಕರ್ಮದ ಹೊಣೆಯಷ್ಟೆ ಫಲಾಫಲ ವಿಧಿಯಗುಳಿ..

ಹೊಗಳಿಕೆ ತೆಗಳಿಕೆ ಹಿಗ್ಗದ ಜಗ್ಗದ ಸ್ತಿಮಿತತೆ ಸತ್ವ

ಬೋಧಿಸಿ ನೀನೆ, ಕೂರಬಹುದೇನೊ ಹೀಗೆ ಅನಂತ ? || ೦೪ ||

ನಿನ್ನಾ ತುದಿ ಬೆರಳಲಿದೆ, ನೀನಾಡಿಸುವೀ ಜಗ ದೇವ

ನಿನ್ನನೂ ಬಿಡದ ಕರ್ಮಬಂಧ ಮುರಿದು ಅಹಂಭಾವ

ನೀ ತೋರಿದರೆಂತೊ ಖಿನ್ನ ಭಾವ, ಹುಲುಮನುಜ ಗತಿ ?

ನಡುಗಿ ಹೋದಾನು, ತೋರೊ ಸಂತೈಸೊ ನಗೆ ಮೊಗವ ! || ೦೫ ||

– ನಾಗೇಶ ಮೈಸೂರು

(Nagesha Mn)

(Picture from Internet / social media – taken via a post from Shylaja Ramesh

– thank you madam ! 🙏👍😊)