01609. ಆಸೆಯ ಕಥೆ..


01609. ಆಸೆಯ ಕಥೆ..

______________________

ನಮ್ಮ ಆಸೆಯೆಷ್ಟು ಭಾರ ?

ಬರಿ ಕನಸಿನಷ್ಟು ಹಗುರ !

ಅದು ಇರುವುದೆಷ್ಟು ದೂರ ?

ಬರಿ ನಿದಿರೆಯಷ್ಟು ಹತ್ತಿರ ! || ೦೧ ||

ಹೊರಬೇಕೇನು ಮಣಭಾರ ?

ಹೊರಲಿಲ್ಲವಲ್ಲ ಅದಕೆ ಗಾತ್ರ..

ಅದರುದ್ದ ಅಗಲ ಲೆಕ್ಕಾಚಾರ ?

ಶೂನ್ಯಗುರುತ್ವ ಅದರ ಸಹಚರ ! || ೦೨ ||

ಸಾಕೇನಷ್ಟು ಪುಟ್ಟದಿರೆ ಆಸೆ ?

ಯಾರೆಂದರದ ಸಣ್ಣದೆಂದು..

ಮತ್ತೆ ಹೇಗದರ ಭೌತಿಕಾ ಅದೃಶ್ಯ ?

ಶೂನ್ಯಕಿಟ್ಟಶೂನ್ಯ ಅನಂತದನಂತ || ೦೩ ||

ಸೋಜಿಗವಿದನೆಂತು ನಾ ವಿವರಿಸೇನು ?

ಆದಿ ಅಂತ್ಯವಿಲ್ಲವದೆ ಆಸೆ ಕಾನೂನು..

ಪುಂಖಾನುಪುಂಖ ಸ್ಪೋಟವಿರದೇನು ?

ಇತಿಮಿತಿ ಇರದಲ್ಲ ಆಸೆಯ ಥಾನು ! || ೦೪ ||

ಕಾಣದ್ದು ಕಣ್ಣಿಗೆ ಬಣ್ಣವಿಲ್ಲ ರುಚಿಯಿಲ್ಲ..

ತೂಕವಿಲ್ಲದೆಯು ಭಾರ ಹೊತ್ತರೆ ಕಲ್ಲ !

ಬಂದರೆಬರಲಿ ಆಸೆ ಹೂವಿನಾ ಗಂಧ

ಆಘ್ರಾಣಿಸಿ ತಣಿಸು ದುರಾಸೆ ದುರ್ಗಂಧ || ೦೫ ||

– ನಾಗೇಶ ಮೈಸೂರು

೧೮.೦೨.೨೦೧೮

(Nagesha Mn)

ಚಿತ್ರ: ಸ್ವಯಂಕೃತಾಪರಾಧ (ಮೊಬೈಲ್ ಕ್ಲಿಕ್)

01608. ನಾನಾರು???


01608. ನಾನಾರು???

_______________________

ನಾನನಂತಂ ನಾನನಿತ್ಯಂ

ನಾನಜರಾಮರಂ ನಾನತ್ವಂ!

ನಾನನನ್ಯಂ ನಾನಾನಾಮಂ

ನಾನಿಹೆ ಶ್ಯೂನಂ, ನಾನೆ ಮಾನ್ಯಂ || ೦೧ ||

ನಾನೇಕಂ ನಾನನೇಕಂ

ನಾನೇಕಮೇವ ಅದ್ವಿತೀಯಂ

ನಾನದ್ಭುತಂ ನಾನೇ ಬ್ರಹ್ಮಂ

ನಾನಾಕಾರಂ, ನಾನಿಹ ನಿಜಂ || ೦೨ ||

ನಾ ಪರಬ್ರಹ್ಮಂ ನಾನೆ ಗಮ್ಯಂ

ನಾನರುಣ ಕೋಟಿ ಪ್ರಖರ ಘನಂ

ನಾನುಜ್ವಲಂ ನಾನಿಗೂಢ ತಮಂ

ನಾನೆ ಜಡಂ , ನಾ ಚರಾಚರ ಸಕಲಂ || ೦೩ ||

ನಾನಾದಿಪುರುಷಂ ಮೂಲಪ್ರಕೃತಿಂ

ನಾನೇ ಪ್ರಕಾಶಂ ವಿಮರ್ಶಾರೂಪಂ

ನಾನಂತಕರಣಂ ನಾನೆ ತ್ರಿಗುಣಂ

ನಾನಾದ ಅಹಂ, ನಾನೆ ತ್ರಿಕಾರ್ಯಂ || ೦೪ ||

ನಾನಾರ್ಯಂ ನಾನಾಚಾರ್ಯಂ

ನಾನೆ ಶಿಷ್ಯಕೋಟಿಂ ಗುರುಂಕುಲಂ

ನಾನರಿಯೆಂ ನಾನಾರು ಸ್ವಯಂ

ನನ್ನರಿವಾದೊಡೆಂ, ನಾ ವಿಮುಕ್ತಂ ! || ೦೫ ||

ನಾನಿರಾಕಾರಂ ಸಾಕಾರಂ

ನಾನಿರ್ಗುಣ ಸಗುಣ ಸ್ವರೂಪಂ

ನಾನಮೇಯಂ ಅಪ್ರಮೇಯಂ

ನಾನಣುರೇಣುತೃಣಕಾಷ್ಠ ಬಲಂ || ೦೬ ||

ನಾ ಸಂಭವಾಮಿ ಸರ್ವಾಂತರ್ಯಾಮಿ

ನನ್ನೊಳಾಶ್ರಿತಂ ಕೋಟಿ ಬ್ರಹ್ಮಾಂಡಂ

ನಾನದರಸ್ತಿತ್ವಂ ಜಗಪರಿಪಾಲನಾರ್ಥಂ

ನಾನದರೊಳಗಿಹೆಂ ನೀ ನನ್ನೊಳ ವಿಶ್ವಂ! || ೦೭ ||

– ನಾಗೇಶ ಮೈಸೂರು

೧೭.೦೨.೨೦೧೮

(Nagesha Mn)

(Picture source: Internet / social media received via FB friends – thank you all🙏👍😊)

01607. ನನ್ನ ಜಗದೆ ನಾನೆ..


01607. ನನ್ನ ಜಗದೆ ನಾನೆ..

__________________________________

ಮಳೆಯಾಗುದುರಿವೆ ಕನಸೆಲ್ಲ ಹನಿದು

ನನಸಾಗಿಸುವಾಸೆಗೆ ಬಾಳೆಲೆ ನೆರಳು

ಕಾದು ಕೂತಿರುವೆ ಮೀನಂತೆ ಹಿಡಿದು

ಬಿದಿರು ಬುಟ್ಟಿ ತುಂಬ ತುಂಬಿಸಿಕೊಳ್ಳೆ || ೦೧ ||

ನೆನೆದೊದ್ದೆಮುದ್ದೆ ನಾನಾದೇನು ಸೊಗ

ಮುಗ್ಧ ಕುತೂಹಲ ಜಗ ನಗುವಲಡಗಿದೆ

ಕಾಪಿಡಬೇಕು ಬುಟ್ಟಿ ಜಾರದಂತೆ ತಬ್ಬುತ

ಕಾಲಾಟ ನೀರಲಿರೆ ಉಲ್ಲಾಸ ಸುಖಿಸುತ || ೦೨ ||

ಹೊನ್ನಕಿರಣದ ವರ್ಷಧಾರೆ ಪುಳಕಿಸುತ

ಬೆರೆಸಿದ ಕಾಂತಿ ತೆರೆ ಹೊನ್ನಾಗಿಸಿ ನೀರ

ಅಲ್ಲೆಲ್ಲೊ ಹೊಳಪು ಸುಮವೆಲ್ಲಕು ಜಳಕ

ಮಂದಹಾಸ ತೆರೆಸಿ ಮುದ ಬಾಲೆ ಭಾವ || ೦೩ ||

ಮರದ ಬೊಡ್ಡೆ ಕಲ್ಲಬಂಡೆ ದಡ ನಿಲುಕು

ಮೆಲುಕು ದಿನನಿತ್ಯವದದೆ ಕಾಯಕದಲಿ

ಮೈ ಮರೆವ ಜಗವೆನ್ನ ಜಗವಾಗಿ ಬದುಕು

ನಿಸರ್ಗದೊಡ ಪಯಣ ಸತ್ಯದನಾವರಣ || ೦೪ ||

ನನಗಿದೇ ಶಾಲೆ ಕಲಿಸುತಿದೆ ಬದುಕೆಲ್ಲ

ಬಿಸಿಲುಗಾಳಿಮಳೆ ಎಲ್ಲ ಎದುರಿಸಿ ಬಲ್ಲೆ

ತುತ್ತೆರಡು ಹೊತ್ತು ವಿರಮಿಸೆ ಗುಡಿಸಲು

ತೊಡಲಿಷ್ಟು ವಸ್ತ್ರ ವಿನೋದ ಸಾಕಾಗದೆ ? || ೦೫ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : Internet / social media – received via Muddu Dear – thank you madam 🙏👍😊)