01613. ಅಂತಃಕರಣ ಚತುರಂಗಬಲಂ


01613. ಅಂತಃಕರಣ ಚತುರಂಗಬಲಂ

_____________________________________

(ಅಹಂ, ಬುದ್ಧಿ, ಚಿತ್ತ, ಮನಸು ಇವನ್ನು ಅಂತಃಕರಣವೆನ್ನುತ್ತಾರೆ. ಅವೆಲ್ಲ ಸಮನ್ವಯದಿಂದ ಪ್ರವರ್ತಿಸಿದರೆ ಅದ್ಭುತ ಫಲಿತ ಸಾಧ್ಯ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ ಎನ್ನುವುದು ಕವನದ ಸಾರ – ಎಲ್ಲವು ತಮ್ಮ ತಮ್ಮ ಖಾತೆಯನ್ನು ತಮ್ಮಿಚ್ಚೆಯನುಸಾರ ನಿರ್ವಹಿಸಿದರೆ ಒಳಗೊಂದು ಭಾವ, ಹೊರಗೊಂದು ಭಾವ ಕಾಣಿಸಿಕೊಂಡು ಗೊಂದಲಮಯವಾಗಿಸುವುದರಿಂದ. ಧನ್ಯವಾದಗಳು 🙏👍😊)

ಅಂತಃಕರಣದಂತಃಪುರದಿಂ

ಚತುರಂಗಂ ಬಲಂ ಪ್ರಖರಂ

ಚಿತ್ತಂ ಮನಂ ಅಹಂ ಬುದ್ಧಿಃ

ಸಮರ ಸಿದ್ಧಂ ಸೂಕ್ತಂ ಸಿದ್ಧಿಃ || ೦೧ ||

ಕ್ಷಿಪ್ರೋದಯಂ ಮನೋ ವಿಚಾರಂ

ಮೂರ್ತಾಮೂತಂ ಅನಿಯಮಿತಂ

ಪರಿಸರಂ ಪ್ರೇರಿತಂ ಪ್ರಲೋಭನಂ

ಅಪರಿಚಿತಂ ಆಲೋಚನಾ ಕ್ರಮಂ || ೦೨ ||

ಮನಚಾತುರ್ಯಂ ಚಿತ್ತಚಾಂಚಲ್ಯಂ

ಸೂಕ್ತಾಸೂಕ್ತಂ ಸಂಶಿತಾತ್ಮ ಸಕಲಂ

ಚಪಲಚಿತ್ತಂ ವಿಕಲಕಲ್ಪ ಯೋಜಿತಂ

ಚರಿತ್ರಾ ಸಾದೃಶ್ಯಂ ವಿವೇಕಂ ಅದೃಶ್ಯಂ || ೦೩ ||

ಚಿತ್ತೋತ್ಕಟ ಭಾವಂ ಬುದ್ಧಿಶಕ್ತಿ ಪ್ರಕಟಂ

ವಿವೇಚಿತಂ ಸಂಧರ್ಭಂ ತುಲನಾಕ್ರಮಂ

ಚಿತ್ತೋಪದೇಶಂ ಹಿತೋಪದೇಶಂ ಸ್ವಸ್ಥಂ

ಜಾಗೃತ ಭಾವಂ ಹಿತ ಫಲಾಫಲ ಗಣಿತಂ || ೦೪ ||

ಸಮಾಲೋಚಿತ ಸತ್ವಂ ಅಂತಿಮ ದ್ವಾರಂ

ಚಿತ್ತಂ ಬಂಧಿ ಅಹಂ ತ್ರಿಗುಣಾಸುರ ಸಾರಂ

ವಿಚಾರ ಶೋಧಂ ಅಹಂ ಲೇಪಂ ಸಮವಸ್ತ್ರಂ

ಭಾವಂ ವಾಕ್ಚಾತುರ್ಯಂ ಶುದ್ಧಕೃತಕ ಮಿಶ್ರಂ || ೦೫ ||

– ನಾಗೇಶ ಮೈಸೂರು

೧೭.೦೨.೨೦೧೮

(Nagesha Mn)

(Picture source internet / social media received via FB friends – thanks a lot ! 🙏👍😊)

01612. ಆ ವಯಸೆ ಚೆನ್ನಿತ್ತು…


01612. ಆ ವಯಸೆ ಚೆನ್ನಿತ್ತು…

______________________________

ಅರಿಯದ ವಯಸೆ ಚೆನ್ನಿತ್ತಲ್ಲ..

ಇರುವೆ ಸಾಲಿಗಿಕ್ಕುತ್ತ ಸಕ್ಕರೆ

ಕಾಳೆರಚುತ್ತ ಹಕ್ಕಿಗೂ ಊಟ

ತುಂಡಲಿ ನಾಯಿಗು ಪಾಲು

ಬೆಕ್ಕಿಗು ಬಟ್ಟಲಲಿತ್ತು ಹಾಲು

ಪೂಜೆಯ ಹಣ್ಣು ಮಂಗನಿಗೆ

– ದಯೆಯೆ ಧರ್ಮದ ಮೂಲ ! || ೦೧ ||

ಬೆಳೆದಂತಳೆಯುವ ಬದುಕು

ಕೆಳೆ ಬಳಗದ ಜತೆ ಹಸಿಬಿಸಿ

ಹಂಚಿ ತಿನ್ನುವ ಕೊಸರಾಟ

ಬೈಟು ಟುಬೈತ್ರಿ ಜಟಾಪಾಟಿ

ಖಾಲಿಜೇಬೂ ಕೊಡುಗೈ ದೊರೆ

ಬಿದ್ದ ಹೊತ್ತಲಿ ಹೆಗಲಿತ್ತ ಮೋರೆ

– ಸಮರಸ ಜೀವನ ಆದರ್ಶ ಚಿತ್ತ || ೦೨ ||

ಪ್ರಾಯದಲರಳುವ ಕನಸ ಸೊಗ

ಜತೆಯಾದ ಜೀವದ ಸುತ್ತ ಜೀವ

ಹೆಜ್ಜೆಹೆಜ್ಜೆಗು ಹೂ ಚೆಲ್ಲುವ ತಪನೆ

ಬೇಡುವ ಮುನ್ನ ತಂದಿಕ್ಕುವ ಬೇನೆ

ಬೀಳದಂತಾರ ನೋಟ ಕಾವಲಲಿ

ಕಾದು ಕೆಂಗಣ್ಣು ಬಿಡುವ ಅವತಾರ

– ನಾನು ನನ್ನದು ಸ್ವಾರ್ಥ ಪ್ರೀತಿ ಆರ್ತ || ೦೩ ||

ನೆರಳೀವ ಹೆಮ್ಮರ ಚಾಮರವೀಗ

ಯಾಕೊ ಎಲ್ಲಾ ಅವಸರವಸರ..

ಬೈಕು ಕಾರು ಬಸ್ಸು ತುಂಬಿ ಪಥ

ವೇಗಕಿದ್ದರು ಮಿತಿ ಮನಸಿನೋಟ

ಕಾದ ಮೀಟಿಂಗುಗಳು, ಮತ್ತೊಂದು

ಅವ ಬಿದ್ದನಲ್ಲ ರಸ್ತೆಗೆ, ಕಾರು ಗುದ್ದೆ ಬೈಕು

ಗೊತ್ತಿಲ್ಲವೇಕೊ – ನಾನೂ ನಿಲದೆ ಓಡಿಸಿದೆ ! || ೦೪ ||

ಪಕ್ವ ಪ್ರಬುದ್ಧ ನೀತಿ ನೇಮ ಸಂಹಿತೆ

ಕಾಡುತವೆಲ್ಲ ಒಟ್ಟಾಗಿ ಮುತ್ತಿಗೆ ಧಾಳಿ

ಬೈಕಿನಂತೋಡುತಿದೆ ಮನದ ತಿಪ್ಪೆ

ಬಿಡಲೊಲ್ಲದೇಕೊ ಬಿದ್ದವನ ನೆನಪು

ನಾನು ನನ್ನವರು ಬಿದ್ದರಷ್ಟೆ ತುರುಸೆ ?

ನಗರ ಸಂತೆ ಮನುಜ ಜೀವವೆ ಅಗ್ಗವೆ ?

ಆ ವಯಸೆ ಚೆನ್ನಿತ್ತು – ಮನಸಾಗಿತ್ತಲ್ಲ ಸ್ವಚ್ಚ ! || ೦೫ ||

– ನಾಗೇಶ ಮೈಸೂರು

೧೯.೦೨.೨೦೧೮

(Nagesha Mn)

(Picture source : Internet / social media received via / posted FB friends : picture 1 Muddu Dear, Picture 2 Akshay Balegere – thank you both 🙏👍😊. @Akshay Balegere, this poem is inspired by your post narrating the incident – thanks again 🙏🙏👍)