01617. ನವಿರು ಹಕ್ಕಿ..


01617. ನವಿರು ಹಕ್ಕಿ..

____________________

ಎಂಥ ಚಂದ ಮುದ್ದು ಕೋಳಿ

ಬಿಳಿ ರೆಕ್ಕೆ ಪುಕ್ಕ ಸಾಕಿದ ತಳಿ

ಹೃದಯವದರ ಹೆಸರು ಗೊತ್ತ?

ನಿತ್ಯ ಹಾರಾಟ ರೆಕ್ಕೆ ಬಡಿಯುತ್ತ! || ೦೧ ||

ಸುತ್ತಮುತ್ತದಕೆ ಎಲ್ಲರ ಧಾಳಿ

ಕಂಗೆಡಿಸಲಿದೆ ಭಾವನೆ ಕೊಳ್ಳಿ

ಗರಿಗೆದರಿಸೊ ಉತ್ಸಾಹ ಸಹಜ

ನೋವೊ ನಲಿವೊ ನಿಮಿರು ಸಜಾ || ೦೨ ||

ಉಣಿಸಲೆಷ್ಟೊ ಉಡುಗೆ ತೊಡಿಗೆ

ಬಯಸುತದರ ಫಲ ಅಡಿಗಡಿಗೆ

ಅರಿತವರಾರದರ ನಿಜ ಸಂಕಟ

ಅದಾದರೆ ಸರಿ ಅವರಾ ವೆಂಕಟ || ೦೩ ||

ಗರಿ ಬಿಚ್ಚಿ ಹಾರಿ ಹರ್ಷೋಲ್ಲಾಸ

ಖೇದಕುದುರಿ ಕರಗುವಾ ಕ್ಲೇಷ

ಕುಸಿದ ಗೋಡೆ ತಾನೆ ಕಟ್ಟಬೇಕು

ಕಟ್ಟಿದ ಅಡೆತಡೆ ಮುರಿಯೆ ಸಾಕು || ೦೪ ||

ಎದೆ ಕೋಟೆ ಒಳಗಿಹ ಕುಸುಮ

ಕಾಲಿಕ್ಕದೆ ತುಳಿವ ಜನ ಅಧಮ

ಹಾರಿಹೋಗೆ ಬರಿ ರೆಕ್ಕೆಪುಕ್ಕವಲ್ಲ

ಪ್ರಾಣಪಕ್ಷಿ ಜಾರೀತೊ ಮುಠ್ಠಾಳ ! || ೦೫ ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source: Internet / social media received via Yamunab Bsy – thank you 🙏👍😊)

01616. ಮತ್ಸ್ಯಾವತಾರ…


01616. ಮತ್ಸ್ಯಾವತಾರ…

_________________________

ಯಾರದೊ ಮೂಗಿಗೆ ಬದುಕನು ಕಟ್ಟಿ

ಬಾಳನೌಕೆಯ ನಡೆಸಿದೆ ಅವ್ಯಕ್ತ

ಬೀಳುತೇಳುತ ತೆಪ್ಪವೊ, ತೇರೊ

ಒಪ್ಪವೊ ಓರಣವೊ ಮುಳುಗದೆ ಪೂರ ! || ೦೧ ||

ಮೀನಿಗೆ ಸಹಜ ನೀರೊಡನಾಟ

ನೀರಲುಸಿರೆ ಆಡದಿಹ ಜೀವಕೆ

ಕೂತ ದೋಣಿ ಏರಿಳಿತ ಹೊಯ್ದಾಟ

ಮಳೆ ಗಾಳಿ ಮದ್ದಳೆ ಬಿಸಿಲು ಚಳಿಯಾಟ || ೦೨ ||

ತೇಲಲುಂಟೆ ಅರ್ಧ ಮುಳಗದೆ ನೌಕೆ ?

ಈಜಬಹುದೆ ತುಸು ನೀರಿಗಿಳಿಯದೆ ?

ಬಿದ್ದವರು ಬಿದ್ದರು ಗೆದ್ದವರದೆ ಗೆಲುವು

ಸದ್ದುಗದ್ದಲದೆ ಯಾವುದು ಸರಿ ಗಮ್ಯ ? || ೦೩ ||

ನಾವೆ ನಾವಿಕ ನಾಯಕ ಭ್ರಮೆಯ ಜಗದೆ

ಎಲ್ಲರ ಕೈಯಲು ದಿಕ್ಸೂಚಿ ನಿಯಂತ್ರಣ

ಎಲ್ಲರೊಟ್ಟಿನ ನಡಿಗೆ ನಡೆಸೀತೆ ಮುನ್ನಡೆಗೆ ?

ರೊಟ್ಟಿ ತುಂಡ ಇರುವೆ ಗುಂಪು ಮುತ್ತಿದ ಹಾಗೆ || ೦೪ ||

ಇರಲೇಬೇಕಲ್ಲಿ, ಯಾವುದೊ ಮತ್ಸ್ಯಾವತಾರ

ಇರದಿದ್ದರೆಂತು ಈ ನಾವೆ ನಡೆದೀತು ಇಂತು?

ದಿಕ್ಕುದಿಕ್ಕಿಗೆಳೆದರು ಮೊತ್ತದಲಿ ಅದೆಲ್ಲಿಗೊ

ನಿಚ್ಚಳದೆ ಚಲಿಸುತಿದೆ ವ್ಯಕ್ತಾವ್ಯಕ್ತದ ನಡುವೆ ! || ೦೫ ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source : Internet / social media – taken via a post from Sridhar Bandri – thank you ! 🙏👍😊)

01615. ಮುಸುಕು…


01615. ಮುಸುಕು…

________________________

ತನ್ನಿರುವನರುಹುತಿದೆ

ತಾನಿರದೆ ಕಾಣಿಸದೆ

ಇನಿತು ತೋರದ ಕುರುಹು

ಯಾಕೆ ತೊಟ್ಟಿತೊ ಮುಸುಕು ? ||

ಒಳಗಿದೆ ಹೊರಗಿದೆ

ಸುತ್ತಮುತ್ತೆಲ್ಲ ಅದರಸ್ತಿತ್ವ

ನಾನಲ್ಲ ನಾನೆನಿಸುವ ತಾನು

ತನ್ನೇಕೊ ಬಚ್ಚಿಡುವ ಹಂಗು ? ||

ನಿಲುಕದೆತ್ತರ ಉದ್ದ

ಇಂಗಿತ ಸಾಕ್ಷಿ ಸಮೃದ್ಧ

ಹುಡುಕಿಸಬೇಕೇಕೊ ಮಾಯೆ

ಆವರಿಸಿ ತೊಳಲಾಡಿಸೊ ಪರಿ ||

ತನ್ನದೆ ಚಿಂತನೆ ಯೋಜನೆ

ಸ್ವಂತದಳವಡಿಕೆ ಅನುಷ್ಠಾನ

ಸೂತ್ರದ ಬೊಂಬೆ ದಾಳದ ಪಾತ್ರ

ಕೊಡೆ ಸರಿಯೆ ಸರಿಯಾಡದ ಪಟ್ಟ ? ||

ಹೋಗಲಿ ಇರಲೆಂತೊ ಗುಟ್ಟೆಲ್ಲ

ಬಿಚ್ಚಿಡಬಾರದೆ ನಿನ್ನಾ ಒಗಟ ?

ಕಾಣಿಸಿಕೊಂಡಾಡು ನಿನ್ನಾಟ ನಿನ್ನಿಚ್ಛೆ

ಸ್ವಯಂಭೂ, ನಿನಗೇಕಿತರ ದೂಷಣೆ ಶಿಕ್ಷೆ? ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source: Internet / social media received via FB friends- thank you all 🙏👍😊)

01614. ಶಾಪವೆ? ವರವೆ?…


01614. ಶಾಪವೆ? ವರವೆ?…

___________________

ಹಿಂಬಾಲಿಸಿದಾಗ

ಕೆನ್ನೆಗೆ ಬಿಗಿದಿದ್ದು

ಕರವೆ..

ಹಸಿದು ಬಂದಾಗ

ತಟ್ಟೆಗೆ ಬಡಿಸಿದ್ದು

ಕರವೆ..

ಕಂಗೆಟ್ಟು ಕೂತಾಗ

ನೇವರಿಸಿ ಸಂತೈಸಿದ್ದು

ಕರವೆ..

ದಣಿದು ಹಾಸಿಗೆಗೊರಗೆ

ತೋಳಪ್ಪುಗೆಯ ಹಾರ

ಕರವೆ..

ದೇಶ ವಿಕಾಸ ಪ್ರಗತಿಗೆ

ಕಟ್ಟಬೇಕಾದ್ದೆ ನಾವೆಲ್ಲ

ಕರವೆ..

ನೇರವೊ ಪರೋಕ್ಷವೊ

ಎಲ್ಲೆಡೆಯಿಹ ಕೈವಾಡ

ಕರವೆ..

ಕರವೆ,

ನೀ ಶಾಪವೆ?

ವರವೆ?

– ನಾಗೇಶ ಮೈಸೂರು

೧೯.೦೨.೨೦೧೮