01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ –


01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಅವನ ಸೃಷ್ಟಿಯೊಳಗವನೆ ಸೂತ್ರಧಾರ..

ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

https://www.facebook.com/Readoo.Kannada/posts/1131995653603574

01619. ಭಾವಗಳ ಹಕ್ಕಿ..


01619. ಭಾವಗಳ ಹಕ್ಕಿ..

____________________________

(ಅದೇ ಹೃದಯದ ಚಿತ್ರದ ಮತ್ತೊಂದು ಅವತಾರ)

ಭಾವಗಳ ಹಕ್ಕಿ ಚದುರಿ ಚೆಲ್ಲಾಪಿಲ್ಲಿ

ನೋವಿಗೊ ನಲಿವಿಗೊ ನೀವೆ ಹುಡುಕಿಕೊಳ್ಳಿ

ಹಕ್ಕಿಗೂಡದು ಚೊಕ್ಕ ನೂರೆಂಟು ಸಂಸಾರ

ಬಂದು ಹೋಗುವ ನೆಂಟ ನೂರೆಂಟವತಾರ || ೦೧ ||

ಎಚ್ಚರಿಕೆಯ ಗಂಟೆ ಬಾರಿಸಿ ಸತತ

ಮಲಿನ ನುಂಗುತ ಮಡಿಯಾಗುವ ಮೊರೆತ

ಒತ್ತಡವೊ ಕೊರೆಯೊ ಅಚ್ಚ ಬಿಳಿ ಸೂಟು

ಉಟ್ಟಿರಲೆಂದೆಷ್ಟು ಬವಣೆ ಇಟ್ಟರು ಒಗಟು || ೦೨ ||

ಅಸ್ತಿಪಂಜರದಲಿಟ್ಟ ಪರಿ ಬೇಡಿಯೊ ರಕ್ಷಣೆಯೊ?

ಗುಟ್ಟಿನ್ಹಕ್ಕಿಗಳೆಲ್ಲ ಮುಚ್ಚಿಡುವ ಹವಣಿಕೆಯೊ?

ಕಾಣಿಸದ ಭೌತಿಕದೆ ಕಾಣಿಸುವ ಭಾವುಕ ಯಾನ

ಹಕ್ಕಿ ಹಾರುವುದೊ ಕುಕ್ಕುವುದೊ ಅರಿವಾಗದಣ್ಣ || ೦೩ ||

ಕೀಲಿ ಬೇಡದ ಗಡಿಯಾರ ವಿಶ್ರಮಿಸದರೆಗಳಿಗೆ

ಕೀಲಿ ಕೊಡುತೆಲ್ಲಕು ನಡೆಸೊ ರಾಜ್ಯಭಾರದ ಮಳಿಗೆ

ಅಂತವೊ ಅನಂತವೊ ನಿಲದಿರಲೆಂದು ಹೋರಾಟ

ಸೋತು ಕೂತಾ ಗಳಿಗೆ ಬದುಕಿದ ಬಾಳು ವಿಶ್ರಾಂತ || ೦೪ ||

ಬಿಡುತಲಿಹುದಂತೆ ಸತತ ಬಿಟ್ಟೆ ನಮ್ಮಯ ಹಕ್ಕಿ

ಖಾಲಿ ಉಗ್ರಾಣವಾಗುವತನಕ ಎಲ್ಲಾ ತರ ಗಿರಕಿಕೊನೆಯಲಿರುವ ಸರಕು ಮೂರು ಮತ್ತೊಂದು ತಾಳು

ಕಾಡಿ ಕಂಗೆಡಿಸುವ ಮುನ್ನ ಹಾರು, ಗೂಡ ಬಿಟ್ಟೇಳು || ೦೫ ||

– ನಾಗೇಶ ಮೈಸೂರು

೨೧.೦೨.೨೦೧೮

(Nagesha Mn)

(Picture source : Internet / social media received via Yamunab Bsy – thank you 😊👍🙏)

01618. ಮುಗುಳುನಗೆ ಕಾರ್ಖಾನೆ !


01618. ಮುಗುಳುನಗೆ ಕಾರ್ಖಾನೆ !

___________________________________

ಇದು ಉತ್ಪಾದನಾ ಯುಗ

ಕ್ರಾಂತಿ ವೇಗವೆ ಪ್ರಧಾನ

ಸರಸರ ಸರಕು ಸಂಭ್ರಮ

ನೋಟ ಗುಣಮಟ್ಟ ವಿಹಂಗಮ ! || ೦೧ ||

ಯಾಂತ್ರಿಕ ಬಲ ಸನ್ನದ್ಧ

ಕೃತಕ ಬುದ್ಧಿಮತ್ತೆ ಬೆಂಬಲ

ಅಳತೆ ಮಸೂರದಡಿ ಚೊಕ್ಕ

ಇರಬೇಕಲ್ಲ ಪ್ರತಿಶತ ಪಕ್ಕಾ ! || ೦೨ ||

ಸರಕು ಸಾಮಾಗ್ರಿ ಸಾಲದು

ಹೊದಿಕೆಗು ಮಿರಮಿರ ಮೆರುಗು

ಕೊಳ್ಳುವ ಮನ ಬೆರಗಾಗೆ ಚಂದ

ಮುಚ್ಚೆ ಸಾಕು ಒಳಗಿನ ಕುಂದ ! || ೦೩ ||

ಕೊಳ್ಳೊ ಮನ ಡೋಲಾಯಮಾನ

ಬೆಲೆಯಾಗಿರದಲ್ಲ ಅಪ್ಯಾಯತೆ

ಮೌಲ್ಯ ಲೆಕ್ಕಾಚಾರ ಗೊಂದಲ ಸದಾ

ಮಾರುವಾ ಸೈನ್ಯ ನಿವಾರಿಸಲಸಂಬದ್ಧ || ೦೪ ||

ಮಾತಲ್ಲಿ ಗಾರುಡಿ ಮಂತ್ರದ ಮೋಡಿ

ಮುಗುಳುನಗೆಗು ಉತ್ಪಾದನೆ ಜಾಡು

ತೆರೆದ ಬಾಯುದ್ದಗಲ ಗಿಂಜಿದ ದಂತ

ಎಲ್ಲವೂ ಕೃತಕ, ಮಾತೆ ಮಾರುವದ್ಭುತ || ೦೫ ||

– ನಾಗೇಶ ಮೈಸೂರು

೨೧.೦೨.೨೦೧೮

(Picture source: https://goo.gl/images/AqDbtZ)