01621. ಕಟ್ಟಿದಳೆ ಸುಮರಾಶಿ


01621. ಕಟ್ಟಿದಳೆ ಸುಮರಾಶಿ

_____________________________

ನವಿರು ಕನಸುಗಳ ಬಿಡಿ ಹೂ

ಪೋಣಿಸಿ ಕಟ್ಟಿದ ಸುರಮಾಲೆ

ಸಾಲಂಕೃತ ಸಾಲಂಗಡಿ ಗತ್ತಲಿ

ನೇತ ವಾಸ್ತವ ಸಿಂಗಾರ ಶೃಂಗಾರ.. ||

ಒರಟು ಬಿದ್ದ ಕೈ ಬರೆದ ಕವನ

ಅನಾವರಣ ಸುಮ ನಾಗರೀಕತೆ

ಜೋಡಿಸಿದ ಬಣ್ಣ ಬಣ್ಣನೆಗೆ ಸಿಗದೆ

ಮಾಲೆ ಮೇಳದೆ ಜೋಡಿಹಕ್ಕಿ ಸೊಗಡೆ ||

ಯಾವ ಗಿಡದಲ್ಲರಳಿ ಬಂದವೊ

ಎಲ್ಲೆಲ್ಲಿಂದ ಹೆಕ್ಕಿ ತಂದ ಸರಕೊ

ಯಾರ ಮುಡಿಗೇರುವ ಸೌಭಾಗ್ಯ

ಯಾರು ಬಲ್ಲರು ಯಾನದ ಕೊನೆ..? ||

ಕೂತಚ್ಚುಕಟ್ಟಾಗಿ ನಿರಾಳ ಗುನುಗಿ

ನಾಲಿಗೆತುದಿ ಗಾನಯೋಗಿಯುಲಿ

ಕೊಳ್ಳಲಿ ಬಿಡಲಿ ನಿಲ್ಲದ ಕಾಯಕ

ಹೊಟ್ಟೆಪಾಡಷ್ಟೆ ಜೀವಕಂಟಿದ್ಹವ್ಯಾಸ ||

ಬಿಡಿಬಿಡಿಯಾಗುದುರುತಿವೆ ಸತತ

ಹೊಸತು ಪೇರಿಸುತ ಘಮದಮಲು

ಅರಳಿ ಕೊಳೆಯುವ ಮಾತಾಡದವಳು

ತನ್ನ ಪಾಡಿಗೆ ತನ್ಮಯೆ ತನ್ನಲ್ಲೆ ಪುಳಕ ||

– ನಾಗೇಶ ಮೈಸೂರು

೧೪.೦೨.೨೦೧೮

(Nagesha Mn)

ಚಿತ್ರ : ಸ್ವಯಂಕೃತಾಪರಾಧ (ಮೊಬೈಲ್ ಕ್ಲಿಕ್)