01624. ಜೀವದ್ಗೆಳೆಯ, ಸಹಾಯ ಮಾಡಯ್ಯ..


01624. ಜೀವದ್ಗೆಳೆಯ, ಸಹಾಯ ಮಾಡಯ್ಯ..

___________________________________

(‘ಗಾದೆ ಮಾತಲ್ಲಿ ಗೆದ್ದೋರು ಯಾರ? ‘ ಕವನದ ಮುಂದುವರೆದ ಭಾಗದಂತೆ ಓದಿಕೊಳ್ಳಬಹುದು – ಮತ್ತಷ್ಟು ಗಾದೆಗಳ ಜೊತೆ ಸಾಲುಗಳ ಸೆಣೆಸಾಟ! ಈ ಬಾರಿಯ ಸಂವಾದ ಜೀವದ ಗೆಳೆಯನೊಬ್ಬನ ಜೊತೆ! )

ಜೀವದ್ಗೆಳೆಯ, ಸಹಾಯ ಮಾಡಯ್ಯ..

___________________________________

ಯಾಕಪ್ಪ ನನ್ನ ಜೀವ ಹಿಂಡ್ತಿ, ಗೆಳೆಯ ?

ಪ್ರೀತಿ ಪ್ರೇಮ ಎಲ್ಲಾ ನಿಮ್ಮಿಬ್ಬರಾ ವಿಷಯ..

ತಳ್ಳಿ ನನ್ನಲ್ಲಿಗೆ ಆಳ ನೋಡೆ ಸರಿಯೇನಿ ತರಲೆ ?

ತಪ್ಪಾಗಲ್ವೆ ‘ಅಡವಿಯ ದೊಣ್ಣೆ, ಪರದೇಸಿಯ ತಲೆ’ ? || ೦೧ ||

ಲೋ ಮಂಕೆ, ಸ್ನೇಹ ಶ್ರೇಷ್ಠ ಜೀವ ಕೊಟ್ಟಾರು..!

ನೀ ಹೆದರದೆ ಹೆದರಿಸಿ ಬಾ, ನನ್ನ ಸಖರಿನ್ನಾರು ?

ಕೆಳೆಯ ಬೆಲೆ ಕಷ್ಟದಲಿ, ಅರಿವಾಗುತ್ತಂತೆ ಮೊತ್ತ

’ಅಳಿವುದೇ ಕಾಯ, ಉಳಿವುದೇ ಕೀರ್ತಿ’ ಗೊತ್ತ ! || ೦೨ ||

‘ಅಂಗೈ ಹುಣ್ಣಿಗೆ ಕನ್ನಡಿ ಯಾಕೆ’ ಬೇಕೊ ಕೂಸೆ ?

ನಿನಗವಳು ಸಿಕ್ಕಳೊ, ಬಿಟ್ಟುಬಿಡೊ ಅವಳಾಸೆ !

‘ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ’

ಯಾಕೆ ಬೇಕವಳ ಸವಾರಿ, ಸಾವಾಸ ಹುಚ್ಚಾಟ ದೊರೆ || ೦೩ ||

ಹಿತೈಷಿಯೊ, ಹಿತಶತ್ರುವೊ – ನೀನೆಂಥಾ ಗೆಳೆಯ ?

ಮಾತಲ್ಜೀವ ಕೊಡ್ತಿನಂತಿ, ಮಾಡೋಕಾಗ್ದಾ ಸಣ್ಕಾರ್ಯ ?

‘ಆಡೋದು ಮಡಿ ಉಂಬೋದು ಮೈಲಿಗೆ’ ಅನ್ನೊ ತರ ಆಡ್ಬೇಡ್ವೊ..

ಮಾತು ಕೃತಿ ಒಂದೆ ಇರ್ಬೇಕೊ, ಇರ್ದಿದ್ರೆ ಗೆಳೆತನವೆ ನೋವೊ! || ೦೪ ||

ಜೀವದ್ಗೆಳೆಯ ನಾನು, ಬಿಡ್ಸೋದ್ಹೆಂಗೊ ನಿನ್ ಹುಚ್ಚು?

ಯಾಕಾದ್ಲೊ ‘ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು’ ?

ಕಚ್ಚೋಕ್ಮೊದಲೆ ಕೊಚ್ಚೊ , ಎಡವಟ್ ಸಾವಾಸದ ಬಾಬತ್ತು !

ಪಾಡ್ಬೇಕಾ ‘ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು’ ? || ೦೫ ||

ನಿನ್ನೆ ತನ್ಕಾ ನೀನೆ, ಬೆನ್ತಟ್ಟಿ ಮುನ್ನುಗ್ಗಿಸ್ತಿದ್ದೆ ನೆನಪೈತಾ?

‘ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ’ ಗಾದೆ ಮರ್ತೋಯ್ತಾ?

ಮಾತಾಡೋಕ್ಬರಲ್ಲ ಅನ್ನೊ, ಕುಂಟು ನೆಪ ಬಿಡೊ ಜುಗ್ಗಾ

‘ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ’ || ೦೬ ||

ಕೊನೆಗ್ಹಂಗೂಹಿಂಗು ಜಗ್ಗಾಡಿ ಹೋಗೋದೇನೊ ಹೋದ

ತಂಗ್ಯವ್ವ ದೊಡ್ಡಪ್ಪ ಅಂತಾಡಿ ಅಲ್ಲೆ ಪಕ್ಷಾಂತರ ಮಾಡಿದ !

‘ಅಂದು ಬಾ ಅಂದ್ರೆ ಮಿಂದು ಬಂದ’ ಲೆಕ್ಕಾಚಾರ ಆಯ್ತಲ್ಲ

ಇನ್ಹೆಂಗಪ್ಪ ಮುಟ್ಟೋದವಳ ಹೃದಯ ಕದವಿನ್ನು ತೆಗ್ದೆ ಇಲ್ಲ || ೦೭ ||

‘ಶಿವಾ’ ಅಂತ್ಹೇಳಿ ಕೊನೆಗೆ ನಾನೆ ಹೋಗ್ಬಿಟ್ಟೆ ಅವಳ್ಮನೆಗೆ

‘ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ’

ಪುಕಪುಕ ಕಾಲ್ನಡುಕ ಕಂಡೆ ಎದುರಲ್ಲವಳಪ್ಪನ ಮೊಗವ

‘ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿಬಿಡುವ’ || ೦೭ ||

– ನಾಗೇಶ ಮೈಸೂರು

(Nagesha Mn)

ಗಾದೆಗಳ ಮೂಲ : ಕನ್ನಡ ವಿಕಿಪೀಡಿಯ

ಚಿತ್ರದ ಮೂಲ : ಅಂತರ್ಜಾಲ / ಸೋಶಿಯಲ್ ಮೀಡಿಯಾ

01623. ಗಾದೆ ಮಾತಲಿ ಗೆದ್ದೋರು ಯಾರ?


01623. ಗಾದೆ ಮಾತಲಿ ಗೆದ್ದೋರು ಯಾರ?

______________________________________________________

( ಸುಮ್ಮನೆ ಕೆಲ ಗಾದೆಗಳನ್ನು ಜೋಡಿಸಿದೊಂದು ಸಂವಾದ 😊 )

ನೀನೆಂಥಾ ಚಂದುಳ್ಳಿ ಚೆಲುವೆ !

ನೀನ್ಯಾವೂರಿನ ಹೆಸರುಳಿಸೋಳೆ..

ಕೈ ಬಿಟ್ಟೆ ನಕಲಿ ನವರತ್ನ ನೂರೆಂಟು

‘ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು’ ! || ೦೧ ||

ಹೋಗೋಗಯ್ಯ, ಯಾವೂರ ದಾಸ

ನಿಂಗ್ಯಾಕೊ, ಬಿಡು ಹಾವಿನ ಸಹವಾಸ !

‘ಅತಿ ಆಸೆ ಗತಿ ಕೇಡು’ ನಿನಗೆ ಕೊನೆಗೆ

ಬೇಕಾ ಶ್ರಮ ‘ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ’ || ೦೨ ||

ನೀನಲ್ಲ ವಿಷಕನ್ಯೆ, ವಿಷದಾ ಮಾತ್ಯಾಕಾಡ್ತಿ ?

ಅಂದ ಚಂದ ನಡೆನುಡಿ, ನೀನೆ ಸಾಟಿ ನನ್ನೊಡ್ತಿ..

ವಿಷದಲ್ಲೆ ‘ವಿಷ’ಯ ‘ಊಟ ಬಲ್ಲವನಿಗೆ ರೋಗವಿಲ್ಲ..’

ಮಾತಾಟ ಚತುರ ‘..ಮಾತು ಬಲ್ಲವನಿಗೆ ಜಗಳವಿಲ್ಲ’ || ೦೩ ||

ನಿಂಗೇನ್ಗೊತ್ತೊ ಮೂಳ ‘ದೂರದ ಬೆಟ್ಟ ನುಣ್ಣಗೆ !’

‘ಸಂಸಾರಿ ಸಹವಾಸ ಮಾಡಿ ಸಂನ್ಯಾಸಿ ಕೆಟ್ಟ’ ಹಾಗೆ

ಚಂಡಿಯಂಥಾ ಹೆಣ್ಣು, ನಿನ ಚೆಂಡಾಟಕೆ ಸಿಗದೋಳು

ನಿನ ಕೈಲಾಗದ ಕೆಲಸ, ಬಿಡು ನನ್ನ ಬೆನ್ನಟ್ಟೊ ಗೀಳು ! || ೦೪ ||

ಯಾಕಿಂಥಾ ಕಲ್ಮನಸು, ಆಡ್ಬಾರದೆ ಒಳ್ಳೆ ಮಾತು?

ವಯಸು ಪ್ರಾಯ ಕನಸು, ಪ್ರೀತಿ ಪ್ರೇಮಾನೆ ಸಂಪತ್ತು

‘ಉದ್ಯೋಗಂ ಪುರುಷ ಲಕ್ಷಣಂ’ ಹುಡುಕ್ತೀನೊಳ್ಳೆ ಕೇಮೆ

‘ಕೈ ಕೆಸರಾದರೆ ಬಾಯಿ ಮೊಸರು’ ನಂಬ್ಕೆ ತಾನೆ ಸೀಮೆ ? || ೦೫ ||

‘ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು’ ಗೊತ್ತಾ?

‘ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ’ ಗೆದ್ದಿದ್ದಾದ್ರು ಯಾವತ್ತಾ?

ನಾನಲ್ಲ ಬರಿ ಮಾತೋಳು, ನಂಬ್ದೋಳು ಗಾದೆ ಮಾತು

‘ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ || ೦೬ ||

ನಿಷ್ಠೂರದ ಮಾತ್ಯಾಕಾಡ್ತಿ, ನಾನೇನಲ್ಲ ಪೋಲಿ ಬಸವ

ಸಹವಾಸಕ್ಕೆ ಬಿದ್ದು ಕೆಟ್ಟೆ, ಕಣ್ಣಲ್ನೋಡು ಬದುಕೊ ಛಲವ..

‘ಹೊಳೆಗೆ ಸುರಿದರೂ ಅಳೆದು ಸುರಿಯಬೇಕು’ ಕಲಿತೆ ಪಾಠ

‘ಮಿಂಚಿ ಹೋದುದಕ್ಕೆ ಚಿಂತಿಸಿ ಫಲವಿಲ್ಲ‘ ಬಿಟ್ಟಾಯ್ತೆಲ್ಲ ಚಟ || ೦೭ ||

‘ವೇದ ಸುಳ್ಳಾದರು ಗಾದೆ ಸುಳ್ಳಾಗದು’ ಖಾಲಿ ನಿನ್ಹರೆಯ

ಏನಾದ್ರು ಮಾಡ್ಕೊ ಹೋಗೊ ‘ಮಾಡಿದ್ದುಣ್ಣೊ ಮಹರಾಯ’

ಹೋಗೊ ಉಢಾಳ ನನ್ನ ಕಾಡಬ್ಯಾಡ ಬರ್ತಾವ್ರೆ ನೋಡೋಕೆ

ನಾ ಮದ್ವೆ ಆಗಿ ಹೋಗೋಳು, ಇಷ್ಟರಲ್ಲೆ ಆಗ್ತೀನಿ ಅವನಾಕೆ! || ೦೮ ||

ತೋಳಾಗೈತೆ ಶಕ್ತಿ, ದುಡಿದ್ಹಾಕೋಕೆ ಸಾಕೋಕೆ ಸಂಸಾರ

ತಿದ್ಕೊಂಡು ತಪ್ಪೆಲ್ಲ ಕೋಲೆ ಬಸವನ ಹಾಗೆ ನೀಸ್ತಿನಿ ಭಾರ

‘ಹೆಡ್ಡಾಳಾದ್ರೂ ದೊಡ್ಡಾಳು ಮೇಲು’ ಬಾ ರಾಣಿಯಂಗೆ ಬಾಳೆ

‘ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು’ ಗೋಳೆ! || ೦೯ ||

ತಲೆ ಕೆಡಿಸಬ್ಯಾಡ ಹೋಗೊ, ಮನೆ ಹತ್ತಿರ ಬಂದಾಯ್ತು

‘ಹುತ್ತವ ಬಡಿದರೆ ಹಾವು ಸಾಯುವುದೇ?’ ನೆಪ್ಪಾಯ್ತು

ಹೆತ್ತೋರು ಹೊತ್ತೋರು ಮಾಡ್ತಾರೆಲ್ಲ ಬಿಡು ಎಲ್ಲ ಶಿವನಿಚ್ಛೆ

ಕಟ್ಕೋ ಹೋಗು ನಿನ್ನ ಬದುಕ, ಬಿಟ್ಟೆಲ್ಲಾ ವಯಸಿನ ಹುಚ್ಚೇ! || ೧೦ ||

ಹುತ್ತವೊ ಹಾವೊ ಕೋಲೊ ನನ್ನದೀ ಬಡಿಗೆ ನಿಲ್ಲೊದಿಲ್ಲ

‘ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ’ ಅನ್ನೊ ಜಾತಿ ನಾನಲ್ಲ

ಗೆದ್ದೆ ಗೆಲ್ತೀನೆ ಹೇಗೊ ಒಪ್ಕೋಬ್ಯಾಡ್ವೆ ಯಾರಾರ್ದೊ ಬಲವಂತ

‘ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ’ || ೧೧ ||

– ನಾಗೇಶ ಮೈಸೂರು

(Nagesha Mn)

(Picture source : from Internet / social media received via FB friends – thank you 🙏👍😊)

01622. ಅಡ್ಡಗೋಡೆ ದೀಪದ ಮಾತು..


01622. ಅಡ್ಡಗೋಡೆ ದೀಪದ ಮಾತು..

___________________________________

ಅಡ್ಡ ಗೋಡೆಯ ಮೇಲಿಟ್ಟದ್ದು

ದೀಪವೊ ಮಾತೊ ಮನಸೊ ?

ಅಡ್ಡಗಾಲಿಕ್ಕುವುದು ಅಡೆತಡೆ

ಆಗುವುದೆಲ್ಲ ಒಳ್ಳೆಯದೆನ್ನೆ ತಪ್ಪೆ ? || ೦೧ ||

ದೀಪವಿಡೆ ಬೆಳಕು ಏಕೆ ಕೊಂಕು ?

ಅಡ್ಡಗೋಡೆ ಮೇಲೆ ಮಂಕು ಕೆಳಗೆ

ಗೋಡೆಯಾಗಿ ದೀಪದಡಿಯ ಕತ್ತಲು

ಪಸರಿಸಗಲ ನೆರಳು ಬೆಳಕ ತೊಡೆದು || ೦೨ ||

ಬಿಟ್ಟಾ ವಿವರ ಮಾತ ನಂಟೇನು ?

ಯಾಕನ್ನುವರು ಅಡ್ಡಗೋಡೆ ದೀಪ?

ಬದಿಯೆರಡು ಕತ್ತಲಂತೆ ಮಾತಾಗೆ

ಹೌದೆನ್ನದ ಅಲ್ಲೆನದ ಅತಂತ್ರ ಚಿತ್ತ || ೦೩ ||

ಹೇಳಬೇಕೆಂದ ಮಾತಿವೆ ನೂರು

ಹೇಳಬಾರದೌಚಿತ್ಯ ಸಂಹಿತೆ ತಡೆ

ಬಿಡದ ಸಂಸ್ಕಾರ ಸೋಸು ವಸ್ತ್ರ

ಹೇಳದೇನನು ಹೇಳುವ ತೊಡಕು || ೦೪ ||

ಹಿತವಲ್ಲ ಅಡ್ಡಗೋಡೆ ದೀಪವಿಡೆ

ಕೋರಿಕೆಗುತ್ತರ ನಿರಾಸೆ ಮಿಣುಕು

ಸಾಯದ ಬದುಕದ ಅರೆಜೀವಿತ

ಸ್ಥಿತಿಗೆ ಮುನಿಸುತ್ತರ ಮೆಚ್ಚರಾರು || ೦೫ ||

– ನಾಗೇಶ ಮೈಸೂರು

(Nagesha Mn)

(Picture source:

https://goo.gl/images/dDUfqf

https://goo.gl/images/XaypzY)