01636. ಕೃಷ್ಣಭೂಪ, ರಾಧಾಲಾಪ..


01636. ಕೃಷ್ಣಭೂಪ, ರಾಧಾಲಾಪ..

____________________________________

ಕೃಷ್ಣ ಕೃಷ್ಣ ಕೃಷ್ಣಾ ಕೃಷ್ಣಾ..

ಕಂಡಿದ್ದೆ ನಿನ್ನ ತೊಟ್ಟಿಲಿಂದ

ತೊಟ್ಟಿಕ್ಕಿದ ತುಟಿ ಮೊಸರು

ಬೆಣ್ಣೆಯೊಳಗಿತ್ತು ನನ್ನುಸಿರು… || ೦೧ ||

ಹಿರಿಯಾಕೆ ಬರಿ ಐದೇ ವರ್ಷ

ನೀನ್ಯಾಕೆ ನೆಪವಾಗಿಸಿದೆ ?

ಹೌದೆಂದ ಪ್ರೀತಿಯ ಕರಡು

ಹಣ್ಣಾಗದೆ ಬದುಕೆಲ್ಲ ಬರುಡು…! || ೦೨ ||

ದಮನಿಸಿದೆ ದಾನವ ಸೈನ್ಯ

ನೀರಾಟದೆ ಗೋಪಿಕೆ ತಲ್ಲಣ

ನೀರಡಿಸಿ ಬಿಟ್ಟೆ ಬತ್ತಿಸಿ ಪ್ರೀತಿ

ಹೊತ್ತಿಸಿ ಆರಾಧನೆಯ ಪ್ರಣತಿ.. || ೦೩ ||

ಕೊನೆಗೂ ಹೊರಟೆ ತೊರೆದು..

ಜರಿಯಲಾರ? ಬರಿದು ನಾನು

ಗೆಳತಿಯ ಪಟ್ಟ ಕಟ್ಟಿ ವಿದಾಯ

ಕಂಬನಿ ತೊಟ್ಟ ಹೀರಿ ಸೆರಗಂಚು || ೦೪ ||

ಬಿಡಳವಳಬ್ಬೆ ಬೆನ್ನಲಿ ಕಾಡುತ್ತ

ಕಟ್ಟಿ ನಿನ್ನ ನೆನಪಿಗೊಂದು ಗಂಟು

ಗಂಡನೊಬ್ಬ ಪಾತ್ರಗಳು ಹಲವು

ಮಕ್ಕಳು ಮರಿ ಸಂಸಾರದ ಹುತ್ತ || ೦೫ ||

ಮುಗಿಯಿತೆಲ್ಲ ಮುದಿಯಾಯ್ತಲ್ಲಿ

ಹದಿಹರೆಯದ ಬಿಸುಪಿನ್ನು ಮನದೆ

ದಡ ಸೇರಿಸಿದೆನೆಲ್ಲರ ತರುವಾಯ

ಹುಡುಕಿದೆ ಸುಕ್ಕಾದ ಮೊಗ ನಿನ್ನ || ೦೬ ||

ವೇಷದೆ ನಿನ್ನರಮನೆ ಸೇರಿದರೇನು

ಕಾಣಲೆಂತೊ ಮಹಿಷಿಯರ ನಡುವೆ ?

ನನ್ನವನಲ್ಲದ ನನ್ನವನವ-ನಲ್ಲ ಕಠಿಣ

ಬೇಸರಿಸದಿರೊ ನನ್ನ ಹಾದಿ ಹಿಡಿದೆನೆ.. || ೦೭ ||

ಬಂದೆಯಲ್ಲ ಬೆನ್ನಟ್ಟಿ, ಬಿಡಲಿಲ್ಲ ನೀನು

ಕಾಡಿದ್ದೇನು ಪ್ರೀತಿಯೊ ಕಾರುಣ್ಯವೊ?

ನನ್ನಾರಾಧನೆ ನಿಲ್ಲದೊ ಬಿಡು ಚಿಂತೆ

ಕೊಟ್ಟುಬಿಡೊಂದು ಕೊನೆರಾಗ ನನದೆ.. || ೦೮ ||

ಏನೀ ಹೃದಯ ವಿದ್ರಾವಕ ಮುರಳಿನಾದ

ಯುಗಯುಗದ ನೋವೆಲ್ಲ ಕೊಳಲಿಂದ

ಹೊರಟಾಯ್ತೊ ಯಾಕೊ ಮುರುಟೋಯ್ತು?

ಮುಗಿವ ಮೊದಲೆ ಕೊಳಲೆ ಮುರಿದೊಯ್ತೊ ! || ೦೯ ||

ಕಟ್ಟಿದರೊ ಕಟ್ಟಿಹರೊ ರಂಜನೀಯ ಕಥೆ

ನಮ್ಮ ಹೊರತೆಲ್ಲಗು ನಮ್ಮ ಸ್ವಗತದ ಮಾತು

ನೀನಾದೆಯೊ ನಾನಾದೆನೊ ನಮ್ಮೊಳಗೈಕ್ಯ

ಯಾರೆಲ್ಲ ಹಾಡಿಹ ಚರಿತೆ ನಮ್ಮನಧಿಗಮಿಸುತ್ತ || ೧೦ ||

ಇದು ಯುಗ ಇದು ಕೊರಗು ಯಾರಿಗೆ ಪ್ರೀತಿ?

ಹೋಗಲಿ ಬಿಡು ಪಂಚಭೂತಗಳಿಗಾಗಲಿ ತೃಪ್ತಿ

ನಿನದೊಂದಿರಲಿ ಮೌನ ನನದೊಂದು ಮೋಹ

ತುಟಿಯಂಚಲಿ ನಕ್ಕು ಜಗವ, ಹೀಗೆ ವಂಚಿಸೋಣ ! || ೧೧ ||

– ನಾಗೇಶ ಮೈಸೂರು

೦೩.೦೩.೨೦೧೮

Advertisements

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s