01683. ಪ್ರೇಮ ಸಮರ
___________________________

ಅವಳ ಕಣ್ಣ ಬತ್ತಳಿಕೆ ತುಂಬ
ಕೋಲ್ಮಿಂಚ ಬಾಣ ಬಿತ್ತರಿಸೆ ಪ್ರೇಮ
ಗಾಳಕೆ ಸಿಕ್ಕ ಮೀನಂತೆ ಹೃದಯ
ಚಡಪಡಿಸಿ ಬಲೆಗೆ ಬಿದ್ದು ಗೋಳಾಟ ||
ಕಾಣದಾ ಬಾಣ ಸಿಗದಲ್ಲ ಲೆಕ್ಕ
ಜೊಂಪೆ ಜೊಂಪೆ ಮುಂಗುರುಳ ತರಹ
ಜೋತಾಡೊ ಮನದೆ ನೇತವಳ ಚಿತ್ರ
ಬರಿ ಕಂಗಾಲು ಚಿತ್ತ ಭ್ರಮಿಸುತ್ತ ಪರವಶ ||
ಜೊಂಪೆ ಸ್ಪರ್ಷ ಕೆನ್ನೆ ನೇವರಿಸೆ ಸದ
ದಾಳಿಂಬೆಯಂತೆ ಬಿಚ್ಚಿಟ್ಟ ಕನ್ನೆಯಧರ
ದಂತಕಾಂತಿ ಬರೆದ ಪ್ರಣಯಪತ್ರಕೆ
ಉತ್ತರಿಸಲಾಗದೆ ತತ್ತರಿಸಿ ಶರಣಾಗತ ||
ತುಟಿ ತೆರೆದ ಕದ ಮುಗುಳ್ನಗೆ ಸಿದ್ಧ
ಮೌನದ ಪ್ರಹಾರ ಅದೃಶ್ಯ ಪ್ರತಿರೋಧ
ನೀಡಿ ಕೈ ಯೋಧ ಬೇಡಿದ ಬೇಡಿ
ಬೊಗಸೆಯಲ್ಹಿಡಿದು ಬರೆದಳಲ್ಲೆ ಮುನ್ನುಡಿ ||
ಶರವರ್ಷವಲ್ಲ ಸುಮಬಾಣ ಧಾರೆ
ಘಾತಿಸಿದವಲ್ಲ ಕುಸುಮ ಕಂತುಕದಲೆ ಭಲೆ
ಯಾವ ಸಮರಕೆ ಕಮ್ಮಿ ಪ್ರೇಮ ಯುದ್ಧ
ಕಾವ್ಯ ಬರೆಸಿತೊ ಬಿಟ್ಟಿತೊ ಸಂಗಮ ಧನ್ಯ ||
– ನಾಗೇಶ ಮೈಸೂರು
೦೭.೦೪.೨೦೧೮
(Picture source: Internet / social media)
Like this:
Like ಲೋಡ್ ಆಗುತ್ತಿದೆ...
Related
Published by
ನಾಗೇಶ ಮೈಸೂರು
ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ..
ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊
ಪ್ರೀತಿಯಿಂದ,
- ನಾಗೇಶ ಮೈಸೂರು
ನಾಗೇಶ ಮೈಸೂರು ಅವರ ಎಲ್ಲಾ ಲೇಖನಗಳನ್ನು ನೋಡಿ