01727. ಇಣುಕು ನೋಟದ ಹಿಂದೆ


01727.

__________________________________

ಇಣುಕು ನೋಟದ ಭಾಷೆ

ಸಂವಹನ ನೂರಾಸೆ ವರಸೆ

ನೀ ಓದಬಲ್ಲೆಯ ಮರುಳೆ ?

ಧೀರನ ಕಾದಿಹಳು ತರಳೆ ||

ಅರೆನೋಟದಲಿಹ ಭಾವ

ಕಣ್ಮುಚ್ಚಿದ ಬೆಕ್ಕಿನ ಹಾಲು

ತುಂಬಿಕೊಳಲಪರಿಚಿತನ

ಮುಂದೊಂದಾಗಿಸೆ ಕಲ್ಯಾಣ ||

ಸೆಳೆಯುವಸ್ತ್ರವದಾ ಬೆರಗು

ರಂಗುರಂಗಿನೊಡ ಮೆರುಗು

ಒಡವೆ ವಸ್ತ್ರ ಬಿನ್ನಾಣ ಖುದ್ಧು

ನೋಡಲ್ಹವಣಿಸುತಿಹೆ ಕದ್ದು ||

ನೋಡುವನೇನು ಒಳಹೊಕ್ಕು?

ಅಂತರಾಳದಲಡಗಿಹ ಬೆಳಕು

ಕಾಣುವರ್ಧವೆ ಹೊರಗೆ ಅವ್ಯಕ್ತ

ಕಾಣದರ್ಧನಾರಿಶ್ವರಿ ಸಂಯುಕ್ತ ||

ಕಣ್ಣು ತುಟಿ ಮೂಗು ಗಲ್ಲವೆಣಿಸಿ

ನಲ್ಲನಾಗುವೆನೆನದಿರು ಇನಿಯ

ನಲ್ಲೆಯೊಡಲಾಳದ ಕವಿತೆಯ

ಓದಬಲ್ಲವನಾದರೆ ಸಹನೀಯ ||

– ನಾಗೇಶ ಮೈಸೂರು

೦೪.೦೫.೨೦೧೮

(Picture source: internet / social media / FB friends)

01726. ಚುನಾವಣಾ ಪುರಾಣ..


01726. ಚುನಾವಣಾ ಪುರಾಣ..

___________________________

ನಮ್ಮ ಚುನಾವಣೆಗಳ ಜಾತಕ

ಬರೆವವನವ ಪ್ರಳಯಾಂತಕ

ಪಟ್ಟುಗಳೆಲ್ಲ ಕರತಲಾಮಲಕ

ಕೊನೆಗನಿಸಿದ್ದೆಲ್ಲ ತಳ್ಕಂಬಳಕ ! ||

ಜೋತಿಷಿ ಪಂಡಿತ ಲೆಕ್ಕಾಚಾರ

ಜಾತಿಮತಧರ್ಮ ಸಮಾಚಾರ

ಕೂಡು ಕಳಿ ಗುಣಿಸೂ ಭಾಗಿಸು

ಸಮೀಕ್ಷೆಯಲಿ ಭವಿತ ಊಹಿಸು ||

ಪ್ರಚಾರದಲೆಲ್ಲಾ ಕುಯುಕ್ತಿ ಪಟ್ಟು

ಆರೋಪ ದೂಷಣೆ ಗೆಲ್ಲಲೆ ಜುಟ್ಟು

ಯಾರ ಕಾಲ್ಯಾರೆಳೆದರೊ ಭರಾಟೆ

ವೇದಿಕೆ ಭಾಷಣ ಮಾತಲೆ ತರಾಟೆ ||

ಕೊನೆಗವನೇ ಮತದಾರ ಪ್ರಭುವೆ

ಮತ ಹಾಕುತ ದ್ವಂದ್ವಗಳ ನಡುವೆ

ಆಸೆ ಆಮಿಷ ನೈತಿಕಾನೈತಿಕ ಗುದ್ಧಿ

ಆ ಗಳಿಗೆಯಲಿ ತೋಚಿದಂತೆ ಬುದ್ಧಿ ||

ಮಾಡಲಿಲ್ಲವಲ್ಲ ಯಾರಿಗು ನಿರಾಶೆ

ಪೂರೈಸುತ ಅವರವರ ಅಭಿಲಾಷೆ

ಒಬ್ಬಗೆ ಬಹುಮತ ಮತ್ತೊಬ್ಬ ಮಂತ್ರಿ

ಮಗದೊಬ್ಬಗಾಯ್ತು ಅಧಿಕಾರ ಖಾತ್ರಿ ||

ವಿಶಾಲ ಹೃದಯಿ ಕನ್ನಡಿಗನೇ ಸಹೃದಯಿ

ಮೆಚ್ಚಿಸಿದನೆಲ್ಲರ ತಾನಾದರು ಬಡಪಾಯಿ

ಶುರು ಯಾದವೀ ಕಲಹ ಕಚ್ಚಾಟ ಹುಚ್ಚಾಟ

ಯಾರ ಗೆಲುವೊ ಕೊನೆಗೆ ಅತಂತ್ರ ಕೂಟ ||

ನೀತಿ ಅನೀತಿ ನೈತಿಕಾನೈತಿಕ ಹೋರಾಟ

ಬಲಾಬಲ ಚಪಲ ದೇಶೋನ್ನತಿ ಮಾತಾಟ

ಕಲಸುಮೇಲೋಗರ ಅಲ್ಲೋಲಾ ಕಲ್ಲೊಲ್ಲ

ಚಂಚಲತೆಯಲ್ಲೂ ಪ್ರಜಾಪ್ರಭುತ್ವ ಅಚಲ! ||

– ನಾಗೇಶ ಮೈಸೂರು

೧೬.೦೫.೨೦೧೮

(Picture source: internet / social media / news portals)

01725. ಸಹಚರ..


01725. ಸಹಚರ..

_________________________________

‘ಇದೇ ದಾರಿ ತಾನೆ?’ ನಾನು ಕೇಳಿದೆ

ನಕ್ಕನವ ತಲೆಯಾಡಿಸುತ…

ಹೌದೊ, ಅಲ್ಲವೊ ಗೊತ್ತಾಗದ ರೀತಿಯಲ್ಲಿ;

‘ಎಡಕೊ? ಬಲಕೊ? ನೇರಕೊ?’ ನಾ ಬಿಡಲಿಲ್ಲ.

ಮತ್ತೆ ನಕ್ಕನದೇ ತಲೆಯಾಟ ಸೊಗದಲಿ..

‘ಹೋಗಲಿ ಹೇಳು ನಡಿಗೆ ಹಿಂದಕೊ? ಮುಂದಕೊ?’

ಮತ್ತದೆ ಮಂತ್ರಮುಗ್ಧ ನಗು, ಮಾತಿಲ್ಲ..

‘ಸರಿಯಪ್ಪ ದೊರೆ, ನಡೆಯಲೆ, ಓಡಲೆ ಹೇಳು‘

ಆಸಾಮಿ ಕಿಲಾಡಿ – ಮತ್ತದೆ ನಗೆಯಾಟ..

‘ನಡೆಯಲೇನು ಒಬ್ಬನೆ? ಯಾರೊ ಜತೆಗಿರಬೇಕೇನು?’

ಈ ಬಾರಿ ಮಾತ್ರ ಮೌನದೆ ನನ್ನೆ ದಿಟ್ಟಿಸಿದ..

ಕಿರುನಗೆಯ ಬದಲು ಆತಂಕದ ಗೆರೆಯಿತ್ತು..

ಮತ್ತೇನು ತೋಚದೆ ಹೊರಟೆ ನಮಿಸುತ್ತ

ಮನದಲೆ ನೂರೆಂಟು ಬಾರಿ ಶಪಿಸುತ್ತ

ಹೆಜ್ಜೆಯೆತ್ತಿಕ್ಕುತ ಅದೆ ಜಿಜ್ಞಾಸೆಯಲಿ ನಡೆದೆ

ಮನ ತೋಚಿದತ್ತ ನಡೆದರೂ ಅಯೋಮಯ

ಆತಂಕ ತುಂಬಿದೆದೆಯಲೇನೊ ಭಾರ..

ಯಾರೊ ಕರೆದಂತಾಯ್ತು..

ತಿರುಗಿ ನೋಡಿದರವನೆ ನಗುತಿದ್ದ

‘ಯಾವ ದಾರಿಯಾದರೂ ಹಿಡಿ, ಯಾವ ದಿಕ್ಕಿಗಾದರು ಸರಿ..

ಹಿಂದೆ,ಮುಂದೆ ಹೇಗಾದರು ನಡೆ, ಓಡು..

ಮರೆಯದಿರು ನೀನೆಂದು ಏಕಾಂಗಿಯಲ್ಲ

ನಿನ್ನ ಜತೆಗಿರುವೆ ನಾನು ಹಿಂದೆ, ಇಂದೂ, ಮುಂದೆ..’

ತಟ್ಟನೆ ಮಾಯವಾಗಿಬಿಟ್ಟ ಮಾಯಾವಿ

ನನ್ನೊಳಗೇನೊ ಹೊಕ್ಕಂತೆ ಅನುಭೂತಿ..

ಮತ್ತೆ ನಡೆದೆ ದಿಕ್ಕು ದೆಸೆ ಯೋಚಿಸದೆ..

ಏನಿರಬಹುದವನ ಮಾತಿನರ್ಥ ಮಥಿಸುತ್ತ!

– ನಾಗೇಶ ಮೈಸೂರು

೧೫.೦೫.೨೦೧೮

(Picture source : https://goo.gl/images/CxAA9C)