1765. ಗಜಲ್ (ನಿನ್ನ ಮಡಿಲಲ್ಲಿ)


1765. ಗಜಲ್


(ನಿನ್ನ ಮಡಿಲಲ್ಲಿ)

ಹಾತೊರೆದಿಹೆ ಮಲಗೆ, ನಿನ್ನ ಮಡಿಲಲ್ಲಿ
ಮಗುವಂತಾಗೆ ಸೊಬಗೆ, ನಿನ್ನ ಮಡಿಲಲ್ಲಿ ||

ಮಡಿಲಲೆಣಿಸುತ ತಾರೆ, ಬಾನ ಸೇರೆ
ಮನದಣಿಯದ ಬೆರಗೆ, ನಿನ್ನ ಮಡಿಲಲ್ಲಿ ||

ತುದಿಬೆರಳಲಿ ಸೆರಗ, ಸುರುಳಿ ಸುತ್ತುತ್ತ
ಮೈಮರೆಯಲಿದೆ ನನಗೆ, ನಿನ್ನ ಮಡಿಲಲ್ಲಿ ||

ಜನ್ಮಾಂತರದ ನೋವು, ಮಾಗಿ ಗಾಯ
ತೊಲಗಲೆಲ್ಲಿದೆ ಬೇಗೆ, ನಿನ್ನ ಮಡಿಲಲ್ಲಿ ||

ವ್ರಣವಾಗಿ ರಣಹದ್ದು, ಕುಕ್ಕುವ ಹೊತ್ತಲು
ಸಂತೈಸುತಿರೆ ಕಿರುನಗೆ, ನಿನ್ನ ಮಡಿಲಲ್ಲಿ ||

ನೆಮ್ಮದಿಯ ನಿರಾಳತೆ, ಎಲ್ಲ ಕನಸಂತೆ
ಕೊರಗ ಮಂಜೆಲ್ಲ ಕರಗೆ, ನಿನ್ನ ಮಡಿಲಲ್ಲಿ ||

ಬಿಟ್ಟೆಲ್ಲ ಲೌಕಿಕ ಜಗವ, ನೋಡೆ ಮೊಗವ
ತುಂಬಿತೆ ಕಣ್ಣ ಕಾಡಿಗೆ, ನಿನ್ನ ಮಡಿಲಲ್ಲಿ ||

ಹಸ್ತದೆ ಬೆರಳು ಬೆಸೆದು, ಸ್ಪರ್ಶ ಮಂತ್ರದಲೆ
ಕಟ್ಟುತಿರುವೆ ಮಾಳಿಗೆ, ನಿನ್ನ ಮಡಿಲಲ್ಲಿ ||

ಗುಬ್ಬಿಗದೇನೊ ಹುಚ್ಚಿದೆ, ನಿನ್ನಲಿ ಮದ್ದಿದೆ
ಕಂಡ ಬದುಕ ಜೋಳಿಗೆ, ನಿನ್ನ ಮಡಿಲಲ್ಲಿ ||

  • ನಾಗೇಶ ಮೈಸೂರು
    ೧೧.೦೨.೨೦೨೦

(picture source: internet / social media)

1764. ನೇಗಿಲ ಯೋಗಿ


1764. ನೇಗಿಲ ಯೋಗಿ


ನಸುಕಲೆದ್ದ ಅರುಣ ಶುದ್ಧ
ಮುಸುಕ ತೆರೆದ ಬಾನಿನುದ್ಧ
ಹಾಡುತಿತ್ತೆ ಹಕ್ಕಿ ಬೀಗಿ
ನೇಗಿಲೆತ್ತಿ ನಡೆದ ಯೋಗಿ ||

ಭುಜದಲಿಟ್ಟ ಹೆಣದ ಭಾರ
ಮನದಲಿತ್ತೆ ಋಣದ ಖಾರ
ಸಾಲ ತೀರೆ ಸಾಲದಲ್ಲಿ
ಗಿರಿವಿಯಿಟ್ಟು ಖಾಲಿ ಕತ್ತಲಿ ||

ಬೆಳಗ ಸೊಬಗ ಬಂಧ ಮೋಹ
ತಣಿಯಲೆಂತು ಮನದ ದಾಹ ?
ಉತ್ತಿ ಬಿತ್ತಿ ಬೆಳೆಯೆ ಫಸಲು
ತೀರಿ ಬಿಟ್ಟರೆ ಸಾಕು ಅಸಲು ! ||

ಸಾಲ ಚಕ್ರ ನಿಲದ ಧೂರ್ತ
ಕಾಲ ಚಕ್ರ ಅಣಕ ಮೂರ್ತ
ಭೂತ ಇರಿತ ಭವಿತ ಮರೆತ
ವರ್ತಮಾನದೆ ಮತ್ತೆ ದುಡಿತ ||

ಮುಗಿಯದಲ್ಲ ನಿಲದ ಯಾನ
ಮುಗಿವುದೆಲ್ಲ ಒಳಗ ತ್ರಾಣ
ಚಿತೆಗು ಚಿಂತೆ ಸುಡಲು ಕಟ್ಟಿಗೆ
ಇರಲು ಸಾಕು ನಡೆವ ನೆಟ್ಟಗೆ ||

  • ನಾಗೇಶ ಮೈಸೂರು
    ೧೭.೦೨.೨೦೨೦

(Picture source: Internet / social media)

ನೇಗಿಲ ಯೋಗಿ

1763. ಗಜಲ್ (ಜುಟ್ಟಿಗೆ ಮಲ್ಲಿಗೆ ಹೂವು)


1763. ಗಜಲ್

______________________

(ಜುಟ್ಟಿಗೆ ಮಲ್ಲಿಗೆ ಹೂವು)

ಹೊಟ್ಟೆಗಿಲ್ಲ ಬಟ್ಟೆಗಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು

ಕಟ್ಟಲಿಲ್ಲ ಕೆಡವಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮುಟ್ಟಲಿಲ್ಲ ತಟ್ಟಲಿಲ್ಲ, ಸಗಣಿ ಬೆರಣಿ ಗಂಜಲ

ಮಾತಂತು ಕಮ್ಮಿಯಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮಾತಿಲ್ಲ ಕಥೆಯಿಲ್ಲ, ನಂಟ ಗಂಟು ಬೇಕೆಲ್ಲಾ

ಕಿಸೆಯಲ್ಲಿ ಕಾಸಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಒಡವೆ ವಸ್ತ್ರಗಳಿಲ್ಲ, ನಕಲಿ ನಗ ಹೇರೆಲ್ಲ

ಬಿನ್ನಾಣ ಮುಗಿದಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಗುಬ್ಬಿಯಿನ್ನು ಮರೆತಿಲ್ಲ, ಕಷ್ಟದ ದಿನದ ಬೇನೆ

ಒಣ ಪ್ರತಿಷ್ಠೆ ಗೆಲ್ಲೊಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

– ನಾಗೇಶ ಮೈಸೂರು

೧೫.೦೨.೨೦೨೦

(Picture source: internet / social media)

1762. ಗಜಲ್ (ಮುಕ್ತ ನಗುವಿನಂಚಲಿ ಏನೊ ಅಮಲಿದೆ)


1762. ಗಜಲ್

___________________________________

(ಮುಕ್ತ ನಗುವಿನಂಚಲಿ ಏನೊ ಅಮಲಿದೆ)

ನಶೆಯದೆಂತು ಬಣ್ಣಿಸಲಿ ನಗುವ ತುಟಿಯದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ

ಅಧರ ತುಂಬ ಹುಟ್ಟ ಕಟ್ಟಿ ಜೇನ ಸಿಹಿಯಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಕಮಲ ದಳದ ಕಣ್ಣ ರೆಪ್ಪೆ ಕದವ ಮುಚ್ಚಿದೆ, ನಾಚಿದ ಶಿರ ಹೆಣ್ಣಾಗಿ ತನ್ನೆ ಹುಡುಕಿದೆ

ಕೆಂಪಲದ್ದಿ ಮತ್ತದೇನೊ ನವಿರ ಹಚ್ಚಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ನಾಸಿಕ ಸೊಗ ಕಣ್ಣ ಮಧ್ಯ ತನ್ನನ್ನೆ ನೆಟ್ಟಿದೆ, ಸುಮವಲ್ಲಿ ಅರಳಿ ತನ್ನ ಕಾಲನಿಟ್ಟಿದೆ

ಜಗಮಗಿಸಿದ ನತ್ತ ಸುತ್ತ ಏನೊ ಗುಟ್ಟಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ತುಂಬು ಕದಪ ರಂಗ ಬಳಪ ಮಾತಿನಲ್ಲಿದೆ, ತುಂಬುಗೆನ್ನೆ ಜೇನದೊನ್ನೆ ಕರೆಯನಿತ್ತಿದೆ

ಚಂದ ಮೊಗ ಅಂದ ಜಗದ ದಾರಿ ಕಾದಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಗುಬ್ಬಿ ಹಿಡಿದು ನಿಂತ ಕುಂಚ ಕೈ ಮತ್ತೆ ನಡುಗಿದೆ, ಚಿತ್ತ ತುಂಬ ಚಿತ್ರವವಳು ಕೈಯೆ ಓಡದೆ

ಬರೆದ ಗೆರೆಯ ಕುಂದ ಕಂಡು ನಕ್ಕ ನೆನಪಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

– ನಾಗೇಶ ಮೈಸೂರು

೧೪.೦೨.೨೦೨೦

(Picture source: internet / social media)

1761. ಗಜಲ್ (ಚಂದದ ಅಪರಾಧವಿದು)


1761. ಗಜಲ್

_______________________

(ಚಂದದ ಅಪರಾಧವಿದು)

ಮುನಿಯದಿರು ತರಳೆ ಮುನಿಸಲ್ಲಿ, ಚಂದದ ಅಪರಾಧವಿದು

ದೂಷಿಸದಿರು ಮರುಳೆ ಮನಸಲ್ಲಿ, ಚಂದದ ಅಪರಾಧವಿದು ||

ನಿದಿರೆ ಹೊದ್ದು ಮಲಗಿದ ಹೊತ್ತದು, ಚಂದಿರ ಮೊಗವೇರೆ ಖುದ್ಧು

ತುಂಟ ಕಿರುನಗೆ ಕದ್ದೆ ಮೊಗದಲ್ಲಿ, ಚಂದದ ಅಪರಾಧವಿದು ||

ನಗೆಯ ಕದ್ದ ಅರಿವಿಲ್ಲ ನಿದಿರೆ, ಗಾಳಿಗೆ ಮುಂದಲೆ ಚದುರೆ

ಗುಟ್ಟೆ ಮೆಲ್ಲ ಸವರಿದೆ ಬೆರಳಲ್ಲಿ, ಚಂದದ ಅಪರಾಧವಿದು ||

ಫಳಫಳನೆ ಹೊಳೆವ ಬೊಟ್ಟಿನಲಿ, ಚಂದ್ರನೊಳ್ಚಂದ್ರನ ತರದಲ್ಲಿ

ಕಾಣೊ ಹಣೆ ಮುದ್ದಿಸಿದೆ ಕಣ್ಣಲ್ಲಿ, ಚಂದದ ಅಪರಾಧವಿದು ||

ಕಮಲದೊಳ ಕಮಲ ಕಣ್ಣೆರಡು, ಅಮಲದ ಹುಬ್ಬಿನ ಕಾಡು

ಚುಂಬಕತೆ ಬಿಲ್ಲ ಹೆದೆ ರೆಪ್ಪೆಯಲ್ಲಿ, ಚಂದದ ಅಪರಾಧವಿದು ||

ಸಂಪಿಗೆಯ ನಾಸಿಕ ಕೈಚಳಕ, ತಿದ್ದಿದ ದೇವನು ರಸಿಕ

ಪರವಶದೆ ಮುಟ್ಟಿದೆ ಕರದಲ್ಲಿ, ಚಂದದ ಅಪರಾಧವಿದು ||

ಗಲ್ಲದೊಳ ಬೆಲ್ಲದ ಕಥೆ ಕವನ, ಕೆನ್ನೆ ಗುಳಿ ಹಾವಳಿ ತಣ್ಣ

ವಿಧಿಯಿಲ್ಲ ಕದಿಯದೆ ಮನದಲ್ಲಿ, ಚಂದದ ಅಪರಾಧವಿದು ||

ಮೃದುವಧರ ಬೆಳಕಲ್ಲಿ ಮಿನುಗೆ, ಸ್ವಪ್ನಕೇನೊ ಮೆಲ್ಲ ಗುನುಗೆ

ತುಟಿ ಕದ್ದು ಚುಂಬಿಸಿದೆ ಕನಸಲ್ಲಿ, ಚಂದದ ಅಪರಾಧವಿದು ||

ಗುಬ್ಬಿಯಾದೆ ತಪ್ಪಿದೆ ಮೈಮರೆತು, ಕದ್ದು ಚುಂಬಿಸಬಾರದಿತ್ತು

ಅದ್ಭುತ ರೂಪು ಕದ್ದೆ ಅಮಲಲ್ಲಿ, ಚಂದದ ಅಪರಾಧವಿದು ||

– ನಾಗೇಶ ಮೈಸೂರು

೧೫.೦೨.೨೦೨೦

(picture source: internet / social media)

1760. ಅಯೋಮಯ ಭಾವ


1760. ಅಯೋಮಯ ಭಾವ

________________________

ಗಲಿಗಲಿರೆಂದೆದ್ದವಲ್ಲ ಬಚ್ಚಿತ್ತೆ ಎದೆಗೂಡಲ್ಲಿ ?

ಹಾರಿದವೆಲ್ಲ ಹಕ್ಕಿ ಗರಿ ಬಿಚ್ಚಿ ಚಿಂವ್ಗುಟ್ಟುತಲಿ

ಪುಳಕ ಎಬ್ಬಿಸಿ ಹೃದಯದ ಕದ ತೆರೆದು ಮುಕ್ತಾ

ಹಾರಿದವೆಲ್ಲಿಗೊ ಕಾಣೇ ಹಾರಿಸಿ ಜತೆ ಮನಸಾ ! ||

ಅವನೊ ಇವನೊ ಯಾವನೊ ಕಣ್ಣಲಿ ಆತಂಕ

ತಂದು ಸುರಿದರೊ ಶಿರಕೆ ಎಲೆ ಹೂಬನ ವಸಂತ

ನಾಚಿಕೆ ಲೇಪನ ಕೆನ್ನೆ ತುಟಿ ಗಲ್ಲ ಕೆಂಪಿನ ಕೆಸರು

ಕರಗಿತೆ ಹಣೆಯಲಿ ಕುಂಕುಮ ಅರಿಶಿನದ ಬೆವರು ||

ಏನೀ ಜಟಾಪಟಿ ಸೂತ್ರ ? ಬೆವರಾಗುತ ಪ್ರಾಯ

ತರುಣಿಯಲರುಣೋದಯ ಯೌವನ ಕೌಮಾರ್ಯ

ಜಲಜಲಿಸುತ ಜಲಧಾರೆ ತುಟ್ಟತುದಿಗೇರಿಸಿ ಸೌಖ್ಯ

ಯಾವ ಲೋಕದ ಯಾನಕೊ ಕೊಂಡೊಯ್ದ ಮಾಯ ||

ಫ್ರೌಡಿಮೆ ಗಾಢ ಜಂಜಡ ಕನ್ಯಾಸೆರೆ ಬಯಕೆ ನಿಗೂಢ

ಬೇಕು ಬೇಡದ ಯಾತನೆ ದೂಡಿದಷ್ಟು ಹತ್ತಿರ ಜಾಡ

ಜಾರುವ ಭೀತಿ ಜಾರದೆ ಜಾರುವ ಪ್ರಲೋಭನೆ ಸತ್ಯ

ನೆರಳಿನ ತಂಪಲಿ ನೀರಡಿಕೆ ದಣಿವಾರದ ದಾಹದ ನಿತ್ಯ ||

ಗೊಂದಲ ಗದ್ದಲದ ನಡುವೆ ಪುಕಪುಕನರಳಿದ ಕಾಲ

ಪ್ರಪುಲ್ಲತೆ ಮುದ ಸಂತಸ ಕಾತರ ಭೀತಿಯ ಸಮಯ

ಮಾಡಲೇನರಿಯದೆಯು ಮಾಡುತೇನನೊ ದಿಗ್ವಿಜಯ

ಭ್ರಮಿಸುತ ಸಾಗಿದೆ ಕಲ್ಪನೆಯಲಿ ಕಟ್ಟುತ ಹವಾ ಮಹಲ ! ||

ನಾ ಪ್ರಕೃತಿ ವಿಕೃತಿ ಸುಕೃತಿ ಪುರುಷದರ್ಧ ನಾರೀಕುಲ

ಹಾವಭಾವ ನವರಸ ಬಲ ಚಂಚಲ ಮನ ಕೋಲಾಹಲ

ಹೂ ಗಿಡ ಮರ ಬಳ್ಳಿ ಕಾಯಿ ಹಣ್ಣು ಹೆಣ್ಣ ಮನ ದ್ಯೂತ

ಜಯಿಸಲದುವೆ ಹೋರಾಟ ಸರಿದಾರಿ ಮೂರ್ತಾಮೂರ್ತ ||

– ನಾಗೇಶ ಮೈಸೂರು

೧೨.೦೨.೨೦೨೦

Picture Source: Internet / social media taken from a post of ನಾ ಮೌನಿ – thank you madam 🙏😊👍)

1759. ಗಜಲ್ (ಇರಿದಂತಿದೆ)


1759. ಗಜಲ್

________________

(ಇರಿದಂತಿದೆ)

ನೀನೊರಗಿರಲು ಅವನೆದೆಗೆ, ಇರಿದಂತಿದೆ ನನ್ನೆದೆಗೆ

ನೀನಪ್ಪಿರೆ ಯಾರನೊ ಹೀಗೆ, ಇರಿದಂತಿದೆ ನನ್ನೆದೆಗೆ ||

ನಿನ್ನ ಮೊಗದಲಿರೆ ಮಂದಹಾಸ, ಸಂತೃಪ್ತ ಭಾವ ಸಂತಸ

ನನ್ನ ನಗೆ ಮುಖವಾಡ ಸೋಗೆ, ಇರಿದಂತಿದೆ ನನ್ನೆದೆಗೆ ||

ನಿನ್ನ ಸೇರಲಾಗದ ನೋವು, ತಗ್ಗದ ಮನದ ಕಾವು

ಕಾಡುತಲಿದೆ ಮತ್ತದೆ ಕೊರಗು, ಇರಿದಂತಿದೆ ನನ್ನೆದೆಗೆ ||

ಹಂಚಿಕೆ ಸಂಚು ಹೊಂಚಾಟ ಸೋತು, ಆದೆ ಯಾರದೊ ಸ್ವತ್ತು

ಯಾರಿಗ್ಹೇಳಲಿ ಎದೆ ಬೇಗೆ ? ಇರಿದಂತಿದೆ ನನ್ನೆದೆಗೆ ||

ಗುಬ್ಬಿಯ ಎದೆಯಿನ್ನು ಖಾಲಿಯಿದೆ, ಯಾರು ಇಲ್ಲದೆ ಭಾಧೆ

ಇನ್ನು ಎಷ್ಟು ದಿನ ಇರಲಿ ಹೀಗೆ ? ಇರಿದಂತಿದೆ ನನ್ನೆದೆಗೆ ||

– ನಾಗೇಶ ಮೈಸೂರು

೧೩.೦೨.೨೦೨೦