ಮಿನಿ ಕಥೆ : ದುಬಾರಿ ಮೊಬೈಲು..

ಪ್ರತಿ ತಿಂಗಳೂ ಎಣಿಸುತ್ತಿದ್ದ ಲೆಕ್ಕ ಎಷ್ಟಾಯ್ತೆಂದು. ಸಾಕಾಗುವಷ್ಟು ಸೇರಿದ ಕೂಡಲೆ ಆ ಹೊಸ ಮೊಬೈಲ್ ಕೊಂಡುಬಿಡಬೇಕು, ಅದರ ಆಕರ್ಷಕ ಕವರಿನ ಸಮೇತ. ಇನ್ನೂ ಅರ್ಧದಷ್ಟು ದುಡ್ಡು ಸೇರಬೇಕು, ಅರ್ಥಾತ್ ಇನ್ನು ಆರು ತಿಂಗಳು ಕಾಯಬೇಕು. ಒಮ್ಮೊಮ್ಮೆ ದುಡ್ಡು ಹೆಚ್ಚಾದರೂ ಸರಿ ಕಂತಿನಲ್ಲಿ ಕೊಂಡುಬಿಡೋಣವೆ? ಎನಿಸುವಷ್ಟು ಪ್ರಲೋಭನೆಯಾಗುತ್ತದೆಯಾದರು ಬಲವಂತದಿಂದ ನಿಗ್ರಹಿಸಿಕೊಂಡಿದ್ದಾನೆ ಇಲ್ಲಿಯತನಕ.
ಇದ್ದಕ್ಕಿದ್ದಂತೆ ಅವನ ಮೊರೆಯನ್ನಾರೊ ಆಲಿಸಿದಂತೆ ಆಫೀಸಿನಲ್ಲೊಂದು ಅಚ್ಚರಿಯ ಸುದ್ಧಿ – ಹಳೆಯದಾವುದೊ ಪ್ರಾಜೆಕ್ಟಿನ ಯಶಸ್ಸಿನ ಕಾರಣ ಒಮ್ಮಿಂದೊಮ್ಮೆಗೆ ಏನೋ ಸ್ಪೆಷಲ್ ಬೋನಸ್ ಕೊಡುವ ಸುದ್ಧಿ ! ಅದೂ ತಿಂಗಳ ಕೊನೆಗಿನ್ನೊಂದೆ ವಾರವಿರುವಾಗ! ಹೊಸ ಮೊಬೈಲ್ ಆಗಲೇ ಕೈಗೆ ಬಂದಂತೆ, ತಾನಾಗಲೆ ಅದನ್ನು ಹಿಡಿದು ಹೆಮ್ಮೆಯಿಂದ ನಡೆದಾಡುತ್ತಿರುವಂತೆ ಏನೇನೊ ಕನಸು..
ಆ ದಿನವೂ ಬಂದು, ಬಾಗಿಲು ತೆರೆವ ಮೊದಲೆ ಅಂಗಡಿಯ ಮುಂದೆ ಕಾದು ನಿಂತ – ಕೊನೆಗಳಿಗೆಯ ಉದ್ವಿಗ್ನತೆ ತವಕವನ್ನು ತಡೆಹಿಡಿಯಲಾಗದೆ. ತೆರೆದ ಬಾಗಿಲ ಒಳಹೊಕ್ಕವನೆ ತಾನು ಕೊಳ್ಳಬೇಕೆಂದಿದ್ದ ಮೊಬೈಲು ಯಾವುದೆಂದು ಗೊತ್ತಿದ್ದರೂ , ಒಂದೇ ಏಟಿಗೆ ಅದನ್ನು ಖರೀದಿಸಿ ಒಡ್ಡುಗಟ್ಟಿದ್ದ ನಿರೀಕ್ಷೆಯ ಉದ್ವಿಗ್ನತೆಯನ್ನು ಏಕಾಏಕಿ ಶಮನಗೊಳಿಸಲಿಚ್ಚಿಸದೆ, ಅಲ್ಲಿದ್ದ ಬೇರೆ ಬೇರೆ ಮೊಬೈಲುಗಳನ್ನು, ಫಿಚರುಗಳನ್ನು ಆಸ್ಥೆ, ಆಸಕ್ತಿಯಿಂದ ಗಮನಿಸತೊಡಗಿದ.
ನೋಡು ನೋಡುತ್ತಿದ್ದಂತೆ ತಲೆ ಕೆಟ್ಟುಹೋಗುವ ಹಾಗೆ ಆಯಿತು . ತಾನಂದುಕೊಂಡದ್ದೆಲ್ಲ ಇರುವ ಮೊಬೈಲುಗಳು ಮೂರೂ ಕಾಸಿನಿಂದ ಹಿಡಿದು ಆರು ಕಾಸಿನವರೆಗೆ ದಂಡಿದಂಡಿಯಾಗಿ ಬಿದ್ದಿದ್ದವು. ತಾನು ಅಷ್ಟೊಂದು ದುಬಾರಿ ತೆತ್ತು ಕೊಳ್ಳಬೇಕೆಂದುಕೊಂಡಿದ್ದು ಯಾವ ತರದಲ್ಲಿ ಮಿಕ್ಕಿದ್ದಕ್ಕಿಂತ ಶ್ರೇಷ್ಠ ಎಂದು ಗೊತ್ತಾಗಲೇ ಇಲ್ಲ. ಬದಲಿಗೆ ಅದರ ಹತ್ತನೇ ಒಂದು ಭಾಗದ ಬೆಲೆಗೆ ಅದಕ್ಕೂ ಮೀರಿದ ಫೀಚರ್ಗಳುಳ್ಳ ಎಷ್ಟೋ ಮಾಡೆಲ್ಲುಗಳು ಕಣ್ಣಿಗೆ ಬಿದ್ದು ಬರಿಯ ಬ್ರಾಂಡಿನ ಸಲುವಾಗಿ ಅಷ್ಟೊಂದು ತೆರಬೇಕೇ ? ಎಂದು ಸಂಕಟವೂ ಆಯ್ತು. ಜತೆ ಜತೆಗೆ ಅಲ್ಲಿರುವ ಸಾವಿರಾರು ಸಾಧ್ಯತೆಗಳಲ್ಲಿ ತಾನು ಸಾಧಾರಣ ಬಳಸುವುದು ಕೇವಲ ನಾಲ್ಕೈದು ಅಂಶಗಳನ್ನು ಮಾತ್ರ – ಮಿಕ್ಕಿದ್ದೆಲ್ಲ ಮೂಲಭೂತ ಅಗತ್ಯಕ್ಕಿಂತ ಹೆಚ್ಚಾಗಿ ಶೋಕಿ, ಸುವಿಧತೆಯ ಸಲುವಾಗಿಯೆ ಹೊರತು ಜೀವ ಹೋಗುವ ಅನಿವಾರ್ಯಗಳಲ್ಲ ಅನಿಸಿತು.
ಅದೇ ಹೊತ್ತಲ್ಲಿ ಈಚೆಗೆ ಊರಿಗೆ ಹೋಗಿದ್ದಾಗ ಅಮ್ಮ ಹೇಳುತ್ತಿದ್ದ ಮಾತು ನೆನಪಾಗಿತ್ತು – ‘ಹಳೆ ಮನೆಯ ಮಾಡೆಲ್ಲ ಹುಳ ಹಿಡಿದು ತೂತು ಬಿದ್ದು ಆಗಲೊ, ಈಗಲೊ ?ಅನ್ನುವಂತಾಗಿಹೋಗಿದೆ.. ಈ ಸಾರಿಯ ಮಳೆಗಾಲಕ್ಕೆ ಕುಸಿದು ಬೀಳದಿದ್ದರೆ ಸಾಕು’ ಅಂದಿದ್ದು.
ಏನಾಯಿತೊ ಏನೊ.. ಸರಸರನೆ ಅಲ್ಲಿಂದ ಮೊಬೈಲು ಕವರುಗಳನ್ನು ನೇತುಹಾಕಿದ್ದ ಕೌಂಟರಿನತ್ತ ಸರಸರ ನಡೆದವನೆ ನೂರು ರೂಪಾಯಿಗೆ ಸುಂದರವಾಗಿರುವಂತೆ ಕಂಡ ಕವರೊಂದನ್ನು ಖರೀದಿಸಿ, ತನ್ನ ಈಗಿರುವ ಮೊಬೈಲನ್ನು ಅದರೊಳಕ್ಕೆ ತೂರಿಸಿದ.
ಏನೊ ತೃಪ್ತಿಯಿಂದ ಹೊರಬಂದವನ ಮುಖದಲ್ಲಿ ಜಗತ್ತನ್ನೇ ಗೆದ್ದ ಸಂತೃಪ್ತ ಭಾವ; ಕಣ್ಣುಗಳಲ್ಲಿ ಮಾತಲ್ಲಿ ಹೇಳಲಾಗದ ಧನ್ಯತಾ ಭಾವ.
– ನಾಗೇಶ ಮೈಸೂರು
(Picture from Internet)