
ಸಣ್ಣ ಕಥೆ : ಬಾಂದವ್ಯ
_________________
‘ನಮಗಿಲ್ಲಿ ಅಜ್ಜಿ ತಾತಾ ಯಾವಾಗಲು ಇರುವುದೇ ಇಲ್ಲವಲ್ಲ?’
ಸುಧೀರ್ಘವಾಗಿ ಆಲೋಚಿಸುತ್ತ ಚಿಂತೆಯ ದನಿಯಲ್ಲಿ ನುಡಿದಳು ಸ್ಮೃತಿ.. ವಿದೇಶದಲ್ಲಿರುವ ಅವಳಿಗೆ ಆ ಪ್ರಶ್ನೆ ಸಹಜವೆ ಆಗಿತ್ತು.. ಅಪ್ಪ ಅಮ್ಮನ ಹೊರತಾಗಿ ಬೇರಾವ ಬಂಧುಗಳ ಸಾಂಗತ್ಯವು ಇಲ್ಲದ ಕಡೆ ಅವಳಿಗೆ ಈ ಪ್ರಶ್ನೆ ಬರಲು ಕಾರಣ ಸಹ ಅಪ್ಪ ಹೇಳುತ್ತಿದ್ದ ಕಥಾನಕಗಳು.. ಹಳ್ಳಿ ಮನೆಯಲ್ಲಿ ಅದು ಹೇಗೆ ತಾವೆಲ್ಲ ಸಂಜೆಯ ಮಬ್ಬುಗತ್ತಲಲ್ಲಿ ಕೂತು ಅಜ್ಜಿ , ತಾತಂದಿರ ಹತ್ತಿರ ಬ್ರಹ್ಮರಾಕ್ಷಸರ, ಪುರಾಣ ಪುರುಷರ, ಇತಿಹಾಸದ, ರೋಚಕ ದಂತ ಕಥೆಗಳನ್ನು ಕೇಳಿ ರೋಮಾಂಚಿತ ಗೊಳ್ಳುತ್ತಿದ್ದರೆಂದು ವರ್ಣಿಸುವಾಗ ತಾನೇನೊ ಕಳೆದುಕೊಂಡೆನೆನ್ನುವ ಭಾವ ಅವಳಲ್ಲಿ ಉದಿಸಿ, ಈ ಮಾತಾಗಿ ಹೊರಬಿದ್ದಿತ್ತು..
‘ಅದೇನೊ ನಿಜಾ ಪುಟ್ಟಿ.. ಆದರೆ ಈಗ ಮುಂದಿನ ತಿಂಗಳ ರಜೆಗೆ ನಾವೆಲ್ಲ ಊರಿಗೆ ಹೋಗುತ್ತಿದ್ದೀವಲ್ಲ..? ಅಲ್ಲೆ ಒಂದು ತಿಂಗಳತನಕ ಇದ್ದಾಗ ನಿನಗೆ ಬೇಕಾದ ಕಥೆಯಲ್ಲ ಕೇಳ್ಕೋಬಹುದು.. ಅದರಲ್ಲು ನಿನ್ನಜ್ಜಿ ಕಥೆ ಹೇಳೋದ್ರಲ್ಲಿ ಎಕ್ಸ್ ಪರ್ಟು..!’ ಎಂದು ಅವಳನ್ನು ಉತ್ತೇಜಿಸಲು ಯತ್ನಿಸಿದ ಮೋಹನ..
ಅವಳಿಗದೇನನಿಸಿತೊ.. ‘ಸರಿಯಪ್ಪ.. ಆಯ್ತು.. ಆದರೆ..’ ಎಂದು ರಾಗವೆಳೆದು ಸುಮ್ಮನಾದಳು..
‘ಆದರೆ..? ಏನಾದರೆ..?’ ಕೆದಕಿದ ಮೋಹನ..
‘ಅಜ್ಜಿ ತಾತಂಗೆ ಇಂಗ್ಲೀಷ್ ಬರುತ್ತಾ..?’
‘ಓಹೋ.. ದಿವೀನಾಗಿ ಬರುತ್ತೆ.. ಇಬ್ರೂ ಟೀಚರ್ ಆಗಿ ರಿಟೈರ್ ಆದೋರು.. ನನಗಿಂತ ಚೆನ್ನಾಗಿ ಮಾತಾಡ್ತಾರೆ.. ನನಗೆ ಕಲಿಸಿದ್ದೇ ಅವರು ಪುಟ್ಟಾ..’
ಒಂದು ಕ್ಷಣ ಸುಮ್ಮನಿದ್ದವಳು, ನಂತರ ‘ಇಲ್ಲ ಪಪ್ಪಾ.. ಅವರು ಕನ್ನಡದಲ್ಲೆ ಹೇಳಿದ್ರೆ ಚಂದ.. ಆಗ ನಾನೂ ಸಹ ಕನ್ನಡ ಮಾತಾಡೋದು ಕಲಿಬೋದು ಅಷ್ಟಿಷ್ಟು.. ಐ ವಿಲ್ ಆಸ್ಕ್ ಹರ್ ಟು ಸ್ಪೀಕ್ ಇನ್ ಕನ್ನಡ ಓನ್ಲಿ..’ ಎಂದಳು..
ಮನೆಯಲ್ಲಿ ಮಾತ್ರ ಅಷ್ಟಿಷ್ಟು ಮಾತಾಡುವ ಭಾಷೆಗೆ, ಕಲಿಯಲೇಬೇಕಾದ ಅನಿವಾರ್ಯ ಪರಿಸರವಿಲ್ಲದೆಯು ಕಲಿಯುವ ಆಸಕ್ತಿ ಹೇಗೆ ಬಂತೊ ಗೊತ್ತಾಗಲಿಲ್ಲ ಮೋಹನನಿಗೆ.. ಆದರು ಅವಳಿಗೆ ಮೂಡಿರುವ ಆಸಕ್ತಿ ಕಂಡು ಒಳಗೊಳಗೆ ಹಿಗ್ಗೇ ಆಯಿತು.. ಮನೆಯಲ್ಲಿ ಇಂಟರ್ನೆಟ್ ಟಿವಿಯಲ್ಲಿ ಕನ್ನಡ ಸಿನೆಮಾ ನೋಡುತ್ತ, ಅವಳಿಗೆ ತಟ್ಟನೆ ಕಲಿಯಬೇಕೆನಿಸಿದೆ ಎಂದು ಅವನಿಗೆ ಗೊತ್ತಾಗುವಂತಿರಲಿಲ್ಲ.. ಅವಳು ನೋಡುವುದೆಲ್ಲ ಏನಿದ್ದರು ಮಧ್ಯಾಹ್ನದ ಹೊತ್ತಲ್ಲಿ – ಅವನಿನ್ನು ಆಫೀಸಿನ ಕೆಲಸದಲ್ಲಿ ವ್ಯಸ್ತನಾಗಿರುವಾಗ.. ಹೀಗಾಗಿ ಅವಳ ಆ ಹೊಸ ಆಸಕ್ತಿ ಅವನಿಗೆ ಅಷ್ಟಾಗಿ ಗೊತ್ತಿಲ್ಲ..
ಅಂದುಕೊಂಡಿದ್ದಂತೆ ಈ ಬಾರಿಯ ಇಂಡಿಯಾ ಟ್ರಿಪ್ ಸ್ಮೃತಿಯ ಪಾಲಿಗೆ ‘ಗ್ರೇಟೇ’ ಆಯಿತು.. ಅವಳೆಂದು ಹಳ್ಳಿಯಲ್ಲಿ ಅಷ್ಟು ದಿನ ಇದ್ದವಳೆ ಅಲ್ಲ.. ಈ ಸಾರಿ ಅಜ್ಜಿ, ತಾತನ ಜೊತೆ ಎಲ್ಲರು ಊರಿನ ತೋಟದ ಮನೆಯಲ್ಲೆ ಇರುವುದೆಂದು ನಿರ್ಧರಿಸಿದ್ದರಿಂದ, ಅವಳಿಗೆ ಆ ಪ್ರಕೃತಿಯ ನಡುವೆ, ಹಳ್ಳಿಯ ಜನರೊಡನೆ ಒಡನಾಡುತ್ತ ಸ್ವಚ್ಚಂದವಾಗಿ ನಲಿಯುವ ಅವಕಾಶ ಸಿಕ್ಕಿತು.. ಇಲ್ಲಿ ಯಾವ ಸಮಯದಲ್ಲು ಅವಳಿಗೆ ಬೋರ್ ಎನಿಸಲೇ ಇಲ್ಲ. ಸದಾ ಯಾರಾದರೊಬ್ಬರು ಬಂದು ಹೋಗುತ್ತಲೆ ಇರುವ ಮನೆ.. ಅವಳೆಂದು ರುಚಿ ನೋಡಿರದ ಬಗೆಬಗೆಯ ತಿಂಡಿ ತಿನಿಸು ಮಾಡಿಕೊಡುವ ಅಜ್ಜಿ, ಸಂಜೆಯಾಗುತ್ತಲೆ ಸುತ್ತಮುತ್ತಲ ಹಲವಾರು ಪುಟಾಣಿಗಳನ್ನು ಸೇರಿಸಿಕೊಂಡು ರಮ್ಯವಾದ ಕಥೆಯನ್ನು, ಭಾವಾಭಿನಯದೊಂದಿಗೆ ಹೇಳುವ ಅಜ್ಜ, ಆಗೀಗೊಮ್ಮೆ ಜೊತೆಯಾಗುವ ಅಜ್ಜಿ, ನಡುನಡುವೆ ಬಯಲಾಟ – ಯಕ್ಷಗಾನ ಪ್ರಸಂಗಗಳ ವೀಕ್ಷಣೆ.. ಎಲ್ಲವು ಸೇರಿಕೊಂಡು ತಾನೊಂದು ಹೊಸ ಅದ್ಭುತ ಲೋಕಕ್ಕೆ ಬಂದಂತೆನಿಸಿತ್ತು ಸ್ಮೃತಿಗೆ.. ಬಂದ ಕೆಲವೇ ದಿನಗಳಲ್ಲಿ ಚೆನ್ನಾಗಿ ಕನ್ನಡ ಮಾತನಾಡಲು ಕಲಿಯುತ್ತ, ಅವರ ಮಾತುಕಥೆಗಳನ್ನು ಹೆಚ್ಚಿನ ಇಂಗ್ಲೀಷಿನ ವಿವರಣೆಯಿಲ್ಲದೆ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೂ ವೃದ್ಧಿಸತೊಡಗಿತ್ತು.. ಜೊತೆಗೆ ತನ್ನ ಅಮೇರಿಕನ್ ಶೈಲಿಯ ಮಾತಾಡುವಿಕೆಯನ್ನು ಅವರಿಗು ಕಲಿಸುತ್ತ ಅಲ್ಲಿಯ ದಿನಗಳನ್ನು ಸಂತಸದಿಂದ ಕಳೆಯತೊಡಗಿದಳು.. ಇದೇ ಸಮಯದಲ್ಲಿ ಅವಳನ್ನು ಅಜ್ಜಿ ತಾತನ ಬಳಿ ಹಳ್ಳಿ ಮನೆಯಲ್ಲಿ ಬಿಟ್ಟು, ತಾವು ಬೆಂಗಳೂರಿಗೆ ಬಂದು ಅಲ್ಲಿಂದ ತಾವು ಬಾಕಿಯಿರಿಸಿದ್ದ ಕೆಲಸಗಳತ್ತ ಗಮನ ಹರಿಸಿದ್ದರಿಂದ, ಸ್ಮೃತಿಯ ಪೂರ್ತಿ ಸಮಯವೆಲ್ಲ ಅಜ್ಜ ಅಜ್ಜಿಯರ ಜೊತೆಯಲ್ಲೆ ಕಳೆಯುವಂತಾಗಿತ್ತು..
‘ಅಜ್ಜಾ.. ನೀವು ಯಾವಾಗ್ಲು ಇದೇ ಹಳ್ಳಿ ಮನೇಲೆ ಇದ್ದಿದ್ದಾ..?’ ಒಂದು ದಿನ ಕುತೂಹಲದಲ್ಲಿ ಪ್ರಶ್ನಿಸಿದಳು ತಾತನನ್ನು.. ಅದಕ್ಕೆ ಉತ್ತರ ನೀಡಿದ್ದು ಮಾತ್ರ ಅಜ್ಜಿ..
‘ಇಲ್ಲಾ ಪುಟಾಣಿ.. ಈಗ ನಿಮ್ಮಪ್ಪ, ಅಮ್ಮಾ ಇದಾರಲ್ಲ ಬೆಂಗಳೂರು ಮನೆ? ನಾವಿಬ್ಬರು ಅಲ್ಲೆ ಇದ್ದದ್ದು.. ಇಬ್ಬರು ಅಲ್ಲಿಂದಲೆ ಕೆಲಸಕ್ಕೆ ಹೋಗ್ತಾ ಇದ್ವಿ.. ನಿಮ್ಮಪ್ಪ ಬೆಳೆದದ್ದೆಲ್ಲ ಆ ಮನೇಲೆ ಅನ್ನು.. ಈಗ ರಿಟೈರಾದ ಮೇಲೆ ಅಲ್ಲಿ ಇರೋಕೆ ಬೇಜಾರಾಯ್ತು.. ಅದಕ್ಕೆ ಇಲ್ಲಿಗೆ ಬಂದು ಬಿಟ್ವಿ.. ಇಲ್ಲಿ ಬೇರೆ ಯಾರು ನೋಡ್ಕೊಳೋರು ಇರಲಿಲ್ಲವಲ್ಲ..?’ ಎನ್ನುತ್ತ ಉದ್ದದ ವಿವರಣೆ ಕೊಟ್ಟ ಅಜ್ಜಿಯ ಮುಖವನ್ನೆ ನೋಡುತ್ತ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದಳು..
‘ಈ ಪ್ಲೇಸು ತುಂಬಾ ಚೆನ್ನಾಗಿದೆ ಅಜ್ಜಿ.. ಆ ಪಾಂಡಲ್ಲಿ ಮೀನಿದೆ, ಲೋಟಸ್ ಇದೆ, ಎಷ್ಟೊಂದು ತೆಂಗಿನ ಮರ, ಮಾವಿನ ಮರ ಎಲ್ಲಾ ಇದೆ.. ದಿನಾ ಎಷ್ಟೊಂದು ಜನ ಆಟ ಆಡೋಕೆ ಸಿಗ್ತಾರೆ.. ಮೊನ್ನೆ ನಾವು ಗಣೇಶನ್ನ ಕೂರಿಸಿ ಹಬ್ಬ ಮಾಡಿದ್ವಲ್ಲ..? ಎಷ್ಟು ಚೆನ್ನಾಗಿತ್ತು! ಅಮೇರಿಕಾದಲ್ಲಿ ನಾವು ಯಾವತ್ತು ಈ ತರ ಹಬ್ಬ ಅಂಥ ಮಾಡಿದ್ದೇ ಇಲ್ಲ.. ಈ ತರಹ ಅಡಿಗೆ, ತಿಂಡಿ ನಾನ್ಯಾವತ್ತೂ ತಿಂದಿರಲಿಲ್ಲ..’ ಕಣ್ಣಲ್ಲಿ ಮಿಂಚಿನ ಕಾಂತಿ ಸೂಸುತ್ತ ನುಡಿದಳು ಸ್ಮೃತಿ..
ಅದುವರೆಗು ಅವರಿಬ್ಬರ ಮಾತು ಕೇಳಿಸಿಕೊಳ್ಳುತ್ತಿದ್ದ ಅಜ್ಜ ತಮಾಷೆಯ ದನಿಯಲ್ಲಿ ಕೇಳಿದರು.., ‘ ಅಲ್ಲಾ ಪುಟ್ಟಿ.. ಈಗೇನೊ ಸರಿ.. ಆದರೆ ಇನ್ನೊಂದು ಸ್ವಲ್ಪ ದಿನಕ್ಕೆ ನೀನು ವಾಪಸ್ ಹೊರಟು ಹೋಗ್ತಿಯಲ್ಲ.. ಆಗ ಏನು ಮಾಡ್ತಿ? ಅಲ್ಲಿ ಬೇಕಂದ್ರು ಇವೆಲ್ಲ ಇರೋದಿಲ್ವೆ..?’
ಆ ಮಾತು ಕೇಳುತ್ತಿದ್ದಂತೆ ಅವಳ ಮುಖ ಕಳಾಹೀನವಾಗಿ ಹೋಯ್ತು.. ಅದನ್ನು ಗಮನಿಸಿದ ಅಜ್ಜಿ ಕಣ್ಣಲ್ಲೆ ಅಜ್ಜನನ್ನು ಗದರುವಂತೆ ನೋಡುತ್ತ, ‘ಅಯ್ಯೊ ಬಿಡು ಕಂದ.. ಅಲ್ಲೆಲ್ಲ ಮಾಡ್ರನ್ನಾಗಿ ಇರೋವಾಗ ಇದೆಲ್ಲ ಯಾಕೆ ನೆನಪಾಗುತ್ತೆ.. ಬೇಕು ಅಂದಾಗ ಪೋನಂತು ಮಾಡೆ ಮಾಡ್ತೀವಿ.. ವರ್ಷಕೊಂದು ಸಲ ಹೇಗೂ ಇಲ್ಲಿಗೆ ಬರ್ತೀರಲ್ಲ..’ ಎಂದು ವಾತಾವರಣವನ್ನು ತಿಳಿಯಾಗಿಸಿದರು, ಸ್ಮೃತಿಯ ಮುಖ ಮೊದಲಿನಂತೆ ಅರಳದೆ ಸ್ವಲ್ಪ ಮಂಕಾಗಿರುವುದನ್ನು ಅವರ ಸೂಕ್ಷ್ಮ ದೃಷ್ಟಿ ಗಮನಿಸದೇ ಇರಲಿಲ್ಲ..
ಅದಾದ ಮೇಲೆ ಒಂದೆರಡು ದಿನ ಸ್ವಲ್ಪ ಮಂಕಾಗಿಯೆ ಇದ್ದಳು.. ನಡುವಲ್ಲೊಂದೆರಡು ಬಾರಿ, ತಾತನ ಪೋನಿನಲ್ಲಿ ಪಪ್ಪನ ಜೊತೆ ಅದೇನೊ ಸುಧೀರ್ಘವಾಗಿ ಮಾತನಾಡಿದಳು ಬೇರೆ.. ಪಾಪ! ಅಪ್ಪ, ಅಮ್ಮನ ನೆನಪಾಗಿರಬೇಕು, ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾಳೇನೊ ಅಂದುಕೊಂಡು ಸುಮ್ಮನಾದರು ಅವಳಜ್ಜಿ ತಾತ.. ಅದಾದ ಒಂದೆರಡು ದಿನದ ನಂತರ ಮತ್ತೆ ಮೊದಲಿನಂತೆ ಚಟುವಟಿಕೆಯಿಂದ ತುಂಬಿಕೊಂಡ ಮೊಮ್ಮಗಳನ್ನು ಕಂಡು ಅವರಿಬ್ಬರಿಗು ಸಮಾಧಾನವಾಯ್ತು..
ಅವಳು ಮತ್ತೆ ವಾಪಸ್ಸು ಹೊರಡುವ ದಿನವೂ ಹತ್ತಿರವಾಯ್ತು.. ಹೊರಡುವ ಎರಡು ದಿನ ಮುಂಚೆ ಸ್ಮೃತಿಯ ಅಪ್ಪ ಅಮ್ಮ ಇಬ್ಬರು ಹಳ್ಳಿ ಮನೆಗೆ ಬಂದರು. ಕಡೆಯ ಎರಡು ದಿನ ಅಲ್ಲಿದ್ದು ಅಲ್ಲಿಂದ ನೇರ ವಿಮಾನ ಹತ್ತುವುದೆಂದು ಮೊದಲೆ ನಿರ್ಧಾರವಾಗಿತ್ತು.. ಇಷ್ಟು ದಿನ ಮೊಮ್ಮಗಳಿಂದ ತುಂಬಿಕೊಂಡಂತಿದ್ದ ಮನೆ ಮತ್ತೆ ಭಣಗುಡುವುದೆಂದು ಅರಿವಾಗುತ್ತಿದ್ದಂತೆ ಅಜ್ಜ, ಅಜ್ಜಿಯರು ಸಹ ಸ್ವಲ್ಪ ಮಂಕು ಬಡಿದವರಂತೆ ಆಗಿಹೋದರು.. ತಿಂಗಳು ಪೂರ್ತಿ ಇದ್ದ ಮೊಮ್ಮಗಳ ಸಖ್ಯ ಅವರ ಬದುಕಿನಲ್ಲೆ ಏನೋ ಒಂದು ಹೊಸತನವನ್ನು ತಂದು ಕೊಟ್ಟಿತ್ತು.. ಆದರೆ ಅದೀಗ ಇನ್ನು ಕೆಲವು ದಿನಗಳು ಮಾತ್ರ..
ಆದರೆ ಅಪ್ಪ ಅಮ್ಮ ಬಂದ ಗಳಿಗೆಯಿಂದಲೆ, ಸ್ಮೃತಿ ಮಾತ್ರ ಸ್ವಲ್ಪ ಹೆಚ್ಚು ಖುಷಿಯಲ್ಲೆ ಇದ್ದಂತಿತ್ತು.. ಅವರು ಬರುತ್ತಿದ್ದ ಹಾಗೆ ಓಡಿ ಹೋಗಿ ಪಪ್ಪನ ಕತ್ತಿಗೆ ಜೋತು ಬಿದ್ದು , ‘ ನಾನು ಕೇಳಿದ್ದೆಲ್ಲ ತಂದ್ಯಾ ಪಪ್ಪಾ..?’ ಎಂದು ಮುದ್ದಿನಿಂದ ಕೇಳಿದಾಗ ತನ್ನ ಕೈಲಿ ಹಿಡಿದಿದ್ದ ದೊಡ್ಡ ಪ್ಯಾಕೆಟೊಂದನ್ನು ಅವಳ ಕೈಗಿತ್ತು, ಕೆನ್ನೆ ಚಿವುಟಿ ಮುಗುಳ್ನಕ್ಕಿದ್ದ ಮೋಹನ.. ಅದನ್ನು ಹಿಡಿದುಕೊಂಡವಳೆ ತಾಯಿ ಅಪರ್ಣಳತ್ತ ಒಮ್ಮೆ ಕಣ್ಣು ಮಿಟುಕಿಸಿ ತನ್ನ ರೂಮಿನತ್ತ ಓಡಿ ಹೋಗಿದ್ದಳು , ಅಪ್ಪನ ಕೈ ಹಿಡಿದೆಳೆದುಕೊಂಡು.. ದೊಡ್ಡದೊಂದು ರಟ್ಟಿನ ಪೆಟ್ಟಿಗೆಯನ್ನು ತಳ್ಳಿಕೊಂಡು ಜೊತೆಗೆ ನಡೆದಿದ್ದಳು ಅಪರ್ಣ .
ಅಂದು ರಾತ್ರಿ ಅಪ್ಪನ ಜೊತೆ ರೂಮಿನಲ್ಲೆ ಏನೊ ಮಾಡುವುದರಲ್ಲಿ ನಿರತಳಾದ ಮೊಮ್ಮಗಳು ತಮ್ಮ ಮಾಮೂಲಿ ಕಥಾ ಕಾಲಕ್ಷೇಪದ ಹೊತ್ತಲ್ಲು ಬರದಿದ್ದನ್ನು ಕಂಡು ಅಜ್ಜ ಅಜ್ಜಿಯರಿಗೆ ಕೊಂಚ ನಿರಾಶೆಯೆ ಆಯ್ತು.. ಇರುವ ಇನ್ನೆರಡು ದಿನಗಳಾದರು ಸ್ವಲ್ಪ ಹೆಚ್ಚು ಕಾಲ ಕಳೆಯಬೇಕೆಂದುಕೊಂಡರೆ, ಅವಳು ಅವರಪ್ಪ, ಅಮ್ಮ ಬರುತ್ತಿದ್ದ ಹಾಗೆ ಅವರತ್ತ ಓಡಿಹೋಗಿದ್ದಾಳೆ.. ಸಹಜ – ನಾವೆಷ್ಟೆ ಪ್ರೀತಿ, ಅಕ್ಕರೆ ತೋರಿಸಿದರು ಕಡೆಗೆ ಮಕ್ಕಳಿಗೆ ಅವರ ಹೆತ್ತವರು ತಾನೇ ಮುಖ್ಯ? ಎಂದುಕೊಂಡು ಸಣ್ಣ ನಿಟ್ಟುಸಿರೊಂದನ್ನು ಬಿಟ್ಟು ಸುಮ್ಮನಾಗಿದ್ದರು ಅವರಿಬ್ಬರು.. ಅಂದೇಕೊ ರಾತ್ರಿಯಿಡಿ ಅವರಿಬ್ಬರಿಗು ಸರಿಯಾಗಿ ನಿದ್ದೆಯಿಲ್ಲ.. ಏನೊ ಚಡಪಡಿಕೆ, ಆತಂಕ, ಖೇದವೊ ವಿಷಾದವೊ ಹೇಳಲಾಗದ ಖಾಲಿ ಖಾಲಿ ಭಾವ.. ಆ ತಲ್ಲಣದಲ್ಲಿ ಸ್ವಲ್ಪ ನಿದ್ದೆ ಹತ್ತಿದ್ದೇ ಬೆಳಗಿನ ಜಾವದಲ್ಲಿ..
ಹೀಗಾಗಿ ಅವರಿಬ್ಬರು ಬೆಳಗಿನ ಏಳಾದರು ಎದ್ದೇ ಇರಲಿಲ್ಲ.. ಐದಕ್ಕೆಲ್ಲ ಎದ್ದು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದವರು, ಇಂದು ಇನ್ನು ಮಲಗಿದ್ದರು. ಅದೇ ತಾನೆ ಎದ್ದ ಸ್ಮೃತಿಗೆ, ಅವರಿನ್ನು ಎದ್ದಿಲ್ಲವೆಂದು ಗೊತ್ತಾಗುತ್ತಲೆ, ಅವರು ಮಲಗಿರುವ ರೂಮಿಗೆ ಓಡಿಬಂದು ಅವರಿಬ್ಬರನ್ನು ಅಲುಗಾಡಿಸುತ್ತ ಮೇಲೆಬ್ಬಿಸಿದಳು..
ಗಡಿಬಿಡಿಯಿಂದ ಮೇಲೆದ್ದ ಅವರ ಅಜ್ಜಿ, ‘ಅಯ್ಯೋ ದೇವ್ರೆ..! ಏನಾಯ್ತಿವತ್ತು, ಇಂಥಾ ಹಾಳು ನಿದ್ದೆ? ಬೆಳಗಾಗೆದ್ದು ಅವರಿಗೊಂದು ಕಾಫಿ ಕೂಡ ಕೊಡಲಿಲ್ಲವಲ್ಲ..’ ಎಂದು ಪೇಚಾಡಿಕೊಳ್ಳುತ್ತಿರುವ ಹೊತ್ತಿಗೆ, ಸೊಸೆ ಅಪರ್ಣ ಎರಡು ಕಾಫಿ ಲೋಟ ಹಿಡಿದು ಒಳಬಂದವಳೆ, ‘ಅಯ್ಯೊ.. ದಿನಾ ಮಾಡ್ತಾನೆ ಇರ್ತೀರಾ.. ಇವತ್ತಾದರು ಮಲಗಿರಲಿ ಅಂಥ ನಾವೆ ಎಬ್ಬಿಸಲಿಲ್ಲ ಅಮ್ಮಾ.. ತೊಗೊಳಿ ನೀವಿಬ್ಬರು ಮೊದಲು ಕಾಫಿ ಕುಡೀರಿ.. ಆಮೇಲೆ ಮಿಕ್ಕಿದ್ದು..’ ಎಂದಳು..
‘ಅಯ್ಯೊ ಅಪರ್ಣಾ, ನೀವು ಹೊರಡೋ ಮುಂಚೆ ಎಲ್ಲಾ ತಿಂಡಿ ಕರಿದಿಡಬೇಕು ಕಣೆ.. ಅದೆಲ್ಲ ಅರ್ಜೆಂಟಲ್ಲಿ ಆಗಲ್ಲ.. ಮೊದಲು ಅದಕ್ಕಿಷ್ಟು ಕಾಳುಗಳನ್ನ ನೆನೆಸಿ ಬರ್ತಿನಿ.. ಕಾಫಿ ಆಮೇಲೆ ಕುಡಿದರಾಯ್ತು..’ ಎಂದು ಮೇಲೆದ್ದವರನ್ನು ಮತ್ತಲ್ಲೆ ಕೂಡಿಸಿದ ಮೊಮ್ಮಗಳು, ‘ಇಲ್ಲಾ ಅಜ್ಜಿ.. ಇವತ್ತು ನಿಮಗೆ ಬೇರೆ ಕೆಲಸ ಇದೆ.. ಅದು ಮುಗಿದ ಮೇಲಷ್ಟೆ ನಿಮ್ಮ ತಿಂಡಿ ಗಿಂಡಿ ಎಲ್ಲ.. ಈಗ ಕಾಫಿ ಕುಡಿದ ಮೇಲೆ ನಿಮ್ಮಿಬ್ಬರಿಗು ಒಂದು ಕೋಚಿಂಗ್ ಕ್ಲಾಸ್ – ಪೂರ್ತಿ ಒಂದು ಗಂಟೆ! ಆಮೇಲೆ ಮಿಕ್ಕಿದ್ದು..’ ಎಂದಳು ಗತ್ತಿನ ದನಿಯಲ್ಲಿ.
‘ಕೋಚಿಂಗ್ ಕ್ಲಾಸಾ..?’ ಎನ್ನುತ್ತ ಮುಖಾಮುಖ ನೋಡಿಕೊಂಡರು ಅವರಿಬ್ಬರು..
‘ಅಯ್ಯೋ ಅಪ್ಪ ಮಗಳು ಸೇರಿಕೊಂಡು ರಾತ್ರಿಯೆಲ್ಲ ಅದೇನೇನೊ ಮಾಡಿಟ್ಟುಕೊಂಡಿದಾರೆ.. ನಿಮಗೆ ಟ್ರೈನಿಂಗ್ ಕೊಡಬೇಕಂತೆ.. ಅವಳು ಅವಳ ಕ್ಲಾಸ್ ಮುಗಿಯೋತನಕ ಬಿಡೋದಿಲ್ಲ.. ಅವಳು ಹೇಳಿದ ಹಾಗೆ ಕೇಳಿ..’ ಎಂದಳು ಅಪರ್ಣ..
ಕಾಫಿ ಕುಡಿದು ಮೊಮ್ಮಗಳನ್ನು ಕುತೂಹಲದಿಂದಲೆ ಹಿಂಬಾಲಿಸಿದರು ಅವರಿಬ್ಬರು – ಅದೇನು ಟ್ರೈನಿಂಗ್ ಕಾದಿದೆ ತಮಗೇ ಎನ್ನುತ್ತ.. ಅವಳ ಜೊತೆ ಸದ್ಯಕ್ಕೆ ಅವಳಿದ್ದ ರೂಮಿನೊಳಕ್ಕೆ ಬರುತ್ತಿದ್ದಂತೆ ಅವಕ್ಕಾಗಿ ನಿಂತುಬಿಟ್ಟರು ಅವರಿಬ್ಬರು..
ಆ ರೂಮಿನಲ್ಲಿ ನೀಟಾಗಿ ಜೋಡಿಸಿದ್ದ ಪುಟ್ಟ ಮೇಜೊಂದರ ಮೇಲೆ ದೊಡ್ಡ ಪರದೆಯ ಟೀವಿ ಮಾನಿಟರ್ ಸ್ಕ್ರೀನ್ ನಗುತ್ತ ಕುಳಿತಿತ್ತು.. ಅದರ ಜೊತೆಗೆ ಅದನ್ನು ಇಂಟರ್ನೆಟ್ಟಿಗೆ ಜೋಡಿಸಿದ್ದ ಕೇಬಲ್ಲುಗಳು, ವೈರ್ಲೆಸ್ ನೆಟ್ವರ್ಕ್ ಪಾಯಿಂಟ್, ರೌಟರ್ ಇತ್ಯಾದಿಗಳನ್ನು ನೀಟಾಗಿ ಜೋಡಿಸಿಟ್ಟಿದ್ದಲ್ಲದೆ, ಹತ್ತಿರದಲ್ಲಿದ್ದ ರೈಟಿಂಗ್ ಪ್ಯಾಡೊಂದರ ಮೇಲಿನ ಶೀಟುಗಳಲ್ಲಿ ಸರಳ ಸೂಚನೆಗಳ ಪಟ್ಟಿ..
‘ಅಜ್ಜಿ ತಾತ.. ನಾನು ಹೋದ ಮೇಲೆ ನಾವು ಹೇಗೆ ಮಾತುಕಥೆ ಆಡೋದು, ಈಗಿನ ಹಾಗೆ ಚಟುವಟಿಕೆ ಮಾಡೋದು? ಅಂಥ ಕೇಳಿದ್ರಲ್ಲ..? ನೋಡಿ ಇಲ್ಲಿದೆ ಅದಕ್ಕೆ ಉಪಾಯ.. ಅಪ್ಪನಿಗೆ ಹೇಳಿ ಇಡೀ ವರ್ಷದ ಇಂಟರ್ನೆಟ್ ಕನೆಕ್ಷನ್ ಜೊತೆ, ಈ ಕಂಪ್ಯೂಟರನ್ನ ತರಿಸಿ ಇನ್ಸ್ಟಾಲ್ ಮಾಡಿದ್ದೀವಿ.. ಇದನ್ನ ಹೇಗೆ ಯೂಸ್ ಮಾಡಬೇಕು, ಪ್ರಾಬ್ಲಮ್ ಆದ್ರೆ ಹೇಗೆ ಹ್ಯಾಂಡಲ್ ಮಾಡಬೇಕು ಅಂತ ನಾನೀಗ ನಿಮಗೆ ಟ್ರೈನಿಂಗ್ ಕೊಡ್ತೀನಿ.. ಪಪ್ಪನು ಹೆಲ್ಪ್ ಮಾಡ್ತಾರೆ.. ಇದಾದ ಮೇಲೆ ನಾವು ದಿನಾ ಬೇಕೂಂದಾಗೆಲ್ಲ ವಿಡಿಯೊ ಕಾಲಲ್ಲಿ ಬಂದು ಮಾತಾಡಬಹುದು.. ಹಾಗೇನೆ, ನಿಮ್ಮ ಸಾಯಂಕಾಲದ ಕಥೆ ಪ್ರೋಗ್ರಮನ್ನು ಇಲ್ಲಿಂದಲೆ ಮಾಡಬಹುದು, ಆ ಮಕ್ಕಳನ್ನು ಜೊತೆಗೆ ಸೇರಿಸಿಕೊಂಡು.. ಆಗ ಈಗೇನೇನೆಲ್ಲ ಮಾಡಿದ್ವೊ ಅದನ್ನೆಲ್ಲಾನು ಇಲ್ಲಿಂದ್ಲೆ ಮಾಡಬಹುದು.. ನಮ್ದು ಟೈಮ್ ಜೋನ್ ಬೇರೆ ಆದ ಕಾರಣ ಅದನ್ನ ಮಾತ್ರ ಅಡ್ಜೆಸ್ಟ್ ಮಾಡಿಕೊಂಡ್ರೆ ಆಯ್ತು.. ಆಗ ನಾವು ಈಗಿನ ಹಾಗೆ ಮಾತುಕಥೆ ಆಡೊಕಂತು ಸಾಧ್ಯವಾಗುತ್ತೆ.. ಆಗ ತುಂಬಾ ಮಿಸ್ ಮಾಡ್ಕೊಳಲ್ಲ ಇಬ್ರೂನು.. ಪಪ್ಪ ಆಗ್ಲೆ ವರ್ಷದ ಪೂರ್ತಿ ಕನೆಕ್ಷನ್ನಿಗೆ ದುಡ್ಡು ಕಟ್ಟಿದಾರೆ.. ನೀವು ಬರಿ ಹೇಗೆ ಯೂಸ್ ಮಾಡೋದು ಅಂಥ ಕಲಿತುಕೊಂಡ್ರೆ ಸಾಕು..’ ಎಂದಳು ಸೊಂಟದ ಮೇಲೆ ಕೈಯಿಟ್ಟುಕೊಂಡು..
ಅವಳ ಮಾತಿಗೆ ಏನುತ್ತರ ಕೊಡಬೇಕೊ ಗೊತ್ತಾಗದೆ ಕಕ್ಕುಲತೆಯಿಂದ ಅವಳ ಮುಖವನ್ನೆ ದಿಟ್ಟಿಸಿ ನೋಡಿದರು ವೃದ್ಧ ದಂಪತಿಗಳಿಬ್ಬರು..
‘ಅಂದ ಹಾಗೆ ಮರೆತಿದ್ದೆ.. ನೋಡಿ ಇದು ವೈರ್ಲೆಸ್ ಹ್ಯಾಂಡ್ ಸೆಟ್.. ನೀವು ಸುತ್ತಾಡುವಾಗ ಇದರ ಜತೆಯಿದ್ದರೆ, ಅಲ್ಲಿಂದಲೆ ಮಾತಾಡಬಹುದು, ವೀಡಿಯೊ ತೋರಿಸಬಹುದು.. ಎಲ್ಲ ಇದಕ್ಕೆ ಕನೆಕ್ಟ್ ಆಗಿರುತ್ತೆ.. ಹಾಗೆ ಪಪ್ಪಗೆ ಹೇಳಿದಿನಿ ನಮ್ಮ ನೆಕ್ಸ್ಟ್ ರಜಾಗೆ ನಿಮ್ಮಿಬ್ಬರನ್ನ ಅಲ್ಲಿಗೆ ಕರೆಸಿಕೊಳ್ಳಬೇಕು ಅಂಥ.. ಆಗ ನಾವು ಫೇಸ್ ಟು ಫೇಸ್ ಮೀಟ್ ಮಾಡಬಹುದು.. ಕ್ರಿಸ್ಮಸ್ ರಜೆಗೆ ನಾವೇ ಇಲ್ಲಿಗೆ ಬರ್ತಿವಿ.. ಹೇಗಿದೆ ಐಡಿಯಾ?’ ಎಂದು ಕತ್ತು ಕೊಂಕಿಸಿ , ಕಣ್ಣು ಮಿಟುಕಿಸಿದಳು.
ಆ ಚಿಕ್ಕ ವಯಸಿನಲ್ಲೆ ಹೀಗೆಲ್ಲ ಚಿಂತಿಸಿ, ಪರ್ಯಾಯ ವ್ಯವಸ್ಥೆ ಮಾಡಿದ ಮೊಮ್ಮಗಳಿಗೆ ಏನುತ್ತರಿಸಬೇಕೆಂದು ಗೊತ್ತಾಗದೆ ಅವಳನ್ನು ಬಾಚಿ ತಬ್ಬಿಕೊಂಡರು ದಂಪತಿಗಳು..
ಬಾಗಿಲಾಚೆಯಿಂದ ಅದನ್ನು ನೋಡುತ್ತಿದ್ದ ಮೋಹನ , ಅಪರ್ಣ ಹರ್ಷದಿಂದ ಜಿನುಗಿದ ಕಂಬನಿಯನ್ನು ಒರೆಸಿಕೊಳ್ಳುತ್ತ ಅಜ್ಜಿ, ತಾತ, ಮೊಮ್ಮಗಳನ್ನು ಅವರ ಲೋಕದಲ್ಲಿರಲು ಬಿಟ್ಟು ತಾವು ಸದ್ದು ಮಾಡದೆ ಅಡಿಗೆ ಮನೆಯತ್ತ ಸರಿದು ಹೋದರು..
ಕಳಚುವ ಕೊಂಡಿಗಳನ್ನು ಹಿಡಿದಿಟ್ಟು, ಸ್ವಪ್ರೇರಣೆಯಿಂದ ಬೆಸುಗೆ ಹಾಕ ಹೊರಟ ಮಗಳ ಚರ್ಯೆ ಅವರಿಗೆ ಆತ್ಯಂತ ತೃಪ್ತಿ ನೀಡಿತ್ತು.
(ಮುಕ್ತಾಯ)
– ನಾಗೇಶ ಮೈಸೂರು
೧೭.೦೯.೨೦೨೧
(Picture source: internet / social media)