ನಿಗೂಢ ಕಥೆ: ದೊಡ್ಡ ಮನೆ
ದಟ್ಟ ಕಾಡಿನ ನಡುವೆ ಹಾಸಿಕೊಂಡಂತಿದ್ದ ಆ ಹಳೆಯ ಟಾರು ರಸ್ತೆಯ ಮೇಲೆ ಧೂಳೆಬ್ಬಿಸದೆ ಡ್ರೈವ್ ಮಾಡುವುದು ಸಾಧ್ಯವೇ ಇರಲಿಲ್ಲ.. ಅದರಲ್ಲು ಮುಟ್ಟಿದರೆ ಪಾರ್ಟುಗಳೆಲ್ಲ ಉದುರಿಹೋಗುವಂತಿದ್ದ ಈ ಪ್ರೈವೇಟ್ ಬಸ್ಸಲ್ಲಿ ಕೂತು ಬರುವ ಶಿಕ್ಷೆ ಈ ಜನ್ಮಕ್ಕೆ ಸಾಕು ಅನಿಸಿಬಿಟ್ಟಿತ್ತು.. ಬೈಕಲ್ಲಿ ಬಂದು ಕರೆದೊಯ್ಯುವೆ ಎಂದಿದ್ದ ಶಂಕರನಿಂದ ಕೊನೆಗಳಿಗೆಯಲ್ಲಿ, ಬೈಕು ಕೆಟ್ಟಿರುವ ಕಾರಣ ಬರಲಾಗುತ್ತಿಲ್ಲವೆಂದು ಮೆಸೇಜ್ ಬಂದ ಕಾರಣ, ವಿಧಿಯಿಲ್ಲದೆ ಈ ಬಸ್ಸನ್ನೆ ಹಿಡಿಯಬೇಕಾಯ್ತು.. ಯಾವಾಗ ಅವನೂರು ಬರುತ್ತದೊ ಎಂದು ಕಾತರ, ಅಸಹನೆಯಿಂದ ಕಿಟಕಿಯಿಂದ ಪದೇಪದೇ ನೋಡುತ್ತಿದ್ದಾಗ, ಕೊನೆಗು ದೂರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಶಂಕರ ಕಾಣಿಸಿದ..
ಊರಿನಲ್ಲಿದ್ದುದಕ್ಕೊ ಏನೊ ಪಂಚೆಯ ಮೇಲೊಂದು ಜುಬ್ಬಾ ಹಾಕಿಕೊಂಡು ನಿಂತಿದ್ದ ಶಂಕರ ಸ್ವಲ್ಪ ವಿಚಿತ್ರವಾಗಿಯೆ ಕಾಣಿಸಿದ – ಅವನ ಎಂದಿನ ಪ್ಯಾಂಟು – ಶರಟಿನ ಅವತಾರವಿಲ್ಲದೆ. ಆದರು ಅವನ ಟ್ರೇಡ್ ಮಾರ್ಕ್ ಕ್ಯಾಪನ್ನು ಮಾತ್ರ ಬಿಟ್ಟಿರಲಿಲ್ಲ.. ಪಂಚೆ-ಜುಬ್ಬದ ಮೇಲು ಹಾಕಿಕೊಂಡಿದ್ದ – ಅದೊಂದು ರೀತಿಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದರು.. ಮಟ ಮಟ ಮಧ್ಯಾಹ್ನವಾದ ಕಾರಣ ಬಿಸಿಲಿಗೆ ತಡೆಯಾಗಲೆಂದು ಕ್ಯಾಪ್ ಧರಿಸಿರಬೇಕೆಂದು ಅಂದುಕೊಂಡು, ಬಸ್ಸಿನಿಂದಿಳಿದು ಅವನ ಕಡೆಗೆ ನಡೆದೆ.
ಶಂಕರ ಬೆಂಗಳೂರಲ್ಲೆ ಕೆಲಸದಲ್ಲಿದ್ದವ.. ಈ ಕೋವಿಡ್ ಮಾರಿಯ ಧಾಳಿ ಆರಂಭವಾಗುತ್ತಿದ್ದಂತೆ ಅವನು ಮಾಡುತ್ತಿದ್ದ ಕೆಲಸಕ್ಕು ಸಂಚಕಾರ ಬಂದು, ಊರಲ್ಲೆ ಹೊಲಗದ್ದೆ ಮಾಡುತ್ತೇನೆಂದು ಊರಿಗೆ ಬಂದಿದ್ದ.
‘ಸಾರಿ ಕಣೋ.. ಸರಿಯಾದ ಟೈಮಲ್ಲಿ ಬೈಕು ಕೈ ಕೊಟ್ಟುಬಿಡ್ತು.. ವಾಪಸ್ಸು ಹೋಗುವಾಗ ಬೈಕಲ್ಲೆ ಹೋಗುವೆಯಂತೆ.. ಮತ್ತೆ ಈ ಡಕೋಟ ಬಸ್ಸನ್ನು ಹತ್ತಿಸುವುದಿಲ್ಲ..’ ಎನ್ನುತ್ತ ನಡೆಯತೊಡಗಿದವನನ್ನು , ನನ್ನ ಲಗೇಜ್ ಜೊತೆ ಹಿಂಬಾಲಿಸಿದೆ.. ನನ್ನ ಕೈಲಿದ್ದ ಲಗೇಜಲ್ಲಿ ಒಂದು ಪೀಸನ್ನಾದರು ಕೈಗೆತ್ತಿಕೊಳ್ಳಬಹುದೆಂದುಕೊಂಡಿದ್ದೆ.. ಆದರೆ ಮಾತಿಗು ಅದನ್ನು ಕೇಳದೆ ಮುನ್ನಡೆಯುತ್ತಿದ್ದವನನ್ನು ಆತಂಕದಿಂದ ದಿಟ್ಟಿಸಿದೆ – ನಾನು ಹೊತ್ತಿರುವುದನ್ನು ಸಹ ತಾನೇ ಹೊರಬೇಕೆನ್ನುವ ಮನೋಭಾವದ ವ್ಯಕ್ತಿತ್ವ ಅವನದು. ಇಂದೇಕೊ ವಿಚಿತ್ರವಾಗಿದೆಯಲ್ಲ? ಎಂದುಕೊಳ್ಳುತ್ತಲೆ ಲಗೇಜು ಕೈ ಬದಲಿಸಿ ಅವನತ್ತ ಮತ್ತೊಮ್ಮೆ ಆಳವಾಗಿ ನೋಡಿದಾಗ ತೋಳಲ್ಲಿ ಸುತ್ತಿದ್ದ ಬ್ಯಾಂಡೇಜು ಕಣ್ಣಿಗೆ ಬಿತ್ತು.. ಆಗ ಕಾರಣವೂ ಗೊತ್ತಾಯ್ತು – ಅವನೇಕೆ ನನ್ನ ಲಗೇಜು ಮುಟ್ಟಲಿಲ್ಲ ಎಂದು..
‘ಏಯ್ ಶಂಕರ.. ಕೈಗೇನಾಯ್ತೊ, ಬ್ಯಾಂಡೇಜು ಸುತ್ತಿದೆ?’ ಎಂದೆ..
‘ಅದೇ ಕಥೆ ಹೇಳ್ಬೇಕಂತ ಹೊರಟಿದ್ದೆ ನೋಡು.. ಬೈಕ್ ಓಡಿಸುವಾಗ ಆಕ್ಸಿಡೆಂಟ್ ಆಗಿ ಬಿದ್ದಾಗ ಆದ ಗಾಯ.. ಇದರಿಂದಾನೆ ಗಾಡಿ ಓಡಿಸದ ಹಾಗೆ ಆಯ್ತು..’ ಎನ್ನುತ್ತ ಅಲ್ಲಿದ್ದ ಕಾಲು ಹಾದಿಯೊಂದರ ತುಸು ಒಳಬದಿಗೆ ಸರಿದು ನಡೆದ.. ಇವನೇಕೆ, ಈ ಕಾಲು ಹಾದಿ ಹಿಡಿಯುತ್ತಿದ್ದಾನೆ ? ಎಂಬ ಗೊಂದಲದಲ್ಲೆ ಅವನನ್ನು ಹಿಂಬಾಲಿಸಿದೆ.. ವಾಸ್ತವದಲ್ಲಿ , ಅಲ್ಲಿ ಪೊದೆಗಳ ಹಿಂದಿನ ಗಿಡ ಮರಗಳ ಸಂದಿಯಲ್ಲಿ ಅವಿತುಕೊಂಡಿದ್ದ ಹಳೆಯ ಕಾಲದ ಹೆಂಚಿನ ಮನೆಯೊಂದರ ಬಳಿ ಕರೆದು ತಂದಿತ್ತು ಆ ಹಾದಿ.. ‘ಇಲ್ಲೇಕೆ ಕರೆತಂದ?’ ಎನ್ನುವ ಪ್ರಶ್ನೆ ನನ್ನ ತುಟಿಯಿಂದ ಹೊರಡುವ ಮೊದಲೆ, ಅಲ್ಲಿ ಮನೆಯ ಗೋಡೆಗೊರಗಿಸಿದ್ದ ಬೈಸಿಕಲ್ಲೊಂದರ ಕಡೆಗೆ ಬೊಟ್ಟು ಮಾಡಿ ತೋರಿಸಿದ.. ಆಗ ಅರ್ಥವಾಯ್ತು, ನನ್ನ ಲಗೇಜನ್ನಿಟ್ಟುಕೊಂಡು ತಳ್ಳಿಕೊಂಡು ಹೋಗಲು ಈ ವ್ಯವಸ್ಥೆ ಮಾಡಿದ್ದಾನೆ ಎಂದು. ಹೆಚ್ಚು ಭಾರವಾಗುತ್ತಿದ್ದ ಬ್ಯಾಗುಗಳನ್ನು ಸೈಕಲ್ಲಿಗೆ ನೇತುಹಾಕಿ ಹಣೆಯ ಮೇಲಿನ ಬೆವರೊರೆಸಿಕೊಳ್ಳುತ್ತ ಅರೆಗಳಿಗೆ ಅಲ್ಲೆ ನಿಂತೆ. ನಾನು ಸುಧಾರಿಸಿಕೊಳ್ಳಲೆಂಬಂತೆ ತಾನೂ ಸಹ ಆ ಮನೆಯ ಮುಂದಿನ ಜಗುಲಿ ಕಟ್ಟೆಯ ಮೇಲೆ ಕುಳಿತ ಶಂಕರ..
ಊರಿನೊಳಗೆ ಅವರದೊಂದು ದೊಡ್ಡ ಮನೆಯೆ ಇದೆ. ಬರಿ ಮನೆಯಲ್ಲ ಅದು ಬಂಗಲೆಯೆ ಎನ್ನಬೇಕು – ಹಳೆಯ ಕಾಲದ್ದು.. ಹಿಂದೊಮ್ಮೆ ಅಲ್ಲಿಗೆ ಕರೆದೊಯ್ದಿದ್ದ ಶಂಕರ. ಆದರೆ ಅಲ್ಲಿಗೆ ತಲುಪಲು ಸುಮಾರು ಎರಡು ಕಿಲೊಮೀಟರ್ ನಡೆಯಬೇಕು.. ಬೈಕಿದ್ದಾಗ ಆ ಕಷ್ಟ ಗೊತ್ತಾಗುತ್ತಿರಲಿಲ್ಲ. ಆದರೀಗ ನಡೆದೊ, ಸೈಕಲ್ ತುಳಿದೊ ಸಾಗಬೇಕು – ಆ ರಸ್ತೆಯಲ್ಲಿ ಲಗೇಜಿನ ಜೊತೆ ಡಬ್ಬಲ್ ರೈಡಂತ್ ಸಾಧ್ಯವೆ ಇರಲಿಲ್ಲ.. ಬಹುಶಃ ಬರಿ ತಳ್ಳಿಕೊಂಡೆ ಹೋಗಬೇಕೇನೊ..
‘ಸುಧಾಕರ, ನೀನು ಸೈಕಲಿನಲ್ಲಿ ಲಗೇಜ್ ಕಟ್ಟಿಕೊಂಡು ಮನೆಗೆ ಹೋಗಿಬಿಡು .. ಹೇಗು ಇದು ಒಂದೇ ದಾರಿ ಇರುವುದು.. ನನಗೆ ಇಲ್ಲೆ ಸ್ವಲ್ಪ ಕೆಲಸವಿದೆ, ಅದನ್ನು ಮುಗಿಸಿ ನಾನು ನಂತರ ಬರುತ್ತೇನೆ.. ಅಲ್ಲಿಯವರೆಗೆ ನೀನು ಊಟ ಮುಗಿಸಿಬಿಡು.. ನನಗೆ ಕಾಯಬೇಡ.. ಅಮ್ಮನಿಗೆ ನೀನು ಬರುವುದು ಗೊತ್ತು, ಕಾಯುತ್ತಿರುತ್ತಾಳೆ..’ ಎಂದ.
ಅದು ಹೇಗೆ ನನ್ನಲ್ಲಿ ಮೂಡುತ್ತಿರುವ ಆಲೋಚನೆಗಳು ಇವನಿಗೆ ತಟ್ಟನೆ ಗೊತ್ತಾದವನಂತೆ ಉತ್ತರಿಸುತ್ತಿದ್ದಾನಲ್ಲ? ಎನಿಸಿ ಕೊಂಚ ಗಲಿಬಿಲಿಯಾಯ್ತು.. ಅವನೂ ತಾರ್ಕಿಕವಾಗಿ ನನ್ನಂತೆಯೆ ಯೋಚಿಸುತ್ತಿರುವುದರಿಂದ ಅದರಲ್ಲಿ ಅಚ್ಚರಿಯೇನು ಇಲ್ಲ – ಎಂದು ಸಮಾಧಾನ ಮಾಡಿಕೊಂಡೆ. ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತಾಡಿಕೊಂಡು ನಂತರ ನಾನು ಸೈಕಲ್ ಪೆಡಲ್ ತುಳಿದು ಬಂಗಲೆ ಮನೆಯತ್ತ ಹೊರಟೆ.. ವಾಸ್ತವವಾಗಿ ಆ ಲಗೇಜಿನೊಳಗಿದ್ದ ಸಾಮಾನುಗಳೆಲ್ಲ ಶಂಕರನಿಗೆ ಸೇರಿದ್ದೇ.. ಅವನು ತರಲಾಗದೆ ಬೆಂಗಳೂರಲ್ಲೆ ಬಿಟ್ಟು ಬಂದಿದ್ದನ್ನು, ನನ್ನ ಮೂಲಕ ತರಿಸಿಕೊಂಡಿದ್ದನಷ್ಟೆ.. ಅದರ ಜೊತೆಗಿದ್ದ ಪುಟ್ಟ ಬ್ಯಾಗಿನ ಲಗೇಜಷ್ಟೆ ನನ್ನದು.. ಒಂದೆರಡು ಒಳ ಉಡುಪುಗಳು , ಶರಟು, ಪ್ಯಾಂಟು, ಲುಂಗಿ, ಟವೆಲ್, ಶೇವಿಂಗ್ ಸೆಟ್, ಪೇಸ್ಟು, ಬ್ರಷ್ಷಿನ ಜೊತೆ ಮೊಬೈಲು ಚಾರ್ಜರು.. ಅದನ್ನು ಹೊರಲು ಸೈಕಲ್ಲಿನ ಅಗತ್ಯವೇನೂ ಇರಲಿಲ್ಲ..
ಶಂಕರನ ಕುಟುಂಬವಿದ್ದ ಆ ಬಂಗಲೆ ಊರಿನ ಆರಂಭದಲ್ಲೆ ಪ್ರತ್ಯೇಕವಾಗಿ ಫಾರ್ಮ್ ಹೌಸಿನಂತೆ ಇತ್ತು. ಊರಿನ ಮಿಕ್ಕ ಮನೆಗಳು ಇರುವೆಡೆಗೆ ಸುಮಾರು ಅರ್ಧ ಕಿಲೊಮೀಟರ್ ದೂರ.. ಇವರ ಮನೆಯ ಹತ್ತಿರದಲ್ಲೆ ಆ ಊರಿನ ಮುಖ್ಯ ಲ್ಯಾಂಡ್ ಮಾರ್ಕ್ ಎನ್ನಬಹುದಾದ ಹನುಮಂತನ ದೇವಸ್ಥಾನ.. ಅಲ್ಲಿ ಸುತ್ತಮುತ್ತಲು ನಿಸರ್ಗದತ್ತವಾದ ರಮಣೀಯ ಪರಿಸರ. ನನಗಂತು ಅದೊಂದು ಅತಿ ಪ್ರಿಯವಾದ ವಾತಾವರಣ. ಸೈಕಲ್ ತುಳಿಯುತ್ತಲೆ, ಅಂಜನೇಯನ ಗುಡಿಯ ಮೂರ್ತಿಗೆ ನಮಸ್ಕರಿಸಿ , ನಾನು ಶಂಕರನ ಮನೆಯೊಳಗೆ ಹೊಕ್ಕೆ.
ಆ ದೊಡ್ಡ ಮನೆಯಲ್ಲಿ ಒಂದು ಕಾಲದಲ್ಲಿ ಅದೆಷ್ಟು ಜನ ವಾಸವಾಗಿದ್ದರೊ? ಕಾಲಾಂತರದಲ್ಲಿ ಒಂದಲ್ಲ ಒಂದು ನೆಪದಲ್ಲಿ ನಗರಗಳಿಗೆ ವಲಸೆ ಹೋದ ಕಾರಣ, ಅವಿಭಕ್ತ ಕುಟುಂಬದ ಆಲದ ಮರದಲ್ಲಿ ಕೇವಲ ಆರೇಳು ಬಿಳಿಲುಗಳಷ್ಟೆ ಅಲ್ಲುಳಿದುಕೊಂಡಿದ್ದುದು. ಅದೂ ವಯಸಾದ ಕಾರಣ ಮತ್ತೆಲ್ಲು ಹೋಗಲಾಗದ ಅಸಹಾಯಕತೆ.. ಜೊತೆಗೆ ಹುಟ್ಟಿದ ಕಡೆಯೆ ಕೊನೆಯುಸಿರೆಳೆಯಬೇಕೆಂಬ ಭಾವನಾತ್ಮಕ ಬಂಧ.. ನಾನು ಗೇಟು ತೆರೆದು ಅಂಗಳ ದಾಟಿ ಮನೆಯ ಬಾಗಿಲಿನ ಹತ್ತಿರ ಬರುತ್ತಿದ್ದಂತೆ ನಗುಮೊಗದಲ್ಲಿ ಸ್ವಾಗತಿಸಿದರು ಶಂಕರನ ಅಮ್ಮ..
‘ಬಾ ಸುಧಾಕರ.. ಹೇಗಿದ್ದಿಯಪ್ಪ..?’ ಎಂದು ಕಕ್ಕುಲತೆಯಿಂದ ವಿಚಾರಿಸಿ ಒಳಗೆ ಕರೆದೊಯ್ದರು.. ಹಜಾರದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ಶಂಕರನ ಅಪ್ಪಾ ಕೂಡ ಮುಗುಳ್ನಕ್ಕು ಸ್ವಾಗತಿಸಿದರು..
‘ಬಾರಪ್ಪ.. ಬಾ.. ಸಾವಿತ್ರಿ, ಮೊದಲು ನೀರು ಕೊಟ್ಟು ಊಟಕ್ಕಿಡೆ.. ದಣಿದು ಬಂದಿದಾರೆ..’ ಎನ್ನುತ್ತಿದ್ದಂತೆ ಕೊಚ್ಚಿದ ಎಳನೀರೊಂದನ್ನು ತಂದು ಕೈಗಿತ್ತ ಅವರ ಮನೆಯಾಳು ಬ್ಯಾಲ.. ಹಿಂದೆ ನೋಡಿದ ಮುಖ ಎನ್ನುವ ಆತ್ಮೀಯತೆ ಅವರೆಲ್ಲರ ಚರ್ಯೆಯಲ್ಲು ಹೊರಸೂಸುತ್ತಿತ್ತು. ನಾನು ಊಟ ಮುಗಿಸಿ ಅಂಗಳದಲ್ಲಿ ಬಂದು ಕೂರುವ ಹೊತ್ತಿಗೆ ಸರಿಯಾಗಿ ಶಂಕರನೂ ಬಂದ.. ಅವನಾದಾಗಲೆ ಊಟವಾಗಿತ್ತಾಗಿ ಅವನು ನೇರ ಬಂದು ಮಾತಿಗೆ ಕುಳಿತ, ಹತ್ತಿರದಲ್ಲಿದ್ದ ಸ್ಟೂಲೊಂದರ ಮೇಲೆ ಆಸೀನನಾಗುತ್ತ.. ನನದಿನ್ನು ಬಾಳೆ ಹಣ್ಣಿನ ಸೇವನೆ ನಡೆದಿದ್ದಾಗಲೆ, ಮೆತ್ತಗಿನ ದನಿಯಲ್ಲಿ ಕೇಳಿದ..
‘ಶಾಂತಿ ಹೇಗಿದಾಳೆ? ನೀನಿಲ್ಲಿ ಬರುತ್ತಿರುವುದು ಅವಳಿಗೆ ಗೊತ್ತೆ?’
‘ಚೆನ್ನಾಗಿದ್ದಾಳೆ.. ಎಲ್ಲಿಗೆ ಹೋಗುತ್ತಿರುವುದು ಅಂತ ಕೇಳಿದ್ಲು.. ನಿನ್ನನ್ನ ನೋಡೋಕೆ ಅಂತ ಹೇಳಿದೆ..’
‘ಏನಾದ್ರು ಹೇಳಿದ್ಲಾ?’ ತನಗೇನಾದರು ಸಂದೇಶ ಇರಬಹುದೆನ್ನುವ ಆಶಾಭಾವದಲ್ಲಿ ಕೇಳಿದರು, ದನಿಯಲ್ಲಿ ನಿರಾಸೆಯ ಛಾಯೆಯಿತ್ತು..
ಬೆಂಗಳೂರಿನಲ್ಲಿದ್ದಾಗ ಬೆಳೆದ ಅವರಿಬ್ಬರ ಸ್ನೇಹ, ಒಡನಾಟ ಸಮಾನ ಆಸಕ್ತಿಯ ನಾಟಕದ ಅಭಿರುಚಿಯಿಂದಾಗಿ, ಆತ್ಮೀಯ ಸಖ್ಯದ ಹಂತ ತಲುಪಿತ್ತು.. ಇಬ್ಬರು ಒಟ್ಟೊಟ್ಟಾಗಿ ನಾಟಕಗಳಲ್ಲಿ ಅಭಿನಯಿಸುವುದು, ಸಂಬಂಧಿತ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಇತ್ಯಾದಿಯಿಂದಾಗಿ ಸಾಮಾನ್ಯ ಗೆಳೆತನವನ್ನು ಮೀರಿದ ಹೆಚ್ಚಿನ ಸಖ್ಯದ ಘಮಲು ಪಸರಿಸಿಕೊಂಡು ಅವರಿಬ್ಬರನ್ನು ಹತ್ತಿರಕ್ಕೆ ತಂದಿತ್ತು.. ಜೊತೆಗೆ ಅವಳು ನೃತ್ಯ ಪ್ರವೀಣೆ, ಹಾಡುಗಾರ್ತಿ, ನಾಟಕದ ನಿರ್ದೇಶಕಿಯಾಗಬೇಕೆಂಬ ಆದರ್ಶ, ಕನಸುಗಳ ಬೆನ್ನು ಹತ್ತಿದ್ದವಳು.. ತನ್ನದೆ ಒಂದು ನಾಟಕ ಅಕಾಡೆಮಿಯನ್ನು ಕಟ್ಟಬೇಕೆಂಬ ಕನಸು ಕಾಣುತ್ತಿದ್ದವಳು.. ಅವಳ ಬಹುಮುಖಿ ಪ್ರತಿಭೆಯ ಮತ್ತು ಅಪರೂಪದ ವ್ಯಕ್ತಿತ್ವದ ಕಡೆ ಆಕರ್ಷಿತನಾಗಿದ್ದ ಶಂಕರ, ಅವಳ ಹಂಬಲಕ್ಕೆ ನೀರೆರೆದು ಪೋಷಿಸಲು ಸದಾ ತಯಾರಾಗಿರುತ್ತಿದ್ದ.. ನಿಜದಲ್ಲಿ, ಅವಳಿಗೆ ಹೇಳದೆಯೆ ಅವಳನ್ನು ಮನದಲ್ಲೆ ಪ್ರೇಮಿಸಲು ಆರಂಭಿಸಿಬಿಟ್ಟಿದ್ದ! ಅದರಿಂದಲೆ ಅವಳ ಕನಸುಗಳನ್ನು ಸಾಕಾರಗೊಳಿಸುವ ವಕ್ತಾರ ತಾನೇ ಎನ್ನುವ ಹಾಗೆ ವರ್ತಿಸುತ್ತಿದ್ದ – ಅಪ್ರಜ್ಞಾಪೂರ್ವಕವಾಗಿ..
ಎಲ್ಲವು ಚೆನ್ನಾಗಿಯೆ ನಡೆದಿತ್ತು – ಅದೊಂದು ದಿನ ಅವಳಲ್ಲಿ ತನ್ನ ಮನಸನ್ನು ಬಿಚ್ಚಿಡುವ ತನಕ.. ಅಂದು ಮಾತ್ರ ಅಗ್ನಿ ಪರ್ವತವೆ ಸ್ಪೋಟವಾದಂತಾಗಿಹೋಯ್ತು.. ಮನದಲ್ಲಿ ತೀರಾ ಮಹತ್ವಾಕಾಂಕ್ಷೆಯಿದ್ದ ಹುಡುಗಿ ಶಾಂತಿ – ಈ ಪ್ರೀತಿ, ಪ್ರೇಮ, ವಿವಾಹದ ಬಂಧನಗಳೆಲ್ಲ ತನ್ನ ಗುರಿ ಸಾಧನೆಯ ಅಡಚಣೆಗಳೆಂದು ನಂಬಿದವಳು.. ತಾನು ತೀರಾ ಹಚ್ಚಿಕೊಂಡಿದ್ದ ಶಂಕರನ ಬಾಯಲ್ಲಿ ಈ ಅನಿರೀಕ್ಷಿತ ನಿವೇದನೆಯನ್ನು ಕೇಳಿ , ತೀರಾ ಆಘಾತಕ್ಕೆ ಒಳಗಾದವಳಂತೆ ಅದುರಿ ಬಿದ್ದಿದ್ದಳು.. ಕೋಪದಿಂದ ಕೆಂಪಾದ ಮುಖದಲ್ಲಿ ಅವನೊಡನೆ ತಾರಾಮಾರಿ ಜಗಳ ಮಾಡಿಕೊಂಡು, ಅವನ ಸ್ನೇಹವನ್ನು ಹರಿದುಕೊಂಡು ಹೊರಟು ಹೋಗಿದ್ದಳು. ಅದೇ ಕೊನೆ, ಅವರಿಬ್ಬರು ಮತ್ತೆಲ್ಲು ಒಟ್ಟಾಗಿ ಕಾಣಿಸಿಕೊಳ್ಳಲೆ ಇಲ್ಲ.. ಶಂಕರ ಮತ್ತೆ ಊರಿಗೆ ವಾಪಸಾಗಲು ಕೋವಿಡ್ ಮಾರಿಯ ಜೊತೆಗೆ ಅವಳ ನಿರಾಕರಣೆಯಿಂದಾದ ಆಘಾತವೂ ಕಾರಣವಾಗಿತ್ತು – ಅವನದನ್ನು ಬಾಯಿ ಬಿಟ್ಟು ಹೇಳದಿದ್ದರು.. ಆ ಹಿನ್ನಲೆಯಲ್ಲೆ ಶಂಕರನ ದನಿಯಲ್ಲಿ ನಿರಾಸೆ ಇಣುಕಿದ್ದುದು..
‘ಅವಳು ಅವಳ ಪ್ರಾಜೆಕ್ಟಿನಲ್ಲಿ ಮುಳುಗಿಹೋಗಿದ್ದಾಳೆ.. ಗೊತ್ತಲ್ಲ, ಇಂಥಹ ಕೆಲಸಕ್ಕೆ ಫಂಡ್ಸ್ ಎಷ್ಟು ಕಷ್ಟ ಅಂಥ? ಅವಳು ಸರಿಯಾದ ಮೂಡಲ್ಲಿ ಇರಲಿಲ್ಲ.. ಸುಮ್ಮನೆ ‘ಹೂಂ’ ಗುಟ್ಟಿದಳಷ್ಟೆ..’ ಎಂದೆ..
ಶಂಕರ ಮತ್ತೆ ಮಾತಾಡಲಿಲ್ಲ.. ಅವನ ಮನಸಿಗೆಷ್ಟು ನೋವಾಗಿರಬಹುದೆಂದು ನನಗರಿವಿತ್ತಾಗಿ ನಾನು ಮಾತಾಡಲಿಲ್ಲ.. ಅವನಿಗೆ ಅವಳೆಲ್ಲ ಪ್ರಾಜೆಕ್ಟುಗಳ ಕುರಿತು ಚೆನ್ನಾಗಿಯೆ ಗೊತ್ತಿತ್ತು; ನಾನು ವಿವರಿಸುವ ಅಗತ್ಯವಿರಲಿಲ್ಲ.. ನಾನೆ ವಿಷಯ ಬದಲಿಸಿದೆ..
‘ಅದು ಸರಿ.. ಈಗ ಅವಸರದಲ್ಲಿ ಬರಲು ಹೇಳಿದ್ದೇಕೆ? ಎಲ್ಲಾ ಸರಿಯಿದೆ ತಾನೆ ಇಲ್ಲಿ?’ ಎಂದೆ
ಇಲ್ಲವೆನ್ನುವಂತೆ ತಲೆಯಾಡಿಸುತ್ತ ನುಡಿದ ಶಂಕರ – ‘ಇಲ್ಲಾ ಸುಧಾಕರ.. ನೀನೆ ನೋಡುತ್ತಿದ್ದೀಯಲ್ಲ..ನೋಡು ಇಷ್ಟು ದೊಡ್ಡ ಮನೆ.. ಜನರಿಂದ, ನೆಂಟರಿಷ್ಟರಿಂದ ತುಂಬಿ ತುಳುಕುತ್ತಿತ್ತು.. ಈಗ ನೋಡು? ನಾವಾರು ಜನ ಬಿಟ್ಟರೆ ಮತ್ತಾರು ಇಲ್ಲ.. ವಯಸಾದ ಅಪ್ಪ ಅಮ್ಮ ಬ್ಯಾಲನ ಜೊತೆ ಹೆಣಗಿಕೊಂಡು ಹೇಗೊ ನಿಭಾಯಿಸುತ್ತಿದ್ದಾರೆ.. ಆದರೆ ಅವರಿಗು ಈ ವಯಸಲ್ಲಿ ಇದನ್ನ ನಿಭಾಯಿಸೋದು ಕಷ್ಟ.. ಅಪ್ಪನ ಸ್ವಯಾರ್ಜಿತ ಆಸ್ತಿಯಾದ ಕಾರಣ ಬೇರೆ ಯಾರಿಗು ಇದರಲ್ಲಿ ಇಂಟ್ರೆಸ್ಟು ಇಲ್ಲ.. ನೋಡಿದರೆ ನಾನೊಬ್ಬ ನೋಡ್ಕೋಬೇಕಷ್ಟೆ.. ಆದರೆ ನನಗು ಯಾಕೊ ಇದನ್ನು ನಿಭಾಯಿಸೊ ಹುಮ್ಮಸ್ಸು, ಉತ್ಸಾಹ ಬರುತ್ತಿಲ್ಲ..’ ಎಂದು ಧೀರ್ಘ ನಿಟ್ಟುಸಿರೆಳೆದುಕೊಂಡ.
ನನಗು ಅವನ ಪರಿಸ್ಥಿತಿಯ ಅರಿವಿತ್ತು.. ‘ಹಾಗಾದ್ರೆ ಈಗೇನು ಮಾಡೋದು ಅಂಥ ನಿನ್ನ ಐಡಿಯಾ?’ ಎಂದು ಕೇಳಿದೆ..
‘ಇಷ್ಟು ದೊಡ್ಡ ಮನೆ ಇಟ್ಟುಕೊಂಡು ಒದ್ದಾಡುವುದರ ಬದಲು ನಾವು ಆ ತೋಟದ ಚಿಕ್ಕ ಮನೆಯಲ್ಲಿ ಇದ್ದುಬಿಡೋದು ಅಂಥ.. ಈ ಮನೇನ ಮಾರಿಬಿಡುವ ಯೋಚನೆ ಇದೆ.. ಅದಕ್ಕೆ ನಿನ್ನನ್ನು ಬರ ಹೇಳಿದ್ದು.. ನಿನ್ನ ನೆಟ್ವರ್ಕಿನ ಮೂಲಕ ಯಾರಾದರು ಹೊರಗಿನವರು ಕೊಳ್ಳೋಕೆ ಸಾಧ್ಯ ಇದೆಯಾ ? ಅಂಥ. ಆಗ ಸ್ವಲ್ಪ ಒಳ್ಳೆ ರೇಟ್ ಬರಬಹುದೇನೊ..? ನಿನಗೆ ಹೆಲ್ಪ್ ಮಾಡೋಕೆ ಸಾಧ್ಯವಾಗುತ್ತ..?’ ಎಂದ.
ಅದೇ ಫೀಲ್ಡಿನಲ್ಲಿದ್ದ ನನಗೆ ಅದೇನು ಕಷ್ಟವಿರಲಿಲ್ಲ .. ಸಮಯದ ಒತ್ತಡವಿಲ್ಲದಿದ್ದರೆ ಸರಿಯಾದ ಪಾರ್ಟಿಯನ್ನು ಹುಡುಕಬಹುದಿತ್ತು.. ‘ಶ್ಯೂರ್.. ಪ್ರಯತ್ನಿಸಬಹುದು..’ ಎಂದೆ..
‘ಅದಕ್ಕೆ ಮೊದಲು ಮತ್ತೊಂದು ಆಲೋಚನೆನು ಇದೆ..’
‘ಏನು..?’
‘ಶಾಂತಿ ಒಪ್ಪಿಕೊಂಡ್ರೆ ಇದನ್ನ ಅವಳ ಪ್ರಾಜೆಕ್ಟ್ ಕೆಲಸಕ್ಕೆ ಬಳಸಿಕೊಳ್ಳಬಹುದು.. ಟ್ರೈನಿಂಗ್, ವರ್ಕಶಾಪ್ಸ್, ಪ್ರಾಕ್ಟೀಸ್ ಮಾಡೋಕೆ ಒಳ್ಳೆ ಜಾಗ ಇದು.. ಅಪ್ಪನ ಹೆಸರಲ್ಲಿ ಇದನ್ನೆ ಒಂದು ಇನ್ಸ್ಟಿಟ್ಯೂಟಾಗಿ ಮಾಡಿಬಿಡಬಹುದು.. ಅವಳಿಗು ಫಂಡಿಂಗ್ ಪ್ರಾಬ್ಲಮ್ಸ್ ಕಮ್ಮಿ ಆಗುತ್ತೆ’ ಎಂದ..
ಅವನ ಮನದಿಂಗಿತ ಅರ್ಥವಾಯ್ತು.. ಅವನು ನೇರ ಕೇಳಿದರೆ ಶಾಂತಿ ಒಪ್ಪುವುದಿಲ್ಲ.. ನನ್ನ ಮೂಲಕ ಪ್ರಯತ್ನಿಸಲು ನೋಡುತ್ತಿದ್ದಾನೆ ಅವಳಿಗೆ ನೆರವಾಗಲು..
‘ಆಯ್ತು.. ಮಾತಾಡಿ ನೋಡ್ತಿನಿ..’ ಎಂದೆ..
‘ಸರಿ.. ಇದು ಈ ಮನೆಗೆ ಸಂಬಂಧಿಸಿದ ಕಾಗದ ಪತ್ರಗಳ ಕಂತೆ.. ನಿನ್ನ ಹತ್ತಿರವಿದ್ದರೆ ಒಳಿತು ತಗೊ..’ ಎಂದವನೆ ಒಂದು ಹಳದಿ ಮಿಶ್ರಿತ ಬಿಳುಪಿನ ಚೀಲವೊಂದನ್ನು ನನ್ನತ್ತ ದೂಡಿದ.. ಅದರ ಹೊರಗೆ ಒಂದು ಪ್ರತ್ಯೇಕ ಪತ್ರವನ್ನು ಇರಿಸಿದ್ದ – ಚೀಲದಾಚೆಗೆ ಅಂಟಿದಂತೆ..
‘ಇದೇನು ಈ ಪತ್ರ.. ಮನೆಯ ಕಾಗದ ಇದ್ದಂತಿಲ್ಲ…’ ಎಂದದನ್ನು ಕೈಗೆತ್ತಿಕೊಂಡೆ..
‘ಸುಧಾಕರ.. ಇದು ಶಾಂತಿಗೆ ಕೊಡಬೇಕಾದ ಪತ್ರ.. ಅವಳ ಜೊತೆಯಲ್ಲೆ ನೀನು ಕೂಡ ಓದು.. ಈಗ ಬೇಡ..’ ಎಂದ ಶಂಕರ. ಮಾತಾಡದೆ ಅದನ್ನೆತ್ತಿಟ್ಟುಕೊಂಡೆ.. ನಾನು ಕೆಲಸ ಮಾಡುವ ಕಂಪನಿಯು ರಿಯಲ್ ಎಸ್ಟೇಟ್ ಫೀಲ್ಡಿನದೇ ಆದ ಕಾರಣ ಅವನ ಕೋರಿಕೆಗೊಂದು ಸರಿ ದಾರಿ ತೋರಿಸುವುದೇನು ಕಷ್ಟವಿರಲಿಲ್ಲ..
ಅಂದು ರಾತ್ರಿ ಅಲ್ಲೆ ಇದ್ದು , ಮಾರನೆ ಬೆಳಿಗ್ಗೆ ಹೋಗುವುದೆಂದು ಮೊದಲೆ ನಿರ್ಧಾರವಾಗಿತ್ತು.. ಸಂಜೆಯೆಲ್ಲ, ಅಲ್ಲೆಲ್ಲ ಸುತ್ತಾಡಿ ಸುತ್ತಮುತ್ತಲ ಬೇಕಾದ ವಿವರಗಳನ್ನು ಸಂಗ್ರಹಿಸುತ್ತ, ಬೇಕಾದ ಒಂದಷ್ಟು ಪೋಟೊಗಳನ್ನು ಕ್ಲಿಕ್ಕಿಸಿಕೊಂಡೆ ಮೊಬೈಲಿನಲ್ಲಿ.. ಯಾಕೊ ಈ ಬಾರಿ ರಾತ್ರಿಯಲ್ಲಿ ಶಂಕರ ಹೆಚ್ಚು ಮಾತಾಡಲಿಲ್ಲ.. ಪುಸ್ತಕಗಳನ್ನು ಹಿಡಿದು ಕೂತಿದ್ದಾಗ ಮಲಗುವ ಮೊದಲು ಒಂದೆ ಒಂದು ಮಾತಾಡಿದ..
‘ಅಂದ ಹಾಗೆ ಬೈಕ್ ಕೀ ತೊಗೊ.. ಬೆಳಿಗ್ಗೆ ಬೈಕ್ ತೊಗೊಂಡು ನೀನು ಬೆಂಗಳೂರಿಗೆ ಹೊರಟುಬಿಡು.. ಬೈಕು ಅಲ್ಲೆ ಇರಲಿ.. ನೀನೆ ಓಡಿಸ್ತಾ ಇರು, ನಾನು ಬರೋ ತನಕ..’ ಎಂದವನೆ ಮಗ್ಗುಲಾದ. ಆ ರಾತ್ರಿಯೆಲ್ಲ ಏನೇನೊ ವಿಚಿತ್ರ ಕನಸುಗಳು.. ಆದರೆ ನಿದ್ದೆ ಮಾತ್ರ ಗಾಢವಾಗಿ ಬಂದಿತ್ತು – ಮೈ ಮೇಲೆ ಎಚ್ಚರವಿಲ್ಲದ ಹಾಗೆ..
ಬೆಳಿಗ್ಗೆ ಎಚ್ಚರವಾದಾಗ ಏಳಾಗಿ ಹೋಗಿತ್ತು.. ಶಂಕರ ಎದ್ದು ಪಕ್ಕದೂರಿಗೆ ಹೋದನೆಂದು ಹೇಳುತ್ತ ಕಾಫಿ ಕೊಟ್ಟರು ಅವನಮ್ಮ.. ಇನ್ನು ಸಂಜೆಗೆ ಬರುವುದೆಂದು ಹೇಳಿ, ನನ್ನನ್ನು ಅವನಿಗಾಗಿ ಕಾಯದೆ ತಿಂಡಿ ತಿಂದು ಹೊರಟುಬಿಡಲು ಹೇಳಿದ್ದಾಗಿ ಸಂದೇಶ ರವಾನಿಸಿದರು.. ನಾನು ಲಗುಬಗೆಯಿಂದ ಸ್ನಾನಕ್ಕೆ ಹೊರಟೆ, ಬಿಸಿಲೇರುವ ಮೊದಲೆ ಹೊರಟುಬಿಡುವ ಉದ್ದೇಶದಿಂದ..
ಬೈಕಿದ್ದ ಕಾರಣ ನಾನು ಬಸ್ಸಿನಿಂದಿಳಿದ ಅದೇ ಜಾಗಕ್ಕೆ ಶೀಘ್ರವಾಗಿ ತಲುಪಿಕೊಂಡೆ.. ಅಲ್ಲಿಂದಾಚೆಗೆ ಸ್ವಲ್ಪ ಟಾರು ರಸ್ತೆ ಇರುವ ಕಾರಣ ಬೈಕು ಓಡಿಸುವುದು ಸುಲಭವಾಗುತ್ತಿತ್ತು.. ಅದಕ್ಕೆ ಮುನ್ನ ಒಂದೆರಡು ನೀರಿನ ಬಾಟಲಿ ಕೊಂಡಿಟ್ಟು ಕೊಳ್ಳೋಣವೆಂದು ಅಲ್ಲಿದ್ದ ಚಿಕ್ಕ ಪೆಟ್ಟಿಗೆ ಅಂಗಡಿಯತ್ತ ಗಾಡಿ ಓಡಿಸುವುದರಲ್ಲಿದ್ದೆ.. ಆಗ ತಟ್ಟನೆ ಅರಿವಾಯ್ತು, ನನ್ನ ಪುಟ್ಟ ಬ್ಯಾಗನ್ನು ಹೊರಡುವ ಅವಸರದಲ್ಲಿ ಅಂಗಳದ ಜಗುಲಿಯ ಮೇಲೆ ಬಿಟ್ಟು ಬಂದುಬಿಟ್ಟಿರುವೆ ಎಂದು.. ಪುಣ್ಯಕ್ಕೆ ಊರು ಬಿಡುವ ಮೊದಲೆ ನೆನಪಾಗಿತ್ತು – ದಾರಿಯ ಮಧ್ಯದಲ್ಲಾಗಿದ್ದರೆ, ಮತ್ತೆ ಹಿಂದಿರುಗುವ ಸಾಧ್ಯತೆ ಇರುತ್ತಿರಲಿಲ್ಲ.. ಗಾಡಿ ತಿರುಗಿಸಿ ಮತ್ತೆ ಆ ಕಚ್ಛಾ ರಸ್ತೆಯಲ್ಲಿ ಓಡಿಸುತ್ತ ಐದೆ ನಿಮಿಷಗಳಲ್ಲಿ ದೊಡ್ಡ ಮನೆಗೆ ತಲುಪಿಕೊಂಡೆ.. ನನ್ನ ಬ್ಯಾಗು ನನಗೆ ಕಾದಿದ್ದಂತೆ ಅಲ್ಲೆ ಅಂಗಳದ ಕಂಬಕ್ಕೊರಗಿ ಕೂತಿತ್ತು.. ಅದನ್ನೆತ್ತಿ ಬೈಕಿನ ಬಾಕ್ಸಿಗೆ ಸೇರಿಸಿದೆ – ಮೊಬೈಲ್ ಚಾರ್ಜರನ್ನು ಮಾತ್ರ ಪೆಟ್ರೋಲ್ ಟ್ಯಾಂಕಿನ ಮೇಲಿನ ಚೀಲದಲ್ಲಿ ಹೊರಗಿರಿಸಿಕೊಳ್ಳುತ್ತ.. ಮತ್ತೊಮ್ಮೆ ಹೇಳಿ ಹೊರಟುಬಿಡೋಣವೆಂದು ತಲೆಯೆತ್ತಿ ನೋಡಿದರೆ – ಅರೆ.. ಬಾಗಿಲಿಗೆ ದೊಡ್ಡದೊಂದು ಬೀಗ ಬಿದ್ದಿದೆ..! ಅವರಪ್ಪ, ಅಮ್ಮ, ಬ್ಯಾಲ ಯಾರು ಕಾಣಿಸುತ್ತಿಲ್ಲ.. ‘ಸ್ವಲ್ಪ ಮುಂಚೆ ಇಲ್ಲೆ ಇದ್ದವರು , ಇಷ್ಟು ಬೇಗ ಎಲ್ಲಿಗೆ ಮಾಯವಾಗಿ ಹೋದರು? ಬಹುಶಃ ಹೊಲ ತೋಟದತ್ತ ಹೋದರೇನೊ?’ಎಂದುಕೊಂಡು ನಾನು ಬೈಕ್ ತಿರುಗಿಸಿ ಮತ್ತೆ ಆ ಚಿಕ್ಕ ಪೆಟ್ಟಿಗೆ ಅಂಗಡಿಯತ್ತ ನಡೆದೆ..
ನಾನಂದುಕೊಂಡ ಹಾಗೆ – ಅಲ್ಲಿ ಬೇರೇನು ಸಿಗದೆ ಇದ್ದರು, ಮಿನರಲ್ ವಾಟರ್, ಪಾನೀಯಗಳು, ಚಿಪ್ಸ್, ಕುರುಕಲು ತಿಂಡಿ, ಬೀಡಿ , ಸಿಗರೇಟು ಮಾತ್ರ ದಂಡಿಯಾಗಿತ್ತು.. ಜೊತೆಗೆ ಅಂಗಡಿಯವ ಮಾರುತ್ತಿದ್ದ ಟೀ, ಕಾಫಿ, ಬಿಸ್ಕೆಟ್ಟು.. ನೇತುಹಾಕಿದ್ದ ಗೊನೆಯೊಂದರಿಂದ ಒಂದಷ್ಟು ಬಾಳೆಹಣ್ಣು ಕಿತ್ತುಕೊಂಡು, ನೀರಿನ ಬಾಟಲಿ, ಬಿಸ್ಕತ್ತಿನ ಜೊತೆ ಖರೀದಿಸಿದೆ – ದಾರಿಯಲ್ಲಿ ಬೇಕಾದರೆ ಇರಲಿ ಎಂದು.. ಅದನ್ನೆಲ್ಲ ಪ್ಲಾಸ್ಟಿಕ್ಕಿನ ಚೀಲವೊಂದರಲ್ಲಿ ಹಾಕಿಕೊಟ್ಟ ಅಂಗಡಿಯವ ಅದೇಕೊ ನನ್ನ ಬೈಕನ್ನೆ ಗಾಢವಾಗಿ ದಿಟ್ಟಿಸಿ ನೋಡುತ್ತಿದ್ದ.. ಅದೇ ಹೊತ್ತಿಗೆ ಅಲ್ಲಿಗೆ ಬಂದ ಮತ್ತೊಬ್ಬ ಗಿರಾಕಿಯೂ ಅದನ್ನೆ ದಿಟ್ಟಿಸುತ್ತಿದ್ದುದನು ಕಂಡು , ಯಾಕೆಂದು ಗೊತ್ತಾಗದೆ ಸ್ವಲ್ಪ ಗಲಿಬಿಲಿಯಾಯ್ತು.. ಆಗ ಅಂಗಡಿಯವನೆ ತಟ್ಟನೆ ಕೇಳಿದ..
‘ಸಾರ್.. ಈ ಬೈಕ್ ಶಂಕ್ರಣ್ಣಂದಲ್ವಾ? ಪಾಪ..’ ಎಂದ..
ಆಕ್ಸಿಡೆಂಟು ಆಗಿದ್ದು ಗೊತ್ತಿರುವ ಕಾರಣಕ್ಕೆ ‘ಪಾಪ’ ಅನ್ನುತ್ತಿರಬೇಕು ಅನಿಸಿ, ‘ಹೌದಪ್ಪ.. ಅವನದೆ.. ನನ್ನ ಸ್ನೇಹಿತ ಅವನು.. ಬೆಂಗಳೂರಿಗೆ ತೊಗೊಂಡು ಹೋಗೋಕೆ ಹೇಳಿದಾನೆ.. ಅದಕ್ಕೆ ತೊಗೊಂಡು ಹೋಗ್ತಾ ಇದೀನಿ.. ಅವನು ಬಂದಾಗ ಅಲ್ಲೆ ಓಡಿಸ್ತಾನೆ..’ ಎಂದಾಗ ಅವರಿಬ್ಬರು ಮುಖಾ ಮುಖಾ ನೋಡಿಕೊಂಡರು.. ನಾನು ಯಾಕೆಂದು ಗೊತ್ತಾಗದೆ ಪ್ರಶ್ನಾರ್ಥಕವಾಗಿ ಅವರಿಬ್ಬರ ಮುಖ ನೋಡಿದೆ..
‘ಹಾಗಂತ ಅವರೆ ಹೇಳಿ ಬೈಕು ಕೊಟ್ರಾ?’ ಎಂದ ಆ ಎರಡನೆ ವ್ಯಕ್ತಿ..
ಇದೇನಿದು? ಕದ್ದ ಮಾಲು ವಿಚಾರಿಸುವವರಂತೆ ಕೇಳುತ್ತಿದ್ದಾರಲ್ಲ ? ಆಂದುಕೊಳ್ಳುತ್ತಲೆ ಹೇಳಿದೆ.. ‘ಹೌದು ಅವನೆ ಗಾಡಿ ಕೀ ಕೊಟ್ಟಿದ್ದು – ನಿನ್ನೆ ರಾತ್ರಿ.. ನಿನ್ನೆ ಮಧ್ಯಾಹ್ನದಿಂದ ಅವರ ಮನೆಯಲ್ಲೆ ತಂಗಿದ್ದೆನಲ್ಲ? ಅಲ್ಲೆ ಊಟ ತಿಂಡಿ ನಿದ್ದೆ ಎಲ್ಲಾ ಆಯ್ತು.. ಈಗ ಗಾಡಿ ಎತ್ತಿಕೊಂಡು ಹೊರಟೆ..’ ಎಂದು ಅನುಮಾನ ಪರಿಹರಿಸುವವನಂತೆ ಒಂದು ಪುಟ್ಟ ವಿವರಣೆಯನ್ನು ಕೊಟ್ಟೆ..
‘ಊಟ ಮಾಡಿದ್ದಲ್ಲದೆ ರಾತ್ರಿ ಅಲ್ಲೆ ಮಲಗಿದ್ದರಾ?’ ಎಂದ ಅಂಗಡಿಯವ..
‘ಹೌದಪ್ಪ..’ ಎಂದೆ ಮತ್ತೆ ಗೊಂದಲದಲ್ಲಿ.. ಅವರಿಬ್ಬರು ಮತ್ತೆ ಮುಖಾಮುಖಾ ನೋಡಿಕೊಂಡರು..
‘ಸರಿ ಸಾರ್.. ನೀವು ಹೊರಡಿ.. ನಿಮಗೆ ಲೇಟ್ ಆಗುತ್ತೆ.. ದೂರದ ಪ್ರಯಾಣ ಬೇರೆ’ ಎಂದು ಅರ್ಧದಲ್ಲೆ ಮಾತು ಮುಗಿಸಲು ಯತ್ನಿಸಿದಾಗ ನನಗೆ ಏನೊ ಅನುಮಾನ ಹುಟ್ಟಿತು..
‘ಯಾಕ್ರಪ್ಪ..? ನಿಮ್ಮ ಮಾತು ಒಗಟಿದ್ದ ಹಾಗಿದೆ..? ಏನಾದ್ರು ಹೆಚ್ಚುಕಮ್ಮಿ ಇದೆಯಾ ನಾ ಹೇಳಿದ್ದರಲ್ಲಿ..?’ ಎಂದೆ
‘ಪಾಪ.. ಇವರಿಗೆ ವಿಷಯ ಗೊತ್ತಿಲ್ಲ ಅಂತ ಕಾಣುತ್ತೆ..’ ಎಂದು ಎರಡನೆಯವನು ಮತ್ತೆ ಲೊಚಗುಟ್ಟಿದ..
‘ಏನು ವಿಷಯಾ..?’ ಎಂದೆ ಸ್ವಲ್ಪ ಜೋರಾದ ದನಿಯಲ್ಲಿ.. ಈ ಬಾರಿ ಅಂಗಡಿಯವನೆ ಹೇಳಿದ..
‘ಸಾರ್.. ತಪ್ಪು ತಿಳ್ಕೋಬೇಡಿ.. ಈಗೊಂದು ವಾರದ ಹಿಂದೆ ಕೊರೋನ ವೈರಸ್ ನಿಂದ ಆ ಮನೆಯಲ್ಲಿದ್ದ ಆರು ಜನರು ತೀರಿಕೊಂಡರು ಸಾರ್.. ಕರೋನಾ ಭಯಕ್ಕೆ ಎಲ್ಲ ಅಲ್ಲಿಗೆ ಹೋಗಲಿಕ್ಕು ಹೆದರುತ್ತಿದ್ದರು.. ಸ್ವಲ್ಪ ತಡವಾಗಿ ಅಂಬ್ಯುಲೆನ್ಸೊಂದು ಬಂದು ಅವರೆಲ್ಲರನ್ನು ಹೊತ್ತೊಯ್ದಿತಂತೆ ಆಸ್ಪತ್ರೆಗೆ.. ಆದರೆ ಪ್ರಯೋಜನವಾಗಲಿಲ್ಲ.. ಅಷ್ಟೂ ಜನವು, ಎರಡೆ ದಿನದಲ್ಲಿ ಪ್ರಾಣ ಬಿಟ್ಟರಂತೆ.. ಕೊನೆಗೆ ಧಫನ್ ಮಾಡಲು ಯಾರೂ ಇರದೆ, ಆ ಆಸ್ಪತ್ರೆಯವರೆ ಏನೊ ಮಾಡಿ ಕೈ ತೊಳೆದುಕೊಂಡರಂತೆ.. ಶಂಕ್ರಣ್ಣನವರ ತೋಟದಲ್ಲೆ ಸುಟ್ಟು ಹಾಕಿದ್ರು ಅಂತಾರೆ.. ಇಲ್ಲಾ ಎಲ್ಲೊ ಒಂದ್ಕಡೆ ಸಾಮೂಹಿಕ ಹೆಣಗಳ ಜೊತೆ ಸುಟ್ಟು ಹಾಕಿದ್ರು ಅಂತಾರೆ.. ಯಾವುದು ನಿಜವೊ ಸುಳ್ಳೊ ಗೊತ್ತಿಲ್ಲ.. ನೀವು ನೋಡಿದ್ರೆ ನಿನ್ನೆ ಮಾತಾಡ್ದೆ , ಅಲ್ಲೆ ಮಲಗಿದ್ದೆ ಅಂತಿದೀರಿ.. ಕರೋನ ಭಯಕ್ಕೆ ನಾವ್ಯಾರು ಆ ಕಡೆ ಹೋಗೋದೆ ಇಲ್ಲ.. ಅದಕ್ಕೆ ನೀವು ಮೊದಲು ಹೋಗಿ ಊರು ಸೇರ್ಕೊಳಿ..’ ಎಂದು ಮಾತು ನಿಲ್ಲಿಸಿದ..
ಅವನ ಮಾತು ಕೇಳುತ್ತಲೆ ನನಗೆ ಹಣೆಯಲ್ಲಿ ಬೆವರಲು ಆರಂಭವಾಗಿತ್ತು.. ನನ್ನ ಚೀಲ ತರಲು ಹೋದಾಗ ಬೀಗ ಹಾಕಿದ್ದ ಬಾಗಿಲು, ಸುಮಾರು ದಿನದಿಂದ ಓಡಾಟವಿಲ್ಲದೆ ಮಂಕು ಬಡಿದಂತಿದ್ದ ವಾತಾವರಣ, ಏನೋ ಹಾಳು ಸುರಿಯುತ್ತಿರುವ ಅವ್ಯಕ್ತ ಭಾವ – ಎಲ್ಲವು ನೆನಪಾಗಿ, ಮೈಯೆಲ್ಲ ಕಂಪನದಲ್ಲಿ ಅದುರಿ ನಖಶಿಖಾಂತ ಜಲಿಸಿಹೋಯ್ತು.. ಮತ್ತೆ ಅಲ್ಲಿಗೆ ಹೋಗಿ ನೋಡಲು ಧೈರ್ಯ ಸಾಲದೆ ಬೈಕ್ ಓಡಿಸಿಕೊಂದು ಆದಷ್ಟು ಶೀಘ್ರ ವೇಗದಲ್ಲಿ ಅಲ್ಲಿಂದ ಹೊರಬಿದ್ದೆ..!
ನನ್ನೆದುರಿಗೆ ಮೌನವಾಗಿ ಕೂತು ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದಳು ಶಾಂತಿ..
‘ಅವರು ನಿಜವಾಗಿ ಕರೋನದಿಂದ ಸತ್ತರು ಅಂಥ ಕನ್ಫರ್ಮ್ ಆಯ್ತಾ?’ ಕೇಳಿದಳು..
‘ಹೂಂ.. ಆಸ್ಪತ್ರೆ ರೆಕಾರ್ಡ್ಸಲ್ಲಿ ಇವರೆಲ್ಲರ ಹೆಸರಿದೆ.. ನಾನೇ ಪೋನ್ ಮಾಡಿದ್ದೆ..’
ಅದಕ್ಕೆ ಸ್ವಲ್ಪ ಮೊದಲು ನಾವಿಬ್ಬರು ಶಂಕರ ಕೊಟ್ಟಿದ್ದ ಪತ್ರವನ್ನು ಒಟ್ಟಾಗಿಯೆ ಓದಿದ್ದೆವು.. ಅದರಲ್ಲಿ ದೊಡ್ಡ ಮನೆಯನ್ನು ಶಾಂತಿ ತನ್ನ ಗುರಿ ಸಾಧನೆಗೆ ಬಳಸಿಕೊಳ್ಳಬೇಕೆಂದು ಬರೆದಿದ್ದ ಶಂಕರ – ಮಾರಿಯಾದರು ಸರಿ ಅಥವ ಅದನ್ನೆ ರಂಗಮಂಚದಂತೆ ಬಳಸಿಕೊಂಡಾದರು ಸರಿ.. ಯಾವ ಹಾದಿ ಹಿಡಿದರು ಅದಕ್ಕೆ ಬೇಕಾದ ಕಾನೂನು ಬದ್ಧ ಪ್ರಕ್ರಿಯೆಯನ್ನು ನಿಭಾಯಿಸುವ ಹೊಣೆಯನ್ನು ನಮ್ಮಿಬ್ಬರಿಗೆ ವಹಿಸಿದ್ದ – ನಮ್ಮನ್ನು ಅವನ ಆ ಊರಿನ ಆಸ್ತಿಯ ಟ್ರಸ್ಟಿಗಳಾಗಿಸಿ..
ಜೊತೆಗೆ ತನ್ನ ಬೈಕನ್ನು ನನಗೆ ಉಡುಗೊರೆಯಾಗಿ ಕೊಟ್ಟಿರುವುದಾಗಿ ಸಹ ಸೇರಿಸಿದ್ದ.. ಅದರ ಸಂಬಂದಿತ ಎಲ್ಲಾ ಕಾಗದ ಪತ್ರಗಳು ಸಹ ಜೊತೆಯಲ್ಲಿದ್ದವು..
‘ನನಗೆ ಇದನ್ನೆಲ್ಲ ನಂಬಲೆ ಆಗುತ್ತಿಲ್ಲ ಸುಧಾ.. ಹೇಗೊ ಸತ್ತು ಹೋದವರ ಮನೆಯಲ್ಲಿ ನೀನಿದ್ದು ಬರೋಕೆ ಸಾಧ್ಯ? ಮಾತಾಡಿದೆ, ಊಟ ಮಾಡಿದೆ, ಅಲ್ಲೆ ಮಲಗಿದ್ದೆ ಅಂತೆಲ್ಲ ಹೇಳ್ತಿದ್ದೀಯಾ – ಒಂದು ಫ್ಯಾಂಟಸಿ ಕಥೆ ಇದ್ದ ಹಾಗಿದೆಯೆ ಹೊರತು ಹೇಳಿದರೆ ಯಾರೂ ನಂಬಲ್ಲ..’
‘ನನಗೂ ಈಗಲು ನಂಬಿಕೆ ಇಲ್ಲ ಶಾಂತಿ.. ಆದರೆ ಈ ಬೈಕು, ಈ ಪತ್ರಗಳು ಇವಕ್ಕೆಲ್ಲ ಏನು ಹೇಳ್ತಿ? ನಾವು ನಂಬದೆ ಇದ್ರು ನಾವು ಅರಿಯಲಾಗದ, ಅರ್ಥ ಮಾಡಿಕೊಳ್ಳಲಾಗದ ಅದೆಷ್ಟೊ ಸಂಗತಿಗಳು ಈ ಜಗತ್ತಿನಲ್ಲಿ ನಡೆಯುತ್ತಾ ಇರುತ್ತವೆ.. ಅದರ ಎಷ್ಟೊ ನಿಗೂಢಗಳು ನಮಗೆ ಅರ್ಥವಾಗೋದಿಲ್ಲ, ಗೊತ್ತಾಗೋದಿಲ್ಲ.. ಇದೂ ಅಂತದ್ದೆ ಒಂದು ಕಥೆ ಅಂಥ ಕಾಣುತ್ತೆ..ನೋಡು? ಆ ಕಾಗದ ಪತ್ರದಲ್ಲಿರುವ ತಾರೀಖು ಸಹ ಸಾಯುವ ಮೊದಲಿನ ದಿನಾಂಕಗಳು.. ಈಟ್ ಇಸ್ ಆಲ್ ಸೋ ಫರ್ಫೆಕ್ಟ್ ಅಂಡ್ ಪೂಲ್ ಪ್ರೂಪ್..!’ ಎಂದೆ.
ಸ್ವಲ್ಪ ಹೊತ್ತು ಮತ್ತೆ ಮೌನವಾಗಿದ್ದ ಶಾಂತಿ, ತನ್ನಲ್ಲೆ ಏನೊ ಯೋಚಿಸುತ್ತ ಕೇಳಿದಳು, ‘ನಾನು ಶಂಕರನ ಪ್ರಪೋಸಲ್ಲಿಗೆ ಒಪ್ಕೋಬೇಕಾಗಿತ್ತಾ ಸುಧಾ..?’
ನನಗವಳ ಸಂದಿಗ್ಧ ಅರ್ಥವಾಗುತ್ತಿತ್ತು.. ಆದರೆ ಎಲ್ಲಾ ಮುಗಿದು ಹೋದ ಕಥೆ, ಕೆದಕಿ ಪ್ರಯೋಜನವಿಲ್ಲ.. ಅದನ್ನೆ ಹೇಳಿದೆ..
‘ಶಾಂತೂ.. ಪಾಸ್ಟ್ ಇಸ್ ಪಾಸ್ಟ್ .. ಯು ಕಾಂಟ್ ಚೇಂಜ್ ಇಟ್.. ನಿನ್ನ ನಿರ್ಧಾರಕ್ಕೆ ನಿನ್ನದೆ ಕಾರಣಗಳಿದ್ದವು.. ಅದನ್ನ ಶಂಕರ ಕೂಡ ಗೌರವಿಸಿದ್ದರಿಂದ ತಾನೆ , ತಾನು ಸತ್ತರು ಇಷ್ಟೆಲ್ಲ ಮಾಡಿ ಹೋಗಿದ್ದಾನೆ..? ಸೋ .. ಥಿಂಕ್ ಆಫ್ ವಾಟ್ ಟು ಡೂ ನೌ.. ಅವನು ಹೇಳಿದ ಹಾಗೆ ಮನೆ ಮಾರೋದ? ಯೂಸ್ ಮಾಡೋದಾ? ಅಥವಾ ಬೇರೆ ಏನಾದ್ರು ದಾರಿ ಹುಡುಕಬೇಕಾ? ನಾನಂತು ಬೈಕ್ ವ್ಯಾಲ್ಯೂನ ಯಾವುದಾದ್ರು ಅನಾಥಾಶ್ರಮಕ್ಕೆ ಡೊನೇಟ್ ಮಾಡಿಬಿಡ್ತೀನಿ ಶಂಕರನ ಹೆಸರಲ್ಲಿ..’ ಎಂದೆ..
‘ನಾನೊಂದು ಐಡಿಯಾ ಹೇಳ್ತಿನಿ .. ಹಾಗೆ ಮಾಡೋಕೆ ಸಹಕರಿಸ್ತೀಯಾ?’ ಕೇಳಿದಳು ಶಾಂತಿ.
‘ಹೇಳು..’
‘ನಾವು ಮನೆ ಮಾರೋದು ಬೇಡ.. ಅದನ್ನ ನಾನು ನನ್ನ ಪ್ರಾಜೆಕ್ಟಿನ ಚಟುವಟಿಕೆಗೆ ಬಳಸಿಕೊಳ್ತೀನಿ ಶಂಕರನ ತಂದೆಯ ಹೆಸರಲ್ಲಿ.. ಆದರೆ ಅದಕ್ಕೆ ಆಗಾಗ ಹೋಗಿ ಬಂದ್ರೆ ಸಾಕು.. ಯಾವಾಗಲು ಅಲ್ಲೆ ಇದ್ದು ಪ್ರತಿ ದಿನವು ಬಳಸೋಕೆ ಆಗಲ್ಲ.. ವರ್ಷದಲ್ಲೊಂದು ನೂರು ದಿನ ಪ್ರೋಗ್ರಮ್ ಹಾಕಿಕೊಂಡು ಬಳಸಬಹುದಷ್ಟೆ..’
‘……. ?’
‘ಮತ್ತೆ ಸುತ್ತಮುತ್ತ ಹೇಗು ತೋಟದ ಪರಿಸರ ಇದೆ.. ಅದನ್ನೊಂದು ನರ್ಸರಿ ತರ ಡೆವಲಪ್ ಮಾಡೋಣ – ಶಂಕರನ ಹೆಸರಲ್ಲಿ.. ಅಲ್ಲೆ ಯಾರನ್ನಾದ್ರು ಕೆಲಸಕ್ಕೆ ಇಟ್ಕೊಂಡು ಇಲ್ಲಿಂದಲೆ ರನ್ ಮಾಡೋಣ.. ನಾವು ಆಗಾಗ ಹೋಗಿ ಬಂದ್ರೆ ಸಾಕು.. ಅಲ್ಲಿ ಬರೋ ರೆವಿನ್ಯೂ ನೆಲ್ಲ ಪ್ರಾಜೆಕ್ಟಿಗೆ ಮತ್ತೆ ಶಂಕರನ ಹೆಸರಿನಲ್ಲಿ ಯಾವುದಾದರು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳೋಣ.. ಆಗಲಾದರು ಅವನ ಆತ್ಮಕ್ಕೆ ಶಾಂತಿ ಸಿಗಬಹುದೇನೊ..?’
ನನಗು ಅವಳ ಆಲೋಚನೆ ಸರಿಯೆನಿಸಿತು.. ಶಂಕರ ಬದುಕಿದ್ದರೆ ಇದನ್ನೆ ಅನುಮೋದಿಸುತ್ತಿದ್ದ ಎನಿಸಿತು..
‘ಸರಿ ಶಾಂತ ಹಾಗೆ ಮಾಡೋಣ.. ನಾನು ಈ ಪೇಪರ್ಸ್ ರೆಗ್ಯೂಲರೈಸ್ ಮಾಡಿಸೊದರ ಕಡೆ ನೋಡ್ಕೋತಿನಿ.. ಆಮೇಲೆ ಲೀಗಲ್ ಪ್ರಾಬ್ಲಮ್ಸ್ ಬರಬಾರದು.. ಇನ್ನೊಂದಿಬ್ಬರನ್ನ ಹುಡುಕಿ ಟ್ರಸ್ಟಿಗೆ ಸೇರಿಸಿಕೊಳ್ಳೋಣ.. ಇದೆ ದಾರಿ ಶಂಕರನು ಇಷ್ಟ ಪಡುತ್ತಿದ್ದ ಅನಿಸುತ್ತೆ.. ಆ ನಂಬಿಕೆಯಲ್ಲಿ ಮುನ್ನಡೆಯೋಣ. ಹಾಗೇನಾದರು ಬೇರೆ ವಿಚಾರ ಇದ್ದರೆ ಅವನೆ ಯಾವುದಾದರು ಇಂಗಿತ ಕೊಡುತ್ತಾನೆ..’ ಎಂದೆ.
ನನ್ನ ಮಾತು ಕೇಳಿ ಶಾಂತಿಯ ಮುಖವು ಅರಳಿತು.. ‘ಥ್ಯಾಂಕ್ಯೂ ಸುಧಾ..’ ಎನ್ನುತ್ತ ಮೇಲೆದ್ದವಳನ್ನು ನಾನು ನಿರಾಳವಾಗಿ ಹಿಂಬಾಲಿಸಿದೆ – ಆ ಹೊತ್ತಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಕಾಫಿ ಕುಡಿಯುವ ಸಲುವಾಗಿ!
(ಮುಕ್ತಾಯ)
– ನಾಗೇಶ ಮೈಸೂರು
೨೦.೦೯.೨೦೨೧

(Picture source : internet / social media)
ಅದ್ಭುತ ಕತೆ.. ತುಂಬಾ ಇಷ್ಟ ಆಯ್ತು
LikeLike
ತುಂಬಾ ಧನ್ಯವಾದಗಳು 🙏😍👍😊
LikeLike