ನನ್ನದೊಂದು ಸಣ್ಣ ಕತೆ ‘ಅರಿವು’ – ಇಂದಿನ ವಿನಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ವಿನಯವಾಣಿಯ ವಾಯ್.ಎಂ. ಕೋಲಕಾರ ಮತ್ತು ಪತ್ರಿಕಾ ಸಿಬ್ಬಂದಿ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು!🙏🙏🙏
ಸಣ್ಣಕಥೆ: ಅರಿವು
ಅವನಿಗೆ ದಿಕ್ಕೆ ತೋಚದಂತೆ ಆಗಿಹೋಗಿತ್ತು. ನಿರಂತರವಾಗಿ ಕಾಡುತ್ತಿದ್ದ ಆ ಅಸಂಖ್ಯಾತ ಪ್ರಶ್ನೆಗಳಿಂದ ಹೊರಬರಲಾಗದೆ ತತ್ತರಿಸಿಹೋಗಿದ್ದ..
ಎಲ್ಲಕ್ಕಿಂತ ದೊಡ್ಡ ತೊಡಕೆಂದರೆ, ಆ ಆಲೋಚನೆಯನ್ನು ಬೇಡದ್ದೆಂದು ಬದಿಗೆ ಸರಿಸಲು ಸಹ ಸಾಧ್ಯವಿರಲಿಲ್ಲ.. ಅದೇನು ಕಾರಣಕ್ಕೊ ಏನೊ – ಅದು ಪದೇ ಪದೇ ಗಿರಕಿ ಹೊಡೆಯುತ್ತ, ಅವನ ಚಿತ್ತವನ್ನು ಆವರಿಸಿಕೊಂಡು ಕಾಡುತ್ತಿತ್ತು.. ದೂರ ದೂಡಲೆತ್ನಿಸಿದಷ್ಟು, ಆ ಯತ್ನದ ಗುರುತ್ವವೆ ಅದರ ಸಾಂದ್ರತೆಯನ್ನು ವೃದ್ಧಿಸಿ ಮತ್ತಷ್ಟು ತೀವ್ರವಾಗಿ ಕಾಡುವಂತೆ ಮಾಡುತ್ತಿತ್ತು.. ಹೊರಬರಲಾಗದ ಚಕ್ರತೀರ್ಥವೊಂದರ ಸುಳಿಗೆ ಸಿಕ್ಕಂತ ಪಾಡಾಗಿ ತಲೆಯೆ ಸಿಡಿದು ಹೋಗುವುದೇನೊ ಅನಿಸಿ, ಆ ಒತ್ತಡವೆ ಮತ್ತಾರದೊ ಮೇಲಿನ ಆಕ್ರೋಶವಾಗಿಯೊ, ಸುತ್ತಲಿನ ವಸ್ತುಗಳ ಮೇಲಿನ ಅಬ್ಬರದ ಧಾಳಿಯಾಗಿಯೊ ಪರಿಣಮಿಸಿ – ಬದುಕೆ ಬೇಸರವೇನಿಸುವಷ್ಟರ ಮಟ್ಟಿಗೆ ರೋಸಿ ಹೋಗಿತ್ತು..
‘ಗೋಚರ, ನೀನು ನಿನ್ನ ಮೇಲಿನ ಹತೋಟಿ ಕಳೆದುಕೊಳ್ಳುತ್ತಿರುವೆ.. ಇದು ಹೀಗೆ ಮುಂದುವರೆದರೆ, ನಿನಗೆ ಮಾತ್ರವಲ್ಲ ನನಗೂ ಹುಚ್ಚು ಹಿಡಿದುಬಿಡುತ್ತದೆ..’ ಆತಂಕದ ದನಿಯಲ್ಲಿ ಹೇಳಿದಳು ನಿಷ್ಕಲ. ಇದು ಅದೆಷ್ಟನೆ ಬಾರಿಯೊ ಅವಳು ಹೇಳುತ್ತಿರುವುದು..
‘ನಿಷ್ಕಲಾ, ನಿನ್ನ ಕಾಳಜಿ ನನಗು ಅರ್ಥವಾಗುತ್ತದೆ.. ಆದರೆ ಇದೇಕೊ ನನ್ನ ಹತೋಟಿಗೆ ಸಿಗುತ್ತಿಲ್ಲ.. ನನಗು ಈ ಚಕ್ರಕ್ಕೆ ಸಿಕ್ಕಿಕೊಳಲು ಇಷ್ಟವಿಲ್ಲ.. ಆದರೆ ನನ್ನ ಮನಸು ತಂತಾನೆ ಆ ಹಾದಿ ಹಿಡಿದು ನಡೆದುಬಿಡುತ್ತದೆ.. ಅದು ಆರಂಭವಾಯ್ತೆಂದರೆ ಅಷ್ಟೆ – ಮುಂದೆ ಅದು ನನ್ನ ಹತೋಟಿಗೆ ಸಿಕ್ಕುವುದಿಲ್ಲ.. ಒಂದರ ಹಿಂದೆ ಒಂದರಂತೆ ಪುಂಖಾನುಪುಂಖವಾಗಿ, ಪ್ರವಾಹದಂತೆ ಹರಿಯತೊಡಗುತ್ತದೆ.. ಅದನ್ನು ತಾರ್ಕಿಕವಾಗಿ ಮುಗಿಸುವ ತನಕ ಮರಿ ಹಾಕಿದ ಬೆಕ್ಕಿನಂತೆ ಚಡಪಡಿಸುತ್ತಿರುತ್ತದೆ ಮನಸು.. ಅದನ್ನು ಮುಗಿಸಿ ನಿರಾಳವಾಯ್ತೆನ್ನುತ್ತಿದ್ದಂತೆ, ಮತ್ತೊಂದು ಹರಿದುಕೊಂಡು ಬಂದಿರುತ್ತದೆ, ಮೊದಲಿನದರ ಜಾಗದಲ್ಲಿ.. ಹೀಗೆ ಮುಂದುವರೆವ ಪ್ರಕ್ರಿಯೆಯ ಚಕ್ರದಲ್ಲಿ ಸಿಲುಕಿಬಿಟ್ಟರೆ ಹೊರಬರಲೆ ಆಗುವುದಿಲ್ಲ..’ ತನ್ನ ಅಳಲನ್ನು ಮತ್ತೆ ತೋಡಿಕೊಂಡ ಗೋಚರ..
‘ಆ ಮನಶಾಸ್ತ್ರಜ್ಞರ ಭೇಟಿಯಿಂದ ಏನು ಪ್ರಯೋಜನವಾಗಲಿಲ್ಲವಾ ? ಇದೇನೊ ‘ಒಸಿಡಿ’ ಅರ್ಥಾತ್ ‘ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸ್ಸಾರ್ಡರ್’ ತರದ ನ್ಯೂನತೆ ಅಂಥ ಹೇಳಿ, ಕೌನ್ಸಲಿಂಗ್ ಸೆಶನ್ಸ್, ಥೆರಪಿ ಎಲ್ಲಾ ಶುರು ಮಾಡಿದ್ದರಲ್ಲ..? ಅದ್ಯಾವುದು ಉಪಯೋಗಕ್ಕೆ ಬರಲಿಲ್ಲವೆ?’
‘ಅಯ್ಯೊ ಅದ್ಯಾವುದೊ ಮಾತ್ರೆ ಕೂಡ ಕೊಟ್ಟಿದ್ದರು – ಅದನ್ನು ತೆಗೆದುಕೊಳ್ಳುತ್ತಿದ್ದ ಹಾಗೆ ಬೇರೆ ತರದ ಸೈಡ್ ಎಫೆಕ್ಟುಗಳು ಶುರುವಾದವು.. ಅಲ್ಲೆ ಆಸ್ಪತ್ರೆಯಲ್ಲಿ ಒಂದು ತಿಂಗಳು ಅಡ್ಮಿಟ್ಟು ಆಗಿದ್ದು ಬಂದೆ – ಆದರು ಸುಖವಿಲ್ಲ..’ ನಿರಾಶೆಯ ದನಿಯಲ್ಲಿ ತನ್ನ ದುಃಖ ತೋಡಿಕೊಂಡ ಗೋಚರ..
ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ ನಿಷ್ಕಲ, ಏನೋ ಯೋಚಿಸಿದವಳಂತೆ ತಟ್ಟನೆ ನುಡಿದಳು..
‘ಗೋಚರ.. ನಾನೊಂದು ಮಾತು ಹೇಳ್ತಿನಿ .. ಹಾಗೆ ಮಾಡೋಣವಾ..?’
‘ಏನದು..?’
‘ನನ್ನ ಮೇಲೆ ನಂಬಿಕೆ ಇದೆಯಲ್ಲವೆ ನಿನಗೆ? ಲಾಜಿಕ್ ಇಲ್ಲ, ಅದೂ ಇದೂ ಅಂಥ ನಿರಾಕರಿಸುವುದಿಲ್ಲ ಎಂದರೆ ಮಾತ್ರ ಹೇಳುತ್ತೇನೆ..’
‘ಸರಿ ಹೇಳು.. ನನಗೆ ನಿನ್ನ ಬಿಟ್ಟು ಬೇರೆ ಯಾರು ತಾನೆ ಇದಾರೆ?’
‘ನನ್ನ ಸ್ನೇಹಿತರೊಬ್ಬರ ಮಗನಿಗೆ ಇದೇ ರೀತಿ ಬಗೆಹರಿಸಲಾಗದ ಸಮಸ್ಯೆ ಕಾಡಿತ್ತಂತೆ.. ಅವರು ಎಲ್ಲಾ ಚಿಕಿತ್ಸೆ ಪ್ರಯತ್ನ ಮಾಡಿದರು ಸಫಲವಾಗದೆ, ಕೊನೆಗೆ ಹಿಮಾಲಯದ ತಪ್ಪಲ ಆಶ್ರಮವೊಂದರ ಗುರುಗಳೊಬ್ಬರನ್ನು ಭೇಟಿ ಮಾಡಿ ಪ್ರಯತ್ನಿಸಿದರಂತೆ.. ಅದಾದ ಕೆಲವೆ ದಿನಗಳಲ್ಲಿ ಪೂರ್ಣ ಗುಣವಾಯಿತಂತೆ..’
‘ಓಹ್.. ಆ ಗುರುಗಳ ಹತ್ತಿರ ನಾವೂ ಹೋಗಬೇಕೆನ್ನುತ್ತಿಯಾ? ನಾವು ಹಿಮಾಲಯಕ್ಕೆ ಹೋಗಿ ಅವರನ್ನು ನೋಡಲು ನಿಜಕ್ಕು ಸಾಧ್ಯವೆ..? ಅದೆಲ್ಲ ಆಗದ ಹೋಗದ ಮಾತು..’
‘ಇಲ್ಲ ಗೋಚರ.. ಮುಂದಿನ ವಾರ ಅವರೆ ಇಲ್ಲಿಗೆ ಬರುತ್ತಿದ್ದಾರಂತೆ ಯಾವುದೊ ಪೂಜೆಯ ಸಲುವಾಗಿ.. ಆಗ ಸಂಧಿಸಿ ಮಾತನಾಡಬಹುದು ಅನ್ನೊ ಆಸೆ.. ಅಪಾಯಿಂಟ್ಮೆಂಟು ಕೊಡಿಸ್ತೀನಿ ಬೇಕಾದ್ರೆ ಅಂಥ ಪ್ರಾಮೀಸ್ ಮಾಡಿದಾಳೆ ನನ್ನ ಗೆಳತಿ?’
ಗೋಚರ ಅರೆಗಳಿಗೆ ಮಾತಾಡದೆ ತಲೆ ತಗ್ಗಿಸಿಕೊಂಡು ಯೋಚಿಸುತ್ತಿದ್ದ.. ನಂತರ ‘ಸರಿ.. ಇದೂ ಆಗಿಬಿಡಲಿ ಬಿಡು.. ಹೇಗೂ ಎಲ್ಲಾ ಸಿದ್ದ ಮಾಡಿಕೊಂಡೆ ಬಂದಿದ್ದಿಯಾ ಅನಿಸುತ್ತೆ..’ ಎಂದು ಮಾತು ಮುಗಿಸಿದ್ದ..
ಹೆಸರು ಬಾಬಾ ಗುರು ಗಂಭೀರನಾಥ್ ಎಂದಿದ್ದರು ಸದಾ ನಗುತ್ತಲೆ ಇರುವ ಹಸನ್ಮುಖಿ ಆ ಗುರೂಜಿ.. ಎದುರಿಗೆ ಕುಳಿತಿದ್ದ ಗೋಚರ, ನಿಷ್ಕಳರತ್ತ ತಮ್ಮ ಸಮ್ಮೋಹಕ ಮಂದಹಾಸವನ್ನು ಬೀರುತ್ತಲೆ, ತಮ್ಮ ಮಾತು ಆರಂಭಿಸಿದರು..
‘ಗೋಚರನಿಗು ಅಗೋಚರ ವಿಷಯಗಳು ಕಾಡುತ್ತಿವೆಯೆ? ವಿಚಿತ್ರವಲ್ಲವೆ..? ನೋಡೋಣ, ನಮ್ಮಿಂದೇನಾದರು ಪರಿಹಾರ ಸಾಧ್ಯವೆ ಎಂದು.. ಮೊದಲಿಗೆ ಸಮಸ್ಯೆ ಏನೆಂದು ವಿಷದವಾಗಿ ವಿವರಿಸಿ..’ ಎಂದರು..
ಈ ಸಾರಿ ಗೋಚರನೆ ತನಗಾಗುವುದನ್ನೆಲ್ಲ ಸಾದ್ಯಂತವಾಗಿ ವಿವರಿಸಿದ.. ಸುಮಾರು ಹದಿನೈದು ಇಪ್ಪತ್ತು ನಿಮಿಷ ಅವನು ಹೇಳುವುದನ್ನೆಲ್ಲ ಕೇಳಿಸಿಕೊಂಡರು ಗುರೂಜಿ.. ನಡುವೆ ಮಾತಾಡದೆ ಬರಿಯ ಮುಖಭಾವದ ಅಂಗಚರ್ಯೆಯಲ್ಲೆ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತ, ಅವನಿಗೇ ಮಾತಾಡಲು ಬಿಟ್ಟರು.. ಅದಾದ ಮೇಲೆ ಅವನೊಡನೆ ಕೆಲವು ಹೆಚ್ಚುವರಿ ಪ್ರಶ್ನೆಗಳನ್ನು ಕೇಳಿದರು – ಅವನ ಮಾತಿನಿಂದ ಉದ್ಭವಿಸಿದ್ದ ಸಂದೇಹಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ..
‘ಒಟ್ಟಾರೆ ನಿಮಗೆ ಇದ್ದಕ್ಕಿದ್ದಂತೆ ಎಲ್ಲ ವಿಷಯದ ಮೇಲು ಭೀತಿ, ಕಳವಳ ಉಂಟಾಗುತ್ತದೆ.. ಅಸಂಗತ ಊಹೆಗಳು, ಭೀಕರ ಕಲ್ಪನೆಗಳು ಹತೋಟಿ ಮೀರಿ ಧಾಳಿ ಮಾಡುತ್ತ ಆಕ್ರಮಿಸತೊಡಗುತ್ತವೆ.. ಅಲ್ಲವೆ..?’
‘ಹೌದು ಗುರೂಜಿ.. ಅಲ್ಲೆಲ್ಲೊ ಪ್ರವಾಹವಾದಾಗ, ಭೂಕಂಪವಾದಾಗ, ಚಂಡಮಾರುತವೆದ್ದಾಗ – ತಟ್ಟನೆ ‘ಅದು ಇಲ್ಲಿಯು ಆಗಿಬಿಡುತ್ತದೇನೊ?’ ಎನ್ನುವ ಕಲ್ಪನೆ ಸುಳಿಯುತ್ತದೆ.. ಅದು ಹಾಗೆ ಬೆಳೆಯುತ್ತ ಹೋಗಿ ಆ ದುರಂತ ನಮ್ಮನ್ನೆಲ್ಲ ನಾಶ ಮಾಡಿಬಿಡುವುದೇನೊ ಅನ್ನೊ ಭೀತಿ ಆರಂಭವಾಗಿ, ಸ್ವಲ್ಪ ಹೊತ್ತಿನ್ಸ್ ನಂತರ – ಅದು ನಡೆದೇ ತೀರುತ್ತದೆ ಎನಿಸಲು ಆರಂಭವಾಗುತ್ತದೆ.. ಆಮೇಲೆ , ಈ ಪ್ರಕೃತಿಯೇಕೆ ಇಷ್ಟು ದುರ್ಬಲ? ಹೇಗೆ ಇಂಥದ್ದೆಲ್ಲ ಸಂಭವಿಸಲು ಬಿಡುತ್ತದೆ ಈ ಪ್ರಕೃತಿ? ಯಾಕದನ್ನೆಲ್ಲ ತಡೆಯುವುದಿಲ್ಲ? ಎಂದೆಲ್ಲ ಆಲೋಚನೆ ಶುರುವಾಗುತ್ತದೆ.. ಹೀಗೆ ಆರಂಭವಾದ ಚಿಂತನೆ ಕೊನೆಯಿಲ್ಲದ ಚಕ್ರದಂತೆ ಕಾಡತೊಡಗಿ ತಲೆಚಿಟ್ಟು ಹಿಡಿಸಿಬಿಡುತ್ತದೆ – ತಲೆಯೊಳಗ್ಯಾರೊ ಕುಳಿತು ಒಂದೇ ಸಮನೆ ಗಂಟೆ ಬಾರಿಸಿದಂತೆ..’ ವಿವರಿಸಿದ ಗೋಚರ..
‘ಇದು ಬರಿ ಅವಘಢಗಳು ಆದಾಗ ಮಾತ್ರ ಆಗುತ್ತದೆಯೆ? ‘
‘ಹಾಗೇನು ಇಲ್ಲ.. ಅವಘಢವಾದಾಗ ಅದೊಂದು ನೆಪವಾಗಿ ಈ ಪ್ರಕ್ರಿಯೆ ಶುರುವಾಗುತ್ತದೆ.. ಅದಿಲ್ಲದಿದ್ದಾಗ ಈ ಬ್ರಹ್ಮಾಂಡ ಇದ್ದಕ್ಕಿದ್ದಂತೆ ನಾಶವಾಗಿ ಹೋದರೆ? ನಾನು ಕುಳಿತಿರುವ ಕಟ್ಟಡ ಕುಸಿದು ಹೋದರೆ? ಹಾರುತ್ತಿರುವ ವಿಮಾನ ಸಿಡಿದು ಹೋದರೆ? ಯೋಜಿತವಾಗಿ ಕಾರ್ಯ ನಿರ್ವಹಿಸಬೇಕಾದ ಯಂತ್ರ ಹಾಗೆ ಮಾಡದೆ ಏರುಪೇರಾದರೆ..? ಹೀಗೆ ಅಸಂಖ್ಯಾತ ವಿಷಯಗಳು..’
‘ನೀನು ಮಾಡುತ್ತಿರುವ ಕೆಲಸವು ಯಶಸ್ವಿಯಾಗಿ ಮುಗಿಯುವುದೊ, ಇಲ್ಲವೊ ಎನ್ನುವ ಸಂಶಯವೂ ಬರುತ್ತದೇನು? ತಪ್ಪಾಗಿಬಿಟ್ಟರೆ? ಅಂದುಕೊಂಡ ಹಾಗೆ ನಡೆಯದಿದ್ದರೆ? ಸರಿಯಾದ ಗಳಿಗೆಯಲ್ಲಿ ನಂಬಿದವರು ಕೈ ಕೊಟ್ಟರೆ..? – ಹೀಗೆಲ್ಲ ಅನಿಸುತ್ತದೆಯೆ?’ ಕೇಳಿದರು ಗುರೂಜಿ..
‘ಹೌದು.. ಅದರಲ್ಲು ಪ್ರಾಜೆಕ್ಟಿನ ಕೆಲಸದಲ್ಲಂತು ಇನ್ನು ಹೆಚ್ಚು ಅನಿಸುತ್ತದೆ.. ನನ್ನ ಸಾಮರ್ಥ್ಯದ ಬಗೆಯೆ ಸಂಶಯ ಬರುವಂತೆ ಮಾಡುತ್ತದೆ..’ ಉತ್ತರಿಸಿದ ಗೋಚರ..
ಗುರುಗಳಿಗೆ ಅರ್ಥವಾಯ್ತು – ಇವನ ಮುಖ್ಯ ಸಮಸ್ಯೆ ನಂಬಿಕೆ ಮತ್ತು ಸಂಶಯಗಳಿಗೆ ಸಂಬಂಧಿಸಿದ್ದು.. ತನ್ನ ಪರಿಸರ ಮತ್ತು ತನ್ನ ಮೇಲೆ ಅವನಿಗೆ ನಂಬಿಕೆ ಬರಬೇಕು – ತನ್ಮೂಲಕ ಅದು ಹುಟ್ಟಿಸುವ ಸಂಶಯಗಳಿಗೆ ತಡೆ ಹಾಕಬಹುದು.. ಆದರೆ ಇದನ್ನು ಅವನ ಮನಸಿಗೆ ಸರಳವಾಗಿ ಅರ್ಥ ಮಾಡಿಸುವುದು ಹೇಗೆ ?
‘ಗೋಚರ, ನೋಡು ಆ ಕಲ್ಲಿದೆಯಲ್ಲ ? ಅದನ್ನೆತ್ತಿಕೊಂಡು ಆ ಮರದ ಮೇಲಿರುವ ಹಣ್ಣಿನತ್ತ ಎಸೆಯುತ್ತಿಯಾ?’ ಎಂದರು, ಎದುರಿಗೆ ಹಣ್ಣುಗಳಿಂದ ತುಂಬಿದ್ದ ಮರವನ್ನು ತೋರಿಸಿ. ಅದೇಕೆಂದು ಗೊತ್ತಾಗದಿದ್ದರು, ಅವರು ಹೇಳಿದಂತೆ ಮಾಡಿದ. ಆ ಕಲ್ಲು ಕೊಂಬೆಯೊಂದಕ್ಕೆ ತಗುಲಿ ಒಂದಷ್ಟು ಎಲೆಗಳ ಜೊತೆಗೆ ಒಂದೆರಡು ಸಣ್ಣ ಹಣ್ಣುಗಳನ್ನು ಕೆಳಗೆ ಬೀಳಿಸಿತ್ತು..
‘ ಸರಿ.. ಈ ಬಾರಿ ನೀನು ಕೂತಿರುವ ಭಂಗಿ ಬದಲಿಸಬೇಡ.. ಹಾಗೆಯೆ ನಡೆದುಕೊಂಡು ಹೋಗಿ ಆ ಹಣ್ಣು ಎತ್ತಿಕೊಂಡು ಬರುವೆಯಾ?’
‘ಅದು ಹೇಗೆ ಸಾಧ್ಯ ಗುರೂಜಿ? ಕೂತ ಭಂಗಿಯಲ್ಲಿ ಎದ್ದು ನಿಲ್ಲದೆ ನಡೆಯಲಾದರು ಹೇಗೆ ಸಾಧ್ಯ? ನಾನು ಕೂತ ಕಡೆಯಿಂದ ಎದ್ದು ನಡೆದು ಹೋದಲ್ಲದೆ ಅದನ್ನು ತರಲು ಸಾಧ್ಯವಾಗದು’ ಎಂದ ಗೋಚರ..
‘ಓಹ್ ಹೌದಲ್ಲವೆ? ಸರಿ ಹೇಗಾದರು ಆಯ್ತು.. ಆ ಹಣ್ಣು ಇಲ್ಲಿ ತಂದಿಡು..’ ಎಂದರು. ಕೂತಲ್ಲಿಂದ ಎದ್ದು ಹೋಗಿ ಅವರ ಮುಂದೆ ತಂದಿಟ್ಟ ಗೋಚರ..
‘ಗೋಚರ.. ಇದನ್ನು ಎತ್ತಿ ತಂದಿದ್ದು ಯಾರು? ಅರ್ಥಾತ್ ಯಾವ ಅಂಗ?’
‘ನನ್ನ ಕೈಗಳು ಗುರುಗಳೆ..’
‘ಕೈಗಳು ಅಲ್ಲಿಗೆ ನಡೆದು ಹೋದವೆ ?’
‘ಇಲ್ಲ.. ನಡೆದಿದ್ದು ಕಾಲುಗಳು..’
‘ಕಾಲು ಕೈಗಳಿಗೆ ಹಣ್ಣು ಕಾಣಿಸಿತೆ?’
‘ಕಾಣಿಸಿದ್ದು ಕಣ್ಣಿಗೆ, ಆಲೋಚಿಸಿದ್ದು ಮನಸು, ಅಲ್ಲಿಗೆ ಹೋಗಿ ತರುವಂತೆ ಲೆಕ್ಕಾಚಾರ ಮಾಡಿ ಆದೇಶ ನೀಡಿದ್ದು ಬುದ್ಧಿ, ಚಿತ್ತ ಇತ್ಯಾದಿ.. ನೀವು ಏನು ಹೇಳಲು ಹೊರಟಿರೊ ಗೊತ್ತಾಗಲಿಲ್ಲ ಗುರೂಜಿ..?’ ಸ್ವಲ್ಪ ಅಸಹನೆಯ ದನಿಯಲ್ಲಿ ನುಡಿದ ಗೋಚರ..
ಅವನ ಮಾತಿಗೆ ಸುಮ್ಮನೆ ಮುಗುಳ್ನಕ್ಕರು ಗುರೂಜಿ.. ‘ಗೋಚರ.., ನೀನೊಂದು ಹಣ್ಣು ಕೆಡವಿ ತರಬೇಕೆಂದರು ಎಷ್ಟೆಲ್ಲ ಅಂಗಗಳು ಕೆಲಸ ಮಾಡಬೇಕಾಯ್ತು? ಅದೂ ನಿನಗೆ ಗೊತ್ತಿಲ್ಲದ ಹಾಗೆ.. ನಿನ್ನನ್ನು ಒಂದು ಮಾತನ್ನು ಕೇಳದಲೆ.. ಒಂದು ಅಂಗ ಇನ್ನೊಂದಕ್ಕೆ ಸಹಕರಿಸು ಎಂದು ಕೇಳಿದ್ದನ್ನು ನೋಡಿದ್ದೀಯಾ? ಆ ಕೆಲಸ ಮಾಡುವಾಗ ನೀನು ಯಾವುದಾದರು ಒಂದು ಅಂಗವನ್ನು ಸಂಶಯಿಸಿದೆಯಾ? ನಂಬಿಕೆಯಿಲ್ಲವೆಂದು ಹಿಂದಡಿಯಿಟ್ಟೆಯಾ..?’
‘ಇಲ್ಲಾ..!’
‘ಯಾಕೆ..? ನಿನಗೆ ಎಲ್ಲದರಲ್ಲು ಅನುಮಾನ ಬರಬೇಕಲ್ಲವೆ..? ನಿನ್ನ ಪ್ರತಿ ಚರ್ಯೆಯಲ್ಲಿ , ಚಟುವಟಿಕೆಯಲ್ಲಿ..’
‘……’
‘ಹಾಗೆ ಅನುಮಾನ ಬರಲಿಲ್ಲ.. ಕಾರಣ, ನಿನಗದರ ಮೇಲಿರುವ ನಂಬಿಕೆ.. ಸ್ವಲ್ಪ ಯೋಚಿಸಿ ನೋಡು? ಅದೆಂಥಹ ಅದ್ಭುತ ಎಂಜಿನಿಯರ್ ಇರಬಹುದು ಆ ಸೃಷ್ಟಿಕರ್ತ..? ದೇಹದ ಭಾಗಗಳನ್ನೆಲ್ಲ ಸೃಜಿಸಿ, ಅವನ್ನೆಲ್ಲ ಸಮನ್ವಯದಲ್ಲಿ ವರ್ತಿಸುವಂತಹ ಬುದ್ಧಿವಂತಿಕೆಯನ್ನು ಅದರೊಳಗಿಟ್ಟು ನಡೆಸುತ್ತಿದ್ದಾನೆ.. ಬರಿ ನಮಗೆ ಮಾತ್ರವಲ್ಲ ಎಲ್ಲಾ ಪಶು ಪ್ರಾಣಿ ಪಕ್ಷಿಗಳಲ್ಲಿ.. ನರವ್ಯೂಹ, ಜೀರ್ಣಾಂಗ ವ್ಯೂಹ, ಉಸಿರಾಟದ ವ್ಯವಸ್ಥೆ, ಅಸ್ತಿ ವ್ಯವಸ್ಥೆ, ಮಾಂಸ ಖಂಡಗಳ ವ್ಯವಸ್ಥೆ, ಮೆದುಳು , ಹೃದಯ, ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು – ಎಲ್ಲವು ತಂತಾನೆ ಸಮತೋಲನದಲ್ಲಿ ನಡೆಯುವಂತೆ ವಿನ್ಯಾಸಗೊಳಿಸಿದ್ದಾನೆ ಆ ವಿಧಾತ.. ಹೌದಲ್ಲವೆ..?’
‘ನಿಜಾ ಗುರೂಜಿ.. ಅದು ಕೆಲಸ ಮಾಡುವುದರ ಬಗ್ಗೆ, ಸಾಮರಸ್ಯ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ನನಗೆಂದು ಸಂಶಯವಾಗಲಿ, ಅನುಮಾನವಾಗಲಿ ಬಂದಿಲ್ಲ.. ಸುಭಧ್ರ ವ್ಯವಸ್ಥೆ ಅದು..’
‘ಅದನ್ನು ಸೃಜಿಸಿದವನೆ ಈ ವಿಶ್ವವನ್ನ , ಪ್ರಕೃತಿಯನ್ನ ಸೃಜಿಸಿದವನು.. ಅಂದ ಮೇಲೆ ಅಲ್ಲಿಯು ಅವನು ಇದೇ ರೀತಿಯ ಸುಭಧ್ರ ವ್ಯವಸ್ಥೆಯನ್ನು ಇರಿಸಿರಬೇಕಲ್ಲವೆ..?’
‘ಇರಬಹುದು.. ಹಾಗಿದ್ದರೆ ಈ ಪ್ರಕೃತಿ ವಿಕೋಪ, ಅವ್ಯವಸ್ಥೆಗಳು?’
‘ಅದು ಅವನು ಸೃಜಿಸಿದ್ದಲ್ಲ… ನಾವು ಅವನಿರಿಸಿದ ಸಮತೋಲನವನ್ನು ಏರುಪೇರು ಮಾಡಿದಾಗ, ಇಂಥಹ ಅಚಾತುರ್ಯಗಳು ಸಂಭವಿಸುತ್ತವೆ.. ವಾಸ್ತವದಲ್ಲಿ ಅವು ಎಚ್ಚರಿಕೆಯ ಕರೆಗಂಟೆಗಳು – ಮತ್ತಷ್ಟು ಅನಾಹುತಕ್ಕೆಡೆಗೊಡಬೇಡಿರೆಂದು ಪ್ರಕೃತಿ ಎಚ್ಚರಿಸುವ ಪರಿ.. ನೀನು ತಿನ್ನುವ ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ, ಈ ದೇಹದ ಆರೋಗ್ಯ ತಾತ್ಕಾಲಿಕವಾಗಿ ಕೆಡುವುದಿಲ್ಲವೆ? ಹಾಗೆಯೆ.. ಮದ್ದು ತೆಗೆದುಕೊಂಡು ಮುನ್ನೆಚ್ಚರಿಕೆ ವಹಿಸಿಕೊಂಡರಾಯ್ತು.. ಆ ಸಮಸ್ಯೆ ಪರಿಹಾರವಾದಂತೆ.. ಅದಕ್ಕೆ ಭೀತಿ ಪಡುವ ಅಗತ್ಯವೇನಿದೆ..?’ ಎನ್ನುತ್ತ ಅವನ ಮುಖ ನೋಡಿದರು ಗುರೂಜಿ..
ಅವನ ಮನದಲ್ಲೇನೊ ಮಥನ ಆರಂಭವಾಗಿದ್ದು ಅವರಿಗೆ ಅರಿವಾಗುತ್ತಿತ್ತು.. ಅವನು ಅದುವರೆವಿಗು ಆಲೋಚಿಸದ ವಿಭಿನ್ನ ದೃಷ್ಟಿಕೋನವೊಂದನ್ನು ತೆರೆದಿಟ್ಟಿತ್ತು ಅವರ ಮಾತು..
‘ಅಂದರೆ.. ನಮ್ಮ ಸುತ್ತ ಏನೇ ನಡೆದರು, ಅದು ಇದೇ ತತ್ವದನುಸಾರ ಇರುತ್ತದೆಯೆ..?’
‘ಅನುಮಾನವೇ ಬೇಡ.. ಈ ಸೃಷ್ಟಿಯಲ್ಲಿ ನಾವು ಕೇವಲ ಯಕಃಶ್ಚಿತ್ ಜೀವಿಗಳು.. ಅದಕ್ಕೆ ಇಷ್ಟೆಲ್ಲ ಅನುಮಾನ, ಸಂಶಯ ಬರುವುದು ಸಹಜ.. ಆದರೆ, ಇದನ್ನು ನಿಯೋಜಿಸಿದವ ನಮ್ಮಂತೆ ಯಕಃಶ್ಚಿತ್ ಅಲ್ಲವಲ್ಲ..? ಅವನ ಮೇಲೆ ನಂಬಿಕೆಯಿರಿಸಿ ಮುನ್ನಡೆಯಬೇಕು.. ವಿಕೋಪ, ಪ್ರಕೋಪ, ಅವಘಡಗಳಿಗು ಏನೊ ಕಾರಣವಿರುತ್ತದೆಂದು ಅರಿತಾಗ, ಅವುಗಳಿಂದುಂಟಾಗುವ ಭೀತಿ, ಉದ್ವಿಘ್ನತೆಗಳು ಇಲ್ಲವಾಗುತ್ತವೆ..’
‘ಅರ್ಥವಾಯಿತು ಗುರೂಜಿ.. ನನಗು ಹೌದೆನಿಸುತ್ತದೆ.. ಆದರೆ, ಇದು ನನ್ನ ತೊಡಕನ್ನು ನಿವಾರಿಸುತ್ತದೆಯೊ, ಇಲ್ಲವೊ ನಾನು ಹೇಳಲಾರೆ..’ ಎಂದ ಗೋಚರ..
‘ಅದರ ಚಿಂತೆ ಬಿಡು ಗೋಚರ.. ನೀನು ಇಂದಿನಿಂದ ನ್ಯೂನತೆಯನ್ನು ನಿವಾರಿಸುವ ಋಣಾತ್ಮಕ ಚಿಂತನೆಯನ್ನು ಮಾಡಬೇಡ.. ಬದಲಿಗೆ, ನಂಬಿಕೆ ವಿಶ್ವಾಸ ಹೆಚ್ಚಿಸುವ ಧನಾತ್ಮಕ ಅಂಶಗಳನ್ನು ಅರಿಯುತ್ತಾ ಹೋಗು.. ಇದಕ್ಕೆ ಸಹಾಯಕವಾಗುವಂತೆ ನಾನೊಂದಷ್ಟು ಪುಸ್ತಕಗಳನ್ನು ಕೊಡುತ್ತೇನೆ.. ಬಿಡುವಿದ್ದಾಗ ಸುಮ್ಮನೆ ಓದುತ್ತಾ ಹೋಗು.. ಹಾಗೆಯೆ , ಇನ್ನು ಮುಂದೆಯು ಯಾವುದೆ ಋಣಾತ್ಮಕ ಆಲೋಚನೆ ಬಂದರು ಅದನ್ನು ತಡೆ ಹಿಡಿಯಲು ಯತ್ನಿಸಬೇಡ.. ಬದಲು ಅದನ್ನು ಆಹ್ವಾನಿಸಿಕೊ.. ಅದಕ್ಕೆ ಏನು ವಿವರಣೆ ಸಿಗಬಹುದೆಂದು ಈ ಪುಸ್ತಕಗಳಲ್ಲಿ ಹುಡುಕು.. ನೀನು ಪ್ರಶ್ನಿಸುತ್ತಾ ಹೋದಂತೆ ಉತ್ತರಗಳು ದೊರಕುವುದು .. ಆದರೆ ಅಷ್ಟೆ ಹೊಸ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.. ಇದೆ ಪ್ರಕ್ರಿಯೆಯನ್ನು ಮುಂದುವರೆಸುತ್ತಾ ಹೋಗು.. ಅದು ಭೀತಿಯದಾದರು ಆಗಲಿ, ಪ್ರೇರಣೆಯದಾದರು ಆಗಲಿ – ಒಂದೆ ದೃಷ್ಟಿಯಲ್ಲಿ ನೋಡುವ ನಿರ್ಲಿಪ್ತತೆ ನಿನಗೆ ಸಿದ್ಧಿಸುತ್ತದೆ – ನಾನು ಹೇಳಿದಂತೆ ಮಾಡಿದರೆ..’ ಎನ್ನುತ್ತ ಭಗವದ್ಗೀತೆಯ ಸಮೇತ ಹಲವಾರು ಪುರಾಣ ಸಂಬಂಧಿತ ಪುಸ್ತಕಗಳಿದ್ದ ಕಟ್ಟೊಂದನ್ನು ತರಿಸಿಕೊಟ್ಟರು ಗುರೂಜಿ..
ಅವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟಾಗ, ಗೋಚರನಿಗೆ ಅದೆಂಥದ್ದೊ ನಿರಾಳತೆ ಆವರಿಸಿಕೊಂಡಂತೆ , ಮನಸು ಪ್ರಶಾಂತವಾದಂತೆ ಅನಿಸಿತು.. ಅದುವರೆವಿಗು ಆ ರೀತಿಯ ಪ್ರಶಾಂತತೆಯ ಅನುಭವ ಅವನಿಗೆ ಆಗಿರಲೆ ಇಲ್ಲ..!
ಹೊರಬರುತ್ತ ಕೇಳಿದಳು ನಿಷ್ಕಲ.. ‘ಏನನಿಸಿತು ಗೋಚರ..?’
‘ನಿಷ್ಕಲಾ.. ಅವರು ಹೇಳಿದ ಮಾತಲ್ಲಿ ತಥ್ಯವಿದೆಯೆನಿಸಿತು.. ಅದೇನು ನನ್ನ ಡಿಸ್ಸಾರ್ಡರ್ ವಾಸಿ ಮಾಡುವುದೊ ಇಲ್ಲವೊ ಗೊತ್ತಿಲ್ಲ.. ಆದರೆ ಈಗ ಇದ್ದಕ್ಕಿದ್ದಂತೆ, ನಾನು ಆ ಆಲೋಚನೆಗಳನ್ನ ನಿಯಂತ್ರಿಸಬಲ್ಲೆ ಎನಿಸುವ ಅನುಭೂತಿ ಮೂಡುತ್ತಿದೆ.. ಅವರು ಹೇಳಿದಂತೆ ಪ್ರಯತ್ನಿಸುತ್ತೇನೆ.. ಈ ಪುಸ್ತಕಗಳನ್ನು ಓದುತ್ತೇನೆ.. ನನಗೆ ಅವರು ತಾರ್ಕಿಕವಾಗಿ ವಿವರಿಸಿದ ರೀತಿ ತುಂಬಾ ಹಿಡಿಸಿತು.. ನಮಗೆ ಅರಿವಿಲ್ಲದಂತೆ ಅದೆಷ್ಟೊ ವ್ಯವಸ್ಥೆಗಳು ಯುಗಾಂತರದಿಂದ ಕಾರ್ಯ ನಿರ್ವಹಿಸುತ್ತಿವೆ.. ಅದನ್ನು ನಾನು ಸಂಶಯಿಸುವುದೆ ಕ್ಷುಲ್ಲಕತನವೇನೊ ಅನಿಸುತ್ತಿದೆ.. ಬಹುಶಃ ಗುರೂಜಿ ಮಾತಿನ ಇಂಗಿತವು ಅದೇ ಏನೊ – ‘ಮೊದಲು ನಂಬಿಕೆ ಬೆಳೆಸಿಕೊಳ್ಳಲು ಯತ್ನಿಸಬೇಕು’ ಎಂದು.. ಅಂದಹಾಗೆ, ಈ ಪ್ರಯತ್ನದಲ್ಲಿ ನಾನೊಬ್ಬನೆ ಏಗಬಲ್ಲೆನೊ, ಇಲ್ಲವೊ ಗೊತ್ತಿಲ್ಲ.. ಅದಕ್ಕೆ ನಿನ್ನ ಸಹಕಾರ ಹಸ್ತ ಬೇಕು.. ನಿನ್ನ ಜೊತೆ ಇರುತ್ತೆ ತಾನೆ?’ ಎಂದ ಗೋಚರ..
ನಿಷ್ಕಲಾ ಮಾತಾಡದೆ ಮುಗುಳ್ನಗುತ್ತ ಅವನ ಹಸ್ತಕ್ಕೆ ತನ್ನ ಹಸ್ತವನ್ನು ಸೇರಿಸಿ ಮೃದುವಾಗಿ ಅದುಮುತ್ತ, ಕಣ್ಣಲ್ಲೆ ಅವನೊಡನೆ ತಾನಿರುವೆನೆಂಬ ಸಂದೇಶವನ್ನು ರವಾನಿಸಿದಳು..
ಅದನ್ನು ಕಂಡು, ತಾನೂ ನೆಮ್ಮದಿಯ ನಗೆ ನಕ್ಕ ಗೋಚರ.
(ಮುಕ್ತಾಯ)
– ನಾಗೇಶ ಮೈಸೂರು
