(ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ‘ಸಿಂಗಾರ ಸಾಹಿತ್ಯ ಸ್ಪರ್ಧೆ – ೨೦೨೧’ ರಲ್ಲಿ ಮೊದಲ ಬಹುಮಾನ ಪಡೆದ ಸಣ್ಣ ಕಥೆ)
ಸಣ್ಣಕಥೆ: ಪಾಪ ಪ್ರಜ್ಞೆ

ಕಿಟಕಿಯಾಚೆಯಿಂದ ಅಚ್ಚ ಹಸಿರಿನಿಂದ ನಳನಳಿಸುತ್ತಿದ್ದ ಮರವನ್ನು ಎಂದಿನಂತೆ ದಿಟ್ಟಿಸುತ್ತ ನಿಂತಿದ್ದ ಪುಲಿಕೇಶಿ..
ಅದರ ಕೊಂಬೆಗಳ ನಡುವೆ ಈಚೆಗೊಂದು ಕಾಗೆಗೂಡು. ಅದರಲ್ಲೊಂದು ಕಾಗೆ ಸಂಸಾರ ಬೀಡುಬಿಟ್ಟಿದೆ.. ದಿನವು ಅವುಗಳ ಕಲರವದ ಅಭ್ಯಾಸವಾಗಿ, ಸ್ವಲ್ಪ ಹೊತ್ತು ಆ ಸದ್ದು ಕೇಳಸದಿದ್ದರೆ ಏನೊ ಕಳೆದುಕೊಂಡಂತೆ ಭಾಸವಾಗಿ, ಖಾಲಿ ಖಾಲಿಯೆನಿಸುತ್ತದೆ, ಅವನ ಮನಸು. ಆ ರೆಂಬೆ ಕೊಂಬೆಗಳ ಸಂಕೀರ್ಣ ಜಾಲದ ಕೊರಳಲ್ಲೆಲ್ಲಿಂದಲೊ, ಒಂದು ಮರಿ ಕಾಗೆ ನಿತ್ಯವೂ ‘ಕಾ.. ಕಾ..’ ಎನ್ನುತ್ತಿರುತ್ತದೆ. ಅದು ತನ್ನೊಡನೆಯೆ ಮಾತಾಡುತ್ತಿದೆಯೆಂದು ಪುಲಿಕೇಶಿಯ ಅಚಲ ನಂಬಿಕೆ..
‘ಇದೋ.. ಬಂದೆ ತಾಳಪ್ಪ.. ಶುಭೋದಯ ನಿನಗೆ..’ ಇದವನ ನಿತ್ಯದ ಓಪನಿಂಗ್ ಲೈನ್.. ಅದಕ್ಕೆ ಮಾರುತ್ತರವೇನೊ ಎಂಬಂತೆ ಆ ಕಡೆಯಿಂದ ‘ಕಾ.. ಕಾ..’ ದನಿ ಮೊಳಗುತ್ತದೆ..
‘ಬೇಸರ ಮಾಡಿಕೊಳ್ಳಬೇಡಪ್ಪ ಪ್ರಹ್ಲಾದ.. ಇನ್ನು ನಮ್ಮ ಮೇಲೆ ಕೋಪವೇನೊ ನಿನಗೆ? ಇನ್ನು ಕ್ಷಮಿಸಿಲ್ಲವೇನೊ ನಮ್ಮನ್ನು..?’ ಆರ್ತದನಿಯಲ್ಲಿ ಮತ್ತೆ ಮತ್ತೆ ಬೇಡಿಕೊಳ್ಳುತ್ತಾನೆ ಪುಲಿಕೇಶಿ – ಪ್ರತಿ ನಿತ್ಯದಂತೆ..!
ಅದಕ್ಕು ಅದೆ ಬಗೆಯ ಮಾರುತ್ತರ ಆ ಕಡೆಯಿಂದ.. ಯಾವುದೊ ಹಳೆಯ ಯಾತನೆಯೊಂದು ಚುಚ್ಚಿದಂತಾಗಿ ಮನದಲ್ಲೆ ವಿಲಪಿಸುತ್ತಾನೆ.. ಅದೇ ಚಿಂತೆಯ ಮುಖದಲ್ಲೆ ಶತಪಥ ಹಾಕುತ್ತ ರಾಗಿಣಿಯಿರುವ ರೂಮಿನತ್ತ ಬರುತ್ತಾನೆ.. ರಾಗಿಣಿ ಅವನು ಪ್ರೀತಿಸಿ ಕೈ ಹಿಡಿದ ಸಂಗಾತಿ. ಅವಳ ಸುಂದರ ಮುಖವನ್ನೆ ದಿಟ್ಟಿಸುತ್ತ ಮೆಲುದನಿಯಲ್ಲಿ ಪಿಸುಗುಟ್ಟುತ್ತಾನೆ – ‘ರಾಗು.. ಪ್ರಹ್ಲಾದನಿಗೆ ಇನ್ನು ಕೋಪ ಕಡಿಮೆಯಾದಂತಿಲ್ಲ ಕಣೆ .. ನಮ್ಮ ಮೇಲಿನ್ನು ದೇವರಿಗೆ ಕರುಣೆ ಬಂದಂತಿಲ್ಲ..’ ಎಂದ ಮಾತು ಅವಳ ಕಿವಿಗೆ ಬಿದ್ದು ತಟ್ಟನೆ ಎಚ್ಚರವಾಗುತ್ತಾಳೆ.
‘ಯಾಕ್ರಿ ಇಲ್ಲಿ ನಿಂತಿದ್ದೀರಾ? ಯಾಕೆ ಸಪ್ಪಗಿದ್ದೀರಾ?’ ಕಕ್ಕುಲತೆಯಿಂದ ಕೇಳುತ್ತಾಳೆ ರಾಗಿಣಿ. ಮದುವೆಯಾಗಿ ವರ್ಷಗಳಾದರು ಮಕ್ಕಳಾಗಲಿಲ್ಲವೆನ್ನುವ ಖೇದದ ಜೊತೆ, ಯಾವಾವುದೊ ಚಿಂತೆಗಳು ಮನಸನ್ನಾವರಿಸಿಕೊಂಡು ಹತ್ತು ವರ್ಷ ಹೆಚ್ಚೆ ವಯಸ್ಸಾದವಂತೆ ಕಾಣುತ್ತಾಳೆ..
‘ಯಾಕೊ ಪ್ರಹ್ಲಾದನಿಗೆ ನಮ್ಮ ಮೇಲಿನ ಕೋಪ ಆರಿಲ್ಲ ಕಣೆ.. ಅವನು ಕೂಗಿದಾಗೆಲ್ಲ ಮತ್ತೆ ಮತ್ತೆ ದೂರುವ ದನಿಯೆ ಕೇಳಿ ಬರುತ್ತಿದೆಯೆ ಹೊರತು, ಮನ್ನಿಸುವ ದನಿಯೆ ಅಲ್ಲಿಲ್ಲ..’ ಹೆಚ್ಚು ಕಡಿಮೆ ಅಳುವವನಂತೆ ನುಡಿದ.
‘ಪುಶೀ, ಯಾಕೆ ಇಷ್ಟೊಂದು ಸಂಕಟ? ಎಲ್ಲಾ ಕೊಡೋನು ಆ ದೇವ್ರು.. ಅವನು ಮನಸು ಮಾಡದೆ ಇದ್ರೆ ನಾವೇನು ಮಾಡಕಾಗುತ್ತೆ..? ನಾವು ಬೇಡೋದು ಬೇಡ್ತಾ ಇರೋಣ.. ಇಷ್ಟೆಲ್ಲ ಸುಖ, ಸಂಪದ, ಐಶ್ವರ್ಯ ಕೊಟ್ಟವನು, ಇದೊಂದು ವಿಷಯದಲ್ಲಿ ಮೋಸ ಮಾಡ್ತಾನ..? ಸ್ವಲ್ಪ ಕಾಯಿಸ್ತಿದಾನೆ ಅಷ್ಟೆ.. ಎಲ್ಲಾ ಡಾಕ್ಟರ ಹತ್ರ ತೋರಿಸ್ತಾ ಇದೀವಿ.. ಎಲ್ಲಾ ದೇವರಿಗು ಹರಕೆ ಹೊತ್ಕೋತಾ ಇದೀವಿ.. ಸಹನೆಯಿಂದ ಕಾಯೋಣ ಪುಶಿ..’
‘ನಮಗೆ ಮೋಸ ಆಗಲ್ಲ ಅಂತೀಯಾ ರಾಗಿ..? ನಮ್ಮ ವಂಶ ಉಳಿಸೊ ಬೆಳೆಸೊ ಕುಡಿ ನಮ್ಮನೆಲಿ ಅರಳುತ್ತೆ ಅಂತಿಯಾ?’
‘ಖಂಡಿತಾ ಪುಶಿ.. ನನಗೆ ಆ ನಂಬಿಕೆ ಇದೆ.. ನಿನಗೇ ಗೊತ್ತಿದೆ ನಾನೇನು ಬಂಜೆಯಲ್ಲ.. ನಿನ್ನಲ್ಲು ಯಾವುದೆ ದೋಷವಿಲ್ಲ.. ಏನೊ, ಯಾವ ಜನುಮದ ಪಾಪದ ಫಲವೊ, ಸ್ವಲ್ಪ ತಡವಾಗುತ್ತಿದೆಯಷ್ಟೆ..’ ಎಂದಳು ರಾಗಿಣಿ.
ಆ ಮಾತು ಸ್ವಲ್ಪ ನಿರಾಳತೆಯನ್ನು ತಂದಿತು. ಆದರು ಬಾಯಿ ಮಾತ್ರ ಮನದ ಮಾತನ್ನು ಹೊರ ಹಾಕಿತ್ತು… ‘ಇಲ್ವೆ ರಾಗಿ.. ಇದು ದೇವರ ಕರುಣೆಗಿಂತ, ಪ್ರಹ್ಲಾದನ ಶಾಪ ಕಣೆ.. ನಮ್ಮ ಪರಿಸ್ಥಿತಿ ಹೇಗೆ ಇದ್ರು ಅವತ್ತು ಅನ್ಯಾಯವಾಗಿದ್ದು ಮಾತ್ರ , ಅವನಿಗೆ ಅಲ್ವೇನೆ ? ಅದಕ್ಕೆ ನಮ್ಮನ್ನ ಕ್ಷಮಿಸ್ತಿಲ್ಲ.. ಅವನು..’
‘ಪುಶೀ.. ಆವತ್ತು ಪರಿಸ್ಥಿತಿ ಹಾಗಿತ್ತು.. ನಮಗೆ ಬೇರೆ ದಾರಿನೆ ಇರ್ಲಿಲ್ಲ.. ನಾವಾಗ ಅಸಹಾಯಕರಾಗಿದ್ದೆವು.. ಜೊತೆಗೆ ಆ ಕಾರಣಕ್ಕೆ ಈಗಲು ಪಶ್ಚಾತ್ತಾಪದಿಂದ ಕ್ಷಮೆ ಕೇಳ್ತಾನೆ ಇದೀವಿ ಅಲ್ವಾ? ಅವನು ಕ್ಷಮಿಸೋದಿಲ್ಲ ಅನ್ನೊ ಯೋಚನೆ, ಆಲೋಚನೆ ಬಿಡು.. ದೇವರ ಮೇಲೆ ಭಾರ ಹಾಕಿ ಮುಂದಿನದನ್ನು ನೋಡೋಣ..’ ಎಂದಳು ರಾಗಿಣಿ..
‘ಇನ್ನು ಸರಿಯಾಗಿ ಲೆಕ್ಕ ಹಾಕಿದರೆ ಮುಂದಿನ ಸೋಮವಾರಕ್ಕೆ ಸರಿಯಾಗಿ ಹದಿಮೂರು ವರ್ಷ ತುಂಬುತ್ತದೆ…’
‘ಅದಕ್ಕೆ? ನಿನ್ನ ಮನಸಿನಲ್ಲಿ ಏನೊ ಇರುವಂತಿದೆ ?’
‘ಆ ದಿನ ಒಂದು ಸಮಾರಾಧನೆಯ ತರ ಕಾರ್ಯ ಮಾಡಿ, ಏನಾದರು ಶಾಂತಿ ಮಾಡಿಸೋಣವ ಅಂತ? ಆಗಲಾದರು ಅವನಿಗೆ ಸ್ವಲ್ಪ ಸಮಾಧಾನವಾಗಬಹುದು.. ನಮಗು ಸ್ವಲ್ಪ ನೆಮ್ಮದಿ ಸಿಗುತ್ತೆ..’
‘ಪುಶೀ.. ಭೌತಿಕವಾಗಿ ಇರದಿದ್ದವರ ಮರಣೋತ್ತರ ಕ್ರಿಯಾ ಕರ್ಮ ಮಾಡಿಸೋದ? ಏನೊ ಅಸಂಗತ ಅನ್ಸೋಲ್ವಾ? ಈ ಯೋಚನೆ ಯಾಕೆ ಬಂತು ಈಗ..’ ತುಸು ಆತಂಕದ ದನಿಯಲ್ಲಿ ಕೇಳಿದಳು ರಾಗಿಣಿ..
‘ಸರಿಯೊ ತಪ್ಪೊ ನನಗೆ ಗೊತ್ತಿಲ್ಲ ರಾಗಿ.. ನನ್ನ ಮಟ್ಟಿಗೆ ಪ್ರಹ್ಲಾದ ಜೀವವಿದ್ದ ಸೃಷ್ಟಿ.. ಆ ಜೀವದ ಅಂತ್ಯಕ್ಕೆ ಸರಿಯಾದ ಗತಿ ಕಾಣಿಸದೆ ಇದ್ದದ್ದಕ್ಕೋ ಏನೊ, ಅವನು ದಿನಾ ಬಂದು ಕಾಗೆಯ ರೂಪದಲ್ಲಿ ಆರ್ತನಾದ ಮಾಡ್ತಾ ಇರ್ತಾನೆ ಅನ್ಸುತ್ತೆ.. ಆ ಆತ್ಮಕ್ಕೆ ಸ್ವಲ್ಪ ಮುಕ್ತಿ ಸಿಕ್ಕಿದ್ರೆ, ಆಗ ನಮಗೆ ಶಾಪ ಸ್ವಲ್ಪ ಕಮ್ಮಿಯಾಗುತ್ತೆ ಅನ್ನೊ ಆಸೆ ಕಣೆ..’
‘ಹಾಗಲ್ಲ ಪುಶೀ.. ಸಂತರ್ಪಣೆ, ಸಮಾರಾಧನೆ ಮಾಡಬೇಕು.. ಯಾರಿಗು ಗೊತ್ತಿರದ ಎಲ್ಲಾ ಹಿನ್ನಲೆ ವಿವರಿಸಬೇಕು.. ಅದನ್ನೆಲ್ಲ ಯೋಚನೆ ಮಾಡಿದ್ದಿಯಾ?’
‘ಹೂಂ.. ಯೋಚಿಸಿದ್ದೀನಿ ರಾಗಿ.. ಯಾರಾದರು ಪುರೋಹಿತರನ್ನ ಕರೆಸಿ ಮನೆಯಲ್ಲೆ ಶ್ರಾದ್ಧದ ಕಾರ್ಯ ಮಾಡಿಸಿ, ನಂತರ ಅನ್ನ ಸಂತರ್ಪಣೆ ಇಟ್ಕೊಂಡುಬಿಡಬಹುದು.. ಏನಂತೀಯಾ?’ ಕೇಳಿದ ಪುಲಿಕೇಶಿ. ‘ರಾಗಿ.. ನಿನಗೆ ಈಗಲೇ ಸುಸ್ತಾಗಿದೆ.. ಮಲಕ್ಕೊ.. ಸ್ವಲ್ಲ ನಿರಾಳವಾದ ಮೇಲೆ ಯೋಚನೆ ಮಾಡಿ ಹೇಳು..’ ಎನ್ನುತ್ತ ಮೇಲೆದ್ದ..
ಅವನತ್ತ ಹೋಗುತ್ತಲೆ, ಮತ್ತೆ ನಿದ್ರೆಗೆ ಮರಳಲು ಮುಷ್ಕರ ಹೂಡಿದ ಮನಸಿನ ಗಾಲಿ ಹಳೆಯ ನೆನಪುಗಳನ್ನು ಕೆದಕುತ್ತ, ಒಂದೊಂದನ್ನೆ ಮೆಲುಕು ಹಾಕತೊಡಗಿತು..
ಅದೇ ತಾನೆ ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ದಿನಗಳು, ಟ್ರೈನಿಯಾಗಿ. ಅಲ್ಲೆ ಪುಲಿಕೇಶಿಯ ಪರಿಚಯವಾಗಿದ್ದು.. ಸದಾ ಯಾವುದಾದರೊಂದು ಚಟುವಟಿಕೆಯಲ್ಲಿ ನಿರತ.. ಆಗಾಗ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಅವನ ಕೈವಾಡ ಎದ್ದು ಕಾಣುತ್ತಿತ್ತು.. ಅಂತದ್ದೊಂದು ಸಂಧರ್ಭದಲ್ಲೆ ರಾಗಿಣಿಗು ಪರಿಚಯವಾಗಿದ್ದು.. ‘ಋತು ಸಂಹಾರ’ ದೃಶ್ಯ ರೂಪಕದ ಹಿನ್ನಲೆ ವ್ಯವಸ್ಥೆಯ ತಂಡದಲ್ಲಿದ್ದ ಇಬ್ಬರು ಒಟ್ಟಾಗಿ ಸಿದ್ದತೆಯ ಉಸ್ತುವಾರಿ ನೋಡಿಕೊಂಡಿದ್ದರು. ಆ ಪರಿಚಯ ಹೆಚ್ಚಿಸಿದ ಸಲಿಗೆ, ಗೆಳೆತನವಾಗಿ, ಗೆಳೆತನ ನಿಧಾನವಾಗಿ ಪ್ರೇಮಾನುರಾಗವಾಗಲು ತಡವಾಗಲಿಲ್ಲ.
ದಿನ ಕಳೆದಂತೆ ಇಬ್ಬರ ಅನ್ಯೋನ್ಯತೆಯು ಬೆಳೆಯುತ್ತ ಹೋಗಿ ನಂಬಿಕೆ, ವಿಶ್ವಾಸ ಬಲವಾದಾಗ ಅದೊಂದು ದಿನ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ ಪುಲಿಕೇಶಿ. ಪ್ರೇಮಾರಾಧನೆಯ ಭಾವದಲ್ಲಿ ಮುಳುಗಿದ್ದ ರಾಗಿಣಿಗು ಆ ನಿರೀಕ್ಷೆಯೇನೊ ಇತ್ತು.. ಜೊತೆಗೆ ತಮ್ಮಿಬ್ಬರಿಗು ಮದುವೆಯಾಗಲು ಇರುವ ಅಡ್ಡಿ ಆತಂಕಗಳ ಕಲ್ಪನೆಯು ಇತ್ತು.. ಎಲ್ಲಕ್ಕಿಂತ ಮುಖ್ಯವಾಗಿ ಜಾತಿಯ ಪ್ರಶ್ನೆ.. ಈಗಾಗಲೆ ಎರಡು ಮೂರು ವರ್ಷದ ಒಡನಾಟದಲ್ಲಿ ಇಬ್ಬರ ಕುಟುಂಬಗಳ ಬಗ್ಗೆಯು ಚೆನ್ನಾಗಿ ಅರಿತಿದ್ದಾರೆ.. ಹೀಗಾಗಿ ಮುಂದಿನ ಹಾದಿ ಸುಗಮವಲ್ಲ ಎಂದವರಿಗೆ ಚೆನ್ನಾಗಿ ಗೊತ್ತಿತ್ತು..
‘ಪುಶೀ.. ಮದುವೆ ವಿಷಯವೇನೊ ಸರಿ.. ಆದರೆ ನಮ್ಮ ಮನೆಯವರಂತು ಇದಕ್ಕೆ ಒಪ್ಪೋದು ಅನುಮಾನ.. ಜಾತಿ ಬೇರೆ ಅಂಥ ಗಲಾಟೆ ಆಗುತ್ತೆ..’ ಎಂದಳು ರಾಗಿಣಿ.
‘ನಮ್ಮ ಮನೇಲು ಅದೇ ಕಥೆ ರಾಗಿ.. ನನ್ನ ಹಿಂದೆ ಮುಂದೆ ಇನ್ನೂ ಮದುವೆಯಾಗದ – ಒಬ್ಬ ಅಕ್ಕ, ಒಬ್ಬಳು ತಂಗಿ.. ಅವರ ಭವಿಷ್ಯ ಸಹ ಆಲೋಚಿಸಬೇಕು.. ಆದರೆ, ನನ್ನ ನಿರ್ಧಾರ -ಮದುವೆಯಾಗೋದಾದ್ರೆ ನಿನ್ನನ್ನು ಮಾತ್ರ..’ ಆ ಮಾತು ಆತ್ಮವಿಶ್ವಾಸವನ್ನು ತುಂಬಿದರು, ವಾಸ್ತವದ ಹಿನ್ನಲೆಯಲ್ಲಿ ತನ್ನ ಅನಿಸಿಕೆಯನ್ನು ಮುಂದಿಟ್ಟಳು..
‘ಪುಶೀ.. ನನಗು ಒಬ್ಬಳು ಅಕ್ಕ ಇದ್ದಾಳೆ.. ನಾನೇನೇ ಹೆಜ್ಜೆ ಹಾಕಿದರು ಅವಳ ಭವಿಷ್ಯಕ್ಕೆ ತೊಡಕಾಗಬಾರದು . ನಾವಿಬ್ಬರು ಸ್ವಲ್ಪ ಕಾದು ನಂತರ ಮದುವೆ ವಿಷಯ ಆಲೋಚಿಸುವುದು ಸರಿಯೆನಿಸುತ್ತದೆ.. ಅವರ ಮದುವೆಯಾದ ಮೇಲೆ, ನಾವಿಬ್ಬರು ಮದುವೆಯಾದರೆ, ಕನಿಷ್ಠ ಮನಸಿನಲ್ಲಿ ಗಿಲ್ಟೀ ಫೀಲಿಂಗ್ ಕಡಿಮೆ ಇರುತ್ತದೆಯೇನೊ..?’
‘ರಾಗೀ.. ಕಾಯುವುದಕ್ಕೇನೊ ನನಗು ಅಡ್ಡಿಯಿಲ್ಲ.. ಹೇಗು ನಾವಿಬ್ಬರು ನಮ್ಮ ಕೆರಿಯರ್ ಮೇಲೆ ಗಮನ ಹರಿಸಬೇಕಲ್ಲ..? ಆದರೆ ಇದಕ್ಕೆಷ್ಟು ಕಾಲ ಕಾಯಬೇಕೊ ಎನ್ನುವ ಆತಂಕ ಅಷ್ಟೆ..’ ನುಡಿದ ಪುಲಿಕೇಶಿ..
‘ಪುಶೀ.. ನಾವಿಬ್ಬರು ಮಾನಸಿಕವಾಗಿ ದಂಪತಿಗಳಾಗಿಬಿಟ್ಟಿದ್ದೇವೇನೊ ಅನಿಸುತ್ತದೆ ಎಷ್ಟೋ ಬಾರಿ.. ಜೊತೆಗೆ, ಈ ದಿನ ನೀನು ಬಂದು ಮದುವೆ ವಿಷಯ ಎತ್ತಿದ್ದೆ, ನನಗೆ ನಿನ್ನ ಮೇಲಿನ ಪ್ರೀತಿ , ನಂಬಿಕೆ ಇನ್ನು ಅಧಿಕವಾದಂತಾಗಿದೆ.. ನಾನಂತು ನಂಬಿ ಕಾಯಲು ಸಿದ್ಧ.. ಆ ಸಮಯದಲ್ಲೆ ಯಾವುದಾದರು ಮನೆ ಆಥವಾ ಅಪಾರ್ಟ್ಮೆಂಟ್ ಖರೀದಿಸಲು ನೋಡೋಣ. ಆಗ ಮದುವೆಯ ಹೊತ್ತಿಗೆ ಒಂದು ನೆಲೆ ಕಂಡುಕೊಂಡಂತಾಗುತ್ತದೆ..’ ಎಂದಳು..
ಅವಳ ಮಾತು ಅವನಿಗು ಸರಿಯೆನಿಸಿ ಆಗಲೆಂಬಂತೆ ಸಮ್ಮತಿ ಸೂಚಿಸಿದ್ದ.. ಇದಾದ ಮೇಲೆ ಎರಡು ವರ್ಷಗಳು ಉರುಳುವ ಹೊತ್ತಿಗೆ ಇಬ್ಬರ ಅಕ್ಕಂದಿರ ಮದುವೆಯು ಮುಗಿದಿತ್ತು.. ಇನ್ನುಳಿದಿದ್ದು ತಂಗಿಯೊಬ್ಬಳ ವಿವಾಹ.. ಅವಳಿನ್ನು ಪದವಿ ಕಾಲೇಜಿನ ಎರಡನೆ ವರ್ಷದಲ್ಲಿದ್ದ ಕಾರಣ, ಇನ್ನು ಎರಡು ವರ್ಷಗಳು ಕಾಯಬೇಕಿತ್ತು.. ಆ ನಡುವೆಯೆ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿಯೂ ಆಗಿತ್ತು.. ಸದ್ಯಕ್ಕೆ ರಾಗಿಣಿ ಅಲ್ಲಿಯೆ ವಾಸ ಮಾಡುವುದೆಂದೂ ನಿರ್ಧರಿಸಿಕೊಂಡಿದ್ದರು.. ಅಪಾರ್ಟ್ಮೆಂಟಿನಲ್ಲಿ ಸ್ವತಂತ್ರವಾಗಿದ್ದ ರಾಗಿಣಿಯನ್ನು ಬೇಕೆಂದಾಗ ಸಂಧಿಸಬಹುದಿತ್ತು. ವಾರಾಂತ್ಯದಲ್ಲಿ ಅವರಿಬ್ಬರು ಅಪಾರ್ಟ್ಮೆಂಟಿನಲ್ಲಿ ಆರಾಮವಾಗಿ ಕಾಲ ಕಳೆಯುವುದು ಸಾಧ್ಯವಾಗಿತ್ತು..
ನಿಜವಾದ ಎಡವಟ್ಟಾದದ್ದು ಅಲ್ಲಿಂದಲೆ..!
ಯಾವಾಗ ಅಪಾರ್ಟ್ಮೆಂಟಿನ ಏಕಾಂತದ ಭೇಟಿ ಸಾಧ್ಯವಾಯಿತೊ, ಅದು ಹೆಚ್ಚಿನ ಖಾಸಗಿ ಸಾಮೀಪ್ಯವನ್ನು ಒದಗಿಸಿತ್ತು.. ಅದೊಂದು ದಿನ, ನಿಯಂತ್ರಣದ ಗೆರೆಯನ್ನು ಮೀರಿ ದೈಹಿಕ ಸಾಂಗತ್ಯ ನಡೆದು ಹೋಯ್ತು – ಸತಿಪತಿಗಳೆಂದೆ ಅಂದುಕೊಂಡಿದ್ದ ಅವರ ಮಾನಸಿಕ ಸ್ಥಿತಿಯಿಂದಾಗಿ. ವಾಸ್ತವವಾಗಿ ಆಮೇಲೆ ಅವರಿಬ್ಬರ ಒಲವಿನ ಬಂಧ ಇನ್ನಷ್ಟು ಬಲವಾಯಿತೆನಿಸತೊಡಗಿ, ಆಗಾಗ ಸೇರುವ ಪ್ರಕ್ರಿಯೆಗೆ ನಾಂದಿ ಹಾಡಿಬಿಟ್ಟಿತ್ತು.. ಅಂದೊಂದು ಭಾನುವಾರ ಬಿಜಿನೆಸ್ ಟ್ರಿಪ್ ಮುಗಿಸಿ ಅಪಾರ್ಟ್ಮೆಂಟಿಗೆ ನೇರ ಬಂದಿದ್ದ ಪುಲಿಕೇಶಿ..
‘ಪುಶೀ.. ಸ್ವಲ್ಪ ಅವಸರದ ಮಾತಿದೆ. ವಿಷಯ ಸ್ವಲ್ಪ ಸಿರಿಯಸ್..’
‘ಏನದು ರಾಗಿ?’
‘ನನ್ನ ಮಂಥ್ಲಿ ನಿಂತು ಹೋಗಿದೆ.. ಮೂರು ತಿಂಗಳಿಂದ. ನಿನ್ನೆ ಕನ್ಫರ್ಮ್ ಆಯ್ತು…’
‘……..’ ಮಾತಿಲ್ಲದೆ ಅವಾಕ್ಕಾಗಿ ನಿಂತುಬಿಟ್ಟಿದ್ದ ಪುಲಿಕೇಶಿ!
ಆ ಗಳಿಗೆಯಲ್ಲಿ ಮದುವೆಯ ಹೆಜ್ಜೆ ಇಡುವಂತಿರಲಿಲ್ಲ.. ಮಗುವನ್ನು ಮುಕ್ತವಾಗಿ ಹೆರುವಂತೆಯು ಇರಲಿಲ್ಲ.. ದೂರದಲ್ಲಿದ್ದ ಮುಖ ಪರಿಚಯವಿರದ ಡಾಕ್ಟರೊಬ್ಬರನ್ನು ಭೇಟಿಯಾಗಿ ಚರ್ಚಿಸಿದಾಗ ‘ನೀವಿಬ್ಬರು ವಿದ್ಯಾವಂತರು.. ವಯಸಿಗೆ ಬಂದವರು.. ಹೆಣ್ಣಿನ ದೇಹಕ್ಕೆ ಅನಿವಾರ್ಯವಲ್ಲದ ಹೊರತು ಗರ್ಭಪಾತ ಒಳ್ಳೆಯದಲ್ಲ..ನೀವು ಮಗುವಿಗೆ ಜನ್ಮ ಕೊಡುವುದು ಒಳ್ಳೆಯದು.. ಗರ್ಭಪಾತವನ್ನೆ ನಿರ್ಧರಿಸುವ ಮುನ್ನ ಮತ್ತೊಮ್ಮೆ ಆಲೋಚಿಸಿ ನೋಡಿ’ ಎಂದಿದ್ದರು ಆ ವೈದ್ಯೆ
ಆ ಮಾತು ಅವರನ್ನ ಮತ್ತೊಮ್ಮೆ ಚಿಂತಿಸಲು ಪ್ರೇರೇಪಿಸಿತ್ತು.. ಆದರೆ ಆವೇಶದ ಉತ್ಸಾಹವೆಲ್ಲ ಇಳಿದ ಮೇಲೆ, ಮನೆಯ ವಾಸ್ತವದ ಸ್ಥಿತಿ ಎದುರು ನಿಂತಾಗ, ಮತ್ತೆ ಗರ್ಭಪಾತದ ನಿರ್ಧಾರಕ್ಕೆ ಮರಳಿದ್ದರು. ಮುಂದಿನ ಕೆಲವು ವಾರದಲ್ಲಿ ಆ ಪ್ರಕ್ರಿಯೆಯು ನಡೆದು ಹೋಗಿತ್ತು.. ಆದರೆ, ಆ ನಂತರ , ಬೆಳೆಯುತ್ತಿದ್ದ ಪಿಂಡವನ್ನು ತಾವೇ ಕಿವುಚಿ ಹಾಕಿದೆವೆಂಬ ಪಾಪ ಪ್ರಜ್ಞೆ ಮಾತ್ರ ಇಬ್ಬರನ್ನು ಭಾಧಿಸತೊಡಗಿತು..
ಕಾಲವುರುಳಿದಂತೆ ಇಬ್ಬರ ತೊಡಕುಗಳು ನಿವಾರಣೆಯಾದ ನಂತರ ತಮ್ಮ ಮದುವೆ ಪ್ರಸ್ತಾಪವನ್ನು ಮುಂದಿಟ್ಟರು.. ಅಂದುಕೊಂಡಂತೆ, ಎರಡು ಕಡೆಯು ನಕಾರಾತ್ಮಕವಾದ ಪ್ರತಿಕ್ರಿಯೆ ಬಂದಾಗ, ಅವರಿಬ್ಬರೆ ಕೆಲವು ಮಿತ್ರರ ಸಹಯೋಗದಿಂದ ಸರಳವಾಗಿ ವಿವಾಹವಾಗಿ ವಿಧ್ಯುಕ್ತವಾಗಿ ಹೊಸ ಬದುಕನ್ನು ಆರಂಭಿಸಿದ್ದರು.. ಆದರೆ ವಿಧಿ ಈಗ ಅವರ ಜೊತೆಗೆ ಆಟವಾಡಲು ಆರಂಭಿಸಿತ್ತು..ಮದುವೆಯ ನಂತರ ಎಷ್ಟೆ ಪ್ರಯತ್ನ ಪಟ್ಟರು ರಾಗಿಣಿಗೆ ತಾಯಾಗಲು ಸಾಧ್ಯವಾಗಿರಲಿಲ್ಲ.. ಪುಲಿಕೇಶಿಯಂತು ತಾವು ಮಾಡಿಸಿದ ಗರ್ಭಪಾತದ ಪಾಪವೆ, ತಮ್ಮನ್ನು ಹೀಗೆ ಕಾಡುತ್ತಿದೆಯೆಂದು ಪದೇ ಪದೇ ದುಃಖಿಸತೊಡಗಿದ.. ಅವನ ಮಾತು ಕೇಳುತ್ತ ರಾಗಿಣಿಗು ಭ್ರೂಣ ತೆಗೆಸಿದ ಪಾಪದ ಪರಿಣಾಮ ಎನ್ನುವುದೊಂದೆ ಸರಿ ಹೊಂದುವ ಉತ್ತರವಾಗಿ ಕಂಡು, ಅವಳೂ ಅನಾರೋಗ್ಯದಿಂದ ಹಾಸಿಗೆ ಹಿಡಿಯುವಂತೆ ಆಗಿತ್ತು. ಇದನ್ನೆಲ್ಲ ನೆನೆದ ರಾಗಿಣಿ, ಕೊನೆಗೆ ‘ಪುಶೀ ಅವನಿಷ್ಟದಂತೆ ಮಾಡಿಕೊಳ್ಳಲಿ’ ಎಂದು ನಿರ್ಧರಿಸಿಕೊಂಡಳು..
ಅಂದುಕೊಂಡಂತೆ ಶ್ರಾದ್ಧದ ಕಾರ್ಯಕ್ರಮವನ್ನೆಲ್ಲ ಮುಗಿಸಿ ನಿಟ್ಟುಸಿರು ಬಿಟ್ಟ ದಂಪತಿಗಳಿಬ್ಬರು ತುಸು ನಿರಾಳವಾದರು. ಈ ನಡುವೆ ಒಮ್ಮೆ ಮಹಡಿಯಿಂದ ಇಳಿಯುವಾಗ ಜಾರಿ ಬಿದ್ದ ರಾಗಿಣಿ ಅದರಿಂದ ಚೇತರಿಸಿಕೊಳ್ಳಲು ಹಲವಾರು ದಿನಗಳು ಹಿಡಿದಿತ್ತು.. ಜೊತೆಗೆ ಗರ್ಭಕೋಶದ ತೊಂದರೆಗಳು ಗೋಚರವಾಗಿ ಅದಕ್ಕು ಚಿಕಿತ್ಸೆ ಶುರುವಾಗಿತ್ತು.. ಅದೊಂದು ದಿನ ವೈದ್ಯರನ್ನು ಭೇಟಿಯಾಗಲು ಹೋದ ಪುಲಿಕೇಶಿಗೆ ತುಸು ಆಘಾತವೇ ಕಾದಿತ್ತು.. ಗರ್ಭಕೋಶದ ಸ್ಥಿತಿ ಹದಗೆಟ್ಟಿರುವುದರಿಂದ,, ಅದನ್ನು ತೆಗೆಸಿಬಿಡುವ ಸಲಹೆ ನೀಡಿದ್ದರು ವೈದ್ಯರು. ಅದರರ್ಥ ಅವರು ಮಕ್ಕಳಾಗುವ ಆಸೆಯನ್ನು ಸಂಪೂರ್ಣವಾಗಿ ತೊಡೆಯಬೇಕಿತ್ತು. ಅನಾಥಾಶ್ರಮದ ಮಗುವನ್ನು ದತ್ತು ಪಡೆಯುವ ಎಂದು ಮನವೊಲಿಸಿ ಅವಳನ್ನು ಒಪ್ಪಿಸಿದ್ದ ಅಂದು ರಾಗಿಣಿ ಅತ್ತಷ್ಟು, ಮತ್ತೆಂದು ಅತ್ತಿರಲಿಲ್ಲ..
ಅದನ್ನೆಲ್ಲ ಪ್ರಹ್ಲಾದನ ಮುಂದೆ ಹೇಳಿಕೊಂಡು ತಾನೂ ಅತ್ತಿದ್ದ ಪುಲಿಕೇಶಿ.. ಆ ಮಾತಿಗೆ ಎಂದಿನಂತೆ, ಪ್ರಹ್ಲಾದನ ‘ಕಾ ಕಾ..’ ಕಾಗುಣಿತವೆ ಉತ್ತರವಾಗಿತ್ತು.. ‘ಯಾಕೊ ಪ್ರಹ್ಲಾದ.. ಇನ್ನು ನಮ್ಮನ್ನ ಕ್ಷಮಿಸೊದಿಲ್ಲವೇನೊ..’ ಎಂದು ಕಣ್ಣೀರಿಟ್ಟಿದ್ದ ಪುಲಿಕೇಶಿ. ಈ ನಡುವೆಯೆ ಅನಾಥಾಶ್ರಮದ ಮಕ್ಕಳನ್ನು ನೋಡಲಾರಂಭಿಸಿದ್ದ.
ಅದಾಗಿ ಒಂದೆರಡು ತಿಂಗಳಲ್ಲೆ ಅನಾಥಶ್ರಮದಿಂದ ಕರೆ ಬಂದಿತ್ತು – ಆರು ತಿಂಗಳ ಹೊಸದೊಂದು ಹಸುಗೂಸು ದತ್ತಕ್ಕೆ ಸಿದ್ದವಿದೆಯೆಂದು.. ಹೆಚ್ಚು ಸಮಯ ವ್ಯರ್ಥ ಮಾಡದೆ ಅಲ್ಲಿಗೆ ಪ್ರಯಾಣಿಸಿ, ಮುದ್ದಾದ ಮಗುವನ್ನು ತನ್ನೊಡನೆ ಕರೆದುಕೊಂಡು ಬಂದ.. ಅದನ್ನು ಕಂಡೊಡನೆ ಮೊದಲಿಗೆ ಹೂವಿನಂತೆ ಅರಳಿದ್ದು ರಾಗಿಣಿಯ ಮುಖ..!
ಎಂದಿನಂತೆ ಮಾರನೆಯ ಬೆಳಿಗ್ಗೆ ಆ ಮಗುವನ್ನು ಕೈಯಲ್ಲಿ ಎತ್ತಿಕೊಂಡೆ, ಕಿಟಕಿಯ ಎದುರಿನ ಮರದತ್ತ ಬಂದು ನಿಂತ ಪುಲಿಕೇಶಿ, ತನ್ನ ಕರ್ತವ್ಯವೆಂಬಂತೆ ವರದಿಯನ್ನೊಪ್ಪಿಸತೊಡಗಿದ.. ‘ನೋಡೊ ಪ್ರಹ್ಲಾದ.. ಈ ಮಗು ನಿನ್ನ ಪ್ರತಿರೂಪ. ನಿನ್ನದೆ ಹೆಸರಿಟ್ಟಿದ್ದೀವಿ. ನೀನೆ ಇದ್ದಿದ್ದರೆ ಹೇಗೆ ನೋಡ್ಕೊತಿದ್ವೊ ಹಾಗೆ ನೋಡ್ಕೋತಿವಿ.. ಇನ್ನಾದರು ನಮ್ಮನ್ನ ಕ್ಷಮಿಸಿಬಿಡಪ್ಪ..’ ಎಂದ, ಎಂದಿನ ಹಾಗೆ ‘ಕಾ ಕಾ‘ ಮಾರುತ್ತರವನ್ನು ನಿರೀಕ್ಷಿಸುತ್ತ..
ಆದರೆ ಅಂದೇಕೊ ಯಾವ ಮಾರುತ್ತರವು ಬರಲಿಲ್ಲ.. ಬದಲಿಗೆ ಕೈಲಿದ್ದ ಕೂಸು ಇದ್ದಕ್ಕಿದ್ದಂತೆ ಕಿಲಕಿಲನೆ ನಕ್ಕಿತು. ಅಚ್ಚರಿಗೊಂಡ ಪುಲಿಕೇಶಿ ಮತ್ತೆ ಪುನರುಚ್ಚರಿಸಿದ.. ಆದರೆ ಇಂದೇಕೊ ಮಾರುತ್ತರ ಬರುತ್ತಿಲ್ಲ.. ಬದಲಿಗೆ ಪ್ರತಿ ಬಾರಿ ಮಗು ಕಿಲಕಿಲ ನಗುತ್ತಿದೆ – ತಾನೆ ಉತ್ತರಿಸುವಂತೆ.. ಇದೇ ಪುನರಾವರ್ತನೆಯಾದಾಗ ತಟ್ಟನೆ ಏನೊ ಅನಿಸಿತು ಪುಲಿಕೇಶಿಗೆ.. ಈ ಬಾರಿ ಮಾತನಾಡಿ, ಮರದ ಬದಲು ಮಗುವಿನತ್ತ ನೋಡಿದ.. ನಿರೀಕ್ಷಿಸಿದಂತೆ ಆ ಮಗುವಿನ ಕಿಲಕಿಲ ನಗುವೆ ಉತ್ತರ ಕೊಟ್ಟಿತು ಈ ಬಾರಿಯು..!
‘ರಾಗೀ… ಪ್ರಹ್ಲಾದ ನಮ್ಮನ್ನು ಕ್ಷಮಿಸಿಬಿಟ್ಟ ಕಣೆ.. ನಮ್ಮ ಕಂದನೊಳಗೆ ಸೇರಿಕೊಂಡು ಬಿಟ್ಟಿದ್ದಾನೆ.., ನೀನೆ ನೋಡು..’ ಎನ್ನುತ ಉತ್ಕಟಾವೇಶದಿಂದ ರಾಗಿಣಿಯತ್ತ ಓಡಿದ – ಏನನ್ನೊ ಅನ್ವೇಷಿಸಿ, ದಿಗ್ವಿಜಯ ಪಡೆದ ಉತ್ಸಾಹದಲ್ಲಿ..
ಈಗಲು ಪ್ರತಿದಿನ ಅದೇ ಕಿಟಕಿಯ ಮುಂದೆ ಬಂದು ನಿಲ್ಲುತ್ತಾನೆ ಪುಲಿಕೇಶಿ – ಆ ಮಗುವಿನ ಜೊತೆಗೆ.. ಮೊದಲಿನಂತೆ ಈಗಲು ಮಾತನಾಡುತ್ತಾನೆ.. ಆದರೀಗ ಆ ಮರದಿಂದ ಯಾವ ಪ್ರತಿಕ್ರಿಯೆಯು ಬರುವುದಿಲ್ಲ.. ಬದಲಿಗೆ ಪಕ್ಕದಲ್ಲಿದ್ದ ಮಗುವಿನ ಕಿಲಕಿಲ ನಗು ಅಥವಾ ತೊದಲು ಮಾತಿನ ಉತ್ತರ ಬರುತ್ತದೆ..
ಹಾಗಾದಾಗೆಲ್ಲ – ಪುಲಿಕೇಶಿಯ ಮೊಗದಲ್ಲೊಂದು ಸಂತೃಪ್ತಿಯ ಕಿರುನಗೆ ಅರಳುವುದನ್ನು ಗಮನಿಸಿ ತಾನೂ ಮುಗುಳ್ನಗುತ್ತಾಳೆ ರಾಗಿಣಿ.. ಅವರಿಬ್ಬರಿಗು ಉಂಟಾದ ಸಂತಸ ಆ ಮಗುವಿನ ಕೆನ್ನೆಗಳ ಮೇಲೆ ಮುದ್ದಿನ ಮುತ್ತಾಗಿ ಮಾರ್ಪಟ್ಟು ಆ ಮಗು ಮತ್ತೆ ಕುಲುಕುಲು ನಗುತ್ತದೆ – ತಾನು ಕಳೆದುಕೊಂಡುದನೆಲ್ಲ ಮತ್ತೆ ಪಡೆದುಕೊಂಡ ನಿರಾಳತೆಯ ಭಾವದಲ್ಲಿ..!
(ಮುಕ್ತಾಯ)
- ನಾಗೇಶ ಮೈಸೂರು