00304. ಮಾತಲ್ಲಷ್ಟೆ ಎಲ್ಲಾ..!

00304. ಮಾತಲ್ಲಷ್ಟೆ ಎಲ್ಲಾ..!
___________________

ಕುಡುಕ, ಮಾತಲ್ಲಷ್ಟೆ, ಎಲ್ಲಾ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore,

ಬಾಲ್ಯದ ದಿನಗಳಲ್ಲಿ ನಾವು ವಾಸವಾಗಿದ್ದ ಏರಿಯಾದಲ್ಲಿ ಎಲ್ಲಾ ತರದ ಜನರ ದರ್ಶನವೂ ಆಗುತ್ತಿತ್ತು. ಅದೊಂದು ರೀತಿಯ ನಮ್ಮ ಬಾಲ್ಯದ ಮಾಲ್ಗುಡಿ ಡೇಸ್ ಅಂದರು ಸರಿಯೆ. ಅರೆಬರೆ ಟಾರೆದ್ದ ರಸ್ತೆ, ಹತ್ತಜ್ಜೆಗೊಂದರಂತೆ ಬೀದಿಯಲ್ಲೆ ಕಟ್ಟಿ ಹಾಕಿದ್ದ ಹಸುಗಳು, ಎಲ್ಲೆಂದರಲ್ಲಿ ಬಿದ್ದಾಡುವ ಸೆಗಣಿ, ಯಾವಾಗಲೊ ಚಪ್ಪರ ಹಾಕಲೆಂದು ತೋಡಿದ್ದ ಹಳ್ಳದಿಂದಾದ ನೀರು ತುಂಬಿದ ಗುಣಿ, ಪ್ರತಿ ಮನೆಯ ಮುಂದೆಯೂ ಕೂರುವ ಹರಟೆ ಕಟ್ಟೆ, ಅದರ ಮುಂದಿರುತ್ತಿದ್ದ ರಂಗೋಲಿ, ಗೋಲಿ-ಬುಗುರಿ-ಚಿನ್ನಿದಾಂಡು ಆಡುತ್ತಿರುವ ಹುಡುಗರು, ಕುಂಟಾಬಿಲ್ಲೆ-ಅಮಟೆಯಾಟ ಆಡುವ ಹೆಣ್ಣುಮಕ್ಕಳು – ಎಲ್ಲವೂ ಅಲ್ಲಿಯೆ ತೆರೆದುಕೊಂಡ ವಿಶ್ವರೂಪಗಳೆ.

ಆದರೆ ಇದೆಲ್ಲಕ್ಕಿಂತ ಸೊಗಸಾಗಿರುತ್ತಿದ್ದುದ್ದು ಅಲ್ಲಿನ ಸರಳ, ರಸಭರಿತ ಸಂಜೆಗಳು. ಸರ್ವೆ ಸಾಧಾರಣ ಸಂಜೆ ಮತ್ತು ಊಟವಾದ ನಂತರದ ರಾತ್ರಿ ಮುಕ್ಕಾಲು ಪಾಲು ಜನ ಜಗುಲಿ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತಲೊ, ವಿಶ್ರಮಿಸುತ್ತಲೊ ಕೂತ ಹೊತ್ತಲ್ಲಿ, ಊಹಿಸಲಾಗದಂತಹ ಅಯೋಜಿತ ಪ್ರಹಸನವೇನೊ ನಡೆದು ಎಲ್ಲರಿಗು ಪುಕ್ಕಟೆ ಮನರಂಜನೆ ಕೊಡುತ್ತಿದ್ದವು. ಮುಕ್ಕಾಲು ಪಾಲು ಅವು ಮನರಂಜನೆಗೆ ಸೀಮಿತವಾಗಿದ್ದರು, ಕೆಲವೊಮ್ಮೆ ಅತಿರೇಖಕ್ಕೆ ಹೋಗಿ ಹೊಡೆದಾಟ, ಗುದ್ದಾಟಗಳಲ್ಲಿ ಪರ್ಯಾವಸಾನವಾಗುತ್ತಿದ್ದುದು ಉಂಟು. ಅದರಲ್ಲೊಂದು ಪದೆ ಪದೆ ಪುನರಾವರ್ತಿತವಾಗುತ್ತಿದ್ದ ದೃಶ್ಯ – ಕುಡುಕ ರಾಜಣ್ಣನ ಪ್ರಹಸನ. ಕುಡಿಯದ ಹೊತ್ತಲ್ಲಿ ಸಾಕ್ಷಾತ್ ದೇವತೆಯಂತೆ ಗಂಭೀರ ಮೌನ ಮೂರ್ತಿಯಾಗಿ ತಲೆ ತಗ್ಗಿಸಿಕೊಂಡು ಕೆಲಸಕ್ಕೆ ಹೋಗಿ ಬರುತ್ತಿದ್ದ ಆಳು, ರಾತ್ರಿಯಾಗುತ್ತಿದ್ದಂತೆ ಪೂರ್ತಿ ಅದಲು ಬದಲು. ಹೆಚ್ಚುಕಡಿಮೆ ರಾತ್ರಿ ಒಂಭತ್ತರ ಸುಮಾರಿಗೆ ಅವನು ಮನೆಯಿಂದ ಹೊರಗೆ ಬಂದು ನಿಂತನೆಂದರೆ ಅಖಾಡಕ್ಕೆ ಸಿದ್ದನಾಗಿ ಬಂದನೆಂದೆ ಅರ್ಥ. ಮನೆಯವರಿಂದ ಹಿಡಿದು, ಅಕ್ಕಪಕ್ಕದವರು ಯಾರೆ ಕೂತಿರಲಿ ಅವರೆಲ್ಲರ ಬಳಿ ಹೋಗಿ ತನ್ನ ಪ್ರವರ ಒಪ್ಪಿಸಲು ಶುರು ಮಾಡಿದರೆ ತಲೆ ಚಿಟ್ಟು ಹಿಡಿಯುವ ತನಕ ಬಿಡುತ್ತಿರಲಿಲ್ಲ. ಒಪ್ಪಿಸುವ ವಿಷಯವಾದರೂ ಎಂತದ್ದು ? ಆ ದಿನದ ರಾಜಕೀಯದ ಸುದ್ದಿಯಿಂದ ಹಿಡಿದು, ಆಗ ಓಡುತ್ತಿದ್ದ ಸಿನಿಮಾ, ಅವನ ಕೆಲಸದಲ್ಲಿನ ವಿಷಯ, ಕೊನೆಗೆ ಬೀದಿಯಲ್ಲಿ ನಿಂತ ಹಸುಗಳ ಬಗ್ಗೆ – ಹೀಗೆ ಎಲ್ಲವು ಚರ್ಚೆಗೆ ಸುದ್ಧಿಗಳೆ. ಒಮ್ಮೊಮ್ಮೆ ಬೀದಿಯಲ್ಲಿ ಯಾರು ಇರಲಿಲ್ಲವೆಂದರೆ ಆ ಕಟ್ಟಿದ ಹಸುಗಳ ಮುಂದೆಯೆ ತನ್ನ ಪ್ರವರ ಒದರಲು ಆರಂಭಿಸಿಬಿಡುತ್ತಿದ್ದ. ಒಂದೆರಡು ಬಾರಿ ಆ ಹಸುಗಳು ಗಾಬರಿ ಬಿದ್ದು ‘ಬ್ಯಾಕ್ ಕಿಕ್’ ಸೇವೆ ಒದಗಿಸಿದ್ದರೂ ಅದವನ ಮೇಲೇನು ಪರಿಣಾಮ ಬೀರಿದ್ದಂತೆ ಕಂಡಿರಲಿಲ್ಲ. ‘ಪಾಪ ಹಸು..ಹಸು’ ಎಂದು ಅದನ್ನೆ ಸವರಿ, ನೇವರಿಸುತ್ತ ಸಮಾಧಾನಿಸಲು ಹೋಗುತ್ತಿದ್ದ. ಇನ್ನು ಅಕ್ಕಪಕ್ಕದ ಜನರಾರಾದರೂ ಕೈಗೆ ಸಿಕ್ಕರೆ ಮುಗಿಯಿತು – ಅಂದಿಗೆ ಅವರ ನಿದ್ದೆ, ಸಮಯ ಎರಡೂ ಹಾಳು!

ರಾಜಣ್ಣ ಮೂಲತಃ ಪುಕ್ಕಲ. ಬರಿ ಕುಡಿದಾಗಷ್ಟೆ ಅವನ ಹಾರಾಟ, ಹೋರಾಟವೆಲ್ಲ. ಅದು ಗೊತ್ತಿದ್ದವರೆಲ್ಲ ಅವನ ಕೈಗೆ ಸಿಕ್ಕಿಬಿದ್ದರೂ ಸಮಾಧಾನವಾಗಿ ‘ಹಾಂ’ ‘ಹೂಂ’ ಅನ್ನುತ್ತಾ ಅವನನ್ನು ಹೇಗೊ ಸಾಗಹಾಕಲು ನೋಡುತ್ತಿದ್ದರು. ಆದರೆ ಕೆಲವೊಮ್ಮೆ ಅದು ಮಿತಿ ಮೀರಿದಾಗ ಬೇರೆ ದಾರಿಯಿರದೆ ಗದರಿಸುತ್ತಿದ್ದುದು ಉಂಟು. ಇನ್ನು ಕೆಲವು ಬಾರಿ ಕೋಪ ಮಿತಿ ಮೀರಿದಾಗ ಕತ್ತಿನ ಪಟ್ಟಿ ಹಿಡಿದು ನಾಲ್ಕು ಬಿಗಿಯಲು ಹೋಗಿದ್ದು ಉಂಟು. ಆದರೆ ಅವನು ಮಾತ್ರ ಎಲ್ಲಾದಕ್ಕು ಒಂದೆ ರೀತಿಯ ಪ್ರತಿಕ್ರಿಯೆ – ಎಲ್ಲರಿಗು ತಿರುತಿರುಗಿ ಕೈಯೆತ್ತಿ ಮುಗಿಯುತ್ತ, ಹೊಡೆಯದೆ ಬರಿ ಮಾತಿನಲ್ಲಿ ಮಾತ್ರ ವಾದಿಸಲು ಹೇಳುತ್ತಿದ್ದ. ಮೊದಲು ಮಾತಾಡಿ ಉತ್ತರ ಕೊಟ್ಟು ಗೆಲ್ಲು, ಆಮೇಲೆ ಬೇಕಾದರೆ ಕೈ ಕೈ ಮಿಲಾಯಿಸು ಅನ್ನುವುದು ಅವನ ನಿಲುವು. ಆದರೆ ಕೈ ಮಿಲಾಯಿಸುವ ಧೈರ್ಯವಿಲ್ಲದೆ ಹಾಗೆ ಮೊಂಡುವಾದ ಹೂಡುತ್ತಿದ್ದನೆಂದು ನನ್ನ ಗುಮಾನಿ! ಒಂದೆರಡು ಬಾರಿ ನಾನೂ ಅವನ ಕೈಗೆ ಸಿಕ್ಕಿಬಿದ್ದಿದ್ದೆನಾದರೂ ಅದು ಬರಿಯ ಮಾತಲ್ಲೆ ಮುಗಿದಿತ್ತೆ ಹೊರತು ಗುದ್ದಾಟದಲ್ಲಲ್ಲಾ. ಆದರೆ ಆ ರೀತಿಯ ಗುದ್ದಾಟವಾದಾಗ ಸಾಕಷ್ಟು ಬಾರಿ ನೋಡುವ ಅವಕಾಶ ಸಿಕ್ಕಿದ್ದ ಕಾರಣ ಅವನ ಬಾಯಿಂದ ಯಾವಾಗ, ಯಾವ ಡೈಲಾಗ್ ಬರುತ್ತದೆಂದು ಅವನು ಬಾಯ್ಬಿಡುವ ಮೊದಲೆ ಊಹಿಸುವಷ್ಟು ಪರಿಣಿತಿ ಬಂದುಬಿಟ್ಟಿತ್ತು.

ಮೊನ್ನೆ ಯಾವುದೊ ಸಿನೆಮಾದ ಕುಡುಕನ ದೃಶ್ಯವೊಂದನ್ನು ನೋಡುತ್ತಿದ್ದಾಗ ರಾಜಣ್ಣನ ನೆನಪಾಯ್ತು, ಅವನಾಡುತ್ತಿದ್ದ ಮಾತುಗಳ ಜತೆಜತೆಗೆ. ಗುದ್ದಾಡುವ ಹೊತ್ತಲ್ಲಿ ಅವನು ಹೂಡುತ್ತಿದ್ದ ಮೊಂಡುವಾದದ ತುಣುಕುಗಳು ಮನಃಪಟಲದ ಮೇಲೆ ಮೂಡಿ ಬಂದಾಗ ಅದರಲ್ಲಿ ಹಾಸ್ಯದಷ್ಟೆ, ಜೀವನ ಸತ್ಯ ಮತ್ತು ಜೀವನ ದರ್ಶನವೂ ಇದೆಯೆನಿಸಿತು. ಅದಕ್ಕೆ ತುಸು ಆಡುಭಾಷೆಯ ಲೇಪನದಲ್ಲೆ ಕವನದ ರೂಪ ಕೊಡುವ ಪ್ರೇರಣೆಯಾದಾಗ ಮೂಡಿದ್ದು ಈ ಕೆಳಗಿನ ಲಹರಿ. ಈ ಬರಹ / ಕವನ ನಿಮಗೂ ಅಂತಹ ಅನೇಕ ರಾಜಣ್ಣರನ್ನು ನೆನಪಿಸಬಹುದೆಂಬ ಅನಿಸಿಕೆಯೊಡನೆ ಪ್ರಸ್ತುತಪಡಿಸುತ್ತಿರುವ ಕವನ ‘ಮಾತಲ್ಲಷ್ಟೆ ಎಲ್ಲಾ!’ 🙂

ಮಾತಲ್ಲಷ್ಟೆ ಎಲ್ಲಾ
_______________________________

ದಂ ಐತೇನ್ಲ ಮಾತಾಡಾಕೆ
ಕತ್ತಿನ್ ಪಟ್ಟಿ ಹಿಡಿಯೋದ್ಯಾಕೆ
ಬಾಯ್ಮಾತಲ್ಲೆ ಬಡಾಯಿ ತೋರ್ಸು
ಮಾತಲ್ ಗೆದ್ದಾದ್ಮೇಲ್ ಕೈ ಮಿಲಾಯ್ಸು ||

ಸೊಂಟದ್ಕೆಳ್ಗಿನ ಮಾತ್ಯಾಕ್ಬೇಕು
ಹಾಳ್ಹಲ್ಕಾ ಮಾತಿಂದೇನಾಗ್ಬೇಕು
ಕಿರ್ಚ್ಕೊಂಡರಚ್ಕೊಂಡ್ ನೆಗ್ದಾಡ್ಬುಟ್ಟು
ಮೈ ಪರಚ್ಕೊಂಡ್ಬಿಟ್ರೆ ಸಿಕ್ಬಿಡ್ತಾ ಜುಟ್ಟು ? ||

ಬೈಯ್ದಾಡೋಕು ತಾಕತ್ಬೇಕು
ಬರಿ ಕನ್ನಡ್ದಲ್ಲೆನೆ ಪದವಾಡ್ಬೇಕು
ಪರದೇಶಿ ಭಾಸೆ ಟುಸ್ ಪುಸಂದ್ರೆ
ಕಣ್ಕಣ್ ಬಿಡ್ತಾ ಇಬ್ಬುರ್ಗೂ ತೊಂದ್ರೆ ||

ಅಪ್ಪ ಅಮ್ಮನ್ ಸುದ್ದಿ ಯಾಕೊ?
ತಂಗ್ಳಿಕ್ಕುದ್ರುನು ಸಾಕಿದ್ ಬೆಳಕೊ
ಹೆಂಡ್ತಿ ಮಕ್ಕಳ್ ವಿಚಾರ ತರಬೇಡಾ
ನಮ್ಮಿಬ್ರ ವ್ಯವಾರಾ ನಮದಷ್ಟೆ ಕಚಡಾ ||

ನಿಯತ್ತಲ್ ಬೈಯಿ ಚೆನ್ನಾಗುಗಿದು
ಪೋರ್ಟ್ವೆಂಟಿ, ಜರ್ದಾ ಬೀಡಾ ಅಗಿದು
ಬೈದಾಡೋ ಮಾತೆ ತಟ್ಟಿ ಮಲಗುಸ್ಬೇಕು
ನಮ ನೀತಿ ನೇಮ ಸಂಸ್ಕೃತಿಗದೆ ಪರಾಕು ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

http://sampada.net/%E0%B2%AE%E0%B2%BE%E0%B2%A4%E0%B2%B2%E0%B3%8D%E0%B2%B2%E0%B2%B7%E0%B3%8D%E0%B2%9F%E0%B3%86-%E0%B2%8E%E0%B2%B2%E0%B3%8D%E0%B2%B2%E0%B2%BE

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s