00063. ಗಂಗಾವತರಣ…!

ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ – ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ – ನಾಗೇಶ ಮೈಸೂರು, ಸಿಂಗಪುರದಿಂದ

ಗಂಗಾವತರಣ
__________

ಹರಿಪಾದದಿಂದ
ಹರಿದ ಬ್ರಹ್ಮಾನಂದ
ರೊಚ್ಚು ತಡೆಯಲೆಲ್ಲಿ
ಗಂಗೆ ಗಂಡುಭೀರಿ ತರಂಗ
ಟೊಂಕಕಟ್ಟಿ ಹರನೆ
ನಿಲಬೇಕಾದ ಪ್ರಸಂಗ
ಜಟೆಯೊಳಗೆ ಸುಳಿದೆದ್ದು
ತಣ್ಣಗಿಳಿದಾ ಗಂಗಾ…!

ತ್ರಿಮೂರ್ತಿಗಳನೆ ಕಾಡಿಸಿ
ಮೂರು ಪೀಳಿಗೆ ಗೋಳಾಡಿಸಿ
ದಿಲೀಪ ಅಂಶುಮನ ಭಗೀರತ
ಸದ್ಗತಿ ಸಗರ ಪುತ್ರರ ಬೂದಿಗೆ
ಬಂದಳೆ ಹಠಮಾರಿ ಪ್ರಯತ್ನ
ಚಂಡಿ ಹಿಡಿದವಳ ಬಿಡದೆ ಜತನ
ಗಲಿರುಗಲಿರೆಂದು ಹರಿದವಳ
ಅರೆಮನಸಲೆ ಇಳೆಗಿಳಿದವಳಾ!

ಇಳಿದ ಬಿಂಕವೊ ದೋಣಿ
ಮೊಸಳೆಯೇರಿದ ತರುಣಿ
ಕಡೆಗೂ ಬಂದಳೆ ಶರಣ
ಏನೇನೆಲ್ಲ ಕಾರ್ಯಕಾರಣ
ಪ್ರಸಾದಿಸುತ ಸಗರ ಮುಕ್ತಿ
ಶಂತನು ಮರುಳಾಗು ಕುಯುಕ್ತಿ
ಶಾಪ ವಿಮೋಚನೆಗೆ ಅಷ್ಟಾವಸು
ಭೀಷ್ಮನ ಹೆತ್ತೇ ಕರುಣಿಸು!

ನಮ್ಮ ಪುರಾಣಗಳೆ ಹೀಗೆ
ಶಾಪ ವಿಮೋಚನೆ ಸೊಬಗೆ
ಕೊಟ್ಟಾರೊ ಉರಿದು ಶಾಪಾರ್ಥ
ಪರಿಹಾರ ಲೋಕಸೇವಾರ್ಥ
ಹೆಜ್ಜೆಜ್ಜೆಗೂ ನೀತಿ ನಿಯತಿ
ಕಥೆಗಳೆ ಗೊಂದಲದೊಡತಿ
ದೇವವ್ರತ ಮಹಾಭಾರತ
ನಡೆಸಿದ್ದಕ್ಕೂ ಕಾರಣವಿತ್ತ?

ಆದರೀಗೇಕೊ ಭಾಗೀರಥಿ
ಬಿರುಸು ಕಳಚಿದ ಯುವತಿ
ವಯಸಾಯಿತೆ ಮುರುಟಿ
ಮಕರಗಳ ಮೊಗ ಮೊಗುಚಿ
ಈಗ ಹರಿದೆಲ್ಲೆಡೆ ಕಶ್ಮಲ
ಕಂಡೂ ಕಾಣದ ನಿಶ್ಚಲ
ದಿನಗಳೆಣಿಸಿದಂತೆ ಮಗನೆ
ಕಾದಿರುವೆಯ ಹಿಂತಿರುಗೆ ಮನೆ?

ಗಂಗಾವತರಣದ ಹೊತ್ತು
ವೈಭವವೆ ಹೇಗಿತ್ತು
ಅಖಂಡ ಭೂಶಿರ ಪೂರ
ಬರಿ ನಿನ್ನದಾಗಿತ್ತು
ಈಗಿದ್ದರೂ ಹಾಹಾಕಾರ
ಬಿಡದಲ್ಲ ಗ್ರಹಚಾರ
ಕೃಷ್ಣ ಕಾವೇರಿ ಗಂಗಾ ತರ್ಕ
ಸಮಷ್ಟಿಗು ಚಿಂತಿಸೊ ಲೋಕ!

– ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು

ಸರಣಿ: Nagesha mysore, Kannada Poems!, Singapore, ಗಂಗಾವತರಣ
ಲೇಖನ ವರ್ಗ (Category): ಕಾವ್ಯ ಮತ್ತು ಕವನ
(ಸಂಪದದಲ್ಲಿ ಪ್ರಕಟಿಸಿದ ಬರಹ)
June 21, 2013 – 12:39am

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s