ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02″ (ಭಾಗ – 02)
ಪೀಠಿಕೆ /ಟಿಪ್ಪಣಿ:
ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು 🙂
1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ “ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ” ಎಂಬ ಪಾಠ ಓದಿದ ನೆನಪಷ್ಟೆ ಇದರ ಮೂಲ ಬಂಡವಾಳ. ಹೀಗಾಗಿ ಅವರಿಬ್ಬರ ಸಂಭಾಷಣೆಯ ಎಳೆಯನ್ನೆ ಈ ಬರಹದ ಹಂದರವನ್ನಾಗಿ ಬಳಸಿದ್ದೇನೆ.
2. ಮೇಲ್ನೋಟಕ್ಕೆ ತಿಳಿಯುವಂತೆ ಇದೊಂದು ಲಘು ಹಾಸ್ಯದ ಬರಹ. ಖಂಡಿತ ಮುದ್ದಣ ಮನೋರಮೆಯ ಅಗೌರವವಾಗಲಿ, ಛೇಡನೆಯಾಗಲಿ ಅಲ್ಲ. ಬದಲಿಗೆ ಆ ಹಾಸ್ಯ ದ್ರವವನ್ನು ಈಗಿನ ಅಧುನಿಕ ಜಗಕ್ಕೆ ಹೊಂದಾಣಿಸುವ ಕಿರು ಪ್ರಯತ್ನವಷ್ಟೆ ಹೊರತು ಅವಹೇಳನವಲ್ಲ.
3. ಕಲಿಯಲು ತುಸು ಕಬ್ಬಿಣದ ಕಡಲೆ ಎಂದೆ ಹೆಸರಾದ ‘ಚೀಣಿ’ ಭಾಷೆಯ ಕೆಲ ತುಣುಕುಗಳನ್ನು ಪರಿಚಯ ಮಾಡಿಕೊಡುವುದಷ್ಟೆ ಇಲ್ಲಿನ ಉದ್ದೇಶ. ಹಾಗೆಂದು ನಾನೇನೂ ಚೀನಿ ಭಾಷಾ ಪಂಡಿತನಲ್ಲ, ಮತ್ತು ಇಲ್ಲಿರುವುದೆಲ್ಲಾ ಪಕ್ಕಾ ಸರಿಯಾದ ಶಾಸ್ತ್ರೀಯ ಚೀಣಿ ಭಾಷೆಯೆ ಎಂದು ಹೇಳುವ ಧಾರ್ಷ್ಟ್ಯವಾಗಲಿ, ಜ್ಞಾನವಾಗಲಿ ನನ್ನಲ್ಲಿಲ್ಲ. ಕೇವಲ ಕೆಲಸದ ನಿಮಿತ್ತದ ಒಡನಾಟದಲ್ಲಿ, ಸಾಮಾನ್ಯನೊಬ್ಬನಾಗಿ ನಾ ಕಂಡ, ನಾನರಿತುಕೊಂಡ ಬಗೆಯ ದಾಖಲೆಯಷ್ಟೆ; ಗ್ರಹಿಕೆಯಲ್ಲಿ ತಪ್ಪಿದ್ದರೆ ಕ್ಷಮೆಯಿರಲಿ, ಹಾಗೆಯೆ ತಿಳಿದವರು ಯಾರಾದರೂ ಇದ್ದರೆ ತಿದ್ದಲಿ. ಮೆಲು ಹಾಸ್ಯದೊಂದಿಗೆ ಕೇವಲ ಮೇಲ್ನೋಟದ ಸರಳತೆ, ಸಂಕೀರ್ಣತೆಗಳ ಪರಿಚಯವಷ್ಟೆ ಈ ಬರಹ ಉದ್ದೇಶ.
4. ಸಾಧಾರಣ ಪರಭಾಷೆ, ಅದರಲ್ಲೂ ವಿದೇಶಿ ಭಾಷೆ ಕಲಿಯುವುದು ತುಸು ತ್ರಾಸದಾಯಕ ಕೆಲಸ. ಈ ಮುದ್ದಣ್ಣ ಮನೋರಮೆಯ ಹಾಸ್ಯ ಸಂವಾದದ ರೂಪದಲ್ಲಿ ಹೇಳಿದರೆ ತುಸು ಸುಲಭವಾಗಿ ಗ್ರಾಹ್ಯವೂ, ಜೀರ್ಣವೂ ಆಗುವುದೆಂಬ ಅನಿಸಿಕೆಯೊಂದಿಗೆ ಬರೆಯುತ್ತಿದ್ದೇನೆ. ಒಂದು ವೇಳೆ ಈ ವಿಧಾನ ಹಿಡಿಸಿದರೆ, ಮತ್ತಷ್ಟು ಚೀನಿ ಪದಗಳ ಕಲಿಕೆಗೆ ಇದೆ ತರಹದ ಬರಹಗಳ ಮೂಲಕ ಯತ್ನಿಸುತ್ತೇನೆ. ಕೊನೆಗೆ ಕನಿಷ್ಠ ಮುದ್ದಣ್ಣ ಮನೋರಮೆಯ ಹಾಸ್ಯವಾದರೂ ಹಿಡಿಸೀತೆಂಬ ಆಶಯ.
5. ತುಸು ಹಳತು ಹೊಸತಿನ ಮಿಶ್ರಣದ ಹೊದಿಕೆ ಕೊಡಲು ಭಾಷಾಪ್ರಯೋಗದಲ್ಲಿ ಹಳೆ ಮತ್ತು ಹೊಸತಿನ ಶೈಲಿಗಳ ಮಿಶ್ರಣವನ್ನು ಯಾವುದೆ ನಿಯಮಗಳ ಬಂಧವಿಲ್ಲದೆ, ಧಾರಾಳವಾಗಿ ಬಳಸಿದ್ದೇನೆ – ಓದುವಾಗ ಆಭಾಸವಾಗದೆಂದುಕೊಂಡಿದ್ದೇನೆ, ನೋಡೋಣ!
ಇನ್ನು ಪೀಠಿಕೆಯಿಂದ ಹೊರಡೋಣ , ಲೇಖನದತ್ತ – “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02 ” (ಭಾಗ – 02)
– ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
_______________________________________________________________________________
…….ಚೈನೀಸು ಕಲಿಕೆಯೂ! (ಭಾಗ – 02)
_______________________________________________________________________________
(ಮುಂದುವರೆದ ಭಾಗ – ಹಿಂದಿನ ಭಾಗಕ್ಕೆ ಲೇಖನ 39ನ್ನು ಓದಿ)
ಜೋಡಿ ಹಕ್ಕಿಗಳ ಹಾಗೆ ಜತೆಜತೆಯಲ್ಲೆ ನಡೆದ ಸತಿಪತಿಯರು ಪಾಕಶಾಲೆಯೊಳಗೆ ಕಾಲಿಡುತ್ತಿದ್ದಂತೆ ಮಡದಿ ಚಕಚಕನೆ ಬೇಕಿದ್ದ ಪಾತ್ರೆ, ಬಾಣಲೆ ಇತ್ಯಾದಿ ಸಲಕರಣೆಗಳನ್ನು ಸಾವರಿಸುತ್ತಿದ್ದರೆ, ಅವಳಿಗೆ ಸಹಾಯ ಹಸ್ತ ನೀಡಲು ಬಂದ ಮುದ್ದಣ್ಣ, ಅವಳ ವೇಗದ ಚುರುಕಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಕಂಡು ಬೆರಗಾಗಿ ‘ಇಂಥಹ ಸತೀಮಣಿಯನ್ನು ಪಡೆದ ನಾನೆ ಧನ್ಯ’ ಅಂದುಕೊಳ್ಳುತ್ತ ಅಡುಗೆಮನೆ ಜಗುಲಿಯ ಖಾಲಿಯಿದ್ದ ಜಾಗವೊಂದಕ್ಕೆ ಒರಗಿ ಕೂತ. ಇನ್ನು ಕೂತತ್ತಿತ್ತ ತಿರುಗಲಿಕ್ಕಿಲ್ಲ, ಆಗಲೆ ಮಡದಿಯ ಕೈಯಲ್ಲಿ ಕಾಫಿಯ ಲೋಟ ಪ್ರತ್ಯಕ್ಷ..! ‘ಭಲೆ, ಭಲೆ! ರಾಣಿಮಣಿ, ನಿನ್ನ ವೇಗವೇ ವೇಗ’ ಎಂದು ಮನದಲ್ಲೆ ಭೇಷಿಸುತ್ತ ರುಚಿಯಾದ ಕಾಫಿಯನ್ನು ತುಸುತುಸುವೆ ಹೀರತೊಡಗಿದ, ಕಾವ್ಯಾವಿರತನಿರತ ಮುದ್ದಣ್ಣ.
ಬಾಣಲಿ ಎಣ್ಣೆಗೆ ಕಾಯಲಿಟ್ಟು ಪಾತ್ರೆಯಲಿ ಕಲಸಿಟ್ಟಿದ್ದ ಹಿಟ್ಟಿನ ಮುದ್ದೆಯನ್ನು ಸಣ್ಣಸಣ್ಣ ಉಂಡೆಗಳಾಗಿ ಕಟ್ಟಿಡುತ್ತಲೆ, ನಡುನಡುವೆ ಜೋತಾಡುತ್ತ ಮುನ್ನುಗ್ಗಿ ದೃಷ್ಟಿ ಮರೆಸುತ್ತಿದ್ದ ಮನೋಹರ ಮುಂಗುರುಳನ್ನು ಎಡಗೈಯಿಂದ ನೇವರಿಸಿ ಸಾಲು ಹನಿಮಣಿಯಾಗಿ ಪೋಣಿಸಿಕೊಳ್ಳಲು ಹವಣಿಸುತ್ತಿದ್ದ ಬೆವರಿನ ಜತೆ ಹಿಂದೆ ತಳ್ಳುತ್ತ, ಸಿದ್ದಪಡಿಸಿದ ಪಕೋಡಾದ ಉಂಡೆಗಳನ್ನು ಹಾಸಿದ ಒದ್ದೆ ಬಟ್ಟೆಯ ಮೇಲಿಡುತ್ತ ನುಡಿದಳು – “ಸರಿ, ಈಗ ಹೇಳಿರಲ್ಲಾ….ನಿಮ್ಮ ಚೀಣಿ ಪಾಠದ ವಿಷಯ…”
ಸತಿಯ ಮುಖದಲ್ಲಿ ಮೂಡುತ್ತಿದ್ದ ಸಾಲು ಬೆವರು ಹನಿಯನ್ನೆ ತದೇಕವಾಗಿ ದಿಟ್ಟಿಸುತ್ತ ಮನದಲ್ಲೆ ಕವನ ಕಟ್ಟುತ್ತಿದ್ದ ಮುದ್ದಣ್ಣ, ಕಾಫಿಯ ಜತೆಗೆ ಇಹಜಗಕ್ಕೆ ಬಂದವನಂತೆ “ಹೌದಲ್ಲವೆ..ಈಗ ಮಾತಾಟದಲ್ಲೆ ಕಲಿಯುವುದು ಒಳಿತಲ್ಲವೆ? ಸರಿ ನಲ್ಲೆ ಮೊದಲು ನೀನೇನು ಕಲಿಯಬೇಕೆಂದಿರುವೆ ಹೇಳು…ಅದರಿಂದಲೆ ಆರಂಭಿಸೋಣ…”
” ನಾನೇನು ಕಲಿಯಬೇಕೆಂದಿರುವೆನೆಂದು ಹೇಗೆ ಹೇಳಲಿ ಪ್ರಿಯಾ? ನನಗಾ ಭಾಷೆಯ ಗಂಧಗಾಳಿಯೂ ಇಲ್ಲ..ನಿನಗೇನು ತೋಚುವುದೊ ಅದನ್ನೆ ಕಲಿಸು…”
“ಸರಿ ಸರಿ…ಎಲ್ಲಕ್ಕೂ ಮೊದಲು ಯಾರದರೂ ಸಿಕ್ಕಿದರೆ ‘ನಮಸ್ಕಾರ’ ಹೇಳುವುದು, ‘ಹೇಗಿದ್ದೀರಾ’ ಎಂದು ಕೇಳುವುದು ಮೊದಲಿನ ಮಾತಾಲ್ಲವೆ? ಅದರಿಂದಲೆ ಆರಂಭಿಸೋಣವೆ?”
“ಓಹೋ..ಧಾರಾಳವಾಗಿ ಆರಂಭಿಸಿ…..”
“ಸರಿ..ಅಲ್ಲೆ ‘ಓಂ’ನಾಮ ಹಾಡಿಬಿಡೋಣ……ಚೀನಿ ಭಾಷೆಯಲ್ಲಿ ಯಾರೆ ಎದುರು ಸಿಕ್ಕರೂ ಮೊದಲು ಹೇಳುವ ವಾಕ್ಯ ‘ನೀ ಹಾವ್ ಮಾ’ ಅಂತ..ಅದರಲ್ಲಿ ‘ನೀ’ ಎಂದರೆ…” ಎಂದು ಮುಂದುವರೆಸುತ್ತಿದ್ದವನನ್ನು ಅಲ್ಲೆ ತಡೆದ ಮಡದಿ ಮನೋರಮೆ, ” ನಮ್ಮಲ್ಲಿ ಯಾವುದೆ ವಿದ್ಯೆ ಕಲಿಯುವ ಮೊದಲು, ಆ ವಿದ್ಯೆಗೆ ಸಂಬಂಧಿಸಿದ ದೇವರನ್ನ ಪೂಜಿಸಿ, ಪ್ರಾರ್ಥಿಸುತ್ತಾ, ಅ ಆ ಇ ಈ ಅಕ್ಷರಾಭ್ಯಾಸದೊಂದಿಗೆ ಪ್ರಾರಂಭಿಸುತ್ತೇವೆ.. ಇಲ್ಲೇನಿದು ‘ದಿಢೀರ ಸಾಂಬಾರ’, ‘ದಿಢೀರ ಉಪ್ಪಿಟ್ಟಿ’ನ ಹಾಗೆ ನೇರ ನಮಸ್ಕಾರಕ್ಕೆ ಕರೆದುಕೊಂಡು ಹೋಗುತ್ತೀರಲ್ಲ?” ಎಂದು ಆಕ್ಷೇಪಿಸಿದಳು, ಒಂದೊಂದೆ ಪಕೋಡದ ಉಂಡೆಯನ್ನು ಎಣ್ಣೆಯ ಬಾಣಲಿಯಲ್ಲಿ ತೇಲಿಸಿ , ಈಜಲು ಬಿಡುತ್ತ.
” ಆಹಾಹಾ! ಮುತ್ತಿನಂತಹ ಮಾತೆ ಯಾವಾಗಲೂ ಆಡುವ ಮುತ್ತಿನ ಮಣಿ, ಮೊದಲಾಗಿ ಚೀಣಿಯರಿಗೆ ಅವರದೆ ಆದ ಸ್ವಂತ ದೇವರೆಲ್ಲಿ ಬರಬೇಕು? ಎಲ್ಲ ಆಮದು ಭಗವಾನರೆ – ನಮ್ಮ ಬುದ್ಧ ಭಗವಾನರನ್ನು ಪೂಜಿಸಿ ‘ಅಮಿತಾಭ’ ಅಂದ ಹಾಗೆ…! ಆದರೆ ಭೂತ, ಪಿಶಾಚಿಗಳ ಲೆಕ್ಕದಲ್ಲಿ ಬೇಕಾದಷ್ಟಿವೆ ನೋಡು…ಸತ್ತವರೆಲ್ಲ ಒಂದೊಂದು ಭೂತವೆ ಅಲ್ಲಿ….ಬೇಕಿದ್ದರೆ ನಮ್ಮ ‘ಭೂತದ ಕೋಲ’ದ ಹಾಗೆ ‘ಭೂತಾರಾಧನೆ’ಯೊಂದಿಗೆ ಆರಂಭಿಸಬಹುದು ನೋಡು..”
“ಶಿವ ಶಿವಾ!..ವಿದ್ಯೆಯಂತ ಸರಸ್ಪತಿ ವರ ಪ್ರಸಾದಕ್ಕೆ ಭೂತ, ದೈಯ್ಯ ಅಂತ ಸೇರಿಸುತ್ತೀರಲ್ಲಾ?….ರಾಮ, ರಾಮಾ….! ದೇವರ ಪ್ರಾರ್ಥನೆಯಿಲ್ಲದಿದ್ದರೆ ಅವರ ಕರ್ಮ, ಆದರೆ ಹಾಳು ದೆವ್ವದ ಹೆಸರೆತ್ತಬೇಡಿ, ನೋಡಿ….ವಿದ್ಯೆ ಯಾರು ಹೇಗೆ, ಎಲ್ಲೆ ಕಲಿತರೂ ವಿದ್ಯೆಯೆ ಅದಕ್ಕೆ ಅಪಮಾನ, ಅಪಚಾರ ಮಾಡಬಾರದು” ಎಂದು ಸಿಡಿಗುಂಡಿನಂತೆ ಉತ್ತರಿಸಿದಳು ಪತಿರಾಯನಿಗೆ.
ಸತಿಯತ್ತ ಕಕ್ಕುಲತೆಯಿಂದ ನೋಡಿ ನಕ್ಕು ಮೇಲೆದ್ದು ಬಂದವನೆ, ಮಡದಿ ಎಣ್ಣೆಗೆ ಹಾಕಿದ್ದ ಬೆಂದಿದ್ದ ಪಕೋಡವನ್ನು ಜಾಲರಿಯಿಂದ ಎತ್ತಿ ತಟ್ಟೆಗೆ ಹಾಕುತ್ತಾ, “ಅಯ್ಯೊ ಪೆದ್ದೆ…ನಮ್ಮ ಸಂಸ್ಕೃತಿಯೆ ಬೇರೆ, ಅವರದೆ ಬೇರೆ…ಇದು ಸರಿ ತಪ್ಪು ಅನ್ನುವುದಕ್ಕಿಂತ ಅವರವರಿಗೆ ಬಿಟ್ಟ ವಿಚಾರಾ ಅನ್ನಬಹುದು…ನಾವು ಹೇಗೆ ನಮ್ಮ ಪದ್ದತಿ ಕಲಾಚಾರವನ್ನು ಆದರಿಸಿ ಗೌರವಿಸುತ್ತೇವೊ, ಅವರೂ ಹಾಗೆಯೆ…ನಿನಗೆ ಬೇಕಿದ್ದರೆ ಹೇಳು, ನಮ್ಮ ‘ಶುಕ್ಲಾಂ, ಭರದರಂ’ ನಿಂದಲೆ ಆರಂಭಿಸೋಣ…..”ಎಂದ.
“ಅಯ್ಯೊ! ಬಿಡ್ತೂ ಅನ್ನಿ…ನಮ್ಮ ಮಡಿ ದೇವರುಗಳನ್ನೆಲ್ಲ ಹಾಗೆ ಎಲ್ಲೆಲ್ಲೊ ಸಿಕ್ಕಿದ ಹಾಗೆ ಬಳಸುತ್ತಾರೇನೂ? ನಾನೇನೊ ಅವರದೆ ಪೂಜೆ – ಗೀಜೆಯಿದೆಯೇನೊ ಎಂಬ ಭಾವದಲ್ಲಿ ಕೇಳಿದ್ದಷ್ಟೆ…..ಅದಿಲ್ಲವಾದರೆ ಹಾಳಾಗಲಿ, ಬಿಡಿ. ಕನಿಷ್ಟ ಅವರ ‘ಅಕ್ಷರ’ಗಳಿಂದಾದರೂ ಆರಂಭಿಸಿ ಹೇಳಿಕೊಡಿ, ಒಂದೆ ಸಾರಿ ಪದಗಳಿಗೆ ಜಿಗಿಯುವ ಮೊದಲು…”
ಗರಿಗರಿಯಾಗಿ ಬೆಂದು ಗಮ್ಮನ್ನುತ್ತಿದ್ದ ಬಿಸಿ ಪಕೋಡವೊಂದನ್ನು ಬಾಯಿಗೆ ಹಾಕಿಕೊಳ್ಳುತ್ತಲೆ ” ಅಲ್ಲೆ ಇರುವುದು ಕಷ್ಟ ಪ್ರಿಯೆ…ನನಗೆ ತಿಳಿದ ಮಟ್ಟಿಗೆ, ಈ ಭಾಷೆಯಲ್ಲಿ ನಮ್ಮ ಹಾಗೆ ಸ್ವರ , ವ್ಯಂಜನ, ಕಾಗುಣಿತಾಕ್ಷರದ ಪದ್ದತಿ, ನಿಯಮವೆ ಇಲ್ಲ….” ಎಂದ ಮುದ್ದಣ್ಣ, ರುಚಿಯಾದ ಪಕೋಡವನ್ನು ಮೆಲ್ಲುತ್ತಲೆ.
ಅದನ್ನು ಕೇಳಿಯೆ ಅಚ್ಚರಿಗೊಂಡ ಮನೋರಮೆ, “ಏನು ಹಾಗೆಂದರೆ? ನಮ್ಮ ಹಾಗೆ ‘ಅ ಆ ಇ ಈ’, ‘ಕ ಖ ಗ ಘ’ ಮತ್ತೆ ‘ಕ ಕಾ ಕಿ ಕೀ..’ ಹೇಳಿಕೊಡುವುದಿಲ್ಲವೆ ಅಲ್ಲಿ? ಮತ್ತೆ ಮಕ್ಕಳು ಏನು ಕಲಿಯುತ್ತಾರೆ? ಹೇಗೆ ಕಲಿಯುತ್ತಾರೆ?” ಎಂದು ಅಚ್ಚರಿ ಕುತೂಹಲದಲಿ ಕೇಳಿದಳು.
“ಪ್ರಿಯೋನ್ಮಣಿ, ಅವರಲ್ಲಿರುವುದು ಸಂಕೇತಾತ್ಮಕ, ಚಿತ್ರಾತ್ಮಕ ಭಾಷಾಲಿಪಿ….ಪ್ರತಿ ಅಕ್ಷರವೂ ಒಂದು ಸಂಕೇತ ಅಥವ ಕೆಲವು ಒಂದುಗೂಡಿಸಿ ಜೋಡಿಸಿದ ಸಂಕೇತಗಳ ಸಂಗಮ..”
” ಒಂದೊಂದು ಹೆಸರು, ವಸ್ತು, ಭಾವ, ಶಬ್ದ – ಹೀಗೆ ಎಲ್ಲಕ್ಕೂ ಸಂಕೇತವೆ? ಹಾಗೆ ಎಲ್ಲಕ್ಕೂ ಸಂಕೇತ ಹಾಕುತ್ತಾ ಹೋದರೆ ಕಲಿಯಬೇಕಾದ ಹೊಸ ಅಕ್ಷರಗಳ ಸಂಖ್ಯೆ ಬೆಳೆಯುತ್ತಲೆ ಹೋಗುವುದಿಲ್ಲವೆ? ಅದೇಗೆ ಸಾಧ್ಯ ಪ್ರಿಯಾ?”
“ಜೀವನ್ಮಿತ್ರೆ, ಅಲ್ಲಿಯೆ ಈ ಭಾಷೆಯ ಸಂಕೀರ್ಣತೆ ಮತ್ತು ಸೌಂದರ್ಯವಿರುವುದು…. ಅಲ್ಲಿ ಕೆಲವೊಮ್ಮೆ ಒಂದು ಸಂಕೇತ ಅಕ್ಷರವಷ್ಟೆ ಆಗಿರಬಹುದು ಅಥವಾ ಒಂದು ಪದವೂ ಆಗಿರಬಹುದು… ಹೆಚ್ಚುಕಡಿಮೆ ಈ ಭಾಷೆಯಲ್ಲಿ ಐದು ಸಾವಿರಕ್ಕೂ ಮಿಕ್ಕಿ ಇಂತಹ ಸಂಕೇತಾಕ್ಷರಗಳಿವೆಯಂತೆ…!”
“ಐದು ಸಾವಿರವೆ…! ದೇವಾ….ಅದನ್ನೆಲ್ಲಾ ಯಾರಾದರು ಕಲಿತು ನೆನಪಿನಲಿಡಲು ಸಾಧ್ಯವೆ?” ಎಂದು ಸೋಜಿಗಪಟ್ಟಳಾ ಮನೋಹರಿ ಮನೋರಮೆ.
“ಅಷ್ಟು ಮಾತ್ರವಲ್ಲ ಚೆಲುವೆ, ಆ ಪ್ರತಿ ಸಂಕೇತ ಚಿಹ್ನೆಯ ಅರ್ಥ ಸದಾ ಒಂದೆ ಇರುವುದಿಲ್ಲ..”
“ಮತ್ತೇನಿರುತ್ತದಂತೆ? ಸಂಕೇತದ ಅರ್ಥವೆ ಬೇರೆಬೇರೆಯಾದರೆ ಯಾವಾಗ ಯಾವ ಅರ್ಥ ಎಂದು ಹೇಳುವುದಾದರೂ ಹೇಗೊ?” ಎಂದಳು ಆಶ್ಚರ್ಯ ತುಂಬಿದ ಮುಖಭಾವದಿಂದ.
ಅಲ್ಲಿಗೆ ಅಡುಗೆಮನೆಯ ಪಕೋಡ ಕಾರ್ಯಕ್ರಮವೂ ಮುಗಿದಿದ್ದ ಕಾರಣ, ತಟ್ಟೆಗೆ ತುಂಬಿಟ್ಟ ಪಕೋಡಗಳೊಡನೆ ಮತ್ತೊಂದು ಬಟ್ಟಲಲಿ ಸೇರಿಸಿದ ಬಿಸಿಕಾಫಿಯಿಡಿದು ಮತ್ತೆ ಹಜಾರಕ್ಕೆ ಬಂದು ಸುಖಾಸೀನರಾದರು ದಂಪತಿಗಳು. ಅಷ್ಟು ಹೊತ್ತಿಗೆ, ಮಳೆಯೂ ನಿಂತು ವಾತಾವರಣ ತಂಪಾಗಿ ಹಿತವಾಗಿತ್ತು. ಆ ತಂಪಿನಲೆ ಮತ್ತಷ್ಟು ಪಕೋಡ, ಕಾಫಿ ಸೇವಿಸುತ್ತ ಮುಂದುವರೆಸಿದ ಮುದ್ದಣ್ಣನನ್ನೆ ಮಂಡಿಗೆ ಕೈಯೂರಿ, ತದೇಕಚಿತ್ತದಿಂದ ನೋಡುತ್ತ, ಆಲಿಸುತ್ತ ಕುಳಿತಳು ಮದನಾರಿ, ನಡುನಡುವೆ ತಾನೂ ಕಾಫಿಯನ್ನು ಹೀರುತ್ತ.
” ಮನೋರಮೆ, ಮೊದಲಿಗೆ ಐದು ಸಾವಿರಕ್ಕೂ ಹೆಚ್ಚು ಸಂಕೇತ ಲಿಪಿಗಳಿದ್ದರೂ ಬಳಕೆಯಲ್ಲಿರುವುದು ಸುಮಾರು ಎರಡು ಸಾವಿರವಷ್ಟೆಯಂತೆ..ನಮ್ಮ ಹಳೆಗನ್ನಡ, ನಡುಗನ್ನಡ ಹೊಸಗನ್ನಡದ ಹಾಗೆ ಅವರಲೂ ಇದ್ದ ಹಳತು, ಹೊಸತನೆಲ್ಲ ಪರಿಷ್ಕರಿಸಿ ಈಗ ‘ಸರಳ ಚೀಣಿ’ ಎಂಬ ಒಂದು ಹೊಸತು ವಿಂಗಡನೆ ಮಾಡಿ, ದೇಶಭಾಷೆಯನ್ನಾಗಿ ಮಾಡಿಕೊಂಡಿದ್ದಾರಂತೆ..”
“ಐದು ಸಾವಿರದಿಂದ ಎರಡು ಸಾವಿರ ದೊಡ್ಡ ಬದಲಾವಣೆಯಾದರೂ, ಆ ಎರಡು ಸಾವಿರವನ್ನು ನೆನಪಿಡಲಾದರೂ ಹೇಗೆ ಸಾಧ್ಯ ಪ್ರಿಯಕರ?”
“ನಿನ್ನ ಮಾತು ನಿಜವೆ ಚಿನ್ನಾ…ಅದಕ್ಕೆಂದೆ ಏನೊ ಸಾಮಾನ್ಯ ಯಾರು ಐನೂರು ಆರುನೂರಕ್ಕಿಂತ ಹೆಚ್ಚು ತಿಳಿದಿರುವ ಸಾಧ್ಯತೆಯಿಲ್ಲ..ಮಿಕ್ಕಿದ್ದೆಲ್ಲ ಪಂಡಿತರ ಪಾಲಿಗಷ್ಟೆ…ಪಾಮರರಿಗೆ ಈ ಐನೂರೆ ಸಾಕಂತೆ ದಿನಜೀವನ ದೂಡಲಿಕ್ಕೆ..!”
“ಸದ್ಯ ಐದು ಸಾವಿರದಿಂದ ಐನೂರರಕ್ಕೆ ಬಂತಲ್ಲಾ…ಬಡಪಾಯಿ ಮಕ್ಕಳು ಬದುಕಿಕೊಂಡವು..! ಅದರ ಮಧ್ಯೆ ಪ್ರತಿಯೊಂದು ಸಂಕೇತ ಲಿಪಿಗೂ ಬೇರೆ ಬೇರೆ ಅರ್ಥವೂ ಇರಬಹುದು ಅಂದಿರಲ್ಲಾ, ಅದೇನು?”
“ಅದನ್ನೆ ಈಗ ಹೇಳಹೊರಟೆ, ಸತಿ ಶಿರೋಮಣಿ..ಬರಿ ಸಂಕೇತ ಗೊತ್ತಿದ್ದರೆ ಅರ್ಥ ಗೊತ್ತಾಗುವುದಿಲ್ಲ….ಅದನ್ನು ಮಾತಾಡುವ ಸ್ವರದ ಜತೆ ಸೇರಿಸಿದಾಗ ಮಾತ್ರ ಅದರ ಸರಿಯಾದ ಅರ್ಥ ಹೊಮ್ಮುತ್ತದೆ…”
“ಅರ್ಥವಾಗಲಿಲ್ಲ ಮದನ…”
” ಅವರಲ್ಲಿ ನಾಲ್ಕೈದು ತರದ ಧ್ವನಿ / ಸ್ವರ ವೈವಿಧ್ಯಗಳಿವೆಯಂತೆ…ಒಂದೊಂದು ಒಂದೊಂದು ರೀತಿಯ ಸ್ವರ ಹೊರಡಿಸುವ ಕೆಲಸ ಮಾಡುವುದಂತೆ…ಪ್ರತಿ ಲಿಪಿಗೆ ಒಂದೊಂದು ಉಚ್ಚಾರ ಸ್ವರ / ಜತೆಗೊಂದೊಂದು ಧ್ವನಿ ವೈವಿಧ್ಯ ಸೇರಿದಾಗ ಬರುವ ಅಂತಿಮ ಉಚ್ಚಾರವೆ ಅರ್ಥವನ್ನು ಕೊಡುವ, ಬದಲಿಸುವ ಕೆಲಸ ಮಾಡುತ್ತದಂತೆ..”
” ಅಂದರೆ…” ಅರ್ಥವಾಗದ ಗೊಂದಲದಲ್ಲಿ ಮತ್ತೆ ಕೇಳಿದಳು ಮನೋರಮೆ.
ತುಸು ಹೊತ್ತು ಗಹನವಾಗಿ ಚಿಂತಿಸಿದವನಂತೆ ಕಂಡ ಮುದ್ದಣ್ಣ ಕೊನೆಗೊಂದು ಸರಳ ವಿವರಣೆ ಹೊಳೆದಂತೆ ನುಡಿದ, ” ಸಖಿ, ನಾವು ಸಂಗಿತದಲ್ಲಿ ರಾಗಗಳ ಏರಿಳಿತ ಮಾಡಿ ವೈವಿಧ್ಯಮಯವಾಗಿ ಹಾಡುವುದಿಲ್ಲವೆ? ಇದು ಒಂದು ರೀತಿ ಹಾಗೆ – ಯಾವುದೆ ರೀತಿಯ ರಾಗ, ಭಾವವಿಲ್ಲದೆ ಒಂದೆ ಸ್ತರದಲ್ಲಿ ಸಾಧಾರಣವಾಗಿ ಹೊರಟ ಧ್ವನಿಗೊಂದು ಅರ್ಥವಿರುತ್ತದೆ; ಅದೆ ದ್ವನಿಯನ್ನು ಮಂದ್ರದಿಂದ ಸ್ಥಾಯಿಗೆಳೆದೊಯ್ದರೆ ಮತ್ತೊಂದು ಅರ್ಥ; ಬರಿ ಮಂದ್ರಕ್ಕೆಳೆದರೆ ಇನ್ನೊಂದು ಅರ್ಥ; ಪೂರ್ತಿ ಸ್ಥಾಯಿಗೆಳೆದರೆ ಮಗದೊಂದು..ಹೀಗೆ ಒಂದರಲ್ಲೆ ನಾಲ್ಕೈದು ಸಾಧ್ಯತೆಗಳು ಒಟ್ಟಾಗಿಬಿಡುತ್ತವೆ….”
“ಓಹೋಹೋ…ಇದೊಂದು ರೀತಿ ನಮ್ಮ ವಿಭಕ್ತಿ, ಪ್ರತ್ಯಯಗಳ ರೀತಿ ಇದೆಯಲ್ಲಾ? ರಾಮ, ರಾಮನೆ, ರಾಮನಿಂದ….ತರಹ?”
ಅಸಂಬದ್ಧ ಹೋಲಿಕೆಯೆನಿಸಿದರೂ ಅದರ ಸಾಮ್ಯತೆಯು ಒಂದು ರೀತಿ ಹೊಂದುವುದನ್ನು ಕಂಡ ಮುದ್ದಣ್ಣನು ನಸುನಗುತ್ತ, ‘”ಹಾಗೆ ಅಂದುಕೊ..ಆದರೆ ಇಲ್ಲಿ ಮಾತನಾಡುವಾಗ ಅಷ್ಟೆ ವೇಗದಲ್ಲಿ ಸರಿಯಾದ ಧ್ವನಿಯನ್ನನುಸರಿಸಿ ಹೊರಡಿಸಬೇಕು…ಚೆನ್ನಾಗಿ ಕಲಿಯುವವರೆಗೆ ಅದೇನೂ ಸುಲಭವಲ್ಲ….”
” ಹೌದೌದು…ಮೊದಲಿಗೆ ಆ ಐನೂರರ ಕಲಿಕೆ ಮತ್ತೆ ಜತೆಗೆ ಅದರ ಧ್ವನಿ ವೈವಿಧ್ಯಗಳ ಕಲಿಕೆಗೆ ತಲುಪುವಷ್ಟರಲ್ಲಿ ಕಲಿಯುವ ಉತ್ಸಾಹವೆ ಇರುವುದಿಲ್ಲವೇನೊ…!”
“ಇಷ್ಟೆಲ್ಲಾ ಸಾಲದೆಂದು, ಕೆಲವಂತು ಒಂದೆ ಉಚ್ಚಾರ, ಧ್ವನಿ ವೈವಿಧ್ಯವಿದ್ದರೂ, ಸಂಧರ್ಭಾವಾಕ್ಯಾನುಸಾರ ಬೇರೆ ಅರ್ಥಗಳು ಆಗಬಹುದಂತೆ! ಇನ್ನು ಕೆಲವಂತು ಬೇರೆ ರೂಪು ಆಕಾರ ಇದ್ದರು ಉಚ್ಚಾರಣೆ ಮತ್ತೊಂದು ಪದದ ಹಾಗೆಯೆ ಇರುವುದಂತೆ. ಇಂತ ಕಡೆ ಧ್ವನಿಯಿಂದ ಅರ್ಥ ಮಾಡಿಕೊಳ್ಳಲಾಗದು – ಸಂದರ್ಭೊಚಿಯವಾಗಿ ಅಥವಾ ಬರಹದ ಲಿಪಿಯ ಮೇಲೆ ಅರ್ಥ ಬಿಡಿಸಬೇಕು!”
“ಪ್ರಿಯಾ….ನೀವ್ಹೇಳುವ ವರ್ಣನೆಯೆಲ್ಲಾ ನೋಡಿದರೆ ನನಗ್ಯಾಕೊ ಈ ಭಾಷೆ ಕಲಿಯಲೆ ಭಯವೆನಿಸುತ್ತಿದೆಯಲ್ಲಾ….”
“ಚಿಂತಿಸಬೇಡ ಹೃದಯೇಶ್ವರಿ…ಅದಕ್ಕೆಂದೆ ನಾನು ಹೇಳಿದ್ದು, ನೀನು ಬರಿ ಅಷ್ಟಿಷ್ಟು ಮಾತನಾಡಲು , ಅರ್ಥ ಮಾಡಿಕೊಳ್ಳಲು ಕಲಿತರೆ ಸಾಕೆಂದು…..ಆ ಲಿಪಿ, ಉಚ್ಚಾರಣೆಗಳ ಸಹವಾಸ ಬಿಟ್ಟು ಬರಿ ಮಾತಾಡುವತ್ತ ಗಮನ ಕೊಟ್ಟರೆ ಸಾಕು….”
“ಆದರೂ ನನಗರ್ಧ ಕಲಿವ ಹುಮ್ಮಸ್ಸೆ ಮಾಯವಾಗಿಹೋಗಿದೆ, ಹೃದಯೇಶ್ವರಾ…”
“ಆ ಹುಮ್ಮಸ್ಸನ್ನು ಹೆಚ್ಚಿಸಿ ಹುರಿದುಂಬಿಸುವ ಸುದ್ದಿ ಈಗ ಹೇಳಲೇನೂ?”
“ನೀವು ರಾಗ ಎಳೆಯುವ ತರ ನೋಡಿದರೆ ಇಷ್ಟು ಹೊತ್ತು ಹೇಳಿದ್ದು ಅಪದ್ದವೆಂದು ತೋರುತ್ತಿದೆ?”
“ಇಲ್ಲ ಪ್ರಿಯೆ, ಖಂಡಿತ ಅಪದ್ದವಲ್ಲ…ಆದರೆ ಮಾಹಿತಿ ಅಸಂಪೂರ್ಣ ಅಷ್ಟೆ…!”
“ಅದೇನದೊ ಹೇಳದೆ ಬಿಟ್ಟ ಹುಮ್ಮಸ್ಸಿನ ವಿಷಯ?”
“ಅದೆಂದರೆ, ಈಗ ಹೊಸದಾಗಿ ಬಂದಿರುವ ಕಲಿಕೆಯ ಪ್ರಕಾರ, ನೀನು ಆ ಲಿಪಿಗಳನ್ನು ಕಲಿಯದಿದ್ದರೂ ಪರವಾಗಿಲ್ಲ…ಮಾತನಾಡಲು ಸುಲಭವಾಗುವ ಮತ್ತೊಂದು ವಿಧಾನವನ್ನು ಹುಡುಕಿಟ್ಟಿದ್ದಾರೆ….”
“ಅದೇನು ಹೊಸ ಹಾದಿ ಪ್ರಾಣೇಶ್ವರಾ?”
“ಗೆಳತಿ, ಈಗಿನ ದಿನಗಳಲ್ಲಿ ಬಳಸುವ ಗಣಕ ಯಂತ್ರ, ಗ್ಯಾಡ್ಜೆಟ್ಟುಗಳಲ್ಲಿ ‘ಹಾನ್ ಯು ಪಿನ್ ಯಿನ್’ ಅನ್ನುವ ತತ್ರಾಂಶವನ್ನು ಉಪಯೋಗಿಸಿದರೆ ಈ ಭಾಷೆಯಾಡಲು ಕಲಿಯುವುದು ಬಲು ಸುಲಭವಂತೆ..”
“ನನಗೆ ಈ ಗಣಕ ಯಂತ್ರ, ಗ್ಯಾಡುಜೆಟ್ಟು ಅಂದರೇನೂ ತಿಳಿಯದು ಪ್ರಿಯಾ…ಅದರಿಂದ ನನಗರ್ಥವಾಗುವ ರೀತಿಯಲ್ಲಿ ಹೇಳು…”
“ಇದರಲ್ಲೇನೂ ವಿಶೇಷವಿಲ್ಲ ರಮಣಿ…ಮಾತಾಡುವ ಭಾಷೆ ಸ್ವಲ್ಪ ಅರಿವಿದ್ದರೆ ಸಾಕು, ಅದನ್ನು ನೀನು ಆಂಗ್ಲ ಭಾಷೆಯಲ್ಲೊತ್ತಿ ತೋರಿಸಿದರೆ…ಅದು ಚೀನಿ ಭಾಷೆಯಲ್ಲಿ ಪರದೆಯ ಮೇಲೆ ತೋರಿಸುತ್ತದೆ…”
“ಅಂದರೆ ನನಗೆ ಸರಿಯಾಗಿ ಮಾತಾಡಲು ಬರದಿದ್ದರೂ, ಧ್ವನಿ ವೈವಿದ್ಯ ಗೊತ್ತಾಗದಿದ್ದರೂ ಈ ಪರದೆಯ ಮೇಲೆ ಆಂಗ್ಲದಲ್ಲೊತ್ತಿದರೆ ಅದು ಚೀನಿಯಲ್ಲಿ , ಸೂಕ್ತ ಸ್ವರದೊಂದಿಗೆ ತೋರುತ್ತದೆಯೆ?”
“ನೋಡು ಎಷ್ಟು ಬೇಗ ಕರಾರುವಾಕ್ಕಾಗಿ ಹೇಳಿಬಿಟ್ಟೆ…ಬರಿ ಚೀನಿ ಮಾತ್ರವಲ್ಲ, ಆಂಗ್ಲದಲ್ಲೂ ತೋರಿಸುತ್ತದೆ, ಜತೆಗೆ ಆಂಗ್ಲ ಹಾಗೂ ಚೀನಿ ಉಚ್ಚಾರಣೆಯನ್ನು ಹೇಳಿ ತೋರಿಸಿಕೊಡುತ್ತದೆ…”
“ಅದೆಲ್ಲಾ ಸರಿ ಪತಿದೇವಾ..ಇಂತಹ ತಂತ್ರಾಂಶ ಇತ್ಯಾದಿಗಳನ್ನೆಲ್ಲ ಮಾಡುವವರೆಲ್ಲಾ ನಮ್ಮ ಜನರೆ ಅಲ್ಲವೆ…?”
“ಹೌದೌದು…ಅದೂ ನಮ್ಮ ಕರ್ನಾಟಕದಿಂದ , ಅದರಲ್ಲು ಬೆಂಗಳೂರಿಂದ ಬಂದ ಪ್ರತಿಭಾಶಾಲಿಗಳೆ ಇದನ್ನೆಲ್ಲ ಹಿನ್ನಲೆಯಲ್ಲಿ ಮಾಡುವ ಜನಗಳು..ಈಗ ಸಾಕಷ್ಟು ಚೀನೀಯರೂ ಇದ್ದಾರೆನ್ನು..ಅದು ಸರಿ, ಆ ವಿಷಯವೇಕೆ ಈಗ ಎತ್ತಿದೆ, ಮೋಹಿನಿ?”
“ಅಲ್ಲಾ, ಎಲ್ಲಾ ನಮ್ಮವರೆ ಅನ್ನುತ್ತಿರಾ..ಆದರೆ ಯಾಕೆ ಈ ತರದ ತಂತ್ರಾಂಶ ಬರೆದಾದಾಗ ಕನ್ನಡವನ್ನು ಜತೆಗೆ ಸೇರಿಸಲಿಲ್ಲ? ಇವರಾರಿಗೂ ಭಾಷ ಪ್ರೇಮ ಇಲ್ಲವೆ, ಅಥವ ಕನ್ನಡವನ್ನೆ ಮರೆತುಬಿಟ್ಟಿದ್ದಾರೊ ಹೇಗೆ? ಅದೇಕೆ ಆಂಗ್ಲದಿಂದ ಮಾತ್ರ ಚೀನಿಗೆ ಬದಲಾಯಿಸಲು ಮಾತ್ರ ಸಾಧ್ಯ? ಕನ್ನಡದಿಂದ ಚೀನಿಗೇಕೆ ಬದಲಿಸಲಾಗದು?”
ಮಡದಿಯ ಮುಗ್ದ ನುಡಿಗೆ ಗಹಿಗಹಿಸಿ ನಕ್ಕ ಮುದ್ದಣ್ಣ, “ನಲ್ಲೆ, ನೀ ಹೇಳುತ್ತಿರುವ ತಾಂತ್ರಿಕ ಸಾಧ್ಯಾಸಾಧ್ಯತೆಗಳನ್ನು ಬದಿಗಿಟ್ಟು ನೋಡಿದರೆ, ಕೇಳಲೆ ಕರ್ಣಾನಂದಕರವಾಗಿದೆ..ಅಹುದು, ಹಾಗೇನಾದರೂ ಅವರುಗಳು ಮಾಡಿದ್ದಿದ್ದರೆ, ನಮಗೀಗ ಇಷ್ಟು ಕಷ್ಟ ಪಡುವ ಪ್ರಮೇಯವಿರುತ್ತಿರಲಿಲ್ಲವೆನ್ನುವುದು ನಿಜ…ಆದರೆ, ಇವನ್ನೆಲ್ಲ ಮಾಡುವವರು ಗಿರಾಕಿಗಳ ಇಷ್ಟಕ್ಕನುಸಾರವಾಗಿ, ಅವರು ತೆರುವ ಬೆಲೆ ಮತ್ತು ವಿವರಕ್ಕನುಗುಣವಾಗಿ ನಡೆದುಕೊಳ್ಳಬೇಕು. ಹೀಗಾಗಿ ಅಲ್ಲಿ ಕನ್ನಡಕ್ಕೆ ಜಾಗ, ಸಮಯ ಇರುವುದಿಲ್ಲ…ಅಲ್ಲದೆ ಎಲ್ಲವನ್ನು ನಮ್ಮ ಜನರೆ ಮಾಡುವರೆಂದು ಹೇಳಲಾಗದು. ಈಗಂತೂ ಎಲ್ಲಾ ದೇಶಗಳವರೂ ಸೇರಿಯೆ ಮಾಡೆಲೆತ್ನಿಸುತ್ತಾರೆ..”
“ಆದರೂ ನಾನಿದನ್ನೊಪ್ಪಲೊಲ್ಲೆ ಮದನ… ನಮ್ಮವರು ಭಾಷಾಭಿಮಾನಕ್ಕಾದರೂ ಇದನ್ನು ಸ್ವಂತವಾಗಿಯಾದರೂ ಸರಿ- ಮಾಡಬೇಕು ಅಥವ ಪರದೇಶಿ ಪ್ರಭುತ್ವಗಳ ಹಾಗೆ ನಮ್ಮ ಪ್ರಭುತ್ವವೂ ಕನ್ನಡ ಕಡ್ಡಾಯವಾಗಿಸಬೆಕು; ಆಗ ಅದನ್ನು ಪಾಲಿಸುವ ಸಲುವಾಗಿಯಾದರೂ, ಈ ರೀತಿಯ ತಂತ್ರಾಂಶದ ಬಳಕೆ, ಉತ್ಪಾದನೆ ಇವೆಲ್ಲ ತಂತಾನೆ ಸಾಧ್ಯವಾಗುತ್ತದೆ…”
“ಪ್ರಿಯೆ, ಆ ವಿಷಯ ಹಾಗಿರಲಿ ಬಿಡು – ನಾವೀಗ ಮತ್ತೆ ಕಲಿಕೆಯ ವಿಷಯಕ್ಕೆ ಬರೋಣವೇನು, ಮನೋರಮಾದೇವಿಯವರೆ?”
“ಆಯಿತು ಮುದ್ದಣ್ಣನವರೆ….ಅದೇನು ಕಲಿಸಬೇಕೆಂದಿದ್ದಿರೊ, ಹೇಗೆ ಕಲಿಸಬೇಕೆಂದಿದ್ದಿರೊ ಕಲಿಸಿಬಿಡಿ…ಅದೂ ಒಂದು ಆಗಿಬಿಡಲಿ….ನನಗಂತು ನೀವು ಹೇಳಿದ್ದೆಲ್ಲಾ ಕೇಳಿಯೆ ತಲೆ ಕೆಟ್ಟಂತಾಗಿ ಹೋಗಿದೆ…”
“ಅದಕೆಂದೆ ನಾನು ನೇರ ಪದ ವಾಕ್ಯ ಕಲಿಕೆ ಬಳಕೆಗಿಳಿದಿದ್ದು…ಆದರೆ ಸತಿ ಶಿರೋಮಣಿಯವರು ತಾನೆ ಮೂಲದಿಂದ ಕಲಿಸಿ ಅಂತ ಅಪ್ಪಣೆ ಕೊಡಿಸಿದ್ದು…” ಛೇಡಿಕೆಯ ದನಿಯಲ್ಲಿ ನುಡಿದ ಮುದ್ದಣ್ಣನಿಗೆ, ಕೈಯಲಿದ್ದ ಬೀಸಣಿಗೆಯಿಂದ ಕೈಯೆತ್ತಿ ಹೊಡೆಯುವ ಹಾಗೆ ನಟಿಸುತ್ತ, “ಇವರ ಲಿಪಿಯೆ ಇಂಥಹ ಬ್ರಹ್ಮರಾಕ್ಷಸನೆಂದು ನನಗೇನು ಕನಸುಬಿದ್ದಿತ್ತೆ? ನಮ್ಮದರ ಹಾಗೆಯೆ ಅಂದುಕೊಂಡು ಕೇಳಿದೆನಷ್ಟೆ….ಇದರಿಂದಲಾದರೂ ಒಂದು ರೀತಿ ಅವರ ಅಕ್ಷರ ಸಂಸ್ಕೃತಿ,ಸಂಕೀರ್ಣತೆಯ ಪರಿಚಯವಾಯಿತಷ್ಟೆ…”
“ಅದೂ ನಿಜವೆನ್ನು…ಒಂದುಕಡೆ ಇದು ಅವರ ಸಂಕೀರ್ಣತೆಯ ಸಂಕೇತ, ಮತ್ತೊಂದೆಡೆ ಬಹುಶಃ ಆ ಸಂಕೀರ್ಣತೆಯ ಕಾರಣವಾಗಿಯೊ ಏನೊ, ಅನಿವಾರ್ಯವಾಗುವ ಸೃಜನಶೀಲತೆ, ಸೃಜನಾತ್ಮಕತೆ, ಕ್ರಿಯಾಶೀಲತೆಗಳ ಪರಿಣಾಮವಾಗಿ ತನ್ನದೆ ರೀತಿಯಲ್ಲಿ ಅರಳಿಕೊಳ್ಳುವ ಸಂಸ್ಕೃತಿ…ಇವೆರಡೂ, ಒಂದು ರೀತಿ ಪರಸ್ಪರ ತಾಕಲಾಟ, ತಿಕ್ಕಾಟದ ತುದಿಗಳು…ಅದೆ ಈ ಸಂಸ್ಕೃತಿಯ ವಿಶೇಷವೊ ಏನೊ….” ಹೀಗೆ ಸ್ವಂತಾಲೋಚನೆಯ ಆಳಕ್ಕಿಳಿದು ಕಳುವಾಗುತ್ತಿದ್ದ ಮುದ್ದಣ್ಣನನ್ನು ಪ್ರಿಯಸತಿಯ ದನಿ ಮತ್ತೆ ಐಹಿಕ ಜಗಕ್ಕೆಳೆ ತಂದಿತು…
“ಭಾವಪಂಡಿತರೆ, ತಮ್ಮ ಚಿಂತನಾ ಜಗದಿಂದ ಸ್ವಲ್ಪ ನಮ್ಮ ಜಗಕ್ಕಿಳಿದು ಬಂದು ನಿಮ್ಮ ಚೀಣಿ ಪಾಠವನ್ನು ಆರಂಭಿಸುವಿರಾ?”
” ಹೌದಲ್ಲವೆ? ನಾವು ಯಾವ ವಾಕ್ಯದೊಂದಿಗೆ ಆರಂಭಿಸಿದ್ದೆವು?”
“ಅದು ನಮಗೆಲ್ಲಿ ನೆನಪಿರಬೇಕು ಗುರುವರ್ಯರೆ? ನಾನು ಕೇಳಿದ್ದೆ ಕೇವಲ ಒಂದು ಬಾರಿಯೊ ಏನೊ? …. ಅದೆಂತದ್ದೊ ‘ ನೀವ್ ಹಾವಮ್ಮನೊ, ಹಲ್ಲಿಯಮ್ಮನೊ..’ ಅನ್ನೊ ತರ ಏನೊ ಕೇಳಿದ ನೆನಪು…..”
“ಹಹಹ್ಹ…ಅದು ಹಾವಮ್ಮ, ಹಲ್ಲಿಯಮ್ಮ ಅಲ್ಲಾ…’ನೀ ಹಾವ್ ಮಾ…’….ಹಾಗೆಂದರೆ ‘ನೀವು ಚೆನ್ನಾಗಿದ್ದೀರಾ?’ ಅಥವ ‘ನಮಸ್ಕಾರ’ ಅನ್ನೊ ಅರ್ಥದಲ್ಲಿ”
” ಅದೆಲ್ಲಾ ಯಾರಿಗೆ ಗೊತ್ತಾಗುತ್ತದೆ ನಲ್ಲಾ? ಹಾವು ಹಲ್ಲಿ ತಿನ್ನುವ ಜನವೆಂದು ಕೇಳಿದ್ದೇನಲ್ಲ, ಅದಕ್ಕೆ ಪದಗಳೂ ಹಾಗೆ ಇರಬಹುದೆಂದುಕೊಂಡೆ….”
” ಇಲ್ಲಾ ಪ್ರಿಯೆ, ಅಲ್ಲಿ ಪ್ರತಿ ಪದಕ್ಕೂ ಉದ್ದೇಶಪೂರಿತ ಅರ್ಥವಿರುತ್ತದೆ. ಈ ವಾಕ್ಯದಲ್ಲೆ ನೋಡು….’ನೀ’ ಅಂದರೆ ‘ನೀನು’ ಅಂತ”
“ಅರೆರೆ…! ಇದನ್ನ ನಮ್ಮ ಕನ್ನಡದಿಂದಲೆ ನೇರ ಎತ್ತಿಕೊಂಡ ಹಾಗೆ ಕಾಣುತ್ತಲ್ಲಾ? ‘ನೀ’ ಅಂದರೆ ‘ನೀನು’ ಅಂತಲ್ಲವೆ ನಮ್ಮ ಅರ್ಥ ಕೂಡಾ?”
“ಹೌದು ಜಾಣೆ …ಕನ್ನಡದಿಂದೆತ್ತಿಕೊಂಡಿರುವರೊ ಇಲ್ಲವೊ ನಾನರಿಯೆ..ಆದರೆ ಅರ್ಥ ಮತ್ತು ಉಚ್ಚಾರಣೆ ಮಾತ್ರ ಎರಡೂ ಒಂದೆ!”
” ಸರಿ ಸರಿ…ಹಾಗಾದರೆ ಆ ಹಾವಿಗೇನರ್ಥ?”
“ಹಹಹ್ಹ…ಅದು ನಮ್ಮ ಹಾವಲ್ಲ ಪ್ರಿಯೆ, ‘ಹಾವ್’ ‘ಹಾವ್’….”
“ಓಹೊಹೊ! ನಮ್ಮ ದನ ಕಾಯುವವರು ಹೋರಿ, ಹಸುಗಳನ್ನೋಡಿಸುವಾಗ ‘ಹಾವ್ ಮಾ, ಹಾವ್ ಮಾ’ ಅನ್ನುತ್ತಾರಲ್ಲಾ.. ಹಾಗೇನು?”
” ಹೆಚ್ಚು ಕಡಿಮೆ ಆ ರೀತಿಯೆ ಅನ್ನು…ಇಲ್ಲಿ ‘ಹಾವ್’ ಅಂದರೆ ‘ಚೆನ್ನಾದ, ಒಳ್ಳೆಯ’ ಎಂದರ್ಥ…”
“ಹಾಗಾದರೆ ಈ ‘ಮ’ ಅನ್ನುವುದರ ಅರ್ಥವೇನು?”
“ಇಲ್ಲಿ ‘ಮಾ’ ಅನ್ನುವುದರ ಅರ್ಥ ಕೇವಲ ಪ್ರಶ್ನಾರ್ಥ ಸೂಚಕ…ವಾಕ್ಯದ ಕೊನೆಯಲ್ಲಿ ಈ ‘ಮಾ’ ಬಂದರೆ ಅದು ಪ್ರಶ್ನೆಯೆಂದರ್ಥ… ಆದರೆ….”
“ಆದರೆ…?”
” ಅದು ನೀನ್ಹೇಳಿದ ‘ಮ’ ಅಲ್ಲಾ, ಬದಲು ‘ಮಾ’ ಅಂತ ರಾಗವಾಗಿ ಎಳೆಯಬೇಕು….ಆಗಲೆ ದನಿ ಪುರಾಣದ ಕುರಿತು ಹೇಳಿದ್ದೇನಲ್ಲಾ, ಹಾಗೆ…”
“ಅದೇನು ‘ಮ’ ಗೂ ‘ಮಾ’ ಗೂ ಅಷ್ಟೊಂದು ವ್ಯತ್ಯಾಸ?”
“ಅಯ್ಯೊ ಚೆನ್ನೆ! ಅಗಾಧ ವ್ಯತ್ಯಾಸವಾಗಿಬಿಡುತ್ತದೆ! ನಾನು ಒಂದೆ ತರಹವಿರುವ ಪದ, ಆದರೆ ಧ್ವನಿ / ಸ್ವರದ ಮೇಲೆ ಬೇರೆ ಬೇರೆ ಅರ್ಥ ಕೊಡುವುದರ ಕುರಿತು ಹೇಳಿದ್ದೆನಲ್ಲವೆ, ನೆನಪಿದೆಯಾ?”
“ಹೌದು..ನೆನಪಿದೆ….”
“ಈ ಪದವೂ ಅದಕ್ಕೊಂದು ಉದಾಹರಣೆ…ಮಾ ಎನ್ನುವ ಪದದ ಅರ್ಥ – ಪ್ರಶ್ನಾರ್ಥಕವಾಗಬಹುದು, ಮತ್ತೊಂದು ‘ಮಾ’ ಎಂದರೆ ‘ತಾಯಿ’ಯೆಂದೂ ಆಗಬಹುದು; ಮತ್ತೊಂದು ‘ಮಾ’ ದ ಅರ್ಥ ‘ಕುದುರೆ’ ಎಂದೂ ಇದೆ! ಧ್ವನಿ ಸ್ವರದ ಅನುಸಾರವಾಗಿ ಅರ್ಥವೂ ಬೇರೆಯಿರುತ್ತದೆ….ಇದಿಷ್ಟೂ ಸಾಲದೆಂಬಂತೆ ಕೆಲವೊಮ್ಮೆ ಪ್ರತಿ ಅರ್ಥವೂ ಸಂಧರ್ಭಾನುಸಾರವಾಗಿ ಬೇರೆಯೆ ಆಗಿರುತ್ತದೆ – ಒಂದೆ ಲಿಪಿ ಅಥವ ಒಂದೆ ಸ್ವರವಿದ್ದರೂ ಸಹ..!”
“ದೇವರೆ! ಹಾಗಾದರೆ ಉಚ್ಚಾರಣೆ ಸರಿಯಿಲ್ಲವೆಂದಾದಲ್ಲಿ ಅರ್ಥವೆ ಬದಲಾಗಿ ಹೋಗುವುದಲ್ಲಾ….? …ಪರಮೇಶ!”
“ನಿಜ…ಇದರಲ್ಲೆ ನೋಡು – ನೀನು ಸರಿಯಾಗಿ ಹೇಳದಿದ್ದರೆ ‘ನೀ ಹಾವ್ ಮಾ’ದ ಅರ್ಥ ‘ನೀನು ಚೆನ್ನಾಗಿದ್ದಿಯಾ?’ ಅಂತಾಗುವುದರ ಬದಲು ‘ ನೀನು ಒಳ್ಳೆ ಕುದುರೆ’ ಎಂದಾಗಿಬಿಡುತ್ತದೆ!”
“ಅಥವಾ ‘ನೀನು ಒಳ್ಳೆ ಅಮ್ಮ’ ಅಂತಲೂ ಆಗಿಬಿಡಬಹುದು…”
“ಹೌದು…ಆದರೂ ಕೆಲವು ಕಡೆ, ನಡುನಡುವೆ ಕೆಲವು ಬಂಧ ಪದಗಳೊ, ಅಕ್ಷರಗಳೊ ಸೇರಿಕೊಂಡು ಗುರುತಿಸಲು ಅನುಕೂಲ ಮಾಡಿಕೊಡುತ್ತವೆ…ಉದಾಹರಣೆಗೆ, ‘ನೀನು ಒಳ್ಳೆ ಅಮ್ಮ’ ಅನ್ನುವುದನ್ನು ‘ ನೀ (ಹಾವ್ + ದ) ಮಾ = ನೀ ಹಾವ್ದ ಮಾ’ ಅನ್ನಬಹುದು; ಇಲ್ಲಿ ‘ದ’ ಆ ಬಂಧಪದದ ಕೆಲಸ ಮಾಡುತ್ತದೆ (‘ಒಳ್ಳೆ’ ಹೋಗಿ ‘ಒಳ್ಳೆಯ’ ಆಗುತ್ತದೆ). ಅದೇ ರೀತಿ ಕುದುರೆಗೂ ‘ಹಾವ್ದ’ ಸೇರಿಸಬಹುದು – ಆದರೆ ಉಚ್ಚಾರಣೆಯ ಸ್ವರ ದನಿ ಮಾತ್ರ ಎರಡು ‘ಮಾ’ಗಳಿಗೂ ಬೇರೆ ಬೇರೆ!”
“ಪತಿ ದೇವ ಹಾಗಾದರೆ ಈ ಮೂರು ‘ಮಾ’ಗಳನ್ನು ಬರೆವ ಲಿಪಿಯು ಒಂದೆ ಇರುತ್ತದೇನು?”
“ಇಲ್ಲ ಚಕೋರಿ…ಈ ಮೂರರ ಲಿಪಿ ಬರೆವ ರೀತಿ ಬೇರೆ ಬೇರೆ…ಅದರಿಂದಾಗಿ, ಈ ಭಾಷೇ ಓದಲು, ಬರೆಯಲು ಬಲ್ಲವರಿಗೆ ಅಷ್ಟು ಕಷ್ಟವಾಗುವುದಿಲ್ಲ, ಗುರುತಿಸಲಿಕ್ಕೆ… ನಾವಾದರೊ ಬರಿ ಮಾತಾಟಕ್ಕೆ ಕಲಿಯ ಹೊರಟಿರುವ ಕಾರಣ, ನಮಗೆ ತುಸು ತ್ರಾಸದಾಯಕವಷ್ಟೆ….”
” ಈ ಭಾಷೆ ಕಲಿಯುವುದು ಯಾಕೆ ಕಷ್ಟಕರವೆಂದು ನನಗೀಗ ಕೊಂಚ ಕೊಂಚ ಅರ್ಥವಾಗುತ್ತಿದೆ ಪತಿದೇವ”
” ಹೌದು ಚೆನ್ನೆ…ಉದಾಹರಣೆಗೆ ನೀನು ಬರಿ ‘ಹಾವ್ದಾ, ಹಾವ್ದಾ’ ಅನ್ನೊ ಪ್ರಯೋಗವನ್ನ ಬಳಸಿದರೆ – ಅದರರ್ಥ ‘ಒಳ್ಳೇದು, ಒಳ್ಳೇದು’ ಅಥವಾ ‘ ಆಯ್ತು ನಡಿ..’ ಅಂತಲೊ ಆಗಬಹುದು – ಎಲ್ಲ ಸಂಧರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ…”
” ನನಗೆ ಈಗ ಅರ್ಥವಾಗುತ್ತಿದೆ, ನೀವೇಕೆ ನೇರವಾಗಿ ಆಡು ಭಾಷೆಯ ಹಾಗೆ ಕಲಿಸಲ್ಹೊರಟಿರಿ ಅಂತ…ಇಲ್ಲಿ ಅ ಆ ಇ ಈ ಯ ಹಾಗೆ ಕ್ರಮಬದ್ಧವಾಗಿ ಕಲಿಯಲು ಆಗುವುದೆ ಇಲ್ಲ.. ಒಂದು ರೀತಿ ಎಲ್ಲಿ, ಹೇಗೆ ಬೇಕಾದರೂ ಆರಂಭಿಸಿ ಕಲಿತುಕೊಳ್ಳಬಹುದು..ಅಲ್ಲವೆ?”
“ಒಂದು ರೀತಿ ನಿನ್ನ ಮಾತು ನಿಜವೆ ಚಿನ್ನಾ… ಈ ಭಾಷೆ ಕಲಿಯ ಹೊರಟವರು, ತಾರ್ಕಿಕವಾದ ಎಡ ಮಸ್ತಿಷ್ಕದ ಆಸರೆಯಿಡಿದು ಕಲಿಯ ಹೊರಟರೆ ಬಹಳ ಕಷ್ಟಪಡಬೇಕಾಗುತ್ತದೆ ಎಂದೆ ನನ್ನ ಭಾವನೆ..ಬದಲಿಗೆ ಸೃಜನಾತ್ಮಕ ಬಲಮೆದುಳಿನ ಚಿಂತನೆಯಲ್ಲಿ ಕಲಿಯ ಹೊರಟು, ಅದರ ಪರಿಧಿಯಲ್ಲೆ ಬೇಕಾದ ಕಡೆ ಎಡಮೆದುಳಿನ ತಾರ್ಕಿಕತೆಯನ್ನು ಬೆರೆಸುತ್ತಾ ಕಲಿತರೆ, ಈ ಭಾಷೆಯನ್ನು ಅರಗಿಸಿಕೊಳ್ಳುವುದು ಸುಲಭವಾದೀತು…”
“ಸರಿ ಸರಿ ಸಾಕು ಮಾಡು ಪ್ರಿಯ, ನಿನ್ನ ಎಡಬಲ ಮೆದುಳಾಟ…ಅದೆಲ್ಲ ನನ್ನ ಪುಟ್ಟ ಮೆದುಳಿಗೆ ಅರ್ಥವಾಗುವಂತಾದ್ದಲ್ಲ…ಅಡ್ಡಾದಿಡ್ಡಿ ಕಲಿತರೂ ಕಲಿಯಬಹುದಾದ ಭಾಷೆ ಎಂದಷ್ಟೆ ನಾನಂದದ್ದು…ಅದನ್ನು ಬದಿಗಿಟ್ಟು ನಿನ್ನ ಪಾಠ ಮುಂದುವರೆಸು..ಅವರು ‘ನೀ ಹಾವ್ ಮಾ’ ಅಂದರೆ ನಾವೇನನ್ನಬೇಕು? ನಮ್ಮ ನಮಸ್ಕಾರದ ತರ ಅದನ್ನೆ ಹೇಳಬೇಕೆ?”
“ಚತುರ ಮತಿ…ನಿನ್ನೆಣಿಕೆ ನಿಜ….ಆದರೆ ದಿನನಿತ್ಯದ ಆಡುಭಾಷೆಯಲ್ಲಿ ಅವರು ಸಾಮಾನ್ಯವಾಗಿ ‘ನೀ ಹಾವ್ ಮಾ?’ ಅನ್ನುವುದಿಲ್ಲ… ಬದಲಿಗೆ ಚಿಕ್ಕದಾಗಿ ‘ ನೀ ಹಾವ್’ ಅನ್ನುತ್ತಾರೆ, ನಾವು ಕೂಡ ಉತ್ತರವಾಗಿ ‘ನೀ ಹಾವ್’ ಅನ್ನಬೇಕು….”
“ಪಾಂಡುರಂಗಾ…ಇದು ಚೆನ್ನಾಗಿದೆ! ನಮಸ್ಕಾರ ಹೇಳುತ್ತ ಅವರಿಗೆ ‘ ನೀನು ಹಾವು’ ಅಂದು ಬೈಯ್ಯುವುದು, ಅವರು ನಮಗೆ ತಿರುಗಿಸಿ ‘ನೀನೂ ಹಾವು’ ಅಂತ ಬೈಯುವುದು… ಇದೇನು ನಮಸ್ಕಾರವೊ, ಬೈದಾಟವೊ….ನಾ ಕಾಣೆ..”
“ಸಖಿಲೇಖಿಣಿ, ಇದು ಬೈದಾಟವಲ್ಲ ಅವರ ಭಾಷೆಯಲ್ಲಿ ವಿನಿಮಯವಾಗುವ ನಮಸ್ಕಾರ…”
” ಅದನ್ನು ನಾಬಲ್ಲೆ ದೊರೆ, ಆದರೆ ನಾನಾಡುವಾಗ ಅದನ್ನು ಕನ್ನಡ ಮನಸಿನಲ್ಲೆ ಹೇಳುವುದು ತಾನೆ? ಹೀಗಾಗಿ ಕನ್ನಡಾರ್ಥವೆ ಮನದಲಿ ಮೂಡುವುದು ಸಹಜ ತಾನೆ? ಹೋಗಲಿ ಬಿಡಿ…ಅದು ಹಾಳಾಯ್ತು… ಮುಂದುವರೆಸಿ ನಿಮ್ಮ ಬಲ ಮಸ್ತಿಷ್ಕ ಪುರಾಣ ಪ್ರವಚನವನ್ನ..”
” ಆಹಾ ನನ್ನ ಪ್ರಿಯ ಕನ್ನಡಸತಿ, ಅಚ್ಚ ಕನ್ನಡತಿ! ನಿನ್ನ ಕನ್ನಡ ಪ್ರೇಮ, ಭಾಷಾಭಿಮಾನ ನನ್ನನ್ನು ನಿಜಕ್ಕೂ ಮೂಕವಿಸ್ಮಿತನನ್ನಾಗಿಸಿ ಹೆಮ್ಮೆ ಪಡುವಂತೆ ಮಾಡುತ್ತಿದೆ…ನಿನ್ನ ಕೈ ಹಿಡಿದ ನಾನೆ ಧನ್ಯನೆನಲೆ?…ಈಗ ಮುಂದಿನ ಕಲಿಕೆ ತುಸು ಸುಲಭವಾದದ್ದು..ಯಾರಾದರೂ ದೂರವಾಣಿಯಲ್ಲಿ ಮಾತಾಡಿದರೆ ಹೇಗೆ ಆರಂಭಿಸಬೇಕು ಎಂದು….”
” ದೂರವಾಣಿಯೊ ..ದೂರುವಾಣಿಯೊ…ಸರಿ,ಸರಿ; ಅಂದಹಾಗೆ ದೂರವಾಣಿ ಅನ್ನಲು ಚೀಣಿ ಭಾಷೆಯಲ್ಲಿ ಏನನ್ನಬೇಕು ಪ್ರಿಯ?”
“ಅದು ಸರಿಯಾದ ಪ್ರಶ್ನೆ…ದೂರವಾಣಿಗೆ ‘ದಿಯನ್ ಹ್ವಾ’ ಅನ್ನಬೇಕು…”
” ಏನು ‘ದಿಯನ್ವಾ’ವೆ?”
” ಓ ರಮಣಿ, ಹಾಗೆ ಒಟ್ಟುಗೂಡಿಸಿ ಹೇಳಿದರೆ ಅರ್ಥವೆ ಬದಲಾಗಿ ಹೋದೀತು..ಅದು ‘ದಿಯನ್’ + ‘ಹ್ವಾ’ . ಇಲ್ಲಿ ಹ್ವಾ – ಎಂದರೆ ಮಾತು, ದಿಯನ್ – ಅನ್ನುವುದು ‘ದೂರದಿಂದ’ ಅನ್ನುವ ಅರ್ಥ, ಹೀಗೆ ದೂರದಿಂದಾಡುವ ಮಾತಿಗೆ ‘ದಿಯನ್ ಹ್ವಾ’ ಅರ್ಥಾತ್ ದೂರವಾಣಿ ಅನ್ನುತ್ತಾರೆ…”
“ದೂರವಾಣಿ ಕರೆ ಮಾಡುತ್ತೇನೆ – ಅಂತ ಹೇಳುವುದು ಹೇಗೆ?”
“ದಾ ದಿಯನ್ ಹ್ವಾ…’ದಾ’ ಜತೆಗೆ ಸೇರಿಸಿಕೊಂಡರೆ ಸಾಕು…’ದೂರವಾಣಿ ಕರೆ ಮಾಡುತ್ತೇನೆ’ ಅಂತ ಅರ್ಥ ಬರುತ್ತದೆ. ಇನ್ನು ಸ್ಪಷ್ಟವಾಗಿ ಹೇಳಬೇಕಿದ್ದರೆ, ‘ ವೋ ಗೇ ನಿ ದಿಯನ್ ಹ್ವಾ’ ಅನ್ನಬೇಕು…ಅಂದರೆ, ‘ ನಾನು ನಿನಗೆ ಕರೆ ಮಾಡುವೆ ‘ ಎಂದರ್ಥ”
ತಟ್ಟನೆ ಬಂದ ಹೊಸ ಪದಗಳ ಧಾರೆಯಿಂದ ವಿಚಲಿತಳಾದಂತೆ ಕಂಡ ಮುದ್ದಿನ ಮಡದಿಯನ್ನೆ ಗಮನಿಸುತ್ತಿದ್ದ ಮುದ್ದಣ್ಣ ಹಿಂದೆಯೆ ಸೇರಿಸಿದ – “ನೀ – ಅಂದರೆ ‘ನೀನು’ ಅಂತ ಗೊತ್ತೆ ಇದೆ; ಹೊಸ ಪದವೆಂದರೆ ‘ವೊ’ – ಅರ್ಥಾತ್ ‘ನಾನು’ ಎಂದರ್ಥ; ‘ಗೆ’ ಅಂದರೆ ‘ಕೊಡು’ ‘ಕೊಡಮಾಡು’ ಎಂದರ್ಥ…ಇದೆಲ್ಲ ಸೇರಿಸಿದರೆ ‘ನಾನು ನಿನಗೆ ಕರೆ ಮಾಡುವೆ’ಎಂದಾಗುತ್ತದೆ…”
ಕೇಳುತ್ತ ಕುಳಿತಿದ್ದ ಮಡದಿ ಆಕಳಿಸಿದಳು. ಅದನ್ನು ಕಂಡ ಮುದ್ದಣ್ಣ , “ಪ್ರಿಯೆ, ಇದಾಗಲೆ ಬಹಳವಾಯ್ತೆಂದು ಕಾಣುತ್ತದೆ; ಇಂದಿಗೆ ಸಾಕು ಮಾಡೋಣವೆ?”ಎಂದು ಕೇಳಿದ. ಅದಕ್ಕುತ್ತರವಾಗಿ ಮನೊರಮೆಯು, “ಹೌದು ಪ್ರಿಯ ಇದು ತುಂಬ ಭಾರವಾಗುವ ಹಾಗೆ ಕಾಣಿಸುತ್ತಿದೆ…ತಾರ್ಕಿಕವಾಗಿ ತಂದು ನಿಲ್ಲಿಸಿಬಿಡು..ನಂತರ ನಾಳೆ ಮುಂದುವರಿಸೋಣ.. ”
“ಸರಿ ಹಾಗಾದರೆ ಇನ್ನೆರಡು ಪದ ಕಲಿತು ಇವತ್ತಿಗೆ ಮುಗಿಸೋಣ…”
“ಸರಿ ಪ್ರಿಯ…”
“ಮೊದಲನೆಯದು ಫೋನಿನಲ್ಲಿ ಕರೆ ಬಂದಾಗ ‘ಹಲೋ’ ಎನ್ನುವುದು…”
“ಆಹಾ..”
” ಇದಕ್ಕೆ ‘ವೇಯ್’ ಅನ್ನುತ್ತಾರೆ… ಉದಾಹರಣೆಗೆ, ಯಾರಿಗಾದರೂ ಕರೆ ಮಾಡಿದರೆ, ‘ ವೇಯ್, ನೀ ಹಾವ್’ ಎಂದೆ ಆರಂಭಿಸುತ್ತಾರೆ
‘ ಮತ್ತೆ ಮುಗಿಸಿ ಕೊನೆಗೊಳಿಸಬೇಕಾದರೆ ‘ ಜೈ ಜಿಯನ್’ ಅನ್ನುತ್ತಾರೆ….’ಬೈ’ ಅನ್ನುವ ಅರ್ಥದಲ್ಲಿ….”
ಅಷ್ಟರಲ್ಲಾಗಲೆ ತೂಗುತ್ತಿದ್ದ ಕಮಲದಾ ಕಣ್ಣುಗಳು, ಇನ್ನು ರೆಪ್ಪೆಗಳ ಭಾರವನ್ನೂ ಸಹ ತಡೆಯಲಾರೆ ಅನ್ನುವಂತೆ, ಬಲವಂತದಿಂದ ತೆರೆದಿಡಲು ಯತ್ನಿಸುತ್ತಿದ್ದ ಮನೋರಮೆಯ ಯತ್ನವನ್ನೂ ಮೀರಿ ಮುದುಡಿ ಮುಚ್ಚಿಕೊಳ್ಳಲು ಅಣುವಾಗುತ್ತಿದ್ದವು. ಹೀಗಾಗಿ ಮುದ್ದಣ್ಣನ ನುಡಿಗಳನ್ನು ನಿದ್ದೆಗಣ್ಣಲ್ಲೆ ಆಲಿಸಿದ ಮನೋರಮೆ, ತೂಕಡಿಕೆಯ ದನಿಯಲ್ಲೆ, “ಜೈ ಜಿಯನ್” ಅಂದಳು..!
ಅದನ್ನು ನೋಡಿದ ಮುದ್ದಣ್ಣ ಪುಸ್ತಕ ಮುಚ್ಚಿಡುತ್ತಾ, “ಆಯ್ತು ನಲ್ಲೆ, ನಾಳೆ ಮುಂದುವರಿಸೋಣ…ಈಗಾಗಲೆ ಬಹಳ ತಡವಾಗಿಹೋಗಿದೆ..ಶುಭರಾತ್ರಿ, ಪ್ರಿಯೆ” ಎಂದು ಹೇಳಿ, ಮಲಗುತ್ತಿದ್ದ ಸತಿಯ ಮೇಲೊಂದು ಚಾದರವನ್ಹೊದಿಸಿದವನೆ ತಾನೂ ಮಲಗಲಣಿಯಾಗತೊಡಗಿದ.
(ಮುಕ್ತಾಯ)
ಕಥೆ ಕೇಳಿದ, ಚೀನಿ ಭಾಷೆಯ ಕಲಿತ ಮನೋರಮೆ ಮುದ್ದಣನಿಗೆ ಮುತ್ತಿನ ಸತ್ತಿಗೆಯನಿತ್ತಳೋ ಇಲ್ಲವೋ ಗೊತ್ತಿಲ್ಲ. ಆದರೆ ಶೃಂಗಾರ ದೃಶ್ಯ ಕಾವ್ಯದ ರಸದೌತಣವನ್ನಂತೂ ಬಡಿಸಿದಿರಿ.ಪದ ಲಾಸ್ಯದ ಝರಿಯ ಸೆಳೆತಕ್ಕೆ ಕೊಚ್ಚಿ ಹೋಗಿದ್ದಂತೂ ನಿಜ. ನಿರಂತರವಾಗಿ ನಡೆಯಲಿ ಸಾಹಿತ್ಯ ಸೇವೆ. ನಿಮ್ಮ ವಿನೂತನ ಶೈಲಿಯ ಸಾಹಿತ್ಯ ರಸಗವಳದ ನಿರೀಕ್ಷೆಯಲಿ…….ಮಧುಸ್ಮಿತ
LikeLiked by 1 person
ನಿಮ್ಮ ಮೆಚ್ಚುಗೆಯ ಭಾವಜರಿಯಲ್ಲಿ ಮಿಂದು ಕೃತಾರ್ಥ ಭಾವ ! ಖಂಡಿತ ಯತ್ನಿಸುವೆ – ಧನ್ಯವಾದಗಳು 🙏😊👍
LikeLike