00077. ಮೋಡ ಚುಂಬನ..ಗಾಢಾಲಿಂಗನ..

0077. ಮೋಡ ಚುಂಬನ..ಗಾಢಾಲಿಂಗನ..
____________________________


ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ.

ಮೋಡಗಳು ಗಗನದಲಿ ಕಟ್ಟುವ ಶಿಲ್ಪಕಲಾ ವೈಭವವೆ ಅಸಾಧಾರಣ. ಅಂತಿಲ್ಲಿ ಒಂದಕ್ಕಿಂತ ಹೆಚ್ಚು ಮೋಡ ಸಮೂಹ ಪರಸ್ಪರ ಹಾದು, ಸಂಧಿಸಿ, ಮಾತನಾಡಿ, ಅಪ್ಪಿಕೊಂಡು, ಕೆಳೆಯಾಗಿ ಸರಸವಾಡುವ ಚುಂಬನದಾಟದಲಿ ಪ್ರಣಯ ಕೇಳಿಯಾಡುವ ಮೊದಲ ಭಾಗ ‘ ಮೋಡ ಚುಂಬನ’

ಆದರೆ ಈ ಪ್ರಣಯದಾವೇಗ ಮಳೆ ಪ್ರಳಯದಾವೇಗವಾಗಲಿಕ್ಕೆ ಎಷ್ಟು ಹೊತ್ತು ಬೇಕು? ಮೋಡತಾಡನ ಪ್ರಣಯೋತ್ಕರ್ಷಕೆ ಕಾವೇರಿಸಿ ಬಿಸಿಯಪ್ಪುಗೆಯ ವಿದ್ಯುತ್ಕಾಂತ ಸಮ್ಮಿಲನದ ಸೊಗಡುಡಿಸಿ, ಪರಸ್ಪರರಲ್ಲಿ ಸಂಗಮಿಸಿ ಕರಗಿಹೋಗುವಾಗ ಮಳೆಯಾಗದಿರಲು ಸಾಧ್ಯವೆ? ಆಕರ್ಷಣೆಯ ಘರ್ಷಣೆ ಮಿಂಚಾಗಿ ಹೊರಳದಿರಲು , ಗುಡುಗು – ಸಿಡಿಲಾಗಿ ಸುಳಿಯದಿರಲು ಆದೀತೆ? ಆ ಸಂಕ್ರಮಣವನ್ನೆಲ್ಲ ಒಟ್ಟುಗೂಡಿಸಿ ಬೆಸೆದ ಭಾವ ಎರಡನೆ ಭಾಗವಾದ ‘ ಗಾಢಾಲಿಂಗನ’ದಲ್ಲಿ ಮೂಡಿದೆ

‘ 1. ಮೋಡ ಚುಂಬನ…..’
________________


ಚುಕ್ಕೆ ಮೂಡದಲೆ ಇರುಳ
ಮುಗಿಲರೆ ಸಂಜೆಗೆ ಕೊರಳ
ಅಪ್ಪಿದ ಆಗಸದಲಿ ಸರಳ
ಮೇಘದಲೆ ಮುತ್ತಿನ್ಹರಳಾ ||

ಗುಡಿ ಗೋಪುರ ಕಟ್ಟಿದಂತೆ
ಮೋಡಗಳೆ ಚಿತ್ತಾರವಂತೆ
ಸುಯ್ಗಾಳಿಗೆದ್ದ ತರಗಲೆಗೆ
ಧೂಳೆಬ್ಬಿಸಿ ನರ್ತಿಸೊ ಬಗೆ ||

ದೂರದಲೆಲ್ಲೊ ಚಂದ್ರಮನ
ಬೆಳ್ಬೆಳದಿಂಗಳ್ಹಾಲ್ದೊರೆತನ
ಚೆಲ್ಲಾಡಿದ ಬೆಳಕಿನ ಹುತ್ತ
ಕಣೆ ಕಟ್ಟಿದೆ ಮೋಡ ಸುತ್ತ ||

ಬೆಳ್ವಲದಾ ಪ್ರಜ್ವಲ ವೈಭವ
ದಿಗ್ಭ್ರಮಿಸಿತೆ ಜ್ವಾಲಾಹಲವ
ವಿನ್ಯಾಸವೆ ಅದ್ಭುತವೆ ಸರಿ
ಗಗನದಲೆ ಕಟ್ಟಿದಾ ನಗರಿ ||

ಆ ಹೊತ್ತಿಗೆ ಆವಾಹನ ದಿನ
ಎಲ್ಲಿತ್ತೋ ಆವೇಶದ ಸದನ
ಸರಸರ ಹತ್ತಿರಕೆ ಸರಿದಾಡಿ
ನೆಗೆದು ಮೋಡ ಕೆಳೆ ಕೂಡಿ ||

– ನಾಗೇಶ ಮೈಸೂರು 
‘2………..ಗಾಢಾಲಿಂಗನ’
________________


ಧುತ್ತನೆ ಘನ ಗಾಡಾಲಿಂಗನ
ಅಪ್ಪಿದಲೆ ಮೋಡ ಚುಂಬನ
ಸುರುಳಿ ಸುತ್ತಿ ಸರ್ಪ ಸಖ್ಯ
ವರಿಸಿದಂತೆ ಸುಮೇಘ ದೃಶ್ಯ ||

ಆಲಿಂಗನದಲಿರಲು ರೌದ್ರತೆ
ಸಲ್ಲೇಖನದಂತೆ ಮುದ ಕಥೆ
ಮೈ ಮುರಿಸಿದ ಬಿಗಿಯಪ್ಪಿಗೆ
ಮಳೆಯಾಗದಿರದೇ ತಪ್ಪಿಗೆ ? ||

ಸಮ್ಮಿಲನದ ಶಾಖೋತ್ಕರ್ಷ
ಸ್ಪರ್ಶಕೆರಗಿದ ಕಿಡಿ ಸಂಘರ್ಷ
ಚುಂಬನ ತಾಡನ ಸುಹರ್ಷ
ಸಿಡಿಲ್ಗುಡುಗು ಮಿಂಚರಿಸೀಶ ||

ಹಿಡಿಯಲೆಷ್ಟೊತ್ತಾನೆ ರಸಿಕ
ಬಿಟ್ಟು ಬಿಡದಲೇ ಒಳ ಸುಖ
ಕಡೆ ಬಿಟ್ಟಾಗಲೆ ವರ್ಷ ವಾಕ
ಸುಖರತಿ ಫಲಿತ ಮಳೆಸಖ ||

ವಿಳಂಬಿತ ವಿಜೃಂಭಿತ ರತಿ
ಧಾರಾಕಾರದ ಮಳೆ ಗರತಿ
ಪ್ರಣಯಿಗಳಲಿ ಹಚ್ಚಿ ಪ್ರಣತಿ
ಪ್ರೇಮ ಕಾಮೋದ್ರೇಕಕೆ ಸ್ವಸ್ತಿ ||

– ನಾಗೇಶ ಮೈಸೂರು 

(ಸಂಪದದಲ್ಲಿ ಪ್ರಕಟಿಸಿದ ಬರಹ)
( 05.08.2013)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s