01724. ಹೆಣ್ಣ ನೋಡೆ ಬಂದನಲ್ಲ..!


01724. ಹೆಣ್ಣ ನೋಡೆ ಬಂದನಲ್ಲ..!

____________________________

ನೋಡಲು ಬಂದವನೆ

ಹೆಣ್ಣ ನೋಡಲು ಬಂದವನೆ

ನೋಡಲೆಂತೆ ನಾ ತಗ್ಗಿಸೆ ಶಿರವ ?

ಕದ್ದು ನೋಡಿದರು ಮಬ್ಬಾಗಿ ಕಾಣುವ ||

ಸೂಟುಬೂಟಲಿ ಠಾಕುಠೀಕು

ಗತ್ತಿನಪ್ಪ ಅಮ್ಮನ ಜತೆಗೆ ನಾಕು

ಸುರ ಸುಂದರಾಂಗ ಚಿಗುರು ಮೀಸೆ

ನನ್ನ ನೋಡಬಂದ ಮೊಗ ನೋಡುವಾಸೆ ||

ಹೆಬ್ಬಾಗಿಲ ಹಾದು ಅಂಗಳ ದಾಟಿ

ಬಂದು ಕೂತನಲ್ಲ ಸಿನಿಮೀಯ ಧಾಟಿ

ಅಡಿಗೆ ಮನೆಯ ಕಿಟಕಿಯಲಿ ಇಣುಕಾಟ

ಕಾಣಲೊಲ್ಲನವ ಬೆನ್ನು ಹಾಕಿ ಕೂತಾ ನಗುತ ||

ನಡುಗಿತ್ತಲ್ಲೆ ಕಾಲ ಹೆಜ್ಜೆ ನಡಿಗೆ

ಗಮನವೆಲ್ಲ ಹಾಲ ಲೋಟದೆಡೆಗೆ

ನೋಡಲೆಲ್ಲಿ ಧೈರ್ಯ ಕೊಟ್ಟಿದ್ದೆ ಅರಿಯೆ

ಹೇಗೋ ನೋಡಿದ್ದು ಕಂಡದ್ದು ಅರೆಬರೆಯೆ! ||

ಈ ಬಾಗಿಲಿಂದೀಗ ಕಾದಿಹೆನು ಇಣುಕೆ

ಹೊರಟವನ ಗುಟ್ಟಲಿ ಕಾಣುವ ಹವಣಿಕೆ

ನಿಂತೆ ತುದಿಗಾಲಲಿ ಕಾತರದ ಚಂದ್ರಮುಖಿ

ಎದೆಯ ಕುತೂಹಲ ತಣಿದಾಗ, ನಿರ್ಧಾರ ಬಾಕಿ! ||

– ನಾಗೇಶ ಮೈಸೂರು

೧೩.೦೫.೨೦೧೮

(Picture source : internet / social media received via Bhaskaraks Ksbhaskara – thank you 🙏👍😊💐🌹)

01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)


01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

________________________________________________

ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ ಬಾರಿಯಾದರೂ ಸ್ವಲ್ಪ ‘ಜೋರಾಗಿ’ ಆಚರಿಸಿ ಪಾರ್ಟಿ ಕೊಡಿಸಲಿ ಎಂಬುದು ಅವನಾಸೆ. ನನಗೊ ಹುಟ್ಟಿದಾಗಿನಿಂದ ಇಲ್ಲಿಯತನಕ ಹುಟ್ಟಿದ ಹಬ್ಬ ಆಚರಿಸಿಕೊಂಡ ನೆನಪೆ ಇಲ್ಲ ಅನ್ನುವುದು ಬೇರೆ ಮಾತು ಬಿಡಿ – ಪ್ರಾಯಶಃ ನನಗೆ ಗೊತ್ತಾಗದ ವಯಸಿನಲ್ಲಿ ಹೆತ್ತವರು ಮಾಡಿಕೊಂಡ ‘ನಾಮಕರಣದ’ ಆಚರಣೆಯನ್ನು ಹೊರತುಪಡಿಸಿದರೆ! ನಾವು ಬೆಳೆದ ವಾತಾವರಣ ಎಷ್ಟು ಸೊಗಡಿನದಾಗಿತ್ತು ಎಂದರೆ, ಹುಟ್ಟಿದ ದಿನವೆನ್ನುವುದೆ ಯಾರಿಗು ನೆನಪಿನಲ್ಲಿರುತ್ತಿರಲಿಲ್ಲ. ಹೈಸ್ಕೂಲಿನ ಮಟ್ಟಕ್ಕೆ ಬಂದು ‘ಹ್ಯಾಪಿ ಬರ್ತಡೆ ಟು ಯೂ’ ಎಂದು ಇಂಗ್ಲೀಷಿನಲ್ಲಿ ಹೇಳಿ ಎಲ್ಲರ ಮುಂದೆ ‘ಗ್ರೇಟ್’ ಅನಿಸಿಕೊಳ್ಳಬಹುದು ಎಂದು ಅರಿವಾಗುವತನಕ ಅದರ ಹೆಚ್ಚುಗಾರಿಕೆಯ ಕಡೆ ಗಮನವೆ ಹರಿದಿರಲಿಲ್ಲ ಎನ್ನಬೇಕು… ಹಾಗೆ ಗ್ರೀಟು ಮಾಡುತ್ತಲೆ ಹುಡುಗಿಯರಿಗೊಂದು ‘ಗ್ರೀಟಿಂಗ್ ಕಾರ್ಡ್’ ಕೊಡಬಹುದಲ್ಲವ? ಎನ್ನುವ ಜ್ಞಾನೋದಯವಾಗುವ ವಯಸ್ಸಲ್ಲಿ ಈ ಹುಟ್ಟುಹಬ್ಬದ ತಿಳುವಳಿಕೆಯೂ ಸ್ವಲ್ಪ ಹೆಚ್ಚಾಗಿದ್ದು ನಿಜವೆ ಆದರು, ಅದು ಹುಟ್ಟುಹಬ್ಬದ ಸ್ವಯಂ ಆಚರಣೆಯ ಮಟ್ಟಕ್ಕಾಗಲಿ ಅಥವಾ ಇತರರಿಗೆ ಗ್ರೀಟಿಂಗಿಗೆ ಕಾಸು ಖರ್ಚು ಮಾಡಿ ‘ಹ್ಯಾಪಿ ಬರ್ತಡೆ’ ಹೇಳುವಂತಹ ಧಾರಾಳತನದ ಮಟ್ಟಕ್ಕಾಗಲಿ ಬೆಳೆಯಲಿಲ್ಲ. ಆದರೆ ಆ ರೀತಿ ಗ್ರೀಟಿಂಗ್ ಕಾರ್ಡ್ ಕೊಡುವುದನ್ನೆ ಜೀವನದ ಧನ್ಯತೆಯ ಪರಮಗುರಿ ಎಂದುಕೊಂಡಿದ್ದ ಗೆಳೆಯರು ಸುತ್ತಮುತ್ತ ಬೇಕಾದಷ್ಟಿದ್ದರು. ಬರಿ ಹುಟ್ಟುಹಬ್ಬಕ್ಕೇನು? ಹೊಸವರ್ಷ, ಸಂಕ್ರಾಂತಿ, ದೀಪಾವಳಿ ಎಂದೆಲ್ಲ ನೆಪ ಹುಡುಕಿ ಗ್ರೀಟಿಂಗ್ ಖರೀದಿಸಲು ಅವರಲ್ಲಿ ಸಾಕಾಗುವಷ್ಟು ದುಡ್ಡಿರುತ್ತಿದ್ದರು, ಅದರಲ್ಲಿ ಏನು ಬರೆಯಬೇಕೆಂದು ಮಾತ್ರ ಗೊತ್ತಾಗದೆ ತಿಣುಕಾಡುತ್ತಿದ್ದರು. ಈ ಹನುಮಾಚಾರಿಯೂ ಆ ಗುಂಪಿನಲ್ಲೊಬ್ಬನಾಗಿದ್ದು, ನನಗೆ ಇದ್ದಕ್ಕಿದ್ದಂತೆ ಪರಮಾಪ್ತ ಗೆಳೆಯನಾಗಲಿಕ್ಕೆ ಇದು ಒಂದು ಮುಖ್ಯ ಕಾರಣವಾಗಿತ್ತು. ಗ್ರೀಟಿಂಗ್ ಸೀಸನ್ ಬರುತ್ತಿದ್ದಂತೆಯೆ ಎಲ್ಲಿದ್ದರೂ ಸರಿ ದೊಡ್ಡದೊಂದು ಕಂತೆ ಹಿಡಿದು ಬಂದುಬಿಡುತ್ತಿದ್ದ ‘ಗುರೂ, ಏನಾದರೂ ಬರೆದುಕೊಡು..ತುಂಬಾ ಅರ್ಜೆಂಟು’ ಎಂದು ದುಂಬಾಲು ಬೀಳುತ್ತ. ಅವನ ಅರ್ಜೆಂಟು ಯಾವ ತರದ್ದೆಂದು ಗೊತ್ತಿದ್ದರು ನನ್ನ ಕಲಾ ಪ್ರದರ್ಶನಕ್ಕೆ ಸಿಗುತ್ತಿದ್ದ ಅವಕಾಶಗಳೆಲ್ಲ ಅಂತದ್ದೆ ಆಗಿದ್ದ ಕಾರಣ, ನಾನೂ ಏನೊ ಒಂದು ಕವನವನ್ನೊ, ಕೋಟೇಷನ್ನೊ ಗೀಚಿ ಕಳಿಸುವುದು ನಡೆದೆ ಇತ್ತು ಅನ್ನಿ.

ಹನುಮಾಚಾರಿ ‘ಹುಟ್ಟುಹಬ್ಬದ ಪಾರ್ಟಿ’ ಎಂದಾಗ ಇವೆಲ್ಲ ಹಳೆಯ ಸರಕೆಲ್ಲ ಮತ್ತೆ ನೆನಪಾಗಿತ್ತು – ‘ಎಷ್ಟು ಬೆಳೆದುಬಿಟ್ಟಿದ್ದಾನೆ ಹನುಮಾಚಾರಿ’ ಎಂಬುದನ್ನು ಎತ್ತಿ ತೋರಿಸುವ ಹಾಗೆ. ನಲವತ್ತೈದರ ಗಡಿ ದಾಟಿದ ಮೇಲೆ ಬೆಳೆಯಬೇಕಾದ್ದೆ ಬಿಡಿ, ಇನ್ನು ಬೆಳೆಯದಿದ್ದರೆ ಬೆಳೆಯುವುದಾದರೂ ಯಾವಾಗ? ಅಂದಹಾಗೆ, ನಾನು ಬೆಳೆದಿದ್ದಾನೆ ಎಂದು ಹೇಳಿದ್ದು ಈಗ ‘ಗ್ರೀಟಿಂಗಿನಲ್ಲಿ ಏನಾದರೂ ಬರೆದುಕೊಡು’ ಎಂದು ದುಂಬಾಲು ಬೀಳದಷ್ಟು ಬೆಳೆದಿದ್ದಾನೆ ಎನ್ನುವರ್ಥದಲ್ಲಿ… ಆದರು ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಅವನಿಗೆ ಭಯಂಕರ ಕೋಪವಂತೂ ಇದೆ. ಯಾಕೆಂದರೆ ಅವನ ಪ್ರೆಂಡ್ ಸರ್ಕಲ್ಲಿನಲ್ಲಿ ಹುಟ್ಟು ಹಬ್ಬದ ಆಚರಣೆಯೆಂದರೆ ‘ಸಕತ್ ಗುಂಡು ಪಾರ್ಟಿ’ ಎಂದೆ ಅರ್ಥ..! ಹುಟ್ಟುಹಬ್ಬದ ದಿನ ‘ವಿಷ್’ ಮಾಡಿಸಿಕೊಂಡ ತಪ್ಪಿಗೆ ಇಡೀ ಗುಂಪನ್ನು ಹೊರಗಿನ ರೆಸ್ಟೋರೆಂಟಿಗೊ, ಬಾರಿಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ತಿನಿಸಿ, ಕುಡಿಸಿ ಸಾವಿರಗಟ್ಟಲೆಯ ಬಿಲ್ಲನ್ನು ಭರಿಸಬೇಕು. ನಾನು ಆ ಚಕ್ರವ್ಯೂಹಕ್ಕೆ ಸಿಕ್ಕಿಕೊಳ್ಳುತ್ತಿಲ್ಲವಲ್ಲ ಎಂಬ ದೊಡ್ಡ ಸಂಕಟ ಅವನಿಗೆ. ‘ಕನಿಷ್ಠ ಅವನೊಬ್ಬನನ್ನಾದರೂ ಕರೆದುಕೊಂಡು ಹೋಗಿ ಗುಂಡು ಹಾಕಿಸಬಹುದಲ್ಲ?’ ಎಂಬ ಪರಮ ಖೇದವಿದೆ ಅವನಿಗೆ. ನಾನು ಕುಡಿತವನ್ನು ಮುಟ್ಟುವುದಿರಲಿ, ಮೂಸಿಯೂ ನೋಡುವುದಿಲ್ಲವೆಂದು ಗೊತ್ತಿದ್ದರು ‘ಅದಕ್ಕೇನಂತೆ, ನೀವು ಕೊಡಿಸಿ, ನಾನು ಕುಡಿಯುತ್ತೇನೆ..ಒಬ್ಬರಾದರೂ ಎಂಜಾಯ್ ಮಾಡಬಹುದಲ್ಲಾ’ ಎನ್ನುತ್ತಾನೆ. ಆದರೆ ಅವನ ಮನದಾಳದಲ್ಲಿರುವುದು ‘ಹೀಗಾದರೂ ಸ್ವಲ್ಪ ಪರ್ಸು ಬಿಚ್ಚಲಿ ಇಂತಹ ಶೋಕಿ ಐಟಮ್ಮುಗಳ ಮೇಲೆ’ ಅಂದಷ್ಟೆ.. ‘ಸರಿ ಅದೆಷ್ಟಾಗುವುದೊ ಹೇಳಿಬಿಡು, ದುಡ್ಡು ಕೊಡುತ್ತೇನೆ, ಹೋಗಿ ನೀನೊಬ್ಬನೆ ಕುಡಿದುಕೊ’ ಎನ್ನುತ್ತೇನೆ ನಾನು. ಇದುವರೆವಿಗು ನಾವು ಒಂದು ಪಾರ್ಟಿಗೂ ಹೋಗಿಲ್ಲವೆನ್ನುವುದು ಎಷ್ಟು ಸತ್ಯವೊ, ಅವನೂ ಒಂದು ಬಾರಿಯೂ ನನ್ನ ‘ದುಡ್ಡು ಕೊಡುವ ಆಫರನ್ನು’ ಒಪ್ಪಿಕೊಂಡಿಲ್ಲವೆನ್ನುವುದು ಅಷ್ಟೆ ಸತ್ಯ..!

ಆದರೆ ಈ ಬಾರಿ ಹನುಮಾಚಾರಿ ಹುಟ್ಟುಹಬ್ಬವನ್ನು ನೆನಪಿಸಿದಾಗ ಮಾತ್ರ ಯಾಕೊ ಸ್ವಲ್ಪ’ಚುಳ್’ ಅಂದ ಹಾಗಾಯ್ತು. ಅವನೇನೊ ರೂಢಿಗತವಾಗಿ, ಅಭ್ಯಾಸದಂತೆ ನೆನಪಿಸಿದ್ದನೆ ಹೊರತು ಬಲವಂತದಿಂದ ಪಾರ್ಟಿ ಮಾಡಿಸಿಕೊಳ್ಳುವ ಉತ್ಸಾಹ, ಹುಮ್ಮಸ್ಸೆಲ್ಲ ಅರ್ಧ ಖಾಲಿಯಾಗಿಹೋಗಿತ್ತು – ಅದರಲ್ಲೂ ಇತ್ತಿಚೆಗೆ ಡಯಾಬಿಟೀಸ್ ಅದೂ ಇದೂ ಎಂದು ಕೆಲವು ‘ಟಿಪಿಕಲ್’ ಕಾಯಿಲೆಗಳ ಶುಭಾರಂಭವಾದ ಮೇಲೆ. ನನಗು ಸ್ವಲ್ಪ ಕಸಿವಿಸಿಯಾದದ್ದು ಪಾರ್ಟಿ ಕೊಡಿಸಲಾಗದ ಕಾರಣಕ್ಕಿಂತ ಹೆಚ್ಚು, ‘ಅಯ್ಯಯ್ಯೊ …ನಲವತ್ತರ ಗಡಿಯನ್ನು ದಾಟಿ ಐವತ್ತರತ್ತ ಹೋಗಿ ಬಿಡುತ್ತಿದೆಯಲ್ಲ ಜೀವನದ ಬಂಡಿ ?’ ಎಂಬ ಭೀತಿಯೊ, ಕಳವಳವೊ ಅಥವಾ ಹೇಳಿಕೊಳ್ಳಲಾಗದ ಇನ್ನಾವುದೊ ಅನುಭೂತಿಯ ಪ್ರೇರಣೆಯಿಂದ ಉದ್ಭವಿಸಿದ್ದು. ನಲವತ್ತರ ಮೆಟ್ಟಿಲು ದಾಟುತ್ತಿದ್ದಂತೆ ಎಲ್ಲೊ ಸಣ್ಣ ಸ್ತರದಲ್ಲಿ ಈ ಅನಿಸಿಕೆ ಆರಂಭವಾಗುತ್ತದಾದರು ಅದು ನಿಜಕ್ಕು ತನ್ನ ಗುರುತ್ವವನ್ನು ಹೆಚ್ಚಿಸಿಕೊಂಡ ಮಹತ್ವದ ಸಂಗತಿಯಾಗುವುದು ನಲವತ್ತೈದರ ಆಸುಪಾಸಿನಲೆಲ್ಲೊ ಎಂದೆ ಹೇಳಬೇಕು. ಅದರಲ್ಲೂ ಐವತ್ತರ ಗಡಿಯ ಹತ್ತಿರ ಹತ್ತಿರ ಮುಟ್ಟಿಬಿಡುತ್ತಿದ್ದರಂತೂ ಹೇಳಿಕೊಳ್ಳಲಾಗದ ಅಸಾಧಾರಣ ಕಳವಳವೆ ಮನೆ ಮಾಡಿಕೊಂಡುಬಿಡುತ್ತದೆ. ಆಯಸ್ಸಿನ ಅರ್ಧ ಗಡಿ ದಾಟಿ ಆ ಬದಿಗೆ ಕಾಲಿಕ್ಕುತ್ತಿದ್ದೇವಲ್ಲ ಎನ್ನುವ ಭಾವನೆಯೆ ಏನೇನೊ ಕಸಿವಿಸಿ, ಆತಂಕಗಳ ಹೊರೆಯಾಗಿ ಕಾಡಲು ಆರಂಭಿಸುವ ಸಂಕ್ರಮಣದ ಹೊತ್ತು ಅದು. ಆದರೆ ನಿಜಕ್ಕೂ ಅದು ಅಷ್ಟೊಂದು ಗಲಿಬಿಲಿಗೊಳ್ಳುವ , ಗಾಬರಿಪಡುವ ವಯಸ್ಸೆ ಎಂದು ಪ್ರಶ್ನಿಸಿಕೊಳ್ಳಲು ಹೊರಟರೆ ಸಿಗುವ ಉತ್ತರವೂ ಅಷ್ಟೆ ತಳಮಳ , ಸಂಶಯ, ಗೊಂದಲಗಳ ಗೂಡಾಗಿ ಕಾಡುವ ಸಂಕ್ರಮಣದ ಸಂಧಿ ಕಾಲವದು ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ನಲವತ್ತರ ಮೆಟ್ಟಿಲು ಹತ್ತುವ ಮೊದಲೆ ತಲೆಯೆಲ್ಲ ಬೋಡಾಗಿ ‘ಬೊಕ್ಕ ತಲೆ’ಯಾಗಿ ಹೋದಾಗ ಗಾಬರಿಯಿಂದಲೆ ಓಡಿಬಂದಿದ್ದ ಹನುಮಾಚಾರಿಯನ್ನು ಛೇಡಿಸಿ, ರೇಗಿಸಿದ್ದರೂ ಒಳಗೊಳಗೆ ‘ಏನಪ್ಪ ಇದು ? ನನಗೂ ಏನಾದರೂ ಅವನಂತೆಯೆ ಆಗಲು ಶುರುವಾಯಿತೆ, ಏನು ಕಥೆ ? ಆಗಲೆ ಕೂದಲಿಲ್ಲದ ವಯಸಾದ ಮುದುಕನಂತೆ ಕಾಣಿಸಿಬಿಡುತ್ತೇನೆಯೆ?’ ಎಂಬ ಆತಂಕದಲ್ಲಿ ಓಡಿ ಹೋಗಿ ಗುಟ್ಟಾಗಿ ಕನ್ನಡಿ ನೋಡಿಕೊಂಡಿದ್ದು ಉಂಟು..!

ಹನುಮಾಚಾರಿ ಹಾಗೆ ಅಳುಮೊಗ ಹೊತ್ತುಕೊಂಡು ಓಡಿಬಂದಾಗ ಅವನೇನೂ ಇನ್ನು ಪೂರ್ತಿ ಬೊಕ್ಕತಲೆಯವನಾಗಿರಲಿಲ್ಲವೆನ್ನಿ. ಮಧ್ಯದ ಬಯಲು ಮತ್ತು ಮುಂದಲೆಯ ಕಡೆಯೆಲ್ಲ ಪಾಲಿಷ್ ಹೊಡೆದಂತೆ ನುಣ್ಣಗೆ ಮಿರುಗುತ್ತಿದ್ದರು ತಲೆಯ ಎರಡು ಬದಿಗಳಲ್ಲಿ ಮತ್ತು ಹಿಂದಲೆಯಲ್ಲಿ ಇನ್ನು ಸಾಕಷ್ಟು ಮಿಕ್ಕಿತ್ತು. ಅದನ್ನು ನೋಡುತ್ತಲೆ, ‘ ನೀನೇನೆ ಹೇಳು ಆಚಾರಿ, ನಿಜ ಹೇಳಬೇಕಾದರೆ ನೀನು ನಿನ್ನ ಮಿಕ್ಕಿರುವ ಕೂದಲನ್ನು ಬೋಳಿಸಿ ಪೂರ್ತಿ ‘ಬೊಕ್ಕ’ವಾಗಿಸಿಕೊಂಡರೆ ವಾಸಿ..’ ಎಂದಿದ್ದೆ. ಅವನು ಅಳು ಮೊಗದಲ್ಲೆ, ‘ಯಾಕೆ ಸಾರ್ ನೀವು ತಲೆ ತಿನ್ನುತ್ತೀರಾ ? ಮೊದಲೆ ಅವಳು ತಲೆ ತಿಂದು ತಿಂದೆ ಈ ಗತಿ ತಂದಿಟ್ಟಿದ್ದಾಳೆ, ಈಗ ನೀವು ಬೇರೆ ಸೇರಿಕೊಂಡು ಕಾಲು ಎಳೆಯುತ್ತಿರಲ್ಲಾ..?’ ಎಂದಿದ್ದ. ನಾನು ಅವನಿಗಿಂತ ಎರಡು ಮೂರು ವರ್ಷಕ್ಕೆ ದೊಡ್ಡವನು ಅನ್ನುವುದಕ್ಕಿಂತ ಗ್ರೀಟಿಂಗಿನ ದಿನಗಳಲ್ಲಿ ಅಂಟಿಸಿಕೊಂಡಿದ್ದ ಆ ‘ ಸಾರ್..’ ಎನ್ನುವ ಪಟ್ಟ , ಒಂದೆ ಕಡೆ ಕೆಲಸಕ್ಕೆ ಸೇರಿದ ಮೇಲೆ ‘ಹಿರಿಯ ಆಫೀಸರ’ ಎಂಬ ಮರ್ಯಾದೆಯ ಜತೆ ಸೇರಿ ಶಾಶ್ವತವಾಗಿಹೋಗಿತ್ತು. ಅದೇ ರೀತಿ ಕಾಲೇಜು ದಿನಗಳಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ‘ ಆಚಾರಿ’ ನಾಮಧೇಯವೂ ಹನುಮಾಚಾರಿಗೆ ಪ್ರಿಯವಾದ, ಆತ್ಮೀಯತೆಯ ಸಂಕೇತವಾಗಿ ಉಳಿದುಕೊಂಡುಬಿಟ್ಟಿತ್ತು. ಇಬ್ಬರಿಗೂ ಅದು ಅಭ್ಯಾಸವಾಗಿ ಅದೊಂದು ‘ಫಾರ್ಮ್ಯಾಲಿಟಿ’ಯಾಗಿ ಬದಲಾಗಿ ಹೋಗಿತ್ತೆ ವಿನಃ ಅದರ ಬಗ್ಗೆ ಇಬ್ಬರಿಗೂ ಸೀರಿಯಸ್ ನೆಸ್ ಇರಲಿಲ್ಲ… ‘ ಹಾಗಲ್ಲಾ ಆಚಾರಿ, ಈಚೆಗೊಂದು ಲೇಖನ ಓದುತ್ತಿದ್ದೆ, ಬಾಲ್ಡ್ ಹೆಡೆಡ್ ವ್ಯಕ್ತಿಗಳ ಕುರಿತು ಬರೆದಿದ್ದು.. ಅಲ್ಲೊಂದು ಕಡೆ ಬರೆದಿತ್ತು – ‘ಗಾಡ್ ಕ್ರೀಯೇಟೆಡ್ ಸೋ ಫಿವ್ ಪರ್ಫೆಕ್ಟ್ ಹೆಡ್ಸ್, ದಿ ರೆಸ್ಟ್ ಹೀ ಕವರ್ಡ್ ವಿದ್ ಹೇರ..(ದೇವರು ಕೇವಲ ಎಷ್ಟು ಪರಿಪಕ್ವ ತಲೆಗಳನ್ನು ಸೃಷ್ಟಿಸಿದನೆಂದರೆ, ಮಿಕ್ಕ ತಲೆಗಳ ಹುಳುಕು ಮುಚ್ಚಲೆಂದೆ ಅವನ್ನು ಕೂದಲಡಿ ಮರೆಯಾಗಿಸಿಬಿಟ್ಟ ) ‘ ಅಂತಿತ್ತು.. ಅದು ನೆನಪಾಗಿ ಹಾಗೆಂದೆ ಅಷ್ಟೆ..’ ಎಂದೆ. ಅದೊಂದು ಜೋಕ್ ಎಂದು ಮಾತ್ರ ಅವನಿಗೆ ಬಿಡಿಸಿ ಹೇಳಿರಲಿಲ್ಲವಾದರು, ಮಿಕ್ಕೆಲ್ಲದ್ದಕ್ಕಿಂತ ಅವನ ತಲೆಯನ್ನು ‘ಪರ್ಫೆಕ್ಟ್ ಹೆಡ್ಡಿಗೆ’ ಹೋಲಿಸಿದ್ದು ಅವನಿಗೆ ಬಲು ಖುಷಿಯೆನಿಸಿ ‘ಹೌದಾ..ಸಾರ್..? ಹಾಗಾದರೆ ಅದಕ್ಕೇನಂತೆ? ಮಾಡಿಸೋಣ ಬಿಡಿ ‘ ಎಂದು ಬೊಕ್ಕ ತಲೆಯ ಕುರಿತಾಗಿ ಬಂದಿದ್ದ ಚಿಂತೆಯ ವಿಷಯವನ್ನೆ ಮರೆತು ನಗುತ್ತ ಹೋಗಿದ್ದ…!

ಅವನಿಗೇನೊ ಹಾಸ್ಯ ಮಾಡಿ ಏಮಾರಿಸಿ ಓಡಿಸಿದ್ದರು ಮುಂದಿನ ಕೆಲವು ದಿನಗಳಲ್ಲೆ ಅದೆ ಭೀತಿ ಮತ್ತೊಂದು ರೂಪದಲ್ಲಿ ಧುತ್ತನೆ ನನ್ನೆದುರೆ ಅವತರಿಸಿಕೊಂಡಿತ್ತು ಬಿಳಿಕೂದಲ ರೂಪದಲ್ಲಿ..! ಅದುವರೆವಿಗೂ ‘ಒಂದೂ ಬಿಳಿ ಕೂದಲಿಲ್ಲದ ಅಚ್ಚ ತರುಣನಂತೆ’ ಎಂದೆಲ್ಲ ‘ಶಾಭಾಷ್ ಗಿರಿ’ ಗಿಟ್ಟಿಸಿಕೊಳ್ಳುತ್ತಿದ್ದ ನಾನು, ಇದೆಲ್ಲಿಂದ ಬಂದವಪ್ಪ ಈ ಬಿಳಿ ಜಿರಲೆಗಳು ಎಂದು ಗಾಬರಿ ಪಡುವಂತಾಗಿತ್ತು… ಮೊದಮೊದಲು ಅಲ್ಲೊಂದು ಇಲ್ಲೊಂದು ಕಂಡಾಗ, ಹೇಗೊ ಪೊದೆಯಂತಿದ್ದ ಕಪ್ಪು ಕೂದಲಿನ ಮಧ್ಯೆ ಅವಿಸಿಟ್ಟರೂ, ಅವುಗಳು ಪಾರ್ಥೇನಿಯಮ್ಮಿನಂತೆ ಹೆಚ್ಚುಹೆಚ್ಚಾಗಿ ಚಿಗಿತು ಎಲ್ಲೆಂದರಲ್ಲಿ ಒಂದೊಂದೆ ಬೆಳ್ಳಿರೇಖೆಯಂತೆ ಕಾಣಿಸಿಕೊಳ್ಳತೊಡಗಿದಾಗ ಇನ್ನು ಬೇರೆ ದಾರಿಯಿಲ್ಲವೆಂದರಿವಾಗಿ ‘ಡೈಯ್’ ನ ಮೊರೆ ಹೋಗಬೇಕಾಗಿ ಬಂದಿತ್ತು – ತಾರುಣ್ಯದ ಅದೇ ‘ಲುಕ್ಕನ್ನು’ ಉಳಿಸಿಕೊಳ್ಳಲು. ಆದರೆ ಅದೆ ನೊರೆಗೂದಲಿನ ಬಿಳಿ ಬಂಗಾರ ಮೊದಲೆ ಕುರುಚಲಂತಿದ್ದ ಗಡ್ಡ, ಮೀಸೆಗಳಲ್ಲು ನಡುನಡುವೆ ಪ್ರಕಟವಾಗಿ ತನ್ನ ಪ್ರತಾಪ ತೋರಿಸಲಾರಂಭಿಸಿದಾಗ, ಅವಕ್ಕೊಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿ, ಅವನ್ನು ಬೆಳೆಯುವ ಮುನ್ನವೆ ತರಿದು ‘ಕ್ಲೀನ್ ಫೇಸ್ ಶೇವ್’ ಮಾಡಿಕೊಳ್ಳುವ ಹೊಸ ಪರಿಪಾಠ ಆರಂಭಿಸಬೇಕಾಗಿ ಬಂದಿತ್ತು. ಹಾಗೆ ಬಂದ ಹೊಸದರಲ್ಲೆ ಕೆಲವು ಸಹೋದ್ಯೋಗಿಗಳು, ‘ ಸಾರ್ ಗಡ್ಡ ಮೀಸೆ ಇರದಿದ್ರೆ ತುಂಬಾ ಯಂಗ್ ಆಗಿ ಕಾಣುತ್ತೀರ.. ನಾರ್ತ್ ಇಂಡಿಯನ್ ತರ ಕಾಣುತ್ತೀರ..’ ಎಂದೆಲ್ಲ ಕಾಮೆಂಟ್ ಕೊಟ್ಟ ಮೇಲೆ ಆ ಅವತಾರವೆ ಪರ್ಮನೆಂಟ್ ಆಗಿಹೋಗಿತ್ತು. ಈಗ ತಲೆಗೆ ಡೈ ಹಾಕುವುದು ನಿಲ್ಲಿಸಿಯಾಗಿದೆ ಎನ್ನಿ, ಅರ್ಧಕ್ಕರ್ಧ ಬೊಕ್ಕತಲೆಯಾಗಿ ಖಾಲಿಯಾದ ಮೇಲೆ… ಆದರು ಮುನ್ನೆಚ್ಚರಿಕೆಯಾಗಿ ತಲೆಗೂದಲನ್ನು ತೀರಾ ತುಂಡಾಗಿ ಕತ್ತರಿಸಿಕೊಳ್ಳುತ್ತೇನೆ, ಯಾವುದೂ ಎದ್ದು ಕಾಣದ ಹಾಗೆ. ನನ್ನ ಚೌರದ ಪಟ್ಟಾಭಿಷೇಕಕ್ಕೆ ಹೋದಾಗಲೆಲ್ಲ, ನನ್ನ ನಾಪಿತನಿಗೆ ತುಂಬ ಸುಲಭದ ಕೆಲಸ. ನಾನು ‘ನಂಬರ್ ಮೂರು’ ಎನ್ನುವುದಕ್ಕೂ ಕಾಯದೆ ತನ್ನ ಕೆಲಸ ಆರಂಭಿಸಿಬಿಡುತ್ತಾನೆ… ಒಂದು ನಿಮಿಷದ ಮಿಷಿನ್ ಕಟ್, ಅರ್ಧ ನಿಮಿಷದ ಕತ್ತರಿ ಸೇವೆ, ಕೊನೆಯರ್ಧ ನಿಮಿಷ ಬ್ಲೇಡಿನ ಕೆರೆತ, ಒಟ್ಟು ಎರಡು ನಿಮಿಷಕ್ಕೆ ಐವತ್ತು ರೂಪಾಯಿ ಸಂದಾಯವಾದಾಗ ಅವನಿಗೆ ‘ಪ್ರತಿ ಗಿರಾಕಿಯೂ ಹೀಗೆ ಇರಬಾರದೆ’ ಅನಿಸಿದ್ದರೆ ಆಶ್ಚರ್ಯವೇನೂ ಇಲ್ಲ…! ನನಗೊ ದುಡ್ಡು ಕೀಳಬೇಕೆಂದು ಕತ್ತರಿಯಾಡಿಸುವಂತೆ ನಟಿಸುತ್ತ ಹೆಚ್ಚು ಸಮಯ ವ್ಯಯಿಸದೆ ಎರಡೆ ನಿಮಿಷದಲ್ಲಿ ಮುಗಿಸಿಬಿಡುತ್ತಾನಲ್ಲ ಎಂದು ಅಭಿಮಾನ (ದುಡ್ಡು ಮಾತ್ರ ಮಾಮೂಲಿ ಚಾರ್ಜೆ ಕಿತ್ತುಕೊಂಡರು..) ! ಒಟ್ಟಾರೆ ಈ ನಲವತ್ತರ ಆಸುಪಾಸಿನ ಕಾಟ ಯಾರನ್ನು ಬಿಟ್ಟಿದ್ದಲ್ಲ ಬಿಡಿ – ಕೆಲವರಿಗೆ ಸ್ವಲ್ಪ ಮೊದಲು, ಕೆಲವರಿಗೆ ನಂತರ ಅನ್ನುವ ವ್ಯತ್ಯಾಸ ಬಿಟ್ಟರೆ.

ಈ ವಯಸಿನ ಗಡಿ ಮತ್ತದರ ಅಂಚಿನಲ್ಲಿ ಅಡ್ಡಾಡುತ್ತಿದ್ದಂತೆ ಎದುರಾಗುವ ‘ಶಾಕ್’ ಗಳು ಒಂದೂ ಎರಡಲ್ಲ. ಅಲ್ಲಿಯತನಕ, ಮೊನ್ನೆ ಮೊನ್ನೆಯವರೆಗೆ ‘ಸಾರ್’ ನ ಜತೆ ಹೆಸರಿಡಿದು ಕರೆಯುತ್ತಿದ್ದವರೆಲ್ಲ ಏಕಾಏಕಿ ‘ಅಂಕಲ್’ ಎಂದು ಶುರು ಹಚ್ಚಿಕೊಂಡು ಬಿಡುತ್ತಾರೆ… ಜತೆಗೆ ಆಗಾಗೆ ಅಪ್ಡೇಟ್ ಮಾಡುವ ‘ಬಯೋಡೇಟ’, ‘ರೆಸ್ಯೂಮು’ಗಳಲ್ಲಿ ‘ಅಬ್ಬಬ್ಬಾ ಇಷ್ಟೊಂದು ವಯಸಾಗಿ ಹೋಯಿತೆ? ಇನ್ನು ಮುಂದೆಯೂ ಸುಲಭದಲ್ಲಿ ಕೆಲಸ ಸಿಗುವುದೊ ಅಥವಾ ತೀರಾ ವಯಸಾಗುವ ಮೊದಲೆ ಬೇರೆ ಕಡೆ ಬದಲಾಯಿಸಿಕೊಂಡುಬಿಡುವುದು ಒಳಿತ?’ ಎಂಬೆಲ್ಲ ದ್ವಂದ್ವಗಳು ಕಾಡತೊಡಗುತ್ತವೆ. ಅದರಲ್ಲೂ ಅಲ್ಲಿಯತನಕ ಕೆಲಸ ಬದಲಿಸದೆ ಒಂದೆ ಕಡೆ, ಒಂದೆ ಕಂಪನಿಯಲ್ಲಿ ದುಡಿಯುತ್ತಿದ್ದವರಿಗಂತು ಅದೊಂದು ದೊಡ್ಡ ಧರ್ಮಯುದ್ಧವೆ ಸರಿ. ಕೆಲಸ ಬದಲಿಸಿ ಅನುಭವವಿರದೆ ಇಂಟರ್ವ್ಯೂ ಅಟೆಂಡು ಮಾಡಲು ಅನುಭವವಿಲ್ಲದ ಪರಿಸ್ಥಿತಿ..! ಅಲ್ಲಿಯತನಕ ಬೇರೆಯವರಿಗೆ ಇಂಟರ್ವ್ಯೂ ಮಾಡಿ ಅಭ್ಯಾಸವಿರುತ್ತದೆಯೆ ಹೊರತು ತಾವೆ ಹೋಗಿ ‘ಹಾಟ್ ಸೀಟಿನಲ್ಲಿ’ ಕೂತು ಬಂದ ಅನುಭವವಿರುವುದಿಲ್ಲವಲ್ಲ? ಜತೆಗೆ ಇಷ್ಟು ವರ್ಷ ಕಳೆದ ಕಂಪನಿಯನ್ನು ಬಿಟ್ಟು ಹೋಗಲಾಗದ ‘ಪತ್ನಿ’ ವ್ಯಾಮೋಹ ಬೇರೆ.. ಅದೆಷ್ಟೆ ಜಗಳ, ಅಸಹನೆ, ಅತೃಪ್ತಿಗಳಿರಲಿ ಕಟ್ಟಿಕೊಂಡ ಮೇಲೆ ಸತಿ ಶಿರೋಮಣಿಯ ಜತೆ ಏಗುವುದಿಲ್ಲವೆ ? ಎನ್ನುವ ಪರಮ ತತ್ವವನ್ನು ಕೆಲಸಕ್ಕೂ ಹೊಂದಿಸಿಕೊಂಡು ಮುಂದುವರೆವ ಅಸೀಮ ನಿಷ್ಠೆ ಹಾಗು ಭಕ್ತಿ. ಆದರೂ ‘ಮುಂದೆ ಏನೊ ಎಂತೊ?’ ಎಂಬ ಚಿಂತೆ ಕಾಡದೆ ಬಿಡುವುದಿಲ್ಲ. ‘ಹೇಗಿದ್ದರೂ ಕೆಲಸ ಬಿಟ್ಟು ಹೋಗುವುದಿಲ್ಲ, ಪ್ರಮೋಶನ್ ಕೊಡದಿದ್ದರೂ ನಡೆಯುತ್ತದೆ’ ಎಂದೆ ತನ್ನನ್ನು ನಿರ್ಲಕ್ಷಿಸಿದ್ದಾರೇನೊ ಎನ್ನುವ ಅನುಮಾನ ಕಾಡುತ್ತಲೆ ಇರುತ್ತದೆ. ‘ಯಾರು ಯಾರೆಲ್ಲ ಬಂದು ಬಡ್ತಿ ಪಡೆದು ಮುಂದೆ ಹೋದರೂ ನಾನು ಮಾತ್ರ ಇಲ್ಲೆ ಕೊಳೆಯುತ್ತಿರುವೆನಲ್ಲ, ಕತ್ತೆಯ ಹಾಗೆ ದುಡಿಯುತ್ತಿದ್ದರು?’ ಎಂಬ ಸಿಟ್ಟು, ಆಕ್ರೋಶ ರೊಚ್ಚಿಗೆಬ್ಬಿಸಿದಾಗ ಏನಾದರೂ ಸರಿ, ಈ ಬಾರಿ ಬೇರೆ ಕಡೆ ಅಪ್ಲೈ ಮಾಡಿ ನೋಡಿಬಿಡಲೆಬೇಕು ಎಂಬ ಹುಮ್ಮಸ್ಸೆದ್ದರೂ, ಒಂದು ರೆಸ್ಯುಮ್ ಸಿದ್ದಮಾಡುವಷ್ಟರಲ್ಲಿ ಅರ್ಧ ಉತ್ಸಾಹವೆಲ್ಲ ಇಳಿದುಹೋಗಿರುತ್ತದೆ. ಎರಡು ಪೇಜೆಂದುಕೊಂಡು ಹೊರಟಿದ್ದು ಹತ್ತಾಗಿ, ಅದನ್ನು ಎರಡಕ್ಕಿಳಿಸಲಾಗದೆ ಹಾಗೂ ಹೀಗೂ ಒದ್ದಾಡಿ ಎಂಟಾಗಿಸಿದರೂ ತೃಪ್ತಿಯಾಗದೆ ಯಾರದಾದರು ರೆಸ್ಯೂಮ್ ತಂದು ಫಾರ್ಮ್ಯಾಟ್ ಕಾಪಿ ಮಾಡಿಯಾದರು ಚಿಕ್ಕದಾಗಿಸಬೇಕು ಎಂದುಕೊಂಡು ಎಲ್ಲೊ ಮೂಲೆಯಲ್ಲಿ ಸೇವಾಗಿಸಿ ಕೂತುಬಿಟ್ಟರೆ ಆ ಫೈಲನ್ನು ಮತ್ತೆ ತೆಗೆಯುವುದು ಮುಂದಿನ ಬಾರಿಯ ಪ್ರಮೋಶನ್ ಮಿಸ್ಸಾದಾಗಲೆ…

ಹಾಗೆಯೆ ಒದ್ದಾಡುತ್ತಲೆ ನೋಡು ನೋಡುತ್ತಿದ್ದಂತೆ ಐವತ್ತರ ಆಚೀಚಿನ ಗಡಿ ತಲುಪುತ್ತಿದ್ದ ಹಾಗೆಯೆ, ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಮನವರಿಕೆಯಾಗತೊಡಗುತ್ತದೆ. ಮೊದಲೆ ಸಿಗುವುದು ಕಷ್ಟ, ಸಿಕ್ಕರೂ ಈಗಿರುವ ಸಂಬಳ, ಸ್ಥಾನಮಾನದ ಆಸುಪಾಸಿನಲಷ್ಟೆ ಸಿಗುವುದು ಅಂದಮೇಲೆ ಹೊಸ ಜಾಗದಲ್ಲಿ ಹೋಗಿ ಒದ್ದಾಡುವುದೇಕೆ ? ಹೇಗೂ ಇಷ್ಟು ವರ್ಷ ಇಲ್ಲೆ ಏಗಿದ್ದಾಯ್ತು..ಇನ್ನುಳಿದ ಹತ್ತು ಹದಿನೈದು ವರ್ಷ ಇಲ್ಲೆ ಹೇಗೊ ಕಳೆದುಬಿಟ್ಟರಾಯ್ತು ಅನ್ನುವ ಸ್ಮಶಾನ ವೈರಾಗ್ಯ ಆರಂಭವಾಗುವ ಹೊತ್ತಿಗೆ, ಸ್ವಂತಕ್ಕಿಂತ ಹೆಚ್ಚಾಗಿ ವಯಸಿಗೆ ಬರುತ್ತಿರುವ ಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆಗಳ ಚಿಂತೆ ಆರಂಭವಾಗಿರುವುದು ಒಂದು ಕಾರಣವೆನ್ನಬಹುದು. ಆದರೆ ಹಾಗೆಂದು ‘ಶಸ್ತ್ರಸನ್ಯಾಸ’ ತೊಟ್ಟ ಮಾತ್ರಕ್ಕೆ ಆ ಕೆಲಸಕ್ಕೆ ಸಂಬಂಧಿಸಿದ ಚಿಂತೆಯೆಲ್ಲ ಮಾಯವಾಯ್ತೆಂದು ಹೇಳಲಾಗುವುದೆ ? ಹಿತೈಷಿಗಳೊ, ಹಿತಶತ್ರುಗಳೊ ಯಾರಾದರೊಬ್ಬರೂ ಆಗಾಗ್ಗೆ ಕೆಣಕುತ್ತಲೆ ಇರುತ್ತಾರೆ – ‘ಏನ್ ಸಾರ್ ..ಈ ಸಾರಿನಾದ್ರೂ ಪ್ರಮೋಶನ್ ಬಂತಾ?’ ಪೆಚ್ಚಾಗಿ ಹುಸಿನಗೆಯಷ್ಟನ್ನೆ ಉತ್ತರವಾಗಿತ್ತು ಮನೆಗೆ ಬಂದರೆ ಶ್ರೀಮತಿಯದು ಅದೇ ರಾಗ – ‘ಏನ್ರೀ… ವನಜನ ಗಂಡ ಕೋದಂಡರಾಮಯ್ಯನವರಿಗೆ ಈ ಬಾರಿ ಪ್ರಮೋಶನ್ ಸಿಕ್ಕಿತಂತಲ್ಲ..? ನಿಮಗೆ ಹೋಲಿಸಿದರೆ ಅವರು ಮೊನ್ನೆ ಮೊನ್ನೆ ಸೇರಿದವರಲ್ವಾ ನಿಮ್ಮ ಕಂಪೆನಿಗೆ ? ಅದು ಹೇಗ್ರಿ ಅವರಿಗೆ ಇಷ್ಟು ಬೇಗ ಬಡ್ತಿ ಸಿಕ್ಕಿಬಿಡ್ತು..?’ ಎನ್ನುತ್ತಾಳೆ. ಅದೇನು ಹಂಗಿಸುತ್ತಿದ್ದಾಳೊ, ಮುಗ್ದವಾಗಿ ಪ್ರಶ್ನಿಸುತ್ತಿದ್ದಾಳೊ ಗೊತ್ತಾಗದೆ ಒದ್ದಾಡುತ್ತಿರುವಾಗಲೆ ಪಕ್ಕದಲ್ಲಿದ್ದ ಮಗ, ‘ ಅಪ್ಪಾ ಆಫೀಸಿನಲ್ಲಿ ನೀನು ಬಾಸಾ ಅಥವಾ ಎಂಪ್ಲಾಯೀನಾ?’ ಎಂದು ಕೇಳಿ ಉರಿವ ಗಾಯಕ್ಕೆ ಉಪ್ಪೆರಚುತ್ತಾನೆ. ಇದ್ದುದರಲ್ಲಿ ಮಗಳೆ ವಾಸಿ, ‘ ಕಾಫಿ ಮಾಡ್ಕೊಂಡು ಬರ್ಲಾಪ್ಪ?’ ಅನ್ನುತ್ತ ಮಾತು ಬದಲಿಸುತ್ತಾಳೆ. ಇವರೆಲ್ಲರ ಬಾಯಿಗೆ ಪದೆಪದೆ ಬೀಳುವುದನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ಈ ಬಾರಿಯಾದರು ಪ್ರಮೋಶನ್ ಗಿಟ್ಟಿಸೋಣವೆಂದು ಯತ್ನಿಸುತ್ತಿದ್ದರೆ ‘ಈ ಸಾರಿ ಖಂಡಿತ ಸಿಗುತ್ತದೆ’ ಎಂದು ವಾಗ್ದಾನ ಮಾಡಿದ್ದ ಬಾಸೆ ಬದಲಾಗಿ ಮತ್ತೆ ಹತಾಶೆಯ ಹೊಸ ಚಕ್ರ ಗಿರಕಿ ಹೊಡೆಯತೊಡಗುತ್ತದೆ…

ಇದೆಲ್ಲಕ್ಕು ಮೀರಿದ ಹೆಚ್ಚಿನ ಗಂಡಾಂತರದ್ದು ಸ್ವಯಂ ಆತ್ಮಾಭಿಮಾನದ ಕುರಿತಾದದ್ದು.. ಇದೆಲ್ಲಾ ಏಟುಗಳು ಒಳಗೊಳಗೆ ಪೂರ್ತಿಯಾಗಿ ಕುಗ್ಗಿಸಿ ‘ನಾನು ಸಾಧಿಸಿದ್ದಾದರು ಏನು?’ ಎಂಬ ದೊಡ್ಡ ಭೂತಾಕಾರದ ಪ್ರಶ್ನೆಯನ್ನು ಹುಟ್ಟಿಸಿ ಅನಾಥ ಪ್ರಜ್ಞೆಯಲ್ಲಿ ತೊಳಲಾಡಿಸುವ ಬಗೆ ಅವರ್ಣನೀಯ. ಆ ಸಂಧಿಕಾಲದಲ್ಲಿ ಇರುವ ಗೊಂದಲ ಎಷ್ಟು ಕ್ಲಿಷ್ಟಕರವೆಂದರೆ ‘ ಏನೆಲ್ಲ ಆಯ್ತೆಂದು ಹಿಂದಕ್ಕೆ ತಿರುಗಿ ನೋಡುತ್ತ, ಗೋಳಾಡಿಕೊಂಡು ಮುಂದಿನ ಪಾಠಕ್ಕಾಗಿ ಅವಲೋಕಿಸುತ್ತ ಕೂರಬೇಕೆ? ಅಥವಾ ಹಿಂದಿನದೆಲ್ಲ ಮರೆತು ಆದದ್ದಾಯ್ತೆಂದು ಮುಂದಿನ ಭವಿತದತ್ತ ನೋಡುತ್ತ ಕೂರಬೇಕೆ?’ ಎನ್ನುವ ಗೊಂದಲದಿಂದ ಹೊರಬರಲೆ ಆಗದ ಚಕ್ರವ್ಯೂಹವಾಗಿ ಕಾಡತೊಡಗಿರುತ್ತದೆ. ಹಳತನ್ನು ಬಿಟ್ಟೊಗೆಯಲಾಗದಷ್ಟು ದೂರ ಬಂದು ಆಗಿಬಿಟ್ಟಿರುವುದರಿಂದ, ಸಾರಾಸಗಟಾಗಿ ಬಿಟ್ಟುಬಿಡಲೂ ಭಯ; ಹೊಸದಾಗಿ ಹೊಸತನ್ನು ನಿರಾತಂಕವಾಗಿ ಅಪ್ಪಲೂ ಭೀತಿ – ಅದರಲ್ಲಿನೇನೇನಡಗಿದೆಯೋ? ಎಂದು. ಅಲ್ಲದೆ ಎಲ್ಲ ಹೊಸದಾಗಿ ಮೊದಲಿಂದ ಆರಂಭಿಸಿದರೆ ಇದುವರೆವಿಗೆ ಗಳಿಸಿದ ಅನುಭವ, ಪರಿಣಿತಿಯನ್ನೆಲ್ಲ ಗಾಳಿಗೆ ತೂರಿದಂತಲ್ಲವೆ ? ಎಂಬ ಗಳಿಸಾಗಿರುವ ವೃತ್ತಿಪರತೆಯ ಆಸ್ತಿಯನ್ನು ನಷ್ಟವಾಗಿಸದಿರುವ ಗೊಡವೆ ಬೇರೆ. ಒಟ್ಟಾರೆ ಏನೆ ಆದರು ಮೊತ್ತದಲ್ಲಿ ಮಾತ್ರ ಬರಿ ಗೊಂದಲ. ಇದು ಸಾಲದಕ್ಕೆ ಹೊರಗಿನ ದೇಹಕ್ಕೆ ವಯಸಾಗುತ್ತಿದ್ದರೂ ಒಳಗಿನ ಮನವಿನ್ನು ‘ಯೌವ್ವನ’ದಲ್ಲೆ ಅಡ್ಡಾಡಿಕೊಂಡು ತನ್ನದೆ ಲೋಕದಲ್ಲಿ ವಿಹರಿಸಿಕೊಂಡ ಕಾರಣದಿಂದಾಗಿ ಈ ವಯಸಾಗುತಿರುವ ದೇಹದ ಅಸಹಾಯಕತೆ ತಟ್ಟನೆ ಅರಿವಾಗುವುದಿಲ್ಲ. ‘ಇದೇನು ಮಹಾ?’ ಎಂದು ಭರದಲ್ಲಿ ದಿನವೂ ಹತ್ತಿ ಮೇಲೇರುತ್ತಿದ್ದ ಮೆಟ್ಟಿಲುಗಳೆ, ಅರ್ಧ ಹತ್ತುತ್ತಿದ್ದಂತೆ ಏದುಸಿರು ಕೊಡಲಾರಂಭಿಸಿದಾಗಷ್ಟೆ ‘ಎಲ್ಲೊ, ಏನೊ ಎಡವಟ್ಟಾಗಿರಬಹುದೆ?’ ಎನ್ನುವ ಅನುಮಾನದ ಸುಳಿವು ಸಿಗುವುದು. ಅದು ಕಾಲುನೋವಾಗೊ, ಏದುಸಿರಾಗೊ, ಧಾರಾಕಾರದ ಬೆವರಾಗೊ ಹರಿಯುತಿದ್ದರೂ ನಾನಿನ್ನು ಪ್ರಾಯದ, ಯೌವ್ವನದ, ಬಿಸಿರಕ್ತದ ಎಳೆಗರು ಎನ್ನುವ ಮನದ ಮಾಯೆಯ ಮುಸುಕು ತುಸುತುಸುವಾಗಿ ಹಿಂಜರಿಯುತ್ತ, ನೇಪಥ್ಯಕ್ಕೆ ಸರಿಯುತ್ತ, ನಂಬಿಕೆಗಳ ಬಲ ಸಡಿಲವಾಗುವ ಕಾಲ. ಆದರೆ ಈ ಹೊಸ್ತಿಲಲ್ಲಿರುವ ಪ್ರತಿಶತ ಎಲ್ಲರೂ ಇದೆ ಪರಿಸ್ಥಿತಿಯಲ್ಲಿ ಸಿಕ್ಕಿ ನರಳುವರೆಂದೆ ಹೇಳಬರುವುದಿಲ್ಲ. ಇದಾವ ತೊಡಕೂ ಇರದೆ ಮಿಂಚಿನ ವೇಗದಲ್ಲಿ ಸಂಚರಿಸುತ್ತ ಮುನ್ನಡೆವ ಭಾಗ್ಯಶಾಲಿಗಳೂ ಇಲ್ಲದಿಲ್ಲ – ಆದರೆ ಅವರ ಸಂಖ್ಯೆ ಅಷ್ಟು ದೊಡ್ಡದಿರದು ಅನ್ನುವುದನ್ನು ಬಿಟ್ಟರೆ .

ನೈಜದಲ್ಲಿ ಈ ಹಂತವನ್ನು ದಾಟುವ ಎಲ್ಲರೂ ಇದೊಂದು ರೀತಿಯ ‘ಮಿಡ್ ಲೈಫ್ ಕ್ರೈಸಿಸ್’ ಅನ್ನು ಅನುಭವಿಸಿಯೆ ತೀರುತ್ತಾರೆನ್ನುವುದರಲ್ಲಿ ಸಂದೇಹವೆ ಇಲ್ಲ. ಆದರೆ ಪ್ರತಿಯೊಬ್ಬರು ಅನುಭವಿಸುವ ಮಟ್ಟ ಒಂದೆ ರೀತಿ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ. ಕೆಲವರಲದು ತೀವ್ರತರವಾಗಿ ಕಾಡಿದರೆ ಮತ್ತೆ ಕೆಲವರಲ್ಲಿ ಮಾಮೂಲಿನಂತೆ ಬಂದು ಸಾಗಿಹೋಗುವ ಸಾಮಾನ್ಯ ಪ್ರಕ್ರಿಯೆಯಾಗಿಬಿಡಬಹುದು. ಅದೇನೆ ಆದರೂ ಆ ಆತಂಕ, ಗೊಂದಲ, ಕಸಿವಿಸಿಗಳ ಐವತ್ತರ ಹತ್ತಿರವಾಗುತ್ತಿರುವ ಅಥವಾ ಅದರ ಹೊಸಿಲು ದಾಟುತ್ತಿರುವ ಭೀತಿಯೆ ಅದರ ಮುಂದಿನ ಪರ್ವಕ್ಕೆ ಬೇಕಾದ ಪರಿಪಕ್ವತೆಯನ್ನೊದಗಿಸುವ ಬುನಾದಿಯಾಗುತ್ತದೆಯೆಂಬುದು ಅಷ್ಟೆ ನಿಜ. ಅಲ್ಲಿಯತನಕ ಬರಿಯ ಲಾಜಿಕ್, ಸೈಂಟಿಫಿಕ್ ಎಂದು ತಾರ್ಕಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನತ್ತಿತ್ತಲೆ ಸುಳಿದಾಡುತ್ತಿದ್ದ ಮನ ಇದ್ದಕ್ಕಿದ್ದಂತೆ ತಾತ್ವಿಕದತ್ತ, ದೈವಿಕದತ್ತ, ಶಾಸ್ತ್ರ, ಪೂಜೆ, ಪುನಸ್ಕಾರಗಳತ್ತ ಗಮನ ಹರಿಸತೊಡಗುವುದು ಆ ಪಕ್ವತೆಯ ಪ್ರೇರಣೆಯ ಪರಿಣಾಮದಿಂದಲೆ. ಪ್ರತಿಯೊಂದು ಮನಸು ತನಗೆ ಸೂಕ್ತವಾದ ಏನೊ ಸಾಧಿಸಿ ತೋರಿಸಲು ಸಾಧ್ಯವಿರುವಂತಹ ಹಾದಿಯೊಂದನ್ನು ಹುಡುಕಿಕೊಂಡು ಮುನ್ನುಗ್ಗುವುದು ಅದೆ ಕಾರಣದಿಂದಲೆ. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಲಿ, ಮರೆತೆ ಹೋದಂತಿದ್ದ ಹವ್ಯಾಸವನ್ನು ಮತ್ತೆ ರೂಢಿಸಿಕೊಳ್ಳಲೆತ್ನಿಸುತ್ತ ಬೆಳೆದು ಪ್ರಬುದ್ಧವಾಗಲೆತ್ನಿಸುವುದಾಗಲಿ, ಜವಾಬ್ದಾರಿಯ ನಿಭಾವಣಿಕೆಯ ವಿಧಾನವನ್ನೆ ಬದಲಿಸಿಕೊಳ್ಳುವ ತರದಲ್ಲಾಗಲಿ, ಒಟ್ಟಾರೆ ತಮ್ಮ ವ್ಯಕ್ತಿತ್ವದ ನಿಲುವಿಗೆ ಒಂದು ಹೊಸ ರೂಪುರೇಷೆಯನ್ನು ಕೊಡುವ ಯಾವುದೆ ಯತ್ನವಾಗಲಿ – ಎಲ್ಲವೂ ಈ ಪರಿಪಕ್ವತೆಯತ್ತ ನಡೆಸಲ್ಹವಣಿಸುವ ಮನದ ಆಯಾಚಿತ ಯತ್ನಗಳೆ ಎನ್ನಬಹುದು. ಆ ಮೂಲಕವೆ ಈ ವಯೋ ಸಂಕ್ರಮಣದ ಸಂಧಿಕಾಲವನ್ನು ದಾಟಿ ಮುನ್ನಡೆಯಲು ಬೇಕಾದ ಕಸುವನ್ನು, ಮನೋಸ್ಥೈರ್ಯವನ್ನು ಒಗ್ಗೂಡಿಸಿಕೊಡುತ್ತದೆ, ಈ ಪಕ್ವತೆಯತ್ತ ನಡೆಸುವ ಪ್ರಕ್ರಿಯೆ. ಆ ಪಕ್ವತೆಯ ಹತ್ತಿರವಾದಂತೆಲ್ಲ ಮತ್ತೆ ಮನ ಶಾಂತಿಯತ್ತ ಚಲಿಸತೊಡಗುತ್ತದೆ – ಹೊಸತಿನ ಸಮತೋಲನದಲ್ಲಿ; ಕೆಲವರು ಅಲ್ಲಿಗೆ ಬೇಗ ತಲುಪಿದರೆ ಮತ್ತೆ ಕೆಲವರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಸೇರುತ್ತಾರೆನ್ನುವುದಷ್ಟೆ ವ್ಯತ್ಯಾಸ.

ಮೊನ್ನೆ ಆಫೀಸಿಗೆ ಬಂದಾಗ ಯಾಕೊ ಅಂದು ತಡವಾಗಿ ಬಂದ ಹನುಮಾಚಾರಿ ಸ್ವಲ್ಪ ಮಂಕಾದಂತೆ ಕುಳಿತಿದ್ದ. ನಾನು ಅವನ ಮುಖವನ್ನೆ ನೋಡುತ್ತ,’ಆಚಾರೀ.. ಈ ಸಾರಿ ನನ್ನ ಬರ್ತಡೆ ಸೆಲಬ್ರೇಟ್ ಮಾಡೋಣ ಅಂದ್ಕೊಂಡಿದ್ದೀನಿ ಕಣೊ , ನಿಂಜೊತೆಗೆ..’ ಎಂದೆ. ಅವನೊಂದು ಅರೆಗಳಿಗೆ ನನ್ನ ಮುಖವನ್ನೆ ನೋಡುತ್ತ ಪಕಪಕನೆ ನಗತೊಡಗಿದ. ನಾನು, ‘ಇಲ್ಲಾ ಆಚಾರಿ.. ಐಯಾಂ ಸೀರಿಯಸ್..ಐ ವಿಲ್ ಡ್ರಿಂಕ್ ವಿತ್ ಯೂ’ ಎಂದೆ. ಅವನು ಒಂದರೆಗಳಿಗೆ ನನ್ನ ಮುಖವನ್ನು ಮತ್ತೆ ನೋಡಿದವನೆ, ‘ ಸರಿ.. ಸಾರ್… ಆದರೆ ಒಂದ್ ಚೇಂಜ್.. ನೋ ಡ್ರಿಂಕ್ಸ್.. ನಾನೀಗ ಕುಡಿಯೋದು ನಿಲ್ಲಿಸಿಬಿಟ್ಟಿದ್ದೇನೆ.. ಯಾವುದಾದರೂ ಒಳ್ಳೆ ಹೆಲ್ತಿ ರೆಸ್ಟೋರೆಂಟಿಗೆ ಹೋಗೋಣ, ಫ್ಯಾಮಿಲಿ ಜೊತೆಲಿ..’ ಎಂದುಬಿಡುವುದೆ?

ಒಟ್ಟಾರೆ, ಎಲ್ಲಾ ಸೇರಿಸಿ ‘ಕಾಲಾಯ ತಸ್ಮೈ ನಮಃ’ ಅಂದುಬಿಡಬಹುದಲ್ಲವೆ?

– ನಾಗೇಶ ಮೈಸೂರು

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)

(Picture source: internet/ social media)

01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)


01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)

___________________________________

(ನಾಗೇಶ ಮೈಸೂರು)

‘ಟ್ರಿನ್… ಟ್ರಿನ್..’ ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ‘ ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?’ ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ‘ ಹಲೊ..’ ಎಂದೆ. ಯಾರಿರಬಹುದೆನ್ನುವ ಅನುಮಾನ ನಿಸ್ಸಂಶಯವಾಗಿ ತೊಲಗಿ ಹೋಗುವ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ಗುಟುರು ದನಿ ಕೇಳಿಸಿತ್ತು.

‘ ಸಾರ್.. ನಾನು ಗುಬ್ಬಣ್ಣ.. ನಮಸ್ಕಾರ ಸಾರ್.. ನಿದ್ದೆಯಿಂದೆಬ್ಬಿಸಿಬಿಟ್ಟೆಂತ ಕಾಣುತ್ತೆ..’ ಎಂದ ಪೆಚ್ಚು ನಗೆ ನಟಿಸುತ್ತ. ನನ್ನ ‘ ಹಲೊ’ ಎನ್ನುವ ಮಾತಿಂದಲೆ ನಿದ್ದೆಯಾಳದಿಂದೆದ್ದು ಬಂದದ್ದನ್ನು ಗಮನಿಸಿ, ಅದಕ್ಕೆ ನನ್ನಿಂದ ಬೆಂಡು ಎತ್ತಿಸಿಕೊಳ್ಳುವ ಮೊದಲೆ ತಾನೆ ಆಡಿ ತಪ್ಪಿಸಿಕೊಳ್ಳುವ ಸ್ಕೆಚ್ ಹಾಕುತ್ತಾ ಇದ್ದಾನೆ ಖದೀಮ…

‘ ಕಾಣುತ್ತೆ ಏನು ಬಂತು ? ಖಡಾಖಂಡಿತವಾಗಿ ನಿದ್ದೆ ಕೆಡಿಸಿಬಿಟ್ಟೆ ನಕ್ಷತ್ರಿಕನ ಹಾಗೆ.. ಹಾಳಾದ್ದು ಪೋನಿಂದ ಏನು ಮಾಡುವ ಹಾಗಿಲ್ಲ. ಇಲ್ಲಾಂದ್ರೆ ಮೊದಲು ಎರಡು ಬಿಗಿದು ಆಮೇಲೆ ಮಿಕ್ಕಿದ ಮಾತಾಡುತ್ತಿದ್ದೆ..’ ಗಡದ್ದಾಗಿ ತಿಂದು ಡೀಪ್ ಸಮಾಧಿ ಸ್ಥಿತಿಯಲ್ಲಿದ್ದವನ ನಿದ್ದೆಗೆಡಿಸಿದ ಕೋಪವೆಲ್ಲ ಧಾರಾಕಾರವಾಗಿ ಗುಬ್ಬಣ್ಣನ ಮೇಲೆ ಮುಸಲಧಾರೆಯಾಗಲಿಕ್ಕೆ ಸಿದ್ದವಾಗುತ್ತಿರುವಂತೆ.

‘ಸಾರಿ ಸಾರ್..ಬೇಜಾರು ಮಾಡಿಕೊಳ್ಳಬೇಡಿ… ಮ್ಯಾಟರು ತುಂಬಾ ಇಂಪಾರ್ಟೆಂಟು.. ಅದಕ್ಕೆ ಮಟಮಟ ಮಧ್ಯಾಹ್ನಾಂತ ಗೊತ್ತಿದ್ದೂ ತಡ್ಕೊಳ್ಳೊಕಾಗ್ಲಿಲ್ಲ….’ ಎಂದ ಗುಬ್ಬಣ ಸಂತೈಸುವ ದನಿಯಲ್ಲಿ.

ಅವನ ಏಮಾರಿಸುವ ಗುಣ ಗೊತ್ತಿದ್ದ ನಾನು ಸುಲಭದಲ್ಲಿ ಬಲೆಗೆ ಬೀಳದೆ ಇರುವಂತೆ ಎಚ್ಚರಿಕೆ ವಹಿಸುತ್ತ ,’ ಅದೆಲ್ಲಾ ಪೀಠಿಕೆ ಬೇಡ.. ಸುಖ ನಿದ್ದೆಯಿಂದ ಎಬ್ಬಿಸಂತು ಆಯ್ತಲ್ಲ..? ಆ ಪಾಪವೇನು ಸುಮ್ಮನೆ ಬಿಡಲ್ಲ.. ತಿಗಣೆ ಜನ್ಮವೆ ಗ್ಯಾರಂಟಿ ನಿನಗೆ.. ಅದು ಬಿಟ್ಟು ಮ್ಯಾಟರಿಗೆ ಬಾ’ ಎಂದೆ ಮೀಟರಿನ ಮೇಲೆ ಕಣ್ಣಿಟ್ಟ ಆಟೋ ಗಿರಾಕಿಯ ಹಾಗೆ.

‘ ತಿಗಣೆಯಾದ್ರೂ ಸರೀನೆ ನಿಮ್ಮ ಹಾಸಿಗೇಲೆ ಸೇರ್ಕೊಳ್ಳೊ ದೋಸ್ತಿ ನಮ್ಮದು ಸಾರ್…ಸುಮ್ನೆ ಯಾಕೆ ಕೋಪ ನಿಮಗೆ?’ ತಿಗಣೆಯಾದರೂ ಕಾಡುವವನೆ ಹೊರತು ಬಿಡುವವನಲ್ಲ ಎನ್ನುವ ವಿಕ್ರಮನ ಭೇತಾಳದಂತೆ ಪಟ್ಟು ಬಿಡದೆ ನುಡಿದ ಗುಬ್ಬಣ್ಣ..

‘ ಗುಬ್ಬಣ್ಣಾ… ನಾನೀಗ ಪೋನ್ ಇಟ್ಟು ಮತ್ತೆ ನಿದ್ದೆಗೆ ಹೋಗಿ ಬಿಡ್ತೀನಿ ನೋಡು..ಬೇಗ ವಿಷಯಕ್ಕೆ ಬಾ…’ ಹೆದರಿಸುವ ದನಿಯಲ್ಲಿ ಗದರಿಸಿದೆ.

‘ ಆಯ್ತು.. ಆಯ್ತು ಸಾರ್.. ಬಂದೆ… ಆದರೆ ಮ್ಯಾಟರು ಪೋನಲ್ಲಿ ಹೇಳೊದಲ್ಲ… ಶಕುಂತಲಾ ರೆಸ್ಟೋರೆಂಟಲ್ಲಿ ಮೀಟ್ ಮಾಡಿ ಆರ್ಡರ ಮಾಡಿ ತಿಂತಾ ಜತೆಜತೆಯಲ್ಲೆ ವಿಷಯ ಹೇಳ್ತೀನಿ..’

‘ ಅಯ್ಯೊ ಪೀಡೆ..! ಹಾಗಿದ್ದ ಮೇಲೆ ಮನೆ ಹತ್ತಿರ ತಲುಪಿದ ಮೇಲಲ್ಲವ ಪೋನ್ ಮಾಡೋದು ? ಇನ್ನೊಂದು ಸ್ವಲ್ಪ ಹೊತ್ತು ನೆಮ್ಮದಿಯ ನಿದ್ದೆ ತೆಗೀತಿದ್ನಲ್ಲಾ ? ಊರಿಗೆ ಮುಂಚೆ ಯಾಕೆ ಪೋನ್ ಮಾಡ್ಬೇಕಿತ್ತೊ?’ ಮತ್ತೆ ಮನಸಾರೆ ಬೈಯುತ್ತ ಯಥೇಚ್ಛವಾಗಿ ಮಂತ್ರಾಕ್ಷತೆ ಹರಿಸಿದ್ದೆ ಗುಬ್ಬಣ್ಣನ ಮೇಲೆ.

‘ ತಾಳಿ ಸಾರ್ ಸ್ವಲ್ಪ… ಸುಮ್ನೆ ಕೂಗಾಡ್ಬೇಡಿ… ಈಗ ನಿಮ್ಮ ಮನೆಗೆ ಮೂರು ಸ್ಟೇಷನ್ ದೂರದಲ್ಲಿದ್ದೀನಿ.. ಅಲ್ಲಿಗೆ ಬರೋಕೆ ಹತ್ತು ನಿಮಿಷ ಸಾಕು.. ಅಷ್ಟರಲ್ಲಿ ಎದ್ದು ರೆಡಿಯಾಗಲಿ ಅಂತ್ಲೆ ಈಗ ಪೋನ್ ಮಾಡಿದ್ದು..’ ಎಂದು ಬಾಯಿ ಮುಚ್ಚಿಸಿಬಿಟ್ಟ.

‘ ಸರಿ ಹಾಳಾಗ್ಹೋಗು .. ನಂದು ರೆಡಿಯಾಗೋದು ಸ್ವಲ್ಪ ಲೇಟಾಗುತ್ತೆ, ಬಂದು ಕಾಯಿ..’ ಎಂದು ಉರಿಸುವ ದನಿಯಲ್ಲಿ ಹೇಳಿ ಪೋನ್ ಇಡುವುದರಲ್ಲಿದ್ದೆ.. ಆಗ ಮತ್ತೆ ಗುಬ್ಬಣ್ಣನೆ, ‘ಸಾರ್..ಒಂದೆ ನಿಮಿಷ… ಅಪರೂಪಕ್ಕೆ ನಮ್ಮೆಜಮಾನತಿ ಇವತ್ತು ‘ದಂರೂಟ್’ ಮಾಡಿದ್ಲು.. ನಿಮಗು ಸ್ವಲ್ಪ ಸ್ಯಾಂಪಲ್ ತರ್ತಾ ಇದೀನಿ… ಶುಗರು ಗಿಗರು ಅಂತೆಲ್ಲ ನೆಪ ಹೇಳ್ಬೇಡಿ ಸಾರ್..’ ಅಂದ.

‘ದಂರೂಟ್’ ಅಂದರೆ ನನ್ನ ‘ಪಕ್ಕಾ ವೀಕ್ನೇಸ್’ ಅಂತ ಚೆನ್ನಾಗಿ ಗೊತ್ತು ಗುಬ್ಬಣ್ಣನಿಗೆ. ಶುಗರು ಇರಲಿ ಅದರಪ್ಪನಂತಹ ಕಾಯಿಲೆಯಿದ್ದರೂ ಬಿಡುವವನಲ್ಲ ಅಂತ ಗೊತ್ತಿದ್ದೆ ಗಾಳ ಹಾಕುತ್ತಿದ್ದಾನೆ ಕಿಲಾಡಿ.. ಅಲ್ಲದೆ ಸಿಂಗಪುರದಲ್ಲಿ ಬೇರೆಲ್ಲಾ ಸಿಕ್ಕಬಹುದಾದರು ‘ದಂರೂಟ್’ ಮಾತ್ರ ಎಲ್ಲಿಯೂ ಸಿಕ್ಕುವುದಿಲ್ಲ; ನನ್ನ ಶ್ರೀಮತಿಗೆ ಅದನ್ನು ಮಾಡಲು ಬರುವುದಿಲ್ಲ ಅಂತ ಅವನಿಗೂ ಗೊತ್ತು… ಆ ಹೆಸರು ಎತ್ತುತ್ತಿದ್ದ ಹಾಗೆ ನಾನು ಅರ್ಧ ಶಾಂತವಾದ ಹಾಗೆ ಎಂದು ಲೆಕ್ಕಾಚಾರ ಹಾಕಿಯೆ ಕಾಳು ಹಾಕುತ್ತಿದ್ದಾನೆ.. ಅಥವಾ ಕೂಲಾಗಿಸಲು ಸುಖಾಸುಮ್ಮನೆ ಬರಿ ಹೋಳು ಹೊಡೆಯುತ್ತಿದ್ದಾನೆಯೊ , ಏನು ?

‘ ಗುಬ್ಬಣ್ಣಾ… ಈ ವಿಷಯದಲ್ಲಿ ಮಾತ್ರ ರೀಲು ಬಿಡಬೇಡ ನೋಡು… ನೀನು ತಿನ್ನ ಬೇಕೂಂತಿರೊ ಜಾಗದಲ್ಲಿ ನೀನೆ ಕಿಚನ್ ಸೇರುವ ಹಾಗೆ ತದುಕಿ ಹಾಕಿಬಿಡುತ್ತೇನೆ’ ಎಂದೆ ವಾರ್ನಿಂಗ್ ದನಿಯಲ್ಲಿ..

‘ ಸಾರ್.. ದಂರೂಟಿನ ವಿಷಯದಲ್ಲಿ, ಅದರಲ್ಲೂ ನಿಮ್ಮ ಜತೆ ಹುಡುಗಾಟವೆ? ಖಂಡಿತ ಇಲ್ಲ ಸಾರ್..ನಮ್ಮಪ್ಪರಾಣೆ, ಗೂಗಲೇಶ್ವರನಾಣೆ ಕಟ್ಟಿಸಿಕೊಂಡು ಬರ್ತಾ ಇದೀನಿ.. ಆದ್ರೆ ಈ ಟ್ರೈನು ಏಸಿಗೆ ಅರ್ಧ ಬಿಸಿಯೆಲ್ಲ ಹೋಗಿ ತಣ್ಣಗಿದ್ರೆ ನನ್ನ ಬೈಕೋಬೇಡಿ….’. ಮೊದಲಿಗೆ ಅವರಪ್ಪ ಈಗಾಗಲೆ ‘ಗೊಟಕ್’ ಅಂದಿರೋದ್ರಿಂದ ಆ ಅಣೆ ಹಾಕೋದಕ್ಕೆ ಯಾವ ತಾಪತ್ರಯವೂ ಇರಲಿಲ್ಲ. ಇನ್ನು ಗೂಗಲೇಶ್ವರ ಸತ್ತವನೊ, ಬದುಕಿದವನೊ ಎಂದು ಗೂಗಲ್ ಮಾಡಿಯೆ ಹುಡುಕಿ ನೋಡಬೇಕೇನೊ?

ಅಲ್ಲಿಗೆ ನನ್ನ ನಿದ್ರೆಯೆಲ್ಲ ಪೂರ್ತಿ ಹಾರಿ ಹೋಗಿ, ನಾಲಿಗೆ ಆಗಲೆ ಕಡಿಯತೊಡಗಿತ್ತು.. ‘ಸರೀ ಗುಬ್ಬಣ್ಣ.. ಸೀಯೂ ಇನ್ ಟೆನ್ ಮಿನಿಟ್ಸ್ ..’ ಎನ್ನುತ್ತ ಬಚ್ಚಲು ಮನೆಗೆ ನಡೆದಿದ್ದೆ.. ಶಕುಂತಲಾಗೆ ಹೋಗುವ ದಾರಿಯಲ್ಲೆ ಟ್ರೈನ್ ಸ್ಟೇಷನ್ನಿನ ಹತ್ತಿರ ಕಾದು, ಹೊರಬರುತ್ತಿದ್ದಂತೆ ಹಿಡಿಯಲು ಸಿದ್ದನಾಗಿ ನಿಂತಿದ್ದವನನ್ನು ನಿರಾಶೆಗೊಳಿಸದಂತೆ ಎಸ್ಕಲೇಟರ್ ಹತ್ತಿ ಬರುತ್ತಿರುವ ಗುಬ್ಬಣ್ಣ ಕಾಣಿಸಿದ. ಬಹಳ ಮುಂಜಾಗರೂಕತೆ ವಹಿಸಿದವನ ಹಾಗೆ ಬಲದ ಕೈಯಲೊಂದು ಪುಟ್ಟ ಸ್ಟೀಲು ಡಬರಿ ಹಿಡಿದುಕೊಂಡೆ ಬರುತ್ತಿರುವುದನ್ನು ಗಮನಿಸಿ ಈ ಬಾರಿ ಬರಿ ಹೋಳು ಹೊಡೆದಿಲ್ಲ, ನಿಜವಾಗಿಯೂ ‘ದಂರೋಟು’ ತಂದಿರುವನೆಂದು ಖಾತ್ರಿಯಾಗಿ ಬಿಗಿದಿದ್ದ ನರಗಳೆಲ್ಲ ಸಡಿಲಾಗಿ ಮುಖದಲ್ಲಿ ಕಂಡೂಕಾಣದ ತೆಳು ನಗೆ ಹರಡಿಕೊಂಡಿತು – ಸ್ವಲ್ಪ ಮೊದಲು ಗುಬ್ಬಣ್ಣನ ಜೊತೆಯೆ ವಾಗ್ಯುದ್ಧಕ್ಕಿಳಿದಿದ್ದೆ ಸುಳ್ಳೇನೊ ಎನ್ನುವ ಹಾಗೆ.

ಇಬ್ಬರೂ ನಡೆಯುತ್ತಿದ್ದ ಪುಟ್ಪಾತಿನ ಪೂರ್ತಿ ಅಗಲವನ್ನು ನಮ್ಮ ವಿಶಾಲ ‘ತನು’ಮನಗಳಿಂದ ಈಗಾಗಲೆ ಧಾರಾಳವಾಗಿ ಆಕ್ರಮಿಸಿಕೊಂಡು ಮಿಕ್ಕವರೆಲ್ಲ ನಮ್ಮ ಹಿಂದೆ ಪೆರೇಡ್ ಬರುವಂತೆ ಮಾಡಿದ್ದರು, ಏನೂ ಗೊತ್ತಿರದವರಂತೆ ಪಕ್ಕಕ್ಕೆ ಸರಿದು ರೆಸ್ಟೋರೆಂಟ್ ಒಳಗೆ ಹೊಕ್ಕೆವು. ಊಟದ ಸಮಯ ಮೀರಿ ಬಹಳ ಹೊತ್ತಾಗಿದ್ದ ಕಾರಣ ಹೆಚ್ಚು ಜನರಿರಲಿಲ್ಲವಾಗಿ ನಮಗೆ ಮಾತಿಗೆ ಬೇಕಿದ್ದ ದೇವಮೂಲೆ ಸರಾಗವಾಗಿ ಸಿಕ್ಕಿತ್ತು. ಅಲ್ಲಿದ್ದ ಐ ಪ್ಯಾಡಿನ ಮೂಲಕ ಆರ್ಡರ ಮಾಡಿದ ಮೇಲೆ ನನಗೊಂದು ಪ್ಲೇಟ್ ಪಕೋಡ / ಬಜ್ಜಿ ಜತೆ ಸೇರಿಸಿ ಮಾತಿಗಾರಂಭಿಸಿದ.

‘ ಸಾರ್.. ನೀವ್ ಹೇಗು ಕಥೆ, ಕವನಾ ಅಂತ ಬರ್ಕೊಂಡ್ ಸುಮ್ನೆ ಟೈಮ್ ವೇಸ್ಟ್ ಮಾಡ್ತಿರ್ತೀರಾ.. ಅದರ ಬದಲು ಈಗ ನಾನು ಹೇಳೊ ಥೀಮಲ್ಲಿ ಒಂದು ಫರ್ಸ್ಟ್ ಕ್ಲಾಸ್ ಇಂಗ್ಲೀಷ್ ಆರ್ಟಿಕಲ್ ಬರೆದುಕೊಡಿ..ಸಮಾನತೆ – ಈಕ್ವಾಲಿಟಿ ಕುರಿತು .. ಯಾವುದೊ ಇಂಟರ್ನ್ಯಾಶನಲ್ ಲೆವೆಲ್ ಮ್ಯಾಗಜೈನಿಗೆ ಅರ್ಜೆಂಟ್ ಬೇಕಂತೆ’ ಎಂದ.

ಗುಬ್ಬಣ್ಣ ಬಿಲ್ಕುಲ್ ರೆಡಿಯಾಗಿ ಬಂದಂತಿತ್ತು.. ನಾನು ಬರೆದದ್ದು ಇಂಟರನ್ಯಾಶನಲ್ ಲೆವಲ್ಲಲ್ಲಿರಲಿ, ಯಾವುದೊ ಒಂದು ನಾಲ್ಕೈದು ಜನ ಓದೊ ಬ್ಲಾಗಿನಲ್ಲಿ ಬರುತ್ತೆ ಅಂದರು ನಾನು ಬರೆದುಕೊಡುವವನೆ ಅಂತ ಅವನಿಗೆ ಚೆನ್ನಾಗಿ ಗೊತ್ತು.. ನನ್ನ ವೀಕ್ ಏರಿಯ ಅದು.. ಏನಾದರು ಬರೆದು, ಪಬ್ಲಿಷ್ ಮಾಡಿ ಫೇಮಸ್ ಆಗ್ಬೇಕನ್ನೋದು ನನ್ನ ವೀಕ್ನೆಸ್ ಅಂತ ಗುಬ್ಬಣ್ಣನಿಗೂ ಚೆನ್ನಾಗಿ ಗೊತ್ತು..

‘ಗುಬ್ಬಣ್ಣಾ ಕಥೆ ಅನ್ನು ಕವನ ಅನ್ನು, ಊಹೆ ಮಾಡಿ ಹುಟ್ಟಿಸ್ಕೊಂಡು ಏನೊ ಬರೆದುಬಿಡಬಹುದು..ಇದು ಸೀರಿಯಸ್ ಆರ್ಟಿಕಲ್.. ಅಲ್ದೆ ಸರಿಯಾದ ಥೀಮಿನ ಐಡಿಯಾನೂ ಇಲ್ದೆ ನಾನು ಏನೂಂತ ಬರೀಲಿ?’ ನಾನಿನ್ನು ಅರ್ಥವಾಗದ ಗೊಂದಲದಲ್ಲೆ ನುಡಿದೆ.. ಒಂದು ಕಡೆ ಓವರ್ನೈಟ್ ಹೆಸರಾಗಿಬಿಡುವ ಛಾನ್ಸ್ ಎಂದು ಎಗ್ಸೈಟ್ ಆಗುತ್ತಿದ್ದರೆ, ಮತ್ತೊಂದೆಡೆ ‘ಸರಿಯಾದ ಹೂರಣ’ವಿಲ್ಲದೆ ಇದೆಲ್ಲಾ ಅಗುವ ಮಾತಾ ?’ ಎನ್ನುವ ಅನುಮಾನದ ಜಿಜ್ಞಾಸೆ.

‘ ಏನಿಲ್ಲ ಸಾರ್, ಒಂದಷ್ಟು ಆರ್ಗ್ಯುಮೆಂಟ್ ಒಟ್ಟಾಗಿಸಿ ನೀವೊಂದು ಅದ್ಬುತ ಲೇಖನ ಬರೆದುಕೊಡಿ ಸಾಕು.. ಮಿಕ್ಕಿದ್ದು ನನಗೆ ಬಿಡಿ.. ನೋಡ್ತಾ ಇರಿ ಹೇಗೆ ನಿಮ್ಮನ್ನ ಸ್ಟಾರ್ ಮಾಡಿಬಿಡ್ತೀನಿ ಅಂತ’ ಎಂದ.

ನನಗೆ ಅದರ ಬಗೆ ಅನುಮಾನವಿದ್ದರೂ, ಹಾಳು ಕೀರ್ತಿಕಾಮನೆಯ ಶನಿ ಯಾರನು ತಾನೆ ಬಿಟ್ಟಿದ್ದು? ಪ್ರಲೋಭನೆಗೊಳಗಾದವನಂತೆ ಆಯಾಚಿತವಾಗಿ ತಲೆಯಾಡಿಸಿದ್ದೆ…

‘ ಆದರೆ ಒಂದೆ ಒಂದು ಕಂಡೀಷನ್ನು ಸಾರ್..’

ಇದೋ ‘ ಕ್ಯಾಚ್’ ಈಗ ಬಂತು ಅಂದುಕೊಂಡೆ – ‘ಕಂಡೀಷನ್ನಾ? ಏನಾ ಕಂಡೀಷನ್ನು?’

‘ ಏನಿಲ್ಲಾ ಸಾರ್ ಗಾಬರಿಯಾಗಬೇಡಿ.. ಈ ಲೇಖನ ನಾಳೆ ಬೆಳಿಗ್ಗೆಯೆ ಕಳಿಸಬೇಕಂತೆ.. ಅಂದರೆ ಇವತ್ತು ರಾತ್ರಿಯೆ ನೀವಿದನ್ನ ಬರೆದುಕೊಡಬೇಕು..’

‘ ಗುಬ್ಬಣ್ಣಾ ಈಗಾಗಲೆ ಸಾಯಂಕಾಲ..!’

‘ ಸಾರ್.. ಇಂಟರ ನ್ಯಾಶನಲ್ ಎಕ್ಸ್ ಪೋಷರ್.. ಸುಮ್ಮನೆ ಬಿಟ್ಟುಕೊಡಬೇಡಿ’ ಗುಬ್ಬಣ್ಣ ಮತ್ತೆ ಪ್ರಲೋಭಿಸಿದ..

‘ ಸರಿ ಹಾಳಾಗಲಿ.. ಏನೊ ಬರೆದು ರಾತ್ರಿಯೆ ಕಳಿಸುತ್ತೀನಿ… ಏನಾಯ್ತು ಅಂತ ಬೆಳಿಗ್ಗೆ ಹೇಳು’ ಎಂದು ಮಾತು ಮುಗಿಸಿದ್ದೆ.

‘ ಸಾರ್.. ಇವತ್ತೆ ಲಾಸ್ಟ್ ಡೇಟ್ ಆಗಿರೋದ್ರಿಂದ ಡೈರೆಕ್ಟಾಗಿ ಈ ಇ-ಮೇಲ್ ಅಡ್ರೆಸ್ಸಿಗೆ ಕಳಿಸಿ ಅಂತ ಹೇಳಿದ್ದಾರೆ, ತಗೊಳ್ಳಿ’ ಅಂತ ಒಂದು ಮಿಂಚಂಚೆ ವಿಳಾಸವಿದ್ದ ಚೀಟಿ ಜೇಬಿಂದ ತೆಗೆದುಕೊಟ್ಟ..

ಮನೆಗೆ ಬಂದವನೆ ನೇರ ಕಂಪ್ಯೂಟರಿನ ಮುಂದೆ ಕುಳಿತು ‘ಕಾಂಟ್ರೊವರ್ಸಿ’ ಆಗದ ಹಾಗೆ, ಈಕ್ವಾಲಿಟಿಯ ಎರಡು ಕಡೆಯ ಪಾಯಿಂಟುಗಳು ಹೈ ಲೈಟ್ ಆಗುವ ಹಾಗೆ, ಒಂದು ಲೇಖನ ಬರೆದು, ತಿದ್ದಿ ತೀಡಿ, ಮಧ್ಯರಾತ್ರಿ ಹನ್ನೆರಡಾಗುವ ಮೊದಲೆ ಇ-ಮೇಲಲ್ಲಿ ಕಳಿಸಿ ಮೇಲೆದ್ದಿದ್ದೆ. ಸುಸ್ತಾಗಿ ನಿದ್ದೆ ಎಳೆಯುತ್ತ ಇದ್ದುದರ ಜತೆಗೆ ಬರೆದ ಆಯಾಸವೂ ಸೇರಿಕೊಂಡು ಹಾಸಿಗೆಗೆ ಬಿದ್ದಂತೆ ಗಾಢ ನಿದ್ದೆಗೆ ಜಾರಿಕೊಂಡ್ದಿದ್ದೆ.. ರಾತ್ರಿಯೆಲ್ಲಾ ಇಂಟರ್ ನ್ಯಾಶನಲ್ ಮ್ಯಾಗಜೈನಿನಲ್ಲಿ ಪಬ್ಲಿಷ್ ಆದ ಹಾಗೆ, ಫರ್ಸ್ಟ್ ಪ್ರೈಜು ಹೊಡೆದ ಹಾಗೆ… ಏನೇನೊ ಕನಸು…

ಮರುದಿನ ಎದ್ದಾಗಲೆ ಮಟಮಟ ಮಧ್ಯಾಹ್ನವಾಗಿ ಹಿಂದಿನ ದಿನದ್ದೆಲ್ಲ ಮರೆತೆ ಹೋದಂತಾಗಿತ್ತು. ಪೂರ್ತಿ ಎಚ್ಚರವಾಗುತ್ತಿದ್ದಂತೆ ಹಿಂದಿನ ರಾತ್ರಿ ಕಳಿಸಿದ್ದ ಮಿಂಚಂಚೆ ನೆನಪಾಗಿ ಗುಬ್ಬಣ್ಣನಿಗೆ ಪೋನಾಯಿಸಿದೆ.

ಲೈನಿನಲ್ಲಿ ಸಿಕ್ಕಿದರು ಯಾಕೊ ಗುಬ್ಬಣ್ಣನ ದನಿ ಸ್ವಲ್ಪ’ಡೌನ್’ ಆದಂತಿತ್ತು..

‘ ಸಾರ್..ಈಗ ತುಂಬ ಬಿಜಿ.. ಆಮೇಲೆ ಪೋನ್ ಮಾಡ್ತೀನಿ.. ‘ ಎಂದ

‘ಯಾಕೊ ವಾಯ್ಸ್ ಡಲ್ಲೂ ಗುಬ್ಬಣ್ಣ? ಹುಷಾರಾಗಿದ್ದಿಯಾ ತಾನೆ ? ಇವತ್ತು ಆಫೀಸಿಗೆ ರಜೆಯಲ್ವ – ಇವತ್ತೆಂತಾ ಬಿಜಿನಯ್ಯ..?’ ಎಂದೆ.

‘ ಸಾರ್.. ಎಲ್ಲಾ ಆಮೇಲೆ ಹೇಳ್ತೀನಿ… ಸ್ವಲ್ಪ ಅರ್ಜೆಂಟು’ ಅಂದಾಗ ನನಗೇಕೊ ಮೆಲ್ಲಗೆ ಅನುಮಾನ ಶುರುವಾಯ್ತು.

‘ ಗುಬ್ಬಣ್ಣಾ.. ನೀನು ಹೇಳಿದ್ದ ಇ-ಮೇಲ್ ಅಡ್ರೆಸ್ಸಿಗೆ ಆರ್ಟಿಕಲ್ ಬರೆದು ಕಳಿಸಿಬಿಟ್ಟೆ ಕಣೊ, ರಾತ್ರಿ ಹನ್ನೆರಡಾಗೊ ಮೊದಲೆ… ಇನ್ನೊಂದು ಐದು ನಿಮಿಷ ತಡವಾಗಿದ್ರು ಡೇಡ್ ಲೈನ್ ಮಿಸ್ ಆಗಿಬಿಡ್ತಿತ್ತು..’ ಎಂದೆ.

‘ ಕಳಿಸಿಯೆಬಿಟ್ರಾ..? ಕಳಿಸದೆ ಇದ್ರೆ ಚೆನ್ನಾಗಿತ್ತೇನೊ..?’ ಗುಬ್ಬಣ್ಣ ಏನೊ ಗೊಣಗುಟ್ಟಿದ್ದು ಕೇಳಿಸಿತು…

‘ ಗುಬ್ಬಣ್ಣಾ… ಯಾಕೊ ನಿನ್ನೆಯೆಲ್ಲ ಅಷ್ಟೊಂದ್ ಅರ್ಜೆಂಟ್ ಮಾಡಿದವನು ಇವತ್ತು ಪೂರ್ತಿ ಟುಸ್ ಬಲೂನಿನ ಹಾಗೆ ಮಾತಾಡ್ತಾ ಇದ್ದೀ..?’

‘ಸಾರ್…’ ರಾಗವಾಗಿ ಎಳೆದ ಗುಬ್ಬಣ್ಣನ ದನಿ ಕೇಳಿಯೆ ಏನೊ ಎಡವಟ್ಟಿರುವಂತೆ ಅನಿಸಿತು…

‘ಏನೊ..?’

‘ನಾವಿಬ್ಬರು ಏಮಾರಿಬಿಟ್ವಿ ಸಾರ್…’

ನಾನು ಕೂತಲ್ಲೆ ಬಾಂಬ್ ಬಿದ್ದವರಂತೆ ಅದುರಿಬಿದ್ದೆ ಅವನ ಮಾತು ಕೇಳುತ್ತಿದ್ದಂತೆ, ಆ ಗಾಬರಿಯಲ್ಲೆ ‘ಯಾಕೊ.. ಏನಾಯ್ತೊ..?’ ಎಂದು ಹೆಚ್ಚು ಕಡಿಮೆ ಕಿರುಚಿದ ದನಿಯಲ್ಲಿ…..

‘ ಸಾರ್ …ಇವತ್ತು ಬೆಳಿಗ್ಗೆ ಇನ್ನೊಂದು ಇ-ಮೇಲ್ ಬಂದಿತ್ತು ಸಾರ್.. ನಿನ್ನೆ ನಾವು ಕಳಿಸಿದ ಇ-ಮೇಲ್ ಎಲ್ಲ ಹೋಕ್ಸ್ ಸಾರ್, ಬರಿ ಫೇಕೂ..’ ಎಂದ…

‘ವಾ….ಟ್…? ಇಂಟರ ನ್ಯಾಶನಲ್ ಮ್ಯಾಗಜೈನ್..? ಅರ್ಟಿಕಲ್ ಪಬ್ಲಿಷಿಂಗ್.. ? ಎಲ್ಲಾ ಹೋಕ್ಸಾ…?’

‘ ಹೌದು ಸಾರ್.. ಇವತ್ತು ಬೆಳಿಗ್ಗೆ ಬಂದ ಮೆಸೇಜಲ್ಲಿ ಥ್ಯಾಂಕ್ಸ್ ಫಾರ್ ದ ಪಾರ್ಟಿಸಿಪೇಷನ್ ಅಂಡ್ ಸಪೋರ್ಟ್ ಅಂತ ಥ್ಯಾಂಕ್ಯೂ ಕಾರ್ಡ್ ಬೇರೆ ಕಳಿಸಿದ್ದಾರೆ ಸಾರ್..’ ಅಂದ.

ನನಗೆ ಗುಬ್ಬಣ್ಣನ ಮೇಲೆ ಪೂರ್ತಿ ಉರಿಯುತ್ತಿದ್ದರು ಕೋಪವನ್ನು ಹಾಗೆಯೆ ಬಿಗಿ ಹಿಡಿದವನೆ, ‘ ಯಾಕೆ ಹೋಕ್ಸ್ ಮಾಡಿದ್ದು ಅಂತೇನಾದ್ರೂ ಬರೆದಿದ್ದಾರಾ?’ ಎಂದೆ.

‘ ಸಾರ್.. ಇವ್ವತ್ತೆಷ್ಟು ಡೇಟು ಹೇಳಿ..?’

‘ ಈಗ ನನ್ನ ಪ್ರಶ್ನೆಗೆ ಉತ್ತರ ಹೇಳೂಂದ್ರೆ ಡೇಟ್ ಗೀಟೂ ಅಂತ ಡೈವರ್ಟ್ ಮಾಡೋಕ್ ಟ್ರೈ ಮಾಡ್ತಾ ಇದೀಯಾ ?’

‘ ಮೊದ್ಲು ಹೇಳಿ ಸಾ.. ಆಗ ನಿಮ್ಗೆ ಗೊತ್ತಾಗುತ್ತೆ..’

‘ ಇವತ್ತು ಏಪ್ರಿಲ್ ಎರಡೂ..’

‘ ಅಂದ ಮೇಲೆ ನಿನ್ನೆ ಡೇಟು ಎಷ್ಟು ಸಾರ್..’

‘ ಇವತ್ತು ಎರಡಾದ್ರೆ ನಿನ್ನೆ ಎಷ್ಟೂಂತ ಗೊತ್ತಿಲ್ವೆ.. ಏಪ್ರಿಲ್ ಫಸ್ಟ್..’

ಹಾಗೆನ್ನುತ್ತಿದ್ದಂತೆ ತಟ್ಟನೆ ನನಗೆ ಜ್ಞಾನೋದಯವಾಯ್ತು – ಇದು ಯಾರೊ ಏಪ್ರಿಲ್ ಪೂಲ್ ಮಾಡಲು ನಡೆಸಿದ ಫ್ರಾಂಕ್ ಎಂದು…!

‘ ಗುಬ್ಬಣ್ಣಾ..? ಅಂದ್ರೆ…..’

‘ ಹೌದು ಸಾರ್… ನಾವಿಬ್ರೂ ಯಾರೊ ಮಾಡಿದ ಫ್ರಾಂಕಿಗೆ ಏಪ್ರಿಲ್ ಪೂಲ್ ಆಗಿ ಹೋದ್ವಿ – ಸೊಫಿಸ್ಟಿಕೇಟ್ ಆಗಿ..’ ಗುಬ್ಬಣ್ಣನ ದನಿಯಲ್ಲಿದ್ದುದ್ದು ಖೇದವೊ, ಹಾಸ್ಯವೊ ಗೊತ್ತಾಗಲಿಲ್ಲ. ಹಾಗೆ ನೋಡಿದರೆ ನಿಜಕ್ಕು ಪೂಲ್ ಆಗಿದ್ದು ಅವನಲ್ಲ, ನಾನು.. ಅದಕ್ಕೆ ಅವನೂ ಒಳಗೊಳಗೆ ನಗುತ್ತಿರಬೇಕು..

‘ ಇವತ್ತು ಕಳಿಸಿದ ಮೇಸೇಜಲ್ಲಿ ಅದೇ ಬರೆದಿತ್ತು ಸಾರ್.. ಥ್ಯಾಂಕ್ ಫಾರ್ ದಿ ಎಫರ್ಟ್ ಅಂಡ್ ಪಾರ್ಟಿಸಿಪೇಶನ್ ಅಂತ.. ಜತೆಗೆ ಗುಡ್ ಲಕ್ ಫಾರ್ ದಿ ಆರ್ಟಿಕಲ್ ಅಂತ..’

ಮಿಂಚಂಚೆ ಕಳಿಸುವಾಗ, ರೆಕಮೆಂಡ್ ಮಾಡಿದವರ ಹೆಸರು, ಇ-ಮೇಲ್ ವಿಳಾಸವನ್ನು ಜತೆಗೆ ಸೇರಿಸಿ ಕಳಿಸಬೇಕೆಂದು ಯಾಕೆ ಹೇಳಿದ್ದರೆಂದು ಈಗರಿವಾಗಿತ್ತು. ನನ್ನ ಇ-ಮೇಲ್ ತೆಗೆದು ನೋಡಿದ್ದರೆ ಗುಬ್ಬಣ್ಣನ ಥ್ಯಾಂಕ್ಯೂ ಮೇಲ್ ನನ್ನ ಮೇಲ್ ಬಾಕ್ಸಲ್ಲೂ ಇರುತ್ತಿತ್ತೆಂದು ಖಚಿತವಾಗಿತ್ತು.

‘ ಗುಬ್ಬಣ್ಣಾ… ಇವತ್ತು ಸಾಯಂಕಾಲ ಫ್ರೀ ಇದೀಯಾ? ಜಗ್ಗಿಸ್ ರೆಸ್ಟೊರೆಂಟಲ್ಲಿ ಬಟರ್ ಚಿಕನ್ ತುಂಬಾ ಚೆನ್ನಾಗಿರುತ್ತೆ..’

ಗುಬ್ಬಣ್ಣಾ ಕಿಲಾಡಿ.. ಅವನಿಗೆ ಚಿಕನ್ನಿನ ಯಾವ ಸೈಡಿಗೆ ಬಟರು ಹಾಕಿರುತ್ತೆಂದು ಚೆನ್ನಾಗಿ ಗೊತ್ತು.. ‘ ಸಾರ್ ಇವತ್ತು ಪೂರ್ತಿ ಬಿಜಿ ನೆಕ್ಸ್ಟ್ ವೀಕ್ ನೋಡೋಣಾ … ಅಂದಹಾಗೆ ಇಬ್ಬರು ಹೀಗೆ ಏಮಾರಿದ್ದು ಯಾರಿಗು ಗೊತ್ತಾಗೋದು ಬೇಡಾ.. ನಾನೂ ಬಾಯ್ಬಿಡೊಲ್ಲಾ, ನೀವೂ ಸುಮ್ಮನಿದ್ದುಬಿಡಿ…’ ಎಂದು ಅವನೆ ಪೋನಿಟ್ಟುಬಿಟ್ಟ – ಮೊದಲ ಬಾರಿಗೆ…!

ನನಗೆ ಮಾತ್ರ ಕೋಪ ಇಳಿದಿರಲಿಲ್ಲ – ಅದರಲ್ಲು ಗುಬ್ಬಣ್ಣನ ಮೇಲೆ, ‘ಅವನು ಏಮಾರಿದ್ದಲ್ಲದೆ, ನನ್ನನ್ನು ಸಿಕ್ಕಿಸಿದನಲ್ಲಾ’ ಎಂದು. ಆ ಕೋಪಕ್ಕೆ ಮತ್ತೊಮ್ಮೆ ಕಂಪ್ಯೂಟರಿನ ಮುಂದೆ ಕುಳಿತೆ, ಇಡೀ ಎಪಿಸೋಡನ್ನೆ ಈ ಬರಹದ ರೂಪಕ್ಕಿಳಿಸಿ ಅವನನ್ನು ಎಕ್ಸ್ ಪೋಸ್ ಮಾಡಲು – ಹೀಗಾದರು ಅವನ ಮೇಲೆ ಸೇಡು ತೀರಿಸಿಕೊಳ್ಳುವವನ ಹಾಗೆ. ಬರೆದು ಪ್ರಕಟಿಸಿದ ಮೇಲೆ ಅವನಿಗೂ ಓದಿಸಬೇಕೆಂದಿದ್ದೇನೆ, ನಾನೆ ಕೂತು ಓದಿದರೂ ಸರಿಯೆ….

ಆದರೆ ಅದರಲ್ಲಿನ ದೊಡ್ಡ ಸಿಕ್ರೇಟ್ – ಓದಿದವರು ಏಮಾರಿದ್ದು ಅವನೆಂದುಕೊಳ್ಳುವ ಹಾಗೆ – ಎಪಿಸೋಡನ್ನ ಅವನ ಹೆಸರಲ್ಲಿ ಬರೆದು ಪ್ರಕಟಿಸುತ್ತಿದ್ದೇನೆಂದು ಮಾತ್ರ ಯಾರಿಗು ಹೇಳುವುದಿಲ್ಲ – ಕನಿಷ್ಠ ಈ ಏಪ್ರಿಲ್ ತಿಂಗಳು ಮುಗಿಯುವವರೆಗಾದರೂ..!

– ಗುಬ್ಬಣ್ಣ

01197. ರಾಧಾಕೃಷ್ಣರ ಒಡಂಬಡಿಕೆ, ಇದು ಕವಿಯೊಬ್ಬನ ಬಡಬಡಿಕೆ..!


01197. ರಾಧಾಕೃಷ್ಣರ ಒಡಂಬಡಿಕೆ, ಇದು ಕವಿಯೊಬ್ಬನ ಬಡಬಡಿಕೆ..!
_______________________________________________________


ರಾಧೆ ಒಂದು ರೀತಿಯ ಕಾಲಾತೀತ ಪಾತ್ರ( ಟೈಮ್ಲೆಸ್ ಕ್ಯಾರೆಕ್ಟರ್) .. ಅವಳ ಹರ್ಷವಾಗಲಿ, ನಲಿವಾಗಲಿ, ನೋವಾಗಲಿ, ಬೇಸರವಾಗಲಿ – ಅಂದಿನಿಂದ ಇಂದಿನವರೆಗೂ ಅವಳೊಡನಾಡಿದ ಯಮುನೆ ಪ್ರವಹಿಸಿದ ಹಾಗೆ ನಿರಂತರವಾಗಿ ಹರಿಯುತ್ತಲೇ ಇದೆ. ಅವಳಾರಾಧಿಸಿದ ಮುರಾರಿಯನ್ನು ಮೀರಿಸಿ ಜನಮಾನಸದ ಅಂತರಾಳದಲ್ಲಿ ಬೇರೂರಿ ನೆಲೆಸಿಬಿಟ್ಟಿರುವ ಅವಳ ಕುರುಹು ಒಂದೇ ? ಎರಡೇ ? ಸಂಗತವಿರಲಿ ಬಿಡಲಿ – ಅದೆಷ್ಟೋ ಹೆಣ್ಣುಗಳ ಕರೆಯುವ ಹೆಸರಾಗಿ ಹಸಿರಾಗಿದ್ದಾಳೆ ರಾಧೆ.. ಗೊಲ್ಲನ ಹಾಡು ಹಾಡುವ ಯಾರೂ ರಾಧೆಯನ್ನು ಬಿಟ್ಟು ಹಾಡುವಂತಿಲ್ಲ.. ಅದರಲ್ಲೂ, ಅವನ ಬಾಲ್ಯದಲಂತು ಅವಳಿಲ್ಲದೆ ಅವನಿಲ್ಲವೆನ್ನುವಷ್ಟು ಆಳದ ಸಾಂಗತ್ಯ.

ಯಾಕೊ ಅಲ್ಲಿಂದಾಚೆಗೆ ಹೋದ ಮಾಧವ ಅವಳನ್ನು ಮಾತ್ರ ಮರೆಯದ ನೆನಪಿನ ಹಾಗೆ ಅಲ್ಲೇ ಬಿಟ್ಟು ಹೊರಟು ಹೋದ. ಬಹುಶಃ ಜತೆಗೊಯ್ದರೆ ತಮ್ಮಿಬ್ಬರ ಸಖ್ಯದ ಶ್ರೇಷ್ಠತೆ, ಅಮರತ್ವ ಸಾರಲಾಗುತ್ತಿರಲಿಲ್ಲ, ರಾಧೆಯ ಮಹತ್ತನ್ನು ಅಜರಾಮರಗೊಳಿಸಲಾಗುತ್ತಿರಲಿಲ್ಲ, ಅವಳ ಸ್ಮರಣೆಯನ್ನು ತನ್ನನ್ನು ಮೀರಿದಂತೆ ಕಾಲಾತೀತಗೊಳಿಸಲಾಗುತ್ತಿರಲಿಲ್ಲ ಎನ್ನುವ ಸ್ಪಷ್ಟ ಅರಿವಿತ್ತೇನೊ ಅವನಿಗೆ; ಅಥವಾ ಅವನನ್ನು ಮೀರಿ ಅಮರಳಾಗುವ ಹಾಗೆ ಮಾಡು – ಎಂದು ತಾನೇ ಕೋರಿಕೊಂಡಿದ್ದಳೇನೊ ರಾಧೆ ? ಹಾಗೆ ಕೋರಿದ ಕೋರಿಕೆಗೆ ತೆರುವ ಬೆಲೆ ತನ್ನ ಪ್ರೇಮವೇ ಎಂದು ಅವಳಿಗರಿವಿತ್ತೋ, ಇಲ್ಲವೋ.. ಹುಡುಗಾಟಕ್ಕೆ ಕೇಳಿದ್ದಳೊ, ಅವನ ಪ್ರೀತಿಯ ಪರೀಕ್ಷೆಗೆ ಕೇಳಿದ್ದಳೊ – ಒಟ್ಟಾರೆ ‘ ಅಸ್ತು ‘ ಎಂದವನ ಮನದಲ್ಲಿ, ಸ್ವತಃ ತಾನೇ ದೂರಾಗಿ, ಅವಳೊಂದಿಗೆ ತನ್ನ ನಿಸ್ವಾರ್ಥವನ್ನು ಸಾರುತ್ತ – ಅದನ್ನು ಸಾಧಿಸಬೇಕೆಂಬ ಆಲೋಚನೆ ಇತ್ತೆಂಬುದು ಅವಳ ತಕ್ಷಣದ ಅರಿವಿಗೆ ಬಂದಿರಲಾರದು.

ತನ್ನ ಅಂತಃಪುರದ ತುಂಬ ಅದೆಷ್ಟೋ ಮಹಿಷಿಯರಿಗೆ ಪತಿಯಾಗಿದ್ದವನಿಗೆ ರಾಧೆಯೊಬ್ಬಳು ಹೆಚ್ಚಾಗುತ್ತಿರಲಿಲ್ಲ – ಯಾವಾಗ ಬೇಕಿದ್ದರೂ ಅವಳಿಗೆ ಆ ಸ್ಥಾನ ನೀಡಿ ಕೂರಿಸಬಹುದಿತ್ತು. ಆದರೆ ಆಗವಳು ಹಲವಾರು ಸಾವಿರದಲೊಬ್ಬಳಾಗಿ ಕಳೆದುಹೋಗುತ್ತಿದ್ದಳೆ ಹೊರತು, ಈಗಿನಂತೆ ಅವನ ಸರಿಸಮಾನ ಸ್ತರದಲ್ಲಿ ನಿಲ್ಲಲಾಗುತ್ತಿರಲಿಲ್ಲ. ಅವನನ್ನೂ ಮೀರಿದ ಸ್ಮರಣೆಯಾಗಿ, ಭಾವಲೋಕದ ಕೊಂಡಿಯಾಗಿ, ಶುದ್ಧ ಪ್ರೀತಿ-ಪ್ರೇಮದ ಸಂಕೇತವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ. ಈಗಲೂ ಕೃಷ್ಣನೆಂದರೆ ತಟ್ಟನೆ ಮನಸಿಗೆ ಬರುವ ಮೊದಲ ಹೆಸರು ರಾಧೆಯೇ ಹೊರತು ರುಕ್ಮಿಣಿ, ಸತ್ಯಭಾಮೆ, ಜಾಂಬವತಿಗಳಲ್ಲ. ಅಷ್ಟರ ಮಟ್ಟಿನ ಅಮರತ್ವ ದಕ್ಕಬೇಕಿದ್ದರೆ ಅವರಿಬ್ಬರೂ ಬೇರಾಗಲೇಬೇಕಿತ್ತು – ಅವರಿಬ್ಬರ ನೈಜ ಪ್ರೇಮದ ಕರ್ಷ ತನ್ನ ತುತ್ತತುದಿಯಲ್ಲಿರುವಾಗಲೆ. ಅದೇರಿದ ಶಿಖರವನ್ನು ಬಿಟ್ಟು ಕೆಳಗಿಳಿಯದೆ ಅಲ್ಲೇ ಅದಕ್ಕೊಂದು ಶಾಶ್ವತ ಗೋಪುರ ಕಟ್ಟಿ ದೇಗುಲವಾಗಿಸಿ ನಕ್ಕು ಬಿಕ್ಕುತಲೆ ದೂರಾದರವರು. ಕಾಡುವ ನೋವನ್ನವಳಿಗುಳಿಸಿ ತಾನು ನುಂಗಿಕೊಂಡ ನೋವಿಗೆ ನಗುವಿನ, ಕರ್ತವ್ಯದ, ಕಾರ್ಯಭಾರ ರಾಜಕಾರಣದ ಮುಸುಕ್ಹೊದಿಸಿ ಹಿಂದಿರುಗಿ ನೋಡದೆ ನಡೆದ ಮುರುಳಿಗೆ ಗೊತ್ತಿತ್ತು – ತನ್ನ ಪ್ರಭೆಯಡಿ ಸಿಕ್ಕಿದವರಾರು ತನ್ನನ್ನು ಮೀರಿ ಬೆಳಗುವುದು ಅಸಾಧ್ಯ ಎಂದು. ಬಾಲ್ಯದ ಗೆಳತಿಗೆ ಕೊಟ್ಟ ಮಾತು ನಡೆಸಬೇಕೆಂದರೆ ದೂರಾಗುವುದರ ಹೊರತು ಬೇರೆ ದಾರಿಯಿರಲಿಲ್ಲ.

ರಾಧೆ ತನ್ನ ವಿರಹದ ಬೇಗುದಿ, ದೂರಾದ ಯಾತನೆ, ಸಂಕಟವನ್ನು ಬಿಕ್ಕುತ್ತಲೆ ಯಮುನೆಯ ತಟದಲ್ಲಿ ಹಾಡಾಗಿ ಹೇಳಿಕೊಂಡು ಕೂತುಬಿಟ್ಟಳು – ಅದನ್ನು ಕೇಳಿ ಮರುಗಿದ ಜನಮಾನಸ ತಲತಲಾಂತರದವರೆಗೆ ಅದನ್ನು ಹಾಡಿಕೊಂಡೇ, ಕೊಂಡೊಯ್ಯುವ ಹಾಗೆ ಮಾಡಿ. ತನ್ನ ರಾಜಕೀಯದ ಕ್ರೀಡೆಯಲ್ಲಿ ಮುಳುಗಿ ಅವಳನ್ನು ಮರೆಯಲೆತ್ನಿಸಿದ ಮಾಧವ.

ಪ್ರೀತಿ, ಪ್ರೇಮದ ವಿಷಯ ಬಂದಾಗ, ಅವರಿಬ್ಬರ ದನಿಗೆ ಮಾತಾಗುವ ಪಾಡು ಪ್ರತಿ ಕವಿಯದು – ಅಂದಿನಿಂದ ಇಂದಿನವರೆಗೂ. ಅಂತಹದ್ದೇ ಎರಡು ಗೊಣಗಾಟ, ಗುಣಗಾನ ಈ ಕೆಳಗಿನ ಪದಗಳದು – ಒಂದು ಆಲಾಪ ರಾಧೆಯದಾದರೆ, ಮತ್ತೊಂದು ಕೃಷ್ಣನದು…

ನೀ ಬಯಸಿದ್ದಷ್ಟೇ ನಾ ಕೊಟ್ಟೆ..
_________________________________

ನೆನಪಿದೆಯಾ ರಾಧೆ, ಯಮುನೆಯ ತಟದಿ ನಾವಿಬ್ಬರು
ಗೋವಿನ ಕೋಟೆಯ ನಡುವೆ, ಕೊಳಲ ಗಾನದೇ ತಲ್ಲೀನ
ನುಡಿಸಿತ್ತಲ್ಲೆ ಆಕಳ ಘಂಟಾನಾದ, ಹಿನ್ನಲೆಯಲಿ ತಂಗಾಳಿ
ಒರಗಿ ಕೂತಿದ್ದೆ ನೀನು, ಮುಚ್ಚಿದ ಕಣ್ಣಲಿ ಧನ್ಯತೆ ಸಂಜೀವ..-||

ಮೆಲ್ಲಮೆಲ್ಲನೆ ಹರಿದವಳ, ಜುಳುಜುಳು ಸದ್ದು ಲಾಲನೆ
ಮನವರ್ಪಿಸಿ ಕೂತವಳು, ಮೌನವೇ ಮಾತಾದ ಲಲನೆ
ಸುರಲೋಕವೆ ಧರೆಗಿಳಿದಂತೆ, ಸುರಿದಿತ್ತಲ್ಲಾ ವರ್ಷಾಲಾಪ
ಪೊಟರೆಯ ನೆರಳಿತ್ತಲ್ಲ ಸಖ್ಯ, ನಮದೇ ಲೋಕದ ಸಾಂಗತ್ಯ..||

ಮುಗಿದಿದ್ದರೂ ನನ್ನ ನಾದ, ಮುಂದುವರೆಸಿತ್ತಲ್ಲ ಮಳೆ ಸದ್ಧು
ಮುಂಗುರುಳಡಿ ಕಣ್ಣಲಿ, ಸುರಿದಿತ್ತಲ್ಲ ಆರ್ದ್ರವತೆ ಮಾರ್ದವ
ಕೇಳುತ್ತಿತ್ತೇನೊ ನಯನ, ತುಟಿ ಮಾತಾಗಬಿಡದ ಆರಾಧನಾ
ತದೇಕ ಚಿತ್ತದ ಧ್ಯಾನ, ಹೇಳಬಾರದೇ ಸಖಿ ಮನದಾ ಜೂಜು ?||

‘ಏನ ಹೇಳಲಿ ಮಾಧವ, ಈ ಕ್ಷಣವಾಗದು ನಿರಂತರ ಶಾಶ್ವತ
ನೀರಗುಳ್ಳೆಯ ಹಾಗೆ ಒಡೆದು, ಕರಗಿ ಹೋಗುವುದೆನ್ನುವ ಭೀತಿ
ಭಾವದುತ್ತುಂಗದಲಿದೆ ಮನಗಳು, ಶಿಖರದೆತ್ತರ ತುದಿಯಲ್ಲಿ
ಏರಲಿನ್ನೇನು ಇಲ್ಲ’ ಎಂದಳು, ‘ಬರಿ ಜಾರುವ ದಾರಿಯ ಆತಂಕ..’||

‘ಮಾಡಲಾರೆಯ ಗೊಲ್ಲ, ಈ ಗಳಿಗೆಯ ಶಾಶ್ವತ ?’ ನಿನ್ನಾ ನುಡಿಗೆ
‘ತುಟ್ಟಿ ಬೆಲೆ ದುಬಾರಿ ತೆರಬೇಕು ರಾಧೆ’ ನಾ ನುಡಿದೆ ಚಿಂತೆಯಲಿ
‘ಬಿಡು ಚಿಂತೆ ಮುರಾರಿ, ನನ್ನ ಹೆಸರಾಗಬೇಕು ನಿನ್ನಾ ಗಡಿ ಮೀರಿ
ತೋರಿಬಿಡು ನಿಸ್ವಾರ್ಥ ಪ್ರೀತಿಗೆ, ನಿನ್ನನೆ ಬಿಟ್ಟುಕೊಡು ನನಗಾಗಿ !’||

ಮಿಕ್ಕಿದ್ದೆಲ್ಲ ಇತಿಹಾಸ ಗೆಳತಿ, ನೀ ಬಯಸಿದ್ದನೆ ನಾ ಕೊಟ್ಟೆನಷ್ಟೆ
ಅದೇ ದಿನವಾಯಿತು ಕೊನೆ, ತುಸುತುಸುವೆ ದೂರಕೆ ಸರಿದಿದ್ದೆ
ಸುರಿವ ಮಳೆ ನಿಂತರೂ, ನೀ ಭುವಿಯಾದೆ ಫಲವತ್ತು ಹುಲುಸಾಗಿ
ನಮ್ಮನಟ್ಟಿದ ದೂರವೆ, ದಾರಿಯಾಗಿತ್ತು ಹೆಸರಾಗಿಸೆ ನಮ್ಮಿಬ್ಬರ..||

ನೋಡೀಗ ದ್ವಾಪರ ದಾಟಿ, ಕಲಿಯಡಿಯಿಟ್ಟ ಹೊತ್ತಲು ಈ ಜಗದೆ
ನನ್ನ ಪ್ರೇಮದುಸಿರು ನೀನು, ಮಿಕ್ಕವರೆಲ್ಲ ಮಹಿಷಿಯರಾಗಿ ನೇಪಥ್ಯ
ಕೊಟ್ಟ ಮಾತನುಳಿಸಿಕೊಂಡೆ, ಹೇಳಿಕೊಳಲೆಂತು ದುಃಖವ ಪುರುಷ
ಹೇಳಿಕೊಂಡೇ ಸಾಗಿಹರು, ನನ್ನ ಮರೆತರು ನಿನ್ನ ಮರೆಯದ ಹಾಗೆ..!||

– ನಾಗೇಶ ಮೈಸೂರು
೦೪.೦೪.೨೦೧೭

ನಿನಗಿಂತಲೂ ನಾನೇ ಅಮರ..
_________________________


ಯಮುನಾನದಿ ನದಿ ತೀರ, ಯಾಕೋ ಬಿಕೋ ಅನ್ನುತಿದೆ
ಗೋದಾವರಿ ತಾಯಿ ಮಡಿಲು, ಬಿಕ್ಕುತಿದೆ ಯಾಕೊ ಬರಿದೆ
ಗಂಗೆ ಕೃಷ್ಣಾ ಕಾವೇರಿತನಕ, ಹುಡುಕಾಡಿದರು ಸಿಗಲಿಲ್ಲ
ಎಲ್ಲಿ ಹೋದನೋ ಆ ಗೊಲ್ಲ, ಇನಿತು ಸದ್ದಿಲ್ಲ ಸುಳಿವೇ ಇಲ್ಲ..||

ಗೋಕುಲ ಬಿಟ್ಟು ಹೊರಟವ, ಮಾಧವ ಮತ್ತೆ ಕಾಣಲೇ ಇಲ್ಲ
ಹೋರಾಟ ನಡೆಸುತ್ತದೇನೊ, ಮನದೀ ಪೈಪೋಟಿ ಗಮನಿಸಲಿಲ್ಲ
ಗ್ರಹಿಸಲಿಲ್ಲವೆಂದೆಂತೆನ್ನಲಿ ಅವ, ವೇಗನಿರತ ರಾಜಕೀಯ ದಾಳ
ಗಾಳಕ್ಕೆ ಸಿಕ್ಕ ಪುಡಿ ಮೀನು ಬಲಿ, ಆದಾಗ ತಾನೆ ಭರ್ಜರಿ ಶಿಕಾರಿ ?||

ಮೆಟ್ಟಿಲಾಗಿಸಿಕೊಂಡನೆ ಪೋರ ? ಮೆಟ್ಟಿಲಾದನೆ ಸವರಿ ಮನಸ ?
ಮೆಟ್ಟುವವನಾ ಕಾಯಕ ಅಪಾರ, ಮೆತ್ತೆಯಾಗಿಸಿಕೊಳ್ಳಲೆಂತು ಅವನಾ..
ಬಿಡದಾದರೂ ದುಗುಡ ಪ್ರೀತಿಯದು, ಮುಸುಕ ಹೊದ್ದು ಕಪಟದ ನಾಟಕ
ನಿಷ್ಕಲ್ಮಶ ಪ್ರೇಮ ಬಿರುದು ಭಾರ ಬಿಡು, ಸಾಕಿತ್ತಲ್ಲ ಚರಣದಾಸಿಯ ಚಾಕರಿ..||

ನೋಡಿದೆಯಾ – ದೂರುವುದೂ ಕಠಿಣ, ಆರಾಧಿಸುವ ಜನ ಸುತ್ತಲ ಸಾಗರ
ಆರೋಪಿಸಿದ ಪಟ್ಟ ಪದವಿ ಸೂತ್ರ, ಬೇಡಿದ್ದರೂ ಪಾತ್ರ ಧರಿಸಬೇಕು ವೇಷ
ಭರಿಸಲೆಂತೋ ಸಹನೆಯ ಹೆಸರಲಿ ? ಸ್ವಾರ್ಥಮನದ ಕೂಗಿನ ಮೊನೆಚಲಿ
ತ್ಯಾಗದ ಜತೆ ಹಿರಿತನ ಕಟ್ಟಿಸಿ ಕೈಯ, ಮಾಯ ನೀನು ಬಾಲ್ಯದಲಷ್ಟೆ ಗೆಳೆಯ..||

ಎಲ್ಲಾದರೂ ಇರು ಎಂತಾದರು ಇರು, ಕಾಡುವುದಿಲ್ಲ ಸಾರುವುದಿಲ್ಲ ನನ್ನಾಣೆ
ನೀನಿತ್ತ ವಚನ ಗುಟ್ಟಿನ ಜೀವಾಳ ಬಲ್ಲೆ, ಮಲ್ಲೆಯಾಗುವೆ ಬರಿ ನಿನ್ನ ಕಂಪೆರೆದು
ನಿನ್ನವತಾರದ ಬಿರುಸಿಗೆ ಸಿಕ್ಕ ಮೊಗ್ಗು, ನಾ ಹೂವಾಗರಳದೆ ಉಳಿದ ದೃಷ್ಟಾಂತ
ಮತ್ತೊಬ್ಬಳಿಲ್ಲ ಅದಕೆ ತಾನೇ ಮುರಾರಿ, ಕಾಲ ನನ್ನೇ ಜಪಿಸಿವೆ ನಿನ್ಹೆಸರೇನು ಮೀರಿ !||

– ನಾಗೇಶ ಮೈಸೂರು
೦೪.೦೪.೨೦೧೭

(Picture source : social media)

01058. ಮಂಕುತಿಮ್ಮನ ಕಗ್ಗ ೪೧ ರ ಟಿಪ್ಪಣಿ ರೀಡೂ ಕನ್ನಡದಲ್ಲಿ..


01058. ಮಂಕುತಿಮ್ಮನ ಕಗ್ಗ ೪೧ ರ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕೀಲಿ ಕೈಯನ್ನೆಸೆದು ಪರಿಣಿತರಿಗಾದರು ದಿಟವರಿಸೋ..!

01045. ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ


01045. ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ

ಮಂಕುತಿಮ್ಮನ ಕಗ್ಗ ೪೦ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ…
ಸಂಧ್ಯೆಯಾ ಮುಸುಕಲಿ ಮಿಂಚಂತೆ ಬಂದು ಹೋಗುವನೇನು ?

01015. ಭಲಾ ವಿಧಾತ..!


01015. ಭಲಾ ವಿಧಾತ..!
______________________


ನಾಕೈದೇ ಗಂಟೆಯ ನಿದ್ದೆಯಷ್ಟೆ ಕಳೆದು ಇದೀಗ ತಾನೆ ಎಚ್ಚರವಾದರು ಮನಸೇಕೊ ಪ್ರಪುಲ್ಲವಾಗಿದೆ ಗೊತ್ತಾ ? ಭಾರವಾಗಿ ತೂಗುತಿರೊ ಕಣ್ಣಲ್ಲು ಏನೊ ಶಾಂತಿ, ಸಮಾಧಾನದ ಸೆಳಕು – ರಾತ್ರಿಯ ಅದೇ ಪ್ರಪುಲ್ಲತೆ ಈ ಬೆಳಗಿಗು ಕಾಲು ಚಾಚಿಕೊಂಡು ಮಲಗಿದ ಹಾಗೆ. ನಿನಗಿನ್ನು ನಿದ್ದೆಯಿರಬೇಕು – ಆದರೆ ನಿನದೂ ಅದೇ ಸಮಾಧಾನ ಭಾವದ ನಿದಿರೆ ಅಂತ ಅನಿಸುತ್ತಿದೆ, ಹೌದಾ ?

ದಿಕ್ಕೆಟ್ಟ ನಾವೆಯೊಂದರಲಿ ಧುತ್ತೆಂದೆದ್ದವರಾರೊ ಜತೆಗೂಡಿ ಚುಕ್ಕಾಣಿ ಹಿಡಿದು ತೂರಾಡದೆ ನೇರ ಸಾಗುವ ಹಾಗೆ ಜತೆಗೂಡಿ ನಿಂತ ಭಾವ ಮನಸಿಗೆ ಅದೆಷ್ಟು ಧೈರ್ಯ ಕೊಡುತ್ತದಲ್ಲವಾ? ಯಾವುದೊ ತುಡಿಯುವ ಜೀವವೊಂದು, ಎಲ್ಲೋ ಇದೆಯೆನ್ನುವ ಅನುಭೂತಿಯೆ ಅನನ್ಯವಾದದ್ದು. ಸುತ್ತಲವರೆಲ್ಲರಿದ್ದು ನಾನು ಏಕಾಂಗಿಯೆನ್ನುವ ಪಿಚ್ಚನೆಯ ಭಾವ ಆವರಿಸಿದಾಗ – ‘ನಾನಿಲ್ಲಿರುವೆ ಜತೆಗೆ’ ಎನ್ನುವ ಆ ಸದ್ದಿಲ್ಲದ ವಾರ್ತಾಪ್ರಸಾರ, ಇದ್ದಕ್ಕಿದ್ದಂತೆ ಕಸುವು ತುಂಬಿ ಕೈಹಿಡಿದು ನಡೆಸುವ ಬಗೆ ನಿಜಕ್ಕು ಅಚ್ಚರಿ. ಆದರೆ ಅದೇ ಭಾವದ ಎರಡು ಜೀವಗಳು ಪರಸ್ಪರ ಸಂಧಿಸಿ, ಪರಸ್ಪರರಿಗೆ ಆಧಾರವಾಗುವ ಬಗೆ ಮಾತ್ರ ಅತಿಶಯ… ಅದು ವಿಧಾತನ ಕೈಚಳಕವಲ್ಲದೆ ಬರಿಯ ಕಾಕತಾಳೀಯತೆಯೆಂದರೆ ನನಗೇಕೊ ನಂಬಿಕೆ ಬರದು.

ದೂರದ ಆ ಆಸೆಯದೊಂದೆ ನಾವೆಗೆ ದಿಕ್ಕಿ ತೋರಿಸುತಿದೆ. ಲೌಕಿಕದ ತೊಡಕುಗಳನ್ನೆಲ್ಲ ಅಧಿಗಮಿಸಿ, ಯಾವುದಕ್ಕೂ ಧಕ್ಕೆಯಿರದಂತಹ ರೀತಿಯಲಿ ಗಟ್ಟಿಯಾಗುವ ಅಲೌಕಿಕ ಬಂಧ ಇದೆನಿಸುತ್ತಿದೆ. ಇದು ಇಬ್ಬರಲ್ಲು ಸ್ಪೂರ್ತಿ ತುಂಬುವ, ಇಬ್ಬರ ಬವಣೆಗಳನ್ನು ನೀಗಿಸಿ ಮುನ್ನಡೆಸುವ, ಇಬ್ಬರಿಗು ಚೇತನ ತುಂಬಿ ಚೇತೊಹಾರಿಯಾಗುವ ಅಪರೂಪದ ಬಂಧ. ಇಬ್ಬರನ್ನು ನಾವೇರಲಾಗದೆತ್ತರಕ್ಕೆ ಏರಿಸಿ ಮುನ್ನಡೆಸುವ ಅಮೋಘ ಪ್ರೇರಣಾಶಕ್ತಿ ಇದಾಗುವುದೆಂಬ ಅನಿಸಿಕೆ, ಭರವಸೆ ನನಗೆ.

ಆ ನಂಬಿಕೆಯ ಅದೃಶ್ಯ ಸೂತ್ರವನ್ಹಿಡಿದು ಮುನ್ನಡೆಯೋಣಾ ಬಾ.. ಜತೆಗೆ ಹೇಗೂ ಅವನಿದ್ದೆ ಇರುವ ಹಿನ್ನಲೆಯಲ್ಲಿ..!

ಭಲಾ ವಿಧಾತ..!
__________________________________

ಅವನಾರೊ ಸೂತ್ರಧಾರಿ
ಸೂತಕದವರಂತೆ ದೂರವಿಟ್ಟು
ಕಾಣಿಸಿಕೊಳದೆ ಕಾಯುವ
ಪರೋಕ್ಷದಲೆ ನಡೆಸಿ ನಾವೆ ||

ಯಾವ ನಾವೆಗಾರೊ ದಿಕ್ಕು
ಚುಕ್ಕಾಣೆ ಹಿಡಿವವರಾರೊ
ಚೊಕ್ಕ ನಿಲಲು ಹೆಣಗಾಟವಿತ್ತು
ನಡೆವಾಗಿದೇನೀ ಸುಲಲಿತತೆ ! ||

ಮೊನ್ನೆಮೊನ್ನೆವರೆಗು ಹೊಯ್ದಾಟ
ನಿನ್ನೆಯವರೆಗು ಕಾಡೆಲ್ಲ ಸಂದಿಗ್ದ
ಇಂದೇನಿದು ಪ್ರಶಾಂತ ಬೆಳಗು
ತೆರೆದುಕೊಂಡ ಬಗೆ ಅವನ ಮಾಯೆ ||

ಮಾಯೆಯೊ ಅನಿವಾರ್ಯವೊ
ಕರುಣೆಯವನದದಕೆಣೆಯಿಲ್ಲ ಮೊತ್ತ
ಬಾಳ ಬುತ್ತಿಗಿಟ್ಟವರವರ ಪಾಲು
ಕಟ್ಟಿಕೊಟ್ಟ ಗಳಿಗೆ ಕಿರು ನೆಮ್ಮದಿ ಸಖ್ಯ ||

ಅವನಿತ್ತ ವರದ ಪರಿ ಚೆದುರಬಿಡದೆಲ್ಲ
ಒಗ್ಗೂಡಿ ನಡೆಸುವ ಸೇರಿ ಬದುಕೆಲ್ಲ
ಅವನಿತ್ತ ಹಣತೆ ಸಂಕೇತವದು ಬಿಡು
ದೀಪ ಹಚ್ಚಲಿದೆ ನೂರಾರು ಬದುಕಿಗು ||

– ನಾಗೇಶ ಮೈಸೂರು

(Picture source : Creative Commons)
03.12.2016y

00874. ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ 22


00874. ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ 22

ಮಂಕುತಿಮ್ಮನ ಕಗ್ಗ 22 ರ ಟಿಪ್ಪಣಿ ರೀಡೂ ಕನ್ನಡದಲ್ಲಿ

00865. ಕಗ್ಗಕೊಂದು ಹಗ್ಗ ಹೊಸೆದು 21


00865. ಕಗ್ಗಕೊಂದು ಹಗ್ಗ ಹೊಸೆದು 21

ಕಗ್ಗಕೊಂದು ಹಗ್ಗ ಹೊಸೆದು… http://bit.ly/2bKMleI

(published in Readoo Kannada)

00863. ಭೈರಪ್ಪನವರ ಕಾದಂಬರಿ ಕೊಲೇಜ್ (poem)


00863. ಭೈರಪ್ಪನವರ ಕಾದಂಬರಿ ಕೊಲೇಜ್ (Poem)
________________________________

ಇಂದು ನೆನೆದೊಡನೆ ಮನದಲ್ಲಿ ಗೌರವಾದರದ ಪಲುಕೆಬ್ಬಿಸುವ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್. ಎಲ್. ಭೈರಪ್ಪನವರ ಜನ್ಮದಿನ. ಆ ಪ್ರಯುಕ್ತ ಅವರ ಕಾದಂಬರಿ ಮತ್ತು ಆತ್ಮಕಥೆಯ ಹೆಸರುಗಳನ್ನೂ ಜೋಡಿಸಿ ಪೋಣಿಸಿದ ಒಂದು ನುಡಿ ನಮನ ಪದ್ಯ – ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ! (ಮಾಹಿತಿ ಮೂಲ ವಿಕಿಪೀಡಿಯ)

ಭೀಮಕಾಯನ ಯಾನ !
________________________________


ಶತ -‘ಗತಜನ್ಮ’ಗಳ ಪುಣ್ಯ ವಿಶೇಷ
‘ಭೀಮ ಕಾಯ’ ಜನಿಸಿದ ಕನ್ನಡ ದೇಶ
ತಟ್ಟನೆ ‘ಬೆಳಕು ಮೂಡಿತು’ ನಾಡಿನ ತುಂಬ
ಕಾಲಿಟ್ಟಳು ‘ಧರ್ಮಶ್ರೀ’ ಜಗದಾನಂದ..

‘ದೂರ ಸರಿದರು’ ಸೃಜಿಸಿದ ಪಾತ್ರಗಳಿಂದ
ಸೂಕ್ತ ‘ಮತದಾನ’ ಮಾಡುತ ನಿಷ್ಠೆಯಿಂದ
ಚಿಗುರೊಡೆದಂತೆ ಸಸಿಯರಳಿಸಿ ‘ವಂಶವೃಕ್ಷ’
‘ಜಲಪಾತ’ದೊಂದಿಗೆ ಧುಮ್ಮಿಕ್ಕಿ ಕಲಾ ಸುಭಿಕ್ಷ..

ಕಾಡಿದ್ದುಂಟು ಉದ್ದ ನೂರಾರು ‘ನಾಯಿ ನೆರಳು’
‘ತಬ್ಬಲಿಯು ನೀನಾದೆ ಮಗನೆ’ ಅಂದವೆಷ್ಟೊ ಕೊರಳು
‘ಗೃಹಭಂಗ’ವಾದಿತೆಂದಾಶಿಸಿ ಕಾದವರಿಗೆಯೆ ಮಾಯೆ
‘ನಿರಾಕರಣ’ ಕಾಡಿತ್ತು ಹಿಡಿಸುತ್ತ ‘ಗ್ರಹಣ’ದ ಛಾಯೆ..

ಕ್ರಮಿಸಿದ ಹಾದಿ ಘಾಟು ಬಿಡದೆ ನಡೆದೇ ‘ದಾಟು’
ಮಾಡುತ್ತುದ್ದಕು ‘ಅನ್ವೇಷಣೆ’, ‘ಪರ್ವ’ದೊಳಡಗಿಹ ‘ನೆಲೆ’
ಹುಡುಕಿದ್ದೇನೆಲ್ಲ ‘ಸಾಕ್ಷಿ’, ಒತ್ತಾಸೆ ಅಂತಃಸಾಕ್ಷಿ, ಮನಃಸಾಕ್ಷಿ
‘ಅಂಚು’ ಅಂಚಿನ ‘ತಂತು’ ಮಿಡಿದು ‘ಸಾರ್ಥ’ಕತೆ ‘ಮಂದ್ರ’ದಲಿ..

ಪರಿಪಕ್ವತೆ ಪ್ರಬುದ್ಧತೆ ನೈಜ ಚರಿತ್ರೆ ತೆರೆದಿಟ್ಟ ‘ಆವರಣ’
‘ಕವಲು’ ಹಾದಿಯ ನಡಿಗೆಯ ಪ್ರತಿಹೆಜ್ಜೆಯು ಭಿನ್ನ
ಖಂಡಾಂತರವಲ್ಲ ಲೋಕಾಂತರ ಬ್ರಹ್ಮಾಂಡ ‘ಯಾನ’
ಅನುಭವದ ‘ಭಿತ್ತಿ’ ತೆರೆದಿಟ್ಟ ಆತ್ಮಕತೆಯ ಅನಾವರಣ !


– ನಾಗೇಶ ಮೈಸೂರು

(Picture and information source: https://en.m.wikipedia.org/wiki/S._L._Bhyrappa, second picture – udayavani )

00857. ಕಗ್ಗಕೊಂದು ಹಗ್ಗ ಹೊಸೆದು…


00857. ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ 20 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ :

ಕಗ್ಗಕೊಂದು ಹಗ್ಗ ಹೊಸೆದು…

00845. ಕಗ್ಗಕೊಂದು ಹಗ್ಗ – 19


00845. ಕಗ್ಗಕೊಂದು ಹಗ್ಗ – 19
___________________________

ಮಂಕುತಿಮ್ಮನ ಕಗ್ಗ – 19 ರ ಟಿಪ್ಪಣಿ ರೀಡೂ ಕನ್ನಡದಲ್ಲಿ

00837. ಅಲ್ಲಿರೋದು ನಮ್ಮನೆ……ಇಲ್ಲಿರೋದು ಸುಮ್ಮನೆ !


00837. ಅಲ್ಲಿರೋದು ನಮ್ಮನೆ……ಇಲ್ಲಿರೋದು ಸುಮ್ಮನೆ !
_________________________________________


ಅಲ್ಲಿರೋದು ನಮ್ಮನೆ……..(ಭಾಗ ೦೧)
_______________________________

ಅಲ್ಲೆಲ್ಲೊ ಇರುವ ‘ನಮ್ಮನೆ’ಯ ಅನುಷಂಗಿಕ ಅರಿವಿದ್ದೂ, ಲೌಕಿಕ ಹಾಗೂ ಐಹಿಕದ ಬೆನ್ನ ಹಿಂದೆ ಬೀಳುವ ಮನುಜ ಸ್ವಭಾವದ ಗೀಳಿನ ಕುರಿತಾದ ಲಹರಿ – ಅಲ್ಲಿರುವ ನಮ್ಮ ಮನೆಯನ್ನೆ ಕೇಂದ್ರೀಕರಿಸುತ್ತ ಗುನುಗುನಿಸಿದಾಗ.


ಅಲ್ಲಿರೋದು ನಿಜ ನಮ್ಮನೆ
ಇಲ್ಲಿರೋದು ಬರಿ ಸುಮ್ಮನೆ
ಮಾಡಿದರು ಕೆಲಸ ಗಮ್ಮನೆ
ಕಾಡುವುದು ಏಕೆ ಕೀಳರಿಮೆ ? ||

ಸುಮ್ಮನೆಗೇಕೊ ದೊಡ್ಡಮನೆ ?
ಅಲ್ಲಿರುವಾಗ ದೊಡ್ದರಮನೆ
ಹೇಗಿದ್ದರು ಬಿಟ್ಟೋಗುತಾನೆ
ಅದಕ್ಯಾಕೋ ತಡಿ ವಂಚನೆ  ||

ಎದ್ದು ಬಿದ್ದ್ಹೋಗೋ ದೇಹವೆ
ಯಾಕಿಷ್ಟು ಕಿರಿಕಿರಿ ದಾಹವೆ
ಮೂರಡಿ ಆರಡಿ ಗೊತ್ತಿರುವೆ
ಬೇಡದ್ದೆಲ್ಲವ ಮತ್ತ್ಹೊತ್ತಿರುವೆ ||

ಬ್ರಹ್ಮ ಕುಸುರಿ ಮನ ಲಹರಿ
ಹೇಳಿಸಲು ತೊಳೆ ಮುಸುರಿ
ತೊಳೆಯಲೇಗಿಲ್ಲಿ ಕರಿ ಚಹರಿ
ಹಣೆ ಬರಡತಿಗರಿ ತಪ್ಪು ಸರಿ ||

——————————————————————–
ನಾಗೇಶ ಮೈಸೂರು
——————————————————————–

…..ಇಲ್ಲಿರೋದು ಸುಮ್ಮನೆ ! (ಭಾಗ ೦೨)
________________________________

ಅಲ್ಲಿರೊದು ನಮ್ಮನೆಯಾದ್ದರಿಂದ ಇಲ್ಲಿರುವತನಕ ಇದ್ದೂ ಇಲ್ಲದಂತೆ, ಅಂಟಿಯು ಅಂಟದಂತೆ ಹೇಗೆ ಸಂಭಾಳಿಸಬೇಕೆಂಬ ಆಶಯದ ಬಿನ್ನಹ ಈ ಕವನದ ವಸ್ತು – ಇಲ್ಲಿರೋದು ಸುಮ್ಮನೆ. ಆದರೆ ಅದಕೆ ಅಡ್ಡಿಯಾಗುವ ಲೌಕಿಕಗಳ ಹುನ್ನಾರ, ಅಡಚಣೆ, ಚಂಚಲತೆಗಳ ಹೂರಣವೂ ಅಂತರ್ಗತ ಹಾಗೂ ಅನುರಣಿತ.


ಗಂಟು ಮೂಟೆಯೆ ನೂರೆಂಟು
ಇಟ್ಟಿಗೆ ಸಿಮೆಂಟು ಎಲ್ಲುಂಟು
ಸಬೂತು ಮುಚ್ಚಲು ಹೊರಟು
ಮೈಯೆಲ್ಲಾ ಆಗೊರಟೊರಟು ||

ಇಲ್ಲೆಲ್ಲ ಉಂಟು ಕನ್ನಡಿ ಗಂಟು
ಬೆನ್ನಟ್ಟಿ ಹೊರಟ ಭ್ರಮೆ ನಂಟು
ಖಾಲಿಯೆಡೆಗೂ ಊರು ಕಟ್ಟು
ಊರು ತುಂಬ ಮನೆ ಕಟ್ಟಿ ಬಿಟ್ಟು ||

ಆದರೇನು ಬಿಡುವ ಹಕ್ಕಿ ಗಣ
ಕೊಟ್ಟುಬಿಡಬೇಕು ಹಕ್ಕು ಋಣ
ಇದ್ದು ಇಲ್ಲದಂತಿರೆ ನಿಜಗುಣ
ನಗ್ಗಿ ಸೇರುವ ತನಕ ಶಿವಗಣ ||

ಶಾಶ್ವತವೆ ತಾತ್ಕಾಲಿಕವೆ ನವೆ
ಇಲ್ಲಿರುವ ತನಕ ಮೋಹಕವೆ
ಮದ ಮತ್ಸರ ಸಂವತ್ಸರ ಕಾವೆ
ವಿಶ್ರಮಿಸಲು ಆತ್ಮನ ಬಿಡುವೆ ||

ಸಂತುಲಿತ ಸಮಾನಾಂತರಕು
ಕೂತುಳಿಸಿಹ ಕುಲಧನ ಸರಕು
ಭವಿಸೋ ಭಾವಿಸೋ ಪಲುಕು
ನಮ್ಹಣೆಯಲಿ ಬರೆದಿರಬೇಕು ||

——————————————————————–
ನಾಗೇಶ ಮೈಸೂರು
——————————————————————–

ಚಿತ್ರ ಕೃಪೆ : ಅಂತರ್ಜಾಲ / ಫೇಸ್ಬುಕ್

00836. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 18


00836. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 18

ಮಂಕುತಿಮ್ಮನ ಕಗ್ಗ 18 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00834. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 17 


00834. ಕಗ್ಗಕೊಂದು ಹಗ್ಗ ಹೊಸೆದು…ಮಂಕುತಿಮ್ಮನ ಕಗ್ಗ 17 

ಮಂಕುತಿಮ್ಮನ ಕಗ್ಗ 17 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ.. 

ಕಗ್ಗಕೊಂದು ಹಗ್ಗ ಹೊಸೆದು…

00833. ಕುಂಚದ ಸಾಂಗತ್ಯದಲ್ಲಿ ಲೇಖನಿಯ ಕೊಸರಾಟ..


00833. ಕುಂಚದ ಸಾಂಗತ್ಯದಲ್ಲಿ ಲೇಖನಿಯ ಕೊಸರಾಟ.. 
___________________________________________

ಅದ್ಭುತ ಕುಂಚ ಕಲೆ ಏನೆಲ್ಲಾ ತರದ ಪ್ರೇರಣೆಯಾಗಬಹುದು ಎನ್ನುವುದು ಕಲ್ಪನಾತೀತ ಲಹರಿ. ನೋಡುವವರ ಗ್ರಹಿಕೆ, ಭಾವಕ್ಕೆ ತಕ್ಕಂತೆ ಅನಾವರಣವಾಗುವ ಮನೋಭಾವ ಅದರದು. ಹೀಗಾಗಿಯೆ ಕಲಾಕೃತಿಗೊಂದು ಚೌಕಟ್ಟು ಹಾಕಿ ಹೀಗೆಯೆ, ಇಷ್ಟೇ ಎಂದು ಪರಿಮಿತಿ ಹಾಕಲು ಸಾಧ್ಯವಿಲ್ಲ. ಇನ್ನು ಆ ಕುಂಚಕ್ಕೊಂದು ಕಾವ್ಯದ ಕುಪ್ಪಸ ತೊಡಿಸಹೊರಟರೆ ಹೇಳುವ ಹಾಗೆ ಇಲ್ಲ. ಎರಡು ಅಪರಿಮಿತಗಳ ಪರಿಧಿ ಕಲೆತು, ಮೇಳೈಸುವ ವಿಶಿಷ್ಠ ಸನ್ನಿವೇಶವದು.

ಇಂತದ್ದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ಸುಶ್ಮಿತಾ ಸಪ್ತರ್ಷಿಯವರ ಕೈ ಚಳಕದಲ್ಲಿ ಹೊರಹೊಮ್ಮಿದ ಈ ಚಿತ್ರವನ್ನು ಕಂಡಾಗ. ಎರಡು ಕವನಗಳಾಗಿ ಮತ್ತೊಂದು ಕಿರುಗವನವಾಗಿ ಹರಿದಿತ್ತು ಕುಂಚ ಮತ್ತು ಲೇಖನಿಯ ಸ್ನೇಹದ ‘ಜುಗಲ್ಬಂದಿ’. ಅದೀಗ ನಿಮ್ಮೆದುರಿಗೆ – ಚಿತ್ರ ಬಳಸಿಕೊಳ್ಳಲು ಅನುಮತಿಸಿದ ಸುಶ್ಮಿತರಿಗೆ ( Sushmitha Saptharshi ) ಕೃತಜ್ಞತೆ ಹೇಳುತ್ತಾ 🙏😊


(ಚಿತ್ರ / ಕುಂಚ ಕೃಪೆ : ಸುಶ್ಮಿತಾ ಸಪ್ತರ್ಷಿ Sushmitha Saptharshi)

1. ನಡೆ ಬದುಕಿಗೆ ಹಿಮ್ಮೆಟ್ಟದೆ..
________________________

ಯಾಕೀ ಚಡಪಡಿಕೆ ?
ಅಂತರಾತ್ಮದ ಪರಬ್ರಹ್ಮ
ಮಿಸುಕಾಡದೆ ಬರಬಾರದೆ ಹೊರಗೆ
ನಾದವೋ ನಿನಾದವೋ ಸ್ವರವಾಗಿ..
ಸುಮ್ಮನೇಕಿ ವಿಲಾಪ ಒಳಗೊಳಗೆ
ಹೇಳಲಾಗದ ತೆವಲು, ಬೇನೆ, ಪ್ರಲಾಪ..

ನಿಜ ಗೊಂದಲ ಗಡಿಬಿಡಿ ನಿಲುವು
ಯಾರೂ ಅರ್ಥೈಸದ ನೋವು
ಯಾರು ತಾನೇ ಅರ್ಥೈಸಬೇಕು ?
ಎಲ್ಲ ಅವರವರ ಭಾವ ಭಕುತಿಯ ಧೂರ್ತ
ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥ..
ನಕ್ಕು ಹಗುರಾಗದೆ ಹೀಗೆ ಬಿಕ್ಕಲೇಕೆ ?

ಗೂಡು ಕಟ್ಟಿದಂತೆಲ್ಲ ಹುತ್ತ
ದಿನದಿನ ಕ್ಷಣ ಕ್ಷಣ ಕೊರಗಿತ್ತ
ಸೊರಗುತ್ತಾ ಮರುಗುತ್ತ ಶಪಿಸುತ್ತ
ದೂರಾಗುತ್ತಾ ಸರಿದೊಳಗೊಳಗೊಳಗೆ
ಕುಸಿದು ಪ್ರತಿಗಳಿಗೆಯಲು
ಹಚ್ಚಿ ಕೀಳರಿಮೆಯ ದೀವಟಿಗೆ..

ಅದೇ ಅಚ್ಚರಿಯ ಗಳಿಗೆ
ದೀಪದ ಕಣ್ಣೀರಲೂ ಮಿಂಚು, ಬೆಳಕು
ಕೈ ಬಿಡಲಿಲ್ಲ ಕಾಣಿಸುತೇನೋ ಹೊಸತ
ಅಂತರ್ಯಾನದ ಗುನುಗು, ಸಂಗೀತ
ಪಿಸುಗುಟ್ಟುವ ನನ್ನತನ, ಏನೋ ಆತ್ಮಸ್ಥೈರ್ಯ
ಬರೆಯುತಿದೆ ಹೊಸ ಬದುಕ !

2. ಅಸಹಾಯಕ’ಗಳಿಗೆ’…
_____________________

ಅಸಹಾಯಕತೆಗಳೇ ಹೀಗೆ..
ಉಸಿರುಗಟ್ಟಿ ನಿಗುರಿಕೊಂಡುಬಿಡುತ್ತವೆ
ಒಳಗೊಳಗೆ.
ಅಡಗಿಕೊಂಡು ಅಂತರಾಳದ ಪೆಟ್ಟಿಗೆ
ಅರಚಿದರೂ ಇಲ್ಲ, ಕಿರುಚಿದರೂ ಇಲ್ಲ
ಮಿಸುಕಿ ವಿಲವಿಲ ಒದ್ದಾಡುವ ಭ್ರೂಣದ ಹಾಗೆ..

ಮಾಡಿದ ಸದ್ದೆಲ್ಲಾ ಶಬ್ದಾತೀತ
ಆಟಕ್ಕುಂಟು ಲೆಕ್ಕಕ್ಕಿಲ್ಲದ ಗಣಿತ ;
ಎಷ್ಟೊಂದು ಚೆಂದದ ಮುಖವಾಡ ?!
ಭ್ರೂಣಕ್ಕೆ ಹೊದಿಸಿದ ಹಿರಿಭ್ರೂಣ
ಊನವಾಗದಂತೇನೊ ಹೊರದೇಹದ ಭ್ರಮೆ..

ಬಚ್ಚಿಟ್ಟು ಮುಚ್ಚಿಟ್ಟ ಆರ್ತನಾದ
ಸದ್ದಡಗಿಸಿದರು ಮಸುಕಾಗಿಸಿದರು
ಬಡಪೆಟ್ಟಿಗೆ ಬಗ್ಗದ ಚೇತನ..
ಚಾಚಿದ ಕೈಯಲ್ಲಿ ಹಿಡಿಸುತಿದೆ ಕೋವಿ
ಸಿಡಿಸಿ ನೆತ್ತರಾಗಿಸುವ ಅನುಭೂತಿ, ಅನುಭಾವ
ಯಾಕೊ ಚೆಲ್ಲಿದರು ಸದ್ದೇ ಇಲ್ಲ !
ಮತ್ತದೇ ಸ್ವರ ಹೊರಡದ ಅಸಹಾಯಕ ಕೂಗು..
ಪರಾ ಪಶ್ಯಂತಿ ಮಧ್ಯಮಾ ವೈಖರಿ ಶಬ್ದಬ್ರಹ್ಮ ..

ಚಡಪಡಿಸುತ ಜಾಡಿಸಿದ ಗುರುತು ತೆರೆಯೀಚೆಗೆ
ಹನಿಸುತಿದೆ ತುದಿ ಬೆರಳು, ತೋಳಿನ ನರಳು
ಕಸು ಸೋತು ಜಾರುವ ಮುನ್ನ..
ಜಾರುತಿದೆ ಬಿಗಿ ಹಿಡಿತ
ಮಂಜಿನಡಿಯ ಗಾಜ ಹಲಗೆಯೂ ಚಾಣಾಕ್ಷ
ಬಚ್ಚಿಡುತೆಲ್ಲವ ಏನೋ ಹುನ್ನಾರದೆ.

ಕೊನೆಗೂ ನಿಡಿದಾದ ನಿಟ್ಟುಸಿರಿಗೆ
ಆಸರೆಯಾದದ್ದೊಂದು ಸೀಸದಕಡ್ಡಿ
ಬಳಲಿ ಕಳುವಾಗುವ ಮೊದಲೆ
ಕುಂಚವಾಗಿ ಮನ ಕೋವಿಯ
ಚಿತ್ತಾರ ಬಿಡಿಸಿಟ್ಟಿತ್ತು –
ತಗ್ಗಿಸಿದ ತಲೆಯೆತ್ತಬಿಡದ
ಕುಸಿದು ಕೂತು ಹೋಗಲು ಎಡೆಗೊಡದ
ಅಸಹಾಯಕ ಗಳಿಗೆ..

3. ಮರಗಟ್ಟಿದ ತೋಳಲು
ಬಳಲಿ ಕುಸಿಯುತಿಹ ದೇಹದಲೂ
ನರ ನಾಡಿಗಳಿನ್ನು ಜೀವಂತ –
ಹರಿದ ನೆತ್ತರಿನ ಕುರುಹಲಿ..
– ಜೀವಂತಿಕೆಯ ಬಸಿರು.

– ನಾಗೇಶ ಮೈಸೂರು

00831. ಯಾಣ ..! (ಜೋಡಿ ಕವನ)


00831. ಯಾಣ ..! (ಜೋಡಿ ಕವನ)
_____________________________


(Picture from Internet)

01. ಯಾಣದ ಸುಂದರ ತಾಣದ ವರ್ಣನೆ ಕವಿಗಳ ವರ್ಣನೆಯ ಸಾಮರ್ಥ್ಯದ ಹಿಡಿತಕ್ಕೂ ಮೀರಿದ ಅಸೀಮ ರೂಪಿ. ಕಪ್ಪು ಶಿಲಾ ಸುಂದರಿಯ ನೋಡಲು ಸಾಗಬೇಕಾದ ಪ್ರಯಾಣದ ಹಾದಿಯೆ ಮಧುರವಾದ, ಆಯಾಸೋಲ್ಲಾಸಗಳ ಬೆವರಿನ ತಂಗಾಳಿ. ಆ ಹಾದಿಯನ್ನು ಕ್ರಮಿಸಿ ಕಪ್ಪೆಶ್ವರರ ಬುಡ ತಲಪುವ ಅನುಭವದ ತುಣುಕು ಈ ‘ಯಾಣ ಹತ್ತೋಣ..!’ ಕವನದ ವಸ್ತು.

ಯಾಣ ಹತ್ತೋಣ..!
___________________

ಕಡುಗಪ್ಪು ಸುಂದರಿ ಯಾಣ
ಮುನಿಸಿ ತೋರಿದಳೆ ಕ್ಯಾಣ
ಹಾಡಿ ಹೊಗಳದ ಸಮ್ಮಾನ
ಗೌಣವಾಗದೆ ಕಾಡಿತೆ ಮೌನ ||

ಕಡಿದಾದ ಕಟ್ಟುನಿಟ್ಟಿನ ಹಾದಿ
ಪುಡಿ ಕಪ್ಪು ಮಣ್ಣು ತುಳಿಗಾದಿ
ವನದೇವಿ ಹಸಿರು ಬಿಸಿಲೂದಿ
ಜುಳು ನೀರಲೆ ತೊಳೆ ಬೂದಿ ||

ದೈತ್ಯ ಭಸ್ಮಾಸುರ ಕೋಟಲೆ
ಸುಟ್ಟುಹಾಕಿದ ಸಹಿದಾಖಲೆ
ಕೃಷ್ಣವರ್ಣವೆ ಎಲ್ಲೆಡೆ ನಾಟ್ಯವೆ
ನಡೆ ಬೆವರಿಸಿದರು ಲಾಸ್ಯವೆ ||

ಹಾದಿಯುದ್ದಕು ಮಿಂಚಿ ಮರೆ
ಯಾಣ ಸುಂದರಿ ಶಿಖರ ತಲೆ
ಮೈಗೆ ಜುಮ್ಮೆನಿಸಿ ಹತ್ತಿರದಲೆ
ನಿಂತಂತೆ ಕಂಡರು ದೂರಬಾಲೆ ||

ಎದುಸಿರಿಟ್ಟು ಮುಕ್ಕರಿದು ಬಂತೆ
ಎಂಥಾ ಸೃಷ್ಟಿ ಚಮತ್ಕಾರ ಕವಿತೆ
ಬಂಡೆಯೊ ಕಲ್ಲೊ ಶಿಲೆಯೆ ಗೊತ್ತೆ
ಚಂದವಲ್ಲವೆ ಬರಲು ಮತ್ತೆ ಮತ್ತೆ ||

————————————————————————————-
ನಾಗೇಶ ಮೈಸೂರು
————————————————————————————-

02. ಯಾಣದ ಬುಡ ತಲುಪಿದ, ದೈವದರ್ಶನ ಮುಗಿಸಿದ ಸಾಹಸ ಬರಿ ಅರ್ಧಕಥೆಯಾದರೆ, ಶಿಖರದ ಮೇಲೇರಿ ಅದನ್ಹತ್ತಿ ನೋಡುವ, ಅಲ್ಲಿನ ಹೃನ್ಮನೋಹಾರಿಕ ದೃಶ್ಯ ವೈಭವದಲ್ಲಿ ಕಳುವಾಗುವ ಅನುಭೂತಿಯೆ ಮತ್ತೊಂದು ಸ್ತರಕ್ಕೆ ಸೇರಿದ್ದು. ಪೌರಾಣಿಕ ಹಿನ್ನಲೆಯ ಭಸ್ಮಾಸುರನ ಕಥೆಯೊಂದಿಗೆ ತಾಳಮೇಳೈಸಿದ ಯಾಣ ಒಂದು ವಿಧದಲ್ಲಿ ಲೌಕಿಕ, ಅಲೌಕಿಕ, ಪ್ರಾಕೃತಿಕ, ದೈವಿಕ, ವಿಸ್ಮಯಕಾರಕಾದಿ ತರದ ಇನ್ನು ಹಲವು ಭಾವಗಳ ಸಂಗಮವೆನಿಸಿ ಅನುಭವ, ಅನುಭಾವವಾಗಿ, ಅನುಭೂತಿಯ ಮಟ್ಟವನ್ನು ದಾಟಿ ಅನಂತತೆಯ ಅನನ್ಯತೆಯತ್ತ ಮನವನ್ನು ಕೊಂಡೊಯ್ಯುವ ಸೋಜಿಗವೆನಿಸುವ ಪರಿಮಾಣವನ್ನು ಪದಗಳ ಶಕ್ತಿ ಹಿಡಿಯಲು ಸಾಧ್ಯವಾಗುವಷ್ಟರ ಮಟ್ಟಿಗೆ ಹಿಡಿವ ತಾಕಲಾಟ ಈ ‘ಯಾಣ ಶಿಖರ ತಾಣ…!’ ಕವನದ್ದು.

ಯಾಣ ಶಿಖರ ತಾಣ…!
__________________________

ಭಕ್ತಿ ದೇಗುಲ ಕಥೆ ಕಲ್ಯಾಣ ಮಾತೆ
ಮೋಹಿನಿ ಪ್ರೇಮ ಭಸ್ಮಾಸುರ ಕಥೆ
ಶಿವನನುಳಿಸಲು ನಾಟ್ಯಿಸಿದ ಗೀತೆ
ಯಾಣತಾಣಕಥೆ ಹರಿದುಬಂತಂತೆ ||

ಶಿಖರ ಶಿಶಿರಗಳೊ ಯಾರ ನೆರಳೊ
ಕಪ್ಪು ಹೆಪ್ಪಾದ ನಾರಿ ಮುಂಗುರುಳೊ
ರಕ್ಕಸನ ಕಟ್ಟಿಡಿದ ದೇಹ ಮೊಗ್ಗಲೊ
ಸುಟ್ಟಳಿದುಳಿದ ಮೂಳೆಯ ಮಡಿಲೊ ||

ಹತ್ತಲಪ್ಪುತ ಕಲ್ಲು ಗಡಗಡಿಸಿ ಕಾಲು
ಮೇಲೇರಿದಂತೆಲ್ಲ ಜುಂ ಅನಿಸಿ ದಿಗಿಲು
ಜೀವ ಕೈಯೊಳಿಟ್ಟು ಮುನ್ನುಗ್ಗಿ ಸಾಗಿರಲು
ಕಂಡೆಬಿಟ್ಟಿತೆ ಕೊನೆ ಮೇಲೆ ಬರಿಮುಗಿಲು ||

ಆಡಿದ ಜಲಕ್ರೀಡೆ ಬೀಸೊ ಬಿರು ತಂಗಾಳಿ
ಧನ್ಯ ಮೈಮನ ತುಂಬಿಸಿ ಹಿತದಿ ಕಚಗುಳಿ
ಸಾರ್ಥಕತೆ ಭಾವವುದಿಸಿ ಮನಪೂರ ಮೌನ
ಇನ್ನಾದರು ಬಿಟ್ಟೋದಳೆ ಕ್ಯಾಣ ನನ್ನ ಯಾಣ ||

ಒಮ್ಮೆಯಾದರು ಬದುಕಲಿ ನೋಡಿಬಿಡು ಯಾಣ
ಯಾವ ಸಾಧನೆಯೂ ಈ ಕಪ್ಪದ ಮುಂದೆ ಗೌಣ
ಬಾಳಿನ ಯಾನವೆ ಅದ್ಬುತ ಹತ್ತಿದಂತೆ ಪಯಣ
ಜಯಿಸಿದ ಮೇಲರಿವೆ ಅಂಜದೆ ಮುರಿವೆ ಮರಣ ||

————————————————————————–
ನಾಗೇಶ ಮೈಸೂರು
————————————————————————–

00829. ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)


00829. ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)
_______________________________________________

ಈ ಮಾನವ ದೇಹ ರಚನೆಯ ಅಪ್ರತಿಮ ಕಲಾಚಾತುರ್ಯದಲ್ಲಿ, ಹೃದಯದ ಸ್ಥಾನ ವಿಶಿಷ್ಟವಾದದ್ದು. ಉಬ್ಬರವಿಳಿತದ ಹಾಗೆ ಏರಿಳಿತದ ತಾಳ ಮೇಳದೊಡನೆ ಹೆಣಗುವ ಈ ಮಾನವ ಪಂಪು ಎಲ್ಲಿಯವರೆಗೆ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವೊ ಅಲ್ಲಿಯತನಕ ದೇಹದ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಾಗುವುದಿಲ್ಲ. ಆದರೆ, ಅದನ್ನು ಆ ಸ್ತಿತಿಯಲ್ಲಿಡುವ ಕಾರ್ಯ ಅಷ್ಟು ಸುಲಭವಲ್ಲ. ನಾವು ಉಂಡು ತಿನ್ನುವ ಊಟದಿಂದಿಡಿದು, ಮಾಡುವ ಕೆಲಸ ಕಾರ್ಯಗಳು, ವ್ಯಾಯಾಮಾಯಮಗಳು – ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರಬೇಕಾದ ಅಗತ್ಯವನ್ನು ತೆಳು ಹಾಸ್ಯದ ಲಯದಲ್ಲಿ, ಪ್ರಾಸದ ನೆರಳಲ್ಲಿ, ಹಾಡೊಂದರ ಪಲ್ಲವಿಗನುಗುಣವಾಗಿರುವಂತೆ ಹೊರಹೊಮ್ಮಿದ ಕಾವ್ಯ.

ಈ ಎರಡನೆ ಭಾಗದ ಕವನ ದಿನದಿನದ ಅನಿವಾರ್ಯ ಬದುಕಿನ ಶೈಲಿ ಹಾಗು ವಯಸಿನ ಸಹಜ ಮನೋವೃತ್ತಿಯ ಪರಿಣಾಮವಾಗಿ ಆಗಬಹುದಾದ ಪ್ರಕ್ರಿಯೆಗಳನ್ನು ಜೋಡಿಸುತ್ತ ಹೋಗುತ್ತದೆ. ಉಬ್ಬರದ ಇಳಿತದ ಸಾಂಕೇತಿಕತೆ ದೇಹದ ಪ್ರತಿಕ್ರಿಯಾತ್ಮಕತೆಯ ಇಳಿತದ ಸಂಕೇತವು ಆಗಿದೆ.

ಮುನ್ನೆಚ್ಚರಿಕೆಯೊತ್ತೊ, ಇಲ್ಲವೊ ಈ ಅನಿವಾರ್ಯಗಳು ಹೇಗೂ ಜೀವನವನ್ನು ಕಾಡಿಸುವುದು ಸತ್ಯ. ಅದಕ್ಕಾಗಿ ಮಾನಸಿಕವಾಗಿ ಸಿದ್ದವಾಗಿರುವ ಅಥವ ಸಾಧ್ಯವಿದ್ದಷ್ಟು ಎಚ್ಚರಿಕೆ ವಹಿಸಬೇಕಾದ ವಿಷಯಗಳನ್ನು ಎತ್ತಿ ತೋರುವ ಲಹರಿ ಇಲ್ಲಿ ಕಾಣುತ್ತದೆ. ಎಲ್ಲಾ ಮಿತಿ ಮೀರಿದರೆ ವೈದ್ಯರ ದಾರಿಯಂತೂ ಇದ್ದೆ ಇದೆಯೆಂಬ ಸಮಾಧಾನಿಸುವ ದನಿಯೂ ಕೊನೆಯಲ್ಲಿ ಕಾಣುತ್ತದೆ.

ಇಳಿತದೆ ಕುಳಿತ! (ಉಬ್ಬರವಿಳಿತ ಈ ಎದೆ ಬಡಿತ – 02)
______________________________________


(Picture from Internet)

ಹುಚ್ಚಿನ ದುಡಿಮೆ
ಹೆಚ್ಚು ಕಡಿಮೆ
ಅಂಗಾಂಗಗಳು ಕಂಗಾಲು
ಕೆಲಸದ ಒತ್ತಡ
ಹೃದಯಕೆ ಬಗ್ಗಡ
ಬದುಕಿನ ಶೈಲಿ ಸಮಪಾಲು 😒||

ವ್ಯಾಯಮ ಹೀನ
ದೈನಂದಿನ ಪಯಣ
ಟ್ರಾಫಿಕ್ಕಿನ ಜತೆ ಕಲ್ಯಾಣ
ಕೆಲಸ ಆರಾಮ
ದೇಹ ವಿರಾಮ
ಕಟ್ಟಿಡುವುದು ಹೇಗೊ ಈ ಪ್ರಾಣ ? 🤔 ||

ಸಮಯದ ಗೊಜ್ಜು
ನುಜ್ಜು ಗುಜ್ಜು
ಸಂಸಾರಕೆ ಬರಿ ಮಂದಹಾಸ
ಸಹಿಸುತ ಕಾದು
ಬೇಸತ್ತು ಬೈದು
ಬೇಡೆನ್ನುವರು ನಿನ್ನ ಸಹವಾಸ 😛 ||

ಕೆಲಸದಿ ಅಜ್ಜಿ
ಮನೆಯಲಿ ಬಜ್ಜಿ
ಉಬ್ಬರವಿಳಿತದ ಹೆಚ್ಚಾಟ
ಹೃದಯ ನಪಾಸು
ರಕುತ ವಾಪಸ್ಸು
ಬೈಪಾಸ್ ಸರ್ಜರಿ ಖರ್ಚಾಟ 😫 ||

ಇಷ್ಟೇ ಗುಟ್ಟು
ಹೃದಯದ ಮುಟ್ಟು
ಹರಿ, ಕರಿ, ವರಿಗಳ ಹೊಂಚಾಟ
ಬಾಯಿಗೆ ಕಟ್ಟು
ತುಸು ಕಸರತ್ತು
ತಪ್ಪಿಸೆ ಹೃದಯದ ಪರದಾಟ 😷 ||

ಇಷ್ಟಕು ಮೀರಿ
ಎಲ್ಲ ತಯಾರಿ
ಆಡಲು ಹೃದಯ ತುಂಟಾಟ
ಚಿಂತಿಸಬೇಡ
ವೈದ್ಯರ ನೋಡ
ಮದ್ದಲಿ ಮಣಿಸಲು ಚೆಲ್ಲಾಟ 💰||

—————————————————————————-
ನಾಗೇಶ ಮೈಸೂರು
—————————————————————————-

00828. ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)


00828. ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)
__________________________________________

ಈ ಮಾನವ ದೇಹ ರಚನೆಯ ಅಪ್ರತಿಮ ಕಲಾಚಾತುರ್ಯದಲ್ಲಿ, ಹೃದಯದ ಸ್ಥಾನ ವಿಶಿಷ್ಟವಾದದ್ದು. ಉಬ್ಬರವಿಳಿತದ ಹಾಗೆ ಏರಿಳಿತದ ತಾಳ ಮೇಳದೊಡನೆ ಹೆಣಗುವ ಈ ಮಾನವ ಪಂಪು ಎಲ್ಲಿಯವರೆಗೆ ನಿರಾತಂಕವಾಗಿ ಕೆಲಸ ಮಾಡಲು ಸಾಧ್ಯವೊ ಅಲ್ಲಿಯತನಕ ದೇಹದ ದೈನಂದಿನ ಕಾರ್ಯಾಚರಣೆಗೆ ಅಡ್ಡಿಯಾಗುವುದಿಲ್ಲ. ಆದರೆ, ಅದನ್ನು ಆ ಸ್ತಿತಿಯಲ್ಲಿಡುವ ಕಾರ್ಯ ಅಷ್ಟು ಸುಲಭವಲ್ಲ. ನಾವು ಉಂಡು ತಿನ್ನುವ ಊಟದಿಂದಿಡಿದು, ಮಾಡುವ ಕೆಲಸ ಕಾರ್ಯಗಳು, ವ್ಯಾಯಾಮಾಯಮಗಳು – ಎಲ್ಲವೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಂಡಿರಬೇಕಾದ ಅಗತ್ಯವನ್ನು ತೆಳು ಹಾಸ್ಯದ ಲಯದಲ್ಲಿ, ಪ್ರಾಸದ ನೆರಳಲ್ಲಿ, ಹಾಡೊಂದರ ಪಲ್ಲವಿಗನುಗುಣವಾಗಿರುವಂತೆ ಹೊರಹೊಮ್ಮಿದ ಕಾವ್ಯ.

ಈ ಮೊದಲಿನ ಭಾಗದ ಕವನ ದಿನದಿನದ ಆಹಾರ, ನಡುವಳಿಕೆಯ ರೀತಿಗಳು ಉಬ್ಬರದ ಏರಿಕೆಗೆ ಕಾರಣವಾಗಬಹುದಾದ ಬಗೆಯನ್ನು ಚಿತ್ರಿಸುತ್ತವೆ. ಯಾವ್ಯಾವ ಬಗೆಯ ಸೆಳೆತಗಳು ಉಬ್ಬರದ ಕಸಿವಿಸಿಗೆ ಕಾರಣವಾಗಬಹುದೆಂಬ ಕಿರು ಪಟ್ಟಿಯನ್ನು ಬಣ್ಣಿಸುತ್ತಾ ಸಾಗುತ್ತದೆ ಈ ಕವನದ ಲಹರಿ – ಒಂದು ಬಗೆಯಲ್ಲಿ, ಯಾವುದರ ಕುರಿತು ಮುನ್ನೆಚ್ಚರಿಕೆ ವಹಿಸಬೇಕೆನ್ನುವ ಬಗ್ಗೆ ಹಾಸ್ಯದ ಲಹರಿಯಲ್ಲೆ ಉಳಿವು ಕೊಡುತ್ತ.

(Picture source : Internet)

ಉಬ್ಬರದ ಸೆಳೆತ! (ಉಬ್ಬರವಿಳಿತ ಈ ಎದೆ ಬಡಿತ – 01)
________________________________________

ಉಬ್ಬರವಿಳಿತ
ನಮ್ ಹೃದಯದ ಬಡಿತ
ಚಣ ಜಣ ಹಾಡುವ ಸಂಗೀತ
ನಿಲ್ಲದ ಗಾನ
ರಕುತದ ಪಯಣ
ನಿಂತರೆ ಸಾವಿಗೆ ಸಂಕೇತ 😔 ||

ತಿಂದರೆ ಕೊಬ್ಬು
ನಮ್ ಹೃದಯಕೆ ಗಬ್ಬು
ನರ ನಾಡಿಗಳೆಲ್ಲ ಹೊಡೆದಾಟ
ಹರಿಯದೆ ರಕ್ತ
ಹೃದಯ ಅಶಕ್ತ
ಬರಬಹುದು ಹೃದಯಾಘಾತ 😔||

ಬೆಳಗಿನ ಸಮಯ
ಬಿಟ್ಟರೆ ತಿಂಡಿಯ
ಕೆಟ್ಟು ಹೋಗುವ ಅನುಪಾತ
ಗೋಳಿನ ಭಕ್ತ
ಹೃದಯ ವಿರಕ್ತ
ಕುಲಗೆಟ್ಟು ಕಾಣುವೆ ಹಿಮಪಾತ 😨||

ಹೆಚ್ಚಿನ ಎಣ್ಣೆ
ತುಂಬಿದ ದೊನ್ನೆ
ಮುಚ್ಚಿಸುವುದು ಕೊಳವೆಯ ತೂತ
ಕ್ಯಾತೆಟರ ತುರುಕೆ
ಹೃದಯದ ಗೊರಕೆ
ತಪ್ಪಿಸಬೇಕು ಒಳ ಊತ 😎 ||

ಮಾಂಸ, ಮಡ್ಡಿ
ತೊಗಲಿನ ಬಡ್ಡಿ
ಹೆಚ್ಚುವುದಂತೆ ಮುಂಗೋಪ
ಹೆಚ್ಚಿಸುತ ಬಡಿತ
ಹೃದಯ ಮಿಡಿತ
ಹುಚ್ಚಿಡಿಸಿ ಕೊನೆಗೆ ಸಂತಾಪ 🙄 ||

ಕುಡಿತದ ಕುಣಿತ
ಆಯಸ್ಸಿನ ಕಡಿತ
ಹೃದಯ ಕವಾಟಗಳು ಬಲಹೀನ
ಮುದುರಿಸಿ ಯುಕ್ತಿ
ಉಡುಗಿಸಿದರೆ ಶಕ್ತಿ
ಎಲ್ಲ ಪ್ರಯತ್ನಗಳು ಫಲಹೀನ 😟 ||

———————————————————————–
ನಾಗೇಶ ಮೈಸೂರು
———————————————————————–

00827. ಅಂತರ್ಯಾನದ ಅವತಾರ


00827. ಅಂತರ್ಯಾನದ ಅವತಾರ
_________________________

ಹುಡುಕಾಟದ ತವಕ ಮಾನವನ ಮನಸಿನ ಕೊನೆ ಮೊದಲಿಲ್ಲದ ಕುತೂಹಲದ ನಿರಂತರತೆಯ ಸಂಕೇತ. ಈ ಹುಡುಕಾಟ ಕೆಲವೊಮ್ಮೆ ಆಧ್ಯಾತ್ಮಿಕದ ಪರಿಧಿಯ ಸುತ್ತ ಗಿರಕಿ ಹೊಡೆದರೆ, ಮತ್ತೊಮ್ಮೆ ಭೌತಿಕ ಜಗದ ವಾಸ್ತವಿಕತೆಯ ಸುತ್ತ ತೊಳಲಾಡಿರುತ್ತದೆ. ಈ ಹುಡುಕುವಿಕೆ ಭೌತಿಕ ಹಾಗೂ ಆಧ್ಯಾತ್ಮಿಕದ ನಡುವೆ ಓಲಾಡುವ ವಸ್ತುವಾದರೆ, ಎರಡು ದೋಣಿಗಳಲ್ಲಿ ಕಾಲಿಟ್ಟು ನಡೆವ ಪ್ರಕ್ರಿಯೆಯಂತೆ ಹುಡುಕಾಟವೂ ಲೋಲಕದಂತೆ ಎರಡರ ಮಧ್ಯೆ ತೂಗಾಡತೊಡಗುತ್ತದೆ.

ಅಂತರ್ಯಾನದ ಈ ಪ್ರವರ ಅಂತದ್ದೆ ಹುಡುಕಾಟವೊಂದರ ವರ್ಣನೆ. ಆಧ್ಯಾತ್ಮಿಕದ ಹುಡುಕಾಟದ ಗಮ್ಯವನ್ಹೊತ್ತ ಆಶಯವೊಂದು ಭೌತಿಕ ಜಗತ್ತಿನಲ್ಲಿ ಸೆಣೆಸುತ್ತ ಅಧ್ಯಾತ್ಮದ ಬೆಳಕಿಗೆ ಹುಡುಕಿ ಹೊರಡುವ ಪಯಣ ಇದರ ವಸ್ತು; ಆದರೀ ಭೌತಿಕ ಜಗ ಹೊರಗಿನ ಪರಿಸರವಾಗಿರದೆ, ಒಳಹೊಕ್ಕು ನೋಡುವ ಅಂತರ್ಯಾನವಾದಾಗ ದರ್ಶನವಾಗುವ / ಹಾದು ಹೋಗುವ ಒಳಾಂಗಗಳ ಸಾಂಕೇತಿಕತೆ ಇಲ್ಲಿ ಚಿತ್ರಿತ. ಪಯಣದ ಅಂತ್ಯದಲಿ ಕೊನೆಗೂ ಕಾಣಿಸುವ ತಾತ್ವಿಕ, ಆಧ್ಯಾತ್ಮಿಕ ಗಮ್ಯವೆ “ಅಂತರ್ಯಾನದ ಅವತಾರ”

(Picture from Internet)

ನನ್ನೊಳಗನು ನಾನೇ ಹೊಕ್ಕಾದ ಮೇಲೆ
ನಾನೇ ನಾನಾಗುವ ನಾಳೆ ಇನ್ನು ಮೇಲೆ
ಹೊಕ್ಕ ಒಳಗಿನ ಪಾಳು ನೆನೆದರೆ ಹಾಳು
ಮಿಕ್ಕ ಸರಿಗಟ್ಟುವ ಪಾಲು ಬೆರೆಸಿ ಹಾಲು ||

ಒಳಚಕ್ಷುವಿಗೆ ಕುರುಡು ಕಾಣದಾ ಕರಡು
ಕಂಗಳಿಲ್ಲದ ಒಳಾಂಗ ಕಂಡರೂ ಕೊರಡು
ಇನ್ನು ನಂಬಿಕೆ ಸಾಕು ಹೂತು ಬಿಡಬೇಕು
ಅದಕೆ ಗಟ್ಟಿಸಿದೆ ಮನಸೊಳ್ಹೋಗಬೇಕು ||

ಅಲ್ಲ ಸುಲಭದ ಪಯಣ ಕತ್ತಲೆ ಸಂಪೂರ್ಣ
ತಡವುತ ಎಡವುತ ನಡೆವ ಅಗಮ್ಯ ಯಾನ
ಅಂಗಾಂಗ, ಅನ್ನಾಂಗ ತಣ್ಣನೆ ಮೂಳೆ ಮೌನ
ಹರಿವ ರಕ್ತದೆ ಸ್ನಾನ ಕಪ್ಪು ನರನಾಡಿ ಚರಣ ||

ಕಾಣದ ಅನುಭವದಾ ನಡುವೆ ಮತ್ತೆ ಜಗ್ಗು
ಅನುಭವಿಸೋ ಅನುಭಾವದ ಗಡಿಗೆ ಹಿಗ್ಗು
ಕುಳುಕುಳು ಕಾಲುವೆಯರಿವು ಬಿದ್ದು ಜಠರ
ಅನುಭವವ ಜೀರ್ಣಿಸಲು ಕರುಳಿನಾ ವಠಾರ ||

ಶ್ವಾಸಾಂಗ ಹೃದಯ ಹೊಕ್ಕಂತೆ ತುಸು ನಿರಾಳ
ಶೋಧಿಸಿದ ಗಾಳಿ, ನೆತ್ತರು ಮಾಡಿಸಿತು ಹೇರಳ
ಲಬಡಬದ ನಡುವೆ ತೇಲಿ ವಿಹರಿಸಿದ ಸಮ್ಮೇಳ
ಗಟ್ಟಿ ಆಧಾರಕಿಡಿದು ನಿಂತ ಅಸ್ತಿಗಳ ಹಿಮ್ಮೇಳ ||

ಅಂತೂ ಶಿರ ಶಿಖರ ಪಾದ ಉಂಗುಷ್ಟಾಂತರ ವರ್ಷ
ನೆನೆದು ಹಸಿಯಾದಂತೆಲ್ಲ ಹುಟ್ಟಿಸಿತು ಹೊಸ ಹರ್ಷ
ನೀರಿಗಿಳಿದಾ ಮೇಲೆ ಚಳಿಯೇನು ಮಳೆಯೇನು ಕರ್ಮ
ಅಂಧಕಾರದಲೇ ಈಜುತ ಲಹರಿ ಹರಿಬಿಟ್ಟಿತು ಮರ್ಮ ||

ಆಗ ಕಾಣಿಸಿದ ಅಲ್ಲಿ ಹೊಳೆ ಹೊಳೆಯುವ ಹರಿಕಾರ
ಕಣ್ಣು ಕೋರೈಸಿದ ತಂಪು ಕಾಂತಿಗಳನೆಸೆವ ಸರದಾರ
ಹೊಮ್ಮಿಸುತ ಅಲೆಅಲೆ ಪೂರ ಹರಿಸುತ ಶಾಂತಸಾಗರ
ಹಿಡಿದೆತ್ತಿ ದಡ ಕೂರಿಸಿ ಮುಗಿಸೆ ಅಂತರ್ಯಾನವತಾರ ||

———————————————————————-
ನಾಗೇಶ ಮೈಸೂರು
———————————————————————–

00823. ಕಗ್ಗಕೊಂದು ಹಗ್ಗ 16: ಮಂಕುತಿಮ್ಮನ ಕಗ್ಗ 16 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ.. 


00823. ಕಗ್ಗಕೊಂದು ಹಗ್ಗ 16: ಮಂಕುತಿಮ್ಮನ ಕಗ್ಗ 16 ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

0822. ಮಂಕುತಿಮ್ಮನ ಕಗ್ಗ 15 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ..


ಮಂಕುತಿಮ್ಮನ ಕಗ್ಗ 15 ರ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00821. ಕಪಿಲೆಯ ತಟದಲಿ – 01


00821. ಕಪಿಲೆಯ ತಟದಲಿ
_________________________

ನಂಜುಂಡೇಶ್ವರನ ಸನ್ನಿಧಿಯಲ್ಹರಿವ ನದಿ ಕಪಿಲೆ ಪ್ರತಿ ಬಾರಿಯೂ ಮಳೆಗಾಲದ ಉತ್ಕರ್ಷದಲ್ಲಿ ಒಮ್ಮೆಯಾದರೂ ಬಂದು ದೇಗುಲದ ಬಾಗಿಲ ಸ್ಪರ್ಷಿಸಿ ನಮಸ್ಕರಿಸಿ ಹೋಗುವಳೆಂದು ನಂಬಿಕೆ. ಹಾಗೆಯೆ ಹರಕೆ ಹೊತ್ತು , ಮುಡಿ ಕೊಟ್ಟು, ಮುಡಿಪು ಕಟ್ಟಿ ಸಾಲ ತೀರಿಸಿ ಹೋಗ ಬಂದ ಭಕ್ತಾದಿಗಳ ಹೊಳೆ ತಟದಿ ಮೀಯುವ ದೃಶ್ಯ ಸರ್ವೆ ಸಾಮಾನ್ಯ. ಇದರ ಕಂಡಂತೆ ಕಾಣುವ ಚಿತ್ರಣವನ್ನು ಕಟ್ಟಿ ಕೊಡುವ ಯತ್ನ ಈ ಕವನದ್ದು.

ಕಪಿಲೆಯ ತಟದಲಿ – 01
_________________________


ಕಪಿಲೆ ಹರಿದ ಹಾದಿಯಲಿ
ಅಳಿಸಿ ಹೋಗಿವೆ ಹೆಜ್ಜೆಗಳು
ಮರುಕಳಿಸಿದಲೆ ನೆನಪಿನಲ್ಲಿ
ಹಸಿರಾಗಿವೆ ಕುಣಿಗೆಜ್ಜೆಗಳು ||

ತಟದಿ ಮುಳುಗೇಳು ಸ್ನಾನ
ಪಾಪ ತೊಳೆದೊರೆಸಲಜ್ಞಾನ
ದಡದುದ್ದಕು ಭಕ್ತಿಗೆ ಹರಡೆ
ಮುಡಿಕೊಟ್ಟ ತಲೆ ಬುರುಡೆ ||

ಕಾಶಿಗ್ಹೋಗದಿರುವೆ ದಕ್ಷಿಣ
ಮಳೆಗಾಲವಂತೆ ದಾರುಣ
ಕೊಚ್ಚಿ ಕೋಡಂಗಿಗಳ ಪರ್ಣ
ತುಂಬ್ಹರಿವ ಕಪಿಲ ಕಾರಣ ||

ನಂಬಿಕೆಗಳಿಗ್ಹೇಳು ತೆವಲು
ನದಿಯಾದಂತೇರಿ ಕವಲು
ತುಂಬಿದಾಗೆಲ್ಲ ನದಿ ಕಪಿಲೆ
ದೇಗುಲ ಬಾಗಿಲ ತೊಳೆವಳೆ ||

ಮುಟ್ಟಿನಮಿಸಿದಳೊಬಿಟ್ಟಳೊ
ನಂಜುಂಡನ ಕಾಲ್ಸವರಿಟ್ಟಳೊ
ಅಂತೂ ಹಿಂದಿರುಗಿ ದಡದಡಿ
ತೆರೆದಿಟ್ಟು ರಸ್ತೆಛತ್ರದ ನಾಡಿ ||

—————————————————————-
ನಾಗೇಶ ಮೈಸೂರು
—————————————————————-

(Picture source- http://economictimes.indiatimes.com/indias-major-natural-calamities-in-last-10-years/the-submerged-temple-of-town-nanjangud/slideshow/5323932.cms)

00820. ಮಂಕುತಿಮ್ಮನ ಕಗ್ಗ 14 ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..


00820. ಮಂಕುತಿಮ್ಮನ ಕಗ್ಗ 14 ರ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ..

ಕಗ್ಗಕೊಂದು ಹಗ್ಗ ಹೊಸೆದು…

00816. ಜೀವಕೋಶದ ಪ್ರವರ


00816. ಜೀವಕೋಶದ ಪ್ರವರ
_______________________

ವಿಜ್ಞಾನ ಪಾಠದಲ್ಲಿ ನಮ್ಮ ಮಕ್ಕಳು ಸಾಧಾರಣ ಮೊದಮೊದಲು ಕಲಿಯುವ ವಿಷಯಗಳಲ್ಲಿ ಜೀವಕೋಶದ ಪ್ರವರವೂ ಒಂದು. ಅದನ್ನು ಸರಳವಾಗಿ ಕವನ ರೂಪದಲ್ಲಿ ಸಂಗ್ರಹಿಸಲು ಹಿಂದೊಮ್ಮೆ ಯತ್ನಿಸಿದ್ದೆ. ಜೀವಕೋಶದ ಭಾಗಗಳ ಕುರಿತಾದ ಕವನದಲ್ಲಿ ಹಾಗೆ ಮಾಡುವಾಗ ಉದ್ದೇಶಪೂರ್ವಕವಾಗಿಯೇ ಆ ಭಾಗಗಳ ಆಂಗ್ಲ ರೂಪವನ್ನು ಬಳಸಿಕೊಂಡಿದ್ದೆ – ಕನ್ನಡದಲ್ಲಿ ಓದುವವರಿಗೆ ಆ ಹೆಸರುಗಳನ್ನು ಪರಿಚಯಿಸುವ ಸಲುವಾಗಿ. ವಿಜ್ಞಾನ ವಿಷಯಗಳು ಕವನವಾದರೆ ಹೇಗಿದ್ದಿತೆಂಬ ಕುತೂಹಲಕ್ಕೆ ಹೆಣೆದಿದ್ದೆಂಬ ಕಾರಣ ಬಿಟ್ಟರೆ ಮತ್ತಾವ ಹೆಗ್ಗಳಿಕೆಯೂ ಇದಕ್ಕಿಲ್ಲವಾದರೂ, ಸಾಮಾನ್ಯ ಓದುಗರ ಸುಲಭ ಗ್ರಹಿಕೆಗೆ ದಕ್ಕುವುದೋ ಇಲ್ಲವೋ ಎಂದು ನೋಡುವ ಮತ್ತೊಂದು ಕುತೂಹಲದ ಸಲುವಾಗಿ ಪ್ರಕಟಿಸುತ್ತಿದ್ದೇನೆ.. 😊


ಜೀವಕೋಶದ ಭಾಗಗಳು
____________________________


ಸಸ್ಯ ಪ್ರಾಣಿಗಳೆಂಬ ಎರಡು ಬಗೆ ಕೋಶ
ಭುವಿಯ ಮೇಗಡೆ ಆಳೋ ಜೀವ ಸ್ವರೂಪ
ಅರ್ಥವಾದರೆ ಇದರ ಮೂಲ ಸಿದ್ದಾಂತ
ಅರಿತಂತೆ ಜೀವಿ ಪೂರ ಜಾತಕ ಪರಿಣಿತ ||

ಸಸ್ಯರಾಶಿಯ ಕೋಶ ಹೊರಗಿನ ಆವೇಶ
ಒಳಗೆಲ್ಲವ ಹಿಡಿದಿಟ್ಟ ಗಟ್ಟಿ ಹೊರಕೋಶ
ಕೋಶದಾಕಾರ ಕೊಡೊ ಹೊರಭಿತ್ತಿ ವೇಷ
‘ಸೆಲ್ವಾಲ್’ ಎಂದು ಇದರೆಸರು ಇಂಗ್ಲೀಷ ||

ಬೆಚ್ಚನೆಯ ಹೊರಭಿತ್ತಿ ಕಳಚಿದರೆ ಪೂರ
ಒಳಗೆ ಸಿಗುವನು ಕೋಶ ಒಳಭಿತ್ತಿಗಾರ
ಇವ ತೆಳು ಜಾಲರಿ ಮೈಯ ಬಲೆಗಾರ
ಕಾಯುವ ಒಳ ಹೊರಬರುವವರ ಪೂರ ||

ವಿನಿಮಯಿಸಿಕೊಳ್ಳುವ ವಾಯು, ಆಹಾರ
ತನ್ನ ಜಾಲರಿಯ ಮೈ ಪರದೆ ಜರಡಿ ತರ
ಒಳಬಿಡೊ, ತಡೆಯಿಡೊ ದ್ವಾರಪಾಲ ಸ್ವರ
‘ಸೆಲ್ ಮೇಂಬ್ರೆನು’ ಇದರ ಆಂಗ್ಲ ಹೆಸರ ||

ಈ ಇಬ್ಬರು ಜಯ ವಿಜಯರ ದಾಟೆ ಬೇಗ
ಜೆಲ್ಲಿಯಂತಿರುವ ಸಾಹೇಬಾ ತುಂಬೊ ಜಾಗ
‘ಸೈಟೋ ಪ್ಲಾಸಂ’ ಇವನಿಗಿತ್ತ ಹೆಸರಿನ ರಾಗ
ಮೆತ್ತನೆ ತಾವಲಿ ಹಲಜನ ತುಂಬಿಸಿಟ್ಟ ಬೀಗ ||

ಇವನೊಳಗೆ ತೇಲುವರು ಇನ್ನುಳಿದ ಐಕಳು
ಕೋಶದ ಉಳಿದ ಇಬ್ಬರು ಕಾರ್ಯಕರ್ತರು
ಅವರಲ್ಲಿ ‘ನ್ಯೂಕ್ಲಿಯಸ್’ ದೊಡ್ಡಣ್ಣ ಪ್ರಮುಖ
‘ಕ್ಲೋರೋಪ್ಲಾಸ್ಟು’ ಚಿಕ್ಕಣ್ಣನೆ ಆಹಾರ ಜನಕ ||

———————————————————
ನಾಗೇಶ ಮೈಸೂರು
———————————————————

Picture source 03: https://en.m.wikipedia.org/wiki/File:Animal_cell_structure_en.svg
Picture source 02: https://en.m.wikipedia.org/wiki/File:Plant_cell_structure-en.svg
Picture source 01: https://en.m.wikipedia.org/wiki/File:Celltypes.svg

00815. ತಾರುಣ್ಯ ಹುಟ್ಟಿದಾರಣ್ಯ – 01


00815. ತಾರುಣ್ಯ ಹುಟ್ಟಿದಾರಣ್ಯ – 01
__________________________________

ತಾರುಣ್ಯವೆಂಬುದು ಪ್ರತಿ ವ್ಯಕ್ತಿಯ ಬಾಳಿನ ಅಮೋಘ ಅಧ್ಯಾಯ. ರೆಕ್ಕೆ ಬಿಚ್ಚಿದ ಹಕ್ಕಿಯಂತೆ, ಅಡೆ ತಡೆಯಿಲ್ಲದೆ ಹಾರುವ ಪತಂಗದಂತೆ ಹಾರಾಡಿಸುವ ಈ ವಯಸಿನ ರಾಗ ಲಹರಿ ಅರಳಿ, ಹೂವ್ವಾಗಿ, ತೆನೆಯಾಗಿ ಮಾಗುವ ಪರಿಯೆ ಸೊಬಗು. ಆ ಹಾದಿಯಲ್ಲಿ ಸಂತಸ , ಹರ್ಷವೆಲ್ಲ ಇರುವಂತೆಯೆ ನೋವು, ದುಃಖ, ಕಲಿಕೆಯೂ ಅಂತರ್ಗತ. ಆ ತಾರುಣ್ಯದ ಹಮ್ಮಿನಲ್ಲಿ ಏನೆಲ್ಲಾ ಘಟಿಸುವುದೆನ್ನುವುದನ್ನು ಅನುಭವಿಸಿ, ಅನುಭಾವಿಸುವುದೆ ಒಂದು ವಿಸ್ಮಯ ಲೋಕ; ಹುಟ್ಟುತ್ತಲೆ ಹೊಸತೊಂದು ಅರಣ್ಯ ಗರ್ಭವನ್ನೆ ಬಿಚ್ಚಿಡುತ್ತಾ ಹೋಗುವ ಆ ರಿಂಗಣದ ಭಾವವನ್ಹಿಡಿಡುವ ಯತ್ನವೆ ಈ ಕಾವ್ಯ – ಮನದ ರಿಂಗಣ ತನನ (ತಾರುಣ್ಯ ಹುಟ್ಟಿದಾರಣ್ಯ)

ಮನದ ರಿಂಗಣ ತನನ
______________________________________

ಮನದ ರಿಂಗಣ ತನನ
ವಯಸಿನ ಸಮ್ಮೋಹನ
ಬಗೆಯಾ ತನು ತಿಲ್ಲಾನ
ಅದೇಕೊ ರೋಮಾಂಚನ ||

ಗುರುಗುಟ್ಟಿ ಸರಿ ಪ್ರಾಯ
ಯಾರಿಟ್ಟರೊ ಅಡಿಪಾಯ
ಬುರುಬುರನೇ ಮೊಗ್ಗರಳಿ
ಹೂವ್ವಾದ ದೇಹ ಮುರಳಿ ||

ತನುವರಳುತಲೆ ಆತಂಕ
ನೀನಿರುವೆ ಎಲ್ಲಿಯತನಕ
ಹಿಗ್ಗೊ ಸಿಗ್ಗೊ ಕುಗ್ಗೊ ಸುಖ
ಗೊಂಚಲ ಗೊಂದಲ ಸಖ ||

ಮೂರು ಗಳಿಗೆ ಕೂರುವ ದೆಶೆ
ಆರುಗಳಿಗೆ ಹಾರಾಡುವ ಆಸೆ
ಒಂಭತ್ತರ ವೇದನೆ ಒದ್ದಾಟಕೆ
ಬೇಕಿತ್ತೆ ತೆನೆ ಯೌವನದಾಟಕೆ ||

ಎಲ್ಲಿತ್ತೊ ಹರ್ಷದ ನೆಲ್ಲಿಕಾಯಿ
ಹುಳಿಯಾದರು ಸಿಹಿ ಬಾಯಿ
ರೆಕ್ಕೆ ಬಿಚ್ಚಿದ ಪತಂಗದ ಸಂಗ
ಮೈ ಬಿಚ್ಚಿ ಹಾರಿದ್ಹಕ್ಕಿ ಪ್ರಸಂಗ ||

——————————————————————–
ನಾಗೇಶ ಮೈಸೂರು
——————————————————————–

(Picture source : http://m.wikihow.com/Get-a-Teenage-Boy-to-Like-You-(13-17))

00809. ಹಳ್ಳಿ ಮನೆಗಳ ಬೀದಿ (02)


00809. ಹಳ್ಳಿ ಮನೆಗಳ ಬೀದಿ (02)
____________________________

ಪ್ರತಿಯೊಬ್ಬರಿಗೂ ಸಾಧಾರಣ ಹಳ್ಳಿಜೀವನದೊಂದಿಗೆ ಯಾವುದಾದರೊಂದು ರೀತಿಯ ಸಂಬಂಧ ಇದ್ದೆ ಇರುತ್ತದೆ. ಈ ಜೋಡಿ ಕವನದಲ್ಲಿ ಹಳ್ಳಿಯ ಚಿತ್ರಣ ಎರಡು ಭಾಗಗಳಲ್ಲಿ ಹರಿದು ಬರುತ್ತದೆ.

ಪಕ್ಕಾ ಸಾರಿಗೆ ವ್ಯವಸ್ಥೆಯಿರದ ಹಳ್ಳಿಯೊಂದರಲ್ಲಿ ನಡೆಯುತ್ತಾ ಹೋಗುತ್ತಿರುವ ಕವಿ ಊರಿನ ಹೆಬ್ಬಾಗಿಲಿನಿಂದ ಮನೆಗಳಾರಂಭವಾಗುವ ಬೀದಿಯತನಕದ ಉದ್ದದ ದಾರಿಯಲ್ಲಿ ನಡೆಯುತ್ತ ಹೋಗುತ್ತಿರುವಾಗ ಆ ಮಬ್ಬುಗತ್ತಲಲಿ ಅವನ ಕಣ್ಣಿಗೆ ಬಿದ್ದುದ್ದೆಲ್ಲರ ಚಿತ್ರಣ ಮನದಲ್ಲಿ ಕವನವಾಗತೊಡಗುತ್ತದೆ (ಹಳ್ಳಿಯೂರಿನ ಹಾದಿ)

ಹಾಗೆ ಆ ದಾರಿಯನ್ನು ದಾಟಿ ಊರಿನ ಮುಂಚೂಣಿ ತಲುಪಿದಾಗ ಕಾಣ ಬರುವ ದೃಶ್ಯಣದ ಚಿತ್ರಣ ಎರಡನೆ ಕವನವಾಗುತ್ತದೆ (ಹಳ್ಳಿ ಮನೆಗಳ ಬೀದಿ)

ಈ ಎರಡು ಸಂಧರ್ಭದಲ್ಲೂ ಬೇಡೆಂದರೂ ಬಿಡದ ಹಳತು ಹೊಸತಿನ ಹೋಲಿಕೆ, ಬದಲಾವಣೆಯ ಗಾಳಿಯ ಧಾಳಿ ಕವನದ ಹಂದರದಲ್ಲಿ ನುಸುಳಿ ಹಳ್ಳಿಯ ಪೂರ್ವ-ಪ್ರಸ್ತುತದ ದಟ್ಟ ಚಿತ್ರಣ ಕಟ್ಟಿಕೊಡಲೆತ್ನಿಸುವುದು ಇಲ್ಲಿನ ಸಾರ.

ಹಳ್ಳಿ ಮನೆಗಳ ಬೀದಿ (02)
_____________________________________________
(ನಾಡ್ಹೆಂಚಿನ ಮಾಡಿನ ಆ ಕಾಲದ ತೊಟ್ಟಿ ಮನೆ)


ಇಷ್ಟುದ್ದ ಹಾದಿ ತುಂಬ ಹಳ್ಳಿ ಮನೆಗಳ ಪ್ರತಿಬಿಂಬ
ಶಿಸ್ತಾಗಿ ನಿಂತ ಸಿಪಾಯ್ತರ ಚಂದ ಜಗುಲಿ ಕಟ್ಟೆ ಕಂಬ
ಮನೆಯೊರ ಬದಿಗೆ ಮೂಕಿ ನೊಗದೆತ್ತಿನ ಗಾಡಿ ಸೊಗ
ಕಾಲ್ಮಡಿಸಿ ಕೂತು ಮೆಲುಕಿ ಹುಲ್ಮೇವ ಎತ್ತಣದ ಜಗ ||

ಕಂಬದ ಪಕ್ಕ ಜಗುಲಿ ಆರಾಮದ ಸಂಜೆಗೆ ಖೋಲಿ
ಆಳು ಮಕ್ಕಳ ಅತಿಥಿ ಆಗಂತುಕರ ಆರೈಕೆಗೆ ಚಾಳಿ
ನಡು ಮೆಟ್ಟಲು ಕತ್ತರಿಸಿ ಮೇಲೇರಿಸೆ ಮುಂಬಾಗಿಲು
ಕೆತ್ತನೆ ವೈಭವ ಗಟ್ಟಿಮುಟ್ಟ ಹಳ್ಳಿಯವರಂತೆ ಡೌಲು ||

ಹೆದ್ದ್ವಾರ ತೆರೆಯೆ ಹಜಾರವೆ ಕಂಬಗಳ ಪರಿಪರಿಯೆ
ಕೊಠಡಿ ಖೋಲಿ ಉಗ್ರಾಣ ದೇವರ ಅಡಿಗೆ ಮನೆಯೆ
ಅವಿತಂತೆ ಕಂಡರೆಲ್ಲವು ಕತ್ತಲೆ ನಡುವ್ಹೇಗೆ ಬೆಳಕಲೆ
ಮೇಲಿಂದ ಸುರಿದಿರೆ ತೆರೆದ ನಡು ತೊಟ್ಟಿ ಬಯಲೆ ||

ನಾಡ್ಹೆಂಚ ನಾಲ್ಕುಮೂಲೆ ಜಾರಿದಂತೆ ಒಳ ಬಯಲೆ
ನೇರ ಬೆಳಕು ಬಿಸಿಲಿನ ಜಾರುಮಣೆ ಕಾಲದ ಕೋಲೆ
ಮಾತ್ಹರಟೆ ಕೂರಲು ಸಂಜೆ ಕಾಲಿಳಿ ಬಿಟ್ಟು ಕೂತನೆ
ಮಳೆ ಸುರಿವಾಗ ಮನೆಯೊಳ ಮನಕೇಕೆ ಯಾತನೆ ||

ಎಷ್ಟು ಹಗಲು ಸಂಜೆ ರಾತ್ರಿಗಳ ಮಧುರ ಯಾತನೆ
ಮುಚ್ಚಿಟ್ಟುಕೊಂಡಿದೆ ಮಳೆ ಬಂದ ಹೊತ್ತಿನಲಿ ಬವಣೆ
ಕಂಬಕೊರಗಿ ಕೂತು ದಿಟ್ಟಿಸುತ ಬಿರುಸ ಮಳೆಸದ್ದು
ಸ್ವೈರ ವಿಹಾರದಿ ಹಾರಿದ ಮನ ಮೀರಿದ ಸರಹದ್ದು ||

ಭಾವವುಟ್ಟಿತೆ ಮನಕೆ ಮಳೆಯಿಂದ ಮಳೆಯಾಯ್ತೆ
ಬಿಡಿಸಿಟ್ಟ ಮನ ಪದರ ಚದರ ಚದರ ತೊಳೆಯಾಯ್ತೆ
ವಯಸ ನೆಲೆ ನಡುಗಟ್ಟು ಮೀರಿ ಮನವೆಳೆಯಾಯ್ತೆ
ಎಲ್ಲಕು ಮೂಲದಿ ಹಳ್ಳಿ ಮನೆ ಬದುಕು ಬೆಳೆಯಾಯ್ತೆ ||

——————————————————————
ನಾಗೇಶ ಮೈಸೂರು
——————————————————————

Picture source : https://www.flickr.com/photos/boo_pix/44383833

00808. ಹಳ್ಳಿಯೂರಿನ ಹಾದಿ (01)


00808. ಹಳ್ಳಿಯೂರಿನ ಹಾದಿ (01)
____________________________

(Picture source: https://en.m.wikipedia.org/wiki/File:Chinawal-Savkheda_road_13.jpg)

ಪ್ರತಿಯೊಬ್ಬರಿಗೂ ಸಾಧಾರಣ ಹಳ್ಳಿಜೀವನದೊಂದಿಗೆ ಯಾವುದಾದರೊಂದು ರೀತಿಯ ಸಂಬಂಧ ಇದ್ದೆ ಇರುತ್ತದೆ. ಈ ಜೋಡಿ ಕವನದಲ್ಲಿ ಹಳ್ಳಿಯ ಚಿತ್ರಣ ಎರಡು ಭಾಗಗಳಲ್ಲಿ ಹರಿದು ಬರುತ್ತದೆ.

ಪಕ್ಕಾ ಸಾರಿಗೆ ವ್ಯವಸ್ಥೆಯಿರದ ಹಳ್ಳಿಯೊಂದರಲ್ಲಿ ನಡೆಯುತ್ತಾ ಹೋಗುತ್ತಿರುವ ಕವಿ ಊರಿನ ಹೆಬ್ಬಾಗಿಲಿನಿಂದ ಮನೆಗಳಾರಂಭವಾಗುವ ಬೀದಿಯತನಕದ ಉದ್ದದ ದಾರಿಯಲ್ಲಿ ನಡೆಯುತ್ತ ಹೋಗುತ್ತಿರುವಾಗ ಆ ಮಬ್ಬುಗತ್ತಲಲಿ ಅವನ ಕಣ್ಣಿಗೆ ಬಿದ್ದುದ್ದೆಲ್ಲರ ಚಿತ್ರಣ ಮನದಲ್ಲಿ ಕವನವಾಗತೊಡಗುತ್ತದೆ (ಹಳ್ಳಿಯೂರಿನ ಹಾದಿ)

ಹಾಗೆ ಆ ದಾರಿಯನ್ನು ದಾಟಿ ಊರಿನ ಮುಂಚೂಣಿ ತಲುಪಿದಾಗ ಕಾಣ ಬರುವ ದೃಶ್ಯಣದ ಚಿತ್ರಣ ಎರಡನೆ ಕವನವಾಗುತ್ತದೆ(ಹಳ್ಳಿ ಮನೆಗಳ ಬೀದಿ)

ಈ ಎರಡು ಸಂಧರ್ಭದಲ್ಲೂ ಬೇಡೆಂದರೂ ಬಿಡದ ಹಳತು ಹೊಸತಿನ ಹೋಲಿಕೆ, ಬದಲಾವಣೆಯ ಗಾಳಿಯ ಧಾಳಿ ಕವನದ ಹಂದರದಲ್ಲಿ ನುಸುಳಿ ಹಳ್ಳಿಯ ಪೂರ್ವ-ಪ್ರಸ್ತುತದ ದಟ್ಟ ಚಿತ್ರಣ ಕಟ್ಟಿಕೊಡಲೆತ್ನಿಸುವುದು ಇಲ್ಲಿನ ಸಾರ.

ಹಳ್ಳಿಯೂರಿನ ಹಾದಿ (01)
_________________________

ತಾತಗಳ ತಾಕೀತು ಸ್ವಲ್ಪ ಇನ್ನು ಇರಬೇಕಿತ್ತು
ತಾರಸಿ ಕಾಂಕ್ರೀಟುಗಳ ಮಳೆ ಬರುವ ಹೊತ್ತು
ಅಷ್ಟಿಷ್ಟು ಹಳೆ ಬೇರು ಹೊಸ ಚಿಗುರು ಪ್ರೇರಣೆ
ನೆನಪಾಗಿ ಆ ಕಾಲದ್ಹಳೆ ತಂಪು ತೊಟ್ಟಿ ಮನೆ ||

ರಜದ ದಿನಗಳ ಹೆಗಲು ಹಳ್ಳಿ ಕಡೆ ತೂಗಲು
ತಪ್ಪಿಸದಪ್ಪುತ ಊರಿಗ್ಹೊರಟರೆ ಬರಿ ಬಗಲು
ಊರಲಿ ತುಂಬಾ ನೆಂಟರು ಗಿಂಟರು ಸವಾಲು
ಯಾರಲ್ಲುಳಿಯು-ಕಳೆಯುವುದು ಹಗಲಿರುಳು ||

ಹಳ್ಳಿ ಮನೆ ಚಿತ್ರಣ ಮನ ಧುತ್ತೆಂದು ಪ್ರತ್ಯಕ್ಷಣ
ವೈಶಿಷ್ಟ್ಯ ಊರೆ ಮೈಲು ಹೆಬ್ಬಾಗಿಲಿಂದ್ಹೊರಗಣ
ಹರದಾರಿ ನಡೆಯುವ ಕಚ್ಚಾ ರಸ್ತೆಗೆ ಸಂಚರಣ
ಕಿಬ್ಬೆ ಕಾಲುವೆ ಹೊಲ ಗದ್ದೆ ಹಸಿರು ನಡುವಣ ||

ರಾತ್ರಿಗೊಂದು ಬಸ್ಸು ಬಿಟ್ಟರೆ ನಡೆದೆ ಸರಸರದಿ
ಸವೆಸಿದರೆ ಹಾದಿ ತೆರೆದುಕೊಳ್ಳುವಳಾ ಹೆಬ್ಬೀದಿ
ಸಾಲು ಬಾಗೆ ಮರದ ವಿಶಾಲ ಛತ್ರಿಯ ಭೋಧಿ
ನಟ್ಟ ನಡು ಹಗಲು ನೆರಳ್ಹೊತ್ತ ಭಾವ ಸಮಾಧಿ ||

ಈ ರಾಜಮಾರ್ಗವ ಕ್ರಮಿಸೆ ಶುರು ಮನೆ ಸಾಲು
ದ್ವಾರಪಾಲಕರಂತೆ ಮುಂದಿನ ಮನೆಗಳ ತಾರು
ಬಂದು ಹಾದು ಹೋದವರ ಒಳಹೊರಹರಿ ಲೆಕ್ಕ
ಇಟ್ಟು ಆಕಾಶವಾಣಿಯಂತೆ ಪಸರಿಸುವಾ ಗಣಕ ||

ನೇರ ಹಾದರೆ ಕೊನೆ ತನಕ ಅಗ್ರಹಾರ ಬೀದಿ ಪಕ್ಕ
ಜಾತ್ರೆಯಿಂದ್ಹಿಡಿದು ಶಾಲೆ ದೇಗುಲಗಳಿಗೆ ಸರಿ ಲೆಕ್ಕ
ಪಡ್ಡೆ ಹುಡುಗರ ಅಡ್ಡೆ ಕಾಫಿ ತಿಂಡಿ ಭವನಕೆ ಬೊಡ್ಡೆ
ಸೋಮಾರಿ ಕಟ್ಟೆ ಟೈಮ್ಪಾಸಿನ ಲೊಟ್ಟೆ ಕ್ಲಬ್ಬಿಗು ಸಡ್ಡೆ ||

——————————————————————-
ನಾಗೇಶ ಮೈಸೂರು
——————————————————————-

00803. ಮಂಕುತಿಮ್ಮನ ಕಗ್ಗ 13 ರ ನನ್ನ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ


00803. ಮಂಕುತಿಮ್ಮನ ಕಗ್ಗ 13 ರ ನನ್ನ ಟಿಪ್ಪಣಿ ಇಂದಿನ ರೀಡೂ ಕನ್ನಡದಲ್ಲಿ

http://kannada.readoo.in/2016/06/ಕಗ್ಗಕೊಂದು-ಹಗ್ಗ-ಹೊಸೆದು-10

00799. ‘ನಿ’ ಪದಗಳ ಕುರಿತು…


00799. ‘ನಿ’ ಪದಗಳ ಕುರಿತು…
_________________________

ಹೀಗೆ ಹಿಂದೊಮ್ಮೆ ಬೋರಾಗಿ ಕೂತಿದ ನೀರಸ ಗಳಿಗೆಯಲ್ಲಿ ‘ನಿ’ ಯಿಂದ ಶುರುವಾಗುವ ಹಲವು ಪದಗಳು ತಾಕಾಲಾಡತೊಡಗಿದವು ಮನಃಪಟಲದ ಮುಂದೆ. ಸುಮ್ಮನೆ ಅದನ್ನೇ ಪದ್ಯರೂಪದಲ್ಲಿ ಕಟ್ಟುತ್ತ ನೆನಪಾದ ‘ನಿ’ ಪದಗಳನ್ನೆಲ್ಲ ಜೋಡಿಸತೊಡಗಿದೆ, ಈ ಪದ್ಯದ ರೂಪದಲ್ಲಿ. ಹತ್ತಕ್ಕೆ ನಿಲ್ಲಿಸಿದರು ಇನ್ನು ಬೇಕಷ್ಟು ಪದಗಳಿರುವುದು ನಿಜವೆ. ಸುಮ್ಮನೆ ನಿಮಗೂ ಬೋರಾದಾಗ ಬೇಕಿದ್ದರೆ ಓದಿ 😊😁

‘ನಿ’ ಪದಗಳ ಕುರಿತು…
_________________________

ನೋವಾದಾಗ ಮನದುಮ್ಮಳ
ಹೊರ ಬರಲಂತೆ ಗಳಗಳಗಳ
ಅತ್ತು ಬಿಟ್ಟರೆ ಬಹಳಾ ನಿರಾಳ
ನಿಶ್ಚಿಂತೆ ನೆಮ್ಮದಿಗೆ ‘ನಿರುಮ್ಮಳ’ ||

ಬಿಕ್ಕಟ್ಟು ಸಿಕ್ಕಲಿ ಬೇಕುಪಾಯ
ಚಿಂತ ಮನ ತಪ್ಪಿಸಲಪಾಯ
ತೋರದಿರೆ ದಾರಿ ತಪ್ಪಿ ದಾಯ
ಕೈ ತಲೆ ಹೊತ್ತು ‘ನಿರುಪಾಯ’ ||

ಎದುರಿಗೆ ಬಂದಾಗ ಅಪಾಯ
ಎದುರಿಸಲುಬೇಕು ಉಪಾಯ
ತೂಗಿ ಅಳೆದು ನೋಡಿ ಕಾಯ
ಮುಂದ್ಹೆಜ್ಜೆಯಿಟ್ಟರೆ ‘ನಿರಪಾಯ’ ||

ನೀ ಆರೋಪಿಸಲಿರಬೇಕಾಧಾರ
ಸುಮ್ಮನ್ಹೇಳಲಾಗದಲ್ಲಾ ದೂರ
ಸಾಬೀತು ಮಾಡಬೇಕು ಪ್ರವರ
ತಳ್ಳಿ ಹಾಕಿಬಿಡುತೆಲ್ಲ ‘ನಿರಾಧಾರ’ ||

ನಡುವಿರೆ ದೂರ ಮಾಡೆ ಅಂತರ
ಮುಚ್ಚದ ಕಂದಕ ಕೊಲ್ಲುವ ಚಾರ
ಬೆಸೆವ ಮನಗಳ ಸಂಗೀತ ಸ್ವರ
ಇರದಿರೆ ದೂರವಾಗಿ ‘ನಿರಂತರ’ ||

ಕರುಣೆ ಪ್ರೀತಿಗಳ ಜಗ ಹೃದಯ
ಕಠಿಣ ಬದುಕ ಮನಕಿರದೆ ದಯ
ಭಾವ ಬಂಧಗಳ ವರಿಸದ ಲಯ
ಕಾಣದ ದೈವ ಕ್ಷಮಿಸ ‘ನಿರ್ದಯ’ ||

ದಾರಿಗಾಣದಿರದಾದಂತೆನೇ ಭಯ
ಭೀತಿಗೆ ಪತರಗುಟ್ಟುವ ಸಮಯ
ಬದುಕಲಿ ಮುಂಬರಲು ಅಭಯ
ಕೊಡುವ ದೈವ ಜತೆಗಿರೆ ‘ನಿರ್ಭಯ’ ||

ಕೊಲೆಗಾರನಿಗಿದ್ದಂತೇನೊ ಕಾರಣ
ಸರಿ ತಪ್ಪಾಗದ ಸಲೆ ವಿನಾಕಾರಣ
ಕಮ್ಮಿಯಿಲ್ಲ ಕಲಕಿಸುವ ಜನಮನ
ಅಸೂಯೆ ಕಿಚ್ಚು ಈರ್ಷೆ ‘ನಿಷ್ಕಾರಣ’ ||

ಏಳು ಶತಕೋಟಿಗೂ ಮಿಕ್ಕಿದ ಜನ
ಯಾರಿಗೆ ಯಾರಾಗುವರು ಸದನ ?
ನಡುವೆಯಿದ್ದು ಬದುಕು ಸಾಧನ
ಒಬ್ಬಂಟಿಯಾಗಿರಲ್ಹೇಗೇ ‘ನಿರ್ಜನ’ ? ||

ಹಾಗೂ ಮನ ಕಟ್ಟೆ ಕೋಟೆ ಭಾವ
ಮನೋಭಾವದ ಜನರೆ ಅಭಾವ
ಸಮೂಹ ಸಮಷ್ಟಿ ಒಳಿತಿಗೆ ಶಿವ
ಮಾಡುವುದ್ಹೇಗೆ ಪ್ರಗತಿ ‘ನಿರ್ಭಾವ’ ||

– ನಾಗೇಶ ಮೈಸೂರು

(Picture source :https://en.m.wikipedia.org/wiki/File:La_Touche_Lennui_1893.jpg)

00793. ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)


00793. ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)

ನನ್ನ ಮಂಕುತಿಮ್ಮನ ಕಗ್ಗ ೧೨ ರ ಟಿಪ್ಪಣಿ, ಇಂದಿನ ರೀಡೂ ಕನ್ನಡದಲ್ಲಿ (೧೭.೦೬.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00788. ಕುಂಭಕರ್ಣ ವೈಭವ


00788. ಕುಂಭಕರ್ಣ ವೈಭವ
_________________________________

ಬೆಳಗಾಗುತ್ತಿದ್ದಂತೆ ಎಬ್ಬಿಸಿ, ಸಿದ್ದ ಮಾಡಿಸಿ, ತಿಂಡಿ ತಿನಿಸಿ ಶಾಲೆಗೆ ದಬ್ಬುವ ತನಕ ಮಕ್ಕಳಿಗಿಂತ ಹೆಚ್ಚಿನ ಕಾಟ, ತೊಂದರೆ ಅನುಭವಿಸುವವರು – ಅಪ್ಪ, ಅಮ್ಮಗಳು. ಅದರಲ್ಲೂ ಕೆಲವು ಕುಂಭಕರ್ಣರನ್ನು ಎಬ್ಬಿಸುವ ತನಕದ ಪಾಡು, ದೇವರಿಗೆ ಪ್ರೀತಿ; ಅಂತಹ ಒಂದು ದೈನಂದಿನ ಯತ್ನದ ವರ್ಣನೆ – ಈ ಕವನ.
ನಮ್ಮನೆ ರಾಮಾಯಣವು ಸಹ, ಬಹಳ ಸುಪ್ರಸಿದ್ಧ
ಮಗರಾಯ ಕುಂಭಕರ್ಣನೊಂದಿಗೆ, ದಿನನಿತ್ಯ ಯುದ್ಧ
ರಣರಂಗಕೆ ಕಳಿಸಲವನ, ನಿದ್ದೆಯೆಬ್ಬಿಸೆ ಘನ ಘೋರ
ಶಾಲೇಲಿ ಕಲಿಯಲವನಿಗೆ, ಪಾಪ ವೇದನೆ ಅಪಾರ ||

ರಾತ್ರಿ ಮಲಗೆಂದರು ಬೇಗ, ಪವಡಿಸದ ಸುಕುವರ
ಬಿಸಿನೀರ ಹನಿ ಸಿಂಪಡಿಕೆ, ಆರಂಭ ಎಬ್ಬಿಸೆ ಪ್ರವರ
ಆತ್ಮ ರಕ್ಷಣೆಗೆಂದು ಕೂತ, ರಕ್ಷಣಾತ್ಮಕ ಸರಿ ದೂರ
ಮಳೆ ಸಿಂಚನ ತೊಡೆಯಲು, ಟರ್ಕಿ ಟವೆಲ್ಲಿನ ಚಾರ ||

ಬಿಸಿ ಕಾಫಿ ಲೋಟ, ಕೆಲವೊಮ್ಮೊಮ್ಮೆ ಆಡುವಾಟ
ಚುರುಗುಟ್ಟಿಸುವ ಬಿಸಿ, ಮೈಕೈಗೆ ಸರಿ ನೇವರಿಸಾಟ
ನಿದ್ದೆಗಣ್ಣಲೇ ಸೊರ ಸೊರ, ಇಳಿದರೂ ಬಿಸಿ ಕಾಫಿ
ಮುದುರಿ ಮೆತ್ತೆಗೆ ಮತ್ತೆ, ಒರಗಿಬಿಡುವನಾ ಪಾಪಿ ||

ಅಂಗಮರ್ದನ ಸೇವೆ ರಮಿಸೆ, ಹಿತ ಕೈ ಕಾಲ್ನೋವೆ
ತಲೆಯಿಂದುಂಗುಷ್ಟತನಕ, ನಡೆವ ಅವಿರತ ಸೇವೆ
ಎಚ್ಚರಾಗುವ ಬದಲು, ಬೆಚ್ಚಗಾಗಿಸಿ ಮರ್ದನ ತಾಡ
ಹಾಯಾದ ಸುಖ ನಿದ್ದೆ, ಮತ್ತೋಡುವ ಪರಿ ನೋಡ ||

ಎಡಬಲ ಎಳೆತ ಗುದ್ದು, ಮುದ್ದಾಡಿಸಿ ಒದ್ದಾಡಿಸುತ
ಕಲ್ಲು ಕೊರಡಂತೆ ಬಿದ್ದಿರಲು, ಜತೆ ಬೈಗುಳ ಬಿಗಿತ
ಕಿವಿ ಗುರುಗುಟ್ಟುವ ಗಾತ್ರದೆ, ಒಮ್ಮೊಮ್ಮೆ ಸಂಗೀತ
ಎದ್ದು ಕೂತರು ಚಾದರ, ಹೊದ್ದು ಒರಗಿ ಕೂತ ತಾತ ||

ಹೊದ್ದ ಚಾದರ ಕಿತ್ತೆಸೆದು, ಫಂಖವೋಡಿಸುತ ಕಾಟ
ಬೆರಳಲೇ ಹೊಟ್ಟೆ ಮೇಲಾನೆ, ರಥ ಕುದುರೆ ಓಡಾಟ
ಕಚಗುಳಿಸಿ ಕೆರಳಿಸಿ, ದೂರ್ವಾಸನವತಾರದ ಒರಟ
ಕಣ್ಣುಮುಚ್ಚಾಲೆ ಅರಚಿ ಪರಚಿ, ಪರಸ್ಪರರ ಜೂಟಾಟ ||

ಶತ ಸಾಹಸ ಮಾಡಿಸೆದ್ದರು, ಸರಿ ಮುಗಿಯದ ಕಥೆ
ಕಥೆ ಹೇಳಬೇಕೆಂದು ಪಟ್ಟು, ಹಿಡಿದು ಕೂತವನ ವ್ಯಥೆ
ಹೊಸ ಹೊಸತ ಕಲ್ಪನೆ, ಕಥೆ ದಿನ ಹುಟ್ಟಿಸಬೇಕಂತೆ
ಕಡೆಗೂ ಬಚ್ಚಲಿಗೆ, ಎಳೆದೊಯ್ಯುವಷ್ಟರಲ್ಲಿ ಉಸ್ಸಂತೆ ||

ಶಾಲೆಗೆ ಸಂಕಟ ಹೊರಡಲು, ಕಪಟ ಎಲ್ಲ ನಾಟಕ
ಹೊಟ್ಟೆ ನೋವಿಂದಿಡಿದು, ನೆಗಡಿ ಶೀತಗಳಾ ಜಾತಕ
ಸಜ್ಜಾಗಿಸಲು ಯೋಧ, ಕುಂಭಕರ್ಣ ಹರ ಸಾಹಸ
ಮರುದಿನ ಪುನರಾವರ್ತನೆ, ಸಹನೆ ತಾಳ್ಮೆ ಪರೀಕ್ಷ ||

——————————————————————-
ನಾಗೇಶ ಮೈಸೂರು
——————————————————————-
(Picture source : http://www.youtube.com)

00782. ಗುಂಡಿನ ಮತ್ತೆ ಗಮ್ಮತ್ತು..!


00782. ಗುಂಡಿನ ಮತ್ತೆ ಗಮ್ಮತ್ತು..!
________________________

ವಾರದ ಕೊನೆಯಲ್ಲಿ ಬೋರು ಹೊಡೆಸದಂತಿರಲು ಏನಾದರು ವಿಭಿನ್ನವಾದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ ಎಲ್ಲರ ಅಭ್ಯಾಸ, ಹವ್ಯಾಸ. ಅವರವರ ಅಭಿರುಚಿಗನುಸಾರವಾಗಿ ವಿಭಿನ್ನ ಆಯ್ಕೆಗಳನ್ನು ಒದಗಿಸುವ ಲೋಕ ರೀತಿಯಲ್ಲಿ, ಎಲ್ಲ ಪ್ರಾಯದ ಬಹುತೇಕ ಜನರು ತಮಗೆ ಸರಿ ಹೊಂದುವ ಹಾದಿಯಲ್ಲಿ ಗುಟ್ಟಾಗಿಯೊ, ಪ್ರಕಟವಾಗಿಯೊ ಮುನ್ನಡೆದಿರುತ್ತಾರೆ. ಒಂದೆ ವಯಸಿನ ಸಮಾನ ಮನಸ್ಕ, ಅದರಲ್ಲೂ ಯುವ ಜನಾಂಗದ ಕೆಲವು ಬಳಗಗಳಿಗೆ ಇದು ‘ಗುಂಡಿನ ಮತ್ತೆ ಗಮ್ಮತ್ತು’ ಎಂದು ಖುಷಿ ಪಡುವ ಕಾಲವೂ ಹೌದು…😜

ಅಂತಹವರ ಒಂದು ಲಘು ಲಹರಿಯ ಜೋಡಿ ಹಾಡಿನ ಸಾಹಿತ್ಯ ಈ ಕೆಳಗೆ – ನತಿಂಗ್ ಸೀರಿಯಸ್ ಎಬೌಟ್ ಇಟ್…😊

(ಅಂದ ಹಾಗೆ ಇದು ೨೦೧೨ ರ ಹೊತ್ತಲ್ಲಿ ಕೊರೆದ ಸಾಲುಗಳು – ಗುಂಡಿನ ಮತ್ತಿಲ್ಲದ ಹೊತ್ತಲೆ 😛)


ಗುಂಡಿನ ಮತ್ತೆ ಗಮ್ಮತ್ತು.. – 01
____________________________

ಗುಂಡಿನಾ ಗಮ್ಮತ್ತು
ಗುಂಡಿಗೇನು ಗೊತ್ತು
ಒಳಗ್ಹಾಕಿದ ಹೊತ್ತು
ಹಾಕಿದವನ ಸೊತ್ತು ||

ಆಡಿಸಿತ್ತು ಮಯಕ
ಪೆದ್ದು ಪೆದ್ದೆ ಪುಳಕ
ಒಗರೊಗರು ಜಳಕ
ನಡವಳಿಕೆ ಕೊಳಕ ||

ರಂಗುರಂಗಿನ ಸಂಜೆ
ಮಂಕು ದೀಪ ಬಂಜೆ
ಖಾಲಿಯಾಗೀ ಶೀಷೆ
ಏರೇರಿದ ಹಾಗೆ ನಿಷೆ ||

ಕುರುಕು ಚಿಪ್ಸುಬೀಜ
ನಂಚಿಕೊಂಡ ಸಹಜ
ಕಿವುಚಿಸಿತ ಕಣ್ಮುಖ
ಕಹಿಗು ಚಪ್ಪರಿಸುತ ||

ಮೆಲ್ಲನರಳಿದ ಹಾಗೆ
ಬಿಚ್ಚಿಸಿ ಮನದ ಸೀಗೆ
ಹಗುರಾಗಿಸಿ ತಲೆಗೆ
ಮೈಯೆಲ್ಲಾ ಬಲೆಗೆ ||

———————————————————–
ನಾಗೇಶ ಮೈಸೂರು
———————————————————–

ಗುಂಡಿನ ಮತ್ತೆ ಗಮ್ಮತ್ತು.. – 02
____________________________

ಹನಿಹನಿಗೆ ಒಳಗಡೆ
ಸಂಕೋಚ ಬಿಡುಗಡೆ
ಮೌನದಾ ನಡುಗಡ್ಡೆ
ಕರಗಿಸಿ ಮೇಲ್ಕಣ್ಗುಡ್ಡೆ ||

ಅಜ್ಞಾನದಾ ಮಾತು
ಶುರುವಾಗಿಸಿ ಹೊತ್ತು
ಬಿಚ್ಚಿ ಜ್ಞಾನ ಸಂಪತ್ತು
ವಿಜ್ಞಾನಿ ಮುಸುಕೆತ್ತು ||

ಯಾರಪ್ಪನಾ ಪರಿವೆ
ಜಾರಿ ಕೂಡೊ ಅರಿವೆ
ಮೈಮನವೆಲ್ಲ ವರವೆ
ಇದ್ದ ಜಾಗವೆ ಮರೆವೆ ||

ಸಂಯಮಕೆ ಹೆಗಲು
ಕುಡಿದಾಗಲೆ ನಗಲು
ಕುಣಿಸಿ ಹಾಡ ಸಾಲು
ಹಕ್ಕಿಯೆ ಹಾರಾಡಲು ||

ಅಂಕು ಡೊಂಕ್ಹೆಜ್ಜೆಯಲೆ
ನರ್ತನ ನಡೆವಾ ಸ್ಟೈಲೆ
ನೆಟ್ಟಗಾಗಿಸೋ ಪ್ರಜ್ಞೆಗೆ
ಸಡ್ಡು ಹೊಡೆವ ಸೊಬಗೆ ||

———————————————————–
ನಾಗೇಶ ಮೈಸೂರು
———————————————————–

(Picture source: http://news.yahoo.com/alcohol-movies-influences-teen-drinking-091630298.html)

00781. ಕಗ್ಗಕೊಂದು ಹಗ್ಗ ಹೊಸೆದು…(೧೦ ಮತ್ತು ೧೧)


00781. ಕಗ್ಗಕೊಂದು ಹಗ್ಗ ಹೊಸೆದು…(೧೦ ಮತ್ತು ೧೧)

ಮಂಕುತಿಮ್ಮನ ಕಗ್ಗ ೧೦ ಮತ್ತು ೧೧ ಕ್ಕೆ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ (11.06.2016)

ಕಗ್ಗಕೊಂದು ಹಗ್ಗ ಹೊಸೆದು…

ಮಳೆಯಾಗವ್ಳೆ ಚೌಡಿ..


ಮಳೆಯ ಬಗ್ಗೆ ೨೦೧೩ ರಲ್ಲಿ ಬರೆದಿದ್ದ ಒಂದು ಜೋಡಿ ಪದ್ಯ ತುಸು ಗ್ರಾಮ್ಯ ಶೈಲಿಯಲ್ಲಿ..

ಮಳೆಯಾಗವ್ಳೆ ಚೌಡಿ..
______________________


ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನು ವಿನಾಶದತ್ತ ಒಯ್ದು ನೆಲಸಮಗೊಳಿಸುವ ಬಗೆಯೂ ಅಷ್ಟೆ ಸಹಜ. ಒಂದು ರೀತಿ ಈ ಜಗದ ಸೃಷ್ಟಿ-ಸ್ಥಿತಿ-ಲಯಗಳೆಲ್ಲದರ ಸಂಕೇತವನ್ನು ಮಳೆಯ ವಿವಿಧ ರೂಪಗಳಲ್ಲೆ ಕಾಣಬಹುದು. ಕವಿಗಳಿಗೆ ಕವಿತೆಯಾಗುವ, ಪ್ರೇಮಿಗಳಿಗೆ ಬತ್ತದ ಒರತೆಯಾಗುವ, ವಿರಹಿಗಳಿಗೆ ಸಾಮೀಪ್ಯದ ಕೊರತೆಯಾಗಿಸುವ ಈ ವಿಶ್ವದೇಹಿ ನಿಜವಾದ ಅರ್ಥದಲಿ ನಿರಂತರ ಭಾವ ಚಿಲುಮೆ, ಅಂತೆಯೆ ಅಭಾವದ ಪ್ರೌಢಿಮೆ. ಆ ಮಳೆಯ ಆರ್ಭಟ, ರೌದ್ರ ರೂಪವನ್ನು ತುಸು ಆಡು ಭಾಷೆಯ ಮೂಲಕ ಪದವಾಗಿ ಹಿಡಿಯುವ ಯತ್ನ, ಈ ಜೋಡಿ ಕವನ – ‘ಮಳೆಯಾಗವ್ಳೆ ಚೌಡಿ’

ಮೊದಲನೆಯ ಕವನ ‘ಹುಚ್ಮಳೆ, ಕೆಚ್ಮಳೆ ಪೆಚ್ಮಳೆ…’ ಆ ಚೌಡಿಯವತಾರದ ಬಗೆಯನ್ನು ವರ್ಣಿಸುತ್ತಲೆ ಸಂವಾದಕ್ಕಿಳಿದರೆ ಎರಡನೆ ಪದ್ಯ ‘ಕ್ಯಾಣ ಬಿಟ್ಟಾಕು, ಬೃಹನ್ನಳೆ..’ ಆ ಸಂವಾದವನ್ನು ಸಂಧಾನದ ಮಾತುಕಥೆಯ ರೂಪಕ್ಕಿಳಿಸಿ ಚೌಡಿಯವತಾರದ ಮಳೆಯನ್ನು ರಮಿಸಿ, ತಣಿಸಲು ಯತ್ನಿಸುತ್ತದೆ. ಮಳೆ ಕೇಳುವುದೊ ಬಿಡುವುದೊ – ಒಟ್ಟಾರೆ ಕವಿಯಾಶಯ ಬಿಂಬಿಸುವ ಪ್ರಯತ್ನವಂತೂ ಮಾಡುತ್ತದೆ – ನಿರಂತರವಾದ, ಎಡಬಿಡದ ಮಾನವ ಪ್ರಯತ್ನದ ದ್ಯೋತಕವಾಗಿ. ಪ್ರಕೃತಿಯ ಶಕ್ತಿಗಳೊಡನೆ ಹೋರಾಡಲಾಗದಿದ್ದರೂ, ಮಾತುಕಥೆಯಾಡಿ ಮನಗೆಲ್ಲಬಹುದೇನೊ ಎಂಬ ಶಾಂತಿಯ ಸದಾಶಯವೂ ಇಲ್ಲಿ ಅಡಕವಾಗಿದೆ.

ಆಡುಭಾಷೆಯ ಬಳಕೆ ಮಳೆಯೊಂದಿಗಿನ ಸಂವಾದದ ತಾದಾತ್ಮ್ಯತೆಯನ್ನು ಇನ್ನಷ್ಟು ಆಪ್ತವಾಗಿಸಬಹುದೆಂದು ನನ್ನ ಅನಿಸಿಕೆ – ಹಾಗೆಯೆ ಗ್ರಾಮ್ಯ ಭಾಷೆಯ ಸೊಗಡನ್ನು ಲೇಪಿಸುವ ಹುನ್ನಾರ. ತಮಗೆ ಹಿಡಿಸೀತೆಂಬ ಆಶಯದೊಂದಿಗೆ ತಮ್ಮೆಲ್ಲರ ಮಡಿಲಿಗೆ ಇದೋ – ‘ಮಳೆಯಾಗವ್ಳೆ ಚೌಡಿ..’

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

01. ಹುಚ್ಮಳೆ ಕೆಚ್ಮಳೆ ಪೆಚ್ಮಳೆ
___________________

ಹುಚ್ಮಳೆ ಕೆಚ್ಮಳೆ ಪೆಚ್ಮಳೆ
ಹಾದಿ ಬೀದಿ ಗದ್ದೆ ಕೊಚ್ಮಳೆ
ಕೋಲ್ಮಳೆ ಕುಣಿತಿರೊ ಬೃಹನ್ನಳೆ
ತಗ್ಸಿ ಮೂತಿ ಮೊರೆ ಜೋಲ್ಮಳೆ ||

ಊರ್ತೋಳೆ ಮನೆ ಮಾರ್ತೊಳೆ
ಬಿಡಿಸಿಟ್ಟಂಗೆ ಹಣ್ ತೊಳ್ತೊಳೆ
ಗಾಳಿ ಮರಗಿಡ ಮುರ್ದ್ ಹಾಕ್ತಲೆ
ತಲೆ ಚಿಟ್ಟಿಡ್ಸೋ ಹಂಗೆ ಸುರಿಯೆಲೆ ||

ಸದ್ದಿಂದ್ಲೆ ಮುದ್ದೆ ತಲ್ತಲೆ ಶೂಲೆ
ಮೈ ಕೈಯೆಲ್ಲಾ ವದ್ದೆ ದೊಗಳೆ
ನೀ ಜಪ್ಪಿ ಜಪ್ಪಿ ನೆಲ ಬಿದ್ದಾಗಲೆ
ಧೋ ಅಂತಾ ಸುರ್ದು ಬಿಗ್ದಂಗೆ ಕಳ್ಳೆ ||

ತಂಗ್ಳಂಗೆ ತಂಪಾಗಿ ಕುಳ್ಕುಳು ಮೈಗೆ
ಜಡ್ಡಿಡ್ದೋರ ಮ್ವಾರೆ ಅತ್ತಂಗೆ ಬೆವರ್ಗೆ
ಸುಕ್ಕೆಲ್ಲ ಸುಪನಾತಿ ಮಾಡಿಲ್ದಂಗ್ ಚೌರ
ಕತ್ಲೆ ಮುಸ್ಕಲೆನ್ ಲೆಕ್ಕನೊ ಕಪ್ಪಾಗ್ತದೆ ಗೌರ ||

ಕಪ್ ಕೊಚ್ಚೊ ಮೋರಿಲಿ ಕೆಂಪಣ್ಣನ್ ತಂಗಿ
ಕೆಸರಲ್ ಬಸ್ರಾದಂಗೆ ನುಲ್ಕೊಂಡಂಗ್ ಭಂಗಿ
ಮೈಕೈ ಕಾಲ್ ಸುತ್ಕೊಂಡ್ ಒಂಟೋರ ತೆಪ್ಪ
ಕೊಂಬೆ ರೆಂಬೆ ಕೊಚ್ಕೊಂಡು ದಬ್ದಂಗೆ ಬೆಪ್ಪಾ ||

————————————————————
ನಾಗೇಶ ಮೈಸೂರು
————————————————————-

02. ಕ್ಯಾಣ ಬಿಟ್ಟಾಕು, ಬೃಹನ್ನಳೆ
___________________________

ಗೊತ್ತಿಲ್ದೊಂದ್ ಮಾತ್ಕೇಳ್ತೀನಿ ಕ್ಯಾಣ ಬಿಟ್ಟಾಕು
ಯಾರ್ಮೇಲಪ್ಪ ಕೋಪ ತಾಪ ಸುಟ್ಟಾಕು
ಮುಟ್ಟಾದವ್ಳು ಮಿಡ್ದಂಗೆ ಯಾಕಪ್ಪ ದುಡುಕ್ತಿ
ಯಾರ್ದೊ ಮೇಲ್ ಕ್ವಾಪಕ್ಕೆ ಇಲ್ಲ್ಯಾಕೆ ಸಿಡುಕ್ತಿ ? ||

ಬರ್ಬಾರ್ದೆ ತಂಪಾಗಿ ಬಿಸ್ಲೊತ್ತಿನ್ ಮುಸ್ಸಂಜೆ
ಬಿಸ್ಬಿಸಿ ಚಾ ಕಾಫಿ ಜೊತೆ ಕಳ್ಳೆ ಪುರಿ ಗಿಂಜೆ
ಬೋಂಡಾ ಬಜ್ಜಿ ಕರ್ದೋರಜ್ಜಿ ಬೆಚ್ಗಿದ್ರೆ ಕುರ್ಕು
ಗರ್ಮಾಗರಂ ಚೌಚೌ ಜತೆ ಬೆಚ್ಬೇಕ್ ಮಳೆ ಮುರ್ಕು ||

ಕಟ್ಟೆ ಮೇಲ್ ಮಾತಾಟ ಚಿಕ್ಮಕ್ಳಾ ಕೂತಾಟ
ಪುಂಡು ಹೊಂಡ್ದಲಿ ಕಾಲಲ್ ನೆಗ್ದು ನೆಗ್ದಾಟ
ಅಂಚೆಲ್ಲಾ ವದ್ದೆ ಆದ್ರು ಬಿಡ್ದೇನೆ ಕುಣ್ದಿದ್ದೆ
ಆ ಮಾಯನೆಲ್ಲಾ ಯಾಕೊ ನೀನಿಂಗೆ ಕದ್ದೆ ||

ಬಲ್ ಮರ್ಯಾದಸ್ತ ನೀನು ಸಾಭ್ಯಸ್ತ
ಕದ್ದು ಮುಚ್ಚಿ ಇರ್ದೆ ಗುಟ್ಮಾತ್ನ ಕೇಳ್ತಾ
ಯಾಕಪ್ಪ ಬೇಕು ಚೆಲ್ಲಾಟ ಈ ಹೊತ್ನಲ್ಲಿ
ಕತ್ಲೆಲ್ ಕಾಲಿಟ್ಟವಳ್ಗೆ ಸುಮ್ನನ್ನಲ್ವಾ ಚಿನಾಲಿ ||

ಈಚಲ್ ಮರ್ದಾ ಕೆಳ್ಗೆ ಬ್ಯಾಡಪ್ಪಾ ಮಜ್ಗೆ
ಹೆಂಡಾಂತ್ಲೆ ಅನ್ನೋದು ಕುಡ್ದ್ರೂನು ಸಜ್ಗೆ
ಯಾರೊ ತಪ್ ಮಾಡುದ್ರೆ ಎಲ್ರಿಗ್ಯಾಕ್ ಶಿಕ್ಷೆ
ಮೊದ್ಲೆ ನೆಟ್ಗಿಲ್ದೊರ್ಗೆ ಕೊಟ್ ಕಿತ್ತಂಗಲ್ವಾ ಭಿಕ್ಷೆ ||

————————————————————
ನಾಗೇಶ ಮೈಸೂರು
————————————————————-
(ಚಿತ್ರ : ಅಂತರ್ಜಾಲದಿಂದ)

00775. ವಾಕಿಂಗ್ ವಾತ್ಸಾಯನ…..ತೂಕ ರಸಾಯನ!


00775. ವಾಕಿಂಗ್ ವಾತ್ಸಾಯನ…..ತೂಕ ರಸಾಯನ!
_____________________________________

ಬದಲಾಗುತ್ತಿರುವ ಆಧುನಿಕ ಜೀವನಶೈಲಿ ತಂದ ಅನೇಕ ಗ್ರಹಚಾರಗಳಲ್ಲಿ ತುಂಬಾ ತಾಪತ್ರಯದ್ದು ಅಂದರೆ ನಮ್ಮ ದೇಹ ಮತ್ತು ಆರೋಗ್ಯಗಳಿಗೆ ಸಂಬಂಧಿಸಿದ್ದು.. ಸುಖೀ ಆರಾಮೀ ಜೀವನಶೈಲಿಯೊಡನೆ ಉಡುಗೊರೆಯಾಗಿ ಬಂದ ಬೊಜ್ಜು, ಸ್ಥೂಲಕಾಯ, ಬೀಪಿ-ಶುಗರುಗಳ ತರಹದ ಆತ್ಮಸಖರ ಸಾಂಗತ್ಯ ಈಗ ಎಲ್ಲರ ಮನೆಮನೆ ಕಥೆ.. ಅದಕ್ಕೆ ವಾಕಿಂಗ್ ಮಾಡಿಕೊಂಡು ತೂಕ ಇಳಿಸಿಕೊಂಡು ಹೇಗೊ ಆರೋಗ್ಯವಂತರಾಗಿರಲು ಹೆಣಗುವ ಕಥೆ ನಮಗೆ ಚಿರಪರಿಚಿತ ಚಿತ್ರಣ.

ಆ ಒದ್ದಾಟದ ಬಗೆಯ ತುಸು ಲಘು ಹಾಸ್ಯ-ವ್ಯಂಗ್ಯ ಮಿಶ್ರಿತ ಜೋಡೀ ಕವನವೊಂದನ್ನು ೨೦೧೨ ರ ಜೂನಿನಲ್ಲಿ ಬರೆದಿದ್ದೆ.. ಕವನದಲ್ಲಿ ಹೊಸತೇನಿಲ್ಲದಿದ್ದರು ಎಲ್ಲರೂ ಎತ್ತಿ ತೋರಿಸುವ ಅದೇ ಕಾರಣಗಳು ಇಲ್ಲೂ ಅನುರಣಿತವಾಗುತ್ತವೆ ಎನ್ನುವುದಷ್ಟೆ ಗಮನಿಸಬಹುದಾದ ಅಂಶ. ಜತೆಗೆ ಎಲ್ಲರಿಗು ಅದರ ಅರಿವಿದ್ದರೂ ಯಾರು ಹಳೆಯ ತರಕ್ಕೆ ಮರಳಲೂ ಕೂಡ ಸಿದ್ದರಿಲ್ಲ ಎನ್ನುವುದು ಮತ್ತೊಂದು ಆಯಾಮ..

ಅಂದಹಾಗೆ ವಾತ್ಸಾಯನನ ಹೆಸರಿನ ಬಳಕೆ ಕೇವಲ ಉಪಮಾತ್ಮಕ, ಸಾಂಧರ್ಭಿಕ ಪರಿಧಿಯಲಷ್ಟೆ ( ಪ್ರಾಸಕ್ಕೆ ಅಂದುಕೊಂಡರೂ ಸರಿ). ನೈಜ ವಾತ್ಸಾಯನನ ವಸ್ತು ವಿಷಯಕ್ಕೂ ಈ ಕವನಕ್ಕೂ ಯಾವುದೇ ರೀತಿಯ ಸಂಬಂಧವಾಗಲಿ, ನೇರ ಅಥವಾ ಪರೋಕ್ಷ ಕೊಂಡಿಯಾಗಲಿ ಇರುವುದಿಲ್ಲ..😛

ಟೈಮ್ ಪಾಸಿಗೆ ಅಂದುಕೊಂಡು ಓದಿ.. 😊

೦೧. ವಾಕಿಂಗ್ ವಾತ್ಸಾಯನ….
———————————

ಈಗ
ಆಗಬಾರದಂತೆ ದಪ್ಪ
ಏನೇನು ಮಾಡ್ತಾರಪ್ಪ!
ಓಡಾಡೋದಂತೂ
ಬಸ್ಸು , ಕಾರು, ಬೈಕು
ಕರಗಿಸೋದಕ್ಕೆ ಮಾರ್ನಿಂಗ್ ವಾಕು !
ತಿನ್ನಬಾರದು ನೋಡಿ ಘಾಟು, ಫ್ಯಾಟು, ಮೀಟು, ಸ್ವೀಟೂ
ಎಣ್ಣೆ ಸೋರುವ ವಡೆ, ಬಜ್ಜಿ, ಬೋಂಡ ಆಗಿದ್ರು ಬೊಂಬೊಟ್ಟು !
ಮೊದಲಾದ್ರೆ ಹಬ್ಬಕ್ಕೋ, ಹರಿದಿನಕ್ಕೋ
ಆಗ್ತಿತ್ತು ಔತಣ ಒಬ್ಬಟ್ಟು
ಎಲ್ಲ ಪಾರಾಯಣ
ಈಗ
ಬೀದಿ, ಮೂಲೆಗೊಂದೊಂದು
ರೆಡಿ ಟು ಈಟು, ಚಾಟು, ಬಾರು, ರೆಸ್ಟೋರೆಂಟು!
ಮಾಡೋದೇನಿಲ್ಲ ತ್ರಾಸ
ಬರಿ ತರಬೇಕಷ್ಟೆ ಮನೆಗೆ
ಇಲ್ಲಾ
ಅಲ್ಲಿರಬೇಕಷ್ಟೇ ಕೊನೆಗೆ
ಜೇಬಿಗಷ್ಟು ತುಸು ಖಾಸ
ಆದರು ಆಗುತ್ತಲ್ಲ ಸುಗ್ರಾಸ !
ಎಲ್ಲಿ ಹೋಯಿತೋ
ಮಾಡುತ್ತಿದ್ದ ಅಡುಗೆ, ದಿನಗೆಲಸ
ಸಾಲದ್ದಕ್ಕೆ ವಾರಕ್ಕೊಂದು – ಉಪವಾಸ
ಪಾತ್ರೆ, ಪಗಡೆಗಳೊಂದಿಗೆ
ಎಡಬಿಡದಂತೆ ತಿಕ್ಕಿ ತೊಳೆದಾಟ
ಅರಿವಿರದಂತೆ ಮೈ ಕರಗಿಸುತಿದ್ದ ಹೊಡೆದಾಟ
ತನ್ನಂತಾನೆ ಪರಿಪೋಷಿಸುತಿದ್ದ
ಸಹಜ ಯೋಗಧಾಮ
ವೇಗ ಜೀವನದಲ್ಲಿ ಎಲ್ಲಿ ಹೋಯಿತೋ
ಆ ಸರ್ವ ದೇಹ ವ್ಯಾಯಾಮ
ರಕ್ತ ಬೀಜಾಸುರನಂತೆ ಉಕ್ಕುತ್ತಿದೆಯಲ್ಲ
ಏನೀ ಹೊಸ ಆಯಾಮ?
ಹತ್ತರಿಂದೈದಕ್ಕೆ ಆಗ ಬರುತಿದ್ದ ಪತಿರಾಯ
ರಾತ್ರಿ ಹತ್ತಾದರೂ ಈಗ
ಅವರಿಬ್ಬರ ಆಫೀಸೇ ಮುಗಿಯೊಲ್ಲ!


(Picture source: http://www.kannadaprabha.com/supplements/by2coffee/ನಾಚಿಕೆಯ-ಮೊದಲ-ರಾತ್ರಿ/147465.html)
******

೦೨.….ತೂಕ ರಸಾಯನ
_________________

ಕೂತಲ್ಲೇ ಮಾಡಿದರೂ
ದಿನವೆಲ್ಲ ‘ಮನ’ಗೆಲಸ
ಬಿಡುವೆಲ್ಲಿ ಮನೆಗೆಲಸಕ್ಕೆ
ಸಾಕಯ್ತಲ್ಲಾ ಇಡಿ ದಿವಸ
ಸಿಕ್ಕರೆ ಕಣ್ಣಿಗಿಷ್ಟು ನಿದ್ದೆ
ಅದೇ ಹರುಷ!
ಈಗಾಗಿ
ಏನಕ್ಕೂ ಬಿಡುವಿಲ್ಲ ವಾರದಿನ
ಸೋಮವಾರವೆ ಗಮನ
ಎಂದಪ್ಪ ವೀಕೆಂಡಿನಾಗಮನ?
ಎಷ್ಟು ಚಡಪಡಿಕೆ
ಬಂದಾಗಲೂ ವಿಶ್ರಾಂತಿ, ಔಟಿಂಗು, ಫಂಕ್ಷನ್ನುಗಳ
ಪಳೆಯುಳಿಕೆ
ಎಲ್ಲಿದೆಯಯ್ಯ ಸಮಯ
ದೈಹಿಕ ಶ್ರಮ ವ್ಯಾಯಾಮಕೆ
ಫ್ರಿಡ್ಜು, ವಾಶಿಂಗ್, ಮಿಕ್ಸಿ
ತರತರ ಮಷಿನುಗಳೊಡನೆ
ಸುಗಮ ದಾಂಪತ್ಯ
ಹೊಂದಾಣಿಕೆ
ಬಿಡುವೆ ಇಲ್ಲಾ ದೂರದರ್ಶನಕ್ಕೂ
ಎಂಥಾ ವ್ಯಥೆ!
ಇಷ್ಟೆಲ್ಲದರ ಮಧ್ಯೆ
ಗ್ಯಾಸು, ಬಿಪಿ, ಡಯಾಬಿಟಿಸುಗಳ
ಹೊಂಚಾಟಿಕೆ
ಇರದಿದ್ದರೆ
ಯಾರಿಗೆ ತಾನೆ ಚಿಂತೆ
ಬಫೆಯ ಉಂಡಾಟಕೆ!
ಹೆದರಿಸುವ ಡಾಕ್ಟರುಗಳ
ಬಿಲ್ಲು ಪುಂಡಾಟಿಕೆ
ಮೇಲೇಳಲಾಗದ (ಸ್ಥೂಲ)ಕಾಯ
ಹುಟ್ಟಿಸಿದ ಭೀತಿ, ಬಂಡಾಟಕೆ
ಆಗಬಾರದು ದಪ್ಪ
ರುಣರುಣಿಸಿದೆ ಮಂತ್ರ
ಬೂಟಾಟಿಕೆ !
ಈಗಾಗಿ
ಎಲ್ಲರು ಆಗಿ
ಮಂತ್ರಸಿದ್ದಿಗೆ
– ವಾಕಿಂಗ್ ವಾತ್ಸಾಯನ
ಸಿದ್ದಿಸಿಕ್ಕರೆ ಬೀಗಿ
ಕಮ್ಮಿ ಕಾಯದ ಯೋಗಿ
– ತೂಕ ರಸಾಯನ !


(Picture source: http://www.newhealthguide.org/Walking-To-Lose-Weight.html)

– ನಾಗೇಶ ಮೈಸೂರು
೧೦.ಜೂನ್.೨೦೧೨

00772. ಇಂದ್ರ ಶಚಿ..(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)


00772. ಇಂದ್ರ ಶಚಿ..(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)
___________________________________________

ಈಗ ಸ್ವಲ್ಪ ಪೌರಾಣಿಕ ಟೈಮ್ – ಇಂದ್ರ ಶಚಿ ಕಥೆ…!

ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು ಅಂತ ಟೈಟಲ್ ಇದ್ರೂ ದೊಡ್ಡೋರೂ ಸಂಕೋಚ ಪಟ್ಕೊಳ್ದೆ ಓದ್ಕೋಬೋದು.. 😜

ತ್ರಿಶಿರನ ಮರಣ (ಇಂದ್ರ ಶಚಿ – 01)
_________________________________
(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)

ದೇವಲೋಕದ ರಾಜ, ದೇವೇಂದ್ರ ಶಚಿಯರಸ
ಅಮರಾವತಿ ನಗರಿಯಲಿ ಅವನ ವಾಸ
ಎಂದಿನಂತೆ ಸುಖ ಸಂತೃಪ್ತಿ ಲೋಲುಪ್ತ
ಈ ಬಾರಿ ಆಪತ್ತು ಬರಲು ಶತ್ರು ತ್ವಷ್ಟ !

ತ್ವಷ್ಟನಿಗೆ ಸಂತಾನ ಮಗ ತ್ರಿಶಿರನ ಜನನ
ಮೂರು ತಲೆಯೊಡನೆ ಶತ್ರು ಇಂದ್ರನೆಡೆ ಗಮನ
ತಪ ಕಟ್ಟಿ ವರಪಡೆದು ಸೋಲಿಸಲು ಇಂದ್ರನ
ನಡೆದನು ತ್ರಿಶಿರ ಹಠತೊಟ್ಟು ಎಡೆಯುಡುಕಿ ಕಾನನ!

ದೇವರಾಜನಿಗಾರಂಭ ಆತಂಕ ನಿದ್ರಾಭಂಗ
ಗೆದ್ದರೆ ತ್ರಿಶಿರನ ತಪಸು ಆಗಲಿಹ ಪದವಿ ಭಂಗ
ಹೆಕ್ಕುತ ಅಪ್ಸರೆಯರ ಸರಸರನೆ ಅಟ್ಟಿದ ಸಹಸ್ರಾಕ್ಷ
ಮೋಹಿಸಿ, ಕಾಮಿಸಿ ಕೆಡಿಸಲು ತ್ರಿಶಿರನ ತಪೋಲಕ್ಷ್ಯ!

ಭಳಿರೆ! ತ್ರಿಶಿರ ಸಬಲ, ಮಿಸುಕಲಿಲ್ಲ ಅಚಲ
ಅಪ್ಸರೆಯರ ಗಾನ, ನಾಟ್ಯ, ಸಂಗೀತ ವಿಫಲ
ಆಯುಧ ಕೈಲಿಡಿದು ದೇವೇಂದ್ರನ ಪಯಣ
ಮೋಸದಿ ಕತ್ತರಿಸಿ ಕತ್ತು ತ್ರಿಶಿರನ ಮರಣ!

ಮರಣದಲು ಕಣ್ತೆರೆದೆ ಬಿದ್ದವ ತ್ರಿಶಿರ ವಟು
ಮರಕಡಿವ ಆಳಿಂದ ಕಡಿಸಿದ ತಲೆಯ ಪಟು
ಆದರು ಬಿಟ್ಟೀತೆ ಬ್ರಾಹ್ಮಣ ಹತ್ಯಾ ದೋಷ
ಮಹೆಂದ್ರನು ಮಾಡೇ ತಪ ಆಗಿ ದೋಷದ ನಾಶ!

ಕಡಿದ ವೃತನ ನೃಪಾಲ (ಇಂದ್ರ ಶಚಿ – 02)
______________________________________
(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)

ತ್ವಷ್ಟನ ಕರುಳಿನ ಕೋಲ, ಹುಟ್ಟಿಸಿ ಆಕ್ರೋಶದ ಜ್ವಾಲ
ಉರಿಸಿದ ಮಾಂತ್ರಿಕ ಶಕ್ತಿ, ಅಸುರ ವೃತನಾ ಸೃಷ್ಟಿ
ರಕ್ಕಸ ಹೂಡಿದ ಯುದ್ಧ, ಇಂದ್ರನ ಹಲ್ಲಲೇ ಹಿಡಿದ
ಆಕಳಿಕಾಸ್ತ್ರದ ಕೃಪೆಗೆ, ಕೆಳ ಜಾರಿದ ಸೂಕ್ಷ್ಮಾಕಾರ!

ವಿಷ್ಣುವಿನಾಣತಿಯಂತೆ ಮಾಡಿದ ಸಂಧಿ ವಿಚಾರ
ವೃತನಿಗೆ ಮಾತನು ಕೊಟ್ಟು ಸ್ನೇಹದ ಹಸ್ತ ಪ್ರಚಾರ
ಕೊಲ್ಲದ ಸ್ನೇಹದ ವಾದ ಹಗಲು ರಾತ್ರಿಯ ಭೇದ
ಕಲ್ಲು-ಮರ ಭೇದ, ಹಿಡಿಯದ ಒದ್ದೆ-ಒಣ ಆಯುದ !

ಮಹೇಂದ್ರ ಮರ್ಮದ ಪಿಂಡ, ಬಿಡದ ಉದ್ದಟ ಭಂಡ
ದಧೀಚಿಯ ತ್ಯಾಗದ ಹರಕೆ, ದೇಹದ ಮೂಳೆಯೇ ಪೊರಕೆ
ಕಟ್ಟಿದ ವಜ್ರಾಯುಧವ, ಹಚ್ಚಿ ಸಮುದ್ರದ ನೊರೆಯ
ಕಾದು ಸಂಧ್ಯಾ ಕಾಲ, ಕಡಿದ ವೃತನ ನೃಪಾಲ !

ಮತ್ತೆ ಇಂದ್ರನ ತಪನೆ, ಮೋಸದಿ ಕೊಂದಾ ವ್ಯಸನೆ
ಕಾಡಲು ಹಗಲೂ ರಾತ್ರಿ, ಬಿಟ್ಟೋಡಿದ ಎಲ್ಲ ಖಾತ್ರಿ
ಸ್ವರ್ಗದಲಿ ಎಲ್ಲೆಲ್ಲು ಹಾಹಾಕಾರದ ಸೊಲ್ಲು
ರಾಜನಿರದ ರಾಜ್ಯ ಮುರಿದು ಬಿದ್ದಂತೆ ಅಡಿಗಲ್ಲು

ಸ್ವರ್ಗಾದಿಪತಿ ನಹುಷ (ಇಂದ್ರ ಶಚಿ – ೦೩)
_________________________________
(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)

ಹೊತ್ತು ಪಾಪದ ಪಿಂಡ, ಮನಕುಗ್ಗಿ ಅವಿತ ಇಂದ್ರ
ಜಗವೆಲ್ಲ ಕತ್ತಲಲಿ, ಅರಾಜಕತೆ, ಪಾಪದ ಕೇಂದ್ರ
ಹುಡುಕುಡುಕಿ ಬಸವಳಿದು ದೇವತೆಗಳಿಗೊಂದೆ ಚಿಂತೆ
ಹೇಗೆ ತೀರಿಸುವುದಪ್ಪ, ರಾಜನಿಲ್ಲದೆ ಏಳೇಳು ಲೋಕ ವ್ಯಥೆ !

ಕೊನೆಗೆ ಹುಡುಕಿದರಾಗ ನಹುಷ, ಭೂಲೋಕ ಪಾಲ
ಬೇಡಿದರು ಆಗಯ್ಯ ನಮ್ಮ ದೊರೆ, ನಮಗಿದು ಅಕಾಲ
ದಮ್ಮಯ್ಯ ಒಪ್ಪಿಸುತ ನಹುಷನಿಗೆ ಧಾರೆಯೆರೆದರು ಶಕ್ತಿ
ಅಂತೂ ಸ್ವರ್ಗಾದಿಪತಿ ಸಿಕ್ಕ, ಸದ್ಯಕೆ ನಡೆಸಲು ಭುಕ್ತಿ!

ಆರಂಭದಲಿ ಎಲ್ಲ ನಡೆಯಿತು ಸ್ವಚ್ಛ ಸುಸೂತ್ರ
ವಿನಯ,ಭಯ,ಭಕ್ತಿಗಳಲ್ಲೇ ನಹುಷನ ಪಾತ್ರ
ಅರಿವಾದಂತೆ ಐಭೋಗ ಕಲ್ಪವೃಕ್ಷ, ಕಾಮಧೇನು
ಮದಗಜದಂತೆ ತಲೆಗೇರಿತು ಅಧಿಕಾರ ಮದದ ಸೂನು!

ಐಶ್ವರ್ಯ ನನದು, ಕಲ್ಪತರು ನನದು, ಅಮರಾವತಿ ನನದು
ದೇವತೆಗಳೆಲ್ಲರ ಅಣತಿ ಅಧಿಕಾರ ಹಕ್ಕು ಈ ಹೊಸ ಇಂದ್ರನದು
ಹೀಗೊಂದು ದುರ್ದಿನ ಗಳಿಗೆ, ಬಿದ್ದಳು ಶಚಿ ಅವನಾ ಕಣ್ಗೆ
ಸರಿ ಅವಳೂ ಇಂದ್ರನ ಆಸ್ತಿ, ವರಿಸಲಿ ನನ್ನನೆ ನಾಸ್ತಿ !

ಕಂಗೆಟ್ಟಳು ಇಂದ್ರಸತಿ ಓಡಿ ಗೋಳಿಟ್ಟಳು ಗುರು ಬೃಹಸ್ಪತಿ
ಅಭಯವನಿತ್ತ ದೇವಗುರು, ಆಶ್ರಯವಿತ್ತ ತಾನೇ ತವರು
ಅಯ್ಯೋ! ಎಳೆದು ತರಬೇಕಂತೆ, ನಹುಷನ ಆಜ್ಞೆ
ಗಡಗಡ ನಡುಗಿತು ಕೇಳಿ, ಎಲ್ಲ ದೇವತೆಗಳ ಪ್ರಜ್ಞೆ!

ನಹುಷ ತುಂಬಾ ಬಲಿಷ್ಠ (ಇಂದ್ರ ಶಚಿ – ೦೪)
__________________________________
(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)

ದೇವಗುರು ಯೋಜಿಸಿದ ಹೊಸದೊಂದುಪಾಯ
ಶಚಿ ಕೇಳಿದಳು ನಹುಷನ ಮೊದಲ್ಹುಡುಕುವ ಪತಿಯ
ಸಿಕ್ಕರವ ಧರ್ಮಪತಿ, ಬಿಡು ನಾನವನ ಸಂಗಾತಿ
ಕಾಣದಿರೆ ಅವನ ಗತಿ, ನಾನಾಗುವೆ ನಿನಗಾಗ ಸತಿ!

ಒಪ್ಪಲು ನಹುಷ ನಿಮಂತ್ರ, ಶುರು ಹುಡುಕಾಟದ ತಂತ್ರ
ಕಡೆಗೂ ಸಿಕ್ಕಿದ ಮಹೇಂದ್ರ, ಕೇಳಿದ ದೇವತೆಗಳ ಸೂತ್ರ
ಮಾಡಿದ ಅಶ್ವಮೇಧ, ಪರಿಹರಿಸೆ ಪಾಪ ವೃತವಧಾ
ಹುಮ್ಮಸಿನಲಿ ಹೊರಟ ಅವನ ಕಿತ್ತಿಡಲು ಬುಡಸಹಿತ!

ಆದರು ಇಂದ್ರ ಸೋತ, ನಹುಷ ತುಂಬಾ ಬಲಿಷ್ಠ
ಮತ್ತೆ ಮಾಯಾ ಇಂದ್ರ, ಸೂಕ್ಷ್ಮದಿ ಕಮಲದ ಕಾಷ್ಠ
ಶಚಿ ಸಂಕಟದಲಿ ಮತ್ತೆ, ಬೇಡಲು ಉಪಶ್ರುತಿ ಮಾತೆ
ಜತೆಗೊಯ್ದಳು ಶಚಿ ವನಿತೆ, ತೋರೆ ದೇವೇಂದ್ರನ ಅವಿತೆ!

ದಾಟುತ ಕಾಡು ಮೇಡು, ತುಳಿದು ಕಲ್ಲು, ಕವಲು
ಕೊನೆಗೂ ಸರೋವರ ಬರಲು, ಅಲ್ಲೇ ಇಂದ್ರನ ಒಕ್ಕಲು
ಸೀಳಲು ಕಮಲದ ಕಾಂಡ, ಸೂಕ್ಷ್ಮದಿ ಕೂತಿಹ ಗಂಡ
ಶಚಿಯು ಸೂಕ್ಷ್ಮದಿ ನುಗ್ಗಿ, ನುಡಿದಳು ನಹುಷನ ಮಗ್ಗಿ!

ನಿರಾಳ ಶಚಿ ಸಂಸಾರ (ಇಂದ್ರ ಶಚಿ – ೦೫)
__________________________________
(ಮಕ್ಕಳ ಪುರಾಣ ಜ್ಞಾನಕ್ಕಾಗಿ ಬರೆದಿದ್ದು)

ನೀರಲಿ ಅವಿತೆ ಸತಿಪತಿ, ಬರೆದರೂ ಯೋಜನೆ ಕವಿತೆ
ಶಚಿ ಹಿಂದಿರುಗಿದ ಗಳಿಗೆ ನಡೆದಳು ನಹುಷನ ಕಡೆಗೆ
ಓಡಿದ ಪತಿ ಬಿಟ್ಟೆಲ್ಲ, ನಿನ ವರಿಸಲು ತಕರಾರಿಲ್ಲ
ಆದರು ಒಂದು ಷರತ್ತು, ಕೊಡಬೇಕು ಗೌರವ,ಗತ್ತು!

ಕಾಮದಿ ಕುರುಡ ನಹುಷ, ಬರಲೊಪ್ಪಿದ ಶಚಿಯ ಷರತ್ತು
ಹೊರಟ ಪಲ್ಲಕ್ಕಿಯ ಮೇಲೆ, ಹೊರಲು ಸಪ್ತರ್ಷಿಗಳ ಹೆಗಲು
ಕೊಬ್ಬಿದ ಕಾಮಾತುರತೆ, ನಡೆವೇಗ ಸಾಲದ ತುರಿಕೆ
ಉರಿದ ಅಗಸ್ತ್ಯಮುನಿ ಕುಳ್ಳು, ಅವನೇ ವೇಗಕೆ ಮುಳ್ಳು!

ಕುಳಿತೆದ್ದ ನಹುಷೆಂದ್ರ, ಪಲ್ಲಕ್ಕಿಯೊಳಗಿಂದ
ಚಾಚಿದ ಕಾಲಿಂದ ತಟ್ಟಿದ ಮುನಿ ಹೆಗಲ ಬಂಧ
ಹುರುಪಿಸುವ ಕುದುರೆಯ ತೆರದಿ ಅಂದ ‘ಸರ್ಪ ಸರ್ಪ’
ಕೋಪದಿ ಮುನಿ ಶಾಪ, ‘ಭುವಿಗೆ ಬೀಳು, ನೀನಾಗಿ ಸರ್ಪ’

ನಿರಾಳ ಶಚಿ ಸಂಸಾರ, ಅಂತೂ ಕುತ್ತು ಪರಿಹಾರ
ಆಗೇ ಇಂದ್ರ ರಾಜ ಮತ್ತೆ, ಅಮರಾವತಿ ಸಂತುಷ್ಟೇ
ಶಚಿ ಪತಿ ಭಕ್ತಿಗೆ ಗೆಲುವು, ಮತ್ತೆ ಜಯಂತನ ಒಲವು
ಸಹನೆ, ಚತುರತೆ, ಯುಕ್ತಿ ಮತ್ತೆ ಸ್ವರ್ಗಾಧಿಪತಿ ಭುಕ್ತಿ!

———————————————————–
ನಾಗೇಶ ಮೈಸೂರು
———————————————————–
(ಮುಕ್ತಾಯ)

ಸೂಚನೆ : ಅಮರ ಚಿತ್ರಕಥಾ ಸರಣಿ ಓದುತ್ತಿದ್ದ ಮಗನ ಕುತೂಹಲಕ್ಕಾಗಿ ಕವನ ರೂಪಕ್ಕಿಳಿಸಿದ ಸಾರ ರೂಪ. ಹೀಗಾಗಿ ಕಥೆಯ ಹಿನ್ನಲೆಗೆ ಬೇರಾವ ಮೂಲವೂ ಇಲ್ಲ – ಅಮರ ಚಿತ್ರಕಥಾ ಮೂಲದ ಹೊರತಾಗಿ.

(Picture source : http://www.mygodpictures.com/category/lord-indra-ji/page/2/)

00771. ಮೊದಲ ಸ್ಪರ್ಶ


00771. ಮೊದಲ ಸ್ಪರ್ಶ
___________________

ಪ್ರೇಮಿಗಳಲ್ಲಿ ಪ್ರತಿಯೊಂದು ಸಣ್ಣ ವಸ್ತು ವಿಷಯವು ಪ್ರಾಮುಖ್ಯವಾಗಿಬಿಡುತ್ತದೆ – ಅದರ ಭೌತಿಕ ಮೌಲ್ಯದ ಲೆಕ್ಕಾಚಾರವಿಡದೆ. ಪ್ರತಿಯೊಂದು ಹೊಸ ಅನುಭವ ಕಟ್ಟಿಕೊಡುವ, ರೋಮಾಂಚನ ನೀಡುವ ಅದ್ಭುತವಾಗಿಬಿಡುತ್ತದೆ.. ತೀರ ನಿರ್ಲಕ್ಷಿಸಬಹುದಾದ ಸಂಗತಿಯೂ ದೊಡ್ಡದಾಗಿ ಮುನಿಸು, ಮೌನಗಳಿಗೆ ಕಾರಣವಾಗುವುದೂ ಸಹಜವೇ.

ಆಕಸ್ಮಿಕವಾಗಿ ಉಂಟಾದ ‘ಪ್ರೀತಿ’ಯ ಮೊದಲ ಸ್ಪರ್ಶ ಹುಟ್ಟಿಸುವ ರಸಭಾವ ಈ ಕೆಳಗಿನ ಪದ್ಯದ ಸಾರ.. ಅದು ಪದಗಳಲ್ಲಿ ಕವಿತೆಯಾಗದಿದ್ದರು, ಮನದ ಭಾವದ ಲಲಿತೆಯಾಗುವುದು ಬಹುತೇಕರ ಅನುಭವ ಎನ್ನಬಹುದೇನೋ..

ನಿನ್ನ ಮೊದಲ ಬೆರಳ ಸ್ಪರ್ಶ
___________________

ನಿನ್ನ ಮೊದಲ ಬೆರಳ ಸ್ಪರ್ಶ
ತಂದ ಮಧುರ ರೋಮಾಂಚನ
ಹಿಡಿಯದಾವ ಪದ ಕಸರತ್ತು
ತನು ಅದುರಿತಲ್ಲೆ ಕಂಪಿಸಿ ಮನ.. ||

ಆಕಸ್ಮಿಕಕದೆಂಥ ಅನುಭೂತಿ ?
ಅನುಭವ ಅನುಭಾವ ಗಣತಿ
ಪ್ರಣತಿಯಾಗಿ ರೋಮರೋಮದೆ
ಹಚ್ಚಿಕೊಂಡವಲ್ಲೆ ದೀಪದ ಸಾಲೆ..! ||

ಬೆಳಗಿದ ಬೆಳಕು ಬೆಚ್ಚಗಾಗಿಸಿತು
ಮೈ ನವಿರೇಳುತೆಲ್ಲ ಹೊಚ್ಚ ಹೊಸತು
ನಿನಗೂ ಇತ್ತೇನು ಅದೇ ಭಾವ ?
ಓದಬಿಡದಲ್ಲ, ಮರೆಮಾಚಿದ ಕಿರುನಗೆ..! ||

ಬೆಸೆದಿತ್ತಲ್ಲಿಯತನಕ ಬರಿ ಭಾವ
ಮಾತುಗಳಲೆ ಹೃದಯ ಕಾವ್ಯ
ನಿಸ್ತಂತು ನಡುವಿನಂತರಕೆ ಕಾತರ
ಸಂಚಾಗಿ ಮಿಂಚು ವಿದ್ಯುತ್ಸಂಚಾರ..! ||

ನೋಡಂದಿನ ಮಾಂತ್ರಿಕ ಸ್ಪರ್ಶ
ಇಂದಿರದಿದ್ದರು ನೆನಪೇ ಪರುಷ
ತಂಪಾಗಿ ತಗುಲಿ ಬೆಚ್ಚಗಾಗಿ ಮನ
ಅನುರಣಿಸುತಿದೆ ಅದರದೆ ಪುನರುಕ್ತಿ .. ||

– ನಾಗೇಶ ಮೈಸೂರು

(Picture source: http://luna.typepad.com/weblog/2009/09/and-than-there-was-the-womanit-was-love-at-first-touch-rather-than-first-sight-for-i-had-met-her-several-times-before-with.html)

00770. ಗತಿಸಿದ ತಾತನ ಜೊತೆ..


00770. ಗತಿಸಿದ ತಾತನ ಜೊತೆ..
________________________


ಕಾಲದ ಜೊತೆ ಹೋಲಿಕೆಯಲ್ಲಿ ಎಲ್ಲರು ಕರುಬುವ ಸಾಮಾನ್ಯ ದೃಶ್ಯ – ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು ಎನ್ನುವ ಅದೇ ರಾಗ, ಅದೇ ತಾಳ, ಅದೇ ಪಲ್ಲವಿ. ಹಳತೆ ಒಳಿತು ಅನ್ನುವ ಲೋಲಕದ ಒಂದು ತುದಿಯಿಂದ, ಹೊಸತೆ ಜಗ ನಿಯಮವೆನ್ನುವ ಮತ್ತೊಂದು ಲೋಲಕದ ತುದಿಯ ನಡುವಲೆಲ್ಲೊ ಕಳೆದುಹೋಗಿರುವ ನಮ್ಮ ಬಾಳುವೆಗಳನ್ನು ಸ್ವಸ್ಥಗೊಳಿಸುವ ತಾತಗಳು (ಅರ್ಥಾತ್ ಪರಂಪರೆಗಳು) ಬಂದಾವೆಯೆ, ಇದ್ದವು ಉಳಿದುಕೊಂಡಾವೆಯೆ ಎನ್ನುವುದು ಯಕ್ಷ ಪ್ರಶ್ನೆ. ಆದರೆ ಈ ಕವನದಲ್ಲಿರುವುದು ಮಾತ್ರ ಬರಿಯ ದೂರುವ ಸ್ವರ !

ಗೊತ್ತ ನಿನಗೆ ತಾತ ?
ಈ ಕಾಲ ಯಮದೂತ
ಸದ್ಯ ನೀನಾದೆ ಸ್ವರ್ಗಸ್ಥ
ನಿನ್ನ ಕಾಲವೆ ಪುಣ್ಯವಂತ..

ಕುಡಿವ ನೀರಿಗೂ ಕಾಸು
ಕೊಟ್ಟು ಹಾಕುತ್ತ ಶೂಸು
ಖಾಲಿ ಹೊಳೆಯ ದಿಟ್ಟಿಸು
ಸೆಲ್ಫಿಗೆ ಕೊಡುತ ಪೋಸು..

ನಿನದಿತ್ತೆಲ್ಲ ಜಗ ಹೊರಗೆ
ಕಟ್ಟಿಹೆವೆಲ್ಲವ ಪೋನೊಳಗೆ
ತಿನ್ನೆ ಖಾತರಿಯಿಲ್ಲ ಹೊತ್ತೊತ್ತಿಗೆ
ಡೇಟಾ ಪ್ಯಾಕು ಗಟ್ಟಿ ಮೊಬೈಲಿಗೆ..

ತಿಂದುಟ್ಟುಣುವುದೇನು ಬಿಡು
ನಿನ್ನ ಹಾಗಲ್ಲ ಹಬ್ಬದ ಜೋಡು
ಕಾಂಚನ ಗಣಿಸದೆ ಕೊಂಡು
ತಂದು ತಿನ್ನುವವರದೆ ದಂಡು..

ನಿನ್ನ ಜೋಬಿತ್ತಾದರು ಖಾಲಿ
ಮನಸಾಗಿತ್ತು ಬಿಡು ಬರಿ ಜಾಲಿ
ನಮ್ಮ ಬ್ಯಾಂಕಾಗುತಲಿದೆ ರೊಕ್ಕ
ಎಷ್ಟು ಹುಡುಕೂ ಮನಶ್ಯಾಂತಿ ಸಿಕ್ಕ..

– ನಾಗೇಶ ಮೈಸೂರು

http://www.graphicsfactory.com/Clip-Art/People/Family/grandfather-fishing0001-157519.html

00769. ಏನು ಮಾತು, ಏನು ಕತೆ ?


00769. ಏನು ಮಾತು, ಏನು ಕತೆ ?
__________________________


ಯಾರೆ ಮಧುರ ನೆನಪುಗಳ ಯಾತ್ರೆಗೆ ಹೊರಟರು, ಅದರ ಪ್ರಮುಖ ಅಂಗವಾಗಿ ಎದ್ದು ಕಾಣುವುದು ಮಾತು.. ಮಾತು ಕಟ್ಟಿಕೊಟ್ಟ ಬಂಧ, ಮುರಿದ ಸಖ್ಯ, ಬೆಸೆದ ಅಂತರ, ತೆರೆದಿಟ್ಟ ವ್ಯಕ್ತಿತ್ವ – ಎಲ್ಲವು ಯಾವುದೊ ರೂಪುರೇಷೆಗೆ ಆವರಣ ಹೊದಿಸುತ್ತಾ ಅವರವರ ಕಲ್ಪನೆಯ ಲೋಕ ತೆರೆದಿಡುತ್ತಾ ಹೋಗುತ್ತದೆ. ಕಲ್ಪನೆಗೂ ನೈಜತೆಗು ಇರುವ ಅಂತರವನ್ನು ಎತ್ತಿ ತೋರಿಸುವುದೂ ಸಹ ಇದೇ ಮಾತೆ ಆದರು, ಮೊದಲ ಬುನಾದಿ ಬೀಳುವುದು ಕಲ್ಪನಾಲೋಕದ ಸರಹದ್ದಿನಲ್ಲೆ; ಹೀಗಾಗಿ ಆ ಮಾತಿನ ಪಸೆ ಮುಂದೊಂದೊ ಹಿಂಗಿ ಹೋಗಿ ನಿಸ್ತೇಜವಾಗಿಬಿಡುವ ಕಥೆಯೂ ಉಂಟು. ಅರ್ಥರಾಹಿತ್ಯದ ಮಾತಿನ ಹೆಗಲೇರಿಸಿ, ಕಾಲಯಾನದೊಂದಿಗೆ ಪಕ್ವತೆಯ ಜಗುಲಿಯೆಡೆಗೆ ನೆಗೆಸುತ್ತ ಪರಿಪೂರ್ಣತೆಯತ್ತ ಹೆಜ್ಜೆಯಿಕ್ಕಿಸುವ ಅಪರೂಪದ ಸಂಘಟನೆಗಳೂ ಉಂಟು. ಎರಡರ ನಡುವಿನ ಯಾವುದೊ ಶೂನ್ಯಾಶೂನ್ಯ ಅತಂತ್ರದಲಿ ಸಿಲುಕಿ ಕಳುವಾಗಿ ಹೋಗಿ ತತ್ತರಿಸುವವರ ನಿದರ್ಶನಗಳೂ ಅಪಾರವೆ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಮಾತಿನ ಜಗದಲ್ಲೂ ಪಕ್ವತೆಯ ರೂಪದಲ್ಲಿ ಬದಲಾವಣೆ ಬರುತ್ತಿರಬೇಕು. ಬಂಧದ ಗಂಟು ಭಧ್ರವಾದಂತೆಲ್ಲ ಮಾತಿನ ಸ್ತರ ತನ್ನ ಮೂಲ ಮುಗ್ದತೆ, ಪ್ರಾಮಾಣಿಕತೆಯನ್ನು ಕಳೆದುಕೊಳ್ಳದ ಹಾಗೆ ಪ್ರಬುದ್ಧತೆಯತ್ತ ತನ್ನ ವಿಸ್ತಾರವನ್ನು ಹರವಿಕೊಳ್ಳುತ್ತಾ ಹೋದರೆ ನಿಸ್ತೇಜತೆ, ನಿರ್ಲಿಪ್ತತೆಯ ಬದಲು ಉತ್ಸುಕತೆ, ಪ್ರೇರಣೆಗಳನ್ನು ತುಂಬುವ ಅದ್ಬುತ ಸಾಧನವಾಗಿಬಿಡುತ್ತದೆ ಮಾತೆಂಬ ಮಹಾ ಶಕ್ತಿ. ಅಂತಹವರ ಮಾತು ಇತರರ ಬದುಕಿಗೂ ಪ್ರಭಾವ ಬೀರಬಲ್ಲ ತಾಕತ್ತಿರುವುದು ತಂತಾನೆ ಗೋಚರವಾಗುತ್ತದೆ – ಒಂದು ರೀತಿಯ ವಿಸ್ತರಿಸಿದ ಪ್ರಭಾವಲಯದ ಹಾಗೆ..

ಅದೇನೆ ಇದ್ದರು ಮೊದಮೊದಲ ಮಾತುಗಳ ಎಳಸುತನ, ಕಾತರ, ಆವೇಗ, ಅಪಕ್ವತೆ ಹುಟ್ಟಿಸುವ ನಿರೀಕ್ಷೆ, ನೋವು, ನಲಿವುಗಳಿಗೆ ಸಮನಾಗಲಾರದು ಪ್ರಬುದ್ಧತೆಯ ಹಾದಿ ಹಿಡಿದ ಪಕ್ವ ಮಾತು. ಆ ಹೊತ್ತಲ್ಲಿ ಅರ್ಥಕ್ಕಿಂತ ಖಾಲಿ ಮಾತೆ ಮುಖ್ಯ – ತರ್ಕ, ಸಹಜಾಸಹಜತೆ, ಅರ್ಥರಾಹಿತ್ಯತೆ ಅಲ್ಲಿನ ಪ್ರಶ್ನೆಯೆ ಅಲ್ಲ. ಆದರೆ ಅಲ್ಲಿ ಹರಿದಾಡುವ ಮಾತುಗಳ ಮೊತ್ತ ಮಾತ್ರ ಅಗಾಧ – ಸದಾಸರ್ವದಾ ಅಷ್ಟು ಮಾತಾಡಲಾದರೂ ಏನಿರುತ್ತದೆ ಎಂದು ಸೋಜಿಗಪಡುವಷ್ಟು.. ಅದೆ ಪ್ರಬುದ್ಧ ಜಗದಲ್ಲಿ ಮಾತಿಗೆ ಸಮಯದ ಕಾಲಾವಧಿ ನಿಗದಿಪಡಿಸುತ್ತ ಮಾರುಕಟ್ಟೆಯ ಸರಕಿನ ಪೋಷಾಕು ಹಾಕಿಸಿಬಿಡುತ್ತೇವೆ…!

ಈ ಕೆಳಗಿನ ಎಳಸು ಕವನ ಮೊದಮೊದಲ ಮಾತುಗಳ ಸೋಜಿಗಕ್ಕೆ ಬರೆದ ವ್ಯಾಖ್ಯೆ.. ಆ ಮಾತುಗಳಷ್ಟೇ ಅರ್ಥರಾಹಿತ್ಯತೆ, ಕುತೂಹಲ, ಕನಸು, ಕಲ್ಪನೆಗಳ ಕಲಸುಮೇಲೊಗರದಲ್ಲಿ ಮೂಡಿದ ಲಹರಿ. ಅದನ್ನು ಬರೆಯುವಾಗನಿಸಿದ ಭಾವ ಕೂಡ ಆ ಸ್ತರದ ಮಾತಿನ ಧಾಟಿಯಲ್ಲೇ ಕಾಡಿದ್ದು ನಿಜ – ಆಗ ಆಡಲದೆಷ್ಟೊಂದು ಮಾತಿರುವಂತೆ, ಅದನ್ನು ಹೇಳಲದೆಷ್ಟೊಂದು ಸಾಲುಗಳಿವೆಯಲ್ಲ ? ಎಂದು. ಆದರೆ ಅದು ಹೇಳಿ ಮುಗಿಸಲಾಗದ ಸರಕು ಎಂಬ ಸತ್ಯದರ್ಶನವೂ ಇದ್ದ ಕಾರಣಕ್ಕೆ ಚುಟುಕಲ್ಲೆ ಮುಗಿದಿದೆ. ಹೇಳಬೇಕಾದ್ದಕ್ಕಿಂತ ಹೇಳದೆ ಉಳಿದ ಮಾತುಗಳ ಹಾಗೆ – ಎದುರಿಲ್ಲದಾಗ ಧುತ್ತನೆ ಬಂದು ಕಾಡುತ್ತವೆ, ಎದುರಿದ್ದಾಗ ಅರ್ಧಕ್ಕರ್ಧ
ಹೊರಬರದೆ ಮಾಯವಾಗಿಬಿಡುತ್ತವೆ.. ಅಲ್ಲಿನ ಅಗತ್ಯ, ಅವಶ್ಯಕತೆ ಮಾತನ್ನು ಹೇಳುವುದಾಗಿತ್ತೊ ಅಥವಾ ಒಡನಾಟದ ನಡುವಿನ ಮೌನವನ್ನು ಮುಚ್ಚಲು ಬೇಕಾದ ಸರಕು, ಉರುವಲನ್ನು ಮಾತಿನ ನೆಪದಲ್ಲಿ ಸೇರಿಸುವುದಾಗಿತ್ತೊ ಎನ್ನುವ ಗೊಂದಲ ಮೂಡಿಸುತ್ತ.

ಆ ಗೊಂದಲ, ಗದ್ದಲ, ಪಿಸುಮಾತಿನ ಸೀಕರಣೆ ಈ ಸಾಲುಗಳಲ್ಲೀಗ..

ಎಲ್ಲಿಯದೋ ಆ ಮಾತುಗಳು..?
___________________________

ಏನು ಮಾತು, ಏನು ಕತೆ ?
ಗಂಟೆ ದಿನಗಟ್ಟಲೆಯ ಕವಿತೆ
ಎಲ್ಲಿದ್ದವದೆ ಮಾತು ಪದೆಪದೆ ?
ಆಡಿದ್ದ ಹೊತ್ತು ಜಗ ಮಲಗಿದೆ..

ಹೊತ್ತು ಗೊತ್ತಿಲ್ಲದ ಜಗದಲಿ
ಕಾವಲಿದ್ದವು ಹಗಲಿರುಳು
ಸೇರುತ ಕೂರುತ ಏನೆಲ್ಲಾ
ಮಾತಾಗೆ ಹವಣಿಸಿ ಕಾಯುತ..

ಮಾತಿಗೆ ಜತೆ ಕೂತಾ ಗಳಿಗೆ
ಪರಿವೆಯಿಲ್ಲದೆ ಪರಿಸರಕೆ
ಕನಸ ಹಂಚಿದ್ದು ತುಣುಕಾಗಿ
ಸಂಯಮವಿತ್ತು ಸಾನಿಧ್ಯದಲಿ..

ಸರಿ, ಮಿಕ್ಕ ಮಾತಿಗದೇನರ್ಥ ?
ವ್ಯರ್ಥ ಹುಡುಕಬೇಕೇಕೆ, ಬಿಡು
ಗುಟ್ಟಲ್ಹೇಳಿದೆ ಮಾತಲ್ಲ ಮುಖ್ಯ
ಕುಂಟುನೆಪ ಒಡನಾಟ, ಸಖ್ಯಕೆ..

ಅಚ್ಚರಿಯ ಅರ್ಥಕೋಶ ನಮದು
ಹುಡುಕಲಿಲ್ಲ ಮಾತಲಿ ಜಾಡು
ಮುನಿಸು ಮುದ ಹದ ಮೀರುತಲೆ
ಬೆಸೆದ ಬಗೆಗದಾವ ಕಾವ್ಯ ಸಮವೆ ?

– ನಾಗೇಶ ಮೈಸೂರು
(Picture source:http://m.wikihow.com/)

00768. ದೂರದಿರು, ಮಾತು ಮರೆತವಳ


00768. ದೂರದಿರು, ಮಾತು ಮರೆತವಳ
___________________________

ಕೊಟ್ಟ ಮಾತು ಮರೆತವಳ
ದೂರಲೆಂತು ಮುನಿಯುತ ?
ಪ್ರೇಮಿಸಿ ಬಿರುಸಲಿ ಕೊಟ್ಟ ಮಾತು
ಮತ್ತಾವುದೊ ಪ್ರೀತಿ ಕಟ್ಟಿ ಹಾಕಿತ್ತು..

ಕೊಡುವೆನೆಂದಳು ಜೀವವನೆ..
ಕಟ್ಟಿದ ಕನಸು ಕಣ್ಣ ತೇವವನೆ,
ಮರಳಿಸುತಿದೆ ನೆನೆದಡಿಗಡಿಗೆ
ಎಲ್ಲಿ ಹೋದಳು ಬರದೆ ಕಡೆಗೆ ?

ಕಿತ್ತು ಬರುವೆನೆಂದಳು ಬಂಧ
ಕಟ್ಟೆ ಹೊಸತು ಜೀವ ಸಂಬಂಧ
ಯಾಕೋ ಪಾಶ ಕೊರಳ ಸುತ್ತಿತ್ತ
ಅಸಹಾಯಕತೆಗೆ ಕಣ್ಣೀರೆ ಬತ್ತಿತ್ತ..

ಸ್ವಾರ್ಥ ಗೆದ್ದ ತ್ಯಾಗದ ರಣಹದ್ದು
ಕುಕ್ಕಿತ್ತವಳ ಹೃದಯದೊಳ ಸದ್ದು
ಬಿಕ್ಕುವ ಮೌನ ಬದುಕಾದವಳನು
ದೂರಲೆಂತು ತಾನೆ ನೋವಾದವಳನ್ನು ?

ಅದೆ ಒಂಟಿ ಮರದ ಕೆಳಗೆ ಕೂತು
ಜಂಟಿ ಗಳಿಗೆಯ ನೆನಪಲ್ಲಿ ಹೂತು
ಮುನಿಯುತಿರುವೆ, ಶಪಿಸಿರುವೆನು
ನಿನಗಲ್ಲ ವಿಧಿಗೆ, ಬೇರಾಗಿಸಿದವನು..!

– ನಾಗೇಶ ಮೈಸೂರು
(Picture source : http://www.youtube.com)

00763. ಪ್ರೀತಿಪಾತ್ರರಿಗೆ, ಪ್ರೀತಿಯಿಂದರ್ಪಿತ..


00763. ಪ್ರೀತಿಪಾತ್ರರಿಗೆ, ಪ್ರೀತಿಯಿಂದರ್ಪಿತ..
___________________________________

ಪ್ರೀತಿಪಾತ್ರರನ್ನು ಸಂಕಟ ಕಾಡುವ ಹೊತ್ತಲ್ಲಿ ಅನಿಸುವುದೊಂದೆ ಅನಿಸಿಕೆ – ಅವರನ್ನು ಬಿಟ್ಟು ನಮ್ಮನ್ನು ಕಾಡಬಾರದಿತ್ತೆ ಆ ಯಾತನೆ ? ಎಂದು. ಅದು ಪ್ರೀತಿಯ ರೀತಿ.. ಆದರೆ ಹಾಗೇನಾದರು ಆಗಿದ್ದರೆ, ಅದೇ ಪ್ರೀತಿಪಾತ್ರರೆ ನಮ್ಮನ್ನು ಕಾಪಿಡುವ ಸಂಕಷ್ಟದಲ್ಲಿ ಸಿಕ್ಕಂತಾಗುತ್ತಿತ್ತಲ್ಲವೆ ? ಯಾವುದೆ ಕೋನದಲ್ಲಿ ನೋಡಿದರು ಅದರದರದೆ ಕೊರಕಲು, ಓರೆಕೋರೆಗಳು.. ಅದೇ ಜಗದ ಅಲಿಖಿತ ನಿಯಮವಿರಬಹುದು.. ಆದರೆ ಕೊನೆಮುಟ್ಟದ ಆಶಾವಾದ, ಅದಮ್ಯ ಜೀವನ ಪ್ರೀತಿಗಳು ಎಂದೆಂದಿಗು ಜೊತೆಯಲಿರುವಂತೆ ನೋಡಿಕೊಳ್ಳುವ ಪ್ರೀತಿ, ವಾತ್ಸಲ್ಯ, ಮೋಹಗಳ ಮಾಯೆ ಈ ಬದುಕಿನ ಜೀವಸೆಲೆಯ ಚೈತನ್ಯವನ್ನು ನಿರಂತರವಾಗಿಡಿಸುತ್ತವೆ – ಕೊನೆಯುಸಿರಿನ ಛಲ ಕೈ ಕೊಡುವ ತನಕ.

ಅದೆಲ್ಲದರ ನಡುವೆ ಕಾಡುವ ಯಾತನೆ – ಏನೂ ಮಾಡಲಾಗದ ಅಸಹಾಯಕತೆಯ ‘ಗಿಲ್ಟಿ’ ಫೀಲಿಂಗ್ ಅರ್ಥಾತ್ ತಪ್ಪಿತಸ್ತ ಭಾವನೆ.


ನನ್ನ ಪ್ರೀತಿಯ ಮಗುವೆ…
______________________________

ನನ್ನ ಪ್ರೀತಿಯ ಮಗುವೆ, ಕಾದಿರುವೆ ನಿನ್ನಾ ನಗುವಿಗೆ
ಎಲ್ಲ ಮರೆತಂತಿರುವೆ, ಯಾರ ಶೋಧನೆಗೆ ?
ನಿನ್ನ ನೀನರಿಯದೆ ಸಕಲ, ನೀನಾಗುವುದುಂಟೇನು ?
ನೀರಿನ್ಹೊದಿಕೆಯನ್ಹೊದ್ದ ಮೀನಾಗಿ ಬರಲೇನು ತಡೆ ?

ಕಾಣದಪರಿಮಿತ ನಿನ್ನ, ಚಿಂತನೆಯ ವ್ಯಾಪ್ತಿಯಲಿ
ಮೂಡಿ ಬರುತಿವೆ ಚಿತ್ರ, ಚಿತ್ತಾರಗಳ ಜಾತ್ರೆ ಖಾತ್ರಿ
ಹಿಡಿಯಲ್ಹಿಡಿದು ಬೊಗಸೆ, ತುಂಬಿಸಬಹುದು ಆಗಸ
ನೀನು ನೀನಾಗಿ ಧರೆಗೆ, ಬಂದಿಳಿದ ಆ ದಿವಸ ಕ್ಷಣದೆ..

ನೋಡದಿರು ನಿನ್ನಾ ನೋಟ, ಕಾಡುತಿರೆ ಅತಂತ್ರ ನಾ
ತಪ್ಪಿತಸ್ಥನ ಹಾಗೆ ನಿಲಿಸಿ, ಕಟಕಟೆಯಲಿ ವಿಚಾರಿಸುತ
ಕೇಳಿದರೆ ಪ್ರಶ್ನೆಯ ರಭಸ, ಉತ್ತರಿಸಲೇನು ತಬ್ಬಿಬ್ಬಲಿ ?
ತಬ್ಬಲಿಯಾದಂತೆನಿಸೆ, ವಾದಿಸಲೇನು ತಗ್ಗಿಸಿ ತಲೆಯ..

ತಬ್ಬುವೆ ಮೌನ ಪ್ರತಿಗಳಿಗೆ, ಕಾಡುವ ಮಾತಿಗದೆ ಜಾಗ
ಮೌನ ಮೌನದ ಸಂವಾದ, ಪ್ರಶ್ನೋತ್ತರ ಜಗ ನಿರುತ್ತರ
ಹುಡುಕುತಿಹೆ ಒಳಗೆ ಹೊರಗೆ, ಕಂಡ ಕಂಡ ಕಲ್ಲುಗಳಲಿ
ಅಡಗಿರಬಹುದೇನೊ ನಿನ್ನ, ಸರಳ ಸಹಜ ನಗೆಯದಿರು..

ಹೆದರದಿರು ಬಿಡು ತಲ್ಲಣ, ಮುಡಿಪಿಡುವೆ ನನ್ನ ಜೀವನ
ನೀನಾಗುವಂತೆ ಮುಗಿಲ, ಮಡಿಲಿನ ತಾರೆಯ ಸಂಭ್ರಮ
ಇಂದಿದ್ದರೇನಂತೆ ಮಗು, ನಲಿವು ಸಂಕಟದ ಸೆರಗಲಿ
ಬಂದೆ ಬರಿಸುವೆ ನಾಳೆ, ಹೊಸತಲಿ ನಗುವಿನ ಹಾಳೆ..

– ನಾಗೇಶ ಮೈಸೂರು

(Picture source : http://kleinmeli.deviantart.com/art/Father-and-Son-180403612)

00756. Bear all the pain..


00756. Bear all the pain..
__________________________________


ಇಂಗ್ಲಿಷಲ್ಲಿ ಪದ್ಯ ಬರೆಯೋವಷ್ಟು ಜ್ಞಾನವೂ ಇಲ್ಲ, ಫ್ರೌಢಿಮೆಯೂ ಇಲ್ಲ, ಪಾಂಡಿತ್ಯವೂ ಇಲ್ಲ.. ಆದರೂ ಸುಮ್ನೆ ಒಂದು ಅಟೆಂಫ್ಟ್ ಮಾಡಿದ್ದು.. 😀 ( being a novice and alien to English writing, I should not be attempting to write poems in English. But still attempted this one)

Bear all the pain..
_____________________________


I am a grown up man
should bear all the pain
However unbearable it is..
It screams from the TOP..
Whining shouting with all might
But I have to fit a silencer – muzzle
And behave as if nothing has gone wrong;

It is not that pain just casual..
Really It’s so unbearable,
Making each step, hurting in the deep..
But pretending as I walk
All over wearing, smiling mask
Displaying all in perfect solid shape..
Hiding true and genuine feeling deep..

Doctors, Lawyers, heart dwellers
Even the boss who sanction leave
Take piece of truth, bit by bit – alive
How could I hide the cough and love ?
They are in the out, soon or late
Making the account confusing and pale..
– But grown up men should bear it all the while..

– Nagesha Mysore

(picture source :
http://natalieyvonneeast.weebly.com/the-concept.html
https://www.theodysseyonline.com/growing-up-expectation-vs-reality)

00755.ಮುಟ್ಟಿದರೆ ಮುನಿ…(ಮಕ್ಕಳ ಪದ್ಯ)


00755.ಮುಟ್ಟಿದರೆ ಮುನಿ…(ಮಕ್ಕಳ ಪದ್ಯ)
__________________________________

ಮುಟ್ಟಿದರೆ ಮುನಿ ಗಿಡ ಯಾರಿಗೆ ತಾನೇ ಗೊತ್ತಿಲ್ಲ? ಯಾಚಿತವಾಗಿಯೊ, ಅಯಾಚಿತವಾಗಿಯೊ ತಗುಲಿದರೆ ಸಾಕು ನಾಚಿ ಮುದುರುವ ಇದರ ಪರಿ ಚಿಣ್ಣರಿಗೆಲ್ಲ ಕುತೂಹಲಕಾರಿ ಅದ್ಭುತ. ನನಗೆ ಅದಕ್ಕೂ ಮೀರಿದ ಅದ್ಭುತವೆಂದರೆ ಅದರ ಚೆಂಡಿನಾಕಾರದ ಗುಂಡಾದ ಸುಂದರ ಹೂವು. ಆದರೂ ಏಕೋ ಬಾಲ್ಯದ ನೆನಪುಗಳಲ್ಲಿ ಬರಿಯ ಮುದುರುವ ಎಲೆಗಳ ಅಚ್ಚರಿಯೆ ಪ್ರಮುಖವಾಗಿತ್ತೆ ಹೊರತು ಹೂವಿನ ಶೃಂಗಾರ ವೈಭವವಲ್ಲ. ಈಚೆಗೊಮ್ಮೆ ಮಕ್ಕಳಿಗೆ ಆ ಎಲೆಗಳ ಮುದುರಾಟದ ಪರಿಚಯ ಮಾಡಿಕೊಡುವಾಗ ಕಣ್ಣಿಗೆ ಬಿತ್ತು ಅದರ ಹೂವು. ಅವೆರಡರ ಪ್ರೇರಣೆ ಹೊರಡಿಸಿದ ಪದಗಳು ಸಾಲಾಗಿದ್ದು ಈ ಕೆಳಕಂಡಂತೆ. ಮಕ್ಕಳ ಪದ್ಯವೆಂದುಕೊಂಡು ಓದಬಹುದೆಂದು ಇಲ್ಲಿ ಹಾಕಿದ್ದೇನೆ 😊


ಮುಟ್ಟಿದರೆನೆ ಮುನಿ, ನಿನ್ನ ಹೂವೆ ಕಣ್ಮಣಿ
ಚೆಂಡಿನ ಹಾಗೇ ಚಿನ್ನಿ, ಗೊಂಚಲಿನ ಕಹಾನಿ ||

ಎಲೆಗಳೆಲೆ ಸಾಲಂಕೆ, ಮುಟ್ಟುವರೆನೆ ಶಂಕೆ
ಏನಷ್ಟು ಸಂಕೋಚಕೆ ? ಮುದುರುವ ಮೈಯಾಕೆ ||

ಮುಟ್ಟೆ ರೋಮಾಂಚಕೆ, ನಿಮಿರುವುದೇಕೆ ತಾಕೆ ?
ನಾಚಿಕೆಯೆ ಯವ್ವನಿಕೆ, ಇಷ್ಟೊಂದಿರಲೇ ಬೇಕೇಕೆ ? ||

ಬಹುಶಃ ಅಂಜಿಕೆಯೆ ? ಎಚ್ಚರದ ಹವಣಿಕೆಯೆ ?
ಏನಾದರು ನೀ ಸರಿಯೆ ! ಮುದುರದಿರೆ ಅರಗಿಣಿಯೆ ||

ಮುಟ್ಟಿದರೆ ಕೋಪವೆ ? ಮುಟ್ಟಾ ಮುನಿ ಶಾಪವೆ ?
ಕೋಪಕೆ ಪರಿತಾಪವೆ ? ಸಂತಸ ಪರಿಹಾಸವೆ ? ||

ಸಣ್ಣೆಲೆಗಳೆ ಮಡಚಿರೆ, ಕಂದನ ಕಣ್ಣ ನೆನೆಸಿರೆ
ಮುದುಡಿದ ಮನಸೇ, ಮುಚ್ಚಿರೆ ಬರಿ ಕನಸೆ ||

ಏನಾಗಲಿ ನಿ ಅದ್ಭುತ, ನೀಡುವೆ ಮನಸಿಗೆ ಹಿತ
ಮಕ್ಕಳ ಕುತೂಹಲಕೆ, ನೀನಾಗುವೆ ಸರಿ ಲಸಿಕೆ ||

ಮುಟ್ಟಿದರೆ ಮುನಿಯಾ, ಕಟ್ಟಿಸಿದ ಧಮನಿಯಾ
ನರನಾಡಿಗಳ ನೆತ್ತರು, ಶಮನಗೊಳಿಸೆ ಅತ್ತರು ||

ಅಲ್ಲಿಯ ತನಕ ಅವಿತು, ಅಡಗಿ ಹುಲ್ಲಲಿ ಹೂತು
ಕಾಲ್ಮುಟ್ಟಿದರು ಆಕಸ್ಮಿಕ, ಸೆಟೆದು ನಿಲ್ಲೆ ಮುಗ್ದ ಮುಖ ||

———————————————————-
ನಾಗೇಶ ಮೈಸೂರು
———————————————————

(Picture source: https://en.m.wikipedia.org/wiki/File:Mimosa_pudica_-_Kerala_1.jpg)

00754. ಸಮ ಭೋಗ ಪ್ರವರ (01 & 02)


00754. ಸಮ ಭೋಗ ಪ್ರವರ (01 & 02)
_______________________________

ಪುರುಷ ಪ್ರಕೃತಿ ಸಂಯೋಗದ ಸ್ವರೂಪದಲ್ಲಿ ಸೃಷ್ಟಿ ಪ್ರಕ್ರಿಯೆಯನ್ನು ಆಯೋಜಿಸಿದ ಆ ನಿಯಾಮಕನ ವೈಜ್ಞಾನಿಕ ಜಾಣ್ಮೆಯನ್ನು ಹೊಗಳಲು ಖಾಲಿ ಪದಗಳಿಗೆ ಸಾಮರ್ಥ್ಯವಿಲ್ಲ. ಆ ಪ್ರಕ್ರಿಯೆಯ ಮೂಲ ವಿನ್ಯಾಸವಾಗಲಿ, ರೂಪುರೇಷೆಯಾಗಲಿ, ಅದರ ನಿರಂತರತೆಯನ್ನು ಕಾಯ್ದಿಡುವ ನೈಸರ್ಗಿಕ ಕ್ರಿಯೆಯಾಗಲಿ, ಹದ್ದು ಮೀರದ ನಿಯಂತ್ರಣದಲ್ಲಿರಲು ಅನುವಾಗುವಂತೆ ಗಂಡು- ಹೆಣ್ಣಿನ ನಡುವೆ ವಿಭಜಿಸಿಟ್ಟ ಚಾತುರ್ಯವಾಗಲಿ – ಎಲ್ಲವು ಅದ್ಭುತ ಅತಿಶಯಗಳೆ. ಇಂತಹ ಅದ್ಭುತವನ್ನು ಸರಳ ಸಾಮಾನ್ಯ ಕಾರ್ಯವಾಗಿಸಿ ಜನಜೀವನದ ಸಾಮಾನ್ಯ ಸಾಮಾಜಿಕ ಸಂಭವವಾಗಿಸಿದ್ದು ಅದಕ್ಕೂ ಮೀರಿದ ಅದ್ಭುತ.

ಆ ಅದ್ಭುತದ ಲಹರಿಯನ್ನು ಪದಗಳ ಹಿಡಿಯಲ್ಲಿ ಆದಷ್ಟು ಹಿಡಿದಿಡುವ ಯತ್ನ ಕೆಳಗಿನ ಎರಡು ಪದ್ಯಗಳದ್ದು ..

01. ಬೀಜಾಂಕುರ ಸುರತಿ
_____________________________________

(Picture source from : http://sugamakannada.com/assets/images/article/hasya/ganduhennu.jpg)

ಸಮಭೋಗ ಸಮರ
ಸೌಹಾರ್ದ ಸಾಗರ
ಸಹಜದೆ ಸಹಕಾರ
ಅಸಹಜ ಅನಾದರ ||

ಎರಡು ಜೀವ ಶುದ್ಧಿ
ಸೆಳೆತದಡಿ ಸಂವೃದ್ಧಿ
ಬುದ್ಧಿ ಸಂತಾನವೃದ್ಧಿ
ಸಹಯೋಗ ಕೆಳದಿ ||

ನೆಪವೆಷ್ಟು ಸರಸಕೆ
ಪೀಳಿಗೆಗೆ ಸರಸರಕೆ
ಜೋಳಿಗೆ ತುಂಬಾಕೆ
ಮಾಳಿಗೆ ಎಂಬಾಕೆ ||

ಕತ್ತಲೇಕೋ ಧನ್ಯಾ
ಬೆತ್ತಲೆಯೆ ಸುಕನ್ಯ
ಹಿತ್ತಲೇಕೊ ಕನ್ಯಾ
ಗುಟ್ಟು ಕಥೆಗಳಗಣ್ಯ ||

ವಸ್ತು ಸ್ಥಿತಿ ಮಾಹಿತಿ
ಕಾಮ ದೇವನ ಆಸ್ತಿ
ರೋಮಾಂಚಕೆ ಸ್ವಸ್ತಿ
ಬೀಜಾಂಕುರ ಸುರತಿ ||

– ನಾಗೇಶ ಮೈಸೂರು

02. ಗಂಡ್ಹೆಣ್ಣು ಸೃಷ್ಟಿಮನ
_________________________


(Picture source: http://www.nammabanavasi.com/?info=ಪುನರಾಭಿವೃದ್ದಿಗೆ-ಹೆಣ್ಣು-ಸ)

ತೆವಲು ತಿಕ್ಕಲು ತನು
ತಾಡಗಳ ಸಿಹಿ ಜೇನು
ಸುಖ ಬೆವರಿದರೇನು
ಸೊಗವಲ್ಲೆ ಇರದೇನು? ||

ಬೆರೆತಾಗಿಸಿ ಬೆವರು
ಒಳತಾಗಿಸಿ ನೀರು
ಒಳಿತಿಗೊಡ್ಡಿ ತೇರು
ಸೇರಲಿಲ್ಲವೆ ಮೇರು ? ||

ಪ್ರಕೃತಿ ಸಂಯೋಗ
ಪುರುಷ ಸುಯೋಗ
ಜನ್ಮಾಂತರ ಪ್ರಯೋಗ
ಫಲಿತ ಕರ್ಮಯೋಗ ||

ಆಗಿದ್ದರು ಸುಕೃತಿ
ಆಗಿಸುವ ವಿಕೃತಿ
ಮನಕಿಟ್ಟ ಸನ್ಮತಿ
ಜನಕಿಟ್ಟರೆ ಸದ್ಗತಿ ||

ಸಮ ಭೋಗ ಆರಾಮ
ದೈನಿಕ ವ್ಯಾಯಾಮ
ಆತಂಕ ಬಿಡೆ ಧಾಮ
ಗಂಡ್ಹೆಣ್ಣು ಸೃಷ್ಟಿ ಮನ ||

– ನಾಗೇಶ ಮೈಸೂರು

00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)


00752. ಕಗ್ಗಕೊಂದು ಹಗ್ಗ ಹೊಸೆದು – ಟಿಪ್ಪಣಿ ೦೦೯ (readoo 30.05.2016)
___________________________________________________________

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ : ಇವತ್ತಿನ ರೀಡೂ ಕನ್ನಡದಲ್ಲಿ ಪ್ರಕಟಿತ (೩೦.೦೫.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

00745. ಮುವ್ವತ್ತಮೂರು ಕೋಟಿ ದೇವತೆಗಳು !


00745. ಮುವ್ವತ್ತಮೂರುಕೋಟಿ ದೇವತೆಗಳು !
_______________________________

ದೇವರ ಮಾತು ಬಂದಾಗೆಲ್ಲ ನಮ್ಮಲ್ಲಿ ಮೂವ್ವತ್ತಮೂರು ಕೋಟಿ ದೇವರೆಂದು ಹೇಳುವುದನ್ನು ಕೇಳಿಯೇ ಇರುತ್ತೇವೆ. ಅದು ಯಾರ್ಯಾರು ಮತ್ತು ಯಾವ ಲೆಕ್ಕದಲ್ಲಿ ಇಷ್ಟೊಂದಾದರು ಎನ್ನುವ ಕುತೂಹಲವಿತ್ತು. ಅದಕ್ಕೆ ಅಂತರ್ಜಾಲ ಮಾಹಿತಿಯನ್ನು ಜಾಲಾಡಿಸಿದಾಗ ಸಿಕ್ಕ ಮಾಹಿತಿ ಆಸಕ್ತಿದಾಯಕವಾಗಿತ್ತು. ಮೊದಲಿಗೆ ಮುಖ್ಯ ಸಾರಾಂಶವೆಂದರೆ ಇರುವ ಪ್ರಮುಖ ದೇವರುಗಳು ಮೂವ್ವತ್ತಮೂರು; ಆ ಪ್ರತಿಯೊಬ್ಬರಿಗೂ ಅಂಟಿಕೊಂಡ ಮರಿದೇವರುಗಳ ಸಂಖ್ಯೆ ಒಂದೊಂದು ಕೋಟಿ. ಅಲ್ಲಿಗೆ ಮೂವ್ವತ್ಮೂರು ಕೋಟಿ ಆಯಿತಲ್ಲ ? ಇನ್ನು ಆ ಪ್ರಮುಖ ದೇವರುಗಳಲ್ಲು ಲೆಕ್ಕ ಹುಡುಕಿದರೆ – ಅಷ್ಟಾವಸುಗಳು ಎಂಟಂತೆ; ಏಕಾದಶ ರುದ್ರರು ಹನ್ನೊಂದು ; ಜತೆಗೆ ಹನ್ನೆರಡು ದ್ವಾದಶಾದಿತ್ಯರು ಸೇರಿದರೆ ಮೂವ್ವತ್ತೊಂದಾಯ್ತು. ಅದಕ್ಕೆ ದ್ಯು ಮತ್ತು ಪೃಥಿವಿ ಎಂಬಿಬ್ಬರನ್ನು ಸೇರಿಸಿದರೆ ಮೂವ್ವತ್ಮೂರಾಯ್ತು ಎನ್ನುವ ಲೆಕ್ಕ..

ನನಗೆ ಅದೆಲ್ಲ ದೇವರುಗಳ ಹಿನ್ನಲೆ, ವಿವರಗಳ ಆಳ ಜ್ಞಾನವಿರದಿದ್ದರು ಸಿಕ್ಕ ಮಾಹಿತಿ ಕಲೆಹಾಕಿಡಬೇಕೆನಿಸಿ ಈ ಕೆಳಗಿನ ಎರಡು ಪದ್ಯಗಳ ರೂಪದಲ್ಲಿ ಹಿಡಿದಿಡಲು ಯತ್ನಿಸಿದೆ. ಕನಿಷ್ಠ ಮಕ್ಕಳು ಇಂತಹ ಪ್ರಶ್ನೆ ಕೇಳಿದಾಗ ಉತ್ತರಿಸಲು ‘ರೆಫರೆನ್ಸ್’ ರೀತಿಯಲ್ಲಿ ಸಹಾಯಕವಾಗಲೆಂದು..😊 ಅಂತರ್ಜಾಲದ ಮಾಹಿತಿಯಾದ ಕಾರಣ ನಿಖರತೆಯ ಬಗ್ಗೆ ಖಚಿತವಾಗಿ ಗೊತ್ತಿಲ್ಲವಾದರೂ ಪ್ರಾಥಮಿಕ ಮಾಹಿತಿಯಾಗಿ ಬಳಸಲು ಅಡ್ಡಿಯಿಲ್ಲವೆಂದು ಭಾವಿಸುತ್ತೇನೆ ( ತುಂಬಾ ಹಿಂದೆ ಬರೆದ ಕಾರಣ ಹೆಚ್ಚಿನ ವಿವರಗಳು ನೆನಪಿನಲ್ಲಿಲ್ಲ ಕೂಡ)

ಮುವ್ವತ್ತಮೂರುಕೋಟಿ ದೇವತೆಗಳು – 01
__________________________________


(Picture source: https://www.facebook.com/Hindu-Yuva-Sena-Maddur-421129821374036/?fref=nf)

ಕಂದ ಗೊತ್ತೆ ನಿನಗೆ ಸವಾಲು
ನಮ್ಮ ಹಿಂದೂ ದೇವತೆಗಳು
ಎಲ್ಲಾ ಸೇರಿದರೊಟ್ಟು ತಾಳು
ಮುವ್ವತ್ತ ಮೂರು ಕೋಟಿಗಳು! ||

ಮುಖ್ಯ ದೇವತೆ ಮೂವತ್ಮೂರರ
ಒಂದೊಂದು ಕೋಟಿ ಪರಿವಾರ
ಪ್ರತಿಯೊಬ್ಬರದು ಮರಿ ದೇವರ
ಮುವ್ವತ್ಮೂರರ ಸಂಖ್ಯಾಗಣ ತರ ||

ಆ ಮುವ್ವತ್ಮೂರಕೆ ಸಿಗಲು ಲೆಕ್ಕ
ಏಕಾದಶ ರುದ್ರರೆ ಹನ್ನೊಂದಕ್ಕ
ಅಷ್ಟಾವಸು, ದ್ವಾದಶಾದಿತ್ಯರು
ದ್ಯು, ಪೃಥಿವೀಗೆ ಮೂವತ್ಮೂರು ||

ಮೂವತ್ಮೂರು ಮೂರಾಗಿ ಭಾಗ
ಹನ್ನೊಂದನ್ನೊಂದರ ಸಹಯೋಗ
ವಿಶ್ವವನೆ ಮೂರಾಗಿ ಕತ್ತರಿಸಿದ
ಪ್ರತಿ ಗುಂಪಿಗೊಂದೊಂದು ಜಾಗ ||

ವಿಶ್ವ ಭಾಗಾಕಾರ ಮೂರಾಕಾರ
ಭೂಲೋಕ ನಾಯಕ ಅಗ್ನಿ ಸ್ಥಿರ
ಅಂತರ್ಲೋಕ ಇಂದ್ರನ ಭಾರ
ದ್ಯುಲೋಕಕೆ ಸೂರ್ಯನೆ ಸಾರ ||

———————————————————-
ನಾಗೇಶ ಮೈಸೂರು
———————————————————-

ಮುವ್ವತ್ತಮೂರುಕೋಟಿ ದೇವತೆಗಳು – 02
__________________________________


(Picture source – http://image.indiaopines.com/wp-content/uploads/2014/12/330-million-god-hindu.jpg)

ವಿಶ್ವ ಪ್ರತಿ ಮೂರರ ಭಾಗಕ್ಕೂ
ಮುಖ್ಯದೇವತೆಗಳನ್ನೊಂದಕ್ಕೂ
ಗಂಟ್ಹಾಕಿದ ಗಮಕ ನಿಯಾಮಕ
ಸೇರೆ ಮುವತ್ಮೂರರ ಸುಖದುಃಖ ||

ಅಷ್ಟಾವಸು ಗಣ ದೇವತೆಗಳು
ಧರ್ಮವಸು ಮಾತಾಪಿತಗಳು
ಪ್ರಭಾಸ,ಧರ,ಪ್ರತ್ಯೂಷ,ಅನಲ
ಅಹಸ,ಸೋಮ,ಧ್ರುವ,ಅನಿಲ ||

ಭಾವೋದ್ಭವ ಆದಿತ್ಯಾತ್ಮಕ ಶ್ರೀರುದ್ರ,
ಶಿವಾ,ನೀಲೋಹಿತಾ,ಈಶಾನ,ರುದ್ರ
ಶಂಕರ,ಮಹದೇವಾ,ವಿಜಯರುದ್ರ
ಮಹಾರುದ್ರ, ದೇವದೇವ, ಭೀಮರುದ್ರ ||

ಧತ, ಆರ್ಯಮ, ಮಿತ್ರರೀ ಆದಿತ್ಯರು
ವರುಣ,ಇಂದ್ರ, ವಿವಸ್ವನ, ತ್ವಶ್ಥರಿಹರು
ವಿಷ್ಣು, ಅಂಶುಮನ, ಭಾಗ, ಪುಷ, ಸ್ವರ
ದ್ವಾದಶಾದಿ ಆದಿತ್ಯರ ಗುಂಪಿನ ಸಾರ ||

ಆಗ್ನೇಯ ಆಗ್ನಿ, ಉತ್ತರಕೆ ಕುಬೇರ
ದಕ್ಷಿಣಕೆ ಯಮಾ, ಪಶ್ಚಿಮಕೆ ವರುಣ
ಪೂರ್ವಕ್ಕೆಇಂದ್ರ, ಈಶಾನ್ಯ ಮಹೇಶ
ನೈಋತ್ಯ ನಿಖರತಿ, ಪ್ರವಾಹ ವಾಯು ||

———————————————————-
ನಾಗೇಶ ಮೈಸೂರು
———————————————————-

(ಈ ಮೂವ್ವತ್ತಮೂರು ಕೋಟಿ ದೇವತೆಗಳ ಮತ್ತೊಂದು ವಿಭಿನ್ನ ವ್ಯಾಖ್ಯಾನ ಈ ಕೊಂಡಿಯಲ್ಲಿದೆ.. : http://indiaopines.com/33-crore-gods-hindus-hinduism/)

ದುರಂತ ನಾಯಕಿ ಸೀತೆಯ ಬದುಕು………! Published in today’s Readoo (24.05.2016)


ದುರಂತ ನಾಯಕಿ ಸೀತೆಯ ಬದುಕು………! Published in today’s Readoo (24.05.2016)
______________________________________________________________________________

(ಓದುವ ಮುನ್ನ : ರಾಮನ ಹಬ್ಬದ ಹಾಗೆ ಸೀತೆಗೊಂದು ಹಬ್ಬವನ್ನು ಪ್ರತ್ಯೇಕವಾಗಿ ಆಚರಿಸಿದ ನೆನಪಿಲ್ಲ ನನಗೆ. ಬಹುಷಃ ನಿತ್ಯವೂ ಸ್ಮರಣೆಯಾಗುವ ವ್ಯಕ್ತಿತ್ವಗಳಿಗೆ ದಿನನಿತ್ಯವೂ ಹಬ್ಬವೆಂಬ ಭಾವದಿಂದಿರಬೇಕು. ಆದರ್ಶ ದಾಂಪತ್ಯದ ಜೋಡಿಗೆ ಸದಾ ಉದಾಹರಣೆಯಾಗುವ ಸೀತಾರಾಮರ ಬದುಕಿನಲ್ಲಿ ಸೀತೆಯ ಬದುಕು ಅಷ್ಟೊಂದು ನಿರಾಳವಾಗಿತ್ತೆ ? ಎಂದು ನೋಡಿದರೆ ಹುಟ್ಟುವ ಪ್ರಶ್ನೆಗಳ ಒಂದು ಜಿಜ್ಞಾಸೆ ಈ ಲೇಖನದಲ್ಲಿದೆ – ನಾಗೇಶ ಮೈಸೂರು)

ದುರಂತ ನಾಯಕಿ ಸೀತೆಯ ಬದುಕು………!

00732. ‘ತಾಯ್ಗಂಡನ ತಂದು’ – ತಾಯಿಗೆ ಗಂಡ ಅದೆಂತು ?


00732. ‘ತಾಯ್ಗಂಡನ ತಂದು’ – ತಾಯಿಗೆ ಗಂಡ ಅದೆಂತು ?
___________________________________________

ಚಿಕ್ಕವನಿದ್ದಾಗ ಪ್ರೈಮರೀ ಸ್ಕೂಲಿನಲ್ಲಿದ್ದ ಹೊತ್ತಲ್ಲಿ ನಮಗೊಬ್ಬ ಕೊಡವತಿ ಹೆಡ್ ಮೇಡಮ್ಮಿದ್ದರು. ಅವರು ಮಾತು ಮಾತಿಗೂ ಅವರದೇ ಕೊಡವ ಕನ್ನಡ ಶೈಲಿಯಲ್ಲಿ ‘ತಾಯಿ ಗಂಡನ ತಂದು’ ಅಂತ ಬೈಯುತ್ತಿದ್ದರು. ನನಗೋ ಬೈಗುಳಕಿಂತ ಹೆಚ್ಚಿನ ಕುತೂಹಲ ‘ತಾಯಿಗೆ ಗಂಡ’ ಹೇಗೆ ? ಅಂತ. ಹೇಗಿರಬಹುದು ಅಂತ ಹೊಳೆದದ್ದು ದೊಡ್ಡವನಾದ ಮೇಲೆ ಈ ಕವನ ಬರೆಯುವಾಗ ಅನ್ಕೊಳ್ಳಿ.. ಅದರ ಕುತೂಹಲ ನಿಮಗೂ ಇದ್ದರೆ ಇದೊ ಇಲ್ಲಿದೆ ಆ ಕವನ. ನಿಮಗೆ ಇದರ ಹೊರತು ಬೇರೆ ಅರ್ಥ ಗೊತ್ತಿದ್ದರೆ ಕಾಮೆಂಟಿನಲ್ಲಿ ಹಂಚಿಕೊಳ್ಳಿ…😊


ತಾಯ್ಗಂಡನ ತಂದು..!
_______________________

ಕೊಡವತಿ ಅಜ್ಜಿ ಪ್ರೈಮರಿ ಹೆಡ್ಮೇಡಮ್ಮು
ತಂಟೆ ತಕರಾರಿಗೆ ಅವರದದೆ ರಿದಮ್ಮು
ಅದೆ ತರಕಾರಿಯೂಟ ದಿನವು ತಿಂದು
ಬೈಯೇ ಬೈಗುಳ ‘ತಾಯ್ಗಂಡನ ತಂದು’ ||

ಕೈಯಲ್ಹಿಡಿದೆ ಬೆತ್ತ ಸೆರಗಾಕಡೆ ಸುತ್ತಿತ್ತಾ
ಕೊಡವರ ಶೈಲಿಯ ಮಾತ ಮಲ್ಲಿಗೆ ಗತ್ತ
ಅಳುವ ಮಕ್ಕಳೆಡೆಗೆ ಕೆಂಗಣ್ಣನೆ ಬಿಡುತ
‘ತಾಯಿ ಗಂಡನ ತಂದು’ ಅನ್ನುವರು ಸತತ ||

ಆಗರಿವಿರದ ಕಾಲ ಏನ್ಹಾಗೆಂದರೆ ತಾಳ
ತಾಯಿಗೆ ಮಗ ಗಂಡನ್ಹೇಗೆಂದು ತಳಮಳ
ತಾಯ್ಗಲ್ಲವೆ ಮಗ ಹುಟ್ಟುವುದು ಸಕಲ
ಹುಟ್ಟೋ ಮೊದಲೆ ಪತಿ ಹೇಗೆ ? ಗೊಂದಲ ||

ಹಿಡಿಯಿತು ಸಮಯವೆ ಬಹಳ ನಿಗೂಢ
ಅರ್ಥವ ಬಿಡಿಸಲು ತಿಣುಕಾಡಿಸಿ ಕಾಡ
ಗಂಡನೆನೆ ಅರ್ಥ ಗಂಡನಿರಬೇಕಿಲ್ಲ ದಡ್ಡ
ಗಂಡಾಂತರದ ‘ಗಂಡ’ ತಿಳಿಲಿಲ್ಲವೆ ಭಂಡ ? ||

ತಾಯಿಗಂಡನ ಮಾತು ತಾಯಿಗೆ ಮಿತ್ತು
ಗಂಡಾಂತರ ತಂದೊಡ್ಡುವ ಗಂಡದ ಕುತ್ತು
ಅರಿವಾದಾಗ ನಿರಾಳ ಮನಸಿನ ಮಸ್ತು
ಗಂಡಾಂತರ ತಹ ತಾಕತ್ತಿನ್ಹೆಮ್ಮೆಗೆ ಸುಸ್ತು ||

ಕಾಟ ಕೊಡುವ ಗಂಡು ಮಕ್ಕಳಿಗಿ ಬಿರುದು
ಯಾಕೊ ಅರಿಯೆ ಹೆಣ್ಮಕ್ಕಳಿಗೆ ಬಾರದು
ಕೋಟಲೆ ಕೊಡದವರೆಂದೆನೇ ಅನಿಸಿಕೆಗೆ
ಮಾತಲ್ಹೊಂದದ ಹೊಂದಾಣಿಕೆ ಬೆಸುಗೆಗೆ ||

ತಾಯ್ಗಂಡರೋ ತಲೆ ತಿನ್ನುವ ಪೊಗರೋ
ಬಾಲ್ಯದಾ ಪದ ಕುಣಿತ ಆ ಹೆಣ್ಣ ಚಿಗುರೋ
ನೆನಪಿಸುವ ಚಿತ್ರ ಗೌರವ ರಕ್ಷೆಯ ತರಹ
ಮೂಟೆ ಕಟ್ಟಿದ ಸೆರಗ ಗತ್ತಿನ ಮುಖ ಬರಹ ||

———————————————————-
ನಾಗೇಶ ಮೈಸೂರು
———————————————————-

00731. ಯಕ್ಷಗಾನ – ಕಿನ್ನರ ಲೋಕ


00731. ಯಕ್ಷಗಾನ – ಕಿನ್ನರ ಲೋಕ
_________________________________


(Picture source: https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Yakshagana1.jpg)

ಕನ್ನಡ ನಾಡಿನ ಅಮೋಘ ಕಲಾಪ್ರಕಾರಗಳಲೊಂದಾದ ಯಕ್ಷಗಾನ, ಒಂದರಲ್ಲೆ ಹಲವು ಕಲೆಗಳು ಸಮ್ಮಿಳಿತವಾದ ವಿಶಿಷ್ಟ ಕಲೆ. ಹೆಸರಲ್ಲೆ ಯಕ್ಷ ಲೋಕದ ಗಾನ, ನಾಟ್ಯ, ದೃಶ್ಯಗಳನಿಟ್ಟುಕೊಂಡು ಬರುವ ಈ ಕಿನ್ನರ ಲೋಕ, ಸ್ವತಃ ಕಣ್ಣೆದುರೆ ನೋಡಿದಾಗ ಹುಟ್ಟು ಹಾಕುವ ರೋಮಾಂಚನ ಮಾತಿನಲ್ಹಿಡಿಯದಸದಳ. ಆ ದಿರುಸು, ನಾಟ್ಯ ವೈಭವ, ದೃಶ್ಯ ಕಾವ್ಯತೆ, ಗಾನ ಮಾಧುರ್ಯ, ತಾಳ ಮೇಳಗಳ ಸಾಂಗತ್ಯ ಜತೆಗೆ ಹಾಸ್ಯ ಲೇಪನದ ರಸಾಯನ – ಇದೆಲ್ಲವೂ ಒಂದೇ ಕಲಾ ಪ್ರಕಾರದಲ್ಲಿ ಮಿಳಿತವಾಗಿರುವ ಬಗೆಯನ್ನು ಕಂಡಾಗ, ಇದಕಿಟ್ಟ ಯಕ್ಷಗಾನವೆಂಬ ಹೆಸರು ಸಾರ್ಥಕವೆನಿಸದಿರದು . ಅದರ ಒಂದೆರಡು ತುಣುಕುಗಳನ್ನು ಹಿಡಿದಿಡುವ ಯತ್ನ, ಈ ಜೋಡಿ ಕವನದ್ದು. 2012 ರ ವರ್ಷದ ಕೊನೆಯಲ್ಲಿ ಸಿಂಗಪುರ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದ ಸರಣಿಯ ಹಿನ್ನಲೆಯಲ್ಲಿ ಹುಟ್ಟಿದ ಕಾವ್ಯಗಳಿವು.

ಇದರಲ್ಲಿ ‘ಯಕ್ಷಗಾನದಾಟ’ ಕವನ ಯಕ್ಷಗಾನ ಕಲಾಪ್ರಕಾರದ ಮೇಲ್ವಿವರದ ಅಂಶಗಳತ್ತ ಗಮನ ನೀಡುತ್ತ ಬಾಹ್ಯ ವರ್ಣನೆಯತ್ತ ಗಮನ ನೀಡುವ ಕಾವ್ಯ.

‘ಕಿನ್ನರ ತನ್ಮಯ ಲೋಕ’ ತುಸು ಆಳಕ್ಕೆ ಹೊಕ್ಕು ಆ ಕಲಾವಿದರ ದಿರುಸು, ಬಿರುಸು, ತಾಳ್ಮೆ, ಕಲಾಪ್ರೇಮ, ತನ್ಮಯತೆಗಳತ್ತ ಇಣುಕು ನೋಟವಿಕ್ಕುವ ಯತ್ನ ಮಾಡುತ್ತದೆ.

01. ಯಕ್ಷಗಾನದಾಟ
______________________


ಚಿಕ್ಕ ವಯಸಲಿ ನೋಡಿ ನಿಬ್ಬೆರಗಾಗಿ
ಅಚ್ಚಳಿಯದೆ ನಿಂತ ನೆನಪಿನ ಜೋಗಿ
ಕುಪ್ಪಳಿಸಿ ಕುಣಿದ ರಂಗಮಂಚ ಮಗ್ಗಿ
ನೆಲಕಪ್ಪಳಿಸಿದ್ಹೆಜ್ಜೆಗೆ ಮೈಮನ ಕರಗಿ ||

ಆಗೊಂದು ತೆರೆಸಿ ನಿಜ ಯಕ್ಷ ಲೋಕ
ಕಂಸ ಕಂಡ ಕನಸಂತೆ ಮೈಗೆಣ್ಣೆ ಸಖ
ಮರೆತು ಹೋದರು ಬೇರೆಲ್ಲಾ ನೆನಕ
ನೋಡಿದ್ಯಕ್ಷಗಾನಗಳ ಹಸಿರ ಪುಳಕ ||

ಮೋಹಕವೆಂದರೆ ಯಕ್ಷಗಾನ ನಾಮ
ಹೆಸರಲ್ಲೆ ಪರಲೋಕಕೊಯ್ವ ಸಂಗಮ
ಯಕ್ಷ ಗಂಧರ್ವ ಕಿನ್ನರ ನಾಟ್ಯಸಂಗೀತ
ನಾಟಕಾಭಿನಯ ಎಲ್ಲ ಸೇರಿದ ಭೂತ ||

ಕಥೆ ಮೋಹಕತೆ ದಿರುಸಿನ ಮಾಯೆ
ಭಾಗವತ ಸಂಗೀತ ಗಂಧರ್ವ ಛಾಯೆ
ಗಿರಗಿರನೆ ಗಿರಗಿಟ್ಟಲಿ ಸುತ್ತೆ ಕಣ್ಕತ್ತಲೆ
ದೇವರು ಬಂದಂತೆ ಕುಣಿವರೆ ಮತ್ತಲೆ ||

– ನಾಗೇಶ ಮೈಸೂರು,

(Picture source from: https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:FullPagadeYakshagana.jpg)

02. ಕಿನ್ನರ ತನ್ಮಯ ಲೋಕ!
_______________________


ಗಂಟೆಗಟ್ಟಲೆ ಅವಿರತ ಕುಣಿದಾ ಸತತ
ಆಯಾಸವಾಗದೆ ಕುಣಿದ್ಹಾಡಿದರದ್ಭುತ
ಕಲೆಯ ಮೇಲಣ ಪ್ರೇಮಾಭಿಮಾನವಿತ್ತ
ಮುಡಿಪಿಟ್ಟ ಭಾವೋದ್ರೇಕ ಪ್ರೇರೇಪಿಸಿತ್ತ ||

ಮೂರ್ಕಲೆಗಳ ಸಂಗಮ ನೂರ್ಕಲೆ ಸಮ
ಬಣ್ಣ ಬಣ್ಣದ ದಿರುಸು ಚಿತ್ತಾರಗಳ ಜಮ
ತಲೆಯಿಂದ್ಹಿಡಿದು ಕಾಲ್ತನಕ ಶೃಂಗಾರಕೆ
ತಲೆಗಿಟ್ಟ ಕಿರೀಟ ಚಕ್ರಾಯುಧದ ಸರಕೆ ||

ಅಷ್ಟೊಂದು ಕುಣಿದರು ಬೀಳದ ಶಿರಭಾರ
ಭೂಮಿಯಂತೆ ಸುತ್ತಿದರು ಎದೆಗಟ್ಟಿ ಸರ
ಯಾರಿಗೂ ಹೋಲಿಸಲಾಗದ ಅಪರೂಪ
ತನ್ನಂತಾನೆ ಬೆಳಗ್ಹೊಳೆವಂತೆ ಸ್ವರ್ಣದೀಪ ||

ಈಚೆ ಸಿಂಗಪುರದಲಿ ನಡೆದ ಯಕ್ಷಗಾನ
ನೆನಪಿಸಿತು ಹಳೆ ನೆನಪಿನ ಬೃಂದಾವನ
ಗಣೇಶ ಹಬ್ಬದ ಚಪ್ಪರದಡಿ ಕಿನ್ನರ ಗಾನ
ತುಂಬಿದ ಜನಸಂದಣಿ ನಡುವೆ ಪ್ರಸ್ಥಾನ ||

– ನಾಗೇಶ ಮೈಸೂರು

(Picture source from: https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Demon_Yakshagana.jpg)

00729. ಕಗ್ಗಕೊಂದು ಹಗ್ಗ ಹೊಸೆದು – ಕಗ್ಗದ ಟಿಪ್ಪಣಿ ೮


00729. ಕಗ್ಗಕೊಂದು ಹಗ್ಗ ಹೊಸೆದು – ಕಗ್ಗದ ಟಿಪ್ಪಣಿ ೮
__________________________________

ಕಗ್ಗದ ಟಿಪ್ಪಣಿ ೮, ಇಂದಿನ ರೀಡೂ ಕನ್ನಡದಲ್ಲಿ (೨೦.೦೫.೨೦೧೬)

ಕಗ್ಗಕೊಂದು ಹಗ್ಗ ಹೊಸೆದು…

Readoo Kannada | ರೀಡೂ ಕನ್ನಡ Readoo Kannada | ರೀಡೂ ಕನ್ನಡ ಅಂಕಣ ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ.


ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ.

ಇಂದಿನ ರೀಡೂ ಕನ್ನಡದಲ್ಲಿ ಪ್ರಕಟಿತ ಬರಹ (೧೮.೦೫.೨೦೧೬)

ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..

00716. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)


00716. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)
_____________________________________________
(ಹಿಂದೊಮ್ಮೆ ಬರೆದಿದ್ದ ಬರಹ)


ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು – ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ ಸ್ವಾತ್ಯಂತ್ರದ ಗರಿಯೂ ಬಿಚ್ಚುತ್ತಾ ಹೋಗಿ ಸುಂದರ ಬದುಕಿನ ಆಸೆಯ ಹಕ್ಕಿಯೂ ನಿಧಾನವಾಗಿ ನೆಲದಿಂದ ಮೇಲೆದ್ದು ಹಾರಾಡತೊಡಗುತ್ತದೆ. ಸುಂದರ ಬದುಕು ಒಂದು ಕೈನ ಚಪ್ಪಾಳೆಯಿಂದ ಸಾಧ್ಯವಾಗುವುದಿಲ್ಲವಲ್ಲ? ತಾವಾಗಿ ಹುಡುಕಿದ್ದೊ ಅಥವಾ ಮನೆಯವರಿಂದ ಆರೋಪಿಸಿದ್ದೊ – ಸಾಂಗತ್ಯವೊಂದರ ಜತೆಗಾಗಿ ಮನದಲ್ಲಿ ತಹತಹನೆ, ಕುತೂಹಲ; ಭವಿಷ್ಯದತ್ತ ಆಸೆ ತುಂಬಿದ ಆಶಾವಾದ ಚಿಗುರಿ ಗಿಡವಾಗಿ ಹೂಬಿಡತೊಡಗಿ ಮೈ ಮನವೆಲ್ಲ ಹೂವಂತೆ ಅರಳುವ ಹೊತ್ತು.

ಒಟ್ಟಾರೆ ನಾಟಕೀಯತೆಯ ಜತೆಗೊ ಅಥವಾ ಮಾಮೂಲಿನ ಸದ್ದುಗದ್ದಲವಿಲ್ಲದ ತರದಲ್ಲೊ ಗಂಡು ಹೆಣ್ಣುಗಳೆರಡರ ಜತೆ ಸೇರಿ ಸಂಸಾರವೆನ್ನುವ ಚಕ್ರಕ್ಕೆ ಚಾಲನೆ ಸಿಕ್ಕಾಗ ಹೊಸ ಬದುಕಿನ ಆರಂಭ. ಹೊಸತಲ್ಲಿ ಎಲ್ಲವೂ ಸುಂದರವೆ ಆದರೂ ನಿಜವಾದ ಹೂರಣ ಹೊರ ಬೀಳಲು ಕೊಂಚ ಹೊತ್ತು ಹಿಡಿಯುತ್ತದೆ. ಕೃತಕ ಧನಾತ್ಮಕ ವೇಷಧಾರಣೆಗಳೆಲ್ಲ ಕಳಚಿ, ಸ್ವಾಭಾವಿಕ ಧನ – ಋಣಾತ್ಮಕ ಅಂಶಗಳ ನೈಜ್ಯ ಚಿತ್ರ ಅನಾವರಣೆಗೊಳ್ಳುತ್ತಾ ಹೋಗುತ್ತದೆ. ಈ ಸಮಯವೆ ಬಂಧಗಳನ್ನು ಕಟ್ಟುವ ಅಥವಾ ಉರುಳಿಸುವ ಸಂದಿಗ್ದ ಕಾಲ. ಸುಖಿ- ಅಸುಖಿ ಭವಿತ ಸಂಸಾರದ ನಿಜವಾದ ಬುನಾದಿ ಬೀಳುವುದು ಇಲ್ಲಿಂದಲೆ. ಕೆಲವು ಅದೃಷ್ಟಶಾಲಿಗಳಿಗೆ ಹಾಲು ಜೇನು ಬೆರೆತಂತೆ ಹೊಂದಾಣಿಕೆ ತಂತಾನೆ ಪ್ರಸ್ತುತಗೊಳ್ಳುತ್ತ, ಗಟ್ಟಿಯಾಗುತ್ತ ಹೋಗುತ್ತದೆ. ಮತ್ತೆ ಕೆಲವರಲ್ಲಿ ಸಣ್ಣಪುಟ್ಟ ಏರುಪೇರುಗಳಿದ್ದರೂ, ಹೆಚ್ಚು ಕಡಿಮೆ ಸಹನೀಯ ಶೃತಿಲಯದಲ್ಲಿ ಸಾಗುತ್ತದೆ ಜೀವನ. ಆದರೆ ನಿಜವಾದ ಬಿಕ್ಕಟ್ಟು ಬರುವುದು ಈ ಹೊಂದಾಣಿಕೆ ಕಾಣಿಸದ ಜೋಡಿಗಳಲ್ಲಿ. ಅಲ್ಲಿ ಸಣ್ಣ ಪುಟ್ಟ ವಿಷಯಗಳೆ ದೊಡ್ಡವಾಗಿ ಅಸಹನೀಯ ಹೊಂದಾಣಿಕೆಗಳೊಡನೆ ದಿನದೂಡುವುದೊ ಅಥವಾ ವಾಗ್ಯುದ್ಧ, ವೈರುಧ್ಯಗಳ ನರಕದಲ್ಲಿ ಬಿದ್ದು ಪ್ರತಿದಿನ ಜೀವನದಲ್ಲಿ ಹೆಣಗುತ್ತಲೆ ಸಾಗುವುದೊ ಆಗುತ್ತದೆ. ಸರ್ವ ಸಂಪೂರ್ಣ ಪಕ್ವತೆಯುಳ್ಳ ಸಂಸಾರಗಳು ಇಲ್ಲವೆ ಇಲ್ಲವೆನ್ನುವಷ್ಟು ಅಪರೂಪವಾದರೂ ಸರಾಸರಿ ಲೆಕ್ಕದಲ್ಲಿ ಸಹನೀಯತೆ-ಅಸಹನಿಯತೆಯ ಅಂದಾಜು ಮಟ್ಟದ ಅಕ್ಕಪಕ್ಕದಲ್ಲೆ ಜೋತಾಡುವುದು ಸಾಮಾನ್ಯವಾಗಿ ಕಾಣುವ ಚಿತ್ರಣ.

ಸಹನೀಯ ಹಿತಕರ ವ್ಯಾಪ್ತಿಯೊಳಗಿನ ಪುಣ್ಯವಂತ ಗಂಡಸರ ಯಶಸ್ಸಿನ ಹಿಂದೆ ಆ ಹೆಂಡತಿಯರ ಪಾತ್ರ ಕಂಡೂ ಕಾಣದ ಮಹತ್ತರವೆಂದೆ ಹೇಳಬೇಕು. ಅಂತಹ ಯಶಸ್ವಿ ಗಂಡು ಮನ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪ್ಪಾಯಿ…” ಎಂದು ಹಾಡಿ, ಕುಣಿದು ಕೃತಾರ್ಥರಾಗುತ್ತಾರೆ. ಆದರೆ ಆ ಭಾಗ್ಯವಿಲ್ಲದ ಗಂಡಸರ ಪಾಡೇನು? ಕಾಟ ಕೊಟ್ಟು ಕಾಡುವ ಹೆಂಡತಿಗಳ ಕೈಲಿ ಸಿಕ್ಕಿ ಒದ್ದಾಡುವವರಿಗೆ ಯಾರು ಹಾಡಬೇಕು? (ಅವರಾಗಿಯೆ ಹಾಡುವಂತ ಮನಸ್ಥಿತಿಯಿರುವುದು ಅನುಮಾನ, ಮತ್ತು ಅಪರೂಪ ಬಿಡಿ!).

ಈಗಾಗಾಲೆ ಹಾಡಿದ್ದಾರೊ ಇಲ್ಲವೊ ಗೊತ್ತಿಲ್ಲ – ಬಹುಶಃ ಕೆಲವು ನೊಂದವರು ಬಾತ್ರೂಮುಗಳಲ್ಲಿ ಹಾಡಿಕೊಂಡಿರಬಹುದೊ ಏನೊ. ಏನಾದರಾಗಲಿ ಅಂತಹವರಿಗೆ ಸುಲಭವಾಗಲೆಂದು ಇಲ್ಲೊಂದು ಹಾಡಿದೆ – ಕನ್ನಡನಾಡಲ್ಲಿ ಸುಪ್ರಸಿದ್ಧವಾದ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ..” ಧಾಟಿಯಲ್ಲಿ. ಅದನ್ನು ತಮ್ಮ ಇಂಪಾದ ಕಂಠದಲ್ಲಿ ಹಾಡಿ ಅಮರಗೊಳಿಸಿದ ಮೈಸೂರು ಅನಂತಸ್ವಾಮಿಯವರ ರಾಗದಲ್ಲೆ ಹಾಡಿಕೊಂಡು ಆನಂದಿಸಿ!

ಕೊ.ಕೊ: ಈ ರೀತಿ ಕಾಟ ಕೊಡುವ ಹೆಂಗಸರು ಕನ್ನಡನಾಡಿನವರಲ್ಲ – ಬೇರೆ ಕಾಲ, ದೇಶ, ಪ್ರಾಂತ್ಯಕ್ಕೆ ಸೇರಿದವರು. ನಮ್ಮ ಕನ್ನಡದ ಹೆಣ್ಣುಗಳು ಅಪ್ಪಟ ಬಂಗಾರ. ಆದ ಕಾರಣ ಕನ್ನಡದ ಹೆಣ್ಣು ಮಕ್ಕಳು ಹಾಡನ್ನು ಓದಿ ತಮ್ಮ ಮೇಲೆ ಆರೋಪಿಸಿಕೊಂಡು , ತಪ್ಪಾಗಿ ಅರ್ಥೈಸಿಕೊಂಡು ಕೋಪಿಸಿಕೊಳ್ಳಬಾರದೆಂದು ಕೋರಿಕೆ!

ಕಾಡುವ ಹೆಂಡತಿ ಮನೆಯೊಳಗಿದ್ದರೆ…
_______________________________

ಕಾಡುವ ಹೆಂಡತಿ ಮನೆಯೊಳಗಿದ್ದರೆ
ಕರಗದಿರುವುದೆ ಕೋಟಿ ರುಪಾಯಿ
ಅಂಥ ಹೆಂಡತಿಯೊಬ್ಬಳು ಹತ್ತಿರವಿದ್ದರೆ
ಲೂಟಿ ಶಾಂತಿ, ಮನಸೆ ಬಡಪಾಯಿ || ಕಾಡುವ ||

ದಿನ ಹಗಲೆ ಇರುಳೆ ಯಾರಿಗೆ ಲೆಕ್ಕ
ಸಾಲಂಕೃತ ಕೋಟಲೆ ದುಃಖ
ಒಂದೆ ಸಮ ಜತೆ ಕಾಡುವ ಕಾಟ
ಸಹಿಸಿ ಬಾಳುವುದಲ್ಲ ಹುಡುಗಾಟ || ಕಾಡುವ ||

ಬೇಡವೆಂದರೂ ದೂರ ತಳ್ಳುವಂತಿಲ್ಲ
ಕಟ್ಟಿಕೊಂಡ ಜನ್ಮಗಳ ಪಾಪ
ದೂರ ತಳ್ಳಲೆಲ್ಲಿ ದೂರ ಹೇಳಲೆ ಕಷ್ಟ
ಸಿಡಿದು ಸಿಗಿಯುವ ಘನ ಕೋಪ || ಕಾಡುವ ||

ಛೀಮಾರಿಗೆಲ್ಲ ಏಮಾರೊ ಸರಕಲ್ಲ
ನಿರ್ದಯೆ ನಿರ್ದಾಕ್ಷಿಣ್ಯತೆ ಒಡವೆ
ಗಂಡನೆನ್ನುವ ಪ್ರಾಣಿ ಯಾವ ಲೆಕ್ಕಕಿಲ್ಲ
ಕೇಡ ಮಾಡಲೇಕವನ ಗೊಡವೆ || ಕಾಡುವ ||

ಹಬ್ಬ ಹರಿದಿನ ಹುಣ್ಣಿಮೆ ಹೋಳಿಗೆಗಿಂತ
ಬೈಗುಳದಡಿಗೆಯೆ ಪ್ರಚಂಡ
ಮಾಡದಿದ್ದರು ಸದ್ಯ ಕಾಡದಿದ್ದರೆ ಸಾಕು
ಎಂದು ಮೌನ ತಬ್ಬಿದವ ಗಂಡ || ಕಾಡುವ ||

ಅಪ್ಪಿ ತಪ್ಪಿ ಎಂದೊ ಮಾಡಿದ ಅಡಿಗೆ
ಪಾತ್ರೆ ಪಗಡಿಯೆಲ್ಲ ಚೆಲ್ಲಾಪಿಲ್ಲಿ
ವಾರಗಟ್ಟಲೆ ಪೇರಿಸಿದ ಮುಸುರೆಗಳೆ
ಗಂಡ ತೊಳೆಯದೆ ಆಗದೆ ಖಾಲಿ || ಕಾಡುವ ||

ಮನೆಗೊಬ್ಬಳೆ ಗೃಹಿಣಿ ಬೇರಿಲ್ಲದ ಕಾಟ
ಟೀವಿ ಧಾರವಾಹಿಗಳೆ ಪ್ರಖರ
ಕೂತ ಸೋಫಾವೆ ಹಾಸಿಗೆ, ಮೆತ್ತೆಗೆ ದಿಂಬೆ
ಊಟಕೆ ಹೊತ್ತಾದರು ಒಲೆಗೆ ಚೌರ || ಕಾಡುವ ||

ಇಂಥ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಬದುಕೆಲ್ಲ ಪೂರ್ತಿ ನರಕಾನೆ
ಹುಲಿಯಂತ ಗಂಡು ಇಲಿಯಾಗಿಬಿಡುವ
ಜೀವಂತ ಶವವಾಗುತ ತಾನೆ || ಕಾಡುವ ||

– ನಾಗೇಶ ಮೈಸೂರು
(ಮೂಲ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಮತ್ತು ಕವಿತೆಯ ಕ್ಷಮೆ ಬೇಡುತ್ತ 🙏)

(ಚಿತ್ರಕೃಪೆ : ಉದಯವಾಣಿ ಹಳೆಯ ಪುಟವೊಂದರಿಂದ : http://www.udayavani.com/kannada/news/ಕವನಗಳು/51551/ಹೆಂಡತಿಯ-ಹಾಡು)

00711. ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..


00711. ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ..
____________________________


ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ ಹೆಣ್ಣಿನ ಪ್ರತೀಕವಾಗಿಬಿಡುತ್ತದೆ, ಗಂಡಿನ ಪ್ರತೀಕವಾಗಿ ಹಿಡಿಶಾಪ ಹಾಕಿಸಿಕೊಳ್ಳುವ ಬಡಪಾಯಿ ಪಾಪಾ ದುಂಬಿ!

ಈ ಜೋಡಿ ಕವನಗಳಲ್ಲಿ ಮೊದಲನೆಯದು ‘ಹೂವಲ್ಲೂ ಹೆಣ್ಣು ಗಂಡಿದೆ, ಗೊತ್ತಾ?’ ಈ ವಿಸ್ಮಯವನ್ನು ಬಿಟ್ಟಗಣ್ಣಿಂದ ನೋಡುತ್ತಾ, ನಮ್ಮ ಅರ್ಧನಾರೀಶ್ವರನಂತೆ ಒಂದೆ ಹೂವಿನೊಳಗೆ ಗಂಡು ಭಾಗ ಮತ್ತು ಹೆಣ್ಣು ಭಾಗ ಎರಡೂ ಇರುವ ವಿಚಿತ್ರವನ್ನು ಎತ್ತಿ ತೋರಿಸುತ್ತದೆ. ತಂತಾನೆ ಪರಾಗ ಸ್ಪರ್ಶ ಮಾಡಿಕೊಂಡು , ತಾನೆ ಸಂತತಿಯ ಸೃಷ್ಟಿಸುವ ಹರಿಕಾರನಾಗುವ ಹೂವಿಗೆ ಮತ್ತೊಂದು ಲಿಂಗವನ್ಹುಡುಕುವ ಪ್ರಮೇಯವೆ ಇಲ್ಲದೆ ಎಲ್ಲಾ ಕೂತಲ್ಲೆ ನಡೆಯುವ ಸರಾಗ ಬಂಧ, ಮತ್ತದರ ವರ್ಣನೆ ಈ ಪದ್ಯ.

ಎರಡನೆ ಕವನ ‘ಹೂವೊಳಗಿನ ಪುಲ್ಲಿಂಗ, ಸ್ತ್ರೀಲಿಂಗ’ ಇರುವ ವೈಚಿತ್ರದ ಕುರಿತೆ ಚಿತ್ರಿಸಿದರೂ, ಇಲ್ಲಿ ಒಂದೆ ಮರದಲಿರುವ ಪುಲ್ಲಿಂಗ, ಸ್ತ್ರೀಲಿಂಗಗದ ಹೂಗಳು, ಒಂದೆ ಕೊಂಬೆಯಲ್ಲಿರುವ ಸಜಾತಿಯ ಯಾ ವಿಜಾತಿಯ ಗುಂಪುಗಳು ಅಥವಾ ಒಂದೆ ಬಳ್ಳಿಯಲ್ಲಿರುವ ಗಂಡು ಮತ್ತು ಹೆಣ್ಣು ಹೂಗಳ ಚಿತ್ರಣ; ಆದರೆ ಒಂದೆ ಹೂವಿನೊಳಗಿರುವ ಅರ್ಧನಾರೀಶ್ವರ ಹೂ ಮಾತ್ರ ಈ ಗುಂಪಲಿ ಬೆರೆಯುವುದಿಲ್ಲ. ಅದು ಮೊದಲ ಪದ್ಯದಲ್ಲಿ ಮಾತ್ರ ನಿರೂಪಿತ.

ಹೂವಲ್ಲೂ ಹೆಣ್ಣು ಗಂಡಿದೆ ಗೊತ್ತ?
____________________________


ಅಕ್ಕ ನಿನಗೊಂದು ವಿಷಯ ಗೊತ್ತ
ಹೂವಲ್ಲೂ ಗಂಡು ಹೆಣ್ಣಿರುವ ಸತ್ಯ ?
ಒಂದೆ ಗಿಡದಲ್ಲೆ ಎರಡಿರುವ ದೃಶ್ಯ..
ಒಂದೆ ಹೂವಲ್ಲೆ ಇಬ್ಬರಿರೊ ಲಾಸ್ಯ ?||

ಅಚ್ಚರಿ ಪೆಚ್ಚು ಕುರಿ ಏಕೇಳು ಕಣ್ಣುರಿ ?
ಸೃಷ್ಟಿ ವೈಚಿತ್ರ ಎಷ್ಟೊ ಜಾಣ ಮರಿ
ಹೂವೆಂದರೆ ಹೆಣ್ಣೆನ್ನೆ ಅದರ ತಪ್ಪಲ್ಲ
ಗಂಡುವ್ವ ಗಮನಿಸದ ಬೆಪ್ಪೆ ನಾವೆಲ್ಲ ||

ಹೆಣ್ಣ ರೂಪವನಕ್ಕ ಹೂವಾಗಿಸಿ ನಕ್ಕ
ಕವಿ ಸಾರ್ವಭೌಮನೇನಲ್ಲ ಸರಿ ಪಕ್ಕ
ಗಂಡ್ಹೂವ್ವ ನೋಡಿದ ಕವಿಯತ್ರಿ ದಕ್ಕ
ಕವಿಯ ನಡುವೆ ಕವಿಯತ್ರಿಗೆ ಚೊಕ್ಕ ||

ಅರ್ಧನಾರಿಶ್ವರನಕ್ಕ ಹಂಚಿ ತನು ತಕ್ಕ
ನಡೆಸಿ ಸುಖ ಸಂಸಾರ ಸಂತತಿ ದಕ್ಕ
ಸಂಯೋಗ ಪರಾಗ ಸ್ವಕೀಯ ಸ್ಪರ್ಶ
ತನ್ನೊಡಲಲೆ ತನ್ನ ರೇಣು ಗರ್ಭ ಹರ್ಷ ||

ಪ್ರೀತಿ ಅಪರಿಮಿತವೆನ್ನಿ ಅಸಂಕರವೆನ್ನಿ
ತನ್ನ ಪಾಡಿಗೆ ತಾನೆ ವಂಶೋತ್ಪತ್ತಿ ದನಿ
ಒಂದಾಗಿ ಬೆರೆತ ಜೀವಗಳುದಾಹರಣೆ
ಬೇರೆಲ್ಲಿ ಸಿಕ್ಕೀತು ಗಂಢಭೇರುಂಡ ಕಣೆ ||

——————————————————————
ನಾಗೇಶ ಮೈಸೂರು
——————————————————————

ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ
_______________________________


ಅಕ್ಕ ಈ ಗಿಡ ಬರಿ ಗಂಡು, ಬರಿ ಹೆಣ್ಣು
ಆದರು ನೋಡ್ಹೇಗೆ ಒಂದೆ ಬಳ್ಳಿ ಗಿಣ್ಣು
ಒಂದೆ ತಾಯ್ಬಳ್ಳಿ ತಾಳಿ ಕಟ್ಟಿದ ಬಂಧ
ಇದು ಕೂಡ ಸ್ವಕೀಯ-ಸ್ಪರ್ಶ ಸಂಬಂಧ ||

ಇಲ್ಲು ಮರೆತುಬಿಡಕ್ಕ ಸಹಜಾತ ಸಖ್ಯ
ವಂಶ ಪರಂಪರೆ ಮುಂದುವರಿಕೆ ಮುಖ್ಯ
ಗಾಳಿ ಚಿಟ್ಟೆ ದುಂಬಿ ಪತಂಗ ಸಂವಾಹಕ
ಜೋಡಿಸಿಟ್ಟಿಹನ್ಹೀಗೆ ಜಗಕೆ ನಿರ್ಮಾಪಕ ||

ಅಲ್ನೋಡು ನಮ್ಮಂತೆ ಬೇರೆ ಗಿಡದ್ಹೂವು
ಗಂಡಲ್ಲಿ ಹೆಣ್ಣಲ್ಲಿ ಚೆಲ್ಲಾಡೀ ಚದುರಿದವು
ಗಾಳಿ ನೀರಿಂದ್ಹಿಡಿದು ಚಿಟ್ಟೆ ಜುಟ್ಟಾಡಿಸಿ
ಬೆಳೆಸೆ ವಂಶವಾಹಿ ವೈವಿಧ್ಯ ಚೌಕಾಸಿ ||

ಅಕ್ಕ ವಿಚಿತ್ರ ನೋಡು ಸಂತತಿ ಕಾವು
ಈ ಗಿಡದ ತುಂಬೇಕೆ ಬರಿ ಗಂಡು ಹೂವು
ಅಲ್ಲೊಂದಿಲ್ಲೊಂದರಂತೆ ಅರಳಿದ ಹೆಣ್ಣು
ಮಿಕ್ಕೆಲ್ಲ ಕೊಂಬೆ ಗೊಂಚಲು ಗಂಡ ಕಣ್ಣು ||

ಕೆಲ ಎಲೆಗಳೇ ಹೂವಾಗುವ ವಿಸ್ಮ್ಮಯ
ಬಣ್ಣಗಳೆ ಬದುಕಾಗುವ ಜೀವನ ಮಾಯ
ಹೆಣ್ಣು ಹೂವಷ್ಟೆ ಸಂತಾನ ಭಾಗ್ಯ ನಿಸರ್ಗ
ಮತ್ತೆಲ್ಲಾಕರ್ಷಣೆ ಹಿಡಿದಿಡಿಸೆ ಸಂಸರ್ಗ ||

——————————————————————
ನಾಗೇಶ ಮೈಸೂರು
——————————————————————

00706. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ( readoo Kannada on 12.05.2016)


00706. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ( readoo Kannada on 12.05.2016)

ಕಗ್ಗಕೊಂದು-ಹಗ್ಗ-ಹೊಸೆದು-4

ಕಗ್ಗಕೊಂದು ಹಗ್ಗ ಹೊಸೆದು…

00701. ಜನ್ಮಾಂತರ ನಂಬಿಕೆ ವೈಚಿತ್ರ – 02


00701. ಜನ್ಮಾಂತರ ನಂಬಿಕೆ ವೈಚಿತ್ರ – 02
_________________________________

ಜನ್ಮಾಂತರದ ನಂಬಿಕೆ ನಮ್ಮಲ್ಲಿ ಅಂತರ್ಗತವಾಗಿ ಬಂದ ಭಾವ. ನಂಬಲಿ, ಬಿಡಲಿ ಯಾವುದಾದರೊಂದು ಬಗೆಯಲ್ಲಿ ಎಲ್ಲರನ್ನು ಕಟ್ಟಿಡುವ ಬಂಧ ಜಾಲ. ನಂಬಿದವರಿಗೆ ನಿಮಿತ್ತರೆಂಬ ನಿರಾಳತೆ, ನಂಬದವರಿಗೆ ಡೋಂಗಿ ಬುರುಡೆ ಕಥೆ. ಎರಡು ಅಲ್ಲದ ನಡುವಿನವರಿಗೆ ಒಂದೆಡೆ ವಿಸ್ಮಯ, ಮತ್ತೊಂದೆಡೆ ಅಪನಂಬಿಕೆ. ಈ ಕೂತೂಹಲದ ಮನ ಶೋಧವೆ ಈ ಕವಿತೆಯ ಸಾರ. ಜನ್ಮಾಂತರ ನಂಟಿದ್ದರೂ ನೆನಪೆ ಇರದ ವಿಸ್ಮಯವೊಂದು ಕಡೆ, ಎಲ್ಲೊ ಏನೊ ನೆನಪಿನ ಹಾಳೆಯೊದ್ದ ಅನುಭೂತಿ ಮತ್ತೊಂದೆಡೆ. ಆ ಎರಡರ ನಡುವೆ ಕಟ್ಟಿ ಕೊಡುವ ಬಾಳಿನ, ವಿಸ್ಮೃತಿಯ ನಡುಗಡ್ಡೆ ..


ಜನ್ಮಾಂತರ ವೈಚಿತ್ರ
_____________________
(ಜನ್ಮಾಂತರ ನಂಬಿಕೆ ವೈಚಿತ್ರ – 02)

ಬೆನ್ಹಿಂದೆ ಜನ್ಮಗಳ ಕಂತೆ
ಇದ್ದರೇಕೊ ಅಪರಿಚಿತತೆ
ತಿಲದಷ್ಟು ಅರಿವಿರದೆಲ್ಲ
ತೃಣ ಮಾತ್ರವು ಬರದಲ್ಲ ||

ಸಂಘಟನೆಗಳದೆ ಪ್ರವರ
ಬದುಕುಪವಾಸ ಸವಾರ
ರುಚಿಗೆ ತಕ್ಕ ಉಪ್ಪುಖಾರ
ಹಾಕುವನಾರೋ ಚೋರ ||

ಎಂಥಾ ಮೋಸದ ಅಡಿಗೆ
ಪಾಕದ್ಹೆಸರು ನಮ ನಮಗೆ
ಉಳಿದೆಲ್ಲ ಅವ ಕಟ್ಟಿ ಗಡಿಗೆ
ಹಣೆಬರಹದ್ಹೆಸರಡಿಗಡಿಗೆ ||

ಬಿತ್ತೆಲ್ಲ ಜಾತಕಫಲ ಮೂಲ
ಒಟ್ಟಿರಲಿ ಸುಭೀಕ್ಷ ಅಕಾಲ
ಸಂಪಾದನೆ ಸಂಗ್ರಹ ಸಕಲ
ಮರುಜನ್ಮ ಆಗದಿರೆ ಸಫಲ ||

ತಧ್ಭಾವದ ತನ್ಮಯ ಲೋಕ
ಜಗಕಟ್ಟಿದ ಜಾಣ ನಿಯಾಮಕ
ನಿಮಿತ್ತ ಮಾತ್ರಕೆ ನಿರ್ಧಾರಣ
ಬದಲಿಸಲವನಾ ವ್ಯಾಕರಣ ||

———————————————————-
ನಾಗೇಶ ಮೈಸೂರು
———————————————————–

(Picture source from: https://en.m.wikipedia.org/wiki/File:Reincarnation2.jpg)

00700. ಜನ್ಮಾಂತರ ನಂಬಿಕೆ ವೈಚಿತ್ರ – 01


00700. ಜನ್ಮಾಂತರ ನಂಬಿಕೆ ವೈಚಿತ್ರ – 01
______________________________

ಜನ್ಮಾಂತರದ ನಂಬಿಕೆ ನಮ್ಮಲ್ಲಿ ಅಂತರ್ಗತವಾಗಿ ಬಂದ ಭಾವ. ನಂಬಲಿ, ಬಿಡಲಿ ಯಾವುದಾದರೊಂದು ಬಗೆಯಲ್ಲಿ ಎಲ್ಲರನ್ನು ಕಟ್ಟಿಡುವ ಬಂಧ ಜಾಲ. ನಂಬಿದವರಿಗೆ ನಿಮಿತ್ತರೆಂಬ ನಿರಾಳತೆ, ನಂಬದವರಿಗೆ ಡೋಂಗಿ ಬುರುಡೆ ಕಥೆ. ಎರಡು ಅಲ್ಲದ ನಡುವಿನವರಿಗೆ ಒಂದೆಡೆ ವಿಸ್ಮಯ, ಮತ್ತೊಂದೆಡೆ ಅಪನಂಬಿಕೆ. ಈ ಕೂತೂಹಲದ ಮನ ಶೋಧವೆ ಈ ಕವಿತೆಯ ಸಾರ. ಜನ್ಮಾಂತರ ನಂಟಿದ್ದರೂ ನೆನಪೆ ಇರದ ವಿಸ್ಮಯವೊಂದು ಕಡೆ, ಎಲ್ಲೊ ಏನೊ ನೆನಪಿನ ಹಾಳೆಯೊದ್ದ ಅನುಭೂತಿ ಮತ್ತೊಂದೆಡೆ. ಆ ಎರಡರ ನಡುವೆ ಕಟ್ಟಿ ಕೊಡುವ ಬಾಳಿನ, ವಿಸ್ಮೃತಿಯ ನಡುಗಡ್ಡೆ ..


ಜನ್ಮಾಂತರ ನಂಬಿಕೆ
_______________________
(ಜನ್ಮಾಂತರ ನಂಬಿಕೆ ವೈಚಿತ್ರ – 01)

ಬೃಹನ್ಮಿತ್ರ ಸಹ ಕಳತ್ರ
ಸದ್ಯೋಜಾತ ಕದ ಸಚಿತ್ರ
ನಾನಜರಾಮರ ಭೂ ತರ
ಮನದಿಂಗಿತ ನಗೆ ವಿಚಿತ್ರ ||

ಜಾತಾಭಿಜಾತದೀ ಜನ್ಮ
ಏಳೇಳು ಜನುಮ ಕರ್ಮ
ಅರಿತವರಾರೋ ಮರ್ಮ
ನೆನಪಿರದೆ ಸವೆಸಿ ಮಮ ||

ಜನ್ಮದ ವಾಸನೆ ಅಂಟು
ಕಟ್ಟುವುದಂತೆ ತಾ ಗಂಟು
ಹೊತ್ತು ಬಗಲಿನ ಚೀಲ
ಮುಂದಿನ ಜನ್ಮದ ಕಾಲ ||

ಮಾಡಿದ ಪಾಪ-ಪುಣ್ಯ ಫಲ
ಸರಿಯಿದ್ದರೆ ಜೀವ ಸಫಲ
ಹುಟ್ಟುವ ಮಾನವ ಜನ್ಮ
ಪಾಪಕೆ ತಿಗಣೆಯ ಕರ್ಮ ||

ಸಂಗಾತಿಸಿ ಸಹಧರ್ಮಿಣಿ
ಹಿಂಬಾಲ-ಕರುವಿನ ಸರಣಿ
ಸರಿಯಿದ್ದರೆ ಜೀವಕೆ ಗಣಿ
ಬೆಸವಿದ್ದರೆ ಬಾಳೆ ಸಗಣಿ ||

———————————————————-
ನಾಗೇಶ ಮೈಸೂರು
———————————————————–

(Picture source: https://en.m.wikipedia.org/wiki/File:Reincarnation_AS.jpg)