01187. ಲಕೋಟೆ – ದವತಿ – ಟೋಪಿ – ನೀರಡಿಕೆ


01187. ಲಕೋಟೆ – ದವತಿ – ಟೋಪಿ – ನೀರಡಿಕೆ

ಸಖಿ, ಯುಗಾದಿ ಪತ್ರವೊಂದ ಬರೆದಿಟ್ಟೆ ಲಕೋಟೆಯೊಳಗೆ
ಧೂರ್ತ ದವತಿಗು ಈರ್ಷೆ, ಜಾರಿ ಬಿತ್ತೇ ಚೆಲ್ಲುತ ಕಪ್ಪು ಮಸಿ
ಅಂದುಕೊಂಡಿದ್ದಾಗಬಿಡದೆ, ಟೋಪಿ ಹಾಕೊ ಅನಿರೀಕ್ಷಿತಗಳು
ನೆನಪ ಮೆಲುಕಿಗೆ ನೀರಡಿಕೆ, ಮರಳಿ ಯತ್ನ ಬೇವಲ್ಲಿ ಬೆಲ್ಲಕೆ !

– ನಾಗೇಶ ಮೈಸೂರು
೨೮.೦೩.೨೦೧೭

01186. ೩ಕೆ ಯಿಂದ ಬ್ಲಾಗ್ ಪರಿಚಯ


01186. ೩ಕೆ ಯಿಂದ ಬ್ಲಾಗ್ ಪರಿಚಯ

೩ಕೆ ಬಳಗದ ವತಿಯಿಂದ ನಿವೇದಿತಾ ಚಿರಂತನರವರು ನನ್ನ ಬ್ಲಾಗನ್ನು ಪರಿಚಯಿಸುತ್ತ ನುಡಿದಿರುವ ನಲ್ನುಡಿಗಳಿಗೆ ಹೃತ್ಪೂರ್ವಕ ನಮನಗಳೊಂದಿಗೆ…

01185. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨: ಅವರವರ ಭಾವಕ್ಕೆ ಅವರವರ ಭಕುತಿಗೆ


01185. ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೫೨
ಅವರವರ ಭಾವಕ್ಕೆ ಅವರವರ ಭಕುತಿಗೆ
http://kannada.readoo.in/2017/03/ಅವರವರ-ಭಾವಕ್ಕೆ-ಅವರವರ-ಭಕುತ#

01184. ಕೊಳ – ಕಿರುಕುಳ – ಪಟ್ಟು – ಜಿಲೇಬಿ


01184. ಕೊಳ – ಕಿರುಕುಳ – ಪಟ್ಟು – ಜಿಲೇಬಿ


ಕೂತಳು ಮಂಕಾಗಿ ಲಲನೆ, ಕೊಳದ ಮುಂದೆ – ಇನಿತಿಲ್ಲ ಚಲನೆ
ಚಲಿಪ ಮತ್ಸ ನಳನಳಿಪ ಹೂ, ತಂಗಾಳಿಯೂ ಕಾಡಿ ಕಿರುಕುಳ
ವಿದಾಯದ ಯಾತನೆ ಮೊನೆ, ಬಿಡದೆ ಚುಚ್ಚಿ ಹಿಡಿದಂತೆ ಪಟ್ಟು
ಜಿಲೇಬಿಯಂತ ನೆನಪೆಲ್ಲವ ಕಬಳಿಸಿ, ಬೇವುಣಿಸಿ ಬಿಕ್ಕುವ ಕ್ಷಣ !

– ನಾಗೇಶ ಮೈಸೂರು
೨೬.೦೩.೨೦೧೭
(Picture source : internet / social media)

#chouchoupadi

01183. ತೆರೆದ – ಗುಡಿ – ಹರಿದ – ಹಣ್ಣು


01183. ತೆರೆದ – ಗುಡಿ – ಹರಿದ – ಹಣ್ಣು

ಕರ ಪಿಡಿವ ಮುನ್ನ ಕಾಡಿ ಕೆಣಕಿದ, ಮನ ಮುಟ್ಟಿ ಹೃದಯದ ಕದ ತೆರೆದ
ಎದೆಗೂಡ ಗುಡಿಯಲಿ, ಕೊಡು ಚಾಕರಿ ಪ್ರೇಮದ ಪೂಜಾರಿ ಆಗುವೆನೆಂದ
ಬಗೆಹರಿಯದ ಗೊಂದಲ ಒಗಟಿನರಿವೆ ಹರಿದ, ಸುರಿಸುರಿದು ಪ್ರೀತಿಯ ಮಳೆ
ಮಾತು ಮಾತಲೆ ಮಾಯಾಜಾಲ, ಹೂ ಕಾಯಾಗಿ ಒಳಗೀಗ ತಾಜಾ ಹಣ್ಣಿನ ಬೆಳೆ !


– ನಾಗೇಶ ಮೈಸೂರು
(Picture source: internet / online )
(chouchoupadi)

01182. ಜಲ ದಿನ ಮನ…


01182. ಜಲ ದಿನ ಮನ…
____________________


(೦೧)
ಜಲಲ ಜಲ
ಸುಲಲಿತ ಅಮಲ
– ಅಮೃತ ಧಾರೆ

(೦೨)
ಜಲ ದೇವತೆ
ಜನನಿ ಜನ್ಮ ಭೂಮಿ
– ತುಂಬಿದ ಕೊಡ

(೦೩)
ಧರಣಿ ಪಾತ್ರೆ
ಹಿಡಿದಿಟ್ಟಿಹ ನೀರೆ
– ಪ್ರಕೃತಿ ಸೀರೆ

(೦೪)
ನೆಲ ಬಿರುಕು
ಬಿಕ್ಕಳಿಕೆ ಕುರುಹು
– ಬರ ಸಿಡಿಲು

(೦೫)
ಬರ ಬಾರದು
ಬಂದರೆ ಗಂಗಾಜಲ
– ಪುಣ್ಯದ ನೆಲ

(೦೬)
ತಿಕ್ಕಲು ಹನಿ
ಮಗ್ಗಲು ಬದಲಿಸಿ
– ತಬ್ಬಿ ಸ್ಖಲನ

(೦೭)
ಬೆವರ ಹನಿ
ಲವಣ ನೆಲ ಗರ್ಭ
– ಅಂತರ್ಜಲದೆ

(೦೮)
ನೀರಿಲ್ಲದಿರೆ
ನಿರ್ವೀರ್ಯ ಪುರುಷತ್ವ
– ಪ್ರಕೃತಿ ಬಂಜೆ

(೦೯)
ಜಲ ದಿನದೆ
ಮಲಿನವಾಗಿಸದೆ
– ಬಳಸೆ ಹಿತ

(೧೦)
ನಾಗರೀಕತೆ
ಹುಟ್ಟಿ ಬೆಳೆಯೆ ಜಲ
– ಅನಾಗರೀಕ

– ನಾಗೇಶ ಮೈಸೂರು
೨೨.೦೩.೨೦೧೭
(Picture source: Creative Commons)

01181. ಪದ-ಪದಾರ್ಥ


01181. ಪದ-ಪದಾರ್ಥ

ವಿಶ್ವ ಕವಿತಾ ದಿನ : ಪದ-ದ್ವಂದ್ವಾರ್ಥದ ಬಿನ್ನಾಣ…

ಉದಾ: ಅಡಿಗೆ = ಅಡಿಗೆ ಮಾಡುವುದು, ಕೆಳಗೆ (ಅಡಿಗೆರಗುವುದು)😊

ಪದ-ಪದಾರ್ಥ
__________________


ಅಡಿಗೆ
ನಿನ್ನಡಿಗೆ
ಪಾದದಡಿಗೆ
ಅಡಿಗಡಿಗೆ ಶರಣು !

ತರ್ಕಾರಿ
ತರ ತರ್ಕಾರಿ
ತಾಜಾ ತರ್ಕಾರಿ
ಸಾರ ರುಚಿ ಸಗಟು !

ನಾಡಿಗೆ
ತನ್ನಾಡಿಗೆ
ಗೌರವದುಡುಗೆ
ಬಿಸಿ ನೆತ್ತರ ತೊಡುಗೆ !

ಬರಲು
ಕಸ ಬರಲು
ಬೇಕು ಕಸಬರಲು
ಸ್ವಚ್ಛ ಕಸ ಗುಡಿಸಲು !

ಗುಡಿಸಲು
ಸಾಕು ಗುಡಿಸಲು
ನೆಮ್ಮದಿ ಬದುಕಲು
ಚಿಂತೆಯ ಗುಡಿಸಲು !

ಕಾಡು
ಬಿಡದೆ ಕಾಡು
ಅಪ್ಪುತ ಕಾಪಾಡು
ಸೊಂಪಾಗುವುದ ನೋಡು !

ಮತ್ತು
ಮತ್ತೊಂದಿತ್ತು
ಮತ್ತೇರಿಸುತಿತ್ತು
ಮಾತೆಲ್ಲ ಮರೆಸಿತ್ತು !

ಮುತ್ತು
ಬಿತ್ತಿದ ಹೊತ್ತು
ಫಳಫಳ ಹೊಳೆದಿತ್ತು
– ಕಣ್ಣಿನ ಸಂಪತ್ತು !

– ನಾಗೇಶ ಮೈಸೂರು
೨೧.೦೩.೨೦೧೭
(Picture source: Creative Commons)