01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)


01676. ಲಲಿತ ಪ್ರಬಂಧ : ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

________________________________________________

ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ ಬಾರಿಯಾದರೂ ಸ್ವಲ್ಪ ‘ಜೋರಾಗಿ’ ಆಚರಿಸಿ ಪಾರ್ಟಿ ಕೊಡಿಸಲಿ ಎಂಬುದು ಅವನಾಸೆ. ನನಗೊ ಹುಟ್ಟಿದಾಗಿನಿಂದ ಇಲ್ಲಿಯತನಕ ಹುಟ್ಟಿದ ಹಬ್ಬ ಆಚರಿಸಿಕೊಂಡ ನೆನಪೆ ಇಲ್ಲ ಅನ್ನುವುದು ಬೇರೆ ಮಾತು ಬಿಡಿ – ಪ್ರಾಯಶಃ ನನಗೆ ಗೊತ್ತಾಗದ ವಯಸಿನಲ್ಲಿ ಹೆತ್ತವರು ಮಾಡಿಕೊಂಡ ‘ನಾಮಕರಣದ’ ಆಚರಣೆಯನ್ನು ಹೊರತುಪಡಿಸಿದರೆ! ನಾವು ಬೆಳೆದ ವಾತಾವರಣ ಎಷ್ಟು ಸೊಗಡಿನದಾಗಿತ್ತು ಎಂದರೆ, ಹುಟ್ಟಿದ ದಿನವೆನ್ನುವುದೆ ಯಾರಿಗು ನೆನಪಿನಲ್ಲಿರುತ್ತಿರಲಿಲ್ಲ. ಹೈಸ್ಕೂಲಿನ ಮಟ್ಟಕ್ಕೆ ಬಂದು ‘ಹ್ಯಾಪಿ ಬರ್ತಡೆ ಟು ಯೂ’ ಎಂದು ಇಂಗ್ಲೀಷಿನಲ್ಲಿ ಹೇಳಿ ಎಲ್ಲರ ಮುಂದೆ ‘ಗ್ರೇಟ್’ ಅನಿಸಿಕೊಳ್ಳಬಹುದು ಎಂದು ಅರಿವಾಗುವತನಕ ಅದರ ಹೆಚ್ಚುಗಾರಿಕೆಯ ಕಡೆ ಗಮನವೆ ಹರಿದಿರಲಿಲ್ಲ ಎನ್ನಬೇಕು… ಹಾಗೆ ಗ್ರೀಟು ಮಾಡುತ್ತಲೆ ಹುಡುಗಿಯರಿಗೊಂದು ‘ಗ್ರೀಟಿಂಗ್ ಕಾರ್ಡ್’ ಕೊಡಬಹುದಲ್ಲವ? ಎನ್ನುವ ಜ್ಞಾನೋದಯವಾಗುವ ವಯಸ್ಸಲ್ಲಿ ಈ ಹುಟ್ಟುಹಬ್ಬದ ತಿಳುವಳಿಕೆಯೂ ಸ್ವಲ್ಪ ಹೆಚ್ಚಾಗಿದ್ದು ನಿಜವೆ ಆದರು, ಅದು ಹುಟ್ಟುಹಬ್ಬದ ಸ್ವಯಂ ಆಚರಣೆಯ ಮಟ್ಟಕ್ಕಾಗಲಿ ಅಥವಾ ಇತರರಿಗೆ ಗ್ರೀಟಿಂಗಿಗೆ ಕಾಸು ಖರ್ಚು ಮಾಡಿ ‘ಹ್ಯಾಪಿ ಬರ್ತಡೆ’ ಹೇಳುವಂತಹ ಧಾರಾಳತನದ ಮಟ್ಟಕ್ಕಾಗಲಿ ಬೆಳೆಯಲಿಲ್ಲ. ಆದರೆ ಆ ರೀತಿ ಗ್ರೀಟಿಂಗ್ ಕಾರ್ಡ್ ಕೊಡುವುದನ್ನೆ ಜೀವನದ ಧನ್ಯತೆಯ ಪರಮಗುರಿ ಎಂದುಕೊಂಡಿದ್ದ ಗೆಳೆಯರು ಸುತ್ತಮುತ್ತ ಬೇಕಾದಷ್ಟಿದ್ದರು. ಬರಿ ಹುಟ್ಟುಹಬ್ಬಕ್ಕೇನು? ಹೊಸವರ್ಷ, ಸಂಕ್ರಾಂತಿ, ದೀಪಾವಳಿ ಎಂದೆಲ್ಲ ನೆಪ ಹುಡುಕಿ ಗ್ರೀಟಿಂಗ್ ಖರೀದಿಸಲು ಅವರಲ್ಲಿ ಸಾಕಾಗುವಷ್ಟು ದುಡ್ಡಿರುತ್ತಿದ್ದರು, ಅದರಲ್ಲಿ ಏನು ಬರೆಯಬೇಕೆಂದು ಮಾತ್ರ ಗೊತ್ತಾಗದೆ ತಿಣುಕಾಡುತ್ತಿದ್ದರು. ಈ ಹನುಮಾಚಾರಿಯೂ ಆ ಗುಂಪಿನಲ್ಲೊಬ್ಬನಾಗಿದ್ದು, ನನಗೆ ಇದ್ದಕ್ಕಿದ್ದಂತೆ ಪರಮಾಪ್ತ ಗೆಳೆಯನಾಗಲಿಕ್ಕೆ ಇದು ಒಂದು ಮುಖ್ಯ ಕಾರಣವಾಗಿತ್ತು. ಗ್ರೀಟಿಂಗ್ ಸೀಸನ್ ಬರುತ್ತಿದ್ದಂತೆಯೆ ಎಲ್ಲಿದ್ದರೂ ಸರಿ ದೊಡ್ಡದೊಂದು ಕಂತೆ ಹಿಡಿದು ಬಂದುಬಿಡುತ್ತಿದ್ದ ‘ಗುರೂ, ಏನಾದರೂ ಬರೆದುಕೊಡು..ತುಂಬಾ ಅರ್ಜೆಂಟು’ ಎಂದು ದುಂಬಾಲು ಬೀಳುತ್ತ. ಅವನ ಅರ್ಜೆಂಟು ಯಾವ ತರದ್ದೆಂದು ಗೊತ್ತಿದ್ದರು ನನ್ನ ಕಲಾ ಪ್ರದರ್ಶನಕ್ಕೆ ಸಿಗುತ್ತಿದ್ದ ಅವಕಾಶಗಳೆಲ್ಲ ಅಂತದ್ದೆ ಆಗಿದ್ದ ಕಾರಣ, ನಾನೂ ಏನೊ ಒಂದು ಕವನವನ್ನೊ, ಕೋಟೇಷನ್ನೊ ಗೀಚಿ ಕಳಿಸುವುದು ನಡೆದೆ ಇತ್ತು ಅನ್ನಿ.

ಹನುಮಾಚಾರಿ ‘ಹುಟ್ಟುಹಬ್ಬದ ಪಾರ್ಟಿ’ ಎಂದಾಗ ಇವೆಲ್ಲ ಹಳೆಯ ಸರಕೆಲ್ಲ ಮತ್ತೆ ನೆನಪಾಗಿತ್ತು – ‘ಎಷ್ಟು ಬೆಳೆದುಬಿಟ್ಟಿದ್ದಾನೆ ಹನುಮಾಚಾರಿ’ ಎಂಬುದನ್ನು ಎತ್ತಿ ತೋರಿಸುವ ಹಾಗೆ. ನಲವತ್ತೈದರ ಗಡಿ ದಾಟಿದ ಮೇಲೆ ಬೆಳೆಯಬೇಕಾದ್ದೆ ಬಿಡಿ, ಇನ್ನು ಬೆಳೆಯದಿದ್ದರೆ ಬೆಳೆಯುವುದಾದರೂ ಯಾವಾಗ? ಅಂದಹಾಗೆ, ನಾನು ಬೆಳೆದಿದ್ದಾನೆ ಎಂದು ಹೇಳಿದ್ದು ಈಗ ‘ಗ್ರೀಟಿಂಗಿನಲ್ಲಿ ಏನಾದರೂ ಬರೆದುಕೊಡು’ ಎಂದು ದುಂಬಾಲು ಬೀಳದಷ್ಟು ಬೆಳೆದಿದ್ದಾನೆ ಎನ್ನುವರ್ಥದಲ್ಲಿ… ಆದರು ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಅವನಿಗೆ ಭಯಂಕರ ಕೋಪವಂತೂ ಇದೆ. ಯಾಕೆಂದರೆ ಅವನ ಪ್ರೆಂಡ್ ಸರ್ಕಲ್ಲಿನಲ್ಲಿ ಹುಟ್ಟು ಹಬ್ಬದ ಆಚರಣೆಯೆಂದರೆ ‘ಸಕತ್ ಗುಂಡು ಪಾರ್ಟಿ’ ಎಂದೆ ಅರ್ಥ..! ಹುಟ್ಟುಹಬ್ಬದ ದಿನ ‘ವಿಷ್’ ಮಾಡಿಸಿಕೊಂಡ ತಪ್ಪಿಗೆ ಇಡೀ ಗುಂಪನ್ನು ಹೊರಗಿನ ರೆಸ್ಟೋರೆಂಟಿಗೊ, ಬಾರಿಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ತಿನಿಸಿ, ಕುಡಿಸಿ ಸಾವಿರಗಟ್ಟಲೆಯ ಬಿಲ್ಲನ್ನು ಭರಿಸಬೇಕು. ನಾನು ಆ ಚಕ್ರವ್ಯೂಹಕ್ಕೆ ಸಿಕ್ಕಿಕೊಳ್ಳುತ್ತಿಲ್ಲವಲ್ಲ ಎಂಬ ದೊಡ್ಡ ಸಂಕಟ ಅವನಿಗೆ. ‘ಕನಿಷ್ಠ ಅವನೊಬ್ಬನನ್ನಾದರೂ ಕರೆದುಕೊಂಡು ಹೋಗಿ ಗುಂಡು ಹಾಕಿಸಬಹುದಲ್ಲ?’ ಎಂಬ ಪರಮ ಖೇದವಿದೆ ಅವನಿಗೆ. ನಾನು ಕುಡಿತವನ್ನು ಮುಟ್ಟುವುದಿರಲಿ, ಮೂಸಿಯೂ ನೋಡುವುದಿಲ್ಲವೆಂದು ಗೊತ್ತಿದ್ದರು ‘ಅದಕ್ಕೇನಂತೆ, ನೀವು ಕೊಡಿಸಿ, ನಾನು ಕುಡಿಯುತ್ತೇನೆ..ಒಬ್ಬರಾದರೂ ಎಂಜಾಯ್ ಮಾಡಬಹುದಲ್ಲಾ’ ಎನ್ನುತ್ತಾನೆ. ಆದರೆ ಅವನ ಮನದಾಳದಲ್ಲಿರುವುದು ‘ಹೀಗಾದರೂ ಸ್ವಲ್ಪ ಪರ್ಸು ಬಿಚ್ಚಲಿ ಇಂತಹ ಶೋಕಿ ಐಟಮ್ಮುಗಳ ಮೇಲೆ’ ಅಂದಷ್ಟೆ.. ‘ಸರಿ ಅದೆಷ್ಟಾಗುವುದೊ ಹೇಳಿಬಿಡು, ದುಡ್ಡು ಕೊಡುತ್ತೇನೆ, ಹೋಗಿ ನೀನೊಬ್ಬನೆ ಕುಡಿದುಕೊ’ ಎನ್ನುತ್ತೇನೆ ನಾನು. ಇದುವರೆವಿಗು ನಾವು ಒಂದು ಪಾರ್ಟಿಗೂ ಹೋಗಿಲ್ಲವೆನ್ನುವುದು ಎಷ್ಟು ಸತ್ಯವೊ, ಅವನೂ ಒಂದು ಬಾರಿಯೂ ನನ್ನ ‘ದುಡ್ಡು ಕೊಡುವ ಆಫರನ್ನು’ ಒಪ್ಪಿಕೊಂಡಿಲ್ಲವೆನ್ನುವುದು ಅಷ್ಟೆ ಸತ್ಯ..!

ಆದರೆ ಈ ಬಾರಿ ಹನುಮಾಚಾರಿ ಹುಟ್ಟುಹಬ್ಬವನ್ನು ನೆನಪಿಸಿದಾಗ ಮಾತ್ರ ಯಾಕೊ ಸ್ವಲ್ಪ’ಚುಳ್’ ಅಂದ ಹಾಗಾಯ್ತು. ಅವನೇನೊ ರೂಢಿಗತವಾಗಿ, ಅಭ್ಯಾಸದಂತೆ ನೆನಪಿಸಿದ್ದನೆ ಹೊರತು ಬಲವಂತದಿಂದ ಪಾರ್ಟಿ ಮಾಡಿಸಿಕೊಳ್ಳುವ ಉತ್ಸಾಹ, ಹುಮ್ಮಸ್ಸೆಲ್ಲ ಅರ್ಧ ಖಾಲಿಯಾಗಿಹೋಗಿತ್ತು – ಅದರಲ್ಲೂ ಇತ್ತಿಚೆಗೆ ಡಯಾಬಿಟೀಸ್ ಅದೂ ಇದೂ ಎಂದು ಕೆಲವು ‘ಟಿಪಿಕಲ್’ ಕಾಯಿಲೆಗಳ ಶುಭಾರಂಭವಾದ ಮೇಲೆ. ನನಗು ಸ್ವಲ್ಪ ಕಸಿವಿಸಿಯಾದದ್ದು ಪಾರ್ಟಿ ಕೊಡಿಸಲಾಗದ ಕಾರಣಕ್ಕಿಂತ ಹೆಚ್ಚು, ‘ಅಯ್ಯಯ್ಯೊ …ನಲವತ್ತರ ಗಡಿಯನ್ನು ದಾಟಿ ಐವತ್ತರತ್ತ ಹೋಗಿ ಬಿಡುತ್ತಿದೆಯಲ್ಲ ಜೀವನದ ಬಂಡಿ ?’ ಎಂಬ ಭೀತಿಯೊ, ಕಳವಳವೊ ಅಥವಾ ಹೇಳಿಕೊಳ್ಳಲಾಗದ ಇನ್ನಾವುದೊ ಅನುಭೂತಿಯ ಪ್ರೇರಣೆಯಿಂದ ಉದ್ಭವಿಸಿದ್ದು. ನಲವತ್ತರ ಮೆಟ್ಟಿಲು ದಾಟುತ್ತಿದ್ದಂತೆ ಎಲ್ಲೊ ಸಣ್ಣ ಸ್ತರದಲ್ಲಿ ಈ ಅನಿಸಿಕೆ ಆರಂಭವಾಗುತ್ತದಾದರು ಅದು ನಿಜಕ್ಕು ತನ್ನ ಗುರುತ್ವವನ್ನು ಹೆಚ್ಚಿಸಿಕೊಂಡ ಮಹತ್ವದ ಸಂಗತಿಯಾಗುವುದು ನಲವತ್ತೈದರ ಆಸುಪಾಸಿನಲೆಲ್ಲೊ ಎಂದೆ ಹೇಳಬೇಕು. ಅದರಲ್ಲೂ ಐವತ್ತರ ಗಡಿಯ ಹತ್ತಿರ ಹತ್ತಿರ ಮುಟ್ಟಿಬಿಡುತ್ತಿದ್ದರಂತೂ ಹೇಳಿಕೊಳ್ಳಲಾಗದ ಅಸಾಧಾರಣ ಕಳವಳವೆ ಮನೆ ಮಾಡಿಕೊಂಡುಬಿಡುತ್ತದೆ. ಆಯಸ್ಸಿನ ಅರ್ಧ ಗಡಿ ದಾಟಿ ಆ ಬದಿಗೆ ಕಾಲಿಕ್ಕುತ್ತಿದ್ದೇವಲ್ಲ ಎನ್ನುವ ಭಾವನೆಯೆ ಏನೇನೊ ಕಸಿವಿಸಿ, ಆತಂಕಗಳ ಹೊರೆಯಾಗಿ ಕಾಡಲು ಆರಂಭಿಸುವ ಸಂಕ್ರಮಣದ ಹೊತ್ತು ಅದು. ಆದರೆ ನಿಜಕ್ಕೂ ಅದು ಅಷ್ಟೊಂದು ಗಲಿಬಿಲಿಗೊಳ್ಳುವ , ಗಾಬರಿಪಡುವ ವಯಸ್ಸೆ ಎಂದು ಪ್ರಶ್ನಿಸಿಕೊಳ್ಳಲು ಹೊರಟರೆ ಸಿಗುವ ಉತ್ತರವೂ ಅಷ್ಟೆ ತಳಮಳ , ಸಂಶಯ, ಗೊಂದಲಗಳ ಗೂಡಾಗಿ ಕಾಡುವ ಸಂಕ್ರಮಣದ ಸಂಧಿ ಕಾಲವದು ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ನಲವತ್ತರ ಮೆಟ್ಟಿಲು ಹತ್ತುವ ಮೊದಲೆ ತಲೆಯೆಲ್ಲ ಬೋಡಾಗಿ ‘ಬೊಕ್ಕ ತಲೆ’ಯಾಗಿ ಹೋದಾಗ ಗಾಬರಿಯಿಂದಲೆ ಓಡಿಬಂದಿದ್ದ ಹನುಮಾಚಾರಿಯನ್ನು ಛೇಡಿಸಿ, ರೇಗಿಸಿದ್ದರೂ ಒಳಗೊಳಗೆ ‘ಏನಪ್ಪ ಇದು ? ನನಗೂ ಏನಾದರೂ ಅವನಂತೆಯೆ ಆಗಲು ಶುರುವಾಯಿತೆ, ಏನು ಕಥೆ ? ಆಗಲೆ ಕೂದಲಿಲ್ಲದ ವಯಸಾದ ಮುದುಕನಂತೆ ಕಾಣಿಸಿಬಿಡುತ್ತೇನೆಯೆ?’ ಎಂಬ ಆತಂಕದಲ್ಲಿ ಓಡಿ ಹೋಗಿ ಗುಟ್ಟಾಗಿ ಕನ್ನಡಿ ನೋಡಿಕೊಂಡಿದ್ದು ಉಂಟು..!

ಹನುಮಾಚಾರಿ ಹಾಗೆ ಅಳುಮೊಗ ಹೊತ್ತುಕೊಂಡು ಓಡಿಬಂದಾಗ ಅವನೇನೂ ಇನ್ನು ಪೂರ್ತಿ ಬೊಕ್ಕತಲೆಯವನಾಗಿರಲಿಲ್ಲವೆನ್ನಿ. ಮಧ್ಯದ ಬಯಲು ಮತ್ತು ಮುಂದಲೆಯ ಕಡೆಯೆಲ್ಲ ಪಾಲಿಷ್ ಹೊಡೆದಂತೆ ನುಣ್ಣಗೆ ಮಿರುಗುತ್ತಿದ್ದರು ತಲೆಯ ಎರಡು ಬದಿಗಳಲ್ಲಿ ಮತ್ತು ಹಿಂದಲೆಯಲ್ಲಿ ಇನ್ನು ಸಾಕಷ್ಟು ಮಿಕ್ಕಿತ್ತು. ಅದನ್ನು ನೋಡುತ್ತಲೆ, ‘ ನೀನೇನೆ ಹೇಳು ಆಚಾರಿ, ನಿಜ ಹೇಳಬೇಕಾದರೆ ನೀನು ನಿನ್ನ ಮಿಕ್ಕಿರುವ ಕೂದಲನ್ನು ಬೋಳಿಸಿ ಪೂರ್ತಿ ‘ಬೊಕ್ಕ’ವಾಗಿಸಿಕೊಂಡರೆ ವಾಸಿ..’ ಎಂದಿದ್ದೆ. ಅವನು ಅಳು ಮೊಗದಲ್ಲೆ, ‘ಯಾಕೆ ಸಾರ್ ನೀವು ತಲೆ ತಿನ್ನುತ್ತೀರಾ ? ಮೊದಲೆ ಅವಳು ತಲೆ ತಿಂದು ತಿಂದೆ ಈ ಗತಿ ತಂದಿಟ್ಟಿದ್ದಾಳೆ, ಈಗ ನೀವು ಬೇರೆ ಸೇರಿಕೊಂಡು ಕಾಲು ಎಳೆಯುತ್ತಿರಲ್ಲಾ..?’ ಎಂದಿದ್ದ. ನಾನು ಅವನಿಗಿಂತ ಎರಡು ಮೂರು ವರ್ಷಕ್ಕೆ ದೊಡ್ಡವನು ಅನ್ನುವುದಕ್ಕಿಂತ ಗ್ರೀಟಿಂಗಿನ ದಿನಗಳಲ್ಲಿ ಅಂಟಿಸಿಕೊಂಡಿದ್ದ ಆ ‘ ಸಾರ್..’ ಎನ್ನುವ ಪಟ್ಟ , ಒಂದೆ ಕಡೆ ಕೆಲಸಕ್ಕೆ ಸೇರಿದ ಮೇಲೆ ‘ಹಿರಿಯ ಆಫೀಸರ’ ಎಂಬ ಮರ್ಯಾದೆಯ ಜತೆ ಸೇರಿ ಶಾಶ್ವತವಾಗಿಹೋಗಿತ್ತು. ಅದೇ ರೀತಿ ಕಾಲೇಜು ದಿನಗಳಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ‘ ಆಚಾರಿ’ ನಾಮಧೇಯವೂ ಹನುಮಾಚಾರಿಗೆ ಪ್ರಿಯವಾದ, ಆತ್ಮೀಯತೆಯ ಸಂಕೇತವಾಗಿ ಉಳಿದುಕೊಂಡುಬಿಟ್ಟಿತ್ತು. ಇಬ್ಬರಿಗೂ ಅದು ಅಭ್ಯಾಸವಾಗಿ ಅದೊಂದು ‘ಫಾರ್ಮ್ಯಾಲಿಟಿ’ಯಾಗಿ ಬದಲಾಗಿ ಹೋಗಿತ್ತೆ ವಿನಃ ಅದರ ಬಗ್ಗೆ ಇಬ್ಬರಿಗೂ ಸೀರಿಯಸ್ ನೆಸ್ ಇರಲಿಲ್ಲ… ‘ ಹಾಗಲ್ಲಾ ಆಚಾರಿ, ಈಚೆಗೊಂದು ಲೇಖನ ಓದುತ್ತಿದ್ದೆ, ಬಾಲ್ಡ್ ಹೆಡೆಡ್ ವ್ಯಕ್ತಿಗಳ ಕುರಿತು ಬರೆದಿದ್ದು.. ಅಲ್ಲೊಂದು ಕಡೆ ಬರೆದಿತ್ತು – ‘ಗಾಡ್ ಕ್ರೀಯೇಟೆಡ್ ಸೋ ಫಿವ್ ಪರ್ಫೆಕ್ಟ್ ಹೆಡ್ಸ್, ದಿ ರೆಸ್ಟ್ ಹೀ ಕವರ್ಡ್ ವಿದ್ ಹೇರ..(ದೇವರು ಕೇವಲ ಎಷ್ಟು ಪರಿಪಕ್ವ ತಲೆಗಳನ್ನು ಸೃಷ್ಟಿಸಿದನೆಂದರೆ, ಮಿಕ್ಕ ತಲೆಗಳ ಹುಳುಕು ಮುಚ್ಚಲೆಂದೆ ಅವನ್ನು ಕೂದಲಡಿ ಮರೆಯಾಗಿಸಿಬಿಟ್ಟ ) ‘ ಅಂತಿತ್ತು.. ಅದು ನೆನಪಾಗಿ ಹಾಗೆಂದೆ ಅಷ್ಟೆ..’ ಎಂದೆ. ಅದೊಂದು ಜೋಕ್ ಎಂದು ಮಾತ್ರ ಅವನಿಗೆ ಬಿಡಿಸಿ ಹೇಳಿರಲಿಲ್ಲವಾದರು, ಮಿಕ್ಕೆಲ್ಲದ್ದಕ್ಕಿಂತ ಅವನ ತಲೆಯನ್ನು ‘ಪರ್ಫೆಕ್ಟ್ ಹೆಡ್ಡಿಗೆ’ ಹೋಲಿಸಿದ್ದು ಅವನಿಗೆ ಬಲು ಖುಷಿಯೆನಿಸಿ ‘ಹೌದಾ..ಸಾರ್..? ಹಾಗಾದರೆ ಅದಕ್ಕೇನಂತೆ? ಮಾಡಿಸೋಣ ಬಿಡಿ ‘ ಎಂದು ಬೊಕ್ಕ ತಲೆಯ ಕುರಿತಾಗಿ ಬಂದಿದ್ದ ಚಿಂತೆಯ ವಿಷಯವನ್ನೆ ಮರೆತು ನಗುತ್ತ ಹೋಗಿದ್ದ…!

ಅವನಿಗೇನೊ ಹಾಸ್ಯ ಮಾಡಿ ಏಮಾರಿಸಿ ಓಡಿಸಿದ್ದರು ಮುಂದಿನ ಕೆಲವು ದಿನಗಳಲ್ಲೆ ಅದೆ ಭೀತಿ ಮತ್ತೊಂದು ರೂಪದಲ್ಲಿ ಧುತ್ತನೆ ನನ್ನೆದುರೆ ಅವತರಿಸಿಕೊಂಡಿತ್ತು ಬಿಳಿಕೂದಲ ರೂಪದಲ್ಲಿ..! ಅದುವರೆವಿಗೂ ‘ಒಂದೂ ಬಿಳಿ ಕೂದಲಿಲ್ಲದ ಅಚ್ಚ ತರುಣನಂತೆ’ ಎಂದೆಲ್ಲ ‘ಶಾಭಾಷ್ ಗಿರಿ’ ಗಿಟ್ಟಿಸಿಕೊಳ್ಳುತ್ತಿದ್ದ ನಾನು, ಇದೆಲ್ಲಿಂದ ಬಂದವಪ್ಪ ಈ ಬಿಳಿ ಜಿರಲೆಗಳು ಎಂದು ಗಾಬರಿ ಪಡುವಂತಾಗಿತ್ತು… ಮೊದಮೊದಲು ಅಲ್ಲೊಂದು ಇಲ್ಲೊಂದು ಕಂಡಾಗ, ಹೇಗೊ ಪೊದೆಯಂತಿದ್ದ ಕಪ್ಪು ಕೂದಲಿನ ಮಧ್ಯೆ ಅವಿಸಿಟ್ಟರೂ, ಅವುಗಳು ಪಾರ್ಥೇನಿಯಮ್ಮಿನಂತೆ ಹೆಚ್ಚುಹೆಚ್ಚಾಗಿ ಚಿಗಿತು ಎಲ್ಲೆಂದರಲ್ಲಿ ಒಂದೊಂದೆ ಬೆಳ್ಳಿರೇಖೆಯಂತೆ ಕಾಣಿಸಿಕೊಳ್ಳತೊಡಗಿದಾಗ ಇನ್ನು ಬೇರೆ ದಾರಿಯಿಲ್ಲವೆಂದರಿವಾಗಿ ‘ಡೈಯ್’ ನ ಮೊರೆ ಹೋಗಬೇಕಾಗಿ ಬಂದಿತ್ತು – ತಾರುಣ್ಯದ ಅದೇ ‘ಲುಕ್ಕನ್ನು’ ಉಳಿಸಿಕೊಳ್ಳಲು. ಆದರೆ ಅದೆ ನೊರೆಗೂದಲಿನ ಬಿಳಿ ಬಂಗಾರ ಮೊದಲೆ ಕುರುಚಲಂತಿದ್ದ ಗಡ್ಡ, ಮೀಸೆಗಳಲ್ಲು ನಡುನಡುವೆ ಪ್ರಕಟವಾಗಿ ತನ್ನ ಪ್ರತಾಪ ತೋರಿಸಲಾರಂಭಿಸಿದಾಗ, ಅವಕ್ಕೊಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿ, ಅವನ್ನು ಬೆಳೆಯುವ ಮುನ್ನವೆ ತರಿದು ‘ಕ್ಲೀನ್ ಫೇಸ್ ಶೇವ್’ ಮಾಡಿಕೊಳ್ಳುವ ಹೊಸ ಪರಿಪಾಠ ಆರಂಭಿಸಬೇಕಾಗಿ ಬಂದಿತ್ತು. ಹಾಗೆ ಬಂದ ಹೊಸದರಲ್ಲೆ ಕೆಲವು ಸಹೋದ್ಯೋಗಿಗಳು, ‘ ಸಾರ್ ಗಡ್ಡ ಮೀಸೆ ಇರದಿದ್ರೆ ತುಂಬಾ ಯಂಗ್ ಆಗಿ ಕಾಣುತ್ತೀರ.. ನಾರ್ತ್ ಇಂಡಿಯನ್ ತರ ಕಾಣುತ್ತೀರ..’ ಎಂದೆಲ್ಲ ಕಾಮೆಂಟ್ ಕೊಟ್ಟ ಮೇಲೆ ಆ ಅವತಾರವೆ ಪರ್ಮನೆಂಟ್ ಆಗಿಹೋಗಿತ್ತು. ಈಗ ತಲೆಗೆ ಡೈ ಹಾಕುವುದು ನಿಲ್ಲಿಸಿಯಾಗಿದೆ ಎನ್ನಿ, ಅರ್ಧಕ್ಕರ್ಧ ಬೊಕ್ಕತಲೆಯಾಗಿ ಖಾಲಿಯಾದ ಮೇಲೆ… ಆದರು ಮುನ್ನೆಚ್ಚರಿಕೆಯಾಗಿ ತಲೆಗೂದಲನ್ನು ತೀರಾ ತುಂಡಾಗಿ ಕತ್ತರಿಸಿಕೊಳ್ಳುತ್ತೇನೆ, ಯಾವುದೂ ಎದ್ದು ಕಾಣದ ಹಾಗೆ. ನನ್ನ ಚೌರದ ಪಟ್ಟಾಭಿಷೇಕಕ್ಕೆ ಹೋದಾಗಲೆಲ್ಲ, ನನ್ನ ನಾಪಿತನಿಗೆ ತುಂಬ ಸುಲಭದ ಕೆಲಸ. ನಾನು ‘ನಂಬರ್ ಮೂರು’ ಎನ್ನುವುದಕ್ಕೂ ಕಾಯದೆ ತನ್ನ ಕೆಲಸ ಆರಂಭಿಸಿಬಿಡುತ್ತಾನೆ… ಒಂದು ನಿಮಿಷದ ಮಿಷಿನ್ ಕಟ್, ಅರ್ಧ ನಿಮಿಷದ ಕತ್ತರಿ ಸೇವೆ, ಕೊನೆಯರ್ಧ ನಿಮಿಷ ಬ್ಲೇಡಿನ ಕೆರೆತ, ಒಟ್ಟು ಎರಡು ನಿಮಿಷಕ್ಕೆ ಐವತ್ತು ರೂಪಾಯಿ ಸಂದಾಯವಾದಾಗ ಅವನಿಗೆ ‘ಪ್ರತಿ ಗಿರಾಕಿಯೂ ಹೀಗೆ ಇರಬಾರದೆ’ ಅನಿಸಿದ್ದರೆ ಆಶ್ಚರ್ಯವೇನೂ ಇಲ್ಲ…! ನನಗೊ ದುಡ್ಡು ಕೀಳಬೇಕೆಂದು ಕತ್ತರಿಯಾಡಿಸುವಂತೆ ನಟಿಸುತ್ತ ಹೆಚ್ಚು ಸಮಯ ವ್ಯಯಿಸದೆ ಎರಡೆ ನಿಮಿಷದಲ್ಲಿ ಮುಗಿಸಿಬಿಡುತ್ತಾನಲ್ಲ ಎಂದು ಅಭಿಮಾನ (ದುಡ್ಡು ಮಾತ್ರ ಮಾಮೂಲಿ ಚಾರ್ಜೆ ಕಿತ್ತುಕೊಂಡರು..) ! ಒಟ್ಟಾರೆ ಈ ನಲವತ್ತರ ಆಸುಪಾಸಿನ ಕಾಟ ಯಾರನ್ನು ಬಿಟ್ಟಿದ್ದಲ್ಲ ಬಿಡಿ – ಕೆಲವರಿಗೆ ಸ್ವಲ್ಪ ಮೊದಲು, ಕೆಲವರಿಗೆ ನಂತರ ಅನ್ನುವ ವ್ಯತ್ಯಾಸ ಬಿಟ್ಟರೆ.

ಈ ವಯಸಿನ ಗಡಿ ಮತ್ತದರ ಅಂಚಿನಲ್ಲಿ ಅಡ್ಡಾಡುತ್ತಿದ್ದಂತೆ ಎದುರಾಗುವ ‘ಶಾಕ್’ ಗಳು ಒಂದೂ ಎರಡಲ್ಲ. ಅಲ್ಲಿಯತನಕ, ಮೊನ್ನೆ ಮೊನ್ನೆಯವರೆಗೆ ‘ಸಾರ್’ ನ ಜತೆ ಹೆಸರಿಡಿದು ಕರೆಯುತ್ತಿದ್ದವರೆಲ್ಲ ಏಕಾಏಕಿ ‘ಅಂಕಲ್’ ಎಂದು ಶುರು ಹಚ್ಚಿಕೊಂಡು ಬಿಡುತ್ತಾರೆ… ಜತೆಗೆ ಆಗಾಗೆ ಅಪ್ಡೇಟ್ ಮಾಡುವ ‘ಬಯೋಡೇಟ’, ‘ರೆಸ್ಯೂಮು’ಗಳಲ್ಲಿ ‘ಅಬ್ಬಬ್ಬಾ ಇಷ್ಟೊಂದು ವಯಸಾಗಿ ಹೋಯಿತೆ? ಇನ್ನು ಮುಂದೆಯೂ ಸುಲಭದಲ್ಲಿ ಕೆಲಸ ಸಿಗುವುದೊ ಅಥವಾ ತೀರಾ ವಯಸಾಗುವ ಮೊದಲೆ ಬೇರೆ ಕಡೆ ಬದಲಾಯಿಸಿಕೊಂಡುಬಿಡುವುದು ಒಳಿತ?’ ಎಂಬೆಲ್ಲ ದ್ವಂದ್ವಗಳು ಕಾಡತೊಡಗುತ್ತವೆ. ಅದರಲ್ಲೂ ಅಲ್ಲಿಯತನಕ ಕೆಲಸ ಬದಲಿಸದೆ ಒಂದೆ ಕಡೆ, ಒಂದೆ ಕಂಪನಿಯಲ್ಲಿ ದುಡಿಯುತ್ತಿದ್ದವರಿಗಂತು ಅದೊಂದು ದೊಡ್ಡ ಧರ್ಮಯುದ್ಧವೆ ಸರಿ. ಕೆಲಸ ಬದಲಿಸಿ ಅನುಭವವಿರದೆ ಇಂಟರ್ವ್ಯೂ ಅಟೆಂಡು ಮಾಡಲು ಅನುಭವವಿಲ್ಲದ ಪರಿಸ್ಥಿತಿ..! ಅಲ್ಲಿಯತನಕ ಬೇರೆಯವರಿಗೆ ಇಂಟರ್ವ್ಯೂ ಮಾಡಿ ಅಭ್ಯಾಸವಿರುತ್ತದೆಯೆ ಹೊರತು ತಾವೆ ಹೋಗಿ ‘ಹಾಟ್ ಸೀಟಿನಲ್ಲಿ’ ಕೂತು ಬಂದ ಅನುಭವವಿರುವುದಿಲ್ಲವಲ್ಲ? ಜತೆಗೆ ಇಷ್ಟು ವರ್ಷ ಕಳೆದ ಕಂಪನಿಯನ್ನು ಬಿಟ್ಟು ಹೋಗಲಾಗದ ‘ಪತ್ನಿ’ ವ್ಯಾಮೋಹ ಬೇರೆ.. ಅದೆಷ್ಟೆ ಜಗಳ, ಅಸಹನೆ, ಅತೃಪ್ತಿಗಳಿರಲಿ ಕಟ್ಟಿಕೊಂಡ ಮೇಲೆ ಸತಿ ಶಿರೋಮಣಿಯ ಜತೆ ಏಗುವುದಿಲ್ಲವೆ ? ಎನ್ನುವ ಪರಮ ತತ್ವವನ್ನು ಕೆಲಸಕ್ಕೂ ಹೊಂದಿಸಿಕೊಂಡು ಮುಂದುವರೆವ ಅಸೀಮ ನಿಷ್ಠೆ ಹಾಗು ಭಕ್ತಿ. ಆದರೂ ‘ಮುಂದೆ ಏನೊ ಎಂತೊ?’ ಎಂಬ ಚಿಂತೆ ಕಾಡದೆ ಬಿಡುವುದಿಲ್ಲ. ‘ಹೇಗಿದ್ದರೂ ಕೆಲಸ ಬಿಟ್ಟು ಹೋಗುವುದಿಲ್ಲ, ಪ್ರಮೋಶನ್ ಕೊಡದಿದ್ದರೂ ನಡೆಯುತ್ತದೆ’ ಎಂದೆ ತನ್ನನ್ನು ನಿರ್ಲಕ್ಷಿಸಿದ್ದಾರೇನೊ ಎನ್ನುವ ಅನುಮಾನ ಕಾಡುತ್ತಲೆ ಇರುತ್ತದೆ. ‘ಯಾರು ಯಾರೆಲ್ಲ ಬಂದು ಬಡ್ತಿ ಪಡೆದು ಮುಂದೆ ಹೋದರೂ ನಾನು ಮಾತ್ರ ಇಲ್ಲೆ ಕೊಳೆಯುತ್ತಿರುವೆನಲ್ಲ, ಕತ್ತೆಯ ಹಾಗೆ ದುಡಿಯುತ್ತಿದ್ದರು?’ ಎಂಬ ಸಿಟ್ಟು, ಆಕ್ರೋಶ ರೊಚ್ಚಿಗೆಬ್ಬಿಸಿದಾಗ ಏನಾದರೂ ಸರಿ, ಈ ಬಾರಿ ಬೇರೆ ಕಡೆ ಅಪ್ಲೈ ಮಾಡಿ ನೋಡಿಬಿಡಲೆಬೇಕು ಎಂಬ ಹುಮ್ಮಸ್ಸೆದ್ದರೂ, ಒಂದು ರೆಸ್ಯುಮ್ ಸಿದ್ದಮಾಡುವಷ್ಟರಲ್ಲಿ ಅರ್ಧ ಉತ್ಸಾಹವೆಲ್ಲ ಇಳಿದುಹೋಗಿರುತ್ತದೆ. ಎರಡು ಪೇಜೆಂದುಕೊಂಡು ಹೊರಟಿದ್ದು ಹತ್ತಾಗಿ, ಅದನ್ನು ಎರಡಕ್ಕಿಳಿಸಲಾಗದೆ ಹಾಗೂ ಹೀಗೂ ಒದ್ದಾಡಿ ಎಂಟಾಗಿಸಿದರೂ ತೃಪ್ತಿಯಾಗದೆ ಯಾರದಾದರು ರೆಸ್ಯೂಮ್ ತಂದು ಫಾರ್ಮ್ಯಾಟ್ ಕಾಪಿ ಮಾಡಿಯಾದರು ಚಿಕ್ಕದಾಗಿಸಬೇಕು ಎಂದುಕೊಂಡು ಎಲ್ಲೊ ಮೂಲೆಯಲ್ಲಿ ಸೇವಾಗಿಸಿ ಕೂತುಬಿಟ್ಟರೆ ಆ ಫೈಲನ್ನು ಮತ್ತೆ ತೆಗೆಯುವುದು ಮುಂದಿನ ಬಾರಿಯ ಪ್ರಮೋಶನ್ ಮಿಸ್ಸಾದಾಗಲೆ…

ಹಾಗೆಯೆ ಒದ್ದಾಡುತ್ತಲೆ ನೋಡು ನೋಡುತ್ತಿದ್ದಂತೆ ಐವತ್ತರ ಆಚೀಚಿನ ಗಡಿ ತಲುಪುತ್ತಿದ್ದ ಹಾಗೆಯೆ, ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಮನವರಿಕೆಯಾಗತೊಡಗುತ್ತದೆ. ಮೊದಲೆ ಸಿಗುವುದು ಕಷ್ಟ, ಸಿಕ್ಕರೂ ಈಗಿರುವ ಸಂಬಳ, ಸ್ಥಾನಮಾನದ ಆಸುಪಾಸಿನಲಷ್ಟೆ ಸಿಗುವುದು ಅಂದಮೇಲೆ ಹೊಸ ಜಾಗದಲ್ಲಿ ಹೋಗಿ ಒದ್ದಾಡುವುದೇಕೆ ? ಹೇಗೂ ಇಷ್ಟು ವರ್ಷ ಇಲ್ಲೆ ಏಗಿದ್ದಾಯ್ತು..ಇನ್ನುಳಿದ ಹತ್ತು ಹದಿನೈದು ವರ್ಷ ಇಲ್ಲೆ ಹೇಗೊ ಕಳೆದುಬಿಟ್ಟರಾಯ್ತು ಅನ್ನುವ ಸ್ಮಶಾನ ವೈರಾಗ್ಯ ಆರಂಭವಾಗುವ ಹೊತ್ತಿಗೆ, ಸ್ವಂತಕ್ಕಿಂತ ಹೆಚ್ಚಾಗಿ ವಯಸಿಗೆ ಬರುತ್ತಿರುವ ಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆಗಳ ಚಿಂತೆ ಆರಂಭವಾಗಿರುವುದು ಒಂದು ಕಾರಣವೆನ್ನಬಹುದು. ಆದರೆ ಹಾಗೆಂದು ‘ಶಸ್ತ್ರಸನ್ಯಾಸ’ ತೊಟ್ಟ ಮಾತ್ರಕ್ಕೆ ಆ ಕೆಲಸಕ್ಕೆ ಸಂಬಂಧಿಸಿದ ಚಿಂತೆಯೆಲ್ಲ ಮಾಯವಾಯ್ತೆಂದು ಹೇಳಲಾಗುವುದೆ ? ಹಿತೈಷಿಗಳೊ, ಹಿತಶತ್ರುಗಳೊ ಯಾರಾದರೊಬ್ಬರೂ ಆಗಾಗ್ಗೆ ಕೆಣಕುತ್ತಲೆ ಇರುತ್ತಾರೆ – ‘ಏನ್ ಸಾರ್ ..ಈ ಸಾರಿನಾದ್ರೂ ಪ್ರಮೋಶನ್ ಬಂತಾ?’ ಪೆಚ್ಚಾಗಿ ಹುಸಿನಗೆಯಷ್ಟನ್ನೆ ಉತ್ತರವಾಗಿತ್ತು ಮನೆಗೆ ಬಂದರೆ ಶ್ರೀಮತಿಯದು ಅದೇ ರಾಗ – ‘ಏನ್ರೀ… ವನಜನ ಗಂಡ ಕೋದಂಡರಾಮಯ್ಯನವರಿಗೆ ಈ ಬಾರಿ ಪ್ರಮೋಶನ್ ಸಿಕ್ಕಿತಂತಲ್ಲ..? ನಿಮಗೆ ಹೋಲಿಸಿದರೆ ಅವರು ಮೊನ್ನೆ ಮೊನ್ನೆ ಸೇರಿದವರಲ್ವಾ ನಿಮ್ಮ ಕಂಪೆನಿಗೆ ? ಅದು ಹೇಗ್ರಿ ಅವರಿಗೆ ಇಷ್ಟು ಬೇಗ ಬಡ್ತಿ ಸಿಕ್ಕಿಬಿಡ್ತು..?’ ಎನ್ನುತ್ತಾಳೆ. ಅದೇನು ಹಂಗಿಸುತ್ತಿದ್ದಾಳೊ, ಮುಗ್ದವಾಗಿ ಪ್ರಶ್ನಿಸುತ್ತಿದ್ದಾಳೊ ಗೊತ್ತಾಗದೆ ಒದ್ದಾಡುತ್ತಿರುವಾಗಲೆ ಪಕ್ಕದಲ್ಲಿದ್ದ ಮಗ, ‘ ಅಪ್ಪಾ ಆಫೀಸಿನಲ್ಲಿ ನೀನು ಬಾಸಾ ಅಥವಾ ಎಂಪ್ಲಾಯೀನಾ?’ ಎಂದು ಕೇಳಿ ಉರಿವ ಗಾಯಕ್ಕೆ ಉಪ್ಪೆರಚುತ್ತಾನೆ. ಇದ್ದುದರಲ್ಲಿ ಮಗಳೆ ವಾಸಿ, ‘ ಕಾಫಿ ಮಾಡ್ಕೊಂಡು ಬರ್ಲಾಪ್ಪ?’ ಅನ್ನುತ್ತ ಮಾತು ಬದಲಿಸುತ್ತಾಳೆ. ಇವರೆಲ್ಲರ ಬಾಯಿಗೆ ಪದೆಪದೆ ಬೀಳುವುದನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ಈ ಬಾರಿಯಾದರು ಪ್ರಮೋಶನ್ ಗಿಟ್ಟಿಸೋಣವೆಂದು ಯತ್ನಿಸುತ್ತಿದ್ದರೆ ‘ಈ ಸಾರಿ ಖಂಡಿತ ಸಿಗುತ್ತದೆ’ ಎಂದು ವಾಗ್ದಾನ ಮಾಡಿದ್ದ ಬಾಸೆ ಬದಲಾಗಿ ಮತ್ತೆ ಹತಾಶೆಯ ಹೊಸ ಚಕ್ರ ಗಿರಕಿ ಹೊಡೆಯತೊಡಗುತ್ತದೆ…

ಇದೆಲ್ಲಕ್ಕು ಮೀರಿದ ಹೆಚ್ಚಿನ ಗಂಡಾಂತರದ್ದು ಸ್ವಯಂ ಆತ್ಮಾಭಿಮಾನದ ಕುರಿತಾದದ್ದು.. ಇದೆಲ್ಲಾ ಏಟುಗಳು ಒಳಗೊಳಗೆ ಪೂರ್ತಿಯಾಗಿ ಕುಗ್ಗಿಸಿ ‘ನಾನು ಸಾಧಿಸಿದ್ದಾದರು ಏನು?’ ಎಂಬ ದೊಡ್ಡ ಭೂತಾಕಾರದ ಪ್ರಶ್ನೆಯನ್ನು ಹುಟ್ಟಿಸಿ ಅನಾಥ ಪ್ರಜ್ಞೆಯಲ್ಲಿ ತೊಳಲಾಡಿಸುವ ಬಗೆ ಅವರ್ಣನೀಯ. ಆ ಸಂಧಿಕಾಲದಲ್ಲಿ ಇರುವ ಗೊಂದಲ ಎಷ್ಟು ಕ್ಲಿಷ್ಟಕರವೆಂದರೆ ‘ ಏನೆಲ್ಲ ಆಯ್ತೆಂದು ಹಿಂದಕ್ಕೆ ತಿರುಗಿ ನೋಡುತ್ತ, ಗೋಳಾಡಿಕೊಂಡು ಮುಂದಿನ ಪಾಠಕ್ಕಾಗಿ ಅವಲೋಕಿಸುತ್ತ ಕೂರಬೇಕೆ? ಅಥವಾ ಹಿಂದಿನದೆಲ್ಲ ಮರೆತು ಆದದ್ದಾಯ್ತೆಂದು ಮುಂದಿನ ಭವಿತದತ್ತ ನೋಡುತ್ತ ಕೂರಬೇಕೆ?’ ಎನ್ನುವ ಗೊಂದಲದಿಂದ ಹೊರಬರಲೆ ಆಗದ ಚಕ್ರವ್ಯೂಹವಾಗಿ ಕಾಡತೊಡಗಿರುತ್ತದೆ. ಹಳತನ್ನು ಬಿಟ್ಟೊಗೆಯಲಾಗದಷ್ಟು ದೂರ ಬಂದು ಆಗಿಬಿಟ್ಟಿರುವುದರಿಂದ, ಸಾರಾಸಗಟಾಗಿ ಬಿಟ್ಟುಬಿಡಲೂ ಭಯ; ಹೊಸದಾಗಿ ಹೊಸತನ್ನು ನಿರಾತಂಕವಾಗಿ ಅಪ್ಪಲೂ ಭೀತಿ – ಅದರಲ್ಲಿನೇನೇನಡಗಿದೆಯೋ? ಎಂದು. ಅಲ್ಲದೆ ಎಲ್ಲ ಹೊಸದಾಗಿ ಮೊದಲಿಂದ ಆರಂಭಿಸಿದರೆ ಇದುವರೆವಿಗೆ ಗಳಿಸಿದ ಅನುಭವ, ಪರಿಣಿತಿಯನ್ನೆಲ್ಲ ಗಾಳಿಗೆ ತೂರಿದಂತಲ್ಲವೆ ? ಎಂಬ ಗಳಿಸಾಗಿರುವ ವೃತ್ತಿಪರತೆಯ ಆಸ್ತಿಯನ್ನು ನಷ್ಟವಾಗಿಸದಿರುವ ಗೊಡವೆ ಬೇರೆ. ಒಟ್ಟಾರೆ ಏನೆ ಆದರು ಮೊತ್ತದಲ್ಲಿ ಮಾತ್ರ ಬರಿ ಗೊಂದಲ. ಇದು ಸಾಲದಕ್ಕೆ ಹೊರಗಿನ ದೇಹಕ್ಕೆ ವಯಸಾಗುತ್ತಿದ್ದರೂ ಒಳಗಿನ ಮನವಿನ್ನು ‘ಯೌವ್ವನ’ದಲ್ಲೆ ಅಡ್ಡಾಡಿಕೊಂಡು ತನ್ನದೆ ಲೋಕದಲ್ಲಿ ವಿಹರಿಸಿಕೊಂಡ ಕಾರಣದಿಂದಾಗಿ ಈ ವಯಸಾಗುತಿರುವ ದೇಹದ ಅಸಹಾಯಕತೆ ತಟ್ಟನೆ ಅರಿವಾಗುವುದಿಲ್ಲ. ‘ಇದೇನು ಮಹಾ?’ ಎಂದು ಭರದಲ್ಲಿ ದಿನವೂ ಹತ್ತಿ ಮೇಲೇರುತ್ತಿದ್ದ ಮೆಟ್ಟಿಲುಗಳೆ, ಅರ್ಧ ಹತ್ತುತ್ತಿದ್ದಂತೆ ಏದುಸಿರು ಕೊಡಲಾರಂಭಿಸಿದಾಗಷ್ಟೆ ‘ಎಲ್ಲೊ, ಏನೊ ಎಡವಟ್ಟಾಗಿರಬಹುದೆ?’ ಎನ್ನುವ ಅನುಮಾನದ ಸುಳಿವು ಸಿಗುವುದು. ಅದು ಕಾಲುನೋವಾಗೊ, ಏದುಸಿರಾಗೊ, ಧಾರಾಕಾರದ ಬೆವರಾಗೊ ಹರಿಯುತಿದ್ದರೂ ನಾನಿನ್ನು ಪ್ರಾಯದ, ಯೌವ್ವನದ, ಬಿಸಿರಕ್ತದ ಎಳೆಗರು ಎನ್ನುವ ಮನದ ಮಾಯೆಯ ಮುಸುಕು ತುಸುತುಸುವಾಗಿ ಹಿಂಜರಿಯುತ್ತ, ನೇಪಥ್ಯಕ್ಕೆ ಸರಿಯುತ್ತ, ನಂಬಿಕೆಗಳ ಬಲ ಸಡಿಲವಾಗುವ ಕಾಲ. ಆದರೆ ಈ ಹೊಸ್ತಿಲಲ್ಲಿರುವ ಪ್ರತಿಶತ ಎಲ್ಲರೂ ಇದೆ ಪರಿಸ್ಥಿತಿಯಲ್ಲಿ ಸಿಕ್ಕಿ ನರಳುವರೆಂದೆ ಹೇಳಬರುವುದಿಲ್ಲ. ಇದಾವ ತೊಡಕೂ ಇರದೆ ಮಿಂಚಿನ ವೇಗದಲ್ಲಿ ಸಂಚರಿಸುತ್ತ ಮುನ್ನಡೆವ ಭಾಗ್ಯಶಾಲಿಗಳೂ ಇಲ್ಲದಿಲ್ಲ – ಆದರೆ ಅವರ ಸಂಖ್ಯೆ ಅಷ್ಟು ದೊಡ್ಡದಿರದು ಅನ್ನುವುದನ್ನು ಬಿಟ್ಟರೆ .

ನೈಜದಲ್ಲಿ ಈ ಹಂತವನ್ನು ದಾಟುವ ಎಲ್ಲರೂ ಇದೊಂದು ರೀತಿಯ ‘ಮಿಡ್ ಲೈಫ್ ಕ್ರೈಸಿಸ್’ ಅನ್ನು ಅನುಭವಿಸಿಯೆ ತೀರುತ್ತಾರೆನ್ನುವುದರಲ್ಲಿ ಸಂದೇಹವೆ ಇಲ್ಲ. ಆದರೆ ಪ್ರತಿಯೊಬ್ಬರು ಅನುಭವಿಸುವ ಮಟ್ಟ ಒಂದೆ ರೀತಿ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ. ಕೆಲವರಲದು ತೀವ್ರತರವಾಗಿ ಕಾಡಿದರೆ ಮತ್ತೆ ಕೆಲವರಲ್ಲಿ ಮಾಮೂಲಿನಂತೆ ಬಂದು ಸಾಗಿಹೋಗುವ ಸಾಮಾನ್ಯ ಪ್ರಕ್ರಿಯೆಯಾಗಿಬಿಡಬಹುದು. ಅದೇನೆ ಆದರೂ ಆ ಆತಂಕ, ಗೊಂದಲ, ಕಸಿವಿಸಿಗಳ ಐವತ್ತರ ಹತ್ತಿರವಾಗುತ್ತಿರುವ ಅಥವಾ ಅದರ ಹೊಸಿಲು ದಾಟುತ್ತಿರುವ ಭೀತಿಯೆ ಅದರ ಮುಂದಿನ ಪರ್ವಕ್ಕೆ ಬೇಕಾದ ಪರಿಪಕ್ವತೆಯನ್ನೊದಗಿಸುವ ಬುನಾದಿಯಾಗುತ್ತದೆಯೆಂಬುದು ಅಷ್ಟೆ ನಿಜ. ಅಲ್ಲಿಯತನಕ ಬರಿಯ ಲಾಜಿಕ್, ಸೈಂಟಿಫಿಕ್ ಎಂದು ತಾರ್ಕಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನತ್ತಿತ್ತಲೆ ಸುಳಿದಾಡುತ್ತಿದ್ದ ಮನ ಇದ್ದಕ್ಕಿದ್ದಂತೆ ತಾತ್ವಿಕದತ್ತ, ದೈವಿಕದತ್ತ, ಶಾಸ್ತ್ರ, ಪೂಜೆ, ಪುನಸ್ಕಾರಗಳತ್ತ ಗಮನ ಹರಿಸತೊಡಗುವುದು ಆ ಪಕ್ವತೆಯ ಪ್ರೇರಣೆಯ ಪರಿಣಾಮದಿಂದಲೆ. ಪ್ರತಿಯೊಂದು ಮನಸು ತನಗೆ ಸೂಕ್ತವಾದ ಏನೊ ಸಾಧಿಸಿ ತೋರಿಸಲು ಸಾಧ್ಯವಿರುವಂತಹ ಹಾದಿಯೊಂದನ್ನು ಹುಡುಕಿಕೊಂಡು ಮುನ್ನುಗ್ಗುವುದು ಅದೆ ಕಾರಣದಿಂದಲೆ. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಲಿ, ಮರೆತೆ ಹೋದಂತಿದ್ದ ಹವ್ಯಾಸವನ್ನು ಮತ್ತೆ ರೂಢಿಸಿಕೊಳ್ಳಲೆತ್ನಿಸುತ್ತ ಬೆಳೆದು ಪ್ರಬುದ್ಧವಾಗಲೆತ್ನಿಸುವುದಾಗಲಿ, ಜವಾಬ್ದಾರಿಯ ನಿಭಾವಣಿಕೆಯ ವಿಧಾನವನ್ನೆ ಬದಲಿಸಿಕೊಳ್ಳುವ ತರದಲ್ಲಾಗಲಿ, ಒಟ್ಟಾರೆ ತಮ್ಮ ವ್ಯಕ್ತಿತ್ವದ ನಿಲುವಿಗೆ ಒಂದು ಹೊಸ ರೂಪುರೇಷೆಯನ್ನು ಕೊಡುವ ಯಾವುದೆ ಯತ್ನವಾಗಲಿ – ಎಲ್ಲವೂ ಈ ಪರಿಪಕ್ವತೆಯತ್ತ ನಡೆಸಲ್ಹವಣಿಸುವ ಮನದ ಆಯಾಚಿತ ಯತ್ನಗಳೆ ಎನ್ನಬಹುದು. ಆ ಮೂಲಕವೆ ಈ ವಯೋ ಸಂಕ್ರಮಣದ ಸಂಧಿಕಾಲವನ್ನು ದಾಟಿ ಮುನ್ನಡೆಯಲು ಬೇಕಾದ ಕಸುವನ್ನು, ಮನೋಸ್ಥೈರ್ಯವನ್ನು ಒಗ್ಗೂಡಿಸಿಕೊಡುತ್ತದೆ, ಈ ಪಕ್ವತೆಯತ್ತ ನಡೆಸುವ ಪ್ರಕ್ರಿಯೆ. ಆ ಪಕ್ವತೆಯ ಹತ್ತಿರವಾದಂತೆಲ್ಲ ಮತ್ತೆ ಮನ ಶಾಂತಿಯತ್ತ ಚಲಿಸತೊಡಗುತ್ತದೆ – ಹೊಸತಿನ ಸಮತೋಲನದಲ್ಲಿ; ಕೆಲವರು ಅಲ್ಲಿಗೆ ಬೇಗ ತಲುಪಿದರೆ ಮತ್ತೆ ಕೆಲವರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಸೇರುತ್ತಾರೆನ್ನುವುದಷ್ಟೆ ವ್ಯತ್ಯಾಸ.

ಮೊನ್ನೆ ಆಫೀಸಿಗೆ ಬಂದಾಗ ಯಾಕೊ ಅಂದು ತಡವಾಗಿ ಬಂದ ಹನುಮಾಚಾರಿ ಸ್ವಲ್ಪ ಮಂಕಾದಂತೆ ಕುಳಿತಿದ್ದ. ನಾನು ಅವನ ಮುಖವನ್ನೆ ನೋಡುತ್ತ,’ಆಚಾರೀ.. ಈ ಸಾರಿ ನನ್ನ ಬರ್ತಡೆ ಸೆಲಬ್ರೇಟ್ ಮಾಡೋಣ ಅಂದ್ಕೊಂಡಿದ್ದೀನಿ ಕಣೊ , ನಿಂಜೊತೆಗೆ..’ ಎಂದೆ. ಅವನೊಂದು ಅರೆಗಳಿಗೆ ನನ್ನ ಮುಖವನ್ನೆ ನೋಡುತ್ತ ಪಕಪಕನೆ ನಗತೊಡಗಿದ. ನಾನು, ‘ಇಲ್ಲಾ ಆಚಾರಿ.. ಐಯಾಂ ಸೀರಿಯಸ್..ಐ ವಿಲ್ ಡ್ರಿಂಕ್ ವಿತ್ ಯೂ’ ಎಂದೆ. ಅವನು ಒಂದರೆಗಳಿಗೆ ನನ್ನ ಮುಖವನ್ನು ಮತ್ತೆ ನೋಡಿದವನೆ, ‘ ಸರಿ.. ಸಾರ್… ಆದರೆ ಒಂದ್ ಚೇಂಜ್.. ನೋ ಡ್ರಿಂಕ್ಸ್.. ನಾನೀಗ ಕುಡಿಯೋದು ನಿಲ್ಲಿಸಿಬಿಟ್ಟಿದ್ದೇನೆ.. ಯಾವುದಾದರೂ ಒಳ್ಳೆ ಹೆಲ್ತಿ ರೆಸ್ಟೋರೆಂಟಿಗೆ ಹೋಗೋಣ, ಫ್ಯಾಮಿಲಿ ಜೊತೆಲಿ..’ ಎಂದುಬಿಡುವುದೆ?

ಒಟ್ಟಾರೆ, ಎಲ್ಲಾ ಸೇರಿಸಿ ‘ಕಾಲಾಯ ತಸ್ಮೈ ನಮಃ’ ಅಂದುಬಿಡಬಹುದಲ್ಲವೆ?

– ನಾಗೇಶ ಮೈಸೂರು

(ಸಿಂಗಪುರ ಕನ್ನಡ ಸಂಘದ ‘ಸಿಂಗಾರ 2015’ ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು)

(Picture source: internet/ social media)

01675. ಯಾರೊ ಕರೆದಾ ಹಾಗೆ, ಏನೋ ಹೇಳಿದ ಹಾಗೆ..


01675. ಯಾರೊ ಕರೆದಾ ಹಾಗೆ, ಏನೋ ಹೇಳಿದ ಹಾಗೆ..

_________________________________________

(ನಿಮಗೂ ಯಾವಾಗಲಾದರೂ ಹೀಗೆ ಆಗಿದೆಯೆ? ಅನಿಸಿದೆಯೆ? ನನಗೊಮ್ಮೊಮ್ಮೆ ಆದಂತನಿಸಿದ ಅನಿಸಿಕೆಗೆ ಇಲ್ಲಿ ಪದ ರೂಪ ನೀಡಲು ಯತ್ನಿಸಿದ್ದೇನೆ – ಅದು ಪೂರ್ಣ ಸಫಲವಾಗದ ಯತ್ನವೆಂಬ ಪ್ರಜ್ಞಾಪೂರ್ವಕ ಅರಿವಿನಿಂದಲೆ. ಆ ಪ್ರಜ್ಞೆಯಲ್ಲೆ ಕಟ್ಟಿದ ಈ ಕೆಳಗಿನ ಕವನ ಕೂಡ ಅಸಂಪೂರ್ಣವೆನಿಸಿದರೂ ಅಸಂಗತವೆನಿಸಲಾರದೆಂಬ ಆಶಯದ ಮೊತ್ತ….ಇದೂ ಕೂಡ ಎಲ್ಲಿಂದಲೋ, ಯಾರೋ ಹೇಳಿ ಬರೆಸಿದ ಹಾಗೆ….!)

………….ಏನೊ ಓದುತ್ತಲೊ ಬರೆಯುತ್ತಲೊ ಅಥವಾ ಏನೂ ಮಾಡದೆ ಸುಮ್ಮನೆ ವಿಶ್ರಮಿಸುತ್ತಲೊ, ಇಲ್ಲವೆ ಯಾವುದೊ ಅಂತರಂಗದ ವಾಗ್ವಾದದಲ್ಲಿ ಪರ ವಿರೋಧಗಳ ಪಾತ್ರ ವಹಿಸುತ್ತ ಮಂಡಿಗೆ ತಿನ್ನುತ್ತಿರುವ ಹೊತ್ತು. ಅದು ಬಿರು ಬಿಸಿಲಿನಲಿ ಬೆವರ ಧಾರೆಯೆರೆದು ಬಳಲಿಸುತ್ತಿರುವ ಹೊತ್ತೊ, ಮುಂಜಾವಿನ ಮೊದಲೆ ವಿನಾಕಾರಣ ಎಚ್ಚರವಾಗಿ ವಿಸ್ಮೃತಿಯ ವಿಸ್ಮಯದಲ್ಲಿ ಜಳಕಿಸುತಲೆ ತಲ್ಲೀನವಾದ ಹೊತ್ತೊ, ದಿನದೆಲ್ಲ ಜಂಜಾಟ ಮುಗಿಸಿ ಒಂದು ಕಾಫಿ ಲೋಟ ಹಿಡಿದು ಕುರ್ಚಿಗೊರಗಿದ ವಿರಾಮದ ಹೊತ್ತೊ, ಅಥವಾ ದಿನದೆಲ್ಲ ಶ್ರಮದ ಲೆಕ್ಕ ಚುಕ್ತಾ ಮಾಡಲು ಶಯನೋತ್ಸವಕೆ ಅನುವಾಗುವ ಮೊದಲು ಪುಸ್ತಕೊವೊಂದನು ಹಿಡಿದಾ ಹೊತ್ತೊ….. ಒಟ್ಟಾರೆ ಯಾವುದೊ ಒಂದು ಕ್ರಿಯಾನಿರತ ಸಂಸರ್ಗದ ಹೊತ್ತಲ್ಲಿ ಏನೊ ಅರಿವಾಗದ ಏಕಾಗ್ರತೆ, ಮನ ಪದರದಲ್ಲಿ ಪ್ರಪುಲ್ಲತೆಯನ್ನೊ, ಪ್ರಶಾಂತತೆಯನ್ನೊ ಆರೋಪಿಸಿದಂತಹ ಅನುಭೂತಿ. ಆ ಭಾವದ ಅನುಭಾವವನ್ನು ಅನುಭವವೆಂದನುಭವಿಸಿ ವಿವರಿಸಲಾಗದಂತೆ, ಅನುಭವವೆ ಗಮ್ಯಕೆ ನಿಲುಕದ ಚಮತ್ಕಾರವಾದಂತೆ ಪ್ರಕ್ಷೇಪವಾದ ಸಮಯ… ಅದೊಂದು ಅರೆಗಳಿಗೆ, ಅರೆಕ್ಷಣ ಎಲ್ಲೊ ಇರುವಂತಹ , ತೇಲಿ ಹೋದಂತಹ, ಇಡಿ ಲೌಕಿಕ ಪ್ರಪಂಚದಿಂದ ಬೇರೆಯೆ ಆದಂತ ಅಲೌಕಿಕವಾದ ದಿವ್ಯ ಭಾವ….

ಆಗ ಇದ್ದಕ್ಕಿದ್ದಂತೆ ತಟ್ಟನೆ ಕಿವಿ ನಿಮಿರಿದ ಹಾಗೆ… ಕಣ್ಣಿಗೆ ಕಾಣದ ಯಾವುದೊ ಅಲೆಗಳ ಕ್ಷೀಣ ಪ್ರವಾಹವೊಂದು ಸದ್ದಿನ ರೂಪದಲ್ಲಿ ಸಾಂದ್ರವಾಗಿ ಕೇಂದ್ರಿಕೃತಗೊಳ್ಳುತಿರುವ ರೀತಿಯ ಕಲ್ಪನೆ… ಹತ್ತಿರದಲ್ಲಿ ಯಾವ ಸದ್ದೂ ಇರದ ನಿಶ್ಯಬ್ದತೆ ಸುತ್ತಲೂ ಹಾಸಿಕೊಂಡು ಬಿದ್ದಿದ್ದರೂ, ಎಲ್ಲಿಂದಲೊ ತೇಲಿ ಬಂದಂತೆ ಘಂಟಾನಾದದ ತೆಳುವಾದ ಅಲೆಯೊಂದು ಕಿವಿಯ ಹತ್ತಿರಕ್ಕೆ ಬಂದು ‘ಗುಂಯ್’ಗುಟ್ಟಿದ ಹಾಗೆ.. ಅಷ್ಟಕ್ಕೆ ನಿಲ್ಲದೆ, ತೀರಾ ಮಂದ್ರ ಸ್ಥಾಯಿಯಲ್ಲಿ ಆರಂಭವಾದ ಲಹರಿ ಕ್ರಮಕ್ರಮೇಣ, ಹಂತಹಂತವಾಗಿ ಶಕ್ತಿಯನ್ನು ಶೇಖರಿಸಿಕೊಂಡಂತೆ ಗಟ್ಟಿಯಾಗುತ್ತಾ ಹೋಗುವ ಅನುರಣಿತ ದನಿ… ಕ್ಷೀಣದಿಂದ ತಾರಕಕ್ಕೇರುವ ದನಿ, ಹಾಗೆ ಮುಂದುವರೆದರೆ ಸಿಡಿಲ ಘೋಷವೆ ಆಗಿಬಿಡುವುದೋ ಏನೊ ಎನ್ನುವ ದಿಗಿಲುಟ್ಟಿಸುವ ಕಳವಳ… ಅದೇನು ನಿಜವಾದ ದನಿಯೊ, ಮನೋಭ್ರಮೆಯೊ ಹೇಳಲಾಗದ ಅತಂತ್ರ ಸ್ಥಿತಿ… ಏಕೆಂದರೆ ಆ ಕೇಳುತ್ತಿರುವ ದನಿ ಸ್ಪಷ್ಟವಾಗಿದ್ದರೂ ಅದರ ಸದ್ದಾಗಲಿ, ಶಬ್ದವಾಗಲಿ ಜಾಗೃತ ಪ್ರಪಂಚದಲ್ಲಿ ಭೌತಿಕವಾಗಿ ಅನಾವರಣಗೊಂಡಂತೆ ಕಾಣುತ್ತಿಲ್ಲ… ವಿಚಿತ್ರವೆಂದರೆ ಅಷ್ಟು ಸುಸ್ಪಷ್ಟವಾಗಿ ಕೇಳುತ್ತಿರುವ ದನಿ, ವಾಸ್ತವದಲ್ಲಿ ಪ್ರಕ್ಷೇಪಿಸಿಕೊಳ್ಳದೆ ಬರೀ ಸ್ವಾನುಭವಕ್ಕೆ ಮಾತ್ರ ದಕ್ಕುತ್ತಿದೆಯೆಂಬ ಅರಿವು ಅಂತರಂಗದದಾವುದೊ ಮೂಲೆಗೆ ವೇದ್ಯವಾಗುತ್ತಿದೆ… ಆ ಗೊಂದಲ, ಸಂಶಯಗಳ ತಾಕಲಾಟದಲ್ಲಿರುವ ಬಾಹ್ಯ ಮನಕ್ಕರಿವೆ ಬಾರದ ಹಾಗೆ, ಅದರೊಳಗೆ ಜಾರಿ ಹೋಗಿ ಕುತೂಹಲ – ಉತ್ಸಾಹದಿಂದ ಅನ್ವೇಷಣೆ ನಡೆಸಿರುವ ಒಳಮನದ ವ್ಯಾಪಾರ ಪ್ರಜ್ಞೆಗೆ ನಿಲುಕದ ಸರಕಿನಂತೆ ಕಾಣುತ್ತದೆ…

ಆದರೆ ಆ ಹೊತ್ತಿಗಾಗಲೆ ಸಂಧರ್ಭದ ಸಂಪೂರ್ಣ ಹತೋಟಿಯನ್ನು ಕೈಗೆತ್ತಿಕೊಂಡ ಒಳಮನಸಿನ ಚಟುವಟಿಕೆ ತನ್ನಾವುದೊ ಮೂಲೆಯ ನಿಷ್ಕ್ರಿಯವಾಗಿದ್ದ ಕ್ರಿಯಾಶೀಲತೆಗೆ ಕೀಲಿ ಕೊಟ್ಟಂತೆ ಮಿಂಚಿನ ಸಂಚಾರದಲ್ಲಿ ನಿರತ… ಏನೇನೊ ಹೊಸತರ, ಹೊಸತನ ಆವರಿಸಿಕೊಂಡ, ಅಪರಿಚಿತತೆಯೆಲ್ಲ ಮಾಯವಾದ ಸುಪರಿಚಿತವಾದ ಭಾವ. ಆ ಗಳಿಗೆಯಲ್ಲಿ ಬಾಹ್ಯದಲ್ಲಿ ತನು ಏನು ಮಾಡುತ್ತಿದೆಯೊ – ಓದೊ, ವಿರಾಮವೊ, ಕಾಫಿಯ ಕುಡಿತವೊ, ಮಾತಾಟವೊ – ಅದೆಲ್ಲವು ಹಿಂದೆಂದೊ ಒಮ್ಮೆ ಅದೇ ಕ್ರಮದಲ್ಲಿ, ಅದೇ ರೀತಿಯಲ್ಲಿ ನಡೆದಿದ್ದಂತೆ ಮಸುಕು ಭಾವ. ಆಗ ನಡೆದಿದ್ದೆ ಈಗ ಮತ್ತೆ ಪುನರಾವರ್ತನೆಯ ರೂಪದಲ್ಲಿ ಘಟಿಸುತ್ತಿದೆಯೆಂಬ ವಿಚಿತ್ರ ಅರಿವು… ಅದೇ ಪುಟದ, ಅದೇ ಸಾಲು ಓದಿದ್ದಂತೆ, ಅದೇ ಮಾತು ಸಾಕ್ಷಾತ್ ಅದೇ ರೀತಿಯೆ ಆಡಿದ್ದಂತೆ, ಅದೇ ಜಾಗದಲ್ಲಿ ಅದೇ ರೀತಿಯಲ್ಲಿ ಕೂತಿದ್ದಂತೆ – ಅದೆ ತಾರಸಿ, ಅದೇ ಹೆಂಚಿನ ಮನೆ, ಅದೇ ಗೋಡೆ, ಅದೇ ಹೆಣ್ಣು ಗಂಡುಗಳು – ಕೊನೆಗೆ ತೊಟ್ಟಿದ್ದ ಅದೆ ಬಟ್ಟೆಯೂ ವಿಸ್ಮಯದ ಕಡಲಲ್ಲಿ ಮುಳುಗಿಸೇಳಿಸುತ್ತಿದ್ದಂತೆ ಅನಿಸಿಕೆ, ತದ್ಭಾವ. ಆ ಕ್ಷಣದ ಆ ನಂಬಿಕೆಯ ತೀವ್ರತೆ ಎಷ್ಟೆಂದರೆ – ಅದು ಸತ್ಯವೊ, ಸುಳ್ಳೊ ಎಂಬ ಅನುಮಾನ ಕೂಡ ಕಾಡದಷ್ಟು. ಅನುಮಾನಗಳಿಗೆಡೆಯಿಲ್ಲದೆ ಅನಿರ್ವಚನೀಯತೆಯ ಪರಮ ದರ್ಶನವಾದ ಅನಿಸಿಕೆ…

ಆ ಹೊತ್ತಿನಲ್ಲೆ ಮತ್ತೊಂದು ವಿಸ್ಮಯದ ಜಾದೂವು ಸಹ ಗಮ್ಯಕ್ಕೆ ನಿಲುಕಿಯೂ ನಿಲುಕದಂತೆ ಭಾಸವಾಗುವ ಧೂರ್ತ – ಅಲ್ಲಿಯ ತನಕ ಆವರಿಸಿಕೊಂಡಿದ್ದ ‘ಹಿಂದೆ ನಡೆದಿತ್ತೆಂಬ’ ರೀತಿಯ ಪರಿಚಿತ ಪರಿಧಿಯನ್ನು ದಾಟಿಸಿ, ಆ ‘ಹಿಂದೆ’ ಯ ಬದಲಿಗೆ ಇಂದಿನ್ನು ನಡೆದಿಲ್ಲದ, ಇನ್ನೇನೇನು ನಡೆದೀತೆಂಬ ಚಿತ್ರಗಳನ್ನು ಮೂಡಿಸುವ ‘ ಅಪರಿಚಿತ ಬದಿ’. ಒಂದು ರೀತಿಯಲ್ಲಿ ಬಾಹ್ಯದಲ್ಲಿ, ಇಂದೇನು ನಡೆಯಲಿದೆ ಎನ್ನುವುದನ್ನು ಭವಿಷ್ಯ ಹೇಳುವ ರೀತಿಯಲ್ಲಿ ಕಟ್ಟಿಕೊಡುವ ಮಸುಕು ಮಸುಕಾದ ಅಸ್ಪಷ್ಟ ಚಿತ್ರಗಳು… ಯಾವಾಗ ಈ ಪರಿಧಿ ಭವಿಷ್ಯತ್ತಿನೆಡೆಗೆ ತನ್ನ ಕೈ ಚಾಚಿ ವಿಸ್ತಾರವಾಗಲ್ಹವಣಿಸತೊಡಗುತ್ತದೆಯೊ, ಆಗ ಅಲ್ಲಿಯವರೆಗೆ ಅಸಹಾಯಕನಂತೆ ಬಿದ್ದಿದ್ದ ಬಾಹ್ಯ ಪ್ರಜ್ಞೆಯ ವಕ್ತಾರ ಇದ್ದಕ್ಕಿದ್ದಂತೆ ಗಾಬರಿಯಿಂದ ಮೇಲೆದ್ದವನಂತೆ ಮೂಗು ತೂರಿಸತೊಡಗುತ್ತಾನೆ. ಅಂತರಾತ್ಮಕ್ಕೆ ನೇರವಾಗಿ ಏನೂ ಕಾಣದಿದ್ದರೂ ಅಡ್ಡಿಯನ್ನೊಡ್ಡುವ ಬಾಹ್ಯ ಪ್ರಜ್ಞೆಯ ಕಂಪನಗಳು ಒಳಗಿನ ಪ್ರಶಾಂತ ಕಂಪನಗಳನ್ನು ಪ್ರಕ್ಷುಬ್ದಗೊಳಿಸಿ ಅಸ್ತ್ಯವ್ಯಸ್ತಗೊಳಿಸುತ್ತಿರುವುದು ಗಮನಕ್ಕೆ ಬಂದರೂ ಅದು ಅಸಹಾಯಕ. ಅದರ ನಿಯಂತ್ರಣ ವ್ಯಕ್ತಿಗತಾತ್ಮದ ಹೊಣೆಯೆ ಹೊರತು ನಿರ್ಲಿಪ್ತ ಅಂತರಾತ್ಮದ್ದಲ್ಲ. ಹತೋಟಿಯಲಿದ್ದು ಪ್ರಶಾಂತವಾಗಿರುವ ಚಿತ್ತ ಪಟಲದಲ್ಲಿ ಅದು ಭೂತ, ಪ್ರಸ್ತುತ, ಭವಿತಗಳನ್ನು ಪ್ರಕ್ಷೇಪಿಸಬಲ್ಲುದೆ ಹೊರತು, ಜಂಜಾಟದಲ್ಲಿ ಸಿಲುಕಿ ಹೋರಾಡದು. ಬಾಹ್ಯ ಕಂಪನದ ಸತತ ವರ್ಷೋದ್ಘಾತ ಹೆಚ್ಚಿದಂತೆ ಆ ಆಂತರ್ಯ ಮತ್ತೆ ನಿಷ್ಕ್ರಿಯತೆಯೆಡೆಗೆ ಸಾಗುತ್ತಿರುವುದು ಅನುಭವಕ್ಕೆ ಬರಲಾರಂಭಿಸುತ್ತದೆ. ತಾರ್ಕಿಕವಾಗಿ ಅನಾವರಣಗೊಳ್ಳುತ್ತಿದ್ದ ಭವಿತ ಸಹ ಕೊಂಡಿಗಳಿಲ್ಲದ ಅತಾರ್ಕಿಕ ಸಂಕಲನದಂತೆ ಅನಿಸಿಬಿಡುತ್ತದೆ. ಮೊದಲ, ಮಧ್ಯದ, ಕೊನೆಯ ಯಾವ್ಯಾವುದೊ ದೃಶ್ಯಗಳೆಲ್ಲ ಮಿಶ್ರವಾಗಿ, ಕಲಸುಮೇಲೋಗರವಾಗಿ ಅಲ್ಲಿಯವರೆಗೂ ಅದನ್ನು ಪರಮಾನಂದಲಹರಿಯೆಂಬಂತೆ ಅನುಭವಿಸಿ, ಆನಂದಿಸುತ್ತಿದ್ದ ಮಸ್ತಿಷ್ಕದ ಇಂದ್ರಿಯ ಪ್ರಜ್ಞೆಗಳು ‘ಇದೇನಿದು ಅಸಂಗತ’ ಎನ್ನುವ ಹಾಗೆ ಎಚ್ಚರಗೊಳ್ಳತೊಡಗುತ್ತವೆ. ಆ ಎಚ್ಚರ ತುರ್ಯಾನುಭವದಲಿದ್ದ ಮನವನ್ನು ಯಾವುದೊ ಸ್ವಪ್ನ ಲೋಕದಿಂದಿಳಿಸಿ ತಟ್ಟನೆ ಜಾಗೃತಾವಸ್ಥೆಗೆ ತಂದಿರಿಸಿಬಿಡುತ್ತದೆ – ವಾಸ್ತವ ಪರಿಸರದ ಅನುಭೂತಿಗಳನ್ನೆಲ್ಲ ಮತ್ತೆ ಕ್ರೋಢಿಕರಿಸಿ. ಯಾವುದೊ ಉನ್ಮೇಷದಿಂದ ಮತ್ತೆ ಲೌಕಿಕಕಿಳಿದ ಅಲೌಕಿಕ ಅನುಭವದ ನೆರಳು ಮಾತ್ರ ‘ಇದೇನು, ಕನಸೊ, ನನಸೊ?’ ಎಂಬ ಅನುಮಾನದಲ್ಲೆ ಆದ ಅನುಭವವನ್ನು ಮರಳಿ ನೆನಪಿನ ಚೀಲದಿಂದೆತ್ತಿ ಅದೆ ರೀತಿಯಲ್ಲಿ ಮರಳಿ ಕಟ್ಟುವ ವಿಫಲ ಯತ್ನ ನಡೆಸಿರುತ್ತದೆ…ಎಲ್ಲವೂ ಅಯೋಮಯ, ಗೊಂದಲಮಯ… ಯಾರೋ ಕರೆದ ಹಾಗೆ..ಏನೋ ಹೇಳಿದ ಹಾಗೆ…ನೆನಪಿನೋಲೆ ಕೊಟ್ಟು ಹೋದ ಹಾಗೆ…..

————————————————

ನಾಗೇಶ ಮೈಸೂರು, ೩೦. ಮಾರ್ಚಿ. ೨೦೧೪

————————————————

01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)


01674. ಏಪ್ರಿಲ್ ಪೂಲ್ ಗುಬ್ಬಣ್ಣ..! (ಲಘು ಹರಟೆ)

___________________________________

(ನಾಗೇಶ ಮೈಸೂರು)

‘ಟ್ರಿನ್… ಟ್ರಿನ್..’ ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ‘ ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?’ ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ‘ ಹಲೊ..’ ಎಂದೆ. ಯಾರಿರಬಹುದೆನ್ನುವ ಅನುಮಾನ ನಿಸ್ಸಂಶಯವಾಗಿ ತೊಲಗಿ ಹೋಗುವ ಹಾಗೆ ಅತ್ತ ಕಡೆಯಿಂದ ಗುಬ್ಬಣ್ಣನ ಗುಟುರು ದನಿ ಕೇಳಿಸಿತ್ತು.

‘ ಸಾರ್.. ನಾನು ಗುಬ್ಬಣ್ಣ.. ನಮಸ್ಕಾರ ಸಾರ್.. ನಿದ್ದೆಯಿಂದೆಬ್ಬಿಸಿಬಿಟ್ಟೆಂತ ಕಾಣುತ್ತೆ..’ ಎಂದ ಪೆಚ್ಚು ನಗೆ ನಟಿಸುತ್ತ. ನನ್ನ ‘ ಹಲೊ’ ಎನ್ನುವ ಮಾತಿಂದಲೆ ನಿದ್ದೆಯಾಳದಿಂದೆದ್ದು ಬಂದದ್ದನ್ನು ಗಮನಿಸಿ, ಅದಕ್ಕೆ ನನ್ನಿಂದ ಬೆಂಡು ಎತ್ತಿಸಿಕೊಳ್ಳುವ ಮೊದಲೆ ತಾನೆ ಆಡಿ ತಪ್ಪಿಸಿಕೊಳ್ಳುವ ಸ್ಕೆಚ್ ಹಾಕುತ್ತಾ ಇದ್ದಾನೆ ಖದೀಮ…

‘ ಕಾಣುತ್ತೆ ಏನು ಬಂತು ? ಖಡಾಖಂಡಿತವಾಗಿ ನಿದ್ದೆ ಕೆಡಿಸಿಬಿಟ್ಟೆ ನಕ್ಷತ್ರಿಕನ ಹಾಗೆ.. ಹಾಳಾದ್ದು ಪೋನಿಂದ ಏನು ಮಾಡುವ ಹಾಗಿಲ್ಲ. ಇಲ್ಲಾಂದ್ರೆ ಮೊದಲು ಎರಡು ಬಿಗಿದು ಆಮೇಲೆ ಮಿಕ್ಕಿದ ಮಾತಾಡುತ್ತಿದ್ದೆ..’ ಗಡದ್ದಾಗಿ ತಿಂದು ಡೀಪ್ ಸಮಾಧಿ ಸ್ಥಿತಿಯಲ್ಲಿದ್ದವನ ನಿದ್ದೆಗೆಡಿಸಿದ ಕೋಪವೆಲ್ಲ ಧಾರಾಕಾರವಾಗಿ ಗುಬ್ಬಣ್ಣನ ಮೇಲೆ ಮುಸಲಧಾರೆಯಾಗಲಿಕ್ಕೆ ಸಿದ್ದವಾಗುತ್ತಿರುವಂತೆ.

‘ಸಾರಿ ಸಾರ್..ಬೇಜಾರು ಮಾಡಿಕೊಳ್ಳಬೇಡಿ… ಮ್ಯಾಟರು ತುಂಬಾ ಇಂಪಾರ್ಟೆಂಟು.. ಅದಕ್ಕೆ ಮಟಮಟ ಮಧ್ಯಾಹ್ನಾಂತ ಗೊತ್ತಿದ್ದೂ ತಡ್ಕೊಳ್ಳೊಕಾಗ್ಲಿಲ್ಲ….’ ಎಂದ ಗುಬ್ಬಣ ಸಂತೈಸುವ ದನಿಯಲ್ಲಿ.

ಅವನ ಏಮಾರಿಸುವ ಗುಣ ಗೊತ್ತಿದ್ದ ನಾನು ಸುಲಭದಲ್ಲಿ ಬಲೆಗೆ ಬೀಳದೆ ಇರುವಂತೆ ಎಚ್ಚರಿಕೆ ವಹಿಸುತ್ತ ,’ ಅದೆಲ್ಲಾ ಪೀಠಿಕೆ ಬೇಡ.. ಸುಖ ನಿದ್ದೆಯಿಂದ ಎಬ್ಬಿಸಂತು ಆಯ್ತಲ್ಲ..? ಆ ಪಾಪವೇನು ಸುಮ್ಮನೆ ಬಿಡಲ್ಲ.. ತಿಗಣೆ ಜನ್ಮವೆ ಗ್ಯಾರಂಟಿ ನಿನಗೆ.. ಅದು ಬಿಟ್ಟು ಮ್ಯಾಟರಿಗೆ ಬಾ’ ಎಂದೆ ಮೀಟರಿನ ಮೇಲೆ ಕಣ್ಣಿಟ್ಟ ಆಟೋ ಗಿರಾಕಿಯ ಹಾಗೆ.

‘ ತಿಗಣೆಯಾದ್ರೂ ಸರೀನೆ ನಿಮ್ಮ ಹಾಸಿಗೇಲೆ ಸೇರ್ಕೊಳ್ಳೊ ದೋಸ್ತಿ ನಮ್ಮದು ಸಾರ್…ಸುಮ್ನೆ ಯಾಕೆ ಕೋಪ ನಿಮಗೆ?’ ತಿಗಣೆಯಾದರೂ ಕಾಡುವವನೆ ಹೊರತು ಬಿಡುವವನಲ್ಲ ಎನ್ನುವ ವಿಕ್ರಮನ ಭೇತಾಳದಂತೆ ಪಟ್ಟು ಬಿಡದೆ ನುಡಿದ ಗುಬ್ಬಣ್ಣ..

‘ ಗುಬ್ಬಣ್ಣಾ… ನಾನೀಗ ಪೋನ್ ಇಟ್ಟು ಮತ್ತೆ ನಿದ್ದೆಗೆ ಹೋಗಿ ಬಿಡ್ತೀನಿ ನೋಡು..ಬೇಗ ವಿಷಯಕ್ಕೆ ಬಾ…’ ಹೆದರಿಸುವ ದನಿಯಲ್ಲಿ ಗದರಿಸಿದೆ.

‘ ಆಯ್ತು.. ಆಯ್ತು ಸಾರ್.. ಬಂದೆ… ಆದರೆ ಮ್ಯಾಟರು ಪೋನಲ್ಲಿ ಹೇಳೊದಲ್ಲ… ಶಕುಂತಲಾ ರೆಸ್ಟೋರೆಂಟಲ್ಲಿ ಮೀಟ್ ಮಾಡಿ ಆರ್ಡರ ಮಾಡಿ ತಿಂತಾ ಜತೆಜತೆಯಲ್ಲೆ ವಿಷಯ ಹೇಳ್ತೀನಿ..’

‘ ಅಯ್ಯೊ ಪೀಡೆ..! ಹಾಗಿದ್ದ ಮೇಲೆ ಮನೆ ಹತ್ತಿರ ತಲುಪಿದ ಮೇಲಲ್ಲವ ಪೋನ್ ಮಾಡೋದು ? ಇನ್ನೊಂದು ಸ್ವಲ್ಪ ಹೊತ್ತು ನೆಮ್ಮದಿಯ ನಿದ್ದೆ ತೆಗೀತಿದ್ನಲ್ಲಾ ? ಊರಿಗೆ ಮುಂಚೆ ಯಾಕೆ ಪೋನ್ ಮಾಡ್ಬೇಕಿತ್ತೊ?’ ಮತ್ತೆ ಮನಸಾರೆ ಬೈಯುತ್ತ ಯಥೇಚ್ಛವಾಗಿ ಮಂತ್ರಾಕ್ಷತೆ ಹರಿಸಿದ್ದೆ ಗುಬ್ಬಣ್ಣನ ಮೇಲೆ.

‘ ತಾಳಿ ಸಾರ್ ಸ್ವಲ್ಪ… ಸುಮ್ನೆ ಕೂಗಾಡ್ಬೇಡಿ… ಈಗ ನಿಮ್ಮ ಮನೆಗೆ ಮೂರು ಸ್ಟೇಷನ್ ದೂರದಲ್ಲಿದ್ದೀನಿ.. ಅಲ್ಲಿಗೆ ಬರೋಕೆ ಹತ್ತು ನಿಮಿಷ ಸಾಕು.. ಅಷ್ಟರಲ್ಲಿ ಎದ್ದು ರೆಡಿಯಾಗಲಿ ಅಂತ್ಲೆ ಈಗ ಪೋನ್ ಮಾಡಿದ್ದು..’ ಎಂದು ಬಾಯಿ ಮುಚ್ಚಿಸಿಬಿಟ್ಟ.

‘ ಸರಿ ಹಾಳಾಗ್ಹೋಗು .. ನಂದು ರೆಡಿಯಾಗೋದು ಸ್ವಲ್ಪ ಲೇಟಾಗುತ್ತೆ, ಬಂದು ಕಾಯಿ..’ ಎಂದು ಉರಿಸುವ ದನಿಯಲ್ಲಿ ಹೇಳಿ ಪೋನ್ ಇಡುವುದರಲ್ಲಿದ್ದೆ.. ಆಗ ಮತ್ತೆ ಗುಬ್ಬಣ್ಣನೆ, ‘ಸಾರ್..ಒಂದೆ ನಿಮಿಷ… ಅಪರೂಪಕ್ಕೆ ನಮ್ಮೆಜಮಾನತಿ ಇವತ್ತು ‘ದಂರೂಟ್’ ಮಾಡಿದ್ಲು.. ನಿಮಗು ಸ್ವಲ್ಪ ಸ್ಯಾಂಪಲ್ ತರ್ತಾ ಇದೀನಿ… ಶುಗರು ಗಿಗರು ಅಂತೆಲ್ಲ ನೆಪ ಹೇಳ್ಬೇಡಿ ಸಾರ್..’ ಅಂದ.

‘ದಂರೂಟ್’ ಅಂದರೆ ನನ್ನ ‘ಪಕ್ಕಾ ವೀಕ್ನೇಸ್’ ಅಂತ ಚೆನ್ನಾಗಿ ಗೊತ್ತು ಗುಬ್ಬಣ್ಣನಿಗೆ. ಶುಗರು ಇರಲಿ ಅದರಪ್ಪನಂತಹ ಕಾಯಿಲೆಯಿದ್ದರೂ ಬಿಡುವವನಲ್ಲ ಅಂತ ಗೊತ್ತಿದ್ದೆ ಗಾಳ ಹಾಕುತ್ತಿದ್ದಾನೆ ಕಿಲಾಡಿ.. ಅಲ್ಲದೆ ಸಿಂಗಪುರದಲ್ಲಿ ಬೇರೆಲ್ಲಾ ಸಿಕ್ಕಬಹುದಾದರು ‘ದಂರೂಟ್’ ಮಾತ್ರ ಎಲ್ಲಿಯೂ ಸಿಕ್ಕುವುದಿಲ್ಲ; ನನ್ನ ಶ್ರೀಮತಿಗೆ ಅದನ್ನು ಮಾಡಲು ಬರುವುದಿಲ್ಲ ಅಂತ ಅವನಿಗೂ ಗೊತ್ತು… ಆ ಹೆಸರು ಎತ್ತುತ್ತಿದ್ದ ಹಾಗೆ ನಾನು ಅರ್ಧ ಶಾಂತವಾದ ಹಾಗೆ ಎಂದು ಲೆಕ್ಕಾಚಾರ ಹಾಕಿಯೆ ಕಾಳು ಹಾಕುತ್ತಿದ್ದಾನೆ.. ಅಥವಾ ಕೂಲಾಗಿಸಲು ಸುಖಾಸುಮ್ಮನೆ ಬರಿ ಹೋಳು ಹೊಡೆಯುತ್ತಿದ್ದಾನೆಯೊ , ಏನು ?

‘ ಗುಬ್ಬಣ್ಣಾ… ಈ ವಿಷಯದಲ್ಲಿ ಮಾತ್ರ ರೀಲು ಬಿಡಬೇಡ ನೋಡು… ನೀನು ತಿನ್ನ ಬೇಕೂಂತಿರೊ ಜಾಗದಲ್ಲಿ ನೀನೆ ಕಿಚನ್ ಸೇರುವ ಹಾಗೆ ತದುಕಿ ಹಾಕಿಬಿಡುತ್ತೇನೆ’ ಎಂದೆ ವಾರ್ನಿಂಗ್ ದನಿಯಲ್ಲಿ..

‘ ಸಾರ್.. ದಂರೂಟಿನ ವಿಷಯದಲ್ಲಿ, ಅದರಲ್ಲೂ ನಿಮ್ಮ ಜತೆ ಹುಡುಗಾಟವೆ? ಖಂಡಿತ ಇಲ್ಲ ಸಾರ್..ನಮ್ಮಪ್ಪರಾಣೆ, ಗೂಗಲೇಶ್ವರನಾಣೆ ಕಟ್ಟಿಸಿಕೊಂಡು ಬರ್ತಾ ಇದೀನಿ.. ಆದ್ರೆ ಈ ಟ್ರೈನು ಏಸಿಗೆ ಅರ್ಧ ಬಿಸಿಯೆಲ್ಲ ಹೋಗಿ ತಣ್ಣಗಿದ್ರೆ ನನ್ನ ಬೈಕೋಬೇಡಿ….’. ಮೊದಲಿಗೆ ಅವರಪ್ಪ ಈಗಾಗಲೆ ‘ಗೊಟಕ್’ ಅಂದಿರೋದ್ರಿಂದ ಆ ಅಣೆ ಹಾಕೋದಕ್ಕೆ ಯಾವ ತಾಪತ್ರಯವೂ ಇರಲಿಲ್ಲ. ಇನ್ನು ಗೂಗಲೇಶ್ವರ ಸತ್ತವನೊ, ಬದುಕಿದವನೊ ಎಂದು ಗೂಗಲ್ ಮಾಡಿಯೆ ಹುಡುಕಿ ನೋಡಬೇಕೇನೊ?

ಅಲ್ಲಿಗೆ ನನ್ನ ನಿದ್ರೆಯೆಲ್ಲ ಪೂರ್ತಿ ಹಾರಿ ಹೋಗಿ, ನಾಲಿಗೆ ಆಗಲೆ ಕಡಿಯತೊಡಗಿತ್ತು.. ‘ಸರೀ ಗುಬ್ಬಣ್ಣ.. ಸೀಯೂ ಇನ್ ಟೆನ್ ಮಿನಿಟ್ಸ್ ..’ ಎನ್ನುತ್ತ ಬಚ್ಚಲು ಮನೆಗೆ ನಡೆದಿದ್ದೆ.. ಶಕುಂತಲಾಗೆ ಹೋಗುವ ದಾರಿಯಲ್ಲೆ ಟ್ರೈನ್ ಸ್ಟೇಷನ್ನಿನ ಹತ್ತಿರ ಕಾದು, ಹೊರಬರುತ್ತಿದ್ದಂತೆ ಹಿಡಿಯಲು ಸಿದ್ದನಾಗಿ ನಿಂತಿದ್ದವನನ್ನು ನಿರಾಶೆಗೊಳಿಸದಂತೆ ಎಸ್ಕಲೇಟರ್ ಹತ್ತಿ ಬರುತ್ತಿರುವ ಗುಬ್ಬಣ್ಣ ಕಾಣಿಸಿದ. ಬಹಳ ಮುಂಜಾಗರೂಕತೆ ವಹಿಸಿದವನ ಹಾಗೆ ಬಲದ ಕೈಯಲೊಂದು ಪುಟ್ಟ ಸ್ಟೀಲು ಡಬರಿ ಹಿಡಿದುಕೊಂಡೆ ಬರುತ್ತಿರುವುದನ್ನು ಗಮನಿಸಿ ಈ ಬಾರಿ ಬರಿ ಹೋಳು ಹೊಡೆದಿಲ್ಲ, ನಿಜವಾಗಿಯೂ ‘ದಂರೋಟು’ ತಂದಿರುವನೆಂದು ಖಾತ್ರಿಯಾಗಿ ಬಿಗಿದಿದ್ದ ನರಗಳೆಲ್ಲ ಸಡಿಲಾಗಿ ಮುಖದಲ್ಲಿ ಕಂಡೂಕಾಣದ ತೆಳು ನಗೆ ಹರಡಿಕೊಂಡಿತು – ಸ್ವಲ್ಪ ಮೊದಲು ಗುಬ್ಬಣ್ಣನ ಜೊತೆಯೆ ವಾಗ್ಯುದ್ಧಕ್ಕಿಳಿದಿದ್ದೆ ಸುಳ್ಳೇನೊ ಎನ್ನುವ ಹಾಗೆ.

ಇಬ್ಬರೂ ನಡೆಯುತ್ತಿದ್ದ ಪುಟ್ಪಾತಿನ ಪೂರ್ತಿ ಅಗಲವನ್ನು ನಮ್ಮ ವಿಶಾಲ ‘ತನು’ಮನಗಳಿಂದ ಈಗಾಗಲೆ ಧಾರಾಳವಾಗಿ ಆಕ್ರಮಿಸಿಕೊಂಡು ಮಿಕ್ಕವರೆಲ್ಲ ನಮ್ಮ ಹಿಂದೆ ಪೆರೇಡ್ ಬರುವಂತೆ ಮಾಡಿದ್ದರು, ಏನೂ ಗೊತ್ತಿರದವರಂತೆ ಪಕ್ಕಕ್ಕೆ ಸರಿದು ರೆಸ್ಟೋರೆಂಟ್ ಒಳಗೆ ಹೊಕ್ಕೆವು. ಊಟದ ಸಮಯ ಮೀರಿ ಬಹಳ ಹೊತ್ತಾಗಿದ್ದ ಕಾರಣ ಹೆಚ್ಚು ಜನರಿರಲಿಲ್ಲವಾಗಿ ನಮಗೆ ಮಾತಿಗೆ ಬೇಕಿದ್ದ ದೇವಮೂಲೆ ಸರಾಗವಾಗಿ ಸಿಕ್ಕಿತ್ತು. ಅಲ್ಲಿದ್ದ ಐ ಪ್ಯಾಡಿನ ಮೂಲಕ ಆರ್ಡರ ಮಾಡಿದ ಮೇಲೆ ನನಗೊಂದು ಪ್ಲೇಟ್ ಪಕೋಡ / ಬಜ್ಜಿ ಜತೆ ಸೇರಿಸಿ ಮಾತಿಗಾರಂಭಿಸಿದ.

‘ ಸಾರ್.. ನೀವ್ ಹೇಗು ಕಥೆ, ಕವನಾ ಅಂತ ಬರ್ಕೊಂಡ್ ಸುಮ್ನೆ ಟೈಮ್ ವೇಸ್ಟ್ ಮಾಡ್ತಿರ್ತೀರಾ.. ಅದರ ಬದಲು ಈಗ ನಾನು ಹೇಳೊ ಥೀಮಲ್ಲಿ ಒಂದು ಫರ್ಸ್ಟ್ ಕ್ಲಾಸ್ ಇಂಗ್ಲೀಷ್ ಆರ್ಟಿಕಲ್ ಬರೆದುಕೊಡಿ..ಸಮಾನತೆ – ಈಕ್ವಾಲಿಟಿ ಕುರಿತು .. ಯಾವುದೊ ಇಂಟರ್ನ್ಯಾಶನಲ್ ಲೆವೆಲ್ ಮ್ಯಾಗಜೈನಿಗೆ ಅರ್ಜೆಂಟ್ ಬೇಕಂತೆ’ ಎಂದ.

ಗುಬ್ಬಣ್ಣ ಬಿಲ್ಕುಲ್ ರೆಡಿಯಾಗಿ ಬಂದಂತಿತ್ತು.. ನಾನು ಬರೆದದ್ದು ಇಂಟರನ್ಯಾಶನಲ್ ಲೆವಲ್ಲಲ್ಲಿರಲಿ, ಯಾವುದೊ ಒಂದು ನಾಲ್ಕೈದು ಜನ ಓದೊ ಬ್ಲಾಗಿನಲ್ಲಿ ಬರುತ್ತೆ ಅಂದರು ನಾನು ಬರೆದುಕೊಡುವವನೆ ಅಂತ ಅವನಿಗೆ ಚೆನ್ನಾಗಿ ಗೊತ್ತು.. ನನ್ನ ವೀಕ್ ಏರಿಯ ಅದು.. ಏನಾದರು ಬರೆದು, ಪಬ್ಲಿಷ್ ಮಾಡಿ ಫೇಮಸ್ ಆಗ್ಬೇಕನ್ನೋದು ನನ್ನ ವೀಕ್ನೆಸ್ ಅಂತ ಗುಬ್ಬಣ್ಣನಿಗೂ ಚೆನ್ನಾಗಿ ಗೊತ್ತು..

‘ಗುಬ್ಬಣ್ಣಾ ಕಥೆ ಅನ್ನು ಕವನ ಅನ್ನು, ಊಹೆ ಮಾಡಿ ಹುಟ್ಟಿಸ್ಕೊಂಡು ಏನೊ ಬರೆದುಬಿಡಬಹುದು..ಇದು ಸೀರಿಯಸ್ ಆರ್ಟಿಕಲ್.. ಅಲ್ದೆ ಸರಿಯಾದ ಥೀಮಿನ ಐಡಿಯಾನೂ ಇಲ್ದೆ ನಾನು ಏನೂಂತ ಬರೀಲಿ?’ ನಾನಿನ್ನು ಅರ್ಥವಾಗದ ಗೊಂದಲದಲ್ಲೆ ನುಡಿದೆ.. ಒಂದು ಕಡೆ ಓವರ್ನೈಟ್ ಹೆಸರಾಗಿಬಿಡುವ ಛಾನ್ಸ್ ಎಂದು ಎಗ್ಸೈಟ್ ಆಗುತ್ತಿದ್ದರೆ, ಮತ್ತೊಂದೆಡೆ ‘ಸರಿಯಾದ ಹೂರಣ’ವಿಲ್ಲದೆ ಇದೆಲ್ಲಾ ಅಗುವ ಮಾತಾ ?’ ಎನ್ನುವ ಅನುಮಾನದ ಜಿಜ್ಞಾಸೆ.

‘ ಏನಿಲ್ಲ ಸಾರ್, ಒಂದಷ್ಟು ಆರ್ಗ್ಯುಮೆಂಟ್ ಒಟ್ಟಾಗಿಸಿ ನೀವೊಂದು ಅದ್ಬುತ ಲೇಖನ ಬರೆದುಕೊಡಿ ಸಾಕು.. ಮಿಕ್ಕಿದ್ದು ನನಗೆ ಬಿಡಿ.. ನೋಡ್ತಾ ಇರಿ ಹೇಗೆ ನಿಮ್ಮನ್ನ ಸ್ಟಾರ್ ಮಾಡಿಬಿಡ್ತೀನಿ ಅಂತ’ ಎಂದ.

ನನಗೆ ಅದರ ಬಗೆ ಅನುಮಾನವಿದ್ದರೂ, ಹಾಳು ಕೀರ್ತಿಕಾಮನೆಯ ಶನಿ ಯಾರನು ತಾನೆ ಬಿಟ್ಟಿದ್ದು? ಪ್ರಲೋಭನೆಗೊಳಗಾದವನಂತೆ ಆಯಾಚಿತವಾಗಿ ತಲೆಯಾಡಿಸಿದ್ದೆ…

‘ ಆದರೆ ಒಂದೆ ಒಂದು ಕಂಡೀಷನ್ನು ಸಾರ್..’

ಇದೋ ‘ ಕ್ಯಾಚ್’ ಈಗ ಬಂತು ಅಂದುಕೊಂಡೆ – ‘ಕಂಡೀಷನ್ನಾ? ಏನಾ ಕಂಡೀಷನ್ನು?’

‘ ಏನಿಲ್ಲಾ ಸಾರ್ ಗಾಬರಿಯಾಗಬೇಡಿ.. ಈ ಲೇಖನ ನಾಳೆ ಬೆಳಿಗ್ಗೆಯೆ ಕಳಿಸಬೇಕಂತೆ.. ಅಂದರೆ ಇವತ್ತು ರಾತ್ರಿಯೆ ನೀವಿದನ್ನ ಬರೆದುಕೊಡಬೇಕು..’

‘ ಗುಬ್ಬಣ್ಣಾ ಈಗಾಗಲೆ ಸಾಯಂಕಾಲ..!’

‘ ಸಾರ್.. ಇಂಟರ ನ್ಯಾಶನಲ್ ಎಕ್ಸ್ ಪೋಷರ್.. ಸುಮ್ಮನೆ ಬಿಟ್ಟುಕೊಡಬೇಡಿ’ ಗುಬ್ಬಣ್ಣ ಮತ್ತೆ ಪ್ರಲೋಭಿಸಿದ..

‘ ಸರಿ ಹಾಳಾಗಲಿ.. ಏನೊ ಬರೆದು ರಾತ್ರಿಯೆ ಕಳಿಸುತ್ತೀನಿ… ಏನಾಯ್ತು ಅಂತ ಬೆಳಿಗ್ಗೆ ಹೇಳು’ ಎಂದು ಮಾತು ಮುಗಿಸಿದ್ದೆ.

‘ ಸಾರ್.. ಇವತ್ತೆ ಲಾಸ್ಟ್ ಡೇಟ್ ಆಗಿರೋದ್ರಿಂದ ಡೈರೆಕ್ಟಾಗಿ ಈ ಇ-ಮೇಲ್ ಅಡ್ರೆಸ್ಸಿಗೆ ಕಳಿಸಿ ಅಂತ ಹೇಳಿದ್ದಾರೆ, ತಗೊಳ್ಳಿ’ ಅಂತ ಒಂದು ಮಿಂಚಂಚೆ ವಿಳಾಸವಿದ್ದ ಚೀಟಿ ಜೇಬಿಂದ ತೆಗೆದುಕೊಟ್ಟ..

ಮನೆಗೆ ಬಂದವನೆ ನೇರ ಕಂಪ್ಯೂಟರಿನ ಮುಂದೆ ಕುಳಿತು ‘ಕಾಂಟ್ರೊವರ್ಸಿ’ ಆಗದ ಹಾಗೆ, ಈಕ್ವಾಲಿಟಿಯ ಎರಡು ಕಡೆಯ ಪಾಯಿಂಟುಗಳು ಹೈ ಲೈಟ್ ಆಗುವ ಹಾಗೆ, ಒಂದು ಲೇಖನ ಬರೆದು, ತಿದ್ದಿ ತೀಡಿ, ಮಧ್ಯರಾತ್ರಿ ಹನ್ನೆರಡಾಗುವ ಮೊದಲೆ ಇ-ಮೇಲಲ್ಲಿ ಕಳಿಸಿ ಮೇಲೆದ್ದಿದ್ದೆ. ಸುಸ್ತಾಗಿ ನಿದ್ದೆ ಎಳೆಯುತ್ತ ಇದ್ದುದರ ಜತೆಗೆ ಬರೆದ ಆಯಾಸವೂ ಸೇರಿಕೊಂಡು ಹಾಸಿಗೆಗೆ ಬಿದ್ದಂತೆ ಗಾಢ ನಿದ್ದೆಗೆ ಜಾರಿಕೊಂಡ್ದಿದ್ದೆ.. ರಾತ್ರಿಯೆಲ್ಲಾ ಇಂಟರ್ ನ್ಯಾಶನಲ್ ಮ್ಯಾಗಜೈನಿನಲ್ಲಿ ಪಬ್ಲಿಷ್ ಆದ ಹಾಗೆ, ಫರ್ಸ್ಟ್ ಪ್ರೈಜು ಹೊಡೆದ ಹಾಗೆ… ಏನೇನೊ ಕನಸು…

ಮರುದಿನ ಎದ್ದಾಗಲೆ ಮಟಮಟ ಮಧ್ಯಾಹ್ನವಾಗಿ ಹಿಂದಿನ ದಿನದ್ದೆಲ್ಲ ಮರೆತೆ ಹೋದಂತಾಗಿತ್ತು. ಪೂರ್ತಿ ಎಚ್ಚರವಾಗುತ್ತಿದ್ದಂತೆ ಹಿಂದಿನ ರಾತ್ರಿ ಕಳಿಸಿದ್ದ ಮಿಂಚಂಚೆ ನೆನಪಾಗಿ ಗುಬ್ಬಣ್ಣನಿಗೆ ಪೋನಾಯಿಸಿದೆ.

ಲೈನಿನಲ್ಲಿ ಸಿಕ್ಕಿದರು ಯಾಕೊ ಗುಬ್ಬಣ್ಣನ ದನಿ ಸ್ವಲ್ಪ’ಡೌನ್’ ಆದಂತಿತ್ತು..

‘ ಸಾರ್..ಈಗ ತುಂಬ ಬಿಜಿ.. ಆಮೇಲೆ ಪೋನ್ ಮಾಡ್ತೀನಿ.. ‘ ಎಂದ

‘ಯಾಕೊ ವಾಯ್ಸ್ ಡಲ್ಲೂ ಗುಬ್ಬಣ್ಣ? ಹುಷಾರಾಗಿದ್ದಿಯಾ ತಾನೆ ? ಇವತ್ತು ಆಫೀಸಿಗೆ ರಜೆಯಲ್ವ – ಇವತ್ತೆಂತಾ ಬಿಜಿನಯ್ಯ..?’ ಎಂದೆ.

‘ ಸಾರ್.. ಎಲ್ಲಾ ಆಮೇಲೆ ಹೇಳ್ತೀನಿ… ಸ್ವಲ್ಪ ಅರ್ಜೆಂಟು’ ಅಂದಾಗ ನನಗೇಕೊ ಮೆಲ್ಲಗೆ ಅನುಮಾನ ಶುರುವಾಯ್ತು.

‘ ಗುಬ್ಬಣ್ಣಾ.. ನೀನು ಹೇಳಿದ್ದ ಇ-ಮೇಲ್ ಅಡ್ರೆಸ್ಸಿಗೆ ಆರ್ಟಿಕಲ್ ಬರೆದು ಕಳಿಸಿಬಿಟ್ಟೆ ಕಣೊ, ರಾತ್ರಿ ಹನ್ನೆರಡಾಗೊ ಮೊದಲೆ… ಇನ್ನೊಂದು ಐದು ನಿಮಿಷ ತಡವಾಗಿದ್ರು ಡೇಡ್ ಲೈನ್ ಮಿಸ್ ಆಗಿಬಿಡ್ತಿತ್ತು..’ ಎಂದೆ.

‘ ಕಳಿಸಿಯೆಬಿಟ್ರಾ..? ಕಳಿಸದೆ ಇದ್ರೆ ಚೆನ್ನಾಗಿತ್ತೇನೊ..?’ ಗುಬ್ಬಣ್ಣ ಏನೊ ಗೊಣಗುಟ್ಟಿದ್ದು ಕೇಳಿಸಿತು…

‘ ಗುಬ್ಬಣ್ಣಾ… ಯಾಕೊ ನಿನ್ನೆಯೆಲ್ಲ ಅಷ್ಟೊಂದ್ ಅರ್ಜೆಂಟ್ ಮಾಡಿದವನು ಇವತ್ತು ಪೂರ್ತಿ ಟುಸ್ ಬಲೂನಿನ ಹಾಗೆ ಮಾತಾಡ್ತಾ ಇದ್ದೀ..?’

‘ಸಾರ್…’ ರಾಗವಾಗಿ ಎಳೆದ ಗುಬ್ಬಣ್ಣನ ದನಿ ಕೇಳಿಯೆ ಏನೊ ಎಡವಟ್ಟಿರುವಂತೆ ಅನಿಸಿತು…

‘ಏನೊ..?’

‘ನಾವಿಬ್ಬರು ಏಮಾರಿಬಿಟ್ವಿ ಸಾರ್…’

ನಾನು ಕೂತಲ್ಲೆ ಬಾಂಬ್ ಬಿದ್ದವರಂತೆ ಅದುರಿಬಿದ್ದೆ ಅವನ ಮಾತು ಕೇಳುತ್ತಿದ್ದಂತೆ, ಆ ಗಾಬರಿಯಲ್ಲೆ ‘ಯಾಕೊ.. ಏನಾಯ್ತೊ..?’ ಎಂದು ಹೆಚ್ಚು ಕಡಿಮೆ ಕಿರುಚಿದ ದನಿಯಲ್ಲಿ…..

‘ ಸಾರ್ …ಇವತ್ತು ಬೆಳಿಗ್ಗೆ ಇನ್ನೊಂದು ಇ-ಮೇಲ್ ಬಂದಿತ್ತು ಸಾರ್.. ನಿನ್ನೆ ನಾವು ಕಳಿಸಿದ ಇ-ಮೇಲ್ ಎಲ್ಲ ಹೋಕ್ಸ್ ಸಾರ್, ಬರಿ ಫೇಕೂ..’ ಎಂದ…

‘ವಾ….ಟ್…? ಇಂಟರ ನ್ಯಾಶನಲ್ ಮ್ಯಾಗಜೈನ್..? ಅರ್ಟಿಕಲ್ ಪಬ್ಲಿಷಿಂಗ್.. ? ಎಲ್ಲಾ ಹೋಕ್ಸಾ…?’

‘ ಹೌದು ಸಾರ್.. ಇವತ್ತು ಬೆಳಿಗ್ಗೆ ಬಂದ ಮೆಸೇಜಲ್ಲಿ ಥ್ಯಾಂಕ್ಸ್ ಫಾರ್ ದ ಪಾರ್ಟಿಸಿಪೇಷನ್ ಅಂಡ್ ಸಪೋರ್ಟ್ ಅಂತ ಥ್ಯಾಂಕ್ಯೂ ಕಾರ್ಡ್ ಬೇರೆ ಕಳಿಸಿದ್ದಾರೆ ಸಾರ್..’ ಅಂದ.

ನನಗೆ ಗುಬ್ಬಣ್ಣನ ಮೇಲೆ ಪೂರ್ತಿ ಉರಿಯುತ್ತಿದ್ದರು ಕೋಪವನ್ನು ಹಾಗೆಯೆ ಬಿಗಿ ಹಿಡಿದವನೆ, ‘ ಯಾಕೆ ಹೋಕ್ಸ್ ಮಾಡಿದ್ದು ಅಂತೇನಾದ್ರೂ ಬರೆದಿದ್ದಾರಾ?’ ಎಂದೆ.

‘ ಸಾರ್.. ಇವ್ವತ್ತೆಷ್ಟು ಡೇಟು ಹೇಳಿ..?’

‘ ಈಗ ನನ್ನ ಪ್ರಶ್ನೆಗೆ ಉತ್ತರ ಹೇಳೂಂದ್ರೆ ಡೇಟ್ ಗೀಟೂ ಅಂತ ಡೈವರ್ಟ್ ಮಾಡೋಕ್ ಟ್ರೈ ಮಾಡ್ತಾ ಇದೀಯಾ ?’

‘ ಮೊದ್ಲು ಹೇಳಿ ಸಾ.. ಆಗ ನಿಮ್ಗೆ ಗೊತ್ತಾಗುತ್ತೆ..’

‘ ಇವತ್ತು ಏಪ್ರಿಲ್ ಎರಡೂ..’

‘ ಅಂದ ಮೇಲೆ ನಿನ್ನೆ ಡೇಟು ಎಷ್ಟು ಸಾರ್..’

‘ ಇವತ್ತು ಎರಡಾದ್ರೆ ನಿನ್ನೆ ಎಷ್ಟೂಂತ ಗೊತ್ತಿಲ್ವೆ.. ಏಪ್ರಿಲ್ ಫಸ್ಟ್..’

ಹಾಗೆನ್ನುತ್ತಿದ್ದಂತೆ ತಟ್ಟನೆ ನನಗೆ ಜ್ಞಾನೋದಯವಾಯ್ತು – ಇದು ಯಾರೊ ಏಪ್ರಿಲ್ ಪೂಲ್ ಮಾಡಲು ನಡೆಸಿದ ಫ್ರಾಂಕ್ ಎಂದು…!

‘ ಗುಬ್ಬಣ್ಣಾ..? ಅಂದ್ರೆ…..’

‘ ಹೌದು ಸಾರ್… ನಾವಿಬ್ರೂ ಯಾರೊ ಮಾಡಿದ ಫ್ರಾಂಕಿಗೆ ಏಪ್ರಿಲ್ ಪೂಲ್ ಆಗಿ ಹೋದ್ವಿ – ಸೊಫಿಸ್ಟಿಕೇಟ್ ಆಗಿ..’ ಗುಬ್ಬಣ್ಣನ ದನಿಯಲ್ಲಿದ್ದುದ್ದು ಖೇದವೊ, ಹಾಸ್ಯವೊ ಗೊತ್ತಾಗಲಿಲ್ಲ. ಹಾಗೆ ನೋಡಿದರೆ ನಿಜಕ್ಕು ಪೂಲ್ ಆಗಿದ್ದು ಅವನಲ್ಲ, ನಾನು.. ಅದಕ್ಕೆ ಅವನೂ ಒಳಗೊಳಗೆ ನಗುತ್ತಿರಬೇಕು..

‘ ಇವತ್ತು ಕಳಿಸಿದ ಮೇಸೇಜಲ್ಲಿ ಅದೇ ಬರೆದಿತ್ತು ಸಾರ್.. ಥ್ಯಾಂಕ್ ಫಾರ್ ದಿ ಎಫರ್ಟ್ ಅಂಡ್ ಪಾರ್ಟಿಸಿಪೇಶನ್ ಅಂತ.. ಜತೆಗೆ ಗುಡ್ ಲಕ್ ಫಾರ್ ದಿ ಆರ್ಟಿಕಲ್ ಅಂತ..’

ಮಿಂಚಂಚೆ ಕಳಿಸುವಾಗ, ರೆಕಮೆಂಡ್ ಮಾಡಿದವರ ಹೆಸರು, ಇ-ಮೇಲ್ ವಿಳಾಸವನ್ನು ಜತೆಗೆ ಸೇರಿಸಿ ಕಳಿಸಬೇಕೆಂದು ಯಾಕೆ ಹೇಳಿದ್ದರೆಂದು ಈಗರಿವಾಗಿತ್ತು. ನನ್ನ ಇ-ಮೇಲ್ ತೆಗೆದು ನೋಡಿದ್ದರೆ ಗುಬ್ಬಣ್ಣನ ಥ್ಯಾಂಕ್ಯೂ ಮೇಲ್ ನನ್ನ ಮೇಲ್ ಬಾಕ್ಸಲ್ಲೂ ಇರುತ್ತಿತ್ತೆಂದು ಖಚಿತವಾಗಿತ್ತು.

‘ ಗುಬ್ಬಣ್ಣಾ… ಇವತ್ತು ಸಾಯಂಕಾಲ ಫ್ರೀ ಇದೀಯಾ? ಜಗ್ಗಿಸ್ ರೆಸ್ಟೊರೆಂಟಲ್ಲಿ ಬಟರ್ ಚಿಕನ್ ತುಂಬಾ ಚೆನ್ನಾಗಿರುತ್ತೆ..’

ಗುಬ್ಬಣ್ಣಾ ಕಿಲಾಡಿ.. ಅವನಿಗೆ ಚಿಕನ್ನಿನ ಯಾವ ಸೈಡಿಗೆ ಬಟರು ಹಾಕಿರುತ್ತೆಂದು ಚೆನ್ನಾಗಿ ಗೊತ್ತು.. ‘ ಸಾರ್ ಇವತ್ತು ಪೂರ್ತಿ ಬಿಜಿ ನೆಕ್ಸ್ಟ್ ವೀಕ್ ನೋಡೋಣಾ … ಅಂದಹಾಗೆ ಇಬ್ಬರು ಹೀಗೆ ಏಮಾರಿದ್ದು ಯಾರಿಗು ಗೊತ್ತಾಗೋದು ಬೇಡಾ.. ನಾನೂ ಬಾಯ್ಬಿಡೊಲ್ಲಾ, ನೀವೂ ಸುಮ್ಮನಿದ್ದುಬಿಡಿ…’ ಎಂದು ಅವನೆ ಪೋನಿಟ್ಟುಬಿಟ್ಟ – ಮೊದಲ ಬಾರಿಗೆ…!

ನನಗೆ ಮಾತ್ರ ಕೋಪ ಇಳಿದಿರಲಿಲ್ಲ – ಅದರಲ್ಲು ಗುಬ್ಬಣ್ಣನ ಮೇಲೆ, ‘ಅವನು ಏಮಾರಿದ್ದಲ್ಲದೆ, ನನ್ನನ್ನು ಸಿಕ್ಕಿಸಿದನಲ್ಲಾ’ ಎಂದು. ಆ ಕೋಪಕ್ಕೆ ಮತ್ತೊಮ್ಮೆ ಕಂಪ್ಯೂಟರಿನ ಮುಂದೆ ಕುಳಿತೆ, ಇಡೀ ಎಪಿಸೋಡನ್ನೆ ಈ ಬರಹದ ರೂಪಕ್ಕಿಳಿಸಿ ಅವನನ್ನು ಎಕ್ಸ್ ಪೋಸ್ ಮಾಡಲು – ಹೀಗಾದರು ಅವನ ಮೇಲೆ ಸೇಡು ತೀರಿಸಿಕೊಳ್ಳುವವನ ಹಾಗೆ. ಬರೆದು ಪ್ರಕಟಿಸಿದ ಮೇಲೆ ಅವನಿಗೂ ಓದಿಸಬೇಕೆಂದಿದ್ದೇನೆ, ನಾನೆ ಕೂತು ಓದಿದರೂ ಸರಿಯೆ….

ಆದರೆ ಅದರಲ್ಲಿನ ದೊಡ್ಡ ಸಿಕ್ರೇಟ್ – ಓದಿದವರು ಏಮಾರಿದ್ದು ಅವನೆಂದುಕೊಳ್ಳುವ ಹಾಗೆ – ಎಪಿಸೋಡನ್ನ ಅವನ ಹೆಸರಲ್ಲಿ ಬರೆದು ಪ್ರಕಟಿಸುತ್ತಿದ್ದೇನೆಂದು ಮಾತ್ರ ಯಾರಿಗು ಹೇಳುವುದಿಲ್ಲ – ಕನಿಷ್ಠ ಈ ಏಪ್ರಿಲ್ ತಿಂಗಳು ಮುಗಿಯುವವರೆಗಾದರೂ..!

– ಗುಬ್ಬಣ್ಣ

01662. ತಲೆ ಹರಟೆ : ಬಾಗಿಲು ಹಾಕೊ..!


01662. ತಲೆ ಹರಟೆ : ಬಾಗಿಲು ಹಾಕೊ..!

____________________________________________

ಮೇಷ್ಟ್ರು ಪಾಠ ಹೇಳಿಕೊಡ್ತಾ ಇದ್ರು. ತರಗತಿಯ ಬಾಗಿಲು ತೆರೆದೆ ಇತ್ತು.

ಇದ್ದಕ್ಕಿದ್ದಂತೆ ಹೊರಗೆ ಗಾಳಿ ಜೋರಾಗಿ ಮಳೆ ಬರುವ ಸೂಚನೆ ಕಾಣಿಸಿಕೊಂಡಿತು. ಟೇಬಲ್ ಮೇಲಿದ್ದ ಪುಸ್ತಕದ ಹಾಳೆಗಳು ಪಟಪಟನೆ ಹೊಡೆದುಕೊಳ್ಳತೊಡಗಿದಾಗ ಬೋರ್ಡಿನತ್ತ ಮುಖ ಮಾಡಿದ್ದ ಮೇಸ್ಟ್ರು ಹಿಂದೆ ತಿರುಗದೆ, ಬಾಗಿಲ ಹತ್ತಿರ ಕೂತಿದ್ದ ಗುಬ್ಬಣ್ಣನಿಗೆ ಹೇಳಿದರು..

‘ಲೋ..ಗುಗ್ಗಣ್ಣ , ಸ್ವಲ್ಪ ಬಾಗಿಲು ಮುಂದಕ್ಕೆ ಹಾಕೊ..’

‘ಅಯ್ಯಯ್ಯೊ..! ಬಿಲ್ಕುಲ್ ಆಗಲ್ಲ ಸಾರ್‘ ಬಾಣದಂತೆ ತಿರುಗಿ ಬಂದ ಉತ್ತರಕ್ಕೆ ಮೇಸ್ಟ್ರಿಗೆ ನಖಶಿಖಾಂತ ಉರಿದುಹೋಯ್ತು.. ಬೋರ್ಡಿಂದ ತಿರುಗಿದವರೆ ಮೇಜಿನ ಮೇಲಿದ್ದ ಬೆತ್ತದತ್ತ ಕೈ ಚಾಚುತ್ತ..

‘ ಯಾಕೊ… ಯಾಕೊ ಆಗಲ್ಲಾ..ಹಾಂ..’ ಎಂದರು

‘ ಸಾರ್.. ಕಟ್ಟುವಾಗಲೆಗೋಡೆ ಜೊತೆ ಸೇರಿಸಿ ಕಟ್ಟಿಬಿಟ್ಟಿದ್ದಾರೆ.. ಮುಂದಕ್ಕೆ ಹಾಕ್ಬೇಕಾದ್ರೆ ಕಿತ್ತು ಹಾಕಿದ್ರಷ್ಟೆ ಆಗುತ್ತೆ..’

ಹುಡುಗರೆಲ್ಲ ‘ಗೊಳ್ಳ್‘ ಅಂದ್ರು ; ಮೇಷ್ಟ್ರು ಮಾತ್ರ ಗಪ್ಚಿಪ್ ಆಗಿ ಬಂದು ಬಾಗಿಲು ಮುಚ್ಚಿ ಪಾಠ ಮುಂದುವರೆಸಿದ್ರು.

– ನಾಗೇಶ ಮೈಸೂರು

೨೩.೦೩.೨೦೧೮

#ತಲೆಹರಟೆ

01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ –


01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಅವನ ಸೃಷ್ಟಿಯೊಳಗವನೆ ಸೂತ್ರಧಾರ..

ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

https://www.facebook.com/Readoo.Kannada/posts/1131995653603574

2176. ಮಂಕುತಿಮ್ಮನ ಕಗ್ಗ ೭೩: ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..


2176. ಮಂಕುತಿಮ್ಮನ ಕಗ್ಗ ೭೩: ಸಂತೆಯಲಿದ್ದೂ ಒಂಟಿ, ನಿರ್ಲಿಪ್ತದೆ ಈ ಜಗಕಂಟಿ..

ಮಂಕುತಿಮ್ಮನ ಕಗ್ಗ ೭೩ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ…

http://kannada.readoo.in/2017/08/%E0%B2%B8%E0%B2%82%E0%B2%A4%E0%B3%86%E0%B2%AF%E0%B2%B2%E0%B2%BF%E0%B2%A6%E0%B3%8D%E0%B2%A6%E0%B3%82-%E0%B2%92%E0%B2%82%E0%B2%9F%E0%B2%BF-%E0%B2%A8%E0%B2%BF%E0%B2%B0%E0%B3%8D%E0%B2%B2%E0%B2%BF

02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ: ಜಗದ-ನಂಟಿನಂಟಿನ-ವ್ಯಾಪ್ತಿ


02159. ಕಗ್ಗ ೭೨ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಜಗದ-ನಂಟಿನಂಟಿನ-ವ್ಯಾಪ್ತಿ:

http://kannada.readoo.in/2017/08/ಜಗದ-ನಂಟಿನಂಟಿನ-ವ್ಯಾಪ್ತಿ

02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !


02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : ‘ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ’ ಈ ವಿಶ್ವ !

http://kannada.readoo.in/2017/08/ಸಂತುಲಿತ-ವ್ಯವಸ್ಥೆಗಳ-ನಂಟಿ

02138. ಮಂಕುತಿಮ್ಮನ ಕಗ್ಗ ೭೦ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..


02138. ಮಂಕುತಿಮ್ಮನ ಕಗ್ಗ ೭೦ರ ಟಿಪ್ಪಣಿ – ರೀಡೂ ಕನ್ನಡದಲ್ಲಿ..
೭೦. ರಸ ವಾಸನೆ ಸರಕಿನ ನಿರಂತರತೇ, ಸಮತೋಲನ !

http://kannada.readoo.in/2017/08/೭೦-ರಸ-ವಾಸನೆ-ಸರಕಿನ-ನಿರಂತರತ

02131. ಆಷಾಢ ಭಾದ್ರಪದ ನಡುವೆ


02131. ಆಷಾಢ ಭಾದ್ರಪದ ನಡುವೆ
________________________


ಸಮನೆ ಬಿಕ್ಕುತಿದೆ ಶ್ರಾವಣ
ಮುಸಲಧಾರೆಗೆ ಮುನ್ನುಡಿ
ಬಿಟ್ಟುಹೋದ ಆಷಾಢ ಕೆಳೆ
ದಕ್ಕದೆ ಹೋದ ವಿರಹಗಳು

ಯಾರರೆಲ್ಲಾ ಹೊದ್ದರೋ ?
ಆಷಾಢದ ತುಂತುರು ಗಾಳಿ
ಸೋನೆ ಸಿಡುಕುವ ಮುನ್ನ
ಚಡಪಡಿಸುತ್ತಾ ಶ್ರಾವಣ

ಅತ್ತ ಅಳಲಲ್ಲ ನಗಲಿಲ್ಲ
ದುಃಖ ದುಮ್ಮಾನ ಸುಖವಲ್ಲ
ಎದೆಯಲೇನೋ ತೀಡಿ ಒತ್ತಿದ ಹಾಗೆ
ತುಂಬಿದ ನದಿ ಭೋರ್ಗರೆತ ಒಳಗೆ

ಹಬ್ಬದ ಸಂಭ್ರಮ ಹಾಡು
ಶ್ರಾವಣಿಯ ಎದೆಗೂಡು
ಗೆಲ್ಲ ಹೊರಟವರ ಗೆದ್ದು ಬಿಡೆ
ಬಿದ್ದವರ ಕನಸೆಚ್ಚರ ಕೆಸರು..

ಮುದವದು ಶ್ರಾವಣ ಶ್ರವಣ
ಆಷಾಢ ಹಿನ್ನಲೆ ಗಾಯನ
ನೆನಪ ತಳ್ಳುತ ಜೀವ ದುಂಬಿ
ಹೂವಾಗಿ ಭಾದ್ರಪದ ಗುಂಗು !

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ : ಸ್ವಯಂಕೃತಾಪರಾಧ)

02130. ನಮಗೋಸ್ಕರ ಬದುಕೋದ್ಯಾವಾಗ ?


02130. ನಮಗೋಸ್ಕರ ಬದುಕೋದ್ಯಾವಾಗ ?
_______________________________


ಹುಟ್ಟಿಂದ ಕಟ್ಟಿದ ಜುಟ್ಟು
ಸೋತು ಬರಿ ನೂಲಾಗೋತನಕ
ಹೆಣಗಾಡಿದ್ದೆ ಆಯ್ತು ಬರಿ ಲಾಗ
ನಮಗೋಸ್ಕರ ಬದುಕೋದ್ಯಾವಾಗ ?

ಚಿಕ್ವಯಸ್ಸಿನ ಸ್ಕೂಲ್ ಚಾಕ್ರಿ
ಉರು ಮಗ್ಗಿ ಪದ್ಯ ವಿಜ್ಞಾನ
ದೊಡ್ಡೋರ್ನ ಮೆಚ್ಚ್ಸೋದೆ ಕಾಯಕವಾಗ
ನಮಗೋಸ್ಕರ ಬದುಕೋದ್ಯಾವಾಗ ?

ಓದಿದ್ದು ನೌಕ್ರಿಗಾಯ್ತು ಖಾತ್ರಿ
ಗತ್ತಲ್ಲಿ ಪಗಾರ ಕೈಗೆ ಹಾಕ್ರಿ
ಹೆತ್ತವ್ರೋ ಹೆಂಡ್ರೋ ಜಮಾನ ಆಗ
ನಮಗೋಸ್ಕರ ಬದುಕೋದ್ಯಾವಾಗ ?

ನೋಡ್ನೋಡ್ತಾ ಮಕ್ಳು ಮರಿ ಸುಗ್ಗಿ
ಬೇಡ್ತಾವೆಲ್ಲ ನಮ್ ಕನಸ್ಗು ಜಗ್ಗಿ
ಮಾಡ್ತಾನೆ ಕಳೆದ್ಹೋಯ್ತಲ್ಲ ದುಮ್ಮಾನ
ನಮಗೋಸ್ಕರ ಬದುಕೋದ್ಯಾವಾಗ ?

ಸಂದಿಗೊಂದೀಲೇ ಬದುಕೆಲ್ಲ
ಹುಡುಕಾಡ್ಬೇಕಲ್ಲ ಆಯ್ಕೊಳ್ತಾ
ಸಿಕ್ಸಿಕ್ಕಿದ್ದೆಲ್ಲಾ ತುಣುಕು ಅದರಾಗ
ನಮಗೋಸ್ಕರ ಬದುಕೋ ತೃಣ ಜಾಗ

– ನಾಗೇಶ ಮೈಸೂರು
೨೭.೦೭.೨೦೧೭
(ಚಿತ್ರ :ಸ್ವಯಂಕೃತಾಪರಾಧ)

02129. ಸರ್ವಜ್ಞನ ವಚನಗಳು ೦೦೧೦. ತೋರುವ ಕುಲಗಿರಿಯ


02129. ಸರ್ವಜ್ಞನ ವಚನಗಳು ೦೦೧೦. ತೋರುವ ಕುಲಗಿರಿಯ
______________________________________________________

ತೋರುವ ಕುಲಗಿರಿಯ | ಮೀರಿ ತಪದೊಳಿರ್ದು |
ಬೇರೊಂದು ಮನವನೆಣಿಸಿದೆಡೆ ಬೆಳೆದ ಹೊಲ |
ಸೂರೆ ಹೋದಂತೆ ಸರ್ವಜ್ಞ ||

ಇಲ್ಲಿರುವ ಪದಗಳ ಅರ್ಥಗಳೆಲ್ಲವೂ ನೆರವಾದದ್ದೇ ಆದರೂ ಒಟ್ಟಾರೆ ಭಾವಾರ್ಥ ಒಂದೇ ಗುಟುಕಿಗೆ ಪೂರ್ತಿಯಾಗಿ ದಕ್ಕುವುದಿಲ್ಲ. ನನ್ನರಿವಿಗೆಟುಕಿದಂತೆ ಅದನ್ನು ವಿವರಿಸುವ ಯತ್ನ ಮಾಡಿದ್ದೇನೆ.

ಗುರಿಸಾಧನೆಯ ಹಾದಿಯಲ್ಲಿ ಅಡೆತಡೆಗಳು ನಿರಂತರ. ಅದರಲ್ಲೂ ಗುರಿಗೆ ಹತ್ತಿರವಿದ್ದಾಗ ಎಡವಿದರೆ ಆಗುವ ನಷ್ಟ ಅಗಾಧವಾದದ್ದು. ಕಟ್ಟೆಚ್ಚರದಿಂದ ಕಾಯ್ದುಕೊಳ್ಳದಿದ್ದರೆ ನಮ್ಮ ಶ್ರಮದ ಪ್ರತಿಫಲ ಇನ್ನಾರದೋ ಪಾಲಾಗುತ್ತದೆ ಎನ್ನುವುದು ಇದರ ಮುಖ್ಯ ಸಾರ. ಆದರೂ ಇದರ ಪೂರ್ಣಾರ್ಥ ಒಂದೇ ಗುಟುಕಿಗೆ ನೇರ ಎಟುಕದ ಕಾರಣ , ಸ್ವಲ್ಪ ವಿಸ್ತೃತ ವಿವರಣೆಯನ್ನು ಸೇರಿಸುತ್ತಿದ್ದೇನೆ.

ತೋರುವ ಕುಲಗಿರಿಯ | ಮೀರಿ ತಪದೊಳಿರ್ದು |
_______________________________________

ಎಲ್ಲವನ್ನು ಬಿಟ್ಟು ಕಾಡಿಗೆ ಹೋಗಿ ತಪಸ್ಸಿಗೆ ಕೂರುವುದೆಂದರೆ ಕಡಿಮೆಯ ಮಾತಲ್ಲ. ತಪಸ್ಸಿಗೆ ಕೂರಲು ಹೊರಟವನ ಮನೋದಾರ್ಢ್ಯ ಅದಮ್ಯವಾದದ್ದಿರಬೇಕು. ಹೋಗದಂತೆ ತಡೆಯುವ ಐಹಿಕ ಜಗದ ಕುಲಬಂಧಗಳು, ಸಿರಿಸಂಪದದ ಆಮಿಷಗಳು, ಸುಖ-ಸಂತಸದ ಅಮಲು – ಎಲ್ಲವೂ ಜಯಿಸಲಾಭೇಧ್ಯವಾದ, ಏರಲಾಗದ ಕಡಿದಾದ ಗಿರಿಯಂತೆ ಅಡೆತಡೆಯಾಗಿ ಕಾಡುವುದರಿಂದ ಅವೆಲ್ಲವನ್ನು ಕಡೆಗಣಿಸಿ ನಡೆಯುವುದು ಅಷ್ಟು ಸುಲಭವಲ್ಲ. ಅತೀವ ಮನೋಶಕ್ತಿ, ಮನೋಬಲಗಳಿಂದ ಅಂತಹ ಕಷ್ಟಸಾಧ್ಯವಾದದ್ದನ್ನು ಸಾಧಿಸಿ ಹಠ ಬಿಡದೆ ತಪಸ್ಸಿಗೆ ಕೂರುತ್ತಾರೆ ಎಷ್ಟೋ ಮಂದಿ ಸಾಧಕರು, ಋಷಿಮುನಿಗಳು.

ಬೇರೊಂದು ಮನವನೆಣಿಸಿದೆಡೆ..
_______________________________

ಆದರೆ ಈ ಮನಸೆಷ್ಟು ವಿಚಿತ್ರವೆಂದರೆ – ಅಷ್ಟೆಲ್ಲಾ ಪ್ರಲೋಭನೆಯನ್ನು ಗೆದ್ದು ಕಟ್ಟುನಿಟ್ಟಿನಲಿ ತಪಕೆ ಕೂತವನನ್ನು ಸಹ ಕಾಡದೆ ಬಿಡುವುದಿಲ್ಲ ಮಾಯೆ. ಜಿತೇಂದ್ರನಂತೆ ಎಲ್ಲವನ್ನು ನಿರ್ಲಕ್ಷಿಸಿ ಬಂದು ಮೂಗು ಹಿಡಿದು ಕೂತವನನ್ನು ತಪ ಕೆಡಿಸಲೆಂದು ಬಂದ ಅಪ್ಸರೆ ಹೆಣ್ಣಿನ ರೂಪು, ಲಾವಣ್ಯ, ಒನಪು, ವೈಯ್ಯಾರಗಳ ಪ್ರಲೋಭನೆಯ ಅವತಾರದಲ್ಲಿ ವಿಚಲಿತವಾಗಿಸಿಬಿಡುತ್ತವೆ. ಐಹಿಕ ಬದುಕಿನ ಮಿಕ್ಕೆಲ್ಲಾ ಐಷಾರಾಮಗಳಿಗೆ ಮನಸೋಲದವನು, ಆ ಹೆಣ್ಣಿನ ಸಾಂಗತ್ಯದಲ್ಲಿ ನಿಯಂತ್ರಣ ಕಳೆದುಕೊಂಡು ತನ್ನ ಮನಸ್ಸನ್ನತ್ತ ಪೂರ್ತಿ ಹರಿಯಬಿಡುತ್ತಾನೆ. ಅಲ್ಲಿಯತನಕ ಕೇವಲ ತನ್ನ ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುತ್ತಿದ್ದವನು , ಆ ಹೊತ್ತಿನಿಂದ ಅವಳ ಮನವನ್ನು ಗೆಲ್ಲುವತ್ತ ವ್ಯಯಿಸಲು ತೊಳಲಾಡಿತ್ತಾನೆ. ಮನದಲ್ಲಿ ದೇವರ ಹೆಸರನ್ನು ಮಾತ್ರ ಜಪಿಸಿ ತಪಸ್ಸು ಮಾಡುತ್ತಿದ್ದವ ಈಗ ಅಲ್ಲಿ ಕೇವಲ ಅವಳ ಮನವನ್ನು ಮಾತ್ರ ನೆನೆಯುತ್ತ (ಬೇರೆ ಮನವನೆಣಿಸುತ್ತ) ಅವಳ ನೆನಪು, ಯೋಚನೆ, ಆಲೋಚನೆಗಳಲ್ಲೇ ತಲ್ಲೀನನಾಗಿ ಅವಳಿಗೆ ಪೂರ್ತಿ ಶರಣಾಗಿಬಿಡುತ್ತಾನೆ. ಆ ಪ್ರಕ್ರಿಯೆಯಲ್ಲಿ ಅದುವರೆಗೂ ತಾನು ಗಳಿಸಿದ ತಪವೆಲ್ಲ ವ್ಯರ್ಥವಾಗಿ ಸೋರಿಹೋಗುತ್ತಿದ್ದರು ಗಮನಿಸದಷ್ಟು ಆ ಹೆಣ್ಣಿನ ಮೋಹದಲ್ಲಿ ಮೈಮರೆತು ಹೋಗುತ್ತಾನೆ. ಹೀಗೆ ಮೂಲ ಉದ್ದೇಶ ದೇವರ ಮನವನೆಣಿಸಬೇಕೆಂದಿದ್ದರು (ತಪದ ಮೂಲಕ ದೇವರ ಅಸ್ತಿತ್ವವನ್ನರಿಯುವಿಕೆ, ತಾನೇ ಅವನಾಗುವಿಕೆ) ಅದು ಬಿಟ್ಟು ಇನ್ನಾವುದೋ ಮನವನೆಣಿಸುತ್ತ ದಾರಿ ತಪ್ಪಿಬಿಡುತ್ತಾನೆ.

ಬೆಳೆದ ಹೊಲ | ಸೂರೆ ಹೋದಂತೆ ಸರ್ವಜ್ಞ ||
________________________________________

ಇದೊಂದು ರೀತಿ ಹೊಲದಲ್ಲಿ ಕಷ್ಟಪಟ್ಟು ಉತ್ತು, ಬಿತ್ತು ಫಸಲು ತೆಗೆದು ಇನ್ನೇನು ಅದರ ಫಲವನ್ನು ಉಣ್ಣಬೇಕೆನ್ನುವ ಹೊತ್ತಲ್ಲಿ ಮತ್ತಾರೋ ಆ ಫಸಲನ್ನು ಸೂರೆ ಹೊಡೆದುಕೊಂಡು ಹೋದರೆ ಹೇಗೋ ಹಾಗೆ. ಅಲ್ಲಿಯವರೆಗೆ ಅವನು ಪಟ್ಟ ಶ್ರಮವೆಲ್ಲ ಒಂದೇ ಏಟಿಗೆ ಸೋರಿಹೋದಂತೆ ವ್ಯರ್ಥವಾಗಿಹೋಗುತ್ತದೆ. ವರ್ಷಾನುಗಟ್ಟಲೆ ಕಷ್ಟ ಪಟ್ಟು ಬೆಳೆದ ಫಸಲನ್ನು ಕಳ್ಳರು ಕೇವಲ ಒಂದು ರಾತ್ರಿಯ ಶ್ರಮದಿಂದ ಕೊಳ್ಳೆ ಹೊಡೆದುಕೊಂಡು ಹೋಗುವಂತೆ, ವರ್ಷಾಂತರಗಳ ತಪದ ಸಮಷ್ಟಿತ ಶಕ್ತಿಯನ್ನೆಲ್ಲ ತನ್ನ ಮೋಹದ ಬಲೆಯಲ್ಲಿ ಕೆಡವಿಕೊಂಡ ಆ ಹೆಣ್ಣು ಒಂದೇ ಏಟಿಗೆ ಸೂರೆ ಹೊಡೆದುಕೊಂಡುಬಿಡುತ್ತಾಳೆ – ಫಸಲು ಕದ್ದ ಕಳ್ಳರ ಹಾಗೆಯೇ.

ಸಾರದಲ್ಲಿ ಹೇಳುವುದಾದರೆ ಯಾವುದೋ ಗುರಿಯನ್ನು ಬೆನ್ನಟ್ಟಿ ಏಕಾಗ್ರ ಚಿತ್ತದಿಂದ ಅದೆಷ್ಟೋ ಬಗೆಬಗೆ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಮುನ್ನಡೆದಿರುತ್ತೇವೆ. ಇನ್ನೇನು ಗುರಿ ಹತ್ತಿರವಾಯ್ತು ಎನ್ನುವಾಗಲೋ ಅಥವಾ ಸರಿಯಾದ ಹಾದಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವಾಗಲೋ ಯಾವುದೋ ಮಾಯಾ ಪ್ರಲೋಭನೆಯು ತಟ್ಟನೆ ಕಾಣಿಸಿಕೊಂಡು ದಿಕ್ಕು ತಪ್ಪಿಸಲೆತ್ನಿಸುತ್ತದೆ; ಗಳಿಸಿದ್ದನ್ನೆಲ್ಲ ಶೂನ್ಯವಾಗಿಸುವಂತೆ ಪ್ರಚೋದಿಸುತ್ತದೆ. ಅದಕ್ಕೆ ಮರುಳಾದರೆ ಅಲ್ಲಿಯವರೆಗೆ ಗಳಿಸಿದ್ದೆಲ್ಲ ಸರ್ವನಾಶ. ಮರುಳಾಗದೆ ಮುನ್ನಡೆದರೆ ಗುರಿಸಾಧನೆಯ ಸಾರ್ಥಕ್ಯ ಎಂಬ ಸಂದೇಶ ಇಲ್ಲಿ ಅಡಕವಾಗಿದೆ.

– ನಾಗೇಶ ಮೈಸೂರು
ಚಿತ್ರ ಕೃಪೆ : ವಿಕಿಪಿಡಿಯಾ

(ಶ್ರೀ ಅಜ್ಜಂಪುರ ಶಂಕರರ Shankar Ajjampura ಕೋರಿಕೆಯನುಸಾರ ಯತ್ನಿಸಿದ ವಚನ. ವಿವರಣೆ ಅಸಮರ್ಪಕ ಅಥವಾ ಅಪರಿಪೂರ್ಣ ಎನಿಸಿದರೆ ದಯವಿಟ್ಟು ಕ್ಷಮೆಯಿರಲಿ)

02128. ಸರ್ವಜ್ಞನ ವಚನಗಳು ೦೦೦೯. ಅಂತರವನರಿವಲ್ಲಿ


02128. ಸರ್ವಜ್ಞನ ವಚನಗಳು ೦೦೦೯. ಅಂತರವನರಿವಲ್ಲಿ
_______________________________________


ಅಂತರವನರಿವಲ್ಲಿ ಎಂತಾದರಿರಲಕ್ಕು
ದಂತಿ ಸೂಕರನು ಸರಿಯೆಂಬ ಠಾವಿನಲಿ
ಎಂತಿರಲಕ್ಕು ಸರ್ವಜ್ಞ ||

ಅಂತರವನರಿವಲ್ಲಿ : ಪಾಂಡಿತ್ಯ, ಪ್ರತಿಭೆ, ಮೇಧಾವಿತನವನ್ನು ಅರಿತು ಗುರುತಿಸಿ, ಗೌರವಿಸುವಂತಹ ಜಾಗದಲ್ಲಿ.
ದಂತಿ : ಆನೆ
ಸೂಕರ : ವರಾಹ, ಹಂದಿ
ಸರಿಯೆಂಬ : ಸಮವೆಂಬ
ಠಾವು : ಸ್ಥಳ
ಎಂತಿರಲಕ್ಕು: ಹೇಗಿರುವುದು

ಸರಳವಾಗಿ ಹೇಳುವುದಾದರೆ : ಸಾಮರ್ಥ್ಯ, ಪ್ರತಿಭೆಗಳಿದ್ದವರು ಅದನ್ನು ಗುರುತಿಸುವಂತಹ ಸ್ಥಳದಲಿದ್ದರಷ್ಟೇ ಅದಕ್ಕೆ ಮನ್ನಣೆ ಎನ್ನುವುದು ಇದರ ಸಾರ.

ಸಮಾಜದಲ್ಲಿ ನಾವು ಹೆಮ್ಮೆಯಿಂದ ಬದುಕಬೇಕಾದರೆ ಸುತ್ತಲಿನ ಜನ ನಮ್ಮ ಶಕ್ತಿ ಸಾಮರ್ಥ್ಯಗಳನ್ನೂ ಗುರುತಿಸಿ ಅದಕ್ಕೆ ತಕ್ಕ ಗೌರವ ಕೊಡುವಂತಿರಬೇಕು. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರು ಒಂದೇ ಮೌಲ್ಯವುಳ್ಳವರು ಎನ್ನುವ ಧೋರಣೆಯಿದ್ದರೆ ನಮ್ಮ ಶಕ್ತಿ, ಸಾಮರ್ಥ್ಯಕ್ಕೆ ಮನ್ನಣೆ ಸಿಗುವುದಾದರೂ ಎಂತು ? ಸಾಧಾರಣ ವ್ಯಕ್ತಿಯೂ ಒಂದೇ, ಅದ್ಭುತ ಕಲಾವಿದನು ಒಂದೇ ಎಂದರೆ ಮೌಲ್ಯಕ್ಕೆ ತಕ್ಕ ಬೆಲೆ ದಕ್ಕಿದಂತಾಗುವುದಿಲ್ಲ. ವ್ಯಕ್ತಿ, ವ್ಯಕ್ತಿತ್ವ, ಮತ್ತವರ ಕೌಶಲ್ಯದ ಅಂತರಗಳನ್ನು ಗಮನಿಸಿ ಅದಕ್ಕೆ ತಕ್ಕ ಸ್ಥಾನಮಾನ, ಗೌರವ ಕೊಡುವ ಜಾಗದಲ್ಲಿದ್ದರೆ ಮಿಕ್ಕಿದ್ದೆಲ್ಲಾ ಇರಲಿ, ಬಿಡಲಿ – ಅಂತಹ ಕಡೆ ಹೇಗಾದರೂ ಬದುಕಬಹುದು.

ಯಾವ ಜಾಗದಲ್ಲಿ ಎಲ್ಲವೂ ಒಂದೇ ಎನ್ನುವ ಅಳತೆಗೋಲಲ್ಲಿ ನೋಡಲ್ಪಡುವುದೋ ಅಲ್ಲಿ ಮೇಧಾವಿಗಳು ಬದುಕುವುದಾದರೂ ಹೇಗೆ ಸಾಧ್ಯ ? ಪಟ್ಟದಾನೆಯ ಮಟ್ಟದ ರಾಜ ಮರ್ಯಾದೆ ಪಡೆಯುವ ಆನೆಗೂ, ಹಾದಿಬೀದಿಯಲಡ್ಡಾಡಿ ಹೊಲಸು ಸ್ವಚ್ಛಗೊಳಿಸುವ ಹಂದಿಗೂ ಒಂದೇ ಮರ್ಯಾದೆ ಎನ್ನುವ ಜಾಗದಲ್ಲಿ ಪಾಂಡಿತ್ಯ, ಸಾಮರ್ಥ್ಯ, ಪ್ರತಿಭೆಗಳಿಗೆ ತಕ್ಕ ಬೆಲೆ, ಮನ್ನಣೆ ಸಿಗುವುದಿಲ್ಲ. ಅಂತಹ ಕಡೆ ಇದ್ದರೂ ಪ್ರಯೋಜನವಿಲ್ಲ ಎನ್ನುವ ತಾತ್ಪರ್ಯ ಈ ವಚನದಲ್ಲಿದೆ. ಇಲ್ಲಿ ಯಾರನ್ನೂ ಕಡೆಗಣಿಸಬೇಕೆಂದು ಅರ್ಥವಲ್ಲ – ಏಕೆಂದರೆ ಎಲ್ಲರಿಗೂ ಅವರವರಿಗೆ ಸಲ್ಲುವ ಸ್ಥಾನಬೆಲೆ ಇದ್ದೇ ಇರುತ್ತದೆ. ಸ್ಥಾನಬೆಲೆಯ ಅಂತರವನ್ನು ಗುರುತಿಸುವ, ಅದಕ್ಕೆ ತಕ್ಕಂತೆ ಗೌರವಿಸುವ ವ್ಯವಸ್ಥೆ ಇರಬೇಕೆಂದು ಇಲ್ಲಿನ ಮುಖ್ಯ ಆಶಯ. ಹಿಂದಿನ ಕಾಲದಲ್ಲಿ ಎಷ್ಟೋ ಮೇಧಾವಿಗಳು ಸೂಕ್ತ ಆಶ್ರಯ ತಾಣ ಹುಡುಕಿಕೊಂಡು ಹೊರಡುತ್ತಿದ್ದುದು ಈ ಕಾರಣದಿಂದಲೇ ಇರಬೇಕು. ಈ ಕಾಲದಲ್ಲಿ ಕಾಣುವ ಪ್ರತಿಭಾ ಪಲಾಯನಕ್ಕೂ ಇದೇ ಹಿನ್ನಲೆಯಿರುವುದು ಗಮನಾರ್ಹ.

– ನಾಗೇಶ ಮೈಸೂರು
೨೬.೦೭.೨೦೧೭
(ಚಿತ್ರ ಕೃಪೆ : ವಿಕಿಪಿಡಿಯಾ)

(ಅಜ್ಜಂಪುರ ಶಂಕರರ Shankar Ajjampura ಕೋರಿಕೆ ಮೇರೆಗೆ ಮಾಡಿದ ಯತ್ನ; ಅಸಮರ್ಪಕ ಅಥವಾ ಅಸಂಪೂರ್ಣ ಎನಿಸಿದರೆ ಕ್ಷಮೆಯಿರಲಿ)

02125. ಮಂಕುತಿಮ್ಮನ ಕಗ್ಗ ೬೯ ರ ಟಿಪ್ಪಣಿ ರೀಡೂ ಕನ್ನಡದಲ್ಲಿ… 


02125. ಮಂಕುತಿಮ್ಮನ ಕಗ್ಗ ೬೯ ರ ಟಿಪ್ಪಣಿ ರೀಡೂ ಕನ್ನಡದಲ್ಲಿ… 

ನಿಸರ್ಗ ಪಸರಿಸಿದ ರಸಗಂಧ, ಉಸಿರಾಡಲಿದೆಯೆ ನಿರ್ಬಂಧ ?
http://kannada.readoo.in/2017/07/ನಿಸರ್ಗ-ಪಸರಿಸಿದ-ರಸಗಂಧ-ಉಸಿ

02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ


02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ
_________________________________________________


ಹಸುವ ಕೊಂದವನೊಬ್ಬ | ಶಿಶು ಕೊಂದವನೊಬ್ಬ |
ಹುಸಿ ಕರ್ಮಕಾರನವನೊಬ್ಬ ಮೂವರಿಗೆ |
ಶಶಿಧರನೊಲಿದ ಸರ್ವಜ್ಞ ||

ಹಸುವ ಕೊಂದವರಾರು? ಶಿಶುವ ಕೊಂದವರಾರು ? ಹುಸಿ ಕರ್ಮಕಾರರು ಯಾರು ? ಎನ್ನುವುದು ಗೊತ್ತಾದರೆ ಈ ವಚನದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತಾವ ಕ್ಲಿಷ್ಟತೆಯೂ ಕಾಣುವುದಿಲ್ಲ.

ಈ ಮೂರರ ಹುಡುಕಾಟದಲ್ಲಿದ್ದಾಗ ಆಕಸ್ಮಿಕವಾಗಿ ಬಸವಣ್ಣನವರ ಈ ವಚನ ಕಣ್ಣಿಗೆ ಬಿತ್ತು. ಕಾಕತಾಳೀಯವೆಂಬಂತೆ ಮೂರರ ಉತ್ತರವೂ ಅದರಲ್ಲೇ ಕಂಡಾಗ ಅಚ್ಚರಿಯೂ ಆಯ್ತು. ಆ ಬಸವಣ್ಣನವರ ವಚನ ಇಂತಿದೆ :
________________________________________
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶು ವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.

– ಬಸವಣ್ಣ
_________________________________________

ಇದರನುಸಾರ ಸರ್ವಜ್ಞನ ಮೇಲಿನ ವಚನವನ್ನು ವಿಶ್ಲೇಷಿಸಿದರೆ ಅನುಕ್ರಮವಾಗಿ ಶಿವಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಇವರನ್ನು ಕುರಿತಾಗಿ ಹೇಳುತ್ತಾ ಇರುವ ವಚನವೆಂದು ಅರಿವಾಗುತ್ತದೆ. ಅವರವರ ಬಾಹ್ಯ ಕರ್ಮ ಬಾಂಧವ್ಯದ ಹೊರತಾಗಿಯೂ ಅಂತರಂಗದಲ್ಲಿ ಶುದ್ಧ ಶಿವಶರಣರಾದ ಕಾರಣ ಅವರಿಗೆ ಶಶಿಧರ (ಶಿವ) ಒಲಿದ ಎನ್ನುವ ಭಾವಾರ್ಥ ಇಲ್ಲಿದೆ. ಸಾಮಾನ್ಯ ಜನರೂ ಸಹ ಶುದ್ಧ ಭಕ್ತಿಯಿಂದ ಅವರಂತೆಯೇ ಆಗಲು ಸಾಧ್ಯ ಎನ್ನುವುದು ಇಲ್ಲಿ ಅಡಗಿರುವ ಸಂದೇಶ.

(ಸೂಚನೆ: ಈ ಮೂವರ ಹಿನ್ನಲೆ ಕಥೆಯ ವಿವರಣೆ ಈ ವಚನದ ವಿವರಣೆಯ ವ್ಯಾಪ್ತಿಗೆ ಮೀರಿದ್ದು. ಅದಕ್ಕಾಗಿ ಅದನ್ನು ಪರಿಗಣಿಸಲಿಲ್ಲ)

– ನಾಗೇಶ ಮೈಸೂರು
(Picture : Wikipedia)

(ಶಂಕರ ಅಜ್ಜಂಪುರರ Shankar Ajjampura ಕೋರಿಕೆಯ ಮೇರೆಗೆ ವಿವರಿಸಲೆತ್ನಿಸಿದ ವಚನ. ಅಸಂಪೂರ್ಣ / ಅಸಮರ್ಪಕ ವಿವರಣೆಯೆನಿಸಿದರೆ ಕ್ಷಮೆ ಇರಲಿ)

02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ


02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ
_____________________________________________


ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯು ಅಕ್ಕು ಸರ್ವಜ್ಞ ||

ಈ ತ್ರಿಪದಿಯ ಪದಗಳು ನೇರ ಮತ್ತು ಸರಳವಾದ ಕಾರಣ ಇದರ ಭಾವಾರ್ಥ ಓದುತ್ತಿದ್ದಂತೆಯೇ ಗ್ರಹಿಕೆಗೆ ನಿಲುಕಿಬಿಡುತ್ತದೆ. ಇದ್ದುದ್ದರಲ್ಲಿ ‘ಅಕ್ಕು’ ಪದ ಮಾತ್ರ ಸ್ವಲ್ಪ ವಿಶಿಷ್ಠವೆನಿಸುವ ಕಾರಣ ಅದನ್ನು ಮೊದಲು ಗಮನಿಸಿ ನಂತರ ಮಿಕ್ಕದ್ದನ್ನು ಅರ್ಥೈಸೋಣ.

ಅಕ್ಕು ಪದದ ಹಲವಾರು ಅರ್ಥಗಳು ಈ ರೀತಿ ಇವೆ (ಕೆಲವು ನಾಮಪದವಾದರೆ ಕೆಲವು ಕ್ರಿಯಾಪದಗಳು) ದಕ್ಕು, ಜೀರ್ಣವಾಗು; ಅನುಕೂಲವಾಗುವಿಕೆ; ಅಪ್ಪಿಕೊಳ್ಳುವಿಕೆ, ಅಳವಡಿಸುವಿಕೆ ; ಸಂಭವನೀಯತೆ, ಸಾಧ್ಯತೆ; ಲಾಭ ; ಅಭಿಪ್ರಾಯ, ದೃಷ್ಟಿಕೋನ; ನನ್ನ ಅನಿಸಿಕೆಯ ಪ್ರಕಾರ ಈ ವಚನಕ್ಕೆ ಸೂಕ್ತವಾಗಿ ಹೊಂದುವ ಅರ್ಥಗಳು – ದಕ್ಕುವಿಕೆ /ಸಂಭವನೀಯತೆ / ಸಾಧ್ಯತೆ. ಮಿಕ್ಕವುಗಳಲ್ಲಿ ಕೆಲವನ್ನು ಪರೋಕ್ಷವಾಗಿ ಹೊಂದಿಸಿ ವಿವರಿಸಬಹುದಾದರೂ ಒಟ್ಟಾರೆ ಅರ್ಥ ಗ್ರಹಿಕೆಗೆ ಇವಿಷ್ಟೇ ಸಾಕು.

ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
________________________________________

ಹುಟ್ಟಿನಿಂದಲೇ ಸಿರಿವಂತರಾಗಿರುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಹುಟ್ಟಿನಿಂದ ಸಿರಿವಂತರಾಗಿದ್ದವರು ನಂತರ ನಿರ್ಗತಿಕರಾದ ಉದಾಹರಣೆಗಳೇನು ಕಡಿಮೆಯಿಲ್ಲ. ಸಿರಿಯೆನ್ನುವುದು ಯಾವಾಗ ಬರುವುದೋ, ಯಾವಾಗ ಹೋಗುವುದೋ ಹೇಳಬರದು. ಸಿರಿಯಿಲ್ಲದ ಹೊತ್ತಲಿ ಅದರ ಬೇಗೆ ಅನುಭವಿಸಿದವರೂ ಕೂಡ, ಸಿರಿ ಕೈಗೂಡಿತೆಂದರೆ ತಮ್ಮ ಬೇಗೆಯ ದಿನಗಳನ್ನು ಮರೆತುಬಿಡುತ್ತಾರೆ. ಸಿರಿ ಎಷ್ಟು ಕೂಡಿದರೆ ಸಿರಿತನ? ಎಂದಳೆಯುವ ಯಾವ ಮಾನದಂಡವೂ ಇರದ ಕಾರಣ, ಇನ್ನೂ ಸಾಲದು ಮತ್ತಷ್ಟು ಬೇಕೆನ್ನುವತ್ತ ಗಮನವಿರುತ್ತದೆಯೇ ಹೊರತು, ನಾನು ಮೊದಲಿಗಿಂತ ಸಿರಿವಂತನಾದೆ, ನನಗಿಂತ ಕೆಳಗಿರುವವರಿಗೆ ಆದಷ್ಟು ಸಹಾಯ ಮಾಡಬಹುದೆನ್ನುವ ಆಲೋಚನೆ ಬರುವುದಿಲ್ಲ. ಅದನ್ನು ಕಂಡ ಸರ್ವಜ್ಞ ‘ಸಿರಿ ಬಂದಾಗ ಅಗತ್ಯವಿರುವವರನ್ನು ನೀನಾಗಿಯೇ ಕರೆದು ಕೈಲಾದಷ್ಟು ಕೊಡು’ ಎನ್ನುತ್ತಾನೆ. ಇಲ್ಲಿ ಯಾರಾದರೂ ಬಂದು ಬೇಡುವ ತನಕ ಕಾಯದೆ ತಾನಾಗಿಯೇ ಕರೆದು ದಾನ ಮಾಡಬೇಕು ಎನ್ನುವುದು ಗಮನಿಸಬೇಕಾದ ಸಂಗತಿ. ಒಂದೆಡೆ ಇದು ಉದಾರತೆಯ ಸಂಕೇತವಾದರೆ ಮತ್ತೊಂದೆಡೆ ಸಾಮಾಜಿಕ ಸಮತೋಲನವನ್ನು ಸಾಧಿಸಲು ವ್ಯಕ್ತಿಗತ ನೆಲೆಗಟ್ಟಿನಲ್ಲಿಯೂ ಮಾಡಬಹುದಾದ ಕಾರ್ಯಗಳನ್ನು ಸೂಚಿಸುತ್ತದೆ. ಏಕೆಂದರೆ ಇದ್ದವರೆಲ್ಲ ಇಲ್ಲದವರೊಡನೆ ಹಂಚಿಕೊಂಡು ಬಾಳ್ವೆ ನಡೆಸಿದರೆ ಸಮಗ್ರ ಮಟ್ಟದಲ್ಲಿ ಕೊರತೆಯೆನ್ನುವುದು ಸಮಾಜವನ್ನು ಬಾಧಿಸಬಾರದಲ್ಲವೇ ? ಈ ದೃಷ್ಟಿಯಿಂದಲೂ ಈ ಸಾಲು ಅರ್ಥಪೂರ್ಣ.

ಪರಿಣಾಮವಕ್ಕು ಪದವಕ್ಕು..
_____________________________________

ಕರೆದು ಕೊಡಬೇಕೇನೋ ಸರಿ. ಆದರೆ ಅದರಿಂದೇನೂ ಪ್ರಯೋಜನ ? ಯಾಕೆ ದಾನ ಮಾಡಬೇಕು ? ಎನ್ನುವುದರ ಉತ್ತರ ಈ ಸಾಲಿನಲ್ಲಿದೆ. ಹೀಗೆ ದಾನ ಕೊಡುವುದರಿಂದಾಗುವ ಪರಿಣಾಮವೆಂದರೆ ಬಹುಮಾನದ ರೂಪದಲ್ಲಿ ‘ಪದವಿ’ ದಕ್ಕುವುದು. ಯಾವ ಪದವಿ ಎನ್ನುವುದನ್ನು ಅರಿಯಲು ಸ್ವಲ್ಪ ಲೌಕಿಕ ಮತ್ತು ಅಲೌಕಿಕ ಸ್ತರಗಳೆರಡರಲ್ಲು ಇಣುಕಿ ನೋಡಬೇಕು. ದಾನ ಕೊಡುವುದು ಲೌಕಿಕ, ಇಹ ಜಗದ ಕ್ರಿಯಾ ಕರ್ಮ. ಅದರ ಹಿಂದಿರುವ ಅಲೌಕಿಕ ಉದ್ದೇಶ ಪುಣ್ಯ ಸಂಪಾದನೆ. ಪುಣ್ಯ ಹೆಚ್ಚಾದಷ್ಟೂ ಪಾಪ ಕಡಿಮೆಯಾದಷ್ಟೂ ಪರಲೋಕದಲ್ಲಿ ಸಿಕ್ಕುವ ಸ್ಥಾನ ಉನ್ನತ್ತದ್ದಾಗಿರುತ್ತದೆಯೆನ್ನುವ ನಂಬಿಕೆ. ಇನ್ನು ಲೌಕಿಕ ಜಗದಲ್ಲಿನ ಪದವಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ಕೊಡುಗೈ ದೊರೆಗಳೆಂಬ ಬಿರುದಿನ ಜತೆಜತೆಗೆ, ಲೌಕಿಕ ವ್ಯವಹಾರದ ಅದೆಷ್ಟೋ ನಾಯಕತ್ವದ ಹೊಣೆ, ಜವಾಬ್ದಾರಿಗಳು ಪದವಿಯ ರೂಪದಲ್ಲಿ ಸಿಕ್ಕುವುದು ಸಾಮಾನ್ಯ. ಸ್ವಂತದ್ದನ್ನೇ ಕೈ ಬಿಚ್ಚಿ ದಾನಗೈಯುವವರು ತಾನೇ ಸಮಾಜದ ಸಂಪತ್ತನ್ನು ನಿಸ್ವಾರ್ಥದಿಂದ, ದುರ್ಬಳಕೆ ಮಾಡದೆ ನೋಡಬಲ್ಲವರು ? ಒಟ್ಟಿನಲ್ಲಿ ‘ಕರೆದು ದಾನವ ಮಾಡು’ ಎಂದಾಗ ‘ಸಂಪತ್ತನ್ನು ಕೊಟ್ಟು ಕಳೆದುಕೊ’ ಎನ್ನುವ ಅನಿಸಿಕೆ ಮೂಡಿದರೂ, ನೈಜದಲ್ಲಿ ಕೊಟ್ಟದ್ದನ್ನು ಮೀರಿಸುವ ಪದವಿ ಅವರನ್ನು ಅರಸಿಕೊಂಡು ಬರುತ್ತದೆ ಎನ್ನುವುದು ಇಲ್ಲಿನ ತಾತ್ಪರ್ಯ.

ಕೈಲಾಸ | ನೆರೆಮನೆಯು ಅಕ್ಕು ಸರ್ವಜ್ಞ ||
_____________________________________

ಹೀಗೆ ಕರೆದು ದಾನ ಮಾಡುವ ಮಹತ್ಕಾರ್ಯದಿಂದ ಇಹದ ಪದವಿಯ ಜತೆ ಪರದ ಉನ್ನತ ಪದವಿಯೂ ದಕ್ಕುವ ಸಂಭವನೀಯತೆ ಹೆಚ್ಚು ಎಂದು ಈಗಾಗಲೇ ನೋಡಿದೆವು. ಆ ಪರದ ಪದವಿಯ ಔನ್ಯತ್ಯದ ಸಾಧ್ಯತೆ ಎಷ್ಟು ಮಟ್ಟಿಗಿರಬಹುದು ? ಎನ್ನುವುದು ಇಲ್ಲಿ ಸೂಚಿತವಾಗಿದೆ. ಪದವಿಗಳಲೆಲ್ಲ ಪರಮ ಶ್ರೇಷ್ಠ ಪದವಿಯೆಂದರೆ ಯಾವುದು ? ಅಂತಿಮ ಮುಕ್ತಿ, ಮೋಕ್ಷವನಿಯಬಲ್ಲ ಕೈಲಾಸಪದ ತಾನೇ ? ನೀ ಕೊಟ್ಟದ್ದಕ್ಕನುಗುಣವಾಗಿ ಫಲ ಪ್ರಾಪ್ತಿಯಾಗುವುದಲ್ಲದೆ ಕಡೆಗೆ ಕೈಲಾಸ ಪದವಿ ಕೂಡ ದಕ್ಕುವ ಸಾಧ್ಯತೆ, ಸಂಭವನೀಯತೆ ಇರುತ್ತದೆ ಎನ್ನುವ ಸಾರ ಈ ಸಾಲಿನಲ್ಲಿದೆ.

ಈ ತ್ರಿಪದಿಯಲ್ಲಿ ನನಗೆ ಕೊಂಚ ಕಾಡಿದ ಸಾಲು ‘ನೆರೆಮನೆಯು ಅಕ್ಕು’. ಆದರೆ ‘ಕೈಲಾಸ’ ಪದದ ಜತೆಗೆ ಸೇರಿಸಿ ನೋಡಿದರೆ ಹೆಚ್ಚು ಅರ್ಥಗರ್ಭಿತ ಅನಿಸಿತು. ಪರದಲ್ಲೇನೋ ಕೈಲಾಸ ಪದವಿ ಸಿಕ್ಕುತ್ತದೆಯೆನ್ನುವುದು ಸರಿ – ಆದರೆ ಅದು ಇಹದ ಬದುಕಿನ ನಂತರದ ಮಾತಾಯ್ತು. ಹಾಗಾದರೆ ಇಹದ ಸ್ಥಿತಿ ಹೇಗೆ? – ಎಂದರೆ ಕೈಲಾಸವೇ ನೆರೆಮನೆಯೇನೋ ಎನ್ನುವಂತಹ ಅನುಭೂತಿ, ಅನುಭವ, ಅನುಭಾವಗಳು ಇಹಜೀವನದಲ್ಲಿಯೂ ದಕ್ಕುವ ಸಾಧ್ಯತೆ ಇರುತ್ತದೆ. ಕರೆದು ಸಿರಿಯನ್ನು ಕೊಡುವ ಸಂತಸ ಕೈಲಾಸ ಸಾದೃಶ್ಯ ಸಂತೃಪ್ತಿಯನ್ನು ಲೌಕಿಕ ಜಗದಲ್ಲಿಯೂ ಕರುಣಿಸುತ್ತದೆ.

ಈ ವಚನದ ಒಟ್ಟಾರೆ ಸಾರವನ್ನು ಸಮಗ್ರರೂಪದಲ್ಲಿ ಹೇಳುವುದಾದರೆ – ಸಿರಿ ಬಂದ ಹೊತ್ತಲ್ಲಿ ಯಾರು ಅದನ್ನು ತಾವು ಮಾತ್ರವಲ್ಲದೆ ಅಗತ್ಯವಿರುವ ಅರ್ಹರೊಡನೆಯೂ ಹಂಚಿಕೊಂಡು ಬದುಕುವರೋ ಅವರಿಗೆ ಇಹ ಮತ್ತು ಪರ ಎರಡರಲ್ಲೂ ಕೈಲಾಸಕ್ಕೆ ಸರಿಸಮಾನವಾದ ಪದವಿ, ತೃಪ್ತಿ, ಆನಂದ, ಸುಖ, ಸಂತೋಷಗಳು ಸಿಕ್ಕುತ್ತವೆ. ಹೆಚ್ಚು ಕೊಟ್ಟಷ್ಟೂ ಹೆಚ್ಚೆಚ್ಚು ಫಲ ದೊರಕುವ ಸಾಧ್ಯತೆ ಹೆಚ್ಚು.

– ನಾಗೇಶ ಮೈಸೂರು

( Yamunab Bsyಯವರ ಕೋರಿಕೆಯ ಮೇರೆಗೆ ವಿವರಿಸಲು ಯತ್ನಿಸಿದ್ದು. ವಿವರಣೆ ಅಸಮರ್ಪಕ ಅಥವಾ ಅಸಂಪೂರ್ಣವೆನಿಸಿದರೆ ಕ್ಷಮೆಯಿರಲಿ)

02121. ಸರ್ವಜ್ಞನ ವಚನಗಳು ೦೦೦೬. ಕಿಚ್ಚಿಗೆ ತಣಿವಿಲ್ಲ


02121. ಸರ್ವಜ್ಞನ ವಚನಗಳು ೦೦೦೬. ಕಿಚ್ಚಿಗೆ ತಣಿವಿಲ್ಲ
_____________________________________________


ಕಿಚ್ಚಿಗೆ ತಣಿವಿಲ್ಲ | ನಿಶ್ಚಯಕೆ ಹುಸಿಯಲ್ಲ |
ಮುಚ್ಚಳವಿಲ್ಲ ಪರಮಂಗೆ | ಶಿವಯೋಗಿ
ಗಚ್ಚುಗವಿಲ್ಲ ಸರ್ವಜ್ಞ ||

ಕಿಚ್ಚು ಎಂದರೆ ಬೆಂಕಿ.
ತಣಿವುದು ಎಂದರೆ ತಂಪಾಗುವುದು ಅಥವಾ ಸಂತೃಪ್ತವಾಗುವುದು ಎಂದಾಗುತ್ತದೆ.
ಹುಸಿ ಎಂದರೆ ಸುಳ್ಳು, ಅನೃತ, ನಿಜವಲ್ಲದ್ದು.
ಅಚ್ಚುಗ ಎಂದರೆ ಮರುಕ, ಅಳಲು, ಕೊರೆ, ಮಿಡುಕು ಇತ್ಯಾದಿ ಅರ್ಥಗಳಿವೆ.

ಈ ಅರ್ಥಗಳ ಹಿನ್ನಲೆಯಲ್ಲಿ ಈ ವಚನದ ಅರ್ಥ ಹುಡುಕೋಣ.

ಕಿಚ್ಚಿಗೆ ತಣಿವಿಲ್ಲ |
________________

ಅರ್ಥ: ಉರಿಯುತ್ತಿರುವ ಕಿಚ್ಚಿನ ಮೂಲಸ್ವಭಾವ ಎಂತಾದ್ದೆಂದರೆ ಅದೆಂದಿಗೂ ಸಂತೃಪ್ತಗೊಂಡು ಶಾಂತವಾಗುವುದಿಲ್ಲ. ತನ್ನ ಅಸ್ತಿತ್ವವಿರುವ ತನಕ ಸುತ್ತಮುತ್ತಲನ್ನು ದಹಿಸಿ, ಆಪೋಷಿಸಿಕೊಂಡು ಹೋಗುತ್ತಿರುತ್ತದೆ. ತಣಿದು ಸ್ತಬ್ದವಾಗುವುದು ಅದರ ಜಾಯಮಾನವಲ್ಲ.

ಹೆಚ್ಚುವರಿ ಟಿಪ್ಪಣಿ :
_________________

ಕಿಚ್ಚು ಅರ್ಥಾತ್ ಬೆಂಕಿಗೆ ತಣಿವು (ಅಂದರೆ ತಂಪು, ಸಂತೃಪ್ತಿ) ಇರುವುದು ಸಾಧ್ಯವಿಲ್ಲ. ಯಾಕೆಂದರೆ ಅವೆರಡರ ಭೌತಿಕ ಅಸ್ತಿತ್ವ ಒಟ್ಟಾಗಿರುವುದು ಸಾಧ್ಯವಿಲ್ಲ. ಅವೆರಡೂ ಪರಸ್ಪರ ವಿರೋಧಾಭಾಸದ ಗುಣ ಸ್ವರೂಪ ಸೂಚಕಗಳು. ಈ ವಚನದಲ್ಲಿ ಕಿಚ್ಚಿಗೆ ಆರಿಹೋಗುವ, ತಣಿದು ತಂಪಾಗಿಬಿಡುವ ಉದ್ದೇಶವಿಲ್ಲ ಅಥವಾ ಬರಿ ಕಿಚ್ಚು ಮಾತ್ರ ಇದ್ದಲ್ಲಿ ತಣಿಯುವುದು ಸಾಧ್ಯವಿಲ್ಲ ಎನ್ನುವ ಅರ್ಥ ಗೋಚರಿಸುತ್ತದೆ.

ಆದರೆ ಇಲ್ಲಿ ಕಿಚ್ಚು ಎಂದರೆ ಬೆಂಕಿ ಎಂದು ಮಾತ್ರ ಅರ್ಥವೆ ? ಖಂಡಿತ ಇಲ್ಲ. ಪರರ ಏಳಿಗೆ, ಉನ್ನತಿಯನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರನ್ನು ಕಂಡಾಗ ಆ ಅಸೂಯೆಯೆಂಬ ಕಿಚ್ಚಿನ ನೆನಪಾಗುತ್ತದೆ. ಇನ್ನು ಹಸಿವೆ ? ಹಸಿವೆಯೆಂಬ ಬೆಂಕಿ ಹೊಟ್ಟೆಯನ್ನು ಸುಡುವಾಗ ಎಂತಹ ಸೌಮ್ಯ ಮನ ಕೂಡ ರೊಚ್ಚಿಗೆದ್ದು ರೋಷತಪ್ತವಾಗಿಬಿಡುತ್ತದೆ. ದೈಹಿಕ ಕಾಮನೆಯೆಂಬ ಕಾಡಿನ ಬೆಂಕಿಯನ್ನು ಅರಿಯದವರಾರು ? ಆಸೆಯೆಂಬ ಕಿಚ್ಚನ್ನು ಜಯಿಸಿದ ಜಿತೇಂದ್ರಿಯರೆಷ್ಟು ಮಂದಿ ಸಿಕ್ಕಾರು ? ಸಿಟ್ಟು, ಕೋಪದ ಕಿಚ್ಚಿಗೆ ಕಡಿವಾಣ ಹಾಕಿ ಜಯಶೀಲರಾದ ಮಹನೀಯರದೆಷ್ಟು ಜನ ಸಿಕ್ಕಾರು ? ಹೀಗೆ ಕಿಚ್ಚಿನ ವಿಶ್ವರೂಪ ಹುಡುಕುತ್ತ ಹೋದರೆ ಅದರ ನೂರೆಂಟು ಅವತಾರಗಳ ಅನಾವರಣವಾಗುತ್ತಾ ಹೋಗುತ್ತದೆ. ಅದ್ಯಾವ ರೀತಿಯ ಕಿಚ್ಚಾದರೂ ಸರಿ – ಅದು ಒಂದು ಬಾರಿ ತೋರಿಕೊಂಡಿತೆಂದರೆ ಮುಗಿಯಿತು; ಬಡಪೆಟ್ಟಿಗೆ ತಣಿಯುವ ಪೈಕಿಯದಲ್ಲ ಅದು. ಅದನ್ನು ನಿಯಂತ್ರಿಸುವ ಏಕೈಕ ನಿಖರ ಮಾರ್ಗವೆಂದರೆ ಬರುವ ಮೊದಲೆ ಅದನ್ನು ತಡೆ ಹಿಡಿಯುವುದು. ಅದರೆ ಹಾಗೆ ಮಾಡಬಲ್ಲ ಮಹಾಸಹಿಷ್ಣುಗಳು ಅದೆಷ್ಟು ಇದ್ದಾರು, ಈ ಜಗದಲ್ಲಿ ? ಅದೇನೆ ಇರಲಿ ಬಂದ ಮೇಲೆ ಕಿಚ್ಚಿಗೆ ತಣಿವಿಲ್ಲವಾದ ಕಾರಣ ಬರದ ಹಾಗೆ ನೋಡಿಕೊಳ್ಳುವುದೆ ಜಾಣತನ.

ಅದೇ ಕಿಚ್ಚಿನ ಜ್ವಾಲೆ ಧನಾತ್ಮಕವಾಗಿದ್ದಾಗ – ಉದಾಹರಣೆಗೆ ಏನನ್ನಾದರೂ ಸಾಧಿಸಲೇಬೇಕೆನ್ನುವ ಹಠದ ಕಿಚ್ಚು ಹೊತ್ತಿಕೊಂಡಾಗ, ಸಮಾಜಕ್ಕೆ ಒಳಿತು ಮಾಡಬೇಕೆನ್ನುವ ಸೇವೆಯ ಕಿಚ್ಚು ಉದ್ದೀಪನಗೊಂಡಾಗ, ದೇಶಪ್ರೇಮದ ಕಿಚ್ಚು ಪ್ರಜ್ವಲಿಸುವಾಗ – ಇಲ್ಲಿಯೂ ಅದೇ ಕಿಚ್ಚಿನ ಶಕ್ತಿ ಸಕ್ರಿಯವಾಗಿದ್ದರು ಪರಿಣಾಮ ಮಾತ್ರ ತದ್ವಿರುದ್ಧ. ಒಮ್ಮೆ ಈ ಕಿಚ್ಚು ಹೊತ್ತಿಕೊಂಡರೆ ಅದೇ ಸಾಮಾನ್ಯನನ್ನು ಸಾಧಕನನ್ನಾಗಿಸಿಬಿಡುತ್ತದೆ – ಆ ಕಿಚ್ಚನ್ನು ತಣಿಯಬಿಡದೆ ಕಾಪಾಡಿಕೊಂಡರೆ.

ಒಟ್ಟಾರೆ ಕಿಚ್ಚೆನ್ನುವುದು ಒಮ್ಮೆ ಹತ್ತಿಕೊಂಡರೆ ಅದನ್ನು ವಿನಾಶಕಾರಿಯಾಗಿಯು ಬಳಸಬಹುದು, ಪ್ರೇರಕ ಶಕ್ತಿಯಾಗಿಯು ಬಳಸಬಹುದು. ಋಣಾತ್ಮಕ ವಿಷಯಗಳಿಗೆ ಬಂದಾಗ, ಮುಕ್ಕಣ್ಣನ ಮೂರನೇ ಕಣ್ಣಿನ ಹಾಗೆ; ತೆರೆದಾಗ ವಿನಾಶ ಖಚಿತವಾದ ಕಾರಣ ಮುಚ್ಚಿಕೊಂಡಿರುವುದೇ ಕ್ಷೇಮ. ಲೋಕ ಕಲ್ಯಾಣಾರ್ಥ ಕಾರ್ಯದಲ್ಲಿ ಅಂತಹ ಕಿಚ್ಚನ್ನು ಪ್ರಚೋದಕ ಶಕ್ತಿಯಾಗಿ ಬಳಸಿ ಕಾರ್ಯಸಾಧಿಸುವುದು ಜಾಣತನ. ಹೀಗೆ ಸುಲಭದಲ್ಲಿ ತಣಿಯದ / ಶಾಂತವಾಗದ ಕಾರಣ ಕಿಚ್ಚನ್ನು ಬಳಸುವ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕೆನ್ನುವ ನೀತಿ ಇಲ್ಲಿ ಅಡಕ.

ನಿಶ್ಚಯಕೆ ಹುಸಿಯಲ್ಲ |
_____________________

ಅರ್ಥ: ಒಮ್ಮೆ ನಿಶ್ಚಯಿಸಿದ ಮೇಲೆ ಅದು ಹುಸಿಯಾಗಬಾರದು. ಹಾಗೆ ನಿರ್ಧರಿಸಿ ವಚನ ಕೊಟ್ಟ ಮೇಲೆ ಮಾತು ತಪ್ಪಬಾರದು. ನಿಶ್ಚಯ ಎನ್ನುವ ಪದವೇ ದೃಢ ನಿರ್ಧಾರವೆನ್ನುವ ಸಂಕೇತ (ನಿಜವಾಗುವಂತದ್ದು, ಸತ್ಯವಾಗುವಂತದ್ದು). ಹುಸಿ ನಿಶ್ಚಯವೆಂದರೆ (‘ಸುಳ್ಳಾಗುವ ಸತ್ಯ’ ಎನ್ನುವ ಅರ್ಥದಲ್ಲಿ) ವಿರೋಧಾಭಾಸವಾದಂತೆ. ಆದಕಾರಣ ನಿಶ್ಚಯಕೆ, ಹುಸಿತನ ಸಲ್ಲದು. ಒಟ್ಟಾರೆ ಯಾವುದೇ ಸಂಧರ್ಭವಿರಲಿ – ನಿಶ್ಚಯದ ಬಲವಿದ್ದಲ್ಲಿ ಹುಸಿ ಹೋಗುವ ಭಯವಿಲ್ಲ ಎನ್ನುವ ಧೈರ್ಯವನ್ನು ತುಂಬುತ್ತಿದೆ ಈ ಸಾಲು.

ಹೆಚ್ಚುವರಿ ಟಿಪ್ಪಣಿ :
_________________

ಕಿಚ್ಚು ಮತ್ತು ತಣಿಯುವಿಕೆಯ ರೀತಿಯಲ್ಲೆ ನಿಶ್ಚಯ ಮತ್ತು ಹುಸಿ ಪದಗಳನ್ನು ಅರ್ಥೈಸಿಕೊಳ್ಳಬಹುದು. ನಿಶ್ಚಯವೆನ್ನುವುದು ಒಂದು ನಿರ್ಧಾರದ ತೀರ್ಮಾನ. ನಾವು ನಿಶ್ಚಿತ ಎಂದಾಗ ಹೆಚ್ಚುಕಡಿಮೆ, ಖಡಾಖಂಡಿತ ನಡೆದೇ ನಡೆಯುತ್ತದೆ ಎನ್ನುವ ಅನಿಸಿಕೆ, ನಿರೀಕ್ಷೆ. ಹೀಗೆ ಏನಾದರೂ ದೊಡ್ಡ ಕಾರ್ಯಕ್ಕೆ ಕೈ ಹಾಕುವ ನಿರ್ಧಾರ, ನಿಶ್ಚಯ ಮಾಡಿದರೆ, ಕಾರ್ಯರೂಪಕ್ಕೆ ತರುವ ನೈಜ ಇಂಗಿತವಿದ್ದರಷ್ಟೆ ಅದನ್ನು ಮಾಡಲು ಸಾಧ್ಯ. ಆ ನಿರ್ಧಾರ ಕೈಗೊಂಡಾಗ ಅದು ಅನೇಕರಲ್ಲಿ ನಿರೀಕ್ಷೆ ಹುಟ್ಟಿಸಿರುತ್ತದೆ. ಆ ನಿರೀಕ್ಷೆ ಹುಸಿಯಾಗಿ ಹೋಗದಂತೆ, ಸುಳ್ಳಾಗಿಬಿಡದಂತೆ ಕಾಪಾಡಿಕೊಳ್ಳುವುದು ಮುಖ್ಯ. ಒಂದು ಸಾರಿ ದೃಢ ನಿಶ್ಚಯ ಮಾಡಿದ ಮೇಲೆ ಅದು ಹುಸಿಯಾಗುವುದು ತರವಲ್ಲ. ಹೀಗಾಗಿ ನಿಶ್ಚಯ ಮತ್ತು ಹುಸಿಯಾಗುವಿಕೆ ಜೊತೆಜೊತೆಗೆ ಹೋಗುವುದು ಸಾಧ್ಯವಿಲ್ಲ. ಕಿಚ್ಚಿಗೆ ಹೇಗೆ ತಂಪು ಜತೆಯಾಗಲು ಸಾಧ್ಯವಿಲ್ಲವೊ, ಅಂತೆಯೆ ನಿರ್ಧಾರ ಮತ್ತದನ್ನು ಪಾಲಿಸದ ಹುಸಿತನ ಜೆತೆಯಾಗಿ ಹೋಗಲು ಸಾಧ್ಯವಿಲ್ಲ.

ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ – ನಾವು ಕೈಗೊಂಡ ನಿರ್ಧಾರ, ನಿಶ್ಚಯ ಸರಿಯಾದುದ್ದಾದರೆ, ಬಲವಾದದ್ದಾದರೆ ಅದರ ನಿರೀಕ್ಷಿತ ಫಲಿತಾಂಶ ಎಂದಿಗೂ ಹುಸಿಯಾಗದು. ನಂಬಿಕೆಯ ಜತೆ ಆತ್ಮವಿಶ್ವಾಸದಿಂದ ಎದೆಗುಂದದೆ ಮುನ್ನಡೆದಲ್ಲಿ ಅಂತಿಮ ಗಮ್ಯ ತಲುಪುವ ಸಾಧ್ಯತೆ ಎಂದಿಗೂ ಹುಸಿಯಾಗಿ ಹೋಗುವುದಿಲ್ಲ. ಆ ಭರವಸೆಯ ದೃಢನಂಬಿಕೆ ಜತೆಗಿದ್ದರೆ ಸಾಕು.

ಸಾರದಲ್ಲಿ, ಯಾರಿಗೇ ಆಗಲಿ ಯಾವುದೇ ಮಾತು ಕೊಡಬೇಕೆಂದರೆ ಅದನ್ನು ಹುಸಿಯಾಗಿಸದ ಭರವಸೆಯಿದ್ದರೆ ಮಾತ್ರ ಕೊಡಬೇಕು. ಪೂರ್ವಾಪರ ಯೋಚಿಸಿ, ವಿವೇಚಿಸಿ ಯಾವುದೇ ನಿರ್ಧಾರ ಕೈಗೊಂಡಾದ ಮೇಲೆ ಅದರತ್ತ ಆತ್ಮವಿಶ್ವಾಸದಿಂದ ಮುನ್ನಡೆದರೆ ಆಗ ಜಯ ಖಚಿತ.

ಮುಚ್ಚಳವಿಲ್ಲ ಪರಮಂಗೆ |
___________________________

ಅರ್ಥ: ಪರಮಾತ್ಮನಿಗೆ ಯಾವುದೇ ಇತಿಮಿತಿಯಿಲ್ಲ, ಮುಚ್ಚುಮರೆಯಿಲ್ಲ; ಅವನು ಅನಂತ, ಅಸೀಮ. ಅವನನ್ನು ಹೀಗೇ ಎಂದು ಸಂಕ್ಷೇಪಿಸಿ, ಪೆಟ್ಟಿಗೆಯಲಿಟ್ಟಂತೆ ಸೀಮಿತ ಚೌಕಟ್ಟಲಿ ಬಂಧಿಸಿ, ಕೊನೆಗೆ ಮುಚ್ಚಳ ಮುಚ್ಚಿ – ‘ಅವನೆಂದರೆ ಇಷ್ಟೇ’ ಎಂದು ರೂಪುರೇಷೆ ನಿರ್ಧರಿಸುವುದು ಅಸಾಧ್ಯ. ಸ್ವತಃ ಅವನೇ ಮುಚ್ಚಳವಿಲ್ಲದವನು ಎಂದಾಗ ಪೆಟ್ಟಿಗೆಯೂ ಸೇರಿದಂತೆ ಎಲ್ಲವೂ ಅವನೇ ಎನ್ನುವ ಭಾವ ಕೂಡ ಪ್ರಸ್ತುತವಾಗುತ್ತದೆ.

ಹೆಚ್ಚುವರಿ ಟಿಪ್ಪಣಿ :
_________________

ಮುಚ್ಚಳವಿಲ್ಲ ಎಂದಾಗ ಮನಸಿಗೆ ಬರುವುದು ಬಿಚ್ಚುತನ. ಆದರೆ ಇದರರ್ಥವನ್ನು ಎರಡನೆಯ ಪದ ಪರಮಂಗೆಯ ಜತೆಗೂಡಿಸಿ ನೋಡಬೇಕು. ಮೊದಲಿಗೆ ‘ಪರಮ’ ಅಂದರೆ ಯಾರು ಎಂದು ಅರ್ಥ ಮಾಡಿಕೊಂಡರೆ ಮುಚ್ಚಳದ ಅರ್ಥ ಸಹಜವಾಗಿ ಹೊಮ್ಮುತ್ತದೆ. ಯಾರು ಈ ಪರಮಾ? ಪರಮನೆಂದರೆ ಮಿಕ್ಕವರೆಲ್ಲರಿಗಿಂತಲೂ ಶ್ರೇಷ್ಟನಾದವನು, ಉನ್ನತನಾದವನು, ಉಚ್ಛ ಶ್ರೇಣಿಗೆ ಸೇರಿದವನು, ಹೋಲಿಕೆಯಲ್ಲಿ ಎಲ್ಲರನ್ನು, ಎಲ್ಲವನ್ನು ಮೀರಿದವನು; ಅರ್ಥಾತ್ ಪರಮಾತ್ಮನೆಂದು ಹೇಳಬಹುದು. ಮುಚ್ಚಳವಿಲ್ಲ ಪರಮಂಗೆ ಎಂದಾಗ ಇತಿಮಿತಿಗಳ ಪರಿಮಿತಿಯಿಲ್ಲ ಭಗವಂತನಿಗೆ ಎಂದರ್ಥವಾಗುತ್ತದೆ. ಈಗ ಮುಚ್ಚಳವಿಲ್ಲ ಎನ್ನುವುದರ ಮತ್ತಷ್ಟು ಅರ್ಥಗಳೂ ಹೊರಹೊಮ್ಮುತ್ತವೆ – ಆದಿ-ಅಂತ್ಯಗಳಿಲ್ಲದವನು, ಮುಚ್ಚುಮರೆಯಿರದವನು, ಅಡೆತಡೆಗಳ ಹಂಗಿಲ್ಲದವನು, ಮಿತಿಯಿಲ್ಲದ ಅಮಿತನು, ಯಾವುದೇ ನಿರ್ಬಂಧದಿಂದ ಬಂಧಿಸಲ್ಪಡದವನು ಎಂದೆಲ್ಲಾ ಅರ್ಥೈಸಬಹುದು ಮತ್ತು ಎಲ್ಲವೂ ಸೂಕ್ತವಾಗಿ ಹೊಂದಿಕೊಳ್ಳುವ ವರ್ಣನೆಗಳೇ ಆಗುತ್ತವೆ. ಒಟ್ಟಾರೆ ಆ ಪರಮಾತ್ಮನಿಗೆ ಅಸಾಧ್ಯವಾದುದ್ದು ಏನೂ ಇಲ್ಲ ಎನ್ನುವುದನ್ನು ಸರಳವಾಗಿ ‘ಮುಚ್ಚಳವಿಲ್ಲ ಪರಮಂಗೆ’ ಎನ್ನುವ ಎರಡು ಪದಗಳಲ್ಲಿ ಕಟ್ಟಿಕೊಟ್ಟಿದ್ದಾನೆ ಸರ್ವಜ್ಞ.

..ಶಿವಯೋಗಿಗಚ್ಚುಗವಿಲ್ಲ ಸರ್ವಜ್ಞ ||
______________________________

ಅರ್ಥ: ಶಿವನನ್ನೊಲಿಸಿಕೊಳ್ಳಲೆಂದು ಶಿವಯೋಗಿಯಾದವರಿಗೆ (ಅಥವಾ ಆ ಹಾದಿಯಲ್ಲಿ ಹೊರಟ ಭಕ್ತರಿಗೆ) ಯಾವುದೇ ಅಡೆತಡೆಯಾಗಲಿ, ಆಳುಕಾಗಲಿ, ಅರೆಕೊರೆಯಾಗಲಿ, ಪ್ರಾಪಂಚಿಕ ಬಂಧನವಾಗಲಿ ಕಾಡುವುದಿಲ್ಲ. ಯಾವ ತಡೆಯು ಅವರ ಸಾಧನೆಗೆ ಅಡ್ಡಿಯಾಗುವುದಿಲ್ಲ. ಎಲ್ಲವನ್ನು ಜಯಿಸಿ ಅವರು ಮುಂದುವರೆಯುತ್ತಾರೆ.

ಹೆಚ್ಚುವರಿ ಟಿಪ್ಪಣಿ :
_________________

ಇಲ್ಲಿ ಶಿವಯೋಗಿಯೆಂದರೆ ಶಿವಭಕ್ತರು, ಶಿವನನ್ನು ಹತ್ತಿರದಿಂದ ಆರಾಧಿಸುವ ಸಿದ್ದರು, ಯೋಗಿಗಳೂ, ಋಷಿಗಳೂ – ಎಲ್ಲರನ್ನು ಪರಿಗಣಿಸಬಹುದು. ಅಚ್ಚುಗವೆಂದರೆ ಕೊರೆ, ಅಳಲು, ಮರುಕ, ಮಿಡುಕ ಎಂದೆಲ್ಲಾ ಅರ್ಥವಿರುವುದು. ಇವೆರಡನ್ನೂ ಒಗ್ಗೂಡಿಸಿ ನೋಡಿದರೆ ಶಿವನನ್ನು ಆರಾಧಿಸುವವರಿಗೆ ಯಾವುದೆ ರೀತಿಯ ಚಿಂತೆಯಾಗಲಿ, ಅಳಲಾಗಲಿ ಇರುವುದಿಲ್ಲ ಎಂಬರ್ಥ ಬರುತ್ತದೆ. ಸರ್ವಸಂಗ ಪರಿತ್ಯಾಗಿಯಾದವರಿಗೆ ಯಾವುದೂ ಕೊರತೆಯಾಗಿ ಕಾಣಿಸಿಕೊಳ್ಳುವುದಿಲ್ಲ. ಬದುಕಿನ ಯಾವುದೇ ರಾಗದ್ವೇಷಗಳಾಗಲಿ ಕಾಡುವುದಿಲ್ಲ. ಯಾವ ಕುಂದು ಕೊರತೆಗಳೂ ಸ್ವಯಂಮರುಕ ಹುಟ್ಟಿಸುವುದಿಲ್ಲ. ಒಟ್ಟಾರೆ ನಿಜವಾದ ಅರ್ಥದಲ್ಲಿ ಶಿವಯೋಗಿಯಾದವನಿಗೆ ಶಿವನ ಆರಾಧನೆಯ ಹೊರತೂ ಮತ್ತಾವುದು ಬೇಕಿಲ್ಲದ ಕಾರಣ ಯಾವೊಂದು ಅಳಲೂ ಕಾಡುವುದಿಲ್ಲ. ಅಂತಹ ನಿಜಭಕ್ತರಿಗೆ ಐಹಿಕ ಪ್ರಪಂಚದ ಮೋಹ-ಮಮಕಾರಗಳು ಅಡ್ಡಿಯಾಗವು, ಸಾಂಸಾರಿಕ ಬಂಧನಗಳು ತೊಡಕಾಗವು.

ವಚನದ ಒಟ್ಟಾರೆ ಅರ್ಥ :
______________________

ಈ ವಚನವನ್ನು ಸಮಗ್ರವಾಗಿ ಸಾರದಲ್ಲಿ ಹೇಳುವುದಾದರೆ “ಸಾಧನೆಯ ಹಾದಿಯಲ್ಲಿ ಹೊರಟ ಶರಣನು (ಶಿವಭಕ್ತನು) ಸರಿಯಾದ ಗಮ್ಯ-ಗುರಿಯ ಕಿಚ್ಚು ಹಚ್ಚಿಕೊಂಡು, ಬಲವಾದ ದೃಢ ನಿಶ್ಚಯದೊಡನೆ ಮುನ್ನಡೆದರೆ ಯಾವುದೇ ಮಿತಿಯಿಲ್ಲದ (ಅಮಿತವಾದ) ಪರಮಾತ್ಮನ ಕೃಪೆ-ಕರುಣೆಯಿಂದಾಗಿ ಯಾವುದೇ ಅಡೆತಡೆ ಕುಂದುಕೊರತೆಗೀಡಾಗದೆ ತನ್ನ ಗುರಿಯನ್ನು ಮುಟ್ಟಬಹುದು”. ಮುಕ್ತಿ, ಮೋಕ್ಷದ ಹಾದಿಯಲ್ಲಿರುವ ಶರಣರಿಂದ ಹಿಡಿದು ಐಹಿಕ ಲೋಕದ ಸೌಖ್ಯವನ್ನು ಬೆನ್ನಟ್ಟುವ ಭಕ್ತರೆಲ್ಲರಿಗೂ ಅನ್ವಯವಾಗುವ ಸಂದೇಶವಿದು.

– ನಾಗೇಶ ಮೈಸೂರು
ಚಿತ್ರ ಕೃಪೆ : ವಿಕಿಪಿಡಿಯಾ

( ಶ್ರೀಯುತ ಅಜ್ಜಂಪುರ ಶಂಕರರ Shankar Ajjampura ಕೋರಿಕೆಯ ಮೇರೆಗೆ ಮಾಡಿದ ಯತ್ನ. ವಿವರಣೆ ಅಸಮರ್ಪಕ ಅಥವಾ ಅಸಂಪೂರ್ಣವೆನಿಸಿದರೆ ಕ್ಷಮೆಯಿರಲಿ)

02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು


02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು
__________________________________________
(Yamunab Bsyರ ಕೋರಿಕೆಯನುಸಾರ ವಿವರಿಸುವ ಯತ್ನ)


ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |
ಉತ್ತಮರಧಮರೆನಬೇಡ, ಅವರೊಂದು |
ಮುತ್ತಿನಂಥವರು ಸರ್ವಜ್ಞ ||

ಉತ್ತಮರ ಮತ್ತು ಅಧಮರ ನಡುವಿನ ವ್ಯತ್ಯಾಸವನ್ನು ಹೇಳುವ ಹಲವಾರು ತ್ರಿಪದಿಗಳಲ್ಲಿ ಇದೂ ಒಂದು. ಯಾರನ್ನಾದರೂ ಉತ್ತಮರೆಂದು ಹೇಳಬೇಕಾದರೆ ಹಲವಾರು ಮಾನದಂಡಗಳನ್ನು ಬಳಸಬಹುದು. ಇಲ್ಲಿ ಉತ್ತಮರ ಅಂತದ್ದೇ ಒಂದು ಗುಣವನ್ನು ಬಳಸಿಕೊಂಡು ವ್ಯತ್ಯಾಸವನ್ನು ಹೇಳಲಾಗಿದೆ – ಅದು, ಸತ್ಯದ ಮಾರ್ಗದಲ್ಲಿ ನಡೆಯುವ ಮಾನದಂಡ.

ಈ ವಿವರಕ್ಕೆ ಬರುವ ಮೊದಲು ಉತ್ತಮರು ಎಂದರೇನು ಎಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋಣ. ಸರಳವಾಗಿ ಹೇಳುವುದಾದರೆ ‘ಒಟ್ಟಾರೆ ಒಳ್ಳೆಯವರು’ ಎಂದು ಅರ್ಥೈಸಿಬಿಡಬಹುದಾದರೂ ಸ್ವಲ್ಪ ವಿಭಿನ್ನವಾಗಿ ಯೋಚಿಸೋಣ. ಉತ್ತಮ ಎನ್ನುವುದರರ್ಥ ಹೋಲಿಕೆಯಲ್ಲಿ ಹೆಚ್ಚು ಗುಣಮಟ್ಟದ್ದು ಎಂದು. ಹೀಗಾಗಿ ಉತ್ತಮರು ಎಂದಾಗ ಅತ್ಯುತ್ಕೃಷ್ಟರು, ಪರಿಪೂರ್ಣರು ಎಂದು ನೋಡದೆ ಪರಸ್ಪರ ಹೋಲಿಕೆಯಲ್ಲಿ ಉನ್ನತ ಸ್ತರದವರು ಎಂದು ನೋಡಬೇಕು. ಆಗ ಉತ್ತಮರಲ್ಲಿಯೇ ಹಲವು ಶ್ರೇಣಿಗಳನ್ನು ಊಹಿಸಲು ಸಾಧ್ಯವಾಗುತ್ತದೆ – ತರಗತಿಯ ವಿದ್ಯಾರ್ಥಿಗಳಿಗೆ ಕೊಡುವ ಅಂಕ ಶ್ರೇಣಿಯ ಹಾಗೆ. ಹೀಗಾಗಿ ಉತ್ತಮಿಕೆ ಪಕ್ವವಾಗುತ್ತ ಹೆಚ್ಚು ಉತ್ತಮವಾಗುತ್ತ ಹೋಗುವ ಸಾಧ್ಯತೆ ನಿರಂತರವಾಗುತ್ತದೆ. ಇದೇ ಜಾಡಿನಲ್ಲಿ ಅಧಮಿಕೆಯಲ್ಲೂ ವಿವಿಧ ಸ್ತರದ ಶ್ರೇಣಿಯನ್ನು ಊಹಿಸಿಕೊಳ್ಳಬಹುದು.

೧. ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |

ಉತ್ತಮರೆಂದೆನಿಸಿಕೊಂಡವರ ಒಂದು ಗುಣಧರ್ಮ – ಎಷ್ಟೇ ಕಷ್ಟವಾದರೂ ಸರಿ ಸತ್ಯದ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುವುದು. ಆಗ ನಂಟು, ಕೆಳೆ, ಲಾಭ, ನಷ್ಟಗಳನ್ನು ನೋಡದೆ ಖಡಾಖಂಡಿತವಾಗಿ ನಡೆಯಬೇಕಾದ ಸಂಧರ್ಭಗಳು ಅನೇಕ ಬಾರಿ ಎದುರಾಗುತ್ತವೆ. ಉತ್ತಮರ ಒಂದು ಮುಖ್ಯ ಗುಣವೆಂದರೆ ಅದೇನೇ ಕಷ್ಟಬಂದರು ಬಿಡದೆ ಸತ್ಯ ಮಾರ್ಗದಲ್ಲಿ ನಡೆಯುವುದು. ಆ ಕಠೋರ ಪ್ರಜ್ಞಾಪೂರ್ವಕ ಪರಿಪಾಲನೆಯೇ ಅವರನ್ನು ನಾಯಕತ್ವದ ಮಟ್ಟಕ್ಕೆ ಏರಿಸಿಬಿಟ್ಟಿರುತ್ತದೆ. ಹೀಗಾಗಿ ಅವರು ನಡೆದುಕೊಳ್ಳಬೇಕಾದ ರೀತಿ ನೀತಿಯ ಬಗ್ಗೆಯೂ ಇತರರಲ್ಲಿ ಒಂದು ರೀತಿಯ ಪೂರ್ವಯೋಜಿತ ನಿರೀಕ್ಷೆ ಹುಟ್ಟಿಕೊಂಡಿರುತ್ತದೆ. ಅವರ ಒಳ್ಳೆಯತನದ ಕಾರಣದಿಂದಲೇ ಅವರ ಜನಪ್ರಿಯತೆಯು ಹೆಚ್ಚಿರುತ್ತದೆ.

೨. ಉತ್ತಮರಧಮರೆನಬೇಡ

ಆದರೆ ಹಾಗೆ ನಡೆಯುವುದೇನು ಸುಲಭವೇ ? ಪ್ರಚಲಿತವಿರುವ ಲೋಕವಾಣಿಯಂತೆ ‘ಖಂಡಿತವಾದಿ ಲೋಕವಿರೋಧಿ’ ಎಂಬ ನಾಣ್ಣುಡಿಯೇ ಇದೆ. ‘ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೊದ್ದರು’ ಎನ್ನುವ ನಾಣ್ಣುಡಿ ಸತ್ಯವಂತರು ಎದುರಿಸಬೇಕಾದ ಮತ್ತೊಂದು ಬಗೆಯ ಸಂದಿಗ್ದವನ್ನು ತೋರಿಸುತ್ತದೆ. ಸತ್ಯವಂತರೆಂದಾಗ ಮುಲಾಜಿಲ್ಲದೆ ನಿಷ್ಟೂರವಾಗಿರಬೇಕಾದ ಸನ್ನಿವೇಶಗಳು ಅಸಂಖ್ಯಾತ. ಹೀಗಾಗಿ ಎಲ್ಲರು ಅವರ ಸ್ನೇಹಿತರೆಂದೇ ಹೇಳಲಾಗದು. ಮಿತ್ರರಂತೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಅನಿವಾರ್ಯವೆಂಬಂತೆ. ಇಂತಹವರು ತಮಗೆ ಬೇಕಾದ ರೀತಿಯ ವರ್ತನೆ, ತೀರ್ಮಾನ ಸಿಕ್ಕದಾದಾಗ ಅಂತಹ ಉತ್ತಮರ ಗುಣ, ನಡತೆ, ಸ್ವಭಾವವನ್ನು ಕುರಿತು ಸುಳ್ಳುಸುಳ್ಳೇ ಅಪಪ್ರಚಾರ ಮಾಡುತ್ತಾರೆ. ತಮ್ಮ ಮಾತನ್ನು ನಂಬಿಸಲೋಸುಗ ಉತ್ತಮರಿಗೆ ಅಧಮರೆಂದೇ ಹಣೆಪಟ್ಟಿ ಕಟ್ಟಲು ಹಿಂದೆಗೆಯುವುದಿಲ್ಲ. ಹಾಗೆ ಮಾಡುವುದು ತಪ್ಪು – ಉತ್ತಮರನ್ನು ಅಧಮರೆಂದು ತಿಳಿಯಬೇಡ, ಹಾಗೆಂದು ವಿನಾಕಾರಣ ಪ್ರಚಾರಿಸಬೇಡ ಎನ್ನುವ ನೀತಿಬೋಧೆ ಈ ಸಾಲಿನಲ್ಲಿದೆ.

೩. ಅವರೊಂದು | ಮುತ್ತಿನಂಥವರು ಸರ್ವಜ್ಞ ||

ಈ ಸಾಲಿನಲ್ಲಿ ಯಾಕೆ ಉತ್ತಮರನ್ನು ಅಧಮರೆನ್ನಬಾರದು? ಎನ್ನುವ ವಿವರಣೆಯಿದೆ. ಉತ್ತಮರೆಂದರೆ ಅವರೊಂದು ಮುತ್ತಿನ ಹಾಗೆ ಬೆಲೆಬಾಳುವವರು, ಮೌಲ್ಯವುಳ್ಳವರು. ಮುತ್ತೆಂದರೆ ನವರತ್ನಗಳಲ್ಲೊಂದಾದ ಕಾರಣ ಪ್ರತಿಯೊಬ್ಬರೂ ಅದರ ಮೌಲ್ಯವನ್ನರಿತು ಬೆಲೆ ಕೊಡುತ್ತಾರೆ. ಉತ್ತಮರು ಸಹ ಈ ನವರತ್ನದ ಮುತ್ತಿನ ಹಾಗೆ; ಆದ ಕಾರಣ ಅವರ ಕುರಿತು ಅಧಮರೆಂಬ ಸುಳ್ಳು ಪ್ರಚಾರ ಸಲ್ಲ ಎನ್ನುವುದು ಇಲ್ಲಿಯ ಇಂಗಿತ.

ಆದರೆ ಇಲ್ಲೊಂದು ವಿಶೇಷವಿದೆ. ನಾವು ಯಾರನ್ನಾದರೂ ಒಳ್ಳೆಯವರೆಂದು ಹೇಳಬೇಕಾದಾಗ ‘ ಮುತ್ತಿನಂತಹ ಮನುಷ್ಯ’ ಎನ್ನುತ್ತೇವೆ. ಯಾಕೆ ನಾವು ಮಿಕ್ಕ ಎಂಟು ರತ್ನಗಳನ್ನೂ ಪರಿಗಣಿಸಿ ‘ವಜ್ರದಂತಹ ಮನುಷ್ಯ’, ‘ಗೋಮೇಧಕದಂತಹ ಮನುಷ್ಯ’, ‘ಪುಷ್ಯರಾಗದಂತಹ ಮನುಷ್ಯ’ ಎಂದೆಲ್ಲಾ ಹೇಳುವುದಿಲ್ಲ ? ಯಾಕೆ ಮುತ್ತಿನಂತಹ ಮನುಷ್ಯ ಎಂದು ಮಾತ್ರ ಹೇಳುತ್ತೇವೆ ?

ಮಿಕ್ಕೆಲ್ಲ ರತ್ನಗಳು ಭೂಗರ್ಭದಲ್ಲೋ ಎಲ್ಲೋ ಅಡಗಿ ಕೂತಿದ್ದು , ಪರಿಷ್ಕರಿಸಬೇಕಾದ ಕಲ್ಲುಗಳ ರೂಪದಲ್ಲಿ ದೊರಕುತ್ತವೆ. ಅವುಗಳನ್ನು ಹುಡುಕಿ ತೆಗೆದು ಹೊಳಪು ಬರಿಸಲು ಮತ್ತಷ್ಟು ಕುಸುರಿ ಕೆಲಸ ಮಾಡಬೇಕು. ಆದರೆ ಮುತ್ತಿನ ವಿಷಯ ಹಾಗಲ್ಲ ! ಮೊದಲಿಗೆ ಅದು ಕಪ್ಪೆಚಿಪ್ಪಿನೊಳಗಾಗುವ ಜೈವಿಕ ಕ್ರಿಯೆಯ ಫಲವಾಗಿ ರೂಪುಗೊಳ್ಳುವ ನೈಸರ್ಗಿಕ ವಸ್ತು. ಜೊತೆಗೆ ಮುತ್ತು ರೂಪುಗೊಂಡ ಮೇಲೆ ಯಾವ ಹೊಳಪನ್ನಾಗಲಿ, ಕುಸುರಿಯನ್ನಾಗಲಿ ಮಾಡುವ ಅಗತ್ಯವಿಲ್ಲ. ರೂಪುಗೊಂಡ ಆಕಾರ, ಹೊಳಪು, ಗಾತ್ರವೇ ಅಂತಿಮ. ಉತ್ತಮರು ಕೂಡ ಒಂದು ರೀತಿ ಮುತ್ತಿನ ಹಾಗೆ ಸ್ವಯಂ ರೂಪುಗೊಂಡವರು. ಅವರ ಸಜ್ಜನಿಕೆಯಿಂದ ತಾವಾಗಿಯೇ ಹೊಳೆಯುವವರು. ಮುತ್ತಿನ ಗಾತ್ರದ ಹಾಗೆ ಉತ್ತಮಿಕೆಯ ಮಟ್ಟದಲ್ಲಿ ವೈವಿಧ್ಯವಿದ್ದರೂ ಪ್ರತಿಯೊಂದಕ್ಕೂ ಅದರದೇ ಬೆಲೆಯಿರುವಂತೆ ಉತಮ್ಮರು ತಮ್ಮದೇ ಆದ ವಿಶಿಷ್ಠ ಸ್ಥಾನಬೆಲೆ ಕಾಯ್ದುಕೊಂಡವರು. ಹೀಗಾಗಿ ಅವರನ್ನು ಮುತ್ತಿಗೆ ಹೋಲಿಸುವುದು ಅತ್ಯಂತ ಸಮಂಜಸ.

ಇಲ್ಲಿ ಇನ್ನೂ ಒಂದು ಅತಿಶಯವಿದೆ. ಕಪ್ಪೆ ಚಿಪ್ಪಿನ ಒಳಗೆ ಮುತ್ತಾಗುವುದು ಕೂಡ ಆ ಚಿಪ್ಪಿನ ಎರಡು ಕವಚದ ನಡುವೆ ಬೇಡದ ಹೊರಗಿನ ವಸ್ತು ಸೇರಿಕೊಂಡಾಗ. ಅದರಿಂದಾಗುವ ತೊಂದರೆಯನ್ನು ನಿವಾರಿಸಿಕೊಳ್ಳಲೆಂಬಂತೆ ಕಪ್ಪೆಚಿಪ್ಪು ಆ ಬಾಹ್ಯವಸ್ತುವಿನ ಸುತ್ತ ತಾನು ತಯಾರಿಸಿದ ರಾಸಾಯನಿಕವನ್ನು ಸ್ರವಿಸುತ್ತ ಅದನ್ನು ಸುತ್ತುವರೆಯುವುದಂತೆ. ಹೀಗೆ ಸುತ್ತಿನ ಮೇಲೆ ಸುತ್ತು ಹಾಕುತ್ತ ಹೋದಂತೆ ಆ ಮುತ್ತಿನ ಗಾತ್ರ ಹೆಚ್ಚುತ್ತಾ ಹೋಗುತ್ತದಂತೆ ಅದರ ಹೊಳಪಿನ ಜೊತೆಜೊತೆಗೆ. ಉತ್ತಮರು ಕೂಡ ತಮ್ಮ ಮೇಲೆಸೆದ ದೂಷಣೆಗಳನ್ನು, ತಮ್ಮನ್ನು ಅಧಮರೆಂದು ಆಡಿಕೊಳ್ಳುವ ಜನರ ದೌರ್ಬಲ್ಯಗಳನ್ನು ತಮ್ಮ ಸತ್ಯವಂತಿಕೆ, ನ್ಯಾಯ, ನೀತಿ, ನಿಯತ್ತುಗಳೆಂಬ ನಿರಂತರ ಸ್ರಾವದಿಂದ ಹೊಳಪಾಗಿಸುತ್ತ ಋಣಾತ್ಮಕವನ್ನೆಲ್ಲ ಧನಾತ್ಮಕವಾಗಿಸುತ್ತ ಮತ್ತಷ್ಟೂ ಉತ್ತಮರಾಗುತ್ತಾ ನಡೆಯುತ್ತಾರೆ. ಹೀಗಾಗಿ ಉತ್ತಮರ ಗುಣ ನಡತೆಯು ರೂಪುಗೊಳ್ಳುವ ಬಗ್ಗೆಯೂ ಮುತ್ತಿನ ರೂಪುಗೊಳ್ಳುವಿಕೆಯ ಬಗೆಯನ್ನೇ ಹೋಲುತ್ತದೆ. ಆ ದೃಷ್ಟಿಯಿಂದಲೂ ಮುತ್ತಿನ ಹೋಲಿಕೆ ಸರಿಸೂಕ್ತವೆನಿಸುತ್ತದೆ. (ಸೂಚನೆ: ಮುತ್ತಿನ ಬಗ್ಗೆ ಹೆಚ್ಚು ಮಾಹಿತಿಗೆ ವಿಕಿಪಿಡಿಯಾ ನೋಡಿ)

ಹೀಗೆ ಉತ್ತಮರೆಲ್ಲ ಮುತ್ತಿನಂತಹವರು ಎನ್ನುವುದರ ಹಿಂದೆ ಅಗಾಧ ಅರ್ಥವ್ಯಾಪ್ತಿಯಿರುವುದನ್ನು ನೋಡಬಹುದು.

– ನಾಗೇಶ ಮೈಸೂರು
೧೮.೦೭.೨೦೧೭
(ಚಿತ್ರಕೃಪೆ: ವಿಕಿಪಿಡಿಯಾ)

02117. ಮಂಕುತಿಮ್ಮನ ಕಗ್ಗ ೬೮: ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ!


02117. ಮಂಕುತಿಮ್ಮನ ಕಗ್ಗ ೬೮: ಅರೆಬರೆಯಾಗೇ ಪೂರ್ಣ, ತಿಳಿವುದಣ್ಣ ಬಾಳ ಗೋಳಿಗೂ ಕಾರಣ!


ಮಂಕುತಿಮ್ಮನ ಕಗ್ಗ ೬೮ ರ ಟಿಪ್ಪಣಿ ರೀಡೂ ಕನ್ನಡದಲ್ಲಿ..

02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)


02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)
_________________________________________________


ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ
ಎಲ್ಲರಿಗೆ ಇಲ್ಲ-ಸರ್ವಜ್ಞ||

ಇದೊಂದು ಸರಳ ಪದಗಳ ತ್ರಿಪದಿ. ಪದಗಳ ಅರ್ಥ ನೇರ ಮತ್ತು ಸರಳವಿರುವುದರಿಂದ ಅದರ ಸಾರಾರ್ಥ ಎಲ್ಲರ ಗ್ರಹಿಕೆಗೆ ತಟ್ಟನೆ ನಿಲುಕುತ್ತದೆ. ಒಂದೆರಡು ಪದಗಳ ಅರ್ಥ ತಿಳಿದರೆ ಸಾಕು ಮಿಕ್ಕೆಲ್ಲವೂ ಆಡುನುಡಿಗಳೇ.

ಬಲ್ಲವರು = ಅರಿತವರು, ತಿಳಿದವರು
ಬಲ್ಲಿದರು = ವಿದ್ವಾಂಸರು, ಪಂಡಿತರು, ಬಲಶಾಲಿಗಳು, ಸಾಮರ್ಥ್ಯ ಉಳ್ಳವರು, ಶ್ರೀಮಂತರು (ಬಡವ-ಬಲ್ಲಿದ ಪ್ರಯೋಗದಲ್ಲಿ)

ಎಲ್ಲ ಬಲ್ಲವರಿಲ್ಲ

ನಾವು ಬದುಕಿರುವ ಈ ಜಗದ ವೈಶಾಲ್ಯ, ಸಂಕೀರ್ಣತೆ, ಅಗಾಧತೆ ಹೇಗಿದೆಯೆಂದರೆ ಯಾರೊಬ್ಬರೂ ಎಲ್ಲವನು ಅರಿಯುವುದು ಸಾಧ್ಯವೇ ಇಲ್ಲ. ಯಾವುದೇ ಕ್ಷೇತ್ರವಾಗಲಿ, ಆರಿಸಿಕೊಂಡ ವಿಷಯದಲ್ಲಿ ಆಳಕ್ಕಿಳಿದು ಹೆಚ್ಚು ಅರಿತವರಾಗಬಹುದೇ ಹೊರತು ಎಲ್ಲಾ ವಿಷಯದಲ್ಲಿ ಒಟ್ಟಿಗೆ ಪರಿಣಿತರಾಗುವುದು ಅಸಾಧ್ಯವೇ ಸರಿ (ಉದಾಹರಣೆಗೆ ವೈದ್ಯಕ್ಷೇತ್ರದಲ್ಲಿರುವ ವಿವಿಧ ಪರಿಣಿತಿಯ ತಜ್ಞ ವೈದ್ಯರ ಹಾಗೆ). ಹೆಚ್ಚೆಚ್ಚು ಬಲ್ಲವರಿರಬಹುದೇ ಹೊರತು ಎಲ್ಲವನ್ನು ಬಲ್ಲವರಿರುವುದು ಅಸಂಭವ. ಇಲ್ಲಿ ಸರ್ವಜ್ಞ ಅದನ್ನೇ ಪೀಠಿಕೆಯನ್ನಾಗಿ ಬಳಸಿಕೊಂಡಿದ್ದಾನೆ.

ಬಲ್ಲವರು ಬಹಳಿಲ್ಲ|

ಎಲ್ಲಾ ಬಲ್ಲವರಿಲ್ಲ ಎನ್ನುವುದರ ನಡುವಲ್ಲೇ ಅಲ್ಪಸ್ವಲ್ಪ ಭಾಗಾಂಶ ಬಲ್ಲವರು ಇರುವುದಂತೂ ನಿಸ್ಸಂದೇಹ. ನಮ್ಮ ಸುತ್ತಲೇ ಕಣ್ಣಾಡಿಸಿದರೂ ಸಾಕು ಅವೆಲ್ಲದರ ಒಂದೊಂದು ತುಣುಕು ನೋಟ ನಮ್ಮ ಕಣ್ಣಿಗೆ ಬೀಳುತ್ತದೆ. ವಕೀಲರೋ, ವೈದ್ಯರೋ, ಉಪಾಧ್ಯಾಯರೊ, ನೌಕರರೋ – ಎಲ್ಲರು ಒಂದೊಂದು ಬಗೆಯಲ್ಲಿ ಪರಿಣಿತಿ, ಪಾಂಡಿತ್ಯವನ್ನು ಸಂಪಾದಿಸಿದವರೇ. ಅವರಲ್ಲೇ ಒಬ್ಬೊಬ್ಬರು ಒಂದೊಂದು ವಸ್ತು ವೈವಿಧ್ಯದಲ್ಲಿ ಪರಿಣಿತರಾಗಿ ಮತ್ತಷ್ಟು ಪರಿಣಿತಿಯ ಪ್ರಭೇಧಗಳಿಗೆ ಕಾರಣಕರ್ತರಾಗುತ್ತಾರೆ – ಉಪಾಧ್ಯಾಯರಲ್ಲೇ ವಿಜ್ಞಾನಕ್ಕೆ, ಗಣಿತಕ್ಕೆ, ಭಾಷಾವಿಷಯಕ್ಕೆ ಬೇರೆ ಬೇರೆ ಪರಿಣಿತರಿರುವ ಹಾಗೆ. ಹಾಗಾದರೆ ಇವತ್ತೆಲ್ಲರನ್ನು ಅವರವರ ಕ್ಷೇತ್ರದಲ್ಲಿ ಬಲ್ಲವರೆಂದು ಹೇಳಿಬಿಡಬಹುದೇ ?

ಆ ಪ್ರಶ್ನೆಗೆ ಉತ್ತರ ‘ಇಲ್ಲಾ’ ಎಂಬುದೇ. ಏಕೆಂದರೆ ಅಷ್ಟೊಂದು ಪರಿಣಿತರಲ್ಲಿಯೂ ಯಾರೊಬ್ಬರೂ ಸಹ ತಂತಮ್ಮ ವಿಷಯದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ್ದಾರೆಂದು ಹೇಳಿಕೊಳ್ಳಲಾಗದು. ತಮಗೆ ತಿಳಿದ ಸೀಮಿತ ಕ್ಷೇತ್ರದಲ್ಲಿಯೇ ಆಳದಾಳಕ್ಕಿಳಿದು ಅದರ ಎಡಬಲಮೂಲಗಳನ್ನೆಲ್ಲ ಶೋಧಿಸಿ ಅರಿತು ‘ಬಹುತೇಕ ಪರಿಪೂರ್ಣ’ ಪಾಂಡಿತ್ಯ ಗಳಿಸಿ ವಿದ್ವಾಂಸರೆನಿಸಿಕೊಂಡವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಅಥವಾ ಬೆರಳೆಣಿಕೆಯಷ್ಟು ಮಾತ್ರವೇ. ಅಂತಹ ನಿಜಕ್ಕೂ ಬಲ್ಲವರು ನಮ್ಮಗಳ ಮಧ್ಯೆ ಇರುವುದು ಕೂಡ ಕಡಿಮೆಯೇ. ಜ್ಞಾನಿಗಳಾಗಿ, ಯೋಗಿಗಳಾಗಿ ತಮ್ಮದೇ ಏಕಾಂತ ಜಗದಲ್ಲಿ ಮೌನವಾಗಿದ್ದುಬಿಡುವವರೇ ಹೆಚ್ಚು. ಅದನ್ನೇ ಸರ್ವಜ್ಞ ಇಲ್ಲಿ ‘ಬಲ್ಲವರು ಬಹಳಿಲ್ಲ’ ಎಂದು ಹೇಳಿರುವುದು. ತಾವು ಬಲ್ಲವರು ಎಂದುಕೊಂಡವರು ಅನೇಕರಿರಬಹುದು, ಆದರೆ ನಿಜವಾದ ಜ್ಞಾನಿಗಳು ತಮ್ಮನ್ನು ಹಾಗೆಂದು ತೋರಿಸಿಕೊಳ್ಳುವುದೇ ಇಲ್ಲ. ಇನ್ನು ಡೋಂಗಿಗಳ ವಿಷಯಕ್ಕೆ ಬಂದರೆ ಅದೇ ಮತ್ತೊಂದು ಮೋಸದ ಜಗವಾದ ಕಾರಣ ಆ ಚರ್ಚೆ ಇಲ್ಲಿ ಬೇಡ.

ಅಲ್ಲಿಗೆ ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ – ಎಂದಾಗ ಸಾರದಲ್ಲಿ ಸಕಲವನ್ನರಿತವರಾರು ಇಲ್ಲ, ಅಷ್ಟಿಷ್ಟು ಅರಿತವರಿದ್ದರು ಅಂತಹವರ ಸಂಖ್ಯೆಯು ಕಡಿಮೆಯೇ ಎಂದಾಗುತ್ತದೆ.

ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ

ಬಲ್ಲಿದರು ಎಂದಾಗ ಅಷ್ಟಿಷ್ಟಾದರೂ ಬಲ್ಲವರು ಅಥವಾ ಅರಿಯುವ ಸಾಮರ್ಥ್ಯ ಉಳ್ಳವರು ಎಂದು ಹೇಳಬಹುದು. ಹಿಂದಿನ ಸಾಲಲ್ಲಿ ಬಲ್ಲವರೂ ಕಡಿಮೆಯೇ ಎಂದು ಹೇಳಿದ್ದಾಯ್ತು. ಅದರರ್ಥ ಮಿಕ್ಕವರಿಗೆ ಯಾರಿಗೂ ಆ ಸಾಮರ್ಥ್ಯ ಇಲ್ಲವೆಂದಲ್ಲ. ಅವರಲ್ಲಿ ಕೆಲವರಿಗಾದರೂ ಆ ಸಾಧ್ಯತೆ ಇರುತ್ತದೆಯಾದರು ಎಷ್ಟೋ ಜನರಿಗೆ ಆ ಕುರಿತಾದ ಆಸಕ್ತಿ ಇರುವುದಿಲ್ಲ. ಹೀಗಾಗಿ ಅಷ್ಟಿಷ್ಟು ತಿಳಿದವರು ಮತ್ತು ತಿಳಿಯಬಲ್ಲ ಶಕ್ತಿ ಇರುವವರು ಇದ್ದರು ಏನು ಸುಖವಿಲ್ಲ. ಅವರು ಅದನ್ನು ಬಳಸಿಕೊಂಡು ತಾವರಿತಿದ್ದನ್ನ ಆ ಸಾಮರ್ಥ್ಯವಿರದ ಮಿಕ್ಕವರಿಗೆ ಹಂಚುವ ಕೆಲಸ ಮಾಡಬಹುದಿತ್ತು. ಅವರ ಸಾಮರ್ಥ್ಯ ಅಸಮರ್ಥರಿಗೂ ಬಲ ತುಂಬುವ ಸಲಕರಣೆಯಾಗಬಹುದಿತ್ತು. ಆದರೆ ಒಂದೋ ಅವರು ತಮ್ಮ ಬಲ ಬಳಸಿಕೊಳ್ಳುತ್ತಿಲ್ಲ ಅಥವಾ ಅದನ್ನು ತಮ್ಮ ಸ್ವಾರ್ಥಕ್ಕೆ ಮಾತ್ರ ಬಳಸಿಕೊಳ್ಳುವ ವ್ಯಾವಹಾರಿಕ ಮನೋಭಾವದವರಾಗಿದ್ದಾರೆ. ಹೀಗಾಗಿ ಅಂತಹವರಿದ್ದೂ ಮಿಕ್ಕ ಪ್ರಪಂಚಕ್ಕೆ ಯಾವ ರೀತಿಯಲ್ಲೂ ಬಲ ಸಂವರ್ಧನೆಯಾಗುತ್ತಿಲ್ಲ – ಅದರಲ್ಲೂ ಸಾಹಿತ್ಯದ ವಿಷಯದಲ್ಲಿ. ಅಂದಹಾಗೆ ಈ ತ್ರಿಪದಿ, ಸಾಹಿತ್ಯದ ಮಾತ್ರವೇ ಕುರಿತು ಬರೆದದ್ದೇ ? ಎನ್ನವುದನ್ನು ಅರಿಯಲು ಈ ‘ಸಾಹಿತ್ಯ’ ಪದವನ್ನೇ ಹೆಚ್ಚು ಒರೆಗಚ್ಚಿ ನೋಡಬೇಕು.

ಇಲ್ಲಿ ಸಾಹಿತ್ಯ ಎನ್ನುವಾಗ ಕೊಂಚ ಆಳವಾಗಿ ನೋಡಬೇಕಾಗುತ್ತದೆ – ಸಮಕಾಲೀನ ಮಾತ್ರವಲ್ಲದೆ ಪ್ರಾಚೀನ ದೃಷ್ಟಿಕೋನದಲ್ಲಿಯೂ. ಸಾಹಿತ್ಯವೆನ್ನುವುದು ಆ ಕಾಲದ ಬದುಕಿನ ಆಗುಹೋಗುಗಳ ಪ್ರತಿಬಿಂಬ. ಎಲ್ಲವನ್ನು ಎಲ್ಲರು ಅನುಭವಿಸಿಯೇ ಕಲಿಯಲಾಗದು – ಆದರೆ ಸಾಹಿತ್ಯದ ಮೂಲಕ ಅನುಭಾವಿಸಿಕೊಂಡು ಕಲಿಕೆಯನ್ನು ಸಾಧಿಸಬಹುದು. ಸಾಹಿತ್ಯದ ಮತ್ತೊಂದು ಮುಖ್ಯ ಆಯಾಮ – ಜ್ಞಾನ. ಯಾರಾದರೊಬ್ಬರು ಯಾವುದೇ ಕ್ಷೇತ್ರದಲ್ಲಿಯಾದರು ಸರಿ – ತಾವು ಸಂಪಾದಿಸಿದ ಜ್ಞಾನವನ್ನು ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟಿದ್ದರೆ ಅದನ್ನು ತಲತಲಾಂತರಗಳವರೆಗೆ ವರ್ಗಾಯಿಸಿಕೊಂಡು ಹೋಗಬಲ್ಲ ಸಾಮರ್ಥ್ಯ ಸಾಹಿತ್ಯಕ್ಕಿದೆ. ಆಗ ಪ್ರತಿ ಪೀಳಿಗೆ, ಪ್ರತಿ ಸಂತತಿಯು ಮತ್ತೆ ಮತ್ತೆ ಶೋಧಿಸಿದ್ದನ್ನೇ ಮರುಶೋಧಿಸಿ ಹೊಸತಾಗಿ ಕಲಿತು ಬಳಸುವ ಪ್ರಮೇಯ ಬರುವುದಿಲ್ಲ (ಉದಾಹರಣೆಗೆ ಅನ್ನ ಮಾಡುವುದು ಹೇಗೆಂದು ಜಗತ್ತು ಪ್ರತಿಬಾರಿಯೂ ಸಂಶೋಧಿಸುತ್ತಾ ಕೂತಿಲ್ಲ . ಒಮ್ಮೆ ಕಲಿತದ್ದು ವರ್ಗಾವಣೆಯಾಗುತ್ತಿದೆ ನಿರಂತರವಾಗಿ). ಆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಬಳಸಬಲ್ಲ ಸಾಮರ್ಥ್ಯವಷ್ಟೇ ಇದ್ದರೆ ಸಾಕು. ಹೀಗೆ ಸಾಹಿತ್ಯವೆನ್ನುವ ಪದ ಇಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಬಳಕೆಯಾಗಿದೆ ಎನ್ನುವುದು ಮೊದಲ ಮುಖ್ಯ ಅಂಶ.

ನಮ್ಮ ಸಮಕಾಲೀನ ಜಗದಲ್ಲಿಯೂ ಸಾಹಿತ್ಯವಿದೆ, ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಈಗಲೂ ಇರುವ ಎಷ್ಟೋ ಸಾಹಿತ್ಯದಲ್ಲಿ ಎಲ್ಲವು ಎಲ್ಲರಿಗು ಅರ್ಥವಾಗುವುದಿಲ್ಲ. ಎಲ್ಲವನ್ನು ಬಲ್ಲ ಬಲ್ಲಿದರು ಇಲ್ಲಿಯೂ ಇಲ್ಲವೆನ್ನುವುದು ನಿಜವೇ. ಹೀಗಾಗಿಯೇ ಸಾಹಿತ್ಯ ತನ್ನದೇ ಆದ ವಿಭಿನ್ನ ಮತ್ತು ಸಮಾನಾಂತರ ಹಳಿಗಳಲ್ಲಿ ಅಸ್ತಿತ್ವದಲ್ಲಿರುವುದು. ಇಲ್ಲಿ ಮಕ್ಕಳ ಸಾಹಿತ್ಯದ್ದೊಂದು ಹಳಿಯಾದರೆ, ಜನಸಾಮಾನ್ಯರದ್ದು ಮತ್ತೊಂದು; ಬುದ್ಧಿಜೀವಿಗಳದೇ ಇನ್ನೊಂದು, ವಸ್ತು ನಿರ್ದಿಷ್ಠ ವ್ಯಾಸಂಗಕಾರಣ ಹಳಿ ಮಗದೊಂದು. ಹೆಚ್ಚು ಕಠಿಣ ಸ್ತರದ ಹಳಿಯಾದಷ್ಟು ಬಲ್ಲವರು ಕಡಿಮೆಯಾಗುತ್ತಾರೆ, ಮತ್ತದನ್ನು ಅರಿತು ಹಂಚುವವರು ಇನ್ನೂ ಕಡಿಮೆಯಾಗಿರುತ್ತಾರೆ. ಹೀಗಾಗಿ ಎಷ್ಟೋಬಾರಿ ಪ್ರಶ್ನೆಗೆ ಉತ್ತರ ಅಸ್ತಿತ್ವದಲ್ಲಿದ್ದರೂ ನಮ್ಮರಿವಿನಲ್ಲಿರುವುದಿಲ್ಲ ಅಥವಾ ನಮ್ಮೆಟುಕಿನ ಗುಟುಕಿಗೆ ನಿಲುಕುವುದಿಲ್ಲ. ಈ ಪ್ರಕ್ರಿಯೆಯನ್ನು ಈಗಲೂ ನೋಡಬಹುದು, ಅನುಭವಿಸಬಹುದು.

ಇನ್ನು ತೀರಾ ಪುರಾತನ ಕಾಲಕ್ಕೆ ಅಡಿಯಿಟ್ಟರೆ ತಟ್ಟನೆ ಮನಸಿಗೆ ಬರುವ ಸಾಹಿತ್ಯ ವೇದಶಾಸ್ತ್ರಗಳಂತಹ ಆಧ್ಯಾತ್ಮಿಕ ಸ್ತರದ್ದು. ಇಲ್ಲಂತೂ ನಮಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ, ಸತ್ವಗಳು ಅಪಾರ ಜ್ಞಾನದ ರಾಶಿಯಾಗಿ ಹರಡಿಕೊಂಡಿದೆಯೆಂಬ ನಂಬಿಕೆ ಬಲವಾಗಿದೆ. ಆದರೆ ವಿಪರ್ಯಾಸವೆಂದರೆ ಇದನ್ನೆಲ್ಲಾ ಅರಿತ , ಖಚಿತವಾಗಿ ಮತ್ತು ಸೂಕ್ತವಾಗಿ ವಿಮರ್ಶಿಸಿ ಹೇಳಬಲ್ಲ ಬಲ್ಲಿದರದೆ ಕೊರತೆ. ಸಾಲದ್ದಕ್ಕೆ ಬಳಸಿರುವ ಭಾಷೆ ಎಲ್ಲರು ತಿಳಿದ ಆಡುಭಾಷೆಯಲ್ಲ. ಹೀಗಾಗಿ ಆ ಸಾಹಿತ್ಯ ಒಂದು ರೀತಿ ಅಸ್ತಿತ್ವದಲ್ಲಿದ್ದೂ, ಅದರ ಬಲವನ್ನು ಸದುಪಯೋಗಪಡಿಸಿಕೊಳ್ಳಲಾಗದ ಅಸಹಾಯಕತೆ ನಮ್ಮದು. ಅದರ ಸಾಮರ್ಥ್ಯವನ್ನು ಸಕಲರಿಗೂ ತಲುಪುವಂತೆ ಹಂಚಲಾಗದ ವಿಚಿತ್ರ – ಇದ್ದೂ ಇಲ್ಲದ ಪರಿಸ್ಥಿತಿ. ಇದ್ದುದ್ದೆಲ್ಲ ಕೆಲವರಿಗೆ ಮಾತ್ರ ಅನ್ನುವ ವಿಚಿತ್ರ ವಾಸ್ತವ.

ಇನ್ನು ಸರ್ವಜ್ಞನ ಕಾಲದಲ್ಲಿಯೂ ಇದೇನು ಭಿನ್ನವಾಗಿರಲು ಸಾಧ್ಯವಿಲ್ಲ. ಆಗಲೂ ಸಾಹಿತ್ಯದ ಕುರಿತಾದ ಇದೇ ದ್ವಂದ್ವ ಸಮಾಜವನ್ನು ಕಾಡಿರಬೇಕು. ಅಂತೆಯೇ ಪ್ರಾಚೀನವನ್ನು ನೋಡಿದಾಗ ಮುಂದೆಯೂ ಹೀಗೆ ಇರಬಹುದೆಂದು ಊಹಿಸುವುದು ಸಹ ಕಷ್ಟವೇನಲ್ಲ. ಅದರ ಆಧಾರದ ಮೇಲೆ ಸಾಹಿತ್ಯವನ್ನು ಸಾರ್ವಕಾಲಿಕವೆನ್ನುವ ಈ ವಿಶಾಲಾರ್ಥದಲ್ಲಿ ಸರ್ವಜ್ಞನು ಬಳಸಿದ್ದಾನೆಂದು ನನ್ನ ಅನಿಸಿಕೆ. ಹೀಗಾಗಿ ಈ ವಚನದಲ್ಲಿ ಸಾಹಿತ್ಯವನ್ನು ಬರಿಯ ಬರವಣಿಗೆಯ ಜ್ಞಾನ ಎಂದು ಮಾತ್ರ ಗಣಿಸದೆ ಅದರ ಪ್ರಾಯೋಗಿಕ ಬಳಕೆ – ಉಪಯೋಗದ ಸಾರ್ವತ್ರಿಕ ಸ್ವರೂಪವವನು ಸಮೀಕರಿಸಿ ಅರ್ಥೈಸಿಕೊಳ್ಳಬೇಕು.

…, ಸಾಹಿತ್ಯ ಎಲ್ಲರಿಗೆ ಇಲ್ಲ-ಸರ್ವಜ್ಞ

ಹಿಂದಿನ ವಿವರಣೆಯನ್ನೆಲ್ಲಾ ಕ್ರೋಢೀಕರಿಸಿಕೊಂಡರೆ ಈ ಸಾಲು ತಾನಾಗಿಯೇ ಅರ್ಥವಾಗುತ್ತದೆ. ಅಂದು ಇಂದು ಮುಂದು – ಈ ಎಲ್ಲಾ ಕಾಲದಲ್ಲಿಯೂ ಅಸ್ತಿತ್ವದಲ್ಲಿರುವ ಸಾಹಿತ್ಯ ಎಲ್ಲರಿಗು ಸುಲಭದಲ್ಲಿ, ಸರಳದಲ್ಲಿ ಸಿಕ್ಕುವ ರೀತಿಯಲ್ಲಿ ಇಲ್ಲ ಅಥವಾ ವಿತರಣೆಯಾಗುತ್ತಿಲ್ಲ ಎನ್ನುವ ಇಂಗಿತವನ್ನು ಇಲ್ಲಿ ವ್ಯಕ್ತಪಡಿಸುತ್ತಿದ್ದಾನೆ ಸರ್ವಜ್ಞ. ಆ ಮಾತು ಶಾಸ್ತ್ರೋಕ್ತ ವೇದ ಪುರಾಣ ಗ್ರಂಥಗಳಿಂದ ಹಿಡಿದು ಸ್ವಯಂ ಸರ್ವಜ್ಞನ ವಚನಗಳವರೆವಿಗೆ ಎಲ್ಲೆಡೆಯೂ (ಎಲ್ಲ ತರಹದ ಸಾಹಿತ್ಯದಲ್ಲಿಯೂ) ಅನ್ವಯವಾಗುವ ಸಾರ್ವತ್ರಿಕ ಸತ್ಯ.

ಎಲ್ಲ ಬಲವರಿದ್ದು, ಹಾಗೆ ನಿಜವಾಗಿಯೂ ಬಲ್ಲವರು ಹಲವಾರು ಮಂದಿಯಿದ್ದು ಅಂತಹ ಬಲ್ಲಿದರು ತಮ್ಮ ಅರಿವಿನ ಮೂಲಕ ಗಳಿಸಿದ್ದನ್ನು ಸರಳವಾಗಿ ಹಂಚುತ್ತಾ ಮಿಕ್ಕ ಜಗತ್ತನ್ನು ಬಲಪಡಿಸಹೊರಟರೆ ಆಗ ಸಾಹಿತ್ಯವೆನ್ನುವುದು ಎಲ್ಲರನ್ನು ತಲುಪುವ ಸರಕಾಗುತ್ತದೆ. ಅದರ ನೀತಿ, ಪಾಠ, ಕಲಿಕೆಗಳು ಎಲ್ಲರೂ ಅಳವಡಿಸಿಕೊಳಬಲ್ಲ, ಬಳಸಿಕೊಳಬಲ್ಲ ಸಂಗತಿಗಳಾಗುತ್ತವೆ. ಆಗ ಅದರ ನಿಜ ಪ್ರಯೋಜನ ಎಲ್ಲರಿಗೂ ದೊರಕಿದಂತಾಗುತ್ತದೆ ಎನ್ನುವ ಆಶಯ ಈ ವಚನದ್ದು. ರಾಮಾಯಣ, ಮಹಾಭಾರತದಂತಹ ಸಾಹಿತ್ಯಗಳು ಅದರ ಮೂಲ ಭಾಷೆ ಮತ್ತು ಸಂಕೀರ್ಣತೆಯ ಹೊರತಾಗಿಯೂ ಜನಮಾನಸದಲ್ಲಿ ಹರಡಿಕೊಂಡಿರುವುದು ‘ಇದು ಸಾಧ್ಯ’ ಎನ್ನುವುದಕ್ಕೆ ಉದಾಹರಣೆಯಾದರೆ, ನಾವರಿಯದ ಅದೆಷ್ಟೋ ಸಾಹಿತ್ಯಗಳು ಅಸ್ತಿತ್ವದಲ್ಲಿದ್ದೂ ನಿಲುಕಿಗೆಟುಕದು ಎನ್ನುವುದು ಅದರ ಕಷ್ಟಸಾಧ್ಯತೆಯ ಉದಾಹರಣೆ.

ಪರಂಪರಾನುಗತವಾಗಿ ಬಂದ ಜ್ಞಾನ, ಪ್ರಗತಿ, ಫಲಶ್ರುತಿಗಳು ನಿರಂತರವಾಗಿ ಹರಿವ ನದಿಯ ನೀರಿನಂತೆ ಸತತವಾಗಿ ಎಲ್ಲಾ ಪೀಳಿಗೆಗೂ, ಸಂತತಿಗೂ ನೈಸರ್ಗಿಕವಾಗಿ ಹಂಚಿಕೆಯಾಗುತ್ತಿರಬೇಕೆನ್ನುವ ಮೂಲ ಆಶಯದ ಜೊತೆಗೆ ಅಂತಹ ಅದ್ಭುತ ಜ್ಞಾನ ಸಂಪತ್ತು ನಮ್ಮಲಿದೆ ಆದರೆ ಅದರ ನ್ಯಾಯೋಚಿತ ಸದ್ಬಳಕೆಯಾಗುತ್ತಿಲ್ಲ ಎನ್ನುವ ಇಂಗಿತವನ್ನೂ ಈ ವಚನ ಪರೋಕ್ಷವಾಗಿ ತೋರಿಸಿಕೊಡುತ್ತಿದೆ.

– ನಾಗೇಶ ಮೈಸೂರು
೧೬.೦೭.೨೦೧೭

(Picture Source : Wikipedia)

02111. ಸರ್ವಜ್ಞನ ವಚನಗಳು-೦೦೦೩


02111. ಸರ್ವಜ್ಞನ ವಚನಗಳು-೦೦೦೩
______________________________


ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ , ಗುರುವು ತಾ |
ನಾರಾದಡೇನು ಸರ್ವಜ್ಞ ||

ಈ ವಚನದಲ್ಲಿಯೂ ಹೆಚ್ಚು ಕಡಿಮೆ ಎಲ್ಲಾ ಪದಗಳು ನೇರ ಅರ್ಥವನ್ನೇ ಸೂಚಿಸುತ್ತಿವೆ – ‘ಸಾರಾಯ’ ಪದದ ಹೊರತಾಗಿ. ಮೊದಲು ಈ ಪದವನ್ನು ನೋಡಿ ನಂತರ ಮಿಕ್ಕದ್ದನ್ನು ಗಮನಿಸೋಣ.

ಸಾರಾಯ – ಎನ್ನುವ ಪದಕ್ಕೆ ಹಲವಾರು ಅರ್ಥಗಳಿವೆ. ಬಹುಶಃ ಸಾರಾಯವೆನ್ನುವ ಹೆಸರಿನಲ್ಲಿ ಪ್ರಚಲಿತವಿರುವ ಹೆಂಡ, ಮದ್ಯ ಆಡುಭಾಷೆಯ ಪರಿಚಯವಿರುವವರಿಗೆಲ್ಲ ಗೊತ್ತಿರುವಂತದ್ದೇ. ಆದರೆ ಅದರ ಮಿಕ್ಕ ಅರ್ಥಗಳು ಅಷ್ಟು ಸಾಮಾನ್ಯವಾಗಿ ಪ್ರಚಾರದಲಿಲ್ಲ. ಆ ಮಿಕ್ಕ ಅರ್ಥಗಳು ಇಂತಿವೆ: “ತಿರುಳು, ಸತ್ವ ; ಜ್ಞಾನ, ಅನುಭಾವ; ನಿಜತತ್ವ; ನಿಜತತ್ವವನ್ನು ಅರಿತವನು”. ಈ ವಚನದಲ್ಲಿ ಈ ಮಿಕ್ಕ ಅರ್ಥಗಳೇ ಸೂಕ್ತವಾಗಿ ಹೊಂದಿಕೆಯಾಗುತ್ತವೆ. ಮೊದಲ ಅರ್ಥವಾದ ಮದ್ಯದ ಮೂಲಕವೂ ಕೊಂಚ ಪರೋಕ್ಷ ಅರ್ಥವನ್ನು ವಿವರಿಸಬಹುದಾದರೂ ಅದು ಕೇವಲ ಅರ್ಥ ಪ್ರೇರಿತ ಜಿಜ್ಞಾಸೆಯಾಗಬಹುದೇ ಹೊರತು, ಈ ವಚನದ ನಿಜವಾದ ಇಂಗಿತವೋ ಅಲ್ಲವೋ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

೧. ಊರಿಂಗೆ ದಾರಿಯನು – ಊರಿಗೆ ದಾರಿಯನು
೨. ಆರು ತೋರಿದಡೇನು? – ಯಾರು ತೋರಿದರೇನು ?
೩. ಸಾರಾಯದ ನಿಜವ ತೋರುವ – ನಿಜತತ್ವದ ತಿರುಳನ್ನು ತೋರುವ, ಅನುಭಾವಿಸುವಂತೆ ಮಾಡಬಲ್ಲ
೪. ಗುರುವು ತಾ,ನಾರಾದಡೇನು ಸರ್ವಜ್ಞ – ಅಂತಹ ಗುರುವು ಯಾರಾದರೂ ಸರಿಯೇ

ವಿಸ್ತೃತ ವಿವರಣೆ:
________________

1) ಊರಿಂಗೆ ದಾರಿಯನು:

ಊರು ಎನ್ನುವುದು ನಾವು ಪಯಣ ಹೊರಟಾಗ ಸೇರಬಯಸುವ ಅಂತಿಮ ಜಾಗ. ಅದರಲ್ಲೂ ಹೊಸ ಊರಿಗೆ ಹೊರಟೆವೆಂದರೆ ಹೋಗುವ ದಾರಿ ಖಚಿತವಾಗಿ ತಿಳಿದಿರಬೇಕೆಂದಿಲ್ಲ. ಇಲ್ಲಿ ಊರು ಎನ್ನುವುದು ಕೇವಲ ಗ್ರಾಮ, ಪಟ್ಟಣವೆಂಬ ಅರ್ಥದಲ್ಲಿ ಬಳಕೆಯಾಗಿಲ್ಲ. ಅಂತಿಮವಾಗಿ ತಲುಪಬೇಕಾದ ಗಮ್ಯ ಎನ್ನುವ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ. ಸಾಮಾನ್ಯರಾಗಲಿ, ಸಾಧನೆಯ ಹಾದಿಯಲ್ಲಿ ಹೊರಡುವ ಸಿದ್ಧ ಪುರುಷರಾಗಲಿ ಜೀವನ ಯಾತ್ರೆಯಲ್ಲಿ ಒಂದಿಲ್ಲೊಂದು ಗಮ್ಯದ ಬೆನ್ನಟ್ಟಿ ನಡೆದವರೇ. ಸಾಮಾನ್ಯರು ಐಹಿಕ ಸೌಖ್ಯದ ಬೆನ್ನಟ್ಟಿ ನಡೆದರೆ ಯೋಗಿ, ಸಿದ್ಧರು ಆಧ್ಯಾತ್ಮಿಕ ಸೌಖ್ಯವನ್ನರಸಿ ನಡೆಯುತ್ತಾರೆ. ಅವರವರ ಪ್ರಕಾರದ ಅಂತಿಮ ಸತ್ಯಾನ್ವೇಷಣೆ ಇದರ ಮುಖ್ಯ ಉದ್ದೇಶ. ಒಟ್ಟಿನಲ್ಲಿ ಯಾರ ಗಮ್ಯ (ಊರು) ಯಾವುದೇ ಆಗಲಿ ಅದಕ್ಕೆಂದೇ ಇರುವ ದಾರಿಯಲ್ಲಿ (ಮಾರ್ಗದಲ್ಲಿ) ಅವರು ಪಯಣಿಸಬೇಕಾಗುತ್ತದೆ. ಆ ದಾರಿಯ ಕಷ್ಟಾನಿಷ್ಠಗಳನ್ನರಿತು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು ಹೊರಡಬೇಕಾಗುತ್ತದೆ.

2) ಆರು ತೋರಿದಡೇನು:

ಹಿಂದಿನ ಪದಗಳಲ್ಲಿ ಊರು ಅಥವಾ ಗಮ್ಯದ ದಾರಿಯ ಕುರಿತು ಪ್ರಸ್ತಾಪಿಸಿದ್ದಾಯ್ತು. ಆ ಮಾರ್ಗ ಖಚಿತವಾಗಿ ಗೊತ್ತಿರದ ಕಾರಣ ಅದರಲ್ಲಿರುವ ಅಡೆತಡೆಗಳು, ಅಪಾಯಗಳು, ಅನುಕೂಲಗಳು – ಒಂದೂ ಸರಿಯಾಗಿ ಗೊತ್ತಿರುವುದಿಲ್ಲ. ಗೊತ್ತಿಲ್ಲದ ದಾರಿಯಲ್ಲಿ ನಡೆಯಬೇಕಾದಾಗ ಒಂದೋ ಅದರ ನಕ್ಷೆಯಿರಬೇಕು ಅಥವಾ ಆ ದಾರಿ ಬಲ್ಲವರ ಸಹಚರ್ಯ ಅಥವಾ ಮಾರ್ಗದರ್ಶನವಿರಬೇಕು. ಸತ್ಯದ ಅನ್ವೇಷಣೆಗೆ ಹೊರಟಾಗಲಂತೂ ಅಪ್ಪಟ ಗುರುವಿನ ಕರುಣೆಯಿಲ್ಲದೆ ಆ ದಿಸೆಯ ರೂಪುರೇಷೆಗಳನ್ನು ಊಹಿಸುವುದು ಸಾಧ್ಯವಿಲ್ಲ. ಮೊದಲಿಗೆ ಆ ಗುರು ಯಾರೆಂದು ಹುಡುಕುವುದೇ ಒಂದು ದೊಡ್ಡ ಸಾಹಸವಾಗಿಬಿಡುತ್ತದೆ. ಇಂತಹ ಪರಿಸ್ಥಿತಿಯಿರುವಾಗ – ಯಾರು ಆ ಮುಂದಿನ ದಾರಿ ತೋರುತ್ತಾರೋ ಅವರೇ ಗುರು. ಆ ದಾರಿ ತೋರಬಲ್ಲ ಮಾರ್ಗದರ್ಶಕರು ಯಾರಾದರೇನು ? ಅವರಿಗೆ ಇಂತದ್ದೇ ಪದವಿ, ಹಣೆಪಟ್ಟಿ ಇರಬೇಕೆಂದಿದೆಯೇನು? ಮಾರ್ಗದರ್ಶಿಸಬಲ್ಲ ಸಾಮರ್ಥ್ಯ ಯಾರಲ್ಲಿದೆಯೋ ಅವರೇ ಗುರು ಎನ್ನುವರ್ಥದಲ್ಲಿ ಈ ಪದಗಳನ್ನು ಬಳಸಲಾಗಿದೆ.

3) ಸಾರಾಯದ ನಿಜವ ತೋರುವ:

ಮೊದಲೇ ಹೇಳಿದಂತೆ ಇಲ್ಲಿ ಸಾರಾಯವೆಂದರೆ ಅಂತಿಮ ಗಮ್ಯದ ಹೆಸರಲ್ಲಿ ಹುಡುಕುತ್ತಿರುವ ಸತ್ಯ. ಆ ಸತ್ಯವನ್ನರಿಯುವ, ಅದರ ತಿರುಳು-ಸತ್ವವನ್ನು ಮನಗಾಣಿಸಬಲ್ಲ, ಆ ಜ್ಞಾನವನ್ನು ನಿಸ್ವಾರ್ಥದಿಂದ ಧಾರೆಯೆರೆಯಬಲ್ಲ, ಆ ಪಥದಲ್ಲಾಗುವ ಅನುಭವವನ್ನು ಚಿಂತನೆಯಲ್ಲೇ ಗ್ರಹಿಸುವಂತಹ ಅನುಭಾವದ ಸಾಕ್ಷಾತ್ಕಾರಕ್ಕೆ ಆಸರೆಯಾಗುವ, ಆ ಮಾರ್ಗದ ನಿಜತತ್ವವನ್ನರಿತವನಾಗಿದ್ದು ಅದನ್ನು ಕಾಣುವಂತೆ ಮಾಡಬಲ್ಲ – ವ್ಯಕ್ತಿಯ ಸ್ವರೂಪ ಇಲ್ಲಿನ ಇಂಗಿತ. (ಇಲ್ಲಿ ಅನುಭಾವ ಎನ್ನುವ ಪದವನ್ನು ಅನುಭವದಷ್ಟೇ ಸಮಾನಾರ್ಥಕ ಅನುಭೂತಿ ನೀಡಬಲ್ಲಂತಹ ಭಾವನೆ ಎನ್ನುವರ್ಥದಲ್ಲಿ, ಭಾವನೆಯಲ್ಲೇ ನೈಜವನ್ನನುಭವಿಸುವಂತಹ ಸಾಮರ್ಥ್ಯ ನೀಡಬಲ್ಲ ವ್ಯಕ್ತಿ ಎನ್ನುವರ್ಥದಲ್ಲಿ ನೋಡಬೇಕು).

ಇನ್ನು ‘ಸಾರಾಯದ ನಿಜವ ತೋರುವ’ ಪದಪುಂಜದಲ್ಲಿ ಸಾರಾಯವನ್ನು ಹೆಂಡ, ಮದ್ಯ ಎಂದೇ ಪರಿಗಣಿಸಿದರೂ, ಆ ದುರ್ವ್ಯಸನದ ನಿಜವ ತೋರುವವ (ದುಷ್ಪರಿಣಾಮವನ್ನು ಮನವರಿಕೆ ಮಾಡಿಕೊಡುವವ) ಎಂದು ಅರ್ಥೈಸಬಹುದು.

4) ಗುರುವು ತಾ | ನಾರಾದಡೇನು ಸರ್ವಜ್ಞ :

ಮೇಲೆ ಹೇಳಿದ ದಾರಿಯನ್ನು ತೋರಿ, ಅದರತ್ತ ಸಮರ್ಥವಾಗಿ ನಡೆಸಬಲ್ಲ ಗುರುವು ಯಾರಾದರೇನು ? ಎಲ್ಲರು, ಎಲ್ಲವು ಸರಿಯೇ. ಅಲ್ಲಿ ಜಾತಿ-ಮತ-ಕುಲಭೇಧಗಳಾಗಲಿ, ಹಿರಿಯರು-ಕಿರಿಯರೆಂಬ ತಾರತಮ್ಯವಾಗಲಿ, ಪಂಡಿತ-ಪಾಮರರೆಂಬ ವ್ಯತ್ಯಾಸವಾಗಲಿ ಲೆಕ್ಕಕ್ಕೆ ಬರದು. ಅಷ್ಟೇಕೆ ಜೀವ-ನಿರ್ಜಿವವೆಂಬ ಅಂತರವೂ ಗಣನೆಗೆ ನಿಲುಕದು. ಆಧುನಿಕ ಜಗದಲ್ಲಿ ಇದಕ್ಕೊಂದು ಒಳ್ಳೆಯ ಉದಾಹರಣೆ – ಐಟಿ ಜಗ. ಎಷ್ಟೋ ವರ್ಷಗಳ ಅನುಭವವಿರುವ ಹಿರಿಯರೂ ತಮಗಿಂತ ಕಿರಿಯರಿಂದಲೋ, ಕಂಪ್ಯೂಟರಿನ ಸಹಾಯದಿಂದಲೋ ಹೊಸ ವಿಷಯವನ್ನು ಕಲಿಯುತ್ತಾರೆ. ಇಲ್ಲಿ ಯಾರು ಗುರು, ಯಾರು ಶಿಷ್ಯ ಎಂದು ವಯಸ್ಸಿನಿಂದ, ಅನುಭವದಿಂದ ನಿರ್ಧರಿಸಲಾಗುವುದಿಲ್ಲ.

ಒಟ್ಟಾರೆ ಕಲಿಸಿದಾತಂ ಗುರು – ಎನ್ನುವ ಒಂದು ಸರಳ ವಿವರಣೆಯಲ್ಲಿ ಈ ವಚನದ ಪೂರ್ಣಾರ್ಥವನ್ನು ಸಂಕ್ಷೇಪಿಸಿಕೊಳ್ಳಬಹುದು.


– ನಾಗೇಶ ಮೈಸೂರು
(ಚಿತ್ರ ಕೃಪೆ: ವಿಕಿಪಿಡಿಯಾ)

02110. ಮಂಕುತಿಮ್ಮನ ಕಗ್ಗ ೬೭ರ: ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !


02110. ಮಂಕುತಿಮ್ಮನ ಕಗ್ಗ ೬೭ರ: ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !

ಮಂಕುತಿಮ್ಮನ ಕಗ್ಗ ೬೭ರ ಟಿಪ್ಪಣಿ ರೀಡೂ ಕನ್ನಡದಲ್ಲಿ:ಆಳದಾಗೋಚರ ಸಂಕಲ್ಪ ಲಿಪಿ, ಪದರದಲೆಮ್ಮಾ ತೊಳಲಾಟ !

02109. ಸರ್ವಜ್ಞನ ವಚನಗಳು ೦೦೦೨.


02109. ಸರ್ವಜ್ಞನ ವಚನಗಳು ೦೦೦೨.
_______________________________


ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |
ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |
ಕುಲವಾವುದಯ್ಯ ಸರ್ವಜ್ಞ ||

ಮೇಲಿನ ತ್ರಿಪದಿಯಲ್ಲಿ ಸಲೆ ಪದವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ನೇರವಾಗಿ ಅರ್ಥವಾಗುವ ಪದಗಳೇ. ಅದಕ್ಕೆ ಮುಂದೆ ಸಲೆ ಪದವನ್ನು ಸ್ವಲ್ಪ ವಿವರವಾಗಿ ನೋಡೋಣ .

ಎಲುವಿನೀ ಕಾಯಕ್ಕೆ :

ಎಲುವಿನ (ಎಲುಬಿನಿಂದಾದ) + ಈ + ಕಾಯಕ್ಕೆ ( ದೇಹಕ್ಕೆ)
ಎಲುಬಿನ ಹಂದರದಿಂದಾದ ಈ ದೇಹಕ್ಕೆ.

ಸಲೆ ಚರ್ಮದಾ ಹೊದಿಕೆ :

ದೇಹದ ಹೊರ ಆವರಣವಾಗಿರುವ ತೊಗಲೇ (ಚರ್ಮವೇ) ಮೂಳೆಗಳಿಂದಾದ ದೇಹಕ್ಕೆ ಹೊದಿಸಿದ ಹೊದಿಕೆ.

ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ :

ಮೂಳೆಗಳ ಹಂದರದಲ್ಲಿ ಚರ್ಮದ ಆವರಣದೊಳಗೆ ಬಂಧಿಯಾಗಿರುವ ದೇಹದಲ್ಲಿ ಮಲ, ಮೂತ್ರಗಳಂತಹ ತ್ಯಾಜ್ಯ ವಸ್ತುಗಳು ಮಾತ್ರವಲ್ಲದೆ ಅದನ್ನೇ ವಸತಿಯನ್ನಾಗಿಸಿಕೊಂಡು ವಾಸಿಸುತ್ತಿರುವ ಅನೇಕ ಕ್ರಿಮಿಗಳು ( ಸೂಕ್ಷ್ಮರೂಪ ಜೀವಿಗಳಿಂದ ಹಿಡಿದು ದೃಗ್ಗೋಚರ ಮಟ್ಟದವರೆಗೆ ).

ಕುಲವಾವುದಯ್ಯ ಸರ್ವಜ್ಞ :

ಇಂತಹ ದೇಹಕ್ಕೆ ಯಾವ ಕುಲ, ಯಾವ ಜಾತಿ ?

ವಿವರಣೆ :
_________

ಸಲೆ ಪದದ ಕುರಿತು: ನಾನು ಚಿಕ್ಕಂದಿನ ಶಾಲಾ ದಿನಗಳಲ್ಲಿ ಗಣಿತ ಲೆಕ್ಕ ಮಾಡುವಾಗ ಈ ಸಲೆ ಪದವನ್ನು ಓದಿದ್ದ ನೆನಪು. ರೇಖಾಗಣಿತದ ಆಕೃತಿಗಳ ಗಾತ್ರವನ್ನು ಕಂಡುಹಿಡಿಯುವ ಸಮಸ್ಯೆ ಬಿಡಿಸುವಾಗ ಕೆಲವೊಮ್ಮೆ ಗಾತ್ರದ ಬದಲು ಸಲೆಯನ್ನು ಕಂಡುಹಿಡಿಯಿರಿ ಎಂದು ಪ್ರಶ್ನೆಯಿರುತ್ತಿತ್ತು. ಆ ಗಾತ್ರ ಎನ್ನುವ ಪರೋಕ್ಷಾರ್ಥವನ್ನು ಇಲ್ಲಿಯೂ ಬಳಸಬಹುದು. ವಿಕಿ ಪದಕೋಶದಲ್ಲಿ ವಿಸ್ತೀರ್ಣ, ಕ್ಷೇತ್ರಫಲ ಎನ್ನುವ ವಿವರಣೆಯು ಇತ್ತು. ಯಾಕೋ ಗಾತ್ರವೇ (ಆಂಗ್ಲದಲ್ಲಿ ವಾಲ್ಯೂಮ್) ಸೂಕ್ತವಾದದ್ದು ಅನಿಸಿತು – ಯಾಕೆಂದರೆ ಗಾತ್ರ ಉದ್ದ-ಅಗಲ-ಎತ್ತರಗಳ ಮೂರು ಆಯಾಮವನ್ನು (೩ಡಿ) ಪ್ರತಿನಿಧಿಸುತ್ತದೆ (ವಿಸ್ತೀರ್ಣ ಬರಿ ಎರಡು ಆಯಾಮದ್ದು). (ಇದಕ್ಕೆ ಹೊರತಾದ ಬೇರೆ ಸೂಕ್ತ ಅರ್ಥ ಗೊತ್ತಿದ್ದರೆ ದಯವಿಟ್ಟು ಕಾಮೆಂಟಿನಲ್ಲಿ ಸೇರಿಸಿ). ದೇಹದ ಪೊಟರೆಯನ್ನು ಸುತ್ತುವರಿದು ಅದರ ಒಳಗನ್ನು (ಸಲೆಯನ್ನು) ರಕ್ಷಿಸುವ ಮತ್ತು ಚಂದದ ಸ್ವರೂಪವಿರುವ ಹೊರಪದರವನ್ನು ಒದಗಿಸುವ ಚರ್ಮ ಎಂದು ಹೇಳಬಹುದು. ಈ ಹಿನ್ನಲೆಯಲ್ಲಿ ಮಿಕ್ಕ ಸಾಲುಗಳನ್ನು ಅರ್ಥೈಸೋಣ.

ಎಲುವಿನೀ ಕಾಯಕ್ಕೆ | ಸಲೆ ಚರ್ಮದಾ ಹೊದಿಕೆ |

ಭಕ್ತ ಕುಂಬಾರ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ , ಅದರ ಮೇಲಿದೆ ತೊಗಲಿನ ಹೊದಿಕೆ’ ಎನ್ನುವ ಹಾಡಿನ ಸಾಲು ನೆನಪಾಗುತ್ತಿದೆ ಇದರ ವಿವರಣೆಗೆ ಹೊರಟಾಗ. ಮಾನವನು ಸೇರಿದಂತೆ ಯಾವುದೇ ಜೀವಿಯ ಎಲುಬುಗಳ ಹಂದರಕ್ಕೆ ಮಾಂಸದ ತಡಿಕೆ ಹಾಕಿ ನೋಡಿದರೆ ಅದು ಹೇಗೆ ಕಾಣಿಸುವುದೆಂದು ನಾವೆಲ್ಲಾ ಬಲ್ಲೆವು. ಆ ಸ್ವರೂಪವನ್ನು ನೋಡುವುದಿರಲಿ, ಊಹಿಸಿಕೊಳ್ಳುವುದಕ್ಕೂ ಹಿಂಜರಿಯುತ್ತದೆ ನಮ್ಮ ಮನಸು. ಅದಕ್ಕೊಂದು ತೊಗಲಿನ ಆವರಣ ಹಾಕಿ ಒಂದು ಸುಂದರ ಬಾಹ್ಯ ಚೌಕಟ್ಟನ್ನು ಒದಗಿಸಿದ ಸ್ವರೂಪ ಮಾತ್ರವೇ ನಮ್ಮ ಕಣ್ಮುಂದೆ ನಿಲ್ಲುತ್ತದೆ. ಆದರೆ ನೈಜದಲ್ಲಿ ದೇಹದ ಮೂಲ ಬಲಕ್ಕೆ ಆಧಾರವಾದದ್ದೇ ಈ ಎಲುಬಿನ ಚೌಕಟ್ಟು. ಬರಿ ಎಲುಬಿನ ಹಂದರವನ್ನು ಅಸ್ತಿಪಂಜರದಂತೆ ಮಾತ್ರ ಕಾಣುವ ನಾವು ನೆನಪಿಸಿಕೊಳ್ಳಬೇಕಾದ ಮುಖ್ಯ ವಿಷಯ – ಸ್ವತಃ ನಾವೇ ಅಂತಹ ಅಸ್ತಿಪಂಜರಗಳಿಂದಾದ ಕಾಯವೆಂಬುದು. ಸ್ನಾಯುಗಳಿಂದ ಹಿಡಿದು ಚರ್ಮದ ಹೊದಿಕೆಯ ತನಕ ಮಿಕ್ಕಿದ್ದೆಲ್ಲಾ ಆ ಮೂಲಹಂದರಕ್ಕೆ ಹಚ್ಚಿದ ತೇಪೆಯ ಹಾಗೆ.

ವಿಪರ್ಯಾಸವೆಂದರೆ, ಜೀವಿಯ ಸೌಂದರ್ಯದ ಅಳತೆಗೋಲಾಗಿ ಮುಖ್ಯ ಪಾತ್ರ ವಹಿಸುವುದು ಈ ತೊಗಲಿನ ಬಾಹ್ಯ ಸ್ವರೂಪವೇ ಎನ್ನುವುದು. ಇದು ಹೊರಗಿನ ಸೌಂದರ್ಯಕ್ಕೆ ನಾವೆಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಎನ್ನುವುದನ್ನು ಕೂಡ ಎತ್ತಿ ತೋರಿಸಿತ್ತದೆ. ನಾವು ಪ್ರತಿನಿತ್ಯ ಮಾಡುವ ಸ್ನಾನಾದಿ ಶುದ್ಧ ಕಾರ್ಯಗಳಾಗಲಿ, ಸೌಂದರ್ಯವರ್ಧಕಗಳ ಬಳಕೆಯಿಂದ ಸೌಂದರ್ಯವನ್ನು ಹೆಚ್ಚಿಸುವ ಹುನ್ನಾರವಾಗಲಿ, ಸುಗಂಧ ದ್ರವ್ಯಗಳ ಬಳಕೆಯಿಂದ ಘಮಘಮಿಸುವ ಪ್ರಯತ್ನವಾಗಲಿ – ಎಲ್ಲವು ಬಾಹ್ಯದ ಸ್ವರೂಪವನ್ನು, ಮತ್ತದರ ಅಂದ ಚಂದವನ್ನು ಎತ್ತಿ ತೋರಿಸುವ, ಅದನ್ನು ಸ್ವಚ್ಛ – ಶುದ್ಧವಾಗಿಟ್ಟುಕೊಳ್ಳುವ ಯತ್ನವೇ. ಸ್ನಾನ ಮಾಡದವನನ್ನು, ಕೊಳಕು ಬಟ್ಟೆ ಹಾಕಿಕೊಂಡು ಬರುವವನನ್ನು ದೂರವಿರಿಸುವುದೋ, ಟೀಕಿಸುವುದೋ ಕೂಡ ಅಸಹಜವೇನಲ್ಲ ನಮ್ಮಲ್ಲಿ. ಅಂದರೆ ಆ ತೊಗಲಿನಿಂದಾವೃತ್ತವಾದ ಬಾಹ್ಯ ಸ್ವರೂಪ ಅಷ್ಟೊಂದು ಮಹತ್ವದ್ದೇ ? ಅಷ್ಟೊಂದು ಶ್ರೇಷ್ಠತೆಯದೇ ? ಆ ಜಿಜ್ಞಾಸೆಯ ಮೇಲೆ ಬೆಳಕು ಚೆಲ್ಲುವುದು ಮುಂದಿನ ಸಾಲು.

ಮಲಮೂತ್ರ ಕ್ರಿಮಿಗಳೊಳಗಿರ್ದ, ದೇಹಕೆ |

ಸ್ವಲ್ಪ ತಾಳಿ..ಹೊರಗಿನ ಅವತಾರವನ್ನು ಮಾನದಂಡವಾಗಿ ಪರಿಗಣಿಸಿ, ಹೊರಗಿನ ಸ್ವರೂಪವೇ ಶ್ರೇಷ್ಠವೆಂದು ತೀರ್ಮಾನಿಸುವ ಮುನ್ನ ಆ ಚರ್ಮದ ಹೊದಿಕೆಯ ಅಂಗಳದೊಳಗೊಮ್ಮೆ ಇಣುಕಿ ನೋಡಿ. ಹೀಗೆ ದೇಹದ ಅಂತರಂಗದ ಒಳಹೊಕ್ಕು ನೋಡಿದಾಗ, ದೇಹದ ಕಾರ್ಯಾಚರಣೆಗೆ ಬೇಕಾದ ಭಾಗ, ಅಂಗಾಂಗಗಳ ಜತೆಗೆ ಬೇಕು-ಬೇಡಾದ ಹಲವಾರು ಸ್ವರೂಪಗಳು, ಜೀವಿಗಳು ಕಾಣಿಸಿಕೊಳ್ಳುತ್ತವೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಪರತಂತ್ರ ಜೀವಿ ಜಂತುಹುಳು, ಲಾಡಿ ಹುಳುಗಳಿಂದ ಹಿಡಿದು ಸೂಕ್ಷ್ಮರೂಪದ ಬ್ಯಾಕ್ಟೀರಿಯಾಗಳವರೆಗೆ ಎಲ್ಲಕ್ಕೂ ವಾಸಸ್ಥಾನ ಈ ದೇಹದ ಪೊಟರೆ. ಕೆಲವು ಸಕಾರಣವಾಗಿ ಅಸ್ತಿತ್ವದಲ್ಲಿದ್ದರೆ, ಮತ್ತಷ್ಟು ವಿನಾಕಾರಣವಾಗಿ. ಅಷ್ಟು ಮಾತ್ರವಲ್ಲ – ನಮ್ಮ ದೇಹದ ಅಂಗಾಗಗಳ ಕಾರ್ಯ ವೈಖರಿ, ವಿಧಾನವನ್ನೇ ಗಮನಿಸಿದರು ಸಾಕು – ಅವು ನಿರಂತರವಾಗಿ ನಡೆಸುವ ದೈನಿಕ ಕ್ರಿಯೆಯಲ್ಲಿ ರಸ ಮತ್ತು ಕಸಗಳ ತಾಳಮೇಳ ನಿರಂತರವಾಗಿರುವುದನ್ನು ಗಮನಿಸಬಹುದು.

ಉಸಿರಾಟದ ಕ್ರಿಯೆಯಲ್ಲಿ ಒಳಗೆ ಉಳಿಯುವ ಆಮ್ಲಜನಕದ ಜೊತೆಗೆ ಹೊರಗೆಸೆಯಬೇಕಾದ ಇಂಗಾಲಾಮ್ಲದ ತ್ಯಾಜ್ಯವೂ ಸೇರಿಕೊಂಡಿರುತ್ತದೆ. ರಕ್ತದ ಪರಿಚಲನೆಯಲ್ಲಿ ಶುದ್ಧ ಮತ್ತು ಮಲಿನ ರಕ್ತಗಳ ನಿರಂತರ ಸಂವಹನದಲ್ಲಿ ಹೃದಯದ ಒಂದು ಭಾಗ ಶುದ್ಧರಕ್ತ ವಿಲೇವಾರಿಯಲ್ಲಿ ತೊಡಗಿಸಿಕೊಂಡರೆ ಮತ್ತೊಂದು ಭಾಗ ಮಲಿನರಕ್ತದ ಶುದ್ಧೀಕರಣದ ಕಾರ್ಯದಲ್ಲಿ ಸೇವಾನಿರತ. ಇನ್ನು ಜೀರ್ಣಕ್ರಿಯೆಯ ವಿಷಯಕ್ಕೆ ಬಂದರಂತೂ ನಾವು ತಿಂದ ಆಹಾರದಲ್ಲಿಯೂ, ಜೀರ್ಣವಾದ ಆಹಾರದ ಭಾಗವಿರುವಂತೆ ಜೀರ್ಣವಾಗದೇ ಬೆವರು ಮಲಮೂತ್ರಾದಿಗಳ ರೂಪದಲ್ಲಿ ಹೊರಗೆಸೆಯಬೇಕಾದ ಅಜೀರ್ಣ ಆಹಾರದ ತ್ಯಾಜ್ಯ ಭಾಗವು ಸೇರಿಕೊಂಡಿರುತ್ತದೆ. ಇವೆಲ್ಲವೂ ನಮ್ಮ ದೇಹದೊಳಗೆ ಇದ್ದರು, ಅವುಗಳ ಅಂತರಂಗಿಕ ಕಾರ್ಯ ನಮಗೆ ಗೋಚರಿಸದಂತೆ ಚರ್ಮದ ಆವರಣವು ಎಲ್ಲವನ್ನು ಮರೆಮಾಚಿಬಿಟ್ಟಿರುತ್ತದೆ. ಹಾಗೆಂದು ಅಲ್ಲಿ ಮಲಿನವಿಲ್ಲವೆಂದು ಅರ್ಥವೇ ? ಹಾಗಲ್ಲ. ಉಗುಳು ಮತ್ತು ಮಂತ್ರಗಳೆಂಬ ಮಡಿ-ಮೈಲಿಗೆ ಒಂದೇ ಕಡೆ ಇರುವ ಹಾಗೆ ನಮ್ಮೆಲ್ಲರ ದೇಹದಲ್ಲೂ ಕಸ-ರಸಗಳ ಸಮ್ಮಿಶ್ರಣ ಸದಾ ಅಸ್ತಿತ್ವದಲ್ಲಿರುತ್ತದೆ. ನಾವೆಷ್ಟೇ ಹೊರಗೆ ಬಣ್ಣ ಬಳಿದು, ತೇಪೆ ಹಚ್ಚಿದರು ಒಳಗಿನದೇನು ಬದಲಾಗದು. ಅರ್ಥಾತ್ ನಮ್ಮದೆನ್ನುವ ನಮ್ಮ ಒಳಗಿನ ದೇಹವನ್ನು ಕೂಡ ನಮಗೆ ಬೇಕಾದಂತೆ ಇಟ್ಟುಕೊಳ್ಳುವ ಸ್ವೇಚ್ಛೆ ನಮಗಿಲ್ಲ. ಅದು ಇರುವ ರೀತಿಯಲ್ಲೇ ಒಪ್ಪಿಕೊಂಡು ಅನುಸರಿಸಿಕೊಂಡು ಹೋಗಬೇಕು. ಹೀಗಿರುವಾಗ, ಬರಿ ಬಾಹ್ಯದಲಂಕರಣದೊಂದಿಗೆ ಸೌಂದರ್ಯವನ್ನೋ,ಪ್ರದರ್ಶಿತ ಸ್ವರೂಪವನ್ನೊ ಜಗಮಗಿಸಿಕೊಂಡು ‘ನಾನು ಹೆಚ್ಚು, ನೀನು ಕಡಿಮೆ’ ಎಂದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ? ಎನ್ನುವ ಭಾವ ಇಲ್ಲಿ ವ್ಯಕ್ತವಾಗಿದೆ.

ಕುಲವಾವುದಯ್ಯ ಸರ್ವಜ್ಞ ||

ಕೊನೆಯದಾಗಿ, ನಮ್ಮ ದೇಹದೊಳಗಿನ ಮಡಿ, ಮೈಲಿಗೆಗಳನ್ನೇ ನಿಯಂತ್ರಿಸಲಾಗದ ನಾವು ಬೇರೆಯ ಮನುಜರನ್ನು, ಜೀವಿಗಳನ್ನು ಜಾತಿ, ಮತ, ಕುಲಗಳೆಂಬ ಆಧಾರದಲ್ಲಿ ಮೇಲು , ಕೀಳೆಂದು ವಿಭಾಗಿಸುವುದು ಎಷ್ಟು ಸರಿ ? ಪ್ರತಿಯೊಬ್ಬರೂ ನಮ್ಮ ಹಾಗೆಯೇ ಒಂದೇ ತರಹದ ಸರಕಿನಿಂದಾದ, ಒಂದೇ ತರದ ಕಸರಸಗಳಿಂದಾವೃತ್ತವಾದ, ಒಂದೇ ಮೂಲ ಗುಣಸ್ವರೂಪಗಳಿಂದಾದ ವಿಭಿನ್ನ ಆವೃತ್ತಿಗಳಷ್ಟೇ. ಅಂದಮೇಲೆ ನಮ್ಮನ್ನು ನಾವೇ ಜಾತಿಕುಲಾದಿಗಳ ಆಧಾರದಲ್ಲಿ ವಿಭಜಿಸಿ ನೋಡುವುದು ಮೂರ್ಖತನ ಎನ್ನುವ ಇಂಗಿತವನ್ನು ಈ ವಚನ ಸರಳವಾಗಿ ವ್ಯಕ್ತಪಡಿಸುತ್ತದೆ. ಇದು ಮನುಕುಲ ಜಾತಿಕುಲಗಳ ಆಧಾರದ ಮೇಲೆ ಮೇಲುಕೀಳಿನ ಗಣನೆ ಮಾಡುವುದನ್ನು ಕಂಡು, ಅದರಲ್ಲಿ ಯಾವ ಹುರುಳೂ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಮನುಜದೇಹದ ರಚನೆಯನ್ನೇ ಉದಾಹರಣೆಯಾಗಿ ಬಳಸಿಕೊಂಡ ಚಾತುರ್ಯಪೂರ್ಣ ಸಂಗತಿ ಸಹ ಹೌದು (ಯಾಕೆಂದರೆ ಈ ಉದಾಹರಣೆಯಲ್ಲಿ ವಿವರಿಸುವ ವಿಷಯಗಳನ್ನು ಯಾರೂ ನಿರಾಕರಿಸಲಾಗದು, ಅಲ್ಲಗಳೆಯಲಾಗದು – ಎಲ್ಲವನ್ನು, ಎಲ್ಲರು ಸ್ವಾನುಭವದಿಂದ ಅರಿತವರೇ). ತಾನು ಕಂಡ ಸತ್ಯವನ್ನು ಮನಮುಟ್ಟುವ ಹಾಗೆ, ಯಾರಿಗೂ ನೋವಾಗದ ಹಾಗೆ ಸರಳವಾಗಿ ವಿವರಿಸಿದ ರೀತಿ ಸರ್ವಜ್ಞನ ವಚನಗಳ ಸಾಮರ್ಥ್ಯಕ್ಕೆ ಸಾಕ್ಷಿ.

– ನಾಗೇಶ ಮೈಸೂರು
೦೯.೦೭.೨೦೧೭
(Picture :Wikipedia : https://en.m.wikipedia.org/wiki/Sarvajna)

02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?


02108. ಐಟಿ ಜಗದ ಹೆಣಗಾಟ – ದಿಕ್ಕು ತಪ್ಪಿದ ನಾವೆಯ ಪಯಣಿಗರ ಪಾಡೇನು ?
____________________________________________________________
(ಪ್ರಬಂಧ / ಲೇಖನ : ಸ್ವಲ್ಪ ಸಂಡೇ ಪುರುಸೊತ್ತಿಗೆ ಸೀರಿಯಸ್ ಮ್ಯಾಟರ್ 😊)


ದೇಶದ ಹೊರಗೆ ವಿದೇಶದಲ್ಲಿ ಕೂತು, ಆಗೀಗೊಮ್ಮೆ ಊರೊಳಗಿನ ಸುದ್ದಿಯತ್ತ ಇಣುಕುವುದು ನನ್ನ ದಿನನಿತ್ಯದ ಹವ್ಯಾಸ. ಹಾಗೆ ನೋಡುವಾಗ ತಪ್ಪದೆ ಓದುವ ವಸ್ತುವೆಂದರೆ ಐಟಿ ಜಗಕ್ಕೆ ಸಂಬಂಧಿಸಿದ್ದು. ಪ್ರಾಜೆಕ್ಟು ಮ್ಯಾನೇಜ್ಮೆಂಟಿನ ಜಗದೊಡನಿರುವ ಕೊಂಡಿಯಿಂದಾಗಿ ಕೆಲವು ಕುತೂಹಲಜನ್ಯವಾದರೆ ಮಿಕ್ಕಿದವು ಅನಿವಾರ್ಯತೆಯಿಂದ ಪ್ರೇರಿತವಾದ ಶಿಶುಗಳು. ಆಗೆಲ್ಲ ರಾಚುವ ಹಾಗೆ ಎದ್ದು ಕಾಣುವ ವಿದ್ಯಾಮಾನಗಳಲ್ಲಿ ಕೆಲವು ಗಮನಾರ್ಹ ಸಂಗತಿಗಳು ಕಾಡದೆ ಬಿಡವು. ಅದಕ್ಕೆ ಆ ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡಿರುವುದು ಒಂದು ಕಾರಣವಾದರೆ, ಜಾಗತಿಕ ಗೋಮಾಳದಲ್ಲಿ ಎಲ್ಲಿ ಏನೇ ನಡೆದರೂ ಅದರ ಪರಿಣಾಮ ಎಲ್ಲರಿಗು ಒಂದಲ್ಲ ಒಂದು ರೀತಿ ತಟ್ಟಿಯೇ ತೀರುವುದರಿಂದ ಐಟಿ ಜಗದ ವಿದ್ಯಾಮಾನಗಳ ಮೇಲೆ ಒಂದು ಕಣ್ಣಿಟ್ಟಿರಬೇಕಾದ ಅನಿವಾರ್ಯ ಇನ್ನೊಂದು ಕಾರಣ.

ವರ್ಷಕ್ಕೋ ಆರು ತಿಂಗಳಿಗೋ, ಊರಿಗೆ ಬಂದಾಗಲೊ ಅಥವಾ ಇಲ್ಲಿಗೆ ಬಂದವರಾರೊ ಸಿಕ್ಕಿದಾಗಲೋ – ಹೀಗೆ ಯಾರಾದರೂ ಸಂಪರ್ಕಕ್ಕೆ ಬಂದಾಗ ಒಂದಲ್ಲ ಒಂದು ರೀತಿಯಲ್ಲಿ ತಪ್ಪದೆ ಇಣುಕುವ ವಿಷಯ – ಅವರ ಕುಟುಂಬದಲ್ಲೊ ಅಥವಾ ಹತ್ತಿರದ ಸಂಬಂಧದಲ್ಲೋ ಯಾರೋ ಒಬ್ಬರು ಇಂಜಿನಿಯರಿಗೂ ಮಾಡುತ್ತಿರುವ ಕುರಿತದ್ದು . ಯಾವ ಬ್ರಾಂಚ್, ಎಷ್ಟನೇ ವರುಷ ಇತ್ಯಾದಿಗಳೆಲ್ಲದರ ಯಾದಿ ಮುಗಿದ ಮೇಲೆ ಕೊನೆಯಲ್ಲಿ ತಪ್ಪದೆ ಬರುವ ಕೋರಿಕೆ – ‘ಇನ್ನೆರಡು ವರ್ಷಕ್ಕೆ ಕೋರ್ಸ್ ಮುಗಿಯುತ್ತೆ.. ಆಗ ನಿಮ್ಮ ಕಂಪನಿಲೋ, ಇನ್ನೆಲ್ಲಾದ್ರೂ ಒಂದು ಕೆಲಸಕ್ಕೆ ಹೆಲ್ಪ್ ಮಾಡಿ ಸಾರ್..’ ಅಂತ ಯಾವುದಕ್ಕೂ ಇರಲಿ ಅನ್ನೋ ಒಂದು ಅರ್ಜಿ ಗುಜರಾಯಿಸುತ್ತಾರೆ. ಆ ಮಾತಿನ ಹಿಂದೆ ‘ಕ್ಯಾಂಪಸ್ ಇಂಟರ್ವ್ಯೂಲೇ ಸಿಗುತ್ತೆ.. ಬೈ ಚಾನ್ಸ್ ಮಿಸ್ ಆದ್ರೆ ಇರಲಿ, ಹೇಳಿಟ್ಟುಕೊಂಡಿರೋಣ’ ಅನ್ನೋ ಭಾವನೆ ಹೇಳದೆ ಇದ್ರೂ ಇಣುಕಿರುತ್ತೆ.

ನಾನೂ ಹೊರಗಿನ ದೇಶದಲ್ಲಿರೋದ್ರಿಂದ ಇಲ್ಲಿನ ಸ್ಥಳೀಯ ಸಂಪರ್ಕ ಕಡಿಮೆ ಅಂದರೂ ‘ನಿಮ್ ಫ್ರೆಂಡ್ಸ್ ಗೊತ್ತಿರ್ತಾರಲ್ಲ ಬಿಡಿ ಸಾರ್’ ಅಂತ ನನ್ನನ್ನೇ ಅನಧಿಕೃತ ‘ಎಂಪ್ಲಾಯ್ಮೆಂಟ್ ಎಕ್ಸ್ಚೇಂಜ್’ ಲೆವೆಲ್ಲಿಗೆ ಏರಿಸಿ ನಕ್ಕುಬಿಡುತ್ತಾರೆ. ಆ ಲೋಕಾಭಿರಾಮದ ಮಾತಿನಲ್ಲೇ ಬೇರೇನೂ ಕೇಳಲು ವಿಷಯವಿರದಿದ್ದರೆ ನಾನೂ ತಪ್ಪದೆ ಕೇಳುವ ಒಂದು ಪ್ರಶ್ನೆ , ‘ ಯಾವ ಕಾಲೇಜು ?’ ಪ್ರತಿಬಾರಿಯೂ ಅವರ ಉತ್ತರ ನನ್ನನ್ನ ಮೂಕವಿಸ್ಮಿತನನ್ನಾಗಿಸುತ್ತದೆ. ಯಾಕೆಂದರೆ ಅವರು ಹೇಳುವ ಕಾಲೇಜ್ಯಾವುದೂ ನಾ ಕೇಳೇ ಇರದ ಹೆಸರುಗಳು. ನಾನೂ ಮೈಸೂರಿನಲ್ಲಿ ಓದುತ್ತಿದ್ದಾಗ ಇಂಜಿನಿಯರಿಂಗ್ ಅಂದರೆ ಕಿವಿಗೆ ಬೀಳುತ್ತಿದ್ದುದ್ದು ಎರಡೇ ಕಾಲೇಜುಗಳ ಹೆಸರು – ಏನ್.ಐ.ಇ ಮತ್ತು ಜೆ.ಸಿ.ಇ. ‘ ಯಾವ ಕಾಲದಲ್ಲಿದೀರಿ ಸಾರ್ ನೀವು , ಈಗ ಹತ್ತದಿನೈದು ಇಂಜಿನಿಯರಿಂಗ್ ಕಾಲೇಜುಗಳಿವೆ ಮೈಸೂರಲ್ಲಿ’ ಎಂದಾಗ ‘ಅಷ್ಟೊಂದಾಗಿವೆಯ?’ ಅನಿಸಿ ದಿಗ್ಭ್ರಮೆಯ ಜತೆ ಪಿಚ್ಚೆನಿಸುವ ಭಾವವು ಮೂಡುತ್ತದೆ. ‘ಇಷ್ಟೊಂದು ಕಾಲೇಜುಗಳಿಂದ ಬರುವ ಎಲ್ಲರಿಗು ಸಿಗುವಷ್ಟು ಕೆಲಸಗಳು ನಮ್ಮಲ್ಲಿ ಪ್ರತಿವರ್ಷವೂ ಹುಟ್ಟಿಕೊಳ್ಳುತ್ತಿದೆಯಾ ?’ ಎಂದು ತಲೆಕೆರೆದುಕೊಳ್ಳುತ್ತೇನೆ.

‘ದೊಡ್ಡ ದೊಡ್ಡ ಕಂಪನಿಯವರು ಬಂದು ಕ್ಯಾಂಪಸ್ ಇಂಟರ್ವ್ಯೂ ಮಾಡಿದರು ಬರಿ ಟಾಪರ್ಸ್ ಮಾತ್ರ ತೊಗೋತಾರೆ ಸಾರ್.. ಮಿಕ್ಕವರು ಹೆಣಗಾಡೋದು ತಪ್ಪೊಲ್ಲ’ ಎಂದರೊಬ್ಬರು ಪರಿಚಯದವರು.

‘ ಮತ್ತೆ ಅವರೇನು ಕೆಲಸ ಇಲ್ಲದೆ ಒದ್ದಾಡ್ತಿರ್ತಾರ ?’ ನಾನೂ ಕುತೂಹಲಕ್ಕೆ ಕೇಳಿದೆ.

‘ಹಾಗೇನು ಇಲ್ಲಾ ಸಾರ್ ಹೋಲಿಕೇಲಿ ತೀರಾ ಕಮ್ಮಿ ಸಂಬಳಕ್ಕೆ ಸಿಗೋ ಕೆಲಸಗಳು ಬೇಕಾದಷ್ಟು ಇರುತ್ತೆ.. ಎಲ್ಲೋ ಒಂದ್ಕಡೆ ಸೇರ್ಕೊಂಡು ಎಕ್ಸ್ಪೀರಿಯೆನ್ಸ್ ಮಾಡ್ಕೊಂಡು ಆಮೇಲೆ ಸುಮಾರಾಗಿರೋ ಕಂಪನಿಗೆ ಜಂಪ್ ಆಗ್ತಾರೆ..’

ಅದು ನಿಜವೇ – ನಮ್ಮಲ್ಲಿನ ಐಟಿ ಜಗದ ಕೆಲಸಗಳು ತೀರಾ ಮಾಡಲಾಗದ ಘನಂದಾರಿ ಸ್ತರದವೇನಲ್ಲ. ಅನುಭವ ಇಟ್ಟುಕೊಂಡು ಬಂದರೆ, ಸರಿಯಾದ ಮನೋಭಾವ ಇರುವ ವ್ಯಕ್ತಿತ್ವವಿದ್ದರೆ ಸಾಕು. ಅದರಲ್ಲೂ ಬುದ್ಧಿವಂತರೆಂದು ಕ್ಯಾಂಪಸ್ಸಿನಲ್ಲಿ ಆಯ್ದುಕೊಂಡವರು ಕೂಡ ಅಲ್ಲೇ ಭದ್ರವಾಗಿ ನೆಲೆ ನಿಲ್ಲುವರೆಂದು ಹೇಳಲಾಗದು. ಕೊಂಚ ದಿನಗಳಲ್ಲೇ ಚಡಪಡಿಕೆ ಶುರುವಾಗುತ್ತದೆ – ಹೆಚ್ಚಿನ ಸಂಬಳ, ಪ್ರಮೋಷನ್ ಹಂಬಲ, ವಿದೇಶಿ ಅಸೈನ್ಮೆಂಟಿನ ಅವಕಾಶ ಇತ್ಯಾದಿಗಳನ್ನು ಬೆನ್ನಟ್ಟುವ ಹುನ್ನಾರ. ಒಂದಲ್ಲ ಒಂದು ಕಾರಣಕ್ಕೆ ಬಿಟ್ಟುಹೋಗುವ ಅವರ ಜಾಗವನ್ನು ಇಂತಹವರು ತುಂಬಿಸುತ್ತಾರೆ. ಕ್ಯಾಂಪಸ್ಸಿನ ಇಂಟರ್ವ್ಯೂನಲ್ಲಿರದಿದ್ದ ಅಂಕಗಳ ಬೆಂಬಲ, ಅನುಭವದ ಹಿನ್ನಲೆಯಲ್ಲಿ ನಗಣ್ಯವಾಗಿಬಿಡುತ್ತದೆ. ಇಂತಹವರದೊಂದು ಗುಂಪೇ ಮೌನಸಾಧಕರ ಹಾಗೆ ಸದ್ದು ಮಾಡದೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುವವರ, ಮೇಲ್ನೋಟಕ್ಕೆ ಎದ್ದುಕಾಣದ ಸಮೂಹ. ನಮ್ಮ ಬಹುಪಾಲು ಐಟಿ ಕಂಪನಿಗಳಲ್ಲಿ ಮಾಡುವ ಕೆಲಸಗಳ ಸ್ತರ ತೀರಾ ಹೆಚ್ಚಿನದಲ್ಲವಾಗಿ, ಕೆಲಸ ನಿಭಾಯಿಸಿಕೊಂಡು ಹೋಗುವುದೇನು ದೊಡ್ಡ ತಲೆನೋವಲ್ಲ. ಮಸಲಾ, ಕ್ಯಾಂಪಸ್ ಇಂಟರ್ವ್ಯೂನಲ್ಲಿ ಆಯ್ದುಕೊಂಡಾಗಲೂ ಅವರಾರು ಸಿದ್ದ ಸ್ಥಿತಿಯಲ್ಲೇನು ಇರುವುದಿಲ್ಲ; ತರಬೇತು ಕೊಟ್ಟೆ ರೆಡಿಯಾಗಿಸಬೇಕು. ಅದಕ್ಕೆಂದೇ ಅವರು ಯಾವ ಬ್ರಾಂಚಿನಲಿದ್ದರು ಸರಿ – ಅಂಕದ ಪರಿಗಣನೆ, ರಿಟನ್ ಟೆಸ್ಟ್ , ಇಂಟರ್ವ್ಯೂ ಆಧಾರದ ಮೇಲೆ ಆಯ್ದುಕೊಳ್ಳುತ್ತಾರೆ.

ಇದೇನೋ ಹೀಗೇ ನಡೆದುಕೊಂಡು ಬಂದಿದೆ ಇಲ್ಲಿಯತನಕ. ಆದರೆ ಪ್ರಶ್ನೆ – ಹೀಗೆಯೇ ಮುಂದುವರೆಯುತ್ತದೆಯಾ? ಅಂತ. ಈಚಿನ ದಿನಗಳಲ್ಲಿ ಮೆಲುವಾಗಿ ಕೇಳುತ್ತಿರುವ ಅತಂಕದ ದನಿ – ‘ಹತ್ತಿರದ ಭವಿಷ್ಯದಲ್ಲಿ ಎಷ್ಟೋ ಕೆಳಗಿನ ಸ್ತರದ ಐಟಿ ಕೆಲಸಗಳು ಮಂಗಮಾಯವಾಗಿಬಿಡಲಿವೆ’ ಎನ್ನುವುದು. ನಿರಂತರವಾಗಿ ಆಧುನಿಕರಣಗೊಳ್ಳುತ್ತ, ಸ್ವಯಂಚಾಲಿತ ಸ್ತರಕ್ಕೆ (ಆಟೋಮೇಷನ್) ವರ್ಗಾವಣೆಗೊಳ್ಳುವ ಕೆಲಸಗಳು ಎಲ್ಲಾ ಕ್ಷೇತ್ರಗಳಲ್ಲೂ ಇದ್ದದ್ದೇ. ಇದು ಐಟಿ ಜಗವನ್ನು ಬಿಟ್ಟಿದ್ದಲ್ಲ. ವ್ಯತ್ಯಾಸವೆಂದರೆ ಐಟಿ ಜಗದಲ್ಲಿ ಅದರ ವೇಗೋತ್ಕರ್ಷ, ಉದ್ದಗಲದಳತೆ ಮತ್ತು ವಿಸ್ತಾರ ವ್ಯಾಪ್ತಿ ತುಂಬಾ ಹೆಚ್ಚು. ವಿಪರ್ಯಾಸವೆಂದರೆ, ಒಂದು ಹಂತದಲ್ಲಿ ಆ ಕೆಳಸ್ತರದ ಕೆಲಸಗಳೇ ಸಾವಿರಾರು ಐಟಿ ಉದ್ಯೋಗಗಳನ್ನು ಹುಟ್ಟುಹಾಕಿರುತ್ತದೆ. ಕಾಲಾನುಕ್ರಮಣದ ನಿರಂತರ ಕ್ಷಮತೆ, ದಕ್ಷತೆಯ ಬೆನ್ನಟ್ಟುವ ಪ್ರಕ್ರಿಯೆಯಲ್ಲಿ , ಅದನ್ನು ಮಾಡುವವರಲ್ಲೇ ಒಂದು ಗುಂಪು ಅವುಗಳನ್ನಧಿಗಮಿಸುವ ಮುಂದಿನ ಹಂತ ಅಥವಾ ಉನ್ನತಸ್ತರದ ಕಾರ್ಯ ಕ್ಷೇತ್ರದಲ್ಲಿ ತೊಡಗಿರುತ್ತಾರೆ. ಅವರ ಸೃಜನಶೀಲತೆ ಮತ್ತು ಬುದ್ದಿವಂತಿಕೆ ಹೊಸತಿನ ಸೃಷ್ಟಿಗೆ ಕಾರಣವಾದಷ್ಟೇ ಹಳತನ್ನು ಕಬಳಿಸುವ ಉಪವಲಯವನ್ನು ಸೃಷ್ಟಿಸುತ್ತದೆ. ಇದು ೧:೧ ರ ಅನುಪಾತದಲ್ಲಿ ರೂಪಾಂತರವಾಗುವ ಉದ್ಯೋಗಾವಕಾಶವಾದರೆ ಪರವಾಗಿಲ್ಲ – ಆಗ ಹಳಬರು ಹೊಸತನ್ನು ಕಲಿತು ಹೊಂದಿಕೊಳ್ಳಬೇಕಾದ ತರಬೇತಿಯ ಅಗತ್ಯ ಮಾತ್ರವಿರುತ್ತದೆ. ಆದರೆ ನಿಜದಲ್ಲಾಗುವುದು ಹಾಗಲ್ಲ. ಆಧುನೀಕರಣ, ಆಟೋಮೇಷನ್ ಎಂದಾಗ ಹತ್ತು ಜನರ ಉದ್ಯೋಗವನ್ನು ಕಬಳಿಸುವ ದೈತ್ಯ ಹೊಸದಾಗಿ ಒಂದು ಕೆಲಸಕ್ಕೆ ಮಾತ್ರ ಅವಕಾಶವೀಯುತ್ತಾನೆ – ಅದೂ ತರಬೇತಿ, ಕೌಶಲ್ಯ ಪರಿವರ್ತನೆಯ ತರುವಾಯ. ಅಂದಾಗ ಮಿಕ್ಕ ೯ ಉದ್ಯೋಗಗಳ ಪಾಡೇನು ? ಹೆಚ್ಚಿನ ಸ್ತರದ ಅಥವಾ ಇನ್ನು ಬದಲಾಗದ ಮತ್ತೊಂದು ಕಡೆಯ, ಸಿಕ್ಕಿದ್ದಕ್ಕೆ ಹೊಂದಿಕೊಳ್ಳುವ ಕೆಲಸ ಮಾಡಬೇಕಾಗುತ್ತದೆ. ಹಳತನ್ನು ಹೇಗೂ ಸ್ವಲ್ಪ ಕಾಲ ಉಳಿಸಿಕೊಳ್ಳುವ ಅನಿವಾರ್ಯತೆಯಿರುವುದರಿಂದ ಒಂದಷ್ಟು ಜನ ಅಲ್ಲೇ ಹೆಣಗುತ್ತಾ ಒದ್ದಾಡುತ್ತಾರೆ. ಎಲ್ಲಿಯತನಕ ಅದು ಪ್ರಸ್ತುತವೋ ಅಲ್ಲಿಯತನಕ ನಡೆಯಬಹುದು; ಆದರೆ ಒಂದಲ್ಲಾ ಒಂದು ದಿನ ಬದಲಾವಣೆಯ ಚಕ್ರಕ್ಕೆ ತಲೆಯೊಡ್ಡದೆ ವಿಧಿಯಿಲ್ಲ. ಹೀಗೆ ಐಟಿಯಲ್ಲಿ ಕೆಲಸ ಮಾಡುವ ಅದೇ ಜನರೇ ತಮ್ಮ ಸಂಕುಲದ ಉದ್ಯೋಗಗಳನ್ನು ಕಬಳಿಸುವ ಹೊಸತರ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ ತಮ್ಮರಿವಿಲ್ಲದೆಯೆ !

ಅಂದರೆ ಈ ಐಟಿ ಜಗದ ಒಂದು ಅಲಿಖಿತ ನಿಯಮ ನಿರಂತರ ಬದಲಾವಣೆ; ಜತೆಗೆ ನಿರಂತರ ಕೌಶಲ ಗಳಿಕೆಯ ಅನಿವಾರ್ಯತೆ. ಅಲ್ಲೂ ಸಾಕಾಗುವಷ್ಟು ಅವಕಾಶಗಳು ಸೃಷ್ಟಿಯಾಗಲೆಂಬ ಬೇಡಿಕೆ. ಈ ಕಾರಣದಿಂದಲೇ ಐಟಿ ಕಂಪನಿಗಳು ಸ್ಪರ್ಧಾತ್ಮಕವಾಗಿ ಇರಬೇಕೆಂದರೆ ಹೊಸ ಹೊಸ ಗ್ರಾಹಕರನ್ನು ಸೇರಿಸುತ್ತಲೇ ಇರಬೇಕು, ಹೊಸ ಅಗತ್ಯಗಳಿಗನುಸಾರ ಕೌಶಲ್ಯ ವೃದ್ಧಿಗೆ ಯತ್ನಿಸುತ್ತಲೇ ಇರಬೇಕು. ಇರುವ ಎಲ್ಲರ ಕೌಶಲ್ಯಗಳನ್ನು ಏಕಾಏಕಿ ಪರಿವರ್ತಿಸುವುದು ಹೇಳಿದಷ್ಟು ಸುಲಭವಲ್ಲ, ಅರ್ಧಕ್ಕರ್ಧ ಸಾಧ್ಯವೂ ಆಗುವುದಿಲ್ಲ. ಹಾಗೆಂದು ಲಾಭವಿಲ್ಲದ ಕಡೆಯ ಕೆಲಸವಿಲ್ಲದವರನ್ನ ಇಟ್ಟುಕೊಂಡು ಪುಕ್ಕಟೆ ಸಾಕಲು ಕಂಪೆನಿಗಳೇನು ಧರ್ಮಛತ್ರವಲ್ಲವಲ್ಲ ? ಅಲ್ಲಿಂದಲೇ ಶುರುವಾಗುವುದು ಪಿಂಕ್ ಸ್ಲಿಪ್, ಲೋ ಹೈ ಪರ್ಫಾರ್ಮ ಇತ್ಯಾದಿಗಳ ಭರಾಟೆ. ಇದು ಸದಾ ನಡೆಯುತ್ತಿರುವ ಪ್ರಕ್ರಿಯೆಯಾದರು, ‘ ಏಕಾಏಕಿ ಸಾವಿರಸಾವಿರಗಟ್ಟಲೆ ಕೆಲಸಗಳು ನಿರುಪಯೋಗಿಯಾಗಿಬಿಡುತ್ತವಾ ? ಒಟ್ಟಾರೆ ಅಷ್ಟೊಂದು ಜನ ಕೆಲಸಕಳೆದುಕೊಳ್ಳುವ ಮಟ್ಟ ಬಂದುಬಿಡುತ್ತದೆಯಾ? ಅಷ್ಟೂ ಜನಕ್ಕೆ ಬದಲಿ ಉದ್ಯೋಗ ಸಿಗದೇ ದೊಡ್ಡ ನಿರುದ್ಯೋಗಿ ಬಣ ನಿರ್ಮಾಣವಾಗಿಬಿಡುತ್ತದೆಯಾ?’ ಎನ್ನುವುದು ಈಗ ಕಾಡಲಾರಂಭಿಸಿರುವ ಪ್ರಶ್ನೆಗಳು.

ಒಂದು ವೇಳೆ ಐಟಿ ಜಗದ ಸಿಕ್ಕಾಪಟ್ಟೆ ಜನ ನಿಜಕ್ಕೂ ನಿರುದ್ಯೋಗಿಗಳಾಗಿ ಬಿಡುತ್ತಾರೆ ಅಂದುಕೊಳ್ಳೋಣ. ಆಗ ಅವರ ಜೀವನ ಶೈಲಿಯ ಮೇಲಾಗುವ ಪರಿಣಾಮ ನಿಜಕ್ಕೂ ಊಹಾತೀತ. ಹೆಚ್ಚಿನ ಸಂಬಳದೊಡನೆ ಅದಕ್ಕೊಂದುವ ಜೀವನ ಶೈಲಿಗೆ ಒಗ್ಗಿಕೊಂಡ ಯುವ ಜನತೆ ಏಕಾಏಕಿ ಎಲ್ಲವನ್ನು ನಿಯಂತ್ರಿಸುವ, ಹತೋಟಿಯಲ್ಲಿಡುವ ನಿರ್ಬಂಧಿತ ಜೀವನಕ್ರಮಕ್ಕೆ ಪರಿವರ್ತಿಸಿಕೊಳ್ಳಬೇಕೆಂದರೆ ಅಷ್ಟು ಸುಲಭವಲ್ಲ. ಸರೀಕರ ಮತ್ತು ಜನರ ಕಣ್ಣೆದುರು ಅದುವರೆಗೂ ನಿಭಾಯಿಸಿಕೊಂಡ ಜೀವನಶೈಲಿಯ ಮಟ್ಟವನ್ನು ಉಳಿಸಿಕೊಂಡು ಬರುವಲ್ಲಿ ಹೆಣಗಬೇಕಾಗುತ್ತದೆ. ಬದುಕು, ಆದಾಯ, ಸಂಬಳ ಹೀಗೆ ಇರುತ್ತದೆಂಬ ಉತ್ಸಾಹದಲ್ಲಿ ಖರೀದಿಸಿದ ಕಾರು, ಮನೆ ಇತ್ಯಾದಿಗಳ ಮೇಲಿನ ಸಾಲ ಏಕ್ದಂ ಏರಲಾಗದ ಕಡಿದಾದ ಬೆಟ್ಟದ ಹಾಗೆ ಎದುರು ನಿಂತುಬಿಡುತ್ತದೆ. ಸಾಲಗಳ ಮಾತಿರಲಿ ಮಾಮೂಲಿ ಊಟಕ್ಕೆಂದು ಹೋಗುತ್ತಿದ್ದ ರೆಸ್ಟೋರೆಂಟುಗಳತ್ತ ಕಣ್ಣು ಹಾಯಿಸಲು ಭಯಪಡಬೇಕಾಗುತ್ತದೆ. ಅಲ್ಲಿ ಕೊಡುತ್ತಿದ್ದ ಟಿಪ್ಸ್ನಲ್ಲಿ ಊಟ ಮುಗಿಸಬೇಕಾದ ಅನಿವಾರ್ಯ ಕಾಡುತ್ತದೆ. ಹಾಕುವ ಬಟ್ಟೆಬರೆ, ಮಾಡುವ ಶೋಕಿ ಎಲ್ಲವು ಹೊಸ ಗಡಿಯಾರದ ಗಣನೆಗೆ ತಾಳ ಹಾಕಬೇಕಾಗುತ್ತದೆ. ಎಲ್ಲವು ಚೆನ್ನಾಗಿದ್ದಾಗ ಚೌಕಾಸಿ ಮಾಡದೆ ಕೇಳಿದಷ್ಟು ಕೊಟ್ಟು ಒಟ್ಟಾರೆ ಜೀವನ ವೆಚ್ಚ ಅಡೆತಡೆಯಿಲ್ಲದೆ ಅಡ್ಡಾದಿಡ್ಡಿ ಏರಿಸಲು ಕಾರಣವಾಗಿದ್ದವರೇ, ಅಂದು ಅದರೆದುರು ತತ್ತರಿಸುವಂತಾಗುತ್ತದೆ. ಅವರಿಗೆ ಹೊಂದುವ ಮತ್ತೊಂದು ಕೆಲಸ ಸಿಕ್ಕಿತೋ ಬಚಾವು. ಇಲ್ಲದಿದ್ದರೆ ದೇವರೇ ಗತಿ…!

ಹೀಗೆ ದೊಡ್ಡ ಸಂಖ್ಯೆಯಲ್ಲಿ ಕಳುವಾಗಿಹೋಗುವ ಉದ್ಯೋಗಗಳು – ನಿಜಕ್ಕೂ ಹಾಗಾಗಲಿದೆಯಾ ? ಆಗುವುದೋ ಬಿಡುವುದೋ – ಹಾಗಾಗಬಹುದೆನ್ನುವ ಮಾತಂತೂ ಅಲ್ಲಲ್ಲಿ ಕೇಳಿಬರತೊಡಗಿದೆ. ಕಂಪನಿಗಳು ಇದನ್ನು ‘ಮಾಮೂಲಿಯಾಗಿ ನಡೆವ ಪ್ರಕ್ರಿಯೆ, ವಾರ್ಷಿಕ ಗಣತಿ, ಮೌಲ್ಯಮಾಪನದಲ್ಲಿ ಎಳ್ಳುಜೊಳ್ಳು ಬೇರ್ಪಡಿಸಿ ಏಗಲಾಗಲಾರದವರನ್ನು ಒಂದೆರಡು ಬಾರಿ ಅವಕಾಶ ನೀಡಿ, ತದನಂತರ ಗೇಟ್ ಪಾಸ್ ಕೊಟ್ಟುಕಳಿಸುವುದು ಸದಾ ನಡೆಯುತ್ತಿರುತ್ತದೆ’ ಎನ್ನುತ್ತಿದ್ದಾರೆ. ಇದು ನಿಜವೇ ಆದರೂ, ಗಣನೀಯ ಸಂಖ್ಯೆಯಲ್ಲಿ ಕಡಿತವಾಗಬೇಕಾದಾಗಲೂ ಇದೇ ಪರಿಕರವನ್ನು ತುಸು ಕಠಿಣ ಸ್ತರದಲ್ಲಿ, ಕಟ್ಟುನಿಟ್ಟಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಹೇಳಿ ಕೇಳಿ ಅದು ವ್ಯಾಪಾರಿ ಜಗ.. ಅಲ್ಲಿ ಜಾಗವಿರುವುದು ಸೆಂಟಿಮೆಂಟಿಗಲ್ಲ. ‘ಉಳಿವಿಗಾಗಿ ಹೋರಾಟ’ ಎಂದಾಗ ಕಂಪನಿ ಮೊದಲು, ಮಿಕ್ಕಿದ್ದೆಲ್ಲ ನಂತರ. ಹೀಗಾಗಿ ಏಕಾಏಕಿ ದೊಡ್ಡದೊಡ್ಡ ಸಂಖ್ಯೆಯಲ್ಲಿ ಉದ್ಯೋಗಗಳು ಕಡಿತವಾದರೆ ಅಚ್ಚರಿ ಪಡಬೇಕಿಲ್ಲ. ಈಗಂತೂ ಅಮೇರಿಕ, ಸಿಂಗಾಪುರದಂತಹ ದೇಶಗಳು ಸೇರಿದಂತೆ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳು ಕೂಡ ‘ನೇಷನ್ ಫಸ್ಟ್’ ಎನ್ನುವ ಸ್ವಯಂವಾದಿ ಆಂದೋಲನದತ್ತ ಗಮನವಿಯುತ್ತ ಸಾಧ್ಯವಾದಷ್ಟು ಉದ್ಯೋಗಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವತ್ತ ಯೋಜನೆ ಹಾಕುತ್ತಿವೆ. ಅದರ ಪರಿಣಾಮವೂ ಜತೆಗೂಡಿ ಸನಿವೇಶವನ್ನು ಇನ್ನಷ್ಟು ಗೊಂದಲಮಯವಾಗಿಸುತ್ತಿದೆಯೆನ್ನುವುದಂತೂ ನಿಸ್ಸಂದೇಹ.

ಇಲ್ಲೂ ಕಾಡುವ ಮತ್ತೊಂದು ವಿಪರ್ಯಾಸವಿದೆ: ಈಗಿನ ಆಧುನಿಕ ಜಗದ ಓಘ ಮುಂದಿನ ಕೆಲವರುಷಗಳಲ್ಲಿ ಎತ್ತ ಹರಿಯುತ್ತಿದೆ ಎಂದು ನೋಡಿದರೆ ಅಲ್ಲಿ ಸಿಗುವ ಉತ್ತರ – ಐಟಿಯೇ! ಆದರೆ ಅಲ್ಲೊಂದು ಮೂಲಭೂತ ವ್ಯತ್ಯಾಸವಿದೆ. ಇದುವರೆಗಿನ ಕೆಳಸ್ತರದ ಐಟಿ, ಆಟೋಮೇಷನ್ ಹೆಸರಲ್ಲಿ ಒಂದು ರೀತಿ ‘ಸಿದ್ದ ಸಾಮಾಗ್ರಿ’ ಯಾಗಿ (ಕಮಾಡಿಟಿ) ಬಿಟ್ಟಿದೆ. ಅರ್ಥಾತ್ ಪಕ್ವತೆಯ ಲೆಕ್ಕದಲ್ಲಿ ಅದು ಪ್ರಬುದ್ಧತೆಯ ಮೆಟ್ಟಿಲನ್ನೇರಿ ಮುಂದೆ ಸಾಗಿಬಂದಿದೆ. ಅಂದರೆ ಅದೀಗ ಮುಂದಿನ ಪ್ರಗತಿಯಲೆಗೆ ಬೇಕಾದ ಪರಿಪಕ್ವತೆಯೊಡನೆ, ಅಂತಹ ಪ್ರಗತಿಗೆ ತಾನೇ ವೇದಿಕೆಯಾಗಲು ಸಿದ್ಧವಾಗಿ ನಿಂತಿದೆ. ಆ ವೇದಿಕೆಯೇ ಈಗ ನೂರೆಂಟು ಹೊಸ ಸಾಧ್ಯತೆಗಳನ್ನು, ತಂತ್ರಜ್ಞಾನಗಳನ್ನು, ವ್ಯಾಪಾರಿ ಅವಕಾಶಗಳನ್ನು ಹುಟ್ಟುಹಾಕುವ ಮಂತ್ರವಾದಿಯಾಗಲಿದೆ. ಅದಕ್ಕೆ ಕಂಪನಿಗಳ ಕಣ್ಣು ಈ ಹೊಸತಿನ ಸಾಧ್ಯತೆಯ ಮೇಲೆ. ಹೊಸ ಬಿಸಿನೆಸ್ ಮಾಡೆಲ್ ಜೊತೆಗೆ ಭವಿಷ್ಯದಲ್ಲಿ ಅಳಿಯದೆ ಉಳಿಯುವ ಇಂತಹ ನಾನಾ ತರದ ಯೋಜನೆಗಳನ್ನು ಎಲ್ಲಾ ಕಂಪನಿಗಳು ಹುಟ್ಟುಹಾಕುತ್ತಿವೆ.

ಒಂದು ಅಂದಾಜಿನ ಪ್ರಕಾರ ಇನ್ನು ಕೆಲವೇ ವರ್ಷಗಳಲ್ಲಿ ೫೦ ಬಿಲಿಯನ್ ಗಿಂತಲೂ ಹೆಚ್ಚು ಪರಿಕರಗಳು ಇಂಟರ್ನೆಟ್ ಮುಖಾಂತರ ಒಂದಕ್ಕೊಂದು ಸಂಪರ್ಕ ಸಾಧಿಸಬಲ್ಲ ಶಕ್ತಿ ಪಡೆದುಕೊಂಡುಬಿಡುತ್ತವೆ. ತಾಂತ್ರಿಕ ಪರಿಭಾಷೆಯಲ್ಲಿ ‘ಇಂಟರ್ನೆಟ್ ಆಫ್ ಥಿಂಗ್ಸ್’ ಅಥವಾ ಚುಟುಕಾಗಿ ‘ಐಓಟಿ’ ಎಂದು ಕರೆಯಲ್ಪಡುವ ವಿದ್ಯಾಮಾನದಲ್ಲಿ ಮೂರೂ ‘ಎಸ್’ಗಳ (ಸಾಫ್ಟ್ವೇರ್, ಸೆನ್ಸರ್, ಸರ್ವಿಸ್) ಸಂಯೋಜಿತ ಸಾಧ್ಯತೆಗಳು ದೊಡ್ಡ ಸಂಚಲನೆಯನ್ನುಂಟು ಮಾಡಿ ನಾವು ಬದುಕುತ್ತಿರುವ ರೀತಿಯನ್ನೇ ಬದಲಾಯಿಸಿಬಿಡಲಿವೆಯಂತೆ ! ಯಂತ್ರ ಪರಿಕರಗಳು ತಮ್ಮತಮ್ಮಲ್ಲೇ ಸಂಭಾಷಿಸುವ, ಸಂವಹಿಸುವ ‘ಕೃತಕ ಬುದ್ಧಿಮತ್ತೆ’ ( ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ) ಯನ್ನು ಕರಗತ ಮಾಡಿಕೊಂಡು ಮನುಷ್ಯರಿಗಿಂತ ಹೆಚ್ಚಾಗಿ ಸಹಬಾಳ್ವೆ ನಡೆಸಲು ಸಿದ್ಧವಾಗುತ್ತಿದೆಯಂತೆ. ಕಾರಿನ ಭಾಗ ತಾನು ಕೆಡುವ ಮೊದಲೇ – ತಾನೇ ಅದರ ಕುರಿತು ಸುದ್ಧಿ ರವಾನಿಸುವುದು, ನಿರ್ಜನ ರಸ್ತೆಯ ನಡುವಲೆಲ್ಲೊ ಕೆಟ್ಟುನಿಂತ ಕಾರಿನ ರಿಪೇರಿಗೆ ಯಾರೂ ಕೇಳದೆಯೇ ತಂತ್ರಜ್ಞ ಹೊರಟು ಬರುವುದು, ವಾಷಿಂಗ್ ಮೆಷಿನ್ ಬಟ್ಟೆಯನುಸಾರ ಯಾವ ಪ್ರೋಗ್ರಾಮ್ ಸೂಕ್ತವೆಂದು ತಾನೇ ನಿರ್ಧರಿಸುವುದು, ಡ್ರೈವರನಿಲ್ಲದ ಸ್ವಯಂಚಾಲಿತ ಕಾರು – ಹೀಗೆ ಕಲ್ಪನೆಯ ಲಹರಿಯನ್ನು ಲಂಗುಲಗಾಮಿಲ್ಲದೆ ಬಿಟ್ಟುಕೊಂಡೇ ಸಂಪೂರ್ಣ ವಿಭಿನ್ನ ಜಗವನ್ನು ಚಿತ್ರಿಸಿಕೊಳ್ಳಬಹುದು. ಬಿಗ್ ಡೇಟಾ , ಕ್ಲೌಡ್ ತಂತ್ರಜ್ಞಾನ, ಕನೆಕ್ಟೆಡ್ ಇಂಡಸ್ಟ್ರಿ, ಐಓಟಿ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಹೋಂ – ಹೀಗೆ ಸಾಲುಸಾಲಾಗಿ ಹೊಸತರ ಆಗಮನಕ್ಕೆ ಕಾದು ಕೂತಿದೆ ಹತ್ತಿರದ ಭವಿಷ್ಯ. ಇಲ್ಲಿ ಐಟಿ ಯಾವುದು-ಐಟಿಯಲ್ಲದ್ದು ಯಾವುದು ಎನ್ನುವುದು ಗೊತ್ತೇ ಆಗದಂತೆ ಎಲ್ಲವು ಕಲಸುಮೇಲೋಗರವಾಗಿಬಿಡಲಿದೆ. ಇಂಟರ್ನೆಟ್ ಜಾಲದಲ್ಲಿ ಬಂಧಿತವಾದ ಎಲ್ಲವು (ನಾವೂ ಸೇರಿದಂತೆ) ತಂತಮ್ಮ ವೈಯಕ್ತಿಕ ಮಾಹಿತಿಯ ಗೋಪ್ಯತೆಯನ್ನು ಹೊಂದಾಣಿಕೆ ಮಾಡಿಕೊಂಡೆ ಈ ಹೊಸಜಗದ ಹೊಸಕ್ರಾಂತಿಯಲ್ಲಿ ಪಾಲುದಾರರಾಗಬೇಕಾಗುತ್ತದೆ…!

ಅಂದಮೇಲೆ ‘ಹಳೆ ಐಟಿ ಉದ್ಯೋಗ ಹೋದರೂ ಹೊಸತರ ಅವಕಾಶವಿದೆ ಎಂದಾಯ್ತಲ್ಲವೇ ?’ ಎಂದರೆ ಉತ್ತರ ಹೌದು ಮತ್ತು ಅಲ್ಲಾ. ಯಾಕೆಂದರೆ ಹೊಸತಿನ ಜಗದಲ್ಲಿ ಐಟಿಯು ನಾನ್-ಐಟಿಯ ಜೊತೆ ಕೈ ಕೈ ಮಿಲಾಯಿಸಿಬಿಡುವುದರಿಂದ ಅಲ್ಲಿ ಬೇಕಾಗುವ ಪರಿಣಿತಿ ಬರಿ ಐಟಿ ಮಾತ್ರದ್ದಾದರೆ ಸಾಕಾಗುವುದಿಲ್ಲ. ಒಂದು ರೀತಿಯ ವ್ಯಾವಹಾರಿಕ, ವಾಣಿಜ್ಯಪ್ರೇರಿತ ಮತ್ತು ಹೊಸ ತಾಂತ್ರಿಕತೆಯ ಸಂಯೋಜಿತ ಅಂಗಗಳ ಜ್ಞಾನ ಬೇಕಾಗುತ್ತದೆ. ಅಂದರೆ ಹೆಚ್ಚುಕಡಿಮೆ ಹಳೆಯದನ್ನೆಲ್ಲ ಮರೆತು ಹೊಸತನ್ನು ಕಲಿಯಬೇಕು. ಅನುಭವವಿಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಹೊಸತ ಕಲಿಯುವ ಚಾಕಚಾಕ್ಯತೆ ಬೆಳೆಸಿಕೊಳ್ಳಬೇಕು. ಹಾಗಾದವರು ಮಾತ್ರ ಉಳಿದುಕೊಂಡು ಹೋಗಲು ಸಾಧ್ಯ. ಮಾತ್ರವಲ್ಲ – ಈಗಿನ ವಿಭಾಗಾಧಿಕಾರಿಗಳು, ಮ್ಯಾನೇಜರುಗಳು, ಟೀಮ್ ಲೀಡರುಗಳು, ಗ್ರೂಪ್ ಲೀಡರುಗಳು ಇಂತಹವರೆಲ್ಲರ ಕೆಲಸದ ವ್ಯಾಪ್ತಿ, ಜವಾಬ್ದಾರಿಯ ಪರಿಭಾಷೆ ಗುರುತೇ ಸಿಕ್ಕದ ಹಾಗೆ ಬದಲಾಗಲಿದೆ. ಇದೆಲ್ಲದರ ನಡುವೆ ಅಜೈಲ್ ಚಟುವಟಿಕೆಗಳು, ಯು ಎಕ್ಸ್ (ಯೂಸರ್ ಎಕ್ಸ್ ಪೀರಿಯೆನ್ಸ್ ) ಇತ್ಯಾದಿ ಅಭಿಯಾನಗಳು ಎಲ್ಲೆಡೆ ಕಾಣುವ ಸಾಮಾನ್ಯ ಅಂಶಗಳಾಗಲಿವೆ.

ಸಾರಾಂಶದಲ್ಲಿ ಹೇಳುವುದಾದರೆ ನಿಂತ ನೀರಾಗದ ಐಟಿ ಜಗದಲ್ಲಿ ನಿಂತ ನೀರಾಗದೆ ನಡೆವವ ಹೇಗೋ ಬದುಕಿಕೊಳ್ಳುತ್ತಾನೆ; ನಡೆಯದವ ಅಪ್ರಸ್ತುತವಾಗಿ ಮಾಯವಾಗುತ್ತಾನೆ. ಆದರೆ ನಿಂತ ನೀರಾಗದಂತಿರಲು ತೆರಬೇಕಾದ ಬೆಲೆ ಮಾತ್ರ ಅಪಾರ. ವೈಯಕ್ತಿಕ ಬದುಕಿನ ಎಷ್ಟೋ ಅನುಭವ-ಅನುಭಾವ-ಅನುಭೂತಿಗಳನ್ನು ಅನುಭವಿಸಲಾಗದೆ ವಂಚಿತರಾಗುತ್ತಾ , ಕಾರ್ಪೊರೇಟ್ ಜಗದ ಜಂಜಾಟದಲ್ಲಿ ಕಳೆದುಹೋಗಿ ಗೊತ್ತುಗುರಿಯಿಲ್ಲದ ಕುರಿಯ ಹಾಗೆ ಯಾವುದೋ ಗಮ್ಯದ ಬೆನ್ನಟ್ಟಿ ಉಸಿರಾಡಲು ವ್ಯವಧಾನವಿಲ್ಲದವನಂತೆ ನಡೆಯುತ್ತಿರಬೇಕು. ಈ ಜಗದಲ್ಲಿ ಅಪ್ರಸ್ತುತವಾಗದೆ ಹೇಗೋ ಹೆಣಗಾಡಿಕೊಂಡಿರಬೇಕೆಂದರೆ ಪರ್ಯಾಯ ಮಾರ್ಗವಿಲ್ಲದ ಅನಿವಾರ್ಯ ಪಥವಿದು. ಅದರಲ್ಲಿ ನಡೆವವರ ಜೊತೆಗೆ ಅವರ ಸುತ್ತಲ ಪರಿಸರ, ಅವರ ಸಂಸಾರ, ಮತ್ತಿತರ ‘ಎಕೋ ಸಿಸ್ಟಮ್’ ಕೊಂಡಿಗಳೂ ಅದೇ ದಾರಿಯಲ್ಲಿ ನಡೆಯುತ್ತಾ ಕೊನೆಗೆ ಸಮಷ್ಟಿ ಪೂರಾ ಆ ಸಮೂಹ ಸನ್ನಿಯ ಭಾಗವಾಗುವುದನ್ನು ನಾವಾರು ತಡೆಹಿಡಿಯಲಾಗದೇನೋ…!

ಬಹುಶಃ ಈ ಚಕ್ರವ್ಯೂಹದಲ್ಲಿ ಸಿಕ್ಕಿಕೊಳ್ಳಬಾರದೆಂದಿದ್ದರೆ ಐಟಿ ಜಗದಿಂದ ಮೊದಲಿಂದಲೇ ದೂರವಿದ್ದು ಬೇರಾವುದಾದರೂ ಉದ್ಯಮವನ್ನು ಆಯ್ಕೆ ಮಾಡಿಕೊಂಡರೆ ಒಳಿತೇನೋ – ಸ್ವಲ್ಪ ಕಡಿಮೆ ಸಂಪಾದನೆಯಿದ್ದರೂ ಸರಿ. ಈಗಂತೂ ಲಾಯರು, ಅಕೌಂಟೆಂಟ್ ಗಳಂತಹ ಸಾಂಪ್ರಾದಾಯಿಕ ಉದ್ಯೋಗಗಳಲ್ಲದೆ ಕಂಡು ಕೇಳರಿಯದ ಅನೇಕ ರೀತಿಯ ಹೊಸಹೊಸ ಸಾಧ್ಯತೆಗಳು ಹುಟ್ಟಿಕೊಂಡಿವೆ. ಅಲ್ಲೂ ಐಟಿ ಆಧುನಿಕತೆಯ ಪ್ರಭಾವ ತಡೆಯಲಾಗದಿದ್ದರು ಅದು ಬಹುತೇಕ ಗ್ರಾಹಕತ್ವ ರೂಪದಲ್ಲಿ ಹೆಚ್ಚಿರುತ್ತದೆಯೇ ಹೊರತು ಪೂರ್ಣಾಧಿಪೂರ್ಣ ಐಟಿ ಜಗವಾಗುವುದಿಲ್ಲ. ಅಥವಾ ಐಟಿಯಲ್ಲೇ ಇರಬೇಕೆಂದರು ಏನಾದರೂ ಸ್ವಂತದ ಉದ್ಯಮದ ಆಲೋಚನೆ ಮಾಡುತ್ತಾ ಕೃಷಿ, ಹೈನುಗಾರಿಕೆ, ಗುಡಿ ಕೈಗಾರಿಕೆಯಂತಹ ಸ್ಥಳೀಯ ಸಮಸ್ಯೆಗಳಿಗೆ ಐಟೀ ಪ್ರೇರಿತ ಚಮತ್ಕಾರಿಕ, ಕ್ರಾಂತಿಕಾರಕ ಉತ್ತರ ಕಂಡು ಹಿಡಿಯುವ ಹಾದಿಯಲ್ಲಿ ನಡೆದರೆ ಹೊಸ ಉದ್ಯೋಗಗಳ ಸೃಷ್ಟಿಯೂ ಆದಂತಾಗುತ್ತದೆ. ಈಗಿನ ಕೇಂದ್ರ ಸರಕಾರದ ‘ಮೇಕ್ ಇನ್ ಇಂಡಿಯಾ’ದಂತ ಅನೇಕಾನೇಕ ಯೋಜನೆಗಳ ಲಾಭ ಪಡೆದು ಆ ದಾರಿಯಲ್ಲಿ ಮುನ್ನಡೆದರೆ ಬೇರೆಯವರ ಐಟಿ ಕೆಲಸ ಮಾಡುವ ‘ಸೇವಕ ಎಕಾನಮಿ’ ಯಿಂದ ಬೇರೆಯವರಿಗೆ ಅಂತಹ ಕೆಲಸ ನೀಡಬಲ್ಲ ‘ಮಾಲೀಕ ಎಕಾನಮಿ’ಗೆ ಸುಲಭದಲ್ಲಿ ಪರಿವರ್ತಿತರಾಗಬಹುದು.

– ನಾಗೇಶ ಮೈಸೂರು
(Picture source : internet)

02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’


02090.ಮಂಕುತಿಮ್ಮನ ಕಗ್ಗ ೦೬೬:’ದುಂದುಗಾರನವನೆಂದರೆ, ನೀ ಮಂದದೃಷ್ಟಿಯವನಾಗುವೆ ಮರುಳೆ..!’
ಮಂಕುತಿಮ್ಮನ ಕಗ್ಗ ೬೬ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !


02078. ಮಂಕುತಿಮ್ಮನ ಕಗ್ಗ ೦೬೫. ಕೃತಕ ಮಣಿಯಂತಲ್ಲ, ವಿಕಸಿಪ ಸುಮದಂತಿರಬೇಕು – ಜ್ಞಾನ !

http://kannada.readoo.in/2017/06/%E0%B2%95%E0%B3%83%E0%B2%A4%E0%B2%95-%E0%B2%AE%E0%B2%A3%E0%B2%BF%E0%B2%AF%E0%B2%82%E0%B2%A4%E0%B2%B2%E0%B3%8D%E0%B2%B2-%E0%B2%B5%E0%B2%BF%E0%B2%95%E0%B2%B8%E0%B2%BF%E0%B2%AA-%E0%B2%B8%E0%B3%81

02075. ಮಂಕುತಿಮ್ಮನ ಕಗ್ಗ ೬೪: ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !


02075. ಮಂಕುತಿಮ್ಮನ ಕಗ್ಗ ೬೪: ಬತ್ತ ಕುಟ್ಟಿದರಕ್ಕಿ, ಚಿತ್ತ ಕುಟ್ಟಿದರೇ ತತ್ತ್ವ !

ಮಂಕುತಿಮ್ಮನ ಕಗ್ಗ ೬೪ ರ ಮೇಲಿನ ಟಿಪ್ಪಣಿ – ರೀಡೂ ಕನ್ನಡದಲ್ಲಿ..

http://kannada.readoo.in/2017/06/ಬತ್ತ-ಕುಟ್ಟಿದರಕ್ಕಿ-ಚಿತ್ತ
ಮಂಕುತಿಮ್ಮನ, ಕಗ್ಗ, ೬೪, ಬತ್ತ, ಕುಟ್ಟಿದರಕ್ಕಿ, ಚಿತ್ತ, ಕುಟ್ಟಿದರೇ, ತತ್ತ್ವ

02066. ಹೀಗೊಂದು ಪತ್ರದ ಒಕ್ಕಣೆ..


02066.ಹೀಗೊಂದು ಪತ್ರದ ಒಕ್ಕಣೆ.. (published in pratilipi)
(http://kannada.pratilipi.com/read?id=6088354905980928)


ನೋಡಿದೆಯಾ? ಬರೆಯುವ ಮೊದಲೇ ನೂರೆಂಟು ಗೊಂದಲ, ಗದ್ದಲವುಕ್ಕಿ ಕಂಗೆಡಿಸುವ ಪರಿಯನ್ನು? ಪತ್ರ ಬರೆಯಲಿಲ್ಲವೆಂದು ಮುನಿಸಿಕೊಂಡು ಮಾತಾಡದೆ ಮೌನ ವ್ರತ ಹಿಡಿದು ಇಂದಿಗೆ ಆರು ದಿನಗಳಾದುವಲ್ಲ? ಹಠವೆಂದರೆ ನಿನ್ನದೇ ಸರಿ ಬಿಡು!

ಅಲ್ಲಾ.. ಯಾಕಿಷ್ಟು ಕೆಟ್ಟ ಹಠ ಅಂತ? ಇ ಮೇಲ್ ಇದೆ, ವಾಟ್ಸಾಪ್, ಫೇಸ್ಬುಕ್, ಮೊಬೈಲ್ ಅಂತ ನೂರೆಂಟು ದಾರಿಗಳಿವೆ ಮಾತಿಗೆ. ಸಾಲದ್ದಕ್ಕೆ ಕರೆದರೆ ಸಾಕು ಓಡಿ ಬಂದು ಮುಂದೆ ಕೂತು ಗುಬ್ಬಚ್ಚಿಯಂತೆ ಕವುಚಿಕೊಂಡು ಕೂರುವ ಈ ಬಡಪಾಯಿ ಜೀವಿಯಿದೆ. ಇಷ್ಟೆಲ್ಲಾ ಇದ್ದರೂ ಸಾಲದು – ಕಾಗದದ ಮೇಲೆ, ನನ್ನ ಕೈಯಾರೆ ಪತ್ರ ಬರೆದು ಪೋಸ್ಟ್ ಮಾಡು ಅಂತ ಸಂಪು ಹೂಡಿದ್ದೀಯಲ್ಲಾ ಹುಡುಗಿ? ಏನಿದು ನಿನ್ನ ಹುಚ್ಚಾಟ?

ಅಲ್ಲಾ ಕಣೆ.. ಈ ಕಾಲದಲ್ಲಿ ಯಾರೇ ಪೆನ್ನು, ಪೇಪರು ಹಿಡಿದು ಪುಟಗಟ್ಟಲೆ ಬರೆದುಕೊಂಡು ಕೂರುತ್ತಾರೆ? ಮೊದಲಿಗೆ, ಮೂರೂ ಸಾಲು ಬರೆಯಲಿಕ್ಕಿಲ್ಲ ಆಗಲೇ ಕೈನೋವೂ ಶುರುವಾಗುತ್ತದೆ; ಸ್ಕೂಲಿನಲ್ಲೆಲ್ಲಾ ಬರೆಯುತ್ತಿರಲಿಲ್ಲವಾ? ಎಂದು ಹಂಗಿಸಬೇಡ. ಈಗ ಅಲ್ಲಿ ಕೂಡ ಲ್ಯಾಪ್ಟಾಪ್, ಕಂಪ್ಯೂಟರ್ ಯುಗ. ಪೇಪರಿನ ಮೇಲೆ ಬರೆದ ಒಂದೆರಡು ಸಾಲಷ್ಟೇ ಮುತ್ತಿನಹಾರದ ಹಾಗೆ ನೆಟ್ಟಗೆ ಮೂಡೋದು. ಅಲ್ಲಿಂದಾಚೆಗೆ ಅಡ್ಡಾದಿಡ್ಡಿ, ಸೊಟ್ಟಂಬಟ್ಟ ಚಾಮುಂಡಿ ಬೆಟ್ಟ ಏರಿಳಿಯುತ್ತ, ಕೋಳಿ ಕಾಲನ್ನ ನೆನಪಿಸೋ ಬರವಣಿಗೆಯನ್ನು ಎಲ್ಲರು ನೋಡಿ ನಗುವಂತೆ ಮಾಡಲು ನಿನಗ್ಯಾಕಿಷ್ಟು ಉತ್ಸಾಹ, ಅವಸರ? ನನ್ನ ಕಕ್ಕಾಬಿಕ್ಕಿಯಾಗಿಸಿದರೆ ನಿನಗೆ ಯಾಕೆ ಉಲ್ಲಾಸ? ನಿನಗದರಿಂದೇನು ಸಿಗುತ್ತದೆ? ಹೋಗಲಿ ಬಿಡು.. ನಿನ್ನ ಖುಷಿಗೆ ಏನು ಬೇಕಾದರೂ ಮಾಡಲು ಸಿದ್ದ ಎಂದ ತಪ್ಪಿಗೆ ದಂಡ ಕಟ್ಟಲೇಬೇಕಲ್ಲಾ? ಅದೂ ಆಗಿಹೋಗಲಿ.

ಇಕೋ, ನೀ ಕೇಳಿದ್ದಂತೆ ನೂರಿಪ್ಪತ್ತು ಅಂಗಡಿಗಳಲ್ಲಿ ಸುತ್ತಾಡಿ ಈ ಗುಲಾಬಿ ನೀಲಿ ಹಳದಿ ಮಿಶ್ರಿತ ಕಾಗದವಿರುವ ಲೆಟರ್ ಪ್ಯಾಡ್ ತಂದಿಟ್ಟುಕೊಂಡು ಅದರ ಮೇಲೆ ಬರೆಯುತ್ತಿದ್ದೇನೆ. ಹಾಂ.. ಇರು ಇರು ಕೂಗಾಡಬೇಡ.. ಏನೂ ಮರೆತಿಲ್ಲ. ನೀನು ಬಯಸಿದ್ದಂತೆ ಅದರ ಮೇಲೇನು ಬರೆದಿರದ ಖಾಲಿ ಹಾಳೆಯದನ್ನೇ ಹುಡುಕಿ ತಂದಿದ್ದೇನೆ. ಹಿನ್ನಲೆಯಲ್ಲಿ ಕಂಡೂ ಕಾಣಿಸದಂತೆ ಹುದುಗಿಕೊಂಡಿರುವ ತಿಳಿಬಣ್ಣದ ಗುಲಾಬಿಯ ಚಿತ್ರ ಬಿಟ್ಟರೆ ಮತ್ತೇನು ಇಲ್ಲ. ಹಾಗೆಯೇ ಸಾಲುಗಳಿಲ್ಲದ ಖಾಲಿ ಹಾಳೆಯನ್ನೇ ನೋಡಿ ತಂದಿದ್ದೇನೆ. ನಿನ್ನ ಇಷ್ಟದ ಬಣ್ಣ, ನಿನ್ನ ನೆಚ್ಚಿನ ಹೂವು, ನೀನು ಬಯಸಿದ್ದಂತದ್ದೇ ಹಾಳೆ… ಇನ್ನು ಮಿಕ್ಕಿದ್ದು ಅದರಲ್ಲೇನಾದರೂ ಬರೆದು ತುಂಬಿಸುವುದಷ್ಟೇ – ಅದೇ ನಿನ್ನ ಪ್ರಿಯವಾದ ಕಪ್ಪು ಶಾಯಿಯ ಇಂಕ್ ಪೆನ್ನಿನಲ್ಲಿ…!

ಇಂಕ್ ಪೆನ್ನು ಅಂದಾಗ ನೆನಪಾಯ್ತು – ನಿನ್ನದೆಲ್ಲ ಇದೆಂತಹ ಡಿಮ್ಯಾಂಡ್ ಮಾರಾಯ್ತಿ? ಅದೆಲ್ಲಾ ಎಲ್ಲಿಂದ ಹುಡುಕಿ ತರ್ತೀಯಾ ಅಂತ? ಬಾಲ್ ಪೆನ್ನುಗಳದೇ ರಾಜ್ಯವಿರುವ ಈ ಕಾಲದಲ್ಲಿ ಫೌಂಟನ್ ಪೆನ್ನು ಮತ್ತದರ ಶಾಯಿಗೆ ಊರೆಲ್ಲ ಅಲೆದು ಬಂದೆ ಗೊತ್ತಾ? ಮಸಿಕುಡಿಕೆ ಇದೆಯಾ? ಅಂತ ಸ್ಟೇಷನರಿ ಅಂಗಡಿಗಳಲ್ಲಿ ಕೇಳಿದರೆ ಯಾವುದೋ ವಿಚಿತ್ರ ಪ್ರಾಣಿಯನ್ನ ನೋಡೋ ಹಾಗೆ ಮುಖ ನೋಡ್ತಾರೆ ; ಆಡುವಂತಿಲ್ಲ, ಅನುಭವಿಸುವಂತಿಲ್ಲ. ಏನು ನಿನ್ನ ಗೋಳೇ ಮಾರಾಯ್ತಿ? ಹೋಗಲಿ ಬಿಡು.. ಹೇಗೇಗೋ ಏಗಿ ಕೊನೇಗೆಲ್ಲೆಲ್ಲೋ ಹುಡುಕಿ ಅದನ್ನೂ ತಂದಿದ್ದಾಯ್ತು . ಇನ್ನೂ ಪೇಚಾಡಿಕೊಂಡಿದ್ದರೆ ಏನು ತಾನೇ ಪ್ರಯೋಜನ ? ಮುಖ್ಯ ಅದನ್ನು ಬಳಸಿ ಬರೆದುಬಿಟ್ಟರೆ ಸರಿ. ಆಗಲಾದರೂ ನಿನ್ನ ಮೌನಗೌರಿ ವ್ರತ ಮುರಿದು ಮುದ್ದು ಮುಖದಲ್ಲಿ ಮಲ್ಲಿಗೆಯಂತಹ ಮಂದಹಾಸದ ನಗೆ ಚೆಲ್ಲೀತು. ಅರೆ ! ಎಲ್ಲಾ ಸರಿ.. ಬರೆಯೋದಾದರೂ ಏನನ್ನ ? ಅದನ್ನೇ ಹೇಳಲಿಲ್ಲವಲ್ಲೇ ಹುಡುಗಿ ನೀನು ?

ನೀ ಬಿಡು ಜಾಣೆ.. ಪ್ರೇಮಪತ್ರವೇ ಬೇಕಿದ್ದರೂ ಬಾಯಿಬಿಡದೆ, ನನ್ನಿಂದ ಅದನ್ನೇ ಬರೆಸುವ ಛಾತಿಯವಳು. ನಿನ್ನ ಮನಸರಿತವನೇ ನಾನಾಗಿದ್ದರೆ ಅದೇನು ಬರೆಯಬೇಕೆಂದು ನನಗೆ ಗೊತ್ತಿರುತ್ತದೆಯೇ? ಕಿಲಾಡಿ ನೀನು (ಅದಕೆ ನಿನ್ನ ಕಂಡರೆ ನನಗಿಷ್ಟ!). ನಾನು ಏನು ಬರೆಯುವೆನೆಂದು ನಿನಗೂ ಗೊತ್ತು .. ಅದಕ್ಕೆ ಬಾಯಿ ಬಿಡದೆ ಸತಾಯಿಸುತ್ತೀಯಾ. ಹೋಗಲಿ , ಪ್ರೇಮಪತ್ರವೇ ಅಂತಿಟ್ಟುಕೊಳ್ಳೋಣ – ಯಾಕೋ ಏನು ಬರೆಯಲು ತೋಚುತ್ತಿಲ್ಲವಲ್ಲೇ ಹುಡುಗಿ ? ಹಾಗೆಂದುಕೊಂಡೇ, ಇಲ್ಲಿವರೆಗಿನ ಈ ಪೀಠಿಕೆಯೇ ಮೊದಲ ಪುಟ ತುಂಬಿಸಿಬಿಟ್ಟಿದೆಯಲ್ಲೇ ? ನಿನ್ನಂದಚಂದ ಹೊಗಳಿ ಬರೆದರೆ ನಿನಗದು ಇಷ್ಟವಿಲ್ಲ ಎನ್ನುತ್ತಿ – ಮುಖಸ್ತುತಿಯಿಂದ ನಾಚಿ ಕೆಂಪಾದ ನಿನ್ನ ಮುಖ ಬೇರೆಯದೇ ಕಥೆ ಹೇಳುತ್ತಿದ್ದರು… ನಿನ್ನ ಅಪರಂಜಿಯಂತಹ ಗುಣವನ್ನು ಹೊಗಳಲೇ ಎಂದರೆ ‘ ಸುಳ್ಳಾಡುವವರನ್ನು ಕಂಡರೆ ನನಗಾಗದು’ ಎನ್ನುತ್ತಿ. ಬರೆದರೆ ನಿನ್ನ ಮುನಿಸಿನ ಬಗೆಯೇ ಬರೆಯಬೇಕೇನೋ ? ಏನೇ ಮಾಡಿದರು ಜಗ್ಗದ ಹಠಮಾರಿ ಮುನಿಸಿನ ಮಹಾಕಾಳಿ ನೀನು. ಆ ಮುನಿಸಲ್ಲು ಮುದ್ದಾದ ಮುಖ ಕಾಣುವ ಹುಂಬ ನಾನೆಂಬ ಗುಟ್ಟನ್ನಿಲ್ಲಿ ಬಿಟ್ಟುಕೊಡುತ್ತಿದ್ದೇನೆ – ಖುಷಿ ತಾನೇ ? ಬೇರೇನೇ ಇರಲಿ , ಇದು ಮಾತ್ರ ಸತ್ಯದ ಮಾತು ; ಯಾವಾಗಲೂ ನೀನು ನೀನಾಗಿರುತ್ತೀಯಾ. ನಿನ್ನತನವನ್ನು ಬಿಟ್ಟುಕೊಡದೆ ಕಾದಾಡುತ್ತೀಯ. ಆವರಣಗಳಿಲ್ಲದ ನೇರ ನಡೆನುಡಿಯ ನಿನ್ನೀ ಗುಣವೇ ನನಗೆ ತುಂಬಾ ಪ್ರಿಯವಾದದ್ದು. ಅದರ ಹಿಂದಿರುವ ಮಗುವಿನಂತಹ ಮನಸು, ಮಾಗಿದ ಗೃಹಿಣಿಗಿರುವ ಪಕ್ವತೆ, ಎರಡು ಕಡೆಗೂ ಓಲಬಿಡದೆ-ಹೋಲಿಸಬಿಡದೆ ತುಯ್ದಾಟದಲ್ಲಿರಿಸುವ ಚಂಚಲತೆ – ಎಲ್ಲವು ಹಿತವಾಗುವುದು ಬಹುಶಃ ನೀನೆ ಒಂದು ಹಿತವಾದ, ಸಹನೀಯವಾದ ಪ್ಯಾಕೇಜ್ ಆಗಿರುವುದರಿಂದ. ಅದೆಲ್ಲವನ್ನೂ ಮೀರಿ – ಹೆಣ್ಣಿನ ಸಹಜ ಹೊಯ್ದಾಟಗಳ ನಡುವೆಯೂ ನನ್ನತನವನ್ನು ಗಮನಿಸಿ, ಗೌರವಿಸುವ ಸಂಸ್ಕಾರವೊಂದೇ ಸಾಕು ನನಗೆ, ಮಿಕ್ಕಿದ್ದೆಲ್ಲಾ ಗೌಣ… 🙂

ಅಯ್ಯೋ ! ನಿನ್ನ ಬಗ್ಗೆ ಬರೆಯಹೊರಡಲಿಕ್ಕಿಲ್ಲ, ಆಗಲೇ ಎರಡನೇ ಪುಟದ ಕೊನೆ ಬಂದುಬಿಟ್ಟಿತೇ? ಎರಡು ಪುಟ ಮುಗಿಸಿದ ಮೇಲಷ್ಟೇ ನನ್ನ ಜೊತೆಗೆ ಮಾತು ಅಂದೆಯಲ್ಲಾ? ನೋಡೀಗ. ಮುಗಿದಾಯ್ತು ಎರಡು ಪುಟ, ಮೂರನೆಯದರತ್ತ ನಡೆದಿದೆ ಓಟ. ಆದರೆ ನೀ ಮಾತು ಕೊಟ್ಟಂತೆ ನನ್ನೊಡನೆ ಮಾತಾಡದ ಹೊರತು ನಾನು ಮೂರನೇ ಪುಟದತ್ತ ಮುಖ ಮಾಡುವುದಿಲ್ಲ. ನೋಡೀಗ ನಿನಗೊಂದು ಮೊಬೈಲ್ ಮೇಘ ಸಂದೇಶ ಕಳಿಸುತ್ತಿದ್ದೇನೆ – ಎರಡು ಪುಟ ಮುಗಿಸಿದ ಸಾಕ್ಷಿಯಾಗಿ ಅದರ ಫೋಟೋ ಕೂಡ ತೆಗೆದು ಕಳಿಸುತ್ತಿದ್ದೇನೆ. ಈಗ ನೀನಾಗಿ ಬಂದು ಮಾತನಾಡಿಸಿ ಏಕೆ ನನ್ನಲ್ಲಿ ಹೀಗೆ ಪತ್ರ ಬರೆಸಲು ಹವಣಿಸಿದೆ ? ಯಾಕಿಷ್ಟು ಬಲವಂತ ಮಾಡಿ ಬರೆಸಿದೆ ಎಂದು ಹೇಳುವ ತನಕ ಪತ್ರವನ್ನು ಮುಂದುವರೆಸುವುದಿಲ್ಲ ಮತ್ತು ಮುಗಿಸುವುದಿಲ್ಲ, ನಿನ್ನಾಣೆ!

ಹಾಂ.. ಮೇಘಸಂದೇಶ ರವಾನಿಸಿಯೂ ಆಯ್ತು ನೋಡು. ಈಗ ಕಾಯುತ್ತಿದ್ದೇನೆ ಜಾತಕ ಪಕ್ಷಿಯ ಹಾಗೆ.. ನಿನ್ನ ಮೌನವ್ರತ ಮುರಿವ ಆ ಕರೆಗಾಗಿ, ರಾಧೆಯ ದನಿಗಾಗಿ..

ನಿನ್ನ ಕೊರಳಿನ ಮುರಳಿ,
ಮಾಧವ

ಉಪಸಂಹಾರ:

ಮಿಕ್ಕಿದ್ದೇನಾಯ್ತು, ಮುಂದೇನಾಯ್ತು ಎನ್ನುವುದಿಲ್ಲಿ ಅಪ್ರಸ್ತುತ. ನನ್ನ ಹುಡುಗಿ ಯಾಕೀ ಪತ್ರ ಬರೆಸಿದಳೆಂಬುದು ಮಾತ್ರ ಇಲ್ಲಿ ಸಂಗತ, ಮಿಕ್ಕಿದ್ದೆಲ್ಲ ‘ನಮ್ಮ’ ವೈಯಕ್ತಿಕ! ಅದನ್ನು ಮಾತ್ರ ಬಹಿರಂಗಪಡಿಸುತ್ತಿದ್ದೇನೆ – ಮಿಕ್ಕಿದ್ದನ್ನ ಕೆಳಬಾರದೆನ್ನುವ ಕಟ್ಟಳೆಯೊಂದಿಗೆ . ನಿಜ ಹೇಳಬೇಕೆಂದರೆ ಇದೂ ಕೂಡ ಅವಳು ನನಗೆ ನೇರ ಹೇಳಿದ್ದಲ್ಲ.. ನಾನೇ ಆಕಸ್ಮಿಕವಾಗಿ ಕಂಡುಕೊಂಡಿದ್ದು. ನಾ ಬರೆದ ಪತ್ರವನ್ನ ಕ್ಲಿಕ್ಕಿಸಿ ಅವಳಿಗೆ ಫೋಟೋ ಕಳಿಸಿದೆನೆಂದು ಹೇಳಿದ್ದೆನಲ್ಲಾ? ಅದನ್ನೇ ಯಥಾವತ್ತಾಗಿ ಡಿಜಿಟಲಿಗಿಳಿಸಿ ಪ್ರತಿಲಿಪಿ ಲೆಟರ್ ಬಾಕ್ಸ್ ಸ್ಪರ್ಧೆಗೆ ನನ್ನ ಹೆಸರಿನಲ್ಲಿ, ನನಗರಿವಿಲ್ಲದಂತೆ ಕಳಿಸಿಬಿಟ್ಟಿದ್ದಾಳೆ! ಆ ಕಾರಣಕ್ಕಾಗಿ ಎಂದು ನನಗೆ ಹೇಳದೇನೆ ನನ್ನಿಂದ ಬರೆಸಿ ಸ್ವಾಮಿಕಾರ್ಯ, ಸ್ವಕಾರ್ಯ ಎರಡೂ ಮಾಡಿಸಿಕೊಂಡು ಬಿಟ್ಟಿದ್ದಾಳೆ ನನ್ನ ಚತುರ ಹುಡುಗಿ!

ಪ್ರತಿಲಿಪಿಗೆ ಕಳಿಸಿರುವುದು ನನಗೂ ಹೇಳಿಲ್ಲ.. ನನಗೆ ಗೊತ್ತಿಲ್ಲ ಅಂದುಕೊಂಡಿದ್ದಾಳೆ.. ಗೊತ್ತು ಎಂದು ತೋರಿಸಿಕೊಂಡು ಅವಳ ಉತ್ಸಾಹಕ್ಕೆ, ಸಂತೋಷಕ್ಕೆ ತಣ್ಣೀರೆರಚುವುದಾದರೂ ಏಕೆ .. ಅಲ್ಲವಾ ? ನೀವೂ ಹೇಳಬೇಡಿ ಸುಮ್ಮನಿದ್ದುಬಿಡಿ. ಇಂತ ಚಿಕ್ಕಪುಟ್ಟ ಸಂತಸಗಳಿಂದ ಅವಳಿಗೆ ಖುಷಿಯಾಗುವುದಾದರೆ ನಾವ್ಯಾಕೆ ಆ ಸುಖದ ಬಲೂನಿಗೆ ಸೂಜಿ ಚುಚ್ಚಬೇಕಲ್ಲವ? ಹುಶ್.. ಎಲ್ಲಾರೂ ಗಫ್ಚುಪ್ !!

02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …


02064. ಮಂಕುತಿಮ್ಮನ ಕಗ್ಗ ೬೩ ರ ಟಿಪ್ಪಣಿ , ರೀಡೂ ಕನ್ನಡದಲ್ಲಿ …

http://kannada.readoo.in/2017/06/ಬಿಡು-ಒರಟು-ನರಭಾಷೆ-ಆಲಿಸೊಳಗ

02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …


02060. ನಾಕು ತಂತಿಯ ಮೇಲಿನ ಟಿಪ್ಪಣಿ ಬರೆದುದ್ದರ ಹಿನ್ನಲೆ …
__________________________________________________


ಅಂಬಿಕಾತನಯದತ್ತರ ನಾಕುತಂತಿಗೊಂದು ಟಿಪ್ಪಣಿ ಬರಲಿ ಅಂತ ಹೆದರಿದವರ ಮೇಲೆ ಕಪ್ಪೆ ಎಸೆದದ್ದು ಗೆಳೆಯ ದೀಪಕ್. ಜಿ.ಕೆ. (Deepak GK) ಅವರ ಸಲಹೆಯನ್ನು ಪಕ್ಕಕ್ಕೆ ತಳ್ಳಿ ಸುಮ್ಮನಿದ್ದರಾಯ್ತು ಅನಿಸುವ ಹೊತ್ತಲ್ಲೆ, ಹೀಗೊಂದು ಪ್ರಯತ್ನ ಪಟ್ಟರೆ ಅರ್ಥಮಾಡಿಕೊಳ್ಳುವ ಸಾಧ್ಯತೆಯಾದರು ಇರುವುದಲ್ಲವೇ? ಅನಿಸಿತು. ಹೇಗೂ ಸಾಕಷ್ಟು ವಿವರಣೆ ಸಾಹಿತ್ಯಿಕ ಜಗದಲ್ಲಿ ಈಗಾಗಲೆ ಇರಬೇಕು, ಅದಕ್ಕೆ ಜೊತೆಯಾಗಿ ಮತ್ತೇನಾದರೂ ಹೊಳೆದರೂ ಹೊಳೆಯಬಹುದೇನೊ ಅನಿಸಿ ಒಂದು ಕೈ ನೋಡಲು ನಿರ್ಧರಿಸಿಯೆ ಬಿಟ್ಟೆ.. ಹಾಗೆ ಬರೆಯಹೊರಟ ಗಳಿಗೆಯಲ್ಲಿ ಮೊದಲು ಗಮನಕ್ಕೆ ಬಂದ ಸಂಗತಿ – ಬೇಂದ್ರೆಯವರ ಈ ಪದ್ಯದಲ್ಲಿ ನಾಲ್ಕು ಭಾಗಗಳಿವೆ ಎಂಬುದು. ಅದನ್ನು ನೋಡಿದಾಗ ತಟ್ಟನೆ ಅನಿಸಿತು – ನಾಕುತಂತಿ ಎನ್ನುವ ಹೆಸರಿಗೂ ಈ ನಾಲ್ಕು ಭಾಗಕ್ಕೂ ಏನಾದರೂ ಕೊಂಡಿಯಿರಬಹುದೇನೋ ಎಂದು.

ಹಾಗೆಂದುಕೊಂಡೆ ಮುನ್ನಡೆದಾಗ ನಾಕುತಂತಿ ಎನ್ನುವ ಹೆಸರಿನ ಮೂಲ ಏನಿರಬಹುದೆಂದು ಪ್ರಶ್ನೆ ಬಂತು. ತಂತಿ ಎಂದ ತಕ್ಷಣ ನಮಗೆ ಮನಸಿಗೆ ಬರುವುದು ತಂತಿಯ ಮೂಲಕ ನಾದ ಹೊರಡಿಸುವ ಸಂಗೀತ ವಾದ್ಯಗಳದು. ಅದರಲ್ಲೂ ವೀಣೆಯಂತಹ ಪಾರಂಪಾರಿಕ, ಸಾಂಪ್ರದಾಯಿಕ ವಾದ್ಯ ತಟ್ಟನೆ ಕಣ್ಮುಂದೆ ನಿಲ್ಲುತ್ತದೆ. ವೀಣೆಯಲ್ಲಿರುವ ಒಟ್ಟು ಏಳು ತಂತಿಗಳಲ್ಲಿ ನಾಲ್ಕು ಪ್ರಮುಖ ನಾದ ಹೊರಡಿಸುವ ತಂತಿಗಳಿರುವುದು ತುಸುವಾದರೂ ಸಂಗೀತ ಬಲ್ಲವರಿಗೆ / ಕಂಡವರಿಗೆ ಗೊತ್ತಿರುವ ಅಂಶ. (ಈ ನಾಲ್ಕು ತಂತಿಗಳನ್ನು ಕ್ರಮವಾಗಿ ಸಾರಣಿ, ಪಂಚಮ, ಮಂದ್ರ, ಅನುಮಂದ್ರ ಎನ್ನುತ್ತಾರೆ. ಮಿಕ್ಕ ಮೂರು ತಂತಿಗಳು ತಾಳದ ತಂತಿಗಳಂತೆ – ಮಧ್ಯ ಷಡ್ಜ, ಮಧ್ಯ ಪಂಚಮ, ತಾರಾ ಷಡ್ಜ ಅನ್ನುವ ಹೆಸರಿನವು). ಸಂಗೀತದ ‘ಓಂ’ ನಾಮವು ಗೊತ್ತಿರದ ನನ್ನಂತಹವನು ಇದರ ಬಗ್ಗೆ ಖಚಿತವಾಗಿ, ಪಾಂಡಿತ್ಯ ಪೂರ್ಣವಾಗಿ ಮಾತಾಡಬಲ್ಲ ಸಾಧ್ಯತೆ ಇಲ್ಲವಾದರೂ ನನಗನಿಸಿದ್ದು – ನಾಲ್ಕುತಂತಿಯ ನಾಲ್ಕು ಭಾಗಕ್ಕೂ ಈ ವಾದನದ ನಾಲ್ಕು ತಂತಿಗಳು ಹೊರಡಿಸುವ ನಿನಾದಕ್ಕೂ ಏನೊ ನಂಟಿರಬಹುದೇನೋ ಎಂದು. ಈ ನಾಲ್ಕುತಂತಿಗಳು ಹೊರಡಿಸುವ ಭಾವವನ್ನೇ ಪ್ರತಿ ಭಾಗದ ಕವನವು ಸೂಚ್ಯವಾಗಿ, ಸಾಂಕೇತಿಕವಾಗಿ ಹೊರಡಿಸುತ್ತಿದೆಯೆ ? ಎನ್ನುವುದು ಕುತೂಹಲಕರ ಅಂಶ. ಒಂದು ವೇಳೆ ಇದ್ದರೂ, ವಿವಿಧ ಧ್ವನಿಗಳನ್ನು ಹೊರಡಿಸುವ ಬೇಂದ್ರೆ ಕವನಗಳಲ್ಲಿ ಇದರ ಗ್ರಹಿಸುವಿಕೆಯೇನು ಸುಲಭದ ಮಾತಲ್ಲ. ಆ ಸಾಧ್ಯತೆಯನ್ನು ಮನಸಿನಲ್ಲಿಟ್ಟುಕೊಂಡೆ ಈ ಟಿಪ್ಪಣಿ ಬರೆಯಲು ಹೊರಟೆ..

ಕಾವ್ಯ ಪ್ರಪಂಚದಲ್ಲಿ ಒಂದು ಮಾತಿದೆ – ಬರೆಯುವಾಗ ಬರೆವವನ ಭಾವ ಏನೇ ಇದ್ದರು, ಓದುಗನ ಮನದಲ್ಲಿ ಯಥಾವತ್ ಅದೇ ಭಾವ ಉದಿಸಬೇಕೆಂದೇನೂ ಇಲ್ಲ. ಕವಿಯ ಮೂಲ ಆಶಯದೊಡನೆ ಕವಿಗೇ ಅರಿವಿರದಿದ್ದ ಅನೇಕ ಭಾವಗಳು, ಅರ್ಥಗಳು, ಆಶಯಗಳು ಹೊಳೆದುಬಿಡಬಹುದು. ಕೆಲವು ಕವಿ ಐಚ್ಚಿಕವಾಗಿ ಸೇರಿಸಿದ ಅಂಶಗಳಾಗಿದ್ದರೆ ಮಿಕ್ಕ ಹಲವು ಕವಿಯ ಕಲ್ಪನೆಯನ್ನು ಮೀರಿ ಹೇಗೆ ನುಸುಳಿಕೊಂಡ ಸೃಜನಾತ್ಮಕ ಆಯಾಮಗಳೂ ಆಗಿರಬಹುದು. ಹೀಗಾಗಿ, ಇಲ್ಲಿ ನಾನು ಬರೆದ ಟಿಪ್ಪಣಿಗಳೆಲ್ಲವೂ ಬೇಂದ್ರೆಯವರ ಮೂಲಕಲ್ಪನೆ ಅಥವಾ ಆಶಯವಾಗಿತ್ತು ಎಂದು ಹೇಳಿದರೆ ಅದು ಬರಿ ಉತ್ಪ್ರೇಕ್ಷೆಯಾದೀತು. ಅವರ ಆಶಯವೇನಿದ್ದೀತು ಎಂದು ಊಹಿಸಿಕೊಳ್ಳುತ್ತಲೇ, ಮತ್ತಾವ ಗೂಢಾರ್ಥಗಳು ಹುದುಗಿರಬಹುದೆಂಬ ಚಿಕಿತ್ಸಕ ದೃಷ್ಟಿಯಲ್ಲಿ ನೋಡಿದಾಗ ಕಂಡು ಬಂದ ಆಯಾಮಗಳನ್ನೆಲ್ಲ ಪರಿಗಣಿಸಿ ವಿವರಿಸಲೆತ್ನಿಸಿದ್ದೇನೆ – ನನಗೆ ತೋಚಿದ ಹಾಗೆ. ಶಾಸ್ತ್ರೀಯವಾಗಿ ಕನ್ನಡ ಅಧ್ಯಯನ ಮಾಡಿ ತನ್ಮೂಲಕ ಗಳಿಸಿದ ಪಾಂಡಿತ್ಯದಿಂದ ಬರೆದ ವಿದ್ವತ್ಪೂರ್ಣ ಬರಹವಿದಲ್ಲ. ಬದಲಿಗೆ ಬಾಲ್ಯದಲ್ಲಿ ಕಲಿತಿದ್ದ ಮತ್ತು ಇನ್ನು ಮಿಕ್ಕುಳಿದುಕೊಂಡಿರುವ ಸಾಮಾನ್ಯ ಸ್ತರದ ಕನ್ನಡ ಭಾಷಾಜ್ಞಾನವನ್ನೇ ಬಂಡವಾಳವಾಗಿಟ್ಟುಕೊಂಡು ಸಿದ್ಧಪಡಿಸಿದ ‘ಸಂತೆ ಹೊತ್ತಿಗೆ ಮೂರೂ ಮೊಳ ನೇಯ್ದನಂತಹ’ ಸರಕು. ಹೀಗಾಗಿ ಅಲ್ಲಲ್ಲಿ ಕಂಡುಬಂದಿರಬಹುದಾದ ವ್ಯಾಕರಣ ದೋಷ, ತಪ್ಪಾದ ಪದ ಪ್ರಯೋಗ, ಅಸಂಬದ್ಧ ವಾಕ್ಯ ಸಂಯೋಜನೆ, ತಪ್ಪಾದ ವಿವರಣೆ, ಅಸಂಗತತೆ, ಅಪರಿಪೂರ್ಣತೆ ಅಥವಾ ಗೊಂದಲ ಹುಟ್ಟಿಸುವ ವಿವರಣೆಗಳನ್ನೂ ನಾ ಮೇಲೆ ಹೇಳಿದ ಹಿನ್ನಲೆಯಲ್ಲಿ ದಯವಿಟ್ಟು ಮನ್ನಿಸಿಬಿಡಿ.

ಬರೆಯ ಹೊರಟಂತೆ ಒಂದೆರಡು ಕಂತಿನಲ್ಲಿ ಮುಗಿಸಬೇಕೆಂದು ಅಂದುಕೊಂಡಿದ್ದು ಹತ್ತಿರ ಹತ್ತಿರ ಇಪ್ಪತ್ತು ಕಂತುಗಳಾಗಿ ಹೋಯ್ತು. ಬರೆಯುವಾಗ ಏನೇನೋ ಹೊಸ ಅರ್ಥ, ಹೊಳಹುಗಳು ತೋಚುತ್ತಿದ್ದವು. ಅವು ತೋಚಿದ ಹಾಗೆಯೇ ಬರೆದುಕೊಂಡು ಹೋಗುತ್ತಿದ್ದೆ. ಇಷ್ಟು ವಿಸ್ತೃತವಾಗಿ ಬರಬಹುದೆನ್ನುವ ಕಲ್ಪನೆ ನನಗೂ ಇರಲಿಲ್ಲ. ಧೀರ್ಘವಾದರೂ ಅದರಲ್ಲಿ ಬಹುಶಃ ಅಷ್ಟಿಷ್ಟಾದರೂ ತಥ್ಯವಿರಬಹುದೆಂಬ ಭರವಸೆಯಿದೆ. ಹಾಗಿದ್ದರೂ ತೀರಾ ಧೀರ್ಘವಾಯಿತು, ಸಂಕೀರ್ಣವಾಯಿತು ಎನಿಸಿದ್ದರೆ ಮತ್ತೆ ಕ್ಷಮೆಯಿರಲಿ. ಇಷ್ಟು ಕಂತುಗಳನ್ನೆಲ್ಲ ಓದಿ, ಪ್ರತಿಕ್ರಿಯೆ ಹಾಕಿ ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ಹೃತ್ಪೂರ್ವಕ ನಮನಗಳು ಮತ್ತು ಕೃತಜ್ಞತೆಗಳು. ಇಂತಹ ಬರಹವೊಂದಕ್ಕೆ ಪ್ರೇರಣೆಯಾಗುವಂತಹ ಕವಿತೆಯನ್ನು ಸೃಜಿಸಿದ ಕವಿ ಅಂಬಿಕಾತನಯದತ್ತರಿಗೆ ಪೊಡಮಟ್ಟಿ ಶರಣು.

ಮುಖ್ಯವಾಗಿ ಇದನ್ನು ಬರೆಯಲು ಮೂಲ ಪ್ರೇರಣೆಯಾದ ಸನ್ಮಿತ್ರ ದೀಪಕ ಜಿ.ಕೆ. ಗೆ (Deepak GK) ಮತ್ತೆ ಎದೆಯಾಂತರಾಳದ ವಿನಮ್ರ ನಮನಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು. ಅವರ ಆಗ್ರಹಪೂರ್ವಕ ಕೋರಿಕೆಯಿಲ್ಲದಿದ್ದರೆ ನಾನಿದನ್ನು ಬರೆಯುವ ಕುರಿತು ಚಿಂತಿಸುತ್ತಲೂ ಇರಲಿಲ್ಲ ಎನ್ನುವುದು ಮಾತ್ರ ಅಪ್ಪಟ ಸತ್ಯ. ಅದಕ್ಕೆಂದೇ ಅವರು ಈ ವಿಷಯದಲ್ಲಿ ಸ್ತುತಾರ್ತರು ಮತ್ತು ವಂದನಾರ್ಹರು !

ನಮಸ್ಕಾರಗಳೊಂದಿಗೆ,

– ನಾಗೇಶ ಮೈಸೂರು
೦೭.೦೬.೨೦೧೭
(Picture source : internet)

02059. ನಾಕುತಂತಿಯೊಂದು ಸಾಲು – ೧೭


02059. ನಾಕುತಂತಿಯೊಂದು ಸಾಲು – ೧೭
_____________________________________

[’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ (೧೪)
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ (೧೬)]

“ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ. (೧೭)”


ಗಣನಾಯಕನ ಕೃಪೆಯಿಂದ ಅಣಿಗೊಳಿಸಿದ ತನುಮನಗಳನ್ನು, ಸೂಕ್ತ ಗುರಿಯತ್ತ ಹೂಡಿದ ಬಿಲ್ಲು ಬಾಣವಾಗಿಸಿ ಹುಟ್ಟು-ಸಾವಿನ ನಡುವಿನ ಬದುಕಿನಲಿ ಮುನ್ನಡೆವ ಹಾದಿ ತೋರಿಸಿದ್ದಾಯ್ತು – ಹದಿನಾರನೇ ಸಾಲಿನ ತನಕ. ಇನ್ನು ಆ ಗುರಿಯತ್ತ ನಡೆವ ನಡಿಗೆ ಹೇಗಿರಬೇಕೆಂಬ ಮಾರ್ಗದರ್ಶನವಿರದಿದ್ದರೆ ಹೇಗೆ ? ಏಕೆಂದರೆ ಗುರಿಯತ್ತ ನಡಿಗೆಯೆಂದಾಗ ಸರಿಯಾದ ಹಾದಿಯಲ್ಲೂ ಹೋಗಬಹುದು, ತಪ್ಪು ಹಾದಿಯಲ್ಲಿ ಅಡ್ಡಾಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಜೊತೆಗೆ ಹಾದಿಯೊಂದನ್ನು ಹುಡುಕಿ ಹೊರಟ ಮೇಲೆ ಅದರಲ್ಲಿ ಅಡೆತಡೆಗಳಿರದೆಂದು ಹೇಳಬರುವಂತಿಲ್ಲ. ಮುಖ್ಯವಾಗಿ ಅದನ್ನು ಕ್ರಮಿಸಲಿರಬೇಕಾದ ಮನಸ್ಥಿತಿ, ಆತ್ಮಸ್ಥೈರ್ಯ, ಏಕಾಗ್ರಚಿತ್ತತೆ ಮತ್ತು ಮನೋಭಾವಗಳು ಬಲು ಮುಖ್ಯ. ಅದನ್ನು ಮುಂದಿನ (ಕೊನೆಯ) ಹದಿನೇಳನೇ ಸಾಲಿನಲ್ಲಿ ಹೇಗೆ ವಿವರಿಸಲ್ಪಟ್ಟಿದೆ ಎಂದು ನೋಡೋಣ.

೧೭. ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.

ಮೊದಲೇ ವಿವರಿಸಿದಂತೆ, ಗೊತ್ತು ಗುರಿಯಿಲ್ಲದ ಅಡ್ಡಾದಿಡ್ಡಿ ಗಮ್ಯದತ್ತ ಅನಿಯಂತ್ರಿತವಾಗಿ ಉರುಳಿಕೊಂಡು ಹೋಗುವ ಬದಲು, ಯಾವುದೊ ನಿಶ್ಚಿತ, ಪೂರ್ವ ನಿರ್ಧಾರಿತ ಗುರಿಯತ್ತ ನಡೆಯುವುದು ವಿಹಿತವೆಂದು ಹಿಂದಿನ ಸಾಲಿನ ಸಾರದಲ್ಲಿ ವಿವರಿಸಲಾಗಿತ್ತು. ಇನ್ನು ಈ ಸಾಲಿನಲ್ಲಿ ‘ಅಂತಹ ಗುರಿಯತ್ತ ನಡಿಗೆ ಹೇಗಿರಬೇಕು ?’ ಎನ್ನುವುದರ ವಿಸ್ತೃತ ಸುಳಿವು, ಸೂಚನೆ ದೊರಕುತ್ತದೆ. ಅದನ್ನು ಸರಿಯಾಗಿ ಮನದಟ್ಟಾಗಿಸಲೆಂದೇ ಪ್ರಾಸಂಗಿಕವಾಗಿ ಇಲ್ಲಿ ಕುರಿಯ ಕಣ್ಣಿನ ಪ್ರಸ್ತಾವನೆಯೂ ಬರುತ್ತದೆ. ಕುರಿ ಎಂದ ತಕ್ಷಣ ನಮ್ಮ ಮನಸಿನ ಕಣ್ಣ ಮುಂದೆ ನಿಸಾರರ ‘ಕುರಿಗಳು ಸಾರ್, ಕುರಿಗಳು..’ ನೆನಪಿಗೆ ಬರದಿರುವುದುಂಟೆ? ನಿಸಾರರ ಪದ್ಯದಲ್ಲಿ ತಲೆ ತಗ್ಗಿಸಿ, ಎಡ-ಬಲ ನೋಡದೆ, ಗೊತ್ತು-ಗುರಿಯಿಲ್ಲದೆ ಯಾಂತ್ರಿಕವಾಗಿ ನಡೆಯುತ್ತಿರುವ ಕುರಿಗಳು (ಅರ್ಥಾತ್ ಅಂತಹ ವ್ಯಕ್ತಿತ್ವವಿರುವ ನಮ್ಮಂತಹವರು), ತಮ್ಮ ಮೇಲೆ ಹೇರಿದ ವ್ಯವಸ್ಥೆಯನ್ನು ಪ್ರತಿಭಟಿಸದೇ ತೆಪ್ಪಗೆ ಒಪ್ಪಿಕೊಂಡು ಹೋಗುವ ಬಗೆಗಿನ ಗೇಲಿ ಮತ್ತು ವ್ಯಂಗ್ಯದ ದ್ಯೋತಕವಾಗಿ ಬರುತ್ತದೆ. ಆದರೆ ಬೇಂದ್ರೆಯವರ ನಾಕುತಂತಿಯ ಈ ಸಾಲಿನಲ್ಲಿ ಅದೇ ಕುರಿಯ ನಡಿಗೆಯಲ್ಲಡಕವಾಗಿರುವ ಧನಾತ್ಮಕ ಆಯಾಮವನ್ನು ಎತ್ತಿ ತೋರುವ ಪ್ರತೀಕವಾಗಿ ಮೂಡಿಬರುತ್ತದೆ. ಗುರಿಯತ್ತ ನಮ್ಮ ನಡಿಗೆ ಹೇಗಿರಬೇಕೆಂಬುದನ್ನು ವಿವರಿಸುತ್ತಾ, ಎಡಬಲ ನೋಡದೆ, ಹಿಂದೆಮುಂದೆ ಯೋಚಿಸದೆ, ಒಂದೇ ಸಮನೆ ತನ್ನ ಗುರಿಯತ್ತ ಕಾಲೆಳೆದುಕೊಂಡು ನಡೆಯುವ ಕುರಿಯ ಹಾಗೆಯೇ ನಮ್ಮ ಗುರಿಯೆಡೆಗಿನ ಹೆಜ್ಜೆಯೂ ಇರಬೇಕೆಂದು ಹೇಳುತ್ತದೆ. ಹಾಗೆ ನಡೆಯುತ್ತಿರುವ ಕುರಿಯ ಕಣ್ಣಿಗೆ ತಾನು ತಲುಪಬೇಕಿರುವ ಗುರಿಯ ಹೊರತಾಗಿ ಮತ್ತಾವ ಪರಿವೆಯೂ ಇರುವುದಿಲ್ಲ. ಒಂದು, ತಾನು ಸೇರಬೇಕಾದ ಕುರಿದೊಡ್ಡಿಯನ್ನೋ ಅಥವಾ ಮೇವು ಮೇಯಲು ತಲುಪಬೇಕಾದ ಹುಲ್ಲಿನ ಬಯಲನ್ನೋ ಲಕ್ಷದಲ್ಲಿಟ್ಟುಕೊಂಡು ಕಣ್ಣುರೆಪ್ಪೆ ಮಿಟುಕಿಸುವುದನ್ನೂ ಮರೆತಂತೆ ಲಯಬದ್ಧವಾಗು ಹೆಜ್ಜೆಹಾಕಿಕೊಂಡು ನಡೆದಿರುತ್ತದೆ. ಅದರ ಕಣ್ಣ ತುಂಬಾ ತಾನು ತಲುಪಬೇಕಾದ ಗಮ್ಯದ ಲಕ್ಷ್ಯದ ಹೊರತು ಮತ್ತೇನು ಇರುವುದಿಲ್ಲ. ಗುರಿಯತ್ತ ದಿಟ್ಟತನದಿಂದ ನಡೆಯುವಾಗ ನಮ್ಮಲ್ಲೂ ಅಂತಹ ವಿಧೇಯ ಏಕಾಗ್ರ ಚಿತ್ತವಿರಬೇಕು ಎನ್ನುವುದು ಈ ಸಾಲಿನಲ್ಲಡಗಿರುವ ಒಂದು ಆಶಯ.

ಗುರಿಯ ತುಂಬಿ ಕುರಿಯ ಕಣ್ಣು…

ಅಂದಹಾಗೆ ಹಿಂದಿನ ಸಾಲಿನಲ್ಲಿ ಗುರಿಯತ್ತಣ ನಡಿಗೆಗೆ ‘ಮೈ ಮಾಯಕ ಸೈ ಸಾಯಕ’ ಮಾಡುವ ಪ್ರಸ್ತಾವನೆ ಬಂದಿತ್ತು. ಅದರರ್ಥವನ್ನು ಈ ಸಾಲಿನ ಜತೆ ಸಮೀಕರಿಸಿದರೆ ಇನ್ನೂ ಹೆಚ್ಚಿನ ಅರ್ಥ ವೈವಿಧ್ಯ ಕಾಣಿಸುತ್ತದೆ. ಮೈಯನ್ನೆ ಮಾಯಾ ಶರೀರದಂತಹ ಧನುಸ್ಸಾಗಿಸಿ, ಅದಕ್ಕೆ ‘ಸರಿಯಾದ ಗಮ್ಯವೆಂಬ’ ಬಾಣವನ್ನು ಹೂಡಿ ಹೋರಾಡುತ್ತ ಮುನ್ನಡೆಯಲು ಸಿದ್ಧವಾಗಿರಬೇಕು ಎಂದಲ್ಲಿ ಅರ್ಥೈಸಿದ್ದೆವು, ಸಾರಾಂಶದಲ್ಲಿ. ಆದರೆ ಹಾಗಿಟ್ಟ ಆ ಬಾಣದ ಗುರಿ ದಿಕ್ಕುದೆಸೆ ತಪ್ಪಿ, ವ್ಯರ್ಥವಾಗಿ ಹೋಗಿ ಎಲ್ಲೆಲ್ಲೊ ಬೀಳಬಾರದಲ್ಲ? ಅದಕ್ಕೆಂದೇ, ಅದಕ್ಕೊಂದು ‘ಕುರಿಯ ಕಣ್ಣಿನಂತಹ’ ವಿಚಲಿತಗೊಳ್ಳದ, ನಿಖರ ದಿಕ್ಕಿನತ್ತ ಮುನ್ನಡೆಸುವ ಮಾರ್ಗದರ್ಶಿ ಚಿತ್ತ ಜತೆಗಿರಬೇಕು (ಗುರಿಯತ್ತ ಹೋಗುವ ಉದ್ದೇಶದಿಂದ, ಪೂರ್ಣ ನಂಬಿಕೆಯಿಂದ ಸುಮ್ಮನೆ ಕಣ್ಣು ಮುಚ್ಚಿಕೊಂಡು ನಡೆವಂತೆ). ಆಗ ಆ ಮನುಜನ ಚಂಚಲ ಚಿತ್ತ, ವಿಚಲಿತ ಮನ ಅಲ್ಲೀ-ಇಲ್ಲೀ ಅನಾವಶ್ಯಕವಾಗಿ ಗಮನ ಹರಿಸದೆ, ಅಡೆತಡೆಗಳಿಂದ ಗೊಂದಲಕ್ಕೊಳಗಾಗದೆ ತಾನಂದುಕೊಂಡ ಗಮ್ಯದತ್ತ ಕುರಿಯ ಹಾಗೆ ‘ವಿಧೇಯತೆಯಿಂದ’ ನಡೆಯಲು ಸಾಧ್ಯವಾಗುತ್ತದೆ. ಸುತ್ತಲಿನ ದಿಕ್ಕು ತಪ್ಪಿಸುವ ಪ್ರಲೋಭನೆಗಳಿದ್ದರು ಅದರ ಕಣ್ಣಿಗೆ ಕುದುರೆಯ ಕಣ್ಣಿನಪಟ್ಟಿಯಂತದ್ದನ್ನು ಜೋಡಿಸಿದೆಯೇನೋ? ಎನ್ನುವ ಹಾಗೆ ಅಂತಾಗ ಪ್ರಚೋದನೆಗಳನ್ನು ನಿರ್ಲಕ್ಷಿಸಿಕೊಂಡೇ ಮುನ್ನಡೆಯಲು ಪ್ರೇರಣೆಯಾಗುತ್ತದೆ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ – ಹೀಗೆ ಗುರಿಯತ್ತ ಹೊರಟ ಬಾಣದ ಗುರಿ ಎಷ್ಟು ದೃಢವಾಗಿ, ಎಷ್ಟು ನಿಖರವಾಗಿರಬೇಕೆಂದರೆ, ಅಲ್ಲಿ ಬಾಣ ಬೇಧಿಸಬೇಕಾದ ಗುರಿಯಾದ ಹಕ್ಕಿಯ ಕಣ್ಣಿನ ಹೊರತು ಮಿಕ್ಕಿದ್ದೇನೂ ಕಾಣಿಸಲೇಬಾರದು! ದ್ರೋಣರೊಡನೆ ಶಸ್ತ್ರಾಭ್ಯಾಸದಲ್ಲಿ ಅರ್ಜುನನಿಗೆ ಹಕ್ಕಿಯಕಣ್ಣು ಮಾತ್ರ ಕಾಣಿಸುತ್ತಿತ್ತಲ್ಲ – ಹಾಗೆ ; ದ್ರೌಪದಿಯ ಸ್ವಯಂವರದಲ್ಲಿ ಎಣ್ಣೆಯ ಕೊಳದ ಪ್ರತಿಬಿಂಬದಲ್ಲಿ, ಅರ್ಜುನನಿಗೆ ಕಾಣಿಸುತ್ತಿದ್ದ ಚಕ್ರದೊಂದಿಗೆ ತಿರುಗುತ್ತಿದ್ದ ಮೀನಿನ ಹಾಗೆ.

….ಧಾತು ಮಾತು ಕೂಡಿ.

ಹೀಗೆ ನಮ್ಮನ್ನೇ ಬಿಲ್ಲುಬಾಣವಾಗಿಸಿಕೊಂಡು ಗುರಿಯತ್ತ ಹೂಡಿಕೊಂಡು ನಡೆದಿದ್ದು ಶುಭಾರಂಭದಂತೆ. ಹಾಗೆ ನಡೆಯುವಾಗ, ಗುರಿ ಸಾಧನೆಗಾಗಿ ಯಾವ ರೀತಿಯ ನೀತಿ, ನಿಯಮಾವಳಿಗಳ ಆಸರೆಯಿರಬೇಕು ಎನ್ನುವುದರ ಸೂಚ್ಯ ದನಿ ಮುಂದಿನ ಈ ಪದಗಳಲ್ಲಿ ವ್ಯಕ್ತವಾಗುತ್ತದೆ. ಜೀವನದ ಯಾವುದೇ ಹೆಜ್ಜೆಯಲ್ಲೂ ಗುರಿಯ ಬೆನ್ನಟ್ಟಿ ಹೊರಟಾಗ ಸರಿಯಾದ ನೈತಿಕ ಹಾದಿಯಲ್ಲಿ ಸಾಗುವುದು ಸಾಧ್ಯವಿದ್ದಂತೆ, ಸೂಕ್ತವಲ್ಲದ ತಪ್ಪಾದ ಅಡ್ಡದಾರಿಯಲ್ಲಿ ನಡೆಯುವುದೂ ಸಾಧ್ಯ – ವೇಗವಾಗಿ ಮತ್ತು ಶೀಘ್ರವಾಗಿ ಗುರಿ ತಲುಪಬಹುದೆನ್ನುವ ದುರಾಸೆಯಲ್ಲಿ. ಇದು ಮಾನವಸಹಜ ದೌರ್ಬಲ್ಯ. ಅಂದ ಹಾಗೆ ಈ ಸಾಲಿನಲ್ಲಿ ಉದಾಹರಣೆಯಾಗಿ ಬಂಡ ಕುರಿ ಕೂಡ ಒಂದೇ ವೇಗದಲ್ಲಿ, ಒಂದೇ ದಾರಿಯಲ್ಲಿ ನಡೆಯುತ್ತಾ ಹೋಗುವುದೇ ಹೊರತು, ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಓಡಿಹೋಗುವುದಿಲ್ಲ. ಒಂದು ವೇಳೆ ಅವು ಅಂತಹ ಅಡ್ಡಾದಿಡ್ಡಿ ವೇಗದ ನಡಿಗೆಗೆ ಯತ್ನಿಸಿದರೂ, ಅದು ತಾಳಮೇಳವಿಲ್ಲದೆ ಯಾವುದೋ ಬೇಡದ ಗುರಿಯತ್ತ ನಡೆದ ಮತ್ತು ಗುಂಪಿನಿಂದ ಬೇರಾದ ಒಬ್ಬಂಟಿ ಪಯಣವಾಗುತ್ತದೆ. ಅದು ಪಯಣವೇ ಹೌದಾದರೂ, ಸಮಷ್ಟಿಯಾನದ ನಿಜವಾದ ಉದ್ದೇಶ ಅದಲ್ಲ ; ನೈಜದಲ್ಲಿ ಗುರಿಯತ್ತ ಸಾಗಬೇಕಾಗಿರುವ ವಿಧಿ, ವಿಧಾನವೂ ಅದಲ್ಲ. ಅದರಲ್ಲೂ ಜೀವಸೃಷ್ಟಿಯ ಹಿನ್ನಲೆಯಲ್ಲಿ ಮತ್ತು ಪಾಮರರ ದೃಷ್ಟಿಯಿಂದ ನೋಡಿದಾಗ – ಅದರ ಉದ್ದೇಶ, ಗಹನತೆಗಳು ಅರ್ಥವಾಗಿರಲಿ, ಬಿಡಲಿ ಪ್ರತಿಯೊಬ್ಬರೂ ಕುರಿಗಳ ಹಾಗೆ ತಮ್ಮ ಪ್ರಜ್ಞಾಪೂರ್ವಕ ಅರಿವು ಮತ್ತು ಪ್ರಯತ್ನದ ಹೊರತಾಗಿಯೂ ಗುರಿಯತ್ತ ಸಾಗಲು ಸಾಧ್ಯವಾಗುವಂತಿರಬೇಕು.

ಅಂದ ಮೇಲೆ ಆ ಗುರಿಯತ್ತಣ ನಡಿಗೆ ಹೇಗಿರಬೇಕು ಅಂದರೆ – ವಾಕ್ ಮತ್ತು ಅರ್ಥ ಹೇಗೆ ಒಂದಕ್ಕೊಂದು ಬಿಗಿಯಾಗಿ ಪರಸ್ಪರದೊಡನೆ ಬಂಧಿಸಲ್ಪಟ್ಟಿರುತ್ತದೆಯೊ ಅದೇ ರೀತಿಯ ಅವಿನಾಭಾವ ಸಂಬಂಧದಲ್ಲಿ ಅವೆರಡೂ (ಗುರಿ ಮತ್ತು ನಡಿಗೆ) ಜತೆಯಾಗಿ ಸಾಗಬೇಕು. ‘ಧಾತು ಮಾತು ಕೂಡಿ’ ಎಂದಾಗ ಆಡುವ ಮಾತು ಮತ್ತು ಇಡುವ ಹೆಜ್ಜೆ ತಾಳಮೇಳದ ಹಾಗೆ ಹೊಂದಿಕೊಂಡು ಹೋಗುತ್ತಿರಬೇಕು ಎಂಬರ್ಥ ಧ್ವನಿಸುತ್ತದೆ. ಇಲ್ಲಿ ಧಾತು ಎಂದಾಗ – ‘ಯಾವುದರ ಧಾತು?’ ಎಂದು ಪ್ರಶ್ನಿಸಿಕೊಂಡರೆ – ಮಾತಿನ ಧಾತು ಎಂದು ಅರ್ಥೈಸಬೇಕಾಗುತ್ತದೆ. ‘ಮಾತಿನ ಮೂಲಧಾತು ಯಾವುದು?’ ಎಂದಾಗ ಮನಸು, ಅಂತರಂಗ, ಅಂತಃಕರಣಗಳನ್ನೆಲ್ಲ ಮಾತಿನ ಉಗಮಮೂಲವಾಗಿ ಉಲ್ಲೇಖಿಸಬಹುದು. ಅಥವಾ ಮಾತಿನ ಮೂಲಾತಿಮೂಲವಾದ ಶಬ್ದಬ್ರಹ್ಮವನ್ನು ಸಮೀಕರಿಸಿ ನಾಭಿಚಕ್ರಕ್ಕೂ ಹೋಲಿಸಬಹುದು. ಸಾಧಾರಣವಾಗಿ ಮನಸಿನಲ್ಲಿ ಮೂಡಿ ಬರುವ ಆಲೋಚನೆ (ಧಾತು) ಮತ್ತು ಅದು ಮಾತಾಗಿ ಹೊರಬರುವ ರೀತಿ ಎರಡೂ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮನಸಿನೊಳಗೊಂದು ಅಂದುಕೊಂಡರು ಹೊರಗೇನೋ ಹೇಳುವ ರೀತಿ ನಮ್ಮ ಸಾಮಾನ್ಯ ಅನುಭವ. ‘ಧಾತು ಮಾತಿನ’ ನಡುವೆ ಪ್ರಾಮಾಣಿಕತೆಯಿರದ ಇಂತಹ ಅನಾವರಣಕ್ಕೆ ‘ಒಳಗೊಂದು, ಹೊರಗೊಂದು’ ಎಂದು ಹೇಳುತ್ತೇವೆ. ಏಕೆಂದರೆ ಎರಡರ ನಡುವಿನಲ್ಲಿರುವ ಅಗೋಚರ ಶೋಧಕವೊಂದು ನಡುವೆ ತಲೆಹಾಕಿ ಆಡಬಹುದಾದ ಮತ್ತು ಆಡಬಾರದಾದ ಮಾತುಗಳಾಗಿ ವರ್ಗಿಕರಿಸಿ ನಡುವೆ ಅಂತರವನ್ನು ಸೃಷ್ಟಿಸಿಬಿಡುತ್ತದೆ. ಆಗ ಮಾತು ಮತ್ತು ಅದರ ಧಾತು ಎರಡೂ ಒಂದೇ ಆಗದೆ ಬೇರೆಬೇರೆಯಾಗಿಬಿಡುತ್ತವೆ – ತಮ್ಮಲ್ಲಿ ಅಪ್ರಾಮಾಣಿಕತೆಯನ್ನು ಅಂತರ್ಗತವಾಗಿಸಿಕೊಂಡು.

ಆದರೆ ನಿಜವಾದ ಗುರಿಯತ್ತ ಪ್ರಾಂಜಲ ಮನದಿಂದ ನಡೆವಾಗ, ಅದರ ಸಾಧನೆಗಾಗಿ ಯಾವುದೇ ಹೊಂದಾಣಿಕೆ, ರಾಜಿಗೆ ಒಳಗಾಗದೆ ಪ್ರಾಮಾಣಿಕವಾಗಿ ನಡೆಯಬೇಕು. ಒಳಗಿನ ಆಲೋಚನೆಯಿದ್ದ ಹಾಗೆಯೆ ಬಾಹ್ಯದಲ್ಲೂ ನಡೆದುಕೊಳ್ಳುವ ಶುದ್ಧ ನೈತಿಕ ಕಾಳಜಿ ತೋರಬೇಕು. ಅಂತಹ ಗಣನೆ, ಪರಿವೆಯಿರದೆ ಸುಮ್ಮನೆ ಗುರಿ ಸಾಧಿಸಿದೆನೆಂದರೆ ಅದು ಪ್ರಯೋಜನಕ್ಕೆ ಬಾರದು. ಗುರಿಯಷ್ಟೇ, ಅದನ್ನು ಸಾಧಿಸಲು ನಡೆದ ಹಾದಿಯು ಬಲುಮುಖ್ಯ – ಧಾತುಮಾತು ಕೂಡಿ ನಡೆದ ಹಾಗೆ. ಅವೆರಡು ಒಟ್ಟಾಗಿಯೆ ಇರಬೇಕೆ ಹೊರತು, ಬೇರೆಯಾಗಲ್ಲ ಎನ್ನುವ ಅದ್ಭುತ ಅದ್ವೈತದ ಭಾವವನ್ನು ಕಟ್ಟಿಕೊಡುತ್ತವೆ ಈ ಪದಗಳು. ಒಟ್ಟಾರೆ ಸಾರಾಂಶದಲ್ಲಿ ಯಾರು, ಒಳಗಿನಲ್ಲೂ – ಹೊರಗಿನಲ್ಲೂ ಒಂದೇ ರೀತಿ ಬದುಕಿ ಹುಟ್ಟುಸಾವಿನ ನಡುವಿನ ದೂರವನ್ನು ಸಾರ್ಥಕವಾಗಿ ಕ್ರಮಿಸುತ್ತಾರೋ – ಅವರು ಅಯಾಚಿತವಾಗಿಯೇ ತಮ್ಮ ಅಂತಿಮ ಗಮ್ಯ ತಲುಪಲು ಸುಲಭ ಸಾಧ್ಯ ಎನ್ನುವ ಇಂಗಿತ ಇಲ್ಲಿನ ಮತ್ತೊಂದು ಆಶಯ.

ಹೀಗೆ ಅಂತಿಮವಾಗಿ – ನಾನು ನೀನು ಆನು ತಾನುಗಳ ನಿರಂತರ ವ್ಯಾಪಾರದಲ್ಲಿ ಸೃಜಿಸಲ್ಪಟ್ಟ ನಾವು ಅದಾವುದೋ ಘನ ಉದ್ದೇಶದ ಹಿನ್ನಲೆಯಲ್ಲಿ ನಡೆದಿರುವ ಮಹಾಯಜ್ಞದಲ್ಲಿ ಪಾಲ್ಗೊಂಡಿರುವ ಪಾತ್ರಧಾರಿಗಳು ಎಂಬುದನ್ನು ಅರಿಯಬೇಕು. ಆ ಪಾತ್ರ ನಿಭಾವಣೆಯಲ್ಲಿ ನಮ್ಮ ಕರ್ತವ್ಯವನ್ನು ಮಾಡಿಕೊಂಡು ಹೋಗಬೇಕು – ಸರಿಯಾದ ಮತ್ತು ಮಹಾಯಜ್ಞಕ್ಕೆ ಪೂರಕವಾದ ಗಮ್ಯದತ್ತ ನಡಿಗೆ ಹಾಕುತ್ತ. ಆಗ ತಾವಾಗಿಯೇ ಮಿಡಿಯುವ ಆ ನಾಕುತಂತಿಗಳು ಈ ಸಂಕೀರ್ಣ ಜೀವನಸಾಗರವನ್ನು ದಾಟಿಸುವ ನಾವೆಯಾಗುತ್ತವೆ, ಹರಿಗೋಲಾಗುತ್ತವೆ. ಗೊಂದಲ ಗದ್ದಲಗಳಿಲ್ಲದ ಪ್ರಶಾಂತ ಅರಿವಿನ ಬದುಕಿಗೆ ಅಡಿಪಾಯ ಹಾಸುತ್ತವೆ. ಹೀಗಾಗಿ ನಾಕುತಂತಿಗಳೆಂಬ ಕಲ್ಪನೆ, ಸಂಕಲ್ಪವೇ ನಮ್ಮ ಬದುಕಿನ ಸಾರ್ಥಕತೆಯ ಅದ್ಭುತ, ರಮ್ಯ ಅನಾವರಣ ಎಂದು ಹೇಳಬಹುದು. ಅಂತದ್ದೊಂದು ಅದ್ಭುತ ಕವನವನ್ನು ನೀರು ಕುಡಿದಷ್ಟೇ ಸಲೀಸಾಗಿ ಬರೆದಿಟ್ಟ ಅಂಬಿಕಾತನಯದತ್ತರಿಗೊಂದು ಸುಧೀರ್ಘದಂಡ ನಮನ !

– ನಾಗೇಶ ಮೈಸೂರು

ಸೂಚನೆ: ಇದರೊಂದಿಗೆ ನಾಕುತಂತಿಯ ಎಲ್ಲಾ ಸಾಲುಗಳ ವಿವರಣೆ ಮುಗಿದಂತಾದರೂ, ಇದನ್ನು ಬರೆಯುವ ಪ್ರೇರೇಪಣೆ ಹೇಗೆ ಬಂತೆನ್ನುವುದರ ಹಿನ್ನಲೆ ವಿವರಣೆಯೊಂದಿಗೆ ಮುಂದಿನ ಕಂತಿನಲ್ಲಿ ಮುಗಿಸುತ್ತೇನೆ.

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

02058. ಮಂಕುತಿಮ್ಮನ ಕಗ್ಗ ೬೨ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ..


02058. ಮಂಕುತಿಮ್ಮನ ಕಗ್ಗ ೬೨ ರ ಟಿಪ್ಪಣಿ, ರೀಡೂ ಕನ್ನಡದಲ್ಲಿ..

http://kannada.readoo.in/2017/06/ಹೊರಗಿನದೆಲ್ಲವನ್ನೂ-ಗೆದ್ದೇ

02057. ನಾಕುತಂತಿಯೊಂದು ಸಾಲು – ೧೬


02057. ನಾಕುತಂತಿಯೊಂದು ಸಾಲು – ೧೬
____________________________________

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ (೧೪)
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ (೧೬)


(ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ)

ಹಿಂದಿನ ಹದಿನಾಲ್ಕು-ಹದಿನೈದನೇ ಸಾಲುಗಳಲ್ಲಿ ಸೃಷ್ಟಿಯ ಮೂಲಸೂತ್ರದಲ್ಲಿ (ಹುಟ್ಟುಸಾವಿನ ನಿರಂತರ ಚಕ್ರದ ಹೆಸರಿನಲ್ಲಿ) ಅದೇ ನಾಲ್ಕುತಂತಿಗಳ ಅನುರಣನೆಯಿದ್ದರೂ ಅದರ ನಿಯಂತ್ರಣ ಮಾತ್ರ ನಮ್ಮ ಕೈಲಿರುವುದಿಲ್ಲ, ಎಲ್ಲವು ದೈವದ ಚಿತ್ತದಂತೆ ಎಂದು ಅರಿತೆವು. ಆದರೆ ನಮ್ಮಲ್ಲಿ ನಿಯಂತ್ರಣವಿಲ್ಲ ಎಂದ ಮಾತ್ರಕ್ಕೆ ನಿರ್ವಹಣೆಯಲ್ಲಿ ನಮ್ಮದೇನೂ ಪಾತ್ರವಿಲ್ಲ ಎಂದರ್ಥವಲ್ಲ. ಸೃಷ್ಟಿ-ಸ್ಥಿತಿ-ಲಯವೆಂಬ ತ್ರಿಕಾರ್ಯದಲ್ಲಿ ಹುಟ್ಟುಸಾವುಗಳು ಜೀವಿಯ ಸೃಷ್ಟಿ ಮತ್ತು ಲಯವನ್ನು ಮಾತ್ರ ಪ್ರತಿನಿಧಿಸುವಂತಹದ್ದು. ಅವೆರಡರ ನಡುವಿನ ಅಂತರವನ್ನು ಈಜಿಕೊಂಡು, ಏಗಿಕೊಂಡು, ಸರಿದೂಗಿಸಿಕೊಂಡು ಕ್ರಮಿಸುವ ಹೊಣೆ ಜೀವಿಗಳದೇ. ಆ ನಡುವಿನ ‘ಸ್ಥಿತಿ’ಯ ನಿರ್ವಹಣೆಯಲ್ಲಿ ಜೀವಿಯು ತನ್ನ ಪಾತ್ರವನ್ನು ಹೇಗೆ ನಿಭಾಯಿಸಿದರೆ ಅಂತಿಮದಲ್ಲಿ ಸಾರ್ಥಕ್ಯ, ಮೋಕ್ಷಭಾವ ಸಿದ್ದಿಸುತ್ತದೆಯೆನ್ನುವುದನ್ನು ಸಾರುತ್ತವೆ ಮಿಕ್ಕೆರಡು ಸಾಲುಗಳ ಮೂಲಕ (೧೬, ೧೭). ಇಲ್ಲಿ ಮೊದಲು ಹದಿನಾರನೇ ಸಾಲನ್ನು ಗಮನಿಸೋಣ.

ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ

ಗಣನಾಥನೆಂದರೆ ಸಿದ್ಧಿ, ಬುದ್ಧಿಯ ಸಂಕೇತ. ಬದುಕಿನಲ್ಲಿ ಹೇಗೋ ಏಗುತ್ತಾ ಸಾಗಿ, ಸಂಸಾರಸಾಗರದಲ್ಲಿ ಈಜಿ ಈ ಇಹಜಗದ ಬಂಧನದಿಂದ ಪಾರಾಗಬೇಕೆಂದರೆ (ಜೀವನದುದ್ದಕ್ಕೂ) ಸಿದ್ಧಿಬುದ್ಧಿಯ ರೂಪದಲ್ಲಿ ಅವನ ಕರುಣೆಯಿರುವುದು ಅತ್ಯಗತ್ಯ. ಅವನ ಕೃಪೆಯಿದ್ದರೆ ಇಹಜಗದ ಎಲ್ಲಾ ಜಂಜಾಟಗಳನ್ನು ಎದುರಿಸಿ, ಅಡ್ಡಿಆತಂಕಗಳನ್ನೆಲ್ಲ ದಾಟಿ ಜಯಿಸಿ ಗುರಿಯತ್ತ ನಡೆಯಬಹುದು. ನಮ್ಮದು ಕೇವಲ ಭೌತಿಕ ದೇಹ. ಅದಕ್ಕೆ ಅವನ ಕೃಪೆ ಜತೆಗೂಡಿತೆಂದರೆ ಈ ಬರಿಯ ದೇಹವು ಕೂಡ ಮಾಯಾಕಸುವಿನಿಂದ ತುಂಬಿದ ಚಮತ್ಕಾರಿಕ ಶರೀರವಾಗಬಹುದು. ಬಾಳುವೆಯ ಹೊತ್ತಲ್ಲಿ ಈ ಅಂಕೆಶಂಕೆಯಿಲ್ಲದ ದೇಹವು ಯಾವ್ಯಾವ ರೀತಿಯ ಪ್ರಲೋಭನೆಗಳಿಗೆ ಓಗೊಡುತ್ತ ಏನೆಲ್ಲಾ ಮಾಡುವುದೆಂದು ಹೇಳಬಲ್ಲವರಾರು ? ಅದೇ ಗಣನಾಥನ ‘ಸಿದ್ಧಿಬುದ್ಧಿಯ ಮಾಯಕ (ಮಾಯೆ, ಮಾಯಾಜಾಲ)’ ಮೈಗೆ ಆವಾಹನೆಯಾಗಿಬಿಟ್ಟರೆ ಅಂತಹ ಪರಿಪಕ್ವ ದೇಹವನ್ನು ಹಿಡಿದು ನಿಲ್ಲಿಸಲುಂಟೆ? ಆನೆ ನಡೆದಿದ್ದೇ ಹಾದಿ ಎನ್ನುವ ಹಾಗೆ ಯಾವುದೋ ಮಾಯೆ ಹೊಕ್ಕ ಅಲೌಕಿಕ ಸ್ಥಿತಿಯಲ್ಲಿ ಗಮ್ಯದತ್ತ ನಡೆಯತೊಡಗುತ್ತದೆ ಈ ಭೌತಿಕ ಜೀವ.

ಈ ಸಂಸಾರಚಕ್ರವನ್ನು ಯಶಸ್ವಿಯಾಗಿ ನಿಭಾಯಿಸಿ ‘ಸರಿಯಾದ’ ಕರ್ಮಕಾಯಕಗಳನ್ನು ಮಾಡಿದರೆ ಮಾತ್ರ ಮುಂದಿನ ‘ಸರಿಸೂಕ್ತವಾದ’, ನಿಖರವಾದ ಗುರಿ ಸೇರಲು ಸಾಧ್ಯ. ಅದು ಮುಕ್ತಿಯೋ, ಕೈವಲ್ಯವೋ ಮತ್ತೊಂದೋ – ಅಲ್ಲಿಗೆ ತಲುಪಬೇಕೆಂದರೆ ಆ ಗುರಿಯತ್ತ ಸರಿಯಾಗಿ ಗುರಿಯಿಟ್ಟು ಮುನ್ನಡೆಯಬೇಕು. ಆ ಗುರಿ ತಲುಪುವಿಕೆ ಎಂತಿರಬೇಕೆಂದರೆ – ಸೈ (=ಸರಿಯಾದ, ಸೂಕ್ತವಾದ) ಸಾಯಕ (=ಬಾಣ), ಅರ್ಥಾತ್ ಸೂಕ್ತವಾದ ಗುರಿಯತ್ತ ಹೂಡಿದ ಸರಿಯಾದ ಬಾಣದ (= ಸೈ ಸಾಯಕ) ಹಾಗಿರಬೇಕು. ಹೀಗೆ ನಿಖರ ಗುರಿಯತ್ತ ತೊಟ್ಟ, ಗುರಿತಪ್ಪದ ಬಾಣವನ್ನು ಮಾಡಬಲ್ಲವರು (ಬುದ್ಧಿ) , ಹೂಡಬಲ್ಲವರು (ಸಿದ್ಧಿ) ಯಾರು ? ಅದಕ್ಕೆ ಬೇಕಾದ ಸಿದ್ಧಿಬುದ್ಧಿಗಳನ್ನು ದಯಪಾಲಿಸುವ ಗಣನಾಯಕ. ಅವನ ಕೃಪಾಕಟಾಕ್ಷದಿಂದ ಈ ಕೇವಲ ಭೌತಿಕ ಶರೀರವು ಯಾವುದೊ ಅಗೋಚರ ಶಕ್ತಿಪ್ರೇರಿತ ಆವೇಶ, ಉನ್ಮೇಷದ ಮಾಯೆಗೊಳಗಾದಂತೆ ವರ್ತಿಸಿ, ಸರಿ ಗುರಿಯತ್ತ ತನ್ನನ್ನೇ ಬಾಣದಂತೆ ಹೂಡಿಕೊಳಲಿ ಎನ್ನುವ ಆಶಯ ಇಲ್ಲಿನ ಇಂಗಿತವಾಗಿದೆ. ಇಲ್ಲಿ ಗುರಿಯೆನ್ನುವುದು ಕೂಡ ಬರಿ ಅಲೌಕಿಕದ್ದೆ ಇರಬೇಕೆಂದೇನಿಲ್ಲ. ಕವಿಯ ಕಾವ್ಯಸೃಷ್ಟಿಯ ಗುರಿಗು ಇದು ಅನ್ವಯವಾಗಬಹುದು. ಸೃಷ್ಟಿಕ್ರಿಯೆಗೂ ಅನ್ವಯಿಸಬಹುದು. ಲೌಕಿಕ ಜಗದ ಐಹಿಕ ಮತ್ತು ಪ್ರಾಪಂಚಿಕ ಗಮ್ಯಗಳಿಗೂ ಅನ್ವಯಿಸಬಹುದು. ಒಟ್ಟಾರೆ ಗುರಿಯತ್ತ ಗಮನ ಎಂಬುದಿಲ್ಲಿಯ ಸಾಮಾನ್ಯ ಅಪವರ್ತನ ಗಾಯನ. ಬದುಕಿಗೊಂದು ನಿಖರ ಗಮ್ಯ, ಅಂತಿಮ ಗುರಿಯಿರಬೇಕೆನ್ನುವ ಸಂದೇಶವು ಕೂಡ ಇಲ್ಲಿನ ಆಶಯವೆ. ಸರಿಯಾದ ಗುರಿಯ ಬೆನ್ನಟ್ಟುತ್ತಾ, ಒಂದರಿದ ಮತ್ತೊಂದು ಗುರಿಗೆ ಹಿಂದಿನದನ್ನೆ ಕೊಂಡಿಯಾಗಿಸಿಕೊಂಡು ಜಿಗಿಯುತ್ತ ಅಂತಿಮ ಗಮ್ಯದತ್ತ ಪಯಣ ನಡೆಸಬೇಕು. ಆ ಪಯಣಕ್ಕೆ ಈ ಮಾಯದಂತ ಮೈಯನ್ನೇ (ಲೋಕದ ಮಾಯೆಗೆ ಸೋಲುವ ಅದರ ದೌರ್ಬಲ್ಯವನ್ನು ಮೆಟ್ಟಿ) ವಾಹಕವಾಗಿಸಿಕೊಂಡು, ಅದನ್ನೇ ಪಳಗಿಸಿ ಬಾಣ ಹೂಡುವ ಬಿಲ್ಲಾಗಿಸಿಕೊಂಡು, ತಲುಪಬೇಕಾದ ಸರಿಸೂಕ್ತವಾದ ಗುರಿಯನ್ನೇ ಅದಕ್ಕೆ ಹೂಡಿದ ಬಾಣವಾಗಿಸಿಕೊಂಡು ನಡೆದಾಗ ಅದು ಹುಟ್ಟು-ಸಾವಿನ ಸೃಷ್ಟಿ-ಲಯದ ನಡುವಿನ ತನ್ನ ‘ಸ್ಥಿತಿ’ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ವೇದಿಕೆ ನಿರ್ಮಾಣ ಮಾಡಿದಂತಾಗುತ್ತದೆ. ಅದೆಲ್ಲವನ್ನು ಸೂಕ್ತವಾಗಿ ನಿರ್ವಹಿಸುವ ಸಿದ್ಧಿಬುದ್ಧಿಯ ಕೃಪೆ ತೋರಬೇಕಾದವನು ಗಣನಾಯಕ ಅರ್ಥಾತ್ ಗಣಪ.

ಅಂದಹಾಗೆ, ಇಲ್ಲಿ ಕವಿ ಗಣಪನನ್ನೆ ಯಾಕೆ ಉಲ್ಲೇಖಿಸಬೇಕಿತ್ತು ? ಸಂಪ್ರದಾಯದಂತೆ ಆದಿದೇವ ಗಣಪನಿಗೆ ಮೊದಲ ಪೂಜೆಯೆನ್ನುವ ವಿಷಯ ಸರ್ವವಿದಿತ; ತನ್ನ ಕಾವ್ಯದಲ್ಲೂ ಅದೇ ಸತ್ಸಂಪ್ರದಾಯ ಅನುಕರಿಸುವ ಉದ್ದೇಶವು ಇರಬಹುದು. ಅಥವಾ ಬಹುತೇಕ ಜನರಂತೆ ಕವಿಯೂ ಕೂಡ ಗಣನಾಯಕನನ್ನು ಬಲವಾಗಿ ನಂಬಿರಬಹುದಾದ ಕಾರಣವೂ ಇರಬಹುದು. ಆದರೆ ನನಗನಿಸುವ ಮತ್ತೊಂದು ಸೂಕ್ಷ್ಮಕಾರಣ : ಗಣನಾಥನ ಸೃಷ್ಟಿಗೆ ಕಾರಣವಾದ ವಿಭಿನ್ನ ಜನ್ಮವಿಧಾನ. ಮಿಕ್ಕೆಲ್ಲ ಸಾಧಾರಣ ಸೃಷ್ಟಿಕ್ರಿಯೆಯಲ್ಲಿ ಪ್ರಕೃತಿ-ಪುರುಷ ಸಂಯೋಜನೆಯನುಸಾರ ನಾಕುತಂತಿಗಳ ತಾಳಮೇಳವಿದ್ದರೆ, ಗಣಪನ ಸೃಷ್ಟಿ – ಪುರುಷದ ಭಾಗವಹಿಸುವಿಕೆಯಿಲ್ಲದೆ ಬರಿ ಪ್ರಕೃತಿಯ ಇಚ್ಚಾ-ಜ್ಞಾನ-ಕ್ರಿಯಾಶಕ್ತಿಗಳ ಅದ್ಭುತ ಬಳಕೆಯಿಂದ ಸಮೀಕರಿಸಲ್ಪಟ್ಟದ್ದು. ಒಂದು ರೀತಿ ಯಾವುದೇ ಮೂಲಸರಕಿನ ಅಗತ್ಯವಿಲ್ಲದೆ, ಇದ್ದುದ್ದನ್ನೇ ಇಂಧನ-ಮೂಲವಸ್ತುವಾಗಿ ಬಳಸಿಕೊಂಡು ರೂಪುಗೊಂಡ ಸ್ವಯಂಭು ಪ್ರವೃತ್ತಿಯ ಸೃಷ್ಟಿಫಲ ಅವನದು. ಜತೆಗೆ ಪ್ರಕೃತಿಯ ಶಕ್ತಿಯಿಂದ ಮಾತ್ರವೇ ಸೃಜಿಸಲ್ಪಟ್ಟದ್ದರಿಂದ ಪುರುಷದ ಜಡಶಕ್ತಿಯ ಸಾಂಗತ್ಯವೆ ಇಲ್ಲವಾಗಿ, ಕೇವಲ ಪ್ರಕೃತಿಯ ಕ್ರಿಯಾಶೀಲ ಚಲನಶಕ್ತಿ ಮಾತ್ರ ಅಂತರ್ಗತವಾಗಿಹೋಗಿದೆ. ಆ ಕಾರಣದಿಂದ ಕಾರ್ಯಸಿದ್ಧಿಯ ವೇಗವು ಹೆಚ್ಚು, ನಿರಂತರ ಚಲನೆಯಿಂದಾಗುವ ಬುದ್ಧಿತೀಕ್ಷ್ಣತೆಯೂ ಹೆಚ್ಚು (ಸಿದ್ಧಿಬುದ್ಧಿಯ ಮೂಲ). ಇಂತಹ ವೈಶಿಷ್ಠ್ಯವಿರುವ, ಸೃಷ್ಟಿಯ ಸಾಮಾನ್ಯ ಪ್ರಕ್ರಿಯೆಗೆ ಸಡ್ಡುಹೊಡೆದು ಮೂರ್ತೀಭವಿಸಿರುವ ಗಣನಾಥ ತನ್ನೀ ವಿಶೇಷ ಗುಣ ಸ್ವರೂಪಗಳಿಂದಲೆ ಇಲ್ಲಿ ಕಾಣಿಸಿಕೊಂಡಿದ್ದಾನೆ – ಆದಿಪೂಜೆಯ ಇಂಗಿತದ ಹೊರತಾಗಿಯು ಎಂದು ನನ್ನ ಭಾವನೆ. ಅಸಾಮಾನ್ಯ ಸೃಷ್ಟಿಯ ದೃಷ್ಟಾಂತವಾದ ಗಣನಾಥ ಸಾಮಾನ್ಯ ಸೃಷ್ಟಿಯ ದೃಷ್ಟಿಯಲ್ಲಿ ವಿಶೇಷವೆನಿಸುವ ದೈವ – ದೈವಿಕ ದೃಷ್ಟಿಯಲ್ಲಿ ಮಾತ್ರವಲ್ಲದೆ ವೈಜ್ಞಾನಿಕ ಸಾಧ್ಯತೆಯ ದೃಷ್ಟಿಯಲ್ಲೂ ಪ್ರಸ್ತುತವೆನಿಸುವ ಕಲ್ಪನೆ (ಕ್ಲೋನಿಂಗ್ ತರಹದ ಇತ್ತೀಚಿನ ವೈಜ್ಞಾನಿಕ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ). ಹಾಗೆಂದೇ ಇಲ್ಲಿಯೂ ಗಣನಾಯಕ ವಿಶಿಷ್ಠವೆನಿಸುತ್ತಾನೆ.

ಈ ದೈವಬಲದ ಜತೆಗೆ ಹೇಗೆ ಮನೋಬಲವನ್ನು ಸೇರಿಸಿಕೊಂಡು ಮುನ್ನುಗ್ಗಬೇಕೆನ್ನುವುದು ಮುಂದಿನ ಹಾಗು ಕೊನೆಯ ಸಾಲಿನ ಸಾರ (ಹದಿನೇಳನೆಯದು – ೧೭. ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ.)

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture source: https://www.pinterest.com/pin/352266002077297299/)

02056. ನಾಕುತಂತಿಯೊಂದು ಸಾಲು – ೧೫


02056. ನಾಕುತಂತಿಯೊಂದು ಸಾಲು – ೧೫
___________________________________


(’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ – ೧೪);
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ! (೧೫)
______________________________________________________________

ಹದಿನೈದನೇ ಸಾಲನ್ನು ಅರ್ಥೈಸುವ ಹೊತ್ತಲ್ಲಿ ಹದಿನಾಲ್ಕರ ಸಾರವನ್ನು ಹಿನ್ನೆಲೆಯಾಗಿಟ್ಟುಕೊಂಡು ಅರ್ಥೈಸಿದರೆ ಎರಡರ ನಡುವೆ ಇರುವ ಸಂಬಂಧ ಸ್ಪಷ್ಟವಾಗುತ್ತದೆ. ಹದಿನಾಲ್ಕರ ಸಾರದಲ್ಲಿ ಮುಖ್ಯವಾಗಿ ಹೇಳಿದ್ದು – ಇಡೀ ಜೀವಜಗವನ್ನು ಆಳುತ್ತಿರುವುದು ನಾನು-ನೀನು-ಆನು-ತಾನೆಂಬ ನಾಲ್ಕು ಮೂಲತಂತಿಗಳು ಮಾತ್ರ ಎಂದು. ಆ ನಾಲ್ಕು ತಂತಿಗಳ ಮಿಡಿತದಲ್ಲೇ ಜೀವಸೃಷ್ಟಿಯಾಗುವುದು. ಆ ಸೃಷ್ಟಿ ಕೂಡ ಹೇಗೆ ದೈವ ನಿಯಾಮಕದ ಚೌಕಟ್ಟಿನಲ್ಲಿ ಬಂಧವಾಗಿದೆ ಎಂದು ಸಾರುವ ಹದಿನೈದನೇ ಸಾಲು – ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ’. ಅದೇನೆಂಬುದನ್ನು ವಿವರವಾಗಿ ಮುಂದಿನ ಸಾಲುಗಳಲ್ಲಿ ನೋಡೋಣ.

ಸೃಷ್ಟಿಕ್ರಿಯೆಯನ್ನು ದೈವತ್ವದ ಮಟ್ಟಕ್ಕೇರಿಸಿ, ಮನುಕುಲವನ್ನು ಅದರೊಟ್ಟಿಗೆ ಸಮೀಕರಿಸಿ ಅದಕ್ಕೊಂದು ಗಮ್ಯೋದ್ದೇಶವನ್ನು ಆರೋಪಿಸಿ ಆದ ಮೇಲೆ, ಆ ಕುರಿತಾದ ಹೆಮ್ಮೆ-ಗರ್ವ, ಮಾನವನಲ್ಲಿ ಅಹಂಕಾರದ ರೂಪ ತಾಳಬಾರದಲ್ಲ? ಯಾವುದೇ ಸಾಧನೆಯ ಮೇರುಶಿಖರಕ್ಕೇರಿದರೂ, ಅಂತಿಮ ಆಭರಣವಾಗಿ ವಿನಮ್ರತೆ, ವಿನಯವಿದ್ದರೆ ಆ ಸಾಧನೆಗೆ ಭೂಷಣ. ದೈವದುತ್ಕ್ರುಷ್ಟ ಸೃಷ್ಟಿ ನಾವೆಂಬ ಅರಿವು, ಅಹಮಿಕೆಯ ಕಾರಣದಿಂದ ಪೊಗರಿನ ಸೊಕ್ಕಾಗಿ ಸ್ವನಾಶಕ್ಕೆ ಕಾರಣವಾಗದಿರಲೆಂದೊ ಏನೋ – ಬದುಕಿನ ತುಂಬಾ ಏರಿಳಿತಗಳ, ಕಷ್ಟಸುಖಗಳ, ಸುಖದುಃಖಗಳ ಸಮ್ಮಿಶ್ರಿತ ತಿಕ್ಕಾಟ ನಡೆದೇ ಇರುತ್ತದೆ. ಅಂತೆಯೇ ನಿಯಮಿತ ಪರಿಧಿಯ ಗಡಿ ಮೀರದ ಹಾಗೆ ಬದುಕು ನಡೆಸಲು ಅನುವಾಗುವಂತೆ ಅನೇಕಾನೇಕ ನೀತಿ-ನಿಯಮ-ಶಾಸ್ತ್ರ-ಪದ್ಧತಿ-ನಂಬಿಕೆ ಸಂಪ್ರದಾಯಗಳ ಸಾಂಗತ್ಯವೂ ಇರುತ್ತದೆ. ಈ ಚೌಕಟ್ಟು ನಾವು ಎಲ್ಲೆ ಮೀರದೆ, ಗಡಿಯೊಳಗಿನ ಲಕ್ಷ್ಮಣರೇಖೆಯನ್ನು ದಾಟದೆ ನೆಮ್ಮದಿಯಿಂದಿರಲು ಅನುವು ಮಾಡಿಕೊಡುತ್ತದೆ – ಆ ಮಿತಿಯಲ್ಲೆ ನೈಜ ಗಮ್ಯದತ್ತ ಹೆಜ್ಜೆ ಹಾಕಿಸುತ್ತ. ಆ ಗಮ್ಯದ ಸ್ಪಷ್ಟ ಅರಿವಿರದಿದ್ದರು ಕಣ್ಣಿಗೆ ಬಟ್ಟೆ ಕಟ್ಟಿ ತಡವುತ್ತ ನಡೆದ ಹಾಗೆ ನಡೆಯಿಸಿಕೊಂಡು ಹೋಗುತ್ತಾ , ಪ್ರತಿಹೆಜ್ಜೆಯಲ್ಲೂ ಇಷ್ಟಿಷ್ಟೇ ಇಷ್ಟಿಷ್ಟೇ ಬಿಚ್ಚಿಕೊಳ್ಳುತ್ತಾ ಮುಂದೆ ಮುಂದೆ ಸಾಗಿಸುತ್ತದೆ – ಜೀವನದ ಅಂತಿಮದವರೆಗೂ ಪೂರ್ಣಚಿತ್ರದ ಕುತೂಹಲವನ್ನು ಬಿಟ್ಟುಕೊಡದೆ.

ನಾಕುತಂತಿಯ ಕಡೆಯ ಭಾಗದ ಈ ಸಾಲುಗಳು ಸಾರುವುದು ಬಹುಶಃ ಹುಟ್ಟುಸಾವಿನ ನಿರಂತರತೆಯ ಈ ಎಚ್ಚರಿಕೆಯ ಗಂಟೆಯನ್ನೆ. ದಂತಿ ಎಂದರೆ ಗಣನಾಥ. ಯಾವುದೇ ಕಾರ್ಯಕ್ಕೆ ಮೊದಲು ಅವನನ್ನು ಪೂಜಿಸಿ ತಾನೆ ನಂತರದ ಕಾರ್ಯ ? ಈ ನಡುವೆ ಯಾವುದೇ ವಿಘ್ನವೂ ಅಡೆತಡೆ ಒಡ್ಡದಿರಲೆಂದು, ಮೊದಲು ಅವನನ್ನು ಪೂಜಿಸಿ ಓಲೈಸಿ ನಂತರ ಮುಂದೆ ಹೆಜ್ಜೆ ಇಡುವುದು ನಮ್ಮ ಪರಂಪರಾನುಗತ ಸಂಪ್ರದಾಯ. ನಡುವೆ ಏನೇ ತೊಡಕು ಎದುರಾದರು ಅವನನ್ನು ಮತ್ತೆ ಪೂಜಿಸಿ, ಓಲೈಸಿ ಆರಾಧಿಸುವುದು ಕೂಡ ಸಾಮಾನ್ಯ ವಿಷಯ. ಹೀಗೆ ಎಲ್ಲದಕು ಮೊದಲು ‘ಓಂ ಓಂ ದಂತಿ’ ಎಂದು ಆ ಗಣನಾಥನ ನಾಮಸ್ಮರಣೆ ಮಾಡುತ್ತೇವೆ. ಆದರೆ ಈ ಸಾಲುಗಳಲ್ಲಿ ಆ ಸಾಮಾನ್ಯ ಸ್ಮರಣೆಯನ್ನು ಮೀರಿದ ಅರ್ಥವಂತಿಕೆಯಿದೆ. ‘ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ!’ ಎಂದಾಗ ಸೃಷ್ಟಿಚಕ್ರದ ಅವಿಭಾಜ್ಯ ಅಂಗವಾದ ಹುಟ್ಟುಸಾವಿನ ನೇರ ಪ್ರಸ್ತಾವನೆ ಕಾಣಿಸಿಕೊಳ್ಳುತ್ತದೆ. ಸೊಲ್ಲಿಸಿದರು – ಎಂದರೆ ‘ಮಾತು’ ಅರ್ಥಾತ್ ‘ಶಬ್ದ’ ಹೊರಡಿಸಿದರೂ ಎಂದರ್ಥ. ಜನನವಾದಾಗ ಬಾಹ್ಯಜಗದಲ್ಲಿ ಶಿಶು ಉಸಿರಾಡತೊಡಗಿದಂತೆ ಮೊದಲು ಕೇಳುವುದು ಅದರ ಅಳುವಿನ ಶಬ್ದ. ಆ ಅಳುವ ಸೊಲ್ಲಿನಲ್ಲಿ ತುಳುಕಾಡುವುದು ಸಂಭ್ರಮದ ಛಾಯೆ. ಆಗಲು ಜನನದ ಶುಭಕಾರ್ಯಕ್ಕೆ ದೈವಕ್ಕೆ ಪ್ರಾರ್ಥನೆ ಸಲ್ಲಿಸುತ್ತೇವೆ. ನಿಲ್ಲಿಸಿದರು – ಎಂದಾಗ ‘ಉಸಿರು-ಮಾತು’ ನಿಂತಾಗ ಎಂಬರ್ಥ; ಅಂದರೆ ಭೌತಿಕ ಜೀವಸೃಷ್ಟಿಯ ಕೊನೆಯಾಗುವ, ಜೀವನ ವ್ಯಾಪಾರ ಮುಗಿಸುವ – ಸಾವಿನ ಹಂತ. ಸಾವಿನಲ್ಲೂ ದೈವದ ಹಸ್ತವನ್ನು ಕಾಣುತ್ತ, ಮರಣೋತ್ತರ ಸದ್ಗತಿಗಾಗಿ ಅದೇ ದೈವಕ್ಕೆ ಪ್ರಾರ್ಥನೆ ಸಲ್ಲಿಸುವುದು ಕೂಡ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವ ಪ್ರಕ್ರಿಯೆ. ಹೀಗೆ ತಾನೇ ಸೃಜಿಸಿದ ಜೀವಿಯನ್ನು ‘ಸೊಲ್ಲಿಸಿದರು , ನಿಲ್ಲಿಸಿದರು’ – ಎರಡರಲ್ಲೂ ಅವನಾಟವೆ ಕಾಣುತ್ತದೆಯೆ ಹೊರತು ಮಾನವನ ಹೆಚ್ಚುಗಾರಿಕೆಯಲ್ಲ. ಇಲ್ಲಿ ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲವು ದೈವೇಚ್ಛೆ ಎನ್ನುವ ಭಾವದಲ್ಲಿ ಬರುವ ಶರಣಾಗತ ಮನೋಭಾವವು ಪ್ರಧಾನವಾಗುತ್ತದೆ. ಎಲ್ಲದ್ದಕ್ಕೂ ಅವನನ್ನೆ ನಂಬಿ ಪ್ರಾರ್ಥಿಸಬೇಕು, ಓಲೈಸಬೇಕು ಎನ್ನುವುದು ಇಲ್ಲಿನ ಮತ್ತೊಂದು ಅಂತರ್ಗತ ಭಾವ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

Picture source: https://alchetron.com/D-R-Bendre-1304749-W

02054. ನಾಕುತಂತಿಯೊಂದು ಸಾಲು – ೧೪


02054. ನಾಕುತಂತಿಯೊಂದು ಸಾಲು – ೧೪
________________________________


ನಾಕುತಂತಿ ಭಾಗ-೪:
______________________

‘ನಾನು’ವಿನಲ್ಲಿ ಗಮನ ಕೇಂದ್ರೀಕೃತವಾಗಿದ್ದ ಮೊದಲ ಭಾಗ, ಎರಡನೆಯ ಭಾಗದಲ್ಲಿ ‘ನೀನು’ವಿನ ಜತೆಗೂಡಿ ಎರಡು ಒಂದಾಗುವ ಅದ್ವೈತವನ್ನು ಬಿಂಬಿಸಿದ್ದನ್ನು ನೋಡಿದೆವು. ಮೂರನೆಯ ಭಾಗದಲ್ಲಿ ‘ನಾನು-ನೀನು’ಗಳ ಫಲಿತ ಮತ್ತೊಂದನ್ನು ಸೃಜಿಸಿ ಮೂರು ತಂತಿಗಳ ಸಂಯೋಜಿತ ಮಿಡಿತವಾದದ್ದನ್ನು ಗ್ರಹಿಸಿದೆವು. ಇನ್ನು ಕೊನೆಯ ನಾಲ್ಕನೇ ಭಾಗ – ಮೂರರ ಜೊತೆಗೆ ಅದಮ್ಯ ಮೂಲಾಧಾರ ಚೇತನದ ಅಂಶವೂ ಜೊತೆಗೂಡಿ, ನಾಲ್ಕುತಂತಿಗಳ ಸಮಷ್ಟಿ, ಸಮಗ್ರತೆ, ಸಂಪೂರ್ಣತೆಯ ಸಂಕೇತವಾಗುವುದನ್ನು ಕಾಣುತ್ತೇವೆ. ಬಾಲ್ಯ, ಯೌವ್ವನ, ಪ್ರೌಢತ್ವಗಳ ಹಂತಗಳಲ್ಲಿ ಬೆಳೆಯುತ್ತ ಸಾಗುವ ನಮ್ಮ ಬದುಕು ವೃದ್ಧ್ಯಾಪ್ಯದ ನಾಲ್ಕನೇ ಹಂತ ತಲುಪುತ್ತಿದ್ದಂತೆ ಮಾಗಿದ ವ್ಯಕ್ತಿತ್ವ, ಆಧ್ಯಾತ್ಮಿಕ ಓಲೈಕೆ, ದೈವ ಮತ್ತು ಕರ್ಮದ ಲೆಕ್ಕಾಚಾರಕ್ಕೊಪ್ಪಿಸಿಕೊಳ್ಳುವ ಬಗೆ ನಮ್ಮಲ್ಲಿ ಸಹಜವಾಗಿ ಗೋಚರವಾಗುವ ಅಂಶ. ಎಲ್ಲಾ ವಿಧಿ ನಿಯಮಿತ, ದೈವನಿಯಾಮಕ ಎನ್ನುವ ನಂಬಿಕೆ ಬಲವಾಗಿ, ಎಲ್ಲವನ್ನು ಆ ನಂಬಿಕೆಯ ಚೌಕಟ್ಟಿಗೊಪ್ಪಿಸಿ ಅಲ್ಲಿಯೇ ಉತ್ತರಗಳಿಗ್ಹುಡುಕಾಟ ನಡೆಸುವುದು, ಸತ್ಯಾನ್ವೇಷಣೆಗೆ ಹವಣಿಸುವುದು ಸಹಜವಾಗಿ ಕಾಣಿಸಿಕೊಳ್ಳುವ ಹಂತವಿದು. ಆ ಮೂಲಸಾರವೇ ನಾಕುತಂತಿಯ ಕೊನೆಯ ಭಾಗದ ಸಾಲುಗಳಲ್ಲಿಯೂ ಹುದುಗಿಕೊಂಡಿರುವುದನ್ನು ಕಾಣಬಹುದು. ಎಲ್ಲವೂ ಅದೇ ನಾಕುತಂತಿಗಳ ಪುನರುಚ್ಚಾರ ಮತ್ತು ಅದೇ ಅನುರಣದ ಪುನರುದ್ಗಾರ ಎನ್ನುವ ಸಂದೇಶವೂ ಇಲ್ಲಿ ಕಾಣಿಸಿಕೊಳ್ಳುತ್ತದೆ.

ನಾಕುತಂತಿಯೊಂದು ಸಾಲು – ೧೪
__________________________________

’ನಾನು’ ’ನೀನು’ ’ಆನು’ ’ತಾನು’ ನಾಕೆ ನಾಕು ತಂತಿ,

ನಾವಿರುವ ಈ ಜಗದಲ್ಲಿ ಅಸಂಖ್ಯಾತ ಜೀವರಾಶಿಯನ್ನು ಕಾಣುತ್ತೇವೆ. ಭೂಮಂಡಲದ ಮೇಲಿನ ಮಾನವ ಜನಸಂಖ್ಯೆಯನ್ನು ಮಾತ್ರವೇ ಪರಿಗಣಿಸಿದರು ಶತಕೋಟಿಗಳ ಲೆಕ್ಕದಲ್ಲಿ ಗಣಿಸುತ್ತೇವೆ. ಸೃಷ್ಟಿಜಗದ ಈ ವಿಸ್ತರಿಕೆ, ಎಣಿಕೆ ಇನ್ನು ಮುಂದುವರೆಯುತ್ತಲೇ ಇದೆ – ಹೊಸ ಪೀಳಿಗೆ, ಸಂತಾನಗಳ ಸೇರ್ಪಡೆ ಆಗುತ್ತಲೆ ಇದೆ. ಅಂತೆಯೇ ಈ ಪ್ರತಿಯೊಬ್ಬರ, ಪ್ರತಿಯೊಂದರ ರೂಪ-ಸ್ವರೂಪ-ಗುಣಾವಗುಣಗಳ ಗಣನೆಗಿಳಿದರೆ ಬಿಲಿಯಾಂತರ ಜನರ ಟ್ರಿಲಿಯಾಂತರ ಸ್ವರೂಪಗಳ ಅಗಾಧ ಸಾಧ್ಯತೆಯ ಕಲ್ಪನೆ ಕಣ್ಮುಂದೆ ನಿಲ್ಲುತ್ತದೆ. ಪ್ರತಿವ್ಯಕ್ತಿಯು, ಪ್ರತಿಜೀವಿಯು ವಿಭಿನ್ನವಾಗಿ ಕಾಣುತ್ತ, ವೈವಿಧ್ಯಮಯವಾಗಿ ತೋರಿಕೊಳ್ಳುತ್ತ ಅನಾವರಣಗೊಳ್ಳುವ ಪರಿಗೆ – ಇಡೀ ಜಗತ್ತೇ ಒಂದು ವಿಪರೀತ ಸಂಯೋಜನೆಗಳ, ಅತಿ ಸಂಕೀರ್ಣದ ಜಟಿಲ ಸಮೀಕರಣವಿರಬಹುದೇನೊ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತದೆ. ಆ ಅನುಮಾನದಿಂದಲೇ ‘ಇವೆಲ್ಲದರ ಮೂಲದಲ್ಲೂ ಸುಲಭದಲ್ಲಿ ಅರ್ಥವಾಗದ, ಜಟಿಲವಾದ ಸೂತ್ರವಿರಬಹುದೇನೋ’ ಎಂಬ ಸಂಶಯ ಹುಟ್ಟಿಸುತ್ತದೆ. ಅದೆಲ್ಲಾ ಅನುಮಾನಕ್ಕೆ ಉತ್ತರವೆನ್ನುವಂತೆ ಕಾಣಿಸಿಕೊಳ್ಳುತ್ತದೆ ಈ ಸಾಲು.

ಹಿಂದಿನ ಸಾಲಲ್ಲಿ ನಾಕುತಂತಿಯ ಮೊಟ್ಟಮೊದಲ ಮಿಡಿತದ ಫಲವಾಗಿ ಮೊಟ್ಟಮೊದಲ ಕಂದನ ಜನ್ಮವಾಯ್ತು ಎಂದು ತರ್ಕಿಸಿದ್ದಾಯ್ತು. ತದನಂತರ ಮಿಕ್ಕಿದ್ದೆಲ್ಲ ಸೃಷ್ಟಿಯ ಮುಂದುವರಿಕೆ ಅಷ್ಟು ಸರಳವಾಗಿಲ್ಲ ಅಂದುಕೊಂಡಿದ್ದರೆ ಅದು ಕೇವಲ ತಪ್ಪುಗ್ರಹಿಕೆ; ಯಾಕೆಂದರೆ, ಆದಿಸೃಷ್ಟಿಯಾದ ಪುರಾತನ ಕಾಲದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವುದು ಹಾಗು ಸೃಷ್ಟಿಚಕ್ರವನ್ನು ನಿಭಾಯಿಸಿಕೊಂಡು ಬಂದಿರುವುದು ಕೇವಲ ಆ ನಾಲ್ಕುತಂತಿಗಳ ಸಮ್ಮೇಳನ ಮಾತ್ರವೆ. ಮೊದಲ ಅಚ್ಚಿನಲ್ಲಿ ಎರಕ ಹೊಯ್ದು ಸೃಜಿಸಿದ ಕಂದ(ಗಳು) ಸಂಸಾರಚಕ್ರದ ಬಾಲ್ಯ-ಯೌವನ-ಫ್ರೌಢಾದಿ ಹಂತಗಳನ್ನು ದಾಟುತ್ತಲೆ ಅದೇ ಮೂಲಅಚ್ಚಿನ-ಮೂಲಮಾದರಿಯ ಮೂಸೆಯಾಗುತ್ತ, ಹೊಸ ಎರಕಹೊಯ್ದು ನವಸೃಷ್ಟಿಗೆ ಕಾರಣವಾಗುತ್ತಾನೆ. ಆ ಪ್ರಕ್ರಿಯೆಯಲ್ಲಿ ಸಕ್ರಿಯವಾಗುವುದೂ ಅದೇ ನಾಕುತಂತಿಗಳು ಮಾತ್ರವೆ. ಹೀಗೆ ಎಷ್ಟೇ ಬಾರಿ ಗುಣಿತವಾಗಿ, ಎಷ್ಟೇ ಸಲ ಪುನರಾವರ್ತಿಸಿದರೂ ಅದೇ ‘ನಾನು, ನೀನು, ಆನು, ತಾನು’ ಗಳೆಂಬ ನಾಕುತಂತಿಗಳ ಪುನರುಚ್ಚಾರ ಮಾತ್ರವೆ ಮರುಕಳಿಸಿಕೊಂಡು ಹೋಗುತ್ತವೆ. ಆ ಮರುಕಳಿಕೆಯಲ್ಲಿ ಜಟಿಲತೆ ಬರುವುದು ಸೃಷ್ಟಿಯ ನಂತರದ ಹೊಂದಾಣಿಕೆ, ಅನಾವರಣದ ಸ್ವರೂಪದಲ್ಲಿ. ಫಲಿತಗಳೆಲ್ಲದರ ಸಂಯೋಜಿತ ಒಟ್ಟಾರೆ ರೂಪ ಮೂಲದ ಸರಳತೆಯನ್ನು ಮರೆಮಾಚಿಬಿಡುತ್ತದೆ. ಹೀಗಾಗಿ ಅಲ್ಲಿ ಅದೇ ಹಳೆಯದರ, ಹಳೆ ಮೂಲಸೂತ್ರದ ಮೂಲಕ ಸೃಜಿಸಿದ ಹೊಸಸೃಷ್ಟಿ(ಮರುಕಳಿಕೆ)ಯಿದೆಯೆ ಹೊರತು ಹೊಚ್ಚಹೊಸತಿನ ಅನ್ವೇಷಣೆ, ಅವಿಷ್ಕಾರವಿಲ್ಲ.

ಎಷ್ಟೇ ಶಾಸ್ತ್ರಗ್ರಂಥ-ಜ್ಞಾನ-ವಿಜ್ಞಾನ-ವಾದ-ವಿವಾದ-ಜಿಜ್ಞಾಸೆಗಳ ಬುಡ ಸೋಸಿ ಶೋಧಿಸಿದರು, ಕೊನೆಗವೆಲ್ಲವು ಅಂತಿಮವಾಗಿ ಇದೇ ತೀರ್ಮಾನಕ್ಕೆ ತಲುಪುತ್ತವೆ. ಯಾಕೆಂದರೆ ಇದು ಜೀವಸೃಷ್ಟಿಯ ಮೂಲಸೂತ್ರದ ಕೀಲಿ. ಭೌತಶಾಸ್ತ್ರದಲ್ಲಿ ನಾವರಿತಂತೆ ಪ್ರತಿವಸ್ತುವು ಅದರದೇ ಆದ ಅಣುಪರಮಾಣು ಕಣಗಳಿಂದ ಮಾಡಲ್ಪಟ್ಟಿವೆ. ಹಾಗೆಯೆ ಮಾನವ ಜೀವಸೃಷ್ಟಿಯ ವಿಷಯದಲ್ಲಿ ನಾಕುತಂತಿಯ ಪ್ರತಿ ತಂತುವು ಒಂದೊಂದು ವಿಭಿನ್ನ ಪರಮಾಣುವಿದ್ದ ಹಾಗೆ. ಅದರ ಅರ್ಥಭರಿತ ಸಂಯೋಜನೆಯ ಪ್ರಕ್ರಿಯೆ ಒಂದು ಗುರುತರ ಮೂಲೋದ್ದೇಶಪೂರಿತ ಅಣುವಿದ್ದ ಹಾಗೆ. ಇಡೀ ಜಗತ್ತು ಈ ಅಣುಗಳೆಂಬ ಇಟ್ಟಿಗೆಯಿಂದ ಕಟ್ಟಲ್ಪಟ್ಟ ಭವ್ಯ, ವಿಶಾಲಸೌಧವಿದ್ದ ಹಾಗೆ. ಪರಮಾಣುವಿನ ರೂಪದಲ್ಲಿ ಹರವಿಕೊಂಡಿರುವ ‘ನಾನು, ನೀನು, ಆನು, ತಾನು’ ಎಂಬ ನಾಕುತಂತುಗಳು ಏನೆಲ್ಲಾ ಸರ್ಕಸ್ಸು ಮಾಡುತ್ತಾ ಯಾವುದೋ ಒಂದು ರೀತಿಯಲ್ಲಿ ಒಗ್ಗೂಡಿ ಪರಮಾಣುವಿನ ಸ್ವರೂಪದಿಂದ ಸಂಯೋಜಿತ ಅಣುರೂಪಿಯಾಗಿ ಬದಲಾಗುತ್ತ ಈ ಚಕ್ರವನ್ನು ನಿರಂತರವಾಗಿಸಿದೆಯಷ್ಟೆ. ಅದಕ್ಕೆ ಪೂರಕವಾಗಿ (ಅಥವಾ ವಿರುದ್ಧವಾಗಿ) ಏನೆಲ್ಲಾ ನೈತಿಕ-ಸಾಮಾಜಿಕ-ಭಾವನಾತ್ಮಕ-ವೈಜ್ಞಾನಿಕ-ಪರಿಸರಾತ್ಮಕ ಆವರಣಗಳು, ಅಂಶಗಳ ಹೊದಿಕೆಯಾದರೂ ಕೂಡ ಮೂಲಸತ್ವ-ಮೂಲತತ್ವಗಳು ಬದಲಾಗುವುದಿಲ್ಲ.

ಸಾರಾಂಶದಲ್ಲಿ ಹೇಳುವುದಾದರೆ ಈ ಮೂಲ ಸೃಷ್ಟಿಸಂಗೀತವೇ, ಅದೇ ನಾಕುತಂತಿಗಳ ಝೇಂಕಾರದಲ್ಲಿ, ನಿರಂತರವಾಗಿ, ವಿವಿಧ ರಾಗಗಳಲ್ಲಿ ಅದೇ ಮೂಲನಾದ ಹೊರಡಿಸುತ್ತಲೇ ಇದೆ – ಇಡೀ ಭೂಮಂಡಲದಲ್ಲಿ (ಪ್ರಾಯಶಃ ಮಿಕ್ಕೆಲ್ಲೆಡೆಯೂ). ನಾನು-ನೀನು-ಆನು-ತಾನೆಂಬ ಆ ನಾಲ್ಕುತಂತಿಗಳ ಗುಟ್ಟರಿತುಕೊಂಡರೆ ಇಡೀ ಜಟಿಲತೆಯ ಸ್ವರೂಪ ಸರಳವಾಗಿ ಕಣ್ಮುಂದೆ ನಿಲ್ಲುತ್ತದೆ. ಅದನ್ನರಿಯದೆ ಬರಿಯ ಬಾಹ್ಯ ಸಂಕೀರ್ಣತೆಯ ಸಾವಿರಾರು ಕುರುಹುಗಳ ಜತೆ ಹೊಡೆದಾಡಿಕೊಂಡಿದ್ದರೆ ಎಲ್ಲವೂ ಗೋಜಲು, ಗೋಜಲಾಗಿ ಅರ್ಥವೇ ಆಗದ ಗೊಂದಲದ ಒಗಟಾಗಿ ಕಾಣಿಸಿಕೊಳ್ಳುತ್ತವೆ. ಈ ವಿಷಯ ಬರಿಯ ಜೀವಸೃಷ್ಟಿಗೆ ಮಾತ್ರ ಸೀಮಿತವಾದದ್ದಲ್ಲ, ಬದುಕಿನ ಎಲ್ಲಾ ವಿಷಯಕ್ಕೂ, ಎಲ್ಲಾ ರಂಗಕ್ಕೂ ಅನ್ವಯಿಸುವಂತದ್ದು. ಜಟಿಲವೆಂಬಂತೆ ಕಾಣುವ ಎಲ್ಲದರ ಹಿನ್ನಲೆಯಲ್ಲೂ, ಮೂಲದಲ್ಲೂ ನಾಕುತಂತಿಗಳಂಥದ್ದೇ ಸರಳ ಮೂಲಾಂಶವಿದ್ದು, ಅದರ ವೈವಿಧ್ಯಮಯ ಸಂಯೋಜಿತ ರೂಪಗಳಷ್ಟೇ ಬಾಹ್ಯದಲ್ಲಿ ಕಾಣಿಸಿಕೊಳ್ಳುತ್ತವೆ. ಸತ್ಯದರಿವಿಗೆ ಹೊರಟರೆ ಹೊರಗಿನ ಅಂಶಗಳು ಮಾಯೆಯ ಹಾಗೆ ಪ್ರಭಾವ ಬೀರಿ ತೊಡರುಗಾಲು ಹಾಕುತ್ತವೆ. ಯಾರು ಅದರ ಜಟಿಲ ಸ್ವರೂಪಕ್ಕೆ ಮೋಸಹೋಗದೆ, ಒಳಗಿನ ಮೂಲದಲ್ಲಿರುವ ನಾಕುತಂತಿಗಳ ಮೂಲಸ್ವರೂಪದ ಗುಟ್ಟನ್ನರಿಯುತ್ತಾನೋ ಅವನಿಗೆ ಎಲ್ಲವೂ ಸರಳ ಸತ್ಯದಂತೆ ಗೋಚರವಾಗಿ ದಾರಿ ನಿಚ್ಛಳವಾಗಿ, ಬದುಕು ಸುಲಲಿತವಾಗುತ್ತದೆ. ಇದೇ ನಾಕುತಂತಿಗಳಲ್ಲಿರುವ ಬಹುಮುಖ್ಯವಾದ ಮೂಲ ಆಶಯ.

ಸೃಷ್ಟಿಸಂಕಲ್ಪಗಳ ಸೂಕ್ಷ್ಮವಾಹಕಗಳಾದ ವರ್ಣತಂತುಗಳ ವಿಷಯಕ್ಕೆ ಬಂದರೆ ಇಲ್ಲಿಯೂ ನಾಕುತಂತುಗಳ ಸಮ್ಮೇಳನವಿರುವುದನ್ನು ಕಾಣಬಹುದು. ಆಧುನಿಕ ವಿಜ್ಞಾನ ಗಂಡು ಜೀನ್ಸಿನಲ್ಲಿ ‘ಎಕ್ಸ್’ ಮತ್ತು ‘ವೈ’ ಜೋಡಿ ಕ್ರೋಮೋಸೋಮುಗಳಿರುತ್ತವೆ ಎಂದು ಸಾರುತ್ತದೆ. ಹಾಗೆಯೆ ಹೆಣ್ಣು ಜೀನ್ಸಿನಲ್ಲಿ ಬರಿಯ ‘ಎಕ್ಸ್’ ಮತ್ತು ‘ಎಕ್ಸ್’ ಸಂಯೋಜನೆಯಿರುತ್ತದೆಯೆನ್ನುವುದು ಗೊತ್ತಿರುವ ವಿಷಯವೆ. ಮಿಲನದ ಪ್ರಕ್ರಿಯೆಯಲ್ಲಿ ಒಗ್ಗೂಡಿದಾಗ ಒಂದಾಗುವ ಈ ‘ಎಕ್ಸ್, ಎಕ್ಸ್, ಎಕ್ಸ್, ವೈ’ ತಂತುಗಳು, ನಾಕುತಂತಿಯ ಪ್ರತೀಕವಾಗಿ, ಪ್ರತಿನಿಧಿಯಾಗಿ ಕಾಣುತ್ತವೆ – ಕಣರೂಪಿ ಮೂಲಭೂತ ಸ್ವರೂಪದಲ್ಲಿ. ಇದರ ಸಂಯೋಜನೆಯ ಸ್ವರೂಪವೇ ಹುಟ್ಟುವ ಜೀವಿ ಗಂಡೋ, ಹೆಣ್ಣೋ ಎಂದು ನಿರ್ಧರಿಸುವುದು. ತನ್ಮೂಲಕ ಪುರುಷ-ಪ್ರಕೃತಿಯ ಸಂಖ್ಯೆಯ ಸಮತೋಲನದಲ್ಲೂ ತನ್ನ ಪಾತ್ರ ನಿರ್ವಹಿಸುತ್ತದೆ. ಕವಿಯ ಮೂಲಆಶಯ ಈ ದೃಷ್ಟಿಕೋನದಲ್ಲಿತ್ತೊ, ಇಲ್ಲವೊ – ಆದರೆ ಅಲ್ಲಿಗೂ ಹೊಂದಿಕೆಯಾಗುವ ಮೂಲತತ್ವ ಈ ನಾಕುತಂತಿಯ ಮಹತ್ವ..!

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

02053. ನಾಕುತಂತಿಯೊಂದು ಸಾಲು – ೧೩


02053. ನಾಕುತಂತಿಯೊಂದು ಸಾಲು – ೧೩
____________________________________


’ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ ಶ್ರೀ ಗುರುದತ್ತ ಅಂದ.’

ಹಿಂದಿನ ಸಾಲಲ್ಲಿ ತಾತ್ವಿಕ ಮತ್ತು ಮಾನಸಿಕ ಸ್ತರದಲ್ಲಿ ವಿಹರಿಸುತ್ತಿದ್ದ ಕವಿಭಾವ ವೈಯಕ್ತಿಕ ಮಟ್ಟದಿಂದ ಸಾರ್ವತ್ರಿಕ ಮಟ್ಟಕ್ಕೇರಿಬಿಡುವುದನ್ನು ಇಲ್ಲಿ ಕಾಣಬಹುದು. ಇಲ್ಲಿಯತನಕ ಸೃಷ್ಟಿಯ ಬಿಡಿಬಿಡಿ ಭಾಗಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತಿದ್ದ ಪರಿಗಣನೆ, ಈಗ ಏಕಾಏಕಿ ಸಮಗ್ರತೆ, ಸಮಷ್ಟಿಯ ಮಟ್ಟಕ್ಕೇರಿ ಇಡೀ ಜಗದ ಮತ್ತು ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಪ್ರಸ್ತಾಪಿಸತೊಡಗುತ್ತದೆ. ಹಾಗೆಯೇ ಇಲ್ಲಿ ಕಂಡುಬರುವ ಮತ್ತೊಂದು ವಿಶೇಷವೆಂದರೆ – ಈ ಸಾಲಿನಲ್ಲಿ ಕವಿಹೃದಯ ತಟ್ಟನೆ ಆಧ್ಯಾತ್ಮಿಕ ಸ್ತರದತ್ತ ನೆಗೆದುಬಿಟ್ಟಿದೆ. ಪರಂಪರಾಗತ ನಂಬಿಕೆ, ಪೌರಾಣಿಕ ಹಿನ್ನಲೆಯ ದೃಷ್ಟಿಕೋನಗಳೆಲ್ಲದರ ಸಮ್ಮೇಳನವಾದಂತಾಗಿ ಸೃಷ್ಟಿಯ ಮೂಲ ಕಾರಣಕರ್ತರು ಮತ್ತು ಆದಿದಂಪತಿಗಳೆಂದು ಪರಿಗಣಿಸಲ್ಪಟ್ಟಿರುವ ಶಿವ-ಪಾರ್ವತಿಯರನ್ನು ಓಲೈಸುವ ದನಿ ಕಂಡುಬರುತ್ತದೆ – ಅವರನ್ನು ಈ ಜಗದ ಅಪ್ಪ-ಅಮ್ಮ ಎಂದು ಸಂಭೋಧಿಸುವ ಮುಖಾಂತರ. ಈ ಜಗ (ಅರ್ಥಾತ್ ನಾವಿರುವ ಸೃಷ್ಟಿ) ಆ ಅಪ್ಪ-ಅಮ್ಮರ ಮಗನಂತೆ. ಆ ಆದಿದಂಪತಿಗಳ ಮಿಲನದ ಫಲಿತವಾಗಿ ಜನಿಸಿದ ಸೃಷ್ಟಿಯಿದು, ಈ ಪ್ರಪಂಚ. ಅಂದರೆ ಆ ದೈವಿಕ ಪ್ರಕೃತಿ-ಪುರುಷಗಳ ಮಿಲನ ಸಮ್ಮೇಳನದಲ್ಲಿ ಈ ಸುಂದರ ಜಗದ ಸೃಷ್ಟಿಯಾಗಿಹೋಗಿದೆ. ಆದರೆ ಇಲ್ಲಿನ ಸೋಜಿಗವೆಂದರೆ – ಇಲ್ಲಿ ಪ್ರಕೃತಿ ಬೇರೆಯಲ್ಲ, ಪುರುಷವು ಬೇರೆಯಲ್ಲ. ಎರಡೂ ಒಂದೇ ಸ್ವರೂಪದ ವಿಭಿನ್ನ ಅಸ್ತಿತ್ವಗಳು ಅಷ್ಟೆ. ಅದನ್ನೇ ನಾವೂ ಪರಬ್ರಹ್ಮವೆನ್ನುತ್ತೇವೆ. ಪ್ರಕೃತಿ, ಪುರುಷ ಎರಡೂ ಸ್ವರೂಪಗಳು ಬ್ರಹ್ಮದ ವಿವರಣೆಗೆ ಹೊಂದುವಂತದ್ದೆ. ಅದು ಅವನೂ ಅಲ್ಲ, ಅವಳೂ ಅಲ್ಲದ ವರ್ಣನಾತೀತ ಏಕೀಕೃತ ಸ್ವರೂಪ. ಆ ತತ್ತ್ವದ ಸಾರವನ್ನು ಅವಿರತ ಸಾರುವ ಹಾಗೆ ಅನಾವರಣಗೊಂಡ ಬಗೆಯೇ ಶಿವಶಿವೆಯರ ಅರ್ಧನಾರೀಶ್ವರ – ಅರ್ಧನಾರೀಶ್ವರಿ ರೂಪ.

ಇದನ್ನು ವಿವರಿಸುವ ಪದಪುಂಜ ‘ಅಮ್ಮನೊಳಗೆ ಅಪ್ಪನ ಮೊಗ’. ಅಮ್ಮನೊಳಗೆ ಅಪ್ಪನ ಮೊಗವು ಸೇರಿಕೊಂಡಿದೆ ಎಂದಾಗ ಅವರಿಬ್ಬರೂ ಒಂದೇ ಎನ್ನುವ ಭಾವ ಸ್ಪಷ್ಟವಾಗಿ ಒಡಮೂಡುತ್ತದೆ. ಆದರೆ ಇಲ್ಲಿಯೂ ಗಮನಿಸಬೇಕಾದ ಒಂದು ಚತುರತೆಯಿದೆ. ಯಾಕಿದು ‘ಅಪ್ಪನೊಳಗೆ ಅಮ್ಮನ ಮೊಗ’ ಆಗದೆ ‘ ಅಮ್ಮನೊಳಗೆ ಅಪ್ಪನ ಮೊಗ’ ಆಯ್ತು ? ಪರಬ್ರಹ್ಮದ ವಿವರಣೆಯಲ್ಲಿ ಪುರುಷ (ಅಪ್ಪ) ಜಡಶಕ್ತಿ, ನಿಶ್ಚಲತೆಯ ಸಂಕೇತ. ಪ್ರಕೃತಿ (ಅಮ್ಮ) ಚಲನಶೀಲತೆ ಮತ್ತು ಚಂಚಲತೆಯ ಸಂಕೇತ. ಪರಬ್ರಹ್ಮ ದರ್ಶನವಾಗಲಿಕ್ಕೂ ಮಾತೆಯ ಮೂಲಕವೇ ಪ್ರಯತ್ನಿಸಬೇಕು. ಹಾಗಾಗಿ ದೇವಿ ಪರಾಶಕ್ತಿಯ ಸ್ವರೂಪ – ಆ ಕಾರಣದಿಂದಲೇ ಅಮ್ಮನೊಳಗೆ ಅಪ್ಪನ ಮೊಗವೆಂದು ಪ್ರಸ್ತಾಪಿಸಲ್ಪಟ್ಟಿದೆ ಎಂದು ನನ್ನ ಅನಿಸಿಕೆ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಪ್ರಕೃತಿ ಪುರುಷಗಳೆರಡೂ ಏಕೀಕೃತವಾಗಿ, ಮಿಲನದಲ್ಲಿ ಒಬ್ಬರಲ್ಲೊಬ್ಬರು ಅಂತರ್ಗತವಾಗಿ ಹೋದ ಭಾವ ಸಾಮಾನ್ಯನೊಬ್ಬನ ಆಡುನುಡಿಗಳಾಗಿ ಕಾಣಿಸಿಕೊಂಡಿವೆ. ಎರಡು ಭೌತಿಕ ಕಾಯಗಳು ಒಂದೇ ಕಾಯದ ಪಾತ್ರಕ್ಕೆ ಹೊಂದಿಕೊಳ್ಳುವುದು ಲೌಕಿಕ ಜಗದ ಭೌತಶಾಸ್ತ್ರದ ನಿಯಮಕ್ಕೆ ಅಪವಾದ. ಜಗನ್ಮಾತಾಪಿತರ ವಿಷಯವೆಂದರೆ ಅದು ಲೌಕಿಕ ಜಗದ ಮಾತಲ್ಲ – ಹೀಗಾಗಿ ಲೌಕಿಕ ನಿಯಮಗಳನ್ನು ಮೀರಿದ ವರ್ಣನೆ ಇದು. ಹಾಗೆಯೇ ಸೃಷ್ಟಿಯೆನ್ನುವ ನಾಕುತಂತಿಯ ಪ್ರಕ್ರಿಯೆ ಲೌಕಿಕಾಲೌಕಿಕ ಜಗಗಳೆಲ್ಲವನ್ನು ತನ್ನ ಸಾಮಾನ್ಯಸೂತ್ರದಿಂದ ಬಂಧಿಸಿಡುವ ಏಕಮಾತ್ರ ಸಾಮಾನ್ಯ ಎಳೆ (ಕಾಮನ್ ತ್ರೆಡ್) ಎಂದೂ ನಿಷ್ಪತ್ತಿಸಬಹುದು. ಅರ್ಥಾತ್ – ಸಕಲ ಬ್ರಹ್ಮಾಂಡವನ್ನು ರಚಿಸಲು ಬಳಸಿದ ಏಕಮಾತ್ರ ಮೂಲಸೂತ್ರವೇನಾದರೂ ಈ ಜಗದಲ್ಲಿ ಇದ್ದರೆ – ಅದು ಸೃಷ್ಟಿಕ್ರಿಯೆಯ ಸೂತ್ರ ಮಾತ್ರ ಎಂದು.

ಮತ್ತೆ ಕವಿತೆಯ ಸಾಲಿಗೆ ಬಂದರೆ, ಅದೇ ಜಗದಪ್ಪಾ-ಅಮ್ಮನ ಕಥೆ ಮತ್ತೊಂದು ಆಯಾಮದಲ್ಲಿ ಮುಂದುವರೆಯುತ್ತದೆ – ಸೃಷ್ಟಿಯೋತ್ತರ ಪರಿಪಾಲನ ಪರ್ವದ ಕಾರ್ಯನಿರ್ವಹಣೆಯ ರೂಪದಲ್ಲಿ. ಇಲ್ಲಿಯೂ ಮಾತೃರೂಪಿಣಿ ದೇವಿಯ ಕೃತ್ಯವೇ ವೈಭವೀಕರಿಸಲ್ಪಟ್ಟಿದೆ – ಮತ್ತೆ ಅವಳ ಪ್ರಾಮುಖ್ಯತೆಯನ್ನು ಸಾರುತ್ತ: ಯಾಕೆಂದರೆ ‘ಅಪ್ಪನ ಕತ್ತಿಗೆ ಅಮ್ಮನ ನೊಗ’ ಎಂದಾಗ ನೆನಪಾಗುವ ದೃಶ್ಯ – ಪರಶಿವ ಹಾಲಾಹಲವನ್ನು ಕುಡಿದು ವಿಷಕಂಠನಾದ ಕಥಾನಕ. ಸಮುದ್ರ ಮಥನದಲೆದ್ದ ಹಾಲಾಹಲ ಮಿಕ್ಕವರನ್ನು ನಾಮಾವಶೇಷವಾಗಿಸುವ ಮೊದಲೆ, ಹಿಂದೆಮುಂದೆ ಯೋಚಿಸದೆ ಅದನ್ನೆತ್ತಿ ಆಪೋಷಿಸಿಕೊಂಡುಬಿಟ್ಟನಂತೆ ಜಗದೀಶ ! ಆದರೆ ಆತಂಕ ಬಿಟ್ಟಿದ್ದಾದರೂ ಯಾರನ್ನು ? ಅಲ್ಲೇ ಇದ್ದ ಜಗನ್ಮಾತೆಗೆ ಗಾಬರಿಯಾಯ್ತಂತೆ – ಪೂರ್ತಿ ಕುಡಿದು ತನ್ನ ಜೀವಕ್ಕೆ ಅಪಾಯ ತಂದುಕೊಂಡರೆ ಎಂದು ಹೆದರಿ, ಆ ವಿಷ ದೇಹದೊಳಕ್ಕೆ ಇಳಿದು ಹೋಗದಂತೆ ಅವನ ಗಂಟಲಲ್ಲೇ ತಡೆದು ನಿಲ್ಲಿಸಿಬಿಟ್ಟಳಂತೆ – ಅವನ ಕತ್ತಿನ ಹತ್ತಿರ ತನ್ನ ಕೈಯಿಂದ ‘ನೊಗ ಹೊತ್ತಂತೆ ‘ ತಡೆಯೊಡ್ಡುತ್ತ ! (ಅಪ್ಪನ ಕತ್ತಿಗೆ ಅಮ್ಮನ ನೊಗ).

ಇಲ್ಲಿ ನೊಗ ಎನ್ನುವ ಪದ ಹೊಣೆಗಾರಿಕೆ, ಜವಾಬ್ದಾರಿಯ ಇಂಗಿತ. ಸೃಷ್ಟಿಯ ನಂತರವೂ ಎಲ್ಲವೂ ಸುಗಮವಾಗೇನು ಇರುವುದಿಲ್ಲ; ಅಲ್ಲಿಯೂ ಅನೇಕ ತಳಮಳ ಹೋರಾಟಗಳನ್ನು ಎದುರಿಸಿಕೊಂಡೆ ಸಾಗುತ್ತ, ಹೊಣೆಗಾರಿಕೆಯಿಂದ ನಡೆಯುತ್ತಾ ಪಕ್ವತೆ, ಪ್ರಬುದ್ಧತೆಯತ್ತ ಸಾಗಬೇಕು. ಜತೆಗೆ ನೊಗವನ್ನು ಹೆಗಲ ಮೇಲೆ ಹೊತ್ತ ಎತ್ತು ಕರ್ಮಸಿದ್ದಾಂತಕ್ಕೆ ಬದ್ಧನಾಗಿ, ಒಂದಿನಿತೂ ಪ್ರಶ್ನಿಸದೆ ಉಳುಮೆ ಮಾಡಿಕೊಂಡು ನಡೆದಿರುತ್ತದೆ – ತನ್ನ ಹೊಣೆಗಾರಿಕೆಯನ್ನು ಹೇಗಾದರೂ ನಿರ್ವಹಿಸಬೇಕೆನ್ನುವ ತಪನೆಯಿಂದ. ಈ ನಿರ್ವಹಣೆ, ನಿಭಾವಣೆಯ ಹೊಣೆಗಾರಿಕೆ ಆ ತ್ರಿಮೂರ್ತಿಗಳಾದಿಯಾಗಿ ಆ ಆದಿದಂಪತಿಗಳಿಗೂ ತಪ್ಪಿದ್ದಲ್ಲ. ಅವರೂ ಕರ್ಮಬದ್ಧತೆಗೆ ಹೊರತಲ್ಲ ಎಂದ ಮೇಲೆ, ಮಿಕ್ಕ ಸೃಷ್ಟಿಯ ಕುರಿತು ಹೇಳುವುದಾದರೂ ಏನಿದೆ ? ಈ ಸೃಷ್ಟಿಯಲ್ಲಿ ನಾವುಗಳು ವಹಿಸಬೇಕಾದ ಪಾತ್ರವು ಸಹ ಅಂತದ್ದೇ. ಅದನ್ನೇ ಒತ್ತಿ ಹೇಳುತ್ತಾ ಕವಿ – ಅಂತಹ ಮಹಾನ್ ದಂಪತಿಗಳು ಸೃಜಿಸಿದ ಸೃಷ್ಟಿಯಲ್ಲಿ ಹುಟ್ಟಿದ ಕೋಟ್ಯಾನುಕೋಟಿ ಚರಾಚರ ವಸ್ತುಗಳ ಪೈಕಿ ನಾನು ಕೂಡ ಒಬ್ಬ… ಅಂದ ಮೇಲೆ ನಾನು ಅವರ ಕಂದನಿದ್ದ ಹಾಗೆ ಲೆಕ್ಕ ತಾನೇ ? ಅವರೇ ನನ್ನ ಆದಿ ಗುರುಗಳಿದ್ದ ಹಾಗೆ ಅಲ್ಲವೇ ? (ನಾ ಅವರ ಕಂದ ಶ್ರೀ ಗುರುದತ್ತ ಅಂದ.) ಎನ್ನುತ್ತಾ ಮನುಜನಿಗೂ ದೈವತ್ವಕ್ಕೂ ಇರುವ ಅವಿನಾಭಾವ ಸಂಬಂಧವನ್ನು ಮಾತಾ-ಪಿತ-ಸುತ ತ್ರಿಕೋನದಡಿ ಹೊಂದಿಸಿಟ್ಟುಬಿಡುತ್ತಾರೆ – ಜತೆಜತೆಗೆ ಗುರುತ್ವವನ್ನೂ ಸಮೀಕರಿಸುತ್ತ. ಹೀಗೆ ತನ್ನನು ತಾನೇ (ಅರ್ಥಾತ್ ಮನುಕುಲವನ್ನೆ) ದೇವರ ಮಗ ಎಂದು ಹೇಳಿಕೊಳ್ಳುವ ಉತ್ಸಾಹ, ಧಾರ್ಷ್ಟ್ಯ ತೋರುತ್ತದೆ ಕವಿಮನಸ್ಸು. ಒಂದೆಡೆ ಅದು ಹೆಮ್ಮೆಯ ಪ್ರತೀಕವಾದರೆ ಮತ್ತೊಂದೆಡೆ ‘ನಾನು’ ಎಂಬ ಭಾವದ ಉತ್ಕೃಷ್ಟತೆಯ ಪ್ರತೀಕವಾಗುತ್ತದೆ.

ಒಟ್ಟಾರೆ ಇಡೀ ಜಗ ವ್ಯಾಪಾರವೆ ಆ ದೇವರ ಆಟ. ನಾವಲ್ಲಿ ಆಟವಾಡುವ ಪಗಡೆ ಕಾಯಿಗಳಂತೆ ಆದರೂ, ಎಲ್ಲಾ ನಮ್ಮಿಂದಲೇ ನಡೆಯುತ್ತಿದೆಯೆನ್ನುವ ಹಮ್ಮು, ಅಹಮಿಕೆ ತೋರುತ್ತೇವೆ. ಆದರೆ ನಮ್ಮನ್ನೆಲ್ಲ ಸೃಜಿಸಿದ ಆ ಪುರುಷ-ಪ್ರಕೃತಿ ಮೂಲಸ್ವರೂಪಿಗಳಲ್ಲಿ ಯಾರೂ ಹೆಚ್ಚಿಲ್ಲ, ಯಾರೂ ಕಡಿಮೆಯಿಲ್ಲ ಎನ್ನುವ ವಿನೀತ ಭಾವದ ಪ್ರದರ್ಶನವಾಗುತ್ತದೆ – ಅರ್ಧನಾರೀಶ್ವರ, ಅರ್ಧನಾರೀಶ್ವರಿ ರೂಪಧಾರಣೆಯಾದಾಗ. ಲೋಕರಕ್ಷಣೆಗಾಗಿ ವಿಷವನ್ನುಂಡು ನೀಲಕಂಠನಾಗುವ ಹಿನ್ನಲೆಯಲ್ಲಿ ಸ್ವಾರ್ಥರಹಿತ ಅರ್ಪಣಾಭಾವ ಎದ್ದು ಕಾಣುತ್ತದೆ. ನೊಗವೆಂದಾಗ ಹೆಗಲೇರುವ ಹೊಣೆಗಾರಿಕೆಯ ನೆನಪಾಗುತ್ತದೆ – ಕರ್ಮಸಿದ್ಧಾಂತದ ಜತೆಜತೆಗೆ. ಆದರೆ ಅವರ ಸರಪಳೀಕೃತ ಸೃಷ್ಟಿಯ ಕೊಂಡಿಯಾದ ನಾವು ಮಾತ್ರ – ನಾವಾ ದೇವರ ಅತಿಶಯದ ಸೃಷ್ಟಿ, ಬೆಲೆ ಕಟ್ಟಲಾಗದ ಅದ್ಭುತ ಎಂದೆಲ್ಲ ಭ್ರಮಿಸುತ್ತಾ ಅಹಂಕಾರ ಪಡುತ್ತೇವೆ. ಸೃಷ್ಟಿಕರ್ತನಿಗೂ ಇರದ ಸೊಕ್ಕಿನ ಪ್ರದರ್ಶನ ಸಾಧಾರಣ ಹುಲುಮಾನವರಲ್ಲಿದ್ದರೆ ಅದರಲ್ಲಿ ಅಚ್ಚರಿಯೇನು ಇಲ್ಲ. ಅಂತಿದ್ದಲ್ಲಿ, ಆ ದೈವದ ಭಾಗಾಂಶ ಸೌಜನ್ಯ ನಮ್ಮಲ್ಲಿ ಅಂತರ್ಗತವಾದರೆ ಅದು ದೇವಸೃಷ್ಟಿಯ ನಿಜವಾದ ಗೆಲುವು ಎಂದು ಪರಿಗಣಿಸಬಹುದು. ಬಹುಶಃ ಆ ಸಮಗ್ರ ಆಶಯವೆ ಈ ಸಾಲಿನ ಮೂಲೋದ್ದೇಶವಿರಬಹುದೆನಿಸುತ್ತದೆ.

ಅದ್ವೈತದ ತಾದಾತ್ಮ್ಯಕತೆ ಕೂಡ ಇಲ್ಲಿ ಪರೋಕ್ಷವಾಗಿ ಸೂಚಿತವಾಗಿದೆಯೆಂದು ಹೇಳಬಹುದು – ಆ ಆದಿದಂಪತಿಗಳ ವರಪುತ್ರ ತಾನೆಂದು ಹೇಳಿಕೊಳ್ಳುವಾಗ. ಈ ಚೌಕಟ್ಟಿನಲ್ಲಿ ನಾನು-ನೀನು ಎನ್ನುವ ಪ್ರಕೃತಿ-ಪುರುಷಸ್ವರೂಪರು ಆದಿದಂಪತಿಗಳೆ ಆಗುತ್ತಾರೆ. ಅವರ ಸೃಷ್ಟಿಯಾದ ಮನುಜ ‘ಕಂದ’ನು ದೇಹದಲ್ಲಿ ಅಮೂರ್ತ ಜೀವಾತ್ಮದ ಜತೆ ಏಕೀಭವಿಸಿ ಆ ಅನುಸಂಧಾನದಲ್ಲೆ ‘ಆನು-ತಾನು’ಗಳ ಪ್ರತಿನಿಧಿಯಾಗುತ್ತಾನೆ. ಹುಟ್ಟಿದ ಮಗುವನ್ನು ಸಾಕ್ಷಾತ್ ದೇವರ ಸ್ವರೂಪ ಎಂದು ಹೇಳುವ ಪರಿಪಾಠ, ಈ ದೃಷ್ಟಿಯಿಂದ ಅದೆಷ್ಟು ಅರ್ಥಪೂರ್ಣ ಅನಿಸಿಬಿಡುತ್ತದೆ ! ಹೀಗೆ ನಾಕುತಂತಿಗಳ ಮೊಟ್ಟಮೊದಲ ಝೇಂಕಾರ ಮಾನವತೆಯಿಂದ ದೈವಿಕಸ್ವರೂಪ ಪಡೆದುಕೊಳ್ಳುತ್ತದೆ. ಅಲ್ಲಿಂದ ಮುಂದೆ ಪೀಳಿಗೆಯಿಂದ ಪೀಳಿಗೆಗೆ, ಸಂತತಿಯಿಂದ ಸಂತತಿಗೆ ನಡೆಯುವುದೆಲ್ಲ ಬರಿ ಇದೆ ನಾಕುತಂತಿಗಳ ನಾದದ ಪುನರಾವರ್ತನೆ – ಸಂತತವಾಗಿ, ನಿರಂತರವಾಗಿ..

ಹಾಗೆಯೇ ಕೊನೆಯ ‘ನಾ ಅವರ ಕಂದ ಶ್ರೀ ಗುರುದತ್ತ ಅಂದ..’ ಎನ್ನುವ ಪದಪುಂಜ ಮತ್ತೊಂದು ಅರ್ಥವನ್ನು ಕೂಡ ಸೂಚಿಸುತ್ತದೆ. ಅವರು ಕೇವಲ ಆದಿಮಾತಾಪಿತಗಳು ಮಾತ್ರರಲ್ಲ, ಅವರೇ ಮೊಟ್ಟಮೊದಲ ಗುರುಗಳೂ ಸಹ. ಅವರ ಅದ್ಭುತಸೃಷ್ಟಿ ಮಾನವಜೀವಿ. ಅದರ ಸೃಜಿತ ರೀತಿ, ಸ್ವಯಂನಿಯಂತ್ರಿತ ನಿರಂತರ ಚಲನೆಯ ಸೃಷ್ಟಿ-ಸಂಸಾರ ಚಕ್ರ, ದ್ವಿಗುಣದಿಂದ ಬಹುಗುಣವಾಗುತ್ತ ಮೂಲೋದ್ದೇಶವನ್ನು ನಿರಂತರ ಕಾಲಯಾನದೊಂದಿಗೆ ವರ್ಗಾಯಿಸಿಕೊಂಡು ನಡೆದಿರುವ ಪ್ರಕ್ರಿಯೆ – ಎಲ್ಲವು ವಿಸ್ಮಯವನ್ನು ಮೂಡಿಸುವುದು ಮಾತ್ರವಲ್ಲದೆ, ಅದರ ನೈಸರ್ಗಿಕ ಸ್ವರೂಪದ ಸೊಬಗಿಗೆ, ಅದರ ಒಟ್ಟಾರೆ ಅಂದಕ್ಕೆ ಬೆರಗಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಊಹಿಸಿಕೊಳ್ಳಿ – ಇಡೀ ಜೀವ ಜಗದೆಲ್ಲ ಸೃಷ್ಟಿ-ಸ್ಥಿತಿ-ಲಯ ಪ್ರಕ್ರಿಯೆ ಒಂದು ಅದ್ಭುತ ಗುಂಡಿಯೊತ್ತಿದ ಸ್ವಯಂಚಾಲಿತ ಯಂತ್ರದ ಹಾಗೆ ಯಾರ ನಿತ್ಯ ಉಸ್ತುವಾರಿ, ಮೇಲ್ವಿಚಾರಣೆಯ ಅಗತ್ಯವೂ ಇಲ್ಲದಂತೆ ತನ್ನಂತಾನೆ ನಡೆದುಕೊಂಡು, ನಡೆಸಿಕೊಂಡು ಹೋಗುತ್ತಿದ್ದರೆ ಅದೆಷ್ಟು ಅತಿಶಯದ ಸೃಷ್ಟಿನಿರ್ವಹಣೆಯಾಗಿರಬೇಕು? ಸಾಲದ್ದಕ್ಕೆ ಇಡೀ ಜೀವಜಗರಾಶಿಯನ್ನೂ ಅವಕ್ಕರಿವಿಲ್ಲದಂತೆ ಅಲ್ಲಿಯೇ ಪಾತ್ರಧಾರಿಗಳಾಗಿಸಿ, ತನ್ಮೂಲಕ ಅದರ ನಿರ್ವಹಣೆ-ನಿಯಂತ್ರಣದಲ್ಲಿ ಅವರನ್ನು ಪಾಲುದಾರರನ್ನಾಗಿಸಿಕೊಂಡಿರುವುದೇನು ಸಾಮಾನ್ಯ ವಿಷಯವೇ ? ಅವರಾರಿಗೂ ಅರಿವಿಲ್ಲದ ಹಾಗೆ ಅಲ್ಲೇ ಸುಖದುಃಖ, ನೋವುನಲಿವು, ಸೌಂದರ್ಯಕುರೂಪಾದಿ ಅಂತರಗಳನ್ನಿಟ್ಟು, ಎಲ್ಲರು ಆಸ್ಥೆಯಿಂದ, ಆಸಕ್ತಿಯಿಂದ, ಆಕರ್ಷಣೆಗೊಳಗಾಗಿ ಅವುಗಳ ಸುತ್ತಲೇ ಗಿರಕಿ ಹೊಡೆಯುತ್ತ ತಮ್ಮ ಜೀವನಯಾತ್ರೆ ಸವೆಸುವಂತೆ ಮಾಡುವ ಈ ವ್ಯವಸ್ಥೆಯ ಅಂದಚಂದವನ್ನು ಬರಿ ಮಾತಲ್ಲಿ ವರ್ಣಿಸುವುದಾದರೂ ಹೇಗೆ ? ಅದಕ್ಕೆಲ್ಲ ಕಲಶಪ್ರಾಯವಾಗುವಂತೆ ಈ ಮಾನವ ಜೀವಿಯನ್ನು ಸೃಜಿಸಿದ ಆ ಸೃಷ್ಟಿಕರ್ತನ ಊಹಾನೈಪುಣ್ಯತೆಯ ಅಂದವನ್ನು ಬರಿ ಮಾತಲ್ಲಿ ಹೇಳುವುದಾದರೂ ಎಂತು ?

ಜತೆಗೆ ಇಲ್ಲಿ ಹೊರಡುವ ಮತ್ತೊಂದು ದನಿಯೂ ಮುಖ್ಯವಾದದ್ದು: ‘ನಾನವರ ಕಂದ, ಆ ಗುರುದತ್ತ ಅಂದ’ – ಎಂದಾಗ ನಾವವರ (ದೇವರ) ಮಕ್ಕಳು ಎಂದು ಆ ದೇವರೆ ಗುರುರೂಪಿಯಾಗಿ ಬೋಧಿಸಿಬಿಟ್ಟಿದ್ದಾನೆ, ಉಪದೇಶಿಸಿಬಿಟ್ಟಿದ್ದಾನೆ – ತನ್ಮೂಲಕ ತನ್ನ ಒಳ್ಳೆಯತನ, ತನ್ನ ಇಂಗಿತದಂದವನ್ನು ನಾವೆಲ್ಲ ಕಾಣುವಂತೆ ಮಾಡಿದ್ದಾನೆ. ಅದಕ್ಕೆ ಅವನಿಗೆ ನಾವೆಲ್ಲ ಚಿರಋಣಿಗಳಾಗಿರಬೇಕು ಮತ್ತವನ ಆಶಯವನ್ನರಿತು ಪಾಲಿಸುವ ನಿಷ್ಠೆ ತೋರಬೇಕು ಎನ್ನುವ ಭಾವ ಇಲ್ಲಿ ಪ್ರಮುಖವಾಗುತ್ತದೆ. ಅದೇ ಭಾವ ಇಲ್ಲಿನ ಕವಿವಾಣಿಯ ಉದ್ಗಾರಕ್ಕೂ ಕಾರಣವಾಗಿದೆಯೆನ್ನಬಹುದು – ಸೃಷ್ಟಿಯ ಸೊಬಗೆಲ್ಲ ಈ ಕಂದನ (ಜೀವಸೃಷ್ಟಿಯ) ಅಂದದ ರೂಪಾಗಿ, ಆದಿಗುರುವಿನ ಕೃಪಾರೂಪದಲ್ಲಿ ನಮ್ಮ ಬದುಕಿಗೆ, ನಮ್ಮ ಲೋಕಕ್ಕೆ ಬಂದಿದೆ ಎನ್ನುವ ಇಂಗಿತವನ್ನು ವ್ಯಕ್ತಪಡಿಸುತ್ತ. ಹಾಗೆನ್ನುವಾಗ ಸೃಷ್ಟಿಯನ್ನು ಸೃಜಿಸಿದ ವಿಶ್ವಚಿತ್ತವೆ ಸೃಷ್ಟಿಯೆಲ್ಲಕ್ಕೂ ಆದಿಗುರು ಎನ್ನುವ ಭಾವ ತಾನಾಗಿಯೇ ಉದ್ಭವಿಸುತ್ತದೆ.

ಈ ಸಾಲಿನೊಂದಿಗೆ ನಾಕುತಂತಿಯ ಮೂರನೆ ಭಾಗ ಮುಗಿಯುತ್ತದೆ. ಮುಂದಿನ ಕೊನೆಯ ಭಾಗ ಇಡೀ ಕವಿತೆಯ ಮೂಲಾಶಯ ಸಾರಾಂಶವನ್ನು ಸಮಷ್ಟಿಯಾಗಿ ಕಟ್ಟಿಕೊಡುವ ಪ್ರಬುದ್ಧ, ಪರಿಪಕ್ವ ಕಾರ್ಯ ನಿರ್ವಹಿಸುತ್ತದೆ – ಮಿಕ್ಕ ನಾಲ್ಕು ಸಾಲುಗಳಲ್ಲಿ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture source : Wikipedia)

02051. ಮಂಕುತಿಮ್ಮನ ಕಗ್ಗ ೬೧ರ ಟಿಪ್ಪಣಿ – ರೀಡೂ ಕನ್ನಡದಲ್ಲಿ


02051. ಮಂಕುತಿಮ್ಮನ ಕಗ್ಗ ೬೧ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

http://kannada.readoo.in/2017/05/೬೧-ಒಳಗ್ಹೊರಗಿನ-ದನಿಯದ್ವೈತ

02050. ನಾಕುತಂತಿಯೊಂದು ಸಾಲು ೧೨ (ಭಾಗ-೩)


02050. ನಾಕುತಂತಿಯೊಂದು ಸಾಲು ೧೨ (ಭಾಗ-೩)

ಮೂರನೆ ಭಾಗದ ಮುಂದಿನೆರಡು ಉದ್ದನೆ ಸಾಲುಗಳು ‘ನಾನು-ನೀನು’ ಸೇರಿ ‘ಆನು’ ಆದ ವಿಸ್ಮಯದ ಮತ್ತಷ್ಟು ಆಳಕ್ಕಿಳಿಯುವ, ತಾತ್ವಿಕ ಜಿಜ್ಞಾಸೆಯೊಡನೆ ಸಮೀಕರಿಸುವ ಯತ್ನದಂತೆ ಕಾಣಿಸುತ್ತದೆ. ಇಲ್ಲಿ ನಾನು ನೀನು ಮತ್ತದರ ಫಲಶ್ರುತಿ ಮೂರರ ಸಂವಾದ ಮತ್ತು ಸಂಭಾಷಣೆ ಗಮನೀಯ ಅಂಶ. ಚಿಂತನೆಯಲ್ಲಿನ ಪಕ್ವತೆ, ಪ್ರಬುದ್ಧತೆ ಮತ್ತೊಂದು ಸ್ತರದ ಮೇಲೇರುವ ಬೆಳವಣಿಗೆಯೂ ಇಲ್ಲಿನ ವಿಶಿಷ್ಠ ಅಂಶ. ಯಥಾರೀತಿ, ಯಾವ ಸೃಷ್ಟಿಯ ಕುರಿತಾಗಿ ಪರಿಗಣನೆಯಿದೆಯೋ ಅದರ ಪ್ರಕಾರದ ವಿಭಿನ್ನ ಅರ್ಥ ಹೊರಡುವುದು ಇಲ್ಲಿಯೂ ಗೋಚರಿಸುತ್ತದೆ. ಸೃಷ್ಟಿಯೆನ್ನುವುದು ಬರಿ ಆರಂಭ ಮಾತ್ರ, ಮತ್ತದರ ಪಾಲನೆ, ಪೋಷಣೆ, ಅಭಿವೃದ್ಧಿಯ ಹೊಣೆಗಾರಿಕೆಯೂ ಪ್ರಾಮುಖ್ಯವೆನ್ನುವುದು ಇಲ್ಲಿ ಇಣುಕುವ ಮತ್ತೊಂದು ಇಂಗಿತ.


ನಾಕುತಂತಿಯೊಂದು ಸಾಲು – ೧೨
______________________________

’ಚಿತ್ತೀಮಳಿ ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ ಸತ್ತಿsಯೊ ಮಗನs ಅಂತ ಕೂಗಿದರು ಸಾವೀ ಮಗಳು, ಭಾವೀ ಮಗಳು ಕೂಡಿ’

ಮೊದಲಿಗೆ ಈ ಸಾಲನ್ನು ಸ್ವಾತಿಮಳೆಯ ಹನಿಯೊಂದು ಸ್ವಾತಿಮುತ್ತಾಗುವ ಹಿನ್ನಲೆಯ ನೇರ ಅರ್ಥದ ಬದಲು, ಅದರ ಮಥಿತಾರ್ಥದಲ್ಲಿ ಹುಡುಕಿ ನೋಡೋಣ.

‘ಚಿತ್ತೀಮಳಿ’ಎಂಬುದನ್ನು ಚಿತ್ತದಿಂದುದ್ಭವಿಸುವ ಪುಂಖಾನುಪುಂಖ ಆಲೋಚನೆಗೂ ಸಮೀಕರಿಸಬಹುದು – ವಿಶೇಷವಾಗಿ ಕಾವ್ಯ ಸೃಷ್ಟಿಯ ದಿಕ್ಕಿನಲ್ಲಿ ಆಲೋಚಿಸಿದಾಗ. ಮಳೆಯಂತೆ ಧಾರಾಕಾರವಾಗಿ ಎಷ್ಟೆಲ್ಲಾ ಆಲೋಚನೆಗಳು, ಹೊಳಹುಗಳು, ಅತಿಶಯವೆನಿಸುವ ಪದಸಾಲುಗಳು ತಟ್ಟನೆ ಹೊಳೆದು ಮನದಲ್ಲಿ ಆವರಿಸಿಕೊಂಡುಬಿಡುತ್ತವೆ. ಆದರೆ ಎಲ್ಲವು ಅದ್ಭುತ ಕವಿತೆಯಾದೀತೆಂದು ಹೇಳಲಾಗದು. ಕೆಲವು ಸರಿಯಾದ ಚಿಂತನೆ, ಕಲ್ಪನೆಯ ಚಿಪ್ಪಿನಲ್ಲಿ ಸೇರಿ ಸ್ವಾತಿಮುತ್ತಿನ ತರಹದ ಉತ್ಕೃಷ್ಟ ಸೃಷ್ಟಿಯಾಗಬಹುದು. ಮತ್ತೆ ಕೆಲವು, ಅಷ್ಟೆಲ್ಲ ಕಸರತ್ತಿನ ನಂತರವೂ ಸಪ್ಪೆಯಾಗಿ, ಕೆಲಸಕ್ಕೆ ಬಾರದ ಖಾಲಿ ಪದಪುಂಜವಾಗಿಬಿಡಬಹುದು. ಕೆಲವೊಮ್ಮೆ ಸ್ಫೂರ್ತಿ ಬಂದ ಹೊತ್ತಲಿ ಆ ಅಮೂರ್ತ ಪದಗಳನ್ನು ಹಿಡಿದು , ಚಿತ್ತದಿಂದ ಮರೆಯಾಗುವ ಮೊದಲೇ ಕಟ್ಟಿಹಾಕದಿದ್ದರೆ , ಅವು ಶಾಶ್ವತವಾಗಿ ಕಳೆದುಹೋಗಿಬಿಡಬಹುದು. ಹಾಗಾಗುವ ಮುನ್ನ ಅದನ್ನು ಮೂರ್ತೀಭವಿಸಿಬಿಡಬೇಕು; ಸ್ವಾತಿಮುತ್ತಿನಂತಹ ಅಪರೂಪದ ಮುತ್ತಾಗಿಸಿಬಿಡಬೇಕು. ಚಿತ್ತವಿಡುವ ತತ್ತಿಯಲ್ಲಿ ಅದೆಷ್ಟೋ ಇಂತಹ ತತ್ತಿಗಳು ಉದ್ಭವವಾದರೂ ನಿಜವಾದ ಮುತ್ತಾಗುವ ಭಾಗ್ಯ ಕೆಲವಕ್ಕೆ ಮಾತ್ರ. ಅದಕ್ಕೆ ಅದನ್ನು ಕಳೆದುಹೋಗದ ಹಾಗೆ, ಹುಟ್ಟುವ ಮೊದಲೇ ಸತ್ತು ಹೋಗದ ಎಚ್ಚರದಿಂದ ಹಿಡಿದಿಟ್ಟುಕೋ ಎನ್ನುವ ಕಾಳಜಿಯನ್ನು ಇಲ್ಲಿ ಕಾಣಬಹುದು.

ಆ ಗಳಿಗೆಯ ಮನದೊಳಗಣ ಹೋರಾಟ, ಗೊಂದಲಗಳು ಈ ಸಾಲಿನ ಇಬ್ಬರು ಮಗಳುಗಳ ರೂಪದಲ್ಲಿ ಇಣುಕುತ್ತದೆ. ಮಗಳು ಎಂದರೆ ಹೆತ್ತವರಿಗೆ ಹೆಚ್ಚು ಪ್ರೀತಿ. ಕವಿಗೆ ಕಾವ್ಯವಾಗುವ ಹೊತ್ತಲಿ ಸೃಷ್ಟಿಸಿದ ಪ್ರತಿ ಪದ, ಸಾಲು, ಭಾವ, ಆಶಯಗಳು ಹೆತ್ತ ಮಗಳಿದ್ದ ಹಾಗೆಯೇ. ಆದರೆ ಎಲ್ಲವು ಸ್ಪಷ್ಟವಿರದ, ಮೂರ್ತಾಮೂರ್ತ ಸಮ್ಮಿಶ್ರ ಗೊಂದಲಗಳ ಕಲಸುಮೇಲೋಗರ ಆ ಗಳಿಗೆ. ಏನೋ ಹುರುಪು, ಉತ್ಸಾಹ ಹುಟ್ಟಿಸಿದಂತೆ ಮೂಡುವ ಸ್ಫೂರ್ತಿಭಾವದನಿಸಿಕೆಯೊಂದು ‘ಠುಸ್’ ಪಟಾಕಿಯಂತೆ ಹುಟ್ಟುವ ಮೊದಲೇ ಸತ್ತುಹೋಗಿಬಿಡಬಹುದು – ಅದನ್ನೇ ‘ ಸಾಯುವ ಈ ಮಗಳು – ಸಾವೀ ಮಗಳು’ ಎನ್ನುವ ಪದಗಳಲ್ಲಿ ಪ್ರತಿನಿಧಿಸಿದಂತಿದೆ. ಅದರ ನಡುವಲ್ಲೇ ಮತ್ತೊಂದಷ್ಟು ಸ್ಫೂರ್ತಿಸರಕು ತಟ್ಟನೆ, ಸುಲಲಿತವಾಗಿ ಹರಿದು ತೃಪ್ತಿನೀಡುವ ಸಾಲಾಗಿಬಿಡಬಹುದು – ಆ ಅನಾವರಣದಲ್ಲಿ ವ್ಯರ್ಥವಾಗದೆ ಮೂರ್ತವಾದ ‘ಭಾವೀ ಮಗಳಾಗುತ್ತಾ’. ಒಟ್ಟಾರೆ ಈ ಇಬ್ಬರು ಮಗಳೂ ಕೂಡಿ ಕುಲುಮೆಯಲ್ಲಿ ಬೇಯಿಸಿ, ಭಟ್ಟಿ ಇಳಿಸಿದ ಪಾಕವೇ ಅಂತಿಮ ರೂಪವಾಗುತ್ತದೆ. ಸಾವೀ ಮಗಳು ಎಂದರೆ ಭೂತಕಾಲದ ಅನುಭವದಿಂದ ಗ್ರಹಿಸಿದ ತಿಳುವಳಿಕೆ ಎಂತಲೂ ಅಂದುಕೊಳ್ಳಬಹುದು.. ಆಗ ಭಾವಿ ಮಗಳು ಎಂದರೆ ಭವಿತದ ಸ್ವರೂಪ. ಭೂತದ ಕೊಂಡಿಯಲ್ಲಿ ಭವಿತವನ್ನು ಸಮೀಕರಿಸಿ ಕಟ್ಟುವ ಅಗತ್ಯ, ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ.

ಈಗ ಇದೆ ಸಾಲನ್ನು ಸ್ವಾತಿ ಮಳೆಹನಿ ಸ್ವಾತಿಮುತ್ತಾಗುವ ನಿಸರ್ಗಸಹಜ ಕ್ರಿಯೆಯ ಹಿನ್ನಲೆಯಲ್ಲಿ ನೋಡೋಣ:

‘ಚಿತ್ತೀ ಮಳಿ’ ಎಂದಾಕ್ಷಣ ತಟ್ಟನೆ ಕಣ್ಮುಂದೆ ನಿಲ್ಲುವ ಚಿತ್ರ ಚಿತ್ತಾ ನಕ್ಷತ್ರದಲ್ಲಿ ಮುಹೂರ್ತವಿಟ್ಟುಕೊಂಡು ಬರುವ ಸ್ವಾತಿಮಳೆ. ಹಾಗೆಂದು ನನ್ನ ಅನಿಸಿಕೆ; ಹಾಗೊಂದು ಸ್ವಾತಿಮಳೆಗೂ-ಚಿತ್ತಾನಕ್ಷತ್ರಕ್ಕೂ ಗಂಟುಹಾಕಬಹುದಾದ ಸಂಬಂಧ ಇದೆಯೋ, ಇಲ್ಲವೇ ನಿಜಕ್ಕೂ ಗೊತ್ತಿಲ್ಲ! ಅದೆಂತೆ ಇರಲಿ, ಮಳೆಯ ವಿಷಯಕ್ಕೆ ಬಂದಾಗ ಸ್ವಾತಿಮಳೆಗೊಂದು ವಿಶಿಷ್ಠ ಸ್ಥಾನವಿದೆ. ಸ್ವಾತಿಮಳೆಯ ಹನಿ, ನೀರೊಡಲಿನಲ್ಲಿರುವ ಮುತ್ತಿನ ಚಿಪ್ಪನು ಸೇರಿ ಅದರೊಳಗಿನ ಸ್ವಾತಿಮುತ್ತಾಗುವುದು ನೈಸರ್ಗಿಕ ಪ್ರಕ್ರಿಯೆಯ ಅದ್ಭುತಗಳಲ್ಲೊಂದು. ಅದು ಕವಿಭಾವದಲ್ಲಿ ವಿಹಂಗಮವಾಗಿ ಅರಳುವ ಪರಿ ನೋಡಿ : ‘ಚಿತ್ತೀಮಳೆ ತತ್ತಿ ಹಾಕುತ್ತಿತ್ತಂತೆ’ ( ಚಿತ್ತೀಮಳೆ ‘ಮುಂದೆ ಮುತ್ತಾಗುವ ತತ್ತಿಯ’ ಮಳೆ ಸುರಿಸುತ್ತಿತ್ತು ) – ಆ ಮುತ್ತಿನೊಳಗೆ. ಆ ಮಳೆಯಿಟ್ಟ ತತ್ತಿ ಪ್ರಬುದ್ಧವಾಗಿ, ಪರಿಪಕ್ವವಾಗಿ ರೂಪುಗೊಳ್ಳುತ್ತ ಮುಂದೆ ಸ್ವಾತಿಮುತ್ತಾಗಬೇಕಾಗಿದೆ. ಅದಕ್ಕೆಂದೇ ಈ ತತ್ತಿಯನಿಡುವ ಕಾಯಕ ಜರುಗುತ್ತಲಿದೆ ಮಳೆ ಹನಿಯ ಸ್ವರೂಪದಲ್ಲಿ.

ಆದರೆ ಹಾಗಿಟ್ಟ ಎಲ್ಲ ಹನಿಯು ಮುತ್ತಾಗುವುದಿಲ್ಲವಲ್ಲ? ಮುತ್ತಾಗಬೇಕಾದರೆ ಸ್ವಾತಿ ಮಳೆಹನಿ ಚಿಪ್ಪಿನೊಳಗೆ ಸೇರಿಕೊಂಡು, ಯಾವುದೋ ನಿರ್ದಿಷ್ಠ ಪ್ರಕ್ರಿಯೆ ನಡೆದು ಸಾಂದ್ರೀಕೃತಗೊಂಡು, ಸ್ವಾತಿಮುತ್ತಿನ ರೂಪಾಂತರವಾಗಬೇಕು. ಎಷ್ಟೋ ತತ್ತಿಗಳು (ಹನಿಗಳು) ಮುತ್ತಾಗದೆ ನಶಿಸಿಹೋಗುವುದುಂಟು, ಕೊಳೆತು ಹೋಗುವುದುಂಟು. ಪುಣ್ಯ ಮಾಡಿದ ಕೆಲವೇ ಹನಿಗಳು ಮಾತ್ರ ಮುತ್ತಾಗುವ ಸಾರ್ಥಕ್ಯ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ಹನಿಯಿಂದ ರೂಪುಗೊಂಡ ತತ್ತಿಗಳಿಗೆ ‘ಮುತ್ತಾಗದೆ ಸತ್ತುಹೋದಿಯಾ, ಸರಿಯಾಗಿ ಸಂಭಾಳಿಸಿಕೋ’ ಎಂದು ಎಚ್ಚರಿಸಿದಂತಿದೆ ಈ ಸಾಲುಗಳ ಭಾವ. ಹಾಗೆಂದು ಎಚ್ಚರಿಸಿದವರು ಯಾರು ? ಅಂದರೆ ಸಾವೀ ಮಗಳು ಮತ್ತು ಭಾವಿ ಮಗಳು ಇಬ್ಬರು ಸೇರಿ. ಯಾರಿವರಿಬ್ಬರು ? ಭೂತ ಮತ್ತು ಭವಿತದ ಪ್ರತೀಕವೆ ? ಮಗಳು ಮತ್ತು ಸೊಸೆಯೆ ? ವಾಸ್ತವ (ಸಾವೀ) ಮತ್ತು ಕಲ್ಪನೆಗಳ (ಭಾವೀ) ಪ್ರತೀಕವೇ ? ಸಾವಿನ ಮತ್ತು ಹೊಸಹುಟ್ಟಿನ ಎರಡು ತುದಿಗಳ ಸಂಕೇತವೆ ? ಜೀವಾತ್ಮ (ಸಾವಿನಲ್ಲಿ ಬಿಡುಗಡೆಯಾಗುವ) ಅಥವಾ ಪರಮಾತ್ಮಗಳ (ಭಾವೀ ಲೋಕದ, ಐಕ್ಯವಾಗಬೇಕಾದ ಅವಿನಾಶಿ ಸ್ವರೂಪ) ಸಂಕೇತಿಸುವ ಬಗೆಯೇ ? ವಿಭಿನ್ನ ಕೋನದಲ್ಲಿ ವಿಭಿನ್ನ ಅರ್ಥ ಹೊರಡಿಸುವ ಪದ ಪ್ರಯೋಗವಿದು. ಆದರೆ ಸ್ವಾತಿಮುತ್ತಿನ ರೂಪುಗೊಳ್ಳುವಿಕೆಯ ಹಿನ್ನಲೆಯಲ್ಲಿ ನೋಡಿದಾಗ ಈ ಮುಂದಿನ ವಿವರಣೆ ಹೆಚ್ಚು ಸಂಗತವೆನಿಸುತ್ತದೆ. ಹನಿ ತತ್ತಿಯ ರೂಪ ಧರಿಸುವುದು ಒಂದು ಘಟ್ಟವಷ್ಟೇ. ಪ್ರತಿ ತತ್ತಿ ಮುತ್ತಾಗುವತನಕ ಅದು ಆಗಿಯೇ ತೀರುವುದೆಂಬ ಭರವಸೆಯಿಲ್ಲ. ಹಾಗೆಯೇ ಮುತ್ತು ಆದಮೇಲು ಅದನ್ನು ಜತನದಿಂದ ಪೋಷಿಸಿ, ಪಕ್ವವಾಗಿಸುವ ಜವಾಬ್ದಾರಿಯಿರುತ್ತದೆ. ಮುತ್ತಾಗುವತನಕ ಸರಿಯಾದ ಆರೈಕೆ ಇರದಿದ್ದರೆ ಹುಟ್ಟುವ ಮೊದಲೇ ಕಮರಿ ಹೋಗುತ್ತದೆ (ಸಾವೀ ಮಗಳು). ಮುತ್ತಾಗತೊಡಗಿದ ಮೇಲೂ ಭಾವೀಮಗಳಾಗುವತನಕ ಸರಿಯಾದ ಪಾಲನೆ ಪೋಷಣೆ ಅಗತ್ಯ. ಎರಡೂ ಸುಗಮವಾಗಿ ನಡೆಯುವಂತಿದ್ದರಷ್ಟೇ ಕೊನೆಗೂ ಅಮೂಲ್ಯಮುತ್ತಾಗಿ ಕೈಸೇರಲು ಸಾಧ್ಯವಾಗುವುದು.

ಇನ್ನು ಜೀವಸೃಷ್ಟಿಯ ದೃಷ್ಟಿಕೋನದಲ್ಲಿ ನೋಡಿದಾಗ ಹೊರಡುವ ಭಾವಗಳೂ ತೀರಾ ವಿಭಿನ್ನವೇನಲ್ಲ.

ಆ ದೃಷ್ಟಿಯಲ್ಲಿ ನೋಡಿದಾಗ, ಕಾಮನೆಯ ಆಲೋಚನೆಯ ಮೂಲ ಚಿತ್ತದಿಂದಲೇ ಹೊರಡುವಂತದ್ದು. ಅದು ಇಚ್ಚಾಶಕ್ತಿಯ ರೂಪದಿಂದ ಕ್ರಿಯಾಶಕ್ತಿಯಾಗಿ ಬದಲಾದಾಗ ಪುರುಷದ ವೀರ್ಯಾಣು ಅಂಡಾಶಯದೊಡನೆ ಸೀಮಿತ ಅವಧಿಯ, ಪರಿಪಕ್ವ ಸನ್ನಿವೇಶದಲ್ಲಿ ಮಿಳಿತವಾದಾಗಷ್ಟೇ ಸೃಷ್ಟಿಕ್ರಿಯೆ ಸಾಧ್ಯ. ಇಲ್ಲವಾದಲ್ಲಿ ಬಿಡುಗಡೆಯಾಗಿ ಹೋದ ವೀರ್ಯಾಣುಗಳು ಫಲಿತವಾಗದೆ ಸಾವನ್ನಪ್ಪುತ್ತವೆ. ಸ್ವಾತಿಮುತ್ತಿನ ಹಾಗೆ ಯಾವುದೋ ಒಂದು ವೀರ್ಯಾಣುವಷ್ಟೇ ಫಲಿತವಾಗಿ ಜನ್ಮತಾಳಲು ಸಾಧ್ಯ. ಅದೊಂದು ಸಾಧ್ಯತೆಯೂ ತಪ್ಪಿಹೋದರೆ, ಸೃಷ್ಟಿಫಲಿತ ಶೂನ್ಯವಾಗಿಬಿಡುತ್ತದೆ. ಅಸಂಖ್ಯಾತವಾಗಿ ಹೊರಟರು ವೀರ್ಯಾಣುಗಳ ಆಯಸ್ಸು ಸೀಮಿತ. ಅಂಡಾಣು ಸಂಗಮವಾಗದಿದ್ದರೆ ಕೆಲದಿನಗಳಲ್ಲಿ ತಂತಾನೇ ಸತ್ತುಹೋಗುವ ‘ಸಾವೀ ಮಗಳು’ ಇವುಗಳೇ. ಆದರೆ ಈ ಹೋಲಿಕೆಯಲ್ಲಿ ಮುಂದೆ ಸೃಷ್ಟಿಸಿದ ಜೀವಿಯಾಗಿ (ಭಾವೀ ಮಗಳಾಗಿ) ರೂಪುಗೊಳ್ಳುವ ಅಂಡಾಣುವಿನ ಆಯಸ್ಸು ಜಾಸ್ತಿ. ಭಾವೀಮಗಳಾಗುವ ಅದು ತನಗೆ ಬೇಕಾದ ಒಂದು ವೀರ್ಯಾಣುವಿನ (ಸಾವೀ ಮಗಳ) ಜೊತೆ ಕೂಡಿಕೊಂಡರೆ ಸಾಕು – ಸೃಷ್ಟಿ ವೇದಿಕೆ ಸಿದ್ಧ. ಆ ಗುಂಪಿನ ಗದ್ದಲದಲ್ಲಿ ಕಳೆದುಹೋಗದೆ ಇವರಿಬ್ಬರು ಹೇಗಾದರೂ ಕೂಡಿಬಿಟ್ಟರೆ ಸಾಕು (ಸಾವೀ ಮಗಳು, ಭಾವೀ ಮಗಳು ಕೂಡಿ). ಹಾಗಾಗುವ ಮೊದಲೇ ಸಾವಿಗೀಡಾದರೆ (ಸತ್ತೀಯೋ ಮಗನಾ) ಜೀವಸೃಷ್ಟಿ ಆಗುವುದಿಲ್ಲ – ಅದಕ್ಕೆ ಇಬ್ಬರು ಮಗಳುಗಳು ಎಚ್ಚರಿಕೆಯಿಂದ ಸಂಭಾಳಿಸಬೇಕು, ನಿಭಾಯಿಸಬೇಕು ಎನ್ನುವ ಜಾಗೃತಗೊಳಿಸುವ ಮಾತು, ಬೇಡಿಕೆಯ ದನಿ ಇಲ್ಲಿ ಇಣುಕುತ್ತದೆ.

ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ ಎರಡನೆಯ ಭಾಗದಲ್ಲಿ ಭೌತಿಕ ಮಟ್ಟದಲ್ಲಿದ್ದ ವಿವರಣೆ ಇಲ್ಲಿ ತಾತ್ವಿಕ ಮತ್ತು ಮಾನಸಿಕ ಸ್ತರಕ್ಕೇರುವ ಪ್ರಬುದ್ಧತೆಯನ್ನು ತೋರುತ್ತದೆ. ಜತೆಜತೆಗೆ ಸಹಜ ಪ್ರಕ್ರಿಯೆಯೆ ಆದರೂ ಅದರಲ್ಲಿರುವ ಸಂದಿಗ್ದಗಳು ಎಷ್ಟೊಂದು ಸೀಮಿತ ನಿರ್ಬಂಧಗಳ ನಡುವೆ ಕಾರ್ಯ ನಿರ್ವಹಿಸಬೇಕು, ಆದ ಕಾರಣ ಎಷ್ಟು ಮುನ್ನೆಚ್ಚರಿಕೆ ಅಗತ್ಯ ಎನ್ನುವುದನ್ನು ಒತ್ತಿ ಹೇಳುತ್ತವೆ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

ಚಿತ್ರಕೃಪೆ: ವಿಕಿಪಿಡಿಯಾ

02048. ನಾಕುತಂತಿಯೊಂದು ಸಾಲು – ೧೧


02048. ನಾಕುತಂತಿಯೊಂದು ಸಾಲು – ೧೧
________________________________


(ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ.)

ಇದು ಎರಡನೇ ಭಾಗದ ಕೊನೆಯ ಸಾಲು. ಮೊದಲ ಭಾಗದ ‘ನಾನು’ವಿನ ಜತೆ ‘ನೀನು’ (ಪ್ರಕೃತಿ ಮತ್ತು ಪುರುಷ) ಸೇರಿಕೊಂಡು ಮಿಲನೋತ್ಸವದಲ್ಲಿ ಏಕವಾಗುವ ಪ್ರಕಟಾಪ್ರಕಟರೂಪ ಈ ಭಾಗದ ಒಟ್ಟು ಸಾರ. ಹಿಂದಿನ ಸಾಲುಗಳಲ್ಲಿ ವಿವರಿಸಿದ್ದು ಮಿಥುನದ ಹಿಂದಿನ ವಿಜ್ಞಾನದ ಕಥನ. ಮನ್ಮಥನ (ಮನ + ಮಥನ) ಪ್ರೇರಣೆಯು ರತಿಭೋಗದ ನೆಲೆಗಟ್ಟಾಗಿ, ಸುಖದ ಅಮಲಲ್ಲಿ ತೇಲಿಸುವ ಸಂತೃಪ್ತಿಯ ಸರಕಾದರೂ ಅದರ ಹಿನ್ನಲೆಯಲ್ಲಿದ್ದುದ್ದು ಸೃಷ್ಟಿಕಾರ್ಯದ ಪ್ರೇರಣೆ ಎಂದು ಸೂಕ್ಷ್ಮವಾಗಿ, ಸೂಚ್ಯವಾಗಿ ಅರುಹಿದವು ಈ ಸಾಲುಗಳು. ಆ ಪ್ರೇರಣೆಯ ಮೂರ್ತರೂಪಾಗಿ ಗರ್ಭದೊಳಗೆ ಅಂಡವೂ ರೂಪುಗೊಂಡಿದ್ದಾಯ್ತು. ಇನ್ನು ಮಿಕ್ಕಿದ್ದು ಬಾಹ್ಯಜಗದಲ್ಲಿ ಅದನ್ನು ಪ್ರಕಟರೂಪದಲ್ಲಿ ಕಾಣುವುದಷ್ಟೇ. ಆ ಬಾಹ್ಯರೂಪಿ ಜನನ ಸ್ವರೂಪವನ್ನು ವಿವರಿಸುತ್ತಿದೆ ಈ ಮುಂದಿನ ಸಾಲು.

ಭೂತದ ಭಾವ..

ಭೂತದ ಭಾವ ಎಂದಾಗ ಭೂತಕಾಲದಲ್ಲಿ ನಡೆದ ಬಿತ್ತನೆ, ಪೋಷಣೆ ಕಾರ್ಯದ ಸಂಕೇತ. ಜತೆಗೆ ಭೂತ ಎಂಬುದು ಭೀತಿಯುಟ್ಟಿಸುವ ಸ್ವರೂಪದ ಸಂಕೇತವು ಹೌದು. ಗರ್ಭ ಧರಿಸಿಯಾದ ಮೇಲೆ ಜೀವದ ಜನನವಾಗುವತನಕ ಅದೊಂದು ಬಗೆಯ ಅದ್ಭುತ ಭಾವಯಾತ್ರೆ. ಹೆಮ್ಮೆ, ಸಂತಸ, ಅಳುಕು, ಖಿನ್ನತೆ, ಜವಾಬ್ದಾರಿ-ಹೊಣೆಗಳೆಲ್ಲದರ ಸಂಗಮರೂಪಾಗಿ ಅನಾವರಣವಾಗುವ ಕ್ರಿಯೆ. ಅದನ್ನು ಅನುಭವಿಸಿಕೊಂಡು ನಿಭಾಯಿಸಬೇಕಾದ ಹೊಣೆ ಪ್ರಕೃತಿರೂಪಿ ಹೆಣ್ಣಿನದು. ಹೆಣ್ಣೆಂದರೆ ಭಾವಜಗದ ಅಲಿಖಿತ ಸಂಕೇತವಿದ್ದಂತೆ. ಆ ಬಸುರಿನ ಸ್ಥಿತಿಯಲ್ಲಿರುವಷ್ಟು ಕಾಲ ಎಲ್ಲಾ ತರದ ಭಾವಗಳಿಗೂ ಒಳಗಾಗುತ್ತ, ನಿಭಾಯಿಸುತ್ತಾ ಜತನದಿಂದ ಮುನ್ನಡೆಯಬೇಕಾದ ಸ್ಥಿತಿ ಅವಳದು. ಆ ಭಾವಫಲದ ಮೂಲ ಪ್ರೇಮವೊ, ಕಾಮವೊ, ಭೀತಿಯ ನೆಲೆಯಲ್ಲುಂಟಾದ ಪೈಶಾಚಿಕ ನೆಲೆಗಟ್ಟೋ – ಒಟ್ಟಾರೆ ಅನುಭವಿಸಿಕೊಂಡು ನಡೆಯಬೇಕು. ಅದೊಂದು ಸಹಜವಾದ, ಹಿತಕರವಾದ ಅನುಭವವಾದಷ್ಟೇ ಹೊಚ್ಚ ಹೊಸತನ ಪರಿಚಯ ಮಾಡಿಸುವ ನೈಸರ್ಗಿಕ ಪ್ರಕ್ರಿಯೆಯು ಹೌದು.

ಉದ್ಭವ ಜಾವ…

ಎಲ್ಲಕ್ಕೂ ಆದಿಯ ಜೊತೆಯೇ ಅಂತ್ಯವೊಂದಿರುತ್ತದೆಯಲ್ಲ ? ಗರ್ಭದೊಳಗೆ ಕತ್ತಲರಾಜ್ಯದಲ್ಲಿ ಕಣ್ಮುಚ್ಚಿಕೊಂಡು ವಿಹರಿಸಿಕೊಂಡಿದ್ದ ಜೀವಕ್ಕೂ ಹೊರಜಗತ್ತಿಗೆ ಕಾಲಿಡುವ ಹೊತ್ತು ಹತ್ತಿರವಾಗುತ್ತದೆ. ಅದರ ನಿಗದಿತ ಕಾಲಚಕ್ರ ಉರುಳಿ ಕತ್ತಲೆಯ ಲೋಕ ಹರಿದು ಬೆಳಗಾಗುತ್ತದೆ – ಶಿಶುವಾಗಿ ಜನಿಸುವ ಮೂಲಕ (ಉದ್ಭವ ಜಾವ). ಅದಮ್ಯ ಕುತೂಹಲ, ನಿರೀಕ್ಷೆಯಿಂದ ಕಾಯುತ್ತಿದ್ದವರಿಗೆಲ್ಲ ಅದೊಂದು ನಸುಕಿನ ಜಾವದ ಅರುಣೋದಯವಾದ ಲೆಕ್ಕ. ಬದುಕಿಗೆ ಹೊಸ ಬೆಳಕು ಬಂದ ಸಂತಸದಲ್ಲಿ ‘ಉದ್ಭವವಾಯಿತು ಹೊಸ ಜಾವ’ ಎಂದು ಕುಣಿದಾಡುತ್ತದೆ ಆ ಜೀವಿಯನ್ಹೆತ್ತ ಮಾತೃ ಹೃದಯ, ಮತ್ತದರ ಸೃಷ್ಟಿಗೆ ಕೈಜೋಡಿಸಿದ ಪುರುಷ ಮನ.

ಮೊಲೆ ಊಡಿಸುವಳು ಪ್ರತಿಭೆ ನವ.

ಇಲ್ಲೊಂದು ಅತಿಶಯದ ವಿಷಯವು ಅಡಕವಾಗಿದೆ. ಮಿಥುನದಲ್ಲಿ ಪುರುಷನೊಡನೆ ಬೆರೆಯ ಬಂದ ಹೆಣ್ಣು ತನ್ನ ಒನಪು, ಒಯ್ಯಾರ, ಶೃಂಗಾರ ಭಾವಗಳಿಂದ ಅವನನ್ನಾಕರ್ಷಿಸಿ ಸುಖವನ್ನುಣಿಸುವ ರತಿ ಸ್ವರೂಪದಲ್ಲಿ ವಿಜ್ರುಂಭಿಸಿದ್ದವಳು. ಆದರೆ ಅದರ ಫಲಿತ ಗರ್ಭದ ಜೀವವಾದಾಗ ಅಲ್ಲಿ ಏಕಾಏಕಿ ಮಾತೆಯ ಮಮತಾಭಾವ ಉದ್ಭವಿಸಿಬಿಡುತ್ತದೆ! ಆ ಬೆಳಕಿನ ರೂಪದ ಸೃಷ್ಟಿಯ ಫಲಿತ ಮಡಿಲ ಕೂಸಾದಾಗ, ಕಾಮನೆಯ ಅಮಲಿಲ್ಲ ಕರಗಿ ಹೋಗಿ, ಅಲ್ಲಿ ಮಿಕ್ಕುಳಿಯುವುದು ಕೇವಲ ಮಾತೃಪ್ರೇಮವಷ್ಟೆ. ಅಲ್ಲಿಯವರೆಗೂ ಕಾಮನ ತೋಟದ ಅರಗಿಣಿಯೆನಿಸುವಂತಿದ್ದ ಚಂಚಲ ಭಾವದ ಹುಡುಗಿಯಲ್ಲೂ ತಾಯ್ತನದ ಗಾಂಭೀರ್ಯವೆಂಬ ನವ ಪ್ರತಿಭೆ ಜಾಗೃತವಾಗಿ, ಹೆತ್ತ ಕಂದನಿಗೆ ಮೊಲೆಯೂಡಿಸುತ್ತ ಸಾರ್ಥಕ ಭಾವವನ್ನು ಕಾಣುತ್ತದೆ. ಅದಕ್ಕೂ ಮೊದಲು ಚಂಚಲ ಹೆಣ್ಣಾಗಿ, ಚೆಲ್ಲುಚೆಲ್ಲಾಗಿ ವರ್ತಿಸುವ ಎಳಸು ಹುಡುಗಿಯಾಗಿ ಕಾಣಿಸಿದ್ದವಳು, ಈಗ ಯಾವುದೋ ಮಾಯೆಯಲ್ಲಿ ಪರಿವರ್ತನೆಯಾದವಳಂತೆ ಗಾಂಭೀರ್ಯ, ಜವಾಬ್ದಾರಿಕೆ, ಪರಿಪಕ್ವತೆ, ಅನುಭವಗಳ ಸಂಗಮರೂಪಿಯಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡುಬಿಡುತ್ತಾಳೆ – ಯಾವುದೇ ತರಬೇತಿನ ಅಗತ್ಯವಿಲ್ಲದೆಯೂ. ಆ ರೂಪಾಂತರದ ಪರಿಯನ್ನು, ಹುಡುಗಾಟದಿಂದ ಗಾಂಭಿರ್ಯತೆಯ ಪಟ್ಟಕ್ಕೇರುವ ಚಾಕಚಕ್ಯತೆಯನ್ನು ಕಂಡು ‘ಇದೆಂಥ ನವ ಪ್ರತಿಭೆ, ತಟ್ಟನೆ ವಿಕಸಿಸಿಬಿಟ್ಟಿದೆಯಲ್ಲ’ ಎಂದು ಅಚ್ಚರಿ ಪಡುವಂತಾಗುತ್ತದೆ. !’ ಬಾಲೆಯಂತೆ ಆಡುತ್ತಿದ್ದ ಹುಡುಗಿ ಫ್ರೌಢತೆಯಿಂದ, ಜನಿಸಿದ ಶಿಶುವಿಗೆ ಮೊಲೆಯೂಡಿಸುತ್ತ ಮಾತೃತ್ವದ ಧಾರೆಯೆರೆಯುತ್ತ ತನ್ನ ಹೊಸ ಪ್ರತಿಭೆಯನ್ನು ನಿಸ್ಸಂಕೋಚವಾಗಿ ಮತ್ತು ಸಹಜವಾಗಿ ತೋರಿಸಿಕೊಂಡಾಗ – ಆ ಹುಡುಗಿ ಈ ತಾಯಿ ಇಬ್ಬರು ಒಬ್ಬರೇನಾ ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗುತ್ತದೆ. ಆ ಹೊತ್ತಿನಲ್ಲಿ ಸೃಷ್ಟಿಯ ಭೂತಕಾಲದ ಬಿತ್ತನೆ ಹೇಗಿತ್ತೆನ್ನುವ ಪರಿಗಣನೆ ಬರುವುದಿಲ್ಲ; ಫಲಿತ ಅಂದುಕೊಂಡಂತಿರಲಿ, ಇಲ್ಲದಿರಲಿ – ಹೇಗಿದ್ದರೂ, ಯಾವುದೇ ರೀತಿಯಲ್ಲಿ ಬಂದಿದ್ದರು, ಅದನ್ನು ತಾಯ್ತನದ ಪ್ರೇಮದ ಮಡಿಲಲ್ಲಿ ಕಟ್ಟಿಹಾಕಿ ಸಂತೃಪ್ತಗೊಳ್ಳುತ್ತದೆ ಮಾತೃಭಾವ.

ಇದೇ ಭಾವ ಕಾವ್ಯ ಸೃಷ್ಟಿಯಲ್ಲೂ ಕಾಣಿಸಿಕೊಳ್ಳುತ್ತದೆ. ಎಷ್ಟೆಲ್ಲಾ ನೋವು, ವೇದನೆ ಅನುಭವಿಸಿ ಪ್ರಸವವಾಗುವ ಕಾವ್ಯದ ಮೂಲ ಸೃಷ್ಟಿಯಲ್ಲೂ ನೋವು, ನಲಿವು, ಸಂಕಟ, ಸಂತಸ ಇತ್ಯಾದಿಗಳ ಭೂತದ ಛಾಯೆ ಗಾಢವಾಗಿರುತ್ತದೆ. ಹೀಗಾಗಿ ಬರುವ ಸೃಷ್ಟಿಯೆಲ್ಲ ಅದ್ಭುತವೆಂದೇ ಹೇಳಲಾಗುವುದಿಲ್ಲ. ಆದರೆ ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಹಾಗೆ ಕವಿ ಹೃದಯಕ್ಕೆ ಪ್ರತಿ ಕಾವ್ಯವು ಆಪ್ಯಾಯವೆ. ಪ್ರತಿಯೊಂದಕ್ಕೂ ಒಂದೇ ರೀತಿಯ ಮಾತೃಪ್ರೇಮ ದೊರಕುತ್ತದೆಯೆನ್ನುವುದು ಇಲ್ಲಿ ವ್ಯಕ್ತವಾಗಿದೆ.

ಭೂಮಿಯ ಬಸಿರ ಸೀಳಿ ಬೆಳೆಯಾಗುವ ಸೃಷ್ಟಿ ಪ್ರಕ್ರಿಯೆಯಲ್ಲಿ – ಅಷ್ಟೇಕೆ, ಯಾವುದೇ ಸೃಷ್ಟಿ ಪ್ರಕ್ರಿಯೆಯಲ್ಲೂ ಈ ಭಾವ ಅಂತರ್ಗತವಾಗಿರುತ್ತದೆಯೆನ್ನುವುದು ಇಲ್ಲಿ ಗಮನಾರ್ಹ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

02047. ನಾಕುತಂತಿಯೊಂದು ಸಾಲು – ೧೦


02047. ನಾಕುತಂತಿಯೊಂದು ಸಾಲು – ೧೦


(ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವದೊ ನಾ ತಿಳಿಯೆ.)

ಹಿಂದಿನ ಸಾಲುಗಳಲ್ಲಿ ವೀರ್ಯಾಣು ಅಂಡಾಣುಗಳ ಸಂಯೋಗದ ಪ್ರಸ್ತಾಪವಾದಾಗ ಎಷ್ಟೋ ಕೆಲವರಿಗೆ ಸಂಶಯ ಬಂದಿರಲೂಬಹುದು – ಈ ಅರ್ಥ ವಿವರಣೆ ಸರಿಯಾದ ತರ್ಕವೇ, ಅಲ್ಲವೇ ? ಎಂದು. ಆ ಅನುಮಾನಕ್ಕೊಂದು ಪೂರ್ಣವಿರಾಮ ಹಾಕಿ ಆ ಸಂಶಯವನ್ನು ನಿವಾರಿಸಲೇನೋ ಎಂಬಂತೆ ಮೂಡಿ ಬಂದಿದೆ ಈ ಹತ್ತನೇ ಸಾಲು. ಅದರಲ್ಲೂ ‘ಬಸರಿನ ಮೊಳಕೆ’ ಎನ್ನುವ ಪದಪುಂಜದಲ್ಲಿ ಈ ಸಂಬಂಧದ ನೇರ ಕೊಂಡಿ ಢಾಳಾಗಿ ಕಾಣಿಸಿಕೊಂಡಿದೆ. ಈ ಪೀಠಿಕೆಯೊಂದಿಗೆ ಹತ್ತನೇ ಸಾಲನ್ನು ಪರಿಶೀಲಿಸೋಣ. ಈ ಸಾಲನ್ನು ಹಿಂದಿನ ಸಾಲುಗಳೊಡನೆ ಸಮೀಕರಿಸಿ ಅರ್ಥೈಸಿದರೆ, ಸೃಷ್ಟಿಪ್ರಕ್ರಿಯೆಯ ಮುಂದಿನ ಭಾಗದ ವಿವರಣೆಯ ಕೊಂಡಿಯಾಗಿರುವುದು ಕೂಡ ಸ್ಪಷ್ಟವಾಗಿ ಎದ್ದು ಕಾಣುತ್ತದೆ.

ಬೆಚ್ಚಿದ ವೆಚ್ಚವು, ಬಸರಿನ ಮೊಳಕೆ..

ಒಂಭತ್ತನೇ ಸಾಲಿನಲ್ಲಿ ಅಂಡಾಣು, ವೀರ್ಯಾಣು ಮಿಲನವಾಗುವ ಪ್ರಸ್ತಾಪ ಮತ್ತು ತನ್ಮೂಲಕ ಅಂಡದ ಉತ್ಪನ್ನವಾಗುವ ‘ಹುಟ್ಟದ ಹುಟ್ಟಿನ’ ಕುರಿತಾಗಿಯೂ ವಿವರಿಸಲ್ಪಟ್ಟಿತ್ತು. ಆ ಸಂಯೋಗದ ಕ್ರಿಯೆಯ ಮತ್ತಷ್ಟು ಆಳದ ತಾಂತ್ರಿಕ ವಿವರಣೆ ಇಲ್ಲಿ ಪ್ರಸ್ತಾಪವಾಗಿರುವ ಅಂಶ. ಮೊದಲಿನೆರಡು ಪದಗಳಾದ ‘ಬೆಚ್ಚಿದ ವೆಚ್ಚವು’ – ಇವುಗಳಲ್ಲಿ ಬೆಚ್ಚಿದ್ದೇನು ? ವೆಚ್ಚವಾದದ್ದೇನು ?ಎನ್ನುವುದು ಮೊದಲು ಪರಿಗಣಿತವಾಗಬೇಕಾದ ವಿಷಯ. ಮೊದಲಿಗೆ ವೆಚ್ಚದ ಕುರಿತು ನೋಡೋಣ. ಇಲ್ಲಿ ವೆಚ್ಚವೆಂದಾಗ ಮಿಲನ ಪ್ರಕ್ರಿಯೆಯ ಅಂತಿಮದಲ್ಲಿ ವ್ಯಯವಾದ (ವೆಚ್ಚವಾದ) ವೀರ್ಯಾಣು ಎಂದು ಭಾವಿಸಬಹುದು. ಬಸಿರಿನ ಮೊಳಕೆಯಾಗಲು ಇದು ತಾನೇ ಆಗಬೇಕಾದ ನಿಸರ್ಗ ಸಹಜ ಕ್ರಿಯೆ? ಆದರೀ ವೆಚ್ಚದಲ್ಲಿ ಬೆಚ್ಚುವ ಭಾವ ಎಲ್ಲಿಂದ ಬಂತು ? ಅಗತ್ಯಕ್ಕಿಂತ ಹೆಚ್ಚು ವ್ಯಯವಾದಾಗ ತಾನೇ ನಾವು ಬೆಚ್ಚಿಬೀಳುವುದು ? ಬೆಚ್ಚುವ ಎಂದಾಗ ಬೆಚ್ಚಿ ಬೀಳುವುದು ಮಾತ್ರವಲ್ಲದೆ ಬೆಚ್ಚಗಾಗುವ ಎಂದೂ ಅರ್ಥೈಸಬಹುದೇ ? ಹೀಗೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಉತ್ತರ ಹುಡುಕೋಣ.

ಸ್ಖಲನದ ನಂತರ ಕೋಟ್ಯಂತರ ವೀರ್ಯಾಣುಕಣಗಳು ಒಂದೇ ಗಮ್ಯದತ್ತ (ಏಕಮಾತ್ರ ಅಂಡಾಣುವಿನತ್ತ) ಧಾಳಿಯಿಟ್ಟಾಗ, ಆ ಒಬ್ಬಂಟಿ ಕಣವು ಅತಿ ವೇಗದ ಸಮಗ್ರ ಧಾಳಿಗೆ ಕಂಗಾಲಾದಂತೆ ಬೆಚ್ಚಿ ಬೀಳುವುದು ಸಹಜ ತಾನೇ ? ಗುಂಪಲ್ಲಿ ಬಂದು ದಾಂಧಲೆ ಎಬ್ಬಿಸಿದರೂ, ಈ ಸಮೂಹದಲ್ಲಿ ಯಾವುದೊ ಒಂದು ವೀರ್ಯಾಣು ಮಾತ್ರವೆ ಬಸರಿನ ಮೊಳಕೆಗೆ ಶ್ರೀಕಾರ ಹಾಕಬಲ್ಲಂತದ್ದು. ಆ ಒಂದು ಭಾಗ್ಯಶಾಲಿ ಹನಿ (ಕಣ), ಮಿಕ್ಕ ಆ ಕೋಟಿ ಕಣಸಮೂಹದಲ್ಲಿ ಬಚ್ಚಿಟ್ಟುಕೊಂಡಿದೆ; ಆ ಅಸಂಖ್ಯಾತ ಗಣಸಮೂಹದಲ್ಲಿ, ಅದಾವ ವೀರ್ಯಾಣುವಿಗೆ ಬಸರಿನ (ತನ್ಮೂಲಕ ಹುಟ್ಟಿನ, ಸೃಷ್ಟಿಯ) ಅಧಿಕಾರ ಸಿಗುವುದೋ ಯಾರಿಗೂ ತಿಳಿಯಲಾಗದು. ಅದು ಸಹಜ ಮಿಲನದ ತೃಪ್ತಾತೃಪ್ತ ಪ್ರಕ್ರಿಯೆಯ ಹಿನ್ನಲೆಯಲ್ಲೆ ನಡೆಯುವ ಅಂತರಾಳದ ನಿಗೂಢ ಪ್ರಕ್ರಿಯೆ. ಕವಿಗೆ ಆ ನಿಗೂಢತೆಯಲ್ಲೂ ಅರಿವಾಗದ ವಿಸ್ಮಯ – ಸೃಷ್ಟಿಕ್ರಿಯೆಗೆ ಬೇಕಾದ್ದು ಕೇವಲ ಒಂದು ವೀರ್ಯಾಣು ಕಣ; ಆದರೆ ಸಮಾಗಮದಲ್ಲಿ ಬಿಡುಗಡೆಯಾಗುವ, ವ್ಯಯವಾಗುವ, ವೆಚ್ಚವಾಗುವ ಕಣಗಳ ಸಂಖ್ಯೆ ಕೋಟಿ,ಕೋಟಿ ! ಯಾಕಿಷ್ಟು ಬೆಚ್ಚಿಬೀಳಿಸುವಂತಹ ದುಂದು ವೆಚ್ಚ ? ಈಗಿನ ಆಧುನಿಕ ಲೆಕ್ಕಾಚಾರ, ಪರಿಮಾಣಗಳನ್ನು ಗಣನೆಗೆ ತೆಗೆದುಕೊಂಡರೆ ‘ ಇದೆಂತಹ ವೇಸ್ಟ್ (ವ್ಯರ್ಥ ಬಳಕೆ) ಅನಿಸುವುದಿಲ್ಲವೇ? ಯಾಕೋ ಇದೊಂದು ದಕ್ಷತೆಯಿಲ್ಲದ, ಕ್ಷಮತೆಯಿಲ್ಲದ ಅನಿಯಂತ್ರಿತ ಪ್ರಕ್ರಿಯೆಯಿದ್ದಂತಿದೆಯಲ್ಲ ?’ ಎಂದೆನಿಸಿಬಿಟ್ಟಿದೆ. ಹಾಗೆ ಆಲೋಚಿಸುತ್ತಾ , ‘ವೀರ್ಯಾಣು ಕಡಿಮೆಯಿದ್ದಾಗ ಅದು ಅಂಡಾಣುವಿಗೆ ಡಿಕ್ಕಿ ಹೊಡೆದು ಅದರೊಡನೆ ಸಂಯೋಗವಾಗುವ ಸಾಧ್ಯತೆ ಕಡಿಮೆ. ಬಹುಶಃ ಅಂಡಾಣು-ವೀರ್ಯಾಣು ಮಿಲನವಾಗುವ ಸಾಧ್ಯತೆಯನ್ನು ಅಮಿತಗೊಳಿಸಲೋಸುಗ ನಿಸರ್ಗ ಈ ವಿಧಾನ ಅನುಸರಿಸಿರಬೇಕು’ ಎಂದು ತರ್ಕಿಸುತ್ತದೆ. ಹೀಗಾಗಿ ‘ಬೆಚ್ಚಿಬೀಳುವಷ್ಟು ಮೊತ್ತದ ವೀರ್ಯಾಣು ವೆಚ್ಚವಾಗುತ್ತಿದೆ’ಯೆನ್ನುವ ಉದ್ಗಾರವು ‘ಬೆಚ್ಚಿದ ವೆಚ್ಚವು’ ಎನ್ನುವ ರೂಪದಲ್ಲಿ ಮೂಡಿಬಂದಿದೆ.

ಅಂತೆಯೇ ಶಕ್ತಿ ವ್ಯಯವಾಗುವ ಯಾವುದೇ ಯಾಂತ್ರಿಕ ಕ್ರಿಯೆಯಲ್ಲಿ ಸಹಜವಾಗಿ ಶಾಖದ ಉತ್ಪಾದನೆಯಾಗುತ್ತದೆ ಮತ್ತು ಅದರಿಂದಾಗಿ ಬಿಸಿಯ (ಬೆಚ್ಚನೆಯ) ಅನುಭವವಾಗುವುದು ಸಹಜ. ಆ ಹಿನ್ನಲೆಯಲ್ಲಿ ಬೆಚ್ಚಿದ ವೆಚ್ಚ, ಶಾಖದಿಂದ ಕೂಡಿದ ಬೆಚ್ಚನೆಯ ವೆಚ್ಚವೂ ಆಗಬಹುದು. ಮಿಲನದ ಹೊತ್ತಲ್ಲಿ ಬೆಚ್ಚಗಾಗುವ ತನುಮನಗಳ ಇಂಗಿತ ಇದೆಂದುಕೊಳ್ಳಲು ಅಡ್ಡಿಯಿಲ್ಲ.

ಈ ಸಾಲಿನ ಮುಂದಿನ ಪದಗಳು ‘ಬಸರಿನ ಮೊಳಕೆ’. ಹಿಂದಿನ ಪದಗಳ (= ಬೆಚ್ಚಿದ ವೆಚ್ಚವು) ಅರ್ಥಕ್ಕೆ ತಾರ್ಕಿಕವಾಗಿ ಜೋಡಿಸಿದರೆ ಈ ಪದಗಳ ಅರ್ಥ ಆಯಾಚಿತವಾಗಿ ಗ್ರಹಿಕೆಗೆ ಸಿಕ್ಕಿಬಿಡುತ್ತದೆ. ‘ಬೆಚ್ಚಿದ ವೆಚ್ಚವು’ ಅರ್ಥಾತ್ ಅಂಡಾಣುವನ್ನು ಮುಟ್ಟುವ ವೀರ್ಯಾಣುವು, ತನ್ನ ಹೋರಾಟದಲ್ಲಿ ಮಿಕ್ಕೆಲ್ಲವನ್ನು ಅಧಿಗಮಿಸಿ ಅಂತಿಮವಾಗಿ ಅಂಡಾಣುವಿನೊಳಗೆ ಯಶಸ್ವಿಯಾಗಿ ಹೊಕ್ಕು ಅಂಡವಾಗುತ್ತ ‘ಬಸರಿನ ಮೊಳಕೆಗೆ’ ಕಾರಣವಾಗುತ್ತದೆ.

ಇದಾದ ನಂತರವೂ ಕವಿಯ ಜಿಜ್ಞಾಸೆ ಇನ್ನು ಮುಗಿದಿಲ್ಲವೆನ್ನುವುದನ್ನು ಸಾರುವ ಸಾಲು…’ಬಚ್ಚಿದ್ದಾವದೊ ನಾ ತಿಳಿಯೆ..’ ಅದೇನಿರಬಹುದೆಂದು ಈಗ ಗಮನಿಸೋಣ. ಅದನ್ನು ವಿವರಿಸಲು ಈಗಾಗಲೇ ಹೇಳಿರುವ ಅಂಶಗಳನ್ನೇ ಮತ್ತೊಮ್ಮೆ ಪುನರುಚ್ಚರಿಸಬೇಕಾದ ಅಗತ್ಯವಿದೆ – ಹಿನ್ನಲೆಯ ಪೂರಕ ವಿವರಣೆಯ ರೂಪದಲ್ಲಿ.

ಕೋಟ್ಯಾನುಕೋಟಿ ವೀರ್ಯಾಣು ಕಣಗಣ ಬಿಡುಗಡೆಯಾದಾಗ ಅದರಲ್ಲಿ ಬಚ್ಚಿಟ್ಟುಕೊಂಡಿರುವ ಯಾವುದೋ ಒಂದು ಕಣ ಮಾತ್ರ ಯಶಸ್ವಿಯಾಗಿ ಬಸಿರಿಗೆ ಮೊಳಕೆಯಾಗುತ್ತದೆ ಎಂದು ಅರಿತಾಯ್ತು. ಆದರೆ ಆ ಒಂದು ಅದೃಷ್ಟಶಾಲಿ ವೀರ್ಯಾಣು ಯಾವುದಿರಬಹುದು ಎನ್ನುವುದು ಮೊದಲೇ ಗೊತ್ತಿರುವುದಿಲ್ಲ ಎನ್ನುವುದನ್ನೂ ತಿಳಿದಾಯ್ತು. ಇದೊಂದು ಪೂರ್ತಿ ಸಂಭವನೀಯತೆಯ ನಿಯಮದನುಸಾರ ನಡೆಯುವ ಅನಿಯಂತ್ರಿತ ಪ್ರಕ್ರಿಯೆ; ಬಿಡುಗಡೆಯಾಗುವ ವೀರ್ಯಾಣುಧಾರೆಯ ಕಣಗಳಿಗೂ ತಮ್ಮಲ್ಲಿ ಯಾರಿಗೆ ಸಂಯೋಗದ ಋಣವಿದೆಯೆಂದು ಗೊತ್ತಿರುವುದಿಲ್ಲ. ಅದರ ಸೃಷ್ಟಿಕರ್ತ ಪುರುಷನಿಗೂ ಕೂಡ ಆ ಬಚ್ಚಿಟ್ಟುಕೊಂಡ ಗುಟ್ಟಿನ ಕಣ ಯಾವುದೆಂದು ಗೊತ್ತಿರುವುದಿಲ್ಲ ಮತ್ತು ಅದರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ ಎಂದು ತರ್ಕಿಸಿದ್ದಾಯ್ತು. ಸುಖದ ಚರಮಸೀಮೆಯನ್ನೇರಿಸುವ ಮಿಲನಕ್ರಿಯೆಯಲ್ಲಿ, ಅದರಲ್ಲಿ ಭಾಗವಹಿಸುವ ಪಾಲುದಾರರು ಸಹ ಅಂತಿಮ ಫಲಿತದ ಮೇಲೆ ಯಾವ ಪ್ರಭಾವವನ್ನೂ ಬೀರಲಾಗದ ಅಸಹಾಯಕತೆಯಿಂದ, ಆ ಫಲಿತಾಂಶವನ್ನು ಸ್ವೀಕರಿಸಬೇಕೆನ್ನುವುದೇ ಒಂದು ರೀತಿಯ ವಿಪರ್ಯಾಸವೆನ್ನಬಹುದು. ಆ ಕ್ಷಣದಲ್ಲಿ ಋಣ, ಕರ್ಮಫಲ, ದೈವೇಚ್ಛೆ – ಇತ್ಯಾದಿಗಳೆಲ್ಲದರ ಹೆಸರಿನಲ್ಲಿ ಬಂದ ಫಲಿತವನ್ನು ಬಂದ ಹಾಗೆ ಸ್ವೀಕರಿಸಬೇಕು.ಸ್ವತಃ ತಮ್ಮದೇ ಸೃಷ್ಟಿಫಲಿತ ಉನ್ನತ ಮಟ್ಟದ್ದೋ, ಅಲ್ಲವೋ ಎನ್ನುವುದರ ತೀರ್ಮಾನದಲ್ಲಿ, ಕಾರಣಕರ್ತರ ವಶೀಲಿಬಾಜಿ ಒಂದಿನಿತು ನಡೆಯದ, ನಿಸರ್ಗದ ವಿಶಿಷ್ಠ ಸ್ವಯಂಚಾಲಿತ ಪ್ರಕ್ರಿಯೆ ಇದೆನ್ನಬಹುದು. ಒಟ್ಟಾರೆ ಈ ಬಸಿರು ತನ್ನೊಳಗೆ ಬಚ್ಚಿಟ್ಟುಕೊಂಡ ಫಲಿತ ಯಾವುದೆನ್ನುವುದನ್ನು ನಾನೂ ಅರಿಯೆ. ನಾನೇ ಅದರ ಕಾರಣ ಪುರುಷನಾದರೂ, ನಾನು ಕೂಡ ಅದನ್ನು ನಿಯಂತ್ರಿಸಲಾರೆ ಎನ್ನುವ ಸತ್ಯದ ಅರಿವಾಗುತ್ತದೆ ಜೀವಿಗೆ . ಹೀಗಾಗಿ, ಆದದ್ದೆಲ್ಲ ಆದಮೇಲೆ ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವುದಷ್ಟೇ ನಮಗುಳಿದ ಹಾದಿ ಎನ್ನುವುದನ್ನು ಮಾರ್ಮಿಕವಾಗಿ ಸೂಚಿಸುತ್ತಿದೆ ಈ ಪದಗುಚ್ಛ. ಇದು ಸೃಷ್ಟಿಕ್ರಿಯೆಗೆ ಮಾತ್ರವಲ್ಲ, ಜೀವನದ ಪ್ರತಿ ಪ್ರಕ್ರಿಯೆಗೂ ಅನ್ವಯವಾಗುವ ಸರಳ ಸತ್ಯವೆನ್ನಬಹುದೇನೋ.

ಇದೇ ಭಾವ ಕಾವ್ಯವೊಂದರ ಸೃಷ್ಟಿಯ ನೆಲೆಗಟ್ಟಿನಲ್ಲೂ ಅನ್ವಯವಾಗುತ್ತದೆ. ಯಾವುದೊ ಕಿಡಿ ಹೊತ್ತಿದ ಹೊತ್ತಲ್ಲಿ ಸ್ಫೂರ್ತಿಯ ಹನಿ ಸಿಡಿದಾಗ ಎಲ್ಲಾ ಹನಿಗಳು ಭವ್ಯ ಕಾವ್ಯದ ಸುಶ್ರಾವ್ಯ ಮುನ್ನುಡಿಯಾಗಲಾಗದು. ಕೆಲವು ಹನಿಯಾಗುವ ಮೊದಲೇ ಕರಗಿಹೋಗುತ್ತವೆ. ಕೆಲವು ಬೆಚ್ಚಿಸಬಲ್ಲ (ಬೆಕ್ಕಸ ಬೆರಗಾಗಿಸಬಲ್ಲ) ಅಗಾಧ ಸಾಮರ್ಥ್ಯದ ಮೂಲಬೀಜ ಹೊತ್ತುಕೊಂಡು ಅದ್ಭುತ ಸೃಷ್ಟಿಗೆ ನಾಂದಿಯಾಗುತ್ತದೆ. ಆದರೆ ಯಾವ ಹನಿ ಬಸಿರಿನ ಮೊಳಕೆ ಬಿತ್ತಿ, ಪ್ರಸವ ವೇದನೆಯ ಹಂತವನ್ನೆಲ್ಲ ದಾಟಿ ಮೂರ್ತರೂಪಿ ಕಾವ್ಯವಾಗುವುದೊ ಎನ್ನುವುದನ್ನು ಸ್ವತಃ ಕವಿಯೂ ಅರಿತಿರುವುದಿಲ್ಲ. ಅಂತೆಯೇ ಯಾವ ಫಲಿತದ ಸಾಲು ಅದ್ಭುತ ಕಾವ್ಯದ ಸರಕಾಗುವುದೋ, ಯಾವುದು ಸತ್ವವಿಲ್ಲದ ನಿಸ್ತೇಜ ಪದಪುಂಜವಾಗುವುದೋ ಹೇಳಲಸದಳ. ಒಟ್ಟಾರೆ ಸೃಷ್ಟಿಯ ಯಾಂತ್ರಿಕ ಪ್ರಕ್ರಿಯೆಯಲ್ಲಿ, ನಮಗೆ ವಹಿಸಿದ ಜವಾಬ್ದಾರಿಯನ್ನು ನಿಯಂತ್ರಿಸುವ ಯಂತ್ರದ ಭಾಗಗಳಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದರೂ, ಅದರ ಫಲಿತ ಭಾಗ ಮಾತ್ರ ಅರಿವಿನ ಪರಿಧಿಗೆ ಮೀರಿದ ಸ್ತರದಲ್ಲಿ ನಡೆಯುವ ಅಭೌತಿಕ, ಅಲೌಕಿಕ ಪ್ರಕ್ರಿಯೆ ಎನ್ನುವ ಭಾವವನ್ನು ಇಲ್ಲಿ ಕಾಣಬಹುದು. ನಮ್ಮ ಕೈಯಲ್ಲೇನಿದೆ, ಎಲ್ಲಾ ವಿಧಿಲಿಖಿತ, ಎಲ್ಲಾ ದೈವ ನಿಯಮ – ಇತ್ಯಾದಿ ಉದ್ಗಾರಗಳೆಲ್ಲದರ ಮೂಲ ಇಂತಹ ನಿಯಂತ್ರಿಸಲಾಗದ ಅಸಹಾಯಕ ಸ್ಥಿತಿಯಲ್ಲೆ ಹುದುಗಿರಬಹುದೇನೋ!

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

02046. ನಾಕುತಂತಿಯೊಂದು ಸಾಲು – ೯


02046. ನಾಕುತಂತಿಯೊಂದು ಸಾಲು – ೯


(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

ಈ ಸಾಲಿಗೆ ಕೂಡ ಅದೆಷ್ಟೋ ವಿಭಿನ್ನಾರ್ಥಗಳ ಸಾಧ್ಯತೆ ಕಾಣಿಸುತ್ತಿದೆ. ಮೊದಲಿಗೆ ಇದರ ನೇರ, ಸರಳ ಸಾಧ್ಯತೆಯನ್ನು ಗಮನಿಸೋಣ. ಈ ಸಾಲಿನಲ್ಲಿ ಜೇನಿನ ಪ್ರಸ್ತಾಪ ಬಂದಿರುವುದರಿಂದ ಅದಕ್ಕೆ ಪೂರಕವಾಗಿಯೇ ಮೊದಲು ಅರ್ಥೈಸೋಣ – ಪದಪದವಾಗಿ.

‘ಮುಟ್ಟದ’ ಎಂದರೆ ಮುಟ್ಟಲಾಗದ (ಯಾಕೆಂದರೆ ನೆಲದಿಂದ ಎತ್ತರದಲ್ಲಿ, ಕೈಗೆ ಸಿಕ್ಕದ ಜಾಗದಲ್ಲಿದೆ ಜೇನುಗೂಡು); ‘ಮಾಟದ’ ಎಂದರೆ ಮಾಟವಾದ (ಯಾಕೆ ಮಾಟವಾಗಿದೆ, ವಿಶೇಷವಾಗಿದೆಯೆಂದರೆ – ಗುರುತ್ವಕ್ಕೆ ವಿರುದ್ಧವಾಗಿ ಮೇಲಿಂದ ಕೆಳಗೆ ಕಟ್ಟಿದ ವಿಶಿಷ್ಠ ವಿನ್ಯಾಸದ ಗೂಡದು) ; ‘ಹುಟ್ಟದ’ ಅಂದರೆ ‘ಹುಟ್ಟು + ಅದ’ = ಹುಟ್ಟು+ ಇದೆ = ಹುಟ್ಟೊಂದಿದೆ (ಜೇನಿನ ಹುಟ್ಟೊಂದು ಅಲ್ಲಿದೆ). ‘ಹುಟ್ಟಿಗೆ’ ಅಂದರೆ ಆ ಜೇನುಹುಟ್ಟಿಗೆ, ಆ ಜೇನುಗೂಡಿಗೆ ; ಜೇನಿನ ಥಳಿಮಳಿ = ಜೊಂಪೆ ಜೊಂಪೆ ಜೇನುಗಳ ಮುತ್ತಿಗೆ, ಆವರಿಸುವಿಕೆ – ಒಂದೆಡೆ ತಳಮಳದಿಂದ ಧಾಳಿಯಿಕ್ಕುವ ಸೈನ್ಯದ ಹಾಗೆ ಅನಿಸಿದರೆ, ಮತ್ತೊಂದೆಡೆ ಗೂಡಿನ ತುಂಬಾ ಜೇನಿನ ತಳಿಯ ಮಳೆಯೇ ಆಗಿಬಿಟ್ಟಿದೆಯೇನೋ – ಎನ್ನುವ ಹಾಗೆ ಗೂಡನ್ನು ಪೂರ್ತಿ ತಮ್ಮಲ್ಲೇ ಮುಚ್ಚಿಟ್ಟುಕೊಂಡಿವೆ. ‘ಸನಿಹ ಹನಿ’ ಅಂದರೆ ಸನಿಹದಲ್ಲೇ (ಜೇನಿನ ಹಿನ್ನಲೆಯಲ್ಲೇ) ಹನಿಯ ರೂಪದಲ್ಲಿ ಸಂಗ್ರಹವಾಗಿರುವ ಜೇನು ಎನ್ನುವ ಭಾವ. ಯಾಕೆ ಹಾಗೆ ಮುತ್ತಿವೆ ಅಂದರೆ – (ಗೂಡೊಳಗಿರುವ) ಜೇನಿನ ಹನಿಯನ್ನು ಕಾಯಲು.

ಕೈಗೆಟುಕದಂತೆ ದೂರದಲ್ಲಿ ಮಾಟವಾಗಿ ಕಟ್ಟಿದ, ಜೇನಿನ ಗೂಡನ್ನು ತಮ್ಮ ಮೈಯಿಂದಲೇ ಮುಚ್ಚಿಕೊಂಡ ರಾಶಿ ಜೇನುಹುಳುಗಳ ಹಿಂದೆ ಅಡಗಿದೆ ಸಿಹಿಯಾದ ಜೇನಿನ ಹನಿ. ಆ ಮಧುವಿನ ಮಧುರ ಅನುಭವ ಕೈಸೇರುವುದು, ಸುತ್ತುವರಿದ ಜೇನನ್ನು ನಿವಾರಿಸಿಕೊಂಡರಷ್ಟೇ ಸಾಧ್ಯ. ಕಾವ್ಯವೊಂದರ ಸೃಷ್ಟಿಯಲ್ಲೂ ಅಂತಿಮವಾಗಿ ಜೇನಿನ ಸಿಹಿಯಂತ ಕಾವ್ಯ ಹುಟ್ಟಬೇಕೆಂದರೆ ಅದು ಸುಮ್ಮನೆ ಕೈಗೆ ಸಿಗುವಂತದಲ್ಲ. ಎಟುಕಿಯೂ ಎಟುಕದ ಹಾಗೆ ಒಳಗೆಲ್ಲೋ ಕೂತು ಕಾಡುತ್ತಿರುತ್ತದೆ; ಹತ್ತಿರ ಹೋಗಿ ಹೆಕ್ಕಲು ಬಿಡದೆ, ಕಚ್ಚಿ ಓಡಿಸುವ ಜೇನಿನ ಹುಳುವಿನಂತಹ ಅಡೆತಡೆಗಳಿರುತ್ತವೆ. ಅದೆಲ್ಲವನ್ನು ದಾಟಿ ದಡ ಮುಟ್ಟಿದರೆ ಜೇನಿನ ಹನಿಯಂತೆ ಸಿಹಿಯಾದ ಕಾವ್ಯ ದ್ರವ್ಯ ಕೈಗುಟುಕುತ್ತದೆ , ಭವ್ಯ ಕವನದ ಸೃಷ್ಟಿಗೆ ನಾಂದಿಯಾಗುತ್ತದೆ. ಪ್ರತಿ ಕಾವ್ಯಸೃಷ್ಟಿಯಲ್ಲೂ ಕೈಗೆ ಸುಲಭದಲ್ಲೆಟುಕದ, ಬಚ್ಚಿಟ್ಟುಕೊಂಡ ನಿಗೂಢತೆಯೊಂದು ತನ್ನ ಸಿಹಿ ಮಾಧುರ್ಯದ ಆಮಿಷದೊಂದಿಗೆ ಕಾದುಕೊಂಡಿರುತ್ತದೆ – ಸ್ಫೂರ್ತಿದೇವಿಯ ರೂಪದಲ್ಲಿ ಕೆಣಕುತ್ತ . ಕಾವ್ಯಪುರುಷ ಆ ಪ್ರಕೃತಿಯನ್ನು ಅನ್ವೇಷಿಸುತ್ತ , ಮಥಿಸುತ್ತ, ಕಾಡುವ ಅಡೆತಡೆಗಳನ್ನು ಬದಿಗೆ ಸರಿಸುತ್ತ ಮುನ್ನಡೆದಾಗ ಸೂಕ್ತ ಮಿಲನದ ಹದ ಕೈಗೆಟುಕಿ ಪ್ರಕೃತಿ – ಪುರುಷ ಮಿಥುನವಾದಂತೆ ಕಾವ್ಯ ಬೀಜಾಂಕುರವಾಗುತ್ತದೆ. ಅದು ಚಿಗುರಿ, ಕವಲ್ಹೊಡೆದು ಹೂವು-ಹಣ್ಣಾದರೆ ಅದೇ ಕವನದ ಪ್ರತಿ ಸಾಲಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಈಗ ಇದೇ ಸಾಲನ್ನು ಜೀವಸೃಷ್ಟಿಯ ಮೂಲವಾದ ಮಿಥುನ ಕ್ರಿಯೆಗೆ ಅನ್ವಯಿಸಿ ನೋಡೋಣ. ಹಿಂದಿನ ಎಂಟನೇ ಸಾಲಿನ ವಿವರಣೆಗೆ ಪೂರಕವಾಗಿ ನೋಡಿದರೆ ಕಾಣುವ ಒಳನೋಟ ಹೇಗಿರಬಹುದೆನ್ನುವ ಹಿನ್ನಲೆಯಲ್ಲಿ ಪರೀಕ್ಷಿಸೋಣ.

(ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ)

‘ಮುಟ್ಟದ’ ಎಂದಾಗ ಇನ್ನೂ ಯಾರು ಮುಟ್ಟಿರದ, ಕನ್ನೆತನದ ಧ್ವನ್ಯಾರ್ಥ ಕಾಣಿಸಿಕೊಳ್ಳುತ್ತದೆ (ವರ್ಜಿನ್). ‘ಮಾಟದ’ ಎಂದಾಗ ಸೊಬಗಿನ, ಆಕರ್ಷಕ ಮಾಟದ ಎನ್ನುವ ಭಾವ ಮೂಡುತ್ತದೆ. ಕನ್ಯತ್ವದಲ್ಲಿನ ಮುಗ್ದತೆ, ಕುತೂಹಲ, ಭೀತಿ, ಅಚ್ಚರಿ ಎಲ್ಲದರ ಸಂಗಮ ಭಾವ ‘ಮುಟ್ಟದ ಮಾಟದ’ ಹಿನ್ನಲೆಯಲ್ಲಿರುವ ಸಾರ. ‘ಮುಟ್ಟದ ಮಾಟ’ವನ್ನು ಈ ಭಾವದಲ್ಲಿ ಅರ್ಥೈಸಿಕೊಳ್ಳಬೇಕಿದ್ದರೆ ತುಸು ಆಳದ ಅರ್ಥೈಸುವಿಕೆ ಅಗತ್ಯ. ಮಾಟ ಎನ್ನುವುದು ಇಲ್ಲಿ ಚಾಕಚಕ್ಯತೆ, ಚಾತುರ್ಯ ಎನ್ನುವ ರೀತಿಯಲ್ಲಿ ಬಳಕೆಯಾಗಿದೆ ಎಂದು ನನ್ನ ಅನಿಸಿಕೆ. ಜೀವಸೃಷ್ಟಿಯಲ್ಲಿ ಹೆಣ್ಣಿನ ಗರ್ಭದಲ್ಲಿ ನಿಯಮಿತವಾಗಿ ಉತ್ಪತ್ತಿಯಾಗುವ ಅಂಡಾಣು ಪ್ರಮುಖಪಾತ್ರ ವಹಿಸುವುದು ನಮಗೆಲ್ಲ ತಿಳಿದ ವಿಚಾರ. ಮಿಥುನ ಕ್ರಿಯೆಯಲ್ಲಿ ಪುರುಷದ ವೀರ್ಯಾಣು ಹೆಣ್ಣಿನ ಅಂಡಾಣುವಿನೊಡನೆ ಮಿಲನವಾದಾಗಲಷ್ಟೇ ಅಂಡಾಶಯವಾಗಿ ಜೀವಸೃಷ್ಟಿಗೆ ನಾಂದಿಯಾಗುವುದು. ಆದರಿಲ್ಲಿ ಮಾಟ, ಚತುರತೆ, ಚಾತುರ್ಯದ ಮಾತೆಲ್ಲಿ ಬರಬೇಕು? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಅದಕ್ಕೆ ಉತ್ತರವಿರುವುದು ಪುರುಷರೂಪಿ ವೀರ್ಯಾಣುಗಳ ವರ್ತನೆ ಮತ್ತು ಸಂಖ್ಯೆಯಲ್ಲಿ. ಮಿಥುನದ ಹೊತ್ತಲ್ಲಿ ಬಿಡುಗಡೆಯಾಗುವ ಕೋಟ್ಯಾಂತರ ವೀರ್ಯಾಣುಗಳಲ್ಲಿ ಅಂಡಾಣುವನ್ನು ನಿಖರ ರೀತಿಯಲ್ಲಿ ‘ಮುಟ್ಟಿ’ ಭವಿಷ್ಯದ ಭ್ರೂಣವಾಗುವ ಸಾಧ್ಯತೆಯಿರುವುದು ಕೇವಲ ಒಂದು ಚತುರ ವೀರ್ಯಾಣುವಿಗೆ ಮಾತ್ರ. ಎಲ್ಲಾ ವೀರ್ಯಾಣುಗಳು ಒಟ್ಟಿಗೆ ಗುರಿ ಮುಟ್ಟಲು ಸಾಧ್ಯವಿಲ್ಲ. ಇಲ್ಲಿ ಅಂಡಾಣುವಿನ ಚಾತುರ್ಯ (ಮಾಟವು) ವ್ಯಕ್ತವಾಗುವುದು, ಅದರ ಆಯ್ಕೆಯ ಬುದ್ಧಿವಂತಿಕೆಯಲ್ಲಿ. ಅಸಂಖ್ಯಾತ ಕಣಗಳ ಧಾಳಿಯ ನಡುವಲ್ಲೂ ನಿಭಾಯಿಸಲು ಸಾಧ್ಯವಾಗುವಷ್ಟನ್ನು ಮಾತ್ರ ಅನುಮತಿಸಿ ಮಿಕ್ಕದ್ದನ್ನು ನಿರಾಕರಿಸುತ್ತದೆ. ಅದೆಂತಹ ಅತಿಶಯದ ಚತುರತೆ ಎಂದರೆ, ಬೇಕೆಂದ ಹೊತ್ತಲಿ ಸೃಷ್ಟಿಕ್ರಿಯೆ ಸಾಧ್ಯವಾಗದು. ಸ್ತ್ರೀಯ ಋತುಚಕ್ರ ತನ್ನದೇ ಆದ ಕಾಲಗಣನೆ, ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ. ಮಾಸದ ನಿಗದಿತ ಕಾಲದಲ್ಲಿ ಮಾತ್ರ ಅಂಡಾಣುವಿನ ಉತ್ಪತ್ತಿ ಸಾಧ್ಯ. ಸೃಷ್ಟಿಕ್ರಿಯೆಯೊಂದು ಅಡ್ಡಾದಿಡ್ಡಿ ಜನನಯಂತ್ರವಾಗದಂತೆ ನೈಸರ್ಗಿಕ ನಿಯಂತ್ರಣವಿರಿಸಿಕೊಂಡ ಚಾತುರ್ಯವಿದು. ಹೀಗಾಗಿ ಎಲ್ಲಾ ವೀರ್ಯಾಣುಗಳಿಗೂ ‘ಸುಲಭದಲ್ಲಿ ಮುಟ್ಟಲು ಸಾಧ್ಯವಾಗದ ರೀತಿಯ ಚತುರ ವ್ಯವಸ್ಥೆಯಿರುವ (ಮಾಟವಿರುವ)’ ಅಂಡಾಣುವಿನ ವರ್ಣನೆಯನ್ನು ಇಲ್ಲಿ ಊಹಿಸಿಕೊಳ್ಳಬಹುದು.

‘ಹುಟ್ಟದ ಹುಟ್ಟಿಗೆ’ ಎನ್ನುವಾಗ ಹಿಂದೆ ಅಥವಾ ಇದುವರೆಗೂ ಇರದಿದ್ದಂತಹ, ಇನ್ನೂ ಹುಟ್ಟಿರದಂತ ಹೊಸ ಹುಟ್ಟಿಗೆ ನಾಂದಿಯೆನ್ನುವ ಅನಿಸಿಕೆ ಮೂಡುತ್ತದೆ. ಇನ್ನೂ ಹೊರಜಗತ್ತಿನ ದೃಷ್ಟಿಯಲ್ಲಿ ಹುಟ್ಟಿಲ್ಲದಿದ್ದರು (= ಹುಟ್ಟದ), ಈಗಾಗಲೇ ಬೀಜಾಂಕುರ ಫಲಿತವಾದ ‘ಅಂಡಾಶಯ’ ರೂಪದಲ್ಲಿ ಹುಟ್ಟು ಪಡೆದಾಗಿರುವ ಹುಟ್ಟಿದು. ಅಂಡವು ಸೂಕ್ಷ್ಮರೂಪದಲ್ಲಿ ಹುಟ್ಟಾಗಿದ್ದರು, ಇನ್ನೂ ಬಾಹ್ಯಜಗದ ಪ್ರಕಟರೂಪದಲ್ಲಿ (ಶಿಶುವಿನ ರೂಪದಲ್ಲಿ) ಹುಟ್ಟು ಪೂರ್ತಿಯಾಗಿಲ್ಲದ ಕಾರಣ ಇದನ್ನು ‘ಹುಟ್ಟದ ಹುಟ್ಟಿಗೆ’ ಎಂದು ಕರೆಯಲಾಗಿದೆ (ಈಗಾಗಲೇ ಹುಟ್ಟಾಗಿದೆಯೆಂದು ಹೇಳಲಾಗದ, ಅಂತೆಯೇ ಇನ್ನೂ ಹುಟ್ಟಿಲ್ಲವೆಂದು ನಿರಾಕರಿಸಲಾಗದ ಸ್ಥಿತಿ – ಮಿಲನಾನಂತರ ಮಿಥುನದ ಫಲಿತ ಯಶಸ್ವಿಯಾದರೆ ಅಂಡ ಮತ್ತು ವೀರ್ಯಾಣುಗಳ ಸಂಯೋಗವೇ ಸೃಷ್ಟಿಯ ಮೊದಲ ಹೆಜ್ಜೆಯಾಗಿ ಗರ್ಭದೊಳಗೆ ಅಂಡಾಶಯ ರೂಪ ತಾಳುತ್ತದೆ. ಇದು ಇನ್ನೂ ಹುಟ್ಟದ – ಹುಟ್ಟಿನ ವಿವರಣೆಗೆ ಹೊಂದಿಕೆಯಾಗುವ ಸೃಷ್ಟಿಹಂತ ).

ಇನ್ನು ‘ಜೇನಿನ ಥಳಿಮಳಿ ಸನಿಹ ಹನಿ’ ಮೂಲ ಉದ್ದೇಶವಾದ ಸೃಷ್ಟಿಯ ಜತೆಜತೆಗೆ ಮಿಲನದ ಸವಿಯನ್ನು ಸುಖಾನುಭವವಾಗಿ ರೂಪಿಸಿದ ಅನುಭಾವ. ಸುಲಭದಲ್ಲಿ ಮುಟ್ಟಲಾಗದ ಅದ್ಭುತ ಮಾಟದ (ಚಾತುರ್ಯದ) ಅಂಡಾಣು ಕೂಡ, ತನ್ನಂತಾನೆ ಹುಟ್ಟ ಸೃಜಿಸಲು ಸಾಧ್ಯವಾಗದು. ಅದಕ್ಕೆ ವೀರ್ಯಾಣುವಿನ ಸಹಯೋಗ ಬೇಕು. ಆ ಹುಟ್ಟಿಗೆ ಮೂಲಭೂತ ವೇದಿಕೆಯನ್ನು ಸಿದ್ದಪಡಿಸಿ ಸೂಕ್ತ ಹೊಂದಾಣಿಕೆಗೆ ಕಾಯುತ್ತಿರುವ ಅಂಡಾಣುವಿನ ಮೇಲೆ, ಪುರುಷಭಾವದ ವೀರ್ಯಾಣುವಿನ ಥಳಿಮಳಿಯಾಗಿ, ಹನಿ ಹನಿಯಾಗಿ ಸನಿಹ ಸೇರುತ್ತದೆ. ಹಿಂದೆ ವಿವರಿಸಿದಂತೆ ಅದರಲ್ಲಿ ಮಿಲನದ ಯಶ ಸಿಗುವುದು ಒಂದೇ ವಿರ್ಯಾಣುವಿಗೆ ಮಾತ್ರ. ಇನ್ನು ಈ ಮಿಲನ ಪ್ರಕ್ರಿಯೆಯನ್ನು ಆಕರ್ಷಕವಾಗಿರಿಸಲು ಅದಕ್ಕೆ ಸುಖಾನುಭವದ ‘ಜೇನಿನ’ ಲೇಪನವನ್ನು ಸೇರಿಸಿಬಿಟ್ಟಿದೆ.

ಹೀಗಾಗಿ ಎರಡು ಜೀವಗಳು ಪರಸ್ಪರ ಒಂದಾಗುತ್ತ ಮಧುರ ಮಿಲನದ ರಸಯಾತ್ರೆಗೆ ಹೊರಟಾಗ ಸಿಕ್ಕುವ ಅನುಭೂತಿಯೇ ಅದ್ಭುತ. ಆ ಮಾದುರ್ಯ, ಮಾರ್ದವತೆಯಿಂದಾಗಿ ಇಂತಹ ಅದ್ಭುತಕ್ಕೆ ಸಹಜವಾಗಿಯೇ ಜೇನಿನ ಸಿಂಚನದ ಲೇಪ ಸಿಕ್ಕಂತಾಗಿಬಿಟ್ಟಿರುತ್ತದೆ. ಅಂತಹ ಅಪರೂಪದ ಸಾಮೀಪ್ಯದ ಪ್ರತಿಹನಿಯು ರಸಭರಿತ, ವರ್ಣನಾತೀತ. ಫಲಿತವಾಗಿ ಇಂಥದ್ದೇ ಗುಣಗಳನ್ನು ಆರೋಪಿಸಿಕೊಂಡು ಬರುವ ಅದ್ಭುತ ಕಾವ್ಯ ಕೂಡ ಅಷ್ಟೇ ಮಟ್ಟದ ಮಾಧುರ್ಯದಿಂದ ಕೂಡಿರುತ್ತದೆ (ಕಾವ್ಯ ಸೃಷ್ಟಿಯಲ್ಲಿ). ಮಿಥುನದ ಆಯಾಮದಲ್ಲಿ ‘ಮುಟ್ಟಲಾಗದ ಮಾಟದ ಹುಟ್ಟದ ಹುಟ್ಟು’ ಇನ್ನು ಜನಿಸದ ಭ್ರೂಣರೂಪಿ ಶಿಶುವಿನ ಸಂಕೇತವಾಗುತ್ತದೆ (ಇನ್ನೂ ಹುಟ್ಟಿಲ್ಲ, ಆದರೆ ಈಗಾಗಲೇ ಜೀವವಿರುವ ಭ್ರೂಣವಾಗಿ ಗರ್ಭದೊಳಗೆ ಕುಳಿತಿದೆ). ಅದರ ರೂಪುಗೊಳ್ಳುವಿಕೆಯ, ಜನುಮದ, ಆಗಮನದ ನಿರೀಕ್ಷೆಯೇ ಜೇನಿನ ಹನಿ ಧಾರೆಯಾಗಿ ಹರಿದಂತೆ. ಗರ್ಭಧಾರಣೆಯಿಂದ ಜೀವಜನುಮದ ಪ್ರತಿಹಂತವು ಜೇನಿನ ಸಿಂಚನ, ಜೇನಿನ ಹನಿಯ ಸಾನಿಧ್ಯ, ಸನಿಹದ ನಿರಂತರ ಭಾವದ ಪ್ರತೀಕ.

ಹೀಗೆ ಈ ಒಂಭತ್ತನೇ ಸಾಲು ಸಾರಾಂಶದಲ್ಲಿ, ಪ್ರಕೃತಿ ಮತ್ತು ಪುರುಷ ಸತ್ವಗಳು ವೀರ್ಯಾಣು ಮತ್ತು ಅಂಡಾಣುಗಳ ರೂಪದಲ್ಲಿ ಸಮ್ಮಿಳಿತವಾಗಿ ಅಂಡಾಶಯದ ಸ್ವರೂಪದಲ್ಲಿ ಹುಟ್ಟಿಗೆ ನಾಂದಿಯಾಗುವುದನ್ನು ವಿವರಿಸುತ್ತದೆ – ಆ ಪ್ರಕ್ರಿಯೆಯನ್ನು ಜೀನಿನ ಮಧುರತೆಯ ಸುಖಾನುಭವದೊಂದಿಗೆ ಸಮೀಕರಿಸುತ್ತ.

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

02045. ಮಂಕುತಿಮ್ಮನ ಕಗ್ಗ ೬೦ ರ ಟಿಪ್ಪಣಿ – ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..


02045. ಮಂಕುತಿಮ್ಮನ ಕಗ್ಗ ೬೦ ರ ಟಿಪ್ಪಣಿ – ಜಗವೊಂದೆ ಬೊಮ್ಮನ ಶ್ವಾಸ, ದೇಶ-ಕಾಲ ಮನುಕುಲ ವಿನ್ಯಾಸ..

http://kannada.readoo.in/2017/05/೬೦-ಜಗವೊಂದೆ-ಬೊಮ್ಮನ-ಶ್ವಾಸ-ದ

02043. ನಾಕುತಂತಿಯೊಂದು ಸಾಲು – ೮


02043. ನಾಕುತಂತಿಯೊಂದು ಸಾಲು – ೮


ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ
____________________________________________________________
ನಾಡಿಯ – ನರನಾಡಿ, ರಕ್ತ ನಾಡಿ
ನಡಿಗೆಯ – ಚಲನೆ
ನಾಡಿಯ ನಡಿಗೆ – ನಾಡಿಯಲ್ಲಿರುವ ನಡಿಗೆ ಅರ್ಥಾತ್ ನಾಡಿಯಲ್ಲಿ ರಕ್ತದ ಚಲನೆ
ನಲುವಿನ – ನಲಿಯುವ, ಸುಲಲಿತವಾಗಿ ಆಡುವ, ಸಂತಸದ
ನಲುವಿನ ನಾಲಿಗೆ – ಎಲುಬಿಲ್ಲದ, ನುಲಿಯಬಲ್ಲ, ನಲಿಯಬಲ್ಲ ನಾಲಿಗೆ; ನಾಲಿಗೆಯಂತೆ ಚಾಚಿಕೊಂಡು ಉದ್ದವಾಗಬಲ್ಲ..
ನೆನೆದಿರೆ – ಒದ್ದೆಯಾಗುವಿಕೆ, ನೆನಪಾಗುವಿಕೆ
ಸೋಲುವ ಸೊಲ್ಲಿನಲ್ಲಿ – ಸೋಲುವ ಭೀತಿಯಲ್ಲಿ, ಸೋಲುವ ದನಿಯಲ್ಲಿ, ಸೋತು ಗೆಲ್ಲುವಾಟ
_____________________________________________________________

ನಾಕುತಂತಿಯ ಎಂಟನೇ ಸಾಲು – ನನ್ನ ಟಿಪ್ಪಣಿ:

(ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ)

ನನ್ನ ಮಟ್ಟಿಗೆ ಇದೊಂದು ತೀರಾ ಅರ್ಥ ಗರ್ಭಿತ ಸಾಲು. ಪ್ರತಿಬಾರಿಯೂ ಓದಿನಲ್ಲೂ ವಿಭಿನ್ನಾರ್ಥ ಹೊರಡಿಸಿ ಕಾಡಿದ ಪದಪುಂಜಗಳಿವು. ಇದನ್ನು ಸೃಷ್ಟಿಕ್ರಿಯೆಯೆ ಎರಡು ಸೃಜನಾತ್ಮಕ ಆಯಾಮಗಳಲ್ಲಿ ಅರ್ಥೈಸಲು ಯತ್ನಿಸೋಣ. ಮೊದಲಿಗೆ ಕಾವ್ಯಸೃಷ್ಟಿಯೊಂದರ ಹಿನ್ನಲೆಯನ್ನು ಪರಿಗಣಿಸಿ ವಿವರಿಸಲೆತ್ನಿಸುವ. ಹಿಂದಿನ ಸಾಲಿನಲ್ಲಿ ಪ್ರಕೃತಿ ಪುರುಷದ ಭಾವಗಳು ಪರಸ್ಪರ ಸಮೀಪಿಸಿ ಮಿಲನಕ್ಕೆ ಈಗಾಗಲೇ ಮುನ್ನುಡಿ ಹಾಕಿದ್ದವೆನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಮುಂದುವರೆಯುವ. ಕಾವ್ಯಸೃಷ್ಟಿಯಲ್ಲಿ ಸ್ಫೂರ್ತಿದೇವಿ ವಿಜೃಂಭಿಸಿ ಕಾವ್ಯಪುರುಷನನ್ನು ಉದ್ದೀಪಿಸಿ ಬಡಿದೆಬ್ಬಿಸಿಬಿಟ್ಟಿದ್ದಾಳೆ. ಇನ್ನು ಹುಲುಸಾದ ಸೃಜನಾತ್ಮಕ ಕಾವ್ಯಸೃಷ್ಟಿಗೆ ಇವೆರಡರ ಹದವಾದ, ಹಿತಕರ ಮಿಲನವಾಗಬೇಕು. ಸ್ಫೂರ್ತಿದೇವಿಯ ಉಲ್ಲಾಸ, ಉತ್ಸಾಹಗಳು ಕಾವ್ಯಪುರುಷನಲ್ಲಿನ ಭಾವೋತ್ಕರ್ಷಕ್ಕೆ ಇಂಬುಗೊಟ್ಟು ತನ್ಮೂಲಕ ಸ್ರವಿಸುವ ಭಾವಸ್ಖಲನದಲ್ಲಿ ಕಲ್ಪನೆಯ ಲೇಖನಿಯದ್ದಿ ಕವಿತೆಯ ಆಯಾಮಕೆ ರಕ್ತ, ಮಾಂಸ, ಬೀಜಗಳನ್ನು ತುಂಬಬೇಕು.

ಆ ಭಾವೋನ್ಮಾದವಾದಾಗ ತುಂಬಿಬರುವ ಆವೇಶ ನರನಾಡಿಗಳಲ್ಲಿ ಮಿಂಚಿನಂತೆ ಪಸರಿಸಿ, ಮೈಪೂರಾ ಚಲಿಸಿ ಆವರಿಸಿಕೊಂಡು ಯಾವುದೋ ಬೇರೆ ಲೋಕಕ್ಕೆ ಒಯ್ದುಬಿಡುತ್ತದೆಯಂತೆ ಕವಿಮನಸ್ಸನ್ನ. ಈ ‘ ನಾಡಿಯ ನಡಿಗೆ’ ದಿವ್ಯಾನುಭೂತಿಯಾದಂತೆ ಮೈಮನ ತುಂಬಿಕೊಂಡಾಗ ಆ ಸಂತಸದಲ್ಲಿ, ಅನುಭಾವದಲ್ಲಿ ಪದಗಳ ತಕಧಿಮಿತಾ ನಲಿಯುತ, ಕುಣಿಯುತ ನಾಲಿಗೆಯಲ್ಲಿ ಬಂದು ಅನುರಣಿಸತೊಡಗುತ್ತವೆಯಂತೆ – ಪದ ಸಾಲಾಗುವ ಹವಣಿಕೆಯಲ್ಲಿ. ಆದರೆ ಈ ‘ನಾಲಿಗೆಯನ್ನು ನಲಿಸುವ’ ಚಲನೆಯ ವೇಗೋತ್ಕರ್ಷ ಅದೆಷ್ಟು ತೀವ್ರವೆಂದರೆ, ಹಾಗೆ ಬಂದ ಪದಗಳನ್ನು ನೆನಪಿಟ್ಟುಕೊಳ್ಳುವ ಮೊದಲೇ ಮತ್ತೊಂದು ನುಗ್ಗಿ ಬಂದು ಮೊದಲನೆಯದನ್ನು ಕೊಚ್ಚಿ ಹಾಕಿಬಿಡುವಷ್ಟು. ಹೀಗಾಗಿ, ಹೇಗಾದರೂ ಮಾಡಿ ಬಂದದ್ದರಲ್ಲಿ ಎಷ್ಟು ದಕ್ಕೀತೋ ಅಷ್ಟನ್ನು ನೆನಪಿನ ಜಾಡಿಗೆ ತುಂಬಿಟ್ಟುಕೊಳ್ಳುತ್ತ ಹೋಗಬೇಕು; ಲಾಲಾರಸದ ತೇವದಲ್ಲಿ ಒದ್ದೆಯಾದ ನಾಲಿಗೆಯಲ್ಲಿ ಅದೆಷ್ಟು ಅಂಟಿಸಿ ಹಿಡಿದಿಟ್ಟುಕೊಳ್ಳಲು ಸಾಧ್ಯವೋ, ನೆನಪಿಟ್ಟುಕೊಳ್ಳಲು ಆಗುವುದೋ ಅಷ್ಟನ್ನು ಹಿಡಿದಿಡುವ ಯತ್ನ ಮಾಡಬೇಕು. ಮನದ ಮೌನದಲ್ಲಿ ಮೂಡಿದ ಕಾವ್ಯಲಹರಿ ಏಕಾಏಕಿ ತೀವ್ರಗತಿಯಾಗುತ್ತ, ಬುದ್ಧಿಯ ದನಿಯಲ್ಲಿ (ಸೊಲ್ಲಿನಲ್ಲಿ) ಪುಂಖಾನುಪುಂಖವಾಗಿ ಪ್ರಕಟವಾಗುತ್ತಾ ಹೋಗುವಾಗ ಆ ಸ್ಖಲನದ ವೇಗ ಭರಿಸಲಾಗದೆ, ಒಂದಷ್ಟು ಕಾವ್ಯದ ಅಂಗವಾಗಿ ಉಳಿದುಕೊಂಡರೆ, ಮತ್ತೆಷ್ಟೋ ಹಿಡಿತಕ್ಕೆ ಸಿಗದೇ ಜಾರಿ ಕಣ್ಮರೆಯಾಗುವುದು ಸಹಜ ಕ್ರಿಯೆಯೇ. ಒಟ್ಟಾರೆ, ಇಡೀ ಸ್ಫೂರ್ತಿ ಮಿಥುನದ ಕ್ರಿಯೆಯಲ್ಲಿ ಅಳಿದುಳಿದ ಭಾಗಾಂಶವಷ್ಟೇ ಮೂರ್ತರೂಪ ಪಡೆದು ಕಣ್ಮುಂದೆ ನಿಲ್ಲುವುದು – ಅಂತಿಮ ಕಾವ್ಯದ ರೂಪದಲ್ಲಿ. ದಕ್ಕಿದ್ದೆಷ್ಟೋ, ಮಿಕ್ಕಿದ್ದೆಷ್ಟೋ ಎಂಬ ಜಿಜ್ಞಾಸೆ, ಅತೃಪ್ತಿಯ (ಸೋಲುವ ಸೊಲ್ಲಿನ) ಕವಿಭಾವವನ್ನು ಉಳಿಸಿಯೂ ಮಿಕ್ಕವರ ಪಾಲಿಗೆ ಅಭೂತಪೂರ್ವ ಸೃಷ್ಟಿಯಂತೆ ಕಾಣಿಸಿಕೊಳ್ಳುವ ಕವಿ-ಕಾವ್ಯ ಚಮತ್ಕಾರ ಇಲ್ಲಿನ ಪ್ರಮುಖ ಅಂಶ.

(ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ )

ಈಗ ಕಾವ್ಯ ಸೃಷ್ಟಿಯ ಬದಲು ನೈಜ ಮೈಥುನದ, ಜೀವಸೃಷ್ಟಿಯ ದೃಷ್ಟಿಕೋನದಲ್ಲಿ ಅವಲೋಕಿಸೋಣ. ಹಾಗೆ ನೋಡಿದಾಗ ಕಾಣುವ ಅದ್ಭುತ ಗೂಢಾರ್ಥ ಅವರ್ಣನೀಯ..! ಸೃಷ್ಟಿಕ್ರಿಯೆಗೆ ಮೂಲ ಬಿತ್ತನೆಯಾಗುವ ಮೈಥುನದ ಉತ್ಕರ್ಷದ ಹಂತದ ಚಿತ್ರಣವನ್ನು ಕಟ್ಟಿಕೊಡುವಂತಿದೆ ಈ ಸಾಲುಗಳ ಭಾವಾರ್ಥ. ‘ನಾಡಿಯ ನಡಿಗೆ’ ಎಂದಾಗ ಕಾಮೋತ್ತೇಜಕ ಸ್ಥಿತಿಯಲ್ಲಿ ಪ್ರಕೃತಿ, ಪುರುಷಗಳ ಉದ್ರಿಕ್ತ ಸ್ಥಿತಿಯನ್ನು ಪ್ರತಿಬಿಂಬಿಸುವ, ಆ ಗಳಿಗೆಯಲ್ಲಿ ತೀವ್ರ ರಕ್ತಚಲನೆಯಲ್ಲಿ, ವೇಗದಲ್ಲಿ ಸ್ಪಂದಿಸುವ ಕಾಮಾಂಗಗಳ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಆ ಕ್ಷಣದ ವೇಗಾವೇಗ, ನಲಿಯುತ, ನುಲಿದಾಡುವ ಪರಿ ಪುರುಷ-ಪ್ರಕೃತಿ ಇಬ್ಬರನ್ನು ಮತ್ತಷ್ಟು ಪ್ರೇರೇಪಿಸಿ ಸುಖದ, ಸೌಖ್ಯದ ಔನ್ನತ್ಯ ಶಿಖರಕ್ಕೇರಿಸಿಬಿಡುತ್ತದೆ. ಆ ಶಿಖರಾಗ್ರದ ಹಂತದಲ್ಲಿ ತಡೆಹಿಡಿದಿಟ್ಟ ಒಡ್ಡು ಹೊಡೆದಂತೆ ಒಳಗಿನದೆಲ್ಲ ದ್ರವಿಸಿ, ಸ್ರವಿಸುತ್ತ, ಸ್ಖಲನದ ಚರಮಾಂತಕ್ಕೆ ತಲುಪಿದಾಗ ಕೊನೆಗದರ ಕುರುಹಾಗಿ ಉಳಿಯುವುದು ಸ್ಖಲನದ್ರವದಲ್ಲಿ ನೆನೆದು ಒದ್ದೆಯಾದ ಅನಿಸಿಕೆ ಮಾತ್ರ. ಸ್ಖಲನದ ಅಂತಿಮ ಚಣದವರೆಗೂ ರಣೋತ್ಸಾಹದಲಿದ್ದಂತಿದ್ದ ಪುರುಷ ಸತ್ವವು, ಅದಾಗುತ್ತಿದ್ದಂತೆ, ಕಸುವೆಲ್ಲ ಕುಸಿದು ಹೋದಂತಹ, ಏನೋ ಕಳೆದುಕೊಂಡ ಭಾವದಲ್ಲಿ (ಸೋಲಿನ ಸೊಲ್ಲಿನಲ್ಲಿ, ಸೋಲಿನ ದನಿಯಲ್ಲಿ) ಚರಣ ಹಾಡುತ್ತದೆ. ಆದರೆ ಪ್ರಕೃತಿ ಸತ್ವವು ಅದಕ್ಕೆ ತದ್ವಿರುದ್ಧವಾಗಿ, ಸ್ರಾವೋತ್ತರವಾಗಿ ಏನೋ ಪಡೆದುಕೊಂಡ ಹಿಗ್ಗಲಿ ನಲಿಯುತ್ತದೆ; ಸ್ರಾವದ ಜಲಪಾತದಡಿ ಸಿಕ್ಕಿ ಅಂತರ್ನಾಲಿಗೆಯೆಲ್ಲಾ ಏನೋ ತುಂಬಿಕೊಂಡಂತಹ ಮಾರ್ದವತೆಯಲ್ಲಿ ನೆನೆದು ಒದ್ದೆಯಾಗಿ, ಆ ಹಿಗ್ಗು ಸಿಗ್ಗಲೇ ಖುಷಿಯಿಂದ ನಲಿವ ಅನುಭೂತಿಗೊಳಗಾಗುತ್ತದೆ.

ಈ ಸಾಲನ್ನು ಮಿಥುನದ ಪರಿಭಾಷೆಯಲ್ಲಿ ಹಿಂದಿನ ಸಾಲಿನ ಜತೆ ಸಮೀಕರಿಸುತ್ತ ಮತ್ತೊಂದು ರೀತಿಯಲ್ಲಿ ಅವಲೋಕಿಸಿದರೆ: ಪುರುಷದಲ್ಲಿ ಸಾಧು ಗೋವಿನ ರೂಪದಲ್ಲಿದ್ದ ಕೊಡುಗೆ (ಸೃಷ್ಟಿಯ ಕಾರಣಕರ್ತ ಜಡಬೀಜರೂಪಿ – ಅರ್ಥಾತ್ ವೀರ್ಯ), ಅದೆಲ್ಲಿಂದಲೋ ಅಪಾರ ಶಕ್ತಿಯನ್ನು ಒಗ್ಗೂಡಿಸಿಕೊಂಡು, ಬೆಡಗಿನಿಂದ , ಉದ್ರೇಕದಿಂದ (ನಡುಗುತ್ತ), ವೇಗದಿಂದ ಬರತೊಡಗುತ್ತಾಳೆ. ಒಲುಮೆಯಿಂದ ಪ್ರೇರೇಪಿತವಾದ ಕಾಮನೆ, ತನಗಿರುವ ಸಲಿಗೆಯನ್ನು ಬಳಸಿಕೊಂಡು ಒತ್ತಾಯಪೂರ್ವಕ ಸುಲಿಗೆಗಾದರು ಸರಿಯೇ – ಎಂದು ಮುನ್ನುಗ್ಗುತ್ತದೆ. ಆ ಆವೇಗಕ್ಕೆ ಹೆಣ್ಣಿನಲ್ಲಿ ಬಯಲಿನ ನೇಯ್ಗೆಯಂತಿದ್ದ (ಜೇಡರಬಲೆಯಂತಹ ಅಡೆತಡೆಗಳನ್ನು ನಿರ್ಮಿಸಿಕೊಂಡಿರುವ) ಬಲೆಗಳೆಲ್ಲ ಚದುರಿಹೋಗಿ ಸೋತು ಶರಣಾಗತವಾಗಿಬಿಡುತ್ತದೆ – ಆ ಆವಾಹನೆಗೆ ವೇದಿಕೆಯಾಗುತ್ತ.

ನಾಡಿಯ ಎಂಬಲ್ಲಿ ‘ನರನಾಡಿಯ’ ಪ್ರಸ್ತಾಪವನ್ನು ಊಹಿಸಿಕೊಳ್ಳಬಹುದು. ನಡಿಗೆ ಎಂದಾಗ ನಾಡಿಯಲ್ಲುಂಟಾಗುವ ನಡಿಗೆ ಎಂದು ಅರ್ಥೈಸಿದರೆ ಆನಂದ, ಸಂಭ್ರಮಗಳಿಂದ ಉಂಟಾದ ಉದ್ವಿಗ್ನ, ಉದ್ರೇಕಿತ ಸ್ಥಿತಿಯೆಂದೂ ಪ್ರಕ್ಷೇಪಿಸಬಹುದು; ಆ ಸ್ಥಿತಿಯಲ್ಲಿ ರಕ್ತಪರಿಚಲನೆಯಲ್ಲುಂಟಾಗುವ ಉದ್ರಿಕ್ತ ಸ್ಥಿತಿಯನ್ನು ಕೂಡ ಭಾವಿಸಿಕೊಳ್ಳಬಹುದು. ಈ ಸಂಭ್ರಮದ ನಲುವಿನ ಸ್ಥಿತಿ ತಾರಕಕ್ಕೇರಿದಾಗ ಅದರ ಅಂತಿಮದಲ್ಲಿರುವ ನಾಲಿಗೆ (ಪುರುಷತ್ವದ ಮದನಾಂಗ ಅಥವಾ ಪ್ರಕೃತಿ ತತ್ವದ ಮರ್ಮಾಂಗವೆಂದು ಊಹಿಸಿಕೊಂಡು) ಸುಖ ಸ್ಖಲನದಲ್ಲಿ ನೆನೆದು (ನೆನೆದಿರೆ) ಒದ್ದೆಯಾಗುತ್ತದೆ – ಕಡೆಗೆ ತನ್ನನ್ನೇ ಕಳೆದುಕೊಂಡು ಸೋತುಹೋಗುವ ದನಿ ಹೊರಡಿಸುತ್ತಾ. ಮಿಥುನ ನಿರತ ಪುರುಷವು ಭೋರ್ಗರೆತದಲಿ ಕೊನೆಗೆ ತನ್ನೆಲ್ಲ ರೋಷಾವೇಶವನ್ನು ಕಳೆದುಕೊಂಡು ಸಂತೃಪ್ತ ಸೋಲಿಗೆ ಶರಣಾಗುವುದು – ಇದರ ಭಾವ (ಪುರುಷವು ಪ್ರಕೃತಿಯಲ್ಲಿ ಮಿಳಿತವಾಗಿ, ಅಂತಿಮವಾಗಿ ವೀರ್ಯವನ್ನು ತ್ಯಜಿಸಿ ಸಂತೃಪ್ತಿಯಲಿ ಸೋತು ಒರಗುವ ಹಾಗೆ).

ಇದು ನಿಜಕ್ಕೂ ಕವಿಮನದೇ ಮೂಡಿದ್ದ ಮೂಲಭಾವವೇ? ಅಥವಾ ಈ ಸಾಲು ಕಾಕತಾಳೀಯವಾಗಿ ಹೊರಡಿಸುತ್ತಿರುವ ವಿಭಿನ್ನ ದನಿಯೇ? ಅಥವಾ ಎರಡೂ ಅಲ್ಲದ ಕೇವಲ ನನ್ನ ತಪ್ಪುಗ್ರಹಿಕೆಯ ವಿಶ್ಲೇಷಣೆಯೇ ? ಎಂದು ಖಚಿತವಾಗಿ ಹೇಳುವ ಸಾಮರ್ಥ್ಯ, ಪಾಂಡಿತ್ಯ ನನ್ನಲಿಲ್ಲ. ಸರಿಯೋ, ತಪ್ಪೋ, ನಾನು ಅರ್ಥೈಸಿದ ಬಗೆ ಹೀಗೆ – ಎಂದಷ್ಟೇ ಹೇಳಿಕೊಳ್ಳಬಲ್ಲೆ 🙂

– ನಾಗೇಶ ಮೈಸೂರು

(ನಾಕುತಂತಿಗೆ ಅರ್ಥ, ವ್ಯಾಖ್ಯಾನ ಬರೆವಷ್ಟು ಪಾಂಡಿತ್ಯ, ಫ್ರೌಢಿಮೆ ನನಗಿಲ್ಲ. ನನಗೆ ತೋಚಿದ್ದನ್ನ ಇಲ್ಲಿ ದಾಖಲಿಸಿದ್ದೇನೆ – ತಪ್ಪು ಸರಿಯ ಆಳದ ಚಿಂತನೆಗಿಳಿಯದೆ. ಈಗಾಗಲೇ ಇರಬಹುದಾದ ಅನೇಕ ವಿವರಣೆಗೆ ಇನ್ನೊಂದು ಸೇರ್ಪಡೆ ಅಂದುಕೊಂಡು ಓದಿ; ತಪ್ಪಿದ್ದರೆ ತಿದ್ದಿ)

(Picture : Wikipedia)

02042. ನಾಕುತಂತಿಯೊಂದು ಸಾಲು – ೭


02042. ನಾಕುತಂತಿಯೊಂದು ಸಾಲು – ೭
________________________________

ಏಳನೇ ಸಾಲು : ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ.


________________________________________________________________

ಸಲಿಗೆಯ ಸುಲಿಗೆಯ – ಸಲಿಗೆಯಿದ್ದ ಕಡೆ ಬಲವಂತದಿಂದಾದರೂ ಬೇಕಿದ್ದ ಪಡೆಯುವ ;
– ‘ಸುಲಿಗೆಯೆನಿಸುವ ಮಟ್ಟದ ಅಪೇಕ್ಷೆಯನ್ನು ಕೂಡ’ ತನ್ನ ಹಕ್ಕು ಎನ್ನುವಂತೆ ಪಡೆದೇ ತೀರುವಷ್ಟು ಸಲಿಗೆ.
(ಆ ಸಲಿಗೆಯೆಂತದ್ದೆಂದರೆ, ಸುಲಿಗೆಯೂ ಸುಲಿಗೆಯೆನಿಸದೆ ಸಹಜವೆನಿಸುವಂತೆ ತೋರಿಕೊಳ್ಳುವುದು)

ಸಲಿಗೆಯ ಸುಲಿಗೆಯ ಬಯಕೆಯ – ಬೇಕಿದ್ದ ಬಯಕೆಯನು ಬಲವಂತದಿಂದಲಾದರೂ ಪಡೆದೇ ತೀರುವ ಸ್ವೇಚ್ಛೆ, ಸಲಿಗೆ
(ತನಗದೆಷ್ಟು ಸಲಿಗೆಯಿದೆ ಎನ್ನುವುದನ್ನು ಹೆಮ್ಮೆಯಿಂದ, ಬಿಂಕದಿಂದ ತೋರ್ಪಡಿಸಿಕೊಳ್ಳುವ ಬಯಕೆ )

‘ಸಲಿಗೆಯ ಸುಲಿಗೆಯ ಬಯಕೆಯ’ ಒಲುಮೆ – ಒಲುಮೆ (ಯೆಂಬ ನವಿರಾದ, ಸೌಮ್ಯಭಾವ) ತನಗಿರುವ ಸಲಿಗೆಯಲ್ಲಿ, ತಾನು ಬಯಸಿದ್ದನ್ನು ಪಡೆದೇ ಪಡೆವ ಹಠದಲ್ಲಿ (ಆಸೆ, ಬಯಕೆಯಲ್ಲಿ) ಹೊರಟ ಭಾವ.
(ಆ ಸಲಿಗೆಯ ಸುಲಿಗೆಯ ಬಯಕೆ ಇರುವುದು ಯಾರಲ್ಲಿ ? – ಒಲುಮೆಯಲ್ಲಿ )

ಒಲುಮೆ ಬಯಲಿನ : ಮನದ ಒಲವೆಂಬ ವಿಶಾಲ ಆಕಾಶದಂತಹ ಬಯಲಿನಲ್ಲಿ..

ಸಿರಿಯುಡುಗಿ (1) – ಆ ಚಾತುರ್ಯದ ಮುಂದೆ ಮಿಕ್ಕೆಲ್ಲಾ ತರದ ಸಿರಿಯು ಸ್ಪರ್ಧಿಸಲಾಗದೆ ಉಡುಗಿಹೋಗಿ..
ಸಿರಿಯುಡುಗಿ (2) – ಆ ಚತುರ ಕಲೆಯಲ್ಲಿ ನಿಷ್ಣಾತೆಯಾದ, ಅದನ್ನೇ ಉಡುಗೆಯಂತೆ ತೊಟ್ಟ..(ಸಿರಿ + ಉಡುಗೆ / ಉಡುಗಿ)

ಬಯಲಿನ ನೆಯ್ಗೆಯ – ಬಯಲಿನಲ್ಲಿ ಇರುವ, ಕಣ್ಣಿಗೆ ಸುಲಭದಲ್ಲಿ ಗೋಚರಿಸದ (ಜೇಡ ನೇಯ್ದ) ಬಲೆ.

ಬಯಲಿನ ನೆಯ್ಗೆಯ ಸಿರಿಯುಡುಗಿ (1) – ಕಣ್ಣಿಗೆ ಕಾಣಿಸದಂತೆ, ಅರಿವಿಗೆ ನಿಲುಕದಂತೆ ಚಾಣಾಕ್ಷತೆ, ಜಾಣ್ಮೆಯಿಂದ ಸುತ್ತಲೂ ಒಲವಿನ ಬಲೆಯನ್ನು ನೇಯ್ದು, ಬಲೆಗೆ ಬೀಳಿಸಿಕೊಳ್ಳುವ ಚತುರೆ;
ಬಯಲಿನ ನೆಯ್ಗೆಯ ಸಿರ