01396. ಪ್ರಾಯದ ಮಾಯೆ..


01396. ಪ್ರಾಯದ ಮಾಯೆ..
____________________________


ತುಂಬಿದ ಕೊಡ
ತುಂಬಿ ತುಳುಕಿದ ಯೌವನ
ತನ್ನೊಳಗೆ ತಾನೆ ಮುಳುಗಿ ಬಾಲೆ
ತನ್ನಂದಕೆ ತಾನೆ ಬೆರಗಾದ ಪರವಶತೆ ||

ಮುಗ್ದತೆ ಚೆಲ್ಲಾಡಿ
ಹರಿದಿದೆ ನಖಶಿಖಾಂತ
ತೊಳೆಯಲದ ತಾರುಣ್ಯದ ಮಳೆ
ತುಂತುರು ಹನಿಯಾಗಿ ಮುಸಲಧಾರೆ ||

ಒದ್ದೆ ಮೈಗಂಟಿದ ವಸ್ತ್ರ
ನೀರೆಯ ಹೀರಲಾಗದೆ ಸೋತಿದೆ
ತುಳುಕಿದ್ದೆಲ್ಲಾ ಅರಳಿದಂತೆ ಮೊಗ್ಗು
ಹಿಗ್ಗುತ ಯೌವನ ನಿವಾಳಿಸಿದೆ ಸಿಗ್ಗನು ||

ಕಂಡವರಿಲ್ಲ ಒಳಗು
ಬೆರಗಿಸಿ ಹೊರಗ ಸೊಗಡು
ಬೆಚ್ಚಿ ಹಾತೊರೆದ ದನಿ ಸಾಲಾಗಿ
ಪ್ರತಿ ಎದೆಯಲು ಕವನದ ಗೊಂಚಲು ! ||

ನೋಡುವವರ ನೋಟ
ಗ್ರಹಿಸುತ ಅವರವರ ಭಾವ
ಕವಿಗಿದು ಬರೆದು ಮುಗಿಯದ ಕಥೆ
ಅವಳ ಯೌವನವೆ ಅವಳನುಟ್ಟು ತೊಟ್ಟಂತೆ ||

– ನಾಗೇಶ ಮೈಸೂರು
(Nagesha Mn)

(ಸಂಗೀತ ಕಲ್ಮನೆಯವರ ಫೆಸ್ಬುಕ್ ಪೋಸ್ಟೊಂದರ ಚಿತ್ರ ನೋಡಿ ಬರೆದ ಸಾಲುಗಳಿವು. ಅವರೂ ಅವರ ಫ್ರೆಂಡ್ ಲಿಸ್ಟಿನಿಂದ ಆಯ್ದುಕೊಂಡ ಚಿತ್ರ – ಧನ್ಯವಾದಗಳು Geeta G. Hegde 🙏👍😊)

Advertisements

01395. ನಾಟ್ಯ ಲೋಕ


01395. ನಾಟ್ಯ ಲೋಕ
_______________________


ತಲ್ಲೀನ, ತನ್ಮಯ, ಪರವಶ
ಮನಗಳಾಗಿ ಅದ್ಭುತ
ಚಿತ್ತವೆಲ್ಲೊ ಕಿನ್ನರ ಲೋಕ
ಯಕ್ಷಿಣಿ ಗಂಧರ್ವ ಸಾಕ್ಷಾತ್ಕಾರ ! ||

ಕಳೆದುಹೋದಂತೆಲ್ಲೊ ಯಾನ
ಏಕೀಭವಿತ ತನುಮನ ತಿಲ್ಲಾನ
ರಾಧೆ, ಭಾಮೆ, ರುಕ್ಮಿಣಿಯೊ ?
ಕೊಳಲನ್ಹಿಡಿದ ಪಾತ್ರ ಮಾಧವನೊ ? ||

ನೊಸಲ ನೀಲಿ ವಿರಳ ಸರಳ
ಹರನ ಗರಳವಲ್ಲ ಪ್ರೀತಿಯಾಳ
ಚೆಲುವೆ ಲಲಾಟ ಹೊಳಪೊಳಪು
ಮುನಿಸಲ್ಲ ತೆರೆದ ಮನಸ ಪ್ರಕಟ ||

ನಾಟ್ಯ ಲಯ ಪ್ರಶಾಂತ ನಿಶ್ಯಬ್ಧ
ಸ್ತಬ್ಧ ತಪ ಮುದ್ರೆ ಸುಷುಪ್ತಿ ನಿದಿರೆ
ಅಂತರ್ಯಾನ ಗಾನ ಗಾಯನ
ತಾದಾತ್ಮ್ಯಕತೆ ಅದ್ವೈತ ಅದ್ಭುತ ||

ಪರಕಾಯ ಪ್ರವೇಶ ದೇವಾಯಾಮ
ಅರ್ಧನಾರೀಶ್ವರ-ನಾರೀಶ್ವರಿ ಸೂತ್ರ
ಅರ್ಪಣ ಭಾವ ಅಪರ್ಣ ಸಂತೃಪ್ತಿ
ನಟನವಾಡುತ ಲೌಕಿಕದಿಂ ವಿಮುಕ್ತಿ ||

– ನಾಗೇಶ ಮೈಸೂರು
೨೦.೧೦.೨೦೧೭
(Photo from Internet / social media sent by Mohan Kumar D M – thank you mohan sir! 😍🙏👍😊)

01394. ಪ್ರೀತಿ ಕುಲುಮೆಯಲಿ..


01394. ಪ್ರೀತಿ ಕುಲುಮೆಯಲಿ..
____________________________


ಬದುಕಿನಾ ಕುಲುಮೆ
ಹೊತ್ತಿಸಿದ ಒಲುಮೆ
ಇನ್ನೂ ಬತ್ತದ ಚಿಲುಮೆ
ಉರುವಲು ಪ್ರೀತಿ ಕಾವಲು ||

ಬಾಳಿನಲದೆ ಹೊಡೆತ
ನಮ್ಮನ್ನೂ ತಟ್ಟುತ್ತ
ಕಾಡಲ್ಹೊರಟ ಹೊತ್ತು
ನಮ್ಮ ಪ್ರೀತಿಯದೆ ಕಾಯ್ದಿತ್ತು ||

ಅಡೆತಡೆ ಕಷ್ಟ ಕಾರ್ಪಣ್ಯ
ಕಾದ ಕಬ್ಬಿಣ ತಾರುಣ್ಯ
ಒಂದರ ಮೇಲೊಂದು ಹೊಡೆತ
ನಮ್ಮ ಮೊನೆಚಾಗಿಸಿ ಸಲಹಿತ್ತ ||

ಇಂದು ನೆಮ್ಮದಿ ಬದುಕು
ನಮ್ಮ ಲಹರಿಯ ಪಲುಕು
ನೆಲೆಗೆ ಊರು ತಲೆಗೆ ಸೂರು
ಹೇಳು ನಮ್ಮ ಹಿಡಿವವರಾರು ? ||

ಸುಖದ ಅರ್ಥ ಹುಡುಕದೆ
ಸುಖಿಸುವ ಬಾಳುವೆ ನಮದೆ
ಯಾರಿಗುಂಟು ಯಾರಿಗಿಲ್ಲ ?
ನಮ್ಮ ಭಾಗ್ಯಕಂತೂ ಎಣೆಯಿಲ್ಲಾ! ||

– ನಾಗೇಶ ಮೈಸೂರು
(Nagesha Mn)
(Picture from Internet / social media , sent by Mohan Kumar D M 😍🙏😊 thanks a lot again Mohan sir🙏👍)

01393. ಚದುರಿದ ಚಿತ್ರಗಳು….


01393. ಚದುರಿದ ಚಿತ್ರಗಳು….
__________________________


ಹಬ್ಬದ ದಿನದಡಿಗೆ
ಯಾಕೊ ತುಂಬದ ಗಡಿಗೆ
ಅನ್ನವಿಲ್ಲದ ಪಾತ್ರೆ
ಇರುಸುಮುರುಸು ಮನಸು ||

ಹಚ್ಚುವರೆಷ್ಟೋ ದೀವಟಿಕೆ
ಯಾರಿಟ್ಟರೊ ಆರಿದ ಲೆಕ್ಕ ?
ಮತ್ತೆ ಹಚ್ಚುವರಿದ್ದರೆ ಜಗ
ಜಗಮಗಿಸುವ ಸೊಬಗು ||

ಸಾಲು ಸಾಲು ಹಣತೆ
ನಡುವಲಲ್ಲಿಲ್ಲೊಂದು ಮೌನ
ಬತ್ತಿದೆಣ್ಣೆ ಬಸವಳಿದ ಬತ್ತಿ
ಶೃಂಗಾರದ ದೃಷ್ಟಿಬೊಟ್ಟು ||

ಏನೆಲ್ಲ ಎಡರು ತೊಡರು !
ಗಾಳಿಗೆ ಸಿಕ್ಕಾಡುವ ಸೊಡರು
ಹೊಯ್ದಾಡಿ ಗೆದ್ದರು ಬದುಕು
ಮುಗಿಸಲೇಬೇಕು ಆಟ ನಶ್ವರ ||

ನಿತ್ಯ ತಮ ಸಂಚಯ
ತೊಳೆಯೆ ದೀವಿಗೆ ಹಚ್ಚುತ
ಸಂಭ್ರಮಿಸಿ ಮನಗಳ ಹಬ್ಬ
ಸಡಗರ ಮುಗಿದರೆ ಮತ್ತದೆ ||

– ನಾಗೇಶ ಮೈಸೂರು
(Nagesha Mn)
(Picture source : Internet / social media)

01392. ದೀಪಾರಾಧನೆ..


01392. ದೀಪಾರಾಧನೆ..
______________________


ದೀಪಾರಾಧನೆ ಮಾಡುವ ಬಾರೆ
ಹಚ್ಚುತೊಂದು ಪ್ರಣತಿ ಮನದೆ
ಹಣತೆ ಬೆಳಗಲಲ್ಲಿ ಅಂಧಕಾರ
ಕರಗಿ ಮನೆ ತುಂಬುವ ಬೆಳಕು ||

ಯುಗಯುಗ ಜಗದಾ ಇತಿಹಾಸ
ಬರೆದಿಟ್ಟುಕೊಂಡ ಕಥೆ ಪುರಾಣ
ನಿಜ ಜ್ಞಾನದೆ ಅಜ್ಞಾನ ತೊಡೆದ
ದೀವಿಗೆಯಲಿ ಬೆಳಕ ಹಂಚೋಣ ||

ಸುತ್ತಲ ತಮ ಕಾಡದೆ ಬಿಡದಲ್ಲ
ಪ್ರಾಂಜಲಮನ ಸೋಕೆ ಮಲಿನ
ಕಪ್ಪಿಡಿದು ಕರಕಲಾಗುವ ಮುನ್ನ
ದೀವಟಿಗೆ ಹಚ್ಚಿ ಬೆಳಗುವ ಬಾರೆ ||

ನನ್ನೊಳಗಡೆ ನೀನಾಗು ಜ್ಯೋತಿ
ನಿನ್ನೊಳಗಡೆ ನಾನಿರುವೆ ಬೆಳಕು
ಕಳೆವ ಅಂಧಕಾರ ಸಮ್ಮಿಲನದೆ
ಪಸರಿಸುತದನೆ ಪ್ರಭೆಯಾಗಿಸಿ ||

ನಮ್ಮಾಶಯಗಳಿವೆ ಮಹಾಪೂರ
ಅಧಿಗಮಿಸೊ ಸದಾಶಯ ತೈಲ
ಸಮಷ್ಟಿ ಚಿತ್ತ ಸಂತೈಸುತ ಸ್ಚಾರ್ಥ
ಜಗದಾ ಬತ್ತಿಯ ಬೆಳಗಿರಲಿ ಸದಾ ||

– ನಾಗೇಶ ಮೈಸೂರು
(Nagesha Mn)
(picture from : Mohan Kumar D M – thank you Mohan sir 🙏🙏🙏😍)

ಎಲ್ಲರಿಗು ದೀಪಾವಳಿ ಶುಭಾಶಯಗಳು!

01391. ನಿದ್ದೆ ಮಾಡಲಿ ಬಿಡವನ…


01391. ನಿದ್ದೆ ಮಾಡಲಿ ಬಿಡವನ…
_________________________________


ನಿದ್ದೆ ಮಾಡಲವನು ಸದ್ದು ಮಾಡದೆ ಬಾ
ಮುದ್ದು ಮಾಡಲ್ಹೊರಟು ಎಬ್ಬಿಸೀಯಾ ಜೋಕೆ!
ಮುದ್ದು ಕಂಗಳ ಮುಖದಾ ಮುಗುಳುನಗೆ
ಚದುರಿಸೀಯಾ ಕಂದನ ಕನಸಿನ ಮೆರವಣಿಗೆ ||

ನೀನಿದ್ದರೇನು ಅವನಮ್ಮ ಗರ್ಭದೆ ಹೊತ್ತು
ಹೆತ್ತವಳು ನೆತ್ತರು ಹಂಚಿ ಕರುಳಿಗೆ ಜೋತು
ಭುವಿಗೆ ಬಿದ್ದವನವನು ಎದ್ದು ನಡೆಯಬೇಕು
ಮಲಗಿರಲಲ್ಲಿಯವರೆಗೆ ನಿನ್ನಾಸೆಗೆ ತಡೆ ಹಾಕು ||

ಅಪ್ಪ ನನಗಿಲ್ಲವೆನಬೇಡ ಭಾವನೆ ಮೃದುಲ
ತೋರದೆ ನಡೆಯಬೇಕಂತೆ ಒಟ್ಟಾರೆ ಸಮತೋಲ
ಮುದ್ದಾಟದೆ ಜಿಪುಣ ಮಾತಾಟದೆ ನಿಪುಣ
ಗದರಿಸುತ ಸಂತುಲನ ಅವನಾಗಬೇಡವೆ ಜಾಣ? ||

ನಾ ತೋರಲಾರೆ ಪ್ರಕಟ ನಿನ್ನಂತೆ ಪ್ರೀತಿ
ಮಲಗಿದೀ ಹೊತ್ತಲೂ ಮುಟ್ಟೆ ಮನಸಾಗದು ಭೀತಿ
ಎಚ್ಚರವಾದರೆ ಬೆಚ್ಚುತ ಅತ್ತಾನು ಬೆದಬೆದರಿ
ಬೆಚ್ಚಗೆ ಮಲಗಿರಲಿ ಹೇಗು ಎದ್ದಾಗ ನಾನವನ ಕುದುರಿ ||

ಅಂದುಕೊಳ್ಳುವರೆಲ್ಲ ಅಪ್ಪನೆದೆ ಕಲ್ಲು
ಅಮ್ಮನ ಪ್ರೀತಿ ಸುಧೆಯಲಿ ಕೆತ್ತುವ ಉಳಿಗಲ್ಲು
ಕಾಣಲಿ ಬಿಡಲಿ ಗಣಿಸದೆ ಶಿಲ್ಪಿ ತನ್ನ ಪಾಡಿಗೆ
ತನ್ನರಿವಂತೆ ಕೆತ್ತುವ ಜರುಗದಂತೆ ಆ ಕಿರುನಗೆ ||


– ನಾಗೇಶ ಮೈಸೂರು
(Nagesha Mn)
(Picture source: Internet / social media)

01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ


01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ

ಮಂಕುತಿಮ್ಮನ ಕಗ್ಗ ೭೭ ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ :

https://kannada.readoo.in/2017/10/ಸೃಷ್ಟಿಯೆ-ವೃತ್ತಿ-ಬ್ರಹ್ಮಗ