01668. ಯಾಕೊ ಈ ಋತು..


01668. ಯಾಕೊ ಈ ಋತು..

__________________________________

ಯಾಕೊ ಈ ಋತು, ಮಾತಿಗು ಸಿಗುತಿಲ್ಲ

ಅದೇಕೊ ಈ ಪ್ರಕೃತಿ, ಒಡನಾಟಕು ಒಲವಿಲ್ಲ

ಸಿಕ್ಕದೆಡೆ ಬದುಕಲಿ, ಮೂಡಲೆಂತು ಪ್ರೀತಿ ?

ನಿಸರ್ಗದ ಹೆಸರಲಿ, ಸರಿಯೇನೇ ಈ ರೀತಿ ? ||

ಅರಳಿದವೆ ಹೂಗಳು, ಗುಟ್ಟಲಿ ನಟ್ಟಿರುಳಲಿ

ಕಾಣಲೆಂತೆ ಕಂಗಳು, ನಿಶೆಯ ಕರಿ ನೆರಳಲಿ

ನಿನ್ನ ಸೆರಗಲೆಷ್ಟು ಬೆರಗು, ಯಾರಿಟ್ಟರೆ ಯಂತ್ರ ?

ಸಾಗಿಸಿರುವೆ ಪ್ರತಿ ಕ್ಷಣ, ನಿಭಾಯಿಸೆಲ್ಲ ಕುತಂತ್ರ! || ಯಾಕೊ ||

ಬಿಸಿಲಲ್ಲಿ ಬಾಡುವ, ಜಗದಲಿ ಬಿಸಿಲೆ ಮಳೆ

ಕುಡಿದದನೆ ಪಾಕವ, ಮಾಡುವ ನೀನೆಂಥ ಜಾಣೆ

ಬೆವರುತ ನಿಡುಸುಯ್ಯುತ, ಶಪಿಸುತಲೆ ಕಾಲ

ಕಳೆದುಹೋಯಿತೆ ಬೆಸುಗೆ, ದಣಿಸಲು ಬಿಸಿಲಿಲ್ಲ || ಯಾಕೊ ||

ಬಂತಲ್ಲೆ ಬಸವಳಿದ, ಭುವಿಗಿಕ್ಕುತ ಸುರಿಮಳೆ

ಒಣಗಿ ನಿಂತ ತರುನಿಕರ, ಮೊಗೆದು ಕುಡಿವ ವೇಳೆ

ನೋಡುತ ಮಾಡಿನ ಕಿಂಡಿ, ಕಳೆದುಹೋಯ್ತೆ ಗಳಿಗೆ

ನೆನೆಯದೆ ಹನಿ ನೆನೆದು ದನಿ, ಒದ್ದೆಮುದ್ದೆ ಕಚಗುಳಿಗೆ || ಯಾಕೊ ||

ಬೇಡವೆನ್ನಲೆಂತೆ ನಡುಕ, ಚಳಿ ತಾನೆ ಅಮಾಯಕ

ಅಪ್ಪಿದರೇನೊ ಹೊದಿಕೆ, ಬೆಚ್ಚಗಿರಿಸೊ ನೆನಪ ಪುಳಕ

ಅಚ್ಚರಿಯದನೆಲ್ಲ ಮೆಚ್ಚಿ, ಆಸ್ವಾದಿಸೆ ಬಿಡಬಾರದೆ ?

ಕಟ್ಟಿ ಕೂರಿಸೆ ಜಡ್ಡಿನ, ನೆಪದಲಿ ಕಾಲವೆಲ್ಲಾ ಬರಿದೆ ! || ಯಾಕೊ ||

ನೀನೊಬ್ಬಳೆ ನಿಜದಲಿ, ಪ್ರಕೃತಿಯೆ ನಿಸರ್ಗ ಸಹಜ

ಹೂವು ಕಾಯಿ ಹಣ್ಣು ಋತು, ಕಾಲಮಾನದ ತಾಜ

ಜೋಡಿಸಿಟ್ಟ ವಿಭುವವನೆ, ಮರೆತುಬಿಟ್ಟ ಗಡಿಯಾರ

ನೀನಿದ್ದೂ ಚಂಚಲಿನಿ, ಬೇಕಾದ ಋತುವ ತರುವ ವರ || ಯಾಕೊ ||

– ನಾಗೇಶ ಮೈಸೂರು

೨೪.೦೩.೨೦೧೮

(Picture source : internet social media)

00838. ನಗುವಲ್ಲೆ ಮುಗಿದ ವ್ಯಾಪಾರ…😛


00838. ನಗುವಲ್ಲೆ ಮುಗಿದ ವ್ಯಾಪಾರ…😛
____________________________


(Picture from Internet source – wikihow)

ಏನಿಲ್ಲ ಎಂತಿಲ್ಲ ಬರಿ ನಗೆಯ ಬಂಡವಾಳ
ಹೂಡಿ ನಿರಂತರ ಲಾಭ ಜಾಣೆಯವಳ ಜಾಲ !

ನಗುವಲ್ಲಿ ರಂಗವಲ್ಲಿ ಹಾಕಿದಳು ಮಳ್ಳಿ
ಮೆಲ್ಲ ಮೆಲ್ಲನೆ ಹೆಜ್ಜೆ ಮೈಲಿಗೆ ಮನದಲ್ಲಿ..

ಮಡಿ ಗರಿಗರಿಯಾಗಿತ್ತು ಸ್ವಚ್ಛ ಶುಭ್ರ ವಲ್ಲಿ
ಬಾಡಿಸಿಬಿಟ್ಟಳು ಚಂಚಲ ನಗುವ ಕಸ ಚೆಲ್ಲಿ..

ನಗೆ ಧೂಪ ಹೊಗೆ ಕೋಪ ಚಡಪಡಿಕೆ ಮೊತ್ತ
ಕಾಣಿಕೆಯಿತ್ತು ಅಣಕು ನಗೆಯೆ ಸೆರೆಯಾಗಿಸಿತ್ತ..

ನಗೆ ಮೊಲ್ಲೆ ಸಿಹಿ ಜಲ್ಲೆ ಮಾತಾಗಿತ್ತು ಕೊನೆಗೂ
ಕೊಟ್ಟ ಮಾತಿನ ಬಂಧ ಬಂಧಿಸಿ ಕೊನೆವರೆಗೂ..

– ನಾಗೇಶ ಮೈಸೂರು

ನಗು, ಮುಗಿದ, ವ್ಯಾಪಾರ, ನಾಗೇಶ, ಮೈಸೂರು, ನಾಗೇಶಮೈಸೂರು, nageshamysore,nagesha, mysore

00816. ಜೀವಕೋಶದ ಪ್ರವರ


00816. ಜೀವಕೋಶದ ಪ್ರವರ
_______________________

ವಿಜ್ಞಾನ ಪಾಠದಲ್ಲಿ ನಮ್ಮ ಮಕ್ಕಳು ಸಾಧಾರಣ ಮೊದಮೊದಲು ಕಲಿಯುವ ವಿಷಯಗಳಲ್ಲಿ ಜೀವಕೋಶದ ಪ್ರವರವೂ ಒಂದು. ಅದನ್ನು ಸರಳವಾಗಿ ಕವನ ರೂಪದಲ್ಲಿ ಸಂಗ್ರಹಿಸಲು ಹಿಂದೊಮ್ಮೆ ಯತ್ನಿಸಿದ್ದೆ. ಜೀವಕೋಶದ ಭಾಗಗಳ ಕುರಿತಾದ ಕವನದಲ್ಲಿ ಹಾಗೆ ಮಾಡುವಾಗ ಉದ್ದೇಶಪೂರ್ವಕವಾಗಿಯೇ ಆ ಭಾಗಗಳ ಆಂಗ್ಲ ರೂಪವನ್ನು ಬಳಸಿಕೊಂಡಿದ್ದೆ – ಕನ್ನಡದಲ್ಲಿ ಓದುವವರಿಗೆ ಆ ಹೆಸರುಗಳನ್ನು ಪರಿಚಯಿಸುವ ಸಲುವಾಗಿ. ವಿಜ್ಞಾನ ವಿಷಯಗಳು ಕವನವಾದರೆ ಹೇಗಿದ್ದಿತೆಂಬ ಕುತೂಹಲಕ್ಕೆ ಹೆಣೆದಿದ್ದೆಂಬ ಕಾರಣ ಬಿಟ್ಟರೆ ಮತ್ತಾವ ಹೆಗ್ಗಳಿಕೆಯೂ ಇದಕ್ಕಿಲ್ಲವಾದರೂ, ಸಾಮಾನ್ಯ ಓದುಗರ ಸುಲಭ ಗ್ರಹಿಕೆಗೆ ದಕ್ಕುವುದೋ ಇಲ್ಲವೋ ಎಂದು ನೋಡುವ ಮತ್ತೊಂದು ಕುತೂಹಲದ ಸಲುವಾಗಿ ಪ್ರಕಟಿಸುತ್ತಿದ್ದೇನೆ.. 😊


ಜೀವಕೋಶದ ಭಾಗಗಳು
____________________________


ಸಸ್ಯ ಪ್ರಾಣಿಗಳೆಂಬ ಎರಡು ಬಗೆ ಕೋಶ
ಭುವಿಯ ಮೇಗಡೆ ಆಳೋ ಜೀವ ಸ್ವರೂಪ
ಅರ್ಥವಾದರೆ ಇದರ ಮೂಲ ಸಿದ್ದಾಂತ
ಅರಿತಂತೆ ಜೀವಿ ಪೂರ ಜಾತಕ ಪರಿಣಿತ ||

ಸಸ್ಯರಾಶಿಯ ಕೋಶ ಹೊರಗಿನ ಆವೇಶ
ಒಳಗೆಲ್ಲವ ಹಿಡಿದಿಟ್ಟ ಗಟ್ಟಿ ಹೊರಕೋಶ
ಕೋಶದಾಕಾರ ಕೊಡೊ ಹೊರಭಿತ್ತಿ ವೇಷ
‘ಸೆಲ್ವಾಲ್’ ಎಂದು ಇದರೆಸರು ಇಂಗ್ಲೀಷ ||

ಬೆಚ್ಚನೆಯ ಹೊರಭಿತ್ತಿ ಕಳಚಿದರೆ ಪೂರ
ಒಳಗೆ ಸಿಗುವನು ಕೋಶ ಒಳಭಿತ್ತಿಗಾರ
ಇವ ತೆಳು ಜಾಲರಿ ಮೈಯ ಬಲೆಗಾರ
ಕಾಯುವ ಒಳ ಹೊರಬರುವವರ ಪೂರ ||

ವಿನಿಮಯಿಸಿಕೊಳ್ಳುವ ವಾಯು, ಆಹಾರ
ತನ್ನ ಜಾಲರಿಯ ಮೈ ಪರದೆ ಜರಡಿ ತರ
ಒಳಬಿಡೊ, ತಡೆಯಿಡೊ ದ್ವಾರಪಾಲ ಸ್ವರ
‘ಸೆಲ್ ಮೇಂಬ್ರೆನು’ ಇದರ ಆಂಗ್ಲ ಹೆಸರ ||

ಈ ಇಬ್ಬರು ಜಯ ವಿಜಯರ ದಾಟೆ ಬೇಗ
ಜೆಲ್ಲಿಯಂತಿರುವ ಸಾಹೇಬಾ ತುಂಬೊ ಜಾಗ
‘ಸೈಟೋ ಪ್ಲಾಸಂ’ ಇವನಿಗಿತ್ತ ಹೆಸರಿನ ರಾಗ
ಮೆತ್ತನೆ ತಾವಲಿ ಹಲಜನ ತುಂಬಿಸಿಟ್ಟ ಬೀಗ ||

ಇವನೊಳಗೆ ತೇಲುವರು ಇನ್ನುಳಿದ ಐಕಳು
ಕೋಶದ ಉಳಿದ ಇಬ್ಬರು ಕಾರ್ಯಕರ್ತರು
ಅವರಲ್ಲಿ ‘ನ್ಯೂಕ್ಲಿಯಸ್’ ದೊಡ್ಡಣ್ಣ ಪ್ರಮುಖ
‘ಕ್ಲೋರೋಪ್ಲಾಸ್ಟು’ ಚಿಕ್ಕಣ್ಣನೆ ಆಹಾರ ಜನಕ ||

———————————————————
ನಾಗೇಶ ಮೈಸೂರು
———————————————————

Picture source 03: https://en.m.wikipedia.org/wiki/File:Animal_cell_structure_en.svg
Picture source 02: https://en.m.wikipedia.org/wiki/File:Plant_cell_structure-en.svg
Picture source 01: https://en.m.wikipedia.org/wiki/File:Celltypes.svg

00722. ನೋವ ಬಿತ್ತಿ ನಲಿವ ಬೆಳೆವ ವ್ಯವಸಾಯ !


00722. ನೋವ ಬಿತ್ತಿ ನಲಿವ ಬೆಳೆವ ವ್ಯವಸಾಯ !
________________________________


ಅಲ್ಲಾ ಈ ನೋವು ಎನ್ನುವುದು ಎಂತಹ ವಿಚಿತ್ರ ಸರಕು ಅಂತೀನಿ ? ಬಡವ, ಬಲ್ಲಿದ ಅನ್ನದೆ ಎಲ್ಲರನ್ನು ಕಾಡೊ ಇದರ ಅಂತರ್ದರ್ಶನದ ಪರಿಚಯ ಎಲ್ಲರಿಗು ಇದ್ದರು ಯಾಕೋ ಇದರ ಪ್ರತ್ಯಕ್ಷ್ಯ ಸ್ವರೂಪ ದರ್ಶನ ಭಾಗ್ಯ ಯಾರಿಗೂ ಇದ್ದಂತಿಲ್ಲ. ಏನಾದರು ಏಟು ಬಿದ್ದು ಎಡವಟ್ಟಾದಾಗ ಕಣ್ಣಿಗೆ ಕಾಣಿಸಿಕೊಳ್ಳೊದು ಗಾಯ, ರಕ್ತ; ಕಾಣಿಸಿಕೊಳ್ಳದೆ ಅನುಭವಕ್ಕೆ ಮಾತ್ರ ನಿಲುಕೋದು ನೋವು. ಯಾರಾದರು ಮನಸಿಗೆ ಘಾಸಿ ಮಾಡಿದಾಗಲು ಅಷ್ಟೆ ಮಾಡಿದವರು, ಮಾಡಿದ ಘಟನೆಯನ್ನು ಕಾಣಬಹುದೆ ಹೊರತು ಅದುಂಟು ಮಾಡುವ ನೋವನ್ನಲ್ಲ; ಅದನ್ನು ಬರಿ ಅನುಭವಿಸಿಯೇ ತೀರಬೇಕು. ಹೋಗಲಿ ಬೇರೆಯವರಿಗೆ ಬೇಡಾ, ಅದನ್ನು ಅನುಭವಿಸುತ್ತಿರುವವರ ಕಣ್ಣಿಗಾದರೂ ಈ ನೋವು ಕಾಣಿಸಿಕೊಳ್ಳುತ್ತದೆಯೆ ? ಎಂದರೆ ಅದೂ ಇಲ್ಲ. ಬರಿ ಅನುಭವಗಮ್ಯ ಅಮೂರ್ತ ರೂಪಿ ಅಸ್ತಿತ್ವ ಈ ನೋವಿನದು.

ಹೊಟ್ಟೆಗಿಲ್ಲದ ಮಂದಿಯನ್ನು ಕಾಡುವ ಹಸಿವೆ, ಬಡತನ, ರೋಗರುಜಿನಗಳಂತಹ ಮೂರ್ತ ಸ್ವರೂಪಿ ನೋವುಗಳು, ಹೊಟ್ಟೆ ತುಂಬಿದ ಜನರನ್ನು ಕಾಡುವ ಏಕಾಂತ, ಖಿನ್ನತೆ, ಘನತೆ-ಪ್ರತಿಷ್ಠೆಯ ನೆಪದಲ್ಲಿ ಕಾಡುವ ಅಮೂರ್ತ ರೂಪಿ ನೋವುಗಳು – ಎರಡರ ಯಾತನೆಯೂ ಭೀಕರವೆ. ಇದರ ಜತೆಗೆ ಆಕಸ್ಮಿಕ ಅವಘಡಗಳು ತಂದಿಕ್ಕುವ ನೋವುಗಳು ಮೂರ್ತಾಮೂರ್ತಗಳೆರಡರ ಕಲಸು ಮೇಲೋಗರವಾಗಿ ಕಾಡುವ ಬಗೆ ಮತ್ತೊಂದು ರೀತಿಯ ದುರಂತ. ಇಂತಹ ವಿಶ್ವವ್ಯಾಪಿ ನೋವಿನ ವಿಶ್ವರೂಪಧಾರಣೆಯ ಮುಖವಾಡ ಕಳಚಿ ಅದರ ಗುಟ್ಟನ್ನೊಂದಿಷ್ಟು ಅನಾವರಣ ಮಾಡುವ ಚೇಷ್ಟೆ ಈ ಬರಹದ್ದು.. !

ನೋಡಿ ಮೊದಲಿಗೆ ಈ ನೋವೆಂತಹ ಖದೀಮ ಎಂದು. ತರತರದ ಸ್ತರಗಳಲ್ಲಿ ಅನುಭವಿಸಬಹುದಾದರು ಇವನನ್ನು ‘ಹೀಗೆ ಇರುವ’ ಎಂದು ಕಂಡವರಿಲ್ಲ. ಸ್ವಲ್ಪ ಎಡವಟ್ಟಾದರು, ಏರುಪೇರಾದರು ‘ಅಯ್ಯೋ ! ಅಮ್ಮಾ , ನೋವು’ ಎಂದು ಮುಟ್ಟಿ ನೋಡಿಕೊಂಡು ಕಿರುಚಿದರು ಅದು ನೋವಿನ ಅನುಭವವೆ ಹೊರತು, ಅದರ ರೂಪ ದರ್ಶನವಲ್ಲ. ಎಂತಹ ಗುಮ್ಮನಗುಸಕ ನೋಡಿ ಇವ..! ಎಲ್ಲಿ ಬರುತ್ತಿದ್ದಾನೆಂದು ಯಾತನೆಯಾಗಿ ಅನುಭವಿಸಬಹುದಂತೆ, ಹೇಗಿದ್ದಾನೆಂದು ನೋಡಹೊರಟರೆ ಮಾತ್ರ ಮಾಯವಿಯಂತೆ ನಿರಾಕಾರನಾಗಿ ಅದೃಶ್ಯ. ಆ ಲೆಕ್ಕದಲ್ಲಿ ನೋವನ್ನು ಸಾರಾಸಗಟಾಗಿ ಪರಬ್ರಹ್ಮನ ಸ್ವರೂಪದೊಡನೆ ಸಮೀಕರಿಸಿಬಿಡಬಹುದು ಬಿಡಿ – ನಿರಾಕಾರಾ, ನಿರ್ಗುಣ, ಸಾಕಾರ, ಸುಗುಣ – ಎಲ್ಲವೂ ಒಪ್ಪಿತವೆ.

ಈ ನೋವೊಂದು ತರಹ ನೆರಳಿನ ಹಾಗೆ ಅನ್ನಬಹುದು. ನೆರಳು ಸದಾ ಜತೆಯಲ್ಲೇ ಇದ್ದರು ಅದರ ಅಸ್ಪಷ್ಟ ದರ್ಶನವಾಗಬೇಕಾದರೂ ಸಹ ಕಟ್ಟಲು ಮತ್ತು ಬೆಳಕಿನ ಸಂಯೋಜಿತ ಸಹಕಾರ ಬೇಕು. ಆದರು ಕೇವಲ ಹೊರ ಅಂಚಿನ ಆಕಾರದ ರೂಪುರೇಷೆ ಮಾತ್ರ ನೆರಳಾಗಿ ಕಾಣಿಸಿಕೊಳ್ಳುತ್ತದೆಯೆ ಹೊರತು ಮಿಕ್ಕ ವಿವರಗಳಲ್ಲ. ನೋವು ಕೂಡ ಅದರ ಫಲಾನುಭಾವದ ರೂಪದಲ್ಲಿ ಮಾತ್ರ ಪ್ರಕಟಗೊಳ್ಳುತ್ತದೆಯೆ ಹೊರತು ಅದರ ಮೂಲ ಇನ್ನೆಲ್ಲೋ ಅಂತರ್ಗತವಾಗಿದ್ದುಬಿಡುತ್ತದೆ ಅಮೂರ್ತವಾಗಿ. ಕಾಣಿಸಿಕೊಳ್ಳುವುದೂ ಕೂಡ ನೆರಳಿನಂತೆಯೆ ಅಸ್ಪಷ್ಟವಾಗಿಯೇ ಹೊರತು ಬೆಳಕಿನಂತೆ ಸುಸ್ಪಷ್ಟವಾಗಲ್ಲ.

ನೋವಿನ ಪರಿಭಾಷೆ ಈ ತರದ್ದಾದರೆ ಇನ್ನದರ ಚಿಕಿತ್ಸೆಯ ವಿಷಯ ಇನ್ನು ಅಧ್ವಾನದ್ದು. ಗಾಯದ ಅಥವಾ ಕಾಡುವ ಯಾತನೆಗಳ ಮೂರ್ತ ಸ್ವರೂಪದಲ್ಲಿ ಕಾಣಿಸಿಕೊಂಡಾಗೇನೊ ಚಿಕಿತ್ಸೆ ಸ್ವಲ್ಪ ಸುಲಭವಾದೀತು – ಕನಿಷ್ಠ ಅವುಗಳ ಮೂಲಕ ಮೂಲ ಪತ್ತೆ ಹಚ್ಚಿ ಮದ್ದು ಕೊಡಬಹುದಾದ ಕಾರಣ. ಬಿದ್ದು ಪೆಟ್ಟಾಗಿ ರಕ್ತ ಸುರಿಯುವ ಜಾಗಕ್ಕೆ ಮುಲಾಮು, ಪಟ್ಟಿ ಹಚ್ಚಿದಷ್ಟೆ ಸುಲಭವಾಗಿ ನೋವಿನಿಂದ ಮುಖ ಹಿಂಡಿಕೊಂಡು ಹೊಟ್ಟೆ ಹಿಡಿದುಕೊಂಡಾಗ ಹೊಟ್ಟೆನೋವಿನ ಮದ್ದು ನೀಡಬಹುದು ; ತಲೆ ಮೇಲೆ ಕೈ ಹೋದರೆ ತಲೆನೋವಿಗೆ ಮದ್ದು ನೀಡಬಹುದು. ಆದರೆ ನಿಜವಾದ ತಲೆನೋವು ಮೂಗೇಟುಗಳದು – ಕಣ್ಣಿಗೆ ಕಾಣಿಸದಿದ್ದರು ಅಂದಾಜಿನ ಮೇಲೆ ಮದ್ದು ಹಾಕುವ ಪಾಡು ಇಲ್ಲಿಯದು.

ಆದರೆ ಇದೆಲ್ಲಕ್ಕೂ ಮೀರಿದ ಮತ್ತೊಂದು ಬಗೆಯ ಮಹಾನ್ ನೋವಿದೆ – ಇದೇ ನೋವುಗಳೆಲ್ಲದರ ಮುಕುಟವಿಲ್ಲದ ಮಹಾರಾಜ ಎನ್ನಬಹುದು. ಅದೇ ಮನಸಿನ ನೋವು – ಭಾವನಾತ್ಮಕ ಸ್ತರದಲ್ಲಿ ಉದ್ಭವಿಸಿ ಕಾಡಿಸಿ, ಕಂಗೆಡಿಸುವ ನೋವು. ನೋವಿನ ಅತೀವ ಅಮೂರ್ತ ರೂಪಿಗೊಂದು ಅತ್ಯುತ್ತಮ ಉದಾಹರಣೆ ಬೇಕೆಂದರೆ ಇದೆ ಸರಿಯಾದ ಗಿರಾಕಿ. ಯಾಕೆಂದರೆ ಮನಸಿನ ನೋವು ಇದೆಯೋ, ಇಲ್ಲವೋ ಎನ್ನುವುದರ ಕುರುಹು ಕೂಡ ಪರರಿಗೆ ಗೊತ್ತಾಗದಂತೆ ಮುಚ್ಚಿಟ್ಟುಬಿಡಬಹುದು. ಸ್ನೇಹದಲ್ಲಿ ತಿಂದ ಏಟಿಗೊ, ಅಲಕ್ಷಿಸುವ ತಾಯ್ತಂದೆಗಳೆನ್ನುವ ಕಾರಣಕ್ಕೊ, ಪ್ರೀತಿಯಲ್ಲಿ ಸಿಕ್ಕಿಸಿ ಆಕಾಶದ ಅಂತಸ್ತಿಗೇರಿಸಿ ಪಾತಾಳಕ್ಕುದುರಿಸಿದ ದಿಗ್ಭ್ರಾಂತಿಗೊ, ಎಂದೆಂದಿಗು ಮೋಸವಾಗದು ಎಂದು ನಂಬಿಕೆ ಇರಿಸಿದ್ದ ವ್ಯಕ್ತಿಯಿಂದಲೆ ಮೋಸಕ್ಕಿಡಾಗಿ ಅದರಿಂದುಂಟಾದ ಕೀಳರಿಮೆ, ಯಾತನೆ, ಸಂಕಟಗಳ ಕಾರಣಕ್ಕೊ – ಹೀಗೆ ನೂರಾರು ಮಾನಸಿಕ ಹಿನ್ನಲೆಯ ನೋವುಗಳು ಕಾಡಿದಾಗ ವಾಸಿ ಮಾಡುವುದು ಬಲು ಕಠಿಣ. ಕೆಲವರು ಅದರಲ್ಲೆ ಸಿಕ್ಕಿ, ನಲುಗಿ ಮಾನಸಿಕ ರೋಗಿಗಳಾಗಿ ಪಾತಾಳಕ್ಕಿಳಿಯುವ ದುರಂತ ಕಂಡರೆ, ನೀಸಿ ಜೈಸುವ ಛಲವುಳ್ಳವರು ಅದನ್ನೆ ಆಧಾರವಾಗಿಟ್ಟುಕೊಂಡು ಅದರ ಪ್ರಭಾವದಿಂದ ಫೀನಿಕ್ಸಿನಂತೆ ಮೇಲೆದ್ದು ಬರಲು ಯತ್ನಿಸುತ್ತಾರೆ.. ಅದೇನೆ ಆದರೂ ಆಗೀಗೊಮ್ಮೆ ಕಾಡುವ ನೋವಿನ ತುಣುಕುಗಳು ಕವನಗಳಾಗುತ್ತವೆ, ಮರೆತಿಲ್ಲವೆಂದು ನೆನಪಿಸುವ ಕಂಬನಿಯ ಹನಿಗಳಾಗುತ್ತವೆ, ದಿಕ್ಕೆಟ್ಟ ಬದುಕಿನ ನಾವೆಯನ್ನು ಛಲದಿಂದ ಮುನ್ನಡೆಸುವ ಪ್ರೇರಣೆಗಳಾಗುತ್ತವೆ.

ಅದೇನೆ ಆದರು ಒಂದಂತು ನಿಜ. ಬದುಕಿನಲ್ಲಿ ನೋವು ಪಾಠ ಕಲಿಸಿದಂತೆ ಮತ್ತಾರು ಕಲಿಸಲು ಸಾಧ್ಯವಿಲ್ಲ. ಬಹುಶಃ ನೋವೆ ಇರದಿದ್ದರೆ ಕಲಿಕೆಯೂ ಇಲ್ಲವಾಗಿ ಮಾನವನ ಪಕ್ವತೆ, ಪ್ರಬುದ್ಧತೆಗಳು ಚಲನ ಶಾಸ್ತ್ರದ ನಿಧಾನದ ಹಾದಿ ಹಿಡಿದು ಮಂದಗತಿಯಲ್ಲೆ ವಿಕಸನವಾಗುತ್ತಿದ್ದವೊ ಏನೋ..? ನೋವಿನ ದೆಸೆಯಿಂದ, ಆಗುತ್ತಿರುವ ಬಹು ದೊಡ್ಡ ಉಪಕಾರ ಇದೆ ಇರಬೇಕು – ಆ ಗಳಿಗೆಯಲ್ಲಿ ಅದಕ್ಕೆ ಹಿಡಿಶಾಪ ಹಾಕಿ ತುಚ್ಛೀಕರಿಸಿದರು, ಎಲ್ಲಾ ಮುಗಿದ ಮೇಲೆ ಆ ಅನುಭವ ಕಟ್ಟಿಕೊಟ್ಟ ಕಲಿಕೆಯನ್ನು ಅವಲೋಕಿಸಿದರೆ ಆ ನೋವು ವಹಿಸಿದ ವೇಗವರ್ಧಕದ ಪಾತ್ರ ಅರಿವಾದೀತು. ಬಹುಶಃ ಈ ಕಾರಣದಿಂದಲೆ ಇರಬೇಕು – ಕಷ್ಟ ಬಡತನದಲ್ಲಿ ನೋವನನುಭವಿಸಿ ಬಂದವರು ಪಕ್ವತೆ, ಪರಿಪಕ್ವತೆ, ಪ್ರಬುದ್ಧತೆಯಲ್ಲಿ ಹೆಚ್ಚಿನ ಮಟ್ಟದ ಸ್ತರವನ್ನು ತಮ್ಮ ಚಿಕ್ಕ ವಯಸ್ಸಿನಲ್ಲೆ ತಲುಪುವುದು.

ಒಟ್ಟಾರೆ ಸಾರಾಂಶದಲ್ಲಿ ಹೇಳುವುದಾದರೆ ನೋವು, ನೋವಿನ ಅನುಭವ ನೀಡುವುದಾದರು ಅದೊಂದು ಅನಿವಾರ್ಯ ಸಂಗಾತಿ ಎನ್ನದೆ ವಿಧಿಯಿಲ್ಲ. ಮೂರ್ತವೊ ಅಮೂರ್ತವೊ ಅದನ್ನು ಸರಿಯಾಗಿ ಬಳಸಿಕೊಂಡು ಕ್ರಿಯಾಶೀಲ ಫಲಿತವನ್ನಾಗಿಸುವುದೋ ಅಥವಾ ಅದರಲ್ಲೆ ಕೊರಗಿ, ಮರುಗಿ ನಿಷ್ಫಲ , ನಿಷ್ಕ್ರಿಯ ದುರಂತವಾಗಿಸುವುದೊ – ಎರಡೂ ನಮ್ಮ ಕೈಯಲ್ಲೇ ಇದೆ.

ನೋವನ್ನು ಮೊದಲು ಅನುಭವಿಸಿ, ನಂತರ ಅಧಿಗಮಿಸಿ, ಕೊನೆಗೆ ಅನಿಕೇತನವಾಗಿಸಿದರೆ ಅಸಾಧ್ಯವೆಂದುಕೊಂಡ ಸಾಧನೆಗಳೆಲ್ಲ ಹೂವೆತ್ತಿದ ಹಾಗೆ ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.

ಬನ್ನಿ ನೋವಿಗೆ ಹೆದರುವುದು ಬೇಡ – ಬದಲಿಗೆ ನೋವ ಬಿತ್ತಿ ನಲಿವ ಬೆಳೆಯೋಣ..!

– ನಾಗೇಶ ಮೈಸೂರು

(Picture source: https://en.m.wikipedia.org/wiki/File:OuchFlintGoodrichShot1941.jpg)

00693. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೦-೦೦೧೮)


00693. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೦-೦೦೧೮)
_____________________________________________

ಲಲಿತಾ ಸಹಸ್ರ ನಾಮದ ಒಂಭತ್ತು (೧೦-೧೯) ಹೆಸರಿನ ಭಾಗಶಃ ನಾಮಾರ್ಥಗಳನ್ನು ಹಾಯ್ಕು ಮಾದರಿಯಲ್ಲಿ ಮೂಡಿಸುವ ಯತ್ನ. ಆ ಯತ್ನದಲ್ಲಿ ಅರ್ಥ ನಷ್ಟವೋ, ಹಾಯ್ಕು ನಿಯಮ ಉಲ್ಲಂಘನೆಯೊ ಆಗಿದ್ದರೆ ಕ್ಷಮೆಯಿರಲಿ 😊

(ಶ್ರೀಯುತ ರವಿಯವರ ಮೂಲ ಇಂಗ್ಲೀಷಿನಲ್ಲಿದ್ದ ಸಹಸ್ರನಾಮ ವಿವರಣೆಯನ್ನು ಕನ್ನಡೀಕರಿಸಿದ ಶ್ರೀ ಶ್ರೀಧರ ಬಂಡ್ರಿಯವರ ವಿವರಣೆಯನ್ನಾಧರಿಸಿ ನಾನು ಬರೆದಿದ್ದ ಪದ್ಯಗಳನ್ನು ಮೂಲವಾಗಿಟ್ಟುಕೊಂಡು ಈ ಹಾಯ್ಕುಗಳನ್ನು ಹೊಸೆದಿದ್ದೇನೆ. ಆ ಮೂಲ ಪದ್ಯಗಳನ್ನು ಜತೆಗೆ ನೀಡಿದ್ದೇನೆ, ತುಸು ಹೆಚ್ಚಿನ ಸ್ಪಷ್ಟತೆಗಾಗಿ)

೦೦೧೦. ಮನೋರೂಪೇಕ್ಷು-ಕೋದಂಡಾ
________________________

ಕೆಳದೆಡಗೈ
ಕಬ್ಬು ಜಲ್ಲೆ ಶ್ಯಾಮಲೆ
– ಮನೋ ನಿಗ್ರಹ.

ಮನ ಸಂಕಲ್ಪ ವಿಕಲ್ಪ ಗುಣಗಳ ತಾಣ, ಸೂಕ್ಷ್ಮತೆ ಜ್ಞಾನ
ಇಂದ್ರೀಯಗ್ರಹಣ ಸ್ಪಷ್ಟಾಲೋಚನ ಕ್ರಿಯಾಸ್ಪೋಟ ತಾಣ
ಕೆಳದೆಡಗೈ ಕಬ್ಬಿನ ಬಿಲ್ಲೆ ಹಿಂಡಿದರೆ ಸಿಹಿ ಪರಬ್ರಹ್ಮ ಜಲ್ಲೆ
ಶ್ಯಾಮಲದೇವಿ ಪ್ರತಿನಿಧಿಸುವ ಕೈ, ಮನ ನಿಗ್ರಹ ಕಾವಲೆ ||

೦೦೧೧. ಪಂಚತನ್ಮಾತ್ರ-ಸಾಯಕಾ
_______________________

ಕೆಳ ಬಲಗೈ
ಪುಷ್ಪ ಬಾಣ ವಾರಾಹಿ
– ಮಾಯಾವಿನಾಶ.

ಶಬ್ದ ಸ್ಪರ್ಶ ರೂಪ ರಸ ಗಂಧ ತನ್ಮಾತ್ರೆ ಸೂಕ್ಷ್ಮ ಸಂಬಂಧ
ಹೂವಾಗಿ ವಿನಾಶ, ಪ್ರೇರಣೆ ಗೊಂದಲ ಹುಚ್ಚುತನ ಆನಂದ
ಪಂಚಪುಷ್ಪಬಾಣತನ್ಮಾತ್ರ ಮಾಯವಿನಾಶ ಕೆಳ ಬಲದಕೈ
ಪ್ರತಿನಿಧಿಸಿ ವಾರಾಹಿದೇವಿ ಭಕ್ತರ ಸಲಹಿ ಲಲಿತಾಮಯಿ ||

೦೦೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ
________________________________________

ಅರುಣೋದಯ
ದೇವಿ ಕಾಂತಿ ವೈಭವ
– ವಾಗ್ಭವ ಕೂಟ.

ಭೌತಿಕ ಪ್ರಪಂಚ ಪೂರ ರೋಹಿತ ಕಿರಣಗಳ ಅಪಾರ
ದೇವಿ ಹೊಮ್ಮಿಸುವ ಮೈಕಾಂತಿ ಜಳ ತುಂಬಿದ ಸಾರ
ಕೆಂಗುಲಾಬಿ ಅರುಣೋದಯ ಕಂಗೊಳಿಸೆ ಕಿರಣವಾಗಿ
ವಾಗ್ಭವಕೂಟ ಮುಡಿಯಿಂದಡಿ ವರ್ಣನೆ ಭೌತಿಕವಾಗಿ ||

೦೦೧೩. ಚಂಪಕಾಶೋಕ-ಪುನ್ನಾಗ- ಸೌಗಂಧಿಕ-ಲಸತ್-ಕಚಾ
_____________________________________

ದೇವಿ ಮುಡಿ ಹೂ
ಅಂತಃಕರಣದಂಶ
– ಅಜ್ಞಾನವಟ್ಟೆ.

ಭ್ರಮೆಗೊಡ್ಡೊ ಅಂತಃಕರಣಾಂಶ ಅಹಂಕಾರಾ ಚಿತ್ತ ಬುದ್ದಿ ಮನಸೆ
ಸೌಗಂಧಿಕ ಪುನ್ನಾಗ ಚಂಪಕಾಶೋಕ ಮುಡಿ ಹೂವಾಗಿ ಪ್ರತಿನಿಧಿಸೆ
ಮಧುರ ಗಂಧವಾಘ್ರಾಣಿಸುತ ದೇವಿ ಪರಿಮಳ ಹಡೆಯುವ ಪುಷ್ಪ
ಅಜ್ಞಾನವಟ್ಟಿ ಕರುಣಾಕೇಶಿ ಮಾತೆ ಮೃದು ನೀಲ ಕಮಲ ಸ್ವರೂಪ ||

೦೦೧೪. ಕುರುವಿಂದ-ಮಣಿಶ್ರೇಣೀ-ಕನತ್-ಕೋಟೀರ-ಮಂಡಿತಾ
______________________________________

ಅಮೂಲ್ಯ ರತ್ನ
ಸೋದರಿಕೆ ಕಿರೀಟ
– ವಿಷ್ಣು ಕಾಣಿಕೆ.

ಲಲಿತಾ ಸೋದರ ವಿಷ್ಣು, ಭಕ್ತಿ ಐಶ್ವರ್ಯ ಪ್ರೇಮಕೆ ಕುರುವಿಂದ ಮಣಿ
ಉಜ್ವಲ ಕೆಂಪಲಿ ಕಿರೀಟದೆ ರಾರಾಜಿಸಿ ದೇವಿಯನಲಂಕರಿಸುವ ಗಣಿ
ಲೌಕಿಕಾಧ್ಯಾತ್ಮಿಕ ಉನ್ನತಿಗೆ ಧ್ಯಾನಿಸೆ, ದ್ವಾದಶಾದಿತ್ಯ ಖಚಿತ ಕಿರೀಟೆ
ಸುವರ್ಣ ಮಾಣಿಕ್ಯ ಪ್ರಭೆಯಡಿ ಧ್ಯಾನಾಸಕ್ತನ, ರತ್ನವಾಗಿಸೊ ಲಲಿತೆ ||

೦೦೧೫. ಅಷ್ಟಮೀ-ಚಂದ್ರ-ವಿಬ್ರಾಜ-ಧಲಿಕ-ಸ್ಥಲ-ಶೋಭಿತಾ
_____________________________________

ದೇವಿ ಮುಂದಲೆ
ಅನುಕರಿಸೊ ಅಷ್ಟಮಿ
– ಚಂದ್ರ ಧನುಸು.

ಅಷ್ಟಮಿ ದಿನದ ಚಂದಿರ ಕಾಣುವನೆಷ್ಟು ಸುಂದರ
ಡೊಂಕಿನ ತುದಿ ಬಾಗಿಸಿದ ಬಿಲ್ಲಾಗಿಸಿದ ಸರದಾರ
ಬಂತೆಲ್ಲವನಿಗೆ ಸ್ಪೂರ್ತಿ ದೇವಿ ಲಲಿತೆಯದಾ ರೀತಿ
ಸುಂದರ ಮುಂದಲೆಯನುಕರಿಸಿ ಆ ದಿನವಷ್ಟೆ ಕೀರ್ತಿ ||

೦೦೧೬. ಮುಖಚಂದ್ರ-ಕಲಂಕಾಭ-ಮೃಗನಾಭಿ-ವಿಶೇಷಕಾ
____________________________________

ಅರ್ಧಚಂದಿರ
ತಿಲಕ ಪೂರ್ಣಮುಖಿ
– ಕಸ್ತೂರಿ ಪ್ರಭೆ.

ಪರಿಮಳಯುಕ್ತ ದ್ರವ್ಯ ಕಸ್ತೂರಿಯ ಸುವಾಸನೆಯ ಸೊಗ
ಪೌರ್ಣಿಮೆ ಚಂದ್ರನ ಮುಖಕೆ ಅರ್ಧಚಂದ್ರ ಕಸ್ತೂರಿ ತಿಲಕ
ಲೇಪಿಸಿ ಪರಿಮಳಿಸೊ ದೇವಿ ಚಂದ್ರಮುಖಿಯಲರ್ಧಚಂದ್ರ
ನೋಡುತ ದೇವಿಯ ಮೊಗವನೆ ಹುಣ್ಣಿಮೆಗೆ ಪೂರ್ಣಚಂದ್ರ ||

೦೦೧೭. ವದನಸ್ಮರ-ಮಾಙ್ಗಲ್ಯ-ಗೃಹತೋರಣ-ಚಿಲ್ಲಿಕಾ
__________________________________

ಹುಬ್ಬೆ ತೋರಣ
ಮುಖವೆ ಅರಮನೆ
– ಮನ್ಮಥ ಗೃಹ.

ತನ್ಮಯನಾದನೆ ಮನ್ಮಥ ದೇವಿ ಹುಬ್ಬು ನೋಡಲನವರತ
ನಕಲು ಮಾಡಿದಾ ತೋರಣ ಕಾಮನರಮನೆಯಲಿ ನಗುತ
ದೇವಿ ಮುಖಮಂಡಲವನ್ನೆ ಅಂಗಜನರಮನೆ ಅನುಕರಿಸುತ್ತ
ಲಲಿತೆ ಮಂಗಳಕರ ವದನ ಕಾವನಂತಃಪುರದಲಂತರ್ಗತ ||

೦೦೧೮. ವಕ್ತ್ರ-ಲಕ್ಷ್ಮೀ-ಪರೀವಾಹ-ಚಲನ್-ಮೀನಾಭ-ಲೋಚನಾ
_______________________________________

ಮೀನ ನಯನ
ಬ್ರಹ್ಮಾಂಡ ಪಾಲನೆಗೆ
– ಕೃಪಾ ಕಟಾಕ್ಷ.

ನಯನಮನೋಹರ ನಯನ ಮೀನಾಗಿಹ ಕೊಳ ವದನ
ಮೀನಂತೆ ತ್ವರಿತಗತಿಯೆ ಚಲಿಸೆ ಬ್ರಹ್ಮಾಂಡದೆಲ್ಲಾ ತಾಣ
ಕೃಪಾ ದೃಷ್ಟಿಯಲೆ ಮಾತೆ ಈ ಜಗವನೆಲ್ಲಾ ಪೋಷಿಸುತೆ
ಮೀನಾಕ್ಷಿ ಮೀನಲೋಚನೆ ಸುಂದರ ಕಣ್ಣಲೆ ಸಲಹುವಂತೆ ||

– ನಾಗೇಶ ಮೈಸೂರು

00690. ಕಗ್ಗ ಟಿಪ್ಪಣಿ ೦೦೬ ( ೦೫.೦೫.೨೦೧೬ ‘ರೀಡೂ ಕನ್ನಡ’ದಲ್ಲಿ)


00690. ಕಗ್ಗ ಟಿಪ್ಪಣಿ ೦೦೬ ( ೦೫.೦೫.೨೦೧೬ ‘ರೀಡೂ ಕನ್ನಡ’ದಲ್ಲಿ)
_______________________________________________________

ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬

00671. ಹಾಯ್ಕು ೨೬.೦೪.೨೦೧೬


00671. ಹಾಯ್ಕು ೨೬.೦೪.೨೦೧೬
_________________________

(೦೧)
ಬಿರು ಬಿಸಿಲು ?
ವಸಂತನಪ್ಪುಗೆಗೆ
– ಪ್ರೇಮದ ಜ್ವರ !

(೦೨)
ಬಿರು ಬಿಸಿಲು
ಹೀರಿ ಭುವಿಯೊಡಲು
– ಮತ್ತೆ ಮಳೆಯಾಗಲು !

(೦೩)
ಮೋಡ ಕರಗಿ
ಸುರಿಯೆ ಸರಿ, ಬರಿ
– ಮುಸುಕಿದರೆ ?

(೦೪)
ದೊಡ್ಡ ನಗರ
ಬಿಸಿಲು ಮಳೆ ಚಳಿ
– ಬಡಾವಣೆಗೆ !

(೦೫)
ಬಿತ್ತಲ್ಲ ಮಳೆ
ನಿಟ್ಟುಸಿರಿಗು ಮುನ್ನ
– ತಂಪೆಲ್ಲ ಮಾಯ !

(೦೬)
ಬರಲಿ ಮಳೆ
ಹಿಡಿಯೆ ಪಾತ್ರವಿರೆ
– ರೈತಗೆ ನಾಳೆ…

(೦೭)
ಬಿಸಿಲೂ ಮಳೆ
ದಾಯಾದಿ ನೆಂಟಸ್ತಿಕೆ
– ಮುನಿಸು ಸಲ್ಲ !

(೦೮)
ಪಪ್ಪಾಸು ಕಳ್ಳಿ
ನೀರಿಲ್ಲದೆ ಬೆಳೆದ.
– ನಮದೆ ಸ್ವಾರ್ಥ !

(೦೯)
ಮೋಡ ಕಟ್ಟಿದೆ
ಮನ ಚಡಪಡಿಕೆ
– ಮಳೆ ಬರದೆ !

(೧೦)
ಅವಳ ಮನ
ಬಿಸಿಲು ಮಳೆ ಚಳಿ
– ಋತು ಸಕಲ !

– ನಾಗೇಶ ಮೈಸೂರು

00619. ಫೇಸ್ಬುಕ್ ಫೇಸ್ಬುಕ್..


00619. ಫೇಸ್ಬುಕ್ ಫೇಸ್ಬುಕ್..
_____________________

(೦೧)
ಅವಳ ಪೋಸ್ಟು
ಲೈಕುಗಳ ಮೇಲೆ ಲೈಕು
– ಅವನ ಖುಷಿ! ||

(೦೨)
ಅವನ ಮನ
ಅವಳ ‘ಫೇಸು’ ಬುಕ್ಕಾಗಿ
– ಲೈಕಿಗೆ ಜಾತ್ರೆ ||

(೦೩)
ಅವಳೊಡ್ಡಿದ
ಪರೀಕ್ಷೆ , ಓದೇ ಕೂತೆ..
– ‘ಫೇಸು’ ಬುಕ್ಕಲಿ! ||

(೦೪)
ಫೇಸು ಬುಕ್ಕಿನ
ಮೇಳ, ನೇಯ್ಗೆ ಸಂತೆಗೆ
-ಮೂರೇ ಮೊಳವೆ.. ||

(೦೫)
ಫೇಸು ಬುಕ್ಕಲಿ
ಫೇಸ್ಟೂ ಫೇಸ್ ಆಗೋದಿಲ್ಲ..
– ಅದಕೆ ಧೈರ್ಯ ! ||

(೦೬)
ಫೇಸ್ ಬುಕ್ಕಲಿ
ರಣ ಹೇಡಿಗಳು ಇಹರು
– ಲೈಕೇ ಹಾಕೋಲ್ಲ !😜 ||

(೦೭)
ಫೇಸು ಬುಕ್ಕಾಗಿ
ಮನದೇ ನಿಲ್ಲುವ ಮುನ್ನ
– ಫೋಟೊ ಬದಲು! ||

(೦೮)
ಯಾರೋ ಗೊತ್ತಿಲ್ಲ
ಊರು ಕೇರಿ ನೋಡಿಲ್ಲ
– ಫೇಸ್ಬುಕ್ ಮೈತ್ರಿ ||

(೦೯)
ಲೈಕಿಗೆ ಲೈಕು,
ಪೋಸ್ಟಿಗೆ ಪೋಸ್ಟ್ ಹಾಕು
– ಅದೇ ಫೇಸ್ಬುಕ್ ||

(೧೦)
ಬೆನ್ನಿಗೆ ಬಿದ್ದು
ಹಿಂಬಾಲಿಸೆ ಸುಲಭ
– ಫಾಲೋ ಫೇಸ್ಬುಕ್! ||

– ನಾಗೇಶ ಮೈಸೂರು

ಬ್ಲಾಗಿನ ಮೊದಲಂಕಣ – ಮನದಿಂಗಿತಗಳ ಸ್ವಗತ!


ಮನದಲಿರುವ ತುಡಿತ, ಮಿಡಿತ, ಕಡಿತಗಳೆಲ್ಲ ಹೊರಬರಲು ಬರಹವ್ಹೇಗೆ ದಾರಿಯಾಗುವುದೊ, ಹಾಗೆ ಅದನ್ನು ಹೊರ ಜಗತ್ತಿಗೆ ಮುಟ್ಟಿಸಲು ಅಷ್ಟೆ ಪರಿಣಾಮಕಾರಿ ಸಾಧನಗಳು ಅತ್ಯಗತ್ಯ. ಹಿಂದೆ ಮತ್ತು ಈಗಲೂ ಪತ್ರಿಕೆಗಳು, ಪುಸ್ತಕಗಳು ಆ ಕಾರ್ಯವನ್ನು ಚೊಕ್ಕಟವಾಗಿ ನಿರ್ವಹಿಸುತ್ತಾ ಬಂದಿವೆ. ಅದರ ಹೊಸ ಅಯಾಮವಾಗಿ ತೆರೆದುಕೊಂಡ ತಾಂತ್ರಿಕತೆಯ ಅವಿಷ್ಕಾರಗಳು, ಮಾಹಿತಿ ಮತ್ತು ಸಂವಹನ ಜಗದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿ, ಜನಮನಗಣಗಳು ಸಂವಾದಿಸುವ ವಿಧಾನದಲ್ಲೆ ಮೂಲಭೂತ ಬದಲಾವಣೆ ತರುವತ್ತ ದಾಪುಗಾಲಿಕ್ಕುತ್ತಿವೆ. ಯಾರು ಇದರಿಂದ ಹೊರತಾಗುತ್ತಾರೊ ಅವರೆ ಈ ಬದಲಾವಣೆಯ ಕ್ರಾಂತಿಯಲ್ಲಿ ಪಾಲುದಾರರಾಗುವ ಸುವರ್ಣಾವಕಾಶದಿಂದ ವಂಚಿತರಾಗಬೇಕಾಗುತ್ತದೆ. ಬದಲಾಗಿ ಇದನ್ನಪ್ಪಿದವರಿಗೆ ಹೊಸ ಮಾಧ್ಯಮ, ದಾರಿಗಳು ಗೋಚರವಾಗಿ ಹೊಸತಿನ ಹೊಸ ಜಗತ್ತೆ ತೆರೆದುಕೊಳ್ಳಬಹುದು.

ಅಂಥ ಸಮೂಹ ಸಂವಹನದ ಮಾಧ್ಯಮವಾಗಿ ತೆರೆದುಕೊಂಡ ನೂರಾರು ಬಾಗಿಲುಗಳಲ್ಲಿ ಒಂದು – ಈ ಬ್ಲಾಗ್ ಅಂಕಣಗಳು. ಸೈದ್ದಾಂತಿಕವಾಗಿ ಇದರ ಆಳಗಲ ಅಪರಿಮಿತ – ಪ್ರತಿಯೊಬ್ಬನೂ ಪ್ರತಿಯೊಬ್ಬನನ್ನು ಮುಟ್ಟಬಲ್ಲ ಸಾಮರ್ಥ್ಯವನ್ನೊದಗಿಸಿಕೊಡಬಲ್ಲ ದೈತ್ಯ. ದೇಶ, ಕಾಲ, ಅವಕಾಶಗಳ ಪರಿಮಿತಿ ಎಲ್ಲೆ ಮೀರಿಸಿ ಎಲ್ಲೆಡೆಗು ತಲುಪಿಸಬಲ್ಲ ಜಾದುಗಾರ. ಅಂತೆಯೆ, ಪ್ರತಿಯೊಬ್ಬನಿಗೂ ತಲುಪಿದ್ದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ, ನಿರಾಕರಿಸುವ, ರವಾನಿಸುವ ಸ್ವೇಚ್ಚೆ – ಸ್ವಾತ್ಯಂತ್ರವನ್ನೂ ನೀಡುವ ಹರಿಕಾರ. ಏನಿಲ್ಲದಿದ್ದರು ಕೊನೆಗೆ, ಮನದಿಂಗಿತಗಳನ್ಹೊರಹಾಕಬಯಸುವ ಚಡಪಡಿಕೆಗೆ ದಾರಿ ಮಾಡಿ ಮನ ನಿರಾಳ ಮಾಡುವ ಮನೋವೈದ್ಯ. ಯಾರು ನೋಡಲಿ – ಬಿಡಲಿ, ಓದಲಿ – ಬಿಡಲಿ, ತನ್ನ ಎದೆಭಾರವಿಳಿಸುವ ಮಾಧ್ಯಮವಾಗಿದ್ದರೆ ಸಾಕೆನ್ನುವವನಿಗೂ ಇದು ಸೈ.

ಅಂಥ ಒಂದು ಬ್ಲಾಗಿನಂಕಣದ ನನ್ನ ಮೊದಲ ಬರಹವಿದು. ಏನಿದರ ಹಿಂದಿನುದ್ದೇಶ? ನಿಜಕ್ಕೂ ಯಾವುದೆ ಗುರಿ ಉದ್ದೇಶವಿರದೆ ಬರಿ ಮನದನಿಸಿಕೆಗಳಿಗೆ ಬರಹದ ರೂಪಕೊಡುವ ಕಿರು ಆಶಯದೊಂದಿಗೆ ಬರೆಯುತ್ತಿದ್ದೇನೆ. ಲಹರಿಯ ವಿಹರಿ ಹರಿದು ಸ್ವಾದಾಸ್ವಾದನೆಗರ್ಹ ಬರಹಗಳಾಗಿ ಹೊರಬಿದ್ದರೆ, ಓದಿದವರು ಖುಷಿಯಿಂದ ಮೆಚ್ಚಿದರೆ ಅಥವ ಟೀಕಿಸಿ ಲೋಪದೋಷಗಳ ಅರಿವಾಗಿಸಿದರೆ ಸಂತಸ. ಆ ಪ್ರಕ್ರಿಯೆಯಲ್ಲೆ ಬಹುಶಃ ನಾನೂ ಬೆಳೆದು ನನ್ನ ಸ್ತರವನ್ನೆತ್ತರದ ನೆಲೆಗೊಯ್ಯಲು ಸಾಧ್ಯವಾದೀತು.

ನೋಡುವ,ಇದು ಎಲ್ಲಿಯತನಕ ಸಾಗೀತೆಂದು!

ಮನದಿಂಗಿತ ಸ್ವಗತ
————————————

ನಾನ್ಹುಡುಕೆ ನನ್ನಾಶಯ
ಬರೆಯಲೇನಿದೆ ವಿಷಯ
ತಲೆ ಕೆರೆದೂ ಖಾಲಿ
ಬರಿ ಬರೆವ ಖಯಾಲಿ!

ಡೈರಿ ಬರೆದಂತೆ ಬ್ಲಾಗು
ಬಯಲಿಗಿಟ್ಟ ಭಾವನೆಗು
ಬರುವರೆ ಗಿರಾಕಿ ಹುಡುಕಿ
ಸಂಶಯಗಳದೇ ಗಿರಕಿ!

ಮನ ಬಂದಂತೆ ಗೀಚಿ
ಮಾನದ್ದೆಲ್ಲ ಮರೆಮಾಚಿ
ಮನದೊಳಗೇ ಮೊಗಚಿ
ಕೊನೆಗೂ ಬೆಳಕ ದೋಚಿ!

ಬಿಟ್ಟೀತೆ ಛಿ!ಛಿ! ಭಾವ
ನಿರಾಳತೆಯಾಗಿ ಸಹಜ
ಉರುಳೀತೆ ನಿಲ್ಲದಲೆಗೆ
ನಾನೀಗೇರಿದಾ ಜಹಜ!

ಬ್ಲಾಗಂತೇ ಸೋಗಂತೆ
ಮನದಿಂಗಿತ ಸ್ವಗತ
ಕಾಳ್ಹಾಕಿಡಲ್ಹವಣಿಕೆಗೆ
ಮೆಚ್ಚು ಬೆಚ್ಚುತೆ ಗಣಿತ!

(ನಾಗೇಶ ಮೈಸೂರು)

00528. ಏನು ಗೊತ್ತಾ, ವಿಷಯ..?


00528. ಏನು ಗೊತ್ತಾ, ವಿಷಯ..? 
___________________________

   
(photo source wikipedia – https://en.m.wikipedia.org/wiki/File:Leonid_Pasternak_-_The_Passion_of_creation.jpg)

ನಿನಗೊಂದು ವಿಷಯಾ ಗೊತ್ತಾ ..
ಈಚೆಗ್ಯಾಕೊ ಏನೂ, ಸರಿ ಬರೀತಿಲ್ಲಾ ಚಿತ್ತ.
ಬುಳಬುಳ ಜೊಂಪೆ ಬರ್ತಿತ್ತಲ್ಲ ಎಲ್ಲಾ..?
ಯಾಕೊ ಕಣಿ-ಧರಣಿ, ಕೂತಲ್ಲೆ ತಟ್ಟಿ ಬೆರಣಿ..

ಒಂದಲ್ಲ ಹತ್ತಲ್ಲ ನೂರಾರು ವಸ್ತು !
ಸಾಲುಸಾಲು ಸೀಮೆಣ್ಣೆ, ರೇಷನ್ನಿನ ಹಾಗೆ..
ನಿಂತಿತ್ತಲ್ಲ ಕೂಗಾಡಿ, ಜಗಳಕೆ ಬಿದ್ದ ತರ ?
ತಾ ನಾ ಮುಂದು, ಗುದ್ದಾಡಿದ್ದೆಲ್ಲಾ ನಿಶ್ಯಬ್ದ…

ಹುಟ್ಟುತ್ತೇನೊ ಚಿಲುಮೆ, ಅಕ್ಷರ ಮಣಿಯೊಡವೆ
ಪದಪದವಾಗೊ ಮೊದಲೆ, ಯಾಕೊ ಒಲ್ಲದ ಮದುವೆ.
ತಟ್ಟಂತೇನೊ ಬೆಟ್ಟ, ಕುಸಿದಂತೆ ಮನೆ ಮಾಡು
ಪದಗಳವಕವಕೆ ಜಗಳ, ಹುಟ್ಟೊ ಮೊದಲೆ ಹಾಡು..

ಹುಟ್ಟಿದ್ದೂ ಹಸುಗೂಸು, ಮೀರಲೊಲ್ಲ ಬಾಲ್ಯ
ಬೆಳೆಯೊ ಕೂಸಿಗು ಹುಟ್ಟಲೆ, ಏನೊ ಅಂಗವೈಕಲ್ಯ..
ಹೆತ್ತ ಹೆಗ್ಗಣ ಮುದ್ದಿಗೆ, ಕಟ್ಟಿದರು ತೋರಣ ಬಳಗ
ತಡವಿ ಮೇಲೆತ್ತಿ ಆದರಿಸೋಕಿಲ್ಲ, ಪುರುಸೊತ್ತಿನ ಜಗ ..

ಆದರು ಬರೆಯೊದಂತು ತಾನು, ನಿಲಿಸಿರಲಿಲ್ಲ ಚಿತ್ತ
ಯಾಕೊ ಇದ್ದಕಿದ್ದಂತೆ, ಅನಿಸಿಬಿಡುತೆಲ್ಲ ಬರಿ ವ್ಯರ್ಥ
ಹಠದಿ ಸಂಪು ಕೂತಿವೆ, ಹಾಕೆಲ್ಲ ಭಾವಕೆ ಬಿಗಿ ಬೀಗ
ಮನ ಕಳವಳ ಮಾತ್ರ ಹುಡುಕಿದೆ, ಕೀಲಿ ಸಿಕ್ಕೊ ಜಾಗ..

– ನಾಗೇಶಮೈಸೂರು

00527. ನಮ್ಮ ಸೌರ ಮಂಡಲ (ಮಕ್ಕಳಿಗೆ) 


00527. ನಮ್ಮ ಸೌರ ಮಂಡಲ (ಮಕ್ಕಳಿಗೆ) 
——————————————–

  
(picture source – wikipedia, https://en.m.wikipedia.org/wiki/File:Planets2013.svg)

ಬ್ರಹ್ಮಾಂಡದ ಅಗಣಿತ ವಿಸ್ತಾರಣೆ
ನಾವಿಹ ಸೌರವ್ಯೂಹ ಪುಟ್ಟ ಮನೆ
ಸೂರ್ಯನೆಂಬ ಸೊನ್ನೆಗಿಡಿದ ದೊನ್ನೆ
ನವಗ್ರಹಗಳ ಸುತ್ಸುತ್ತುವಾ ಬವಣೆ ||

ವಿಶ್ವದರಮನೆಗೆ ಈ ಸೂಜಿ ಮೊನೆ
ಸೌರಮಂಡಲವೊಂದ್ತರ ನಮೂನೆ
ನವ ಗ್ರಹಗಳ ಬಂಧಿಸಿದ ಸಿತಾರೆ
ಸೂರ್ಯನೆಂದರೆ ಜೀವನಕಾಧಾರೆ ||

ಗ್ರಹತಾರೆ ಕಲೆತ ಗುರುತ್ವಾಕರ್ಷಿತ
ಬಂಧಿಸುವ ಗೋಚರ ಸೆಳೆತ ಮಿಳಿತ
ಪ್ರತಿಗ್ರಹಕದರದೆ ವಲಯದುಂಗುರ
ಆವರವರುಂಗುರ ವಲಯ ಗ್ರಹಭದ್ರ ||

ಕೇಂದ್ರವೆ ಸೂರ್ಯ ಕೆಂಗಣ್ಣಿನಾರ್ಯ
ಸುಡು ಕೆಂಡದ ವಾಯ್ಗೋಳ ವೀರ್ಯ
ಕ್ಷೀರಪಥದೊಡನೆ ಸುತ್ತಿದರು ಸಾರ
ಸೌರಮಂಡಲ ಲೆಕ್ಕದಲಿದ್ದಂತೆ ಸ್ಥಿರ ||

ರವಿಗ್ಹತ್ತಿರದ ನೆಂಟರೆನೆ ಬುಧ ಶುಕ್ರ
ಅತಿ ಹತ್ತಿರ ಬುಧ ಜೀವನ ದುಸ್ತರ
ಎರಡನೆ ಸ್ತರ ಶುಕ್ರ ಫಳ ಫಳ ಥಳ
ಹೊಳೆವ ಗ್ರಹವೆಂದೆ ಪ್ರಸಿದ್ಧ ಬಹಳ ||

ಮೂರನೆಯವ ಮಂಗಳ ಕೆಂಪಂಗಳ
ಭುವಿಯ ಪಕ್ಕಕಿರುವ ಶುಭಮಂಗಳ
ನಾಲ್ಕನೆ ನೀಲಾತ್ಮ ಶ್ರೇಷ್ಠ ವಸುಂಧರ
ಹಸಿರು ನೀರು ಜೀವರಾಶಿ ನಿತ್ಯಂತರ ||

ಪೃಥ್ವಿಯ ನೆರೆ ಗ್ರಹ ಐದಾರನೆ ಕಕ್ಷ್ಯ
ಗುರು ಶನಿ ಸಹವಾಸ ಮುಂದಿನ ಲಕ್ಷ್ಯ
ಬೃಹತಾಕಾರ ಗುರು ಹತ್ತರ ಗುರುತ್ವ
ಬಳೆಯನಿಲ ತೊಟ್ಟಸುರ ಶನಿ ಕವಿತ್ವ ||

ದೂರದ ಕೆಳೆ ಬಳಗ ಏಳೆಂಟರದೆ ಜಗ
ಚಳಿ ಜ್ವರಕೆ ಯುರೆನಸು ನೆಪ್ಚೂನು ಲಾಗ
ಹಿಮ ಚಳಿ ದೂರದ ತಳಿ ರವಿ ಬೆಳಕಾಗ
ವಿಸ್ಮಯ ಕಿತ್ತು ಹೋಗದ ಬಂಧ ಸೆರೆ ಭಾಗ ||

ತಿಪ್ಪರಲಾಗ ಹಾಕಿ ಪ್ಲೂಟೊ ಕ್ಷುದ್ರಗ್ರಹವೆ
ಗ್ರಹವೆನ್ನಲೆ ಕಷ್ಟ ಪುಟ್ಟ ದೇಹಾಕಾರವೆ
ಗ್ರಹದ ವರ್ತನೆ ರವಿ ಸುತ್ತ ಆವರ್ತನೆ
ಅನುಮಾನವಿದ್ದು ಗ್ರಹವಾಗೊಂಭತ್ತನೆ! ||

ಇದೆ ಸೌರವ್ಯೂಹ ಚಿತ್ರದ ಬ್ರಹ್ಮಾಂಡ
ಅಪಾರ ಅನಂತದಲಿ ಸಾಸುವೆ ಬಿಡ !
ಗೊತ್ತಿಹ ಪರಿಮಿತಿಯಲಿಹ ಸಜೀವತೆ
ಬೇರಿಲ್ಲೆಲ್ಲು ಕಾಣದಿಹ ಜೀವ-ಜಾಲತೆ! ||

00526. ಯಾಕೊ ಯಾತನೆ ಸುಮ್ಮನೆ… (01)


00526. ಯಾಕೊ ಯಾತನೆ ಸುಮ್ಮನೆ… (01)
_______________________________
  
(picture source – http://edunderwood.com/wp-content/uploads/2010/09/suffer.jpg)

ಯಾಕೊ ಏನೊ ಯಾತನೆ
ಸಮ ಕೂತಲ್ಲಿ ನಿಂತಲ್ಲಿ
ಸರಿ ಒಂದೆ ಸಮನೆ
– ಕಾಡಿದ ಗೊನೆ ||

ಕಿತ್ತೊಂದೊಂದೆ ಹೂವನೆ
ಮುಡಿಗೇರಿಸಿ ಭಾವನೆ
ಹಣ್ಣಾಗೊ ಸಾಧನೆ
– ಕತ್ತರಿಸಿ ತೆನೆ ||

ಬೀಜವೃಕ್ಷ ನ್ಯಾಯದಲೆ
ತೆನೆಯಾಗಿ ಮೊದಲೆ
ಯಾತನೆಗೆ ಕವಲೆ
– ಅರಿವೆ ಕಪಿಲೆ ||

ಅರಿವಿದ್ದರೆ ಮುಗ್ದತೆ ತರ
ಯಾತನೆಯೆ ದೂರ
ಅರಿತಷ್ಟು ಆಳಕ್ಕೆ
– ನೋವಿನ ಗಾಳ ||

ಮೌಢ್ಯ ಮುಟ್ಟಾಳತನ
ವರವಾಗಿ ಜಾಣತನ
ಜ್ಞಾನಾರ್ಜನೆ ಕಣ
– ದುಃಖಕೆ ಮಣ ||

———————————————————-
ನಾಗೇಶ ಮೈಸೂರು
———————————————————–

00525. ಕೈ ಚೀಲಗಳೆಂಬ ವಿಶ್ವಕೋಶ – 03 (03)


00525. ಕೈ ಚೀಲಗಳೆಂಬ ವಿಶ್ವಕೋಶ – 03 (03)
_______________________________

 

  
(picture source http://www.123rf.com; http://www.123rf.com/photo_11383297_shopping-lady-with-tablet-pc-and-cloud-computing.html)

ಆಟೊ,ಬಸ್ಸು ಓಡಾಟ ಚಿಲ್ಲರೆ ಹಣ
ರೂಪಾಯಿ ನೋಟು ಕಾಸಿನ ಜಣ
ಕಾರ್ಡಲ್ಲೆ ತುಂಬಿದ್ದರು ಕಾಂಚಾಣ
ಪುಡಿಗಾಸಿರಬೇಕಲ್ಲ ತುರ್ತಿಗಣ್ಣ ||

ಗ್ಯಾಡ್ಜೆಟ್ಟು ಕಾಲ ವಯೋಧರ್ಮ
ಗಾನ ಸಂಗೀತ ಕೇಳುವ ಮರ್ಮ
ಪುಟ್ಟಾಟಿಕೆ ತರಹ ಹಾಡು ತರ
ಕಿವಿಗಚ್ಚಿದರೆ ಹೆಡ್ಪೋನೆ ಸಮರ ||

ಸ್ವಂತದ್ದೊಂದು ಆಫೀಸಿಗೊಂದು
ಇರಬೇಕು ಮೊಬೈಲಲಿ ಬಂಧು
ಕೈ ಪೋನಿರದಿದ್ದರೇ ಬದುಕೆಲ್ಲಿ
ಅಷ್ಟಿಷ್ಟು ಸಿಮ್ಕಾರ್ಡು ನುಸುಳಿ ||

ಸ್ಮಾರ್ಟು ಇರಲಿ ಬಿಡಲಿ ಮಂದಿ
ಚೀಲವಾಗಿ ಸದಾ ತೋಳ-ಬಂಧಿ
ಏನೆಲ್ಲ ಇರಬಹುದಾದ ಭಾಷ
ತೆರೆ ವ್ಯಕ್ತಿ ವೈಯಕ್ತಿಕ ವಿಶ್ವಕೋಶ ||

– ನಾಗೇಶ ಮೈಸೂರು

00524. ಕೈ ಚೀಲಗಳೆಂಬ ವಿಶ್ವಕೋಶ – 02(03)


00524. ಕೈ ಚೀಲಗಳೆಂಬ ವಿಶ್ವಕೋಶ – 02(03)
____________________________________
  
(picture source – http://www.123rf.com/photo_21381305_woman-looking-for-something-in-her-purse.html)

ಒಂದಷ್ಟು ಕಾರ್ಡುಗಳ ತಲಕಾಡು
ಕ್ರೆಡಿಟ್ಟು ಡೆಬಿಟ್ಟು ಬ್ಯಾಂಕು ನೋಡು
ಗುರುತಿನಟ್ಟೆ ಐಡೆಂಟಿಟೀ ಕಾರ್ಡು
ಮೆಂಬರುಶಿಪ್ಪು ಡಿಸ್ಕೌಂಟು ಜಾಡು ||

ದೇವರ ಚಿಕ್ಕ ಚಿತ್ರಪಟ ಭಕ್ತಿಗುಟ್ಟ
ಒಣ ಹೂ ಪ್ರಸಾದ ಪೊಟ್ಟಣ ಕಟ್ಟ
ಭಕ್ತಿಯ ಕುಂಕುಮಕೆ ಅಂಟು ಬಿಂದಿ
ಆಸ್ತಿಕ ಭಾವ ಮುಡಿಪಿಡುವ ಬಂಡಿ ||

ಬೀಗದ ಕೈಗೊಂಚಲುಗಳ ಪಿಂಡಿ
ಮಾತ್ರೆ ಗಣಗಳೆ ಹಿಡಿದಂತೆ ಚಂಡಿ
ನ್ಯಾಪ್ಕಿನ್ನು ಸೇಫ್ಟಿ ಪಿನ್ನು ಇತ್ಯಾದಿ
ಹೆಸರೆ ಗೊತ್ತಿರದಿನ್ನೆಷ್ಟೋ ಯಾದಿ ||

ಕುಟುಂಬದವರ ಭಾವಚಿತ್ರಗಳು
ಪ್ರಿಯಪಾತ್ರರ ಹತ್ತಿರ ನೋಟಗಳು
ನೆಚ್ಚಿನ ನಟ ನಟಿಯರ ಪೋಟೊ
ಲಾಟರಿ ಜತೆ ಒಂದೆರಡು ಟೋಟೊ ||

– ನಾಗೇಶ ಮೈಸೂರು

00523. ಕೈ ಚೀಲಗಳೆಂಬ ವಿಶ್ವಕೋಶ – 01 (03)


00523. ಕೈ ಚೀಲಗಳೆಂಬ ವಿಶ್ವಕೋಶ – 01(03)
___________________________________

   

(picture source – http://www.123rf.com/photo_10048846_children-fashion-doll-little-girl-lipstick-makeup-in-pink-vanity-with-mirror.html & http://www.123rf.com/photo_6624275_cosmetics-isolated-on-a-white-background.html)

ಏನಿರಬಹುದೊಳಗೆನ್ನುತ ತಥಾ
ಕುತೂಹಲಕೆ ಹೆಕ್ಕಿದಳೆ ಸ್ವಗತ
ಜಂಬದ ಕೈಚೀಲ ಹಿಡಿದವಳತ್ತ
ಇಟ್ಟಿರಬಹುದೇನೇನೆಂಬ ಗಣಿತ ||

ನನಸಾಗದ ಕನಸೆ ಕನ್ನಡಿ ಗಂಟು
ಮೇಕಪ್ಪಿಗೆ ಪುಟ್ಟ ಕನ್ನಡಿಯುಂಟು
ತುಟಿ-ರಂಗು ಪೆನ್ಸಿಲ್ಲು ಮಸ್ಕಾರಕೆ
ಬ್ರಷ್ಗಳ ಜತೆ ಪೌಡರು ಗಮಗಮಕೆ ||

ಕೆನ್ನೆಗೆ ರಂಗು ತೇವಾಂಶಕೆ ಪುನುಗು
ಕೂದಲ ರಂಗು ಮದರಂಗಿ ಗುಂಗು
ಶೇಡು ಗೀಡುಗಳ ಪಾಡು ಹೆಸರಿಡು
ಸೌಂದರ್ಯವರ್ಧಕ ಸರಕ ಗೂಡು ||

ಬಳೆಗಳ ಜೊತೆ ಸರಗಳ ಸಂಗಾತಿ
ಉಗುರು ಬಣ್ಣ ಹಚ್ಚುವ ಜೊತೆಗಾತಿ
ಮೆನಿಕ್ಯುರು ಪೆಡಿಕ್ಯುರು ಸಾಧನ ಪಟ್ಟಿ
ಸಾಮಗ್ರಿಗಳ ಲೆಕ್ಕವಿಡದೆ ಒಳಗಟ್ಟಿ ||

– ನಾಗೇಶ ಮೈಸೂರು

00522. ಎಳೆ ಪ್ರಾಯದ ದಿನಗಳು…. (ಭಾಗ 02)


00522. ಎಳೆ ಪ್ರಾಯದ ದಿನಗಳು…. (ಭಾಗ 02)
—————————————————-

  
(Picture from – https://www.ric.edu/educationalstudies/images/youthDev.jpg)

ಕಾಲೇಜಿನ ಕನ್ಯೆಯರ್ಹಿಂದೆ
ಓಡಾಟ ತೆರೆಸಿದ ವಿಶ್ವ ಮುಗುದೆ
ಗೆಳೆಯ ಗೆಳತಿಯಾಗುತ ಮುಂದೆ
ಬೆಳೆಸಿದ ಫ್ರೌಡಿಮೆ ಕಾಡದೆ! ||

ಕಾಡಿ ಕೆಲಸದ ಹೆಣ್ಣೈಕಳ
ಮನೆ ಮುಸುರೆ-ಗಿಸುರೆ ತಿಕ್ಕುವವಳ
ಹಳ್ಳಿ ಭಾಷೆಗಣಕಿಸಿ ಕೋಪಕೆ ತಾಳ
ಮಿತಿ ಮಿರದಂತವಹೇಳ! ||

ಟೈಪಿಂಗು ಇನ್ಸ್ಟಿಟ್ಯೂಟಿನ
ಲಲನೆಯರನು ಕಲಿಯೆ ಹೋದನ
ಬೆರಳಚ್ಚುವಿಕೆಗೆ ಕಲಿತನ ಮರೆತನ
ಪ್ರೇಮಪತ್ರವನ್ನೆ ಬರೆದನ! ||

ಟ್ಯೂಶನ್ನಿನ ಫ್ಯಾಷನ್ನಿನಲಿಳಿ
ಪಾಠಕೆ ಬರಹ ತಾರುಣ್ಯ ಹಾವಳಿ
ಬಾವಲಿಯ ತರುಣಿ ದಂಡೆ ಬವಳಿ
ಭೂತಭವಿತ ಮರೆಸವಕಳಿ! ||

ಮಾಗಿದನುಭವ ವಯಸೆಂದೆ
ಸೇರ್ಯಾವುದೋ ಕೆಲಸದ ಮಂದೆ
ಅಲ್ಸಿಕ್ಕುವ ಮಾಗಿದ ಹೆಣ್ಣ್ಗಳ ಹಿಂದೆ
ಪಕ್ವವಾಗಿಸಿ ಮಾಗುವ ಹಂದೆ! ||

———————————————————————
ನಾಗೇಶ ಮೈಸೂರು
———————————————————————

00521. ಎಳೆ ಪ್ರಾಯದ ದಿನಗಳು…. (ಭಾಗ – 01)


00521. ಎಳೆ ಪ್ರಾಯದ ದಿನಗಳು…. (ಭಾಗ – 01)
_______________________________

  
(Picture source : Kannadamoviesinfo.wordpress.com)

ಹುಡುಗೈಕಳ ಕಾಡಿಸುತ
ರೊಚ್ಚಿಗೆಬ್ಬಿಸಿದ್ದೆ ಹುಸಿ ಛೇಡಿಸುತ
ಹುಡುಗಿಯರನೆ ಹಿಂಬಾಲಿಸುತ
ಕಾಲ ಕಳೆದ ಎಳೆ ಪ್ರಾಯ! ||

ಖಾಲಿ ಕೂತ ಗಳಿಗೆಗಳು
ಕಾಲೇಜು ಮನೆ ಚಹದಂಗಡಿಗಳು
ಕಾಲಯಾಪನೆ ಬಿಡುವ್ಹಗಲುಗಳು
ಅಕ್ಕಪಕ್ಕದ ಹಸುಗೂಸಲು! ||

ಸ್ಕೂಲ್ಹೋಗುವ ಮಕ್ಕಳಿಗೆ
ಚಾಕೊಲೇಟು ಕೊಡಿಸಿ ಮಾತಾಗೆ
ಕಾಡಿಸಿ ಛೇಡಿಸಿ ಅಳಿಸಿದ ಹಾಗೆ
ತಡಕಾಡಿ ಕಾಟ ಕೊಟ್ಟ ಬಗೆ! ||

ಚಹದಂಗಡಿ ಮಾಣಿ ಕಣಿ
ತಂದಿತ್ತ ಚಾ ಹಿಡಿದು ರೇಗಿಸಲಣಿ
ಶಾಲೆಗ್ಹೋಗದ ಬಾಲನ ಪುರವಣಿ
ಕಾಲೆಳೆದು ಹಾಸ್ಯದೇಣಿ! ||

ತುಂಡು ಸಮವಸ್ತ್ರ ತೊಟ್ಟು
ಗೆಳತಿಗೆ ಪಿಸುಗುಟ್ಟು ಗುಸುಗುಟ್ಟು
ಹೈಸ್ಕೂಲ್ಬೆಡಗಿಯದೇನಿದೆ ಸೊಟ್ಟು ?
ಹುಡುಕಲೆ ಹಿಂದೆ ಹೊರಟು! ||

———————————————————————
ನಾಗೇಶ ಮೈಸೂರು
———————————————————————

00520. ಮೇಸ್ಟ್ರು ಹೇಳಿದ್ದು ಸತ್ಯ!


00520. ಮೇಸ್ಟ್ರು ಹೇಳಿದ್ದು ಸತ್ಯ!
______________________________

ಎಳೆ ಪ್ರಾಯದಲ್ಲಿ ಸ್ಕೂಲಿಗೆ ಚಕ್ಕರು ಹಾಕಿ, ಯಾರಾರದೆ ಜತೆ ಕಟ್ಟಿಕೊಂಡು, ಎಲ್ಲೆಲ್ಲೊ ಪೋಲಿ ತಿರುಗಿ, ಏನೆಲ್ಲಾ ಧಾಂದಲೆ ಮಾಡಿಕೊಂಡು, ಸಂಜೆ ಸ್ಕೂಲು ಮುಗಿಯುವ ಹೊತ್ತಿಗೆ ಏನು ಅರಿಯದ ಹಸುಗೂಸಿನ ಹಾಗೆ ಬ್ಯಾಗಿನ ಜತೆ ಮನೆ ಸೇರುವ ಪರಿಪಾಠ ಬಹಳ ಜನರ ಅನುಭವ ಗಮ್ಯಕ್ಕೆ ಸುಲಭದಲ್ಲಿ ನಿಲುಕುವಂತಾದ್ದು – ಸ್ವಂತ ಅನುಭವದಲ್ಲಿ ಅಥವಾ ಹತ್ತಿರದಿಂದ ನೋಡಿ ಗಮನಿಸಿದ ಧೀರ ಪೋಲಿ ಗೆಳೆಯರ ಅನುಭವದಿಂದ. ಹಾಗೆ ಚಕ್ಕರು ಹಾಕಿ ಏನೆಲ್ಲಾ ಮಾಡಿದರೂ ಕಾಡುತ್ತಿದ್ದ ಪಾಪ ಪ್ರಜ್ಞ್ನೆ, ಹೆದರಿಕೆ, ಮೇಸ್ಟ್ರ ದೊಣ್ಣೆಯ ಭೀತಿ, ಫೇಲಾಗಿ ಮಾರ್ಕ್ಸ್-ಕಾರ್ಡಿನಲ್ಲಿ ದೈನ್ಯವಾಗುತ್ತಿದ್ದ ಭೀತಿ, ಭಯ- ಭಕ್ತಿ – ಇದೆಲ್ಲದರ ಸಮ್ಮೇಳನ , ಈ ಕವನ. ಎಷ್ಟೊ ಬಾರಿ ಶಿಕ್ಷಿಸುವ ಮೇಷ್ಟ್ರ ದಂಡವಿರದಿದ್ದಿದ್ದರೆ ಇನ್ನೆಷ್ಟು ಅನಾಹುತವಾಗುತ್ತಿತ್ತೊ ಏನೊ ಎಂಬ ಭಾವವು ಇಲ್ಲಿ ಬಿಂಬಿತ.

  
(Picture source from : http://www.scooppick.com/wp-content/uploads/2014/06/Bunking-Classes.jpg)

ಬೇಡಾ ಅಂದರು ಬಿಡದೆ ಹೊಡೆಸಿದೆ ಚಕ್ಕರೂ
ಎಲ್ಲೋ ಅವಿತು ಕೂತುರಿ ಗಬ್ಬಾಯ್ತು ನಿಕ್ಕರೂ
ಬೇಡವೋ ಚಕ್ಕರಿನಾಟ ಹೋಗಿ ಕಲಿವ ಪಾಠ
ಕಳ್ಳರ ತರ ಥ್ರಿಲ್ಲು ಗೊತ್ತಾದರೆ ಬೀಳೊ ಗೂಸ ||

ಆಟದ ಬಯಲು ಜಾರು ಬಂಡೆ ಗುಪ್ಪೆ ಒಳಗೆ
ಎಷ್ಟೊತ್ತು ಕೂರುವುದೊ ಬಿಸಿಲ ಜಳ ಬೇಸಿಗೆ
ಅಂಡುರಿವ ಅಕಾಲ ಕಾದ ಬಿಸಿನೆಲ ತೋಳ
ತಣ್ಣಗೆ ಕ್ಲಾಸಲಿ ಕೂರದೆ ಏನಿ ಅಲೆದಾಟಕುಲ ||

ಮೂಗಲಿ ಸುರಿ ಗೊಣ್ಣೆ ನೆನೆದೆ ಮೇಸ್ಟ್ರದೊಣ್ಣೆ
ಎಳೆದೆಳೆಯುತ ತೇಪೆಯ ಚೀಲಕೆ ಉರಿಗಣ್ಣೆ
ಜೀಬಲಿಲ್ಲ ಪುಡಿಗಾಸು ದಕ್ಕುವುದೆ ಬತ್ತಾಸು
ಯಾಕಪ್ಪ ಗೋಳು ಸ್ಕೂಲೆ ವಾಸಿ ಸತಾಯ್ಸು ||

ಎಷ್ಟುದಿನ ನಡೆಯೊ ಕಣ್ಣು ಮುಚ್ಚಾಲೆಯಾಟ
ಮೊದಮೊದಲು ಭೀತಿ ದಿನಗಳೆದಂತೆ ಆಟ
ಬರಬೇಕು ಬಯಲಿಗೆ ಒಂದಲ್ಲ ಒಂದಿನ ಸತ್ಯ
ಟೆಸ್ಟು ಪರೀಕ್ಷೆ ಫೇಲಾಗಿ ಮಾರ್ಕ್ಸ್ಕಾರ್ಡಿನಲ್ಲಿತ್ತ ||

ಕೊನೆಗೂ ಮೇಸ್ಟ್ರು ಹೇಳಿದ್ದು ಸತ್ಯದ ಮಾತು
ದನ ಕಾಯೇ ಲಾಯಕ್ಕು ಕಲಿಕೆಯಲ್ಲ ಸ್ವತ್ತು
ನಿಜ ಹೇಳಬೇಕೆಂದರೆ ಕುರಿ ಕಾಯಲು ಬರದು
ಸದ್ಯ ಮೇಸ್ಟ್ರ ದೊಣ್ಣೆ ದಯೆ ತಂದೀಸ್ಥಿತಿ ಎಳೆದು ||

– ನಾಗೇಶ ಮೈಸೂರು

00519. ನಾ ನಿಮಿತ್ತ ನೀ ನಿಮಿತ್ತ …


00519. ನಾ ನಿಮಿತ್ತ ನೀ ನಿಮಿತ್ತ…
_____________________________

ಒಂದು ರೀತಿ ಉಪದೇಶದ ಧಾಟಿಯಲ್ಲಿ ನಾವಿಲ್ಲಿ ಬರಿ ನಿಮಿತ್ತ ಮಾತ್ರರು ಎನ್ನುತ್ತಲೆ, ಸಂಸಾರ ಶರಧಿಯನು ನಿಭಾಯಿಸಲೆದುರಾಗುವ ಅಡೆತಡೆ, ಸಂಕಷ್ಟಗಳನು ಹೆಸರಿಸುತ್ತಲೆ ಅದನ್ನೆದುರಿಸೊ ಸ್ಥೈರ್ಯ ತುಂಬಿಸಲು ಯತ್ನಿಸುತ್ತ ಸಾಗುವ ಲಹರಿ. ಏನು ಮಾಡಿದರೂ, ನಾವಿಲ್ಲಿ ನಿಮಿತ್ತ ಮಾತ್ರದವರಾಗಿರುವವರು; ಎಷ್ಟೇ ತಿಣುಕಾಡಿದರೂ, ಅರಚಾಡಿದರೂ, ಅದರಿಂದಾಚೆಗೇನೂ ಮಾಡಲಾಗದ ಅಸಹಾಯಕರು. ಹೀಗಿರುವಾಗ ಸುಮ್ಮನೆ ಹೊಡೆದಾಟ ಬಿಟ್ಟು ಸಾವರಿಸಿಕೊಂಡು ಹೋಗುತ್ತ, ಎಲ್ಲರ ಮನೆಯಂತೆ ನಮ್ಮ ಮನೆ ದೋಸೆಯೂ ತೂತೆ ಎಂಬುದನರಿತು, ಪರರ ನಡುವೆ ಅಪಹಾಸ್ಯಕ್ಕೆಡೆಗೊಡದಂತೆ ಸಂಭಾಳಿಸಿಕೊಂಡು ಹೋಗುವುದೊಳಿತು ಎನ್ನುವ ಭಾವಾರ್ಥದಲಿ ಕೊನೆಗೊಳ್ಳುತ್ತದೆ.

  
(picture source: http://tse1.mm.bing.net/th?id=OIP.M1ef6b04eae07673e50fd152ffa63acdfo0&pid=15.1)

ಈ ಕವನದ ಮತ್ತೊಂದು ಪುಟ್ಟ ವಿಶೇಷವಿದೆ – ಬರಹದ ಜೋಡಣೆಯಲಿರುವ ಆಕಾರ. ಏಳು ಸಾಲಿಂದ ಆರಂಭವಾಗಿ, ಎರಡೆರಡು ಸಾಲು ಹೆಚ್ಚುತ್ತಾ ಹದಿಮೂರು ಸಾಲಿನಲ್ಲಿ ಕೊನೆಗೊಳ್ಳುತ್ತದೆ. ಈ ಎರಡು ಸಾಲಿನ ಹೆಚ್ಚಳವೂ ನಿಯಮಬದ್ಧವಾಗಿ, ತಾರ್ಕಿಕವಾಗಿ ಸಾಗುವುದರಿಂದ ತೇರು / ದೇಗುಲದ ಗೋಪುರದಾಕಾರ ಪಡೆವ ಪ್ರತಿ ಪ್ಯಾರವು ಓದುತ್ತಾ ಹೋದಂತೆಗಾತ್ರದಲ್ಲಿ ದೊಡ್ಡದಾಗುತ್ತ ಹೋಗುತ್ತದೆ – ಚಿಕ್ಕದನ್ನು ದೊಡ್ಡದು ಮಾಡುವುದು ಅಥವಾ ದೊಡ್ಡದನ್ನು ಚಿಕ್ಕದು ಮಾಡುವುದು ನಮ್ಮನಮ್ಮ ಭಾವಾನುಸರಣೆಗನುಗುಣವಾಗಿ ಎಂಬುದನ್ನು ಸಾಂಕೇತಿಸುತ್ತ.

ಒಮ್ಮೆ
ನೋಡು ನೀನಿತ್ತ,
ನಾ ನಿಮಿತ್ತ ನೀ ನಿಮಿತ್ತ;
ನಮ್ಮ ಸುತ್ತಾ ಬೆಳೆದರೂ ಹುತ್ತ
ನಾವೆಷ್ಟು ಪದರಗುಟ್ಟಿದರೂ ಅತ್ತ ಇತ್ತ
ನಿನಗೊಂದೆ ಒಂದು ಸತ್ಯ ಗೊತ್ತ?
ನಾವು ನಿಮಿತ್ತ, ಅವಗೆಲ್ಲ ಗೊತ್ತ ||

ನಾವು
ಹುಡುಕಿ ಕಾರಣ,
ಗುದ್ದಾಡಿದರು ವಿನಾಕಾರಣ
ಕಟ್ಟಿ ಕುಂಟು ನೆಪಗಳ ತೋರಣ
ಬೈದು ಹಂಚಾಡಿ ಬೈಗುಳದ ಆಭರಣ;
ಕೊಟ್ಟು ಹಿನ್ನಲೆ ಸಂಗೀತ ಮನ ತಲ್ಲಣ
ತಿಳಿಸೆ ನಿಜದೊಳಗಣ ನಿಜಗುಣ,
ರವಿಗುಂಟೊ ಮಕರ ಸಂಕ್ರಮಣ
ಜಗಳ ಕದನ ಬದುಕಿನ್ಹವಾಗುಣ ||

ಸಹಜ
ಸಂಸಾರ ಶರಧಿ,
ನಡುಕವುಟ್ಟಿಸೊ ಎಳೆ ವರದಿ
ನಾಸರಿ ನೀಸರಿಗಳ ಜಡ ಸರದಿ;
ಬಿಡದೆಲೆ ಸುರಿವ ತಪ್ಪಲೆ ಮಳೆ ಭರದಿ
ಮಳೆ ಬಿದ್ದ ಮೇಲೆ ಬೇಸತ್ತ ಇಳೆ ತೆರದಿ
ತುಂತುಳುಕಿ ಹೊಳೆ ಹಸಿರ ಭುವಿ ಗಾದಿ.
ಅನುಭೋಗ ಇಳೆ ಮಳೆ ಜಗಳದಿ
ನೆಲತಣಿದು ಪೈರಾಗೊ ತಳಹದಿ
ಫಲಿತಾಂಶ ಜನ ಮೆಚ್ಚುವ ತೆರದಿ
ಹೊರಮುಚ್ಚಿ ಒಳಬಿಚ್ಚಿ ಒಳಗುದಿ ||

ಸಂಸಾರ
ಗುಟ್ಟು ವ್ಯಾಧಿ ರಟ್ಟು.
ನಿಮಿತ್ತಗಳ ಎಳೆ ನಿಂಬೆ ಪಟ್ಟು
ಇದಮಿತ್ಥಂ ಎಂದಾದರೆ ಎಡವಟ್ಟು
ಎಳಿಬೇಕು ನಾ ಎಡಕಟ್ಟು ನೀ ಬಲಗಟ್ಟು;
ನೊಗವೆತ್ತಿ ನಡಿಬೇಕು ಎತ್ತಿನ ಸಾರೋಟು
ಅಡವಿಟ್ಟು ದುಡಿಬೇಕು ಘನತೆಗೂ ಸೌಟು,
ತೆಂಗಾಯೊಡೆದ ಮಾರಿಗಾರತಿ ತಂಬಿಟ್ಟು.
ಸಡಿಲ ವಾತಾವರಣವಾಗಿಸಿಟ್ಟು
ಹೀಗೆ ಮಾಡಬೇಕು ಇಷ್ಟ ಪಟ್ಟು,
ನಡೆಸಿ ಪೂಜೆ ವ್ರತ ಕಟ್ಟು ನಿಟ್ಟು
ಏನೆ ಮಾಡಿದರೂ ಮನಸನಿಟ್ಟು
ನಿಮಿತ್ತತೆ ನಮ್ಮ ಕಾಯೊಗುಟ್ಟು ||

– ನಾಗೇಶ ಮೈಸೂರು

00518. ಸಿಂಗಾಪುರವೆಂಬ ಕೆಂಪು ಚುಕ್ಕೆ !


00518. ಸಿಂಗಾಪುರವೆಂಬ ಕೆಂಪು ಚುಕ್ಕೆ !
___________________________________

ಬೆಂಗಳೂರಿಗೂ ಚಿಕ್ಕದಾದ, ಊರೆ ದೇಶವಾದ, ಭೂಪಠದ ಕೆಂಪು ಚುಕ್ಕೆಯೆಂದಷ್ಟೆ ಗುರುತಿಸಿಕೊಳ್ಳುವ ಸಿಂಗಪುರ, ಅಷ್ಟೆಲ್ಲ ಪರಿಮಿತಿಗಳ ನಡುವೆಯು ತಲುಪಿದ ದೂರ, ಏರಿದ ಎತ್ತರ, ಸಾಧನೆಯ ಪ್ರಖರತೆ – ಎಲ್ಲವು ಸೋಜಿಗದ, ಅತಿಶಯದ ವಸ್ತುಗಳು. ಅದರ ರೂಪವನ್ನು ಸರಳ ಶಬ್ದಗಳಲ್ಲಿ ಹಿಡಿದಿಡುವ ಯತ್ನ ಈ ಕವನದಲ್ಲಿದೆ.

  
(Picture source from wikipedia : https://en.m.wikipedia.org/wiki/File:Singapore_in_its_region_(zoom).svg)

ಭೂಮಧ್ಯ ರೇಖೆಯ
ನಡುವಿನಲೆಲ್ಲೋ ವಿಸ್ಮಯದ
ಒಂದು ಕೆಂಪು ಚುಕ್ಕೆ
ಸಿಂಗಾಪುರವೆಂಬ ಚಿಕ್ಕ ಚಕ್ಕೆ ||

ಕಾಣುವ ಪ್ರಗತಿ ಸ್ಪಷ್ಟ
ಗೋಪುರದ ತುದಿಯಂತೆ
ನಳನಳಿಸುವ ಹೊಸ ರಸ್ತೆ
ಹೂ ತುಂಬಿದ ಬೋಕೆಯಂತೆ ||

ಸರಾಸರಿ ಉಷ್ಣತೆ ದೇಶ
ಮುವ್ವತ್ತರಿಂದ ನಲವತ್ತು
ಬಾರೊ ಜನ ದೇಶ ವಿದೇಶ
ಬೆವರಿಸಿದರು ಪ್ರವಾಸಿ ಗಮ್ಮತ್ತು ||

ಹೌದು ಎಲ್ಲಡೆ ಬಿಸಿಲು
ಆಗಾಗ ಮಳೆ ಬರಲು
ವರ್ಷಪೂರ್ತಿ ಒಂದೇ ತರದ
ಹವಾಗುಣ ತೊಗಳು ||

ಶಾಪಿಂಗಿನ ಸರ್ಪ ದೋಷ
ಮೆತ್ತಿಸಿಬಿಡೊ ಮುದ್ರಾರಾಕ್ಷಸ
ಏನೆಲ್ಲಾ ಮಾರುವ ದೇಶ
ಯಾಕಪ್ಪ ರಗ್ಗು ಕಂಬಳಿ ದಿವಸ ||

ಬೆಚ್ಚನೆ ಕೋಟು ಸ್ವೆಟರುಗಳು
ಜಾಕೆಟ್ಟು ಬೆಡ್ಶೀಟು ಸೇಲು
ಈ ಬಿಸಿಲಿಗೆಕಪ್ಪ ಬೆಚ್ಚನೆ ದಿರಿಸು
ಅಚ್ಚರಿಯೇಕೆ ಇಲ್ಲೂ ಚಳಿ ಕಾಲು ||

ಅದರದು ಹೊರ ಬೀದಿ
ಮುಗಿಲು ರವಿಗಳ ರಾಜ್ಯ
ಆಫೀಸು ಶಾಪಿಂಗು ಕಟ್ಟಡ
ಎಲ್ಲ ತರ ಕಾಲಕು ಭೋಜ್ಯ ||

– ನಾಗೇಶ ಮೈಸೂರು

00517. ಸಿಂಗಾಪುರದ ಚಳಿಗಾಲ


00517. ಸಿಂಗಾಪುರದ ಚಳಿಗಾಲ
_____________________________

ಸಾಮಾನ್ಯವಾಗಿ ಸಿಂಗಪುರವೆಂದರೆ ಎಲ್ಲರ ಮನಸಿನಲ್ಲಿ ಉದ್ಭವಿಸುವ ಕಲ್ಪನೆ – ಋತುಕಾಲಗಳಿಲ್ಲದ ವರ್ಷವೆಲ್ಲಾ ಒಂದೆ ಋತುಮಾನದ ಹವಾಗುಣವಿರುವ, ಸಮಭಾಜಕವೃತ್ತದ ಆಚೀಚಿನ ಬಿಸಿಲಿನ ದೇಶ. ಇಲ್ಲಿ ಸದಾ ಬಿಸಿಲು, ಹೆಚ್ಚು ಬಿಸಿಲು ಮತ್ತಷ್ಟು ಹೆಚ್ಚು ಬಿಸಿಲು; ಟಿವಿ ಪ್ರದರ್ಶನದ ನಡುವಿನ ವಾಣಿಜ್ಯ ಪ್ರಕಟಣೆ / ಜಾಹೀರಾತುಗಳಂತೆ ಆಗ್ಗಾಗ್ಗೆ ಮಳೆ – ನಿಲ್ಲುತ್ತಿದ್ದಂತೆ ಮತ್ತೆ ಬಿಸಿಲು / ಸೆಕೆಗಳ ಬೆವರೂಡಿಸುವಾಟ. ಅಂತ ಕಡೆ ಚಳಿಗಾಲದ ಮಾತೆಂದರೆ ತುಸು ಅಚ್ಚರಿಯಲ್ಲವೆ? ಆ ಕೃತಕ ಚಳಿಗಾಲ ಸಿಂಗಾಪುರದಲಿ ವರ್ಷವಿಡಿ ಹೇಗೆ ತಾಂಡವವಾಡುತ್ತದೆ ಎಂಬುದರ ಕಿರು ಪರಿಚಯ ಈ ಕವನದ ಮೂಲಕ. ಜಾಗತಿಕ ತಾಪಮಾನ ಏರಿಳಿತದ ಹಿನ್ನಲೆಯಲ್ಲಿ ಸಿಂಗಪುರದ ಹವಾಮಾನವು ಈಚಿನ ದಿನಗಳಲ್ಲಿ ಸಾಕಷ್ಟು ಏರುಪೇರಾಗಿದ್ದರೂ, ಕವನದ ಒಟ್ಟಾರೆ ಆಶಯ ಕೃತಕ ಪರಿಸರದ ಸುತ್ತ ಗಿರಕಿ ಹೊಡೆಯುವುದರಿಂದ, ಕವನದ ಪ್ರಸ್ತುತತೆಗೆ ಧಕ್ಕೆಯಾಗದೆಂಬ ಮತ್ತು ಈ ಕವನಾಸ್ವಾದನೆಗೆ ಅಡ್ಡಿಯಾಗದೆಂಬ ಅನಿಸಿಕೆ / ಭಾವದೊಂದಿಗೆ ಇಲ್ಲಿ ಪ್ರಸ್ತುತಗೊಳಿಸಲಾಗಿದೆ.

  
(picture from wikipedia: https://en.m.wikipedia.org/wiki/File:1_singapore_f1_night_race_2012_city_skyline.jpg)

ಹೆಜ್ಜೆಯಿಟ್ಟಲ್ಲೆಲ್ಲ ಉಂಟು
ಏರ್ಕಂಡಿಶನ್ನಿನ ಜತೆ ನಂಟು
ಹೊರಗೆ ಎಷ್ಟಿದ್ದರೂ ಬಿಸಿಲು
ಒಳಗೆ ಚಳಿಚಳಿ ತೆವಲು ||

ಆಫೀಸಿನಲ್ಲಿ ಕುಳಿತು ಕೆಲಸ
ಆರಂಭ ಸಹನೀಯ ವಾತ
ಕೆಲ ತಾಸು ಕಳೆದು ಮಾತರಿಶ್ವ
ಜಾಕೆಟ್ಟುಗಳ ಹೊಚ್ಚಿಸುವ ಅಶ್ವ ||

ಶಾಪಿಂಗು ಮಾಲಲು ಏಸಿ
ಬೆಚ್ಚಗಿದ್ದರೆ ತುಸು ವಾಸಿ
ಓಡಾಡುತ ಆದರು ಬಿಕನಾಸಿ
ಹೊರ ಬಂದು ಬಿಸಿಲಿಗೆ ಅರಸಿ ||

ಚಿತ್ರ ಮಂದಿರವಂತೂ ಬೇಡ
ತಂಪು ತುಂಬಿಟ್ಟ ಮೋಡ
ಹೊದಿಕೆಯಿರದೆ ಮತ್ತೆ
ನಡುಗಿ ಜ್ವರ ಬರುವ ಮಾತೆ ||

ಮನೆಗಳಲು ಏಸಿ
ಮಾಳಿಗೆಗೂ ಏಸಿ
ಜಾಗತಿಕ ಬೆಚ್ಚಗಾಗುವಿಕೆ
ಹವಾಗುಣ ಚದುರಿಸಿ ||

ಏಸಿ ಇರದಿದ್ದರೂ ಬೇಕು
ಮನೆಯಲಿ ಹೊದಿಕೆ
ಚಳಿಗಾಲ ಇರದೇ ಇದ್ದರು
ಬೇಕು ಬೆಚ್ಚಗಾಗುವಿಕೆ ||

ಹೀಗೆ ಸಿಂಗಾಪುರಕು ಬೇಕು
ದಪ್ಪ ಹೊದಿಕೆ ಮುದುರಿಕೆ
ವರ್ಷ ಪೂರ್ತಿ ನಡೆಸೋ
ದಿನ ಚಳಿಗಾಲದ ಸಿದ್ದತೆ ||

– ನಾಗೇಶ ಮೈಸೂರು

00516. ಚಾಳೀಸಿನ ಬಾಳು


00516. ಚಾಳೀಸಿನ ಬಾಳು
__________________________

ಈಗಿನ ಜಗದ ದೈನಂದಿನ ಬದುಕಿನಲ್ಲಿ ಹೆಚ್ಚೂ ಕಡಿಮೆ ಎಲ್ಲರಲ್ಲು ಕಾಣಬಹುದಾದ ಸಾಮಾನ್ಯ ಅಂಶ – ಚಾಳೀಸು ಧಾರಣೆ. ಸುಲೋಚನೆ ಅಥವ ಕನ್ನಡಕ ಧರಿಸದವರೆ ಅಪರೂಪವೆನ್ನಬಹುದಾದ ಈ ಕಾಲಧರ್ಮದ ಕುರಿತ ಛೇಡನೆ, ಈ ಜೋಡಿ ಪದ್ಯ.

ಮೊದಲದರ ಗುರಿ ಚಿಕ್ಕ ವಯಸ್ಸಿನಲ್ಲೆ ಚಾಳೀಸು ಧರಿಸುವ ಸ್ಥಿತಿಗಿಳಿದ ಮಕ್ಕಳ ಹಾಗೂ ಅದನ್ನುಂಟು ಮಾಡುವ ಪರಿಸ್ಥಿತಿಯ ಸುತ್ತ ಗಿರಕಿ ಹೊಡೆಯುತ್ತದೆ.

ಎರಡನೆಯ ಭಾಗ ವಯಸ್ಕರ ಸುತ್ತ ಗಿರಕಿ ಹೊಡೆಯುತ್ತಾ ಹಾಗೆ ಎರಡರಲ್ಲೂ ಆರು ತಿಂಗಳಿಗೆ ಪರೀಕ್ಷೆ ಮಾಡಿಸಿಕೊಳ್ಳಬೇನ್ನುವ ನಿರೀಕ್ಷೆ, ಹೆಚ್ಚೆಚ್ಚು ಬೆಲೆಯ ಹೆಚ್ಚುವರಿ ಸುವಿಧತೆಗಳ ಆಕರ್ಷಣೆಗೆ ಬಲಿಯಾಗುವ ಅನಿವಾರ್ಯತೆ ಮತ್ತು ಸುತ್ತುವರಿದ ವಾಣಿಜ್ಯತೆಗಳನ್ನು ತಟ್ಟಿಸುವ ಕವನ ಲಹರಿ ಇಲ್ಲಿದೆ.

01. ಚಾಳೀಸಿನ ಬಾಳು – ಬಾಲ್ಯಕೆ ಕಣ್ಹಾಳು!
_____________________________________

  
(picture source wikipedia : https://en.m.wikipedia.org/wiki/File:Reading-Glasses.jpg)

ಈ ಚಾಳೀಸಿನ ಬಾಳು
ಪೂರ ಮನೆ ಹಾಳು
ಮಕ್ಕಳಿಂದ ಮುದಿ ತನಕ
ಸಂಸಾರವೆ ಕನ್ನಡಕ ||

ಈಗ ಮಕ್ಕಳು ನರ್ಸರಿಗಳಲೆ
ಕಣ್ಣೇರಿಸಿ ಮರಿ ಕನ್ನಡಕ
ಬೇಡವೆಂದರು ವೀಡಿಯೋ ಟೀವಿ
ಐದಾರು ವರ್ಷಕೆ ಕಣ್ಮುದುಕ ||

ಕೂತರೆ ಹಿಂದಿನ ಬೆಂಚು
ಕಣ್ಕಾಣದ ಬೋರ್ಡು
ದೂರದಲಿ ಕಟ್ಟಿದ ಫಲಕ
ಏನೊ ಕಲಸಿದ ಬರಹ ||

ಹೆಸರಷ್ಟೇ ಸುಲೋಚನೆ
ಖರ್ಚಿನ ಆಲೋಚನೆ
ವರ್ಷಕೊಮ್ಮೆ ಟೆಸ್ಟಾರ್ಚನೆ
ಜೇಬಿನ ಕ್ಷೌರಕೆ ಕರಣೆ ||

ಒಂದೆರಡಲ್ಲ ತರ ತರ ಕವಣೆ
ಕಣ್ಣಿಗೂ ಮೀರಿ ದುಬಾರಿ ತಾನೆ
ಪ್ರೋಗ್ರೆಸ್ಸಿವ್ ಆಂಟಿಗ್ಲೇರ್ ಕೊನೆ
ಎಲ್ಲಕು ಹೆಚ್ಚಾಗುವ ಬೆಲೆ ಬವಣೆ ||

-ನಾಗೇಶ ಮೈಸೂರು
02. ಚಾಳೀಸಿನ ಬಾಳು – ವಯಸೆ ಗೋಳು
____________________________________

  
(picture source wikipedia :https://en.m.wikipedia.org/wiki/File:Szem%C3%BCveg_-_1920-as_%C3%A9vek.JPG)

ಗಂಡ ಹೆಂಡತಿ ಕಾಲೇಜಿನಲೆ
ಅಪ್ಪಿಕೊಂಡ ಕಣ್ಣ ಸುಖ
ಓದು ಬರೆಯಲು ಕೂತಾಗಲೆ
ಮುಖವಪ್ಪುತ ಕೂರೆ ಸಖ ||

ವಯಸಿನ ಲೀಲೆ ನಲವತ್ತು
ಪೇಪರು ಓದಲು ಎಡವಟ್ಟು
ಕನ್ನಡಕದಲೆ ಓದಲು ಕಷ್ಟ
ಹೊಸ ಕನ್ನಡಕದ ಸಂಕಷ್ಟ ||

ಅಪ್ಪ ಅಮ್ಮ ವಯಸಾಗಿ ಬಲು
ಕಾಣದ ದೃಷ್ಟಿಗೆ ಕನ್ನಡಕ
ವಯೋಧರ್ಮ ಮೈಮನ ನಗ್ಗಲು
ಕಣ್ಣಿನ ಜತೆಗೆ ದನಿ ನಡುಕ ||

ಹತ್ತಿರಕೊಂದು ದೂರಕೊಂದು
ಕಂಪ್ಯುಟರಿಗೆ ಇನ್ನೊಂದು
ಛಾಯಾಚಿತ್ರ ಸ್ಟೈಲ್ಗಿನ್ನೊಂದು
ತಂಪಿಗುಡುಕು ಮತ್ತೊಂದು ||

ಎರಡೆರಡು ಚಾಳೀಸ ಚಾಳಿ
ಹತ್ತಿರ ದೂರ ನೋಟ ಗಾಳಿ
ಹೊಸ ತಾಂತ್ರಿಕತೆ ಧಾಳಿ
ಪ್ರೋಗ್ರೆಸ್ಸಿವಿನ ಮಹಾಕಾಳಿ ||

ಹೀಗೆ ಚಾಳೀಸಿನ ಬಾಳು
ಎಲ್ಲ ಮನೆ ಮನ ತೆವಲು
ಬೇಕಿರಲಿ ಬಿಡಲಿ ಕೊನೆಗೆ
ಕಣ್ಣಿನ ಟೋಪಿಯ ಹಾಗೆ ||

– ನಾಗೇಶ ಮೈಸೂರು

00515. ಆನೆ ಇರುವೆ ಚಿಂತೆ (ಮಕ್ಕಳಿಗೆ)


00515. ಆನೆ ಇರುವೆ ಚಿಂತೆ (ಮಕ್ಕಳಿಗೆ)
_______________________________________

  
(picture source, wikipedia: https://en.m.wikipedia.org/wiki/File:African_elephant_(Loxodonta_africana)_reaching_up_1.jpg)

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ ಎಂಬ ಗಾದೆಯ ಮಾತೆ ಹೇಳುವಂತೆ, ಅವರವರ ಭಾರಗಳು / ಚಿಂತೆಗಳು ಅವರವರ ತಲೆನೋವಾಗುವ ಸ್ಥಿತಿಗೆ ಮೆಲುವಾಗಿ ಕನ್ನಡಿ ಹಿಡಿಯುವ ಕವನ – ಒಂದೆರಡು ತುಣುಕುಗಳ ಸಹಾಯದಿಂದ.

  
(Picture source wikipedia : https://en.m.wikipedia.org/wiki/File:Fire_ants_01.jpg)

ಅವರವರ ಚಿಂತೆ
ಅವರವರಿಗಿರುವಂತೆ
ಆನೆ ಭಾರ ಆನೆಗೆ
ಇರುವೆ ಭಾರ ಇರುವೆಗೆ ||

ಹಗುರವಿರಲೆ ಚಿಂತೆ
ಇರುವೆ ಹಾರಿ ಹೋದಂತೆ
ತೂಕವಿರಲೂ ಮಾತೆ
ಆನೆ ಹಾರಲಾಗದ ಕವಿತೆ ||

ಹೊಸಕಿರೆ ಕಾಲಡಿ
ಇರುವೆಗೆ ಆನೆಯ ಕನಸಂತೆ
ನುಸುಳೆ ಸೊಂಡಿಲಡಿ
ಆನೆಗೂ ಇರುವೆ ಹೆದರಿಸಿತೆ ||

ತಿನ್ನಲು ದೊಡ್ಡ ಪಾಲು
ಇರುವೆ ಕಚ್ಚಿ ಸಾಗಿಸಲೆ ಹೋರಾಟ
ಸಿಕ್ಕಲು ದೊಡ್ಡ ಪಾಲು
ಆನೆಗೆ ದಿನರಾತ್ರಿ ಕಾಡ್ಹುಡುಕಾಟ ||

ಇಷ್ಟೇ ಪುಟ್ಟ ದೇಹ
ಮಾಂಸಾಹಾರ ತಿನ್ನುವ ಇರುವೆ
ಎಷ್ಟು ಅಗಾಧ ದೇಹ
ಸಸ್ಯಾಹಾರ ಎಲ್ಲಿಂದ ತರುವಾನೆ ||

– ನಾಗೇಶ ಮೈಸೂರು

00514. ಮರ ಅಜರಾಮರ ! (ಮಕ್ಕಳಿಗೆ)


00514. ಮರ ಅಜರಾಮರ ! (ಮಕ್ಕಳಿಗೆ)
_____________________________

ತನ್ನ ಹಣ್ಣ ತಾನೆ ತಿನ್ನದಷ್ಟು ನಿಸ್ವಾರ್ಥಿಯಾದ ಮರ ನಿಸರ್ಗ ನಿಯಮದಂತೆ ಸಂತತಿಯನ್ನು ಬೆಳೆಸುತ್ತಾ, ಮತ್ತದೆ ನಿಸ್ವಾರ್ಥತೆಯನ್ನು ಸತತ ಮುಂದುವರೆಸುತ್ತಾ ಸಾಗುತ್ತದೆ. ಅದೆ ಹೋಲಿಕೆಯಡಿ ಮನುಜಕುಲವನ್ನು ಇರಿಸಿದರೆ ನಿಸ್ವಾರ್ಥತೆ ಶೂನ್ಯದತ್ತ ನಡೆದರೆ, ಸ್ವಾರ್ಥಪರತೆ ನೂರರತ್ತ ಸಾಗುತ್ತಿರುವ ವಿಪರ್ಯಾಸ. ಇದರ ಸಂಗ್ರಹ ಭಾವ ಈ ಕವನ.
 

ತನ್ನ ಹಣ್ಣ
ತಾನೆ ತಿನ್ನದ ಮರ
ಆಗಲು ಅಜರಾಮರ |
ಹಕ್ಕಿಗೆ ಹೆಕ್ಕಿ
ತಿನ್ನೆ ಕೊಟ್ಟು ಸದರ
ಬೀಜ ಬಿದ್ದು ಬಂದು ಹೊರ ||

ಹತ್ತಿರವಿರೆ ಬೀಜ
ಮರಕೆ ಸ್ಪರ್ಧೆ ಬಹಳ
ಹುಟ್ಟಿಸಿ ದೊಂಬಿ ಗುಂಪು ಗೊಂದಲ |
ಸಹಾಯದ ಗಾಳಿ
ಹಾರಿಸಿ ತೂರಿಸಿ ಬೀಜ
ಹೊತ್ತೊಯ್ದು ಬಿಸಾಡಿ ಗೋಜ ||

ಎಲ್ಲೋ ಬಿದ್ದು
ಒದ್ದಾಡಿದ ಬೀಜ ಮಣ್ಣು
ಹೂತರೊಳಗೆ ಆಳದ ಒಳಗಣ್ಣು |
ಎಲ್ಲಿಂದಲೊ ಮಳೆ
ಕೊಚ್ಚಿ ತರುವ ನೀರು
ಕುಡಿವ ಭುವಿ ಜತೆ ಬೀಜ ಹೀರು ||

ಟಿಸಿಲು ಬಿಸಿಲು
ಮೊಳಕೆಯೊಡೆದು ಕಾಳು
ಬೇರೊಡೆದು ಸಸಿಯಾಗೆ ದಾಪುಗಾಲು |
ಬೆಳಕು ನೀರು
ಮೊಗೆಮೊಗೆದು ಗಾಳಿ
ಸರಸರ ಸಸಿ ಬೆಳೆದು ಮಹಾಕಾಳಿ ||

ಮತ್ತದೆ ಪ್ರವರ
ಹೊಸ ಹಣ್ಣು ಬೀಜ ಸಮರ
ಹೊಸ ಸಂತತಿ ಹಬ್ಬುವ ಸಂವತ್ಸರ |
ಹೀಗೆ ನಿಸ್ವಾರ್ಥಿ ಮರ
ತನ್ನ ಹಣ್ಣ ತಾನೇ ತಿನ್ನದ ತರ
ಪರರಿಗಿತ್ತು ತನ್ನ ಸಂತತಿ ಬೆಳೆಸೆ ವರ ||

ಮಾನವ ಜೀವನ ಸಾರ
ಅಲ್ಲ ಮರದ ತರ ಎಲ್ಲಕು ದರ
ಸ್ವಾರ್ಥದ ಗರ ಆದರು ಸಂತತಿ ಸ್ವರ |
ಮರ ಮನುಜ ತರ
ನಿಸ್ವಾರ್ಥಿ ಮರ ಸಂತತಿ ಅಮರ
ಸ್ವಾರ್ಥದಲಿ ಮನುಕುಲ ದಿಗಂಬರ ||

– ನಾಗೇಶ ಮೈಸೂರು

00513. ಮಧುಮಾಲತಿ……..


00513. ಮಧುಮಾಲತಿ……..
___________________________

  

(ಫೋಟೊ: 1966 ರಲ್ಲಿ ತೆರೆಕಂಡ ಮಧುಮಾಲತಿ ಚಿತ್ರದ್ದು :https://kannadamoviesinfo.files.wordpress.com/2013/04/madhu-malathi-1966.jpg?w=477&h=400)

ಮಧುಮಾಲತಿಯ ದಂತಕಥೆ ನಮಗೆಲ್ಲರಿಗು ಪರಿಚಿತವೆ. ಸೌಂದರ್ಯದ ಖನಿ ಷೋಡಶಿ ಮಧುಮಾಲತಿ ಅಕಾಲ ಮರಣಕ್ಕೀಡಾದಾಗ, ಅವಳನ್ನು ವರಿಸುವ ವ್ಯಾಮೋಹದಿಂದ ಹಾತೊರೆದು ಬಂದಿದ್ದ ಮೂವರು ಸಾಹಸಿ, ವಿದ್ವಾನ್ ತರುಣರು ಏನೆಲ್ಲಾ ಮಾಡಿ ಕೊನೆಗು ಅವಳ ಮರಳಿ ಜೀವ ತಳೆಯುವಂತೆ ಮಾಡುತ್ತಾರೆ. ಅವಲ್ಲಿ ಒಬ್ಬ ಅವಳನ್ನು ಸುಟ್ಟುಹಾಕಿದ ಅಸ್ಥಿಬೂದಿ ಕಾದರೆ, ಮತ್ತಿಬ್ಬರು ಮಂತ್ರ ತಂತ್ರ ವಿದ್ಯಾ ಪಾಂಡಿತ್ಯವನೆಲ್ಲಾ ಒರೆಗಚ್ಚಿ ಅವಳ ಶೇಷ ಬೂದಿಯಿಂದ ಮತ್ತೆ ಕಳೇಬರಹವನ್ನು ಸೃಜಿಸಿ ಅದಕ್ಕೆ ಜೀವ ತುಂಬುತ್ತಾರೆ. ಹೀಗೆ ಮತ್ತೆ ಜೀವಂತವಾಗಿ ಬಂದ ಮಧುಮಾಲತಿಯ ಪುನರ್ಜನ್ಮ – ಮಂತ್ರ ತಂತ್ರವೆ, ವಿಜ್ಞಾನವೆ ಅಥವಾ ಮತ್ತೇನಿರಬಹುದು ಎಂಬ ಜಿಜ್ಞಾಸೆ ಈ ಕವನದ್ದು.

ಮೊದಲ ಭಾಗದಲ್ಲಿ ಅವರು ಮೂವರು ಅವಳನ್ನು ಬದುಕುಳಿಸಿಕೊಂಡ ಕಥೆ ಹೇಳಿ ಅದು ಮಂತ್ರ ತಂತ್ರವೆ ಅಥವಾ ಆ ಅಡುಗೋಲಜ್ಜಿಯ ಕಥನ ರೂಪದಲ್ಲಿ ಹೇಳಿದ ವಿಜ್ಞಾನದ ಹಿನ್ನಲೆಯಿದೆಯೆ ಎಂಬ ಅನುಮಾನ ವ್ಯಕ್ತಪಡಿಸುತ್ತ ಕೊನೆಗೊಳ್ಳುತ್ತದೆ.

ಅದೆ ಎರಡನೆ ಭಾಗದಲ್ಲಿ ಆ ವಿಜ್ಞಾನದ ಹಿನ್ನಲೆಯೇನಿದ್ದಿರಬಹುದಿತ್ತು? ನಾವೀಗ ಹೇಳುವ ಡಿ.ಏನ್.ಏ, ಕ್ಲೋನಿಂಗ್ ತರದ ಇತ್ಯಾದಿ ವೈಜ್ಞಾನಿಕ ತತ್ವಗಳನ್ನು ಹುದುಗಿಸಿದ ಮಾಯ ಮಂತ್ರದ ಹೊದಿಕೆಯ? ಎಂಬ ಚಿಂತನೆಯನ್ನು ಹೊರಡಿಸುತ್ತದೆ. ಒಟ್ಟಾರೆ ಪವಾಡವೆ, ವಿಜ್ಞಾನವೆ ಅನ್ನುವ ಜಿಜ್ಞಾಸೆ.

ಮಧುಮಾಲತಿ ಸುಟ್ಟು ಬೂದಿ (01)
______________________________

ಷೋಡಶಿ ಮಧು ಮಾಲತಿ
ಗೊತ್ತಲ್ಲ ಸತ್ತು ಹೋದ ಗತಿ
ಒಬ್ಬರಲ್ಲ ಮೂವ್ವರ ಸರತಿ
ಮಾಡಿಟ್ಟಳಲ್ಲ ಅಧೋಗತಿ ||

ಸುಟ್ಟಾದರು ಹಿಡಿಗೆ ಬೂದಿ
ಬಿಡರಲ್ಲ ತರ ಮನೋವ್ಯಾಧಿ
ಮೂವ್ವರ ಮೂರ್ದಿಕ್ಕಾಗಿಸಿ
ಹುಡುಕಿಸಿತಂತೆ ಜೀವ ಕಸಿ ||

ಮಂತ್ರವೇತ್ತ ಜ್ಯೋತಿಷ್ಯಶಾಸ್ತ್ರ
ದೇಹ ಬಲದ ಅಸೀಮ ಅಸ್ತ್ರ
ಒಂದಾಗಿಸಿ ತಂದರೆ ಸುಸ್ನೇಹ
ಮರು ಜೀವಿಸಿದಳೆ ಸಂದೇಹ ||

ಮಧುಮಾಲತಿ ಸುಟ್ಟ ಬೂದಿ
ಆದಳ್ಹೇಗೆ ಮತ್ತೆ ಷೋಡಶಿ ನದಿ
ಹುಡುಗಿತನ ಯೌವ್ವನ ಪ್ರಾಯ
ಬದುಕಿ ಪಡೆದಳ್ಹೇಗೆ ಪರಕಾಯ ||

ಮಾಯಾಜಾಲದ ಕಥೆಯಲ್ಲ
ಮಂತ್ರ ತಂತ್ರದ ಅದ್ಭುತವಲ್ಲ
ವಿಜ್ಞಾನವೇನೋ ಇರಬೇಕಲ್ಲ
ಅಜ್ಞಾನಕೆ ಕಥೆ ಹೇಳಿದರಲ್ಲ ||

– ನಾಗೇಶ ಮೈಸೂರು

ಆದಳ್ಹೇಗೆ ಮತ್ತೆ ಹುಡುಗಿ…!(02)
___________________________

ಬಹುಶಃ ಬೂದಿಯಿಂದಿಡಿದು
ಡಿಯನ್ನೆಯ ಜುಟ್ಟನು ತರಿದು
ಕೋಶವನ್ನೆ ಮರುಕಳಿಸಿ ಕಸಿ
ಕಟ್ಟಿದರೆ ಕೋಶದಲೆ ಕಲಸಿ ||

ಹುಟ್ಟಿದ ಕೋಶ ಕಟ್ಟುತ ದೇಹ
ವೇಗದ ಜಾಗದಿ ಮುಟ್ಟಿ ದಾಹ
ಪುನರುತ್ಥಾನಕೆ ಮಧುಮತಿ
ಪಡೆದಳೆ ಪುನರ್ಜನ್ಮ ಸದ್ಗತಿ ||

ಯಾವ ಜ್ಞಾನದ ಸಿದ್ದಿಯೋ
ಅಪರಿಮಿತ ಶಕ್ತಿ ಬುದ್ಧಿಯೋ
ವೈಜ್ಞಾನಿಕ ಗತಿ ಪ್ರಗತಿಯೋ
ಮುಗ್ದರ ಕಣ್ಣಿಗೆ ಮಂತ್ರವೋ ||

ಅದನರಿಯಲಾಗದ ಶಕ್ತಿ ಬಗೆ
ಜಾದು ಕಥೆಯಾಗಿಸಿ ಯುಕ್ತಿಗೆ
ಪರಂಪರೆಯಿಂದ್ಹರಿಸಿ ಸತ್ಸತತ
ಕಾದಿಹರೆ ಬೆಳೆದ ಮೆದುಳ್ಘಾತ ||

ಏನಾಗಲಿ ಮಧುಮಾಲತಿ ಕಥೆ
ಮಾಯ ಲೋಕವೇ ಇಳಿದಂತೆ
ಅಜ್ಞಾನಕು ವಿಜ್ಞಾನಕು ಗಂಟು
ಬೆಸೆವ ರೋಚಕತೆಗೂ ನಂಟು ||

– ನಾಗೇಶ ಮೈಸೂರು

00512. ಪರೀಕ್ಷೆಯ ಲೆಕ್ಕಾಚಾರ


00512. ಪರೀಕ್ಷೆಯ ಲೆಕ್ಕಾಚಾರ
______________________

  
(picture source wikipedia : https://en.m.wikipedia.org/wiki/File:Test_(student_assessment).jpeg)

ಒಲ್ಲದ ಮನಸಿನಿಂದ ಪುಸ್ತಕ ಹಿಡಿದು ಪರೀಕ್ಷೆಗೆ ಓದಿಕೊಳ್ಳಲು ಒದ್ದಾಡುತ್ತಿದ್ದ ಮಗನನ್ನು ಸಾಮ, ದಾನ,ದಂಡ, ಭೇಧೋಪಾಯಗಳೆಲ್ಲದರ ಬಳಕೆ ಮಾಡುತ್ತ ಸಿದ್ದಗೊಳಿಸಲು ಹೆಣಗುತ್ತ ಕುಳಿತಿದ್ದೆ. ಅದೇ ಹೊತ್ತಿನಲ್ಲಿ ಟೀವಿಯಲ್ಲಿ ಪ್ರವೇಶ ಪರೀಕ್ಷೆಯ ನಂತರದ ಆತಂಕಪೂರ್ಣ ಚರ್ಚೆ ನಡೆಯುತ್ತಾ ಇತ್ತು. ಒಂದು ಕಾಲದಲ್ಲಿ ನಾವೂ ಇದನ್ನೆಲ್ಲಾ ಅನುಭವಿಸಿ ಮುಂದೆ ಸಾಗಿದ್ದವರೆ. ಆದರೆ ಆ ದಿನದಲ್ಲಿ ಕಾಡಿದ್ದ ಅದೆಷ್ಟೊ ಆತಂಕ, ಒತ್ತಡಗಳು ಕೇವಲ ಆತಂಕ, ಅಜ್ಞಾನ, ನಿಖರ ಗಮ್ಯವಿಲ್ಲದ ಒದ್ದಾಟಗಳ ಕಾರಣದಿಂದ ಉಂಟಾದದ್ದು. ಇಂದು ತಿರುಗಿ ನೋಡಿದರೆ ನಾನು ಓದಿದ್ದಕ್ಕೂ, ಮಾಡುತ್ತಿರುವ ಕೆಲಸಕ್ಕೂ ನೇರ ಸಂಬಂಧವೆ ಇಲ್ಲ. ವಿದ್ಯಾರ್ಹತೆ ಕೇವಲ ಕೆಲಸ ಗಿಟ್ಟಿಸುವ ಆರಂಭದ ರಹದಾರಿಯಾಯ್ತೆಂಬುದನ್ನು ಬಿಟ್ಟರೆ ಮಿಕ್ಕೆಲ್ಲ ಹೊಸ ಹೋರಾಟ, ಪರೀಕ್ಷೆಗಳೆ ಎದುರಾದದ್ದು ವಾಸ್ತವ ಸತ್ಯ. ನಮ್ಮ ವಿದ್ಯಾರ್ಹತೆ, ವಿದ್ಯಾಭ್ಯಾಸ ಆ ಹೋರಾಟಕ್ಕೆ ನಮ್ಮನ್ನು ಸಿದ್ದಪಡಿಸಿರಲೆ ಇಲ್ಲ. ಆದರೂ ನಾವು ಅದೆ ಮರೀಚಿಕೆಯ ಹಿಂದೆ ನಮ್ಮ ಭವಿಷ್ಯದ ಪೀಳಿಗೆಯನ್ನು ತಳ್ಳುತ್ತ ಕುರಿಮಂದೆಗಳ ಹಾಗೆ ಸಾಗುತ್ತಿದ್ದೇವಲ್ಲ ಅನಿಸಿ ಖೇದವೂ ಆಯ್ತು.

ಪ್ರತಿಯೊಬ್ಬ ತಂದೆ ತಾಯಿಯರಲ್ಲೂ (ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಲ್ಲಿ) ಈ ಪರೀಕ್ಷೆ ಅನ್ನುವ ಭೂತ ಕಾಡುವ ಪರಿ ಅನನ್ಯ. ಅಲ್ಲಿನ ಸಾಧನೆ ಮತ್ತು ಗಳಿಕೆಯ ಅಂಕಗಳೆ ಮುಂದಿನೆಲ್ಲಾ ಹಂತಕ್ಕೂ ಮಾನದಂಡವಾಗಿ ಬಿಡುವುದರಿಂದ ಅದು ಮಕ್ಕಳಲ್ಲಿ ಹುಟ್ಟಿಸುವ ಉದ್ವೇಗ, ಆತಂಕವೂ ಅಳತೆ ಮೀರಿದ ವ್ಯಾಪ್ತಿಯದು. ಈ ಶ್ರೇಣಿ ಅಂಕಗಳೆ ಜೀವನದ ಅಂತಿಮ ಗಮ್ಯ ಅನ್ನುವಷ್ಟರ ಮಟ್ಟಿಗೆ ಭ್ರಮೆ ಹುಟ್ಟಿಸಿ ಎಲ್ಲರನ್ನು ಆ ಒಂದು ಹುಸಿ ಗಮ್ಯದ ಹಿಂದೆ ಓಡಿಸಿಬಿಡುತ್ತವೆ – ಸದಾ ಬೆನ್ನಟ್ಟುತ್ತಾ ನಡೆಯುವ ಹಾಗೆ. ವಿಧ್ಯಾರ್ಥಿ ಜೀವನ ಭವಿಷ್ಯದ ಜೀವನಕ್ಕೆ ಸಿದ್ದ ಮಾಡುವ ಕಲಿಕೆಯ ವೇದಿಕೆಯಾಗದೆ ಅಂಕಗಳಿಕೆ ಸ್ಪರ್ಧೆಯ ಪಂಥವಾಗಿ ಪರಿಣಮಿಸುವುದು ಈಗ ಎಲ್ಲೆಡೆ ಕಾಣುವ ಸತ್ಯ. ವಿಷಾದವೆಂದರೆ ಸಾಮಾಜಿಕ ಪರಿಸರದಲ್ಲಿ ಬದುಕುವ ಜನ ಇದನ್ನು ಒಪ್ಪಲಿ ಬಿಡಲಿ – ಸುತ್ತಲಿನ ಪ್ರಚಲಿತ ಪರಿಸರದ ಒತ್ತಡ ಅವರನ್ನು ಈ ಹಾದಿಯನ್ನೇ ಹಿಡಿದು ಮುನ್ನಡೆಯುವಂತೆ ಪ್ರೇರೇಪಿಸುತ್ತದೆ – ಸಹಮತದಿಂದಲಾದರೂ ಸರಿ, ವಿಧಿಯಿಲ್ಲದೇ ಅನುಕರಿಸಬೇಕಾದ ಅನಿವಾರ್ಯದಿಂದಾದರೂ ಸರಿ. ಹಿಂದಿನ ಕಾಲದಲ್ಲಿದ್ದ, ಗುರುಕುಲದಲ್ಲಿದ್ದು ಜೀವನವೆಂದರೆ ಏನೆಂದು ಮನೆಯಿಂದ ಹೊರಗೆ, ಕಾಡಿನ ಮತ್ತು ಆಶ್ರಮದಂತಹ ಕಠಿಣ ವಾತಾವರಣದಲ್ಲಿ ಕಲಿಯುವ ವ್ಯವಸ್ಥೆ ಈಗ ಇರದ ಕಾರಣ, ಸ್ವಾಭಾವಿಕ ಹಾಗೂ ನೈಸರ್ಗಿಕ ಕಲಿಕೆಯನ್ನು ಹಣ ತೆತ್ತು ಕಲಿಯುವ-ಪಡೆಯುವ ವಾಣಿಜ್ಯೀಕೃತ ಕೃತಕ ಪರಿಸರ ಈಗಿನ ನಾಗರೀಕ ಜೀವನದ ಮಾದರಿ.ಇದು ಪರಿಸ್ಥಿತಿಯ ಒಂದು ಮುಖ.

ಇನ್ನು ಈ ವ್ಯವಸ್ಥೆಯಲ್ಲಿ ಈಜಿಕೊಂಡು ಸಂಭಾಳಿಸಬೇಕಾದ ಮಕ್ಕಳನ್ನು ನೋಡಿದರೆ – ಕೆಲವರು ಈ ಪರಿಸರಕ್ಕೆ ನೀರಿಗೆ ಬಿದ್ದ ಮೀನಿನಷ್ಟೆ ಸಹಜವಾಗಿ ಹೊಂದಿಕೊಳ್ಳಬಲ್ಲ ಸಾಮರ್ಥವಿದ್ದವರು ಮನಃಪೂರ್ವಕವಾಗಿಯೊ, ಪರಿಶ್ರಮದ ಸಹಾಯದಿಂದಲೊ ಸುಲಲಿತವಾಗಿ ಮುನ್ನಡೆಯುತ್ತಾರೆ. ಸಮಸ್ಯೆ ಅಥವಾ ಪ್ರಶ್ನೆ ಬರುವುದು ಆ ಗುಂಪಿನಲ್ಲಲ್ಲ. ಅದೇ ಮಕ್ಕಳ ಸಮೂಹದಲ್ಲಿ ಮತ್ತೆರಡು ಗುಂಪೂ ಮಿಳಿತವಾಗಿರುತ್ತದೆ. ಮೊದಲನೆಯದು ಆ ಅಂಕಗಳಿಕೆಯ ಸಾಮರ್ಥ್ಯವಿರದ, ಆ ಮಟ್ಟದ ಸ್ಪರ್ಧಾತ್ಮಕ ಜಗದಲ್ಲಿ ಏಗಲಾರದ ದುರ್ಬಲ (ಪ್ರಾಯಶಃ ಅದರಿಂದಲೆ ಕೀಳರಿಮೆಯಿಂದ ಬಳಲುವ ) ಗುಂಪು. ಎರಡನೆಯದು ದುರ್ಬಲವಲ್ಲದಿದ್ದರೂ ಆ ಗುಂಪಿನ ಮಕ್ಕಳು ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ದೈವದತ್ತವಾಗಿ ಪಡೆದೂ ಅಂಕಗಳಿಕೆಯಂತಹ ವ್ಯವಸ್ಥೆಯಲ್ಲಿ ಹಿಂದೆ ಬಿದ್ದಿರುವವರು; ಯಾಕೆಂದರೆ ಅವರ ಕಲಿಕೆಯ ವಿಧಾನ ಮಾಮೂಲಿಗಿಂತ ವಿಭಿನ್ನವಾದದ್ದು. ಸಾಂಪ್ರದಾಯಿಕ ಕಲಿಕೆ, ಪರೀಕ್ಷೆಗಳು ಅವರ ಮನಸ್ಥಿತಿಗೆ ಹೊಂದಾಣಿಕೆಯಾಗುವಂತದ್ದಲ್ಲ. ದುರದೃಷ್ಟವಶಾತ್ ನಮ್ಮ ಶಿಕ್ಷಣದ ವ್ಯವಸ್ಥೆ ಸರಾಸರಿ ವಿದ್ಯಾರ್ಥಿ ಜನಾಂಗದ ಪರಿಗಣನೆಯಿಟ್ಟುಕೊಂಡು ವಿನ್ಯಾಸಗೊಳಿಸಿದ್ದು. ಹೀಗಾಗಿ ಬಹುತೇಕ ‘ಸರಾಸರಿ ವರ್ಗ’ ಇದರಲ್ಲೇ ಹೇಗೊ ಏಗಿ, ಕೊಸರಾಡಿ ಮೇಲೆದ್ದು ಬಂದರೂ ಈ ಮೇಲೆ ಗುರುತಿಸಿದ ಎರಡು ಗುಂಪುಗಳು ಹೊಂದಿಕೊಳ್ಳಲಾಗದ ಒದ್ದಾಡುತ್ತಲೆ ನರಳುತ್ತವೆ. ಈ ಎರಡು ವರ್ಗಗಳನ್ನು ಹತ್ತಿರದಿಂದ ನೋಡಿ, ಅವರ ಶಕ್ತಿ – ಸಾಮರ್ಥ್ಯ – ಮಿತಿಗಳನ್ನು ಗುರ್ತಿಸಿ ಅದಕ್ಕೆ ಸರಿಹೊಂದುವ ವಿದ್ಯಾಕ್ರಮದ ಹಾದಿಯಲ್ಲಿ ಅವರನ್ನು ಮುನ್ನಡೆಸುವ ಶಿಕ್ಷಣ ಕ್ರಮ ನಮ್ಮಲ್ಲಿ ಇಲ್ಲ. ಈ ಕಾರಣದಿಂದ ಹೋಲಿಕೆಯಲ್ಲಿ ಈ ಎರಡು ಗುಂಪುಗಳು ಹಿಂದೆ ಬಿದ್ದು ಅಥವಾ ದೂಷಣೆ, ಶೊಷಣೆಗೊಳಗಾಗಿ ನರಳಬೇಕಾಗುತ್ತದೆ. ಕೆಲವರು ಹೇಗೊ ಹೆಣಗಾಡಿ ಬದುಕುತ್ತಾರಾದರೂ , ಮತ್ತೆ ಕೆಲವರು ಮುರುಟಿಹೋಗುತ್ತಾರೆ ಕೀಳರಿಮೆಯ ಕಂದರದಲ್ಲಿ.

ಗೊತ್ತಿದ್ದೊ ಗೊತ್ತಿಲ್ಲದೆಯೊ ಅಥವಾ ಬೇರೆ ದಾರಿಯಿಲ್ಲದ ಅನಿವಾರ್ಯತೆಯಿಂದಲೊ – ಈ ಎರಡು ಗುಂಪಿನ ಮಕ್ಕಳ ನರಳಿಕೆಗೆ ಕಾರಣಕರ್ತರಾಗುವಲ್ಲಿ ಪೋಷಕರ ಪಾತ್ರ ಗಣನೀಯ. ಸರೀಕರಲ್ಲಿ ತಲೆಯೆತ್ತಿ ನಿಲ್ಲುವ ಮರ್ಯಾದೆಯ ಪ್ರಶ್ನೆಗೊ, ತಂತಮ್ಮ ನಿಜವಾಗದ ಕನಸು ಮಕ್ಕಳಲ್ಲಿಯಾದರೂ ಸಾಕಾರವಾಗಲೆಂಬ ಹುಮ್ಮಸ್ಸಿನಲ್ಲಿ ಮಕ್ಕಳನ್ನು ವಿಪರೀತ ಒತ್ತಡಕ್ಕೊಳಪಡಿಸಿ ನಿರೀಕ್ಷೆಯ ಗಾಳಿ ಗೋಪುರ ಕಟ್ಟಿಬಿಡುತ್ತಾರೆ. ಅಲ್ಲೇ ಸಮಸ್ಯೆಯ ಮೂಲವಿರುವುದು – ಆ ಮಕ್ಕಳ ವೈಯಕ್ತಿಕ ಸಾಮರ್ಥ್ಯ, ಪ್ರತಿಭೆ, ಪರಿಮಿತಿ, ತೊಡಕುಗಳ ಗಣನೆಯಿಲ್ಲದೆ ನಡೆಯುವ ಈ ಪ್ರಕ್ರಿಯೆ ಅವರ ಮೇಲೆ ಅಸಾಧಾರಣ ಒತ್ತಡ ಹಾಕಿ ಕಂಗೆಡಿಸಿ ಅಸಮರ್ಥರನ್ನಾಗಿಸಿಬಿಡುವುದು ವಾಸ್ತವದ ಕ್ರೂರತೆ. ಇಷ್ಟೆಲ್ಲಾ ಚಿಂತನೆ ಮನಸಿನ ಪಟಲದಲ್ಲಿ ಮೂಡಿದಾಗ ಓದಲು, ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ನಾವು ಹಾಕುತ್ತಿರುವ ಒತ್ತಡ (ಸರಾಸರಿ ಮಕ್ಕಳಲ್ಲೂ ಕೂಡ) ಅರ್ಥರಹಿತವಲ್ಲವೇ ಎನಿಸಿತು. ಆ ಒತ್ತಡದ ಜತೆ ಜತೆಯೇ ಅವರಿಗೆ ಮತ್ತೊಂದು ಸಂದೇಶವನ್ನು ಸತತವಾಗಿ ಕೊಡುತ್ತಲೇ ಇರಬೇಕೆನಿಸಿತು – ಅಂಕ, ಪರೀಕ್ಷೆಗಳೇ ಜೀವನದಂತಿಮ ಗಮ್ಯವಲ್ಲ ಎಂದು. ಅವರಲ್ಲಿ ಆ ನಂಬಿಕೆ ಆತ್ಮವಿಶ್ವಾಸ ಹುಟ್ಟಿದಾಗಲೆ, ಏನೋ ಓದಿ ಯಾರದೋ ಕೈ ಕೆಳಗಿನ ವ್ಯವಸ್ಥೆಯ ಕೊಂಡಿಯೊಂದರ ಕೊಂಡಿಯಾಗಿ ಎಲ್ಲೋ ಕಳೆದುಹೋಗುವುದರ ಬದಲು ತಾವೇ ಆ ರೀತಿಯ ವ್ಯವಸ್ಥೆ ನಿರ್ಮಿಸುವ ಪ್ರಭೃತಿಗಳಾಗಬಹುದು ಎಂದು. ಈಗ ದೊಡ್ಡ ದೊಡ್ಡ ಕಂಪನಿ ಕಟ್ಟಿರುವ ಎಷ್ಟೋ ಮಂದಿ ಒಂದು ಕಾಲದಲ್ಲಿ ಓದು ಬಿಟ್ಟು ತಮ್ಮ ಹುಚ್ಚು ಕನಸಿನ ಬೆನ್ನು ಹತ್ತಿದವರೆ. ನಮ್ಮಲ್ಲೂ ಆ ಪರಿಸರವಿದ್ದರೆ ಅಂತಹ ಸಾಹಸಗಳು ತಾನಾಗೆ ಅರಳುತ್ತವೆ ಅನಿಸಿದರು ಅದಕ್ಕೆ ಸಿದ್ದವಿರುವ ಪಕ್ವ ಮನಸ್ಥಿತಿ ಪೋಷಕರಾದ ನಮಗೇ ಇನ್ನು ಇಲ್ಲವೆನಿಸಿತು. ಕನಿಷ್ಠ ಆ ಕುರಿತು ಯೋಚಿಸುವುದು ಆ ದಿಸೆಯಲ್ಲಿಡಬಹುದಾದ ಮೊದಲ ಹೆಜ್ಜೆಯೆನಿಸಿದಾಗ ಮೂಡಿದ ಭಾವಕ್ಕೆ ಕೊಟ್ಟ ಪದಗಳ ರೂಪ ಈ ಕೆಳಗಿನ ಪದ್ಯ. ಅದು ಭವಿತದ ವಾಸ್ತವದಲ್ಲಿಯಾದರೂ ಸಾಕಾರವಾಗಲಿ ಎನ್ನುವುದು ಆಶಯ.

ನನ್ನ ಮಗ
__________

ಪಾಸಾಗಲಿ ನೀ ನನಗೆ ಮಗನೆ
ಫೇಲಾಗಲಿ ನೀ ನನ್ನ ಮಗನೆ
ಫೇಲುಗಳೆ ಪಾಸಿನ ಜೋಳಿಗೆ
ಹೆದರದೆ ನಡೆ – ಮಗನೆ ನೀ ನನಗೆ ||

ದರ್ಜೆ ಶ್ರೇಣಿ ಉನ್ನತಾಂಕ
ಮೂರನೆ ದರ್ಜೆ ಶೂನ್ಯಾಂಕ
ಸುಲಭವಲ್ಲ ಎರಡೂ ಸಾಧನೆ
ನೀನರಿತರೆ ಸರಿ ಬದುಕೆ ಶೋಧನೆ ||

ನೂರಕೆ ನೂರು ಬರೆದರು ಸರಿ
ಅರೆಬರೆ ಹೆಣಗಾಡಿದರು ಜಾರಿ
ಸೋಲು ಗೆಲುವು ಯುದ್ಧದ ನಿಯಮ
ಆ ಪ್ರಜ್ಞೆಯುದಿಸೆ ಮಿಕ್ಕೆಲ್ಲಾ ಕೊರಮ ||

ಬರಲಿ ಬಿಡಲಿ ಬಹುಮಾನ
ಪಾರಿತೋಷಕಗಳ ಸಮ್ಮಾನ
ಹಿಗ್ಗದೆ ಕುಗ್ಗದೆ ಬದುಕೆ ಕಲಿತರೆ
ಮಗನೆಂಬ ಹೆಮ್ಮೆ ಸಾಕೆನಗೆ ದೊರೆ ||

ಯಶಾಪಯಶ ಪರೀಕ್ಷೆಯ ಸಂತೆ
ಮಾಡಬೇಡ ಭವಿತ ಕೆಲಸದ ಚಿಂತೆ
ಯಾರು ಕೊಡದಿದ್ದರೇನು ಉದ್ಯೋಗ
ನೀನೆ ತುಂಬಿಬಿಡು ಉದ್ಯಮಿಯ ಜಾಗ || 

 
– ನಾಗೇಶ ಮೈಸೂರು, 

00511. ಪ್ರೇಮಾವತಾರ….


00511. ಪ್ರೇಮಾವತಾರ….
_______________________________

ಪ್ರೀತಿ ಪ್ರೇಮದ ಯಾವುದೊ ಮಜಲನ್ನು ದಿಟ್ಟಿಸಿದರು ಬರಿ ಅದೆ ಅವತಾರದ ವಿವಿಧ ಆಯಾಮಗಳು.. ಹುಚ್ಚೆಬ್ಬಿಸಿ ಕುಣಿಸೊ ಆನಂದ ಲಹರಿ, ರೊಚ್ಚಿಗೆಬ್ಬಿಸೊ ಕ್ರೋಧದ ನಗಾರಿ, ನೋವಿನ ಅಚ್ಚೆ ಹಾಕಿ ಮಿಡುಕಾಡಿಸೊ ಯಾತನೆಯ ದಾರಿ, ನಿರ್ಲಿಪ್ತತೆಯಲಿ ಕವಚದೊಳಕ್ಕೆ ಮುದುಡಿಸಿ ಅಂತರ್ಮುಖಿಯಾಗಿಸೊ ಸವಾರಿ – ಅಥವಾ ಇವೆಲ್ಲದರ ಮಿಶ್ರಣವನ್ನು ಗಳಿಗೆಗೊಂದರಂತೆ ಕಟ್ಟಿಕೊಡುತ ಸದಾ ಅನಿಶ್ಚಯತೆಯ ತೊಟ್ಟಿಲಲಿ ತೂಗಾಡಿಸಿ ದಿಗ್ಭ್ರಮೆ ಹಿಡಿಸುವ ಮಾಯಾಲಹರಿ. ಅದರ ಹಲವಾರು ಮುಖಗಳನ್ನು ಹಿಡಿದಿಡುವ ಸಂಧರ್ಭ, ಸಂಘಟನೆಗಳು ಅಸಂಖ್ಯಾತವಾದರು, ಮೂಲದ ತಪನೆಯ ಬೇರು ಮಾತ್ರ ಒಂದೆ. ಪ್ರೀತಿಯೆಂಬ ಸಂವೇದನೆಯ ಪ್ರಬಲ ಶಕ್ತಿಯನ್ನು ಎತ್ತಿ ತೋರಿದಷ್ಟೆ ಸಹಜವಾಗಿ ಅದರ ಆ ಶಕ್ತಿಯೆ ಕುಗ್ಗಿಸುವ ದೌರ್ಬಲ್ಯದ ಪ್ರತೀಕವಾಗುವ ವಿಪರ್ಯಾಸವಾದರು, ಅದೇ ಪ್ರೀತಿಯ ಜಗವನ್ನಾಳುವ ಮಾಯಶಕ್ತಿಯೆನ್ನುವುದಂತು ನಿಜ.

ಅಂತದ್ದೊಂದು ಆಯಾಮ, ಅವತಾರದ ಅಗಣಿತ ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆ ಈ ಪ್ರೇಮ ಪದ 😊

ಸಹಿಸುತ್ತಾಳಷ್ಟೆ, ಸಹಿ ಮಾಡದ ಅವಳ ರೀತಿ
ಬಲವಂತಕೆ ನಟಿಸುತ, ನಿರಾಳ ಕೊಡದೆ ಪ್ರೀತಿ
ಅವನೆದೆಯಲ್ಲಿ ಮಿಡಿದು, ಕಾಡುತ ತಡಕಾಡಿಸಿ
ತುಂಬಿ ತುಳುಕಿದರು, ದೂರದೆ ನಿಂತ ಮನದರಸಿ ||

ಬರಿದೆ ಭೀತಿಯದಷ್ಟೆ, ಕಳೆದುಹೋಗುವ ಸಖ್ಯ
ಗೊತ್ತವನಿಗೆ ಬೇಕು ಭರ್ತಿ, ಪ್ರೀತಿಯ ಸಾಂಗತ್ಯ
ಕೊಡುವಾಸೆಗೆ ನೂರು, ಅಡೆತಡೆ ವಾಸ್ತವ ಗೋಡೆ
ಕೊಡಲಾರೆನೆಂದು ಕಳಚೇ, ಬಿಡದ ಮನದ ಗೂಡೆ ||

ಅವನದೇನೊ ಅವಸರ, ಕಳುವಾಗಿ ಕಾಲದ ಸಂಚಿ
ಹುಡುಕಾಟದ ಬಳ್ಳಿ, ತೊಡರಿದ್ದೆ ತಡವಾಗಿ ತರಚಿ
ಹುಟ್ಟಿದ ಕಾಲಕೆ, ತಪ್ಪಿನ ಆರೋಪ ವಿಧಿಗೆ ಶಾಪ
ಆದರು ಬಿಡದ ಮೋಹ, ಬಿಡದಲ್ಲ ಅವಳದೆ ಜಪ ||

ಮುನಿಸಿ ದಣಿಸಿ ಕಂಗೆಡಿಸಿ, ಓಗೊಟ್ಟ ಗಳಿಗೆಗಳು
ತೇಪೆ ಹಾಕಿದರೇನು, ಮೂಲ ಪ್ರೀತಿಗಲ್ಲಿಲ್ಲ ಒಕ್ಕಲು
ಬರಿ ಸಹಿಸುವ ಬಂಧ, ನಿಜ ಪ್ರೀತಿಯಾಗದ ನೋವು
ಒಂದು ಕೈ ಚಪ್ಪಾಳೆಯೆಲ್ಲಿ, ಚಿಟುಕಿಯದೆ ಕಲರವವು ||

ನೋಯಿಸೆ ಮನಬಾರದು, ನೋಯಿಸದೆ ಬಿಡದು ಪ್ರೀತಿ
ಪ್ರತಿ ಕ್ಷಣ ಮನ ವಿಹ್ವಲ, ಕೈತುತ್ತು ಬಾಯಿಗಿಲ್ಲದ ಮಿತಿ
ಪ್ರತಿ ನಿರೀಕ್ಷೆಗು ಸೋಲು, ಪರೀಕ್ಷೆಯಾಗಿ ಶೂನ್ಯದ ಪ್ರವರ
ಸಹಿಸಿ ನಟಿಸುವ ನೋವ, ತೆರವಾಗಿಸೊ ಸರಿಯವತಾರ ||

– ನಾಗೇಶ ಮೈಸೂರು

00510. ಪ್ರೇರಣೆಗಳ ಗಣಿತ, ಪ್ರೇರೇಪಣೆ ಕಾಗುಣಿತ


00510. ಪ್ರೇರಣೆಗಳ ಗಣಿತ, ಪ್ರೇರೇಪಣೆ ಕಾಗುಣಿತ
________________________________

ಪ್ರತಿಯೊಂದರ ಬೆಲೆ ಅರಿವಾಗುವುದು ಅದಿಲ್ಲದಾಗ ಆಗುವ ಪರಿಣಾಮಗಳ ಅರಿವು, ತಿಳುವಳಿಕೆ ಅಥವಾ ಅನುಭವವಿದ್ದಾಗ ಮಾತ್ರ. ಹೇಗೆ ದುಃಖದ ಅನುಭವವಿರದಿದ್ದರೆ, ಅನುಭವಿಸುತ್ತಿರುವ ಸುಖದ ಬೆಲೆ ಗೊತ್ತಾಗದೊ, ಹೇಗೆ ಕಷ್ಟಗಳ ಸುಳಿಗೆ ಸಿಕ್ಕವರಿಗೆ ನಡುವಿನ ಹಾಸ್ಯ ಮನಕೆ ಬಿಡುವು ಕೊಟ್ಟಂತೆ ಅನುಭಾವಿಸಿ ರುಚಿಸುವುದೊ, ಹಾಗೆ ತರತರದ ಅರಿವಿನ ಮೊತ್ತ, ಮೌಲ್ಯ ಅರಿವಾಗಲಿಕ್ಕೆ ಕೆಲವು ಹಿನ್ನಲೆಗಳು ಬೇಕಾಗುತ್ತವೆ. ಅಂಥಹ ಕೆಲವು ಸರಕುಗಳ ಕೂಡಿಸಿಟ್ಟ ಭಾವ ಈ ಪದ್ಯ.

  
(Picture source wikipedia : https://en.m.wikipedia.org/wiki/File:55-aspetti_di_vita_quotidiana,_gioia,Taccuino_Sanitatis,_Cas.jpg)

ಸುಖ ಒಂದೆ ಇದ್ದರೆ ರುಚಿಸುವುದೆ ಭಾಷ್ಯ
ನೋವಿರದೆ ಕೇಳಿದರೆ ನಗೆ ತಂದೀತೆ ಹಾಸ್ಯ ||

ಸಂಕಷ್ಟಗಳ ಪ್ರೇರಣೆ ಮೂಡಿಸುವ ಜಗತ್ತು
ಸಂತೃಪ್ತಿ ಸಂಭಾಷಣೆ ಆಲಸಿತನ ಸಂಪತ್ತು ||

ಪ್ರೇಮಿಸಿದ ನೋವು ಮಾಗಿಸುವ ಬೆಳೆತ
ಭಾವ ಸುಕ್ಕು ಕಾವು ಮುದುರಿನ ಸೆಟೆತ ||

ಆಪತ್ತುಗಳ ಕುತ್ತು ಹಚ್ಚಿಸಿ ಮನದೀಪ
ಸೆಣೆಸಿದ ಸಂಪತ್ತು ಜ್ಞಾನದಾ ಸ್ವರೂಪ ||

ಘಟಿಸಿ ಪಾಪಕೂಪ ಜಿಜ್ಞಾಸೆ ಸರಿ ತಪ್ಪ
ಸರಿಪಡಿಸೊ ಬೆಪ್ಪ ನಾಳೆಗೆ ಸರಿಸಪ್ಪ ||

ಗತಿಸಿದ ಗತ ಕಾಲ ಆಗಿರೆ ಬರಿ ಸಕಾಲ
ಹೇಗೇ ನಿಲಿಸೆ ಕಾಲ ಸಂಭಾಳಿಸಿ ಅಕಾಲ ||

ಮುಂದೂಡಿದ ಕಷ್ಟ ಕಾಡಿಸುವ ಗವಾಕ್ಷ
ತಪ್ಪಿಸಲಾಗದನಿಷ್ಟ ಬರದಿರ ಕೃಷ್ಣ ಪಕ್ಷ ||

ಕಾವ್ಯದ ಕಾಗುಣಿತ ಕಲಿತಂತೆ ಸಂಗೀತ
ಬರೆವ ಒಳಗಿನೂತ ಪ್ರೇರೇಪಿಸಿ ಸೆಳೆತ ||

ಕವನದಿ ಬಂದಂತೆ ತೆರೆಮರೆಯ ಹಾಸ್ಯ
ಅಪಹಾಸ ಇರದಿರೆ ಅವಿತೆ ಭಾವ ಲಾಸ್ಯ ||

ಲಘು ಮನ ಲಂಘನ ಹೊತ್ತು ಭಾರ ಜಘನ
ಶಂಕೆ ಸಜೀವದಹನ ದಹ್ಯ ವಿಕಾರದಮನ ||

  
(picture source wikpedia – https://en.m.wikipedia.org/wiki/File:Wilhelm_Amberg_In_Gedanken_versunken.jpg)

———————————————————————
ನಾಗೇಶ ಮೈಸೂರು
———————————————————————

00509. ಕಾಲದ ಗುಂಡು


00509. ಕಾಲದ ಗುಂಡು
___________________

ಗುಂಡು ಬೆಲ್ಲದುಂಡೆಯನ್ಹಿಡಿದು ಉರುಳಿ ಬಂದ ತಂಡಿನಂತೆ (ಕಬ್ಬಿಣದ ಕೋಲು) ಉರುಳಿ ಬರುವ ಕಾಲದ ಹೊಡೆತ ಎಣಿಕೆಗೆ ನಿಲುಕದ ಖೂಳ. ಸಿಹಿಯಚ್ಚಿದ ಬೆಲ್ಲದ ತುದಿಯನ್ನಿಡಿದೆ ಬರುವ ಕಾಲದ ಭಾರವಾದ ಕೋಲು ನಮಗರಿವಿಲ್ಲದೆಲೆ ದೇಹವನೆಲ್ಲ ಹಂತ ಹಂತವಾಗಿ ದುರ್ಬಲಿಸುತ್ತಾ ಸಾಗಿದ್ದರು, ಮನಕದರ ಅರಿವಿರುವುದಿಲ್ಲ. ಹಳೆಯ ಶಕ್ತಿ, ಸಾಮರ್ಥ್ಯಗಳೆ ತುಂಬಿಕೊಂಡ ಭಾವ ಮನದಲ್ಲಿ. ದೇಹದ ತೂತುಗಳನರಿಯದ ಮನಕೂ, ಮನದ ತುರುಸು, ಹುರುಪನ್ನರಿಯದ ದೇಹಕು ನಡೆವ ತಾಕಲಾಟವೆ – ಕಾಲದ ಗುಂಡು. ಎರಡು ಪರಸ್ಪರರ ಸಾಮರ್ಥ್ಯ, ಮಿತಿಗಳನ್ನರಿತು ಸಮತೋಲನ ಸ್ಥಿತಿಯ ಘಟ್ಟವನ್ನು ತಲುಪುವ ತನಕ ಕಾಡುವ ಅಂತರದ ಕಾಟ, ಪಾಡಾಟ, ತನುಮನ ಕಾದಾಟ.

  
(Picture sourc Wikipedia: https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:MontreGousset001.jpg)

ಗುಡ ಗುಂಡು ಗುಂಡಿನ ಚಂಡು
ಗುಡುಗುಡು ಲೋಹದ ತಂಡು
ಗುಣದರಿವಿರದಂತೆ ಹೆಣ್ಣೊ ಗಂಡು
ಉರುಳಿ ಬಂತೋ ಕಾಲದ ಗುಂಡು ||

ಉರುಳುತ್ತೋ ಕಾಲದ ಚಕ್ರ
ಮಾಡುತ್ತೆಲ್ಲರಾ ಬಕರಾ
ಗಾಬರಿಯಾಗೋ ಮೊದಲೆ
ನಮಗರಿಯದೆ ನಾವೇ ಪೆಕರ ||

ಕ್ಷಣಕ್ಷಣಕೆ ನಿಮಿಷದ ಗಣನೆ
ನಿಮಿಷ ಗಂಟೆಯ ಗುಣಗಾನೆ
ಕಟ್ಟೆ ಗಂಟೆ ದಿನದ ಪರಿಗಣನೆ
ವಾರ ವರ್ಷ ಕರಗಿತೆ ಹಿಮ ಮನೆ ||

ಅಚ್ಚರಿ ಅದು ಸಮ್ಮೋಹನೆ
ನಮ್ಮೊಳಗದು ಬರಿ ಕಲ್ಪನೆ
ವಯಸಾಗದ ಮನಸ ಮಾತು
ಕೇಳದಲ್ಲ ದೇಹದಾ ತೂತು ||

ಮನ ಎಂದಿನಂತೆ ಖುಷಿಯ ಬುಗ್ಗೆ
ಜಯಿಸಿಟ್ಟು ಬಿಡುವ ವಿಶ್ವಾಸ ನುಗ್ಗೆ
ಹೆಜ್ಜೆಯಿಡಲು ಏದುಸಿರ ಫಸಲು
ಯಾರ್ಹಿಡಿದರೊ ತಡೆ ಆತಂಕಗಳು ||

ಗಟ್ಟಿ, ನಿನ್ನೇ ತಾನೆ ಮಾಡಿದ್ದುಂಟು
ಇಂದೇತಕೊ ಮಿಸುಕಾಡಿದ್ದುಂಟು
ಮಾಗಿದ್ದರು ಮನ ಪ್ರಾಯೋಪವೇಶ
ಮಿಕ್ಕಿಲ್ಲದ ದೇಹ, ಅಂಥ ತ್ರಾಸಾವೇಷ ||

————————————————————
ನಾಗೇಶ ಮೈಸೂರು
————————————————————

ಕಠಿಣ ಪದಗಳ ಅರ್ಥ :
—————————–
ತಂಡು = ಗುಂಪು, ತಂಡ, ಕೋಲು , ದೊಣ್ಣೆ , ಭಾರವಾದ ಕಬ್ಬಿಣದ ಕೋಲು, ಗದೆ
ಗುಡ = ಬೆಲ್ಲ

00508. ಚಾಟಿನ ಲೈಫು


00508. ಚಾಟಿನ ಲೈಫು
_______________________

ಈ ಜಗವೆಂಬ ಜಾಗತಿಕ ಹಳ್ಳಿ ಮತ್ತು ಉಸರವಳ್ಳಿಯಂತೆ ಚಮಕಾಯಿಸಿ ಬದಲಾಗುವ ತಾಂತ್ರಿಕ ಪ್ರಗತಿಯ ಮಳ್ಳಿ, ದೈನಂದಿನ ಬದುಕಿನ ತರದಲ್ಲಿ ತಂದಿಟ್ಟಿರುವ ಸಂದಿಗ್ದಗಳು, ಹೊಂದಾಣಿಕೆಗಳು ಅಗಣಿತ. ಈ ಜಗ ಗೋಮಾಳದಲಿ ಒಂದೆಡೆ ಇದೆ ಪ್ರಗತಿ ಅವಕಾಶಗಳ ಹರಿವಾಣ ಬಿಚ್ಚಿ, ಐಷಾರಾಮಗಳ ಹಾಸಿಗೆ ಹಾಸಿ, ಜೀವನ ಮಟ್ಟದಲಿ ತಟ್ಟನೆಯ ಏರಿಕೆಗೆ ಕಾರಣವಾಗಿದ್ದರೆ, ಅದೇ ಪ್ರಗತಿಯ ಅನಿವಾರ್ಯತೆ ಒಂದೆಡೆ ಕಲೆತು ಬಾಳಬೇಕಾದ ಗಂಡು ಹೆಣ್ಣುಗಳನ್ನು, ಸತಿ-ಪತಿಯರನ್ನು, ತಂದೆ, ತಾಯಿ, ಮಕ್ಕಳನ್ನು ಬೇರ್ಪಡಿಸಿ ಒಬ್ಬಂಟಿ ಜೀವನದತ್ತ ದೂಡುವ ವಿಪರ್ಯಾಸ. ಅದೇ ತಾಂತ್ರಿಕ ಪ್ರಗತಿ ದೂರವಿರುವ ಮನಗಳನ್ನು ಹತ್ತಿರಾಗಿಸುವಂತೆ ಚಾಟು, ವೀಡಿಯೊ ಕ್ಯಾಮ್, ನೆಟ್ ಪೋನುಗಳಂತ ತಂತ್ರಜ್ಞಾನದ ಮುಖಾಂತರ ಸುಲಭ ಸಾಧ್ಯವಾಗಿಸುವುದು ಆ ವಿಪರ್ಯಾಸದ ವ್ಯಂಗಗಳಲ್ಲಿ ಒಂದೆಂದೆ ಹೇಳಬಹುದೇನೊ.

ಈ ಕವನದಲ್ಲಿ ಇಂಥದೆ ಯಾವುದೊ ಕಾರಣದಿಂದ ಬೇರೆ ಬೇರೆಯಾದ ಊರುಗಳಲ್ಲಿ ವಾಸಿಸುತ್ತಿರುವ ಸತಿ ಪತಿಯರು, ಚಾಟಿನ ಮುಖಾಂತರ ಸಂಭಾಷಿಸುವ ಬಗೆ, ಅದೇ ತಂತ್ರಜ್ಞಾನದ ಸಾಮರ್ಥ್ಯದ ಮತ್ತು ಭವಿಷ್ಯದ ಸಾಧ್ಯತೆಗಳ ಕುರಿತು ಅಚ್ಚರಿ ಪಡುವ ಬಗ್ಗೆ, ಮತ್ತೆ ಕಡೆಯದಾಗಿ ಇಂಥಹ ಶಕ್ತಿಯೆ ನಮ್ಮ ಹಳೆಯ ದೇವರುಗಳ ಪವಾಡಶಕ್ತಿಗಳ ಹಿನ್ನಲೆಯಾಗಿತ್ತೆ ಎಂದು ಸಂಶಯಿಸುವ ತನಕ ವಿವಿಧ ಸ್ತರಗಳಲ್ಲಿ ಹರಿದಾಡುತ್ತದೆ. ಕೊನೆಗೆ, ವಾಸ್ತವದ ಜಗತ್ತಿಗೆ ಎಳೆದು ತಂದ ಮೀಟಿಂಗೊಂದರ ನೆಪವಾಗಿ ಸಂಭಾಷಣೆ, ಸಂವಾದ ಅಂತ್ಯಗೊಳ್ಳುತ್ತದೆ. ಇದೆಲ್ಲಾ ತೆಳು ಹಾಸ್ಯದ ಲಘು ದಾಟಿಯಲ್ಲಿ ನಡೆಯುವುದು ಈ ಕವನದ ಮತ್ತೊಂದು ವಿಶೇಷ ಅಂಶ.

  
(Picture source from wikipedia: https://commons.m.wikimedia.org/wiki/File:Seiyu.png)

ನಾನು ಚಾಟು ಅವಳು ಚಾಟು, ಚಾಟೆ ನಮ್ಮ ಲೈಫು
ಕಷ್ಟ ಸುಖವ ಹಂಚಿಕೊಳಲು, ದೂರ ಹಸ್ಬೆಂಡು-ವೈಫು
ಟೈಮುಜೋನು, ಹಗಲು-ಇರುಳು, ಸೂರ್ಯಚಂದ್ರ ಪಾರ್ಟು
ನಾ ಮಲಗುತಲುಲಿ, ಅವಳೇಳುತಲಿ, ‘ಶೇರ’ಬೇಕು ಹಾರ್ಟು ||

ನಾ ಬೆಡ್ಡಿನಲಿ, ಅವಳೊ ಟ್ರೈನಲಿ, ಆದರೇನು ಪಜಲ್ಲು
ಕಂಪ್ಯುಟರೆ ಇರದಿದ್ದರೇನು, ಅವಳ ಕೈಲಿ ಮೊಬೈಲು
ಇನ್ನು ಆಫೀಸಲಿ, ಬಲೆ ಗಾಂಚಲಿ, ಬಿಡದ ಪರ್ಸನಲ್ಲು
ಕೇರೆತಕೆ ಈ ಹುಡುಗರಿಗೆ, ಮೊಬೈಲಲ್ಲೂ ಇ-ಮೈಲು ||

ಜಾಗತೀಕರಣದ ಈ ಜಗದಿ, ಜಗವೆ ದೊಡ್ಡ ಹಳ್ಳಿ
ಕಾಲ-ದೇಶ ದೂರು ಸಲ್ಲ, ಬೆಳವಣಿಗೆಯೇ ಮಳ್ಳಿ
ಮೊದಲಿನಂತಿಲ್ಲ ತುಟ್ಟಿ, ಜಗದ ಕಮ್ಯುನಿಕೇಷನ್
ಆಗಿದ್ದರೂನು ಲೆಕ್ಕ ಇಲ್ಲ, ಸಂಬಳವೇ ಸೆನ್ಸೇಷನ್ ||

ಆದರಿಲ್ಲಿ ವೇಗ ಗಲ್ಲಿ, ಕೊನೆಯಾ ಮೊತ್ತ ಒಂದೇ
ವೇಗವೆ ಬೇಕೆಂದರೀಗ, ಬೇಕೆ ಹೊಂದಾಣಿಕೆ ಮಂಡೆ
ಏನೊ ಕ್ರಾಂತಿ, ನಡೆ ಪ್ರಗತಿ ದೊಡ್ಡೋರ ತುಟಿಮಂತ್ರ
ಬೇಗ ಗಳಿಸಿ, ಮನೆಗಷ್ಟುಳಿಸೆ ನಮ್ಮ ಕಾರ್ಯತಂತ್ರ ||

ಒಂಭತ್ತರಿಂದ ಐದು ಮನೆಗೆ, ಮರೆತುಬಿಟ್ಟಾ ಕಾಲ
ಒಂದೇ ಊರಲಿರಲೂ ಕೂಡಾ ದಂಪತಿಗಳಿಗಕಾಲ
ಬಹುಶಃವಿದು ಸಂಕ್ರಮಣ ಕಾಲ, ತೀರ ಸೇರೊ ಗಬ್ಬ
ಅಲ್ಲಿತನಕ ಮಾಡುತ್ತ ತ್ಯಾಗ, ಆಚರಿಸಿ ಒಂಟಿ ಹಬ್ಬ ||

ತಾಂತ್ರಿಕತೆಯ ಅಗೋಚರ, ದಿನದಿನವಾಗುತೆ ನಿಖರ
ಭೌತಿಕತೆ ದೂರಾದರು, ಅಭೌತಿಕ-ಜತೆ ಬಲು ಪ್ರಖರ
ಮುಂದೊಂದಿನ ಬರಬಹುದಲ್ಲೇ ಜೀವನದೆಲ್ಲಾ ಗಮನ
ಅಂತರ್ಜಾಲ-ಚಾಟಿನಲ್ಲೆ ಒಳಹೊಕ್ಕ ಭೌತ ನಾವ್ಪಯಣ ||

ಅಲ್ಲಿತನಕ ಇಹೆವೋ ಇಲ್ಲವೊ, ಯಾರರಿತಿಹ ಗಾನ
ನಮ್ಹಳೆ ಕಥೆ ದೇವ್ರುಗಳಿಗೆ ಆ ತರವೇ ತಾನೆ ಯಾನ
ಬರಲಿ ಬಿಡಲಿ ಮುಂದಿನ ಪಾಡು, ಈಗಿನ ಕಥೆ ನೋಡು
ಮೀಟಿಂಗಿದೆ ಚಾಟಿಂಗ್ಗೆ ‘ಡುನಾಟು ಡಿಸ್ಟರ್ಬ್’ ಬೋರ್ಡು ||

————————————————————
ನಾಗೇಶ ಮೈಸೂರು
————————————————————

00507. ಅಲ್ಲೊಂದು ಇಲ್ಲೊಂದು ಹೀಗೆ ಸ್ಮರಿಸೋಣ… (ಮಕ್ಕಳಿಗೆ)


00507. ಅಲ್ಲೊಂದು ಇಲ್ಲೊಂದು ಹೀಗೆ ಸ್ಮರಿಸೋಣ…(ಮಕ್ಕಳಿಗೆ)
______________________________________________

ಮಹಾ ಪುರಾಣಗಳಿಂದ ಪುನೀತವಾದ ನಮ್ಮ ಪರಂಪರೆಯಲ್ಲಿ, ಆ ಪುರಾಣದ ಅಸಂಖ್ಯಾತ ಪಾತ್ರಗಳು ಅದೆಷ್ಟು ಹಾಸುಹೊಕ್ಕಿವೆಯೆಂದರೆ, ನಮಗರಿವಿಲ್ಲದೆಯೆ ನಮ್ಮೆಷ್ಟೊ ನಡೆ,ನುಡಿ,ಆಚಾರಗಳು ಅದೆ ಆದರ್ಶವನ್ನು ಪ್ರತಿಪಾದಿಸುತ ನಡೆದಿರುತ್ತವೆ. ಅದರಲ್ಲೂ, ಪುರಾಣದ ವನಿತೆಯರ, ಮಹಾಸತಿಯರ ಉದಾಹರಣೆಗಳಂತೂ ಲೆಕ್ಕವಿಲ್ಲದಷ್ಟು. ಅಂಥಹ ಕೆಲವು ಪುರಾಣದ ವ್ಯಕ್ತಿತ್ವಗಳ ನೆನಕೆಯೆ ಈ ಕವನ. ಪ್ರಾಸಾಂಗಿಕವಾಗಿ ಒಂದೆರಡು ಗಂಡುಗಳ ಹೆಸರೂ ಬರುವುದಾದರು, ಮುಖ್ಯ ಭೂಮಿಕೆ ಆ ಮಹಾಸತಿಯರದೆ!  

 (Picture source from: https://commons.m.wikimedia.org/wiki/File:Anasuya_feeding_the_Hindu_Trinity,_The_Krishna-Sudama_Temple_of_Porbandar,_India.JPG)

ಭಕ್ತ ಮಾರ್ಕಂಡೇಯ, ಭೇಷ್! ಯಮನನ್ನೇ ಗೆದ್ದ
ಭಕ್ತಿಯಲೇ ಸೋಲಿಸಿ, ಮಾಡದಲೆ ಯುದ್ಧ!
ಈಕೆ ಸತಿ ಸಾವಿತ್ರಿ, ಸತ್ಯವಾನನ ಮೇಸ್ತ್ರಿ
ಏಮಾರಿಸಿ ಯಮನ, ಮೂರು ವರ ಪಡೆದಳಾ ಪುತ್ರಿ ||

ಇನ್ನು ಸತಿ ಅನಸೂಯಾ, ಬಿಡಿ ಯಾಕೆ ಅಸೂಯ
ದತ್ತಾತ್ರೇಯನ ಹಡೆದೆ, ಆಡಿದಾ ಲೀಲೆಯ
ಯಾರಿಗುಂಟು ಭಾಗ್ಯ ಒಂದೇ ಬ್ರಹ್ಮಾದಿ ಹರಿಹರ
ಮಕ್ಕಳಾದರವರೆ ಬ್ರಹ್ಮ, ವಿಷ್ಣು, ಮಹೇಶ್ವರ ||

ಪಾಪದ ಚಿಕ್ಕವಳ್ಹುಡುಗಿ, ಸತಿ ಸುಕನ್ಯ
ಕುರುಡಾಗಿ ಪತಿ ದೇವ, ಮುದಿ ಚೌವ್ವನನ
ಒಲಿಸಲಿಲ್ಲವೇ ಕಡೆಗೂ ಅಶ್ವಿನಿ ಕುಮಾರನ
ಪತಿಗೆ ಹಿಂತಿರುಗಿಸಿ ಮತ್ತೆ ಗರಿಗರಿ ಯೌವ್ವನ ||

ರೇಣುಕಾದೇವಿ ಕಥೆ, ಕಾಡಿತ್ತು ಚಂಚಲತೆ
ಜಮದಗ್ನಿ ದಾರುಣತೆ, ತಪ್ಪೇನಿತ್ತೆ ವನಿತೆ?
ಬಿಡದೆ ಕೊಚ್ಚಿದ ಪುತ್ರ ಪರಶುರಾಮನ ಘನತೆ
ಮತ್ತೆ ಬೇಡಲು ಪಿತನ ಬದುಕಿದಳು ಮಾತೆ ||

ಗೌತಮನ ಅಹಲ್ಯೆ, ಮೋಸ ಹೋದವಳಲ್ಲೆ
ಇಂದ್ರ ಚಪಲಕೆ ಸಿಕ್ಕಿ ಶಿಲೆಯಾದ ಮಹಿಳೆ
ಸಾವಿರ ಕಣ್ಣಿನ ಶಾಪ ದೇವರಾಜನ ಪಾಲೆ
ಕಾಯಬೇಕಾಯಿತೆ ಅಬಲೆ, ಶ್ರೀ ರಾಮನ ಕಾಲೇ ||

ಹುಡುಕುತ್ತ ಹೋದರೆ ಹೀಗೆ ನಮ್ಮ ಪುರಾಣ
ಹೇಳಿ ಮುಗಿಯದ ಮಹಿಮೆ ಹೇಳ್ಹೇಳಿ ನಿತ್ರಾಣ
ಅಲ್ಲೊಂದು, ಇಲ್ಲೊಂದು ಹೀಗೆ ಹುಡುಕೋಣ
ಆಗೊಮ್ಮೆ, ಹೀಗೊಮ್ಮೆ ಕುಳಿತು ಸ್ಮರಿಸೋಣ ||

– ನಾಗೇಶ ಮೈಸೂರು

00506. ವಿರಹ…


00506. ವಿರಹ…
________________

ಪ್ರಾಯ / ವಿರಹದ ಸಹಸ್ರಾಕ್ಷನ ಕಬಂಧ ಬಾಹುವಿನಲಿ ಸಿಕ್ಕ ಜೀವದ ವಿಲವಿಲ ವದ್ದಾಟ ಮಾತಾಗಿ ಹೊರಬಿದ್ದ ತರಹ. ದೈಹಿಕ ಕಾಮನೆ, ಮಾನಸಿಕ ಭಾವನೆ ಹಾಗೂ ಇವೆರಡರ ನಡುವಿನ ಒದ್ದಾಟ, ತಲ್ಲಣ, ತುಮುಲಗಳ ಚಿತ್ರಣ..

ಬೆಂಕಿಯ ಅಲೆ ಮೈ ತಟ್ಟಿದೆ
ನಿಮಿರಿ ನಿಂತ ರೋಮ
ಪ್ರಜ್ವಲಿಸುವ ಸಲೆಯಾಗಿದೆ
ಒಡಲೊಳಗಿನ ಕಾಮ ||

ಒಳಗುಟ್ಟಿದೆ ಹೊರಗುಟ್ಟಿದೆ
ವೇದನೆ – ನಗು ಒಸಗೆ
ಒಣ ಮೌನದಲೇ ಘೀಳಿಟ್ಟಿದೆ
ಮರೆತ ಮನದ ಬೆಸುಗೆ… ||

ತುಟಿ ಮುತ್ತಿನ ಹನಿ ಹನಿಯಲಿ
ಬಿಸಿಯೇರಿದ ಬಯಕೆ
ಬಳಲಿ ಬೆಂದು ಬಿರುಕಾಗಿದೆ
ಕಾದು ನಿನ್ನಾ ಮನಕೆ…||

ಕೋಲಾಟದ ಬಡಿತಕ್ಕೆದೆ
ಏರಿಳಿದಿದೆ ಕಾವು
ಹದಿ ಹರೆಯಕೆ ಮುಪ್ಪಡರಿದೆ
ನೀನುಡಿಸಿದ ನೋವು…||

ನೆನಪಾಗದೆ ಬಿಸಿಯುಸಿರಲಿ
ಹೆದೆಯೇರಿದ ಇರುಳು
ಮತ್ತೇರಿಸಿ ಮನದಣಿಸಿದ
ಪರಿವಿಲ್ಲದ ಹಗಲೂ ? ||

ಸಾಕಾಗಿದೆ ಈ ವಿರಹದ
ದಳ್ಳುರಿಯಲಿ ನೋವು..
ಮರೆತೆಲ್ಲವ ಬರಬಾರದೇ
ನೀಗಿ ಮನದ ಬಾವು…||

– ನಾಗೇಶ ಮೈಸೂರು

00505. ವಿಷಾದಗಳು


00505. ವಿಷಾದಗಳು
_________________

ವಿಷಾದಗಳ ಹಲವು ವಿಶ್ವ ರೂಪಗಳಲ್ಲಿ, ಕೆಲವು ವಿಷಾದವ್ಹುಟ್ಟಿಸಿದ ಪ್ರತಿಕ್ರಿಯೆಗಳು ಮತ್ತೊಂದು ತರದ ವಿಷಾದವಾಗಿಯೆ ಹೊರಹೊಮ್ಮುವ ವ್ಯಂಗ್ಯ, ಈ ಸಾಲುಗಳಲ್ಲಿ ಅಡಕ. ಹೊರಬರುವ ಯತ್ನವೆ ಹೋರಾಟದ ದನಿಯಾದರು ಅದನ್ನಡಗಿಸುವ ವಾಸ್ತವಗಳ ಗುದ್ದಿನ ಶಕ್ತಿ, ಈ ಕವಿತೆಯ ಮತ್ತೊಂದು ಭಾವ. ವಿಷಾದಗಳನೆ ಬಿತ್ತಿ ವಿಷಾದಗಳನೆ ಬೆಳೆವ ವಿಷಾದವೆ ಇದರ ಸಂಗ್ರಹ ಸಾರ.

  
(Picture source wikipedia : https://en.m.wikipedia.org/wiki/File:Maud-Muller-Brown.jpeg)

ನಿನ್ನ ನೆನಪಲ್ಲಿ ಅರಳುತ್ತವೆ
ನೂರೆಂಟು ಕವನ, ಚಿತ್ರ …
ಅಂಚೆಯಲ್ಲಿ
ಸಂಪಾದಕರ ವಿಷಾದ ಪತ್ರ ||

ಮುಗ್ದ ನಗುವಲ್ಲಿ ಆಸೆಯ
ಚಿಮ್ಮಿಸಿದ್ದು ಇತಿಹಾಸ..
ನಿನ್ನ ಪ್ರತಿಕ್ರಿಯೆ –
ಅರ್ಥವಾಗದ ಮಂದಹಾಸ ||

ಅಪ್ಪಿ ಬಿಸಿಯಾಗಲೆ ಬಯಸಿ
ಪಡೆದದ್ದು ನಿನ್ನ ಸಂಗ..
ಆಗಿದ್ದು ಬೆಂಕಿ ಮುಟ್ಟಿದ
ಸುಟ್ಟ ರೆಕ್ಕೆಯ ಪತಂಗ ||

ಕನಸ ಕಣ್ಣಲ್ಲಿ ನೋವ
ಮರೆಸಿದ್ದು ನಿನ್ನ ಪ್ರೀತಿ ;
ಯಾರ ಬಯಕೆಗೋ ಬಿರಿದ
ಹೂವಾಗಿ ಬರಿಯ ಭ್ರಾಂತಿ…||

ಸಂಕ್ರಾಂತಿ ನೋವ ಮನದಿ
ಹಂಚಿದ್ದು ಹಚ್ಚ ಹಸಿರು..
ಆ ನೋವ ಬಿತ್ತಿ ದಿಗ್ಭ್ರಮೆಯ
ಬೆಳೆದಿದೆ ಕ್ಷೀಣ ಉಸಿರು…||

– ನಾಗೇಶ ಮೈಸೂರು

00504. ಸಂಕ್ಷಿಪ್ತದಲಿ…ಬದುಕು


00504. ಸಂಕ್ಷಿಪ್ತದಲಿ…ಬದುಕು
_________________________

ಕೆಲವು ತುಣುಕುಗಳನ್ನು ಪುಟ್ಟ ಸಂಕ್ಷಿಪ್ತ ಪದ್ಯ ಪಂಕ್ತಿಗಳಾಗಿ ಹೆಣೆದ ಸಾಲುಗಳು – ಬದುಕು, ಶಿಕ್ಷಣ, ಬ್ರಹ್ಮಚರ್ಯ, ಮನುಜ, ಮರಣ..  

 (Picture source : https://en.m.wikipedia.org/wiki/File:Coles_Phillips2_Life.jpg)

ಬದುಕು-
ಮೆಟ್ಟಿದರೆ ಪಲುಕು;
ಹಿಮ್ಮೆಟ್ಟಿದರೆ ದಿನ ನೂಕು..
ಮುನ್ನುಗ್ಗಿದರೆ ಸಿಕ್ಕೆ ಬಿಡುವ ಪರಾಕು! |

ಶಿಕ್ಷಣ-
ಸಿಕ್ಕರೆ ಸುಲಕ್ಷಣ;
ಕೈ ತಪ್ಪಿದರೆ ಅವಲಕ್ಷಣ..
ಮೈಯಪ್ಪಿದರೆ ಅವನೆ ಬಲು ಜಾಣ ! ||

ಬ್ರಹ್ಮಚಾರಣ-
ಸಖ ದಕ್ಕದ ಕಾರಣ;
ಸಖಿ ಸಿಕ್ಕದ ಗೋಳು ಮಣ..
ಸನ್ಯಾಸ ಸಖಿ ಸಖರ ನೋವು ಭಕ್ಷಣ ! ||

ಮನುಜ-
ಮನುವಿನ ವತ್ಸಜ;
ಮನ್ವಂತರ ದಾಟಿದ ನಿಜ..
ಅರಿತರಿಯದೆ ನಿಸರ್ಗ ಬಿತ್ತಿದ ಖನಿಜ ! ||

ಮರಣ-
ಮಂಕುತಿಮ್ಮನ ಹರಣ;
ಹುಟ್ಟುಸಾವಿನ ತುಸು ಸ್ಮರಣ..
ಸುಖ ದುಃಖದ ನಡುವಿನ ತೋರಣ ! ||

——————————————————————–
ನಾಗೇಶ ಮೈಸೂರು
——————————————————————–

00503. ಅಜೀರ್ಣ ಖಳ ಬೊಜ್ಜಿನ ಗಾಳ! (ಜಿದ್ದಿನ ಜಿಡ್ಡು ದೇಹದ ಜಡ್ಡು)


00503. ಅಜೀರ್ಣ ಖಳ ಬೊಜ್ಜಿನ ಗಾಳ! (ಜಿದ್ದಿನ ಜಿಡ್ಡು ದೇಹದ ಜಡ್ಡು)
___________________________________________________

ಹೀಗೆ ಚೂರು ಚೂರೆ ಒಳಸೇರುವ ಖಳ, ದಿನಗಳೆದಂತೆಲ್ಲ ಒಟ್ಟುಗೂಡುತ್ತ ದಿನೆ ದಿನೆ ನಿಧಾನವಾಗಿ, ವಿಧವಿಧಾನವಾಗಿ ತರತರದ ತೊಡಕು, ತೊಂದರೆಗಳ ಬಲೆಗೆ ಸಿಲುಕುವ ಪರಿ ಎರಡನೆ ಭಾಗದ ಸಾರ. ಕೆಡುತ್ತ ಹೋಗುವ ದೇಹದ ಆರೋಗ್ಯ, ಉಬ್ಬುತ್ತ ಹೋಗುವ ಉದರ ವಿನ್ಯಾಸ, ಕುಗ್ಗುತ್ತ ಹೋಗುವ ಚಟುವಟಿಕೆಯ ದಾಯ, ಮುಗ್ಗುಲಿಡಿದಂತೆ ಅನಿಸಿಬಿಡುವ ಇಡಿ ದೈಹಿಕ ವ್ಯವಸ್ಥೆ – ಹೀಗೆ ಇದೆಲ್ಲದರತ್ತ ನೋಡುವ ಇಣುಕು ನೋಟ ಈ ದ್ವಿತೀಯಾರ್ಧದ ಸಾರಾಂಶ.

  
(Picture sourcewikipedia : https://en.m.wikipedia.org/wiki/File:Fatmouse.jpg)

ಚೂರುಚೂರು ವೈವಿಧ್ಯ
ಒಟ್ಟಾಗಿ ಸೇರಿ ದುರ್ವಿದ್ಯ
ಹೊಟ್ಟೆ ಸೇರೆ ಕೆಟ್ಟು ಅಮೇಧ್ಯ
ಸಂಭಾಳಿಸಲು ಬೇಕು ಧನುರ್ವಿಧ್ಯ ||

ಕಷ್ಟ ಕಷ್ಟ ವೈವಿಧ್ಯತೆ
ಅನಿಯಂತ್ರಣದ ಸಾಧ್ಯತೆ
ನಾಲಿಗೆ ಚಪಲ ತಡೆಯೆ ಸಫಲ
ಆದವ ಮಾತ್ರ ಗೆಲ್ಲುವ ಹಾಲಾಹಲ ||

ತಕತಕ ದಿನಕುಹಕ
ಆಕರ್ಷಣೆ ಮನ ಸೋಲುತ
ಸಡಿಲ ಬಿಡುವರು ಒಮ್ಮೆಗೆನುತ
ಒಮ್ಮೆಯಾಗಿ ನಾಳೆ ಪಾಳಿಯ ಸತತ ||

ವ್ಯಾಸ ವ್ಯಾಸ ಸನ್ಯಾಸ
ಗುಡ್ಹಾಣ ಹೊಟ್ಟೆ ವಿನ್ಯಾಸ
ಭೂಮಿ ಸುತ್ತುವಂತೆ ವರುಷ
ಇಳಿಸಲಿಕ್ಕೆ ನೂರಾರು ಪುರುಷ ||

ಬೊಜ್ಜುಬೊಜ್ಜು ಮೈಗೊಜ್ಜು
ದಿನ ಒಡದಿದ್ದರೆ ನುಜ್ಜುಗುಜ್ಜು
ಮೈ ಚಳಿ ಬಿಡದಿರೆ ದೇಹ ಪೂರ್ಣ
ವಾಸಿಯಾಗಳು ಬೇಕು ವೈದ್ಯ ಚೂರ್ಣ ||

——————————————————————-
ನಾಗೇಶ ಮೈಸೂರು
——————————————————————-

00502. ಚಿತ್ತ ಜಿಹ್ವಾ ಚಪಲ!(ಜಿದ್ದಿನ ಜಿಡ್ಡು ದೇಹದ ಜಡ್ಡು)


00502.  ಚಿತ್ತ ಜಿಹ್ವಾ ಚಪಲ!(ಜಿದ್ದಿನ ಜಿಡ್ಡು ದೇಹದ ಜಡ್ಡು)
_________________________________________

ಬಾಯೃಚಿಯನ್ನು ಗೆಲ್ಲಬಲ್ಲ ಸಂತರು, ಜಿಹ್ವಾ ಚಾಪಲ್ಯವನ್ನು ನಿಯಂತ್ರಿಸಬಲ್ಲ ಅಸಾಧಾರಣ ಶೂರರು ಎಲ್ಲೆಡೆಯೂ ಕಾಣಸಿಗದ ಅಪರೂಪದ ಸರಕೆಂದೆ ಹೇಳಬಹುದು. ರುಚಿಯಾಗಿದೆಯೆಂದೊ, ಯಾರೊ ಬಲವಂತಿಸಿದರೆಂದೊ, ಇದೊಂದೆ ಬಾರಿ ತಿಂದು ನಾಳೆಯಿಂದ ನಿಯಮ ಪಾಲಿಸುವುದೆಂದೊ, ಆಸೆ ತಡೆಯಲಾಗದೆಂದೊ – ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಜಿಹ್ವಾಚಪಲದ ಸೆಳೆತಕ್ಕೆ ಬಲಿಯಾಗುವವರೆ ಎಲ್ಲ. ಅದರ ವಿಶ್ವರೂಪದ ತುಣುಕನ್ನು ಪರಿಚಯಿಸುವ ಮೊದಲ ಭಾಗ ಈ ಕವನ.

  
(Picture source : https://en.m.wikipedia.org/wiki/File:Trimyristin-3D-vdW.png)

ಜಿಡ್ಡುಜಿಡ್ದಾಗಿದೆ ಕೈ
ಬಲು ಜಡ್ದಾಗಿದೆ ಮೈ
ಲಡ್ಡು ಹಿಡಿದ್ಹೋಗಿದೆ ಮೂಳೆ
ಇನ್ನಷ್ಟು ಕಳೆಯೋದಿದೆ ನಾಳೆ ||

ರುಚಿರುಚಿಯಾಗಿದೆ
ಬಲು ಶುಚಿಯಾಗಿದೆ
ತೇಲಿದೆ ಎಣ್ಣೆ ಮುಚ್ಚು ಕಣ್ಣೆ
ಬಾಯೃಚಿ ಮುಂದೆ ಗಂಡು ಹೆಣ್ಣೆ ||

ಗರಿಗರಿಯಾಗಿದೆ
ಕರಿ ಸರಿ ಕರಿದಾಗಿದೆ
ಹೀರಿಬಿಟ್ಟು ಜೀವಸತ್ವ ಗುಟ್ಟು
ಬಣ್ಣ ಮೈಮಾಟವೆ ನೀರೂರಿಸಿಟ್ಟು ||

ನಳ ನಳಪಾಕ
ಮಾಡುವರ ಪುಳಕ
ಬಾಯ್ಮಾತಿಗೆ ಸಾಕ ಜಳಕ
ಖುಷಿಯಾಗುವಂತೆ ತಿನ್ನಬೇಕ ||

ಬಗೆ ಬಗೆ ತಿಂಡಿ
ತಿನ್ನಲು ಜೀವಹಿಂಡಿ
ಮುಂದಿಟ್ಟು ನಂಟು ನಲ್ಮೆ
ಒತ್ತಾಯಿಸಿ ಬಲು ಕೆಳೆ ಬಲ್ಮೆ ||

————————————————————-
ನಾಗೇಶ ಮೈಸೂರು
————————————————————-

00501. ಅಂತರ್ಯಾನದ ಅವತಾರ


00501. ಅಂತರ್ಯಾನದ ಅವತಾರ
____________________________

  
(Picture source from: http://plato.stanford.edu/entries/introspection/Rubin2.jpg)

ಹುಡುಕಾಟದ ತವಕ ಮಾನವನ ಮನಸಿನ ಕೊನೆ ಮೊದಲಿಲ್ಲದ ಕುತೂಹಲದ ನಿರಂತರತೆಯ ಸಂಕೇತ. ಈ ಹುಡುಕಾಟ ಕೆಲವೊಮ್ಮೆ ಆಧ್ಯಾತ್ಮಿಕದ ಪರಿಧಿಯ ಸುತ್ತ ಗಿರಕಿ ಹೊಡೆದರೆ, ಮತ್ತೊಮ್ಮೆ ಭೌತಿಕ ಜಗದ ವಾಸ್ತವಿಕತೆಯ ಸುತ್ತ ತೊಳಲಾಡಿರುತ್ತದೆ. ಈ ಹುಡುಕುವಿಕೆ ಭೌತಿಕ ಹಾಗೂ ಆಧ್ಯಾತ್ಮಿಕದ ನಡುವೆ ಓಲಾಡುವ ವಸ್ತುವಾದರೆ, ಎರಡು ದೋಣಿಗಳಲ್ಲಿ ಕಾಲಿಟ್ಟು ನಡೆವ ಪ್ರಕ್ರಿಯೆಯಂತೆ ಹುಡುಕಾಟವೂ ಲೋಲಕದಂತೆ ಎರಡರ ಮಧ್ಯೆ ತೂಗಾಡತೊಡಗುತ್ತದೆ.

ಅಂತರ್ಯಾನದ ಈ ಪ್ರವರ ಅಂತದ್ದೆ ಹುಡುಕಾಟವೊಂದರ ವರ್ಣನೆ. ಆಧ್ಯಾತ್ಮಿಕದ ಹುಡುಕಾಟದ ಗಮ್ಯವನ್ಹೊತ್ತ ಆಶಯವೊಂದು ಭೌತಿಕ ಜಗತ್ತಿನಲ್ಲಿ ಸೆಣೆಸುತ್ತ ಅಧ್ಯಾತ್ಮದ ಬೆಳಕಿಗೆ ಹುಡುಕಿ ಹೊರಡುವ ಪಯಣ ಇದರ ವಸ್ತು; ಆದರೀ ಭೌತಿಕ ಜಗ ಹೊರಗಿನ ಪರಿಸರವಾಗಿರದೆ, ಒಳಹೊಕ್ಕು ನೋಡುವ ಅಂತರ್ಯಾನವಾದಾಗ ದರ್ಶನವಾಗುವ / ಹಾದು ಹೋಗುವ ಒಳಾಂಗಗಳ ಸಾಂಕೇತಿಕತೆ ಇಲ್ಲಿ ಚಿತ್ರಿತ. ಪಯಣದ ಅಂತ್ಯದಲಿ ಕೊನೆಗೂ ಕಾಣಿಸುವ ತಾತ್ವಿಕ, ಆಧ್ಯಾತ್ಮಿಕ ಗಮ್ಯವೆ “ಅಂತರ್ಯಾನದ ಅವತಾರ”

ನನ್ನೊಳಗನು ನಾನೇ ಹೊಕ್ಕಾದ ಮೇಲೆ
ನಾನೇ ನಾನಾಗುವ ನಾಳೆ ಇನ್ನು ಮೇಲೆ
ಹೊಕ್ಕ ಒಳಗಿನ ಪಾಳು ನೆನೆದರೆ ಹಾಳು
ಮಿಕ್ಕ ಸರಿಗಟ್ಟುವ ಪಾಲು ಬೆರೆಸಿ ಹಾಲು ||

ಒಳಚಕ್ಷುವಿಗೆ ಕುರುಡು ಕಾಣದಾ ಕರಡು
ಕಂಗಳಿಲ್ಲದ ಒಳಾಂಗ ಕಂಡರೂ ಕೊರಡು
ಇನ್ನು ನಂಬಿಕೆ ಸಾಕು ಹೂತು ಬಿಡಬೇಕು
ಅದಕೆ ಗಟ್ಟಿಸಿದೆ ಮನಸೊಳ್ಹೋಗಬೇಕು ||

ಅಲ್ಲ ಸುಲಭದ ಪಯಣ ಕತ್ತಲೆ ಸಂಪೂರ್ಣ
ತಡವುತ ಎಡವುತ ನಡೆವ ಅಗಮ್ಯ ಯಾನ
ಅಂಗಾಂಗ, ಅನ್ನಾಂಗ ತಣ್ಣನೆ ಮೂಳೆ ಮೌನ
ಹರಿವ ರಕ್ತದೆ ಸ್ನಾನ ಕಪ್ಪು ನರನಾಡಿ ಚರಣ ||

ಕಾಣದ ಅನುಭವದಾ ನಡುವೆ ಮತ್ತೆ ಜಗ್ಗು
ಅನುಭವಿಸೋ ಅನುಭಾವದ ಗಡಿಗೆ ಹಿಗ್ಗು
ಕುಳುಕುಳು ಕಾಲುವೆಯರಿವು ಬಿದ್ದು ಜಠರ
ಅನುಭವವ ಜೀರ್ಣಿಸಲು ಕರುಳಿನಾ ವಠಾರ ||

ಶ್ವಾಸಾಂಗ ಹೃದಯ ಹೊಕ್ಕಂತೆ ತುಸು ನಿರಾಳ
ಶೋಧಿಸಿದ ಗಾಳಿ, ನೆತ್ತರು ಮಾಡಿಸಿತು ಹೇರಳ
ಲಬಡಬದ ನಡುವೆ ತೇಲಿ ವಿಹರಿಸಿದ ಸಮ್ಮೇಳ
ಗಟ್ಟಿ ಆಧಾರಕಿಡಿದು ನಿಂತ ಅಸ್ತಿಗಳ ಹಿಮ್ಮೇಳ ||

ಅಂತೂ ಶಿರ ಶಿಖರ ಪಾದ ಉಂಗುಷ್ಟಾಂತರ ವರ್ಷ
ನೆನೆದು ಹಸಿಯಾದಂತೆಲ್ಲ ಹುಟ್ಟಿಸಿತು ಹೊಸ ಹರ್ಷ
ನೀರಿಗಿಳಿದಾ ಮೇಲೆ ಚಳಿಯೇನು ಮಳೆಯೇನು ಕರ್ಮ
ಅಂಧಕಾರದಲೇ ಈಜುತ ಲಹರಿ ಹರಿಬಿಟ್ಟಿತು ಮರ್ಮ ||

ಆಗ ಕಾಣಿಸಿದ ಅಲ್ಲಿ ಹೊಳೆ ಹೊಳೆಯುವ ಹರಿಕಾರ
ಕಣ್ಣು ಕೋರೈಸಿದ ತಂಪು ಕಾಂತಿಗಳನೆಸೆವ ಸರದಾರ
ಹೊಮ್ಮಿಸುತ ಅಲೆಅಲೆ ಪೂರ ಹರಿಸುತ ಶಾಂತಸಾಗರ
ಹಿಡಿದೆತ್ತಿ ದಡ ಕೂರಿಸಿ ಮುಗಿಸೆ ಅಂತರ್ಯಾನವತಾರ ||

– ನಾಗೇಶ ಮೈಸೂರು

00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)


00500. ಹೇಗಿದ್ದಾರೋ ಹಾಗೆ …! (ವಯಸೆ ಆಗದ ದೇವರುಗಳು) (ಮಕ್ಕಳಿಗೆ)
______________________________________________

ದೇವರುಗಳಲ್ಲಿ ನಂಬಿಕೆಯಿರುವ ನಾವೆಲ್ಲ ದೇವರನ್ನು ಕಂಡಿರುವುದು ಫೋಟೊಗಳ ಮೂಲಕ, ದೇವಾಲಯದ ಮೂರ್ತಿಗಳಿಂದ, ಚಿತ್ರಕಲೆಯ ಮೂಲಕ ; ಅದು ಬಿಟ್ಟರೆ ಚಲನ ಚಿತ್ರಗಳ ವೇಷ ಭೂಷಣಗಳ ಮುಖಾಂತರ. ಹೀಗೆ ಎಲ್ಲೆ ನೋಡಿರಲಿ, ಯಾರೆ ನೋಡಿರಲಿ – ನಮ್ಮ ತಾತ, ಮುತ್ತಾತ, ಮುತ್ತಜ್ಜರುಗಳಿಂದ ಹಿಡಿದು ನಮ್ಮ ಮಕ್ಕಳು ಮರಿಗಳ ತನಕ – ಈ ದೇವರುಗಳು ಮಾತ್ರ ಹಾಗೆ ಒಂದೆ ತರಹ ಕಾಣುತ್ತಾರೆ. ವಯಸ್ಸಾಗದ ಅದೆ ಯುವ ಮುಖ, ಕಳೆ ಇತ್ಯಾದಿಗಳು ಅವರ ಅಮೃತ ಸಿದ್ದಿ ಅಮರತ್ವದೊಂದಿಗೆ ಬೆರೆತು ಅವರ ಕುರಿತ ವಿಶಿಷ್ಟ ಕಲ್ಪನೆಗಳಿಗೆ ಮತ್ತಷ್ಟು ನೀರೆರೆದು ಪೋಷಿಸಿ, ಅವರನ್ನು ನಮ್ಮ ದೃಷ್ಟಿಗಳಲ್ಲಿ ಮತ್ತಷ್ಟು ವೈಶಿಷ್ಠ್ಯಪೂರ್ಣರೆನಿಸಿಬಿಡುತ್ತವೆ. ಆ ಭಾವದ ಸಾರಾಸಗಟಿನ ಚಿತ್ರಣ ಈ ಕವನ.

  
(Photo source, wikipedia : https://en.m.wikipedia.org/wiki/File:Hindu_deities_montage.png)

ತಾತ ಮುತ್ತಾತನ ಕಾಲದಿಂದಲೂ
ಹೇಗಿದ್ದಾರೋ ಹಾಗೆ ಇರುವರು
ಕೊಂಚವೂ ಕೂಡ ಕೊಂಕಿದಂತಿಲ್ಲ
ವಯಸೆ ಆಗದೆ ನಿಂತಿಹರಲ್ಲ ||

ದೇಗುಲಗಳಲಿ ಬಾಗಿಲ ತೆಗೆದು
ಹೊಸ ಬಾಗಿಲು ಗೋಡೆ ಕಟ್ಟಿದರೂನು
ಒಂದೆ ಸರ್ತಿ ಪ್ರಾಣಮೂರ್ತಿ ರೀತಿ
ಒಂದೆ ಪ್ರಾಯದಿ ನಗುತಿಹ ಕೀರುತಿ ||

ಒಂದೆ ದಿರುಸು ಶಸ್ತ್ರಾಸ್ತ್ರದ ಬಿರುಸು
ಒಂದೆ ಕಿರುನಗೆ ಮುಗುಳ್ನಗೆ ಸೊಗಸು
ಅಲಂಕಾರ ಮೇಲಚ್ಚಿದರೆಷ್ಟು ಸಗಟು
ಮೊತ್ತದಿ ಹಾಗೆ ಉಳಿಯುವ ಒಗಟು ||

ಎಲ್ಲ ದೇವರಿಗೂ ಇಲ್ಲದ ಮೀಸೆ
ಯೌವನ ಪ್ರಾಯ ಸೂಸುವ ಪರಿಷೆ
ಬದಲೇ ಇಲ್ಲದ ಬಿಳಿ ಮುಖವಾಡ
ಕಿರೀಟ ಧರಿಸೆ ಓಡಾಡುತ ಮೋಡ ||

ಗುಡಿಯಲ್ಲಿರಲಿ ಸಿನಿಮಾಗೆ ಬರಲಿ
ಬದಲೇ ಆಗದ ದೇವರ ಖಯಾಲಿ
ಮತ್ತದೆ ಸೋಜಿಗ ತಿಳಿಯೆ ಮೋಜಿಗ
ಮತ್ತವರವರನೆ ನೋಡುತ ಈ ಜಗ ||

———————————————————————
ನಾಗೇಶ ಮೈಸೂರು
———————————————————————

00499. ತಾರುಣ್ಯ ಹುಟ್ಟಿದಾರಣ್ಯ…


00499. ತಾರುಣ್ಯ ಹುಟ್ಟಿದಾರಣ್ಯ…
______________________________________

ತಾರುಣ್ಯವೆಂಬುದು ಪ್ರತಿ ವ್ಯಕ್ತಿಯ ಬಾಳಿನ ಅಮೋಘ ಅಧ್ಯಾಯ. ರೆಕ್ಕೆ ಬಿಚ್ಚಿದ ಹಕ್ಕಿಯಂತೆ, ಅಡೆ ತಡೆಯಿಲ್ಲದೆ ಹಾರುವ ಪತಂಗದಂತೆ ಹಾರಾಡಿಸುವ ಈ ವಯಸಿನ ರಾಗ ಲಹರಿ ಅರಳಿ, ಹೂವ್ವಾಗಿ, ತೆನೆಯಾಗಿ ಮಾಗುವ ಪರಿಯೆ ಸೊಬಗು. ಆ ಹಾದಿಯಲ್ಲಿ ಸಂತಸ , ಹರ್ಷವೆಲ್ಲ ಇರುವಂತೆಯೆ ನೋವು, ದುಃಖ, ಕಲಿಕೆಯೂ ಅಂತರ್ಗತ. ಆ ತಾರುಣ್ಯದ ಹಮ್ಮಿನಲ್ಲಿ ಏನೆಲ್ಲಾ ಘಟಿಸುವುದೆನ್ನುವುದನ್ನು ಅನುಭವಿಸಿ, ಅನುಭಾವಿಸುವುದೆ ಒಂದು ವಿಸ್ಮಯ ಲೋಕ; ಹುಟ್ಟುತ್ತಲೆ ಹೊಸತೊಂದು ಅರಣ್ಯ ಗರ್ಭವನ್ನೆ ಬಿಚ್ಚಿಡುತ್ತಾ ಹೋಗುವ ಆ ರಿಂಗಣದ ಭಾವವನ್ಹಿಡಿಡುವ ಯತ್ನವೆ ಈ ಕಾವ್ಯ – ತಾರುಣ್ಯ ಹುಟ್ಟಿದಾರಣ್ಯ.

ಮನದ ರಿಂಗಣ ತನನ
ವಯಸಿನ ಸಮ್ಮೋಹನ
ಬಗೆಯಾ ತನು ತಿಲ್ಲಾನ
ಅದೇಕೊ ರೋಮಾಂಚನ ||

ಗುರುಗುಟ್ಟಿ ಸರಿ ಪ್ರಾಯ
ಯಾರಿಟ್ಟರೊ ಅಡಿಪಾಯ
ಬುರುಬುರನೇ ಮೊಗ್ಗರಳಿ
ಹೂವ್ವಾದ ದೇಹ ಮುರಳಿ ||

ತನುವರಳುತಲೆ ಆತಂಕ
ನೀನಿರುವೆ ಎಲ್ಲಿಯತನಕ
ಹಿಗ್ಗೊ ಸಿಗ್ಗೊ ಕುಗ್ಗೊ ಸುಖ
ಗೊಂಚಲ ಗೊಂದಲ ಸಖ ||

ಮೂರು ಗಳಿಗೆ ಕೂರುವ ದೆಶೆ
ಆರುಗಳಿಗೆ ಹಾರಾಡುವ ಆಸೆ
ಒಂಭತ್ತರ ವೇದನೆ ಒದ್ದಾಟಕೆ
ಬೇಕಿತ್ತೆ ತೆನೆ ಯೌವನದಾಟಕೆ ||

ಎಲ್ಲಿತ್ತೊ ಹರ್ಷದ ನೆಲ್ಲಿಕಾಯಿ
ಹುಳಿಯಾದರು ಸಿಹಿ ಬಾಯಿ
ರೆಕ್ಕೆ ಬಿಚ್ಚಿದ ಪತಂಗದ ಸಂಗ
ಮೈ ಬಿಚ್ಚಿ ಹಾರಿದ್ಹಕ್ಕಿ ಪ್ರಸಂಗ ||

——————————————————————–
ನಾಗೇಶ ಮೈಸೂರು
——————————————————————–

00498. ಸಿಗಿದು ತೋರಣ ಕಟ್ಟಿ…..!


00498. ಸಿಗಿದು ತೋರಣ ಕಟ್ಟಿ…..!
_________________________________

ಹಳೆಯ ಬಾಲ್ಯದ ಶಾಲಾ ದಿನಗಳಲ್ಲಿ ನೆನಪಾಗುವ ಒಂದು ಸಾಮಾನ್ಯ ಚಿತ್ರಣ – ಸ್ಕೂಲಿಗ್ಹೋಗಲಿಕ್ಕೆ ಹಠ ಮಾಡಿ ನಾನಾ ರೀತಿ, ನಾಟಕವಾಡುವ, ನೆಪ ಹೂಡುವ ಮಕ್ಕಳ ಆಟ. ಅದರಲ್ಲಿ ಕೆಲವು ಮೊಂಡು ಮಕ್ಕಳಿದ್ದರಂತೂ ಹೇಳ ತೀರದು. ಹೆಡೆಮುರಿ ಕಟ್ಟಿ ಹೊಯ್ವ ಶತೃ ಪಾಳಯದ ಸೈನಿಕನಂತೆ, ಜುಟ್ಟೋ, ಕತ್ತಿನ ಪಟ್ಟಿಯೊ, ಕೊನೆಗೆ ಬರದವನನ್ನು ದರದರನೆಳೆದೊಯ್ಯುವ ಅಂಗೈ ತುದಿಯೊ – ಒಟ್ಟಾರೆ ಬಾಯಲ್ಲಿ ರೋಧನ, ರಸ್ತೆಯಲ್ಲಿ ಕಥನ, ಕೈಲಿಡಿದ ಬೆತ್ತದಿಂದ ಮೈಯೆಲ್ಲಾ ನರ್ತನ ಹಾಗೂ ಬೈಗುಳದ ಮಳೆ ಸುರಿಯುತ್ತಿರುವ ಬಾಯಿಂದ ‘ಸಿಗಿದು ತೋರಣ ಕಟ್ಟೆ ಕಟ್ಟುವ’ ವಾಗ್ದಾನ! ಇದರ ಒಂದು ಪುಟ್ಟ ಚಿತ್ರಣ – ‘ಸಿಗಿದು ತೋರಣ ಕಟ್ಟಿ’ ಕವನ…

ನೆನಪಿದೆಯ ದಿನಗಳು
ಸಿಗಿದು ತೋರಣ ಕಟ್ಟಿದ ಬಾಳು
ಅಪ್ಪನೊ ಉಪಾಧ್ಯಾಯನೊ ಗೋಳು
ಕೆಂಗಣ್ಣಲಿ ನುಡಿದಾ ಕೋಲು ||

ಶಾಲೆಗೆ ಹೊರಟರೆ ಅಂದು
ಯಾವ ದಸರೆ ಅದರ ಮುಂದು
ಕೈ ಹಿಡಿದೆತ್ತಿದಳವ್ವ ದರದರ ಸೆಳೆದು
ರಸ್ತೆಯುದ್ದ ನಾಟ್ಯ ಬೆತ್ತವೆ ಮುರಿದು ||

ಅಳುವೆಂದರೆ ಅರ್ಭಟ, ಗಾನ
ಆಕರ್ಷಿಸುವಂತೆ ಸುತ್ತಲಿನ ಜನ
ಬಿಟ್ಟಾಳೆ ಕಾಳಿ ತಾಯಿ ಚಾಮುಂಡಿವನ
ಬಾಸುಂಡೆ ನಿಲಿಸದ ಕೋಲ್ನರ್ತನ ||

ಕರದೆ ದಂಡಾಯುಧ ವೈಭವ
ಕಿವಿ ಹಿಡಿದೆತ್ತಿದಂತೆ ಮೊಲ ಕಾಯವ
ಬಾಯ್ಕುಹರದೆ ವಂಶಾವಳಿಯ ಶಿವ ಶಿವ
ಬೀಸಿಗೆ ಮೇಲೆದ್ದು ಬಿದ್ದ ಮೊಲ ಜೀವ ||

ಸಹಸ್ರ ನಾಮಾರ್ಚನೆ ಸತತ
ತನು ಸಿಗಿದ್ಹಾಕುವ ವಾಗ್ದಾನ ಸಹಿತ
ಹಿಡಿತದಲೆ ಕಟ್ಟಿದ್ದರು ತೋರಣವಾಗಲೆ ಭೂತ
ಸಿಗಿದು ತೋರಣ ಕಟ್ಟುವ ಚರಮ ಗೀತ ||

——————————————————————-
ನಾಗೇಶ ಮೈಸೂರು
——————————————————————-

00497. ಸರಿಯೆ ಸಮಯದ ಗಡುವು?


00497. ಸರಿಯೆ ಸಮಯದ ಗಡುವು?
_______________________________

  
(Photo source, kannada wikipedia – https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Clock-french-republic.jpg)

ಈಗಿನ ಔದ್ಯೋಗಿಕ ಪ್ರಪಂಚದಲೆಲ್ಲರಿಗು ಪರಿಚಿತವಾದ ಪದ್ದತಿ ಕಾಲಗಣನೆ. ಪ್ರತಿಯೊಂದು ನಡುವಳಿಕೆಗೂ ಕಛೇರಿ, ಗಿರಣಿ, ಕಾರ್ಖಾನೆಗಳಲ್ಲಿ ಕಾಲ ಮಾಪನವೆ ಪ್ರಮುಖ ಮಾನದಂಡವಾಗಿ ಫಲಿತಗಳ, ಮಾನಕಗಳ ಅಳತೆಗೂ ಕಾಲವೆ ಪ್ರಮುಖವಾದ ಅಂಶವಾಗುವುದು ಸಹಜವಾಗಿ ಕಾಣುವ ಪ್ರಕ್ರಿಯೆ. ಕಾಲದ ಬೆನ್ನಲ್ಲೆ ಇಣುಕುವ ಶ್ರದ್ದೆ, ಶಿಸ್ತು, ಅಳತೆ ಮಾಡಿಸಿಕೊಳ್ಳಬಲ್ಲ ಸಾಮರ್ಥ್ಯ – ಇತ್ಯಾದಿಗಳ ತೋರಣವನ್ನೆಲ್ಲ ಬಿಚ್ಚಿ ಪಕ್ಕಕ್ಕಿಟ್ಟು ಅದು ಸರಿಯೆ, ತಪ್ಪೆ, ಪ್ರಸ್ತುತವೆ – ಎಂದು ಕೇಳುವ ಕವನ ‘ಸರಿಯೆ ಸಮಯದ ಗಡುವು?’ ಈ ರೀತಿಯ ಕಾಲಗಣನೆ, ಮಾಪನೆ, ಪರಿಗಣನೆ ಸಾಧುವೆ? ಎಷ್ಟರ ಮಟ್ಟಿಗೆ ಅದು ಫಲಿತಾಂಶ, ಗುರಿಸಾಧನೆಗೆ ಪೂರಕ ಎಂಬುದರ ಜಿಜ್ಞಾಸೆಯಲ್ಲಿ ಸಾಗುತ್ತದೆ..

ಶಾಲೆಯ ಎಲ್ಲ ಶಿಸ್ತಿನ ಮಕ್ಕಳು
ಜಯಶೀಲರೆ ಜೀವನದೊಳು?
ಶಿಸ್ತಿಂದ ಕೆಟ್ಟು ಕೆಳ ಕೂತವರುಂಟು
ಶಿಸ್ತಿಲ್ಲದೆ ಕೊಳೆತು ಹೋದವರೆಷ್ಟು? ||

ಆಫೀಸಿನಲ್ಲಿ ಸಮಯಪಾಲಕ ಜನ
ಕುಳಿತಿದ್ದರೆಂದರೆ ಪೂರ್ತಿ ದಿನ
ಉತ್ಪಾದಕತೆ ದಕ್ಷತೆ ಸರಿ ಹೆಚ್ಚುವುದೆ ?
ಕಳೆದ ಗಂಟೆಗಳೆಲ್ಲ ಫಲಿತದ ಸರಿಸದ್ದೆ? ||

ಎಷ್ಟು ಜನ ನೀತಿ ಪಂಚೆರಡು ಲಂಚೊಂದು
ಕಾಟಾಚಾರದಿ ಒಳಗೆ ಕೂತ ಬಂಧು
ಗುರಿ ಫಲಿತಾಂಶಗಳಲವರ ಅಳೆಯದಿರೆ
ಬರಿ ಸಮಯ ಲೆಕ್ಕದೆ ದಕ್ಷತೆ ಕೊಡುವರೆ? ||

ದಿಟದಿ ಕಲಿಸಬೇಕು ಎಲ್ಲೆಡೆ ಶಿಸ್ತಲ್ಲ ಸಮಯ
ಸರಿ ಸಹಜ ಮನೋಭಾವನೆಯ ದಾಯ
ಅದ ಕಲಿತವರೆಲ್ಲ ತಾನಾಗಿ ಎಲ್ಲೆಡೆ ಗೆಲ್ಲ
ಶಿಸ್ತು ಶ್ರದ್ಧೆ ಜವಾಬ್ದಾರಿ ಹಿಂದ್ಹಿಂದೆ ಸಕಲ ||

ಅದಕೆ ಕೆಡಿಸದೆ ತಲೆ ಶಿಸ್ತು ತುಂಬಿದ ನಾಲೆ
ಬಿಟ್ಟವರ ಕ್ರಿಯಾತ್ಮತೆ ಶಕ್ತಿ ಅರಳಲೆ
ಬೆಳೆಸಿ ಆತ್ಮವಿಶ್ವಾಸ ಜವಾಬ್ದಾರಿ ಮನೋಭಾವ
ತಾನಾಗೆ ಕುಗ್ಗುವುದು ಜನ-ಸತ್ಪ್ರಜೆಗಳ ಅಭಾವ ||

—————————————————————
ನಾಗೇಶ ಮೈಸೂರು
—————————————————————

00496. ಬಾಳೆ ಹೊಂಬಾಳೆ


00496. ಬಾಳೆ ಹೊಂಬಾಳೆ
________________________

  

(Picture source : kannada wikipedia – https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Luxor,_Banana_Island,_Banana_Tree,_Egypt,_Oct_2004.jpg)

ಬಾಳು ಬಾಳೆಯ ಗಿಡದ ಹಾಗೆ – ನೆಟ್ಟ ನೇರವೂ ಹೌದು, ಹಗುರವೂ ಹೌದು, ಕತ್ತರಿಸಲು ಸುಲಭವೂ ಹೌದು, ಸಿಹಿಯೂ ಹೌದು, ಅಳಿಸಲಾಗದ ಕಲೆಯೂ ಹೌದು, ಉಣಿಸುವ ಬಾಳೆಲೆಯೂ ಹೌದು, ಆ ಎಲೆಯಷ್ಟೆ ನವಿರಾದ ಜತನವೂ ಹೌದು, ಜಠರದ ಕಲ್ಲು ಕರಗಿಸುವ ಸ್ಪರ್ಶಮಣಿಯೂ ಹೌದು. ಈ ಬಾಳಿನ ಹೊಂಬಾಳೆಯನ್ನು ಕಾಯಿಂದ ಮಾಗಿಸಿ ಹಣ್ಣಾಗಿಸುವ ಬದುಕಿನ ಚಿತ್ರ ಸೂಚಿ – ಈ ಕವನ. ಬಾಳೆ ಪ್ರಬುದ್ದತೆಯಲ್ಲಿ ಮಾಗಿ ಹಣ್ಣಾಗಬೇಕೆಂಬ ಆಶಯವೂ ಇಲ್ಲಿಯದು.

ಬಾಳೇ ಎಳೆ
ಎಳಸು ಬಾಳೆಲೆ
ತೆಳುವಾದ ಹಾಳೆ
ಜತನ ಕಾದರೆ ಬಾಲೆ
ಎಳೆಳೆಯಾಗಿ ತೆರೆಯುವಳೆ ||

ಎಳೆತನ ಕಾಯ
ಜಾರಿಸುವಪಾಯ
ಗಾಳಿಗ್ಹರಿವ ಸಮಯ
ಕಾಯುತ್ತಲೆ ಸರಿ ಪ್ರಾಯ
ಸುತ್ತಿ ಮುಚ್ಚಿಡಲು ಉಪಾಯ ||

ಎಲೆಯ ಸಾರ
ದೋಣಿಯಾಕಾರ
ಸಿಗಿದು ಬೆನ್ನ್ಮೂಳೆ ತರ
ಕತ್ತರಿಸಿ ಮೂರಾಗುವ ಪೂರ
ಎಲೆಯಿಡೆ ಮೂರಾಳಿಗೆ ಆಹಾರ ||

ಬಾಳೇ ಗಿಡ
ನಿಂತಾಗ ನಡ
ಕಲಿಯುತ ಕನ್ನಡ
ಸೆಟೆದು ನಡೆವ ಜಡ
ಕಲಿತೆ ಬೆಳೆ ಬಾಳ ನಿಗೂಢ ||

ಗಿಡವಾಗಿ ಬಗ್ಗೆ
ಎಳೆ ಕಂದು ಕುಗ್ಗೆ
ಅಡಿಪಾಯದ ಮೊಗ್ಗೆ
ಮೈ ಮರೆತು ನುಗ್ಗಿ ನಗ್ಗೆ
ಜೀವಮಾನ ನೋವಿನ ಬುಗ್ಗೆ ||

——————————————————————-
ನಾಗೇಶ ಮೈಸೂರು
——————————————————————-
ಬಾಳೇ = banana (fruit), Life

00495. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ?


00495. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ?
_________________________________________

  
(photo source kannada wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Asian_Koel_(Male)_I_IMG_8190.jpg)

ಪ್ರತಿಯೊಬ್ಬ ವ್ಯಕ್ತಿಯೂ / ವ್ಯಕ್ತಿತ್ವವೂ ದೌರ್ಬಲ್ಯ ಮತ್ತು ಪ್ರಾಬಲ್ಯಗಳ ಸಂತುಲಿತ ಮೊತ್ತ. ಪ್ರತಿಯೊಬ್ಬರ ಒಳಗೊ, ಜೀವನ ವಿಶೇಷದಲ್ಲೊ ಇಣುಕಿ ನೋಡಿದಾಗ ಮೇಲ್ನೋಟಕ್ಕೆ ಕಾಣುವ ಪ್ರಾಬಲ್ಯಗಳಷ್ಟೆ, ದೌರ್ಬಲ್ಯಗಳು ಎದ್ದು ಕಾಣುವುದು ಸಹಜ. ಮೊಟ್ಟೆಯಿಡುವ ಕೋಗಿಲೆ, ಹುಡುಕಲೇಕೆ ಕಾಗೆ ನೆಲೆ’, ಅಪ್ರತಿಮ ಗಾನದ ಕೊರಳಿದ್ದು , ಕುರೂಪಿಯ ಹಿದಿಕೆಯ್ಹೊತ್ತು ನಡೆಯಬೇಕಾದ ಅನಿವಾರ್ಯ, ಹಾಗೆಯೆ ಕಾಗೆಯ ಗೂಡಲಿ ಮೊಟ್ಟೆಯಿಟ್ಟು ಮರಿಮಾಡುವ ಅದರ ಸೋಮಾರಿತನದ ಕುಟಿಲತೆಗಳ ವಿವರಣಾತ್ಮಕ ಸ್ತರದಲ್ಲಿ ವಿಶ್ಲೇಷಣೆಗೆ ಯತ್ನಿಸುತ್ತದೆ.

ಗಾನಯೋಗಿ ಕೋಗಿಲೆ ಚಿಗುರಿಗೆ
ತಿಂದ್ಹಾಡುವ ಗಾಯನವೆ ಸೊಬಗೆ
ಮಧುರ ಕಂಠ ಪಾಲಿಸಿದ ದೈವಕೆ
ಸಮತೋಲನದಲಿ ಕಪ್ಪು ರೂಪಕೆ ||

ರೂಪವಷ್ಟಿದ್ದರೆ ಸಾಲದ ಒಗಟೇಕೆ
ಕುಯುಕ್ತಿ ಕುತಂತ್ರಗಳು ಜತೆಗೇಕೆ
ಬಸಿರಿಗೆ ಮೊಟ್ಟೆಯಿಟ್ಟು ಕೋಗಿಲೆ
ಸಾಕಲು ಹುಡುಕಲೇಕೆ ಕಾಗೆನೆಲೆ? ||

ಮುಗ್ದರಿರುವ ಜಗದಲಿ ಪೀಡಕರು
ಯಾವ ಸಮತೋಲನಕೊ ತೇರು
ಪರಪುಟ್ಟನ ಅರಿವಾಗದ ಕೃತಿಮ
ಕಾವಿಕ್ಕಿ ಮೊಟ್ಟೆ ಮರಿಗೆ ಕಾಕಮ್ಮ ||

ಸೋಮಾರಿಯೆ ಚಾಣಾಕ್ಷ್ಯ ಸರಿಯೆ
ಮುಖ್ಯ ನಿಜಾಯತಿ ನೈತಿಕತೆಯೆ
ದೈವದತ್ತ ಕೊರಳಿದ್ದರು ಕೋಗಿಲೆ
ವಂಚಿಸೊ ಮನಸಾದರು ಹೇಗೆಲೆ ? ||

– ನಾಗೇಶ ಮೈಸೂರು

00494. ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ


00494. ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ
__________________________________

ಪ್ರತಿಯೊಬ್ಬ ವ್ಯಕ್ತಿಯೂ / ವ್ಯಕ್ತಿತ್ವವೂ ದೌರ್ಬಲ್ಯ ಮತ್ತು ಪ್ರಾಬಲ್ಯಗಳ ಸಂತುಲಿತ ಮೊತ್ತ. ಪ್ರತಿಯೊಬ್ಬರ ಒಳಗೊ, ಜೀವನ ವಿಶೇಷದಲ್ಲೊ ಇಣುಕಿ ನೋಡಿದಾಗ ಮೇಲ್ನೋಟಕ್ಕೆ ಕಾಣುವ ಪ್ರಾಬಲ್ಯಗಳಷ್ಟೆ, ದೌರ್ಬಲ್ಯಗಳು ಎದ್ದು ಕಾಣುವುದು ಸಹಜ. ರೂಪವಿಲ್ಲದ ವ್ಯಕ್ತಿಯ ದೌರ್ಬಲ್ಯವನ್ನು ಅಪರಿಮಿತ ಬುದ್ಧಿಮತ್ತೆಯಿಂದಲೊ ಅಥವಾ ಸಿರಿವಂತಿಕೆಯಿಂದಲೊ ಸರಿದೂಗಿಸುವ ಹುನ್ನಾರದಂತೆ – ಈ ಒಂದು ಸಮತೋಲನವನಿಟ್ಟು ವ್ಯಕ್ತಿ ಹತೋಟಿ ಮೀರಿ ಗರ್ವಿಸದಂತೆ ನೋಡಿಕೊಳ್ಳುವ ನಿಯತಿಯ ಕುಹಕವೆ ಇದಿರಬಹುದೆಂಬ ಕವಿಯ ಅನುಮಾನ, ಈ ಕವನದ ಹಿನ್ನಲೆಯಲಿರುವ ಅಂತರ್ಗತ ಭಾವ.

ದೌರ್ಬಲ್ಯ ಪ್ರಾಬಲ್ಯಗಳ ಮೊತ್ತ
ಸರಿದೂಗಿಸೆ ಸಮತೋಲನದತ್ತ
ವಿಭಜಿಸಿಟ್ಟಿಹನೆ ವಿಧಾತ ಸೂತ್ರ
ಹಂಚಿಬಿಟ್ಟು ಬಗೆಬಗೆಯಾ ಪಾತ್ರ ||

ಅಪ್ರತಿಮ ಸೌಂದರ್ಯರಾಶಿ ಸಿರಿ
ಆಗಿರಬೇಕಿಲ್ಲ ಬುದ್ಧಿ ಮತ್ತೆ ಐಸಿರಿ
ಕೈ ತೊಳೆದು ಮುಟ್ಟುವ ಬಂಗಾರಿ
ಬಣ್ಣನೆ ಕರಗಿದರೆ ಭಾರಿ ದುಬಾರಿ ||

ಅಂತೆಯೆ ಪ್ರಚಂಡ ಬುದ್ಧಿ ಶಾಲಿ
ಇರಬೇಕಿಲ್ಲ ಸುರಸುಂದರ ಕಲಿ
ಸಾಮಾನ್ಯ ರೂಪ ಸಮತೋಲನ
ಬುದ್ದಿ ಮಟ್ಟದೆದುರು ವ್ಯವಕಲನ ||

ಹೊಂದಾಣಿಸುವ ಸರಾಸರಿ ಕಥೆ
ಸಾಮಾನ್ಯ ರೂಪು ಬುದ್ಧಿಯ ಜತೆ
ಆರಕ್ಕೇರದಲೆ ಮೂರಕ್ಕಿಳಿಯದಾ
ಸಮತೋಲನದಲಿಡುವ ಸಂಪದ ||

ವಿಪರ್ಯಾಸದ ಸಂದಿಗ್ದ ಸಿಕ್ಕಲು
ಕಂಡೂ ಕಾಣದ ಕ್ರಮದ ಸುಕ್ಕಲು
ಯಾವುದೊ ಯೋಜನೆಗೆ ಬದ್ದತೆ
ಬೆಸೆದಿಟ್ಟಿರುವ ದೇವರಾಟ ಸಿದ್ದತೆ ||

ಸಮಭಾರ ಯಂತ್ರ ತೂಗಿದ ಹಾಗೆ
ಸರಿದೂಗಿಸುವ ಹವಣಿಕೆಗೆ ತೂಗೆ
ಕುಂದು ಕೊರತೇ ಮುಚ್ಚುವ ಹಾಗೆ
ಎಲ್ಲರಲೇನೊ ಹೆಚ್ಚು ಇಟ್ಟೆ ಸೋಗೆ ||

——————————————————————-
– ನಾಗೇಶ ಮೈಸೂರು
——————————————————————-

00493. ಹೂವಲು ಉಂಟು ಲಿಂಗ..!


00493. ಹೂವಲು ಉಂಟು ಲಿಂಗ..!
_________________________________ 

ಹೂವಲ್ಲೂ ಗಂಡು ಹೂ ಮತ್ತು ಹೆಣ್ಣು ಹೂವಿರುವುದು ಸಾಮಾನ್ಯ ಜ್ಞಾನವಲ್ಲ. ಬಹುಶಃ ವಿಜ್ಞಾನದ ಕಲಿಕೆಯಲಿ ತೊಡಗಿರುವವರಿಗೆ ಗೊತ್ತಿರಬಹುದಾದರೂ, ಕವಿ ಕಲ್ಪನೆಯ ಮೂಸೆಯಲ್ಲಿ ಹೂವ್ವೆಂದರೆ ಹೆಣ್ಣಿನ ರೂಪವೆ ಕಣ್ಮುಂದೆ ಬಂದು ನಿಲ್ಲುತ್ತದೆ. ಕವಿಯತ್ರಿಗಳೂ ಸಹ ಹೆಚ್ಚು ಕಡಿಮೆ ಇದೆ ಅರಿವಿನ ಮೂಸೆಯಲ್ಲೆ ಕಾವ್ಯ ಹೊಸೆಯುವಂತೆ ಭಾಸವಾಗುತ್ತದೆ. ಈ ಗುಂಪಿನಲ್ಲಿ ಬಹುತೇಕ ಹೂವೆಂದರೆ ಹೆಣ್ಣಿನ ಪ್ರತೀಕವಾಗಿಬಿಡುತ್ತದೆ, ಗಂಡಿನ ಪ್ರತೀಕವಾಗಿ ಹಿಡಿಶಾಪ ಹಾಕಿಸಿಕೊಳ್ಳುವ ಬಡಪಾಯಿ ಪಾಪಾ ದುಂಬಿ!

ಈ ಜೋಡಿ ಕವನಗಳಲ್ಲಿ ಮೊದಲನೆಯದು ‘ಹೂವಲ್ಲೂ ಹೆಣ್ಣು ಗಂಡಿದೆ, ಗೊತ್ತಾ?’ ಈ ವಿಸ್ಮಯವನ್ನು ಬಿಟ್ಟಗಣ್ಣಿಂದ ನೋಡುತ್ತಾ, ನಮ್ಮ ಅರ್ಧನಾರೀಶ್ವರನಂತೆ ಒಂದೆ ಹೂವ್ವಿನೊಳಗೆ ಗಂಡು ಭಾಗ ಮತ್ತು ಹೆಣ್ಣು ಭಾಗ ಎರಡೂ ಇರುವ ವಿಚಿತ್ರವನ್ನು ಎತ್ತಿ ತೋರಿಸುತ್ತದೆ. ತಂತಾನೆ ಪರಾಗ ಸ್ಪರ್ಶ ಮಾಡಿಕೊಂಡು , ತಾನೆ ಸಂತತಿಯ ಸೃಷ್ಟಿಸುವ ಹರಿಕಾರನಾಗುವ ಹೂವಿಗೆ ಮತ್ತೊಂದು ಲಿಂಗವನ್ಹುಡುಕುವ ಪ್ರಮೇಯವೆ ಇಲ್ಲದೆ ಎಲ್ಲಾ ಕೂತಲ್ಲೆ ನಡೆಯುವ ಸರಾಗ ಬಂಧ, ಮತ್ತದರ ವರ್ಣನೆ ಈ ಪದ್ಯ.

ಎರಡನೆ ಕವನ ‘ಹೂವೊಳಗಿನ ಪುಲ್ಲಿಂಗ, ಸ್ತ್ರೀಲಿಂಗ’ ಇರುವ ವೈಚಿತ್ರದ ಕುರಿತೆ ಚಿತ್ರಿಸಿದರೂ, ಇಲ್ಲಿ ಒಂದೆ ಮರದಲಿರುವ ಪುಲ್ಲಿಂಗ, ಸ್ತ್ರೀಲಿಂಗದ ಹೂಗಳು, ಒಂದೆ ಕೊಂಬೆಯಲ್ಲಿರುವ ಸಜಾತಿಯ ಯಾ ವಿಜಾತಿಯ ಗುಂಪುಗಳು ಅಥವಾ ಒಂದೆ ಬಳ್ಳಿಯಲ್ಲಿರುವ ಗಂಡು ಮತ್ತು ಹೆಣ್ಣು ಹೂಗಳ ಚಿತ್ರಣ; ಆದರೆ ಒಂದೆ ಹೂವಿನೊಳಗಿರುವ ಅರ್ಧನಾರೀಶ್ವರ ಹೂ ಮಾತ್ರ ಈ ಗುಂಪಲಿ ಬೆರೆಯುವುದಿಲ್ಲ. ಅದು ಮೊದಲ ಪದ್ಯದಲ್ಲಿ ಮಾತ್ರ ನಿರೂಪಿತ.

01. ಹೂವಲ್ಲೂ ಹೆಣ್ಣು ಗಂಡಿದೆ ಗೊತ್ತ?
_______________________________

ಅಕ್ಕ ನಿನಗೊಂದು ವಿಷಯ ಗೊತ್ತ
ಹೂವ್ವಲ್ಲು ಗಂಡು ಹೆಣ್ಣಿರುವ ಸತ್ಯ ?
ಒಂದೆ ಗಿಡದಲ್ಲೆ ಎರಡಿರುವ ದೃಶ್ಯ..
ಒಂದೆ ಹೂವ್ವಲ್ಲೆ ಇಬ್ಬರಿರೊ ಲಾಸ್ಯ ?||

ಅಚ್ಚರಿ ಪೆಚ್ಚು ಕುರಿ ಏಕೇಳು ಕಣ್ಣುರಿ ?
ಸೃಷ್ಟಿ ವೈಚಿತ್ರ ಎಷ್ಟೊ ಜಾಣ ಮರಿ
ಹೂವೆಂದರೆ ಹೆಣ್ಣೆನ್ನೆ ಅದರ ತಪ್ಪಲ್ಲ
ಗಂಡುವ್ವ ಗಮನಿಸದ ಬೆಪ್ಪೆ ನಾವೆಲ್ಲ ||

ಹೆಣ್ಣ ರೂಪವನಕ್ಕ ಹೂವಾಗಿಸಿ ನಕ್ಕ
ಕವಿ ಸಾರ್ವಭೌಮನೇನಲ್ಲ ಸರಿ ಪಕ್ಕ
ಗಂಡ್ಹೂವ್ವ ನೋಡಿದ ಕವಿಯತ್ರಿ ದಕ್ಕ
ಕವಿಯ ನಡುವೆ ಕವಿಯತ್ರಿಗೆ ಚೊಕ್ಕ ||

ಅರ್ಧನಾರಿಶ್ವರನಕ್ಕ ಹಂಚಿ ತನು ತಕ್ಕ
ನಡೆಸಿ ಸುಖ ಸಂಸಾರ ಸಂತತಿ ದಕ್ಕ
ಸಂಯೋಗ ಪರಾಗ ಸ್ವಕೀಯ ಸ್ಪರ್ಶ
ತನ್ನೊಡಲಲೆ ತನ್ನ ರೇಣು ಗರ್ಭ ಹರ್ಷ ||

ಪ್ರೀತಿ ಅಪರಿಮಿತವೆನ್ನಿ ಅಸಂಕರವೆನ್ನಿ
ತನ್ನ ಪಾಡಿಗೆ ತಾನೆ ವಂಶೋತ್ಪತ್ತಿ ದನಿ
ಒಂದಾಗಿ ಬೆರೆತ ಜೀವಗಳುದಾಹರಣೆ
ಬೇರೆಲ್ಲಿ ಸಿಕ್ಕೀತು ಗಂಢಭೇರುಂಡ ಕಣೆ ||

– ನಾಗೇಶ ಮೈಸೂರು

02. ಹೂವೊಳಗಿನ ಸ್ತ್ರೀಲಿಂಗ ಪುಲ್ಲಿಂಗ
_______________________________

ಅಕ್ಕ ಈ ಗಿಡ ಬರಿ ಗಂಡು, ಬರಿ ಹೆಣ್ಣು
ಆದರು ನೋಡ್ಹೇಗೆ ಒಂದೆ ಬಳ್ಳಿ ಗಿಣ್ಣು
ಒಂದೆ ತಾಯ್ಬಳ್ಳಿ ತಾಳಿ ಕಟ್ಟಿದ ಬಂಧ
ಇದು ಕೂಡ ಸ್ವಕೀಯ-ಸ್ಪರ್ಶ ಸಂಬಂಧ ||

ಇಲ್ಲು ಮರೆತುಬಿಡಕ್ಕ ಸಹಜಾತ ಸಖ್ಯ
ವಂಶ ಪರಂಪರೆ ಮುಂದುವರಿಕೆ ಮುಖ್ಯ
ಗಾಳಿ ಚಿಟ್ಟೆ ದುಂಬಿ ಪತಂಗ ಸಂವಾಹಕ
ಜೋಡಿಸಿಟ್ಟಿಹನ್ಹೀಗೆ ಜಗಕೆ ನಿರ್ಮಾಪಕ ||

ಅಲ್ನೋಡು ನಮ್ಮಂತೆ ಬೇರೆ ಗಿಡದ್ಹೂವು
ಗಂಡಲ್ಲಿ ಹೆಣ್ಣಲ್ಲಿ ಚೆಲ್ಲಾಡೀ ಚದುರಿದವು
ಗಾಳಿ ನೀರಿಂದ್ಹಿಡಿದು ಚಿಟ್ಟೆ ಜುಟ್ಟಾಡಿಸಿ
ಬೆಳೆಸೆ ವಂಶವಾಹಿ ವೈವಿಧ್ಯ ಚೌಕಾಸಿ ||

ಅಕ್ಕ ವಿಚಿತ್ರ ನೋಡು ಸಂತತಿ ಕಾವು
ಈ ಗಿಡದ ತುಂಬೇಕೆ ಬರಿ ಗಂಡುಹೂವು
ಅಲ್ಲೊಂದಿಲ್ಲೊಂದರಂತೆ ಅರಳಿದ ಹೆಣ್ಣು
ಮಿಕ್ಕೆಲ್ಲ ಕೊಂಬೆ ಗೊಂಚಲು ಗಂಡ ಕಣ್ಣು ||

ಕೆಲ ಎಲೆಗಳೇ ಹೂವಾಗುವ ವಿಸ್ಮ್ಮಯ
ಬಣ್ಣಗಳೆ ಬದುಕಾಗುವ ಜೀವನ ಮಾಯ
ಹೆಣ್ಣು ಹೂವಷ್ಟೆ ಸಂತಾನ ಭಾಗ್ಯ ನಿಸರ್ಗ
ಮತ್ತೆಲ್ಲಾಕರ್ಷಣೆ ಹಿಡಿದಿಡಿಸೆ ಸಂಸರ್ಗ ||

– ನಾಗೇಶ ಮೈಸೂರು

00492. ಕೊಳಕು ನಾಗಮಂಡಲ ಮನ


00492. ಕೊಳಕು ನಾಗಮಂಡಲ ಮನ
__________________________________

ಒಳಗೊಂದು ಬಗೆ ಹೊರಗೊಂದು ಬಗೆಯ ದಿರುಸು ತೊಟ್ಟು ಜೀವನ ನಾಟಕ ನಡೆಸುವ ಮನ ಎಷ್ಟೊ ಸಲ ಅಂತರ್ಯಾನದಲಿ ಇಣುಕಿ ನೋಡಿದರೆ ಕೊಳಕು ಮಂಡಲದಂತೆ ಕಾಣಿಸುವುದರಲ್ಲಿ ಅಚ್ಚರಿಯೇನಿಲ್ಲ. ಹೊರಗೇನೆ ವೇಷ ತೊಟ್ಟರೂ ಸುಟ್ಟರೂ ಹೋಗದ ಹುಟ್ಟುಗುಣದಿಂದಾಗಿ, ಒಳಗೊಳಗೆ ಪಿತೂರಿ ನಡೆಸುವ ಅದೃಶ್ಯ ಮನದಾಟ ಸಾಮಾನ್ಯವಾಗಿ ಅರಿತಬಹುದಾದ ಸತ್ವ. ಹೊರಗಿನ ತೋರಿಕೆ ಏನೆ ಇರಲಿ , ಗೆಲ್ಲುವುದೊಂದೆ ಮುಖ್ಯ ಗುರಿಯಾಗಿ ಅದಕ್ಕಾಗಿ ಏನನ್ನು ಮಾಡಲೂ ಹೇಸದ ಕೊಳಕು ಮಂಡಲ ಮನಗಳಿಗೂ ಕೊರತೆಯೇನಿಲ್ಲ. ಈ ಕವಿತೆಯಲ್ಲಿ ಆ ಕೊಳಕು ಮಂಡಲ ಮನದ ಗುಣಗಾನ.

ಕೊಳಕು ಮಂಡಲ ಜನ
ನಾಗ ಮಂಡಲದ ಮನ
ಕಟ್ಟೆಚ್ಚರವಿರೆ ಜೋಪಾನ
ಕಚ್ಚಿ ಬಿಡುವ ಸೋಪಾನ ||

ಕೊಳಕು ಮಂಡಲ ಕಚ್ಚೆ
ಕೊಳೆತಾ ದೇಹದ ರಚ್ಚೆ
ಹೋದಿತೆ ಹುಟ್ಟು ಮಚ್ಚೆ
ಗುಣ ಮಣ್ಣ ಜತೆಗೆ ಬಚ್ಚೆ ||

ಒಪ್ಪಿಕೊಳ್ಳಲಾಗದ ಜೀವಕೆ
ಜೀವನವೆಲ್ಲ ನಾಗ ಸಂಪಿಗೆ
ಅಸ್ವಾದಿಸಲಾಗದ ವಾಸನೆ
ಕಚ್ಚುತಲೆ ನಾಗದ ವೇದನೆ ||

ಬೆಳೆಯಲಾಗದಲೇ ಸ್ವಂತಿಕೆ
ಹುಡುಕುಡುಕಲೆ ಜೀವಂತಿಕೆ
ನೈತಿಕತೆ ಮೌಲ್ಯದ ವಂತಿಗೆ
ಪರದಾಟ ಕರದ ಪಾವತಿಗೆ ||

ಆದರೀ ಜಗ ಭಂಡ ಮೊಂಡ
ಗೆಲುವು ಮಾತ್ರವೆ ಪ್ರಚಂಡ
ನೀತಿ ನಿಜಾಯತಿಯೆ ದಂಡ
ಸಾಷ್ಟಾಂಗ ಗುಡಿಗಷ್ಟೆ ಗಾಢ ||

– ನಾಗೇಶ ಮೈಸೂರು

00491. ತಟ್ಟನಡಗುವುದೆ ಕಾಮ?


00491. ತಟ್ಟನಡಗುವುದೆ ಕಾಮ?
____________________________

ಉಡದಂತೆ ಹಿಡಿತದಲಿಟ್ಟುಕೊಂಡು ವ್ಯಕ್ತಿತ್ವದೆಲ್ಲಾ ಬಯಕೆ, ನಡುವಳಿಕೆ, ವಿಚಾರ, ಅವಿಚಾರಗಳಿಗೆ ಇಂಬು ಕೊಟ್ಟುಕೊಂಡು ಅಟ್ಟಾಡಿಸುವ, ಕಂಗೆಡಿಸುವ, ನಿಯಂತ್ರಿಸುವ ಕಾಮವೆಂಬ ಕುದುರೆಯನ್ನು ಹದ್ದುಬಸ್ತಿನಲಿಡಲಾದೀತೆ ಎನ್ನುವ ಪ್ರಶ್ನೆಯೊಂದಿಗೆ ಮತ್ತಷ್ಟು ಪ್ರಶ್ನೆಗಳನ್ಹುಟ್ಟು ಹಾಕುವ ಪ್ರಚಂಡತೆಯ ಉವಾಚ…

ಹಾವ್ರಾಣಿ ನಾಗ್ರಾಣಿ
ಉಡದಂತೆ ಹಿಡಿತ ಕಾಣಿ
ಕಟ್ಟಿಲ್ಲದ ಹಗ್ಗದ ಕುಣಿ
ಕಾಣಿಸದ ಮೂಗೇಣಿ ||

ಯಾವ್ಮಾಯದ ಗಿಣಿ
ಜೀವ ಕಾಯ್ದವೋ ಕತ್ಮಣಿ
ಸಪ್ತ ಸಾಗರದಾಚೆ
ಪಂಜರದ ಕಿಳಿ ಪಚ್ಚೆ ||

ಮಾಯಕಾರನ ಗತ್ತ
ಹಿಡಿತವೆಂದರೆ ಸರಿ ತುಡಿತ
ಹಿಡಿದನೆಂದರೆ ಹಿಡಿದೆ
ಬಿಟ್ಟನೆಂದರೆ ತಾ ಬಿಡದೆ ||

ಜಾವದ ಮೊಗ್ಗು ತಾಳು
ಹಿಡಿದಿಡುವ ಪಂಚೆ ಜಾಳು
ಗುಟ್ಟು ವಲ್ಲಿ ಜತೆ ಬಾಳು
ಅಪ್ಪಿದ ಗೆಣೆ ಬಾಯಾಳು ||

ಸಕ್ರಮ ಅಕ್ರಮ ಶ್ರಮ
ಪರಿಶ್ರಮವಕಾಶ ವಿರಾಮ
ಕಟ್ಟೆತ್ತದೆ ಮನ ಮಮ
ತಟ್ಟನಡಗುವುದೆ ಕಾಮ? ||

– ನಾಗೇಶ ಮೈಸೂರು

00490. ಬರಿ ಹುಡುಕಾಟವೇ ಜೀವನ..


00490. ಬರಿ ಹುಡುಕಾಟವೇ ಜೀವನ..
_____________________________

ಹುಡುಕಾಟದಲಿ ನಿರತ ಮನಕ್ಕೆ ವಿರಾಮವೂ ಹುಡುಕಾಟದ ಹೊತ್ತು. ಜೀವನದಲೇನನ್ನೊ ಹುಡುಕುತ್ತಾ ಸಾಗಿರುವ ಮನ ಕಂಡ ಕಂಡಲ್ಲಿ, ಸಿಕ್ಕ ಸಿಕ್ಕಲ್ಲಿ ಹುಡುಕಾಟ ನಡೆಸಿ , ಬೇಕಿದ್ದು ಸಿಗದೆ ಬಳಲುವ , ತೊಳಲುವ ಚಿತ್ರಣದ ಹಂದರ ಈ ಪದ್ಯ. ಅದರ ಲೆಕ್ಕಾಚಾರವೇನೆಂದು ಅರಿವಾಗದಿದ್ದರೂ, ಒಂದು ವೇಳೆ ಈ ಹುಡುಕಾಟಗಳೆ ಇರದಿದ್ದರೆ ಜೀವನವಾದರೂ ಸಾಗುತ್ತಿದ್ದುದು ಹೇಗೆ? ಎಂಬ ವೇದಾಂತಿಕ ಪ್ರಶ್ನೆಯೂ ಉದಿಸಿ ಸದ್ಯ , ಹುಡುಕಾಟವಾದರೂ ಇದೆಯಲ್ಲಾ – ಯಾಕಾದರೂ ಸರಿ , ಎಂದು ನಿಟ್ಟುಸಿರಿಡುವ ಅಂತರ್ಗತ ಭಾವ ಇಲ್ಲಿದೆ.

ಎಲ್ಲೆಲ್ಲೆಂದು ವೈದೇಹಿ ಜಾಗ
ಹುಡುಕೆ ದಶರಥನ ಮಗ
ಜಟಾಯು ಸಂಪಾತಿ ತರ
ವಾನರರ ಸ್ನೇಹ ಕರ
ನನ್ನದೇನು ಪ್ರವರ? ||

ಕಂಡ ಕಂಡ ನಾರಿಗಳಲ್ಲಿ
ಹುಡುಕಿ ಸಾಕಾಗಿಲ್ಲಿ
ಸುಸ್ತಾಗಿದೆ ತಲ್ಲಿ
ಸುತ್ತಿ ಗಲ್ಲಿ ಗಲ್ಲಿ
ಇನ್ನಾರಲ್ಲಿ ? ||

ಆಸೆ ಭರವಸೆಯ ಬೆಂಡೆತ್ತುತ
ಐದು ತಲೆಯ ಐರಾವತ
ಏರುವಲೆ ಕನಸಿನತ್ತ
ಒಯ್ಯುವ ಪ್ರಣೀತ
ಸರಿಯೆ ಗಣಿತ ? ||

ಬರಿ ಹುಡುಕಾಟವೇ ಜೀವನ
ಹುಡುಕಲಿರದಿದ್ದರೆ ಮನ
ಪೆಚ್ಚಾಗಿ ಹುಚ್ಚುತನ
ಹೆಚ್ಚು ಕಡಿಮೆ
ಪ್ರತಿದಿನ ||

– ನಾಗೇಶ ಮೈಸೂರು

00489. ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್…


00489. ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್…
___________________________________

  
(picture source : http://www.thinkstockphotos.com/image/stock-illustration-job-interview-concept/503324814)

ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯಷ್ಟೆ ವೇಗದಲ್ಲಿ ತೆವಳುತ್ತ, ಕೊನೆಗು ಟ್ರಾಫಿಕ್ಕಿಲ್ಲದ ದೊಡ್ಡ ಮುಖ್ಯ ರಸ್ತೆಗೆ ತಂದಾಗ ನಿರಾಳತೆಯ ನಿಟ್ಟುಸಿರು ಬಿಟ್ಟೆ. ಇದು ಇನ್ನೂ ಪಯಣದ ಆರಂಭ; ಹೊರಟಿರುವ ಗಮ್ಯದ ಕಡೆಗೆ ಇನ್ನು ಎಂಟು ಗಂಟೆಗಳ ದೂರವಿದೆ. ಕೇರಳದ ಇಂಜಿನಿಯರಿಂಗ್ ಕಾಲೋಜೊಂದರಲ್ಲಿ ನಮ್ಮ ಕಂಪನಿಗೆ ಕಾಲೇಜಿನಿಂದ ನೇರ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲು ಕ್ಯಾಂಪಸ್ ಇಂಟರ್ವ್ಯೂ ಸಲುವಾಗಿ ಹೊರಟಿದ್ದು… ಜತೆಯಲ್ಲಿರುವ ಕೇಶವ ನಾಯರ್ ಎಂಬೆಡೆಡ್ ಸಾಫ್ಟ್ ವೇರ್ ವಿಭಾಗದಲ್ಲಿರುವ ಮ್ಯಾನೇಜರನಾದರು, ಅವನ ಪರಿಚಯ ಅಷ್ಟಾಗಿಲ್ಲ.. ಬಹುಶಃ ಈ ಟ್ರಿಪ್ಪಿನ ನಂತರ ಸ್ವಲ್ಪ ಹೆಚ್ಚಿನ ಪರಿಚಯವಾಗಬಹುದು… ಜತೆಗೆ ಮಾನವ ಸಂಪನ್ಮೂಲ ವಿಭಾಗದಿಂದ ಬಂದಿರುವ ಜಾನಕಿ ದೇವಿ.

ಮಧ್ಯೆ ಊಟ ತಿಂಡಿ ಕಾಫಿ ಎಂದು ಬ್ರೇಕ್ ಕೊಟ್ಟು, ಮತ್ತೆ ಹಾಗೂ ಹೀಗು ತಾಕಲಾಡುತ್ತ ಗಮ್ಯ ತಲುಪುವ ಹೊತ್ತಿಗೆ ಕತ್ತಲಾಗಿ ಹೋಗಿತ್ತು. ಇಂಟರ್ವ್ಯೂವ್ ಇದ್ದದ್ದು ಮರುದಿನವಾದ ಕಾರಣ ಅಲ್ಲೆ ಕಾಲೇಜು ಹಾಸ್ಟೆಲಿನ ಗೆಸ್ಟ್ ರೂಮಿನಲ್ಲಿ ರಾತ್ರಿ ಬಿಡಾರಕ್ಕೆ ವ್ಯವಸ್ಥೆಯಾಗಿತ್ತು. ಜಾನಕಿ ಇದರಲ್ಲೆಲ್ಲಾ ಕಿಲಾಡಿ. ಕಂಪನಿಯ ಕೆಲಸವೆ ಆದರು ಸುಮ್ಮನೆ ಹೋಟೆಲ್ಲು ವೆಚ್ಚವೇಕೆ ವ್ಯರ್ಥ ಮಾಡಬೇಕು ಎಂದು ಕಾಲೇಜಿನ ಗೆಸ್ಟ್ ರೂಮಲ್ಲಿ ಇರುವ ವ್ಯವಸ್ಥೆ ಮಾಡಿಬಿಟ್ಟಿದ್ದಾಳೆ.. ಹೇಗೂ ಅವರೂ ಇಲ್ಲವೆನ್ನುವಂತಿಲ್ಲ.. ಅಲ್ಲಿ ಸೊಳ್ಳೆ ಕಾಟ ಹೆಚ್ಚಾದ ಕಾರಣ , ರಾತ್ರಿ ಸೊಳ್ಳೆ ಬತ್ತಿ ಹಚ್ಚಿ ಮಲಗಿದರೆ ಸಾಕು, ಮನೆಯಲ್ಲಿದ್ದ ಹಾಗೆ ಅನಿಸಿ ಒಳ್ಳೆ ನಿದ್ದೆ ಬರುತ್ತೆ.. ಹೋಟೆಲ್ ರೂಮಿನದೇನು ಮಹಾ..? ಆ ಕಿಷ್ಕಿಂದದಲ್ಲಿ ಇರುವುದಕ್ಕಿಂತ ಇದೆ ವಾಸಿ ಎಂದು ದಾರಿಯಲ್ಲಿ ಸುಮಾರು ಆರೇಳು ಸಲ ಹೇಳಿದ್ದಾಳೆ – ಬಹುಶಃ ನಾವು ಮಾನಸಿಕವಾಗಿ ಅಲ್ಲಿರಲು ಸಿದ್ದರಾಗಿರಲಿ ಅಂತಿರಬೇಕು..

ಆದರೆ ಅದರಲ್ಲಿ ಸ್ವಲ್ಪ ಅತಿ ಎನಿಸಿದ್ದು ಮಾತ್ರ ರಾತ್ರಿಯೂಟದ ವ್ಯವಸ್ಥೆ.. ಹೇಗು ಕಾರಿತ್ತಾಗಿ ಸಿಟಿಯ ಯಾವುದಾದರು ಊಟದ ಹೋಟೆಲ್ಲಿಗೆ ಹೋಗಿ ಬರಬಹುದಿತ್ತು… ಅದು ಸಿಟಿಯಿಂದ ದೂರ ಎಂದು ಹೇಳಿ ಅಲ್ಲೆ ಹಾಸ್ಟೆಲಿನ ವೆಜಿಟೇರಿಯನ್ ಊಟವೆ ಓಕೆ ಎಂದು ಅಲ್ಲೆ ತಿನ್ನುವ ಹಾಗೆ ಮಾಡಿಬಿಟ್ಟಿದ್ದಳು..! ಅದೇ ಮೊದಲ ಬಾರಿಗೆ ನನಗೆ ಅಭ್ಯಾಸವಿಲ್ಲದ ಆ ಅನ್ನ ತಿಂದು, ನೀರಿನ ಬದಲಿಗೆ ನೀಡಿದ ವಿಶೇಷ ಬಣ್ಣದ ಕೇರಳದ ಟ್ರೇಡ್ ಮಾರ್ಕ್ ದ್ರವ ಪಾನೀಯ ಕುಡಿಯುವಂತಾಗಿತ್ತು.. ಆದರೂ ಆ ನೀರಿನ ಪಾನೀಯ ಮಾತ್ರ ಏನೊ ಚೇತೋಹಾರಿಯಾಗಿದೆ ಅನಿಸಿ ಎರಡೆರಡು ಬಾರಿ ಹಾಕಿಸಿಕೊಂಡು ಕುಡಿದಿದ್ದೆ.. ಪ್ರಯಾಣದ ಆಯಾಸಕ್ಕೊ, ಏನೊ ಸೊಳ್ಳೆ ಬತ್ತಿ ಹಚ್ಚಿ ಮಲಗುತ್ತಿದ್ದ ಹಾಗೆ ಮಂಪರು ಕವಿದಂತಾಗಿ ಗಾಢವಾದ ನಿದ್ದೆ ಬಂದುಬಿಟ್ಟಿತ್ತು , ಹೊಸ ಜಾಗವೆನ್ನುವ ಪರಿವೆಯಿಲ್ಲದೆ..

ಎಂಟೂವರೆಗೆ ಮೊದಲೆ ಒಂಭತ್ತಕ್ಕೆ ಆರಂಭವಾಗುವ ಪ್ರೋಗ್ರಾಮ್ ಹಾಲಿನತ್ತ ಬಂದು ತಲುಪಿದಾಗ ನಾನು ಮೊದಲ ಬಾರಿ ಆ ರೀತಿಯ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಪಾಲ್ಗೊಳ್ಳುತ್ತಿರುವುದು ನೆನಪಾಗಿಯೊ ಏನೊ, ಜಾನಕಿ ಅಲ್ಲಿನ ಕಾರ್ಯಸೂಚಿಯ ವಿವರಣೆ ಕೊಡುತ್ತ ಜತೆಗೆ ಅಲ್ಲಿ ನಡೆಯುವುದನ್ನೆಲ್ಲ ವಿವರಿಸತೊಡಗಿದಳು.. ಕೇಶವನಾಯರ್ ಈಗಾಗಲೆ ಪಳಗಿದ ಆಸಾಮಿಯಾದ ಕಾರಣ ಅವನಿಗದರ ಅಗತ್ಯವಿರಲಿಲ್ಲ.. ನಾನು ಮಾತ್ರ ಮೈಯೆಲ್ಲಾ ಕಿವಿಯಾಗಿ ಅವಳು ಹೇಳಿದ್ದನ್ನೆಲ್ಲ ಆಲಿಸತೊಡಗಿದೆ..

‘ಎಲ್ಲಕ್ಕಿಂತ ಮೊದಲು ಆರಂಭವಾಗುವುದು ನಮ್ಮ ಪ್ರೆಸೆಂಟೇಶನ್… ನಮ್ಮ ಕಂಪನಿ, ಅದರ ಹಿನ್ನಲೆ, ಯಾಕೆ ನಮ್ಮ ಕಂಪನಿ ಸೇರಬೇಕು, ನಮ್ಮ ಪಾಸಿಟೀವ್ ಅಂಶಗಳೇನು? ಇದನ್ನೆಲ್ಲ ಎಲ್ಲಾ ಸ್ಟೂಡೆಂಟುಗಳಿಗೆ ಮನ ಮುಟ್ಟುವಂತೆ ಹೇಳಬೇಕಾದು ಮೊದಲ ಕೆಲಸ..’

‘ಓಹ್.. ಇದಕ್ಕೆಲ್ಲ ಈಗಾಗಲೆ ರೆಡಿಮೇಡ್ ಸ್ಲೈಡ್ಸ್ ಇರಬೇಕಲ್ಲಾ? ಇದನ್ನು ಯಾರು ಪ್ರೆಸೆಂಟ್ ಮಾಡುತ್ತಾರೆ ? ನೀವೇನಾ? ‘ ಎಂದೆ – ಎಚ್.ಆರ್. ತಾನೆ ಈ ಕೆಲಸದ ಮುಂಚೂಣಿಯಲ್ಲಿರಬೇಕು ಎನ್ನುವ ಭಾವದಲ್ಲಿ..

‘ ಊಹೂಂ… ನೀನು ಮತ್ತು ನಾಯರ್ ಮಾಡಬೇಕು.. ನಾನು ಕಂಪನಿಯ ಜನರಲ್ ಸೆಟ್ ಅಫ್ ಬಗ್ಗೆ ಒಂದೆರಡು ಸ್ಲೈಡ್ ತೋರಿಸುತ್ತೇನೆ.. ನಂತರ ನೀನು ಮತ್ತು ನಾಯರ್ ಸರದಿ’ ಎಂದಾಗ ನಾನು ಬಹುತೇಕ ಬೆಚ್ಚಿ ಎಗರಿಬಿದ್ದಿದ್ದೆ..

‘ಓಹ್ ಜಾನಕಿ ಇದ್ಯಾಕೆ ಈಗ ಹೇಳ್ತಾ ಇದೀರಾ? ನಾನು ಆ ಸ್ಲೈಡುಗಳನ್ನು ನೋಡೂ ಇಲ್ಲ ಇವತ್ತಿನವರೆಗೆ.. ಇನ್ನು ಸಿದ್ದವಾಗಿ ಪ್ರೆಸೆಂಟಷನ್ ಕೊಡುವುದಾದರು ಹೇಗೆ.. ‘ ಎಂದೆ ಗಾಬರಿಯ ದನಿಯಲ್ಲಿ..

ನನ್ನ ಮಾತಿಗೆ ಒಂದಿನಿತು ಅಚ್ಚರಿಗೊಳ್ಳದೆ, ‘ ಅಲ್ಲೇನಿದೆ ? ಒಂದಷ್ಟು ಮಾಮೂಲಿ ಮಾಹಿತಿಗಳಷ್ಟೆ – ಅದೂ ನಿಮ್ಮ ಡಿಪಾರ್ಟ್ಮೆಂಟಿಗೆ ಸಂಬಂಧಿಸಿದ್ದಷ್ಟೆ.. ಐದು ನಿಮಿಷದಲ್ಲಿ ಪ್ರಿಪೇರ ಆಗಬಹುದು.. ನೋಡು ಇಲ್ಲೆ ಇದೆ ಅದರ ಪ್ರಿಂಟ್ ಔಟ್..’ ಎನ್ನುತ್ತ ಕಾಗದದ ಕಟ್ಟೊಂದನ್ನು ನನ್ನತ್ತ ನೀಡಿದಳು..

ನಾನೂ ಅವಸರದಲ್ಲೆ ಅದನ್ನು ತಿರುವಿ ನೋಡಿದೆ – ನಿಜಕ್ಕು ಯಾವುದೆ ಸಿದ್ದತೆಯ ಅಗತ್ಯವಿರದ ರೀತಿಯ ಪುಟಗಳೆ.. ಆದರೆ ನನಗೇಕೊ ಆ ಮಾಹಿತಿಯೆ ಪೇಲವ ಅನಿಸಿತು.. ಇದರಿಂದ ಆ ಹುಡುಗರಲ್ಲಿ ನಮ್ಮ ಕಂಪನಿಯ ಬಗ್ಗೆ ಆಸಕ್ತಿ ಹುಟ್ಟುವುದಕ್ಕಿಂತ, ಅನುಮಾನ, ನಿರಾಸಕ್ತಿಗಳುಂಟಾಗುವುದೆ ಹೆಚ್ಚೇನೊ ? ಆ ಚಿಂತನೆಯಲ್ಲೆ ಜಾನಕಿಯತ್ತ ತಿರುಗಿ, ‘ ಹೌ ವಾಸ್ ದ ರಿಯಾಕ್ಷನ್ ಫಾರ್ ದೀಸ್ ಸ್ಲೈಡ್ಸ್ ಇನ್ ದಿ ಪಾಸ್ಟ್ ? ಪ್ರೆಸೆಂಟ್ ಮಾಡಲೇನೊ ಕಷ್ಟವಿಲ್ಲ ನಿಜ.. ಆದರೆ ಇದು ನನಗೆ ಬೋರಿಂಗ್ ಅನಿಸುವಷ್ಟು ಕೆಟ್ಟದಾಗಿದೆ – ಆನ್ಯೂಯಲ್ ಬ್ಯಾಲನ್ಸ್ ಶೀಟ್ ರಿಪೋರ್ಟ್ ತರ… ಆ ಹುಡುಗರಿಗೇನು ಆಸಕ್ತಿ ಇರುತ್ತೆ ಇದರಲ್ಲಿ..? ನನಗೇನೊ ಇದರಿಂದ ಮಾರ್ಕೆಟಿಂಗ್ ಆಗುತ್ತೆ ಅನ್ನೊ ನಂಬಿಕೆಯಂತು ಇಲ್ಲಾ…’ ಎಂದೆ..

ಜಾನಕಿಯು ಹೌದೆನ್ನುವಂತೆ ತಲೆಯಾಡಿಸುತ್ತ, ‘ ಇದೊಂದು ರೀತಿಯ ಫಾರ್ಮಾಲಿಟಿ ನಮಗೆ – ನಮ್ಮ ಕಂಪನಿ ಬಗ್ಗೆ ತಿಳಿಯದವರಿಗೆ ಮಾಹಿತಿ ಕೊಡಬೇಕಲ್ಲ ? ಅದಕ್ಕೆ.. ಇದು ನೋಡಿ ಯಾರೂ ಎಗ್ಸೈಟ್ ಆಗಿದ್ದನ್ನ ನಾನೂ ನೋಡಿಲ್ಲ, ನಿಜ… ಆದರೆ ಇದನ್ನ ವರ್ಷಗಳ ಹಿಂದೆ ರೆಡಿ ಮಾಡಿದ್ದೆ ನಿಮ್ಮ ಬಿಗ್ ಬಿಗ್ ಬಾಸ್.. ಹಾಗೆ ಬಳಸ್ತಾ ಇದೀವಿ ಅಷ್ಟೆ..’

‘ ಹಾಗಾದ್ರೆ ಮೊದಲ ಎರಡು ಸ್ಲೈಡ್ ಮಾತ್ರ ಬಳಸಿ ಮಿಕ್ಕಿದ್ದಕ್ಕೆ ನಾ ಬೇರೆ ಸ್ಲೈಡ್ಸ್ ಯೂಸ್ ಮಾಡಲಾ? ನನ್ನ ಹತ್ತಿರ ಇಂಡಕ್ಷನ್ ಪ್ರೊಗ್ರಾಮಿಗೆಂದು ಮಾಡಿದ್ದ ಕೆಲವು ಸ್ಲೈಡ್ಸ್ ಇವೆ.. ಅದು ಈ ಕ್ಯಾಂಡಿಡೇಟುಗಳಿಗು ಇಂಟರೆಸ್ಟಿಂಗ್ ಆಗಿರುತ್ತೆ ಅನ್ಸುತ್ತೆ..’

‘ ಇಟ್ ಇಸ್ ಅಪ್ ಟು ಯು.. ಏನಿರುತ್ತೆ ಡಿಪಾರ್ಟ್ಮೆಂಟ್ ಮತ್ತೆ ಕಂಪನಿ ವಿಷಯ ಅದರಲ್ಲಿ ?’ ಅವಳಿಗೇನು ಇಂತದ್ದೆ ಸ್ಲೈಡ್ಸ್ ಬಳಸಬೇಕೆನ್ನುವ ನಿರ್ಬಂಧವಿದ್ದಂತೆ ಕಾಣಲಿಲ್ಲ.. ಬಹುಶಃ ನಿಜಕ್ಕು ಇದು ಬರಿಯ ಫಾರ್ಮಾಲಿಟಿ ಮಾತ್ರವಾ?

‘ ಏನಿಲ್ಲ… ಹೇಗೆ ಈ ಆಧುನಿಕ ಪ್ರಪಂಚದಲ್ಲಿ ಐಟಿ ತನ್ನ ಅಧಿಪತ್ಯ ಸಾಧಿಸಿಕೊಳ್ಳುತ್ತಿದೆ, ಹೇಗೆ ಅದು ವ್ಯವಹಾರದ ಪ್ರತಿ ಹೆಜ್ಜೆಯಲ್ಲು ತನ್ನ ಛಾಪು ಮೂಡಿಸುತ್ತಿದೆ, ಅಲ್ಲಿ ಕೆಲಸ ಮಾಡುವ ಯುವ ಪೀಳಿಗೆ ನೀಡಬಹುದಾದ ಕಾಣಿಕೆ ಏನು, ಅವಕಾಶಗಳೇನು, ಭವಿಷ್ಯವೇನು – ಇತ್ಯಾದಿಗಳ ಮಾಹಿತಿ ಅಷ್ಟೆ.. ಅದರ ಜೊತೆ ಡಿಪಾರ್ಟ್ಮೆಂಟಿನ ವಿಷಯ ಇರೊ ನಿಮ್ಮ ಮೊದಲಿನೆರಡು ಸ್ಲೈಡ್ಸ್ ಸೇರಿಸಿಬಿಟ್ಟರೆ ಪರ್ಫೆಕ್ಟ್ ಸ್ಟೋರಿ ಆಗುತ್ತೆ..’ ಹಳೆಯ ಸ್ಲೈಡುಗಳನ್ನು ನೆನೆಯುತ್ತ ನಾನೊಂದು ಚಿತ್ರ ಕಟ್ಟಿಕೊಡಲೆತ್ನಿಸಿದೆ ತುಸು ಮಾರ್ಕೆಟಿಂಗಿನ ಆಯಾಮ ನೀಡಲೆತ್ನಿಸುತ್ತ.. ನಾನೇನು ಮಾರ್ಕೆಟಿಂಗ್ ಎಕ್ಸ್ ಪರ್ಟ್ ಅಲ್ಲವಾದರು ಈ ತರದ ಮಾಹಿತಿ ಅವರಿಗೆ ಬೋರಿಂಗ್ ಅಂತೂ ಆಗಿರುವುದಿಲ್ಲ..

‘ ಸರಿ..ನನ್ನದೇನು ಅಭ್ಯಂತರ ಇಲ್ಲ.. ಜಸ್ಟ್ ಡೂ ದ ವೇ ಯೂ ವಾಂಟ್.. ಡೋಂಟ್ ಮೇಕ್ ಅ ಡಿಸಾಸ್ಟರ್ ಅಷ್ಟೆ..ಇನ್ನು ಇದು ಮುಗಿಯುತ್ತಿದ್ದಂತೆ ರಿಟನ್ ಟೆಸ್ಟ್ ಮಾಡುತ್ತೇವೆ.. ಆ ಹೊತ್ತಲ್ಲಿ ನೀವಿಬ್ಬರು ಟೆಸ್ಟ್ ಪೇಪರ್ ಡಿಸ್ಟ್ರಿಬ್ಯೂಟ್ ಮಾಡಿ ಮತ್ತೆ ಕಲ್ಲೆಕ್ಟ್ ಮಾಡಲು ಸಹಕರಿಸಿದರೆ ಸಾಕು… ಆದರೆ ನಂತರ ಅದರ ಮೌಲ್ಯ ಮಾಪನಕ್ಕೆ ಸಹಕರಿಸಬೇಕು…’

‘ ಅಂದರೆ…?’

ಅದುವರೆಗು ಸುಮ್ಮನಿದ್ದ ನಾಯರ್ ಬಾಯಿ ಹಾಕಿ, ‘ ಇದು ಮಲ್ಟಿಪಲ್ ಚಾಯ್ಸ್ ಕ್ವೆಶ್ಚನ್ಸ್… ಟೆಸ್ಟ್ ಮುಗಿದ ಮೇಲೆ ಅವರ ಆನ್ಸರ್ ಶೀಟ್ ಕಲೆಕ್ಟ್ ಮಾಡಿಕೊಂಡು ಜಾನಕಿ ಮೇಡಂ ಕೊಡೊ ಆನ್ಸರ ಸ್ಟೆನ್ಸಿಲ್ಸ್ ಕೆಳಗೆ ಹಿಡಿದರೆ ಎಷ್ಟು ಆನ್ಸರ ಮ್ಯಾಚಿಂಗ್, ಎಷ್ಟು ಇಲ್ಲಾ ಅನ್ನೋದು ಗೊತ್ತಾಗುತ್ತೆ.. ಮ್ಯಾಚಿಂಗ್ ಇರೋದು ಎಣಿಸುತ್ತಾ ಹೋದರೆ ಎಷ್ಟು ಮಾರ್ಕ್ಸ್ ಬಂತು ಅಂತ ಗೊತ್ತಾಗುತ್ತೆ ಪ್ರತಿಯೊಬ್ಬರಿಗು.. ನಾವು ಮೂರು ಜನ ಇರೊದ್ರಿಂದ ಅರ್ಧ ಗಂಟೆಲಿ ಮುಗಿಸಿಬಿಡಬಹುದು – ಪ್ರತಿಯೊಬ್ಬರು ಮೂವತ್ತು, ಮುವ್ವತ್ತು ಪೇಪರು..’ ಎಂದ, ಒಟ್ಟು ಸುಮಾರು ತೊಂಭತ್ತು ಮಂದಿ ಇರುವರೆನ್ನುವ ಇಂಗಿತ ನೀಡುತ್ತ.. ಆ ತೊಂಭತ್ತು ಕೂಡಾ ಎಲ್ಲಾ ಸೆಮೆಸ್ಟರಿನ ಅಗ್ರಿಗೇಟ್ ಸ್ಕೋರು ಅರವತ್ತಕ್ಕಿಂತ ಹೆಚ್ಚು ಬಂದವರನ್ನು ಮಾತ್ರ ಪರಿಗಣಿಸಿ ಫಿಲ್ಟರ್ ಮಾಡಿದ್ದು.. ಇಲ್ಲವಾದರೆ ಒಟ್ಟು ಸಂಖ್ಯೆಯೆ ಇನ್ನೂರು, ಮುನ್ನೂರು ದಾಟಿ ಅನ್ ಮ್ಯಾನೇಜಬಲ್ ಆಗಿಬಿಡುವ ಸಾಧ್ಯತೆ ಇರುವುದರಿಂದ..

ಜಾನಕಿ ನಾಯರ್ ಹೇಳಿದ್ದನ್ನೆ ಮತ್ತಷ್ಟು ವಿಸ್ತರಿಸುತ್ತ, ‘ನಮ್ಮ ವ್ಯಾಲ್ಯುಯೇಷನ್ ನಂತರ ಫಿಲ್ಟರ್ ಆಗಿ ಉಳಿದುಕೊಂಡವರ ಲೆಕ್ಕ ಸುಮಾರು ಅರ್ಧಕರ್ಧ ಆಗುತ್ತೆ.. ನಮ್ಮ ಕಟಾಫ್ ಸ್ಕೋರ ಸಿಕ್ಸ್ಟೀ ಪರ್ಸೆಂಟ್.. ಅಂದರೆ ಯಾರೆಲ್ಲಾ ಶೇಕಡಾ ಅರವತ್ತಕ್ಕಿಂತ ಮೇಲಿದ್ದಾರೊ ಅವರು ಮಾತ್ರ ಮುಂದಿನ ‘ಗ್ರೂಪ್ ಡಿಸ್ಕಷನ್’ ರೌಂಡಿಗೆ ಅರ್ಹರಾಗ್ತಾರೆ. ಉಳಿದವರು ಫಿಲ್ಟರ್ ಆಗಿ ಔಟ್ ಆಗಿ ಬಿಡ್ತಾರೆ.. ಈ ಕಾಲೇಜು ಕೇಸಲ್ಲಿ ಲೆಟ್ ಅಸ್ ಸೇ ಫಾರ್ಟೀಫೈವ್, ನಲವತ್ತೈದು. ಆ ನಲವತ್ತೈದನ್ನ ಐದೈದರ ಒಂಭತ್ತು ಗುಂಪು ಮಾಡಿದರೆ ಒಂಭತ್ತು ರೌಂಡ್ ಗ್ರೂಪ್ ಡಿಸ್ಕಷನ್ ಆಗುತ್ತೆ.. ಆ ಪ್ರತಿ ಐದರ ಗುಂಪಲ್ಲಿ ಇಬ್ಬಿಬ್ಬರನ್ನ ಸೆಲೆಕ್ಟ್ ಮಾಡಿಕೊಂಡರು ಹದಿನೆಂಟು ಜನ , ಹೆಚ್ಚು ಅಂದರು ಇಪ್ಪತ್ತು ಜನ ಮುಂದಿನ ಫೈನಲ್ ಇಂಟರ್ವ್ಯೂ ರೌಂಡಿಗೆ ಬರುತ್ತಾರೆ… ಅವರಲ್ಲಿ ಬೆಸ್ಟ್ ಟು, ಅಂದರೆ ಹತ್ತಕ್ಕೆ ಒಬ್ಬರಂತೆ ಸೆಲೆಕ್ಟ್ ಮಾಡಿದರೆ ನಮಗೆ ಇಬ್ಬರು ಕ್ಯಾಂಡಿಡೇಟ್ಸ್ ಸಿಗುತ್ತಾರೆ.. ಈ ಕಾಲೇಜಿನ ಕೋಟಾ ಅಲ್ಲಿಗೆ ಮ್ಯಾಚ್ ಆಗುತ್ತೆ..’

ನನಗ್ಯಾಕೊ ಈ ಕೋಟಾ ಲೆಕ್ಕಾಚಾರ ಅರ್ಥವಾಗಲಿಲ್ಲ – ಆದರೆ ಸುಮಾರು ಕಾಲೇಜುಗಳಿಗೆ ಹೋಗುವ ಕಾರಣ ಎಲ್ಲಾ ಕಡೆಯು ಇಷ್ಟಿಷ್ಟು ಅಂತ ಕೋಟಾ ಮಾಡಿದ್ದಾರೆನಿಸಿತು.. ಒಳ್ಳೆಯ ಕ್ಯಾಂಡಿಡೇಟುಗಳೆ ಜಾಸ್ತಿ ಇದ್ದರೆ ಯಾಕೆ ಸೆಲೆಕ್ಟ್ ಮಾಡಬಾರದು ಅನಿಸಿದರು, ಎಲ್ಲಾ ಕಾಲೇಜುಗಳವರನ್ನು ಒಂದೆ ಗುಂಪಿನಡಿ ಸೇರಿಸಿ ಈ ಮೇಳ ನಡೆಸಿದರಷ್ಟೆ ಅದು ಸಾಧ್ಯ ಎನಿಸಿತು… ಆದರು ಇನ್ನೂರು, ಮುನ್ನೂರರಿಂದ ಕೊನೆಗೆ ಎರಡಕ್ಕೆ ಬಂದು ನಿಲ್ಲುವ ಈ ಸೆಲೆಕ್ಷನ್ ವ್ಯವಸ್ಥೆ ಯಾಕೊ ತುಂಬಾ ಕ್ರೂರ ಅನಿಸಿತು.. ಆದರೆ ಜಾನಕಿ, ನಾಯರ್ ಕೂಲಾಗಿ ಹೇಳುತ್ತಿರುವ ರೀತಿ ನೋಡಿದರೆ ಇದೆಲ್ಲಾ ಮಾಮೂಲೆ ಇರಬೇಕು ಅನಿಸಿತ್ತು. ಬಹುಶಃ ನನಗೆ ಫರ್ಸ್ಟ್ ಟೈಮ್ ಆದ ಕಾರಣ ಸ್ವಲ್ಪ ಇರಿಸುಮುರಿಸಿರಬೇಕಷ್ಟೆ..

‘ ಎಲ್ಲಾ ಅರ್ಥಾ ಆಯ್ತಾ ? ಇದೆಲ್ಲಾ ಮುಗಿಯೋಕೆ ರಾತ್ರಿ ಎಂಟೊಂಭತ್ತಾದರು ಆಗುತ್ತೆ… ನೈಟ್ ಜರ್ನಿ ಬೇಡ ಅಂತ ಬೆಳಿಗ್ಗೆ ಹೊರಡೊ ಪ್ಲಾನ್ ಮಾಡಿದೀನಿ.. ಬೈ ಛಾನ್ಸ್ ಏನಾದ್ರು ಮಿಕ್ಕಿದ್ರು ಬೆಳಿಗ್ಗೆ ಬೇಗ ಮುಗಿಸಿ ಹೊರಟುಬಿಡೋಣ’ ಎನ್ನುತ್ತ ಪ್ರೋಗ್ರಾಮಿನ ಸಮಗ್ರ ಚಿತ್ರಣಕ್ಕೊಂದು ಅಂತಿಮ ರೂಪು ಕೊಟ್ಟವಳತ್ತ ಮೆಚ್ಚಿಗೆಯಿಂದ ನೋಡುತ್ತ ‘ಅರ್ಥ ಆಯ್ತು’ ಅನ್ನುವಂತೆ ತಲೆಯಾಡಿಸಿದೆ..ಏನಿವೇ ಇಟ್ ಈಸ್ ಗೊಯಿಂಗ್ ಟು ಬೀ ಎ ಟಯರಿಂಗ್ ಡೇ..

ಆ ನಂತರದ್ದೆಲ್ಲ ಅವಳ ಯೋಜನೆಯನುಸಾರವೆ ಚಕಚಕನೆ ನಡೆದು ಹೋಗಿತ್ತು.. ನಿಜಕ್ಕು ಅಚ್ಚರಿಯಿದ್ದದ್ದು ಪ್ರೆಸೆಂಟೇಷನ್ನಿನಲ್ಲಿ ಮಾತ್ರ.. ನಾನು ತೋರಿಸಿ ವಿವರಿಸಿದ ಸ್ಲೈಡುಗಳ ಮೇಲೆ ಅನೇಕ ಪ್ರಶ್ನೆಗಳು ಬಂದದ್ದು ಮಾತ್ರವಲ್ಲದೆ ಹುಡುಗರಲ್ಲಿ ಆಸಕ್ತಿ, ಕುತೂಹಲ ಕೆರಳಿಸಿದ್ದು ಕಂಡು ಬಂತು. ನಿಗದಿಗಿಂತ ಐದತ್ತು ನಿಮಿಷ ಹೆಚ್ಚೇ ಹಿಡಿದರು ಕಂಪನಿಯ ಬಗ್ಗೆ ಅವರೆಲ್ಲರಲ್ಲು ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಸಫಲವಾಗಿತ್ತು.. ಆ ನಂತರದ ರಿಟನ್ ಟೆಸ್ಟ್ ಕೂಡ ಸಾಂಗವಾಗಿ ನೆರವೇರಿದ ಮೇಲೆ ಗ್ರೂಪ್ ಡಿಸ್ಕಶನ್ನಿನಲ್ಲಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಮಾನದಂಡವನ್ನು ಅರ್ಥ ಮಾಡಿಕೊಳ್ಳಲು ಮೊದಲೆರಡು ಮೂರು ರೌಂಡಿನಲ್ಲಿ ಅವರಿಬ್ಬರು ಏನು ಮಾಡುವರೆಂದು ಗಮನಿಸಿ ನೋಡಿ, ಮುಂದಿನ ಸುತ್ತಿನಲ್ಲಿ ಅದನ್ನೆ ಬಳಸಿಕೊಳ್ಳುತ್ತ ಭಾಗವಹಿಸಿದೆ. ಕೊನೆಯ ಇಂಟರವ್ಯೂ ಸುತ್ತಿನಲ್ಲು ಅದೇ ಮಾದರಿ ಅನುಕರಿಸುತ್ತ ಎಲ್ಲಾ ಅಭ್ಯರ್ಥಿಗಳ ಸರದಿ ಮುಗಿಸಿದಾಗ ನಿಜಕ್ಕು ವಿಪರೀತ ಆಯಾಸವಾದ ಭಾವ.. ಕೊನೆಯ ಐದು ಸೂಕ್ತ ಅಭ್ಯರ್ಥಿಗಳಲ್ಲಿ ಮೊದಲಿನಿಬ್ಬರನ್ನು ಆರಿಸಿ ಆ ಮಾಹಿತಿಯನ್ನು ಕಾಲೇಜು ಕೋಆರ್ಡಿನೇಟರಿಗೆ ತಲುಪಿಸಿ ಏನೊ ಅವಸರದಲ್ಲಿ ಅಷ್ಟಿಷ್ಟು ತಿಂದು ಮಲಗಿದ ತಕ್ಷಣವೆ ಗಾಢ ನಿದ್ದೆ ಆವರಿಸಿಕೊಂಡುಬಿಟ್ಟಿತ್ತು.. ಬೆಳಿಗ್ಗೆ ಏಳು ಗಂಟೆಯವರೆಗೆ ಎಚ್ಚರವೆ ಇಲ್ಲದ ಹಾಗೆ..!

*************

ಮತ್ತೆ ತುಂತುರು ಮಳೆಯ ನಡುವಲ್ಲೆ ಹೊರಟ ಕಾರಿನ ಪಯಣದ ನಡುವೆ ಒಂದು ಸೊಗಸಾದ ಜಾಗದಲ್ಲಿ ಊಟಕ್ಕೆ ನಿಲ್ಲಿಸಿದ ಡ್ರೈವರ – ಅಲ್ಲಿ ಕರ್ನಾಟಕದ ಊಟ ಸಿಗುತ್ತದೆಂದು .. ಅರ್ಧ ದಾರಿ ಕ್ರಮಿಸಿ ಬಂದಿದ್ದರು ಯಾಕೊ ಉದ್ದಕ್ಕು ಸುರಿಯುತ್ತಿದ್ದ ಮಳೆಗೆ ಮುದುರಿ ಕೂಡುವಂತಾಗಿ ತೂಕಡಿಸಿಕೊಂಡೆ ಬರುವಂತಾಗಿತ್ತು, ರಾತ್ರಿಯ ಗಡದ್ದು ನಿದ್ದೆಯಾಗಿದ್ದರು… ಆ ಜಾಗದಲ್ಲಿ ಮಾತ್ರ ಮಳೆ ನಿಂತುಹೋಗಿತ್ತೊ ಏನೊ, ಬರಿ ಮೋಡದ ವಾತಾವರಣ ಮಾತ್ರ ಮುಸುಕು ಹಾಕಿಕೊಂಡಿತ್ತು. ಬರಿಯ ಗಾಳಿಯ ಅರ್ಭಟ ಮಾತ್ರವಿದ್ದ ಆ ರಸ್ತೆ ಬದಿಯ ತಂಗುದಾಣದಲ್ಲಿ ಊಟಕ್ಕೆ ಆರ್ಡರ ಮಾಡಿ ಕುಳಿತಾಗ ಮುವ್ವರಲ್ಲು ಆಲಸಿಕೆಯ ಭಾವವಿದ್ದರು ಏನೊ ನಿರಾಳವಾದ ಭಾವ.. ಇನ್ನೇನು ಸಂಜೆಯ ಹೊತ್ತಿಗೆ ಊರು ಸೇರಿಬಿಟ್ಟರೆ ಮರುದಿನ ಹೇಗು ಶನಿವಾರ, ಆಫೀಸಿನ ಗೋಜು ಇರುವುದಿಲ್ಲ.. ಆರ್ಡರು ಮಾಡಿದ ಊಟ ಬರುವತನಕ ಇದ್ದ ಬಿಡುವಲ್ಲಿ ಮಾತಿಗೆ ಮೊದಲಾದವಳು ಜಾನಕಿಯೆ..

‘ ಐ ಲೈಕ್ಡ್ ಯುವರ್ ಪ್ರೆಸೆಂಟೇಷನ್.. ತುಂಬಾ ಚೆನ್ನಾಗಿತ್ತು’ ಎಂದಳು.. ಹಾಗೆ ಅವಳು ಅಷ್ಟು ಮುಕ್ತವಾಗಿ ಹೊಗಳಿದ್ದಕ್ಕೆ ಅಚ್ಚರಿಯ ಜತೆ ಖುಷಿಯೂ ಆಯ್ತು..

‘ಥ್ಯಾಂಕ್ಸ್.. ಆ ಸಂಧರ್ಭಕ್ಕೆ ಸೂಕ್ತವಾಗಿತ್ತು ಅನ್ಕೋತೀನಿ..’ ಎಂದೆ ಅವಳ ನಗೆಯನ್ನೆ ಹಿಂದಿರುಗಿಸುತ್ತ..

 ‘ನನ್ನ ಇದುವರೆಗಿನ ಕ್ಯಾಂಪಸ್ ಇಂಟರವ್ಯೂನಲ್ಲಿ ಇದೇ ಮೊದಲ ಸಾರಿ ನೋಡಿದ್ದು – ಕ್ಯಾಂಡಿಡೇಟುಗಳು ಆಸಕ್ತಿಯಿಂದ ಆಲಿಸಿದ್ದು ಮಾತ್ರವಲ್ಲದೆ ಅಷ್ಟೊಂದು ಪ್ರಶ್ನೆಗಳನ್ನು ಕೇಳಿದ್ದು.. ಐ ಯಾಮ್ ಶೂರ್ ದೇ ವರ್ ಇಂಪ್ರೆಸ್ಡ್ ಅಂಡ್ ಹ್ಯಾಡ್ ಎ ಗುಡ್ ಒಪಿನಿಯನ್ ಎಬೌಟ್ ದ ಕಂಪನಿ.. ನನಗೆ ಆ ಸ್ಲೈಡುಗಳನ್ನ ಕಳಿಸಿ ಕೊಡ್ತೀಯಾ.. ಮುಂದಿನ ಸಾರಿಯಿಂದ ಅವನ್ನೆ ಬಳಸ್ಕೊಬೋದು ಬೇರೆ ಕಾಲೇಜುಗಳಲ್ಲು..?’ ಎಂದ ಅವಳ ದನಿ ಮೊದಲ ಬಾರಿಗೆ ಅಣತಿಯಂತಿರದೆ, ಬೇಡಿಕೆಯ ರೂಪದಲ್ಲಿರುವುದನ್ನು ನಾನು ಗಮನಿಸದಿರಲಾಗಲಿಲ್ಲ.. ಹಿಂದೆಮುಂದೆ ಯೋಚಿಸದೆ ಒಂದೆ ಬಾರಿಗೆ, ‘ಬೈ ಆಲ್ ಮೀನ್ಸ್.. ಮೈಲ್ ಕಳಿಸ್ತೀನಿ’ ಎಂದುತ್ತರಿಸಿದ್ದೆ.

ಅಷ್ಟೊತ್ತಿಗೆ ಊಟದ ತಟ್ಟೆ ಬಂದುಬಿಟ್ಟ ಕಾರಣ ನಮ್ಮ ಗಮನ ಮತ್ತೆ ಊಟದತ್ತ ತಿರುಗಿತು.. ಊಟದ ನಡುವೆ ಅಂತಿಮ ಸುತ್ತಿಗೆ ಬಂದು ಶಾರ್ಟ್ ಲಿಸ್ಟ್ ಆದ ಐವರು ಕ್ಯಾಂಡಿಡೇಟುಗಳತ್ತ ಮಾತು ಹೊರಳಿತು.. ಅಷ್ಟೊತ್ತಿಗೆ ಅಗತ್ಯಕ್ಕಿಂತ ಹೆಚ್ಚು ಮಾತಾಡದ ನಾಯರ್ ನನ್ನ ಮನದ ಅನಿಸಿಕೆಯನ್ನೆ ಮಾತಾಗಿಸಿ ನುಡಿದ.. ‘ನನಗೇನೊ ಆ ಕೊನೆಯ ಐವರಲ್ಲಿ ನಾಲ್ಕು ಜನರಾದರು ಆಯ್ಕೆಯ ಅರ್ಹತೆ ಇದ್ದವರು ಎನಿಸಿತು.. ಅವರವರ ನಡುವೆ ತೀರಾ ವ್ಯತ್ಯಾಸವೇನೂ ಇರಲಿಲ್ಲ… ಐದನೆಯವನು ಮಾತ್ರ ಮಿಕ್ಕ ನಾಲ್ವರಿಗಿಂತ ತೀರಾ ಕೆಳಗಿದ್ದ’

‘ ಹೌದು ನನಗು ಹಾಗೆ ಅನಿಸಿತು.. ಆ ನಾಲ್ಕರಲ್ಲಿ ಇಬ್ಬರನ್ನು ಮಾತ್ರ ಆರಿಸಬೇಕಾಗಿ ಬಂದದ್ದು ನಿಜಕ್ಕು ಒಂದು ರೀತಿ ಮಿಕ್ಕವರಿಬ್ಬರಿಗೆ ಅನ್ಯಾಯ ಮಾಡಿದಂತೇನೊ ಅನಿಸಿಬಿಟ್ಟಿತು’ ಎಂದೆ. ಸಮಾನ ಸ್ತರದಲಿದ್ದ ನಾಲ್ವರಲ್ಲಿ ಯಾರಿಬ್ಬರನ್ನು ಆರಿಸುವುದು ಅನ್ನುವ ಪ್ರಶ್ನೆ ಬಂದಾಗ ಇಂಟರ್ವ್ಯೂವಿಗೆ ಬದಲು ಗ್ರೂಪ್ ಡಿಸ್ಕಷನ್ನಿನ ಪರ್ಫಾರ್ಮೆನ್ಸ್ ಅನ್ನು ಟೈ ಬ್ರೇಕರ್ ತರ ಬಳಸಿ, ಇಬ್ಬರನ್ನು ಆರಿಸಿದ್ದೆವು.. ಕಾಲೇಜು ಕೋಟಾ ಅಂತ ಇರದಿದ್ರೆ ಖಂಡಿತ ನಾಲ್ವರು ಸಮಾನ ಅರ್ಹತೆ ಇದ್ದವರೇನೆ..

ತಿನ್ನುವ ಪ್ಲೇಟಿನತ್ತ ಗಮನ ಹರಿಸಿದ್ದ ಜಾನಕಿ ನಮ್ಮಿಬ್ಬರ ಮಾತಿಗೆ ಏಕಾಏಕಿ ಉತ್ತರಿಸದೆ ತುಸು ಆಲೋಚಿಸುವವಳಂತೆ ಸುಮ್ಮನಿದ್ದು, ನಂತರ ಮರುಪ್ರಶ್ನೆ ಹಾಕಿದಳು..

‘ ನಮಗೆ ಬೇಕಾಗಿರೋದು ಸುಮಾರು ಐವತ್ತು ಕ್ಯಾಂಡಿಡೇಟುಗಳು… ನಾವು ಪ್ರತಿ ವರ್ಷ ಹೋಗೋದು ಸುಮಾರು ಇಪ್ಪತ್ತು ಕಾಲೇಜುಗಳು.. ನಾವು ಎಲ್ಲಾ ಕಾಲೇಜಿನಲ್ಲು ಒಳ್ಳೆ ಎಂಪ್ಲಾಯರ್ ಅನ್ನೊ ರೆಪ್ಯುಟೇಷನ್ ಉಳಿಸಿಕೊಬೇಕಾದ್ರೆ ಪ್ರತಿ ಸಾರಿಯೂ ಆಯಾ ಕಾಲೇಜಿನಿಂದ ಒಬ್ಬಿಬ್ಬರನ್ನಾದರು ಆರಿಸಿಕೊಬೇಕು.. ಇಲ್ಲದಿದ್ರೆ ಮುಂದಿನ ಸಾರಿ ಸರಿಯಾದ ರೆಸ್ಪಾನ್ಸ್ ಸಿಗೋದಿಲ್ಲ.. ಹಾಗೆಯೆ ಒಂದೆ ಕಡೆ ಜಾಸ್ತಿ ಜನರನ್ನ ಆರಿಸಿಬಿಟ್ರೆ ಬೇರೆ ಕಾಲೇಜುಗಳಲ್ಲಿ ಕಡಿಮೆ ಮಾಡಬೇಕಾಗುತ್ತೆ.. ಅದೂ ಅಲ್ಲದೆ ಈ ಕಾಲೇಜು ನಮ್ಮ ಬೆಸ್ಟ್ ಕಾಲೇಜುಗಳ ಲಿಸ್ಟಿನಲ್ಲಿ ಒಂದೇನೂ ಅಲ್ಲಾ.. ಈ ಪರಿಸ್ಥಿತಿಲಿ ನಾವು ನಾಲ್ಕು ಜನರನ್ನ ತೆಗೆದುಕೊಳ್ಳೋಕೆ ಆಗುತ್ತಾ? ‘

ಅವಳ ಮಾತು ನಿಜವೆ.. ಅಲ್ಲದೆ ಇವರು ನಾಲ್ವರು ಈ ಕಾಲೇಜಿನ ಮಾನದಂಡದಲಷ್ಟೆ ಬೆಸ್ಟು… ಕಾಲೇಜುಗಳ ಸಮಗ್ರ ಹೋಲಿಕೆಗಿಳಿದರೆ ಇವರು ಮೊದಲ ನಾಲ್ಕರಲ್ಲಿರುತ್ತಾರಾ ಎಂದು ಹೇಳಲಾಗದು..

ನಾವಿಬ್ಬರು ಮಾತಾಡದೆ ಇದ್ದಾಗ ಜಾನಕಿ ತಾನೆ ಮುಂದುವರೆಸಿದಳು..’ಅಲ್ಲದೆ ನಮಗೆ ಬೆಸ್ಟ್ ಅನಿಸಿದ ಟಾಪ್ ಕಾಲೇಜುಗಳಲ್ಲಿ ನಮಗೆ ಹೆಚ್ಚು ಕ್ವಾಲಿಟಿ ಕ್ಯಾಂಡಿಡೇಟ್ಸ್ ಸಿಗೋದ್ರಿಂದ ನಾವು ಅಲ್ಲಿ ಹೆಚ್ಚು ಜನರನ್ನ ಆಯ್ಕೆ ಮಾಡೊ ಸಾಧ್ಯತೆ ಮತ್ತು ನೈತಿಕ ಒತ್ತಡ ಎರಡೂ ಇರುತ್ತೆ.. ಅದಕ್ಕೆ ನಾನು ಎರಡಕ್ಕಿಂತ ಜಾಸ್ತಿ ಆಯ್ಕೆ ಮಾಡಲು ಬಿಡಲಿಲ್ಲ.. ಸಾಧ್ಯವಿದ್ದರೆ ಒಂದಕ್ಕೆ ಲಿಮಿಟ್ ಮಾಡುವ ಇರಾದೆಯೂ ಇತ್ತು.. ಆದರೆ ನಾಲ್ಕು ಜನ ಟಾಪರ್ಸಿನಲ್ಲಿ ಎರಡಾದರು ಕ್ಲಿಯರ್ ಮಾಡಿದರೆ ಫಿಫ್ಟಿ ಪರ್ಸೆಂಟಾದರು ಅಕಾಮಡೇಟ್ ಮಾಡಿದಂತೆ ಆಗುವುದಲ್ಲ ಅನಿಸಿ ಎರಡಕ್ಕೆ ಓಕೆ ಅಂದೆ..’

‘ ಅದೂ ನಿಜವೆ.. ಈ ಸಾರಿ ರಿಸೆಶನ್ ಹೆಸರಲ್ಲಿ ಎಲ್ಲಾ ಕಡೆ ಕಡಿಮೆ ರಿಕ್ರೂಟ್ಮೆಂಟು ಇರುವ ಕಾರಣ ಸಿಗುವ ಕ್ಯಾಂಡಿಡೇಟುಗಳು ಜಾಸ್ತಿ ಇರುತ್ತಾರೆ…’ ಎಂದ ಕೇಶವ ನಾಯರ್ ತಲೆಯಾಡಿಸುತ್ತ.

ಮತ್ತೆ ಕಾರಿನತ್ತ ನಡೆಯುವ ಹೊತ್ತಿಗೆ ಜಾನಕಿ ತಟ್ಟನೆ ಕೇಳಿದಳು ‘ಮುಂದಿನ ಶುಕ್ರವಾರ ನಿಮಗಿಬ್ಬರಿಗು ಸಮಯವಿರುತ್ತಾ? ಬೆಂಗಳೂರಲ್ಲೆ ಒಂದು ಟಾಪ್ ಟಾರ್ಗೆಟ್ ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂವ್ ಇದೆ..’ ಅಂದಳು

ನಾಯರ್ ತಾನು ವಿದೇಶಿ ಪ್ರಯಾಣದಲ್ಲಿರುವ ಕಾರಣ ಮುಂದಿನ ವಾರ ಸಾಧ್ಯವಿಲ್ಲವೆಂದು ಹೇಳಿದ.. ನಾನು ಸ್ವಲ್ಪ ಅನುಮಾನದಿಂದ, ‘ ಒಂದೇ ದಿನ ಸಾಕಾ..? ಇಲ್ಲಿ ಮೂರು ದಿನ ಹಿಡಿಯಿತಲ್ಲಾ? ‘ ಎಂದೆ

‘ ಬೆಂಗಳೂರಿನ ಕಾಲೇಜಾದ ಕಾರಣ ಅಲ್ಲೆ ಇಂಟರ್ವ್ಯೂವ್ ಮಾಡುವ ಅಗತ್ಯವಿಲ್ಲ.. ಈ ಕಾಲೇಜಿಗೆ ಇದೇ ಮೊದಲ ಸಾರಿ ಹೋಗುತ್ತಿರುವುದು ಅದರೆ ತುಂಬಾ ಬೆಸ್ಟ್ ಪರ್ಫಾರ್ಮಿಂಗ್ ಕಾಲೇಜು ಅಂತ ಕೇಳಿದೆ..ನಂಬರ್ ಒನ್ ಇನ್ ಬೆಂಗಳೂರ್ ಅಂಡ್ ದಿ ಸ್ಟೇಟ್ ಅನ್ನುತ್ತಿದ್ದಾರೆ.. ರಿಟನ್ ಟೆಸ್ಟ್, ಗ್ರೂಪ್ ಡಿಸ್ಕಷನ್ ಆದರೆ ಸಾಕು.. ಇಂಟರ್ವ್ಯೂವಿಗೆ ನಮ್ಮ ಕಂಪನಿಗೆ ಇನ್ನೊಂದು ದಿನ ಬರಲು ಹೇಳಬಹುದು… ನಾನು ಶನಿವಾರ ಅಥವಾ ಸೋಮವಾರ ಮಾಡೋಣ ಅಂದುಕೊಂಡಿದ್ದೇನೆ.. ಹೀಗಾಗಿ ಕಾಲೇಜಿಗೆ ಒಂದು ದಿನದ ಭೇಟಿ ಸಾಕು’ ಎಂದಳು..

ನನಗು ಅದು ಹೇಗಿರುವುದೊ ಕುತೂಹಲವೆನಿಸಿತು..ಜತೆಗೆ ಮುಂದಿನ ಶುಕ್ರವಾರ ಮತ್ತಾವ ಅವಸರದ ಒತ್ತಡವೂ ಇರಲಿಲ್ಲ.. ‘ ಸರಿ ನಾನು ಬರುತ್ತೇನೆ.. ಲೆಟ್ ಮಿ ಗೈನ್ ಸಮ್ ಎಕ್ಸ್ ಪೀರೀಯೆನ್ಸ್ ಇನ್ ಹೋಮ್ ಟರ್ಫ್ ‘ ಎಂದೆ.. 

ಬೇಗನೆ ತಲುಪಲೆಂದು ಹೊರಟರು ಬೆಂಗಳೂರಿಗೆ ಬಂದು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕೊನೆಗೆ ಮನೆಗೆ ತಲುಪಿದಾಗ ರಾತ್ರಿ ಒಂಭತ್ತನ್ನು ದಾಟಿಯಾಗಿತ್ತು.. 

*************

ಶುಕ್ರವಾರ ಹೊಸ ಕಾಲೇಜಿನತ್ತ ನಡೆದದ್ದು ನಾನು ಜಾನಕಿ ನಾವಿಬ್ಬರು ಮಾತ್ರವೆ.. ಮತ್ತಾರು ಫ್ರೀಯಿಲ್ಲವೆನ್ನುವುದು ಒಂದು ಕಾರಣವಾದರೆ ಇಂಟರ್ವ್ಯೂವ್ ಸೆಪರೇಟಾಗಿ ಮಾಡುವುದರಿಂದ ಇಬ್ಬರೆ ಸಾಕು ಅನ್ನುವುದು ಮತ್ತೊಂದು ಕಾರಣ..

ಯಥಾರೀತಿ ಕಂಪನಿಯ ಕುರಿತಾದ ಪ್ರೆಸೆಂಟೇಷನ್ನಿನಿಂದ ಆರಂಭ.. ಇಲ್ಲಿಯೂ ಹಿಂದಿನ ಕಾಲೇಜಿನಂತೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.. ಅದನ್ನು ನಿಭಾಯಿಸುವ ಹೊತ್ತಲ್ಲೆ ಒಮ್ಮೆ ಸುತ್ತ ಕಣ್ಣು ಹಾಯಿಸಿದ ನನಗೆ ಏನೊ ವಿಶೇಷವಿರುವುದು ಅನುಭವಕ್ಕೆ ಬಂದಂತಾದರು ಏನೆಂದು ತಟ್ಟನೆ ಗೊತ್ತಾಗಲಿಲ್ಲ.. ಪ್ರಶ್ನೋತ್ತರದ ನಡುವಲ್ಲೆ ಅದೇನೆಂದು ಸಡನ್ನಾಗಿ ಹೊಳೆಯಿತು.. ಆ ಸಭಾಂಗಣದಲ್ಲಿ ಸುಮಾರು ನಾನೂರು ಜನರಿರುವಂತೆ ಕಾಣಿಸಿತು.. ದೊಡ್ಡ ಟಾಪರ್ ಕಾಲೇಜಾದ್ದರಿಂದ ಕ್ಯಾಂಡಿಡೇಟುಗಳು ಜಾಸ್ತಿಯಿರಬೇಕು ಎನಿಸಿತು. ಅದು ಮುಗಿದ ಕೂಡಲೆ ರಿಟನ್ ಟೆಸ್ಟಿಗೆ ಅಪ್ಲಿಕೇಶನ್ ಫಾರಂ ಪಡೆಯಲು ಆರಂಭಿಸುವ ಹೊತ್ತಿಗೆ ಪ್ರಿನ್ಸಿಪಾಲರ ಜೊತೆ ಪುಟ್ಟ ಭೇಟಿಯನ್ನು ಮಾಡಬೇಕೆಂಬ ಸೂಚನೆಯೂ ಬಂತು ಅಲ್ಲಿನ ಕೋಆರ್ಡಿನೇಟರರ ಮೂಲಕ.. ಇಂಜಿನಿಯರಿಂಗಿನ ಎಲ್ಲಾ ವರ್ಷಗಳ ಅಗ್ರಿಗೇಟ್ ಶೇಕಡ ಅರವತ್ತು ಮತ್ತು ಮೇಲ್ಪಟ್ಟವರು ಮಾತ್ರ ಅರ್ಹರು ಎಂದು ಹೇಳಿದ್ದರಿಂದ ಎಲ್ಲಾ ನಾನೂರು ಅಪ್ಲಿಕೇಶನ್ನುಗಳು ರಿಟನ್ ಟೆಸ್ಟಿಗೆ ಕೂರಲು ಸಾಧ್ಯವಿರಲಿಲ್ಲ.. ಜಾನಕಿಯ ಲೆಕ್ಕಾಚಾರದಂತೆ ಈ ಲೆವಲ್ ಫಿಲ್ಟರಿನಿಂದಾಗಿ ಹಿಂದಿನ ಕಾಲೇಜಿನಂತೆ ಸುಮಾರು ನೂರು ಜನ ಉಳಿದುಕೊಳ್ಳಬಹುದು, ಅಲ್ಲಿಂದಾಚೆಗೆ ಮಾಮೂಲಿ ಪ್ರಕ್ರಿಯೆ ಎಂಬ ಅನಿಸಿಕೆ. ಕೋ- ಆರ್ಡಿನೇಟರಿಗೆ ಫಿಲ್ಟರು ಮಾಡಿದ ಅಪ್ಲಿಕೇಶನ್ನುಗಳನ್ನು ಮಾತ್ರ ಸಂಗ್ರಹಿಸಲು ಹೇಳಿ ನಾವಿಬ್ಬರು ಪ್ರಿನ್ಸಿಪಾಲ್ ರೂಮಿನತ್ತ ನಡೆದೆವು…

ಭವ್ಯವಾದ ಅದುನಿಕ ಕೋಣೆಯಲಿದ್ದ ಪ್ರಿನ್ಸಿಪಾಲ್ ವಿದೇಶದಿಂದ ಭಾರತಕ್ಕೆ ಬಂದು ಈ ಕಾಲೇಜು ಆರಂಭಿಸಿದ್ದ ವ್ಯಕ್ತಿ.. ವಿದೇಶಿ ಮಟ್ಟದ ವಿದ್ಯಾಭ್ಯಾಸವನ್ನೆ ಭಾರತದಲ್ಲು ನೀಡುವಂತಾಗಿಸಲು ತಾನು ಕೈಗೊಂಡ ಈ ಯೋಜನೆ, ಅದರ ಹಿನ್ನಲೆ, ಧ್ಯೇಯೋದ್ದೇಶಗಳನ್ನರುಹುತ್ತ ಜೊತೆಜೊತೆಗೆ ಬೇರೆ ಕಂಪನಿಗಳಿಂದ ಬಂದವರು ಒಂದೆ ಏಟಿಗೆ ನಲವತ್ತು ಐವತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದಾಹರಣೆ ನೀಡುತ್ತ, ನಮ್ಮ ಕಂಪನಿ ಬೆರಳೆಣಿಕೆಯಷ್ಟಕ್ಕೆ ಮಾತ್ರ ಸೀಮಿತಗೊಳಿಸುವ ಕುರಿತು ಸೂಚ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದರು.. ಬಹುಶಃ ನಮ್ಮ ಕೋಟಾ ವಿಧಾನ ಕುರಿತು ಅವರಿಗೆ ಮಾಹಿತಿ ಇತ್ತೇನೊ.. ಪ್ರತಿಭಾವಂತರ ಆಯ್ಕೆಗೆ ಸಾಧನೆ ಮಾನದಂಡವಾಗಬೇಕೆ ಹೊರತು ಕಾಲೇಜುಗಳ ಕೋಟಾ ಅಲ್ಲ ಎಂದು ಹೇಳುತ್ತ ತಮ್ಮ ಕಾಲೇಜಿನಿಂದ ಹೆಚ್ಚು ಸರಿಸೂಕ್ತ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು… ಕೊನೆಯ ಸುತ್ತು ತಲುಪುವ ತಮ್ಮ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಅದು ಅನಿವಾರ್ಯವೂ ಆಗುತ್ತದೆಂಬ ಇಂಗಿತವೂ ಅವರ ಮಾತಿನಲ್ಲಿತ್ತು. ಅವರ ಮಾತಿಂದ ನಾನೆಷ್ಟು ಪ್ರಭಾವಿತನಾಗಿಬಿಟ್ಟೆನೆಂದರೆ ಈ ಕಾಲೇಜಿನಿಂದ ಎಷ್ಟು ಹೆಚ್ಚು ಸಾಧ್ಯವೊ ಅಷ್ಟು ಆಯ್ಕೆ ಮಾಡುವುದೆ ಸರಿ ಎಂಬ ತಕ್ಷಣದ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ..! ಆದರೆ ಅನುಭವಿಯಾದ ಜಾನಕಿ ಮಾತ್ರ ತನ್ನ ಎಂದಿನ ಸೀರಿಯಸ್ ಮುಖಚಹರೆಯನ್ನು ಬದಲಿಸದೆ, ಫಲಿತಾಂಶ ಹೇಗೆ ಬರುವುದೊ ನೋಡಿ ನಿರ್ಧರಿಸುವ ಭರವಸೆ ನೀಡಿ ಹೊರಬಂದಿದ್ದಳು..

ರಿಟನ್ ಟೆಸ್ಟ್ ಹಾಲಿನತ್ತ ಬರುತ್ತಿದ್ದಂತೆ ನಮಗೊಂದು ಶಾಕ್ ಕಾದಿತ್ತು.. ಜತೆಗೆ ಆ ಪ್ರಿನ್ಸಿಪಾಲ್ ಅದೇಕೆ ಅಷ್ಟು ಕಾನ್ಫಿಡೆಂಟ್ ಆಗಿದ್ದರೆಂಬ ಮೊದಲ ಕುರುಹೂ ಸಿಕ್ಕಿತ್ತು. ನಾವು ಊಹಿಸಿದ ನೂರಕ್ಕೆ ಬದಲಾಗಿ ಅರ್ಹ ಅಪ್ಲಿಕೇಷನ್ನುಗಳ ಸಂಖ್ಯೆ ಮುನ್ನೂರರ ಸಂಖ್ಯೆಯನ್ನು ದಾಟಿತ್ತು..! ನಾನು ಜಾನಕಿಯ ಮುಖ ನೋಡಿದ್ದೆ, ಈಗೇನು ಮಾಡುವುದು ಎನ್ನುತ್ತ.. ಜಾನಕಿಯ ಚಿಂತನೆಯಲ್ಲಿ ಮಾತ್ರ ಯಾವ ಬದಲಾವಣೆಯು ಇದ್ದಂತೆ ಕಾಣಲಿಲ್ಲ.. ಮುನ್ನುರಕ್ಕು ಅನುಮತಿಸುವುದು ಔಟ್ ಅಫ್ ಕ್ವೆಶ್ಚನ್ ಎನ್ನುವ ಹಾಗೆ, ಒಂದರೆಗಳಿಗೆ ಯೋಚಿಸಿ ‘ಲೆಟ್ ಅಸ್ ರೈಸ್ ದ ಕಟಾಫ್ ಹಿಯರ್ ಟು ಸೆವೆಂಟಿ ಪರ್ಸೆಂಟ್ ಅಂಡ್ ಸೀ’ ಅಂದಳು..!

ಸರಿ ಇಬ್ಬರು ಸೇರಿ ಆ ಮುನ್ನೂರು ಅಪ್ಲಿಕೇಶನ್ನುಗಳನ್ನು ಜಾಲಾಡತೊಡಗಿದೆವು, ಎಪ್ಪತ್ತರ ಕಟಾಫ್ ಮಾರ್ಕಿನವನ್ನು ಮಾತ್ರ ತೆಗೆದಿರಿಸುತ್ತ.. ಆದರೆ ಈ ಸುತ್ತಿನ ನಂತರವು ಸುಮಾರು ಇನ್ನೂರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ನಾನು ಮತ್ತೆ ಏನು ಎನ್ನುವಂತೆ ಜಾನಕಿಯ ಮುಖ ದಿಟ್ಟಿಸಿದೆ, ಇನ್ನೂರಕ್ಕೆ ಓಕೆ ಎನ್ನಬಹುದು ಎನ್ನುವ ಎಣಿಕೆಯಲ್ಲಿ..

‘ ಲೆಟ್ ಅಸ್ ರೈಸ್ ದ ಬಾರ್.. ವೀ ವಿಲ್ ಮೇಕಿಟ್ ಸೆವೆಂಟಿಫೈವ್..’ ಎಂದವಳೆ ಅರ್ಧದಷ್ಟನ್ನು ಎತ್ತಿಕೊಂಡು ಮತ್ತೆ ಫಿಲ್ಟರ್ ಮಾಡತೊಡಗಿದಳು.. ನಾನು ಮಿಕ್ಕ ಪೇಪರುಗಳತ್ತ ಗಮನ ಹರಿಸಿದೆ.. ಕೊನೆಗೆ ಈ ಸುತ್ತು ಮುಗಿದ ಮೇಲೂ ನೂರ ಮೂವ್ವತ್ತು ಅಪ್ಲಿಕೇಶನ್ನುಗಳು ಉಳಿದುಕೊಂಡವು ಕಣದಲ್ಲಿ.. ಇನ್ನೇನು ಎಂಭತ್ತಕ್ಕೆ ಏರಿಸುವಳೇನೊ ಎಂದುಕೊಳ್ಳುವಾಗಲೆ, ‘ ಲೆಟ್ ಅಸ್ ಕೀಪ್ ಅಟ್ ದಿಸ್ .. ರಿಟನ್ ಟೆಸ್ಟಿಗೆ ಬಿಡೋಣ..’ ಎಂದಳು.

ನನಗೆ ನಾವಿಬ್ಬರೆ ಇರುವ ಕಾರಣ ನಿಭಾಯಿಸುವುದು ಹೇಗೆ ಎನ್ನುವ ಅನುಮಾನವೂ ಇತ್ತು.. ನಾನದನ್ನು ಕೇಳುವ ಮೊದಲೆ ಫಟ್ಟನೆ ಉತ್ತರ ಬಂತು..’ಇಲ್ಲಿನ ಟ್ರೆಂಡ್ ನೋಡಿದರೆ ರಿಟನ್ ಟೆಸ್ಟ್ ಪಾಸ್ ಆಗೋರು ಜಾಸ್ತಿ ಅಂತ ಕಾಣುತ್ತೆ.. ನಾವು ಗ್ರೂಪ್ ಡಿಸ್ಕಷನ್ನಿನಲ್ಲಿ ಐದರ ಬದಲು ಎಂಟು ಮಂದಿಗೆ ಏರಿಸೋಣ.. ಆಗ ಕನಿಷ್ಠ ಎಂಟು ಟೀಮ್ ಆಗುತ್ತಾರೆ.. ತೀರಾ ಟೈಮ್ ಲಿಮಿಟ್ ಆದರೆ ನಾವಿಬ್ಬರು ಬೇರೆ ಬೇರೆಯಾಗಿ ಗ್ರೂಪ್ ಡಿಸ್ಕಷನ್ ಕಂಡಕ್ಟ್ ಮಾಡೋಣ..’ ಎಂದಳು.. ಎಲ್ಲ ಸನ್ನಿವೇಶಕ್ಕು ಅವಳಲ್ಲಿ ಸಿದ್ದ ಉತ್ತರವೊಂದು ತಟ್ಟನೆ ಹೊರಬರುತ್ತಿರುವುದು ಅನುಭವದ ದೆಸೆಯಿಂದಲೊ, ಅಥವಾ ಅವಳ ಚುರುಕು ಬುದ್ಧಿಯ ಚಾಣಾಕ್ಷತೆಯ ಕಾರಣದಿಂದಲೊ ಅರಿವಾಗದಿದ್ದರು ಅವಳ ಕುರಿತಾದ ಗೌರವವನ್ನು ಹೆಚ್ಚಿಸಲು ಅದು ಕಾರಣವಾಯ್ತೆಂಬುದು ಮಾತ್ರ ಮನವರಿಕೆಯಾಗಿತ್ತು.

ಸದ್ಯ ಅದು ಮುಗಿಯಿತೆಂದು ನಾನಂದುಕೊಳ್ಳುತ್ತಿದ್ದರೆ ಅದು ಮುಗಿಯದ ಕಥೆಯೆಂಬಂತೆ ಹೊಸ ರೂಪ ಪಡೆದುಕೊಂಡಿತ್ತು – ರಿಟನ್ ಟೆಸ್ಟ್ ಮುಗಿದ ನಂತರ… ನಮ್ಮೆಣಿಕೆಯಂತೆ ಅರ್ಧದಷ್ಟಾದರು ಫಿಲ್ಟರ್ ಆದರೆ ಸುಮಾರು ಅರವತ್ತೈದು ಮಂದಿ ಕಣದಲ್ಲುಳಿಯಬೇಕಿತ್ತು ಗ್ರೂಪ್ ಡಿಸ್ಕಷನ್ನಿಗೆ.. ನಮ್ಮ ಕಟಾಫ್ ಸ್ಕೋರಾದ ಎಪ್ಪತ್ತನ್ನು ಪರಿಗಣಿಸಿದರೆ ಸುಮಾರು ನೂರು ಮಂದಿ ಪಾಸಾಗಿ ಮುಂದಿನ ಹಂತಕ್ಕೆ ಬರುವ ಸೂಚನೆ ಸಿಕ್ಕಿತು.. ಆದರೆ ಈಗಾಗಲೆ ಇದನ್ನು ನಿಭಾಯಿಸುವ ಟ್ರಿಕ್ ಗೊತ್ತಿದ್ದ ಕಾರಣ ಯಥಾರೀತಿ ಕಟಾಫ್ ಸ್ಕೋರನ್ನು ಎಂಭತ್ತೆರಡರ ತನಕ ಏರಿಸಿದಾಗ ಮಿಕ್ಕುಳಿದವರ ಸಂಖ್ಯೆ ಅರವತ್ತನಾಲ್ಕಕ್ಕೆ ಬಂದಿತ್ತು.. ಇದೆಲ್ಲ ಮಾಡುವಾಗಲೆ ನನಗೆ ಈ ಕಾಲೇಜಿನ ಬಗೆ ಗೌರವಾದರಗಳು ಹೆಚ್ಚಾಗತೊಡಗಿತ್ತು.. ಇಲ್ಲೇನೊ ವಿಶೇಷವಿದೆ, ಈ ರೀತಿ ಬರಿಯ ಉತ್ಕೃಷ್ಟ ಸರಕನ್ನೆ ಉತ್ಪಾದಿಸಬೇಕೆಂದರೆ.. ಪ್ರಿನ್ಸಿಪಾಲ್ ಅಂದಂತೆ ಇದೊಂದು ಮಾಸ್ ಪ್ರೊಡಕ್ಷನ್ ಆಫ್ ಕ್ವಾಲಿಟಿ ಎಜುಕೇಷನ್ನೆ ಇರಬಹುದೆನಿಸತೊಡಗಿತು.

ಜಾನಕಿ ಮೊದಲೆ ಹೇಳಿದ್ದಂತೆ ಆ ಗುಂಪಿನಿಂದ ಮೊದಲ ಹದಿನಾರು ಮಂದಿಯನ್ನು ಎಂಟರ ಎರಡು ಗುಂಪಾಗಿಸಿದಳು..’ ನಾವೀ ಎರಡು ಗುಂಪಿನಲ್ಲೆ ಇಲ್ಲಿರುವವರಲ್ಲಿ ಹೆಚ್ಚು ಬುದ್ದಿವಂತರನ್ನು ಕಾಣುವ ಸಾಧ್ಯತೆ ಇರುವುದು..ಒಂದು ರೀತಿ ಟಾಪ್ ಸಿಕ್ಸ್ ಟೀನ್ ಅನ್ನು.. ಇವೆರಡು ಗುಂಪನ್ನು ನಾವಿಬ್ಬರು ಸೇರಿ ಒಟ್ಟಾಗಿಯೆ ಗ್ರೂಪ್ ಡಿಸ್ಕಷನ್ ಮಾಡಿಸೋಣ.. ಜೊತೆಗೆ ಪ್ರತಿ ಗುಂಪಿನಿಂದ ಇಬ್ಬರ ಬದಲು ನಾಲ್ವರನ್ನ ಆರಿಸಿಕೊಳ್ಳೋಣ.. ಅಲ್ಲಿಗೆ ಇಲ್ಲೆ ಎಂಟು ಜನ ಸಿಕ್ಕಿಬಿಡುತ್ತಾರೆ’

ಹಾಗೆ ಮುಂದುವರೆದು ಮಿಕ್ಕ ಆರು ತಂಡಗಳನ್ನು ತೋರಿಸುತ್ತ, ‘ ಇವು ಬಾಟಮ್ ಫಾರ್ಟಿ ಎಯ್ಟ್… ಇವರನ್ನು ಒಟ್ಟಾಗಿ ಮಾಡಬೇಕೆಂದರೆ ಒಂದು ದಿನದಲ್ಲಿ ಮುಗಿಸಲು ಆಗುವುದಿಲ್ಲ.. ನಾವಿಬ್ಬರು ಒಬ್ಬೊಬ್ಬರೆ ಬೇರೆ ಬೇರೆ ರೂಮಿನಲ್ಲಿ ನಡೆಸಿದರೆ ಇಬ್ಬರು ಮೂರು ಮೂರನ್ನು ಹಂಚಿಕೊಳ್ಳಬಹುದು.. ಒಟ್ಟು ಐದು ಸೆಶನ್ ಆದಂತೆ ಆಗುತ್ತದೆ.. ಸಂಜೆ ಒಳಗೆ ಮುಗಿಸಿಬಿಡಬಹುದು..’ ಎಂದಳು..

ಜಾನಕಿಯ ಯೋಜನೆಯಂತೆ ಮೊದಲೆರಡು ಗುಂಪಿನಿಂದ ನಾಲಕ್ಕು ಮಂದಿಯಂತೆ ಒಟ್ಟು ಎಂಟು ಅಭ್ಯರ್ಥಿಗಳನ್ನು ಆರಿಸಲೇಬೇಕಾಯ್ತು.. ನಿಜಕ್ಕು ಗುಂಪಿನಲ್ಲಿರುವ ಪ್ರತಿಯೊಬ್ಬರು ಅದೆಷ್ಟು ಸಮರ್ಥ ವಾಕ್ಪಟುಗಳಾಗಿದ್ದರೆಂದರೆ ಎಂಟರಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂದು ನಿರ್ಧರಿಸಲೆ ಕಷ್ಟವಾಯ್ತು. ತೀರ ಸೂಕ್ಷ್ಮ ಸ್ತರದಲ್ಲಿ ಬೇರ್ಪಡಿಸಲಷ್ಟೆ ಸಾಧ್ಯವಾಗಿ ನನಗೆ ಮತ್ತೆ ಮತ್ತೆ ಆ ಪ್ರಿನ್ಸಿಪಾಲರ ನುಡಿಗಳನ್ನು ನೆನಪಿಸತೊಡಗಿತ್ತು. ಆದರೆ ಮಿಕ್ಕ ಆರು ಗುಂಪುಗಳಲ್ಲಿ ಇಷ್ಟು ತೊಡಕಿರಲಿಲ್ಲ.. ಪ್ರತಿ ಗುಂಪಿನಿಂದ ಇಬ್ಬಿಬ್ಬರಂತೆ ಮಿಕ್ಕ ಹನ್ನೆರಡು ಆಯ್ಕೆಗಳನ್ನು ಮಾಡಿ ಮುಗಿಸಿದಾಗ ಒಟ್ಟು ಇಪ್ಪತ್ತು ಅಭ್ಯರ್ಥಿಗಳು ಕೊನೆಯ ರೌಂಡಿಗೆ ಉಳಿದುಕೊಂಡಿದ್ದವರು.. ಹಿಂದಿನ ಕಾಲೇಜಿನ ಫಲಿತಾಂಶದ ಮಟ್ಟಕ್ಕೆ ಆ ಸಂಖ್ಯೆ ಬಂದು ನಿಂತಾಗ ನಾವಿಬ್ವರು ನಿರಾಳದಿಂದ ನಿಟ್ಟುಸಿರುಬಿಟ್ಟೆವು..

‘ ನನಗೇನೊ ಈ ಇಪ್ಪತ್ತರಲ್ಲಿ ಇಬ್ಬರನ್ನು ಮಾತ್ರ ತೆಗೆದುಕೊಳ್ಳುವುದು ಕಷ್ಟ ಅನಿಸುತ್ತಿದೆ.. ಇದುವರೆಗಿನ ಗುಣಮಟ್ಟ ನೋಡಿದರೆ ಕನಿಷ್ಟ ಹತ್ತು ಜನರಾದರು ಇಂಟರ್ವ್ಯೂವ್ ಚೆನ್ನಾಗಿ ಮಾಡುತ್ತಾರೆ.. ಅದು ಹೋಲಿಕೆಯ ಮಟ್ಟದಲ್ಲಿ ಫಿಲ್ಟರ್ ಮಾಡುವುದರಿಂದ.. ಅವರಲ್ಲಿ ಇಬ್ಬರನ್ನು ಮಾತ್ರ ಆರಿಸುವುದೆಂದರೆ ನಿಜಕ್ಕು ಕಷ್ಟ ಮತ್ತು ನಾವು ಒಳ್ಳೆಯ ಟ್ಯಾಲೆಂಟನ್ನು ಕಳೆದುಕೊಳ್ಳುತ್ತೇವೇನೊ ಎಂದು ಕೂಡ ಅನಿಸುತ್ತಿದೆ..’ ನನ್ನ ಅನುಮಾನಕ್ಕೊಂದು ರೂಪ ಕೊಡುತ್ತ ಜಾನಕಿಗೆ ಹೇಳಿದೆ, ಅವಳ ಅನಿಸಿಕೆಯೇನಿರಬಹುದೆಂದು ಅರಿಯಲು..

‘ ಹೌದು ನನಗೂ ಹಾಗೆ ಅನಿಸುತ್ತಿದೆ… ಆದರೆ ಹತ್ತೆಲ್ಲ ಆಗದ ಹೋಗದ ಮಾತು.. ಹೆಚ್ಚೆಂದರೆ ಐದಾರು ಮಾತ್ರ ಸಾಧ್ಯ.. ನಾವಿದುವರೆವಿಗು ಮೂರಕ್ಕಿಂತ ಹೆಚ್ಚು ಯಾವ ಕಾಲೇಜಲ್ಲು ತೆಗೆದುಕೊಂಡಿಲ್ಲ. ಐದಾರು ತೆಗೆದುಕೊಂಡೆವೆಂದರೆ ಇದೆ ಮೊದಲ ಬಾರಿಯ ದಾಖಲೆಯಾಗುತ್ತದೆ..ಏನಿವೇ ಲೆಟ್ ಅಸ್ ಟಾರ್ಗೆಟ್ ಅಟ್ ಲೀಸ್ಟ್ ಫೋರ್’ ಎಂದಳು ಅವಳು ನನ್ನ ಧಾಟಿಯಲ್ಲೆ ಚಿಂತಿಸುತ್ತ..’ ಸೋಮವಾರ ಬೆಳಗಿನಿಂದ ಇಂಟರ್ವ್ಯೂವ್ ಇರುತ್ತಲ್ಲ ನೋಡೋಣ.. ಸೂರ್ಯಪ್ರಕಾಶ್ ಕೂಡ ಕೂರ್ತೀನಿ ಅಂತ ಹೇಳಿದಾರೆ ನೀವಿಬ್ಬರು ಹತ್ತತ್ತು ಜನರನ್ನ ಕವರ್ ಮಾಡಿದರೆ ಅವತ್ತೆ ಎಲ್ಲಾ ಮುಗಿಸಿಬಿಡಬಹುದು’ ಎಂದಳು..

‘ಸರಿ ..ಮಿಕ್ಕಿದ್ದು ಸೋಮವಾರ ನೋಡೋಣ ಥ್ಯಾಂಕ್ಸ್ ..’ ಎಂದವನೆ ಅವತ್ತಿನ ಮಾತಿಗೆ ಮುಕ್ತಾಯ ಹಾಡಿ ಮನೆಯತ್ತ ನಡೆದಿದ್ದೆ..

***************

ನನಗೇಕೊ ಸೋಮವಾರ ಎಂದು ಬಂದೀತೊ ಅನ್ನುವ ಕುತೂಹಲ ವಾರದ ಕೊನೆಯಲ್ಲು ಕಾಡತೊಡಗಿತ್ತು.. ಆ ಕಾಲೇಜು ಹುಟ್ಟಿಸಿದ ನಿರೀಕ್ಷೆಗಳಿಂದಾಗಿ ಇಂಟರ್ವ್ಯೂವಿನಲ್ಲಿ ಬರಿ ಪ್ರಚಂಡರೆ ಕಾಣುತ್ತಾರೆನಿಸಿ ಸ್ವಲ್ಪ ಹೆಚ್ಚಿನ ಕುತೂಹಲವೆ ಆಗಿತ್ತು.. ಇಂಟರ್ವ್ಯೂವಿಗೆ ಬಂದು ಕೂತಾಗ ಕ್ಯಾಂಡಿಡೇಟುಗಳಿಗಿಂತ ನಾನೆ ಜಾಸ್ತಿ ಎಗ್ಸೈಟ್ ಆಗಿರುವೆನೇನೊ ಎನಿಸಿ ನಗುವು ಬಂದಿತ್ತು.. ನಿಗದಿತ ಸಮಯಕ್ಕೆ ಸೂರ್ಯಪ್ರಕಾಶರ ಜತೆಗೂಡಿ ಪಕ್ಕಪಕ್ಕದ ರೂಮಿನಲ್ಲೆ ಇಂಟರ್ವ್ಯೂವ್ ಆರಂಭಿಸಿಬಿಟ್ಟೆವು. ಜಾನಕಿ ಸೆಲೆಕ್ಟ್ ಆದವರ ಜೊತೆ ಮಾತ್ರ ಕೊನೆಯ ಸುತ್ತು ಮಾಡ್ಬೇಕಾದ್ದರಿಂದ ಅವಳು ಕೂರುವ ಅಗತ್ಯ ಇರಲಿಲ್ಲ..

ಆದರೆ ಇಂಟರ್ವ್ಯೂವ್ ಆರಂಭವಾದಂತೆ ನನಗೇಕೊ ಸ್ವಲ್ಪ ಇರಿಸುಮುರಿಸೆನಿಸತೊಡಗಿತು.. ಮೊದಲು ಬಂದದ್ದು ಗುಂಪಿನಲ್ಲಿ ಮೊದಲು ಬಂದ ಹುಡುಗಿ.. ತನ್ನ ಅದ್ಭುತವೆನ್ನುವ ಕಾನ್ವೆಂಟ್ ಇಂಗ್ಲೀಷಿನಲ್ಲಿ ತನ್ನ ಪರಿಚಯ ಆರಂಭಿಸಿದ ಹುಡುಗಿ ಟೆಕ್ನಿಕಲ್ ರೌಂಡಿಗೆ ಬರುತ್ತಿದ್ದಂತೆ ಯಾಕೊ ಏಕಾಏಕಿ ಮಂಕಾಗಿಬಿಟ್ಟಳು.. ನಾನು ಕೇಳಿದ್ದ ಪ್ರಶ್ನೆಗಳೂ ಬಹಳ ಬೇಸಿಕ್ ಸ್ತರದ್ದು.. ಎಂಜಿನಿಯರಿಂಗಿನ ಮೊದಲ ವರ್ಷದಲ್ಲಿ ಕಲಿಸುವ ಸರಳ ಮೂಲಭೂತ ಸಿದ್ದಾಂತಗಳು ಮತ್ತದರ ಪ್ರಾಯೋಗಿಕ ಬಳಕೆಯ ಕುರಿತದ್ದು.. ಅದು ಗೊತ್ತಿರದೆ ಯಾವ ವಿಧ್ಯಾರ್ಥಿಯು ಮುಂದಿನ ಸೆಮಿಸ್ಟರಿನಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ.. ಅಷ್ಟೊಂದು ಮೂಲಭೂತ ಮಟ್ಟದ ಸರಳ ಗ್ರಹಿಕೆಗಳು.. ಆದರೆ ಒಂದಕ್ಕು ನೆಟ್ಟಗೆ ಉತ್ತರ ಹೇಳಲು ಬಾರದೆ ತಡಬಡಾಯಿಸಿದ್ದು ಕಂಡು ನನಗೆ ಅಚ್ಚರಿಯೆ ಆಯ್ತು.. ಬಹುಶಃ ಇಂಟರ್ವ್ಯೂವ್ ಭಯದಿಂದ ಹಾಗಾಗಿರಬಹುದೇನೊ ಅನಿಸಿ ಸ್ವಲ್ಪ ಧೈರ್ಯ ತರಿಸುವ ಉತ್ತೇಜಕ ಮಾತನಾಡಿದರು ಪ್ರಯೋಜನವಾಗಲಿಲ್ಲ.. ವಾತಾವರಣ ತಿಳಿಯಾಗಲೆಂದು ಸಣ್ಣದಾಗಿ ಜೋಕ್ ಮಾಡಿದರು ಉಪಯೋಗಕ್ಕೆ ಬರಲಿಲ್ಲ.. ಸರಿ ಇನ್ನು ನಾನೇನು ಮಾಡಲು ಸಾಧ್ಯವಿಲ್ಲವೆನಿಸಿ ಅರ್ಧಗಂಟೆಗೆ ಇಂಟರ್ವ್ಯೂವ್ ಮುಗಿಸಿ ಕಳಿಸಿಕೊಟ್ಟೆ, ಇದ್ಯಾವುದೊ ಸ್ಪೆಷಲ್ ಕೇಸ್ ಇರಬಹುದೆಂದು ತೀರ್ಮಾನಿಸಿ..

ನನ್ನೆಣಿಕೆ ಸುಳ್ಳಾಗುವಂತೆ ಎರಡನೆ ಮತ್ತು ಮೂರನೆಯ ಕೇಸು ಅದೇ ರೀತಿಯ ಫಲಿತದಲ್ಲಿ ಪರ್ಯಾವಸಾನವಾಗತೊಡಗಿದಾಗ ನನಗೇಕೊ ದಿಗಿಲಾಯ್ತು, ನಾನು ಇಂಟರ್ವ್ಯೂವ್ ಮಾಡುತ್ತಿರುವ ಬಗೆಯಲ್ಲೆ ಕುಂದಿರಬಹುದೆ ಎಂದು.. ಆ ಅನುಮಾನ ಬಂದಾಗ ಯಾವುದಕ್ಕು ಪರಿಶೀಲಿಸಿ ಬಿಡುವುದು ವಾಸಿ ಎನಿಸಿ ಪಕ್ಕದ ರೂಮಿನಲ್ಲಿದ್ದ ಸೂರ್ಯಪ್ರಕಾಶರನ್ನು ಕಾಫಿಯ ನೆಪದಲ್ಲಿ ಹೊರಗೆ ಕರೆದು ನನ್ನ ದಿಗಿಲನ್ನು ಹಂಚಿಕೊಂಡೆ..

‘ ಅಯ್ಯೊ..ನಾನು ಇದನ್ನೆ ಹೇಳಬೇಕೆಂದುಕೊಂಡೆ.. ಇದುವರೆಗು ಮೂರು ಕ್ಯಾಂಡಿಡೇಟ್ಸನ್ನ ನೋಡಿದೆ.. ಒಬ್ಬರೂ ಸುಖವಿಲ್ಲ. ಜಾನಕಿ ಹೇಳಿದ ರೀತಿ ನೋಡಿ ಏನೊ ಘಟಾನುಘಟಿಗಳಿರಬಹುದು ಅಂದುಕೊಂಡೆ.. ಆದರೆ ಇದುವರೆವಿಗು ಐ ಯಾಮ್ ವೆರಿ ವೆರಿ ಡಿಸಪಾಯಿಂಟೆಡ್..’ ಅಂದಾಗ ‘ ಸದ್ಯ.. ಇದು ನನ್ನೊಬ್ಬನ ಅನುಭವ ಮಾತ್ರವಲ್ಲ’ ಅನಿಸಿ ಸಮಾಧಾನವಾಗಿತ್ತು.. ಆದರು ಉಳಿದೆಲ್ಲ ರೌಂಡುಗಳಲ್ಲಿ ಇದೇ ಜನರು ಅದು ಹೇಗೆ ಅಷ್ಟು ಒಳ್ಳೆಯ ಫಲಿತಾಂಶ ನೀಡಲು ಸಾಧ್ಯವಾಯಿತೆಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಕಾಡತೊಡಗಿತು.. ಯಾವುದಕ್ಕು ಇದರ ತುದಿಬುಡ ಸೋಸುವುದೆ ಒಳಿತೆನಿಸಿ ಸೂರ್ಯಪ್ರಕಾಶರಿಗೊಂದು ಐಡಿಯಾ ಹೇಳಿದೆ – ಮುಂದಿನ ಅಭ್ಯರ್ಥಿಯನ್ನು ಇಬ್ಬರೂ ಈ ಕುರಿತು ಉಪಾಯವಾಗಿ ಪ್ರಶ್ನಿಸುವುದು ಎಂದು..

ಮುಂದಿನ ಅಭ್ಯರ್ಥಿ ಬಂದಾಗ ಆರಂಭದಲ್ಲೆ ಅವನ ಪರಿಚಯದ ಹೊತ್ತಿನಲ್ಲೆ ಲೋಕಾಭಿರಾಮವಾಗಿ ಮಾತಿಗಿಳಿಯುವಂತೆ, ಅವನ ಕಾಲೇಜಿನ ರಿಟನ್ ಟೆಸ್ಟ್ , ಸಮೂಹ ಚರ್ಚೆಗಳಲ್ಲಿ ನೋಡಿದ ಅದ್ಭುತ ಫಲಿತಾಂಶಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸುತ್ತ ಅದು ಹೇಗೆ ಇಡೀ ಕಾಲೇಜಿನಲ್ಲಿ ಆ ಮಟ್ಟದ ಸಾಧನೆ ಸಾಧ್ಯವಾಯಿತು? ಅದಕ್ಕೆ ಯಾವ ಬಗೆ ಸಿದ್ದತೆ ಮಾಡಿಕೊಳ್ಳುವಿರಿ ಎಂದು ಸಾಂಧರ್ಭಿಕವಾಗಿಯೆಂಬಂತೆ ಕೇಳಿದೆ.. ನನ್ನ ಮೆಚ್ಚುಗೆಯಿಂದಲೆ ಅರ್ಧ ಹೆಮ್ಮೆಯಿಂದ ಉಬ್ಬಿ ಹೋಗಿದ್ದ ಆವನು ಆ ಗತ್ತಿನಲ್ಲೆ ಹೇಗೆ ಕೊನೆಯ ವರ್ಷದ ಆರಂಭದಿಂದಲೆ ಎಲ್ಲಾ ವಿದ್ಯಾರ್ಥಿಗಳನ್ನು ರಿಟನ್ ಟೆಸ್ಟಿಗೆ , ಸಮೂಹ ಚರ್ಚೆಗೆ ತಯಾರಾಗಿಸುತ್ತಾರೆಂದು ವಿವರಿಸತೊಡಗಿದೊಡನೆ ನನಗೆಲ್ಲ ಅರ್ಥವಾಗಿ ಹೋಯ್ತು.. ಕೊನೆಯ ವರ್ಷ ಪೂರ್ತಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವಾರದ ಕೊನೆಯ ಎರಡು ದಿನಗಳಲ್ಲಿ ದಿನಕ್ಕೊಂದೊಂದು ‘ಮಾಕ್ ರಿಟನ್ ಟೆಸ್ಟ್’ ಮತ್ತು ‘ಮಾಕ್ ಗ್ರೂಪ್ ಡಿಸ್ಕಷನ್’ ನಲ್ಲಿ ಭಾಗವಹಿಸಬೇಕು.. ಹೀಗೆ ವರ್ಷ ಪೂರ್ತಿ ರಿಟನ್ ಟೆಸ್ಟ್, ಗ್ರೂಪ್ ಡಿಸ್ಕಷನ್ನಿನಲ್ಲಿ ತೊಡಗಿಸಿಕೊಂಡು ಅಭ್ಯಾಸವಾಗಿ ಕಂಪನಿಗಳು ನಡೆಸುವ ಪರೀಕ್ಷೆಗಳು ತೀರಾ ಹೊಸದರಂತೆ ಅನಿಸುವುದೆ ಇಲ್ಲ.. 

ಆದರೂ ಅದು ಸುಲಭವಾಗಿಯಂತು ಇರುವುದಿಲ್ಲ.. ಆ ಮಟ್ಟಕ್ಕೆ ಹೇಗೆ ಸಿದ್ದತೆ ಮಾಡಿಕೊಳ್ಳುತ್ತಾರೆ ಅನ್ನುವುದು ಮಾತ್ರ ಗೊತ್ತಾಗಲಿಲ್ಲ.. ಆಗ ಸರಕ್ಕನೆ ಪ್ರಿನ್ಸಿಪಾಲರು ನುಡಿದ ಮಾತೊಂದು ನೆನಪಾದಾಗ ಆ ಪ್ರಶ್ನೆಗೆ ಉತ್ತರವೂ ಸಿಕ್ಕಿಬಿಟ್ಟಿತ್ತು – ‘ವಿದ್ಯಾರ್ಥಿಗಳಿಗೆ ಸೂಕ್ತ ಸಿದ್ದತೆ ಸಿಗಲೆಂದು ದೊಡ್ಡ ದೊಡ್ಡ ಯುನಿವರ್ಸಿಟಿ, ಐಐಟಿ, ಇಂಡಸ್ಟ್ರಿ ಮತ್ತು ರಿಸರ್ಚ್ ಇನ್ಸ್ ಟಿಟ್ಯೂಟುಗಳ ಪ್ರೊಫೆಸರುಗಳ ಹತ್ತಿರವೆ ಮಾಕ್ ಪೇಪರು ಸೆಟ್ ಮಾಡಿಸಿ ಅದನ್ನೆ ಪ್ರಾಕ್ಟೀಸ್ ಮಾಡಿಸುತ್ತೇವೆ’ ಎಂದಿದ್ದ ಮಾತು. ಆಗ ಅದರ ಆಳ, ಅಗಲ ಅರಿವಾಗಿರಲಿಲ್ಲ, ಈಗರಿವಾಗುತ್ತಿದೆ.. ಕಂಪನಿಗಳಿಂದ ನಾವು ಕೂಡ ಅದೆ ಮೂಲಗಳಿಂದ ಟೆಸ್ಟ್ ಪೇಪರುಗಳನ್ನು ಸಿದ್ದಪಡಿಸುವುದರಿಂದ, ಹೆಚ್ಚು ಕಡಿಮೆ ಅದೇ ಮಟ್ಟದ ಮಾಕ್ ಪೇಪರುಗಳಲ್ಲಿ ಅಭ್ಯಾಸ ಮಾಡಿ ತಯಾರಾಗಿಬಿಡುತ್ತಾರೆ.. ಒಂದು ಸಾರಿ ಪ್ಯಾಟ್ರನ್ ಗೊತ್ತಾಗಿ ಹೋದರೆ, ಅದನ್ನು ಬಿಡಿಸುವ ವಿಧಾನವನ್ನು ಕಲಿತುಬಿಡಬಹುದು.. ಹೀಗಾಗಿ ಟೆಸ್ಟುಗಳು ನೀರು ಕುಡಿದಷ್ಟು ಸುಲಭವಾಗಿಬಿಡುತ್ತವೆ, ಅದಕ್ಕೆ ಬೇಕಾದ ಸೂಕ್ತ ಮೂಲತಃ ಜ್ಞಾನ, ತಿಳುವಳಿಕೆ ಇರದಿದ್ದರು.. ಸಮೂಹ ಚರ್ಚೆಯೂ ಅಷ್ಟೆ.. ವಾರಕ್ಕೆರಡರಲ್ಲಿ ಭಾಗವಹಿಸುತ್ತಿದ್ದರೆ ಎಂತಹ ಪೆದ್ದನು ತುಸುವಾದರು ಮಾತಾಡಲು ಕಲಿತುಬಿಡುತ್ತಾನೆ ಗುಂಪಿನ ಚರ್ಚೆಯಲ್ಲಿ.. ಅದೆಲ್ಲಾ ಒಳ್ಳೆಯದೇನೊ ಸರೀ.. ಆದರೆ ಅದೆಲ್ಲದರ ತಳಹದಿಯಾಗಿರಬೇಕಾದ ಕಲಿಕೆಯ ಅಡಿಪಾಯವೆ ಸರಿಯಾಗಿರದಿದ್ದರೆ ಈ ತರಬೇತಿಯಿಂದ ಪ್ರಯೋಜನವಾದರೂ ಏನು ? ಕಲಿಕೆಯ ಬದಲು ಕೆಲಸ ಗಿಟ್ಟಿಸುವ ಸುಲಭ ಗಿಮಿಕ್ ಆಗಿಬಿಡುವುದಿಲ್ಲವೆ ? ಹೇಗೊ ಈ ಗಿಮಿಕ್ಕಿನಿಂದ ಕಂಪನಿಯಲ್ಲಿ ಕೆಲಸ ಸಿಕ್ಕಿಬಿಟ್ಟರು, ಈ ಸತ್ವದ ವ್ಯಕ್ತಿಗಳು ಕೆಲಸದ ನಿಭಾವಣೆಯಲ್ಲು ಅದೇ ಮನಸತ್ತ್ವವನ್ನು ಪ್ರದರ್ಶಿಸಿ ಕಂಪನಿಯ ಹಿನ್ನಡೆಗೆ ಕಾರಣೀಭೂತರಾಗುವುದಿಲ್ಲವೆ ?

ಅದೆಂತೊ ಆ ಫಲಿತಾಂಶದ ಬ್ರಹ್ಮ ರಹಸ್ಯದ ಅರಿವಾದ ಮೇಲೆ ಎಲ್ಲಾ ನಿರಾಳವಾಯ್ತು.. ನಂತರದ ಮಾತಲ್ಲಿ ಸೂರ್ಯಪ್ರಕಾಶರು ಇದೆ ಮಾಹಿತಿಯನ್ನು ಹಂಚಿಕೊಂಡಾಗ ಪರಿಸ್ಥಿತಿಯ ಪೂರ್ಣ ಚಿತ್ರವೆ ಖಚಿತವಾಗಿ ಸಿಕ್ಕಂತಾಗಿ ಪೂರ್ತಿ ನಿರಾಳವಾಯ್ತು.. ಇಂಟರ್ವ್ಯೂವುಗಳೆಲ್ಲ ಮುಗಿದರು ಒಬ್ಬರು ಸೂಕ್ತರಾದವರು ದೊರೆಯಲಿಲ್ಲವಾದಾಗ ಅಚ್ಚರಿಯೇನೂ ಆಗಲಿಲ್ಲ.. ಇದ್ದುದರಲ್ಲಿ ಕೊನೆಯ ಸ್ಥಾನದಲ್ಲಿದ್ದ ಒಂದಿಬ್ಬರು ಮೊದಲ ಸ್ಥಾನಗಳಲ್ಲಿದ್ದ ಮಿಕ್ಕವರಿಗಿಂತ ಸ್ವಲ್ಪ ಚೆನ್ನಾಗಿ ಉತ್ತರಿಸಿದ್ದರಷ್ಟೆ. ಆದರೆ ಹಿಂದಿನ ಕೇರಳ ಕಾಲೇಜಿಗೆ ಹೋಲಿಸಿದರೆ ಅವರ ಅರ್ಧದಷ್ಟು ಹತ್ತಿರವೂ ಇರಲಿಲ್ಲ..ತಮ್ಮ ಪಾಲು ಮುಗಿಸಿ ಬಂದ ಸೂರ್ಯಪ್ರಕಾಶರದು ಇದೆ ತರದ ವರದಿ.. ತೀರಾ ಬೇಕೆ ಬೇಕೆಂದರೆ ಕೊನೆಯ ಕ್ಯಾಂಡಿಡೇಟ್ ಒಬ್ಬನನ್ನು ಆರಿಸಬಹುದಷ್ಟೆ, ಅದೂ ವಿತ್ ಕಾಂಪ್ರಮೈಸ್ ಅಂದಾಗ ಎಲ್ಲಾ ಒಂದೆ ಮೂಸೆಯ ಸರಕುಗಳು ಎಂದು ಮತ್ತಷ್ಟು ಸ್ಪಷ್ಟವಾಗಿತ್ತು..

ಬೆಳಗಿನಿಂದ ಬಿಜಿಯಾಗಿದ್ದ ಜಾನಕಿಗೆ ಸಂಜೆಯಾಗುತ್ತಿದ್ದಂತೆ ಒಬ್ಬರನ್ನು ಕೂಡ ನಾವು ಅವಳ ಹತ್ತಿರ ಕಳಿಸಲಿಲ್ಲವೆಂದು ಸಂಜೆ ತಟ್ಟನೆ ಜ್ಞಾನೋದಯವಾಗಿ ನಮ್ಮ ರೂಮುಗಳತ್ತ ಓಡಿಬಂದಳು.. ಕಾಫಿಯ ಕಪ್ಪೊಂದನ್ನು ಹಿಡಿದು ಕೂತಿದ್ದ ನಮ್ಮಿಬ್ಬರನ್ನು ಒಂದೆ ಬಾರಿಗೆ ದಿಟ್ಟಿಸುತ್ತಾ, ‘ಹೌ ಮೆನಿ ?’ ಎಂದಳು, ನಾವು ಆರೆನ್ನುತ್ತೇವೊ, ಹತ್ತೆನ್ನುತ್ತೇವೊ ಎನ್ನುವ ಜಿಜ್ಞಾಸೆಯಲ್ಲಿ..

ನಾನು ಸೂರ್ಯಪ್ರಕಾಶರತ್ತ ಒಮ್ಮೆ ನೋಡಿ, ‘ ನನ್ …ಜಸ್ಟ್ ಜೀರೋ’ಎಂದೆ.. ಅವಳು ಅದನ್ನು ಹಾಸ್ಯವಲ್ಲ ನಿಜವೆಂದು ಅರಿಯಲೆ ಕೆಲವು ಹೊತ್ತು ಹಿಡಿಯಿತು.. ಒಂದಷ್ಟು ಗಳಿಗೆಯ ಪ್ರಶ್ನೋತ್ತರದ ನಂತರ ನಾನು ಕಂಡುಕೊಂಡ ಇಡೀ ಮಾಹಿತಿಯನ್ನು ಅವಳೊಡನೆ ಹಂಚಿಕೊಂಡೆ.. ಸೂರ್ಯಪ್ರಕಾಶರ ವರದಿಯನ್ನು ಜತೆ ಸೇರಿಸಿ ನೋಡಿದವಳಿಗೆ ನಾವು ಹೇಳುತ್ತಿದ್ದುದನ್ನು ನಂಬಲೆ ಕಷ್ಟವಾಗಿತ್ತು.. ಐದಾರು ಬೇಡ , ಒಂದೆರಡಾದರೂ ಬೇಡವೆ ? ಎಂದವಳ ತರ್ಕ..

‘ ನೋ.. ನಾವು ಒಂದೆರಡನ್ನಾದರು ಆರಿಸದೆ ಇರುವಂತಿಲ್ಲ.. ವೀ ವಿಲ್ ಲೂಸ್ ಟ್ರಸ್ಟ್ ಇನ್ ದಟ್ ಕಾಲೇಜ್ ಅಂಡ್ ಸ್ಟುಡೆಂಟ್ಸ್.. ಒಂದಿಬ್ಬರನ್ನಾದರು ಆರಿಸುವ ಸಾಧ್ಯತೆಯಿಲ್ಲವೆ , ನೋಡಿ..’ ಎಂದಳು

‘ನಮ್ಮ ಮಿಕ್ಕ ಅಭ್ಯರ್ಥಿಗಳ ಮಟ್ಟಕ್ಕೆ ಹೋಲಿಸಿದರೆ ಇವರು ಅರ್ಧಕ್ಕು ಬರುವುದಿಲ್ಲ ಜಾನಕಿ.. ಇಟ್ ವಿಲ್ ಬೀ ಯೆ ಬಿಗ್ ಕಾಂಪ್ರೊಮೈಸ್.. ಆಲ್ಸೊ ಇಂಜಸ್ಟೀಸ್ ಟು ದ ಕ್ಯಾಂಡಿಡೇಟ್ಸ್ ವೀ ಡ್ರಾಪ್ಡ್ ಬಿಫೋರ್ ‘ ಎಂದೆ ನಾನು ಕೇರಳ ಕಾಲೇಜಿನಲ್ಲಿ ಪರಿಗಣಿಸದೆ ಬಿಟ್ಟುಬಿಟ್ಟವರ ಕೇಸನ್ನು ನೆನೆಯುತ್ತ… ಈಗಲೂ ಏನಿಲ್ಲ ಅವರನ್ನೆ ಆರಿಸಿಕೊಳ್ಳಬಹುದು, ಇವರ ಬದಲಿಗೆ ಎಂದುಕೊಳ್ಳುತ್ತ..

ಸೂರ್ಯಪ್ರಕಾಶರು ಅದನ್ನೆ ಅನುಮೋದಿಸುತ್ತ, ‘ ಸುಮಾರಾಗಿರುವವರು ಸಹ ಬಾಟಂ ಫೈವ್.. ನನ್ನ ಕೇಳಿದರೆ.. ಈ ಕಾಲೇಜಿಂದ ಯಾರನ್ನೂ ಆರಿಸದಿರುವುದೆ ವಾಸಿ.. ವೀ ಶುಡ್ ಸೆಂಡ್ ಎ ಸ್ಟ್ರಾಂಗ್ ಮೆಸೇಜ್… ಇಲ್ಲದಿದ್ದರೆ ಅವರು ಹಿಡಿದ ಹಾದಿಯಲ್ಲಿರುವ ತಪ್ಪು ಅವರಿಗೆ ಗೊತ್ತಾಗುವುದಿಲ್ಲ… ನಾನಂತು ಯಾರನ್ನು ರೆಕಮಂಡ್ ಮಾಡುವುದಿಲ್ಲ ನನ್ನ ಗುಂಪಿನಿಂದ’ ಎಂದವರೆ ಮಾತು ಮುಗಿಸಿ ಹೊರಟೆಬಿಟ್ಟರು ಹೊರಡಲವಸರವಿದೆಯೆಂದು ‘ಸಾರಿ’ ಹೇಳಿ.

ಅವರು ಹೋದ ಮೇಲೆ ಅಲ್ಲಿ ಮಿಕ್ಕುಳಿದಿದ್ದು ನಾನು ಮತ್ತು ಜಾನಕಿ ಮಾತ್ರ..

‘ ಐ ಡೋಂಟ್ ವಾಂಟು ಆರ್ಗ್ಯೂ ಏನಿಮೋರ್… ಈ ಕಾಲೇಜಿಗೆ ಒಳ್ಳೆ ಹೆಸರಿದೆ..ನಾವಲ್ಲಿ ಕಾಲಿಟ್ಟಿರುವುದೆ ಇದೆ ಮೊದಲ ಸಾರಿ.. ಏನಾದರೂ ಮಾಡಿ ಯಾರದರು ಇಬ್ಬರನ್ನ ಶಾರ್ಟ್ ಲಿಸ್ಟ್ ಮಾಡಿಕೊಡು ನಿನ್ನ ಗುಂಪಿನಿಂದ.. ಸೂರ್ಯಪ್ರಕಾಶರನ್ನು ನಾನು ಕೇಳಲು ಆಗುವುದಿಲ್ಲ.. ಅವರೊಂದು ಸಾರಿ ಡಿಸಿಶನ್ ತೆಗೆದುಕೊಂಡ ಮೇಲೆ ಮುಗಿಯಿತು ಮತ್ತೆ ಬದಲಿಸುವುದು ಕಷ್ಟ..’ ಎಂದವಳೆ ಸರಕ್ಕನೆ ಎದ್ದು ಹೊರಟು ಹೋದಳು..

ನನ್ನ ಮುಂದಿದ್ದ ಆ ಹತ್ತು ಜನರ ಲಿಸ್ಟನ್ನೆ ನೋಡುತ್ತ ದಿಗ್ಮೂಢನಂತೆ ಕುಳಿತುಬಿಟ್ಟೆ, ಮುಂದೇನು ಮಾಡಬೇಕೆಂದು ಗೊತ್ತಾಗದೆ…!

(ಮುಕ್ತಾಯ)

(PS:Upon searching, found this site giving hints and help to candidates including question papers 😊 http://www.freshersworld.com/interview/campus-interview)

00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)


00488. ಸಪ್ತಮ ಜ್ಞಾನ ಸಂಗಮ (ಮಕ್ಕಳಿಗೆ)
_______________________

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ನಮ್ಮ ಪುರಾಣಾದಿ ಸಂಭವಗಳಿಂದೆಲ್ಲಾ ಗಮನಿಸಿದರೆ ಪ್ರತಿ ಸಂಖ್ಯೆಗೂ ತನ್ನದೆ ಆದ ಮಹತ್ವವಿರುವುದು ಕಾಣುತ್ತದೆ. ಪ್ರತಿ ಸಂಸ್ಖೃತಿಯಲೂ ಇದರ ಪ್ರಭಾವವಿರುವುದು ಕಾಣುವುದಾದರೂ, ಭಾರತೀಯತೆಯಲ್ಲಿ ಇದರ ಬಳಕೆ ತುಸು ಹೆಚ್ಚೆ ಎನ್ನಬೇಕು. ಉದಾಹರಣೆಗೆ : ನವ (ಒಂಬತ್ತು) ದ ಪಥವ್ಹಿಡಿದು ಹೊರಟರೆ – ನವಧಾನ್ಯ, ನವರತ್ನ, ನವರಾತ್ರಿ…. ಹೀಗೆ ಸಾಗುತ್ತದೆ. ಪಂಚಕದಲ್ಲೂ ಹೀಗೆ ಪಂಚಭೂತ, ಪಂಚಾಗ್ನಿ, ಪಂಚಕ್ರಿಯ, ಪಂಚಾವಸ್ಥೆಗಳು ಕಾಣ ಬರುತ್ತವೆ. ಇಲ್ಲಿ ಸಪ್ತದ ಕುರಿತು ಚಿಕ್ಕ ಸಂಕಲನ : ಸಪ್ತರ್ಷಿ, ಸಪ್ತನದಿಗಳಿಂದಿಡಿದು, ನಮ್ಮ ವಾರದ ಏಳು ದಿನಗಳವರೆಗೆ – ಕಟ್ಟಿಕೊಡುವ ಯತ್ನ.

೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭೭

ಸಪ್ತರ್ಷಿಗಳೇಳು ಋಷಿ ಜನರ ಸತ್ಯ
ಮರೀಚೀ ಅತ್ರಿ ಅಂಗೀರಸ ಪುಲಸ್ತ್ಯ
ಪುಲಹ ಕ್ರತು ವಸಿಷ್ಠರ ಸಂಗಮಿಸೆ
ಏಳು ಪ್ರಖ್ಯಾತ ಋಷಿಗಳು ವರಸೆ ||

ಸಪ್ತಮಾತೃಕೆಯರ ದೇವಿ ಮಹಾತ್ಮೆ
ಬ್ರಾಹ್ಮಿ ಮಾಹೇಶ್ವರಿ ಕೌಮಾರಿ ಜಮೆ
ವೈಷ್ಣವಿ ವಾರಾಹಿ ಇಂದ್ರಾಣಿ ಗಣನೆ
ಜತೆ ಸೇರಿ ಚಾಮುಂಡಿ ರಕ್ಕಸ ದಮನೆ ||

ಸೌಂದರ್ಯದತಿಶಯ ರಾಶಿಗಪ್ಸರೆಗಳು
ರಂಭಾ ಮೇನಕೆ ತಿಲೋತ್ತಮ ನಗಲು
ವಾರಕಾಂತೆ ಶಬರಿ ಹಿಡಿಂಬಿ ಸರದಿಗೆ
ಸೈರಂಧ್ರಿ ಒಟ್ಟಿಗೆ ಸುರಸುಂದರಿ ಸುರಗೆ ||

ಸಪುತಾಂಬುಧಿ ಸಪ್ತ ಸಾಗರಗಳೇಳು
ಲವಣ-ಉಪ್ಪಿಗೆ, ಇಕ್ಷು ತಾ ಕಬ್ಬಿನ್ಹಾಲು
ಸುರಾ-ಮದ್ಯದ ಪೂರ, ಕ್ಷೀರಕೆ-ಹಾಲ
ದಧಿ-ಮೊಸರು, ಸರ್ಪಿಸ್ತುಪ್ಪ, ನೀರ್ಜಲ ||

ದೇಹದಲ್ಲಿಯ ಸಪ್ತಧಾತುಗಳು ತಾವು
ರಸ ರಕ್ತ ಮಾಂಸ ಮಜ್ಜೆಗಳ ಫಲಿತವು
ಮೇದಸ್ಸು ಅಸ್ಥಿ ಶುಕ್ರಗಳೆಂಬವರ ಸೇರಿ
ಸಪ್ತ ಧಾತು ವೈಭವ ಹಿಡಿದ ಸರಿದಾರಿ ||

ಅಷ್ಟೇಕೆ ದೂರ ವಾರಗಳೇಳರ ಪ್ರಾಯ
ಭಾನು ಸೋಮ ಮಂಗಳರ ತಿಳಿಕಾಯ
ಬುಧ ಗುರು ಶುಕ್ರ ಗ್ರಹಗಳ ನೆನೆದೆಯ
ಶನಿವಾರ ಜತೆ ಸೇರಲು ಪೂರ್ಣಮಯ ||

– ನಾಗೇಶ ಮೈಸೂರು

00487. ಬೊಕ್ಕ ತಲೆಯ ಬೋಳು ಹುಂಜ ಕೋಳಿ


00487. ಬೊಕ್ಕ ತಲೆಯ ಬೋಳು ಹುಂಜ ಕೋಳಿ
___________________________________

ಅಪರೂಪದ ಬೊಕ್ಕ ಕತ್ತಿನ ಜತೆ ತಲೆ ಮೇಲೆ ಕಿರೀಟ ಹೊತ್ತಂತೆ, ಮುಕುಟವಿಲ್ಲದ ಮಹಾರಾಜನಂತೆ ಬದುಕಿದ ಹುಂಜವೊಂದರ ಕಥಾನಕ. ಪುರಾತನ ಬದುಕಿನ ದರ್ಪ, ಗತ್ತು, ಅಹಂಕಾರಗಳೆ ಹೇರಳವಾಗಿದ್ದ ಗೈರತ್ತಿನಲ್ಲೆ ಬದುಕಿ, ಹಾಗೆಯೆ ಸಾಯುವ ಸುಯೋಗ ಹೊಂದಿದ್ದ ಈ ಕಿರೀಟವಿಲ್ಲದ ಬೀದಿ ಕೋಳಿ ರಾಜನ ವೈಭವದ ವರ್ಣನೆಯಿಲ್ಲಿ ಅನುರಣಿತ. ಬಾಲ್ಯದಲ್ಲಿ ಕಂಡಿದ್ದ ಕೇರಿ, ಬೀದಿಗಳಲ್ಲಿ ಮಹಾರಾಜನಂತೆ ಅಡ್ಡಾಡಿಕೊಂಡಿದ್ದ ಆ ಗತ್ತಿನ ಹುಂಜವೆ ಇದರ ಪ್ರೇರಣೆ!

 

(picture attribution: https://commons.m.wikimedia.org/wiki/User:JLPC) (Photo: JLPC / Wikimedia Commons / CC-BY-SA-3.0) (Via Wikipedia : https://en.m.wikipedia.org/wiki/File:Coq_Cou_nu_FR_2013.jpg)

ಕೋಳಿ ಹುಂಜ ಕಿರೀಟೆ, ನಾ ಸಾಕಿದ ಹಿರಿ ಹೆಂಟೆ
ಬೊಕ್ಕ ಕತ್ತಿನ ಕುಕ್ಕುಟ, ಖಾಲಿ ಎಕ್ಕತ್ತಿನ ಗುಂಟ;
ತಲೆ ಕಿರೀಟಿಯೆ ಕೀರ್ತಿ, ಗತ್ತಿನಲ್ಲಿ ಬರುವ ಭರ್ತಿ
ರಸ್ತೆಗೆಲ್ಲ ಅವನೇ ರಾಜ, ಹೆಣ್ಣು ಕೋಳಿಗವ ಬೀಜ ||

ಮೂರು ಕೇರಿಗೆ ಸುತ್ತಲೆ, ಯಾರಿಲ್ಲ ಬೊಕ್ಕ ಕತ್ತ ತಲೆ
ಎಲ್ಲ ಹೆಂಗಳೆಯರ ಸೆಳೆ, ಹಮ್ಮಿನಲಿ ಕುಕ್ಕುತ ತಲೆ;
ರಾಜನಂಥ ಶೈಲಿ ನಡಿಗೆಗೆ, ಮಂದ ಗಮನ ಬಾಡಿಗೆ
ಎಡ ಬಲ ಪಕ್ಕ ಕೊಕ್ಕರೆ, ಬಿಂಕದ ಸುಪನಾತಿ ಬೇರೆ ||

ನಡೆ ರಾಜ ಗಾಂಭೀರ್ಯ, ಗುಣದಲೇನಲ್ಲ ಆರ್ಯ
ಸಂತೆಗಿಟ್ಟಂತೇ ವೀರ್ಯ, ಪುಕ್ಕಟೆ ಹಂಚೆ ಶೌರ್ಯ;
ರಸ್ತೆಯಲೇ ಅನಾಚಾರ, ನಡೆಸುವವ ಅತ್ಯಾಚಾರ
ಕರೆ ಆಚಾರ ವ್ಯಭಿಚಾರ, ಕೇಳುವವರಾರು ಘೋರ? ||

ಬೀದಿಯೆಲೆಷ್ಟು ಪುಳ್ಳೆಗೆ, ಇವನೇನಾ ಪಿತನೆ ಚಿಳ್ಳೆಗೆ?
ಆದರಿಸದಾ ಕೊಬ್ಬಿನವ, ಹೆಂಟೆಗಳೆ ಸಾಕಿ ಸಲಹ;
ಸುರ ಸುಂದರಾಂಗ ಸಲ್ಲು, ಸಹಿಸಿದವೆತ್ತದೆ ಸೊಲ್ಲು
ಹೆದೆಯೇರಿಸಿರೆ ಎಲ್ಲೆಲ್ಲೂ, ತಡೆದವರಾರು ಗೆಲ್ಲಲು ||

ವಯಸಿನ ಮಾಯಕಾಲ, ಕಳೆದಂತೆ ಚಳಿಮಳೆಗಾಲ
ಮುದಿಯಾದನು ಹುಂಜ, ಕುಗ್ಗಿಸಿದವನಾಟ ಸಹಜ;
ಆದರು ಕೊನೆಯುಸಿರಿನಾ, ಗತ್ತಲ್ಲೆ ಜೀವ ಸವೆಸಿದನ
ಕಾಲದ ಕಾಲಾಗೊವರೆಗೆ, ಚಕ್ರವರ್ತಿ ಬದುಕಿದ ಬಗೆ ||

– ನಾಗೇಶ ಮೈಸೂರು

00486. ಕೆಂಡಕಂಠನ ಬವಣೆ..


00486. ಕೆಂಡಕಂಠನ ಬವಣೆ..
____________________

  
(Picture source wikipedia : https://en.m.wikipedia.org/wiki/File:Montana_16_bg_062406.jpg)

ಮುಚ್ಚಿಟ್ಟಿಕೊಳ್ಳೊ ಮಗನೆ ಒಳಗಿನ ಬೆಂಕಿ
ಎದೆಯನ್ನೆ ಸುಡುತಿದ್ದರು ನಗೆ ನಕ್ಕು
ನೋಡಿ ನಲಿವ ಮನಸುಗಳಷ್ಟು
ನಿರಾಳವಾಗಲಿ ಬರಿ ಬೆಳಕಲ್ಲೆ ಮಿಂದು..

ಸುಡುಸುಡು ಕೆಂಡ ಮನದೊಳ ಕೊಂಡ
ದಾಟಲೆಲ್ಲಿ ಬರಿಗಾಲಿನ ಒದ್ದೆಯಲಿ
ಹಾಯಿಸಬೇಕು ಮನಸಾ ಮನಸಾರೆ
ಸುಟ್ಟವಾಸನೆ ತನ್ನನೆ ಉರುವಲಾಗಿಸುತ..

ನೋಡಲ್ಲ್ಯಾರೊ ಬಿಕ್ಕಿ ಅಳುತ ಕೂತ ಸದ್ದು
ತಪ್ಪು ನಿನದೊ ಪರರದೊ ವ್ಯರ್ಥಾಲಾಪ
ಯಾರದಿರಲೇನು ಕಂಬನಿ, ನಿನ್ನದೆ ಹಸ್ತ
ತೊಡೆಯುವ ಸಖನಾದರೆ ಜಗಕದೆ ಇತ್ಯರ್ಥ..

ನಕ್ಕರೊ ಅತ್ತರೊ ನಟಿಸುವರೊ ಅನುಮಾನ
ಜಗವೆ ನಾಟಕ ಪಾತ್ರಧಾರಿಗಳೆ ತಾನೆ ಎಲ್ಲಾ ?
ನಟನೆಯೆಂದೆ ನಡೆ ಮುಂದೆ, ನಿನ್ನಯ ಪಾಲು
ನಟಿಸುತ ಮುನ್ನಡೆದಂತೆ ತೆರೆದು ಕದ ಮುರಿದು..

ಜೀವದ ಜೊತೆಗೊಂದು ಜೀವ ಅಡಗಿದೆ ಎಲ್ಲೊ
ಕಪಟ ನಾಟಕವಿಲ್ಲದೆ ಚೆಲ್ಲುತೆಲ್ಲ ಅಹಂಭಾವ
ಹುಡುಕಾಟವದು ಜೀವನ, ಶೋಧದಲಿ ಚಿತ್ತ
ಮಗ್ನತೆ ಬದಿಗೆ ಕೂತ ಸರೀ ಜೀವವೇಕೊ ಕಾಣದಲ್ಲ..?

00485. ವರಕವಿಗೊಂದು ನಮನದ ಹೊತ್ತು..


00485. ವರಕವಿಗೊಂದು ನಮನದ ಹೊತ್ತು..
_____________________________

(sampada on 30.jan.2016 https://sampada.net/%E0%B2%B5%E0%B2%B0%E0%B2%95%E0%B2%B5%E0%B2%BF%E0%B2%97%E0%B3%8A%E0%B2%82%E0%B2%A6%E0%B3%81-%E0%B2%A8%E0%B2%AE%E0%B2%A8%E0%B2%A6-%E0%B2%B9%E0%B3%8A%E0%B2%A4%E0%B3%8D%E0%B2%A4%E0%B3%81)

ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ ಕವನಗಳನ್ನು ಓದಲು ಎಲ್ಲರಿಗು ಆಗದಿದ್ದರೂ ಹಾಡುಗಳ ರೂಪದಲ್ಲಿ, ಭಾವಗೀತೆಗಳ ಸಂಕಲದ ರೂಪದಲ್ಲಿ, ಪಾಠ ಪಠ್ಯಗಳ ನಡುವಲ್ಲಿ ಸುಳಿದಾಡಿದ ಗೀತೆಗಳು ಕನ್ನಡಿಗರೆಲ್ಲರಿಗು ಚಿರ ಪರಿಚಿತವೆ. ಧಾರವಾಡದ ಈ ದೈತ್ಯ ಪ್ರತಿಭೆಯಿಂದ ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಪ್ರಶಸ್ತಿಯ ಗರಿ ಸಿಗುವಂತಾಗಿದ್ದು (ನಾಕು ತಂತಿ) ಮಾತ್ರವಲ್ಲದೆ ಕನ್ನಡದ ದೊಡ್ಡ ಹೆಸರುಗಳ ಸಾಲಿನಲ್ಲಿ ಬೇಂದ್ರೆಯವರ ಹೆಸರನ್ನು ಶಾಶ್ವತವಾಗಿ ನಿಲ್ಲಿಸಿ, ದಂತಕಥೆಯಾಗುವಂತೆ ಮಾಡಿದ್ದು ಅವರ ಅದ್ಭುತ ಕಾವ್ಯ ಪ್ರತಿಭೆಗೆ ಕನ್ನಡ ನಾಡು ಸಲ್ಲಿಸಿದ ಅರ್ಹ ಗೌರವ.. ಕಾವ್ಯದ ಹೊರತಾಗಿ ಸಾಹಿತ್ಯದ ಇತರ ಪ್ರಕಾರಗಳಲ್ಲು ಕೈಯಾಡಿಸಿದ್ದರೂ, ಈ ಕೆಳಗೆ ಅವರ ಕವನ ಸಂಕಲನಗಳೆಲ್ಲವನ್ನು ಅದು ಪ್ರಕಟವಾದ ಅನುಕ್ರಮಣಿಕೆಯಲ್ಲಿ ಹೊಂದಿಸಿ ಕವನದ ರೂಪದಲ್ಲಿ ಹೊಸೆದಿದ್ದೇನೆ – ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ, ಆ ಮಹಾನ್ ಜೀವಕ್ಕೊಂದು ಹೃತ್ಪೂರ್ವಕ ನಮನ ಸಲ್ಲಿಸುತ್ತ…

  

(Photo source wikipedia: https://en.m.wikipedia.org/wiki/File:DRBendre.jpg)

ವರಕವಿ ದ.ರಾ.ಬೇಂದ್ರೆ ಗೊತ್ತಾ ? ಹರಿಸಿದ್ದೆಲ್ಲ ಧಾರೆ ಘನ ಕಾವ್ಯಕುಸುರಿ
‘ಕೃಷ್ಣಾಕುಮಾರಿ’ ಹಿಡಿದ ‘ಗರಿ’ ಮೂಡಿ ‘ಮೂರ್ತಿ ಮತ್ತು ಕಾಮ ಕಸ್ತೂರಿ’
‘ಸಖೀಗೀತ’ ಹಾಡಿ ‘ಉಯ್ಯಾಲೆ’ ತೂಗೆ ಆಯ್ತಲ್ಲ ‘ನಾದಲೀಲೆ’ ಜನನ
‘ಮೇಘದೂತ’ನದಂತೆ ‘ಹಾಡುಪಾಡು’ ಇಳೆಗೆ ಇಳಿದ ‘ಗಂಗಾವತರಣ’ ||

ಕುಡಿಕುಡಿದು ನಿತ್ಯ ‘ಸೂರ್ಯಪಾನ’ ತುಂಬಿಸಿ ‘ಹೃದಯ ಸಮುದ್ರ’
‘ಮುಕ್ತಕಂಠ’ದೆ ಮನ ಹಾಡಿತೆ ‘ಚೈತ್ಯಾಲಯ’ದಿ ಕವಿತಾ ಸರಿತ್ಸಾಗರ
ಸೋಲೊಪ್ಪದ ಪರಿ ‘ಜೀವಲಹರಿ’, ಕಾಡಲುಂಟೆ ‘ಅರಳು ಮರಳು’ ?
ನಮಿಸೂ ಮುಗಿಯದ ‘ನಮನ’, ಸ್ಪೂರ್ತಿ ‘ಸಂಚಯ’ ಅಕ್ಷಯ ಬೆರಳು ||

‘ಉತ್ತರಾಯಣ’ ಸಂಕ್ರಮಣ ಯಾತ್ರೆ, ಹುಡುಕಿತ್ತೆ ‘ಮುಗಿಲ ಮಲ್ಲಿಗೆ’
ಸಿಕ್ಕರಲ್ಲಿ ‘ಯಕ್ಷ ಯಕ್ಷಿ’, ನುಡಿಸೆ ‘ನಾಕುತಂತಿ’ ಜ್ಞಾನಪೀಠವದಾಗೆ
ಮೀರದ ಕವಿ ‘ಮರ್ಯಾದೆ’ಗೆ, ಕರೆದಳೆ ‘ಶ್ರೀಮಾತ’ ನೀ ‘ಬಾ ಹತ್ತರ’
ನಿಗರ್ವಿಮನಕೆ ‘ಇದು ನಭೋವಾಣಿ’, ಅಹಮಿಕೆಯಿಲ್ಲ ‘ವಿನಯ’ ಸ್ವರ ||

ಜೀವಋತುಗೆ ‘ಮತ್ತೆ ಶ್ರಾವಣ ಬಂತು’, ಹಾಡೆ ‘ಒಲವೇ ನಮ್ಮ ಬದುಕು’
‘ಚತುರೋಕ್ತಿ’ ಜತೆಗೆ ಹಾಕುತೆ ‘ಪರಾಕಿ’, ಎಷ್ಟು ‘ಕಾವ್ಯವೈಖರಿ’ ಸರಕು !
‘ತಾ ಲೆಕ್ಕಣಿಕೆ ತಾ ದೌತಿ’ ಅನ್ನುತಲೆ ಮಾಡಿದ ‘ಬಾಲಬೋಧೆ’ ತಿರುಳು
ಮುಪ್ಪ ಪಳಗಿಸೆ ‘ಚೈತನ್ಯದ ಪೂಜೆ’, ಮಾಗಿದೆದೆಯಲು ‘ಪ್ರತಿಬಿಂಬಗಳು’ ||

ತಡೆಹಿಡಿವರಾರು ‘ಶ್ರಾವಣ ಪ್ರತಿಭೆ’ ? ನಿಂತ ಕೂತೆಡೆಯೆ ಬರೆವ ದೈತ್ಯ
ಕೂರಬಿಡದೆ ‘ಕುಣಿಯೋಣು ಬಾ’ ಎಂದೆಲ್ಲರನು ಕುಣಿದಾಡಿಸಿದಾ ನೃತ್ಯ
ಮಾನವ ಬೇಂದ್ರೆ, ಚಿಂತಕ ಬೇಂದ್ರೆ, ತ್ರಿಮುಖಿ ಸೃಜನಶೀಲ ‘ಬುದ್ಧ’ ಬೇಂದ್ರೆ
ಪದ್ಮಶ್ರಿ ಅಂಬಿಕಾತನಯದತ್ತನ ಕಾವ್ಯತೋಟಕೊಂದು ನಮನದೀ ಮುದ್ರೆ ||

00484. ಅಯ್ಯೊ ಪರಮಾತ್ಮ, ನಿಂಗೆ ಪಂಥಾನ!


00484. ಅಯ್ಯೊ ಪರಮಾತ್ಮ, ನಿಂಗೆ ಪಂಥಾನ!
____________________________________

ಸಾಧಾರಣ ಮಾನವರೆಲ್ಲರಿಗು ಭಗವಂತನ ಮೇಲೆ ಭಯ ಭಕ್ತಿ ಹೆಚ್ಚು.. ಹೀಗಾಗಿ ಕಷ್ಟ ಕೋಟಲೆ ಅನುಭವಿಸುವಾಗಲೂ ಅವನ ಮೇಲೆ ದೂರಲು, ಬೈದಾಡಲು ಹಿಂದೆ, ಮುಂದೆ ನೋಡುತ್ತಾರೆ ಜನರು.. ಆದರೆ ಒಂದು ಗುಂಪಿನವರು ಮಾತ್ರ ಇದಕ್ಕೆ ಅಪವಾದ.. ಅವರು ಒಂದು ರೀತಿ ‘ಇತರೆ’ ಪರಮಾತ್ಮನನ್ನೆ ಸೇವಿಸುತ್ತ, ಅದರಿಂದ ಪಡೆದ ಸ್ಪೂರ್ತಿ, ಧೈರ್ಯದ ಬಂಡವಾಳದಲ್ಲಿ ಆ ನಿಜವಾದ ಪರಮಾತ್ಮನನ್ನು ಮುಲಾಜಿಲ್ಲದೆ ಕಿಚಾಯಿಸುತ್ತ ಅವನಿಗೆ ಚಾಲೆಂಝ್ ಮಾಡುತ್ತ ದ್ವಂದ್ವದ ಪಂಥಾಹ್ವಾನವನ್ನು ಒಡ್ಡುತ್ತಾರೆ, ಅವರದೆ ಆದ ರಮ್ಯ, ರಂಜನೀಯ ಭಾಷೆಯಲ್ಲಿ..

   
(picture source wikipedia – https://en.m.wikipedia.org/wiki/File:Interesting_alcoholic_beverages.jpg )

ಅಂತಹವರ ಭಾಷೆ, ಸಂವಾದ, ವ್ಯಾಕರಣ ಎಲ್ಲವೂ ರಂಜನೀಯವೆ ಆದರು, ಅದೇನಿದ್ದರೂ ಆ ‘ಪರಮಾತ್ಮನ’ ಅಮಲಿನ ಒಲುಮೆ ಇದ್ದಾಗ ಮಾತ್ರ.. ಆ ಒಲುಮೆ ಕರಗಿ ನೈಜ ಜಗಕ್ಕೆ ಬರುತ್ತಿದ್ದಂತೆ ಎಲ್ಲಾ ಕಶ್ಮಲವೂ ಕರಗಿ ಸ್ವಚ್ಛವಾಗಿ ಹೋದಂತೆ, ದೂಷಿಸಿದ್ದು, ಪಂಥಕ್ಕೆ ಕರೆದದ್ದು, ಏನೇನೊ ಅಂದದ್ದು – ಎಲ್ಲವು ಸ್ಮೃತಿಪಟಲದಿಂದ ದೂರವಾಗಿ ಹೋಗಿಬಿಟ್ಟಿರುತ್ತದೆ.. ಆದರೆ ಆ ‘ಪರಮಾತ್ಮನ’ ಸನ್ನಿಧಾನದ ಸೇವೆ ಮತ್ತೆ ದೊರಕುತ್ತಿದ್ದಂತೆ ಮತ್ತೆ ಯಥಾರೀತಿ ಆರಂಭ ಅವರದೆ ಲೋಕದ ಯಕ್ಷಗಾನ..!

ಆ ಪರಮಾತ್ಮನ ಪಂಥದವತಾರ ಈ ಜೋಡಿ ಕವನದ ವಸ್ತು..😊

ಅಯ್ಯೊ ಪರಮಾತ್ಮ, ನಿಂಗೆ ಪಂಥಾನ! (01)
——————————————————

ಗುಂಡಿನಲೆನಿತೊ ದಿವ್ಯಗಾನ
ಪರಮಾತ್ಮನ ಅಂತರ್ಯಾನ
ಬಾಯಿಂದಲೆ ಒಳಪ್ರಯಾಣ
ತದನಂತರವೆ ಪಂಥಾಹ್ವಾನ ||

ನಾಲಿಗೆ ಸವರಿ ತೇವ ಕುಸುರಿ
ಜುಂಜುಮ್ಮೆನಿಸಿ ಕೆನ್ನೆಗೆ ಮರಿ
ಅನ್ನನಾಳದಲಿಳಿದಾ ಕಮರಿ
ಜಠರದಲ್ಹೇಗೊ ಸೇರುವ ಗುರಿ ||

ಕೂತಾಗಿ ಸ್ವಸ್ಥ ನಾವೇ ನಿಮಿತ್ತ
ಮಾಡುವುದೇನೊಳಗೇ ಪ್ರಸ್ತ
ಇದ್ದೀತೊಳಗೇ ವಿದೇಶೀ ಹಸ್ತ
ಆಡಿಸುವ ಪರಮಾತ್ಮನೆ ಸುಸ್ತ ||

ಪುಕ್ಕಲು ಪುಕ್ಕಲಿನಾ ವ್ಯಕ್ತಿತ್ವ
ಬುರುಡೆಯೊಳಗೆ ಮೂರ್ಖತ್ವ
ಕುಡಿದಾಗಾ ಹೊರಡುವ ತತ್ವ
ಪರಮಾತ್ಮನದೆಷ್ಟೂ ಮಹತ್ವ ||

ಭಲೆ ಗಾಂಚಲಿ ಒಳಗೆ ಗುಂಡ
ತಡಕಾಡಿಸಿ ಬಿಡುತಲೆ ರುಂಡ
ಸೆಟೆದೆದ್ದು ನಿಲ್ಲುತಲೆ ಉದ್ದಂಡ
ಉದ್ದಟತನ ಕಾಲ ಯಮಗಂಡ ||

– ನಾಗೇಶ ಮೈಸೂರು

ಅಯ್ಯೊ ಪರಮಾತ್ಮ, ನಿಂಗೆ ಪಂಥಾನ! (02)
——————————————————

ಎಲ್ಲರಿಗಾಹ್ವಾನವಿತ್ತ ವಸಂತ
ಬಾಯ್ಬಿಟ್ಟರುದುರಿಸುವಸಂತ
ಮಾತು ಮಾತಿಗು ಕಟ್ಟಿಪಂಥ
ಸವಾಲ್ಹಾಕೆ ದೇವರಿಗು ಬಂತ ||

ಪ್ರಶ್ನೆ ಮೇಲ್ಪ್ರಶ್ನೆ ಕೇಳುತ ಗತ್ತ
ಭಗವಂತ ನಿನಗುತ್ತರ ಗೊತ್ತ
ಕಟ್ಟಿಪಂಥ ಆಹ್ವಾನಿಸಿ ಕುಂತ
ಬವಣೆ ದೇಗುಲ ದ್ವಾರ ಮುಚ್ಚಿತ್ತ ||

ದಾರಿಹೋಕ ಸಿಕ್ಕ ಶುರು ಲೆಕ್ಕ
ಹೊಸಬನೊ ಹಳಬನೊ ನಕ್ಕ
ಅಪರಿಚಿತ ಪರಿಚಿತ ಯಾಕಕ್ಕ
ಸಮಯಕಾದವನೆ ನೆಂಟನಕ್ಕ ||

ಚಕ್ರಾಕಾರದ ವರಸೆ ತೂರಾಟ
ಮಾತೆಲ್ಲ ತೊದಲಿಕೆ ಹಾರಾಟ
ನಿಲುವೆಕಷ್ಟ ಮಾತೆಲ್ಲ ಅನಿಷ್ಟ
ನಗುವೋಅಳುವೋ ನಿಮ್ಮಿಷ್ಟ ||

ಜಠರ ಸಾಗಿ ಕರುಳ ಕರುಳಾಗಿ
ಸುಟ್ಟುಸುಡದೆ ಕುಡಿತ ಮರುಗಿ
ಸೃಷ್ಟಿಕರ್ತನಿತ್ತ ದೇಹದೆಲ್ಲೆ ನಗ್ಗಿ
ಪಂಥವೊಡ್ಡೆ ದಿನವೆಣಿಸು ಮಗ್ಗಿ ||

– ನಾಗೇಶ ಮೈಸೂರು

00483. ದುಂಬಿಯೆಂಬ ತಲೆಹಿಡುಕ….


00483. ದುಂಬಿಯೆಂಬ ತಲೆಹಿಡುಕ….
__________________________

ಪ್ರೀತಿ ಪ್ರೇಮ ಪ್ರಣಯದ ವಿಷಯ ಬಂದಾಗೆಲ್ಲ, ಅದರಲ್ಲು ಹೆಣ್ಣು, ಗಂಡಿನ ಹೋಲಿಕೆಗೆ ಹೂವು, ದುಂಬಿಯನ್ನು ಸಾಂಕೇತಿಕವಾಗಿ ಬಳಸುವುದು ನಮ್ಮಲ್ಲಿ ಸರ್ವೆ ಸಾಮಾನ್ಯ. ಅದರಲ್ಲು ಚಲನ ಚಿತ್ರಗಳಲ್ಲಂತು ದೃಶ್ಯ ಮಾಧ್ಯಮವಾಗಿಯೂ ಪ್ರಸಿದ್ದ. ಇನ್ನು ಚೆಲ್ಲಾಟವಾಡುವ ಗಂಡಿನ ವಿಷಯಕ್ಕೆ ಬಂದರಂತು ಗಂಡೆಂಬ ದುಂಬಿ ಏಕ್ ದಂ ವಿಲನ್ ಆಗಿಬಿಡುತ್ತಾನೆ..! ‘ಹೂವಿಂದ ಹೂವಿಗೆ ಹಾರುವ ದುಂಬಿ’ ಅಂತೆಲ್ಲ ಅವಹೇಳನದ ಹಾಡೂ ಶುರುವಾಗಿಬಿಡುತ್ತದೆ..! ಆದರೆ ನಿಜವಾದ ದುಂಬಿ ಮತ್ತು ಹೂವಿನ ವ್ಯಾಪಾರ ನೋಡಿದರೆ ಕಾಣುವ ಸತ್ಯವೆ ಬೇರೆ.. ಇಲ್ಲಿ ದುಂಬಿ ಗಂಡೆ ಅಲ್ಲ.. ಬದಲಿಗೆ ಒಂದು ಗಂಡು ಹೂವಿಂದ ಮತ್ತೊಂದು ಹೆಣ್ಣು ಹೂವಿಗೆ ಸಂಪರ್ಕವೇರ್ಪಡಿಸುವ ಸಂವಾಹಕ ಮಾತ್ರ – ಪರಾಗ ರೇಣುಗಳನ್ನು ಕಾಲಿಗೆ ಮೆತ್ತಿಕೊಂಡು ಒಂದು ಹೂವಿಂದ ಮತ್ತೊಂದಕ್ಕೆ ತನ್ನ ಹಾರಾಟದ ಮೂಲಕ ಸಾಗಿಸುತ್ತ..ಹಾಗೆ ಹಾರಾಡುತ್ತ ಒಂದಕ್ಕಿಂತ ಹೆಚ್ಚು ಹೂವುಗಳ ಸಂಪರ್ಕ ಏರ್ಪಡಿಸುವ ‘ಘನಂದಾರಿ’ ಕೆಲಸವನ್ನು ಮಾಡುವುದರಿಂದ ಒಂದು ರೀತಿಯ ಮಧ್ಯವರ್ತಿ ಯಾ ತಲೆಹಿಡುಕನ ಹಾಗೆ ಅಂತಲು ಹೇಳಬಹುದು..!

ಆ ತಲೆಹಿಡುಕ ಸ್ವರೂಪದ ಊಹೆಯಲ್ಲಿ ಮೂಡಿದ ಒಂದು ಜೋಡೀ ಕವನ – ‘ದುಂಬಿಯೆಂಬ ತಲೆಹಿಡುಕ’..:-)

   
(picture source / credit : https://suparnabs.wordpress.com/2015/07/09/%e0%b2%ad%e0%b3%8d%e0%b2%b0%e0%b2%ae%e0%b2%b0/)

ದುಂಬಿಯೆಂಬ ತಲೆಹಿಡುಕ – 01
_____________________________

ದುಂಬಿಯೆಂಬ ತಲೆ ಹಿಡುಕ
ಹುಟ್ಟಿಸುತ ಗಿಡಕೆದೆ ನಡುಕ
ಹಾರಾರುತ ಹೂಹೂ ತನಕ
ಹಂಚಿಬಿಡುವ ಸುದ್ಧಿ ಚಳಕ ||

ಹೂವನ್ಹೆತ್ತ ಗಿಡದಾ ಮಂದಿ
ಮನುಜರಂತೆ ನಾಕಾಬಂಧಿ
ಹೆಣ್ಮಕ್ಕಳು ಚಿಗುರಲೆ ನಂಬಿ
ಕಟ್ಟಿಡುವರೆ ಟೊಂಗೆಗೆ ತುಂಬಿ ||

ಯೌವ್ವನ ಹೂ ಬಳುಕಿ ಲಯ
ಹುಡುಗಾಟಿಕೆ ಎಳೆ ಪ್ರಾಯ
ದುಂಬಿ ಹಾರಿ ಬಂದ ಗಳಿಗೆ
ಕುತೂಹಲವೆ ಅಪ್ಪಿ ಬಳಿಗೆ ||

ಹೂ ಹುಡುಗನ ಸವರಿದ್ದಾ
ದುಂಬಿ ಲಂಚವ ಪಡೆದಿದ್ದ
ಸಿಹಿ ಮಕರಂದ ಹಾಕೆ ಲಗ್ಗೆ
ದೇಹಕಂಟಿತೆ ಪರಾಗ ಬುಗ್ಗೆ ||

ಹಿಂದಿರುಗಿಸೆ ಜೇನಿನ ಸಾಲ
ಹೊತ್ತು ನಡೆವ ಪರಾಗ ಕಾಲ
ಕೂತು ಹೆಣ್ಹೂವಿನ ಪಕ್ಕವೆ
ತಲೆಗೆಡಿಸಿರೆ ಮಳ್ಳಿ ಲೆಕ್ಕವೆ ||

ಮಾತು ಮಾತಾಡಿಸುತೆಲ್ಲ
ಮರುಳಾಗೆ ಹೆಣ್ಹೂಗಳೆಲ್ಲಾ
ಜೇನ್ಹಿರುವ ನೆಪ ಶಲಾಕಾಗ್ರ
ಪರಾಗ ರೇಣು ಕೊಡವಿ ಅಗ್ರ ||

– ನಾಗೇಶ ಮೈಸೂರು

ದುಂಬಿಯೆಂಬ ತಲೆಹಿಡುಕ – 02
__________________________

ಮಾತು ಮಾತಾಡಿಸುತೆಲ್ಲ
ಮರುಳಾಗೆ ಹೆಣ್ಹೂಗಳೆಲ್ಲಾ
ಜೇನ್ಹಿರುವ ನೆಪ ಶಲಾಕಾಗ್ರ
ಪರಾಗ ರೇಣು ಕೊಡವಿ ಅಗ್ರ ||

ಪಾಪವರಿಯದಾ ಹೂವೆಣ್ಣು
ಕಂಗಾಲಾಗಿ ಬಿಡುತೆ ಕಣ್ಣು
ಅರಿಯುವ ಮೊದಲೆ ರೇಣು
ಅಂಡಾಶಯಕಿಳಿದ ಗೋಣು ||

ಮುಂದಿನದೆಲ್ಲ ಬರಿ ಚರಿತ್ರೆ
ಗರ್ಭಧರಿಸಿ ಹೂವೆ ಪವಿತ್ರೆ
ತಾಯಾಗ್ಕಾಯಾಗಿಸಿ ಬೀಜ
ಹಣ್ಣಿಂದುದುರುವಳೆ ಸಹಜ ||

ಯಾರ ಬಸಿರೋ ಅರಿಯದೆ
ದುಂಬಿ ಮುಟ್ಟಿದ ಹೂವಾದೆ
ನಳಿಗೆ ಶಿಶುವ ಹೆರುವಂದದಿ
ದುಂಬಿಯೊದರಿದ ಹಣ್ಣಾದೆ ||

ಇದಲ್ಲವೆ ತಲೆ ಹಿಡುಕತನ
ಯಾರಿಗ್ಯಾರಾರನೊ ಮಿಲನ
ಮಾಡಿ ಸುಲಗ್ನ ಸಂಯೋಗ
ಮತ್ತಾರಿಗೊ ನಿ ಸಹಯೋಗ ||

– ನಾಗೇಶ ಮೈಸೂರು

00482. ಸಣ್ಣ ಕಥೆ: ಆ ರಟ್ಟಿನ ಪೆಟ್ಟಿಗೆ..


00482. ಸಣ್ಣ ಕಥೆ: ಆ ರಟ್ಟಿನ ಪೆಟ್ಟಿಗೆ..
____________________________

  
picture source: https://en.m.wikipedia.org/wiki/File:Umzugskarton.jpg

ಎಂದಿನಂತೆ ಆ ದಿನವೂ ಆಫೀಸಿನ ತನ್ನ ಕೊಠಡಿಗೆ ಬಂದು ಬೀಗ ತೆಗೆದು ಒಳಹೊಕ್ಕ ನಿಮಿಷನಿಗೆ ಕಬೋರ್ಡಿನ ಮೇಲಿಟ್ಟಿರುವ, ಅಂಟಿಸಿದ ಟೇಪಿನ್ನೂ ತೆಗೆಯದ ಅದೆ ರಟ್ಟಿನ ಪೆಟ್ಟಿಗೆ ಮತ್ತೆ ಕಣ್ಣಿಗೆ ಬಿತ್ತು – ಅದೇನಿರಬಹುದೆಂದು ಕುತೂಹಲ ಕೆರಳಿಸುತ್ತ. ನಿತ್ಯವೂ ಅದನ್ನು ನೋಡುತ್ತಲೆ ಇರುವ ನಿಮಿಷನಿಗೆ ಯಾಕೊ ಅವತ್ತಿನವರೆಗು ಅದೇನೆಂದು ನೋಡುವ ಕುತೂಹಲ ಮೂಡಿರಲಿಲ್ಲ.. ನೂರೆಂಟು ಅವಸರದ ವಿಷಯಗಳ ನಡುವೆ ಈ ಪೆಟ್ಟಿಗೆಯತ್ತ ಚಿತ್ತದ ಮೊದಲ ಗಮನ ಹರಿಯುವುದಾದರು ಎಂತು ? ಆಫೀಸಿನ ಬೀಗದ ಕೈ ತೆಗೆದುಕೊಂಡು ತಿಂಗಳಷ್ಟೆ ಆಗಿದೆ – ಹೆಚ್ಚು ಕಡಿಮೆ ಆ ಊರಿಗೆ ವರ್ಗವಾಗಿ ಬಂದಷ್ಟೆ ಸಮಯ. ಎರಡು ತಿಂಗಳ ಮೊದಲೆ ಬರಬೇಕಿದ್ದರು, ನಾನಾ ಕಾರಣಗಳಿಂದ ದಿನ ಮುಂದೂಡಬೇಕಾದ್ದು ಅನಿವಾರ್ಯವಾಗಿ ತಡವಾಗಿ ಹೋಗಿತ್ತು. ನಿಗದಿತ ದಿನಾಂಕಕ್ಕೆ ಬರುವನೆಂಬ ಮಾಹಿತಿಯ ಮೇಲೆ ಕೊಠಡಿಯನ್ನೆಲ್ಲ ಸಿದ್ದಪಡಿಸಿ ‘ನಿಮಿಷ್ ಕುಮಾರ್ – ಡೈರೆಕ್ಟರ್ ಅಫ್ ಪ್ರಾಜೆಕ್ಟ್ ಸರ್ವಿಸಸ್’ ಎಂದು ನಾಮಫಲಕವನ್ನು ಸಿದ್ದ ಮಾಡಿ ನೇತು ಹಾಕಿಬಿಟ್ಟಿದ್ದರು, ರೈಲಿನ ಬೋಗಿಯಲ್ಲಿ ಸೀಟು ಕಾದಿರಿಸುವಂತೆ…! ಆ ಬೋರ್ಡು ಮಾತ್ರ ನಿಯತ್ತಾಗಿ ನೇತಾಡುತ್ತಿತ್ತು ಅವನು ಬಂದು ಅಧಿಕಾರ ವಹಿಸಿಕೊಳ್ಳುವವರೆಗು ಅವನ ದಾರಿ ಕಾಯುತ್ತ.

ಅವನಿಗಿಂತ ಮೊದಲೆ ಬಿಜಿನೆಸ್ ಟ್ರಿಪ್ಪಿನಲ್ಲಿ ಬಂದು ಬಂದು ಹೋದ ಕೆಲವರು ‘ಏನ್ರಿ…ಆಗಲೆ ಹೆಸರು ಹಾಕಿ ಆಫೀಸು ರೂಮು ಬುಕ್ ಮಾಡಿಟ್ಟುಬಿಟ್ಟಿದ್ದಾರೆ ..? ನೀವು ಹೋಗುವುದೊಂದೆ ಬಾಕಿ ಅಂಥ ಕಾಣುತ್ತೆ..’ ಎಂದು ಒಂದು ರೀತಿಯ ಪರೋಕ್ಷ ಒತ್ತಡವನ್ನು ಹಾಕಿ ಹೋಗಿದ್ದರು – ಆದಷ್ಟು ಶೀಘ್ರದಲ್ಲಿ ಹೊರಡುವುದಕ್ಕೆ.. ತೀರಾ ಕೊನೆಯವಳಾಗಿ ಹೋಗಿದ್ದ ರೀಟಾ ಮೋಹನ್ ಹಿಂದಿರುಗಿ ಬಂದವಳೆ, ‘ಏನ್ ಸಾರ್.. ನಿಮ್ಮ ರೂಮನ್ನ ಖಾಲಿಯಿದೆ ಅಂತ ಯಾವುದೊ ಟೆಸ್ಟಿಂಗಿಗೊ, ಟ್ರೈನಿಂಗಿಗೊ ಬಳಸ್ತಾ ಇದಾರೆ ? ರೂಮು ತುಂಬ ಆರೇಳು ಜನ ಕೂತಿದ್ದನ್ನ ಕಂಡೆ.. ಅದೇನೊ ಪ್ರಾಜೆಕ್ಟ್ ವಾರ್ ರೂಮ್ ಅಂತೆ.. ಸದ್ಯಕ್ಕೆ ಯಾರು ಕೂತಿಲ್ಲ ಅಂತ ಟೆಂಪರರಿಯಾಗಿ ಬಳಸ್ಕೋತಾ ಇದಾರೆ’ ಎಂದು ಹೇಳಿ ಸ್ವಲ್ಪ ಆತಂಕವನ್ನು ಹೆಚ್ಚೆ ಮಾಡಿದ್ದಳು. ಈಗ ಇನ್ನು ಇಲ್ಲೆ ಬಿದ್ದಿರುವ ಈ ದೊಡ್ಡ ಪೆಟ್ಟಿಗೆ ಬಹುಶಃ ಅವರು ಬಳಸುತ್ತಿದ್ದುದ್ದೆ ಇರಬೇಕು .. ‘ಮತ್ತೇನಿರುತ್ತದೆ ಅಲ್ಲಿ? ಪ್ರಾಜೆಕ್ಟಿಗೆ ಸಂಬಂಧಿಸಿದ ಪೇಪರು, ಅದು ಇದೂ ಅಂತ ತುಂಬಿ ಇಟ್ಟಿರಬೇಕು.. ಜಾಗ ಖಾಲಿ ಮಾಡುವ ಹೊತ್ತಲ್ಲಿ ಅದನ್ನು ಸ್ವಚ್ಛ ಮಾಡುವ ಹೊಣೆ ತಮಗೆ ಸೇರಿದ್ದಲ್ಲ ಎಂದು ಹೊರಟು ಬಿಟ್ಟಿರುತ್ತಾರೆ.. ಅದೇನೆಂದು ಗೊತ್ತಿರದಿದ್ದರು ಅದನ್ನು ಇಟ್ಟುಕೊಂಡು ದಿನವೂ ಅದನ್ನು ನೋಡಿಕೊಂಡಿರಬೇಕಾದವನು ನಾನು.. ಹಾಳಾಗಲಿ, ಮಧ್ಯೆ ಬಿಡುವಾದಾಗ ಅದರೊಳಗೇನಿದೆ ನೋಡಿಕೊಂಡು ಅದಕೊಂದು ಗತಿ ಕಾಣಿಸಿಬಿಡಬೇಕು’ ಎಂದುಕೊಂಡು ತನ್ನ ಮೆತ್ತನೆಯ ಆಸನದತ್ತ ನಡೆದ ನಿಮಿಷ ತನ್ನ ದೈನಂದಿನ ಕೆಲಸಗಳಲ್ಲಿ ಮುಳುಗಿಹೋಗಿದ್ದ ಎಂದಿನಂತೆ.

ತನ್ನ ಆಫೀಸಿನ ಟೇಬಲ್ಲಿನ ಮೇಲೆ ಸದಾ ಪೇಪರು, ಅದು ಇದೂ ಎಂದು ಹರಡಿಕೊಳ್ಳದೆ ನೀಟಾಗಿ, ಶಿಸ್ತಾಗಿ ಇರುವಂತೆ ನೋಡಿಕೊಳ್ಳುವುದು ಅವನ ಹಳೆಯ ಅಭ್ಯಾಸ. ಒಂದು ರೀತಿಯ ಶಿಸ್ತಿನ ವಾತಾವರಣ ಮಾತ್ರವಲ್ಲದೆ, ಎಲ್ಲವನ್ನು ಶೀಘ್ರ ವಿಲೇವಾರಿ ಮಾಡುವ ಒತ್ತಡವು ಬರುವ ಕಾರಣ. ಸಹೋದ್ಯೋಗಿಗಳನೇಕರು ಅದನ್ನು ಗಮನಿಸಿ ಆಡಿದ್ದು ಇದೆ – ‘ನಿಮ್ಮ ಟೇಬಲ್ ಯಾವಾಗಲೂ ತುಂಬಾ ಕ್ಲೀನಪ್ಪ.. ಚೆನ್ನಾಗಿ ಇಟ್ಟುಕೊಂಡಿರುತ್ತೀರಾ’… ಮತ್ತೆ ಕೆಲವರು ಹಿಂದಿನಿಂದ ಕುಹಕವಾಡುತ್ತಾರೆಂದು ಗೊತ್ತಿದೆ; ‘ಅವನಿಗೇನ್ರಿ..? ಕೆಲಸವೆ ಇಲ್ಲ ಅಂತ ಕಾಣುತ್ತೆ.. ಹೆಸರಿಗೆ ಸೀನಿಯರು ಮ್ಯಾನೇಜರು..ಟೇಬಲ್ ನೋಡಿದರೆ ಸದಾ ಖಾಲಿ.. ಏನು ಕೆಲಸ ಮಾಡ್ತಾನೊ ಇಲ್ಲವೊ ಅಂತಲೆ ಅನುಮಾನ..’ ಎಂದಾಡಿಕೊಂಡದ್ದು ಅವನ ಕಿವಿಗು ಬಿದ್ದಿದೆ.. ಆದರೆ ಅದನ್ನವನು ಯಾವತ್ತೂ ಸೀರಿಯಸ್ಸಾಗಿ ತೆಗೆದುಕೊಂಡಿಲ್ಲ.. ತನ್ನ ಪಾಡಿಗೆ ತನ್ನ ಕೆಲಸ ಮಾಡಿಕೊಂಡು ಹೋಗುವುದು ಅವನ ಜಾಯಮಾನ.. ಈಗಲೂ ಅಷ್ಟೆ.

ಪ್ರಮೋಶನ್ನು ಸಿಕ್ಕಿತೆಂಬ ಕಾರಣದಿಂದ ಈ ಜಾಗಕ್ಕೆ ಬಂದು ‘ಸೆಟಲ್’ ಆಗಲಿಕ್ಕೆ ಹವಣಿಸುತ್ತಿರುವ ಹೊತ್ತಿನಲ್ಲಿ ನೂರೆಂಟು ತರದ ತರಲೆ ತಾಪತ್ರಯಗಳನ್ನು ನಿಭಾಯಿಸಿಕೊಳ್ಳಬೇಕಾದ ಕಾರಣ ತನ್ನ ರೂಮಿನ ಚಿಲ್ಲರೆ ವಿಷಯಗಳತ್ತ ಗಮನ ಹರಿಸಲಾಗಿಲ್ಲ. ಸಾಲದ್ದಕ್ಕೆ ಹೊಸ ಜಾಗಕ್ಕೆ ಬರುವ ಹೊತ್ತಿಗೆ ಸರಿಯಾಗಿ ಅಲ್ಲಿ ಆಫೀಸಿನ ಸಹಾಯಕ್ಕೆಂದು ಇರಬೇಕಿದ್ದ ರಾಗಿಣಿ ‘ಮೆಟರ್ನಿಟಿ ಲೀವ್’ ಹಾಕಿ ಹೋಗಿರುವ ಕಾರಣ ಎಲ್ಲಾ ತಾನೆ ಮಾಡಿಕೊಳ್ಳಬೇಕಾದ ಅನಿವಾರ್ಯ.. ಪಾಪದ ಹುಡುಗಿ ಹೋಗುವ ಮುನ್ನ ಏನೆಲ್ಲ ಸಾಧ್ಯವೊ ಅದನ್ನೆಲ್ಲ ಮಾಡಿಟ್ಟೆ ಹೋಗಿದ್ದಾಳೆ, ಆದರೆ ರೂಮು ತಾನು ಬರುವ ತನಕ ಖಾಲಿಯಾಗಿಲ್ಲದ ಕಾರಣ ಅದನ್ನು ಒಪ್ಪ ಒರಣವಾಗಿಸಲು ಸಾಧ್ಯವಾಗಿಲ್ಲವೆಂದು ಕಾಣುತ್ತದೆ.. ಅದೇನೆ ಇರಲಿ ತಲೆಯೆತ್ತಿ ನೋಡಿದಾಗಲೆಲ್ಲ ಆ ರಟ್ಟಿನ ಪೆಟ್ಟಿಗೆ ಕಣ್ಣಿಗೆ ಬಿದ್ದು , ಅದೊಂದು ಅಪಶೃತಿಯ ತಂತಿಯಂತೆ ನಿತ್ಯವೂ ಕಾಡುತ್ತದೆ – ಅದರಲ್ಲು ಅದರ ಗಾತ್ರದ ದೆಸೆಯಿಂದ. . ಒಂದು ವಾರದ ಕೊನೆಯಲ್ಲಾದರು ಬಂದು ಅದರಲ್ಲೇನಿದೆ ನೋಡಿ ಮೋಕ್ಷ ಕೊಟ್ಟುಬಿಡಬೇಕು – ನೋಡಿ ನೋಡಿ ಅಭ್ಯಾಸವಾಗಿಬಿಡುವ ಮೊದಲೆ.. ಈಗಾಗಲೆ ಬಂದು ಎರಡು ತಿಂಗಳು ಕಳೆದುಹೋಯ್ತು.. ಅಬ್ಬಾ! ಈ ಕೆಲಸದ ಜಂಜಾಟದಲ್ಲಿ ಹಾಳು ದಿನಗಳು ಓಡುವುದೆ ಗೊತ್ತಾಗುವುದಿಲ್ಲ..

ನಿಮಿಷನಿಗಂದು ಪುರುಸೊತ್ತಿಲ್ಲದ ದಿನ.. ಬೆಳಗಿನಿಂದ ಮೀಟಿಂಗಿನ ಮೇಲೆ ಮೀಟಿಂಗು.. ಒಂದಲ್ಲ ಒಂದು ಗುಂಪು ಬಂದು ಏನಾದರೊಂದು ವಿಷಯದ ಚರ್ಚೆ ನಡೆಸಿ ಹೋಗುತ್ತಿವೆ.. ಅದಕ್ಕವನು ದೂರುವಂತೆಯೂ ಇಲ್ಲ.. ಅದನ್ನು ವ್ಯವಸ್ಥೆ ಮಾಡಿದವನು ಸ್ವತಃ ಅವನೆ. ಹೊಸ ಕೆಲಸದ ಮೇಲೆ ಹಿಡಿತ ಸಿಗಬೇಕಾದರೆ ಮೊದಲು ಅಲ್ಲೇನು ನಡೆದಿದೆಯೆಂದು ಅರ್ಥ ಮಾಡಿಕೊಳ್ಳಬೇಕು.. ಆಮೇಲಷ್ಟೆ ಅದರ ಸಾಧಕ ಭಾಧಕ, ಬೇಕು ಬೇಡಗಳ ತರ್ಕ, ನಿಷ್ಕರ್ಷೆ ಸಾಧ್ಯ.. ಆದರೆ ಆ ದಿನ ಮಾತ್ರ ಸ್ವಲ್ಪ ಹೆಚ್ಚೆ ಆಯಿತೆಂದು ಹೇಳಬೇಕು – ಗಂಟೊಗೊಂದರಂತೆ ಏಳು ಮೀಟಿಂಗುಗಳು.. ಸಾಲದ್ದಕ್ಕೆ ಕೊನೆಯದು ಕಸ್ಟಮರ ಜತೆಗಿನ ಭೇಟಿ.. ಅಂತಹ ಮುಖ್ಯ ಭೇಟಿಗಳನ್ನು ದಿನದ ಕೊನೆಯಲ್ಲಿಟ್ಟುಕೊಳ್ಳುವುದೆ ಮೂರ್ಖತನ.. ಆದರೆ ಆ ಸಮಯ ಕಸ್ಟಮರೆ ಸೂಚಿಸಿದ ಕಾರಣ ಬೇರೆ ದಾರಿಯಿರಲಿಲ್ಲ.. ರಾಗಿಣಿಯಿದ್ದಿದ್ದರೆ ಇಂತದ್ದನ್ನೆಲ್ಲ ಸುಲಭವಾಗಿ ಮ್ಯಾನೇಜ್ ಮಾಡಿ ಬಿಡುತ್ತಿದ್ದಳೇನೊ – ತನಗೆ ಅಷ್ಟು ಸರಳವಾಗಿ ಮೀಟಿಂಗುಗಳನ್ನು ನಿರಾಕರಿಸಲು ಬರದು.. ಎಲ್ಲಕ್ಕಿಂತ ಮುಖ್ಯವಾಗಿ ಸಮಯ ಇದೆಯೆ, ಇಲ್ಲವೆ ಎಂದೂ ಯೋಚಿಸದೆ, ಪರಿಶೀಲಿಸದೆ ‘ಓಕೆ’ ಎನ್ನುವ ಆತುರದ ಸ್ವಭಾವ.. ಅದು ಯಾರು ಹೆಸರಿಟ್ಟರೊ, ನಿಮಿಷ ಎಂದು – ಕಾಲದ ಪ್ರಾಮುಖ್ಯತೆಯ ಪ್ರಜ್ಞಾಪೂರ್ವಕ ಪರಿವೆಯೆ ಇಲ್ಲದವನಿಗೆ.. ಅದು ಬೇರೆ ವಿಷಯ…

ಈಗಾಗಲೆ ಮೂರು ಮೀಟಿಂಗು ಮುಗಿಸಿದ್ದಾನೆ ನಿಮಿಷ.. ಬೆಳಗಿನಿಂದಲು ಒಂದು ಮಿಂಚಂಚೆಯನ್ನು ಓದಲಾಗಿಲ್ಲ, ಗಂಟೆ ಗಳಿಗೆಗೊಮ್ಮೆ ಪ್ರತ್ಯಕ್ಷವಾಗುವ ಬರಿಯ ಹಾಳು ಮೊಬೈಲ್ ಮೆಸೇಜ್ ಬಿಟ್ಟರೆ ಬೇರೇನು ನೋಡಲು ಶಕ್ಯವಾಗಿಲ್ಲ. ಲಂಚಿನ ಸಮಯ ಹತ್ತಿರವಾದಂತೆ ಯಾಕೊ ಪದೆ ಪದೆ ಕಣ್ಣು ಆ ರಟ್ಟಿನ ಪೆಟ್ಟಿಗೆಯತ್ತಲೆ ಹರಿಯುತ್ತದೆ ಆಯಾಚಿತವಾಗಿ.. ಆ ದಿನ ಅದರ ಕುರಿತು ಯಾಕೀ ಬಗೆಯ ಹೆಚ್ಚಿನ ಅಸಹನೆ ಎಂದು ಚಿಂತಿಸಲಾಗದಷ್ಟು ಬಿಜಿ.. ಕೊನೆಗೆ ಲಂಚಿನ ಮುನ್ನದ ಮೀಟೀಂಗ್ ಮುಗಿಸಿ ಕ್ಯಾಂಟಿನ್ನಿಗೆ ಹೊರಡಲು ಸಿದ್ದನಾಗುವ ಹೊತ್ತಲ್ಲಿ ಫಕ್ಕನೆ ಅರಿವಿಗೆ ಬಂದಿತ್ತು – ಯಾಕೀ ಹೆಚ್ಚಿದ ಚಡಪಡಿಕೆಯೆಂದು.. ‘ದಿನದ ಕೊನೆಗೆ ಬರುವ ಗ್ರಾಹಕರ ಮುಂದೆ ಆ ಪೆಟ್ಟಿಗೆ ಪ್ರದರ್ಶನಕ್ಕಿಡುವುದು ಶೋಭೆಯಲ್ಲ – ನೀಟಾದ ಫರ್ನೀಷರಿನ ನಡುವೆ ದೃಷ್ಟಿಬೊಟ್ಟಂತೆ ಬಿದ್ದಿರುವ ಈ ಪೆಟ್ಟಿಗೆ ಮುಜುಗರಕ್ಕೆ ಕಾರಣವಾಗುತ್ತದೆ; ಅದಕ್ಕೆ ಇರಬೇಕು ಒಂದು ರೀತಿಯ ಈ ಎಲ್ಲಾ ಅಸಹನೆ, ಚಡಪಡಿಕೆ.. ಇನ್ನು ಮಧ್ಯಾಹ್ನದ ಮೀಟಿಂಗುಗಳು ಶುರುವಾದರೆ ಆ ಪೆಟ್ಟಿಗೆಯ ಕಡೆ ಗಮನ ನೀಡಲಾಗುವುದಿಲ್ಲ.. ಈಗಲೆ ಯಾರನ್ನಾದರು ಕರೆದು ಸದ್ಯಕ್ಕೆ ಬೇರೆಲ್ಲಾದರು ಇಡಲು ಹೇಳಿಬಿಡಲೆ ? ಆದರೆ ಈಗ ಲಂಚಿನ ಹೊತ್ತು .. ಯಾರು ಕೈಗೆ ಸಿಗುವುದಿಲ್ಲ.. ಅದೆಷ್ಟು ತೂಕವಿದೆಯೊ ಏನೊ.. ಏನು ಮಾಡಬಹುದು ಸದ್ಯಕ್ಕೆ ?’

ಹಾಗೆ ಸುತ್ತಲು ಕಣ್ಣಾಡಿಸುತ್ತಿದ್ದ ನಿಮಿಷನಿಗೆ ತಟ್ಟನೆ ಕಣ್ಣಿಗೆ ಬಿದ್ದಿತ್ತು ಅದರ ಪಕ್ಕದಲ್ಲಿದ್ದ ದೊಡ್ಡ ಅಲ್ಮೇರ.. ‘ಫೈಲುಗಳನ್ನಿಡುವ ಕಬೋರ್ಡಿನ ಪಕ್ಕದಲ್ಲೆ ಅದನ್ನು ಇಟ್ಟಿದ್ದಾರೆ, ಬಹುಶಃ ಕಬೋರ್ಡಿಗೆ ಹಿಡಿಸದ ದೊಡ್ಡ ಸರಕುಗಳನ್ನಿಡಲಿರಬೇಕು.. ಅದೆಲ್ಲ ಖಾಲಿ ಖಾಲಿಯೆ ಇದೆ – ಇನ್ನು ಬಳಸದಿರುವ ಕಾರಣ. ಗಾತ್ರ ಹಿಡಿಸುವಂತಿದ್ದರೆ ಈ ಪೆಟ್ಟಿಗೆಯನ್ನು ಸದ್ಯಕ್ಕೆ ಅಲ್ಲಿಗೆ ವರ್ಗಾಯಿಸಿಬಿಡಬಹುದಲ್ಲಾ ? ಆದರೆ ಹಾಳಾದ್ದು ಅದೆಷ್ಟು ತೂಕವಿದೆಯೊ ಏನೊ? ಸರಿ.. ಯಾಕೊಂದು ಬಾರಿ ನೋಡಿಯೆ ಬಿಡಬಾರದು? ಎತ್ತಲು ಆಗದಿದ್ದರೆ ಯಾರಾದರು ಲಂಚಿನ ನಂತರ ಬಂದವರ ಸಹಾಯ ತೆಗೆದುಕೊಂಡು ಎತ್ತಿಟ್ಟರಾಯ್ತು..’ ಎಂದುಕೊಂಡವನೆ ಎದೆಯುಬ್ಬಿಸಿ, ಕೈಗಳೆರಡನ್ನು ಹುರಿಗೊಳಿಸುತ್ತ ಭಾರವಾದ ವಸ್ತುವನ್ನು ಎತ್ತಿಕೊಳ್ಳುವ ಭೌತಿಕ ಹಾಗು ಮಾನಸಿಕ ಸಿದ್ದತೆಯೊಂದಿಗೆ ಪೆಟ್ಟಿಗೆಗೆ ಕೈ ಹಾಕಿದ ನಿಮಿಷ..

ಭಾರವೇನು ಬಂತು ? ಹೂವೆತ್ತಿದಷ್ಟು ಹಗುರವಾಗಿ ಮೇಲೆದ್ದು ಬಂದಿತ್ತು ಆ ಪೆಟ್ಟಿಗೆ.. ! ಬಹುಶಃ ಮೂರ್ನಾಲ್ಕು ಕೇಜಿಯ ತೂಕದ ಅದರೊಳಗೆ ತೂಕವಾದದ್ದೇನು ಇರಲಿಲ್ಲವೆಂದು ಕಾಣುತ್ತದೆ..ಒಳಗೆ ಟೊಳ್ಳಾಗಿ ಖಾಲಿಯಿದ್ದರು ಇದ್ದೀತು. ಸಲೀಸಾಗಿ ಅದನ್ನೆತ್ತಿದವನೆ ಅಲ್ಮೇರದ ಎಡಖಾನೆಯಲ್ಲಿಟ್ಟು ಮತ್ತೆ ಬಾಗಿಲು ಮುಚ್ಚಿ ನಿರಾಳ ಉಸಿರಾಡಿದ ನಿಮಿಷ.. ‘ಸದ್ಯಕ್ಕೆ ಪರಿಹಾರ ಸುಲಭವಾಗಿಯೆ ಆಗಿಹೋದಂತಾಯ್ತು.. ಈಗ ಪೆಟ್ಟಿಗೆ ಮೊದಲಿದ್ದ ಜಾಗ ಖಾಲಿಯಾಗಿ, ನೀಟಾಗಿ ಕಾಣುತ್ತಿದೆ – ಬಹುಶಃ ಅಲ್ಲೊಂದು ಹೂ ಕುಂಡವನ್ನೊ, ಹೂದಾನಿಯನ್ನೊ ಇಟ್ಟರೆ ನಾವೆಲ್ಟಿಯಾಗಿರುತ್ತದೆ..’ ಎಂದುಕೊಂಡೆ ಕ್ಯಾಂಟಿನ್ನಿನತ್ತ ನಡೆದವನ ಮನದಲ್ಲಿ ಮಾತ್ರ ಆ ಮೂಲ ಕೊರೆತ ನಿಂತಿರಲಿಲ್ಲ; ‘ಏನೊ ಭಾರದ ಪೇಪರುಗಳಿರಬಹುದೆಂದುಕೊಂಡಿದ್ದೆ.. ನೋಡಿದರೆ ಇಷ್ಟು ಹಗುರವಿದೆಯಲ್ಲ? ಒಳಗೇನಿರಬಹುದೆಂದು ನೋಡಿಬಿಡಬೇಕು ಒಮ್ಮೆ..ಹಾಳು ಕುತೂಹಲ ಸುಮ್ಮನಿರಲು ಬಿಡುವುದಿಲ್ಲ.. ಅದೂ ಇಷ್ಟು ಖಾಲಿಯಿದೆಯೆಂದರೆ ಏನೊ ಹೊಸದಾದ ಪ್ಯಾಕ್ ಮಾಡಿಟ್ಟ ವಸ್ತುವೆ ಇರಬೇಕು..’ಎಂದುಕೊಂಡೆ ಗಬಗಬನೆ ತಿನ್ನುತ್ತ ಊಟದತ್ತ ಗಮನ ಹರಿಸಿದ್ದ ನಿಮಿಷ, ಮುಂದಿನ ಮೀಟಿಂಗಿನ ಬಗ್ಗೆ ಮತ್ತೆ ಚಿಂತನೆಗಿಳಿಯುತ್ತ..

ಅಚ್ಚರಿಯೆಂಬಂತೆ ಆ ಮಧ್ಯಾಹ್ನದ ಮೀಟಿಂಗುಗಳೆಲ್ಲ ಅಂದುಕೊಂಡಿದ್ದಕ್ಕಿಂತ ಬಲು ಸುಗಮವಾಗಿಯೆ ನಡೆದುಹೋದವು. ಕಸ್ಟಮರನ ಭೇಟಿಯೂ ಸುಸೂತ್ರವಾಗಿ ನಡೆದು, ಮನೆಗೆ ಎಂದಿಗಿಂತ ತಡವಾಗಿ ಹೊರಡಬೇಕಾಗಿ ಬಂದರೂ ಏನೂ ಆಯಾಸ ಕಾಣಿಸಿಕೊಳ್ಳದೆ ಒಂದು ರೀತಿಯ ಹರ್ಷ ಮೈ ತುಂಬಿಕೊಂಡಂತಿದ್ದುದನ್ನು ಕಂಡು ನಿಮಿಷನಿಗೆ ಅಚ್ಚರಿಯೆನಿಸಿತ್ತು. ‘ಆ ಮನೋಭಾವಕ್ಕೂ ತಾನು ಅಲ್ಮೇರದೊಳಗೆ ಮುಚ್ಚಿಟ್ಟ ರಟ್ಟಿನೆ ಪೆಟ್ಟಿಗೆಗು ಏನಾದರೂ ಸಂಬಂಧವಿರಬಹುದೆ? ‘ ಎನ್ನುವ ಅನಿಸಿಕೆ ಮೂಡಿ ಮರೆಯಾದರೂ ಆ ತರಹದ ಮೂಢನಂಬಿಕೆಯ ಆಲೋಚನೆಗೆ ಅವನಿಗೇ ನಗು ಬಂತು. ಅದೇ ಚಿಂತನೆಯಲ್ಲಿ ಕೊಠಡಿಗೆ ಬೀಗ ಹಾಕಲು ಹೊರಟವನಿಗೆ ಇದ್ದಕ್ಕಿದ್ದಂತೆ, ‘ಯಾಕೊಮ್ಮೆ ಒಳಗೇನಿದೆಯೆಂದು ನೋಡಿಯೆ ಬಿಡಬಾರದು ?’ ಎಂದು ಬಲವಾಗಿಯೆ ಅನಿಸಿತು..

ಒಮ್ಮೆ ಆ ಅನಿಸಿಕೆ ಮನಸಿಗೆ ಬಂದಿದ್ದೆ ತಡ, ಅದು ಆಸೆಯ ಮೂಸೆಯಲ್ಲಿ ಹೊರಳಿ, ಅರಳಿ ಬಲವಾದ ಪ್ರಲೋಭನೆಯ ಹೆಮ್ಮರವಾಗಲಿಕ್ಕೆ ಹೆಚ್ಚೇನು ಸಮಯ ಹಿಡಿಯಲಿಲ್ಲ. ಆ ಆಸೆ ಅದಮ್ಯ ಒತ್ತಡವಾಗಿ ಬದಲಾಗಿ, ‘ಹೇಗೂ ತೂಕವಿಲ್ಲದ ಹಗುರ ಪೆಟ್ಟಿಗೆ ತಾನೆ ? ಒಮ್ಮೆ ಬಿಚ್ಚಿ ನೋಡಿಯೆ ಹೊರಟುಬಿಡೋಣ’ ಎಂಬ ಭಾವಕ್ಕೆ ರಾಜಿ ಮಾಡಿಸಿದಾಗ, ಏನೊ ಒಂದು ಬಗೆಯ ರಣೋತ್ಸಾಹದಿಂದ ಮತ್ತೆ ಒಳಗೆ ಬಂದು ಅಲ್ಮೇರ ಬಾಗಿಲು ತೆರೆದ. ಈಗಾಗಲೆ ಸಂಜೆಯ ಗಡುವು ದಾಟಿದ್ದ ಕಾರಣ ಆಫೀಸು ಬಹುತೇಕ ಖಾಲಿಯಾಗಿತ್ತು.. ಹೊರ ತೆಗೆದ ರಟ್ಟಿನ ಪೆಟ್ಟಿಗೆಯನ್ನು ನಿಧಾನವಾಗಿ ತಾನು ಕೂರುವ ಜಾಗದ ಎದುರಿನ ಮೇಜಿನ ಮೇಲಿರಿಸಿ ಜಾಗರೂಕತೆಯಿಂದ ಬಿಚ್ಚತೊಡಗಿದ, ಅದನ್ನು ಮತ್ತೆ ಮೊದಲಿನಂತೆ ಜೋಡಿಸಲು ಸಾಧ್ಯವಿರುವ ಹಾಗೆ. ಅದರ ಆಯತಾಕಾರದ ಚಿಕ್ಕ ಬದಿಯ ಪಾರದರ್ಶಕ ಟೇಪನ್ನು ಎಳೆಯುತ್ತಿದ್ದಂತೆ ಪಟ್ಟನೆ ಬಿಚ್ಚಿಕೊಂಡ ಅದರ ಬಾಯಿಯ ಮೂಲಕ ಒಳಗಿರುವುದೇನೆಂದು ತಟ್ಟನೆ ಗೋಚರಿಸಿಬಿಟ್ಟಿತ್ತು ನಿಮಿಷನಿಗೆ..!

ಅದೊಂದು ಪೋಲೊ ಕಂಪನಿಯ, ಬೆಳ್ಳಿ ಲೋಹದ ಬಣ್ಣದ ವಿಮಾನದ ಕ್ಯಾಬಿನ್ ಬ್ಯಾಗೇಜ್ ಸೈಜಿನ ಸುಂದರ ಲಗೇಜ್ ಪೀಸ್ ಆಗಿತ್ತು… ಲೋಹದ ಹಾಗೆ ಗಟ್ಟಿ ಹೊದಿಕೆಯ ಕವಚದಿಂದ ಮಾಡಲ್ಪಟ್ಟಿದ್ದರು, ತೂಕವಿಲ್ಲದ ಹಗುರ ಮೂಲವಸ್ತುವನ್ನು ಬಳಸಿದ್ದ ಕಾರಣ ತೀರಾ ತೂಗದೆ ಹಗುರವಾಗಿತ್ತು. ಅದರ ವಿನ್ಯಾಸ ಕೂಡ ನಾವೀನ್ಯತೆಯಿಂದ ಕೂಡಿ, ಮಧ್ಯದ ಭಾಗದಿಂದ ಎರಡು ಬದಿಗೆ ಸಮನಾದ ಸಲೆಯಿರುವಂತೆ ಜಿಪ್ಪಿನ ಮೂಲಕ ಬೇರ್ಪಡಿಸಲಾಗಿತ್ತು.. ಆ ಜಿಪ್ಪನ್ನು ಬಿಚ್ಚಿ ಒಳಗೆ ತೆಗೆದು ನೋಡಿದರೆ ಅದರ ಒಳ ವಿನ್ಯಾಸವೆ ದಂಗು ಬಡಿಸುವ ಮತ್ತೊಂದು ಲೋಕವನ್ನು ತೆರೆದಿಟ್ಟಂತಿತ್ತು… ಸೊಗಸಾದ, ರೇಷ್ಮೆಯಂತೆ ನವಿರಾಗಿ ಹೊಳೆಯುವ, ವಿಶೇಷ ವಸ್ತ್ರದಲ್ಲಿ ಮಾಡಲ್ಪಟ್ಟ ಬಾಟಿಕ್ ಪ್ರಿಂಟಿಂಗಿದ್ದ ಲೈನಿಂಗ್.. ಬಟ್ಟೆಯ ಅಂಚಿನುದ್ದಕ್ಕು ಇದ್ದ ಗಟ್ಟಿಮುಟ್ಟಾದ ಸುಲಲಿತವಾಗಿ ಸರಿದಾಡಬಲ್ಲ ಜಿಪ್ಪನ್ನು ಹಾಕಿ ಮುಚ್ಚಿದರೆ ಪ್ರತಿ ಬದಿಯು ಮತ್ತೊಂದು ಪುಟ್ಟ ಪೆಟ್ಟಿಗೆಯಂತೆ ಬದಲಾಗುತ್ತಿದ್ದುದಲ್ಲದೆ, ಆ ಮುಚ್ಚಿದ ಹೊಳೆಯುವ ವಸ್ತ್ರದ ಮೇಲೆ ಜಿಪ್ಪಿನ ಪುಟ್ಟ ಪಾಕೇಟ್ಟುಗಳು. ಆ ಜಿಪ್ಪಿನ ಪುಟ್ಟ ಜೇಬುಗಳಲ್ಲಿ ಮತ್ತಷ್ಟು ಸಣ್ಣ ಪುಟ್ಟ ವಸ್ತುಗಳನ್ನಿಡುವ ಸಾಧ್ಯತೆಯಿದ್ದು, ಖಾನೆಗಳ ವಿನ್ಯಾಸ, ಸಂಯೋಜನೆ, ಅಚ್ಚುಕಟ್ಟುತನವೆಲ್ಲ ನೋಡಿದರೆ ‘ವಿವರಗಳತ್ತ ಸಮಸ್ತ ಗಮನ – ಅಟೆನ್ಷನ್ ಟು ಡೀಟೈಲ್’ ಎನ್ನುವುದು ಅದರ ಪ್ರತಿ ಅಂಗುಲದಲ್ಲು ಎದ್ದು ಕಾಣಿಸುವಂತಿತ್ತು. ಹೊರಗಿನ ಸೂಟ್ಕೇಸ್ ಮುಚ್ಚುವ ಜಿಪ್ಪಿನ ತುದಿಗಳೆರಡು ಸಂಧಿಸುವ ಜಾಗದಲ್ಲಿ ಅದನ್ನು ಮತ್ತೆ ಸರಿದಾಡದಂತೆ ಪ್ರತಿಬಂಧಿಸುವ ಕೀಲಿಯ ಕಿಂಡಿ ಮತ್ತು ಅದರ ನಂಬರ ಲಾಕಿನ ಪ್ಯಾನೆಲ್.. ಅದೆಲ್ಲ ಸಾಲದೆಂಬಂತೆ ಅದನ್ನು ಹಿಡಿದೆಳೆದುಕೊಂಡು ಹೋಗುವ ಉದ್ದನೆಯ ಸರಳಿನ ಹಿಡಿಯ ಮೇಲೆ ನಿಮಿಷನ ಕಂಪನಿಯ ಲೋಗೊ ಇರುವ ಪದಕದಂತಹ ಲೋಹದ ತುಂಡಿನ ಅಳವಡಿಕೆ ಬೇರೆ. ತಮ್ಮ ಕಂಪನಿಯಿಂದ ಆರ್ಡರು ಕೊಟ್ಟು ಮಾಡಿಸಿರಬೇಕು, ಯಾವುದೊ ವಿಶೇಷ ಉದ್ದೇಶದ ಸಲುವಾಗಿ.. ಆ ಕಾರಣದಿಂದಲೆ ಇಷ್ಟೆಲ್ಲಾ ಎಚ್ಚರಿಕೆಯಿಂದ ಪ್ರತಿಯೊಂದಕ್ಕು ಗಮನವಿಟ್ಟು ಸಿದ್ದ ಮಾಡಿದ್ದಾರೆ – ‘ಮೇಕ್ ಟು ಆರ್ಡರ’ ನ ಸಲುವಾಗಿ.. ಆದ್ದರಿಂದಲೆ ಒರಿಜಿನಲ್ ಪೋಲೊ ಹೆಸರು ಮತ್ತು ಲೋಗೊ ತೆಗೆದು ಹಾಕಿ ನಮಗೆ ಬೇಕಾದ ಕಂಪನಿಯ ಹೆಸರು, ಲೋಗೊ ಇರುವ ಕಿರು ಫಲಕ ಅಂಟಿಸಿದ್ದಾರೆ…’ ಎಂದುಕೊಂಡು ಅದನ್ನು ಮತ್ತೆ ಮೊದಲಿನ ಹಾಗೆ ಮುಚ್ಚಿ ಒಳ ಸೇರಿಸಿದ ನಿಮಿಷ, ಅಲ್ಮೇರದೊಳಗಿಡುತ್ತ..

ಹಾಗೆ ಇಡುತ್ತಿದ್ದಂತೆ ತಟ್ಟನೆ ಮತ್ತೊಂದು ಪ್ರಶ್ನೆಯುದಿಸಿತು ನಿಮಿಷನ ಮನದಲ್ಲಿ – ‘ಇದನ್ನೇಕೆ ತನ್ನ ರೂಮಿನಲ್ಲಿಟ್ಟಿದ್ದಾರೆ?’ ಎಂದು. ‘ಬಹುಶಃ ಅಲ್ಲಿಗೆ ಹೊಸದಾಗಿ ಬಂದ ತನ್ನ ಉಪಯೋಗಕ್ಕೆಂದೆ ಕಂಪನಿ ನೀಡಿರುವ ಉಡುಗೊರೆಯೆ ಇದು ? ಪ್ರಮೋಶನ್ನಿನಲ್ಲಿ ಈ ಸ್ಥಾನಕ್ಕೆ ಬಂದವರೆಲ್ಲರಿಗು ಕೊಡುತ್ತಾರೆಯೊ ಏನೊ? ಅಂದ ಮೇಲೆ ತಾನಿದನ್ನು ಮನೆಗೆ ಒಯ್ದು ಬಳಸಲು ಆರಂಭಿಸಬಹುದಲ್ಲ ? ಎರಡು ಅಥವಾ ಮೂರು ದಿನದ ಬಿಜಿನೆಸ್ ಟ್ರಿಪ್ಪಿಗೆ ಹೇಳಿ ಮಾಡಿಸಿದಂತಿದೆ… ನೋಡಲು ಒಳ್ಳೆ ಪ್ರೊಪೆಷನಲ್ ಲುಕ್ ಇರುವುದರಿಂದ ತನ್ನ ಸ್ಥಾನಮಾನಕ್ಕು ಒಳ್ಳೆಯ ಜೋಡಿ..’ ಹೀಗೆಲ್ಲಾ ಯೋಚಿಸುತ್ತ ಅದನ್ನು ಒಳಗಿಡುವುದೊ ಅಥವಾ ಮತ್ತೆ ಹೊರಕ್ಕೆ ತೆಗೆಯುವುದೊ ಎನ್ನುವ ಸಂದಿಗ್ದದಲ್ಲಿ ಸಿಕ್ಕಿದ್ದ ಹೊತ್ತಲ್ಲೆ, ಮನದ ಇನ್ನೊಂದು ಮೂಲೆಯಿಂದ ಮೊದಲಿನ ಆಲೋಚನಾ ಸರಣಿಗೆ ಸಂವಾದಿಯಾಗಿ ಮತ್ತೊಂದು ವಾದಸರಣಿ ತೇಲಿ ಬರತೊಡಗಿತು.. ‘ಛೆ..ಛೆ.. ಇರಲಾರದು.. ಅದು ನನಗೆ ಎಂದಾಗಿದ್ದರೆ, ಅದನ್ನು ಯಾರಾದರು ತಿಳಿಸದೆ ಇರುತ್ತಿದ್ದರೆ ? ಬಹುಶಃ ತಾನಿಲ್ಲದಾಗ ಖಾಲಿ ರೂಮೆಂದುಕೊಂಡು ಇಲ್ಲಿ ಇಟ್ಟು, ಮತ್ತೆ ವಾಪಸ್ಸೆತ್ತಿಕೊಳ್ಳಲು ಮರೆತಿರಬೇಕು… ಅದು ಯಾರ ಸಲುವಾಗಿ ತಂದಿದ್ದೊ, ಅಥವಾ ಯಾರಿಗೆ ಸೇರಿದ್ದೊ ? ತೆಗೆದುಕೊಳ್ಳದೆ ಇಟ್ಟುಬಿಡುವುದೆ ಸರಿ..’ ಎಂದು ವಿಲೋಮ ವಾದ ಮುಂದೊಡ್ಡಿ ಗೊಂದಲಕ್ಕಿಳಿಸಿಬಿಟ್ಟಿತ್ತು..

‘.. ಬೇರೆಯವರಿಗೆಂದಾದರೆ ನನ್ನ ರೂಮಿನಲ್ಲೇಕಿಡುತ್ತಿದ್ದರು? ಅದೂ ಇಲ್ಲಿರುವುದು ಒಂದೇ ಒಂದು ಪೆಟ್ಟಿಗೆ ಮಾತ್ರ.. ತಾತ್ಕಲಿಕವಾಗಿ ಸ್ಟೋರು ರೂಮಿನಲ್ಲಿಟ್ಟಂತೆ ಇಟ್ಟಿದ್ದರೆ ಇನ್ನು ಹೆಚ್ಚು ಪೆಟ್ಟಿಗೆಗಳಿರಬೇಕಿತ್ತಲ್ಲವೆ ? ಒಂದೆ ಒಂದನ್ನು ಯಾಕಿಡುತ್ತಿದ್ದರು ? ಆದರು ಅದರ ಕುರಿತಾಗಿ ನನಗೆ ಯಾರಾದರು ಹೇಳಬೇಕಿತ್ತಲ್ಲಾ ? ಅದನ್ನು ನನಗೆ ಹೇಳುವವರು ಎಂದರೆ ಅದು ನನ್ನ ಸೆಕ್ರೆಟರಿ ರಾಗಿಣಿಯೆ ಆಗಿರಬೇಕು.. ಹಾಂ..! ರಾಗಿಣಿಯ ಮೆಟರ್ನಿಟಿ ರಜೆಯ ಕಾರಣದಿಂದ ಅವಳು ನನಗೆ ತಿಳಿಸಲಾಗಿಲ್ಲ.. ಅಲ್ಲದೆ ಅವಳ ಆಗಿನ ಮನಸ್ಥಿತಿಯಲ್ಲಿ ಅವಳಿಗೆ ತನ್ನ ಹೆರಿಗೆಯ ಚಿಂತೆಯಿರುವುದೆ ಹೊರತು ಈ ಸಣ್ಣ ಪುಟ್ಟ ವಿಷಯಗಳು ನೆನಪಿರುವುದು ಕಷ್ಟ.. ಅದರಲ್ಲು ತಾನು ಎರಡು ತಿಂಗಳ ಅಂತರದ ನಂತರ ಬಂದರೆ, ಯಾರಿಗೆ ತಾನೆ ನೆನಪಿದ್ದೀತು ? ಬಹುಶಃ ಅವಳು ಹೆರಿಗೆ ರಜೆ ಮುಗಿಸಿ ವಾಪಸ್ಸು ಬಂದ ಮೇಲೆ ನೆನಪಿಸಿಕೊಂಡು ಹೇಳುತ್ತಾಳೇನೊ?’ ಎಂದು ಅದೇ ಬಿರುಸಿನಲ್ಲಿ ಪ್ರಲೋಭಿಸತೊಡಗಿತ್ತು ಮನದಿನ್ನೊಂದು ಮೂಲೆ..

ಆಗ ಇದ್ದಕ್ಕಿದ್ದಂತೆ ನಿಮಿಷನಿಗೆ ನೆನಪಾಗಿದ್ದು ಕಂಪನಿ ಪಾಲಿಸಿಯಾದ ಮೌಲ್ಯಾಧಾರಿತ ವ್ಯಕ್ತಿತ್ವ ನಿಭಾವಣೆಯ ಪ್ರಮಾಣ ವಚನ.. ಅದನ್ನು ಕಟ್ಟುನಿಟ್ಟಾಗಿ ಅನುಸರಿಸುವುದಾದರೆ, ಅನುಮಾನವಿದ್ದಾಗ ಸುರಕ್ಷಿತ ತೀರ್ಮಾನ ಕೈಗೊಳ್ಳುವುದೆ ಉಚಿತ ವಿಧಾನ.. ‘ಈ ವಿಷಯದಲ್ಲಿ ನಿಖರ ಮಾಹಿತಿ ಇಲ್ಲದ ಕಾರಣ ಸುಮ್ಮನೆ ವಾಪಸ್ಸು ಇಟ್ಟು ಬಿಡುವುದೆ ಸರಿ.. ಬೇಕಾದರೆ ರಾಗಿಣಿ ವಾಪಸ್ಸು ಬಂದ ಮೇಲೊ, ಪೋನು ಮಾಡಿದಾಗಲೊ ವಿಚಾರಿಸಿ ಕೇಳಿದರಾಯಿತು..’

ಈ ವಿಚಾರ ಸರಣಿ ಮೂಡುತ್ತಿದ್ದಂತೆ ಗಟ್ಟಿ ನಿರ್ಧಾರ ಮಾಡಿದ ನಿಶ್ಚಿತ ಮನ ಆ ಪೆಟ್ಟಿಗೆಯನ್ನು ಮತ್ತೆ ವಾಪಸಿಟ್ಟು ಬೀಗ ಹಾಕಿ ನಡೆಯಿತು ನಿರಾಳತೆಯ ನಿಟ್ಟುಸಿರುಬಿಡುತ್ತ. ಆದರು ಕಾರಿನ ಪ್ರಯಾಣದುದ್ದಕ್ಕು, ಮನೆ ಸೇರುವ ತನಕ ಆ ಕ್ಯಾಬಿನ್ ಬ್ಯಾಗೇಜ್ ಲಗೇಜಿನ ಸುಂದರ ರೂಪವೆ ಕಾಣುತ್ತಿತ್ತು ನಿಮಿಷನ ಕಣ್ಣ ಮುಂದೆ..!

*******************

ಮುಂದಿನ ಎರಡು ವಾರ ಬಿಡುವಿಲ್ಲದ ಕೆಲಸ ನಿಮಿಷನಿಗೆ. ತಲೆ ಕೆರೆದುಕೊಳ್ಳಲು ಪುರುಸೊತ್ತಿಲ್ಲದಷ್ಟು ಕಾರ್ಯಭಾರ.. ಎರಡು ವಾರದ ನಂತರ ವಿದೇಶದಲ್ಲಿ ನಡೆಸಬೇಕಾಗಿದ್ದ ‘ಮ್ಯಾನೇಜ್ಮೆಂಟ್ ಮೀಟಿಂಗ್’ ಮತ್ತು ‘ಕಸ್ಟಮರ್ ಮೀಟ್’ಗಾಗಿ ಮಾಡಬೇಕಾದ ನೂರೆಂಟು ಸಿದ್ದತೆಗಳು ಅವನ ತಲೆಗೆ ಗಂಟು ಬಿದ್ದಿತ್ತು.. ಹಿಂದೆಲ್ಲ ಇಂಥಾ ಮೇಳಗಳ ಉಸ್ತುವಾರಿ ನೋಡಿಕೊಂಡು ಅನುಭವವಿದ್ದ ರಾಗಿಣಿಯ ಅಲಭ್ಯತೆಯಿಂದಾಗಿ ಎಲ್ಲಾ ತರದ ಚಿಕ್ಕ ಪುಟ್ಟ ಕೆಲಸಗಳ ನಿಭಾವಣೆಯ ಭಾಗವು ಅವನ ಸಮ್ಮತಿಗೊ, ಸಲಹೆಗೊ ಕಾಯುತ್ತ, ಮತ್ತಷ್ಟು ತಡವಾಗಿಸಲು ಅವನನ್ನೆ ಕಾರಣವಾಗಿಸುತ್ತಿತ್ತು.. ಅಂತು ಇಂತು ಎಲ್ಲಾ ಸಿದ್ದತೆಗಳು ನಡೆದು ಬ್ಯಾಂಕಾಕಿಗೆ ಹೊರಡುವ ದಿನ ಬಂದಾಗ ಯಾವುದೊ ದೊಡ್ಡ ಬೆಟ್ಟವೊಂದು ತಲೆಯಿಂದಿಳಿದು ಹಗುರಾಗಿ ಹೋದ ಅನುಭಾವ..

ಎರಡು ದಿನದ ಸಮ್ಮೇಳನಕ್ಕೆ ಬೇಕಾದ ಲಗೇಜು ಪ್ಯಾಕು ಮಾಡಿಕೊಂಡು ಅದಕ್ಕೆ ಸರಿಯಾದ ಸೂಟ್ಕೇಸ್ ಯಾವುದಿದೆಯೆಂದು ಹುಡುಕುತ್ತಿದ್ದವನಿಗೆ ವಾರದ ಪ್ರಯಾಣಕ್ಕೆ ಬೇಕಾಗುವ ಸೈಜಿನ ಲಗೇಜ್ ಬ್ಯಾಗ್ ಮಾತ್ರ ಸಿಕ್ಕಿದಾಗ ತಟ್ಟನೆ ನೆನಪಾಗಿತ್ತು, ಅಲ್ಮೇರದಲ್ಲಿರುವ ಪುಟ್ಟ ಲಗೇಜು.. ‘ಆ ಸೈಜಿನ ಲಗೇಜ್ ಬ್ಯಾಗಿದ್ದಿದ್ದರೆ ಎಷ್ಟು ಸುಲಭವಿರುತ್ತಿತ್ತು? ಚೆಕ್ ಇನ್ ಮಾಡುವ ಹಂಗಿಲ್ಲದೆ ನೇರ ವಿಮಾನದ ಕ್ಯಾಬಿನ್ನಿಗೆ ಒಯ್ದು ಬಿಡಬಹುದಿತ್ತು.. ಈ ದೊಡ್ಡ ಲಗೇಜೆಂದರೆ ಚೆಕ್ ಇನ್ ಮಾಡಲೆ ಬೇಕು.. ಅಂದ ಮೇಲೆ ಹಾಳಾದ್ದು ಎರಡೂ ಕಡೆಯೂ ಲಗೇಜಿನಿಂದ ತಡವಾಗುತ್ತದೆ… ಸಾಲದ್ದಕ್ಕೆ ಅದೇ ವಿಮಾನದಲ್ಲಿ ಬಾಸ್ ಕೂಡ ಹೊರಡುತ್ತಿದ್ದಾರೆ.. ಅವರ ಜತೆಗಿದ್ದಾಗ ತಡವಾಯ್ತೆಂದರೆ ಇನ್ನೂ ಮುಜುಗರ ಹೆಚ್ಚು.. ಅವರಿಗೇನೊ ‘ಫ್ರೀಕ್ವೆಂಟ್ ಫ್ಲೈಯರ್’ ಸ್ಕೀಮಿನಲ್ಲಿ ಪ್ರಿಯಾರಿಟಿ ಚೆಕ್ ಇನ್ ಆಗಿಬಿಡುತ್ತದೆ.. ಹೊಸಬರಾದ ನನ್ನಂತಹವರದು ತಾನೆ ಪಾಡು..?’ ಎಂದು ಗೊಣಗಿಕೊಂಡೆ ಮಾಮೂಲಿಗಿಂತ ಒಂದು ಗಂಟೆ ಮೊದಲೆ ಏರ್ಪೋರ್ಟ್ ತಲುಪಿ ಲಗೇಜ್ ಚೆಕ್ ಇನ್ ಮಾಡಿದ್ದ. ಗಮ್ಯ ತಾಣ ತಲುಪಿ, ಇಮಿಗ್ರೇಶನ್ ಕೌಂಟರ್ ದಾಟಿ ಲಗೇಜ್ ಮತ್ತೆ ಪಡೆಯಲು ಕನ್ವೇಯರ್ ಬೆಲ್ಟಿನತ್ತ ನಡೆದು ಕಾಯುತ್ತ ನಿಂತವನಿಗೆ, ಕಡೆಗು ಅರ್ಧಗಂಟೆಯ ನಂತರವೆ ಲಗೇಜ್ ಕೈಗೆ ಸಿಕ್ಕಿದ್ದು.. ಆದರೆ ಅವನಿಗೆ ಬೇಸರವಾಗಿದ್ದು ಆ ಕಾರಣದಿಂದಲ್ಲ..

ಹೋಟಿಲಿಗೆ ಒಂದೆ ಕಾರಿನಲ್ಲಿ ಹೋಗಬೇಕಿದ್ದ ಕಾರಣ, ಅವನ ಬಾಸು ಆಗಲೆ ತಮ್ಮ ಪುಟ್ಟ ಕ್ಯಾಬಿನ್ ಬ್ಯಾಗೇಜೊಂದನ್ನು ಹಿಡಿದು ಕಾಯುತ್ತ ನಿಂತಿದ್ದರು.. ಚೆಕ್ ಇನ್ ಬ್ಯಾಗೇಜ್ ಇಲ್ಲವೆಂದ ಮೇಲೆ ಸುಮಾರು ಹೊತ್ತೆ ಕಾದಿರಬೇಕು – ಆ ಅಸಹನೆ ಅವರ ಮುಖದಲ್ಲಿ ಎದ್ದು ಕಾಣುವಂತಿದ್ದರು ಬಾಯಿ ಬಿಟ್ಟೇನು ಹೇಳದೆ, ‘ ಯೆಸ್ ಲೆಟಸ್ ಗೋ’ ಎಂದವರನ್ನು ಕುರಿಯ ಹಾಗೆ ಹಿಂಬಾಲಿಸಿ ನಡೆದಿದ್ದ ನಿಮಿಷ.. ಹಾಗೆ ನಡೆದಿದ್ದಂತೆ ಮುಂದೆ ನಡೆದಿದ್ದ ಬಾಸಿನ ಲಗೇಜು ಯಾಕೊ ತೀರಾ ಪರಿಚಿತವಿರುವಂತೆ ಕಂಡಿತು.. ಸ್ವಲ್ಪ ಹತ್ತಿರಕ್ಕೆ ಬಂದು ಯಾಕಿರಬಹುದೆಂದು ಗಮನಿಸಿದವನಿಗೆ ಶಾಕ್ ಆಗುವಂತೆ, ಅದು ಯಥಾವತ್ತಾಗಿ ತನ್ನ ಅಲ್ಮೇರದಲ್ಲಿದ್ದ ಲಗೇಜಿನಂತದ್ದೆ – ಬಣ್ಣ, ಗಾತ್ರ, ವಿನ್ಯಾಸವೆಲ್ಲವು ಪ್ರತಿಶತ ಅದರಂತೆ ಇದ್ದ, ಮತ್ತೊಂದು ಪೋಲೊ ಲಗೇಜ್ ಆಗಿದ್ದುದು ಕಾಣಿಸಿತು.. ಅದರ ಹಿಡಿಯಲ್ಲಿ ಅಂಟಿಸಿದ್ದ ತನ್ನ ಕಂಪನಿಯದೆ ಲೋಗೊ ಕೂಡ ಯಥಾವತ್ ನಕಲಾಗಿದ್ದುದು ಕಾಣುತ್ತಿದ್ದಂತೆ, ‘ಅರೆರೆ..ಈ ಲಗೇಜನ್ನು ಎಲ್ಲರಿಗು ನೀಡಿರುವಂತಿದೆಯಲ್ಲ ? ಬಾಸಿನ ಹತ್ತಿರವೂ ಇದೆಯೆಂದ ಮೇಲೆ, ತನ್ನ ರೂಮಿನಲ್ಲಿರುವುದು ತನಗೆ ಇರಬೇಕೆಂದು ತಾನೆ ಅರ್ಥ? ತಾನೆ ಏನೇನೊ ಇಲ್ಲದ್ದೆಲ್ಲ ಚಿಂತಿಸಿ ಏಮಾರಿಬಿಟ್ಟೆ.. ಈ ಬಾರಿಯಿಂದಲ್ಲದಿದ್ದರು ಮುಂದಿನ ಬಾರಿಯಿಂದ ಅದನ್ನೆ ಬಳಸಿ ಕೊಂಚ ಲಗೇಜ್ ಹೊರೆ ಕಡಿಮೆ ಮಾಡಿಕೊಳ್ಳುವುದೊಳಿತು.. ಅಂತೆಯೆ ಲಗೇಜಿಗೆ ಕಾಯುವ ವೇಳೆ ಕೂಡಾ..’ ಎಂದುಕೊಂಡು ಲಗುಬಗೆಯಿಂದ ಹಿಂಬಾಲಿಸಿದ್ದ ವೇಗದ ಧಾಟಿಯ ಬಾಸಿನ ನಡಿಗೆಯನ್ನೆ ಅನುಸರಿಸುತ್ತ..

ಸಮ್ಮೇಳನವೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಊರಿಗೆ ಹಿಂತಿರುಗಿದ ನಿಮಿಷ ಒಂದು ದಿನ ಸಂಜೆ ಆ ಪೆಟ್ಟಿಗೆ ತೆರೆದು, ಅದನ್ನು ಮನೆಗೊಯ್ದು ಇರಿಸಿಕೊಂಡ. ಅಲ್ಲಿಂದಾಚೆಗೆ ಒಂದೆರಡು ಸಣ್ಣ ಪ್ರಯಾಣಗಳಲ್ಲಿ ಬಳಸಿಯೂ ಬಿಟ್ಟ.. ಅದರ ಫಲಿತವಾಗಿ ಹೊಚ್ಚ ಹೊಸದರಂತಿದ್ದ ಅದರ ಕಪ್ಪು ಗಾಲಿಗಳ ಮೇಲೆ ನಡುವಿನಲ್ಲಿ ಮಂಜು ಮಂಜಾದಂತಿದ್ದ ಬಿಳಿ ಗೆರೆಯೊಂದು, ಅದು ನೆಲದ ಮೇಲೆ ಓಡಾಡಿದ ಗುರುತಿನ ಕುರುಹೆಂಬಂತೆ ಅಚ್ಚು ಹಾಕಿಕೊಂಡು ಬಿಟ್ಟಿತ್ತು. ಅಷ್ಟೆ ಸಾಲದೆನ್ನುವಂತೆ, ಬೇರಾವುದೊ ಲಗೇಜಿಗೆ ತಗುಲಿ ಅದರ ನುಣುಪಾದ ಮೈ ಮೇಲೆ ಕಂಡೂ ಕಾಣದಂತಿದ್ದ ಗೀರುಗಳನ್ನು ಮೂಡಿಸಿ, ಅದರ ಹೊಸತಿನ ಬೆಡಗಿಗೆ ಕೊಂಚ ಕುಂದು ಮೂಡಿಸಿ ಲೋಪವುಂಟಾಗಿಸಿದಾಗ, ಹೊಸ ಕಾರಿಗೆ ಗೀರು ಬಿದ್ದಷ್ಟೆ ಸಂಕಟಪಟ್ಟುಬಿಟ್ಟಿದ್ದ ನಿಮಿಷ..! ಆದರೆ ಹಳತಾದಂತೆ ಅದರ ವ್ಯಾಮೋಹ ತುಸು ಸಡಿಲವಾಗಿಯೊ ಅಥವಾ ಬಿದ್ದ ಹಲವಾರು ಗೀರುಗಳಿಂದ, ಎದ್ದು ಕಾಣುವಂತಿದ್ದ ಒಬ್ಬಂಟಿ ಗೀರು ಎದ್ದು ಕಾಣದಂತೆ ಮರೆಯಾಗಿ ಹೋಗಿಯೊ – ಒಟ್ಟಾರೆ ಅದರ ಪ್ರಕಟ ರೂಪದ ಹೆಚ್ಚುಗಾರಿಕೆಯನ್ನೆ ಗಮನಿಸದವನಂತೆ ಯಾಂತ್ರಿಕವಾಗಿ ಬಳಸತೊಡಗಿದ್ದ ಅದರ ಸೊಬಗನ್ನೆಲ್ಲ ಮರೆತೆ ಹೋದವನಂತೆ..

  
(picture source: http://images.linnlive.com/547b3d68c93e199cbd048cb886b17ccc/303e9ac6-cd12-4c86-bde4-21f5ee5e867e.jpg)

*******************

ಇದಾಗಿ ಸುಮಾರು ಎರಡು ತಿಂಗಳುಗಳ ನಂತರ…

ಆಫೀಸಿನ ಟೆಲಿ ಕಾನ್ಫರೆನ್ಸೊಂದರಲ್ಲಿ ನಿರತನಾಗಿದ್ದ ನಿಮಿಷನಿಗೆ ಗಾಜಿನ ಗೋಡೆಯಾಚೆ ಯಾರೊ ಹೆಣ್ಣು ಕಾಯುತ್ತ ನಿಂತಿದ್ದು ಕಾಣಿಸುತ್ತಿತ್ತು.. ಭಾಗಶಃ ಪಾರದರ್ಶಕ ಗಾಜಿನ ತೆರೆಯ ಪಾರ್ಶ್ವ ಭಾಗದಿಂದ ಅರೆಬರೆ ಕಾಣುತ್ತಿದ್ದ ಸಮವಸ್ತ್ರದ ದೆಸೆಯಿಂದಲೆ ಅದು ಬಾಸಿನ ಸೆಕ್ರೆಟರಿ ‘ಸ್ಟೆಲ್ಲಾ’ ಎಂದರಿವಾಗಿ ಹೋಗಿತ್ತು ನಿಮಿಷನಿಗೆ.. ಆದರೆ ಅವನ ಕಾಲ್ ಮುಗಿಯಲು ಇನ್ನು ಹತ್ತು ನಿಮಿಷವಿತ್ತು.. ಹೀಗಾಗಿ ಅವಳು ನಿಂತಿದ್ದರ ಅರಿವಿದ್ದರು ಅವಳಿಗೆ ಕಾಣುವಂತೆ, ಕೈ ಮೂಲಕವೆ ಕಾದಿರಲು ಸನ್ನೆ ಮಾಡಿ ಹಾಗೆಯೆ ಮಾತು ಮುಂದುವರೆಸಿದ್ದ. ಅದರ ಅರಿವಿದ್ದೊ ಏನೊ ಸ್ಟೆಲ್ಲಾ ಸಹ ಒಳಗೆ ಬರದೆ ಕಾಯುತ್ತ ನಿಂತಿದ್ದಳು ಅವನ ಪೋನಿನ ಮಾತು ಮುಗಿವವರೆಗೆ. ಅದು ಮುಗಿಯುತ್ತಿದ್ದಂತೆ ಮೆಲುವಾಗಿ ಬಾಗಿಲು ತಟ್ಟಿ, ‘ಹಲೋ ನಿಮಿಷ್..ಮೇ ಐ ಕಮ್ ಇನ್ ?’ ಎಂದಳು.. ವಯಸಿನ ಹಿರಿತನದಿಂದಲೊ ಅಥವಾ ಅನುಭವದ ಗಟ್ಟಿತನದಿಂದಲೊ ಅವಳು ಎಲ್ಲರನ್ನು ಏಕವಚನದ ಹೆಸರಲ್ಲೆ ಕರೆಯುವುದು – ಅವಳ ನೇರ ಬಾಸಿನ ಹೊರತಾಗಿ.

” ಹಲೋ ಸ್ಟೆಲ್ಲಾ.. ಪ್ಲೀಸ್ ಕಮ್.. ಏನಿ ಥಿಂಗ್ ಅರ್ಜೆಂಟ್ ? ಸಾರೀ.. ಐ ವಾಸ್ ಇನ್ ಎ ಕಾಲ್ ಜಸ್ಟ್ ನೌ..” ಎಂದ..

ಯಾಕೊ ತುಸು ಕಂಗೆಟ್ಟಂತಿದ್ದ ಸ್ಟೆಲ್ಲಾ, ” ನೋ ಪ್ರಾಬ್ಲಮ್ ನಿಮಿಷ್..ಇಟ್ಸ್ ಓಕೆ .. ಸಾರಿ ಫಾರ್ ದ ಟ್ರಬಲ್.. ನಾನು ನಿಮ್ಮಲ್ಲಿ ಅರ್ಜೆಂಟಾಗಿ ಏನೊ ಕೇಳ ಬೇಕಾಗಿತ್ತು.. ಅದಕ್ಕೆ ಬಂದೆ..” ಎಂದಳು..

” ಕೇಳಿ ಪರವಾಗಿಲ್ಲ.. ನನ್ನ ಮುಂದಿನ ಮೀಟಿಂಗಿಗೆ ಇನ್ನು ಅರ್ಧ ಗಂಟೆ ಬಾಕಿಯಿದೆ..”

” ಏನಿಲ್ಲ ನಿಮಿಷ್.. ಈ ಬಾರಿಯ ನಮ್ಮ ಮಾರ್ಕೆಟಿಂಗ್ ಸ್ಲೋಗನ್ನಿಗೆ ನಾವೊಂದು ಕಾಂಪಿಟೇಷನ್ ನಡೆಸಿ, ಎಲ್ಲರನ್ನು ಭಾಗವಹಿಸುವಂತೆ ಮಾಡಿ ಅದಕ್ಕೆ ಬಹುಮಾನಗಳನ್ನು ಘೋಷಿಸಿದ್ದೆವಲ್ಲ..?”

” ಆಹಾಂ.. ಹೌದು ನೆನಪಿದೆ.. ನಾನಿಲ್ಲಿಗೆ ಬರುವ ಮೂರು ತಿಂಗಳ ಮೊದಲೆ ನಡೆದಿತ್ತು.. ಈಗೇಕದರ ಸುದ್ದಿ..?”

” ಅದರಲ್ಲಿ ಗೆದ್ದ ಮೂವರಿಗೆ ಪ್ರೈಜ್ ಕೊಡಬೇಕೆಂದು ಮೂರು ಐಟಂ ಕೂಡ ತಂದಿದ್ದೆವು.. ಆದರೆ ಮೂವರಲ್ಲಿ ಒಬ್ಬರು ಕೊರಿಯಾದವರಾದ ಕಾರಣ ಅವರಿಗೆ ನೇರ ಬಹುಮಾನ ಕೊಡಲಾಗಲಿಲ್ಲ.. ಯಾವಾಗಲಾದರು ಅವರು ಇಲ್ಲಿಗೆ ಬಂದಾಗ ಅಥವಾ ಯಾರಾದರು ಅಲ್ಲಿಗೆ ಹೋದಾಗ ಕಳಿಸಿದರಾಯ್ತೆಂದು ತೆಗೆದಿಡಲಾಗಿತ್ತು..”

” ಇಷ್ಟೊತ್ತಿಗೆ ಯಾರಾದರು ಒಯ್ದು ಕೊಟ್ಟಾಗಿರಬೇಕಲ್ಲವೆ..? ನಾನು ಹೇಗಿದ್ದರು ಮುಂದಿನ ವಾರ ಕೊರಿಯಾ ಆಫೀಸಿಗೆ ಹೋಗುತ್ತಿದ್ದೇನಲ್ಲಾ ? ಇನ್ನು ತಲುಪಿಸಿಲ್ಲವೆಂದರೆ, ಬೇಕಿದ್ದರೆ ನಾನು ಕೊಂಡೊಯ್ಯಬಲ್ಲೆ…”

” ಇಲ್ಲಾ ನಿಮಿಷ್.. ಅದೇ ಈಗ ತೊಂದರೆಯಾಗಿರುವುದು.. ಆ ವ್ಯಕ್ತಿ ಮುಂದಿನ ವಾರ ಇಲ್ಲಿಗೆ ಬರುತ್ತಿದ್ದೇನೆ, ಬಂದಾಗ ಅದನ್ನು ಕೊಂಡೊಯ್ಯುತ್ತೇನೆ ಎಂದು ಮೇಲ್ ಬರೆದಿದ್ದಾರೆ..”

“ಸರಿ ಮತ್ತೇನು ತೊಂದರೆ..? ಸುಲಭದಲ್ಲೆ ಪರಿಹಾರವಾಯ್ತಲ್ಲ.. ಆಗಲೆ ಕೊಟ್ಟುಬಿಟ್ಟಾರಾಯ್ತಲ್ಲವೆ ?”

“ತೊಂದರೆಯಾಗಿರುವುದು ಹ್ಯಾಂಡ್ ಓವರ್ ಮಾಡುವುದಕ್ಕಲ್ಲಾ..”

“ಮತ್ತೇನಕ್ಕೆ ?”

” ಇದ್ದಕ್ಕಿದ್ದಂತೆ ಈಗ ಆ ಐಟಂ ಎಲ್ಲಿದೆಯೊ ಕಾಣುತ್ತಿಲ್ಲ.. ”

“ಹಾಂ…?!”

” ಅದೊಂದು ಕ್ಯಾಬಿನ್ ಬ್ಯಾ