00716. ಕಾಡುವ ಹೆಂಡತಿ ಮನೆಯೊಳಗಿದ್ದರೆ…(ಹಾಸ್ಯ)
_____________________________________________
(ಹಿಂದೊಮ್ಮೆ ಬರೆದಿದ್ದ ಬರಹ)

ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯ ಮನದಾಳದ ಆಸೆ, ಆಶಯ, ಕನಸು – ಸುಂದರ, ನೆಮ್ಮದಿ ಸುಖದ ಸಂಸಾರ. ಬಾಲ್ಯದ ಮೆಟ್ಟಿಲು ದಾಟಿ, ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು ಜವಾಬ್ದಾರಿಯ ನೊಗಕೆ ಹೆಗಲ್ಗೊಡುವ ಹೊತ್ತಿಗೆ ಮಾನಸಿಕ ಹಾಗೂ ಆರ್ಥಿಕ ಸ್ವಾತ್ಯಂತ್ರದ ಗರಿಯೂ ಬಿಚ್ಚುತ್ತಾ ಹೋಗಿ ಸುಂದರ ಬದುಕಿನ ಆಸೆಯ ಹಕ್ಕಿಯೂ ನಿಧಾನವಾಗಿ ನೆಲದಿಂದ ಮೇಲೆದ್ದು ಹಾರಾಡತೊಡಗುತ್ತದೆ. ಸುಂದರ ಬದುಕು ಒಂದು ಕೈನ ಚಪ್ಪಾಳೆಯಿಂದ ಸಾಧ್ಯವಾಗುವುದಿಲ್ಲವಲ್ಲ? ತಾವಾಗಿ ಹುಡುಕಿದ್ದೊ ಅಥವಾ ಮನೆಯವರಿಂದ ಆರೋಪಿಸಿದ್ದೊ – ಸಾಂಗತ್ಯವೊಂದರ ಜತೆಗಾಗಿ ಮನದಲ್ಲಿ ತಹತಹನೆ, ಕುತೂಹಲ; ಭವಿಷ್ಯದತ್ತ ಆಸೆ ತುಂಬಿದ ಆಶಾವಾದ ಚಿಗುರಿ ಗಿಡವಾಗಿ ಹೂಬಿಡತೊಡಗಿ ಮೈ ಮನವೆಲ್ಲ ಹೂವಂತೆ ಅರಳುವ ಹೊತ್ತು.
ಒಟ್ಟಾರೆ ನಾಟಕೀಯತೆಯ ಜತೆಗೊ ಅಥವಾ ಮಾಮೂಲಿನ ಸದ್ದುಗದ್ದಲವಿಲ್ಲದ ತರದಲ್ಲೊ ಗಂಡು ಹೆಣ್ಣುಗಳೆರಡರ ಜತೆ ಸೇರಿ ಸಂಸಾರವೆನ್ನುವ ಚಕ್ರಕ್ಕೆ ಚಾಲನೆ ಸಿಕ್ಕಾಗ ಹೊಸ ಬದುಕಿನ ಆರಂಭ. ಹೊಸತಲ್ಲಿ ಎಲ್ಲವೂ ಸುಂದರವೆ ಆದರೂ ನಿಜವಾದ ಹೂರಣ ಹೊರ ಬೀಳಲು ಕೊಂಚ ಹೊತ್ತು ಹಿಡಿಯುತ್ತದೆ. ಕೃತಕ ಧನಾತ್ಮಕ ವೇಷಧಾರಣೆಗಳೆಲ್ಲ ಕಳಚಿ, ಸ್ವಾಭಾವಿಕ ಧನ – ಋಣಾತ್ಮಕ ಅಂಶಗಳ ನೈಜ್ಯ ಚಿತ್ರ ಅನಾವರಣೆಗೊಳ್ಳುತ್ತಾ ಹೋಗುತ್ತದೆ. ಈ ಸಮಯವೆ ಬಂಧಗಳನ್ನು ಕಟ್ಟುವ ಅಥವಾ ಉರುಳಿಸುವ ಸಂದಿಗ್ದ ಕಾಲ. ಸುಖಿ- ಅಸುಖಿ ಭವಿತ ಸಂಸಾರದ ನಿಜವಾದ ಬುನಾದಿ ಬೀಳುವುದು ಇಲ್ಲಿಂದಲೆ. ಕೆಲವು ಅದೃಷ್ಟಶಾಲಿಗಳಿಗೆ ಹಾಲು ಜೇನು ಬೆರೆತಂತೆ ಹೊಂದಾಣಿಕೆ ತಂತಾನೆ ಪ್ರಸ್ತುತಗೊಳ್ಳುತ್ತ, ಗಟ್ಟಿಯಾಗುತ್ತ ಹೋಗುತ್ತದೆ. ಮತ್ತೆ ಕೆಲವರಲ್ಲಿ ಸಣ್ಣಪುಟ್ಟ ಏರುಪೇರುಗಳಿದ್ದರೂ, ಹೆಚ್ಚು ಕಡಿಮೆ ಸಹನೀಯ ಶೃತಿಲಯದಲ್ಲಿ ಸಾಗುತ್ತದೆ ಜೀವನ. ಆದರೆ ನಿಜವಾದ ಬಿಕ್ಕಟ್ಟು ಬರುವುದು ಈ ಹೊಂದಾಣಿಕೆ ಕಾಣಿಸದ ಜೋಡಿಗಳಲ್ಲಿ. ಅಲ್ಲಿ ಸಣ್ಣ ಪುಟ್ಟ ವಿಷಯಗಳೆ ದೊಡ್ಡವಾಗಿ ಅಸಹನೀಯ ಹೊಂದಾಣಿಕೆಗಳೊಡನೆ ದಿನದೂಡುವುದೊ ಅಥವಾ ವಾಗ್ಯುದ್ಧ, ವೈರುಧ್ಯಗಳ ನರಕದಲ್ಲಿ ಬಿದ್ದು ಪ್ರತಿದಿನ ಜೀವನದಲ್ಲಿ ಹೆಣಗುತ್ತಲೆ ಸಾಗುವುದೊ ಆಗುತ್ತದೆ. ಸರ್ವ ಸಂಪೂರ್ಣ ಪಕ್ವತೆಯುಳ್ಳ ಸಂಸಾರಗಳು ಇಲ್ಲವೆ ಇಲ್ಲವೆನ್ನುವಷ್ಟು ಅಪರೂಪವಾದರೂ ಸರಾಸರಿ ಲೆಕ್ಕದಲ್ಲಿ ಸಹನೀಯತೆ-ಅಸಹನಿಯತೆಯ ಅಂದಾಜು ಮಟ್ಟದ ಅಕ್ಕಪಕ್ಕದಲ್ಲೆ ಜೋತಾಡುವುದು ಸಾಮಾನ್ಯವಾಗಿ ಕಾಣುವ ಚಿತ್ರಣ.
ಸಹನೀಯ ಹಿತಕರ ವ್ಯಾಪ್ತಿಯೊಳಗಿನ ಪುಣ್ಯವಂತ ಗಂಡಸರ ಯಶಸ್ಸಿನ ಹಿಂದೆ ಆ ಹೆಂಡತಿಯರ ಪಾತ್ರ ಕಂಡೂ ಕಾಣದ ಮಹತ್ತರವೆಂದೆ ಹೇಳಬೇಕು. ಅಂತಹ ಯಶಸ್ವಿ ಗಂಡು ಮನ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪ್ಪಾಯಿ…” ಎಂದು ಹಾಡಿ, ಕುಣಿದು ಕೃತಾರ್ಥರಾಗುತ್ತಾರೆ. ಆದರೆ ಆ ಭಾಗ್ಯವಿಲ್ಲದ ಗಂಡಸರ ಪಾಡೇನು? ಕಾಟ ಕೊಟ್ಟು ಕಾಡುವ ಹೆಂಡತಿಗಳ ಕೈಲಿ ಸಿಕ್ಕಿ ಒದ್ದಾಡುವವರಿಗೆ ಯಾರು ಹಾಡಬೇಕು? (ಅವರಾಗಿಯೆ ಹಾಡುವಂತ ಮನಸ್ಥಿತಿಯಿರುವುದು ಅನುಮಾನ, ಮತ್ತು ಅಪರೂಪ ಬಿಡಿ!).
ಈಗಾಗಾಲೆ ಹಾಡಿದ್ದಾರೊ ಇಲ್ಲವೊ ಗೊತ್ತಿಲ್ಲ – ಬಹುಶಃ ಕೆಲವು ನೊಂದವರು ಬಾತ್ರೂಮುಗಳಲ್ಲಿ ಹಾಡಿಕೊಂಡಿರಬಹುದೊ ಏನೊ. ಏನಾದರಾಗಲಿ ಅಂತಹವರಿಗೆ ಸುಲಭವಾಗಲೆಂದು ಇಲ್ಲೊಂದು ಹಾಡಿದೆ – ಕನ್ನಡನಾಡಲ್ಲಿ ಸುಪ್ರಸಿದ್ಧವಾದ “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ..” ಧಾಟಿಯಲ್ಲಿ. ಅದನ್ನು ತಮ್ಮ ಇಂಪಾದ ಕಂಠದಲ್ಲಿ ಹಾಡಿ ಅಮರಗೊಳಿಸಿದ ಮೈಸೂರು ಅನಂತಸ್ವಾಮಿಯವರ ರಾಗದಲ್ಲೆ ಹಾಡಿಕೊಂಡು ಆನಂದಿಸಿ!
ಕೊ.ಕೊ: ಈ ರೀತಿ ಕಾಟ ಕೊಡುವ ಹೆಂಗಸರು ಕನ್ನಡನಾಡಿನವರಲ್ಲ – ಬೇರೆ ಕಾಲ, ದೇಶ, ಪ್ರಾಂತ್ಯಕ್ಕೆ ಸೇರಿದವರು. ನಮ್ಮ ಕನ್ನಡದ ಹೆಣ್ಣುಗಳು ಅಪ್ಪಟ ಬಂಗಾರ. ಆದ ಕಾರಣ ಕನ್ನಡದ ಹೆಣ್ಣು ಮಕ್ಕಳು ಹಾಡನ್ನು ಓದಿ ತಮ್ಮ ಮೇಲೆ ಆರೋಪಿಸಿಕೊಂಡು , ತಪ್ಪಾಗಿ ಅರ್ಥೈಸಿಕೊಂಡು ಕೋಪಿಸಿಕೊಳ್ಳಬಾರದೆಂದು ಕೋರಿಕೆ!
ಕಾಡುವ ಹೆಂಡತಿ ಮನೆಯೊಳಗಿದ್ದರೆ…
_______________________________
ಕಾಡುವ ಹೆಂಡತಿ ಮನೆಯೊಳಗಿದ್ದರೆ
ಕರಗದಿರುವುದೆ ಕೋಟಿ ರುಪಾಯಿ
ಅಂಥ ಹೆಂಡತಿಯೊಬ್ಬಳು ಹತ್ತಿರವಿದ್ದರೆ
ಲೂಟಿ ಶಾಂತಿ, ಮನಸೆ ಬಡಪಾಯಿ || ಕಾಡುವ ||
ದಿನ ಹಗಲೆ ಇರುಳೆ ಯಾರಿಗೆ ಲೆಕ್ಕ
ಸಾಲಂಕೃತ ಕೋಟಲೆ ದುಃಖ
ಒಂದೆ ಸಮ ಜತೆ ಕಾಡುವ ಕಾಟ
ಸಹಿಸಿ ಬಾಳುವುದಲ್ಲ ಹುಡುಗಾಟ || ಕಾಡುವ ||
ಬೇಡವೆಂದರೂ ದೂರ ತಳ್ಳುವಂತಿಲ್ಲ
ಕಟ್ಟಿಕೊಂಡ ಜನ್ಮಗಳ ಪಾಪ
ದೂರ ತಳ್ಳಲೆಲ್ಲಿ ದೂರ ಹೇಳಲೆ ಕಷ್ಟ
ಸಿಡಿದು ಸಿಗಿಯುವ ಘನ ಕೋಪ || ಕಾಡುವ ||
ಛೀಮಾರಿಗೆಲ್ಲ ಏಮಾರೊ ಸರಕಲ್ಲ
ನಿರ್ದಯೆ ನಿರ್ದಾಕ್ಷಿಣ್ಯತೆ ಒಡವೆ
ಗಂಡನೆನ್ನುವ ಪ್ರಾಣಿ ಯಾವ ಲೆಕ್ಕಕಿಲ್ಲ
ಕೇಡ ಮಾಡಲೇಕವನ ಗೊಡವೆ || ಕಾಡುವ ||
ಹಬ್ಬ ಹರಿದಿನ ಹುಣ್ಣಿಮೆ ಹೋಳಿಗೆಗಿಂತ
ಬೈಗುಳದಡಿಗೆಯೆ ಪ್ರಚಂಡ
ಮಾಡದಿದ್ದರು ಸದ್ಯ ಕಾಡದಿದ್ದರೆ ಸಾಕು
ಎಂದು ಮೌನ ತಬ್ಬಿದವ ಗಂಡ || ಕಾಡುವ ||
ಅಪ್ಪಿ ತಪ್ಪಿ ಎಂದೊ ಮಾಡಿದ ಅಡಿಗೆ
ಪಾತ್ರೆ ಪಗಡಿಯೆಲ್ಲ ಚೆಲ್ಲಾಪಿಲ್ಲಿ
ವಾರಗಟ್ಟಲೆ ಪೇರಿಸಿದ ಮುಸುರೆಗಳೆ
ಗಂಡ ತೊಳೆಯದೆ ಆಗದೆ ಖಾಲಿ || ಕಾಡುವ ||
ಮನೆಗೊಬ್ಬಳೆ ಗೃಹಿಣಿ ಬೇರಿಲ್ಲದ ಕಾಟ
ಟೀವಿ ಧಾರವಾಹಿಗಳೆ ಪ್ರಖರ
ಕೂತ ಸೋಫಾವೆ ಹಾಸಿಗೆ, ಮೆತ್ತೆಗೆ ದಿಂಬೆ
ಊಟಕೆ ಹೊತ್ತಾದರು ಒಲೆಗೆ ಚೌರ || ಕಾಡುವ ||
ಇಂಥ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಬದುಕೆಲ್ಲ ಪೂರ್ತಿ ನರಕಾನೆ
ಹುಲಿಯಂತ ಗಂಡು ಇಲಿಯಾಗಿಬಿಡುವ
ಜೀವಂತ ಶವವಾಗುತ ತಾನೆ || ಕಾಡುವ ||
– ನಾಗೇಶ ಮೈಸೂರು
(ಮೂಲ ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಮತ್ತು ಕವಿತೆಯ ಕ್ಷಮೆ ಬೇಡುತ್ತ 🙏)
(ಚಿತ್ರಕೃಪೆ : ಉದಯವಾಣಿ ಹಳೆಯ ಪುಟವೊಂದರಿಂದ : http://www.udayavani.com/kannada/news/ಕವನಗಳು/51551/ಹೆಂಡತಿಯ-ಹಾಡು)
Like this:
Like ಲೋಡ್ ಆಗುತ್ತಿದೆ...