01391. ನಿದ್ದೆ ಮಾಡಲಿ ಬಿಡವನ…


01391. ನಿದ್ದೆ ಮಾಡಲಿ ಬಿಡವನ…
_________________________________


ನಿದ್ದೆ ಮಾಡಲವನು ಸದ್ದು ಮಾಡದೆ ಬಾ
ಮುದ್ದು ಮಾಡಲ್ಹೊರಟು ಎಬ್ಬಿಸೀಯಾ ಜೋಕೆ!
ಮುದ್ದು ಕಂಗಳ ಮುಖದಾ ಮುಗುಳುನಗೆ
ಚದುರಿಸೀಯಾ ಕಂದನ ಕನಸಿನ ಮೆರವಣಿಗೆ ||

ನೀನಿದ್ದರೇನು ಅವನಮ್ಮ ಗರ್ಭದೆ ಹೊತ್ತು
ಹೆತ್ತವಳು ನೆತ್ತರು ಹಂಚಿ ಕರುಳಿಗೆ ಜೋತು
ಭುವಿಗೆ ಬಿದ್ದವನವನು ಎದ್ದು ನಡೆಯಬೇಕು
ಮಲಗಿರಲಲ್ಲಿಯವರೆಗೆ ನಿನ್ನಾಸೆಗೆ ತಡೆ ಹಾಕು ||

ಅಪ್ಪ ನನಗಿಲ್ಲವೆನಬೇಡ ಭಾವನೆ ಮೃದುಲ
ತೋರದೆ ನಡೆಯಬೇಕಂತೆ ಒಟ್ಟಾರೆ ಸಮತೋಲ
ಮುದ್ದಾಟದೆ ಜಿಪುಣ ಮಾತಾಟದೆ ನಿಪುಣ
ಗದರಿಸುತ ಸಂತುಲನ ಅವನಾಗಬೇಡವೆ ಜಾಣ? ||

ನಾ ತೋರಲಾರೆ ಪ್ರಕಟ ನಿನ್ನಂತೆ ಪ್ರೀತಿ
ಮಲಗಿದೀ ಹೊತ್ತಲೂ ಮುಟ್ಟೆ ಮನಸಾಗದು ಭೀತಿ
ಎಚ್ಚರವಾದರೆ ಬೆಚ್ಚುತ ಅತ್ತಾನು ಬೆದಬೆದರಿ
ಬೆಚ್ಚಗೆ ಮಲಗಿರಲಿ ಹೇಗು ಎದ್ದಾಗ ನಾನವನ ಕುದುರಿ ||

ಅಂದುಕೊಳ್ಳುವರೆಲ್ಲ ಅಪ್ಪನೆದೆ ಕಲ್ಲು
ಅಮ್ಮನ ಪ್ರೀತಿ ಸುಧೆಯಲಿ ಕೆತ್ತುವ ಉಳಿಗಲ್ಲು
ಕಾಣಲಿ ಬಿಡಲಿ ಗಣಿಸದೆ ಶಿಲ್ಪಿ ತನ್ನ ಪಾಡಿಗೆ
ತನ್ನರಿವಂತೆ ಕೆತ್ತುವ ಜರುಗದಂತೆ ಆ ಕಿರುನಗೆ ||


– ನಾಗೇಶ ಮೈಸೂರು
(Nagesha Mn)
(Picture source: Internet / social media)

Advertisements

01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ


01389. ಮಂಕುತಿಮ್ಮನ ಕಗ್ಗ ೭೭ : ಬ್ರಹ್ಮಗೆ ಸೃಷ್ಟಿಯೇ ವೃತ್ತಿ, ಸೃಷ್ಟಿಯೇ ಪ್ರವೃತ್ತಿ

ಮಂಕುತಿಮ್ಮನ ಕಗ್ಗ ೭೭ ರ ಮೇಲಿನ ನನ್ನ ಟಿಪ್ಪಣಿ ರೀಡೂ ಕನ್ನಡದಲ್ಲಿ :

https://kannada.readoo.in/2017/10/ಸೃಷ್ಟಿಯೆ-ವೃತ್ತಿ-ಬ್ರಹ್ಮಗ

01388. ತನ್ನನಾವರಣ….


01388. ತನ್ನನಾವರಣ….
__________________________


ಹೊತ್ತೆ ಬುತ್ತಿಯ ಭಾರ
ಜತೆಗ್ಹೊತ್ತೆ ಯೌವ್ವನ ಭಾರ
ನಡೆದೆ ನಲಿದು ಕುಣಿದು
ಕರುವಿನ ಜತೆ ಹಸು ನಾನಾಗಿ ! ||

ಒಳಗಣ ಮುಗ್ದತೆ ಕಳಚಿ
ತನುವರಳಿದೆ ತನ್ನೆ ಮೊಗಚಿ
ಮನದ ಮೊಗಸಾಲೆ ಜಳಕ
ಏನೋ ಪುಳಕ ಉತ್ಸಾಹ ಕೆಣಕಿ ! ||

ಕುಸುರಿ ಕುಪ್ಪಸ ಜರಿ ಜರತಾರಿ
ಎದೆಯೊಳಗುಬ್ಬಸ ಚಿತ್ತ ಚದುರಿ
ಚಾಕರಿ ನಡುವೆ ಎತ್ತಲೊ ಧ್ಯಾನ
ಬಚ್ಚಿಡಲಾಗದ ಏನೇನೊ ತಲ್ಲಣ ||

ಉಟ್ಟುದ ಮೀರಿಸಿ ಬೆಳೆವಾ ಪ್ರಾಯ
ವಯಸಿನಾಟವಿದೇನು ಮಾಯ ?
ಜಡೆ ನೀಳ ತನುವಪ್ಪಿದ ನಾಗರ
ಒಳಗೆಲ್ಲ ಮಿಡುಕಾಡಿ ಬಸಿರಾಟ ||

ಮಗುವಂತಿರೆ ಜತೆ ಕರು ಮುಗ್ದ
ಬೆಳೆಸೆ ನೇಗಿಲ ಯೋಗಿ ಪ್ರಬುದ್ಧ
ನಡುವಿನ ಸೇತುವೆಯಾಗಿ ಮನಸು
ವಾಸ್ತವದಡಿಯೆ ಕನಸ ನೇಯುತಿದೆ ||

ನವಿಲಂತೆ ಯೌವ್ವನ ಹೀಗೆ ಗರಿ ಕೆದರೆ
ಬಿತ್ತುವ ಮೊದಲುತ್ತರೆ ಗೆಲ್ಲುವ ಕುದುರೆ !
ಮಳೆ ಕಾದರೆ ತೆನೆ ಫಸಲಾಗುವ ಕಾಲ
ಬೆಳೆಯುತ ಕಾಯುವೆ ಪಕ್ವತೆ, ಪ್ರಬುದ್ಧತೆಗೆ ! |

– ನಾಗೇಶ ಮೈಸೂರು
(Nagesha Mn)

(picture source: Internet / social media -ಚಿತ್ರ ಕಳಿಸಿ ಪದ್ಯ ಬರೆಸಿದ್ದು Mohan Kumar D M – ಧನ್ಯವಾದಗಳು ಸಾರ್ 😍🙏👌😊👍)

01387. ಮಳೆ ಹನಿ ಸಾಲದ ಲೆಕ್ಕ


01387. ಮಳೆ ಹನಿ ಸಾಲದ ಲೆಕ್ಕ
______________________________


ಲೆಕ್ಕ ಹಾಕುತ ಕುಳಿತೆ
ಮಳೆ ಹನಿ ಮೊತ್ತ
ಗಗನವಿತ್ತ ಸಾಲ ಭುವಿಗೆ..
ಯುಗಯುಗಾಂತರ ಯಾರಿಟ್ಟಿಹರೊ ?
ಅಸಲು ಬಡ್ಡಿ ಚಕ್ರಬಡ್ಡಿಯೆ ಕರಾಳ.. ||

ತೀರಲಿಲ್ಲ ಅಸಲು ಸಹಜ
ಕಟ್ಟಲಿಲ್ಲ ಬಡ್ಡಿಗು ವನವಾಸ
ಬದುಕಬೇಕಲ್ಲ ಸಾಲ ನಿರಂತರ
ತುಂತುರಲ್ಲೆ ಬಾಕಿ ಏರುತ್ತಾ ದರ
ಈ ಲೇವಾದೇವಿ ಚುಕ್ತಾ ಮಾಡುವವರಾರು ? ||

ಎಲ್ಲಾ ಅವರವರ ಬದುಕಲಿ ವ್ಯಸ್ಥ
ಸ್ವಂತ ಸ್ವಸ್ಥಕೆ ಅಲ್ಲೆ ಮೊಗೆಯುತ್ತ
ಹನಿ ಸಾಲವೆಲ್ಲ ಸಿಕ್ಕೆಲ್ಲೆಡೆ ಚೆಲ್ಲಾಪಿಲ್ಲಿ
ತಿರುಗಿ ಕೊಡರಲ್ಲ ತುಂಬಿರೆ ಸರಿ ಪೆಟಾರಿ
ಏರಿ ಸಾಲದ ಮೊತ್ತ ಇಳೆ ಮೇಲೆ ಸವಾರಿ ||

ಕಾದ ಕೊಟ್ಟವ ಈಗಾದ ಕೆಟ್ಟವ
ಕೊಟ್ಟದ್ದನೆ ಸುರಿಸಿ ಮಾಡಿಹ ನಿರ್ಜೀವ
ಮೋಡದಾರ್ಭಟ ಮುಸುಕಿ ಧೂರ್ತ
ಅಸಲು ಬಡ್ಡಿ ಹನಿಯಲೆ ಮುಳುಗಿಸುತ
ಸೇಡಿಗಿಳಿದು ವಸೂಲಿ ಧ್ವಂಸ ಮಾಡುತ.. ||

– ನಾಗೇಶ ಮೈಸೂರು
(Nagesha Mn)
(picture source: from Readoo Kannada)

01386. ಮುತ್ತಿವೆ ಮುತ್ತಲಿ..


01386. ಮುತ್ತಿವೆ ಮುತ್ತಲಿ..
____________________________________


ಮುತ್ತಿಗೆ ಹಾಕಿವೆ ಮನಸುಗಳ ಲಗ್ಗೆ
ಮುತ್ತಿಡುವಾಟದಲೆ ಏನೀ ಸ್ಪರ್ಧೆ?
ತುತ್ತಿಟ್ಟವಳಿಗೊಂದು ಮುತ್ತಿನ ನಮನ
ತುತ್ತುಮುತ್ತಿನೊಡೆಯನತ್ತವಳ ಗಮನ ||

ಅವನಿಟ್ಟಾ ಮುತ್ತಲಿ ಹಕ್ಕು, ಕಕ್ಕುಲತೆ
ಏನೆಲ್ಲಾ ಕೊಟ್ಟವಳ ರಮಿಸುವ ಪ್ರೀತಿ
ಧನ್ಯತೆ ಕೃತಜ್ಞತೆ ವಂದನೆ ನಾನ ಭಾವ
ಭಟ್ಟಿ ಇಳಿಸಿ ಪರಿಶುದ್ಧ ಕಾಣದು ಕಾವ ||

ಅವಳಲದೇನೊ ತಲ್ಲೀನತೆ ತಾದಾತ್ಮ್ಯ
ಮುಚ್ಚಿದ ಕಣ್ಣಲಿ ಬಚ್ಚಿಹಳೇನು ಕಂದನ ಜೀವಾ?
ಮುತ್ತಿಕ್ಕಿಹಳೊ ತಿಂದಿಹಳೊ – ತಿನ್ನಬಾರದ ಹಣ್ಣ ?
ನಿರ್ಲಕ್ಷಿಸಿ ಬೆರಳಾ ಮೆದ್ದ ಕಂದನ ನಿರಾಳ ಧೈರ್ಯ ! ||

ಇಬ್ಬರ ನಡುವಿನ ಸೇತುವೆ ಗಟ್ಟಿಯಾಗಿಸುತ
ಭಾವ ವಿವೇಚನೆ ತಿರುಗಿಸಿ ಅಮ್ಮನ ಮಡಿಲತ್ತ
ಬಿಡು ಅಪ್ಪಾ ಅರಿತವ ಬೆನ್ನು ಹಾಕೆ ತಪ್ಪೆಣಿಸದವ
ಬೆನ್ನೆಲುಬಾದವಗೆ ಬೆನ್ನಾಗುವ ಕಾಲವನೆಣಿಸುತ್ತ ||

ಅವನೂದಿದ ಕಹಳೆ ಅವಳಿಂದಿಳಿದು ಕಂದಗೆ
ಸ್ವಗತದಲೂದುತ ಕಲಿವ ಪಾಳಿ ಮಗುವೆ
ಕಲಿತಾಡುತಲೆ ಸೇತುವೆ ಬಿಗಿಯಾಗಿಸು ಬಂಧ
ಆಕರ್ಷಣೆ ಮೀರಿದೆಡೆ ಗಟ್ಟಿಯಾಗಿಸೊ ಸಂಬಂಧ ||

– ನಾಗೇಶ ಮೈಸೂರು
(Nagesha Mn)
(picture via Suma Sreepada Rao – thanks a lot 😍🙏🙏😊 – luckily the picture has the artist name Mr. Abhishek – hence picture credit to the source artist !🙏🙏🙏👍👌👏😊)

01385. ಸುಖೀ ಗೀತ..


01385. ಸುಖೀ ಗೀತ..
_________________________


ಬಾ ಮಾತಾಡೋಣ
ಕೂತಾಡೋಣ
ಬಿಡಿ ಹೂವ ಪೋಣಿಸುವ ಹೊತ್ತು ;
ಹೊತ್ತೆ ಮಲಗಿತ್ತು.

ಬಾರೆ ಬಿಡಿಬಿಡಿ ಬೇಡ
ಇಡಿ ಮಾತಾಡುವ ಹಿಡಿ ತುಂಬಾ..
ಹೂ ಮುಡಿ ತುಂಬಲಿ ಬಿಡಲಿ
ಮಾತಾಗಲಿ ಮಡಿಲ ಪೂರ..

ಯಾರ ಮಾತು, ಏನು ವಿಷಯ
ಯಾರಿಗೆ ಬೇಕದೆಲ್ಲ ಪರಿವೆ ?
ಕುಂಟಾಬಿಲ್ಲೆ ಮೈನೆರೆದ ತವಕ
ಅಳ್ಳಿಗುಳ್ಳಿ ಚೌಕ ಭಾರದ ಕೊಡ..

ಗೊತ್ತೇನೆ ಮಲ್ಲಿ, ಮಳ್ಳಿಗಂತೆ ಮದುವೆ !?
ರಾಶಿ ರಾಶಿ ಹೂವ್ವ ಕಟ್ಟುವ ಒಸಗೆ
ಮಂಚವೆ ಬಯಲು ಸಿಂಗಾರವಂತೆ
ಮರಗಿಡಗಳಿರದೆ ಹೂವುದುರಿ ಪವಾಡ..

ಬಿಡೆ ಬೇರೆ ಮಾತಾಡೆ ಜಡೆಯ ತುಂಬ
ಮುಡಿಸಿಡೆ ಹೂವು ಆಗುವುದೇ ಸುದ್ಧಿ?
ಘಮಘಮಿಸೊ ಪರಿಮಳ ನಮ್ಮದೇನು ?
ನಾವೂ ಅದರಂತೆ ಆಗಲುಂಟೇನು ?

– ನಾಗೇಶ ಮೈಸೂರು
೧೩.೧೦.೨೦೧೭

(೩ಕೆ ನಮ್ಮ ಚಿತ್ರ ನಿಮ್ಮ ಕವನ ೫೧ಕ್ಕೆ ಬರೆದ ಕವನ)

01384. ಸೂಜಿ ದಾರದ ಕಥೆ..


01384. ಸೂಜಿ ದಾರದ ಕಥೆ..
_________________________


ನೀ ಸೂಜಿ ನಾ ದಾರ
ಯಾರೋ ನಮ್ಮ ಪೋಣಿಸಿದವರು ?
ನೋಡು ಬಾಳ ಹರಿದ ಬಟ್ಟೆ
ನಾವು ಹಚ್ಚಿದ ತೇಪೆ ಸುಂದರ ಚಿತ್ತಾರ ! ||

ನೀನೆಲ್ಲೊ ಬಿದ್ದಿದ್ದ ಸೂಜಿ
ಒಂಟಿ ಕಣ್ಣಲ್ಲೆ ಮಾಡಿದ್ದೆ ಮೋಡಿ
ನಾನೆಲ್ಲೊ ಬಿದ್ದಿದ್ದೆ ಅನಾಥ
ಕುರುಡು ದಾರ ಕಣ್ಣಾದೆ ಜೋಡಿ ||

ನಿಜ ನಾ ಖರ್ಚಾಗುವ ದಾರ
ಆಗೀಗೊಮ್ಮೆ ದೂರಾದರು ದೂರಿ
ಮುನಿಸಿ ಕಣ್ತಪ್ಪಿಸಿ ಹುಡುಗಾಟ
ಮತ್ತೆ ಮಡಿಲಲಿ ತೂರಿ ನಿರಾಳ ||

ನೋಡಿದೆಯಾ ವಿಚಿತ್ರ ಸತ್ಯ?
ನೀನದೆ ಜಡ ಸೂಜಿ ಸ್ಥಿರ ಪುರುಷ
ನಾ ಅಸ್ಥಿರ ಚಂಚಲ ಪ್ರಕೃತಿ
ನಿರಂತರ ಬದಲಾಗುವದೇ ಸೂತ್ರ ||

ಪ್ರಕೃತಿ ಪುರುಷದಾಟ ಎಲ್ಲೆಡೆ
ಸೂಜಿ ದಾರ ವಸ್ತ್ರ ಬಂಧಿಸುವಾಟ
ಸಹಬಾಳುವೆಯಿರೆ ಸಮರಸ
ದಾರವಿಲ್ಲದ ಸೂಜಿ ಅನಾಥ ಪ್ರೇತ ||


– ನಾಗೇಶ ಮೈಸೂರು
(Nagesha Mn)

(Picture 1: https://thenounproject.com/term/needle-and-thread/
Picture 2: Internet / social media)