1767. ಸ್ವಚ್ಛಂದ ಮುಂಗುರುಳು !


1767. ಸ್ವಚ್ಛಂದ ಮುಂಗುರುಳು !


ಕಿಕ್ಕಿರಿದು ನೆರೆದಾವೆ, ನೋಡಲವಳಂದಾವ
ಮುಕ್ಕರಿದು ಬಂದಾವೆ, ಕಾಣಲವಳ ಚಂದವ!
ಏನ ಹೇಳಲೆ ಕಥೆಯ, ಮುಂಗುರುಳ ವ್ಯಥೆಯನು
ಚಡಪಡಿಸಿ ನರಳಾವೆ, ಮುಟ್ಟಿ ಮುಟ್ಟಿ ಕದಪನು ||

ಕಟ್ಟಿ ಹಾಕೆ ಹವಣಿಕೆ, ಹಾಕಿರೆ ಸತತ ಮುತ್ತಿಗೆ
ಎಡದಿಂದ ಬಲದಿಂದ, ಹಣೆ ತುಟಿ ಗಲ್ಲ ಕುತ್ತಿಗೆ
ಬಿಡದೆ ನಕ್ಷತ್ರ ನಯನ, ಬಿಲ್ಲಿನ ಹುಬ್ಬನು ಸವರೆ
ಕಚಗುಳಿಯಲಿ ಅಳಿಸುತೆ, ನಾಸಿಕವೇರಿದ ಬೆವರೆ ||

ತಂಗಾಳಿ ತೂಗಿದವೆ, ಅಂಬೆಗಾಲಿಕ್ಕಿದವೆ
ತಳ್ಳುಗಾಳಿ ನೆಪದಲಿ, ಮೊಗವೆಲ್ಲ ಸವರಿದವೆ
ಮೆಲ್ಲುಸಿರ ಮೆಲ್ಲಿದವೆ, ಬಿಡದೆ ಮುಡಿದ ಮಲ್ಲೆಗು
ಸ್ಪರ್ಶದೋಕುಳಿಯಲಿ, ಮೀಯಿಸಲು ನಾಚಿ ನಗು ! ||

ಸಾಕಾಯಿತವಳ ಮುಂಗೈ, ಹಿಂತಳ್ಳಿ ಒಂದೆ ಸಮನೆ
ಬಿಡದ ತುಂಟಾಟ ಮುನಿದು, ಶಪಿಸಿರೆ ಮುಂಗುರುಳನೆ
ನುಡಿ ಕೇಳದ ಫಟಿಂಗರ, ಕುಟಿಲತೆಗೆ ಬೇಸತ್ತಳು
ಜಂಬದ ಚೀಲದೊಳಿಂದ, ಪಿನ್ನೊಂದರಲಿ ಬಿಗಿದಳು ! ||

ಎಲ್ಲಿದ್ದನೊ ಸಂಗಾತಿ? ತಟ್ಟನೋಡಿ ಬಂದನೆ
ಮಾತಿಗು ಮೊದಲೆ ತಟ್ಟನೆ, ಹೇರುಪಿನ್ನ ಕಿತ್ತನೆ
ಮತ್ತೆ ಕೆದರಿತು ಜೋಳಿಗೆ, ಹಾರುತೆಲ್ಲೆಡೆ ಚಳಕ
’ಕಟ್ಟಿ ಹಾಕದಿರೆ ನಲ್ಲೆ, ಹಾರಾಟವೆನಗೆ ಪುಳಕ !’ ||

 • ನಾಗೇಶ ಮೈಸೂರು
  ೨೭.೦೩.೨೦೨೦

(Picture source: internet / social media)

1766. ವೀಣೆ ಹಿಡಿದ ವೀಣೆ ನೀನು


1766. ವೀಣೆ ಹಿಡಿದ ವೀಣೆ ನೀನು

ಚೆಲುವೆ ನೀನು ವೀಣೆ ನುಡಿಸೆ, ಮನದಲೇಕೊ ವೇದನೆ
ಮಿಡಿದ ಬೆರಳು ನಾದ ಉಣಿಸೆ, ತುಂಬಿತೇನೊ ಯಾತನೆ
ಗುನುಗುತಿರಲು ಅಧರ ಹೊನಲು, ಚಡಪಡಿಸಿತೆ ಭಾವನೆ
ಮಾತೆ ಬರದೆ ಬರಿಯ ತೊದಲು, ಉಣಬಡಿಸಿತೆ ನೋವನೆ ||

ಜೇಂಕಾರವೊ ಹೂಂಕಾರವೊ, ಗೊಂದಲದಲಿ ಮನವಿರೆ
ಸಿಂಗಾರವೊ ಬಂಗಾರವೊ, ಎವೆಯಿಕ್ಕದೆ ನೋಡಿರೆ
ಏನೊ ಕಳೆದುಕೊಂಡ ಹಾಗೆ, ಒಳಗೇತಕೊ ಕಾಡಿದೆ
ಬಿಟ್ಟು ಹೋಗಲೆಂತು ಬೆರಗೆ, ನಡುಗುತಲಿದೆ ನನ್ನೆದೆ ||

ಅಂದವೆನಲೆ ? ಚಂದವೆನಲೆ ? ದೇವಲೋಕ ಬುವಿಯಲಿ
ಗಾನ ಸುಧೆಯ ಮಧುರ ಶಾಲೆ, ಮಧುವಿನ ಸಿಹಿ ಅಮಲಲಿ
ಬೇಡುತಿಹುದು ಮನವದೇನೊ, ಹೇಳಲಾಗದ ಪದದಲಿ
ಕಾಡುತಿಹುದು ಸೊಗವದೇನೊ, ಮರಳಿ ಹೇಗೆ ಅರುಹಲಿ ? ||

ವೀಣೆ ಹಿಡಿದ ವೀಣೆ ನೀನು, ವೈಣಿಕ ಯಾರೊ ಕಾಣೆನೆ
ನುಡಿಸ ಬರದು ನುಡಿಪೆ ನಾನು, ಕಲಿಸೆ ನೀನೆ ಕಲಿವೆನೆ
ಸರಿಗಮವಿಹ ಸುಪ್ತ ಮನವೆ, ತನುವೆ ತಂತಿ ನಿನ್ನೊಳು
ಮುಟ್ಟಿ ಮಿಡಿವೆ ನಿತ್ಯ ಬರುವೆ, ಮಿಂದು ದಣಿವೆ ನನ್ನೊಳು ||

ಯಾವ ಕವಿಯ ಕವಿತೆ ನೀನು ? ಯಾರು ಕಡೆದ ಶಿಲ್ಪವೆ ?
ಯಾವ ದೇವ ಕುಲದ ಬಾನು ? ಯಾರು ಬೆಸೆದ ಜೀವವೆ ?
ಬೆರೆತು ಸಕಲ ಒಂದೆ ಎಡೆಗೆ, ಬಂದಿತೆಂತೊ ಕಾಣೆನೆ
ಹೇಗಾದರು ಬರಲಿ ಸೊಬಗೆ, ಮೆಲುಕು ಮಧುರ ಶೋಧನೆ ||

 • ನಾಗೇಶ ಮೈಸೂರು
  ೨೮.೦೩.೨೦೨೦

(Picture source: internet / social media)

1765. ಗಜಲ್ (ನಿನ್ನ ಮಡಿಲಲ್ಲಿ)


1765. ಗಜಲ್


(ನಿನ್ನ ಮಡಿಲಲ್ಲಿ)

ಹಾತೊರೆದಿಹೆ ಮಲಗೆ, ನಿನ್ನ ಮಡಿಲಲ್ಲಿ
ಮಗುವಂತಾಗೆ ಸೊಬಗೆ, ನಿನ್ನ ಮಡಿಲಲ್ಲಿ ||

ಮಡಿಲಲೆಣಿಸುತ ತಾರೆ, ಬಾನ ಸೇರೆ
ಮನದಣಿಯದ ಬೆರಗೆ, ನಿನ್ನ ಮಡಿಲಲ್ಲಿ ||

ತುದಿಬೆರಳಲಿ ಸೆರಗ, ಸುರುಳಿ ಸುತ್ತುತ್ತ
ಮೈಮರೆಯಲಿದೆ ನನಗೆ, ನಿನ್ನ ಮಡಿಲಲ್ಲಿ ||

ಜನ್ಮಾಂತರದ ನೋವು, ಮಾಗಿ ಗಾಯ
ತೊಲಗಲೆಲ್ಲಿದೆ ಬೇಗೆ, ನಿನ್ನ ಮಡಿಲಲ್ಲಿ ||

ವ್ರಣವಾಗಿ ರಣಹದ್ದು, ಕುಕ್ಕುವ ಹೊತ್ತಲು
ಸಂತೈಸುತಿರೆ ಕಿರುನಗೆ, ನಿನ್ನ ಮಡಿಲಲ್ಲಿ ||

ನೆಮ್ಮದಿಯ ನಿರಾಳತೆ, ಎಲ್ಲ ಕನಸಂತೆ
ಕೊರಗ ಮಂಜೆಲ್ಲ ಕರಗೆ, ನಿನ್ನ ಮಡಿಲಲ್ಲಿ ||

ಬಿಟ್ಟೆಲ್ಲ ಲೌಕಿಕ ಜಗವ, ನೋಡೆ ಮೊಗವ
ತುಂಬಿತೆ ಕಣ್ಣ ಕಾಡಿಗೆ, ನಿನ್ನ ಮಡಿಲಲ್ಲಿ ||

ಹಸ್ತದೆ ಬೆರಳು ಬೆಸೆದು, ಸ್ಪರ್ಶ ಮಂತ್ರದಲೆ
ಕಟ್ಟುತಿರುವೆ ಮಾಳಿಗೆ, ನಿನ್ನ ಮಡಿಲಲ್ಲಿ ||

ಗುಬ್ಬಿಗದೇನೊ ಹುಚ್ಚಿದೆ, ನಿನ್ನಲಿ ಮದ್ದಿದೆ
ಕಂಡ ಬದುಕ ಜೋಳಿಗೆ, ನಿನ್ನ ಮಡಿಲಲ್ಲಿ ||

 • ನಾಗೇಶ ಮೈಸೂರು
  ೧೧.೦೨.೨೦೨೦

(picture source: internet / social media)

1764. ನೇಗಿಲ ಯೋಗಿ


1764. ನೇಗಿಲ ಯೋಗಿ


ನಸುಕಲೆದ್ದ ಅರುಣ ಶುದ್ಧ
ಮುಸುಕ ತೆರೆದ ಬಾನಿನುದ್ಧ
ಹಾಡುತಿತ್ತೆ ಹಕ್ಕಿ ಬೀಗಿ
ನೇಗಿಲೆತ್ತಿ ನಡೆದ ಯೋಗಿ ||

ಭುಜದಲಿಟ್ಟ ಹೆಣದ ಭಾರ
ಮನದಲಿತ್ತೆ ಋಣದ ಖಾರ
ಸಾಲ ತೀರೆ ಸಾಲದಲ್ಲಿ
ಗಿರಿವಿಯಿಟ್ಟು ಖಾಲಿ ಕತ್ತಲಿ ||

ಬೆಳಗ ಸೊಬಗ ಬಂಧ ಮೋಹ
ತಣಿಯಲೆಂತು ಮನದ ದಾಹ ?
ಉತ್ತಿ ಬಿತ್ತಿ ಬೆಳೆಯೆ ಫಸಲು
ತೀರಿ ಬಿಟ್ಟರೆ ಸಾಕು ಅಸಲು ! ||

ಸಾಲ ಚಕ್ರ ನಿಲದ ಧೂರ್ತ
ಕಾಲ ಚಕ್ರ ಅಣಕ ಮೂರ್ತ
ಭೂತ ಇರಿತ ಭವಿತ ಮರೆತ
ವರ್ತಮಾನದೆ ಮತ್ತೆ ದುಡಿತ ||

ಮುಗಿಯದಲ್ಲ ನಿಲದ ಯಾನ
ಮುಗಿವುದೆಲ್ಲ ಒಳಗ ತ್ರಾಣ
ಚಿತೆಗು ಚಿಂತೆ ಸುಡಲು ಕಟ್ಟಿಗೆ
ಇರಲು ಸಾಕು ನಡೆವ ನೆಟ್ಟಗೆ ||

 • ನಾಗೇಶ ಮೈಸೂರು
  ೧೭.೦೨.೨೦೨೦

(Picture source: Internet / social media)

ನೇಗಿಲ ಯೋಗಿ

1763. ಗಜಲ್ (ಜುಟ್ಟಿಗೆ ಮಲ್ಲಿಗೆ ಹೂವು)


1763. ಗಜಲ್

______________________

(ಜುಟ್ಟಿಗೆ ಮಲ್ಲಿಗೆ ಹೂವು)

ಹೊಟ್ಟೆಗಿಲ್ಲ ಬಟ್ಟೆಗಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು

ಕಟ್ಟಲಿಲ್ಲ ಕೆಡವಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮುಟ್ಟಲಿಲ್ಲ ತಟ್ಟಲಿಲ್ಲ, ಸಗಣಿ ಬೆರಣಿ ಗಂಜಲ

ಮಾತಂತು ಕಮ್ಮಿಯಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಮಾತಿಲ್ಲ ಕಥೆಯಿಲ್ಲ, ನಂಟ ಗಂಟು ಬೇಕೆಲ್ಲಾ

ಕಿಸೆಯಲ್ಲಿ ಕಾಸಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಒಡವೆ ವಸ್ತ್ರಗಳಿಲ್ಲ, ನಕಲಿ ನಗ ಹೇರೆಲ್ಲ

ಬಿನ್ನಾಣ ಮುಗಿದಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

ಗುಬ್ಬಿಯಿನ್ನು ಮರೆತಿಲ್ಲ, ಕಷ್ಟದ ದಿನದ ಬೇನೆ

ಒಣ ಪ್ರತಿಷ್ಠೆ ಗೆಲ್ಲೊಲ್ಲ, ಜುಟ್ಟಿಗೆ ಮಲ್ಲಿಗೆ ಹೂವು ||

– ನಾಗೇಶ ಮೈಸೂರು

೧೫.೦೨.೨೦೨೦

(Picture source: internet / social media)

1762. ಗಜಲ್ (ಮುಕ್ತ ನಗುವಿನಂಚಲಿ ಏನೊ ಅಮಲಿದೆ)


1762. ಗಜಲ್

___________________________________

(ಮುಕ್ತ ನಗುವಿನಂಚಲಿ ಏನೊ ಅಮಲಿದೆ)

ನಶೆಯದೆಂತು ಬಣ್ಣಿಸಲಿ ನಗುವ ತುಟಿಯದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ

ಅಧರ ತುಂಬ ಹುಟ್ಟ ಕಟ್ಟಿ ಜೇನ ಸಿಹಿಯಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಕಮಲ ದಳದ ಕಣ್ಣ ರೆಪ್ಪೆ ಕದವ ಮುಚ್ಚಿದೆ, ನಾಚಿದ ಶಿರ ಹೆಣ್ಣಾಗಿ ತನ್ನೆ ಹುಡುಕಿದೆ

ಕೆಂಪಲದ್ದಿ ಮತ್ತದೇನೊ ನವಿರ ಹಚ್ಚಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ನಾಸಿಕ ಸೊಗ ಕಣ್ಣ ಮಧ್ಯ ತನ್ನನ್ನೆ ನೆಟ್ಟಿದೆ, ಸುಮವಲ್ಲಿ ಅರಳಿ ತನ್ನ ಕಾಲನಿಟ್ಟಿದೆ

ಜಗಮಗಿಸಿದ ನತ್ತ ಸುತ್ತ ಏನೊ ಗುಟ್ಟಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ತುಂಬು ಕದಪ ರಂಗ ಬಳಪ ಮಾತಿನಲ್ಲಿದೆ, ತುಂಬುಗೆನ್ನೆ ಜೇನದೊನ್ನೆ ಕರೆಯನಿತ್ತಿದೆ

ಚಂದ ಮೊಗ ಅಂದ ಜಗದ ದಾರಿ ಕಾದಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

ಗುಬ್ಬಿ ಹಿಡಿದು ನಿಂತ ಕುಂಚ ಕೈ ಮತ್ತೆ ನಡುಗಿದೆ, ಚಿತ್ತ ತುಂಬ ಚಿತ್ರವವಳು ಕೈಯೆ ಓಡದೆ

ಬರೆದ ಗೆರೆಯ ಕುಂದ ಕಂಡು ನಕ್ಕ ನೆನಪಿದೆ, ಮುಕ್ತ ನಗುವಿನಂಚಲಿ ಏನೊ ಅಮಲಿದೆ ||

– ನಾಗೇಶ ಮೈಸೂರು

೧೪.೦೨.೨೦೨೦

(Picture source: internet / social media)

1761. ಗಜಲ್ (ಚಂದದ ಅಪರಾಧವಿದು)


1761. ಗಜಲ್

_______________________

(ಚಂದದ ಅಪರಾಧವಿದು)

ಮುನಿಯದಿರು ತರಳೆ ಮುನಿಸಲ್ಲಿ, ಚಂದದ ಅಪರಾಧವಿದು

ದೂಷಿಸದಿರು ಮರುಳೆ ಮನಸಲ್ಲಿ, ಚಂದದ ಅಪರಾಧವಿದು ||

ನಿದಿರೆ ಹೊದ್ದು ಮಲಗಿದ ಹೊತ್ತದು, ಚಂದಿರ ಮೊಗವೇರೆ ಖುದ್ಧು

ತುಂಟ ಕಿರುನಗೆ ಕದ್ದೆ ಮೊಗದಲ್ಲಿ, ಚಂದದ ಅಪರಾಧವಿದು ||

ನಗೆಯ ಕದ್ದ ಅರಿವಿಲ್ಲ ನಿದಿರೆ, ಗಾಳಿಗೆ ಮುಂದಲೆ ಚದುರೆ

ಗುಟ್ಟೆ ಮೆಲ್ಲ ಸವರಿದೆ ಬೆರಳಲ್ಲಿ, ಚಂದದ ಅಪರಾಧವಿದು ||

ಫಳಫಳನೆ ಹೊಳೆವ ಬೊಟ್ಟಿನಲಿ, ಚಂದ್ರನೊಳ್ಚಂದ್ರನ ತರದಲ್ಲಿ

ಕಾಣೊ ಹಣೆ ಮುದ್ದಿಸಿದೆ ಕಣ್ಣಲ್ಲಿ, ಚಂದದ ಅಪರಾಧವಿದು ||

ಕಮಲದೊಳ ಕಮಲ ಕಣ್ಣೆರಡು, ಅಮಲದ ಹುಬ್ಬಿನ ಕಾಡು

ಚುಂಬಕತೆ ಬಿಲ್ಲ ಹೆದೆ ರೆಪ್ಪೆಯಲ್ಲಿ, ಚಂದದ ಅಪರಾಧವಿದು ||

ಸಂಪಿಗೆಯ ನಾಸಿಕ ಕೈಚಳಕ, ತಿದ್ದಿದ ದೇವನು ರಸಿಕ

ಪರವಶದೆ ಮುಟ್ಟಿದೆ ಕರದಲ್ಲಿ, ಚಂದದ ಅಪರಾಧವಿದು ||

ಗಲ್ಲದೊಳ ಬೆಲ್ಲದ ಕಥೆ ಕವನ, ಕೆನ್ನೆ ಗುಳಿ ಹಾವಳಿ ತಣ್ಣ

ವಿಧಿಯಿಲ್ಲ ಕದಿಯದೆ ಮನದಲ್ಲಿ, ಚಂದದ ಅಪರಾಧವಿದು ||

ಮೃದುವಧರ ಬೆಳಕಲ್ಲಿ ಮಿನುಗೆ, ಸ್ವಪ್ನಕೇನೊ ಮೆಲ್ಲ ಗುನುಗೆ

ತುಟಿ ಕದ್ದು ಚುಂಬಿಸಿದೆ ಕನಸಲ್ಲಿ, ಚಂದದ ಅಪರಾಧವಿದು ||

ಗುಬ್ಬಿಯಾದೆ ತಪ್ಪಿದೆ ಮೈಮರೆತು, ಕದ್ದು ಚುಂಬಿಸಬಾರದಿತ್ತು

ಅದ್ಭುತ ರೂಪು ಕದ್ದೆ ಅಮಲಲ್ಲಿ, ಚಂದದ ಅಪರಾಧವಿದು ||

– ನಾಗೇಶ ಮೈಸೂರು

೧೫.೦೨.೨೦೨೦

(picture source: internet / social media)