01748. ನೀ ನನ್ನೊಳಗಿನ ಗೀತೆ


01748. ನೀ ನನ್ನೊಳಗಿನ ಗೀತೆ

______________________________

ನೆನೆದೆ ನೆನೆದೆ ನಿನ್ನ ನೆನೆದೆ ಮನದೆ

ನಿನ್ನ ನೆನಪ ಮಳೆಯಲಿ ಮನಸೊದ್ದೆಮುದ್ದೆ

ಮೌನದಲಿ ಕೂತರು ಬರಿ ನಿನ್ನ ಸದ್ದೆ

ರಿಂಗಣಿಸುತಿದೆ ಜಪಿಸಿ ಎದೆ ನಿನ್ನ ಸರಹದ್ದೆ ||

ಇತ್ತೇನೇನೊ ಕೊಚ್ಚೆ ಕೆಸರ ರಾಡಿಯೆ

ಬಿದ್ದಿತ್ತಾರದೊ ಕಣ್ಣ ದೃಷ್ಟಿ ಮಂಕು ಮಾಯೆ

ನೀ ಬಂದೆ ಬಾಳಿಗೆ ಗುಡಿಸೆಲ್ಲ ನಕಲಿ

ನಿನ್ನ ನೆನಪ ತುಂತುರಲೆ ಹನಿಸಿ ರಂಗೋಲಿ ||

ತುಟಿಯ ತೇವದೆ ಮಾತಾಗಿ ಮೃದುಲ

ಗುಣುಗುಣಿಸುತೆಲ್ಲ ದನಿ ಇಂಪಾಗಿ ಹಂಬಲ

ಚಡಪಡಿಸುತಿದ್ದ ಹೃದಯ ಕದ ಮುಗ್ಧ

ನೋಡಿಲ್ಲಿ ಮಲಗಿದೆ ಹಸುಗೂಸಂತೆ ನಿಶ್ಯಬ್ಧ ||

ಬಿರುಗಾಳಿಯಿತ್ತು ತಂಗಾಳಿ ನೀನಾದೆ

ತಂಗಳಾಗಬಿಡದೆ ಭಾವನೆ ಬೆಚ್ಚಗಾಗಿಸಿದೆ

ಹುಚ್ಚು ಪ್ರೀತಿ ರೀತಿ ಗೊಣಗಾಟ ಸದಾ

ನಕ್ಕು ನಲಿದಾ ಮನ ಮೆಲುಕು ಹಾಕಿ ಸ್ವಾದ ||

ನೆನೆಯಲೇನಿದೆ ಬಿಡು ನೀನಲ್ಲಿ ನೆಲೆಸಿ

ಗರ್ಭಗುಡಿಯ ದೈವ ಪ್ರಾಣಮೂರ್ತಿ ಅರಸಿ

ಕೂತಾದ ಮೇಲೇನು ಕೊಡುತಿರೆ ವರವ

ಅಂತರಂಗಿಕ ಭಕ್ತ ನಾನಿಹೆ ಬೇಡುವ ಜೀವ ||

– ನಾಗೇಶ ಮೈಸೂರು

೩೦.೦೫.೨೦೧೮

(Picture source: internet / social media)

02105. ಆಷಾಢ ನೆನೆದು..


02105. ಆಷಾಢ ನೆನೆದು..
_____________________

(೦೧)
ಆಷಾಢ ಮೋಡ
ಮನಸಿನಂತೆ ಗೂಢ
ಕಪ್ಪು ಬಿಳುಪು

(೦೨)
ಆಷಾಢ ಮಳೆ
ನೆನೆದವು ನೆನಪು
ಕಾಫಿಯ ಹಬೆ

(೦೩)
ನೆನೆವ ಇಳೆ
ಮಳೆಯಲ್ಲಿ ಬೆತ್ತಲೆ
ನೆನಪಿನಲ್ಲಿ

(೦೫)
ಯಾರವನಾರು
ಆಷಾಢ ಗುಣಿಸುವ
ತುಂತುರು ಗಾಳಿ

(೦೬)
ಯಾರವಳಾಕೆ
ಬಿಕ್ಕುವ ಆಷಾಢಕು
ಮಂಕಿನ ಜೊಂಪು

(೦೭)
ಚತುರನಾರು
ನೆಪವಾಗೋ ಅವನು
ನೆನಪ ಮಳೆ

(೦೮)
ಮಳೆಯಾದನು
ಉತ್ತಿ ಬಿತ್ತಿ ಹೋದನು
ಬರೀ ನೆನಪು

(೦೯)
ಹಂಚಿಕೊಂಡರೆ
ಚೋರನವನ್ಯಾರೆಂದು
ರಟ್ಟಾಗೋ ಗುಟ್ಟು

(೧೦)
ಸಾಕು ಸಲ್ಲಾಪ
ಬರೀ ಮಾತಿನ ಭೂಪ
ಆಷಾಢ ಧೂಪ

(೧೧)
ನಾನವನಲ್ಲ
ಗೊತ್ತಿದ್ದೂ ದೂರದಾಸೆ
ನಾನಾಗಿದ್ದರೆ

(೧೨)
ಕೊಲ್ಲುವ ಮೌನ
ಸಂತೈಸುವ ವಿಚಿತ್ರ
ಯಾತನೆ ಸಿಹಿ

(೧೩)
ಕಬ್ಬಿನ ರಸ
ಕುಡಿದರೇನು ಮೊತ್ತ
ಮಾತಲ್ಲ ಸಿಹಿ

(೧೪)
ಕಾಲಾಯಾಪಕೆ
ಒಳ್ಳೆಯ ಮದ್ದೆಂದರು
ಇಂಥಾ ಆಲಾಪ

– ನಾಗೇಶ ಮೈಸೂರು
೦೮.೦೭.೨೦೧೭
(ಹಾಯ್ಕು ತರ 😛)

02101. ತುಂತುರು…


02101. ತುಂತುರು…
__________________

(೦೧)
ಮುತ್ತುಗದೆಲೆ
ಹಾಸಿದ್ದರೆ ಅಡಿಗೆ
ತುತ್ತು ತುಟಿಗೆ

(೦೨)
ಬಾಳೆಲೆ ಊಟ
ಬಾಳಲಿ ಪರಿಸರ
ಬಾಳೆ ಹಿತ್ತಲು

(೦೩)
ಉಂಡ ಕವಳ
ಅರಗಬೇಕು ಸ್ವತಃ
ದುಡಿದು ಬಲ

(೦೪)
ಕಾಳಜಿ ಬೇಡ
ಓಬಿರಾಯನ ಕಾಲ
ಇನ್ನೂ ಜೀವಂತ

(೦೫)
ಬದಲಾವಣೆ
ಯಾರಿಗೆ ಹೇಳುವುದು
ಬದಲಾಗಿದೆ

– ನಾಗೇಶ ಮೈಸೂರು
೦೭.೦೭.೨೦೧೭

02052. ಕೋಣನ ಕಥೆ.. (ಸುಮ್ನೆ)


02052. ಕೋಣನ ಕಥೆ.. (ಸುಮ್ನೆ)
____________________________


(೦೧)
ಪಾಪ ಬಫೆಲೊ
ತಿನ್ನೇ ಪರವಾಗಿಲ್ಲ
ಬೀಫಾಗಿ ದುಃಖ

(೦೨)
ಬೈಗುಳ ಶುದ್ಧ
ಫೆಲೋ ಆಗಿ ಬಫೆಲೊ
ಕೋಣ ದೌರ್ಭಾಗ್ಯ

(೦೩)
ಮೊಂಡು ಬುದ್ಧಿಗೆ
ಎಮ್ಮೆ ಚರ್ಮ ಹೋಲಿಕೆ
ಪಾಪ ಮಹಿಷ

(೦೪)
ಮಂದ ಬುದ್ದಿಗೂ
ಎಮ್ಮೆ ಹಾಲು ಕಾರಣ
ಮಾನವ ಮತಿ

(೦೫)
ಮಹಿಷ ನಿಂದೆ
ಯಮನ ಕಿವಿ ಸೇರೆ
ನರಕ ಶಾಸ್ತಿ

(೦೬)
ಮಹಿಷಾಸುರ
ಕೂಡಾ ಕೋಣನೆಂದರೆ
ದಾನವನಂತೆ

(೦೭)
ನೆನೆವ ಸುಖ
ಎಮ್ಮೆಯ ಮೇಲೆ ಮಾತ್ರ
ಸೋಮಾರಿತನ

(೦೮)
ಎಮ್ಮೆಗೂ ಹೆಮ್ಮೆ
ಯಮಧರ್ಮನ ವಾಹನ
ಮುರಿದು ಗರ್ವ

(೦೯)
ಕಡು ಕಪ್ಪಣ್ಣ
ಬಣ್ಣ ಹೋಗದು ಸತ್ಯ
ಲೈಫ್ ಗ್ಯಾರಂಟಿ

(೧೦)
ಎಮ್ಮೆಯ ಹಾಡು
ಬೆನ್ನಲಿ ಕೂತು ಹಾಡು
ರಾಜಕುಮಾರ

– ನಾಗೇಶ ಮೈಸೂರು
30.05.2017

(Picture source : Creative Commons)

02049. ಸಿಹಿಗೊಂದು ಸಿಹಿಗುದ್ದು


02049. ಸಿಹಿಗೊಂದು ಸಿಹಿಗುದ್ದು
_______________________


(೦೧)
ಇರೆ ಅಕ್ಕರೆ
ಸಕ್ಕರೆ ನೀರ ಹಾಗೆ
ನೀರೆ ಸಕ್ಕರೆ

(೦೨)
ಸಕ್ಕರೆ ಪಿಷ್ಠ
ನನ್ನಿಷ್ಟ ಅಂದ ದೊರೆ
ಸಕ್ಕರೆ ರೋಗ

(೦೩)
ಸಕ್ಕರೆ ಮಾತು
ಒಂದೆರಡು ಜಾಮೂನು
ಕಾನೂನು ಮಿತಿ

(೦೪)
ಸಕ್ಕರೆ ಸರಿ
ತೂಕವಿರೆ ಸೊಗಸು
ಬೊಜ್ಜರಗಿಸು

(೦೫)
ಒಂದಕೆ ತೃಪ್ತಿ
ಎರಡಕೆ ಸಂತೃಪ್ತಿ
ಮೂರಕೆ ಮುಕ್ತಿ

(೦೬)
ಜಾಮೂನು ತಿನ್ನು
ರಸ ತಿನ್ನಬಾರದು
ಮೂರ್ಖರ ವಾದ

(೦೭)
ಹಬ್ಬಕೆ ಸಿಹಿ
ಸಿಹಿಗಿಲ್ಲದ ಹಬ್ಬ
ನಮ್ಮ ಪಾಲಿಗೆ

(೦೮)
ಕುಡಿದು ತಿಂದು
ಚಪ್ಪರಿಸೋ ನಾಲಿಗೆ
ಸಂಚು ಒಳಗೆ

(೦೯)
ಇರುತ್ತಿತ್ತೇನು
ರುಚಿಯಿರದೆ ಇದ್ದರೆ
ಬೊಜ್ಜು ಸಕಲ

(೧೦)
ಸಕ್ಕರೆ ತುಟಿ
ಹಚ್ಚಿದ್ದೋ ಹಂಚಿಸಿದ್ದೋ
ಬಯಕೆ ತುಟ್ಟಿ


– ನಾಗೇಶ ಮೈಸೂರು
೨೭.೦೫.೨೦೧೭

(Picture source : internet / social media / Creative Commons)

02028. ರಾಮಾನುಜ ಸಹಸ್ರಮಾನದ ನೆನಪಿಗೆ (೧೦೧೭)


02028. ರಾಮಾನುಜ ಸಹಸ್ರಮಾನದ ನೆನಪಿಗೆ (೧೦೧೭)
__________________________________

(೦೧)
ವಿಶಿಷ್ಠಾದ್ವೈತ
ರಾಮಾನುಜ ವೇದಾಂತ
ಸಹಸ್ರಮಾನ

(೦೨)
ಗೀತಾ ಭಾಷ್ಯಮ್
ವೇದಾರ್ಥ ಸಂಗ್ರಹಮ್
ಶ್ರೀ ಭಾಷ್ಯಂ ಜತೆ

(೦೩)
ಭಕ್ತಿ ಪ್ರೇರಣೆ
ಮೋಕ್ಷ ಸಾಧನೆ ಹಾದಿ
ವಿಷ್ಣು ಸ್ಮರಣೆ

(೦೪)
ಜೀವಾತ್ಮ ಬ್ರಹ್ಮ
ಒಂದಲ್ಲ ಬೇರೆ ಬೇರೆ
ಏಕತೆ ಸಾಧು

(೦೫)
ವೇದಾರ್ಥ ಸಾರ
ಸಂಗ್ರಹ ಸಂಸ್ಕೃತದೆ
ರಾಮಾನುಜತೆ

(೦೬)
ಶ್ರೀ ಭಾಷ್ಯ ವ್ಯಾಖ್ಯೆ
ಬ್ರಹ್ಮ ಸೂತ್ರ ವಿಮರ್ಶೆ
ಸಂಸ್ಕೃತ ಜ್ಞಾನ

(೦೭)
ಪೂರ್ಣ ವೇದಾಂತ
ವಿವರಿಸಲಶಕ್ಯ
ದ್ವೈತಾದ್ವೈತದೆ

(೦೮)
ತತ್ ತ್ವಂ ಅಸಿ
ಮೂಲೋಪನಿಷದ್ಮಾತ್ರ
ಅದ್ವೈತ ಮಿತಿ

(೦೯)
ವಿವರಿಸಲು
ಸರ್ವ ವೇದಾಂತ ತರ್ಕ
ವಿಶಿಷ್ಠಾದ್ವೈತ

(೧೦)
ದ್ವೈತ ಅದ್ವೈತ
ವೇದಾಂತದೆ ವಿಹಿತ
ಎರಡೂ ಸತ್ಯ

– ನಾಗೇಶ ಮೈಸೂರು
೦೧.೦೫.೨೦೧೭

02027. ಶಂಕರ..


02027. ಶಂಕರ..
________________

(೦೧)
ಆದಿ ಶಂಕರ
ಹಿಡಿದಿತ್ತು ಮಕರ
ಬಿಟ್ಟ ಸಂಸಾರ

(೦೨)
ಮಂಡನ ಮಿತ್ರ
ವಿದ್ವತ್ವಾಗ್ವಾದ ಶುದ್ಧ
ಗುರು ಶಂಕರ

(೦೩)
ಶಂಕರಾಚಾರ್ಯ
ಕಾಲಿಗೆ ಕಟ್ಟಿ ಚಕ್ರ
ತತ್ತ್ವ ಪ್ರಚಾರ

(೦೪)
ಬ್ರಹ್ಮಚಾರಿಯ
ಸೌಂದರ್ಯ ಲಹರಿಗೆ
ಮಾತೆ ತನ್ಮಯ

(೦೫)
ಬಾಲ ಶಂಕರ
ಕುಡಿ ಮೊಳಕೆಯಲ್ಲೆ
ತೋರಿ ಪ್ರಖರ

(೦೬)
ದ್ವೈತ ಅದ್ವೈತ
ಅನುಮಾನದ ಚಿತ್ತ
ಪರಿಹರಣೆ

(೦೭)
ಅಹಂ ಬ್ರಹ್ಮಾಸ್ಮಿ
ಬ್ರಹ್ಮವಾಯಿತು ಕಾಯ
ಜೀವ ನಿಲಯ

(೦೮)
ಶೃಂಗೇರಿ ಪೀಠ
ವೇದಘೋಷ ನಿಕಟ
ಸ್ತುತಿ ಶಾರದೆ

(೦೯)
ಮುಕುಟ ಮಣಿ
ಧರ್ಮಸೆರೆ ಬಿಡಿಸೆ
ಅವತರಿಸಿ

(೧೦)
ಮಾತೆಯ ಸ್ತುತಿ
ಅಯಗಿರಿ ನಂದಿನಿ
ಕೈ ಬಿಡಲಿಲ್ಲ

– ನಾಗೇಶ ಮೈಸೂರು
೩೦.೦೪.೨೦೧೭

02026. ವಚನದಲಿ…


02026. ವಚನದಲಿ…
___________________

(೦೧)
ಬಸವೇಶ್ವರ
ವಚನ ಸಾರಾಮೃತ
ಬದುಕೇ ವರ

(೦೨)
ವಚನ ಘನ
ಕೂಡಲ ಸಂಗಮನ
ಆಶೀರ್ವಚನ

(೦೩)
ಬಸವ ನುಡಿ
ಕಳ ಕೊಲ ಬೇಡೆಂದ
ಹುಸಿಯಾಗದು

(೦೪)
ಬಸವ ಕೊಟ್ಟ
ಅನುಭವ ಮಂಟಪ
ಧಾರೆಯೆರೆದು

(೦೫)
ಶರಣ ಮೇಳ
ಹಂಚಿಕೊಂಡ ಹವಳ
ವಚನಾಮೃತ

(೦೬)
ಸತ್ಯ ವಚನ
ಕಾಯಕವೇ ಕೈಲಾಸ
ನಿತ್ಯ ವಾಚನ

(೦೭)
ಒಡಲ ಉರಿ
ತನ್ನ ಸುಡುವ ಪರಿ
ಪರರ ಸುಡ

(೦೮)
ಕುಲವೆಲ್ಲಿತ್ತು
ವಚನಕಾರರಲ್ಲಿ
ವೃತ್ತಿ ಕಾಯಕ

(೦೯)
ವಚನ ಕಟ್ಟಿ
ಮನುಜ ಮನ ಮುಟ್ಟಿ
ಮಾಡಿದ ಕ್ರಾಂತಿ

(೧೦)
ಮಡಿ ಮೈಲಿಗೆ
ಕಟ್ಟಿಕೊಂಡ ಜೋಳಿಗೆ
ನುಡಿ ವಚನ

(ನಾಗೇಶ ಮೈಸೂರು)
೨೯.೦೪.೨೦೧೭

02017. ಹೀಗೆ..


02017. ಹೀಗೆ..
______________


(೦೧)
ಚಳಿ ವಿಷಾದ
ಬೀಳ್ಕೊಡುತ ಬೇಸಿಗೆ
ಅತ್ತಾಗ ಮಳೆ

(೦೨)
ಬಿಸಿ ಬೆವರು
ಅತ್ತೂ ಕರೆದು ಕರಗಿ
ನೀರಾದ ಬೆಂಕಿ

(೦೩)
ಚಳಿಗೆ ನಾಚಿ
ಮಣ್ಣಿನ ತೆಕ್ಕೆ ಸೇರಿದ್ದು
ಹುಲ್ಲಾಗುತ್ತಿದೆ

(೦೪)
ಎದೆ ಸೀಳದೆ
ಅಳಕೆ ಇಳಿಯದೆ
ಬೇರ ಹೂವಿಲ್ಲ

(೦೫)
ಕುಕ್ಕದೆ ರುಚಿ
ದಕ್ಕದ ಅನುಭವ
ಮನಬಾರದು

(೦೬)
ಇಲ್ಲ ಸಮ್ಮತಿ
ಕಾಣದ ಅಸಮ್ಮತಿ
ಪ್ರೇಮದ ರೀತಿ

(೦೭)
ಬಿತ್ತಿದ್ದಲ್ಲೆಲ್ಲ
ಪ್ರೇಮದ ಹೂವು ಬಿಡೆ
ಮುಡಿ ಗೊಂದಲ

(೦೮)
ಚೋಟುದ್ದ ಹುಲ್ಲು
ತುಳಿದರೂ ಚಿಗುರಿ
ಜೀವನೋತ್ಸಾಹ

(೦೯)
ಗಾಳಿ ಬಿರುಸು
ಬಾಗಿ ನಮಿಸೊ ಹುಲ್ಲು
ಸೆಟೆದು ನಿಲ್ಲು

(೧೦)
ಗುಂಡರಗೂಳಿ
ಚೆಲುವೆ ಮೂಗುದಾರ
ಒರಟು ಮೃದು

– ನಾಗೇಶ ಮೈಸೂರು
೧೬.೦೪.೨೦೧೭
(Picture source: internet / social media)

01195. ಸರಿದ ಯುಗಾದಿ..


01195. ಸರಿದ ಯುಗಾದಿ..
___________________


(೦೧)
ಹೋಳಿ ಹುಣ್ಣಿಮೆ
ಬಣ್ಣದೋಕುಳಿಯಾಟ
– ಮೌನ ಯುಗಾದಿ

(೦೨)
ಮರೆಸುವುದು
ಮೆರೆವಬ್ಬರ ಸದ್ದು
– ಪರಂಪರೆಯ

(೦೩)
ಆಚರಣೆಯೆ
ಅರ್ಥಹೀನ ಕಪಟ
– ಮನವಿಲ್ಲದೆ

(೦೪)
ಉಗಾದಿ ಬಟ್ಟೆ
ಕಾಯುವ ಕುತೂಹಲ
– ಮಾಲಲಿ ಮಾಯ

(೦೫)
ಯಾಕೋ ನಮನ
ಭಕ್ಷೀಸಿನ ಸಂಭ್ರಮ
– ಸಂಪ್ರದಾಯಕೆ

(೦೬)
ನಮಿಸುತ್ತಿತ್ತು
ಹರಸುತಿತ್ತು ಹಸ್ತ
– ದೂರು ದೂರವ

(೦೭)
ಮಾಡಲೊಲ್ಲರು
ಹಬ್ಬದಡಿಗೆ ನಿತ್ಯ
– ಸಿದ್ದದಡಿಗೆ

(೦೮)
ಹೊರನಾಡಲಿ
ಪಾಕೇಟು ಕ್ಯಾಲೆಂಡರು
– ಹಬ್ಬದ ಲೆಕ್ಕ

(೦೯)
ಸಿಕ್ಕುವುದಿಲ್ಲ
ಹಬ್ಬಕು ಬೇವು ಬೆಲ್ಲ
– ನೀರವ ದಿನ

(೧೦)
ವಾಟ್ಸಪ್ಪಿನಲಿ
ಹಾರೈಕೆ ವಿನಿಮಯ
– ಕಾಪಿ ಪೇಸ್ಟಲಿ

– ನಾಗೇಶ ಮೈಸೂರು
೦೨.೦೪.೨೦೧೭

(Picture source : social media)

01193. ತಲೆ ಕೆಟ್ಟ ಹೊತ್ತಲಿ…


01193. ತಲೆ ಕೆಟ್ಟ ಹೊತ್ತಲಿ…
__________________________


(೦೧)
ರೊಚ್ಚೆದ್ದ ಮನ
ಹುಚ್ಚು ಕುದುರೆ ಹತ್ತಿ
– ಕೂತಲ್ಲೇ ಯಾನ

(೦೨)
ಮನದುಗ್ರತೆ
ವ್ಯಗ್ರತೆ ಸಹಚರ
– ವ್ಯಕ್ತ ಅವ್ಯಕ್ತ

(೦೩)
ನಸುನಗುವ
ಮುಸುಡಿಯಡಿ ಕ್ರೌರ್ಯ
– ನಿಗೂಢ ಕಲೆ

(೦೪)
ಉದ್ರಿಕ್ತ ತನು
ಕಾರಿಕೊಂಡಾಗ ಸತ್ಯ
– ಪಿಚ್ಚನೆ ಭಾವ

(೦೫)
ರತಿ ಸುಖಕೆ
ಮನ್ಮಥನ ಬಯಕೆ
– ಮನ ಮಥನ

(೦೬)
ಪರಿಪೂರ್ಣತೆ
ಇಲ್ಲದವರಿಬ್ಬರು
– ಹುಡುಕಿ ಸುಸ್ತು

(೦೭)
ಶಿಸ್ತು ಸಿಂಗಾರ
ಕಾಲವ್ಯಯ ವಿಸ್ಮಯ
– ಕಿತ್ತು ಮಿಲನ

(೦೮)
ತಡವುತಿದೆ
ಉಡುಗೆಯಾಚೆ ಖುದ್ದು
– ಖಾಲಿ ಕೌತುಕ

(೦೯)
ತಲೆ ಕೆಟ್ಟಾಗ
ಬರೆಯಲೇನೋ ಸ್ಫೂರ್ತಿ
– ತಲೆ ಕೆಡಿಸಿ

(೧೦)
ಸಿಗಿದು ಹಾಕೊ
ಸಿಟ್ಟೆಲ್ಲಾ ಪದವಾಗಿ
– ಪ್ರಶಾಂತ ರಸ

– ನಾಗೇಶ ಮೈಸೂರು
೦೧.೦೪.೨೦೧೭
(Picture from Creative Commons)

01188. ಉಗಾದಿ ಚಿತ್ತ


01188. ಉಗಾದಿ ಚಿತ್ತ
________________

Ll
(೦೧)
ಉಗಾದಿ ಚಿತ್ತ
ಬೇವು ಬೆಲ್ಲ ಗಂಟದು
– ಬಿಡದ ನಂಟು

(೦೨)
ವರ್ಷದುಡುಕು
ಗಂಟಲಿಗಿಳಿಯದು
– ಕಡುಬು ನೀರೆ

(೦೩)
ಬೇವಾಗಿ ಚಿತ್ತ
ಬೆದರಿದ ಹೊತ್ತಲಿ
– ಬೆಲ್ಲವೂ ಕಹಿ

(೦೪)
ಬೇವಿನ ಕಡ್ಡಿ
ಸಹನೀಯ ಬಸಿರು
– ಬೇವಿನ ಹೂವು

(೦೫)
ಬೆಲ್ಲದ ಮಾತು
ಬೇವ ಮನದಿಂಗಿತ
– ಒಗರೊಗರು

(೦೬)
ಬೇವಲ್ಲಿ ಬೆಲ್ಲ
ಸಿಹಿಯಾಗದ ಖಳ
– ಲೋಕದ ರೀತಿ

(೦೭)
ಬೆಲ್ಲ ಬೇವಲ್ಲ
ಬೇವು ಬೆಲ್ಲದ ಜಾಲ
– ಬೇವಿಂದ ಬೆಲ್ಲ

(೦೮)
ಬೇವು ಬೇವಾಗಿ
ಕಾಡುವುದಕ್ಕೆ ಮತ್ತೆ
– ಬೆಲ್ಲಕೆ ಮನ್ನಣೆ

(೦೯)

ಬೇವು ಬೆಲ್ಲದ
ಅಡಿಪಾಯ ಪ್ರಕೃತಿ
– ದಿರಿಸುಡುತ್ತ

– ನಾಗೇಶ ಮೈಸೂರು
(Picture from social media / whatsapp received)

01182. ಜಲ ದಿನ ಮನ…


01182. ಜಲ ದಿನ ಮನ…
____________________


(೦೧)
ಜಲಲ ಜಲ
ಸುಲಲಿತ ಅಮಲ
– ಅಮೃತ ಧಾರೆ

(೦೨)
ಜಲ ದೇವತೆ
ಜನನಿ ಜನ್ಮ ಭೂಮಿ
– ತುಂಬಿದ ಕೊಡ

(೦೩)
ಧರಣಿ ಪಾತ್ರೆ
ಹಿಡಿದಿಟ್ಟಿಹ ನೀರೆ
– ಪ್ರಕೃತಿ ಸೀರೆ

(೦೪)
ನೆಲ ಬಿರುಕು
ಬಿಕ್ಕಳಿಕೆ ಕುರುಹು
– ಬರ ಸಿಡಿಲು

(೦೫)
ಬರ ಬಾರದು
ಬಂದರೆ ಗಂಗಾಜಲ
– ಪುಣ್ಯದ ನೆಲ

(೦೬)
ತಿಕ್ಕಲು ಹನಿ
ಮಗ್ಗಲು ಬದಲಿಸಿ
– ತಬ್ಬಿ ಸ್ಖಲನ

(೦೭)
ಬೆವರ ಹನಿ
ಲವಣ ನೆಲ ಗರ್ಭ
– ಅಂತರ್ಜಲದೆ

(೦೮)
ನೀರಿಲ್ಲದಿರೆ
ನಿರ್ವೀರ್ಯ ಪುರುಷತ್ವ
– ಪ್ರಕೃತಿ ಬಂಜೆ

(೦೯)
ಜಲ ದಿನದೆ
ಮಲಿನವಾಗಿಸದೆ
– ಬಳಸೆ ಹಿತ

(೧೦)
ನಾಗರೀಕತೆ
ಹುಟ್ಟಿ ಬೆಳೆಯೆ ಜಲ
– ಅನಾಗರೀಕ

– ನಾಗೇಶ ಮೈಸೂರು
೨೨.೦೩.೨೦೧೭
(Picture source: Creative Commons)

01178. ಬೆಳಗಾಗುತ್ತಾ ಹೀಗೆ..


01178. ಬೆಳಗಾಗುತ್ತಾ ಹೀಗೆ..
________________________


(೦೧)
ಭ್ರಮೆಗಳೆಲ್ಲ
ಹೂವಾಗಿ ಅರಳುತ
– ಕಂಡ ಕನಸು

(೦೨)
ಅದು ತರ್ಕಾರಿ
ತರಕಾರಿ ಅಲ್ಲಾರಿ
– ಬೆಂದ ವಿಚಾರ

(೦೩)
ಸುರಿದ ಹನಿ
ನೀರಾಗದೆ ಉದುರಿ
– ಶ್ವೇತ ಕಮಲ

(೦೪)
ಬಿಕ್ಕುತ್ತಿದ್ದಾಳೆ
ಮೇಘ ಮಲ್ಹಾರ ರಾಗ
– ಎದೆ ತುಂಬುತ

(೦೫)
ನೀರಾಗಿ ಜನ್ಮ
ನಿರ್ಗಲ್ಲುದುರಿ ಹಿಮ
– ಮೃದುಲ ನೆಲ

(೦೬)
ನೆಟ್ಟ ನೋಟಕೆ
ಶುದ್ಧ ಶ್ವೇತ ಶುಭ್ರತೆ
– ಜಾರಿಸೊ ಜಾಣ

(೦೭)
ಹಿಮದ ಗಾಢ
ಬರಿ ಮೈ ಪರಶಿವ
– ಹುಡುಕೆ ಯೋಗಿ

(೦೮)
ನಿತ್ಯದಾಯಾಮ
ಮೈ ಮನದ ವ್ಯಾಯಾಮ
– ಅದೇ ಗೊಂದಲ

(೦೯)
ಚಿಗುರುತಿದೆ
ಚೆಲ್ಲಿ ಆಮ್ಲಜನಕ
– ಉಗುರ ಹುಲ್ಲು

(೧೦)
ನಾನಾಗಿಬಿಟ್ಟೆ
ಸಿಕ್ಕಿದ್ದು ನಾನು ಮಾತ್ರ
– ನೀನಾಗಲಿಲ್ಲ

– ನಾಗೇಶ ಮೈಸೂರು
೧೮.೦೩.೨೦೧೭

01153. ಶಿವರಾತ್ರಿ ಉಪವಾಸ


01153. ಶಿವರಾತ್ರಿ ಉಪವಾಸ 
_______________________


(೦೧)
ಶಿವನ ವಾಸ
ಉಪವಾಸದ ದೇಹ
– ಆತ್ಮದ ಗೂಢ

(೦೨)
ಕಟ್ಟಿದ ಜಟೆ
ಜಾಗರಣೆ ನಿಯಮ
– ಬಿಚ್ಚಬಾರದು

(೦೩)
ಬಿಚ್ಚಿದ ಜಟೆ
ವೀರಭದ್ರನ ವೇಷ
– ಕೊಚ್ಚುವ ಗಂಗೆ

(೦೪)
ಕಣ್ಣಿನ ಸೋಲು
ಕವಿಯುವ ಮಂಪರು
– ಹಾಡ ಹಗಲು

(೦೫)
ಭಜಿಸೋ ಕಾಲ
ಭೋಜನದ ವ್ಯಂಜನ
– ಸಜ್ಜನ ಸಂಗ

(೦೬)
ವನವಾಸದೆ
ಬದುಕೇ ಉಪವಾಸ
– ನಿತ್ಯೋಪಾಸನೆ

(೦೭)
ಜಾಗಟೆ ಗಂಟೆ
ಶಿವನ ಜಾಗರಣೆ
– ಶಬ್ದ ನಿಶ್ಯಬ್ದ

(೦೮)
ಮೌನದ ತಪ
ಆಡಂಬರದ ಪೂಜೆ
– ಸಮತೋಲನ

(೦೯)
ಶೈವ ವೈಷ್ಣವ
ಅವರವರ ಭಾವ
– ಅದ್ವೈತ ದೇವ

(೧೦)
ಜಾಗರಣೆಗೆ
ಹಾಯ್ಕುಗಳುಪವಾಸ
– ಶಿವನ ಬೇಡಿ

– ನಾಗೇಶ ಮೈಸೂರು
೨೫.೦೨. ೨೦೧೭

(Picture source: internet / social media)

01146. ನಗು ಬಗೆ….


01146. ನಗು ಬಗೆ….
___________________

(೦೧)
ಮುಗುಳ್ನಕ್ಕಳು
ಬಾಡದ ಹೂ ನಕ್ಕಿತು
– ಕವಿ ಕನ್ನಡಿ

(೦೨)
ಮುನ್ನುಡಿ ಬರಿ
ಮಾತಿಲ್ಲ ಕಥೆಯಿಲ್ಲ
– ಮಂದಹಾಸದೆ

(೦೩)
ಕದ್ದು ನೋಡುತ
ತುಟಿಯಂಚು ನಗೆಯ
– ಗೂಢ ರವಾನೆ

(೦೪)
ಹುಬ್ಬೇರಿಸುತ
ಮಾತೆಲ್ಲೋ ಮನಸೆಲ್ಲೊ
– ಮಂದ ಗಮನ

(೦೫)
ನೂರಾರು ಅರ್ಥ
ಅವಳ ನಗೆ ನಿಗೂಢ
– ಅನಂತ ಯಾನ

(೦೬)
ಕಣ್ಣು ಕಣ್ಣಲಿ
ಕಲೆತು ನಿಷೇಧಾಜ್ಞೆ
– ಬಿರುಸು ತುಟಿ

(೦೭)
ನಕ್ಕಳಾ ಮಾತೆ
ಬಿಕ್ಕಿ ಬಿಕ್ಕಿ ಅಳುತ್ತ
– ವಿಷಾದದಲ್ಲಿ

(೦೮)
ಗಹಗಹಿಸೆ
ಅಪಹಾಸ್ಯದ ನಗೆ
– ಅಬ್ಬರವಷ್ಟೇ

(೦೯)
ಕಿಲಕಿಲನೆ
ಜುಳುಜುಳು ಸದ್ದಲ್ಲಿ
– ಮಂಜುಳ ಹನಿ

(೧೦)
ಮರೆಯೆ ಹೇಗೆ
ನಗಿಸು ನನ್ನ ಹೂವೇ
– ನಗೆ ನೆನಪು

– ನಾಗೇಶ ಮೈಸೂರು
೧೮.೦೨.೨೦೧೭

(Pictures : wikihow & Creative Commons)

01103. ಗಣರಾಜ್ಯದ ತುಣುಕುಗಳು (೨೬.೦೧.೨೦೧೭)


01103. ಗಣರಾಜ್ಯದ ತುಣುಕುಗಳು (೨೬.೦೧.೨೦೧೭)
__________________________________________


(೦೧)
ಜನರಾಜ್ಯದ
ಗಣರಾಜ್ಯ ಆಗಲಿ
– ಜಾಣರ ರಾಜ್ಯ

(೦೨)
ಸ್ವಚ್ಛವಾಗಲಿ
ಭಾರತ ಮನೆ ಮನ
– ಹಾದಿ ನಿಚ್ಚಳ

(೦೩)
ಕಾಲೆಳೆದುಕೊ
ಎಳೆವ ಜಗ ಬೇಸ್ತು
– ಗಣವಾಗುತ

(೦೪)
ಗಣರಾಜ್ಯದ
ಒಕ್ಕೂಟದ ಬಿಕ್ಕಟ್ಟು
– ಒಳ ಜಗಳ

(೦೫)
ಹಗೆ ಹೊರಗೆ
ಹಿತ ಶತ್ರು ಒಳಗೆ
– ಕಾಯುವ ಬಗೆ


(೦೬)
ಕಾದುವ ಕಲಿ
ಕಾಡುವ ರಣಕಾಳಿ
– ನೈತಿಕ ಬಲ

(೦೭)
ಜನ ಪ್ರಗತಿ
ನೈಜ ದೇಶಮಾಪಕ
– ಬಾಕಿ ಬೊಗಳೆ

(೦೮)
ಜರಡಿಯಲ್ಲಿ
ಎಳ್ಳು ಜೊಳ್ಳು ಜಾಲಾಡೆ
– ಅನಾವರಣ

(೦೯)
ಪಟ್ಟಾಭಿಷೇಕ
ತದನಂತರ ಬೇಡ
– ಉತ್ತರಕಾಂಡ

(೧೦)
ಅಭಿನಂದನೆ
ಗಣರಾಜ್ಯ ಸ್ಪಂದನೆ
– ನಿಂದನೆ ಬೇಡ

– ನಾಗೇಶ ಮೈಸೂರು
೨೬.೦೧.೨೦೧೭
( picture 1. is licensed under a Creative Commons Attribution-NonCommercial-ShareAlike 3.0 Unported License.

Picture 2 source: taken from a facebook post )

01099. ಕಚ’ಗುಳಿಗೆ’ – ೨೪.೦೧.೨೦೧೭


01099. ಕಚ’ಗುಳಿಗೆ’ – ೨೪.೦೧.೨೦೧೭
_____________________

(೦೧)
ವರಸಾಮ್ಯತೆ
ವಯಸ್ಸಿಗಲ್ಲ ಲೆಕ್ಕ
– ಪರಿಪಕ್ವತೆ

(೦೨)
ಕುಳ್ಳು ಎತ್ತರ
ಸರಿ ಜೋಡಿಯಾಗುತ್ತ
– ಸರಾಸರಿಯೆ

(೦೩)
ಕಪ್ಪು ಬಿಳುಪು
ಹಗಲಿರುಳು ಜತೆ
– ಸಂಗಾತಿ ಸುಖ


(೦೪)
ಪೀಚು ಹುಡುಗಿ
ಸ್ಥೂಲಕಾಯ ಹುಡುಗ
– ಮಕ್ಕಳಾಟವೆ

(೦೫)
ಮಲಗೆ ಸರಿ
ಮಕ್ಕಳಾಗುವ ಪರಿ
– ಸೃಷ್ಟಿ ಅದ್ಭುತ

(೦೬)
ಅನುರೂಪತೆ
ಬಾಹ್ಯ ನೋಟ ಗಣಿಸೆ
– ಹೊಂದದ ಚಿತ್ರ

(೦೭)
ಮೌನಿ ಹುಡುಗಿ
ವಾಚಾಳಿ ಅವನಿಗೆ
– ಬಳೆ ಸದ್ದಾಗಿ


(೦೮)
ಮೂಗ ಬಸವ
ಅಮ್ಮಾವ್ರ ಗಂಡ ಪಟ್ಟ
– ಜಾಣ ಕಿವುಡು

(೦೯)
ಬುದ್ಧಿವಂತಿಕೆ
ಸತಿಯಾಗಲಿ ಪತಿ
– ಖರ್ಚಿಗೆ ಕಾಸು

(೧೦)
ಯಜಮಾನತಿ
ಗೃಹ ಬಂಧನ ನೀಡೆ
– ಪ್ರೀತಿಯ ಖೈದಿ

– ನಾಗೇಶ ಮೈಸೂರು
೨೪.೦೧.೨೦೧೭
(Picture source: Creative Commons)

01098. ತುಣುಕಾಟಗಳು – ೨೪.೦೧.೨೦೧೭


01098. ತುಣುಕಾಟಗಳು – ೨೪.೦೧.೨೦೧೭
________________________________


(೦೧)
ಹೆಂಡತಿ ಪ್ರಾಣ
ಹಿಂಡಬಾರದು ಗೊತ್ತಾ
– ಗಂಡ ದೇವರು

(೦೨)
ಗಂಡಾಂತರವ
ದೂರವಿಡೆ ಇರಲಿ
– ಗಂಡ ಅಂತರ

(೦೩)
ಜೊತೆ ಜೊತೆಗೆ
ಇದ್ದರೂ ಸತಿಪತಿ
– ಆಗುವುದಿಲ್ಲ

(೦೪)
ಹೆಣ್ಣು ಗಂಡಸ
ದೌರ್ಬಲ್ಯ ಅರಿತಂತೆ
– ಆಳು ಆಕಾರ

(೦೫)
ಕಂಬನಿ ಹನಿ
ಕಟ್ಟಿ ಮುಳುಗಿಸಿದ
– ನಾರಿ ಸಾಮ್ರಾಜ್ಯ

(೦೬)
ಸಹಗಮನ
ಸತಿ ಕಣ್ತುದಿಯಲ್ಲೆ
– ಪತಿ ಗಮನ

(೦೭)
ಸಂಸಾರ ನೌಕೆ
ಲಂಗರು ನೆಲದಲೆ
– ನಿಲಬಾರದು

(೦೮)
ಗಂಡ ಹೆಂಡತಿ
ಮಕ್ಕಳು ಮನೆ ಗೊನೆ
– ಮಾಗೆ ಹೊಂಬಾಳೆ

(೦೯)
ಸಂಸಾರ ಸುಖ
ಪರಿಪೂರ್ಣತೆ ಶೂನ್ಯ
– ಸಿಕ್ಕುವ ಪೂರ್ಣ

(೧೦)
ಮದನಾರಿಗೆ
ಮದಕರಿ ಮದಕೆ
– ಮದನ ಪ್ರಿಯ

– ನಾಗೇಶ ಮೈಸೂರು
೨೪.೦೧.೨೦೧೭
(Picture source: from internet / social media )

01089. ಕಚ’ಗುಳಿಗೆ’ ವಯಸ್ಕ’ಗಳಿಗೆ’


01089. ಕಚ’ಗುಳಿಗೆ’ ವಯಸ್ಕ’ಗಳಿಗೆ’
________________________


(೦೧)
ರತಿ ಮನ್ಮಥ
ಪ್ರಣಯ ಸ್ಫೂರ್ತಿ ಸ್ವಾರ್ಥ
– ಪ್ರಣವ ಪ್ರೀತಿ

(೦೨)
ರತಿ ಹಿಡಿತ
ಉಡದಂತೆ ಸುಭದ್ರ
– ಉಡದ ವಸ್ತ್ರ

(೦೩)
ಮನ ಮಥನ
ತಾ ಸೋಲುವ ಮದನ
– ರತಿ ವಿಜ್ಞಾನ

(೦೪)
ಆರತಿ ಎತ್ತಿ
ಸೋಬಾನೆ ಪದ ಹಾಡೆ
– ಪ್ರಸ್ತ ಪ್ರಶಸ್ತ

(೦೫)
ಒಂದನುಮಾನ
ವಾತ್ಸಾಯನ ಆಶ್ರಮ
– ಅಭ್ಯಾಸ ಕ್ರಮ

(೦೬)
ವಯಸೆ ರತಿ
ಪರಿಸರ ಮನ್ಮಥ
– ದೂಷಿಸೆ ಕಾಲ

(೦೭)
ಹುಡುಗಿ ರತಿ
ಹುಡುಗ ಮನ್ಮಥನೆ
– ಪ್ರಾಯದ ಕತ್ತೆ

(೦೮)
ಅನುಭವಕೆ
ಆದ್ಯತೆ ಕೊಡೊ ಜಗ
– ಕೆಟ್ಟಿತು ಕಾಲ

(೦೯)
ಮೊದಲ ಸಲ
ಭೀತಿ ಅಳುಕು ನಿಜ
– ನಿರಾಳ ಭೇಟಿ

(೧೦)
ಬೇಟದ ಗುರಿ
ನಿದಿರಾಲಸ್ಯ ದೂರ
– ಕಾಮನೆ ಬಿಲ್ಲು

– ನಾಗೇಶ ಮೈಸೂರು
೨೧.೦೧.೨೦೧೭

Symbolic Picture Source : halebeedu sculpture (own picture)

01088. ಕಚ’ಗುಳಿಗೆ’ – ೨೧.೦೧.೨೦೧೭


01088. ಕಚ’ಗುಳಿಗೆ’ – ೨೧.೦೧.೨೦೧೭
____________________________


(೦೧)
ಬೃಹದಾಕಾರ
ಕಪ್ಪು ಕಲೆ ಹತ್ತಿರ
– ದೂರದ ಬೆಟ್ಟ

(೦೨)
ತುಂಟಿ ನಕ್ಕಳು
ಎರಡು ಚಂದ್ರ ಸದಾ
– ನಿತ್ಯ ಹುಣ್ಣಿಮೆ

(೦೩)
ಮುಗುಳ್ನಕ್ಕಳು
ರತಿಸುಖದಂಚಲಿ
– ನೆನಪ್ಯಾರದೊ

(೦೪)
ನಾನೆಲ್ಲಿ ಎಂದು
ಹುಡುಕಿದ ನಲ್ಲ ತಾ
– ನಲ್ಲೆ ಹೃದಯ

(೦೫)
ಮೋಹಿನಿ ದೆವ್ವ
ಹುಣ್ಣಿಮೆ ಅಮಾವಾಸೆ
– ಗೆಜ್ಜೆಯ ಸದ್ದು

(೦೬)
ನುಲಿದುಕೊಂಡ
ಹುಣ್ಣಿಮೆ ಹಾವ ಕಥೆ
– ಮುರಿದ ಮೂಳೆ

(೦೭)
ಹುಣ್ಣಿಮೆ ರಾತ್ರಿ
ಸೇರಿದ್ದು ತಾಳಮೇಳ
– ಮಾಡಿದ್ದದನೆ

(೦೮)
ಬೆಳದಿಂಗಳು
ಬಿದ್ದರೆ ಕಪ್ಪು ಬಿಳಿ
– ಬಣ್ಣದ ಲೋಕ

(೦೯)
ಹರೆಯ ಜಾಲಿ
ಆಗಿಬಿಟ್ಟರೆ ಖಾಲಿ
– ಗೃಹಸ್ಥಾ’ಶ್ರಮ’

(೧೦)
ಹುಣ್ಣಿಮೆ ಹೆಣ್ಣು
ಬೆಳಕ ಸೋಸೆ ಘಾಸಿ
– ಕತ್ತಲೆ ಹುಣ್ಣು

– ನಾಗೇಶ ಮೈಸೂರು
೨೧.೦೧.೨೦೧೭
(Pictures: halebeedu sculpture-self taken)

01067. ಸಂಕ್ರಾಂತಿಗೆ (೨)


01067. ಸಂಕ್ರಾಂತಿಗೆ (೨)
______________


(೦೧)
ಸನ್ ಕ್ರಾಂತಿಗೆ
ಕಾದ ತಂತಿ ಬಿಸಿಲು
– ಬೆಳಕ ಕಾಂತಿ

(೦೨)
ಸನ್ ಕ್ರಾಂತಿಗೆ
ಹುರಿದುಂಬಿಸಿ ಸೋತ
– ಅಮ್ಮನ ಗೋಳು

(೦೩)
ಎಳ್ಳು ಬೀರಲಿ
ಕಲ್ಲು ಬೀರುವ ಎಂದ
– ತುಡುಗ ಮನ

(೦೪)
ಎದೆಗವ್ಲಕ್ಕಿ
ಎಳ್ಳು ಬೆಲ್ಲ ಕುಟ್ದಂಗೆ
– ಹಬ್ಬದ ಡ್ರೆಸ್ಸು

(೦೫)
ನೈಲೆಕ್ಸ್ ಎಳ್ಳು
ದಿರುಸು ಜಗಮಗ
– ತನು’ನಯ’ನ


(೦೬)
ಸಂಕ್ರಾಂತಿ ಕರ
ಕರವೂ ಪರವಶ
– ಬೆಚ್ಚನೆ ಸ್ಪರ್ಶ

(೦೭)
ಕಬ್ಬಿಗಾದಂತೆ
ಬೇಡ ರಸ ಯಾತನೆ
– ಸಾಕು ಸರಸ

(೦೮)
ಸಂಕ್ರಾಂತಿಗಿಂದು
ಮುಗಿಯಲಿ ಪರೀಕ್ಷೆ
– ಪ್ರೀತಿಯ ಭಿಕ್ಷೆ

(೦೯)
ತೊಡುವ ದೀಕ್ಷೆ
ಸಂಕ್ರಾಂತಿಯ ಆಕಾಂಕ್ಷೆ
– ಒಳ್ಳೆ ಮಾತಲಿ

(೧೦)
ಗಾಳಿ ಪಟದೆ
ಹಾರುತ ದೂರಾ ದೂರ
– ನಮ್ಮ ಸೇರಲಿ

– ನಾಗೇಶ ಮೈಸೂರು

೧೪.೦೧.೨೦೧೭
(ಚಿತ್ರಗಳು : ಅಂತರ್ಜಾಲ / ಫೇಸ್ಬುಕ್ ಮೂಲದ್ದು )

ಎಲ್ಲರಿಗು ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು !😊💐😊

01065. ಸಂಕ್ರಾಂತಿಗೆ


01065. ಸಂಕ್ರಾಂತಿಗೆ
______________


(೦೧)
ಸಂಕ್ರಾಂತಿಗಲ್ಲ
ಮತ್ತದೇ ಎಳ್ಳು ಬೆಲ್ಲ
– ಈ ಬಾರಿ ಗಲ್ಲ

(೦೨)
ಚಳಿ ನಸುಕು
ಬೆಚ್ಚಗಾಗೋ ಹೊಸತು
– ಸಂಕ್ರಾಂತಿ ನಗೆ

(೦೩)
ನಗೆ ನನಗೆ
ಎಳ್ಳು ಬೀರು ಅವಗೆ
– ಮುತ್ತಿಗೆ ಲಗ್ಗೆ

(೦೪)
ಖುಷಿಯೋ ಖುಷಿ
ಬೆಳಗ ಚಳಿ ನೆಪ
– ಹೇಳುವಂತಿಲ್ಲ

(೦೫)
ಹೊದ್ದುಕೊಂಡಿವೆ
ತಮ್ಮನೇ ಪರಸ್ಪರ
– ಚಳಿ ನೆಪದೆ


(೦೬)
ಮಾತಿನ ಖಾರ
ಮರೆಸೋ ಸಿಹಿ ತುಟಿ
– ಮನ ಕಿಚಡಿ

(೦೭)
ಪೊಂಗಲಿ ಬಿಡು
ಸಿಹಿ ಖಾರ ಪೊಂಗಲು
– ಕಬ್ಬಿಗರಸ

(೦೮)
ಮುನಿಸು ಚೆನ್ನ
ಮುಡಿದು ಜಡೆಗೆ ಹೂ
– ಸೀರೆ ಸೆರಗು

(೦೯)
ಸೆರಗಂಚಿನ
ಹೂಗಳು ಬೆರೆಯಲಿ
– ನಿನ್ನ ನಗೆಗೆ

(೧೦)
ಒಳ್ಳೆ ಮಾತಾಗೆ
ಸಂಕ್ರಾಂತಿಯ ಸಂಸ್ಕೃತಿ
– ತುಟಿಯರ್ದರ್ಧ

– ನಾಗೇಶ ಮೈಸೂರು
೧೩.೦೧.೨೦೧೭
(Picture source : Wikipedia – https://en.m.wikipedia.org/wiki/Makar_Sankranti)

01063. ಮಸಣದ ವ್ಯಸನ


01063. ಮಸಣದ ವ್ಯಸನ
_________________


(೦೧)
ಮಸಣ ಯಾತ್ರೆ
ಶವದಾಜನ್ಮ ಹಕ್ಕು
– ಹಿಂಬಾಲಕರು

(೦೨)
ಕ್ರೂರ ಜಗತ್ತು
ನಡೆಯದ ಹೆಣವ
– ಹೊತ್ತು ನಡಿಗೆ

(೦೩)
ಸತ್ತರೂ ಬಿಡ
ಸಿಂಗಾರದ ಚಪಲ
– ಚೆನ್ನಿಗರಾಯ


(೦೪)
ಸ್ಮಶಾನ ಮೌನ
ಯಾವತ್ತೂ ಇರಲಿಲ್ಲ
– ಊಳಿಡೊ ಸದ್ದು

(೦೫)
ಸಮಾಜವಾದ
ನಿಜಕೂ ಸತ್ಯ ಇಲ್ಲಿ
– ನಿರ್ವಿವಾದಿತ

(೦೬)
ಹೂತರು ಸರಿ
ಸುಟ್ಟರೂ ಅದೆ ಗುರಿ
– ಪಂಚಭೂತಕೆ

(೦೭)
ಭುವಿಯ ಜಾಗ
ತುಟ್ಟಿಯಾದರೆ ಮೇಲೆ
– ಗಗನ ಯಾನ


(೦೮)
ಮಸಣಕೊಂದು
ರೇಟು ಕಟ್ಟುವ ಕಾಲ
– ಸಾವಿಗೂ ಶುಲ್ಕ

(೦೯)
ನಾವೇ ತೋಡಿದ್ದು
ಚಿರನಿದ್ರೆಗೆ ಗುಳಿ
– ಹೋಗಲು ಭೀತಿ

(೧೦)
ರುದ್ರಭೂಮಿಗೆ
ಮುತ್ತಿಗೆ ಹಾಕೊ ಮುನ್ನ
– ಒಳ ಸೇರಿಕೊ

– ನಾಗೇಶ ಮೈಸೂರು
೧೨.೦೧.೨೦೧೭
(Picture source: Creative Commons)

01062. ಕನ್ನಡಿಗೆ..


01062. ಕನ್ನಡಿಗೆ..
________________


(೦೧)
ಕನ್ನಡಿ ಬಲ
ಚೆಂದಕೊಂದು ಮುನ್ನುಡಿ
– ಮುದ್ದಾದ ಮೊಗ

(೦೨)
ಕನ್ನಡಿ ಕ್ರೂರ
ಇದ್ದದ್ದು ಇದ್ದ ಹಾಗೆ
– ಯಾತನೆ ಭಾರ

(೦೩)
ಕನ್ನಡಿಗಂಟು
ಯೌವನ ತಂದ ನಂಟು
– ಕನ್ನಡಿ ಗಂಟು


(೦೪)
ಕನಸು ಕೂಡ
ಕನ್ನಡಿ ಪ್ರತಿಬಿಂಬ
– ಕಂಡರೂ ಸಿಗ

(೦೫)
ಕನಸ ಭೇಟಿ
ಕನ್ನಡಿ ಜತೆಗಾಯ್ತು
– ಮನಸಾ ಬೇಟೆ

(೦೬)
ಬೇಟದ ಹೊತ್ತು
ಕಾದ ಯೌವ್ವನ ಬಿಸಿ
– ಮಾಯಾ ದರ್ಪಣ

(೦೭)
ತಿದ್ದಿ ತೀಡುವ
ನಾರಿ ಸೀರೆ ಸೆರಗು
– ಕನ್ನಡಿ ಭಾಗ್ಯ


(೦೮)
ಬಯಲಾಗುತ
ಬೆತ್ತಲು ಕನ್ನಡಿಗೆ
– ನಾಚದ ಕೃತ್ಯ

(೦೯)
ನಿರ್ಭೀತ ಮನ
ಕನ್ನಡಿ ಮುಂದೆ ನಗ್ನ
– ದೇಹಕೆ ಲಜ್ಜೆ

(೧೦)
ಆಯನ ಶ್ರೇಷ್ಠ
ದಾಖಲೆ ಉಳಿಸದ
– ನಂಬಿಕೆ ಭಂಟ

– ನಾಗೇಶ ಮೈಸೂರು
೧೨.೦೧.೨೦೧೬
(Picture source: Creative Commons)

01061. ತೀರ್ಥ ಯಾತ್ರೆ..


01061. ತೀರ್ಥ ಯಾತ್ರೆ..
_______________


(೦೧)
ನೂರಾರು ಮೈಲಿ
ದೇವರ ದರ್ಶನಕೆ
– ಕಾಣೋ ಕ್ಷಣಿಕ

(೦೨)
ನೂಕು ನುಗ್ಗಲು
ನುಗ್ಗೋ ಸರತಿ ಸಾಲು
– ಮೂರ್ತಿ ಅಮೂರ್ತ

(೦೩)
ತೀರ್ಥ ಪ್ರಸಾದ
ಮಂಗಳಾರತಿ ಜಡ
– ಸಿದ್ದ ಸರಕು

(೦೪)
ಒಂದರೆಕ್ಷಣ
ಕಾಣುವ ಭಗವಂತ
– ದಬ್ಬುವ ದೂತ

(೦೫)
ಪಾದರಕ್ಷೆಗೆ
ಖಾತರಿಯಿಲ್ಲ ರಕ್ಷೆ
– ಗುಡಿ ಉದ್ಯಮ

(೦೬)
ಮುಚ್ಚುವ ವೇಳೆ
ಮನ ಬಿಚ್ಚುವ ವೇಳೆ
– ದೇಗುಲ ಕದ

(೦೭)
ಬರಿ ಧಾವಂತ
ಮುಗಿಸಬೇಕು ಎಲ್ಲ
– ಮುಗಿಯಲಿಲ್ಲ

(೦೮)
ಬರಿಗಾಲಲಿ
ನಡೆ ಪ್ರಾಂಗಣ ಸುತ್ತ
– ಪ್ರಾಂಜಲ ಮನ

(೦೯)
ಧನ್ಯತಾ ಭಾವ
ಕ್ಷಣಿಕ ದರ್ಶನಕು
– ಕರ್ಮದ ಕೊಂಡಿ

(೧೦)
ಸೇವೆಯ ದರ
ಸುತ್ತುಗಟ್ಟಿ ವ್ಯಾಪಾರ
– ತುಟ್ಟಿ ದೇವರು

– ನಾಗೇಶ ಮೈಸೂರು
೧೨.೦೧.೨೦೧೪

01052. ನಮ್ಮ ಸಂಸ್ಕೃತಿ


01052. ನಮ್ಮ ಸಂಸ್ಕೃತಿ
_______________

(೦೧)
ನಮ್ಮ ‘ಸಂ’ ಕೃತಿ
ನಮ್ಮರಿವಿಲ್ಲದೆಯೆ
– ನಮ್ಮ ಸಂಸ್ಕೃತಿ

(೦೨)
‘ಸಂ’ಸ್’ ಕೃತಿಗೆ
ಹೊಣೆ ಹೊರೆ ಸಮಾಜ
– ವಿಕೃತ ಜನ

(೦೩)
ಗುಂಪು ಗದ್ದಲ
ಮದುವೆ ಮುಂಜಿ ಸಭೆ
– ಘನ ಸಂಸ್ಕೃತಿ

(೦೪)
ಸುಪ್ತ ಕಾಮನೆ
ಸುಸಂಸ್ಕೃತ ಮದಿರೆ
– ಗುಪ್ತ ಗಾಮಿನಿ

(೦೫)
ನರನಾಡಿಗೆ
ಮದಿರಾ ಲಾಸ್ಯ ಬೇಡಿ
– ಧೂರ್ತ ಸಂಸ್ಕೃತಿ

(೦೬)
ಮದ ಮೋಜಿಗೆ
ಹದ ತಪ್ಪುವ ಬಗೆ
– ಸಂಸ್ಕೃತಿಯಲ್ಲ

(೦೭)
ಯಾರದೋ ವರ್ಷ
ಯಾರದೋ ಆಚರಣೆ
– ಮುಸುಕ ಗುದ್ದು

(೦೮)
ತಪ್ಪು ವಿಳಾಸ
ಹುಡುಕುತ್ತ ಆವೇಶ
– ವಿಧಿ ವಿಲಾಸ

(೦೯)
ಜನ ಸಾಗರ
ಕುಂಭ ಮೇಳ ಸಮ್ಮೇಳ
– ಭಕ್ತಿ ಸಂಸ್ಕೃತಿ

(೧೦)
ನಿಸರ್ಗ ತತ್ವ
ಬುಡಮೇಲಾಗಿ ಕ್ಲಿಷ್ಟ
– ವಾದ ವಿವಾದ

– ನಾಗೇಶ ಮೈಸೂರು
೦೫.೦೧.೨೦೧೭
(ಚಿತ್ರ: ವಾಟ್ಸಪ್ಪಿನಲ್ಲಿ ಸಿಕ್ಕಿದ್ದು)

01051. ಕುಮ್ಮಕ್ಕು – ರಕ್ಕಸ – ಅವಧಿ – ತಿಳಿನೀರು


01051. ಕುಮ್ಮಕ್ಕು – ರಕ್ಕಸ – ಅವಧಿ – ತಿಳಿನೀರು

ಕುಮ್ಮುಕ್ಕು ಕೊಟ್ಟವರಾರೋ ಈ ಕೀಚಕರಿಗೆ
ಜನಸಾಗರದ ನಡುವೆಯೂ ರಕ್ಕಸ ವರ್ತನೆ
ನಡುರಾತ್ರಿಯ ಅವಧಿ ಮಧುಪಾನದ ಮತ್ತು
ಉದ್ರೇಕ ತಿಳಿನೀರು ಕದಡಿಸೊ ವಾತಾವರಣ…

– ನಾಗೇಶ ಮೈಸೂರು
೦೪.೦೧.೨೦೧೭
chouchoupadi

01050. ತಪ್ಪೆಲ್ಲಾ ವರ್ಣತಂತುಗಳದೆ..!


01050. ತಪ್ಪೆಲ್ಲಾ ವರ್ಣತಂತುಗಳದೆ..!
_________________________


(೦೧)
ಕಾರಣವಿದೆ
ವರ್ಣ ತಂತು ಅಂತರ
– ಗಂಡು ಹೆಣ್ಣಲಿ

(೦೨)
ಸ್ತ್ರೀ ಎಕ್ಸ್ ಎಕ್ಸ್
ಗಂಡು ಎಕ್ಸ್ ವೈ ತಂತು
– ಕಿಲಾಡಿ ಬ್ರಹ್ಮ

(೦೩)
ಸ್ತ್ರೀಗೆ ಗೆಲುವು
ಮೂರು ಎಕ್ಸ್ ನಡುವೆ
– ಒಂದು ವೈ ಕಾಲು

(೦೪)
ಶರಣಾಗತ
ಯುದ್ಧಕು ಮುನ್ನ ಯೋಧ
– ತನ್ನರ್ಧನಾರಿ

(೦೫)
ಚಿಂತಿಸಬಲ್ಲ
ಅವಳಂತೆ ಪುರುಷ
– ತನ್ನರ್ಧ ಎಕ್ಸ್

(೦೬)
ಸ್ತ್ರೀಯ ತಪ್ಪಲ್ಲ
ಅವನಂತೆ ಯೋಚಿಸೆ
– ಒಂದೂ ವೈ ಇಲ್ಲ

(೦೭)
ಅನುಸರಿಸು
ಅವಳ ವಾದ ಸರಿ
– ಎಕ್ಸ್ ಬಳಸಿ

(೦೮)
ಅರ್ಥ ಮಾಡಿಕೊ
ಅರ್ಥವಾಗದಿದ್ದರೆ
– ನಿನ್ನದೇ ತಪ್ಪು

(೦೯)
ಎಕ್ಸ್ ತಾಯ್ತನ
ನೀನರ್ಧ ತಾಯಿ ಕಣ
– ಪ್ರಜಾಪ್ರಭುತ್ವ

(೧೦)
ದೂರಲಿದ್ದರೆ
ಬೆನ್ನಟ್ಟು ಬ್ರಹ್ಮನಿಗೆ
– ವೈ ವೈ ಏಕಿಲ್ಲ

– ನಾಗೇಶ ಮೈಸೂರು
೦೩.೦೧.೨೦೧೭
(This picture is licensed under a Creative Commons Attribution-NonCommercial-ShareAlike 3.0 Unported License)

01048. ಈ ಡಿಸೆಂಬರ


01048. ಈ ಡಿಸೆಂಬರ
__________________


(೦೧)
ಎಂದಿನಂತಿಲ್ಲ
ಡಿಸೆಂಬರದ ಚಳಿ
– ಬೆವರುತಿದೆ

(೦೨)
ಸ್ವೆಟರು ಹಾಕಿ
ಅಲೆದಾಡಲಿತ್ತಲ್ಲ
– ಲಗೇಜು ಭಾರ

(೦೩)
ಗೊರಗುಟ್ಟುವ
ನಲ್ಲಿ ಮೂಗಿಗೆ ಮುಕ್ತಿ
– ಯಾಕೋ ನಿರಾಸೆ

(೦೪)
ಅದುರಿಸುವ
ಮುಂಜಾವ ಚಳಿ ಧಾಳಿ
– ಬೊಚ್ಚು ಬಾಯಲಿ

(೦೫)
ಪೇರಿಸಿ ಇಟ್ಟ
ಕಂಬಳಿ ಸ್ವೆಟರಾಗಿ
– ಬಿಕ್ಕುವ ಸದ್ದು


(೦೬)
ನೋಟು ನಿಷೇದ
ನಡುಗಿಸಿದ ಬಗೆ
– ಚಳಿಯು ಚುಪ್

(೦೭)
ಶೀತಲ ನೆಲ
ಚಡಪಡಿಸೋ ಜೀವ
– ಈಗ್ಯಾಕೋ ನಿದ್ರೆ

(೦೮)
ಬರಬಹುದು
ಕೊಟ್ಟ ಕೊನೆಗಾದರು
– ಸಂಕ್ರಾಂತಿ ಬಂತು

(೦೯)
ಸಂಕ್ರಮಣಕೆ
ಯಾಕವಸರ ಕಾಣೆ
– ತತ್ತರ ಬೇಡ

(೧೦)
ಡಿಸೆಂಬರಕೆ
ವಿದಾಯ ಹೇಳಿದ್ದು
– ನಡುಕವಿಲ್ಲ

– ನಾಗೇಶ ಮೈಸೂರು
೦೩.೦೧.೨೦೧೭
(This picture is licensed under a Creative Commons Attribution-NonCommercial-ShareAlike 3.0 Unported License)

01047. ಧನುರ್ಮಾಸಕೆ..


01047. ಧನುರ್ಮಾಸಕೆ..
________________


(೦೧)
ಧನುರ್ಮಾಸದ
ಚಳಿಗೆದ್ದು ಪೂಜಿಸೆ
– ಚಳಿಗೆ ಬರ

(೦೨)
ಮರ ಸುತ್ತುವ
ಸರದಿ ಪತಿಗಾಗಿ
– ಮರ ಸುತ್ತಲು

(೦೩)
ಚಳಿಗಾಳಿಗು
ಬೆಚ್ಚಗಾಗಿಸೆ ತುಸು
– ಮಡಿಯುಟ್ಟಳು

(೦೪)
ಅಮ್ಮನಿಗಾಗಿ
ಧನುರ್ಮಾಸದ ಪೂಜೆ
– ಅಮ್ಮನಾಗಲು

(೦೫)
ಸಡಿಲ ಜಡೆ
ಮುಡಿಗೆ ಹೂ ನಡಿಗೆ
– ಚೆಂದದ ಜಾತ್ರೆ

(೦೬)
ಕಾಟಾಚಾರಕೊ
ನಂಬಿದ ಕಾರಣಕೊ
– ಅರಳಿ ಮರ

(೦೭)
ಹಗಲಿರುಳು
ಆಮ್ಲಜನಕ ಚೆಲ್ಲೊ
– ಜಾಣ ಅರಳಿ

(೦೮)
ಸಿಕ್ಕದ ಭೀತಿ
ಸಿಕ್ಕೋ ನಂಬಿಕೆಗಿಂತ
– ಪ್ರೇರಕ ಶಕ್ತಿ

(೦೯)
ಧನುರ್ಮಾಸದ
ಚಳಿ ಗೆಲ್ಲುವ ಹೆಜ್ಜೆ
– ನಡೆಯೊಳಗೆ

(೧೦)
ಸಿಕ್ಕದಿದ್ದರು
ನಷ್ಟವೇನಿಲ್ಲ ಮೊತ್ತ
– ಜೀವಕೆ ಹಿತ

– ನಾಗೇಶ ಮೈಸೂರು
೦೩.೦೧.೨೦೧೭
(This picture is licensed under a Creative Commons Attribution-NonCommercial-ShareAlike 3.0 Unported License)

01043. ದೈವದ ಸುತ್ತ


01043. ದೈವದ ಸುತ್ತ
______________


(೦೧)
ಕುಡಿ ಕುಣಿದು
ದಣಿವಾಗೋ ಹೊತ್ತಲಿ
– ನೆನಪಾಗಲಿ

(೦೨)
ಹೊಸತ ಸಿಹಿ
ಸವಿವವರೆ ಎಲ್ಲ
– ಕಹಿ ಅವಗೆ

(೦೩)
ತೇಗು ಮೆಲುಕು
ಕುಡಿದ ಗುಂಗು ಮಂಕು
– ಹುಡುಕವನ

(೦೪)
ಕುಡಿ ಕುಣಿದು
ಕುಪ್ಪಳಿಸಿ ದಣಿದು
– ಒಮ್ಮೆ ಸ್ಮರಿಸು

(೦೫)
ಮೊರೆ ಖಚಿತ
ಢಿಕ್ಕಿಯಾದ ಹೊತ್ತಲಿ
– ಓ ಭಗವಂತ

(೦೬)
ನೆನಪಾಗಿದ್ದು
ಸಂಕಟ ಬಂದ ಹೊತ್ತು
– ನಾಮಸ್ಮರಣೆ

(೦೭)
ಕಾಲದ ಗಡಿ
ದಾಟಿಸೊ ನಿಯಾಮಕ
– ನೀ ಗಡಿಯಾರ

(೦೮)
ಮರಳಿ ಗೂಡು
ಸೇರೇ ಸುಲಭ ಅಲ್ಲ
– ಭೂತ ಕಾಲಕೆ

(೦೯)
ನಿಸರ್ಗದಲಿ
ನವ ಋತುವನಿಟ್ಟ
– ಚಾಣಾಕ್ಷ ದೈವ

(೧೦)
ಆರಾಧಿಸುತ
ಏನೆಲ್ಲವ ಮರೆತೆ
– ಅಯೋಗ್ಯ ಮನ

– ನಾಗೇಶ ಮೈಸೂರು
೦೧.೦೧.೨೦೧೭

01042. ಭೂತ – ಪ್ರಸ್ತುತ – ಭವಿತ


01042. ಭೂತ – ಪ್ರಸ್ತುತ – ಭವಿತ
___________________________


(೦೧)
ಹದಿನೇಳರ
ತೆಕ್ಕೆಗೆ ಸಿಕ್ಕಿ ಚೂರು
– ಆ ಹದಿನಾರು.

(೦೨)
ಹರೆಯ ಸುಗ್ಗಿ
ಹದಿನಾರಕ್ಕೆ ಮಗ್ಗಿ
– ಹದಿನೇಳಕ್ಕೆ.

(೦೩)
ಯಥಾಪ್ರಕಾರ
ಪ್ರತಿಜ್ಞೆ ಪ್ರತಿಕಾರ
– ಮರುಕಳಿಸಿ.

(೦೪)
ಯಾರೂ ನೋಡಿಲ್ಲ
ಹದಿನೇಳರ ಗರ್ಭ
– ಹದಿನಾರಲ್ಲಿ.

(೦೫)
ಬೀಜ ಬಿತ್ತದೆ
ಹದಿನಾರಾಗುವುದೆ
ತಾ ಹದಿನೇಳು ..

(೦೬)
ಉತ್ತಿ ಬಿತ್ತಿದ್ದು
ಉಚಿತ ಫಲಾಫಲ
ದೈವ ನಿಯಮ..

(೦೭)
ಭೂತದ ಸಸಿ
ವರ್ತಮಾನದ ಗಿಡ
ಭವಿತ ಮರ..

(೦೮)
ಹದಿನಾರಕ್ಕೆ
ಸೊಕ್ಕು ಹದಿನೇಳಕ್ಕೆ
– ಕಲಿತು ಬಿಡು..

(೦೯)
ಯಾವ ಕವಿಯೂ
ಬಿಡದ ಅವಕಾಶ
– ಹೊಸ ವರುಷ..

(10)
ಓ ಹದಿನೇಳು
ನಿದ್ದೆಯಿಂದ ಎದ್ದೇಳು
– ದೂರದ ಹಾದಿ.

– ನಾಗೇಶ ಮೈಸೂರು
01.01.2017

01033. ತನ್ನ ಪಾಡಿಗೆ


01033. ತನ್ನ ಪಾಡಿಗೆ
__________________


(೦೧)
ಬೇಕಿಲ್ಲ ಬಿಡು
ಹೆಸರು ಪ್ರಸಿದ್ಧಿಗೆ
– ಯತ್ನ ಸಿದ್ಧಿಗೆ

(೦೨)
ಬಯಸಲಿಲ್ಲ
ಬಿರುದು ಬಾವಲಿಯ
– ಹಾಡುವ ಹಕ್ಕಿ

(೦೩)
ಹಾರುವ ಹಕ್ಕಿ
ಹಕ್ಕಿಗಾಗಿ ಹೋರಾಟ
– ಬಾನ ಅಖಾಡ

(೦೪)
ಕಿಲಾಡಿ ಹಕ್ಕಿ
ಬಾನಲೊಡ್ಡಿದೆ ಪಂಥ
– ಹಾರದ ಜಗ

(೦೫)
ಚಡಪಡಿಕೆ
ನೆಲದಿಂದ ಬಾಂದಳ
– ಎಷ್ಟೊಂದು ಹಕ್ಕಿ


(೦೬)
ಹುಚ್ಚು ಮನಸೆ
ಎತ್ತರಕಿಲ್ಲ ಕೊನೆ
– ಶೂನ್ಯ ಗಗನ

(೦೭)
ಸಾಧಿಸಿದಷ್ಟು
ಎತ್ತರ ನಿರುತ್ತರ
– ಮತ್ತಷ್ಟೆತ್ತರ

(೦೮)
ಆಸೆ ಅನಂತ
ದಿಗಂತದಲೆ ಜಾಗ
– ಸಿಕ್ಕದ ಕೊನೆ

(೦೯)
ಆಡಿಕೊಂಡಿದೆ
ತನ್ನ ಪಾಡಿಗೆ ತಾನು
– ಮಾಯಾವಿ ಮನ

(೧೦)
ಅದು ನಾನಲ್ಲ
ನಾನು ತೊಟ್ಟ ಪೋಷಾಕು
– ಮಾಯೆ ಮುಸುಕು

ನಾಗೇಶ ಮೈಸೂರು
೧೯.೧೨.೨೦೧೬
(Pictures: Creative common)

01032. ರಂಗೋಲಿ


01032. ರಂಗೋಲಿ
_________________________


(೦೧)
ರಂಗವಲ್ಲಿಗೆ
ಮಂದಹಾಸ ಮಲ್ಲಿಗೆ
ಕೆನ್ನೆ ರಂಗೋಲಿ

(೦೨)
ಚುಕ್ಕೆಯಿಡುವ
ಬೆರಳ ತುದಿ ಕಲೆ
ಕವನ ಹಾಸು

(೦೩)
ಬಿಳಿ ಪುಡಿಗೆ
ಸ್ವಚ್ಚ ಮನಸು ಬಣ್ಣ
ಮಾರುಕಟ್ಟೆಗೆ

(೦೪)
ಸುಣ್ಣದ ಕಲ್ಲು
ಪುಡಿ ಅದ್ಭುತ ಕಾವ್ಯ
ಬಳೆ ಸದ್ದಿರೆ

(೦೫)
ಮಜ್ಜನ ಮನ
ಒದ್ದೆ ಕೇಶದ ನಾರಿ
ರಂಗೋಲೆ ಕಣ


(೦೬)
ಹಾಕಿ ರಂಗೋಲಿ
ಚುಕ್ಕಿ ಚುಕ್ಕಿ ಬೆಸೆದು
ಭಾವಾವರಣ

(೦೭)
ಅನಾವರಣ
ಮನದ ಮಾತ ಮೌನ
ಮೂಡಣ ಜಗ

(೦೮)
ಮುಂಜಾನೆಗೆದ್ದು
ಕಂಡ ಕನಸ ಕೊಡೆ
ರಂಗವಲ್ಲಿಗೆ

(೦೯)
ಇರುಳ ಸುಖ
ದುಃಖಗಳೆಲ್ಲ ಲೆಕ್ಕ
ರಂಗೋಲಿ ಸಖ

(೧೦)
ಗೋಲಿ ‘ರಂ’ಗೋಲಿ
ಸುತ್ತುವ ತಲೆ ಖಾಲಿ
ಜಾಲಿ ಬಾರಲಿ

– ನಾಗೇಶ ಮೈಸೂರು
೧೮.೧೨.೨೦೧೬
(First Photo received in whatsapp ;
Second photo : licensed under a Creative Commons Attribution-NonCommercial-ShareAlike 3.0 Unported License)

01029. ಎಡಬಿಡಂಗಿ ಫೇಕ್ಬುಕ್..


01029. ಎಡಬಿಡಂಗಿ ಫೇಕ್ಬುಕ್..
_______________________


(೦೧)
ಫೇಸ್ಬುಕ್ ಕವಿ
ಅಲ್ಲ ಕಾರಂತ ಬೇಂದ್ರೆ
ಎಲೆ ಮರೆಗೆ

(೦೨)
ಬರೆದುದ್ದೆಲ್ಲ
ಡಿಜಿಟಲ್ಲಲೇ ಚಟ
ಬರಿ ದುಡ್ಡಿಲ್ಲ

(೦೩)
ಜಾತಕ ಪಕ್ಷಿ
ಬಿದ್ದುದೆಷ್ಟು ಎಲೆಗೆ
ಲೈಕು ಕಾಮೆಂಟು

(೦೪)
ಆತಂಕ ಸಿದ್ಧ
ಫೇಸ್ಬುಕ್ಕಲ್ಲಿ ಪ್ರಕಟ
ಯಾರು ಕದ್ದರೊ..

(೦೫)
ಬರೆಯೆ ಭಯ
ಕಳ್ಳ ಕಾಕರ ಜಗ
ಫೆಕ್ಬುಕ್ಕು ನೈಜ

(೦೬)
ಕೃತಕ ಜಗ
ಸೃಜಿಸುವ ಸೋಜಿಗ
ಹುಸಿ ನಟನೆ

(೦೭)
ಹಾತೊರೆಯುತ್ತ
ಗುರುತಿಸಿಕೊಳ್ಳಲು
ಮುಸುಕ ಕುಸ್ತಿ

(೦೮)
ಎಡಬಿಡಂಗಿ
ಫೇಸ್ಬುಕ್ಕಿನ ಕಮಂಗಿ
ಅಂಗಿ ಅರ್ಧಾಂಗಿ

(೦೯)
ಭೀಷ್ಮ ಪ್ರತಿಜ್ಞೆ
ಫೇಸ್ಬುಕ್ ಬಹಿಷ್ಕಾರ
ನಿತ್ಯ ನಿರ್ಧಾರ

(೧೦)
ಥೂ ಹಾಳು ಚಟ
ಚಟ್ಟ ಹತ್ತೋ ತನಕ
ಬಿಡದ ಹಠ

– ನಾಗೇಶ ಮೈಸೂರು
17.12.2016

(Picture : Creative Commons)

01028. ಗೋಬಿನಾಗರ


01028. ಗೋಬಿನಾಗರ
__________________


(೦೧)
ಗೋಬಿಯಲೊಂದು
ನಾಗರ ಮಲಗಿತ್ತು
ಹೆಡೆಯೆತ್ತದೆ

(೦೨)
ನಾಗರವೆನೆ
ಅದೆಂಥಾ ನಾಗವಲ್ಲಿ
ಮೊಗ್ಗು ಹೂವಾಗಿ

(೦೩)
ಹೆಡೆಯೆತ್ತದೆ
ಬಯಕೆ ಹೂವಾದಂತೆ
ಅಡಗಿ ಕೂತು

(೦೪)
ಬಯಕೆ ಹಾಗೆ
ಮುದುರಿ ಕೂತ ಬಗೆ
ವಿಧಿಯಿರದೆ

(೦೫)
ಅನಿವಾರ್ಯಕೆ
ಬೇಲಿ ಹಾಕಿದ ಸುತ್ತ
ಕಟ್ಟುಪಾಡದು

(೦೬)
ಮಲಗಿ ಬಿಡು
ಎದ್ದರೆ ಕೊರೆಯುವೆ
ಗೋಬಿಗೂ ತೂತು

(೦೭)
ತನ್ನ ಪಾಡಿಗೆ
ನಿದಿರೆಗೊಂದು ಜಾಗ
ಬಿಡದ ಜನ

(೦೮)
ನನ್ನ ತಪ್ಪೇನು
ನಾಗಮಂಡಲ ಭ್ರಮೆ
ಸುಭದ್ರ ಕೋಟೆ

(೦೯)
ಬೆಂದಾಗ ತಿಂದು
ಸಸ್ಯಾಹಾರಕೆ ಬೀಗೆ
ಧೂರ್ತ ಪ್ರಕೃತಿ

(೧೦)
ಮಳ್ಳನಾನಾಗ
ಹೊಕ್ಕಿದ ಕಳ್ಳ ಜಾಗ
ಬೆಚ್ಚನೆ ಸೊಗ

– ನಾಗೇಶ ಮೈಸೂರು
೧೬.೧೨.೨೦೧೬
(Photo : from WhatsApp)

01027. ಅನ್ನದ ಸುತ್ತ..


01027. ಅನ್ನದ ಸುತ್ತ..
____________________

(೦೧)
ಅನ್ನದ ಕೂಗು
ನಖಶಿಖಾ ತತ್ತರ
ಕುಕ್ಕರು ಮೌನ

(೦೨)
ರಾಶ್ರಾಶಿ ಅಕ್ಕಿ
ಹೊಟ್ಟೆಯ ತಳಮಳ
ಅನ್ನ ದಿಗ್ಭ್ರಮೆ

(೦೩)
ಹಸಿವು ಕ್ರೂರ
ಬಡಿಸಿದಾ ತಟ್ಟೆಗೆ
ಖಾಲಿ ಚಪಾತಿ


(೦೪)
ಅನ್ನದ ರುಚಿ
ಮೈಗೆ ಹತ್ತದ ಬೇರೆ
ಕೊಬ್ಬು ನೆತ್ತಿಗೆ

(೦೫)
ದಣಿದು ಸಖ
ಬಯಸೆ ಹಿಡಿಯನ್ನ
ಖಾಲಿ ಬಟ್ಟಲು

(೦೬)
ತಂಗಲು ಅನ್ನ
ಹೇಗೆ ಸೇರೀತು ಹೊಟ್ಟೆ
ಹಳಸಿ ಸಾರು

(೦೭)
ಹಾಳು ನಾಲಿಗೆ
ಅನ್ನಕೆ ತಹತಹ
ಹಚ್ಚದ ಒಲೆ

(೦೮)
ತಂದಿಕ್ಕಿ ಎಲ್ಲಾ
ನೂಲಲ್ಲ ಯಾಕೆ ಚೆನ್ನಿ
ಬರೋದು ಕ್ಯಾಣ


(೦೯)
ಮೈಗಳ್ಳತನ
ನೆಪಗಳೆ ಬದುಕು
ಜಡ್ಡಾಗೊ ನಿಜ

(೧೦)
ಗೆಲ್ಲೊ ಅನ್ನವ
ದೂರದೆ ಸ್ವೀಕರಿಸು
ಕರ್ಮದ ಫಲ

– ನಾಗೇಶ ಮೈಸೂರು
(೧೪.೧೨.೨೦೧೬)
(Picture from Creative Commons)

01065. ಸಂಕ್ರಾಂತಿಗೆ


01065. ಸಂಕ್ರಾಂತಿಗೆ
______________

(೦೧)
ಸಂಕ್ರಾಂತಿಗಲ್ಲ
ಮತ್ತದೇ ಎಳ್ಳು ಬೆಲ್ಲ
– ಈ ಬಾರಿ ಗಲ್ಲ

(೦೨)
ಚಳಿ ನಸುಕು
ಬೆಚ್ಚಗಾಗೋ ಹೊಸತು
– ಸಂಕ್ರಾಂತಿ ನಗೆ

(೦೩)
ನಗೆ ನನಗೆ
ಎಳ್ಳು ಬೀರು ಅವಗೆ
– ಮುತ್ತಿಗೆ ಲಗ್ಗೆ

(೦೪)
ಖುಷಿಯೋ ಖುಷಿ
ಬೆಳಗ ಚಳಿ ನೆಪ
– ಹೇಳುವಂತಿಲ್ಲ

(೦೫)
ಹೊದ್ದುಕೊಂಡಿವೆ
ತಮ್ಮನೇ ಪರಸ್ಪರ
– ಚಳಿ ನೆಪದೆ

(೦೬)
ಮಾತಿನ ಖಾರ
ಮರೆಸೋ ಸಿಹಿ ತುಟಿ
– ಮನ ಕಿಚಡಿ

(೦೭)
ಪೊಂಗಲಿ ಬಿಡು
ಸಿಹಿ ಖಾರ ಪೊಂಗಲು
– ಕಬ್ಬಿಗರಸ

(೦೮)
ಮುನಿಸು ಚೆನ್ನ
ಮುಡಿದು ಜಡೆಗೆ ಹೂ
– ಸೀರೆ ಸೆರಗು

(೦೯)
ಸೆರಗಂಚಿನ
ಹೂಗಳು ಬೆರೆಯಲಿ
– ನಿನ್ನ ನಗೆಗೆ

(೧೦)
ಒಳ್ಳೆ ಮಾತಾಗೆ
ಸಂಕ್ರಾಂತಿಯ ಸಂಸ್ಕೃತಿ
– ತುಟಿಯರ್ದರ್ಧ

– ನಾಗೇಶ ಮೈಸೂರು
೧೩.೦೧.೨೦೧೭
(Picture source : Wikipedia – https://en.m.wikipedia.org/wiki/Makar_Sankranti)

01026. ಹನುಮ


01026. ಹನುಮ
_________________


(೦೧)
ಭವ ಹನುಮ
ಭಕ್ತಿ ವಿನಮ್ರ ಭಾವ
ಕನ್ನಡದವ

(೦೨)
ರಾಮನ ಭಂಟ
ಅಂತರಂಗದ ಸಖ
ಸೀತಾ ಏಕಾಂತ

(೦೩)

ಸುಭದ್ರ ಕೋಟೆ
ರಾಮನ ಹೆಸರಂತೆ
ಬಾಲ ಗೋಪುರ

(೦೪)
ರಾಮ ಲಕೋಟೆ
ಚೂಡಾಮಣಿ ಗುರುತು
ಸಖ್ಯದ ಗುಟ್ಟು

(೦೫)
ಆಯುರ್ವೇದಕೆ
ಸಂಜೀವಿನಿ ಸಮೂಲ
ಗಿಡ ಮೂಲಿಕೆ

(೦೬)
ಹಾರುವ ಬಲ
ತಲೆಗೇರದ ನಮ್ರ
ಹಾರುವ ನಾವು

(೦೭)
ಭಕ್ತಿ ದರ್ಶನ
ಬೂಟಾಟಿಕೆ ಸಂಭ್ರಮ
ಸದ್ದಿಲ್ಲದವ

(೦೮)
ಆಂಜನೇಯನ
ಅಂಜನ ಹಾಕಿ ನೋಡೆ
ನಮ್ಮ ಕನ್ನಡಿ

(೦೯)
ಬ್ರಹ್ಮಚಾರಿಗೆ
ಬೆವರಲ್ಲೂ ಶಕ್ತಿಯೆ
ಪುತ್ರಾಗಮನ

(೧೦)
ಹನುಮ ಜಯ
ರಾಮಕೃಪೆ ನಿಶ್ಚಯ
ಪುಟದೊಂದೆಲೆ

– ನಾಗೇಶ ಮೈಸೂರು
(12.12.2016)
(Picture from whatsapp)

01024. ಮತ್ತಷ್ಟು ತುಣುಕು


01024. ಮತ್ತಷ್ಟು ತುಣುಕು
_____________________

(೦೧)
ಐವತ್ತರಲಿ
ಹತ್ತು ಐದು ಐದ್ಹತ್ತು
ಎರಡೈವತ್ತು ?

(೦೨)
ಆಯಸ್ಸು ನೂರು
ಶತಮಾನಂ ಭವತಿ
ಅಪರೂಪಕೆ

(೦೩)
ಆಳಿದ ರಾಜ್ಯ
ಅಮರಾವತಿ ಭಸ್ಮ
ಪಳೆಯುಳಿಕೆ

(೦೪)
ಬದುಕುವಾಗ
ಬೀಜ ಸಸಿ ಮರವೆ
ಬೀಜದ ಮೂಲ

(೦೫)
ಮುದ್ದು ಮಕ್ಕಳು
ಪರಿಚಿತ ಹೆಮ್ಮರ
ಅಪರಿಚಿತ

(೦೬)
ನಿದ್ರಾ ನಡಿಗೆ
ಬದುಕಿರೋವರೆಗೂ
ಸಾವಲೆಚ್ಚರ

(೦೭)
ತುಪ್ಪದ ಅನ್ನ
ಬೊಜ್ಜಲಿ ಪ್ರದರ್ಶನ
ಭಾರದ ಹೆಣ

(೦೮)
ಪರಾಗ ಸ್ಪರ್ಶ
ಸಂತಾನ ಪ್ರಸರಣ
ಧೂರ್ತ ನಿಸರ್ಗ

(೦೯)
ಎಲ್ಲಾ ಮುಗಿಸೊ
ಅವಸರ ಆಯಸ್ಸು
ದಿಕ್ಕು ತಪ್ಪುತ

(೧೦)
ನಾನೆಂಬ ದೂರ
ಅಳೆಯಲು ಸುಸೂತ್ರ
ಯಾರದೊ ಬಿಂಬ

– ನಾಗೇಶ ಮೈಸೂರು
೧೦.೧೨.೨೦೧೬

(Pictures: these works are licensed under a Creative Commons Attribution-NonCommercial-ShareAlike 3.0 Unported License)

01022. ಗುಟುಕು


01022. ಗುಟುಕು
__________________


(೦೧)
ತುಣುತುಣುಕು
ತೊಟ್ಟಿಕ್ಕುವ ಬದುಕು
ಕೊಚ್ಚೆಯ ಮಳೆ

(೦೨)
ಆಗಸದಲ್ಲಿ
ರಂಗವಲ್ಲಿ ಮೋಡ
ಬಿರುಕು ನೆಲ

(೦೩)
ಮಳೆ ಪೊಟ್ಟಣ
ಭಾರವಾಗೆ ಹಗುರ
ಧರಣಿ ಭಾರ


(೦೪)
ಹನಿಹನಿಗೆ
ಜಲಾಮ್ಲಜನಕರು
ತೇವದ ಗಾಳಿ

(೦೫)
ಹುಲ್ಲು ಗರಿಕೆ
ಮಳೆಹನಿ ಇಬ್ಬನಿ
ಬಾಳು ಗರಿಕೆ

(೦೬)
ಗುಟುಕಿನಲಿ
ತೇವವಾರಿಸೊ ಶಕ್ತಿ
ಅತೃಪ್ತ ಸುಖ

(೦೭)
ಗಾಢ ನಿದಿರೆ
ಸುಖ ಸೋಮಾರಿ ಸಖ
ನಿಷ್ಕ್ರಿಯ ತನು


(೦೮)
ಬೀಸುಗಾಳಿಗೆ
ಹುಲ್ಲ ವಯ್ಯಾರ ನಾಟ್ಯ
ಬಾಳುವ ಜಾಣ್ಮೆ

(೦೯)
ಹೂವಿನ ಅಂದ
ರುಚಿಯ ಮಕರಂದ
ಬಾಡಿದ ಹೂವು

(೧೦)
ತರಗೆಲೆಗೆ
ಹಸಿರೆನೆ ಅಸೂಯೆ
ಕರ್ಮ ಫಲಿತ

– ನಾಗೇಶ ಮೈಸೂರು
10.12.2016
(Pictures: licensed under a Creative Commons Attribution-NonCommercial-ShareAlike 3.0 Unported License

00981. ಸಾವಿರದ ಐನೂರು


00981. ಸಾವಿರದ ಐನೂರು
________________


(01)
ಸಾವಿರದೊಂದು
ನೋಟಿನ ಮುಖ ಬೆಲೆ
– ಸಾವಿನಲಿತ್ತು

(02)
ಕೂಡಿಟ್ಟ ಹಣ
ಕಪ್ಪು ಬಿಳಿ ಪರದೆ
– ಸರಿದು ಬಣ್ಣ

(03)
ಸಮವೆಂದಿತು
ಐನೂರು ಸಾವಿರಕೆ
– ಖಾಲಿ ಕಾಗದ

(04)
ಬಿಳಿ ತೊಗಲು
ಮುಚ್ಚಲು ಕಪ್ಪುಡುಗೆ
– ಕಪ್ಪು ಬಿಳುಪು

(05)
ಕಪ್ಪು ತೊಗಲು
ಮುಚ್ಚೆ ಬಿಳಿಯುಡುಗೆ
– ಬಿಳುಪು ಕಪ್ಪು

(06)
ಆತಂಕದಲಿ
ಆತಂಕವಾದಿ ನೋಟ
– ರದ್ದಿ ಕಾಗದ

(07)
ಕಾಂಚಾಣದಂದ
ಕೈಲಿರದ ಹೊತ್ತಲಿ
– ಕಾಣದ ಅಂಧ

(08)
ಸಮಾಜವಾದ
ಬಡವ ಸಿರಿವಂತ
– ನೋಟಲಿ ಸಾಧ್ಯ

(09)
ಇದೇ ಮೊದಲು
ಹಣಕೆ ಬಾಯ್ಬಿಡದ
– ಹೆಣದ ಸುದ್ಧಿ

(10)
ಶಸ್ತ್ರ ಚಿಕಿತ್ಸೆ
ನಿಸ್ತಂತು ಕತ್ತರಿಸೆ
– ಒಂದೇ ಬಾರಿಗೆ

– ನಾಗೇಶ ಮೈಸೂರು

00979. ಜಂಕು ಫುಡ್ಡಲ್ಲಿ..


00979. ಜಂಕು ಫುಡ್ಡಲ್ಲಿ..
______________

(01)
ಮೆಕ್ ಡೊನಾಲ್ಡ್
ಜಸ್ಟ್ ಲವಿಂಗ್ ಇಟ್
– ಮೈಯೆ ಬರ್ಗರು.

(02)
ಕೇಯಫ್ಸೀ ಕೋಳಿ
ಫಿಂಗರ್ ಲಿಕಿಂಗ್ ಗುಡ್
– ಚಿಕನ್ಸ್ ಡೆಡ್.

(03)
ಬರ್ಗರ ಕಿಂಗ್
ಹ್ಯಾವ್ ಇಟ್ ಯುವರ್ ವೇ
– ಡಬ್ಬಲ್ ಚಿನ್.

(04)
ಫಿಶ್ ಇಟೌಟ್
ಲಾಂಗ್ ಜಾನ್ ಸಿಲ್ವರ
– ಗ್ರಿಲ್ ಸ್ಟ್ರೆಚರ.

(05)
ಪೀಜಾ ಹಟ್ಟಲಿ
ರೊಟ್ಟಿ ಬಾಡು ಒಟ್ಟಲಿ
– ಸೊಂಟದ ಟೈರು.

(06)
ಪೀಜಾ ಕಾರ್ನರ
ತಿಂದದ್ದೆಲ್ಲವು ಭಾರ
– ವ್ಯಾಯಾಮ ದೂರ.

(07)
ಗಲ್ಲಿ ಹೋಟೆಲು
ಸಾಗು ಚಪಾತಿ ಮೆದ್ದ
– ಹಳೆ ನೆನಪು.

(08)
ಜಿ ಟಿ ಆರ್ ಇಡ್ಲಿ
ಚಟ್ನಿ ದೋಸೆಗೂ ಡೆಡ್ಲಿ
– ಮರುಕಳಿಸೆ.

(09)
ಚಿಬ್ಬಲು ಇಡ್ಲಿ
ಪುಟ್ಟಮ್ಮಯ್ಯನ ಮನೆ
– ಆಣೆಗೊಂದಂತೆ!

(10)
ಜಂಕು ಫುಡ್ಡಲ್ಲಿ
ಕಳುವಾಗೋ ಸಮಯ
– ಉಳಿಸಿ ಕೊಳ್ಳೆ.

– ನಾಗೇಶ ಮೈಸೂರು

(Picture : This work is licensed under a Creative Commons Attribution-NonCommercial-ShareAlike 3.0 Unported License)

00961. ದೀಪಾವಳಿಗಷ್ಟು..


00961. ದೀಪಾವಳಿಗಷ್ಟು..
_____________


(01)
ದೀಪಾವಳಿಗೆ
ಮಲಿನ ಪರಿಸರ
ಪಟಾಕಿ ಹಬ್ಬ

(02)
ಸಂಪ್ರದಾಯಕೆ
ಹಚ್ಚಬೇಕು ಪಟಾಕಿ
ಮೌನ ಸುಡಲು

(03)
ದುಷ್ಟ ಶಕ್ತಿಗೆ
ಎಚ್ಚರಿಸೆ ಪಟಾಕಿ
ಮೈಲಿಗೆ ಭುವಿ

(04)
ದೀಪ ಹಚ್ಚುವ
ನಾರಿ ಸೀರೆ ಒಡವೆ
ಜಗಮಗಿಸೆ

(05)
ಉಪದೇಶಕೆ
ತಲೆ ಬಾಗದವರು
ದೇಶ ಭಕ್ತಿಗೆ

(06)
ವಿದೇಶಿ ಮಾಲು
ಕೊಳ್ಳಬೇಡಿ ಪಟಾಕಿ
ಬಿಸಿ ಮುಟ್ಟೀತೆ

(07)
ಹಬ್ಬ ಹೋಳಿಗೆ
ಮಾಡೆ ಸಂಭ್ರಮವಿಲ್ಲ
ಕೊಂಡುಂಡರಾಯ್ತು

(08)
ಅಭ್ಯಂಜನಕೆ
ಅಜ್ಜಿ ತೈಲದ ಲೇಹ್ಯ
ಗತ ವೈಭವ

(09)
ದೀಪ ಬೆಳಕು
ಹಚ್ಚೆ ಜೀವನೋತ್ಸಾಹ
ಹಗಲಿರುಳು

(10)
ಆಚರಣೆಗೆ
ಮೌಢ್ಯದ ಹಣೆಪಟ್ಟಿ
ಯಾಂತ್ರಿಕ ಜಗ

– ನಾಗೇಶ ಮೈಸೂರು
(Picture : little India preparations singapore)

00936. ಮಹಾತ್ಮ ಗಾಂಧೀಜಿ


00936. ಮಹಾತ್ಮ ಗಾಂಧೀಜಿ


(1)
ಗಾಂಧಿ ನಗರ
ಸಿನಿಮಾ ಜಗಕೆ ತಾತ
– ಎಂ ಜಿ ರಸ್ತೆಗೆ

(2)
ಎಂಜಿ ಎಂದರೆ
ಮಹಾತ್ಮ ಗಾಂಧಿ ರಸ್ತೆ
– ಮ.ಗಾಂ. ನಾಚಿದ

(3)
ಗಾಂಧಿ ಸೇಂದಿಗೆ
‘ಕರ’ ಚಾಚಲೇ ಬೇಡ
– ಸರ್ಕಾರಿ ಕರ

(4)
ಮಹಾತ್ಮ ಪಟ್ಟ
ಪಂಚೆ ಫಕೀರನಾಗೆ
– ಜನ ಬಿಡರು

(5)
ಸತ್ತ ನಂತರ
ನೆನಪಿಡಿಸೆ ಕಷ್ಟ
– ಹುಟ್ಟೇ ಸುಲಭ

(6)
ಹಿಂಬಾಲಿಸಿದ್ದು
ದೇಶ ಹೆಂಡತಿ ಮಾತ್ರ
– ಮಕ್ಕಳಿಗಿಲ್ಲ

(7)
ದೀಪದಡಿಗೆ
ಕತ್ತಲ ನೆರಳಿತ್ತು
– ಮಕ್ಕಳು ಮರೆ

(8)
ರಾಷ್ಟ್ರಕೆ ಪಿತ
ಹಂಚುವುದೆಂತು ಕೋಟಿ
– ಸತ್ಯ ಆಗ್ರಹ

(9)
ಏನೋ ಪಡೆಯೆ
ಕೊಡಲೇ ಬೇಕಿನ್ನೇನೋ
– ಸಮಾಜ ಮುಖಿ

(10)
ಸಮಾಜ ಸುಖಿ
ಯಾರದೋ ಧಾರಾಳದೆ
– ಯಾರೋ ಅಸುಖಿ

– ನಾಗೇಶ ಮೈಸೂರು
01.10.2016

(Picture from Wikipedia / internet)

00937. ಲಾಲ್ ಬಹದ್ದೂರು ಶಾಸ್ತ್ರಿ


00937. ಲಾಲ್ ಬಹದ್ದೂರು ಶಾಸ್ತ್ರಿ


(1)
ವಾಮನ ಶಾಸ್ತ್ರಿ
ಆಯೂಬ್ ಖಾನ್ ಉದ್ದ
– ತಗ್ಗಿಸೋ ತಲೆ

(2)
ಯುದ್ಧದ ಕರೆ
ಕೊಡಿ ಧನ ಕನಕ
– ಇರಿ ಒಪ್ಪತ್ತು

(3)
ಪರ ತಪ್ಪಿಗೆ
ತಾನುಪವಾಸ ಗಾಂಧಿ
– ಮಾಡೆಂದ ಶಾಸ್ತ್ರಿ

(4)
ಜಯ ಕಿಸಾನ್
ಗೋಧಿಗು ಹೊಡಿ ಗೋಲಿ
– ಜಯ ಜವಾನ್

(5)
ನುಗ್ಗೇ ಬಿಟ್ಟಿತು
ಲಾಹೋರದಲಿ ಸೈನ್ಯ
– ದಿಟ್ಟ ಪ್ರಧಾನಿ

(6)
ಪ್ರಧಾನಿ ಸ್ವಯಂ
ಬವಣೆ ಸವಲತ್ತು
– ಸಂಬಳ ತ್ಯಾಗ

(7)
ಕೆಲಸದಾಳು
ಸಮರ ಕಾಲ ಕಷ್ಟ
– ಸ್ವಾವಲಂಬನೆ

(8)
ಆರಂಭ ಅಂದು
ಪ್ರಧಾನ ಸೇವಕತೆ
– ಇದೀಗ ವೃಕ್ಷ

(9)
ಪ್ರಧಾನಿ ಮಾನ್ಯ
ಜನಸಾಮಾನ್ಯ ಗಣ್ಯ
– ಸಾಮಾನ್ಯ ಜ್ಞಾನ

(10)
ಶಾಸ್ತ್ರಿ ಪದವಿ
ದೇಶಸೇವೆ ಉಸಿರು
ಕೊನೆ ತನಕ

– ನಾಗೇಶ ಮೈಸೂರು
01.10.2016

(Photo source Wikipédia / internet)

00911. ಸೆಲ್ಫಿ ಸ್ವಗತಗಳು


00911. ಸೆಲ್ಫಿ ಸ್ವಗತಗಳು
________________


(01)
ಕ್ಯಾಮರಾ ಸೆಲ್ಫಿ.
ನಮ್ಮ ಜೀವನದಲ್ಲಿ ?
– ಅಂತರ್ವೀಕ್ಷಣೆ

(02)
ನಿಮ್ಮ ಬಾಳಿಗೆ
ನೀವೆ ಮಾಡೆಲ್ ಆದ್ರೆ
– ಅದೂ ಸೆಲ್ಫಿನೇ !

(03)
ಸೆಲ್ಫಿ ಅಪಾಯ
ಹಿಂದೆ ನೋಡದ ನಡೆ ;
– ಬದುಕಿನಲ್ಲೂ .

(04)
ಮೇಲೆತ್ತಿ ಚಾಚು
ದೂರವಿದ್ದಷ್ಟೂ ಸ್ಪಷ್ಟ…
– ಆಳ ಅಗಲ.

(05)
ಬದುಕಿನಲ್ಲೂ
ಪರಸ್ಪರ ಇಬ್ಬರು
– ಸೆಲ್ಫಿಯಾಗೋಣ .

(06)
ಬೆನ್ನು ಕಾಣದು
ಅದಕಿಲ್ಲದ ಸೆಲ್ಫಿ,
– ಮುಖಕೆ ಬೇಕು !

(07)
ಪ್ರೇಮದ ಸೆಲ್ಫಿ
ಪ್ರೀತಿಯ ಕುಲ್ಫಿಯಾಗೆ
– ಮದುವೆ ಟೋಪಿ !

(08)
ಸೆಲ್ಫಿಗೆ ಓಕೆ
ಮೆರವಣಿಗೆ ಯಾಕೆ ?
– ಒಬ್ಬಂಟಿತನ ..

(09)
ಮೊದಲೇ ಒಂಟಿ
ಯಾರ ಕೇಳೊ ಹಂಗಿಲ್ಲ,
– ಸೆಲ್ಫಿ ಬೇವರ್ಸಿ!

(10)
ಸೆಲ್ಫಿ ಎಂದರೆ
ಸ್ವಯಂ ಸೇವೆ ಜತೆಗೆ
– ಸ್ವಾರ್ಥ ಸ್ವತಂತ್ರ.

(11)
ಸೆಲ್ಫಿ ಸರ್ದಾರ
ಪರಮಾ? ಪರಂಧಾಮ ?
– ನಮ್ಮಾ ನಿರ್ಧಾರ

(12)
ನಮ್ಮ ವ್ಯಕ್ತಿತ್ವ
ಸೆಲ್ಫಿಯಲಿಲ್ಲ ಗೊತ್ತಾ?
– ಜೀವ ಜೋಪಾನ !

– ನಾಗೇಶ ಮೈಸೂರು
16.09.2016

This work is licensed under a Creative Commons Attribution-NonCommercial-ShareAlike 3.0 Unported License

00904. ನಮ್ಮ ನಾರಿಯರು


00904. ನಮ್ಮ ನಾರಿಯರು 
______________________


ನೇತ್ರಾವತಿಗೆ
ಕಂಬನಿ ಬರಲೆಂತು
– ನೀರೆಲ್ಲ ಖಾಲಿ 😰

ಕಾವೇರಿ ನೀರು
ಕೊಡದೆ ಮಾಡಿದ್ದೊಂದೆ
– ಕಾವೇರಿ’ಸಿದ್ದು’ !😷

ಕಪಿಲೆ ಬಾವಿ
ಹುಡುಕುತ್ತಿಹ ಸುದ್ಧಿ
– ಅವಿತುಕೊಳ್ಳೆ !👀

ಹಾರಂಗಿ ಜಲಾ
ಶಯನ ನೆಲವಾಗೆ
– ಬಿಡ ಬೇಡಿರೊ..😳

ತುಂಗಾ ಚರಿತ್ರೆ
ಇತಿಹಾಸ ಮಾಡದೆ
– ಭವಿಷ್ಯ ಕಟ್ಟಿ ⚖

ಭಧ್ರವಾಗಿರು
ಎಂದು ಬಿಟ್ಟೀರಾ ಜೋಕೆ
– ಕಾವಲಿಗಿರಿ 🤔

– ನಾಗೇಶ ಮೈಸೂರು
11.09.2016

(Picture source Creative Commons)

00901. ಮಂಗಳಾರತಿ


00901. ಮಂಗಳಾರತಿ
__________________

(01)
ಮಂಗಳಾರತಿ
ಆಗಾಗ ಮನೆಯಲ್ಲಿ
– ತೀರ್ಥ ಬಾರಲ್ಲಿ..

(02)
ಉತ್ತರ ಗೊತ್ತು
ಮೌನವೇ ಜಾಣತನ
– ತರ್ಕ ನಗಣ್ಯ

(03)
ವಾದ ಸಲ್ಲದು
ಪ್ರತಿವಾದಿ ಅಬಲೆ
– ಸೋಲು ನಿಶ್ಚಿತ

(04)
ಸೆಗಣಿ ಗಂಧ
ಮಾತು ಆಮೇಲಿರಲಿ
– ಬೈದು ಹಗುರ

(05)
ತೆವಲು ಮಾತು
ಬಿಡೆ ತಿಕ್ಕಲುತನ
– ಹಿತೋಪದೇಶ

(06)
ಮುನಿಸು ಹೆಚ್ಚೆ
ನೀ ಸರಿ ನಾನು ಸರಿ
– ತುಸು ದೂರಕೆ

11.09.2016

00900. ದಂತ ದಾಳಿಂಬೆ


00900. ದಂತ ದಾಳಿಂಬೆ
____________________

(01)
ದಂತ ದಾಳಿಂಬೆ
ತುಟಿ ತೊಂಡೆ ನಾಲಿಗೆ
– ಮೆಣಸಿನ್ಕಾಯಿ

(02)
ವದನ ಚಂದ್ರ
ನೇತ್ರ ಕಮಲ ಗುಣ
– ಅಸೂಯೆ ಗೌಣ

(03)
ಮೂಗು ಸಂಪಿಗೆ
ಕೆನ್ನೆ ಜೇನು ಸಿಡುಕು
– ಮಾತೆ ಕಾನೂನು

(04)
ಗುಳಿ ಚುಂಬಕ
ಅಧರ ಸುಖ ಕೋಪ
– ಮೂಗಿನ ಮೇಲೆ

(05)
ಕೇಶಾ ಸ್ವತಂತ್ರ
ಸ್ವೇಚ್ಛೆ ಮಂತ್ರ ಕನ್ನಡಿ
– ಕಾಲವೆ ಧೂರ್ತ

(06)
ಮಲ್ಲಿಗೆ ನಗೆ
ಮೊಗ್ಗು ಮುಗುಳ್ನಗೆ, ಮಾತು
– ವ್ಯಂಗದ ಹೊಗೆ

(07)
ಬಾಣ ಕಣ್ಣೋಟ
ಬಿಲ್ಲಿನ ರೆಪ್ಪೆ, ಘಾತ
– ಮಾತ ತೀಕ್ಷ್ಣತೆ

(08)
ಕಿವಿ ಜುಮುಕಿ
ಮುಂಗುರುಳು ಜರಿ, ಕೇಳೊ
– ಹಿತ್ತಾಳೆ ಕಿವಿ

(09)
ಊರೆಲ್ಲಾ ಮಾತು
ಇಲ್ಲದ ಹೊತ್ತು ಗೊತ್ತು
– ಕಾಣದ ಬೆನ್ನು

(10)
ಶಿರ ಶಿಖರ
ಜಡೆ ನಾಗರ, ಬಿಟ್ಟ
– ಸ್ವಂತದ ಬುದ್ಧಿ

11.09.2016

00896. ಯಾಕಾಗಿಬಿಟ್ಟಿವೆ ಇಷ್ಟೊಂದು


00896. ಯಾಕಾಗಿಬಿಟ್ಟಿವೆ ಇಷ್ಟೊಂದು
_______________________

ಯಾಕಾಗಿಬಿಟ್ಟಿವೆ ಇಷ್ಟೊಂದು
ಕೊಳೆತ ಮನ ಮಲೀನತೆ ?
ವ್ಯಕ್ತಿಗತ ಆರೋಪ ದೂಷಣೆ
ಪ್ರತಿ ಮಾತಿಗೂ ಅಸಹನೆ..
ಕೆಸರೆರಚಾಟ ಚೀರಾಟ
ವಾದ ಪ್ರತಿವಾದ ಹೋರಾಟ
ಜಿಗುಟು ಕ್ಷುಲ್ಲಕ ನಡಿಗೆ
ಯಾವ ಸಿದ್ದಾಂತದ ಮೂರ್ತ ?

ಅತ್ತ ಬದಿಯಲ್ಲೊಂದೆರಡು
ಕಾದಂತೇನೊ ಸಾಸಿವೆ ಸೂಜಿ
ಪೋಣಿಸುತೇನೊ ಹಾರ
ವೈಭವೀಕರಣ ಗುಡುಗುಡುಗಿ
ಕೆಸರನೆರಚಿ ಮುಸುಕ
ಗುದ್ದಾಟಕೆ ನಾಂದಿ ಪ್ರಚೋದನೆ
ನೀರೆರಚಿ ಕೆಸರೊರೆಸಿ ಮತ್ತೆ
ಕೆಸರೆಸೆಯುವವರ ಸೇನೆ..

ಅವರವರ ಕೆಸರು ನೀರು
ಆಡಿಕೊಳ್ಳಲಿ ಬಿಡಿ ಹೋಳಿ
ಅನ್ನುವಂತಿಲ್ಲ ಸಜ್ಜನ ಮನ
ಸಿಡಿಯುತಿವೆ ನೀರು, ಕೆಸರು
ಅಂಗಳದ ಸೆಗಣಿ ನೀರಿಗೂ
ಬೆರೆಸ ಬಂದರವರ ಬಣ್ಣ
ಸಜ್ಜನಿಕೆಯ ಕನ್ನಡಿಯಲಿ
ಕಾಣಿಸವರ ಬಿಂಬ ತಾವ್ಬೀಗೆ ..

ಇನ್ನಾಗದು ಮೌನಪ್ರೇಕ್ಷಕ
ತನ್ನ ಪಾಡಿಗೆ ತಾನಿಹ ಸೂತಕ
ಮಾಡಬೇಕಿದೆ ಮನದಟ್ಟು
ಹಿಡಿವ ಮೊದಲೆ ಜುಟ್ಟು
ಬಡಿದಾಡಿಕೊಳ್ಳಿ ನಿಮ್ಮ ಹಕ್ಕು
ಬಿಟ್ಟು ಜನರ ಪಾಡಿಗೆ ಜನರ
ಅನುಭವ ಅವರವರನುಸಾರ
ಅನಿಸಿದಂತವರವರ ನಿರ್ಧಾರ..

ನಿಮಗಿದ್ದಂತೆ ನಿಮ್ಮನಿಸಿಕೆ
ಅವರಿಗೂ ಅವರದೆ ದಾರಿ..
ನೆರಳಿಗವರು ಕಟ್ಟುವ ಮನೆಯ
ಗೋಡೆಗೆ ಬೇಡ ನಿಮ್ಮ ರಂಗು
ಅವರ ನೆಮ್ಮದಿ ಅವರಿಗೆ ಬಿಟ್ಟು
ನಿಮ್ಮ ಗೋಡೆಗಂಟಿದರೆ ಒಳಿತು
ಗೊತ್ತವರಿಗೆ ಮಾಡಬೇಕೇನು
ಯಾವುದು ಕೆಸರು ಯಾವ ನೀರು

– ನಾಗೇಶ ಮೈಸೂರು
06.09.2016

00895. ಗುರು ಘನತೆ


00895. ಗುರು ಘನತೆ
__________________

(01)
ಗುರು ಘನತೆ
ಕತೆ ಕಷ್ಟ ಕಾರ್ಪಣ್ಯ
– ತೀರದ ಋಣ

(02)
ಹೊಸದು ಸಾಧ್ಯ
ಸವೆದ ಸೀಮೆಸುಣ್ಣ
– ಬೆರಳ ಕಥೆ ?

(03)
ಕಸದೆ ರಸ
ಮೂಲ ಧನ ವಿದ್ಯಾರ್ಥಿ
– ಶ್ರೇಷ್ಠ ತಂತ್ರಜ್ಞ

(04)
ಮರುಕಳಿಕೆ
ವಿದ್ಯಾರ್ಥಿ ಆಕಳಿಕೆ
– ಗುರು ಸಹನೆ !

(05)
ಕಲಿಸಿದ್ದೆಲ್ಲ
ಅಂದೊ ಇಂದೊ ಮುಂದೆಂದೊ
– ವರ್ಣಮಾಲಿಕೆ

(06)
ಬಿದ್ದರು ಪಾಯ
ಬಾಲ್ಯದ ಗುರು ಮಾಯ
– ಮರೆತ ಜಗ

(07)
ಮಕ್ಕಳ ಕಾಟ
ಹೆತ್ತವರೇ ಸಿಡುಕು
– ಗುರುವೇ ನಮಃ

(08)
ಭೂತ ಭವಿತ
ವರ್ತಮಾನ ಸಹಿತ
– ಸ್ಕೂಲು ಮಾಸ್ಟರು

(09)
ನೂತನ ಜಗ
ಅಂತರ್ಜಾಲ ಶಿಕ್ಷಕ
– ದಾರಿ ತೋರಿಸು

(10)
ಉರು ಹೊಡೆಸೊ
ಕಾಯಕ ಬೇಡ ಈಗ
– ಅರಿ ತಿರುಳು

– ನಾಗೇಶ ಮೈಸೂರು
05.09.2016

00894. ದುರಿತ..ದುರಂತ..


00894. ದುರಿತ..ದುರಂತ..
________________


(01)
ಅವಳು ದೂರಿ
ಮಾತ ಮದ್ದಿಟ್ಟಾಗೆಲ್ಲ
– ಮೌನ ವಿಸ್ಪೋಟ

(02)
ಬಾಳಿಗೆ ಹಾರ
ಕೊಟ್ಟು ಕೊಂದ ಬದುಕು
– ಕೆರೆಗೆ ಹಾರ

(03)
ನೆಪಕಾದರು
ಮಾತಾಡಲು ಬಿಡದು
– ಮುರಿದ ಮನ

(04)
ಹೇಗೋ ಬದುಕು
ಸೋಲೇ ಕುಹಕ ನಗೆ
– ಯಾರಿಗ್ಹೇಳೋಣ

(05)
ಹೊಂದಾಣಿಸಿವೆ
ಉರುಳೀ ಬಂಡಿಗಳು
– ಸಹಿಸಿ ನೋವ

(06)
ಸಹಿಸೊ ಜೀವ
ಸಹಿಸಬೇಕು ಜಾಸ್ತಿ
– ಅಸಹಾಯಕ

(07)
ತಂದು ಹಾಕುವೆ
ನೀ ತಿಂದು ಹಾಕು ಎಲ್ಲ
– ಕಡೆಗೆ ಖಾಲಿ

(08)
ಮೂರು ಹೊತ್ತಿನ
ತುತ್ತಿಗೂ ಮಿತ್ತಾದರೆ
– ಬದುಕೇ ಕೂಲಿ

(09)
ಬೇಕಿಲ್ಲ ಬಾಳೆ
ಕ್ಷಿಪಣಿ ತಾಂತ್ರಿಕತೆ
– ಸಾಮಾನ್ಯ ಜ್ಞಾನ

(10)
ಗೊತ್ತಿರಬೇಕು
ಥಳುಕು ಬಳುಕಲ್ಲ
– ಕನಿಷ್ಠ ಅನ್ನ

– ನಾಗೇಶ ಮೈಸೂರು
04.09.2016

00893. ತುಣುಕಾಟಗಳು


00893. ತುಣುಕಾಟಗಳು
________________

(01)
ಅದೇ ಬದುಕು
ಕರೆದು ಕೊಟ್ಟ ಹಾಲು
– ಹೆಪ್ಪು ಮಜ್ಜಿಗೆ

(02)
ಬರಬಾರದು
ಹಸಿವೇ ಮಾತ್ರೆಯಾಗೊ
– ಅನೃತ ಘಳಿಗೆ..

(03)
ಸರಸರನೆ
ಏರಿವೆ ಬೆಲೆ ಪಗಾರ
– ದೂರುತ ಕಾಲ

(04)
ಪ್ರಗತಿ ಚಿಹ್ನೆ
ಬೆಳೆದೆತ್ತರ ಮರ
– ಸವರಿ ಸಸಿ

(05)
ಜಟಕಾ ಬಂಡಿ
ನುಂಗಿ ನೀರು ಕುಡಿದ
– ರಿಕ್ಷಾಗೆ ಟ್ಯಾಕ್ಸಿ

(06)
ಇಳಿಯುತ್ತವೆ
ಸರಕಿನ ಧಾರಣೆ
– ಸೇವೆಯೆ ತುಟ್ಟಿ..

(07)
ಪ್ರೀತಿಗೆ ಮುನ್ನ
ಸಂಬಳ ಎಷ್ಟು ಚೆನ್ನ
– ಬುದ್ಧಿವಂತಿಕೆ

(08)
ಪ್ರಾಣ ಕೊಡುವೆ
ಮೊದಲಿಡು ಗಣಿತ
– ಪ್ರೀತಿ ಬದುಕೆ

(09)
ಹಬ್ಬದ ದಿನ
ಒಳ್ಳೆ ಮಾತೆ ಕಡುಬು
– ಗಂಟಲಿಗಿಳಿ

(10)
ಒಂದೇ ಸಮಯ
ಹಲವಾರು ಸಖರು
– ವಾಸ್ತವ ಪ್ರಜ್ಞೆ

– ನಾಗೇಶ ಮೈಸೂರು
04.09.2016

00891. ಗೌರಿ ಸ್ಪೆಷಲ್


00891. ಗೌರಿ ಸ್ಪೆಷಲ್
_________________


(01)
ಗೌರಿಗಳೆದೆ
ಅನ್ನದೆ ಡವ ಡವ
ಹಬ್ಬವಿರಲಿ

(02)
ತೊಟ್ಟು ಉಡುಗೆ
ಬಾಗಿನ ಬಳೆ ದಾರ
ಗೌರಿ ಸುಂದರ

(03)
ಶಕ್ತಿ ಪ್ರತೀಕ
ನೀಡಲಿ ತನ್ನುದಕ
ಗೌರಿಗಳಿಗೆ

(04)
ಬೇಕಾಬಿಟ್ಟಿಗೆ
ಬಂದು ಹೋಗ ಬೇಡಮ್ಮ
ಕಾಯೆ ಶ್ರೀ ಗೌರಿ

(05)
ಬಂದಾಗ ಅತ್ತು
ಹೋಗುವುದು ಪದ್ಧತಿ
ಅಳಿಸಬೇಡ

(06)
ನಿನ್ನವತಾರ
ನೀಡು ವ್ರತಾನುಸಾರ
ಕನಿಷ್ಠ ರಕ್ಷೆ

(07)
ಗೌರಿಯಾಗಿರು
ಗಂಗೆಗೂ ದಯೆ ತೋರು
ಮಲಿನ ತೊಡೆ

(08)
ಸಂಪ್ರದಾಯಕೆ
ಬರಲೇಳು ತುಂತುರು
ಬೆಳೆ ಬೆಳಗೆ

(09)
ತಾಯಿ ಪಾರ್ವತಿ
ಶುದ್ಧ ಅಸುರ ಜಾತಿ
ಗೌರಿ ವಿಶ್ರಾಂತಿ

(10)
ನಾರೀಶ್ವರರು
ನಾರು ಬೇರು ಕಡಿದು
ಅಮಲ ಮನ

– ನಾಗೇಶ ಮೈಸೂರು
04.09.2016

(Picture from Internet / Facebook)

00880. ಗಣಪ ಗಣನೆ


00880. ಗಣಪ ಗಣನೆ
__________________


(01)
ಗಣೇಶ ನೆಲೆ
ಜನ ಮಾನಸದಲಿ
ಅನವರತ..

(02)
ಆನೆಯ ಶಿರ
ಗಜಾಸುರ ವದನ
ಶಿವ ಸಾನಿಧ್ಯ..

(03)
ಗೌರಿ ಬೇಸರ
ಸೃಜಿಸೆ ಗಣಪನ
ಜಗದ ಮೋದ..

(04)
ತ್ರಿಕಾರ್ಯ ದೃಷ್ಟಿ
ವಿನಾಯಕನ ಸೃಷ್ಟಿ
ದೇವ ವಿಜ್ಞಾನ..

(05)
ಅಜ್ಞಾನ ತಮ
ಸಿದ್ಧಿ ಬುದ್ಧಿ ಕರಣ
ಪಾಣಿಗ್ರಹಣ..

(06)
ವಿಘ್ನ ಸಕಲ
ನಿವಾರಿಸಿ ಬರಲಿ
ಗಣಪ ದಯೆ..

(07)
ನಾಗರ ಹೊಟ್ಟೆ
ಬಿರಿಯದಂತೆ ಕಟ್ಟು
ದಯೆ ಸಾಗರ..

(08)
ಮೊರದಗಲ
ಕಿವಿಯ ನಗುಮೊಗ
ಕಿರು ನಯನ..

(09)
ಉಬ್ಬಿದುದರ
ಒಳಗಿಹ ಧಾರಿಣಿ
ನಿತ್ಯ ಸುರಕ್ಷೆ..

(10)
ಮೊದಲ ಪೂಜೆ
ಮಿಕ್ಕವರ ಗೋಜಿಲ್ಲ
ಗಣ ವಾಹಕ..

(11)
ಕ್ಷಣ ಗಣನೆ
ಬಹ ಗಣಪ ಮೇನೆ
ಸಂಭ್ರಮ ಹಬ್ಬ..

(12)
ಚಂದ್ರ ದರ್ಶನ
ಮಾಡಿರೆ ವಿಧಿಯಿಲ್ಲ
ನೆನೆ ಚೌತಿಯ..

– ನಾಗೇಶ ಮೈಸೂರು
31.08.2016

(picture from Internet / Facebook )

00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)


00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)
_______________________________

ಪ್ರತಿ ನಂಟಿಗು ಅವರವರದೇ ವ್ಯಾಖ್ಯೆ, ವಿಮರ್ಶೆ, ಅರ್ಥ – ಮನದ ಗುಣಿತಕನುಸಾರವಾಗಿ. ಹಾಯ್ಕು ಮಾದರಿಯ ಈ ಹನಿಗಳಲ್ಲಿ ಕೆಲವೊಂದನ್ನು ಕಟ್ಟಿಡುವ ಅರೆ-ಸಫಲ ಯತ್ನ.. 😊


(೦೧)
ನಂಟಿನ ಮನ
ಅವರವರ ವ್ಯಾಖ್ಯೆ
– ಮನದ ಗಂಟೆ.

(೦೨)
ನಂಟಿಗೆ ಬೇಕು
ಬೇವು ಬೆಲ್ಲದ ಕಾಲ
– ಅರಿಸುವಾಟ.

(೦೩)
ನಂಟಸ್ತಿಕೆಗೆ
ಅಂತಸ್ತೈಶ್ವರ್ಯ ಲೆಕ್ಕ
– ಮಿಕ್ಕಿದ್ದಾಮೇಲೆ.

(೦೪)
ನಂಟಿನ ಗಂಟು
ಅಂದುಕೊಂಡಿದ್ದೆ ಹೆಚ್ಚು
– ಆಗದೆ ಕಿಚ್ಚು.

(೦೫)
ಗೀಳಾಗಿ ನಂಟು
ಕಾಡುವ ಅನುಪಾತ
– ವಿಲೋಮ ದೂರ.

(೦೬)
ನಂಟಿಗರ್ಥವೆ
ನನದೆನ್ನುವ ಸ್ವಾರ್ಥ
– ಉಬ್ಬರವಿಳಿತ

(೦೭)
ಗಂಟು ಹಾಕಿದ್ದು
ನಂಟೇ ಆದರು ಮೊತ್ತ
– ಗೌರವ ಸೂಕ್ತ.

(೦೮)
ತಪಿಸಿ ನಂಟ
ಹುಡುಕಾಡಿಸೊ ಚಿತ್ತ
– ಸಿಕ್ಕಾಗ ಧೂರ್ತ.

(೦೯)
ನಂಟಿನ ಹಿತ
ಮುದದಷ್ಟೆ ಬೇಸರ
– ಇರಲಿ ನಿಗಾ.

(೧೦)
ನಂಟಿಗೆ ಗುಟ್ಟ
ರಟ್ಟಾಗಿಸೊ ನಂಬಿಕೆ
– ಗುಟ್ಟಾಗಿರಲಿ.

– ನಾಗೇಶ ಮೈಸೂರು

00743. ಚಳಿ ಕುಟುಕಿದಾಗ..(ತುಣುಕುಗಳು – ೨೬.೦೫.೨೦೧೬)


00743. ಚಳಿ ಕುಟುಕಿದಾಗ..(ತುಣುಕುಗಳು – ೨೬.೦೫.೨೦೧೬)
_______________________________________________


(೦೧)
ಮುಂಜಾವು ಚಳಿ
ಮಾತಿಲ್ಲ ಕಸಿವಿಸಿ
– ಅವಳಿಲ್ಲದೆ.

(೦೨)
ಅದುರೊ ಚಳಿ
ನಡುಗಿಸಿ ಬಿಡದೆ
– ಜಲಬಾಧೆಗೂ.

(೦೩)
ಮೇಲೆಳೆದುಕೊ
ವಿಪರೀತ ಚಳಿಗೆ
– ಪ್ರೀತಿಯ್ಹೊದಿಕೆ .

(೦೪)
ಮುನಿಸ ಬಿಡು
ಇರುಳ ಬಗಲಲ್ಲಿ
– ಚಳಿಗಪ್ಪಿಕೊ.

(೦೫)
ಭುಜಕೊರಗಿ
ಬಳಸಿದ ತೋಳಲಿ
– ಚಳಿ ಬೆವರು.

(೦೬)
ಚಳಿಯ ಚಾಳಿ
ಮುನಿದವರಿಗ್ಹಚ್ಚೆ
-ವಿರಹದುರಿ.

(೦೭)
ತೀವ್ರ ಚಳಿಗೆ
ಸೆಟೆದು ಮರಗಟ್ಟೆ
– ಬೆಚ್ಚನೆ ಕರ.

(೦೮)
ಹಿಮದೊಳಗೆ
ಕಟ್ಟಿಕೊಂಡರೆ ಗೂಡು
– ಚಳಿ ಬೆಚ್ಚಗೆ.

(೦೯)
ಚಳಿಯೇ ಧೂರ್ತ
ಸೆಕೆ ಸಂಕಲ್ಪ ಧ್ವಂಸ
– ಅವಹೇಳನ.

(೧೦)
ಚಳಿ ಮಳೆಗೆ
ಕವಿತೆಯಾಗೊ ಬಾಳು
– ಬೇಸಿಗೆ ಕಥೆ.

– ನಾಗೇಶ ಮೈಸೂರು

00737. ದೇಗುಲ, ಚಪ್ಪಲಿ, ಮನಸು..


00737. ದೇಗುಲ, ಚಪ್ಪಲಿ, ಮನಸು..
_________________________


(೦೧)
ಪ್ರಶಾಂತ ಮನ
ಬೇಡಿ ದೇಗುಲ ಸುತ್ತೆ
– ಹೊಸ ಚಪ್ಪಲಿ.

(೦೨)
ಪಾದುಕೆ ಜತೆ
ಬಿಚ್ಚಿಟ್ಟ ಮನ ಧೂರ್ತ
– ದೇವರ ಜತೆ.

(೦೩)
ಪೂಜೆ ಸಾಮಾನು
ಕೊಂಡರಲ್ಲಿ ಉಚಿತ
– ಚಪ್ಪಲಿ ಬಿಡಿ.

(೦೪)
ಟೋಕನ್ ಸಿಸ್ಟಂ
ನಿರಾಳ ಮನ ಸ್ವಸ್ಥ
– ಅಡಿಗಡಿಗೆ.

(೦೫)
ಯಾರೆಂದವರು
ಬದಲಾವಣೆ ಕಷ್ಟ
– ದೇಗುಲ ಮಾಯೆ.

(೦೬)
ದೇವಸ್ಥಾನದೆ
ಕಳುವಾದರೆ ಹಿಗ್ಗು
– ಚಪ್ಪಲಿ ಪಾಪ.

(೦೭)
ರಾಮ ಪಾದುಕೆ
ಹೊತ್ತ ಭರತ ಶ್ರದ್ಧಾ
– ಕಾಲಿಗೆ ಸಾಕು.

(೦೮)
ದೇಗುಲ ಹಾದಿ
ಒತ್ತುವ ಕಲ್ಲು ಮಣ್ಣು
– ಪಾದುಕೆ ಬೇಕು.

(೦೯)
ಚಪ್ಪಲಿ ಮನ
ಚಿಂತನೆಗೂ ನಿಕೃಷ್ಠ
– ಇರಲೇಬೇಕು.

(೧೦)
ಬರಿಗಾಲ್ಹೆಜ್ಜೆ
ಇಟ್ಟ ಪ್ರತಿ ಗಳಿಗೆ
– ಧರೆ ನೆನಪು .


– ನಾಗೇಶ ಮೈಸೂರು.

00730. ನಮ್ಮ ಬಾಳು, ಮರದ ಬದುಕು.. (ಹಾಯ್ಕು ಮಾದರಿ)


00730. ನಮ್ಮ ಬಾಳು, ಮರದ ಬದುಕು.. (ಹಾಯ್ಕು ಮಾದರಿ)
___________________________________________

(೦೧)
ಹಗಲಿರುಳು
ದ್ಯುತಿ ಸಂಶ್ಲೇಷಿಸುತ
– ಅರಳಿ ಮರ.

(೦೨)
ಅರಳಿ ಮರ
ಇರುಳಾಮ್ಲಜನಕ
– ಕೊಡುವ ತರ.

(೦೩)
ಮರ ಜನಕ
ವಿನಿಮಯ ಇಂಗಾಲ
– ವಿಷಕಂಠರು.

(೦೪)
ಆಲದ ಮರ
ಅಪ್ಪ ಹಾಕಿದರೇನು ?
– ಆಳದ ಮರ.

(೦೫)
ಬಿಳಲು ಬೇರು
ಬೀಳಲು ಬಿಡದೆಲೆ
– ಹಿಡಿವ ತರ.

(೦೬)
ಆಲ ವಿಶಾಲ
ಚಾಚಿದರೂ ಕೆಳಗೆ
– ಬೆಳೆಯ ಬಿಡ.

(೦೭)
ಆಪ್ಯಾಯಮಾನ
ನೆರಳು ಬಿಳಲಡಿ
– ಆಲದ ರಕ್ಷೆ.

(೦೮)
ನೀರ ಹೀರಿಯು
ಮತ್ತೇರಿಸೊ ಕೊಸರು
– ಈಚಲ ಮರ.

(೦೯)
ತೆಂಗಿನ ಮರ
ಬೆಳೆದೆತ್ತರ ಫಲ
– ಎಟುಕೊ ಕಾಲ.

(೧೦)
ಹೊಂಗೆಯ ಮರ
ನೆರಳ ಸೆರಗ್ಹಾಸಿ
– ಬೆತ್ತಲೆ ಹೂವು.

– ನಾಗೇಶ ಮೈಸೂರು

00726. ಜೀವನ ಚೈತ್ರದ ಓಟ


00726. ಜೀವನ ಚೈತ್ರದ ಓಟ
_______________________


ಜೀವನ ಚೈತ್ರದ ಹಾಗೆ ಸುಪರ್ ಓಟ
ನಮ್ಮ ಮನೆಯ ಬೆಳಗಿನ ಉಪಹಾರ
ಭಾನುವಾರ ರುಬ್ಬಿದ ಹಿಟ್ಟು ಬಿಡುಗಡೆ
ಮಿಕ್ಕ ವಾರಪೂರ್ತಿ ದಿನವೂ ದೋಸೆ !

(Picture source: https://en.m.wikipedia.org/wiki/File:Dosai_Chutney_Hotel_Saravana_Bhavan.jpg)

00720. ಸತಿಸೂತ್ರ..!


00720. ಸತಿಸೂತ್ರ..!
________________


(೦೧)
ಹೆಂಡತಿ ಬೈದು
ಬದುಕಿದವರುಂಟೆ
– ಹೊಗಳಿ’ಬಿಡಿ’.

(೦೨)
ಚಿನ್ನಾ, ಬಂಗಾರ
ಮಾತಲಿ ಲಕ್ಷ ಬಾರಿ
– ಕೃತಿಗೆ ‘ಸಾರಿ’.

(೦೩)

ಲಕ್ಷಗಟ್ಟಲೆ
ಕೊಟ್ಟ ವರದಕ್ಷಿಣೆ
– ಕೊಂಡ ಸರಕು.

(೦೪)
ಗೋಳಾಡಿಸಿಯು
ಉಸಿರ ಬಿಡದಿರಿ
– ಗೆಲುವ ಅಶ್ರು.

(೦೫)
ಅಡಿಗೆ ಮನೆ
ಖಾಲಿ ಪಾತ್ರೆ ಸದ್ದಾಗೆ
– ಮೌನಧಾರಣೆ.

– ನಾಗೇಶ ಮೈಸೂರು

00715. ವಾರದ ಕೊನೆಗಿಷ್ಟು ಹನಿಗಳು..


00715. ವಾರದ ಕೊನೆಗಿಷ್ಟು ಹನಿಗಳು..
___________________________


(೦೧)
ಪಾಪಿಯೊಡ್ಡಲಿ
ಪುನೀತರೊಡ್ಡಲಿ ಕೈ
– ತೊಳೆವ ಗಂಗೆ.

(೦೨)
ತುಂತುರು ಹನಿ
ಮೋಡ ಮುಸುಕಿದೆ
– ಬಿಸಿ ಪಕೋಡ.

(೦೩)
ಮುಗಿಲ ರಚ್ಚೆ
ವಾರದ ರಜೆ ಮುಚ್ಚೆ
– ಮನ ಕಾಶ್ಮೀರ.

(೦೪)
ಉದುರುತಿವೆ
ಹನಿ ಚಿಲ್ಲರೆ ಕಾಸು
– ಕರಗಿ ಸುತ್ತ.

(೦೫)
ಗುದ್ದಲಿ ಬಿಡಿ
ನಗರದ ವ್ಯಾಮೋಹ
– ತುಟ್ಟಿ ದಿನಸಿ.

(೦೬)
ಬೆಳೆಯಬೇಡಿ
ಕೊಂಡು ತಿನ್ನುವ ದಿನಾ
– ಆಮದು ವೃದ್ಧಿ.

(೦೭)
ಮಳೆಯಾಗಲಿ
ಮಾತಾಗಲಿ ಕರಗಿ
– ವೇದನೆ ಮುಕ್ತಿ.

(೦೮)
ಮುಂಗಾರು ಮಳೆ
ಕದಡದೆ ರಂಗೋಲಿ
– ನಗುತಿರಲಿ.

(೦೯)
ಬರದ ಕಾಲ
ಬಾರದ ಮಳೆಗಾಲ
– ಕೆಳೆ ಬರಲಿ.

(೧೦)
ಮೊದಲ ಮಳೆ
ನವಿರೆದ್ದು ಸಂಭ್ರಮ
– ಸಂಗಾತಿ ತೆಕ್ಕೆ.

– ನಾಗೇಶ ಮೈಸೂರು.

00710. ಫ್ರೈಡೆ ದ ಥರ್ಟೀನ್ !


00710. ಫ್ರೈಡೆ ದ ಥರ್ಟೀನ್ !
________________________

ಶುಕ್ರವಾರ ಮತ್ತು ಹದಿಮೂರನೆ ತಾರೀಕು ಜತೆಯಾಗಿ ಬಂದರೆ ಅಶುಭವೆನ್ನುವ ನಂಬಿಕೆ ಪಾಶ್ಚಾತ್ಯರಲ್ಲಿದೆ. ಜತೆಗೆ ಹದಿಮೂರು ಒಂದು ರೀತಿಯ ಅಶುಭ ಸಂಖ್ಯೆ ಸಹ. ಹೀಗಾಗಿ ದೊಡ್ಡ ಕಟ್ಟಡಗಳಲ್ಲಿ ಹದಿಮೂರನೆ ಅಂತಸ್ತೆ ಕಾಣೆಯಾಗಿ ಹನ್ನೆರಡರ ನಂತರ ಹದಿನಾಲ್ಕಕ್ಕೆ ನೆಗೆದುಬಿಡುತ್ತದೆ! ಹದಿಮೂರು ಭೌತಿಕವಾಗಿದ್ದರು ಹದಿನಾಲ್ಕರ ನಾಮಧೇಯ ಅಲಂಕರಿಸಿ ಪಾಪಮುಕ್ತವಾಗಿಬಿಡುತ್ತದೆ. ಇನ್ನು ಕೆಲವೆಡೆ ಆ ಅಂತಸ್ತು ಯಾವುದೊ ಕಮ್ಮಿ ಪ್ರಾಮುಖ್ಯತೆಯ ಕೆಲಸಕ್ಕೆ ಬಳಕೆಯಾಗಿ ಯಾರೂ ವಾಸಿಸದ ಅಂತಸ್ತಾಗಿಬಿಡುತ್ತದೆ. ಅದೆಲ್ಲದರ ಕೆಲವು ತುಣು’ಕಾಟ’ಗಳ ಲಹರಿ ಈ ಕೆಳಗೆ 😊😜


(೦೧)
ಥರ್ಟೀನ್ತ್ ಫ್ರೈಡೆ
ಪಾಶ್ಚಾತ್ಯರ ಪಾಲಿಗೆ
– ಗುಡ್ಡದ ಭೂತ.

(೦೨)
ವಿಚಿತ್ರ ನಂಬೆ
ಶುಕ್ರವಾರ ಹದ್ಮೂರು
– ತಿಕ್ಕಲು ಮನ.

(೦೩)
ಎಲಿವೇಟರು
ಗುಂಡಿ ಒತ್ತುವ ಹೊತ್ತು
– ಹದಿಮೂರಿಲ್ಲ!

(೦೪)
ಚೈನಾದಲ್ಯಾಕೊ
ಹದಿಮೂರರ ಜತೆ
– ನಾಲ್ಕು ನಾಪತ್ತೆ..!

(೦೫)
ಮುಚ್ಚೆ ಸುಲಭ
ಹನ್ನೆರಡಾದ ಮೇಲೆ
– ಬರಿ ಹದ್ನಾಲ್ಕು 😜

(೦೬)
ಮನೆ ನಂಬರು
ಹದಿಮೂರನೆ ಪ್ಲೋರು
– ಯಾಕೆ ಬೇಕಿತ್ತು ?😛

(೦೭)
ಭೀತಿಯೇ ಇಲ್ಲ
ಅಷ್ಟು ಮಹಡಿ ಮನೆ
– ನಾವು ಕಟ್ಟೊಲ್ಲ 😎

(೦೮)
ನಂಬದಿದ್ದರೂ
ಅಂಜಿ ಒಳಗೊಳಗೆ
– ಹುಷಾರಿನಲಿ 😟

(೦೯)
ಮೂಗಿಗೆ ತುಪ್ಪ
ನಂಬರು ಬದಲಿಸಿ
– ಫ್ಲಾಟು ಮಾರಾಟ !

(೧೦)
ಮೂಡನಂಬಿಕೆ
ಅಲ್ಲಗಳೆಯುತಲೇ
– ಮನದೆ ಭೀತಿ.

– ನಾಗೇಶ ಮೈಸೂರು.

(Picture from : https://en.m.wikipedia.org/wiki/File:Freitag_der_13._im_Kalender.jpg)

00708. ತುಣು’ಕಾಟ’ಗಳ ತಿಣುಕಾಟ..


00708. ತುಣು’ಕಾಟ’ಗಳ ತಿಣುಕಾಟ..
__________________________


(೦೧)
ತಿಥಿ ಅತಿಥಿ
ತಿಂದಾಗಷ್ಟೆ ಸದ್ಗತಿ
– ಕರ್ಮದ ಭೀತಿ.

(೦೨)
ಧಾರಾಳ ಮನ
ಖರ್ಚು ಮಾಡೇ ಸಮೃದ್ಧ
– ಆರ್ಥಿಕ ಬಿಡ.

(೦೩)
ಕನಸು ಕಾಣೆ
ಕಾಸಿಲ್ಲ ಸಂಭ್ರಮಿಸೆ
– ನನಸು ಜಾಣೆ.

(೦೪)
ಕನಸು ಕಟ್ಟಿ
ಏಣಿಯ ಹಾಕಿ ನಡೆ
– ನನಸು ಗಟ್ಟಿ.

(೦೫)
ಮನ ಬಗ್ಗಡ
ಕಾಣಿಸದಲ್ಲ ಸದ್ಯ
– ಕೊಳಕು ನಾಗ.

(೦೬)
ಜಾಣೆ ಸುಂದರಿ
ಅರಸಿತು ಮನ ಭ್ರಮೆ
– ಬರಿ ದಿಗ್ಬ್ರಮೆ.

(೦೭)
ಪರಿಪೂರ್ಣತೆ
ಯಾರಲ್ಲಿಲ್ಲದ ಸ್ವತ್ತು
– ಹುಡುಕೊ ವ್ಯರ್ಥ.

(೦೮)
ಅರ್ಥ ಮಾಡಿಕೊ
ದೌರ್ಬಲ್ಯ ಸಹಜತೆ
– ಒಪ್ಪಿ ಅಪ್ಪಿಕೊ.

(೦೯)
ಸ್ನೇಹ ಪ್ರೀತಿಯ
ಗೆರೆ ದಾಟಲು ಅಡ್ಡಿ
– ನೀತಿ ಸಂಹಿತೆ.

(೧೦)
ಬರೀ ಷರತ್ತು
ಪ್ರೀತಿ ಪ್ರೇಮದ ವಸ್ತು
– ಯುಗದ ಮಾತು.

– ನಾಗೇಶ ಮೈಸೂರು

(Picture source: http://www.activityvillage.co.uk/autumn-collage)

00707. ತುಣು’ಕಾಟ’ಗಳು…


00707. ತುಣು’ಕಾಟ’ಗಳು…
_______________________

(೦೧)
ಕೇಳದೆ ಕೊಟ್ಟು
ಕೇವಲವಾಗೊ ದುಃಖ
– ತಡೆದು ಹಿತ.

(೦೨)
ದೂರವಿರಿಸಿ
ದೂರವಾಗೆ ದೂಷಿಸೆ
– ಶೋಷಿತ ಮನ.

(೦೩)
ಸಂವಹಿಸದೆ
ಮೌನ ಧರಿಸೊ ಪಾತ್ರ
– ಕಲ್ಪನೆ ಕೊಳ್ಳೆ.

(೦೪)
ಮುನವೇ ಸುಳ್ಳು
ಮಾತಿರದ ಗಳಿಗೆ
– ಕಾಲ ಸತ್ತಾಗ.

(೦೫)
ಯೋಚಿಸುತಲೆ
ಊಹಿಸೊ ತಲೆ ಒಲೆ
– ಪ್ರಮಾದಕರ.

(೦೬)
ನಡೆವ ಮುನ್ನ
ನಡೆಯಬಹುದೇನು
– ಚಿಂತಿಸೇ ಸುಸ್ತು.

(೦೭)
ಮನ ವಾಗ್ಯುದ್ಧ
ವಾದ ಪ್ರತಿವಾದಕೆ
– ಅದೇ ಫಲಿತ.

(೦೮)
ಜಗಳ ನೆಪ
ನೂರೆಂಟು ಒಳಗುದಿ
– ಕಕ್ಕಿಸಿ ವಿಷ.

(೦೯)
ದೂರವಿಟ್ಟಳು
ದೂರಾಗಳು ಮನದೆ
– ನಿಶ್ಚಲ ಚಿತ್ರ.

(೧೦)
ತುಚ್ಛಿಕರಿಸಿ
ಕಡೆಗಣಿಸಿದರು
– ಶುಭ ಹಾರೈಕೆ.

– ನಾಗೇಶ ಮೈಸೂರು

00705. ಕಥಾಲೋಕ, ಚರಿತ್ರೆಯ ಪುಟ…


00705. ಕಥಾಲೋಕ, ಚರಿತ್ರೆಯ ಪುಟ…
___________________________


(೦೧)
ಅದ್ಬುತ ಗೊತ್ತ !
ಅಲ್ಲಾವುದ್ದೀನ್ ದೀಪ
– ಹುಡುಕಿದ್ದೇನೆ.

(೦೨)
ಏಳು ಸಮುದ್ರ
ದಾಟಿ ಬಂದರು ಇಲ್ಲ
– ರಾಜಕುಮಾರಿ.

(೦೩)
ಕುದುರೆ ಏರಿ
ಕನಸಿಗೆ ಹೊಕ್ಕರು
– ನಂಬದ ಮನ.

(೦೪)
ಆಣೆ ಪ್ರಮಾಣ
ಮಾಡದ ಜಾಣತನ
– ಪ್ರಾಮಾಣಿಕತೆ.

(೦೫)
ಈಗಿಲ್ಲ ಪ್ರಶ್ನೆ
ಪ್ರೇಮಕ್ಕೂ ಪರ್ಮಿಟ್ಟೇನು?
– ಇಲ್ಲ ಲಿಮಿಟ್ಟು.

(೦೬)
ಅಂತಃಪುರದ
ಹೆಣ್ಣು ಮನ ಅತ್ತರು
– ವಾಸನೆಯಿಲ್ಲ.

(೦೭)
ದಂಡಿನ ಧಾಳಿ
ಗೆದ್ದಾ ಸಂಪತ್ತಿನಲಿ
– ಜನಾನ ಭರ್ತಿ.

(೦೮)
ಕಲಿಗಳವರು
ಕಲಿತ ವಿದ್ಯೆ ತೋರೆ
– ಮರೆತ ಮನೆ.

(೦೯)
ಶಹಜಾದೆಯ
ದಿನಕ್ಕೊಂದು ಕಥೆಗೆ
– ನಾ ಜಹಪಾನ.

(೧೦)
ನೀತಿ ಹೇಳುವ
ಈಸೋಪನ ಕಥೆಗೆ
– ಒಗ್ಗದ ಬಾಳು.

– ನಾಗೇಶ ಮೈಸೂರು

(Picture source: https://en.m.wikipedia.org/wiki/File:Prince_Salim_(the_future_Jahangir)_and_his_legendary_illicit_love.jpg)

00704. ನೋವು ನಲಿವು….


00704. ನೋವು ನಲಿವು….
______________________


(೦೧)
ಜೀವನದೂಟ
ಬಡಿಸೆ ಬರಿ ನೋವು
– ನಂಚಿಕೊ ನಗು.

(೦೨)
ನೋವು ನಲಿವು
ಕಿಲಾಡಿ ನಿಯಾಮಕ
– ಮರೆಯ ಬಿಡ.

(೦೩)
ಗಟ್ಟಿ ಹೃದಯ
ಎದುರಿಸಿದ್ದು ಕಷ್ಟ
– ನೀರು ಕಣ್ಣಲ್ಲಿ.

(೦೪)
ಸರಿಸಮಾನ
ಶ್ರೀಮಂತನು ಬಡವ
– ನೋವು ನಲಿವು.

(೦೫)
ಹಮ್ಮು ಮುರಿವ
ಹಣದ ಮದ ಸೊಲ್ಲು
– ಗೆಲ್ಲದು ಜಡ್ಡ.

(೦೬)
ಕಷ್ಟ ಕೋಟಲೆ
ಅನುಭವಿಸೆ ಶಕ್ಯ
– ನೆನೆಯೆ ದುಃಖ.

(೦೭)
ಯಾರಿಗೆ ಯಾರೊ
ಆಗುವ ಸಮಯವೆ
– ಬಾಳ ವಿಸ್ಮಯ.

(೦೮)
ಹೊಡೆದಾಡುತ
ಬಿದ್ದು ಹೋಗುವ ಮುನ್ನ
– ಸಹಾಯ ಹಸ್ತ.

(೦೯)
ಪರರ ಕಷ್ಟ
ಅರಿತಾಗಷ್ಟೆ ಅರ್ಥ
– ಎಷ್ಟು ನಗಣ್ಯ.

(೧೦)
ಕುಗ್ಗಿಸಿ ಬಿಡು
ಸ್ಪ್ರಿಂಗಿನಂತೆ ಪುಟಿದು
– ಸೆಟೆದು ನಿಲ್ಲೆ.

– ನಾಗೇಶ ಮೈಸೂರು

(picture source: http://www.123rf.com/photo_15387483_simple-man-joy-and-sorrow.html)

00696. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೯-೦೦೨೭)


00696. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೯-೦೦೨೭)
_____________________________________________

ಲಲಿತಾ ಸಹಸ್ರ ನಾಮದ ಒಂಭತ್ತು (೧೯-೨೭) ಹೆಸರಿನ ಭಾಗಶಃ ನಾಮಾರ್ಥಗಳನ್ನು ಹಾಯ್ಕು ಮಾದರಿಯಲ್ಲಿ ಮೂಡಿಸುವ ಯತ್ನ. ಆ ಯತ್ನದಲ್ಲಿ ಅರ್ಥ ನಷ್ಟವೋ, ಹಾಯ್ಕು ನಿಯಮ ಉಲ್ಲಂಘನೆಯೊ ಆಗಿದ್ದರೆ ಕ್ಷಮೆಯಿರಲಿ 😊

(ಶ್ರೀಯುತ ರವಿಯವರ ಮೂಲ ಇಂಗ್ಲೀಷಿನಲ್ಲಿದ್ದ ಸಹಸ್ರನಾಮ ವಿವರಣೆಯನ್ನು ಕನ್ನಡೀಕರಿಸಿದ ಶ್ರೀ ಶ್ರೀಧರ ಬಂಡ್ರಿಯವರ ವಿವರಣೆಯನ್ನಾಧರಿಸಿ ನಾನು ಬರೆದಿದ್ದ ಪದ್ಯಗಳನ್ನು ಮೂಲವಾಗಿಟ್ಟುಕೊಂಡು ಈ ಹಾಯ್ಕುಗಳನ್ನು ಹೊಸೆದಿದ್ದೇನೆ. ಆ ಮೂಲ ಪದ್ಯಗಳನ್ನು ಜತೆಗೆ ನೀಡಿದ್ದೇನೆ, ತುಸು ಹೆಚ್ಚಿನ ಸ್ಪಷ್ಟತೆಗಾಗಿ)

೦೦೧೯. ನವಚಂಪಕ-ಪುಷ್ಪಾಭ-ನಾಸದಂಡ-ವಿರಾಜಿತಾ
___________________________________

ನೀಳ ನಾಸಿಕ
ಬಿರಿದಂತೆ ಸಂಪಿಗೆ
– ದೇವಿ ಸೊಬಗೆ.

ಸುಕೋಮಲ ಸುಂದರ ಸಂಪಿಗೆ ಬೀರುತ ಪರಿಮಳ
ಸೆರೆ ಹಿಡಿದಂತೆ ಮೈ ಮನ ಸುವಾಸನೆ ಮನದಾಳ
ಬಿರಿದರೆಷ್ಟು ಸೊಗವೆ ನೀಳ ನಾಸಿಕ ಅರಳಿದ ಹೂವೆ
ಹೊಚ್ಚಹೊಸತೆ ಬಿರಿದ ಪುಷ್ಪನಾಸಿಕ ದೇವಿ ಮೊಗದೆ ||

೦೦೨೦. ತಾರಾಕಾಂತಿ-ತಿರಸ್ಕಾರಿ-ನಾಸಭರಣ-ಭಾಸುರಾ
___________________________________

ಮೂಗುತಿ ಮಣಿ
ಗ್ರಹ ಮಂಗಳ ಶುಕ್ರ
– ಹರಿಸೆ ದೋಷ.

ಕೆಂಪು ಮಾಣಿಕ್ಯದಧಿಪತಿ ಮಂಗಳ ವಜ್ರಾಧಿಪತಿ ಶುಕ್ರ
ದೇವೀ ಮೂಗುತಿಯಾಗ್ಹಿಡಿದ ಗ್ರಹ ನಿಯಂತ್ರಣ ಸೂತ್ರ
ಮುತ್ತು ಮಾಣಿಕ್ಯದೆ ಮಿನುಗುವ ಮೂಗುತಿಯ ಧರಿಸೊ
ಲಲಿತಾ ಪೂಜೆಯ ಮಾಡುತೆ ಗ್ರಹದೋಷ ನಿವಾರಿಸೊ ||

೦೦೨೧. ಕದಂಬ-ಮಂಜರೀ-ಕ್ಲುಪ್ತ-ಕರ್ಣಪೂರ-ಮನೋಹರಾ
_____________________________________

ಕದಂಬ ವೃಕ್ಷ
ಹೂ ಸೊಗ ದೇವಿಮುಡಿ
– ಕರ್ಣಾಭರಣ.

ಚಿಂತಾಮಣಿ ದೇವಿಯರಮನೆ ಹೊರಗೆ
ಬಿಡುವ ಕದಂಬವೃಕ್ಷ ಹೂಗಳೆ ಸೊಬಗೆ
ದೇವಿ ಮುಡಿಯೇರಿ ವ್ಯಾಪಿಸವಳಾಕರ್ಣ
ದಿವ್ಯ ಪರಿಮಳ ಸೂಸೋ ಕರ್ಣಾಭರಣ ||

೦೦೨೨. ತಾಟಙ್ಕ-ಯುಗಲೀ-ಭೂತ-ತಪನೋಡುಪ-ಮಂಡಲಾ
_____________________________________

ಸೂರ್ಯಚಂದ್ರರೆ
ಕಿವಿಯೋಲೆ ಇಹದ
– ಚಟುವಟಿಕೆ.

ಅಮರತ್ವದ ಅಮರತ್ವ ಶಿವ ದೇವಿ ಕರ್ಣಾಭರಣ ಕಾರಣ
ಸೂರ್ಯಚಂದ್ರರೆ ಕಿವಿಯೋಲೆ ನಯನ ಪ್ರತಿನಿಧಿಸಿ ಸ್ತನ
ಬೀಜಾಕ್ಷರ ಸಂಯುಕ್ತ ಸಶಕ್ತ ಜಗದ ಚಟುವಟಿಕೆ ಸಮಸ್ತ
ಇಹಜೀವನ ಸ್ಥಿಮಿತತೆ ಕಾರಣ ರವಿ ಶಶಿ ನಿಯಂತ್ರಿಸುತ ||

೦೦೨೩. ಪದ್ಮರಾಗ-ಶಿಲಾಧರ್ಶ-ಪರಿಭಾವಿ-ಕಪೋಲಭೂಃ
_____________________________________

ಪ್ರತಿಫಲನ
ಓಲೆ ಕಪೋಲ ಕೆಂಪು
– ಕರುಣಾ ಚಿಹ್ನೆ.

ಚತುರ್ಚಕ್ರ ಮನ್ಮಥರಥ ವದನ ಶಿವನ ಕಾವ ಕಾಡೊ ರೂಪು
ವಿಶಾಲ ಕಪೋಲದಿ ಪ್ರತಿಫಲಿಸಿ ಕಿವಿಯೋಲೆಯಾ ಹೊಳಪು
ಮೃದು ಪದ್ಮರಾಗ ಮೈ ಕಾಂತಿ ಕದಪು ಮಣಿ ಆಭರಣ ಕೆಂಪು
ಕರ್ಣ ರಥಚಕ್ರ ರವಿಶಶಿಗೂ ಕೆಂಪಲೆ ಕರುಣಾ ಸಂಕೇತ ಕದಪು ||

೦೦೨೪. ನವವಿದ್ರುಮ-ಬಿಂಬಶ್ರೀ-ನ್ಯಕ್ಕಾರಿ-ರದನಚ್ಛದಾ
_____________________________________

ಕೆಂಪು ತುಟಿಯ
ಹವಳದ ಹೊಳಪು
– ತಾಯ ಸೌಂದರ್ಯ.

ಕೆಂಪು ತುಟಿಗಳ ದೇವಿ ಅಪ್ರತಿಮ ಸ್ವರೂಪ
ತೊಂಡೆಹಣ್ಣುಗಳನ್ನು ಮೀರಿಸುವ ಅಪರೂಪ
ಹೊಳಪೆ ಹವಳದಾ ರೂಪಾಗಿ ಫಳಫಳಿಸಿತ್ತು
ಜಗದೇಕ ಸೌಂದರ್ಯ ಲಲಿತೆಯ ರೂಪಾಯ್ತು ||

೦೦೨೫. ಶುದ್ಧ-ವಿಧ್ಯಾಙ್ಕುರಾಕಾರ-ಧ್ವಿಜಪಂಕ್ತಿತ-ದ್ವಯೋಜ್ವಲಾ
_____________________________________

ಲಲಿತಾ ದಂತ
ಶ್ರೀವಿದ್ಯಾ ರಹಸ್ಯತೆ
– ಅಹಂ ಬ್ರಹ್ಮಾಸ್ಮಿ.

ಶ್ರೀವಿದ್ಯಾ ಸಮರ್ಥತೆ ರಹಸ್ಯತೆಯಾಗಿ ದಂತ ಪಂಕ್ತಿ
ಶುದ್ಧ ಸ್ವಚ್ಚ ವಿದ್ಯಾಜ್ಞಾನ ಅಪ್ಪಟ ಜ್ಞಾನಕಿಹ ಸಾರಥಿ
‘ನಾನು ಅದೆ’ ಅಹಂ ಬ್ರಹ್ಮಾಸ್ಮಿ ಶುದ್ದಾದ್ವೈತ ತತ್ವಾ
ಲಲಿತಾದಂತ ಶ್ರೀವಿದ್ಯೆ ತರ ಕಾಣುವದ್ಭುತ ಮಹತ್ವ ||

೦೦೨೬. ಕರ್ಪೂರವೀಟಿಕಾಮೋಧ-ಸಮಾಕರ್ಷಿ-ದಿಗಂತರಾ
_____________________________________

ಜ್ಞಾನಿ ಅಜ್ಞಾನಿ
ಆಕರ್ಷಿಸೊ ಲಲಿತೆ
– ಪರಿಮಳದೆ.

ಜ್ಞಾನಿ ಜನ ಭಕ್ತಿ ಮುಖೇನ, ಅಮಾಯಕರ ಅಜ್ಞಾನ ಘನ
ಕರ್ಪೂರವೀಟಿಕಾ ಸುಗಂಧವ, ದೇವಿ ಪಸರಿಸಿ ಆಕರ್ಷಣ
ಕೇಸರಿ ಏಲಕ್ಕೀ ಲವಂಗ ಕಸ್ತೂರಿ ಜಾಪತ್ರೆ ಜಾಕಾಯಿಗೆ
ಕಲ್ಲುಸಕ್ಕರೆ ಪುಡಿ ತಾಂಬೂಲದೆ ಪರಿಮಳಿಸೊ ತಾಯಿಗೆ ||

೦೦೨೭. ನಿಜ-ಸಲ್ಲಾಪ-ಮಾಧುರ್ಯ-ವಿನಿರ್ಭರ್ತ್ಸಿತ-ಕಚ್ಛಪೀ
_____________________________________

ಲಲಿತಾ ದನಿ
ನಾಚಿ ಸರಸ್ವತಿಯ
– ವೀಣೆ ಸಂದೂಕ.

ಆಲಿಸುತಿಹ ಭಕ್ತ ಕೋಟಿಗೆ, ಸುಶ್ರಾವ್ಯ ಮಧುರ ಕರ್ಣಾನಂದ
ಕಲಾಧಿದೇವತೆ ಸರಸ್ವತಿ ಕಚ್ಛಪಿ ವೀಣೆಗೂ ಮೀರಿದ ಸುನಾದ
ಲಲಿತೆಯನೋಲೈಸಲೆ ಶಿವ ಲೀಲೆ ನುಡಿಸಿದರು ವೀಣಾಪಾಣಿ
ದೇವಿ ನುಡಿ ಝೇಂಕಾರಕೆ ನಾಚಿ ಸಂದೂಕ ಸೇರಿಸುವಳೆ ವಾಣಿ ||

– ನಾಗೇಶ ಮೈಸೂರು.

00694. ತಾಯಂದಿರ ದಿನಕಷ್ಟು (ಹಾಯ್ಕು ಮಾದರಿ)


00694. ತಾಯಂದಿರ ದಿನಕಷ್ಟು (ಹಾಯ್ಕು ಮಾದರಿ)
____________________________


(೦೧)
ಮುಟ್ಠಾಳತನ
ತಾಯಿಗೊಂದು ದಿವಸ
– ಅಲ್ಲದ ದಿನ.

(೦೨)
ಅವ್ವ ನನ್ನವ್ವ
ದೂರದಿಂದೆ ಹುಯಿಲು
– ಕ್ಷಮಾ ಧರಿತ್ರಿ.

(೦೩)
ಅವ್ವಗಳೆಲ್ಲ
ಒಂದೇ ಮೂಸೆ ಎರಕ
– ಮಕ್ಕಳ ಹಾಗೆ.

(೦೪)
ಹೆತ್ತ ಒಡಲು
ಕಡಲಿನ ಸಂಕಟ
– ಹೆತ್ತ ತಪ್ಪಿಗೆ.

(೦೫)
ಸೊಸೆಯವಳ
ಶಪಿಸಬೇಡ ತಾಯಿ
– ಅವಳೂ ತಾಯೆ.

(೦೬)
ಅಮ್ಮನ ನೆನೆ
ಅತ್ತೆಯನೂ ನೆನೆಯೆ
– ಮಗ ನೆನಸೆ.

(೦೭)
ಸ್ವಾರ್ಥಿಯವಳು
ಮಕ್ಕಳ ವಿಷಯದೆ
– ಮೊದಲು ಅಮ್ಮ.

(೦೮)
ಪಂಕ್ತಿ ಭೋಜನ
ಮಿಳ್ಳೆ ತುಪ್ಪ ಹೆಚ್ಚಿಗೆ
– ಮಗನೆಲೆಗೆ.

(೦೯)
ಕರುಳ ಬಳ್ಳಿ
ತವರಾಚೆ ತವಕ
– ಮಗಳ ಸುಖ.

(೧೦)
ಯಾವ ಕವಿಯೂ
ಬರೆಯಲಾರ ತಾಯ
– ಮಿಕ್ಕು ಬಹಳ.

– ನಾಗೇಶ ಮೈಸೂರು

(Picture source: https://pixabay.com/p-429158/?no_redirect)

00693. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೦-೦೦೧೮)


00693. ಶ್ರೀ ಲಿಲಿತಾ ನಾಮ – ಹಾಯ್ಕು ಯತ್ನ (೦೦೧೦-೦೦೧೮)
_____________________________________________

ಲಲಿತಾ ಸಹಸ್ರ ನಾಮದ ಒಂಭತ್ತು (೧೦-೧೯) ಹೆಸರಿನ ಭಾಗಶಃ ನಾಮಾರ್ಥಗಳನ್ನು ಹಾಯ್ಕು ಮಾದರಿಯಲ್ಲಿ ಮೂಡಿಸುವ ಯತ್ನ. ಆ ಯತ್ನದಲ್ಲಿ ಅರ್ಥ ನಷ್ಟವೋ, ಹಾಯ್ಕು ನಿಯಮ ಉಲ್ಲಂಘನೆಯೊ ಆಗಿದ್ದರೆ ಕ್ಷಮೆಯಿರಲಿ 😊

(ಶ್ರೀಯುತ ರವಿಯವರ ಮೂಲ ಇಂಗ್ಲೀಷಿನಲ್ಲಿದ್ದ ಸಹಸ್ರನಾಮ ವಿವರಣೆಯನ್ನು ಕನ್ನಡೀಕರಿಸಿದ ಶ್ರೀ ಶ್ರೀಧರ ಬಂಡ್ರಿಯವರ ವಿವರಣೆಯನ್ನಾಧರಿಸಿ ನಾನು ಬರೆದಿದ್ದ ಪದ್ಯಗಳನ್ನು ಮೂಲವಾಗಿಟ್ಟುಕೊಂಡು ಈ ಹಾಯ್ಕುಗಳನ್ನು ಹೊಸೆದಿದ್ದೇನೆ. ಆ ಮೂಲ ಪದ್ಯಗಳನ್ನು ಜತೆಗೆ ನೀಡಿದ್ದೇನೆ, ತುಸು ಹೆಚ್ಚಿನ ಸ್ಪಷ್ಟತೆಗಾಗಿ)

೦೦೧೦. ಮನೋರೂಪೇಕ್ಷು-ಕೋದಂಡಾ
________________________

ಕೆಳದೆಡಗೈ
ಕಬ್ಬು ಜಲ್ಲೆ ಶ್ಯಾಮಲೆ
– ಮನೋ ನಿಗ್ರಹ.

ಮನ ಸಂಕಲ್ಪ ವಿಕಲ್ಪ ಗುಣಗಳ ತಾಣ, ಸೂಕ್ಷ್ಮತೆ ಜ್ಞಾನ
ಇಂದ್ರೀಯಗ್ರಹಣ ಸ್ಪಷ್ಟಾಲೋಚನ ಕ್ರಿಯಾಸ್ಪೋಟ ತಾಣ
ಕೆಳದೆಡಗೈ ಕಬ್ಬಿನ ಬಿಲ್ಲೆ ಹಿಂಡಿದರೆ ಸಿಹಿ ಪರಬ್ರಹ್ಮ ಜಲ್ಲೆ
ಶ್ಯಾಮಲದೇವಿ ಪ್ರತಿನಿಧಿಸುವ ಕೈ, ಮನ ನಿಗ್ರಹ ಕಾವಲೆ ||

೦೦೧೧. ಪಂಚತನ್ಮಾತ್ರ-ಸಾಯಕಾ
_______________________

ಕೆಳ ಬಲಗೈ
ಪುಷ್ಪ ಬಾಣ ವಾರಾಹಿ
– ಮಾಯಾವಿನಾಶ.

ಶಬ್ದ ಸ್ಪರ್ಶ ರೂಪ ರಸ ಗಂಧ ತನ್ಮಾತ್ರೆ ಸೂಕ್ಷ್ಮ ಸಂಬಂಧ
ಹೂವಾಗಿ ವಿನಾಶ, ಪ್ರೇರಣೆ ಗೊಂದಲ ಹುಚ್ಚುತನ ಆನಂದ
ಪಂಚಪುಷ್ಪಬಾಣತನ್ಮಾತ್ರ ಮಾಯವಿನಾಶ ಕೆಳ ಬಲದಕೈ
ಪ್ರತಿನಿಧಿಸಿ ವಾರಾಹಿದೇವಿ ಭಕ್ತರ ಸಲಹಿ ಲಲಿತಾಮಯಿ ||

೦೦೧೨. ನಿಜಾರುಣ-ಪ್ರಭಾ-ಪೂರ-ಮಜ್ಜದ್-ಬ್ರಹ್ಮಾಂಡ-ಮಂಡಲಾ
________________________________________

ಅರುಣೋದಯ
ದೇವಿ ಕಾಂತಿ ವೈಭವ
– ವಾಗ್ಭವ ಕೂಟ.

ಭೌತಿಕ ಪ್ರಪಂಚ ಪೂರ ರೋಹಿತ ಕಿರಣಗಳ ಅಪಾರ
ದೇವಿ ಹೊಮ್ಮಿಸುವ ಮೈಕಾಂತಿ ಜಳ ತುಂಬಿದ ಸಾರ
ಕೆಂಗುಲಾಬಿ ಅರುಣೋದಯ ಕಂಗೊಳಿಸೆ ಕಿರಣವಾಗಿ
ವಾಗ್ಭವಕೂಟ ಮುಡಿಯಿಂದಡಿ ವರ್ಣನೆ ಭೌತಿಕವಾಗಿ ||

೦೦೧೩. ಚಂಪಕಾಶೋಕ-ಪುನ್ನಾಗ- ಸೌಗಂಧಿಕ-ಲಸತ್-ಕಚಾ
_____________________________________

ದೇವಿ ಮುಡಿ ಹೂ
ಅಂತಃಕರಣದಂಶ
– ಅಜ್ಞಾನವಟ್ಟೆ.

ಭ್ರಮೆಗೊಡ್ಡೊ ಅಂತಃಕರಣಾಂಶ ಅಹಂಕಾರಾ ಚಿತ್ತ ಬುದ್ದಿ ಮನಸೆ
ಸೌಗಂಧಿಕ ಪುನ್ನಾಗ ಚಂಪಕಾಶೋಕ ಮುಡಿ ಹೂವಾಗಿ ಪ್ರತಿನಿಧಿಸೆ
ಮಧುರ ಗಂಧವಾಘ್ರಾಣಿಸುತ ದೇವಿ ಪರಿಮಳ ಹಡೆಯುವ ಪುಷ್ಪ
ಅಜ್ಞಾನವಟ್ಟಿ ಕರುಣಾಕೇಶಿ ಮಾತೆ ಮೃದು ನೀಲ ಕಮಲ ಸ್ವರೂಪ ||

೦೦೧೪. ಕುರುವಿಂದ-ಮಣಿಶ್ರೇಣೀ-ಕನತ್-ಕೋಟೀರ-ಮಂಡಿತಾ
______________________________________

ಅಮೂಲ್ಯ ರತ್ನ
ಸೋದರಿಕೆ ಕಿರೀಟ
– ವಿಷ್ಣು ಕಾಣಿಕೆ.

ಲಲಿತಾ ಸೋದರ ವಿಷ್ಣು, ಭಕ್ತಿ ಐಶ್ವರ್ಯ ಪ್ರೇಮಕೆ ಕುರುವಿಂದ ಮಣಿ
ಉಜ್ವಲ ಕೆಂಪಲಿ ಕಿರೀಟದೆ ರಾರಾಜಿಸಿ ದೇವಿಯನಲಂಕರಿಸುವ ಗಣಿ
ಲೌಕಿಕಾಧ್ಯಾತ್ಮಿಕ ಉನ್ನತಿಗೆ ಧ್ಯಾನಿಸೆ, ದ್ವಾದಶಾದಿತ್ಯ ಖಚಿತ ಕಿರೀಟೆ
ಸುವರ್ಣ ಮಾಣಿಕ್ಯ ಪ್ರಭೆಯಡಿ ಧ್ಯಾನಾಸಕ್ತನ, ರತ್ನವಾಗಿಸೊ ಲಲಿತೆ ||

೦೦೧೫. ಅಷ್ಟಮೀ-ಚಂದ್ರ-ವಿಬ್ರಾಜ-ಧಲಿಕ-ಸ್ಥಲ-ಶೋಭಿತಾ
_____________________________________

ದೇವಿ ಮುಂದಲೆ
ಅನುಕರಿಸೊ ಅಷ್ಟಮಿ
– ಚಂದ್ರ ಧನುಸು.

ಅಷ್ಟಮಿ ದಿನದ ಚಂದಿರ ಕಾಣುವನೆಷ್ಟು ಸುಂದರ
ಡೊಂಕಿನ ತುದಿ ಬಾಗಿಸಿದ ಬಿಲ್ಲಾಗಿಸಿದ ಸರದಾರ
ಬಂತೆಲ್ಲವನಿಗೆ ಸ್ಪೂರ್ತಿ ದೇವಿ ಲಲಿತೆಯದಾ ರೀತಿ
ಸುಂದರ ಮುಂದಲೆಯನುಕರಿಸಿ ಆ ದಿನವಷ್ಟೆ ಕೀರ್ತಿ ||

೦೦೧೬. ಮುಖಚಂದ್ರ-ಕಲಂಕಾಭ-ಮೃಗನಾಭಿ-ವಿಶೇಷಕಾ
____________________________________

ಅರ್ಧಚಂದಿರ
ತಿಲಕ ಪೂರ್ಣಮುಖಿ
– ಕಸ್ತೂರಿ ಪ್ರಭೆ.

ಪರಿಮಳಯುಕ್ತ ದ್ರವ್ಯ ಕಸ್ತೂರಿಯ ಸುವಾಸನೆಯ ಸೊಗ
ಪೌರ್ಣಿಮೆ ಚಂದ್ರನ ಮುಖಕೆ ಅರ್ಧಚಂದ್ರ ಕಸ್ತೂರಿ ತಿಲಕ
ಲೇಪಿಸಿ ಪರಿಮಳಿಸೊ ದೇವಿ ಚಂದ್ರಮುಖಿಯಲರ್ಧಚಂದ್ರ
ನೋಡುತ ದೇವಿಯ ಮೊಗವನೆ ಹುಣ್ಣಿಮೆಗೆ ಪೂರ್ಣಚಂದ್ರ ||

೦೦೧೭. ವದನಸ್ಮರ-ಮಾಙ್ಗಲ್ಯ-ಗೃಹತೋರಣ-ಚಿಲ್ಲಿಕಾ
__________________________________

ಹುಬ್ಬೆ ತೋರಣ
ಮುಖವೆ ಅರಮನೆ
– ಮನ್ಮಥ ಗೃಹ.

ತನ್ಮಯನಾದನೆ ಮನ್ಮಥ ದೇವಿ ಹುಬ್ಬು ನೋಡಲನವರತ
ನಕಲು ಮಾಡಿದಾ ತೋರಣ ಕಾಮನರಮನೆಯಲಿ ನಗುತ
ದೇವಿ ಮುಖಮಂಡಲವನ್ನೆ ಅಂಗಜನರಮನೆ ಅನುಕರಿಸುತ್ತ
ಲಲಿತೆ ಮಂಗಳಕರ ವದನ ಕಾವನಂತಃಪುರದಲಂತರ್ಗತ ||

೦೦೧೮. ವಕ್ತ್ರ-ಲಕ್ಷ್ಮೀ-ಪರೀವಾಹ-ಚಲನ್-ಮೀನಾಭ-ಲೋಚನಾ
_______________________________________

ಮೀನ ನಯನ
ಬ್ರಹ್ಮಾಂಡ ಪಾಲನೆಗೆ
– ಕೃಪಾ ಕಟಾಕ್ಷ.

ನಯನಮನೋಹರ ನಯನ ಮೀನಾಗಿಹ ಕೊಳ ವದನ
ಮೀನಂತೆ ತ್ವರಿತಗತಿಯೆ ಚಲಿಸೆ ಬ್ರಹ್ಮಾಂಡದೆಲ್ಲಾ ತಾಣ
ಕೃಪಾ ದೃಷ್ಟಿಯಲೆ ಮಾತೆ ಈ ಜಗವನೆಲ್ಲಾ ಪೋಷಿಸುತೆ
ಮೀನಾಕ್ಷಿ ಮೀನಲೋಚನೆ ಸುಂದರ ಕಣ್ಣಲೆ ಸಲಹುವಂತೆ ||

– ನಾಗೇಶ ಮೈಸೂರು

00689. ನೀರು ನೀರು ನೀರು (ಹಾಯ್ಕು)


00689. ನೀರು ನೀರು ನೀರು (ಹಾಯ್ಕು)
_____________________________


(೦೧)
ಸುಖ ದುಃಖಕ್ಕೆ
ಹಾಕೇ ಬೇಕು ಕಣ್ಣೀರು
– ಉಳಿಸಿ ನೀರು.

(೦೨)
ಮಳೆಯ ಹನಿ
ಚಡಪಡಿಸಿ ಇಳೆಗೆ
– ಪ್ರಭೆಗೆ ಹಬೆ.

(೦೩)
ಹನಿ ಲೆಕ್ಕದೆ
ನೀರು ಮಾರುವ ಕಾಲ
– ನಿರ್ಲಜ್ಜ ಜೀವ.

(೦೪)
ಕೊನೆಯುಸಿರು
ಬಯಸೆ ಗಂಗಾ ಜಲ
– ಮಿಳ್ಳೆಯಾದರು.

(೦೫)
ಬಾಟಲಿ ನೀರು
ತೆತ್ತು ಕೊಳ್ಳುವರಾರು
– ಬಡವರಲ್ಲ.

(೦೬)
ಬತ್ತಿದ ಜಲ
ಕುತ್ತಿಗೆ ಹಿಸುಕಿದ್ದು
– ಬರದ ಬರೆ.

(೦೭)
ಅಂತರ-ಗಂಗೆ
ಅಂತರಂಗದ ಹಾಗೆ
– ಮಾಡಿದ್ದುಣ್ಣಿರೊ.

(೦೮)
ಅಂತರ್ಜಲಕೆ
ಏಣಿ ಹಾಕಿಳಿದರು
– ಏರದ ಜಲ.

(೦೯)
ಭಗೀರಥನ
ಸಂತಾನ ಎಲ್ಲಿಹರು ?
– ಇಳೆಯ ಮೊರೆ.

(೧೦)
ನೀರಿಗೂ ಬರ
ಬರಬಾರದು ನರ
– ಸಾಕು ನಿದಿರೆ.

– ನಾಗೇಶ ಮೈಸೂರು

00687. ಬೆಳಕಾಯ್ತು (ಹಾಯ್ಕು)


00687. ಬೆಳಕಾಯ್ತು (ಹಾಯ್ಕು)
______________________


(೦೧)
ನಸುಕು ತಮ
ಕೊಡವಿ ಮೈ ಮುರಿದ
– ಮೂಡಲ ಮನೆ .

(೦೨)
ಕೆಂಪು ಕದಪು
ಮಿಲನದ ರಾತ್ರಿಗೆ
– ಅರುಣ ರಾಗ.

(೦೩)
ಮುಂಜಾವಿನಲಿ
ಬೆಳಕ ಹೊಕ್ಕ ತಮ
– ಪುರುಷ ಗರ್ವ.

(೦೪)
ಮುಸ್ಸಂಜೆಯಲಿ
ಬೆಳಕ ನುಂಗಿ ತಮ
– ಪ್ರಕೃತಿ ಪಾಳಿ.

(೦೫)
ಮೆಲ್ಲಮೆಲ್ಲನೆ
ಕಣ್ಣ ಬಿಟ್ಟಿತೆ ನಭ
– ಅರುಣೋದಯ.

(೦೬)
ರವಿಗೆಚ್ಚರ
ಕನ್ನಡಿ ನೀರ ಬಿಂಬ
– ಕ್ಷಣಿಕ ಸುಖ.

(೦೭)
ಸೂರ್ಯ ಚಂದ್ರರ
ಹಗಲು ರಾತ್ರಿ ಪಾಳಿ
– ಮುಗಿದೇ ಇಲ್ಲ.

(೦೮)
ಹೊಳೆದು ನೀರು
ರವಿಯಾಕಳಿಕೆಗೆ
– ಫಳ ಫಳನೆ.

(೦೯)
ಭುವಿ ಸೆರಗು
ತೆರೆ ಹಗಲಿರುಳು
– ಇಬ್ಬರ ಸಖಿ.

(೧೦)
ಮುಂಜಾನೆ ಹನಿ
ಮಿಲನದ ಬೆವರು
– ಗುಟ್ಟು ಹುಲ್ಲಡಿ.

– ನಾಗೇಶ ಮೈಸೂರು

00686. ಮನಸಿನ ಸುತ್ತ (ಹಾಯ್ಕು)


00686. ಮನಸಿನ ಸುತ್ತ (ಹಾಯ್ಕು)
_________________________


(೦೧)
ಅನುಮನಸು
ಅರೆಮನಸಿನ ಕೂಸು
– ಚಂಚಲ ಚಿತ್ತ.

(೦೨)
ಕೊಟ್ಟ ಮನಸು
ಅಮೂರ್ತ ಸರಕದು
– ಘನ ವ್ಯಾಪಾರ.

(೦೩)
ಭಾವದ ಲೆಕ್ಕ
ವಿದೇಹಿ ವಿನಿಮಯ
– ಮನ ವಾಣಿಜ್ಯ.

(೦೪)
ಮನ ವ್ಯಾಪಾರ
ಭರ್ಜರಿ ಆಯವ್ಯಯ
– ನೋವು ನಲಿವು.

(೦೫)
ಮನದಾಸೆಯ
ಆಯಾತ ನಿರ್ಯಾತಕೆ
– ಕರ ವಿನಾಯ್ತಿ.

(೦೬)
ಸದ್ಯ ಕಾಣದು
ಬದುಕಿತು ಬಡ ಜೀವ
– ಮನದೊಳಗು.

(೦೭)
ಸಭ್ಯತೆ ಸೋಗು
ಹಾಕದು ಮನ ಸುಳ್ಳೆ
– ಬುದ್ಧಿ ಕುಟಿಲ.

(೦೮)
ಮನದ ಬೇಲಿ
ಬಾಯಾಗಿ ಮಾತ ಖೋಲಿ
– ಖಾಲಿ ಜೋಕಾಲಿ.

(೦೯)
ಮನ ಮನಸ
ಅರಿವ ಇಂದ್ರಜಾಲ
– ಇನ್ನೂ ಕನಸು.

(೧೦)
ಪರಸ್ಪರರ
ಚೆನ್ನಾಗಿ ಅರಿತಿವೆ
– ಪ್ರೇಮಿಯ ಭ್ರಮೆ.

– ನಾಗೇಶ ಮೈಸೂರು

(Picture source: https://en.m.wikipedia.org/wiki/File:Phrenology1.jpg)

00685. ಮರದ ಮಾತು (ಹಾಯ್ಕು)


00685. ಮರದ ಮಾತು (ಹಾಯ್ಕು)
__________________________

(೦೧)
ಮರ ಅಮರ
ಯಾವ ಕಾಲದ ಮಾತು ?
– ಬರಿ ಸಮರ .

(೦೨)
ಉಳಿಸಿಕೊಳ್ಳಿ
ಪ್ರೇಮಿ ಸುತ್ತಲಾದರು
– ಪ್ರೇಮ ಕುರುಡು.

(೦೩)
ನೆಟ್ಟರೆ ಸಾಕು
ನೆರಳಾಗೊ ನಿಯತ್ತು
– ಪುರುಸೊತ್ತಿಲ್ಲ.

(೦೪)
ಹತ್ತು ಮುರಿದು
ಹತ್ತಕ್ಕೊಂದೂ ನೆಡರು
– ನಾಡಿನ ಗಡಿ.

(೦೫)
ರೊಚ್ಚಿನ ಮಳೆ
ತೆರವು ಮಾಡಿ ರಸ್ತೆ
– ಮತ್ತೆ ನೆಡದೆ.

(೦೬)
ರಾ’ಮರ’ ಕಥೆ
ಹಿನ್ನೋಟ ಅಚಲತೆ
– ಹೆಸರ’ಮರ’.

(೦೭)
ಮರ ಮಾದರಿ
ಋತು ಸ್ನಾನ ಹೊಸತು
– ಜೀವನ ಚಕ್ರ.

(೦೮)
ಸೇವೆ ಅಮರ
ಹೆಸರಿಗಷ್ಟೇ ಮರ
– ಅಜರಾಮರ.

(೦೯)
ತರಿದಿದ್ದರು
ನರನ ಸ್ವಾರ್ಥ ಸಹಿಸಿ
ಮೌನದನ್ವರ್ಥ.

(೧೦)
ಬಿದ್ದು ಕಂಗಾಲು
ಕತ್ತರಿಸಿ ಕಟ್ಟಿಗೆ
– ಉರುವಲಷ್ಟೆ.

– ನಾಗೇಶ ಮೈಸೂರು

00684. ಮೋಡ, ಮಳೆ, ಇತ್ಯಾದಿ (ಹಾಯ್ಕು)


00684. ಮೋಡ, ಮಳೆ, ಇತ್ಯಾದಿ (ಹಾಯ್ಕು)
_________________________________


(೦೧)
ಬಸುರಿ ಮೋಡ
ನಿತ್ಯ ಚಡಪಡಿಕೆ
– ಹೆರಿಗೆ ನೋವು.

(೦೨)
ಮೋಡದ ಬೇಟ
ಪ್ರಣಯ? ಅತ್ಯಾಚಾರ?
– ಹುಟ್ಟಿದ್ದು ಮಳೆ.

(೦೩)
ಮಳೆ ಹುಟ್ಟಿಗೆ
ಯಾರೂ ಕೊಡುವುದಿಲ್ಲ
– ಜಾರಿಣಿ ಪಟ್ಟ.

(೦೪)
ಕಂಡೀತು ಮಳೆ
ಕಾಣದ್ದು ಮೋಡ ಸ್ರಾವ
– ಕರಗೋ ಕ್ರೂರ.

(೦೫)
ರವಿ ಪೊಗರು
ಮೋಡದ ಸೆರಗಲಿ
– ಮಂಕು ದೀವಿಗೆ.

(೦೬)
ಹುಲ್ಲು ಗರಿಕೆ
ಸುರಿಸಿದ ಜೊಲ್ಲದು
– ಮೋಡದಿಬ್ಬನಿ.

(೦೭)
ಮಿಂಚೂ ಗುಡುಗು
ಖಳರು ಮಿಲನಕೆ
– ಗುಟ್ಟಾಗಿಡರು.

(೦೮)
ನಮ್ಮದೇ ನಭ
ಹೆತ್ತ ಮೋಡದ ರಾಜ್ಯ
– ಮಳೆ ನಮ್ಮಿಷ್ಟ.

(೦೯)
ಬರ ಸಿಡಿಲು
ಬರಗಾಲ ಕಾಲಿಡೆ
– ಮರ ನೆಡರು !

(೧೦)
ಪ್ರಗತಿ ಬೇಕು
ಮುಚ್ಚಿಸಿ ಮಳೆ ಬಾಯಿ
– ನಾಳೆ ನೋಡೋಣ.

– ನಾಗೇಶ ಮೈಸೂರು

00682. ಕಾರ್ಮಿಕ ದಿನಾಚರಣೆ (ಹಾಯ್ಕು)


00682. ಕಾರ್ಮಿಕ ದಿನಾಚರಣೆ (ಹಾಯ್ಕು)
_____________________________

(೦೧)
ಕಾರ್ಮಿಕ ದಿನ
ಕೆಲಸ ಮಾಡೊ ಜನ
– ಹಿರಿ ನಮನ..!

(೦೨)
ಯಾರು ಕಾರ್ಮಿಕ ?
ಯಾರಲ್ಲ ಕಾರ್ಮಿಕರು ?
– ಎಲ್ಲರ ದಿನ !

(೦೩)
ದುಡಿವ ‘ಮಿಕ’
‘ಕಾರು’ ಓಡಿಸೊ ದಿನ
– ಧನ್ಯ ಕಾರ್ಮಿಕ !

(೦೪)
ದಿನಾಚರಣೆ ?
ದೈನಂದಿನ ಸ್ಮರಣೆ
– ಆಗೆ ಸಾರ್ಥಕ !

(೦೫)
ಅಜ್ಞಾತ ಶ್ರಮ
ಐಷಾರಾಮಿ ಬದುಕು
– ನಮಿಸಿಬಿಡು !

(೦೬)
ಯಾರ ಸುಖಕೋ
ಕೂಲಿ ನಾಲಿ ಬದುಕು..
– ನಿತ್ಯ ಹೋರಾಟ !

(೦೭)
ಮರೆಯದಿರು
ಮಹಿಳಾ ಕಾರ್ಮಿಕರು
– ತೇಯುವ ಜೀವ !

(೦೮)
ಮನೆಯ ಜನ
ಕೇಳರಲ್ಲ ಸಂಬಳ
– ದುಡಿವ ಪ್ರೀತಿ !

(೦೯)
ಕಾರ್ಮಿಕ ಪ್ರಾಣಿ,
ಯಂತ್ರವಲ್ಲ – ಮನುಜ
– ಸೌಹಾರ್ದ ಜಗ !

(೧೦)
ನೆನಪಿರಲಿ:
ಮೂಗು ಪ್ರಾಣಿ ದುಡಿತ
– ಅವಕೂ ದಿನ !

– ನಾಗೇಶ ಮೈಸೂರು

00680. ಗುಟ್ಟು, ಸುದ್ಧಿ, ಇತ್ಯಾದಿ (ಹಾಯ್ಕು ೩೦.೦೪.೨೦೧೬)


00680. ಗುಟ್ಟು, ಸುದ್ಧಿ, ಇತ್ಯಾದಿ (ಹಾಯ್ಕು ೩೦.೦೪.೨೦೧೬)
__________________________________________

(೦೧)
ಹೇಳಬಾರದು
ಹೇಳಬಾರದ ಗುಟ್ಟ
– ಕೇಳದ ನಿದ್ದೆ.

(೦೨)
ಕದ್ದು ಕೇಳಿದ
ಗುಲ್ಲು ರೋಚಕ ಸುದ್ಧಿ
– ನಮ್ಮದಲ್ಲದ್ದು.

(೦೩)
ಪಿಸುಗುಟ್ಟುತ
ಯಾರಿಗೂ ಹೇಳಬೇಡ
– ಎಂದು ನಕ್ಕಳು.

(೦೪)
ಅಡಿಗೆ ಮನೆ
ಕುಟುಂಬ ಸುದ್ಧಿ ಜಾಲ
– ಸಮಯವಿಲ್ಲ.

(೦೫)
ಮನೆಕೆಲಸ
ಮುಗಿಸಿ ಹರಟುತ್ತ
– ಗುಟ್ಟಿನಡಿಗೆ.

(೦೬)
ಮಾತಾಡೆ ಹಿತ
ಜತೆಗಿರದವಳ
– ಸುದ್ಧಿ ಸುಲಭ.

(೦೭)
ಎರಡು ಜಡೆ
ಮಾತಾಡೆ ನೆಟ್ಟಗಿತ್ತೆ
– ಮೂರನೆ ಜಡೆ.

(೦೮)
ಗಾಸಿಪ್ಪು ಸಿಪ್ಪು
ಸೊಪ್ಪು ಹಾಕುವ ಜಗ
– ಹೊಸ ಬಾಟಲಿ.

(೦೯)
ಗುಟ್ಟ ಮಾತಲಿ
ಗಂಡಸರೇನು ಕಮ್ಮಿ
– ಎಲ್ಲಾ ಬಾರಲಿ.

(೧೦)
ಹೆಣ್ಣೇನು ಕಮ್ಮಿ
ಬಾರು ಗೀರು ಹಂಗಿಲ್ಲ
– ಕಾರುಬಾರಲೆ.

– ನಾಗೇಶ ಮೈಸೂರು

00677. ಮೋದಿ ಸರ್ಕಾರ !


00677. ಮೋದಿ ಸರ್ಕಾರ ! 
____________________

(Published in nilume on 28.04.2016 : https://www.facebook.com/groups/nilume/permalink/1011524092229949/?pnref=story)

ಅಕ್ಕಿ ಬೆಂದಿದಿಯೊ ಇಲ್ಲವೋ ನೋಡಲು ಅಗುಳು ನೋಡಿದರೆ ಸಾಕು ಅಂತಾರೆ. ಕೇಂದ್ರ ಸರ್ಕಾರದ ಮಂತ್ರಿಮಂಡಲ ವಿವಾದ, ಹಗರಣಗಳಿಗೆಡೆಗೊಡದೆ ದೇಶ-ಜನಹಿತ ಕಾರ್ಯಗಳತ್ತ ಗಮನ ಹರಿಸಿರುವುದು ನಿಜಕ್ಕೂ ನಿರಾಳತೆ ತರುವ ಸಂಗತಿ. ಒಂದು ದಕ್ಷ ನಾಯಕತ್ವವಿದ್ದರೆ ಇಡಿ ತಂಡ ಹೇಗೆ ಕ್ರಿಯಾಶೀಲವಾಗಿ ಪ್ರವರ್ತಿಸಬಹುದೆನ್ನುವುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತಿವೆ. ಅಂತಹ ಕೆಲವು ತುಣುಕುಗಳನ್ನು ಹೈಕುಗಳ ರೂಪದಲ್ಲಿ ಕಟ್ಟಿದ ತುಣುಕುಗಳಿವು. ಇಲ್ಲಿರುವ ವಿಷಯ ಗೊತ್ತಿರುವುದೇ ಆದರು ಅದರ ಹಿಂದೆ ಇರುವ ಆಳವಾದ ಚಿಂತನಾಶಕ್ತಿ ಮತ್ತು ದೃಢ ನಾಯಕತ್ವದ ಏಕ ತಂಡ ಮನೋಭಾವದ ಸಮಗ್ರ ಚಿತ್ರಣವನ್ನು ಎತ್ತಿ ತೋರಿಸುವುದು ಮುಖ್ಯ ಉದ್ದೇಶ.

ಪ್ರಾಮಾಣಿಕತೆ
ಮಂತ್ರಿ ಮಂಡಲ ಪೂರ
– ಮೋದಿ ಸರ್ಕಾರ.

ರಕ್ಷಣಾ ಖಾತೆ
ಗುಂಡು ತಡೆ ಜಾಕೆಟ್ಟು
– ಮೋದಿ ಸರ್ಕಾರ.

ಇಂಧನ ಖಾತೆ
ಹಳ್ಳಿ ಹಳ್ಳಿ ವಿದ್ಯುತ್
– ಮೋದಿ ಸರ್ಕಾರ.

ವಿದೇಶ ಮಂತ್ರಿ
ಎಲ್ಲಿದ್ದರೂ ಕಾಪಿಗೆ
– ಮೋದಿ ಸರ್ಕಾರ.

ರೈಲು ಸಚಿವ
ಬುಲೆಟ್ಟು ಟ್ರೇನು ಗಟ್ಟಿ
– ಮೋದಿ ಸರ್ಕಾರ.

ಗೃಹ ಸಚಿವ
ಬಗ್ಗದ ಮನೋಭಾವ
– ಮೋದಿ ಸರ್ಕಾರ.

ವಿದ್ಯೆಯ ಖಾತೆ
ಸೊಸೆ ಭಾರತ ಮಾತೆ
– ಮೋದಿ ಸರ್ಕಾರ.

ವಾಣಿಜ್ಯ ಖಾತೆ
ಮೇಕ್ ಇನ್ ಇಂಡಿಯ
– ಮೋದಿ ಸರ್ಕಾರ.

ಪ್ರಧಾನ ಮಂತ್ರಿ
ದೇಶ ವಿದೇಶ ಗರ್ವ
– ಮೋದಿ ಸರ್ಕಾರ.

ಮಂತ್ರಿ ಮಂಡಲ
ಸ್ವಚ್ಛ ಭಾರತ ಯಾತ್ರೆ
– ಮೋದಿ ಸರ್ಕಾರ.

– ನಾಗೇಶ ಮೈಸೂರು