00802. ನಂದೂ ಒಂದು ಇ-ಪುಸ್ತಕ ಬಂತು..😁😊 !


00802. ನಂದೂ ಒಂದು ಇ-ಪುಸ್ತಕ ಬಂತು..😁😊 !
____________________________________

ನಾನು ಬರೆಯಲು ಹಚ್ಚಿಕೊಂಡ ಮೇಲೆ ಅದರ ಲೆಕ್ಕವಿಡದೆ ಸುಮ್ಮನೆ ತೋಚಿದ್ದನ್ನ ಗೀಚಿಕೊಂಡು ಹೋಗಿದ್ದೆ ಹೆಚ್ಚು. ಆಗಾಗ ಗೆಳೆಯರು, ಹಿತೈಷಿಗಳು, ಪರಿಚಿತರು ಪುಸ್ತಕ ಮಾಡಬಾರದ ಅಂತ ಕೇಳುತ್ತಲೆ ಇರುತ್ತಾರೆ. ನನಗಿರುವ ವ್ಯವಧಾನ ಮತ್ತು ಹೊರದೇಶದಲ್ಲಿರುವ ತೊಡಕಿನಿಂದಾಗಿ – ಎಲ್ಲಕ್ಕಿಂತ ಮುಖ್ಯ ಅದನ್ನು ಮಾಡಲು ಬೇಕಾದ ಇಚ್ಚಾ ಮತ್ತು ಕ್ರಿಯಾಶಕ್ತಿಯ ಕೊರತೆಯಿಂದ ಆ ಕಡೆ ಗಮನ ಹರಿಸಿರಲೆ ಇಲ್ಲ. ಕೊನೆಗೆ ‘ಸುರಗಿ’ ಆನ್ಲೈನ್ ಪತ್ರಿಕೆಯಲ್ಲಿ ಸಂಪಾದಕಿ ಹೇಮಮಾಲಾರವರು ಇ-ಬುಕ್ ಪ್ರಕಟಿಸುವ ಆಸಕ್ತಿಯಿದ್ದವರಿಗೆ ಸಹಾಯ ಹಸ್ತ ಚಾಚುವ ಯೋಜನೆ ಪ್ರಕಟಿಸಿದಾಗ ಅದನ್ನೇಕೆ ಪ್ರಯತ್ನಿಸಬಾರದು ಅನಿಸಿತು. ಅದರ ಫಲವೆ ಸುಮಾರು 20 ಲಘುಹಾಸ್ಯ ಮತ್ತು ಹರಟೆ ಪ್ರಹಸನಗಳ ಇ-ಪುಸ್ತಕ ರೂಪ ಈಗ ನಿಮ್ಮ ಮುಂದಿದೆ. ಸಮಯದ ಅಭಾವದಿಂದ ಅದನ್ನು ಮತ್ತಷ್ಟು ತಿದ್ದಿ, ಓದಲು ಹೆಚ್ಚು ಯೋಗ್ಯವಾಗಿಸಲು ಸಾಧ್ಯವಾಗದಿದ್ದರೂ ಇ – ರೂಪದಲ್ಲಿ ನಿರಂತರ ಪರಿಷ್ಕರಣೆ ಮಾಡಲು ಇರುವ ಅನುಕೂಲದಿಂದ, ಮುಂದೆ ಬಿಡುವು ಮಾಡಿಕೊಂಡು ಪ್ರಯತ್ನಿಸುತ್ತೇನೆ. ಫಾರ್ಮ್ಯಾಟುಗಳ ರೂಪಾಂತರ ಪ್ರೇರಿತ ದೋಷ ಮತ್ತು ಕಾಗುಣಿತ ದೋಷಗಳು ಕಣ್ಣಿಗೆ ಬಿದ್ದು ಓದುವಿಕೆಗೆ ರಸಭಂಗವಾಗಿಸಿದಲ್ಲಿ ದಯವಿಟ್ಟು ಮನ್ನಿಸಿ. ಇವುಗಳನ್ನು ಓದಿ ಗೆಳೆಯ ದೀಪಕ್ ಮತ್ತು ಗೆಳತಿ ಶುಭಮಂಗಳರವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಪ್ರಕಟಿಸಲು ಮುಂದಾಗಿ ಒಂದು ಮುರ್ತರೂಪ ಕೊಟ್ಟ ಹೇಮಾಮಾಲಾರವರಿಗೆ, ಅನಿಸಿಕೆಗಳನ್ನು ಹಂಚಿಕೊಂಡ ದೀಪಕ್ ಮತ್ತು ಶುಭಮಂಗಳರವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು.

ಈಗ ಇದು ನಿಮ್ಮೆಲ್ಲರ ಮಡಿಲಿಗೆ – ಬಿಡುವಾದಾಗ ಓದಿ ಅಭಿಪ್ರಾಯ ತಿಳಿಸಿ.

– ನಾಗೇಶ ಮೈಸೂರು

Suragi publishing article link : http://surahonne.com/?p=11818 

Facebook link: https://www.facebook.com/nagesha.mn/posts/10208583710722983

00747. ಲಘು ಹರಟೆ,ಹಾಸ್ಯ : ಗುಬ್ಬಣ್ಣ ಇನ್ ಪೀಯೂಸಿ ಫೇಲ್ ಎಪಿಸೋಡ್ !


00747. ಲಘು ಹರಟೆ,ಹಾಸ್ಯ : ಗುಬ್ಬಣ್ಣ ಇನ್ ಪೀಯೂಸಿ ಫೇಲ್ ಎಪಿಸೋಡ್ !
_________________________________________________________

(Picture source :http://indiatoday.intoday.in/education/story/karnataka-puc-2-supplementary-exams/1/439371.html)

ಗುಬ್ಬಣ್ಣ ಧಢದಢನೆ ಓಡೋಡುತ್ತ ಬಂದು ಕಣ್ಮುಂದೆ ಸ್ವೀಟ್ ಬಾಕ್ಸೊಂದನ್ನು ಹಿಡಿದು “ತಗೊಳ್ಳಿ ಸಾರ್, ತಿಂದು ಬಿಟ್ಟು ಕಂಗ್ರಾಟ್ಸ್ ಹೇಳಿ ..” ಎಂದಾಗ ಯಾಕೆಂದರಿಯದೆ ಸ್ವಲ್ಪ ಗೊಂದಲಕ್ಕೆ ಬಿದ್ದು ಅವನ ಮುಖಾ ನೋಡಿದೆ.

” ತೊಗೊಳ್ಳಿ ಸಾರ್.. ಮೊದಲು.. ಆಮೇಲೆ ಹೇಳ್ತೀನಿ ಯಾಕೆ ಅಂತ..” ಅಂದು ಇನ್ನಷ್ಟು ಹತ್ತಿರಕ್ಕೆ ತಂದ ಒಳಗಿನ ಸುವಾಸನೆ ಮೂಗೊಳಕ್ಕೆ ನೇರ ಅಟ್ಟುವವನ ಹಾಗೆ. ಯಾಕಾದರೂ ಹಾಳಾಗಲಿ, ಸ್ವೀಟು ನನ್ನ ವೀಕ್ನೆಸ್ ತಾನೇ ಅಂದುಕೊಂಡವನೆ ದೊಡ್ಡದೊಂದು ತುಂಡು ಬರ್ಫಿ ಬಾಯಿಗಿಡುತ್ತಿದ್ದಂತೆ ಚಕ್ಕನೆ ನೆನಪಾಯ್ತು – ಅವತ್ತು ಸೆಕೆಂಡ್ ಪೀಯೂಸಿ ರಿಸಲ್ಟ್ ಡೇ ಅಂತ. ಗುಬ್ಬಣ್ಣನ ಮಗಳೂ ಎಗ್ಸಾಮ್ ತೊಗೊಂಡಿದ್ದು ಗೊತ್ತಿತ್ತು..

” ಗೊತ್ತಾಯ್ತು ಬಿಡೋ ಗುಬ್ಬಣ್ಣ.. ಮಗಳ ರಿಸಲ್ಟ್ ಬಂತೂ ಅಂತ ಕಾಣುತ್ತೆ.. ಫಸ್ಟ್ ಕ್ಲಾಸಾ ? ಡಿಸ್ಟಿಂಕ್ಷನ್ನಾ? ಈಗೆಲ್ಲಾ ನೈಂಟಿ ಅಂಡ್ ಎಬೌ ಇದ್ರೇನೆ ಅಪ್ಪಾ ಮೆಡಿಕಲ್ಲು , ಇಂಜಿನಿಯರಿಂಗೂ ” ಅಂದೆ ಗುಟ್ಟು ಬೇಧಿಸಿದವನ ಗತ್ತಿನಲ್ಲಿ.

ಮೊದಲೆ ತೆರೆದ ಹಲ್ಲುಗಳನ್ನು ಮತ್ತಷ್ಟು ಅಗಲವಾಗಿ ತೆರೆದು ನಗುತ್ತ , ” ಕ್ರಾಕ್ಜಾಕ್ ಫಿಫ್ಟಿ, ಫಿಫ್ಟಿ ಸಾರ್ ” ಅಂದ – ಅರ್ಧ ಮಾತ್ರ ಸರಿಯಾದ ಊಹೆ ಅನ್ನೊ ಇಂಗಿತದಲ್ಲಿ..

“ನನಗರ್ಥವಾಗಲಿಲ್ಲ ಗುಬ್ಸ್.. ಯಾವ ಫಿಫ್ಟಿ ರೈಟು ? ಯಾವ ಫಿಫ್ಟಿ ರಾಂಗು ? ” ಸ್ವಲ್ಪ ತೀರಾ ಪ್ರೀತಿ ಜಾಸ್ತಿಯಾದಾಗ ನಾನು ‘ಗುಬ್ಸ್’ ಅಂತ ಕರೆಯೋ ವಾಡಿಕೆ. ಅದೂ ತೀರಾ ಅತಿಯಾದಾಗ ‘ಗೂಬ್ಸ್..’ ಆಗುವುದು ಉಂಟು. ಆದರೆ ಅವನೆಂತ ಪರಮ ಯೋಗಿಯೆಂದರೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸೊ ಸ್ಥಿತಪ್ರಜ್ಞ ಗಿರಾಕಿ.

“ಪೀಯೂಸಿ ರಿಸಲ್ಟ್ ಸರಿ ಸಾರ್.. ಆದರೆ ಪಾಸು, ಕ್ಲಾಸು ತಪ್ಪು ಸಾರ್..!”

“ಅಂದ್ರೆ..?”

” ‘ಅಂದ್ರೆ’ ಅಂದ್ರೆ ? ಫೇಲೂ ಅಂತ..! ಮೂರು ಸಬ್ಜೆಕ್ಟ್ಟಲ್ಲಿ ಡುಮ್ಕಿ ಸಾರ್..! ಅದಕ್ಕೆ ಪಾರ್ಟಿ ಕೊಡಿಸಬೇಕು ಅಂತಾ ಇದೀನಿ..!!” ಅಂದ.

ನಾನು ಬೆಚ್ಚಿಬಿದ್ದೆ ..! ಎಲ್ಲಾ ಪಾಸಾಗುವುದಕ್ಕು ಸ್ವೀಟ್ ಕೊಡದೆ ಬರಿ ಕ್ಲಾಸು, ಡಿಸ್ಟಿಂಕ್ಷನ್ನು, ರ್ಯಾಂಕಿಗೆ ಮಾತ್ರ ಏನಾದರೂ ಹಂಚುವ ಕಾಲ.. ಇವನು ನೋಡಿದರೆ ಫೇಲಿಗೆ ಸ್ವೀಟು ಕೊಟ್ಟಿದ್ದೆ ಅಲ್ಲದೆ ಪಾರ್ಟಿ ಬೇರೆ ಕೊಡಿಸೋ ಮಾತಾಡ್ತಾ ಇದಾನೆ ? ಎಲ್ಲೋ ‘ಸ್ಕ್ರೂ’ ಸ್ವಲ್ಪ ಲೂಸಾಗಿರಬೇಕು ಅಂತ ಡೌಟ್ ಶುರುವಾಯ್ತು… ಆ ಅನುಮಾನದಲ್ಲೇ,

“ಗುಬ್ಬಣ್ಣಾ.. ಆರ್ ಯೂ ಸೀರಿಯಸ್, ಆರ್ ಜೋಕಿಂಗ್ ?” ಎಂದೆ.

” ಜೋಕೆಂತದ್ದು ಬಂತು ತೊಗೊಳ್ಳಿ ಸಾರ್.. ನಮ್ಮಪ್ಪರಾಣೆಗೂ ಸತ್ಯದ ಮಾತು..”

“ಬಟ್ ದೆನ್ ಐ ಡೊಂಟ್ ಅಂಡರಸ್ಟ್ಯಾಂಡ್.. ಎಲ್ಲೋ ಏನೋ ಮಿಸ್ ಹೊಡಿತಾ ಇದೆ ಗುಬ್ಬಣ್ಣ.. ಕಮಾನ್ ವಾಟ್ಸಪ್ಪ್ ..?”

ಒಂದರೆಗಳಿಗೆ ಗುಬ್ಬಣ್ಣ ಮಾತಾಡಲಿಲ್ಲ… ಸ್ವಲ್ಪ ಬಿಲ್ಡಪ್ ಕೊಡುವಾಗ ಹಾಗೆ ‘ಪಾಸ್’ ಕೊಡುವುದು ಅವನು ಕನ್ಸಲ್ಟೆಂಟ್ ಆದಾಗಿನಿಂದ ಕಲಿತ ದುರ್ವಿದ್ಯೆ… ಒತ್ತಾಯಿಸಿ ಕೇಳಲಿ ಅನ್ನೊ ಕುಟಿಲ ಬುದ್ದಿ ಅಂತ ಗೊತ್ತಿದ್ದರಿಂದ ನಾನು ಬೇಕಂತಲೇ ನಿರಾಸಕ್ತನಂತೆ ಸುಮ್ಮನಿದ್ದೆ, ಅವನೆ ಬಾಯಿ ಬಿಡುವ ತನಕ.

” ಸಾರ್..ಹಳೆಯ ಮತ್ತು ಈಗಿನ ಚರಿತ್ರೆ ಎಲ್ಲಾ ಅವಲೋಕಿಸಿ ನೋಡಿದ ಮೇಲೆ ನನಗೆ ಒಂದಂತೂ ಅರ್ಥವಾಯ್ತು ಸಾರ್.. ಇಡಿ ಜಗತ್ತಿನಲ್ಲಿ ಸುಪರ್ ಸಕ್ಸಸ್ ಆಗಿರೋರೆಲ್ಲರಲ್ಲು ಬರಿ ಫೇಲಾದವರೆ ಜಾಸ್ತೀ..” ರಾಮಬಾಣದಂತೆ ಬಂತು ಏನೊ ಪೀಠಿಕೆ ಹಾಕುವ ತರ..

“ಅದಕ್ಕೆ..?”

” ಅದಕ್ಕೆ ನಾನೂ ಡಿಸೈಡ್ ಮಾಡಿಬಿಟ್ಟೆ ಅವಳೇನಾದ್ರೂ ಫೇಲ್ ಆದ್ರೆ ತಲೆ ಕೆಡಿಸಿಸಿಕೊಳ್ಳದೆ ಸೆಲಬ್ರೇಟ್ ಮಾಡೋದೆ ಸರಿ.. ಅಂತ”

” ಗುಬ್ಬಣ್ಣ.. ನಿನಗೆ ತಿಕ್ಕಲಾ? ಓದದವರು, ಫೇಲಾದವರೆಲ್ಲ ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್,ಅಬ್ರಹಾಂ ಲಿಂಕನ್, ಡಾಕ್ಟರ್ ರಾಜಕುಮಾರ್ ತರ ಸುಪರ್ ಸಕ್ಸಸ್ ಆಗಲ್ಲಾ ಲೈಫಲ್ಲಿ..”

” ಇರಬಹುದು ಸಾರ್.. ಆದ್ರೆ ಸಕ್ಸಸ್ ಆಗೊ ಛಾನ್ಸ್ ಆದ್ರೂ ಇರುತ್ತಲ್ಲಾ ?”

” ಏನು ಮಣ್ಣಾಂಗಟ್ಟೆ ಛಾನ್ಸ್ ? ಕೋಟ್ಯಾಂತರ ಜನ ಫೇಲಾದವರಲ್ಲಿ ನಾಲ್ಕೈದು ಜನ ಸುಪರ್ ಸಕ್ಸಸ್ ಆಗ್ಬಿಟ್ರೆ ಫೇಲಾದೊರೆಲ್ಲ ಬಿಲ್ಗೇಟ್ಸ್ , ಸ್ಟೀವ್ ಜಾಬ್ಸ್ ಆಗ್ಬಿಡಲ್ಲ ಗೊತ್ತಾ”

“ಗೊತ್ತು ಸಾರ್… ಒಪ್ಕೋತೀನಿ… ಹಾಗಂತ ಪಾಸಾದವರೆಲ್ಲ ಏನ್ ಅಂಬಾನಿ, ಟಾಟಾ, ಬಿರ್ಲಾಗಳಾಗ್ಬಿಟ್ಟಿದಾರ ? ಸೂಟು, ಬೂಟು, ಸ್ಕರ್ಟು, ಟೈ ಹಾಕ್ಕೊಂಡು ಹೈಟೆಕ್ ಹೊಲ ಗದ್ದೆ ಫೀಲ್ಡಲ್ಲಿ ಸೊಫಿಸ್ಟಿಕೇಟೆಡ್ ಕೂಲಿ ಕೆಲಸಕ್ಕೆ ತಾನೇ ಹೋಗ್ಬೇಕು ? ”

ನನಗೇನೊ ಮಲ್ಟಿ ನ್ಯಾಷನಲ್ ಕಂಪನಿಲಿ ಸಾವಿರಗಟ್ಟಲೆ, ಲಕ್ಷಗಟ್ಟಲೆ ಸಂಬಳ ತೊಗೊಳ್ಳೊ ವೈಟ್ ಕಾಲರ್ ಗುಂಪನ್ನೆಲ್ಲ ಸಾರಾಸಗಟಾಗಿ ಒಟ್ಟಾಗಿ ಸೇರಿಸಿ ಸೊಫಿಸ್ಟಿಕೇಟೆಡ್ ಕೂಲಿಗಳು ಅಂದಿದ್ದು ಬಿಲ್ಕುಲ್ ಇಷ್ಟವಾಗಲಿಲ್ಲ.. ಅದರಲ್ಲೂ ಅವನೂ, ನಾನು ಇಬ್ಬರೂ ಅದೇ ಮಂದೆಯಲ್ಲೆ ಮೇಯುತ್ತಿರೊ ಕುರಿಗಳು ಅಂತ ಗೊತ್ತಿದ್ದೂ. ಆದರು ಮೊದಲು ಅವನ ಆರ್ಗ್ಯುಮೆಂಟಿಗೆ ಕೌಂಟರ್ ಆರ್ಗ್ಯುಮೆಂಟ್ ಹಾಕುತ್ತ,

” ಅಂಬಾನಿ ಟಾಟಾ ಬಿರ್ಲಾಗಳೆಲ್ಲರ ಪೀಳಿಗೆಯವರು ಪಾಸಾಗಿ ಬಂದು ಸಕ್ಸಸ್ ಆಗ್ತಾ ಇಲ್ವಾ ಈಗಲೂ ? ನೋಡು ಹೇಗೆ ನಡೆಸ್ಕೊಂಡು ಹೋಗ್ತಾ ಇದಾರೆ ಅವರ ಪರಂಪರೆನಾ?”

” ಅವರು ಬಿಡಿ ಸಾರ್.. ಪಾಸ್ ಮಾಡಿದ್ರು ಲೆಕ್ಕವಿಲ್ಲ , ಫೇಲಾದ್ರು ಲೆಕ್ಕವಿಲ್ಲ.. ಅವರ ಅಪ್ಪಂದಿರು, ತಾತಂದಿರು ಮಾಡಿಟ್ಟಿರೊದು ನೋಡ್ಕೊಳೋಕೆ ಇನ್ನು ಹತ್ತು ಜನರೇಷನ್ ಬೇಕು..ನಮ್ಮ, ನಿಮ್ಮಂತಹ ಬಡಪಾಯಿಗಳಲ್ಲಿ ಹೇಳಿ ಸಾರ್, ಆದಷ್ಟು ಜನ ಪಾಸಾಗಿ ಆ ಥರ ಸಕ್ಸಸ್ಸು ಆಗಿರೋರು ? ಎಲ್ಲಾ ಹೋಗಿ ಅವರ ಅಥವಾ ಆ ತರದ ಕಂಪನಿಗಳಲ್ಲೆ ಕೂಲಿನಾಲಿ ಕೆಲಸಕ್ಕೆ ಸೇರ್ಕೊಂಡಿರೊರೆ ತಾನೆ ?” ಎಂದ.

ಅವನು ಹೇಳಿದ್ದು ಒಂದು ರೀತಿ ನಿಜವೇ ಅನಿಸಿತು.. ಹೆಸರಿಗೆ ನೆನಪಿಸಿಕೊಳ್ಳೋಣ ಅಂದ್ರೂ ಒಂದೆರಡೂ ನೆನಪಾಗ್ತಾ ಇಲ್ಲಾ – ಇನ್ಫೋಸಿಸ್ ತರದ ಹಳೆಯ ಕುದುರೆಗಳನ್ನ ಬಿಟ್ಟರೆ.. ಆದರೂ ತೀರಾ ಜುಜುಬಿ ಬೇಸಾಯಕ್ಕೆ ಹೋಲಿಸಿ, ಕೂಲಿನಾಲಿ ಅಂತ ಖಂಡಂ ಮಾಡೋದು ತೀರಾ ಅತಿಯೆನಿಸಿತು. ಆ ಉರಿಯಲ್ಲೆ ” ಅದೇನೆ ಆಗ್ಲಿ ಗುಬ್ಬಣ್ಣ.. ಅದನ್ನ ಕೂಲಿ ಮಟ್ಟಕ್ಕೆ ಹೋಲಿಸೋದು ನನಗೆ ಹಿಡಿಸೊಲ್ಲ ನೋಡು.. ದೇ ಆರ್ ಆಲ್ ರೆಸ್ಪೆಕ್ಟೆಡ್ ಜಾಬ್ಸ್.. ಹಾಗೆಲ್ಲ ಅವಹೇಳನ ಮಾಡೋದು ತಪ್ಪು..”

” ಸಾರ್..ನಾ ಎಲ್ಲಿ ಅವಹೇಳನ ಮಾಡಿದೆ ? ಇರೋ ವಿಷಯ ಹೇಳಿದೆ ಅಷ್ಟೆ.. ಯಾವುದೋ ದೇಶದ, ಯಾರೋ ಗಿರಾಕಿ ಆರ್ಡರು ಕೊಡ್ತಾನೆ.. ಅದನ್ನ ಬಾಡಿ ಸೈಜಿನ ಅಳತೆ ತೊಗೊಂಡು ಬಟ್ಟೆ ಹೊಲಿಯೊ ಟೈಲರುಗಳ ತರ ನಿಮ್ಮ ಈ ಪಾಸಾದ ಹುಡುಗರು ಪ್ರೊಗ್ರಾಮಿಂಗ್ ಅಂತಲೊ, ನೆಟ್ವರ್ಕಿಂಗ್ ಹೆಸರಲ್ಲೊ, ಆರ್ಕಿಟೆಕ್ಚರ್ ನೆಪದಲ್ಲೊ – ಯಾವುದೋ ಒಂದು ಹೆಸರಲ್ಲಿ ಮಾಡೊ ಕೆಲಸ ಕೂಲಿ ತರ ಅಲ್ದೆ ಇನ್ನೇನು ಸಾರ್..? ದಿನಗೂಲಿ ತರ ಅಲ್ದೆ ತಿಂಗಳ ಸಂಬಳ, ಬೋನಸ್ಸು ಅದೂ ಇದೂ ಅಂತ ಕೊಟ್ರೂ , ಅದೂ ಮಾಡಿದ ಕೆಲಸಕ್ಕೆ ಕೂಲಿ ಕೊಟ್ಟ ಹಾಗೆ ಲೆಕ್ಕಾ ತಾನೆ ?” ಅಂತ ಸಾರಾಸಗಟಾಗಿ ಇಡೀ ವರ್ಕಿಂಗ್ ಕಮ್ಯುನಿಟಿಯನ್ನೆ ಕೂಲಿ ಕೆಲಸದ ಹಣೆಪಟ್ಟಿಯಡಿ ಹಾಕಿ ಕೂರಿಸಿಬಿಟ್ಟ!

ಆದರು ನಾನು ಪಟ್ಟು ಬಿಡದೆ, “ಹಾಗಂತ ವಾದಕ್ಕೆ ಹೌದು ಅಂತ ಒಪ್ಕೊಂಡ್ರೂನು, ವ್ಯವಸಾಯಕ್ಕೂ ಮಾಡ್ರನ್ ಇಂಡಸ್ಟ್ರಿಗು ಹೋಲಿಸೋದು ಸರಿಯಿಲ್ಲ ಬಿಡು.. ಮಳೆ ನೀರು ನಂಬಿಕೊಂಡು ಉತ್ತಿಬಿತ್ತಿ ಬೆಳೆಯೊ ರೈತನೇನು ಕಮ್ಮಿ ಕೂಲಿನಾ? ಅವನ ಹೊಲದಲ್ಲಿ ಅವನೂ ಕೂಲಿನೆ ತಾನೆ ? ಅಲ್ಲಿರೋ ರಿಸ್ಕು ಕಡಿಮೆದೇನಲ್ಲಾ ಗೊತ್ತಾ?” ಎಂದೆ..

ಗುಬ್ಬಣ್ಣ ನನಗಿಂತಲೂ ಜಿಗುಟು.. ” ಅಯ್ಯೋ ಬಿಡಿ ಸಾರ್, ಅದಕ್ಯಾಕೆ ನಮ್ಮಲ್ಲಿ ಜಗಳ.. ಬೇಸಾಯ ಮಾಡ್ಕೊಂಡು ಹೋಗೋನು ಒಂತರ ಸೀ ಇ ಓ ಇದ್ದಂಗೆ ಅಂದ್ರೂ ಯಾರು ತಾನೆ ಕೇಳ್ತಾರೆ ? ಎಲ್ಲಾ ಬಣ್ಣದ ಜಗತ್ತನೆ ನೋಡ್ತಾರೆ.. ಅದಕ್ಕೆ ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗ್ತಾರೆ, ಬೆಂಕಿಪೊಟ್ನದ ತರ ರೂಮುಗಳಲ್ಲಿ ಇದ್ಕೊಂಡು ಶಿಫ್ಟು, ಟೈಮು ಅನ್ನೊ ಮುಖ ನೋಡದೆ ಹಗಲು ರಾತ್ರಿ ಕೂಲಿಗಿಂತ ಹೆಚ್ಚಾಗಿ ದುಡಿತಾರೆ.. ಕಾರು, ಮೊಬೈಲು, ಫೇಸ್ಬುಕ್ಕು, ಟ್ವಿಟ್ಟರು, ವಾಟ್ಸಪ್ಪು ಅಂತ ಯಾವುದೋ ಲೋಕದಲ್ಲಿ ಕಳೆದುಹೋಗಿ, ಏನೊ ಹುಡುಕ್ಕೊಂಡು ನರಳ್ತಾ ಇರ್ತಾರೆ.. ನಾ ಹೇಳಿದ್ದು ವ್ಯವಸಾಯ ಅನ್ನೊ ಲೆಕ್ಕದಲ್ಲಿ ಮಾತ್ರ ಅಲ್ಲ.. ಓದಿದವರೆಲ್ಲ ಹೋಗಿ ಇನ್ನೊಬ್ಬರಡಿ ಕೆಲಸಕ್ಕೆ ಸೇರ್ತಾರೆ ಹೊರತು ತಾವೇ ಹೊಸದಾಗಿ ಕೆಲಸ ಸೃಷ್ಟಿಮಾಡೊ ಎಂಟರ್ಪ್ರೂನರ್ಸ್ ಆಗಲ್ಲ ಅನ್ನೊ ಅರ್ಥದಲ್ಲಿ ಹೇಳಿದೆ ಸಾರ್.. ನೋಡ್ತಾ ಇರಿ.. ಹೀಗೆ ಆದ್ರೆ ಹಳ್ಳಿ ಕಡೆ ಬೇಸಾಯಕ್ಕು ಕೂಲಿಗೆ ಯಾರೂ ಸಿಗದೆ ಎಲ್ಲಾ ತುಟ್ಟಿಯಾಗಿಬಿಡುತ್ತೆ… ಈ ಜನರೆ ಬೈಕೊಂಡು ಕಾಸು ಕೊಡಬೇಕು ಅದಕ್ಕೆಲ್ಲ” ಎಂದು ದೊಡ್ಡ ಭಾಷಣ ಬಿಗಿಯುತ್ತ, ಎಲ್ಲಿಂದೆಲ್ಲಿಗೊ ಕೊಂಡಿ ಹಾಕಿಬಿಟ್ಟ ಗುಬ್ಬಣ್ಣ..

“ಸರಿ ಬಿಟ್ಟಾಕು ಗುಬ್ಬಣ್ಣ.. ನಿನ್ ಮಗಳಂತು ವ್ಯವಸಾಯ ಅಂತ ಹೋಗದ ಡೌಟ್.. ಬೇರೇನು ಮಾಡ್ತಾಳೆ ಅಂತೇಳು..” ಎನ್ನುತ್ತಾ ಮಾತನ್ನ ಮತ್ತೆ ಮೊದಲಿನ ಟ್ರಾಕಿಗೆ ತಿರುಗಿಸಿದೆ..

” ಅಯ್ಯೊ ತಲೆ ಕೆಡಿಸ್ಕೊಳೊದು ಯಾಕೆ ಬಿಡಿ ಸಾರ್..ಸೆಂಟ್ರಲ್ ಗೌರ್ಮೆಂಟುದು ನೂರೆಂಟು ಸ್ಕೀಮುಗಳಿದಾವಂತೆ – ಸ್ಕಿಲ್ ಇಂಡಿಯಾ, ಮೇಕಿನ್ ಇಂಡಿಯಾ ಹಾಗೆ, ಹೀಗೆ ಅಂತ. ಯಾವದಾದರು ಒಂದು ಹಿಡ್ಕೊಂಡು ಹೊಸ ಕಂಪನಿ ಶುರು ಮಾಡಿದ್ರೆ ಅವಳೆ ಸೀ ಇ ಓ ಆಗ್ಬೋದು.. ಹೇಗೆ ಸಾವಿರಾರು ಕಾಲೇಜುಗಳು ಬೇಕಾದಷ್ಟು ಕೆಲಸದವರನ್ನ ಹುಟ್ಟುಸ್ತಾನೆ ಇರ್ತಾರೆ ಪ್ರತಿವರ್ಷ.. ಹಳ್ಳಿಲಿ ಬೇಸಾಯಕ್ಕೆ ಕೂಲಿಗಳು ಸಿಗದೆ ಇರಬಹುದು… ಕಂಪನಿ ಕೆಲಸಕ್ಕೆ ಆಳುಗಳು ಸಿಗೋದು ಕಷ್ಟವಿರಲ್ಲ.. ಹೇಗೊ ನಡೆಯುತ್ತೆ. ಅದೃಷ್ಟ ಚೆನ್ನಾಗಿದ್ರೆ ಅವಳೂ ಕ್ಲಿಕ್ ಆಗ್ಬೋದು, ಯಾರಿಗ್ಗೊತ್ತು. ಇನ್ನು ನೂರಾರು ಸ್ಮಾರ್ಟು ಸಿಟಿಗಳು ಬರ್ತವಂತಲ್ಲಾ ಎಲ್ಲಾದರು ಒಂದು ಕೈ ನೋಡ್ಕೊಂಡ್ರಾಯ್ತು !” ಎಂದ..

ಈ ಕಾಲದಲ್ಲಿ ಯಾರು ಏನಾಗ್ತಾರೊ ಹೇಳೋದೇ ಕಷ್ಟ ಅನಿಸಿ ನಾನು ಸಹ ‘ಹೂಂ’ಗುಟ್ಟಿದೆ… ” ಏನೇ ಆಗ್ಲಿ ಹಾಗೆನಾದ್ರೂ ಆದರೆ ನಮ್ಮಂತೋರಿಗು ಕೆಲಸ ಕೊಡಿಸಪ್ಪ ಅಲ್ಲಿ.. ನಾವು ಬದುಕ್ಕೊತೀವಿ”

“ಸರಿ ಸಾರ್..ಇನ್ನು ಸ್ವೀಟ್ ಹಂಚೋದಿದೆ ನಾ ಹೊರಟೆ” ಎಂದವನನ್ನೆ ಬಿಟ್ಟಬಾಯಿ ಬಿಟ್ಟುಕೊಂಡೆ ಅವಾಕ್ಕಾಗಿ ನೋಡುತ್ತ ನಿಂತುಕೊಂಡೆ , ಮತ್ತೇನು ಹೇಳಲೂ ತೋಚದೆ..


(Picture source : http://dezinequest.com/home.php)

********
(ಸೂಚನೆ: ಇಲ್ಲಿ ಬರುವ ಅಭಿಪ್ರಾಯ, ಮಾತುಕಥೆಗಳೆಲ್ಲ ಗುಬ್ಬಣ್ಣನ ಸ್ವಂತದ್ದು.. ಅದಕ್ಕೂ ಲೇಖಕನಿಗೂ ಯಾವುದೆ ರೀತಿಯ ಸಂಬಂಧವಿರುವುದಿಲ್ಲ ಎಂದು ಈ ಮೂಲಕ ಸೃಷ್ಟಿಕರಿಸಲಾಗಿದೆ)

– ನಾಗೇಶ ಮೈಸೂರು

00727. ಗುಬ್ಬಣ್ಣ, ಸೋಮಯಾಗ, ಸರ್ಟಿಫಿಕೇಟು ಇತ್ಯಾದಿ ( ಹಾಸ್ಯ ಬರಹ – ಲಘು ಹರಟೆ)


00727. ಗುಬ್ಬಣ್ಣ, ಸೋಮಯಾಗ, ಸರ್ಟಿಫಿಕೇಟು ಇತ್ಯಾದಿ ( ಹಾಸ್ಯ ಬರಹ – ಲಘು ಹರಟೆ)
______________________________________________________________


ಗುಬ್ಬಣ್ಣ ಸಕ್ಕತ್ ಗಡಿಬಿಡಿಯಲ್ಲಿ ಓಡಾಡುತ್ತಿದ್ದ ಕಾರಣ ಕೈಗೆ ಸಿಗೋದೆ ಕಷ್ಟವಾಗಿಹೋಗಿತ್ತು.

ಮೂರ್ನಾಲ್ಕು ಸಾರಿ ಪೋನ್ ಮಾಡಿದ್ರೂ ಆಸಾಮಿ ‘ಸಾರ್ ಸ್ವಲ್ಪ ಬಿಜಿ ಇದೀನಿ, ಆಮೇಲೆ ಪೋನ್ ಮಾಡ್ತೀನಿ’ ಅಂತ ಪೋನ್ ಕಟ್ ಮಾಡಿ ಇನ್ನೂ ರೇಗುವಂತೆ ಮಾಡಿಬಿಟ್ಟಿದ್ದ. ಸರಿ ಹಾಳಾಗಲಿ, ಅವನ ಗೊಡವೆಯೇ ಬೇಡ ಅಂತ ಬೈದುಕೊಂಡೆ ಲಿಟಲ್ ಇಂಡಿಯಾದ ಬಫೆಲೋ ರೋಡಲ್ಲಿ ತರಕಾರಿ ತಗೊಳೋಕೆ ಅಡ್ಡಾಡ್ತಾ ಇದ್ದಾಗ ಅಲ್ಲೆ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸ್ತಾ ಇದ್ದ ಅವನೇ ಕಣ್ಣಿಗೆ ಬೀಳಬೇಕೆ?

‘ಈಗ ಸಿಕ್ಕಿದಾನಲ್ಲ , ಬೆಂಡೆತ್ತೋದೆ ಸರಿ’ ಅನ್ಕೊಂಡು ಅವನಿಗೆ ಗೊತ್ತಾಗದ ಹಾಗೆ ಹಿಂದಿನಿಂದ ಹೋಗಿ ಕತ್ತಿನ ಪಟ್ಟಿ ಹಿಡ್ಕೊಂಡಿದ್ದೆ, ಮೊದಲು ಬೆನ್ನ ಮೇಲೊಂದು ಬಲವಾದ ಗುದ್ದು ಹಾಕಿ.

ಬೆಚ್ಚಿಬಿದ್ದ ಗುಬ್ಬಣ್ಣ ರೇಗಿಕೊಂಡು ಹಿಂದೆ ತಿರುಗಿದವನೆ ನನ್ನ ಮುಖ ನೋಡಿ ಅರ್ಧ ಶಾಂತನಾದ – ಪೆಚ್ಚುನಗೆಯ ಟ್ರೇಡ್ಮಾರ್ಕ್ ಹಲ್ಲು ಗಿಂಜುತ್ತ. ಎರಡು ಕೈಯಲ್ಲಿರುವ ಬ್ಯಾಗಲ್ಲಿ ಅರಿಶಿನ, ಕುಂಕುಮ, ಧೂಪ, ಗಂಧದಕಡ್ಡಿ, ಹೋಮದ ಕಡ್ಡಿ – ಹೀಗೆ ಏನೇನೊ ಪೂಜಾ ಸಾಮಾನುಗಳು. ಅಷ್ಟೇನು ನಾಸ್ತಿಕನಲ್ಲದ ಗುಬ್ಬಣ್ಣ ಹಬ್ಬ ಹರಿದಿನ ಯಾವುದೂ ಅಲ್ಲದಿರುವ ಈ ಹೊತ್ತಲ್ಲೇಕೆ ಇಷ್ಟೊಂದು ಪೂಜೆ ಸಾಮಾನು ಹಿಡಿದಿದ್ದಾನೆ ? ಎಲ್ಲೊ ಹೆಂಡ್ತಿ ಆರ್ಡರಿರಬೇಕು ಅಂದುಕೊಂಡು ಬಾಯಿ ತೆಗೆಯೊ ಹೊತ್ತಿಗೆ ಸರಿಯಾಗಿ ಅವನೇ ಬಾಯ್ಬಿಟ್ಟ.

‘ ಸಾರ್.. ನಿಮಗೆ ಇಲ್ಲೆಲ್ಲಾದರೂ ಚಿಕನ್ ಸಿಕ್ಕೋ ಜಾಗ ಗೊತ್ತಾ ? ‘ ಅಂದ – ದಂಢಿಯಾಗಿ ಚಿಕನ್ ಮಾರೊ ಅಂಗಡಿ ಎದುರಲ್ ನಿಂತುಕೊಂಡಿದ್ದರೂ .

ನಾನು ರೇಗೊ ಸ್ವರದಲ್ಲೆ, ‘ಅದರ ಮುಂದೇನೆ ನಿಂತಿದೀಯಾ.. ಕಾಣೋದಿಲ್ವಾ?’ ಅಂದೆ.

‘ ಅಯ್ಯೋ .. ಆ ಚಿಕನ್ ಅಲ್ಲಾ ಸಾರ್.. ಅಲೈವ್ ..ಅಲೈವ್.. ಜೀವ ಇರೋ ಕೋಳಿ ಬೇಕು ..’

‘ಅಯ್ಯೋ ಗುಬ್ಬಣ್ಣಾ , ಏನೋ ಸಮಾಚಾರ ? ಪೋನಲ್ಲೂ ಕೈಗೆ ಸಿಗ್ತಾ ಇಲ್ಲಾ, ಇಲ್ಲಿ ನೋಡಿದ್ರೆ ಪೂಜೆ ಸಾಮಾನ್ ಅಂಗಡೀನೆ ಕೈಲ್ ಇಟ್ಕೊಂಡಿದೀಯಾ.. ಸಾಲದ್ದಕ್ಕೆ ದನ, ಕೋಳಿ, ಕುರಿಗಳನ್ನೂ ‘ಜೂ’ನಲ್ಲಿ ಮಾತ್ರ ನೋಡೋಕೆ ಆಗೋ ಈ ಸಿಂಗಾಪುರದಲ್ಲಿ ಜೀವ ಇರೊ ಕೋಳಿ ಎಲ್ಲಿ ಅಂತ ಹುಡುಕ್ತಾ ಇದೀಯಾ.. ಇಲ್ಲಿ ತಿನ್ನೋ ಕೋಳೀನೂ ‘ರೆಡೀ ಟು ಕುಕ್’ ಪ್ಯಾಕಿಂಗ್ ನಲ್ಲಿ ಇಂಪೋರ್ಟ್ ಆಗೇ ಬರೋದು ಅಂತ ಗೊತ್ತು ತಾನೆ ?’ ಎಂದೆ.

‘ ಅಯ್ಯೊ ಲೆಕ್ಕಾಚಾರಕ್ಕೆ ನಿಜವಾಗಲೂ ಜೀವ ಇರೊ ಕುರಿಯೊ, ಮೇಕೆಯೊ ಬೇಕು ಸಾರು.. ಅದು ಇಲ್ಲಿ ಸಿಗಲ್ವಲ್ಲಾ ಅಂತಲೇ ಕನಿಷ್ಠ ಕೋಳಿಗೆ ಹುಡುಕ್ತಿರೋದು..’

‘ ಗುಬ್ಬಣ್ಣ ಕಟ್ ದ ಕ್ರಾಪ್…ಫಟಫಟಾ ಅಂತ ಹೇಳಿಬಿಡು.. ವಾಟ್ಸ್ ಅಫ್ ?’ ಎಂದೆ, ಸುಮ್ಮನೆ ಅನವಶ್ಯಕ ಚರ್ಚೆ ಬೇಡ ಅಂದುಕೊಂಡೆ.

ಗುಬ್ಬಣ್ಣ ಕಿವಿಯ ಹತ್ತಿರ ಮುಖ ತಂದು ಪಿಸುದನಿಯಲ್ಲಿ ಏನೊ ದೊಡ್ಡ ಗುಟ್ಟು ಹೇಳುವವನ ಹಾಗೆ ನುಡಿದ -‘ ಸಾರ್.. ಜೋರಾಗಿ ಮಾತಾಡ್ಬೇಡಿ..ಸುಮ್ನೆ ಕೇಳಿಸ್ಕೊಳ್ಳಿ ಅಷ್ಟೆ – ‘ಸೋಮಯಾಗ’ ಮಾಡ್ತಾ ಇದೀನಿ ..!’ ಅಂತ ದೊಡ್ಡ ಬಾಂಬೆ ಸಿಡಿಸಿಬಿಟ್ಟ..

ನಾನು ಪಕ್ಕದಲ್ಲೆ ಬಾಂಬ್ ಬಿದ್ದವನಂತೆ ಬೆಚ್ಚಿಬಿದ್ದರು ಸಾವರಿಸಿಕೊಂಡು ಮುಖ ನೋಡಿದೆ ಜೋಕೆನಾದರೂ ಮಾಡುತ್ತಿದ್ದಾನಾ ಅಂತ.. ಈಚೆಗೆ ತಾನೆ ಹೆಡ್ಲೈನ್ಸ್ ನ್ಯೂಸಿನ ಸುದ್ದಿಯಾಗಿ, ಸೋಶಿಯಲ್ ಮೀಡಿಯಾದಲ್ಲೆಲ್ಲಾ ದಾಂಧಲೆ ಎಬ್ಬಿಸಿದ್ದ ಯಾಗದ ಗೀಳು ಇವನಿಗ್ಯಾಕೆ ಹತ್ತಿಕೊಂಡಿತು ಅನ್ನೊ ಅನುಮಾನದಲ್ಲೆ.

‘ ಜೋಕೇನೂ ಅಲ್ಲಾ ಸಾರ್… ಸೀರಿಯಸ್ಸೆ.. ನ್ಯೂಸು ನೋಡಿರಬೇಕಲ್ಲಾ ನೀವೂನು ? ಯಾವ ಹೋಮ, ಯಾಗ , ಪೂಜೆ ಏನು ಮಾಡಿದ್ರೂ ಒಂದು ಮೂಲೆ ಐಟಂ ಹಾಕ್ತಾ ಇದ್ದೋರು ಈ ಯಾಗಕ್ಕೆ ಮಾತ್ರ ಫಸ್ಟ್ ಪೇಜು ಹೆಡ್ಲೈನಲ್ಲಿ ಹಾಕೋ ಲೆವೆಲ್ಲಿದೆ ಅಂದರೆ ಇದು ಎಂಥ ಮಹಾನ್ ಯಾಗ ಇರ್ಬೇಕು ? ಇದನ್ನ ಇಲ್ಲೂ ಒಂದ್ಸಾರಿ ಮಾಡಿ, ಇಂಟನೆಟ್ಟಲ್ಲಿ ಒಂದೆರಡು ಪಿಕ್ಚರು ಹಾಕಿದ್ರೆ ಸಾಕು ನೋಡಿ, ಓವರ್ನೈಟ್ ವರ್ಡ್ ಫೇಮಸ್ಸು..!’

ನನಗೀಗ ಅನುಮಾನದ ಬದಲು ಗಾಬರಿ ಹೆಚ್ಚಾಯ್ತು, ಏನು ಮಾಡೋಕೆ ಹೊರಟಿದಾನೆ ಇವನು ಅಂತ…’ ಗುಬ್ಬಣ್ಣಾ.. ಇದು ತುಂಬಾ ಕಾಂಪ್ಲಿಕೇಟೆಡ್ ಮ್ಯಾಟರು ಕಣೊ.. ಅಲ್ಲೆಲ್ಲ ಸಿಕ್ಕಾಪಟ್ಟೆ ವಾರ್ ಆಫ್ ವರ್ಡ್ಸ್ ನಡೆದುಹೋಗಿದೆ. ಒಂತರ ಓವರ್ನೈಟ್ ಟಾಕ್ ಆಫ್ ದಿ ಟೌನ್ ಆಗೋಗಿದೆ.. ಅಲ್ಲದೆ ತೀರಾ ಪೊಲಿಟಿಕಲ್ ಮ್ಯಾಟರು ಬೇರೆ… ರಾಜಕಾರಣಿ, ಬುದ್ಧಿಜೀವಿಗಳಿಂದ ಹಿಡಿದು ಎಲ್ಲಾ ತರದವರು ಇನ್ವಾಲ್ವ್ ಆಗಿರೊ ಮ್ಯಾಟರು.. ಆರಾಮಾಗಿ ಕನ್ಸಲ್ಟೆನ್ಸಿ ಮಾಡ್ಕೊಂಡಿರೊ ನಿಂಗ್ಯಾಕೊ ಈ ಬೇಡದ ಉಸಾಬರಿ ? ಅದೆಲ್ಲಾ ಆ ರಾಜಕೀಯದವರಿಗೆ ಬಿಡೋದಲ್ವಾ ?’ ಎಂದು ಮಿನಿ ಉಪದೇಶ ಕೊಟ್ಟೆ, ಅವನು ಡೀಟೆಲ್ಸ್ಗೆ ಹೋಗೊ ಮೊದಲೆ.

‘ ಅದೇ ಸಾರ್ ಈಗ ಬಂದಿರೋದು.. ಎಷ್ಟು ದಿನಾಂತ ಈ ಹಾಳು ಕನ್ಸಲ್ಟಿಂಗಿನಲ್ಲಿ ಗುಂಪಲ್ಲಿ ಗೋವಿಂದ ಅಂತ ಕಾಲ ಹಾಕೋದು ? ಏನಾದ್ರೂ ಮಾಡಿ ಓವರ್ನೈಟ್ ಫೇಮಸ್ ಆಗ್ಬಿಡಬೇಕು.. ಆಮೇಲೆಲ್ಲಾ ಸುಲಭ – ಸಿಂಪಲ್ಲಾಗಿ ನಮ್ ಗುರುಗಳನ್ನ ಫಾಲೋ ಮಾಡ್ತಾ ಹೋದ್ರಾಯ್ತು.. ಸಿ ಎಂ ಲೆವೆಲ್ಲಿಗಲ್ಲದೆ ಹೋದ್ರು ಮೇಯರಾದ್ರೂ ಆಗ್ಬೋದು’ ಅಂತ ಮತ್ತೊಂದು ಬಾಂಬ್ ಹಾಕಿದ.

ಅದೇನು ಮೇಯರು ಅಂದನೊ ಮೇಯೋರು ಅಂದನೊ ಸರಿಯಾಗಿ ಸ್ಪಷ್ಟವಾಗದಿದ್ರು ಇದ್ದಕ್ಕಿದ್ದಂತೆ ಬಂದ ಗುರೂಜಿ ಡೈಲಾಗು ಕೇಳಿ ಇನ್ನೂ ಕನ್ಫ್ಯೂಸ್ ಆಯ್ತು..,’ಅದ್ಯಾರೊ ನನಗೆ ಗೊತ್ತಿಲ್ದೆ ಇರೊ ನಿನ್ನ ಹೊಸ ಗುರು..? ಯಾವುದಾದರು ಹೊಸ ಸ್ವಾಮಿಜಿ ಬೆನ್ನು ಹತ್ತಿದೀಯಾ ಹೇಗೆ ?’ ಅಂದೆ.

‘ಬಿಡ್ತು ಅನ್ನಿ ಸಾರ್.. ಸ್ವಾಮಿಗಳನ್ನೆಲ್ಲ ಯಾಕೆ ತರ್ತೀರಾ ಇಲ್ಲಿಗೆ ? ನಾ ಹೇಳಿದ್ದು ನಮ್ಮ ದಿಲ್ಲಿ ಗುರು ಕೇಜ್ರೀವಾಲ್ ಸಾಹೇಬ್ರನ್ನ.. ಗೌರಮೆಂಟ್ ಚಾಕರಿ ಮಾಡ್ಕೊಂಡು ಕೂತಿದ್ರೆ ಅವರು ಈ ಲೆವಲ್ಲಿಗೆ ಬರೋಕಾಗ್ತೀತಾ ? ಭ್ರಷ್ಟಾಚಾರ, ಲೋಕಾಯುಕ್ತ ಅಂತ ಶುರುಮಾಡ್ಕೊಂಡು ನೇರ ಸೀಎಂ ಸೀಟಿಗೆ ನೆಗೆದುಬಿಡ್ಲಿಲ್ವಾ ?… ನನಗು ಅಂತಾದ್ದೊಂದು ಸ್ಪ್ರಿಂಗ್ ಬೋರ್ಡ್ , ಲಾಂಚಿಂಗ್ ಪ್ಯಾಡ್ ಸಿಕ್ಬಿಟ್ರೆ ನೆಮ್ಮದಿಯಾಗಿ ದೊಡ್ಡ ಪೋಸ್ಟ್ ಹಿಡ್ಕೊಂಡು ರಾಜಕೀಯ ಮಾಡ್ತಾ ಆರಾಮಾಗಿರಬಹುದು..’ ಅಂದ ಗುಬ್ಬಣ್ಣ.

ನನಗದು ಸ್ವಲ್ಪ ಹೊಸ ಟ್ವಿಸ್ಟ್. ಗುಬ್ಬಣ್ಣ ಆಮ್ ಆದ್ಮೀನೂ ಅಲ್ಲ, ಆ ಪಕ್ಷದ ಫ್ಯಾನೂ ಅಲ್ಲಾ.. ಅಂತಾದ್ರಲ್ಲಿ ಏಕ್ದಂ ಗುರುಗಳು ಹೇಗಾಗ್ಬಿಟ್ರೂ ಅಂತ ಗೊತ್ತಾಗಲಿಲ್ಲ. ಅವನನ್ನೆ ಕೇಳಿಬಿಟ್ಟೆ, ಸುಮ್ನೆ ಯಾಕೆ ತಲೆ ಕೆಡಿಸಿಕೊಳ್ಳೋದು ಅಂತ..

‘ ಗುಬ್ಬಣ್ಣ..ನಿಂಗೂ ಆ ಪಕ್ಷಕ್ಕೂ ಎಣ್ಣೆ – ಸೀಗೆ ಕಾಯಿ …ಅಂತಾದ್ರಲ್ಲಿ..?’

‘ಅದು ಹೇಗೆ ಗುರು ಆಗ್ಬಿಟ್ರೂ ಅಂತಾನ? ಅದೊಂದು ತರ ಏಕಲವ್ಯ-ದ್ರೋಣಾಚಾರ್ಯರ ಗುರು-ಶಿಷ್ಯ ಸಂಬಂಧ ಸಾರ್..ಎಲ್ಲಾ ಸ್ಟ್ರಾಟೆಜಿ ಸಾರ್ ಸ್ಟ್ರಾಟೆಜಿ..’

‘ಏನು ಸ್ಟ್ರಾಟೆಜಿ ಮಣ್ಣು ? ಬರೀ ಡಿಗ್ರಿ ಸರ್ಟಿಫಿಕೇಟು ತರದ ಚಿಲ್ಲರೆ ವಿಷಯಗಳನ್ನೆ ದೊಡ್ಡ ಪಬ್ಲಿಸಿಟಿ ಮಾಡ್ಕೊಂಡು ಕೂರೋದು ದೊಡ್ಡಾ ಸ್ಟ್ರಾಟೆಜೀನಾ? ನನಗೇನೊ ಚೈಲ್ಡಿಶ್ ಅನ್ನಿಸ್ತಪ್ಪಾ ..’ ಅಂದೆ..

‘ ಅಲ್ಲೆ ಸಾರ್ ಇರೋದು ಸೀಕ್ರೇಟು.. ನೋಡಿ ನಮ್ ಗುರುಗಳು ಯಾರ್ಯಾರದೋ ಸರ್ಟಿಫಿಕೇಟ್ ಕೇಳಿದ್ರಾ ? ನೇರ ಹಾವಿನ ಹುತ್ತಕ್ಕೆ ಕೈ ಹಾಕೊ ಹಾಗೆ ಪ್ರೈಮಿನಿಸ್ಟರ್ ಕ್ವಾಲಿಫಿಕೇಷಂಗೆ ಅಟ್ಯಾಕ್ ಮಾಡ್ಬಿಟ್ರು..’

‘ ಅದೇ ನಾ ಹೇಳಿದ್ದು.. ಅದು ಸಿಲ್ಲಿ ಅಲ್ವಾ.. ? ಎಲ್ಲಾ ಬಿಟ್ಟು ಮೈನರ್ ಪರ್ಸನಲ್ ಮ್ಯಾಟರೂ..’ ಅಂತ ರಾಗ ಎಳಿತಿದ್ದವನನ್ನ ಅಲ್ಲೆ ತಡೆದು ಹೇಳಿದ ಗುಬ್ಬಣ್ಣಾ..

‘ ಸಾರ್.. ಅದೇ ನಿಮಗರ್ಥ ಆಗಲ್ಲ ಅಂದಿದ್ದು.. ಸಗಣಿಯವನ ಜತೆ ಸರಸಕ್ಕಿಂತ ಗಂಧದವನ ಜತೆ ಗುದ್ದಾಟ ಲೇಸು ಅಂತಾರೆ.. ನಮ್ ಗುರು ಮಾಡಿದ್ದೂ ಅದನ್ನೆ.. ಹಾಗೆ ಮಾಡಿದ್ದೆ ತಡ ಏನಾಯ್ತು ನೋಡಿ?’

‘ ಏನಾಯ್ತು..?’

‘ ಇಡೀ ಸೋಶಿಯಲ್ ಮೀಡೀಯಾ, ಪೇಪರುಗಳಲೆಲ್ಲ ಅದೆ ಸುದ್ದಿ.. ಇಂಟರ್ನೆಟ್ಟಲ್ಲಂತೂ ಐನ್ ಸ್ಟೈನ್ ನಿಂದ ಹಿಡಿದು ಗಾಂಧೀಜಿವರೆಗೆ ಎಲ್ಲರ ಡಿಗ್ರಿ ಸರ್ಟಿಫೀಕೇಟು ನಮ್ ಗುರುಗಳೇ ವೆರಿಫೈ ಮಾಡಿದ ಫೋಟೊ..!’

‘ಅದೆ ಹೇಳಿದ್ದು.. ತುಂಬಾ ಚೀಪಾಗಿ ಬಿಡಲಿಲ್ವಾ ಅಂತಾ..? ‘

‘ ಎಲ್ಲಿ ಸಾರ್ ಚೀಪೂ ? ಈಗ ಲೀಡರ್ಶಿಪ್ ವಿಷಯಕ್ಕೆ ಬಂದರೆ ಇಡೀ ದೇಶದಲ್ಲೇ ಯಾರ ಹೆಸರು ಸಾರು ಕೇಳೋದು ?’

‘ ಇನ್ಯಾರು ನಮ್ಮ ಪ್ರಧಾನ ಮಂತ್ರಿ ಮೋದಿಯವರದು ತಾನೆ?’

‘ ಅವರದು ಬಿಟ್ಟರೆ ನೆಕ್ಸ್ಟು ಕೇಳಿಸೋದು ?’

‘ ಅದು ಬಿಡು ಗುಬ್ಬಣ್ಣ.. ಎಲ್ಲಾ ಚೌಚೌ ಬಾತು.. ಸುಮಾರು ಹೆಸರು ಇದಾವೆ.. ಒಂತರ ಒನ್ ಟು ನೈನ್ ಬಿಟ್ಟು ಟೆನ್ ನಿಂದ ಲೆಕ್ಕ ಹಾಕ್ಬೇಕು ಅಷ್ಟೆ..’

‘ ಕರೆಕ್ಟ್ .. ಈಗ ನಂಬರ ಒನ್ ಇರೋ ಮೋದಿ ಅವರ ಹೆಸರಿನ ಜೊತೆ ಗುದ್ದಾಟಕ್ಕೆ ಇಳಿದರೆ, ಅವರನ್ನ ಬಿಟ್ಟರೆ ಜನರಿಗೆ ಯಾರ ಹೆಸರು ನೆನಪಿಗೆ ಬರುತ್ತೆ ಹೇಳಿ ?’ ಎಂದು ಪಾಸ್ ಕೊಟ್ಟ ಗುಬ್ಬಣ್ಣ..

‘ ಅರೆ ಹೌದಲ್ವಾ.. ? ಇದೊಂದು ತರ ನಾನೇ ನೆಕ್ಸ್ಟ್ ಅಲ್ಟರ್ನೇಟೀವ್ ಅಂತ ಇಂಡೈರೆಕ್ಟ್ ಮೆಸೇಜು ಕೊಟ್ಟ ಹಾಗೆ ಅಲ್ವಾ ? ಗುಡ್ ಆರ್ ಬ್ಯಾಡ್ ಎಲ್ಲಾ ನಿಮ್ ಗುರುಗಳ ಹೆಸರನ್ನೆ ಬಳಸ್ತಾ , ಅದನ್ನೆ ಫೇಮಸ್ ಮಾಡ್ತಾರೆ.. ಆಗ ಆಟೋಮ್ಯಾಟಿಕ್ ಆಗಿ ಪಾಪ್ಯುಲರ್ ಆಗ್ಬೋದು.. ಸ್ಮಾರ್ಟ್ ಮಾರ್ಕೆಟಿಂಗ್ ಸ್ಟ್ರಾಟೆಜಿ ಅಲ್ವಾ..!’

‘ಅದಕ್ಕೆ ಸಾರ್..ನಾನು ಈಗ ಅದನ್ನೆ ಮಾಡೋಕೆ ಹೊರಟಿರೋದು…. ಈಗ ಹೇಳಿ ಜೀವಂತ ಕುರಿ ಕೋಳಿ ಎಲ್ಲಿ ಸಿಗ್ತಾವೆ ಅಂತ’ ಅಂದ ಗುಬ್ಬಣ್ಣ.

‘ವಾಟ್ ಎವರ್ ಇಟ್ ಇಸ್ .. ಕೋಳಿ, ಕುರಿ, ಹಸು ಎಲ್ಲಾ ಜೀವಂತ ಸಿಗೋದೂ ಅಂದ್ರೆ ಸಿಂಗಾಪುರದ ಜೂನಲ್ಲಿ ಮಾತ್ರವೇ.. ಬೇಕೂಂದ್ರೆ ಬೆಕ್ಕು ಸಿಗುತ್ತೆ ನೋಡು.. ಅಂದಹಾಗೆ ಅದೆಲ್ಲ ರಿಯಲ್ ಪ್ರಾಣಿಗಳ ಚಿತ್ರ ಅಲ್ಲಾ, ಫೋಟೋ ಶಾಪ್ ಟ್ರಿಕ್ಕು ಅಂತಿದ್ರಲ್ಲ ಗುಬ್ಬಣ್ಣಾ..?’

‘ ಯಾಗದ ಮಧ್ಯೆ ಅಪಶಕುನದ ಮಾತು ಯಾಕಾಡ್ತಿರಾ ಬಿಡಿ ಸಾರ್.. ಅದು ಫೋಟೋಶಾಪ್ ಟ್ರಿಕ್ಕಾ ? ಅದಾದರೆ ನನ್ಮಗಳಿಗೆ ಫಸ್ಟ್ ಕ್ಲಾಸಾಗಿ ಬರುತ್ತೆ.. ಅದರಲ್ಲೇ ಏಮಾರಿಸ್ಬೋದು, ನಿಜವಾದ್ದು ಬೇಡಾ ಅಂತೀರಾ ?’

‘ ಹೂಂ ಮತ್ತೆ.. ‘

‘ ಒಳ್ಳೆ ಐಡಿಯಾ ಸಾರ್..ಖರ್ಚೂ ಉಳಿಯುತ್ತೆ.. ಹಾಗೆ ಮಾಡಿಬಿಡ್ತೀನಿ ಕೀಪ್ ವಾಚಿಂಗ್ ಮೈ ಫೇಸ್ಬುಕ್ ಸಾರ್.. ವರ್ಡ್ ಫೇಮಸ್ ಆಗೋಗ್ತೀನೊ ಏನೊ!?’ ಅಂದ.

‘ ಆದ್ರೆ ಗುಬ್ಬಣ್ಣಾ…ಈ ತರ ಮಹಾಯಾಗ ಮಾಡೋಕೆ ಏನಾದ್ರೂ ದೊಡ್ಡ ಕಾರಣ ಇರ್ಬೇಕಲ್ವಾ? ಮಳೆ ಬರಿಸೋಕೊ, ಬರ ತೊಲಗಿಸೋಕೊ ..ಇತ್ಯಾದಿ. ನೀ ಮಾಡೊ ಕಾರಣ ಏನು ಅಂದ್ರೆ ಏನು ಹೇಳ್ತಿಯಾ ?’

ಈ ಕ್ವೆಶ್ಚನ್ನಿಗೆ ಗುಬ್ಬಣ್ಣ ಸ್ವಲ್ಪ ಬೋಲ್ಡ್ ಆದ ಹಾಗೆ ಕಾಣಿಸ್ತು.. ಅದರ ಬಗ್ಗೆ ಇದುವರೆಗೂ ಯೋಚಿಸಿರಲಿಲ್ಲವೇನೊ..

‘ ಹೌದಲ್ಲಾ ಸಾರ್.. ನಾ ಅದನ್ನ ಯೋಚ್ನೆನೆ ಮಾಡಿರಲಿಲ್ಲ.. ನೀವೆ ಒಂದು ಐಡಿಯಾ ಕೊಡಿ ಸಾರ್..’

‘ ಅದಪ್ಪ ವರಸೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡ್ತೀ ಅಂದ ಹಾಗೆ..’

‘ ಅಯ್ಯೋ ಬಿಡೀ ಸಾರ್ ..ನಾ ಬ್ರಾಹ್ಮಣನೂ ಅಲ್ಲಾ, ನೀವು ಹೆಂಗಸೂ ಅಲ್ಲಾ.. ಆ ಮಾತ್ಯಾಕೆ? ಏನಾದ್ರೂ ಐಡಿಯಾ ಕೊಡಿ ಅಂದ್ರೆ..’ ಎಂದು ರಾಗವೆಳೆದ..

‘ ಸರಿ.. ಒಂದು ಒಳ್ಳೆ ಐಡಿಯಾ ಇದೆ ನೋಡಿ ಟ್ರೈ ಮಾಡ್ತೀಯಾ ?’

‘ ಏನಂತ ಹೇಳಿ ಸಾರ್..’

‘ ಈಗ ನೇತ್ರಾವತಿ ನೀರಿನ ಹಂಚಿಕೆ ಬಗ್ಗೆ ಸದ್ದು ಕೇಳಿಸ್ತಾ ಇದೆ.. ಇನ್ನೂ ಯಾರದೂ ಸರಿಯಾದ ಲೀಡರ್ಶಿಪ್ ಕಾಣ್ತಾ ಇಲ್ಲಾ ಆ ಚಳುವಳಿಗೆ..’

‘ ಅದಕ್ಕೂ ನಾ ಮಾಡೊ ಸೋಮಯಾಗಕ್ಕೂ ಏನು ಸಂಬಂಧ ಸಾರ್..?’

‘ ಅದೇ ಹೇಳ್ತಾ ಇದೀನಿ ತಡ್ಕೊ.. ನೇತ್ರಾವತಿ ವಿವಾದ ಶಾಂತಿಪೂರ್ವಕವಾಗಿ ಬಗೆಹರಿಲಿ ಅಂತ ಕಾರಣ ಹೇಳಿ ಸೋಮಯಾಗ ಮಾಡು.. ಅದಕ್ಕೆ ಪಬ್ಲಿಸಿಟೀನು ಸಿಗುತ್ತೆ.. ಜೊತೆಗೆ ಯಾರಿಗ್ಗೊತ್ತು..? ನಿನ್ನೆ ಲೀಡರ್ ಮಾಡ್ಕೊಂಡ್ರು ಮಾಡ್ಕೊಂಡ್ರೆ.. ನೀನು ಏಕ್ದಂ ಲಾಂಚ್ ಆಗಿಬಿಡ್ತೀಯಾ ಎಲ್ಲಾ ನ್ಯೂಸುಗಳಲ್ಲಿ..’

‘ ಪಬ್ಲಿಸಿಟೀ ಆಗುತ್ತೆ ಅಂತೀರಾ?’

‘ಮತ್ತೆ ? ಪುಟುಗೋಸಿ ಕಾಲೇಜಲ್ಲಿ ಭಾಷಣ ಮಾಡಿ ನ್ಯಾಷನಲ್ ಲೀಡರುಗಳಾಗೊ ಕಾಲ ಇದು, ಗೊತ್ತಾ?’

‘ನಿಜಾ ಸಾರ್..ಇದು ಬ್ರಿಲಿಯಂಟ್ ಐಡಿಯಾ..ಹಾಗೆ ಮಾಡ್ತೀನಿ..’ ಎಂದ ಉತ್ಸಾಹದಿಂದ ಗುಬ್ಬಣ್ಣ..

‘ಗುಡ್ ಲಕ್’ ಎಂದೆ ನಾನು..

‘ ಸರಿ ಸಾರ್ ಯಾವುದಕ್ಕೂ ಒಂದೆರಡು ಕೇಜಿ ಚಿಕನ್ ಕಟ್ಟಿಸಿಕೊಂಡೆ ಹೋಗ್ತೀನಿ.. ರಿಯಲಿಸ್ಟಿಕ್ಕಾಗಿರಲಿ ಪಿಕ್ಚರು’ ಅಂದವನೆ ಆ ಸ್ಟಾಲಿನತ್ತ ಹೆಜ್ಜೆ ಹಾಕಿದ.

ಶೀಘ್ರದಲ್ಲೆ ಗುಬ್ಬಣ್ಣ ಎಲ್ಲರಿಗು ಡಿಗ್ರಿ ಸರ್ಟಿಫಿಕೇಟ್ ವೆರಿಫೈ ಮಾಡಿಕೊಡ್ತಾ ಇರೊ ಫೋಟೊಗಳನ್ನ ಇಂಟರ್ನೆಟ್ಟಲ್ಲಿ ನೋಡ್ಬೇಕಾಗುತ್ತೊ ಏನೊ ಅಂದುಕೊಂಡು ನಾನು ತರಕಾರಿ ಅಂಗಡಿಯತ್ತ ಹೆಜ್ಜೆ ಹಾಕಿದೆ.

(ಮುಕ್ತಾಯ)

Thanks and best regards,
Nagesha MN

00550. ಅಹಲ್ಯಾ ಸಂಹಿತೆ – ೦೫ (ದೇವರಾಜನ ಆಪ್ತಾಲೋಚನೆ)


00550. ಅಹಲ್ಯಾ ಸಂಹಿತೆ – ೦೫ (ದೇವರಾಜನ ಆಪ್ತಾಲೋಚನೆ)

(Link to the previous episode 04: https://nageshamysore.wordpress.com/2016/03/04/00549-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%aa/)

ಆದರೇಕೋ ಆಪ್ತ ಬಳಗದ ಸವಿಮಾತು ಸಹ ದೇವರಾಜನ ಖಿನ್ನತೆಯನ್ನು ಬೇಧಿಸಲು ಸಮರ್ಥವಾಗುತ್ತಿಲ್ಲ..

ಅದನ್ನು ಕಂಡು ಮಿಕ್ಕವರಿಬ್ಬರ ಮಾತಿಗೆ ಮತ್ತಷ್ಟು ಬಲ ಸೇರಿಸುವವನಂತೆ ಈ ಬಾರಿ ಮಾತಾಡಿದವನು ಅಗ್ನಿದೇವ.. “ದೇವರಾಜ.. ನಮ್ಮಲ್ಲಿ ಸಮಸ್ಯೆಗೆ ಉತ್ತರವಿದೆಯೊ, ಇಲ್ಲವೊ ನಮಗೆ ತಿಳಿಯದಾದರು, ಅದೇನೆಂದು ಅರಿವಾದರೆ ಕನಿಷ್ಠ ಮುಕ್ತ ಚರ್ಚೆಯನಾದರು ಮಾಡಿ ಹಿತಾಹಿತಗಳ ವಿಶ್ಲೇಷಣೆ ಮಾಡಲಾದರು ಸಾಧ್ಯವಾದೀತು… ಪರಿಹಾರ ನಮ್ಮಿಂದಾಗದಿದ್ದರು, ಆಗಿಸಬಲ್ಲ ಸಮರ್ಥರ ಹುಡುಕಾಟಕ್ಕಾದರು ದಾರಿಯಾಗುತ್ತದೆ.. ಹೇಳು, ಏನೀ ಹೊಸ ಚಿಂತೆ ? ಮತ್ತಾವುದಾದರು ಹೊಸ ದಾನವರ ಭೀತಿ ಹುಟ್ಟಿಕೊಂಡಿದೆಯೆ..?”

ಒಳ ಸೇರಿದ ಸುರೆಯ ಪ್ರಭಾವವು ತುಸು ಬಿಗಿ ಸಡಿಲಿಸಿದ್ದರಿಂದ ಮತ್ತು ತನ್ನ ಸುತ್ತಲ ಹಿತೈಷಿಗಳ ಮಾತಿನಿಂದ ಕೊಂಚ ನಿರಾಳವಾದಂತಾಗಿ,  ದೇವೇಂದ್ರ ಕೊಂಚ ಕದಲಿದ. ತಾನು ಏಕಾಕಿಯಲ್ಲ ಜತೆಗೆ ತನ್ನೊಟ್ಟಿಗಿರುವ ಈ ಆಪ್ತ ಮಿತ್ರರು ತನ್ನ ಸಹಾಯಕ್ಕೆ ಸದಾ ಸಿದ್ದರಿದ್ದಾರೆಂಬ ಅನಿಸಿಕೆಯೆ ಮತ್ತಷ್ಟು ಬಲ ನೀಡಿದಂತಾಗಿ, ಆ ಹುರುಪಿನಲ್ಲೆ ನಿಧಾನವಾಗಿ ಮಾತು ಜೋಡಿಸುತ್ತ ಬಾಯ್ತೆರೆದ..

‘ ಹೊಸ ದಾನವ ಭೀತಿಯೇನಲ್ಲ ಅಗ್ನಿ.. ಅದಾಗಿದ್ದರೆ ನಾನಿಷ್ಟು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.. ನಿಮ್ಮಲ್ಲಿ ಯಾರಾದರೊಬ್ಬರನ್ನು ಬಳಸಿಯೊ, ಅಥವಾ ನನ್ನ ವಜ್ರಾಯುಧದಿಂದಲೊ ಅದರ ಕೆಲಸ ಮುಗಿದುಹೋಗುತ್ತಿತ್ತು…..’

“ಮತ್ತೆ..? ಈಗ ಬಂದಿರುವ ತೊಡಕಾದರೂ ಏನು ?”

ದೇವೇಂದ್ರ ನಾರದರು ಬಂದ ಲಾಗಾಯ್ತು ನಡೆದ ಮಾತುಕಥೆಯ ಸಾರಾಂಶವನ್ನು ತನ್ನ ಆಪ್ತ ಬಳಗದಲ್ಲಿ ಹಂಚಿಕೊಂಡ. ಅದನ್ನು ಕೇಳುತ್ತಿದ್ದಂತೆ ಅವರ ಮುಖದಲ್ಲು ಭೀತಿಯಿಂದೊಡಗೂಡಿದ ಖಿನ್ನತೆ ಆವರಿಸಿಕೊಂಡಿತು. ಅವರಿಗು ಈ ತಪಸ್ಸು ಮಾಡುವ ಋಷಿ, ಮುನಿಗಳ ತಂಟೆಗೆ ಹೋಗುವುದೆಂದರೆ ಭಯವೆ. ತಮಗಿಂತ ಶಕ್ತಿವಂತರಾದ ಅವರಿಗೆ ಮೂಗಿನ ತುದಿಯಲ್ಲೆ ಕೋಪ. ಸಿಟ್ಟಿಗೆದ್ದು ಶಪಿಸಿದರೆಂದರೆ ತಮ್ಮ ಕಥೆ ಮುಗಿದ ಹಾಗೆಯೆ ಎಂದು ಅವರಿಗೆ ಚೆನ್ನಾಗಿ ಗೊತ್ತು. ಅಲ್ಲದೆ ಇದು ಯಾರೊ ಮಾಮೂಲಿ ಮುನಿ, ಋಷಿಗಳ ಮಾತಲ್ಲ; ನಾರಾಯಣಾಂಶದಿಂದಲೆ ಜನಿಸಿದವರೆಂದು ಪ್ರತೀತಿಯಿರುವ ನರ ನಾರಾಯಣರ ವಿಷಯ… ಇಂತಹ ತಪೋಧನರ ಎದುರು ತಮ್ಮೆಲ್ಲರ ಶಕ್ತಿಗಳು ಕವಡೆಗಿಂತಲು ಕಡೆಯೆ….! 

” ಇದು ಗಂಭೀರ ವಿಷಯವೆ… ನರ ನಾರಾಯಣರ ಶಕ್ತಿಯೆದುರು ನಮ್ಮೆಲ್ಲರ ಸಮಷ್ಟಿತ ಶಕ್ತಿಯೂ ಯಾವ ಕೆಲಸಕ್ಕೂ ಬಾರದು ನರೇಂದ್ರ..” ಅವರೆಲ್ಲರ ಮನದ ಅನಿಸಿಕೆಗೆ ಮಾತು ಕೊಟ್ಟ ವರುಣದೇವ.

ಅದರ ಹಿಂದೆಯೆ ವಾಯುದೇವ ನುಡಿದ, ” ನಮ್ಮ ಎಂದಿನ ತಪೋಭಂಗದ ವಿಧಾನಗಳಾವುವು ಇಲ್ಲಿ ಕೆಲಸಕ್ಕೆ ಬರುವುದಿಲ್ಲ ನರೇಂದ್ರ… ಅಗ್ನಿಗೆ ಪ್ರತಿಯಗ್ನಿ, ವಾಯುವಿಗೆ ಪ್ರತಿವಾಯು, ಜಲಕ್ಕೆ ಪ್ರತಿಜಲ ಸೃಷ್ಟಿಸುವುದು ಅವರಿಗೆ ನೀರು ಕುಡಿದಷ್ಟೆ ಸುಲಭ.. ಅಲ್ಲದೆ, ಏನೇ ಮಾಡ ಹೋದರು ಅವರ ಕೋಪಕ್ಕೆ ಗುರಿಯಾದರೆ ನಮ್ಮೆಲ್ಲರನ್ನು ಒಂದೆ ಏಟಿಗೆ ಆಪೋಶಿಸಬಲ್ಲ ಸಾಮರ್ಥ್ಯವಿರುವವರು…”

ಅವನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ ನುಡಿದ ದೇವರಾಜ, ” ನಿನ್ನ ಮಾತು ನಿಜ ವಾಯು.. ಅದಕ್ಕೆ ಈಗ ಚಿಂತೆಯಾಗಿರುವುದು.. ನಾನಾಗಿಯೆ ಆಗಿದ್ದರೆ ಈ ಕುರಿತು ಹೆಚ್ಚು ಚಿಂತಿತನಾಗುತ್ತಿರಲಿಲ್ಲ.. ಆದರೆ ನಾರದರೆ ಬಂದು ಹೇಳಿರುವುದನ್ನು ನೋಡಿದರೆ ಅದನ್ನು ತೀರಾ ಕಡೆಗಣಿಸುವಂತೆಯೂ ಇಲ್ಲ..”

ಸುಮಾರು ಹೊತ್ತಿನ ತನಕ ನಡೆದ ಚರ್ಚೆ, ಮಾತುಕಥೆಯಲ್ಲಿ ಯಾವ ಹಾದಿಯೂ ನಿಖರವಾಗಿ ತೋಚದೆ ಹೋದಾಗ ಕಡೆಗೆ ಅಗ್ನಿದೇವ ಒಂದು ಸಲಹೆ ನೀಡಿದ..

” ನಾವೇಕೆ ಹೀಗೆ ಮಾಡಬಾರದು ? ನಮ್ಮ ತಪೋಭಂಗದ ವಿಧಾನಗಳಲ್ಲಿ ಅತ್ಯಂತ ನಾಜೂಕಿನದೆಂದರೆ ಅಪ್ಸರೆಯರ ಮುಖಾಂತರ ಪ್ರಯತ್ನಿಸುವುದು.. ಮಿಕ್ಕ ವಿಧಾನಗಳೆಲ್ಲ ವಿನಾಶಕಾರಿ – ದಮನದ ಉದ್ದೇಶವಿದ್ದರೆ, ಇದು ಮಾತ್ರ ಕೇವಲ ಮನೋದೌರ್ಬಲ್ಯದ ಮೇಲೆ ಅವಲಂಬಿಸಿರುವಂತದ್ದು.. ಅಲ್ಲದೆ ಸುಂದರ ಅಪ್ಸರೆಯರ ಮೇಲೆ ಮುನಿಗಳ ಕೆಂಗಣ್ಣು ಬೀಳುವುದಿಲ್ಲ.. ಒಂದೊ ಅವರ ವಶವಾಗಿ ತಪಸ್ಸನ್ನು ಕಡೆಗಣಿಸುತ್ತಾರೆ ; ಒಂದು ವೇಳೆ ಪ್ರಲೋಭನೆಗೆ ಸಿಲುಕದಿದ್ದರು ಹೆಣ್ಣುಗಳೆಂದು ಶಪಿಸದೆ ಕರುಣೆ ತೋರಿ ಬಿಟ್ಟು ಬಿಡುತ್ತಾರೆ…”

” ನನಗೆ ತಿಳಿದ ಮಟ್ಟಿಗೆ ಇದಕ್ಕೆಲ್ಲ ಸಿಲುಕಿ ಬೀಳುವ ದುರ್ಬಲ ಮನಸ್ತರದವರಲ್ಲ ನರ ನಾರಾಯಣರು, ಅಗ್ನಿ..”

“ಅದು ನನಗೂ ತಿಳಿದಿದೆ ದೇವರಾಜ…”

“ಮತ್ತೆ..?”

” ಈ ವಿಧಾನದಲ್ಲೂ ಸೋಲು ಕಟ್ಟಿಟ್ಟ ಬುತ್ತಿಯೆ ಆದರೂ ಅದರ ಮುಖೇನ ನಾವಂದುಕೊಂಡ ಸಾಧ್ಯಾಸಾಧ್ಯತೆಯ ಪರೀಕ್ಷೆ ಮಾಡಿದಂತಾಗುತ್ತದೆ… ಏನಿಲ್ಲವೆಂದರು ಆ ನೆಪದಲ್ಲಿ ಅವರೊಡನೆ ಮಾತಿಗಿಳಿದು ನಮ್ಮ ಅಳುಕನ್ನು ಅವರಲ್ಲಿ ತೋಡಿಕೊಂಡಂತಾಗುತ್ತದೆ.. ಯಾರಿಗೆ ಗೊತ್ತು ? ಅದಕ್ಕೆ ಅವರೆ ಪರಿಹಾರ ಸೂಚಿಸಬಹುದು.. ಅಥವಾ ಅವರೆ ಬಲಿಷ್ಠರೆಂದಾದಲ್ಲಿ ಅವರೊಡನೆಯ ಸಖ್ಯ ಕದನ – ವಿರಸಕ್ಕಿಂತ ಮೇಲಲ್ಲವೆ?”

ಅಗ್ನಿದೇವನ ಚಿಂತನೆಯ ದಿಕ್ಕು ಅರಿವಾದಂತೆ ಮೆಚ್ಚಿಗೆಯಿಂದ ತಲೆದೂಗಿದ ನರೇಂದ್ರ. ಬಹುಶಃ ಇದೇ ಸುರಕ್ಷಿತ ವಿಧಾನವೆಂದು ಅವನಿಗೂ ಅನಿಸಿತು… ಕೊಂಚ ಎಚ್ಚರದಲ್ಲಿ ಎಲ್ಲಾ ನಡೆಸಿದರೆ, ಇದರಲ್ಲಿ ಅಪಾಯದ ಸಾಧ್ಯತೆ ಕಡಿಮೆಯೆ…

ತದನಂತರ ಇದನ್ನು ಹೇಗೆ ಸಂಭಾಳಿಸುವುದೆನ್ನುವ ಬಗ್ಗೆ ವಿವರಗಳನ್ನು ಚರ್ಚಿಸುತ್ತ ಮುಂದಿನ ಹೆಜ್ಜೆಯ ರೂಪುರೇಷೆಗಳನ್ನು ಚರ್ಚಿಸತೊಡಗಿತು ದೇವರಾಜನನ್ನೊಳಗೊಂಡ ಶಿಷ್ಠ ಚತುಷ್ಟಯ..

***********

ಬದರಿಕಾಶ್ರಮದ ಸುಂದರ ವನಸಿರಿಯ ಪ್ರಶಾಂತ ಧಾಮ. ಆಶ್ರಮದ ಸುತ್ತಲೂ ದಟ್ಟವಾಗಿ ಬೆಳೆದು ನಿಂತ ವನರಾಜಿ.. ವೃಕ್ಷಮೂಲಾದಿ ಪ್ರಕೃತಿ ವೈಭವಗಳಿಂದಾವೃತ್ತವಾಗಿ ಹೊರ ಜಗತ್ತಿಗೆ ತಕ್ಷಣಕ್ಕೆ ಕಾಣಿಸಿಕೊಳದೆ ಅವಿತಿರುವಂತೆ ಹುದುಗಿ ಕುಳಿತ ಆ ಆಶ್ರಮ ಗರ್ಭದಲ್ಲಿ ವರ್ಷಾಂತರಗಳ ಅವಿರತ, ನಿರಂತರ ತಪನೆ ಅಡಗಿದೆ. ಸುತ್ತಲ ಜಗದ ಪರಿಗಣನೆಯಿರದೆ ತಮ್ಮ ಪಾಡಿಗೆ ತಮ್ಮ ನಿರಂತರ ತಪ ಶೋಧದಲ್ಲಿ ನಿರತರಾದ ನರ ನಾರಾಯಣರು ಅಲ್ಲೇನು ಮಹಾಯಜ್ಞ ನಡೆಸಿರುವರೆಂದು ಯಾರಿಗೂ ಅರಿವಿಲ್ಲ. ಅಷ್ಟು ಸುಧೀರ್ಘ ಕಾಲ ತಪಸ್ಸಿಗೆ ಕೂರುವ ಅನಿವಾರ್ಯವಾಗಲಿ, ಉದ್ದೇಶವಾಗಲಿ ಏನೆಂದು ಯಾರಿಗೂ ತಿಳಿಯದು. ಅಲ್ಲಿ ಆಗಾಗ್ಗೆ ಹೊರಬೀಳುವ ಸದ್ದು ಗದ್ದಲಗಳ ಮೂಲಕ ಯಾವುದೊ ಭೀಕರ ಕಾಳಗ ನಡೆದಿರುವಂತೆ ತೋರುವುದಾದರು, ಮತ್ತೆ ಇದ್ದಕ್ಕಿದ್ದಂತೆ ಎಲ್ಲವು ಸ್ತಬ್ಧವಾಗಿ ಅಪಾರ ಮೌನ ವ್ಯಾಪಿಸಿಕೊಂಡು ಮೂಕರಾಗದ ಮುಖವಾಡ ಹಾಕಿಕೊಂಡ ದಿನಗಳು ಕಡಿಮೆಯೇನಿಲ್ಲ.

ಹಾಗೆಂದು ನರ ನಾರಾಯಣರ ಪೂರ್ಣ ಹಿನ್ನಲೆಯೇನು ಅಪಾರದರ್ಶಕದಲ್ಲಡಗಿಕೊಂಡ ಊಹಾಪ್ರಪಂಚವೇನಲ್ಲ. ಅವರನ್ನು ಹತ್ತಿರದಿಂದ ನೋಡಿ ಬಲ್ಲವರು ಅವರಿಬ್ಬರೂ ವಿಷ್ಣುವಿನ ಅಪರಾವತಾರ ರೂಪವೆಂದೇ ಹೇಳುತ್ತಾರೆ. ‘ನರ – ಮಾನವರೂಪಿ ಸಂಕೇತವಾದರೆ, ನಾರಾಯಣ – ದೈವರೂಪಿ ಸಂಕೇತವಂತೆ. ಸ್ವತಃ ಶ್ರೀ ಹರಿಯೆ ನಾರಾಯಣ ರೂಪಿನಲ್ಲಿ ಅವತಾರವೆತ್ತಿದ್ದು, ನಿತ್ಯ ಸಖನಾಗಿ ಶ್ರೀ ಹರಿಯ ಶಯನವೆ ಆಗಿರುವ ಆದಿಶೇಷನೆ ನರನ ರೂಪಾಗಿ ಜನಿಸಿದ್ದು ಎಂದು ಹೇಳುತ್ತಾರೆ. ಮತ್ತೆ ಕೆಲವರು ಹೇಳುವಂತೆ, ಹಿರಣ್ಯಕಶಿಪುವಿನ ವಧೆಗಾಗಿ ಶ್ರೀ ಹರಿ ನರಸಿಂಹನಾಗಿ ಅವತರಿಸಬೇಕಾಯ್ತಲ್ಲ? ಆ ಅವತಾರದ ಉಪಸಂಹಾರ ಮಾಡಿದಾಗ, ಮಾನವ ದೇಹವಿದ್ದ ಮುಂಡದ ಭಾಗ ನರನ ರೂಪಾಯ್ತೆಂದು, ರುಂಡದ ಭಾಗ ನಾರಾಯಣನಾಗಿ ರೂಪಿತವಾಯ್ತೆಂದು ಮತ್ತೊಂದು ಸಿದ್ದಾಂತ. ಅದೇನೆ ಇದ್ದರು, ಜಾತಕಾದಿ ಜನ್ಮ ಕುಂಡಲಿ ಹಿಡಿದು ಹೊರಟವರು ಹೇಳುವುದು ಮತ್ತೊಂದು ಹೆಚ್ಚು ಲೌಕಿಕವೆನಿಸುವ ವಾದ; ಬ್ರಹ್ಮಕುಮಾರನಾದ ಧರ್ಮ ಮತ್ತವನ ಸತಿ ದಕ್ಷಪುತ್ರಿ ಅಹಿಂಸ (ಮರ್ತ್ಯಿ)ರಿಗೆ ಜನಿಸಿದ ಪುತ್ರರೆ ನರ ನಾರಾಯಣರು ಎಂಬುದು ಈ ಮೂಲದ ಶೋಧ.

ಅವರಿಬ್ಬರ ಹುಟ್ಟಿನ ಹಾಗೆಯೆ, ಅವರ ಬದುಕು ತಪಸಿನ ಬಗೆಯೂ ತರತರದ ರೋಚಕ ಕಥಾನಕಗಳು ಪ್ರಚಲಿತವಾಗಿವೆ. ಅದರಲ್ಲಿ ಬಹು ರೋಚಕವೆನಿಸುವ ಕಥನ ಸಹಸ್ರಕವಚನೆಂಬ ದಾನವ ಚಕ್ರವರ್ತಿಯದು. ಅಮರತ್ವವನ್ನು ಪಡೆಯಲಾಗದ ರಾಕ್ಷಸರು ಬದಲಿಗೆ ಅತ್ಯದ್ಭುತವೆನಿಸುವ ವರಗಳನ್ನು ತಪದ ಮೂಲಕ ಪಡೆದು, ತಮ್ಮ ಎದುರಾಳಿ ದೇವತೆಗಳ ಮೇಲೆ ಧಾಳಿಯಿಕ್ಕಿ ದಾಂಧಲೆಯೆಬ್ಬಿಸುವ ಅದೇ ಹಾದಿ ಹಿಡಿದ ಈ ದಾನವ, ಸೂರ್ಯದೇವನನ್ನು ತಪ ಮಾಡಿ ಒಲಿಸಿಕೊಂಡು ಪಡೆದ ವರವೂ ವಿನೂತನವೆ. ತನ್ನ ರಕ್ಷಣೆಗೆ ಸಹಸ್ರ ಕವಚಗಳನ್ನು ವರವಾಗಿ ಪಡೆದು, ಪ್ರತಿ ಕವಚವನ್ನು ಬೇಧಿಸಿ ನಾಶ ಮಾಡಲು ಕನಿಷ್ಠ ಒಂದು ಸಹಸ್ರ ವರ್ಷವಾದರೂ ತಪ ಮಾಡಿ ಶಕ್ತಿ ಸಂಚಯ ಮಾಡಿಕೊಂಡವನಿಂದ ಮಾತ್ರ ಸಾಧ್ಯವಾಗಬೇಕೆಂದು ವರ ಪಡೆದ. ಹಾಗೆ ತಪಶ್ಯಕ್ತಿಯನ್ನು ಕ್ರೋಢೀಕರಿಸಿಕೊಂಡವನೂ ಸಹ ಕನಿಷ್ಠ ಒಂದು ಸಹಸ್ರ ವರ್ಷ ಹೋರಾಡಿದ್ದಲ್ಲದೆ ಆ ಕವಚ ಬೇಧ ಸಾಧ್ಯವಾಗಬಾರದೆಂಬುದು ಆ ಶರತ್ತಿನ ಮತ್ತೊಂದು ಭಾಗ…. ! ಹೀಗೆ ಕವಚವೊಂದರ ಛೇಧನಕ್ಕೆ ಒಟ್ಟು ಎರಡು ಸಹಸ್ರ ವರ್ಷಗಳಾದುವೆಂದರೆ, ಇನ್ನು ಎಲ್ಲಾ ಸಹಸ್ರ ಕವಚಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸಬೇಕೆಂದರೆ ಎರಡು ದಶಲಕ್ಷ ವರ್ಷಗಳೆ ಬೇಕು – ಅದೂ ಯಾರಾದರೂ ನಿರಂತರವಾಗಿ ಅವನೊಡನೆ ಹೋರಾಡುತ್ತ ತಪ ಮಾಡುತ್ತ, ಹೋರಾಡುತ್ತ ತಪ ಮಾಡುತ್ತ ಒಂದೇ ಸಮನೆ ಅವನೊಡನೆ ಅವಿರತ ತಪ-ಕದನದಲ್ಲಿ ನಿರತರಾಗಿದ್ದರೆ ಮಾತ್ರ… ತಪಸ್ಸಿಗೆ ಅದೇನು ಮಹತ್ವವೊ? ಯಾವ ದೇವನಾದರೂ ಸರಿ ಅದಕ್ಕೆ ತಥಾಸ್ತು ಎನ್ನುವವನೆ…! ಸೂರ್ಯದೇವನು ಅದನ್ನೆ ಮಾಡಿದ್ದ – ಸಹಸ್ರ ಕವಚ ಬೇಡಿದ ವರವನ್ನು ಯಥಾವತ್ತಾಗಿ ನೀಡುವ ಮೂಲಕ….

(ಇನ್ನೂ ಇದೆ)

( link to next episode 6: https://nageshamysore.wordpress.com/2016/03/04/00551-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be-%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86-%e0%b3%a6%e0%b3%ac/)

00539. ಸಣ್ಣಕಥೆ: ಸುಬ್ಬತ್ತೆ ಯಾಕೆ ಕೈ ಕೊಟ್ಲು ?


00539. ಸಣ್ಣಕಥೆ: ಸುಬ್ಬತ್ತೆ ಯಾಕೆ ಕೈ ಕೊಟ್ಲು ?
_____________________________________

ನಡುಬೀದಿಯ ಮಧ್ಯೆ ತುಂಡು ಚಡ್ಡಿಯಲ್ಲಿ ಗಾಳಿಪಠ ಹಾರಿಸುತ್ತಿದ್ದ ಮಾದೇಶನಿಗೆ ಬೀದಿಯ ತುದಿಯಲ್ಲಿ ಕೈಲೊಂದು ಚೀಲ ಹಿಡಿದ ಯಾರೋ ಇಬ್ಬರು ಆಗಂತುಕರು ಬರುವುದು ಕಂಡಿತಾದರು ಅದು ಯಾರದೋ ಮನೆಗೆ ಬರುತ್ತಿರುವ ನೆಂಟರಿರಬೇಕೆಂದುಕೊಂಡು ಅತ್ತ ಗಮನ ಕೊಡದೆ ಪಟ ಹಾರಿಸುವುದರಲ್ಲಿ ತಲ್ಲೀನನಾಗಿದ್ದ. ಆದರೆ ಬರುತ್ತಿರುವವರು ಹತ್ತಿರವಾದಂತೆ ಯಾರೋ ಪರಿಚಿತರಿರಬೇಕೆನ್ನುವ ಕ್ಷೀಣ ಅನಿಸಿಕೆ, ಆರು ಮನೆಯಾಚೆಯ ಗೋಪಾಲಣ್ಣನ ಮನೆಗೆ ಬರುವ ಹೊತ್ತಿಗೆ ಖಚಿತ ಅನಿಸಿಕೆಯಾಗಿ ಬದಲಾಗಿತ್ತು, ಅವರಾಡುತ್ತಿದ್ದ ಊರಿನ ಮಾತಿನ ಶೈಲಿಯಿಂದ. ಆದರು ಬಂದವಳು ಪುಟ್ಟಸುಬ್ಬತ್ತೆ ಮತ್ತು ದೊಡ್ಡಪ್ಪ ಎಂದರಿವಾಗಿದ್ದು ಮಾತ್ರ ಅವರು ಬಹುತೇಕ ಅವನನ್ನು ಹಾದು ಮನೆಯತ್ತ ಸಾಗುವಾಗ ಕೇಳಿಸಿದ ‘ಪಟ ಹಾರಿಸ್ತಿದಿಯೇನೊ ಮಾದೇಸ ?’ ಎಂದ ಅತ್ತೆಯ ಕಕ್ಕುಲತೆಯ ದನಿಯಿಂದ ಮಾತ್ರ… ಅವಳ ದನಿ ಕಿವಿಗೆ ಬೀಳುತ್ತಿದ್ದಂತೆ ಕೈಲಿದ್ದ ಪಟದ ಟ್ವೈನ್ ದಾರದ ಸೂತ್ರವನ್ನು ಹಾಗೆ ಪಕ್ಕದ ಲೈಟ್ಟು ಕಂಬವೊಂದಕ್ಕೆ ಸುತ್ತಿ ಗಂಟು ಹಾಕಿ ‘ ಅತ್ತೇ…’ ಎಂದು ಕೂಗುತ್ತ ಹೋಗಿ ಅವಳನ್ನಪ್ಪಿಕೊಂಡುಬಿಟ್ಟಿದ್ದ ಬೀದಿ ಬಾಗಿಲಲ್ಲೇ..!

ಸುಬ್ಬತ್ತೆ ಬಂದಳೆಂದರೆ ಮಾದೇಶನಿಗೆ ಎಲ್ಲಿಲ್ಲದ ಉತ್ಸಾಹ, ಹಿಗ್ಗು.. ನಾಲ್ಕು ಜನ ತಮ್ಮಂದಿರಿದ್ದರು ಅವಳಿಗೆ ಈ ಕೊನೆ ತಮ್ಮನ ಮೇಲೆ ಅದೇನೊ ಅತಿ ಪ್ರೀತಿ.. ಅವನ ಮಕ್ಕಳ ಮೇಲೂ ಅದೇ ಅಕ್ಕರಾಸ್ತೆ – ಅದರಲ್ಲೂ ಮಾದೇಶನ ಮೇಲೆ. ಊರಿಗೆ ಬಂದಾಗೆಲ್ಲ ಕನಿಷ್ಠ ಹತ್ತದಿನೈದು ದಿನವಾದರೂ ಇದ್ದು ಹೋಗುವ ಅಭ್ಯಾಸವಿಟ್ಟುಕೊಂಡವಳು ಹಾಗೆ ಬರುವಾಗ ಎಂದೂ ಬರಿಗೈಯಲ್ಲಿ ಬಂದವಳಲ್ಲ. ಬೀಸುಗಲ್ಲಲ್ಲಿ, ಒರಳಿನಲ್ಲಿ ತಾನೇ ಕೈಯಾರೆ ಬೀಜ ಅರೆದು ಹಿಂಡಿ ತೆಗೆದ ಕೈಯೆಣ್ಣೆಯನ್ನೊ, ದಮ್ಮಿನಿಂದ ನರಳುತ್ತಿದ್ದರು ಕೆಮ್ಮುತ್ತಲೇ ಮಾಡಿಕೊಂಡ ಕಾರದ ಪುಡಿ, ಸಾಂಬಾರು ಪುಡಿಗಳನ್ನೊ, ವಾರಗಟ್ಟಲೆ ಎದ್ದುಬಿದ್ದು ಮಾಡಿಕೊಂಡು ಒಣಗಿಸಿಟ್ಟುಕೊಂಡ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿಗಳನ್ನೊ ಜತೆಗೆ ಹೊತ್ತುಕೊಂಡೆ ಬರುವುದು. ಬಂದವಳು ಅಷ್ಟೇ, ಒಂದರೆಗಳಿಗೆಯೂ ಸುಮ್ಮನಿರುವ ಜೀವವಲ್ಲ ಅವಳದು.. ಒಮ್ಮೆಯೂ ನಿಂತ ಕಡೆ ನಿಲ್ಲದೆ, ಕೂತ ಕಡೆ ಕೂರದೆ ಏನಾದರೂ ಕೆಲಸ ಮಾಡಿಕೊಂಡೆ ಇರುತ್ತಾಳೆ – ಅಡಿಗೆ ಮನೆ, ಬಚ್ಚಲು ಮನೆ, ಹಿತ್ತಲು, ದೇವರ ಮನೆ, ಹೊರಗಿನಂಗಳ, ಬಾಗಿಲೆದುರಿನ ರಂಗೋಲಿ – ಹೀಗೆ ಎಲ್ಲಿ ಕೈಯಾಡಿಸಳೆಂದು ಹೇಳಲೆ ಆಗದಷ್ಟು ಅಗಾಧ ವ್ಯಾಪ್ತಿಯ ಕಾರ್ಯ ಕ್ಷೇತ್ರ ಅವಳದು. ಅದಕ್ಕೆಂದೆ, ಅವಳು ಬಂದಿಳಿದಳೆಂದರೆ ಚಂದ್ರವ್ವನಿಗೆ ಒಂದು ರೀತಿ ಪುಲ್ ಟೈಂ ರಜೆ ಸಿಕ್ಕಿದ ಹಾಗೆ.. ಅವಳಿಗೆ ಯಾವ ಕೆಲಸಕ್ಕೂ ಕೈ ಹಾಕ ಬಿಡದೆ ಎಲ್ಲವನ್ನು ತಾನೇ ಮಾಡಿಕೊಂಡು, ಒಂದು ರೀತಿಯಲ್ಲಿ ಅಲ್ಲಿರುವವರೆಗೂ ಉಂಡ ಯಾವ ಅನ್ನದ ಋಣವು ಮೈಗೆ ಹತ್ತಿಕೊಳ್ಳದ ಹಾಗೆ, ಇರುವಾಗಲೇ ಚುಕ್ತಾ ಮಾಡಿದ್ದೂ ಅಲ್ಲದೆ ಅವರಿಗೇ ಇನ್ನಷ್ಟು ಹೊರೆಸಿ ಹೋಗಿಬಿಡುತ್ತಾಳೆ.. ಅದರಿಂದಲೊ ಏನೋ ಈ ವಯಸಲ್ಲೂ ಒಳ್ಳೆ ಗಟ್ಟಿಮುಟ್ಟಾಗಿ ಚಟುವಟಿಕೆಯಿಂದ ಇರಲು ಅವಳಿಗೆ ಸಾಧ್ಯವಾಗಿರುವುದು..

ಗಂಡನೆಂಬ ಪ್ರಾಣಿ ಅವಳ ಬದುಕಿನ ಪುಟಗಳಿಂದ ಮಾಯವಾಗಿ ಅದೆಷ್ಟು ದಶಕಗಳಾದವೊ ಏನೋ ? ಮಾದೇಶನಂತೂ ಹುಟ್ಟಿದಾಗಿನಿಂದಲು ನೋಡಿದ್ದು ಅವಳೊಬ್ಬಳನ್ನು ಮಾತ್ರವೇ. ಮದುವೆಯಾದ ಹೆಣ್ಣು ಮಗಳು ಮತ್ತು ಅಳಿಯ ಜತೆಗೆ ಇದ್ದು ವರ್ಷಾಂತರಗಳಿಂದಲು ಅವರ ಮತ್ತವರ ಮಕ್ಕಳ ಸೇವೆಮಾಡಿಕೊಂಡೆ ಸವೆದ ಜೀವ ಅವಳದು. ಅದೇನಾಯಿತೋ ಏನೋ , ತೀರಾ ಈಚೆಗೆ ಇದ್ದಕ್ಕಿದ್ದಂತೆ ಏನೋ ಮನಸ್ತಾಪವಾಗಿ ಮೊದಲು ಅವರೊಡನೆ ಮಾತು ಬಿಟ್ಟವಳು, ಆಮೇಲೆ ಇದ್ದ ಮನೆಗೆ ಒಂದು ಅಡ್ಡಗೋಡೆ ಏರಿಸಿ ಎರಡು ಭಾಗ ಮಾಡಿ ತಾನೇ ಬೇರೆ ಒಲೆ ಹಚ್ಚಿಕೊಂಡು ಬೇಯಿಸಿಕೊಂಡು ತಿನ್ನತೊಡಗಿದ್ದಳು.. ಅಷ್ಟೆಲ್ಲ ಅಕ್ಕರಾಸ್ತೆಯಿಂದ ಮಾಡಿಕೊಟ್ಟು ಹಚ್ಚಿಕೊಳ್ಳುವ ಅವಳು, ಅದೇಕೋ ದ್ವೇಷ, ಜಿದ್ದಿನ ವಿಷಯಕ್ಕೆ ಬಂದರೆ ಅಷ್ಟೇ ತೀವ್ರತೆಯಿಂದ ಸಾಧಿಸುವ ಛಲ, ಮನೋಭಾವದವಳು.. ಒಬ್ಬ ತಮ್ಮನೊಂದಿಗೆ ಹೀಗೆ ಯಾವುದೋ ವಿಷಯಕ್ಕೆ ಮಾತು ಬಿಟ್ಟವಳು, ಹದಿನೈದು ವರ್ಷ ಅವನ ಕಡೆ ಮುಖ ಕೂಡ ತಿರುಗಿಸದೆ ಹಗೆ ಸಾಧಿಸಿದ್ದಳು..!

ಪುಣ್ಯಕ್ಕೆ ಕೊನೆಯ ತಮ್ಮನ ಜೊತೆ ಮಾತ್ರ ಎಂದೂ ಯಾವ ರೀತಿಯ ಮನಸ್ತಾಪವೂ ಬಂದಿರಲಿಲ್ಲ. ಅವನಿಗೂ ಅಕ್ಕನ ಮೇಲೆ ಅತೀವ ಅಭಿಮಾನ, ಪ್ರೀತಿ. ವಾಪಸ್ಸು ಹೋಗದೆ ಜತೆಯಲ್ಲೇ ಇದ್ದುಬಿಡು ಎಂದು ಅವನೆಷ್ಟು ಒತ್ತಾಯಿಸಿದರು ಒಂದೆರಡು ವಾರಕ್ಕಿಂತ ಹೆಚ್ಚು ಎಂದೂ ನಿಂತಿಲ್ಲ.. ಆದರೆ ಎರಡು ಮೂರು ತಿಂಗಳಿಗೊಮ್ಮೆ ಮಾತ್ರ ಬಂದು ಹೋಗುತ್ತಾಳೆ. ಹೀಗಾಗಿ ಅವರಿಬ್ಬರ ನಡುವಿನ ಬಂಧ ಗಟ್ಟಿಯಾಗಿಯೇ ಉಳಿದುಕೊಂಡಿದೆ.. ಹೋಗುವಾಗ ಅಷ್ಟೋ ಇಷ್ಟೋ ಕಾಸು ಅವಳ ಕೈಗೆ ತುರುಕಲು ಯತ್ನಿಸಿದರು, ಕಷ್ಟ ಪಟ್ಟು ದುಡಿದು ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಳ್ಳುತ್ತಿರುವ ತಮ್ಮನಿಗೆ ತೊಡಕು ಮಾಡಲಿಚ್ಚಿಸದೆ ನಯವಾಗಿ ನಿರಾಕರಿಸಿ ಸಾಗುತ್ತಾಳೆ. ಒಂದು ವೇಳೆ ಬಲವಂತದಿಂದ ಹಬ್ಬ ಹರಿದಿನ ಎಂದು ಕೈಗೆ ತುರುಕಿದರು, ಆ ದುಡ್ಡಲ್ಲಿ ಮುಂದಿನ ಸಾರಿಗೆ ಬರುವಾಗ ಮಾದೇಶನಿಗೊಂದು ಜೊತೆ ಬಟ್ಟೆಯನ್ನೂ ಅಥವಾ ಮನೆಗೆ ಬೇಕಾದ ಏನಾದರು ಸಾಮಾನನ್ನು ತಂದು ಹಾಕಿ ಕೈ ತೊಳೆದುಕೊಂಡು ಬಿಡುತ್ತಾಳೆ. ಹಾಗೆ ಏನೇನೊ ತಂದು ಕೊಡುತ್ತಾಳೆಂದೆ ಮಾದೇಶನಿಗು ಅವಳೆಂದರೆ ಅಚ್ಚುಮೆಚ್ಚು..

ಸೋಜಿಗವೆಂದರೆ ಗಂಡ ಹೋದ ಮೇಲೆ ಬಿಟ್ಟು ಹೋದ ಆ ನಾಡುಹೆಂಚಿನ ಮುರುಕಲು ಮನೆಯನ್ನು ಬಿಟ್ಟರೆ ಮತ್ಯಾವ ಆಸ್ತಿಯೂ ಅವಳಲಿಲ್ಲ.. ಆಸರೆಯಾಗಬಹುದಿದ್ದ ಮಗಳು ಅಳಿಯನ ಜೊತೆ ಮನಸ್ತಾಪ ಕಟ್ಟಿಕೊಂಡು ದೂರ ಉಳಿದಿದ್ದಾಗಿದೆ.. ಹೀಗಾಗಿ ಹೊಟ್ಟೆಪಾಡಿಗೆ ಏನಾದರು ಮಾಡಲೇಬೇಕು.. ಆದರೆ ಕೂಲಿನಾಲಿ ಮಾಡಿಕೊಂಡು ಬದುಕುವ ಜಾಯಮಾನ ಅವಳದಲ್ಲ. ಅದಕ್ಕೆ ತಾನೇ ದಿನಾ ಚಿಪ್ಪಿನ ಇಡ್ಲಿ, ವಡೆ, ದೋಸೆ ಮಾಡಿಕೊಂಡು ಕುಕ್ಕೆಯೊಂದರಲ್ಲಿ ಇಟ್ಟುಕೊಂಡು ಹೊಳೆ ಮಾದಿಗರ ಕೇರಿಗಳಲ್ಲಿ, ಹೊಲಗದ್ದೆಗಳಲ್ಲಿ ಮಾರಿ ಬರುತ್ತಾಳೆ.. ಊರಿಗೆ ಬಂದಾಗ ಅವಳ ಕೈನ ಅದೇ ತಿಂಡಿ ತಿಂದು ಅಭ್ಯಾಸವಾದ ಮಾದೇಶನಿಗೆ ಅವಳ ಕೈಯೂಟವೆಂದರೆ ತೀರಾ ಅಚ್ಚುಮೆಚ್ಚು.. ರುಚಿರುಚಿಯಾಗಿ ಮಾಡಿ ಬಡಿಸುವುದಲ್ಲದೆ ಕೂತು ತಿನ್ನಿಸುತ್ತಾಳೆ.. ಇದೆಲ್ಲಾ ಹಿನ್ನಲೆಯಲ್ಲೇ, ಅವಳನ್ನು ಕಂಡಕೂಡಲೆ ಕೈಲಿದ್ದ ಪಟವನ್ನು ಲೆಕ್ಕಿಸದೆ ಎದ್ದುಬಿದ್ದು ಓಡಿ ಬಂದು ಅವಳನ್ನು ತಬ್ಬಿಕೊಂಡಿದ್ದ . ಅವನನ್ನು ಕಂಡೊಡನೆ ‘ಮಾದೇಸಾ…’ ಎಂದು ಹೆಚ್ಚು ಕಮ್ಮಿ ಅಷ್ಟೇ ಕಕ್ಕುಲತೆಯಿಂದ ಬರಮಾಡಿಕೊಂಡ ಸುಬ್ಬತ್ತೆ, ತಬ್ಬಿಹಿಡಿದು ನಿಂತವನನ್ನು ಹಾಗೆ ಬಿಡದೆ ಎತ್ತಿ ಕಂಕುಳಿಗೇರಿಸಿಕೊಂಡೆ ಮನೆಯೊಳಗೆ ನಡೆದಿದ್ದಳು. ನಡೆಯುತ್ತಲೆ ಆಗಲೆ ಅವನ ಕೈಗೊಂದು ಬಾಳೆ ಹಣ್ಣು ಮತ್ತೊಂದು ಎಂಟಾಣಿ ಪಾವಲಿಯೂ ಭಕ್ಷೀಸಾಗಿ ಸಂದಾಯವಾಗಿ ಹೋಗಿತ್ತು. ಹಾಳು ಮೂಳು ತಿಂದಾರೆಂದು ಮನೆಯಲ್ಲಿ ಚಿಲ್ಲರೆ ಕಾಸು ಕೊಡುತ್ತಿರಲಿಲ್ಲವಾಗಿ, ಅವಳು ಕೊಡುವ ಈ ಭಕ್ಷೀಸು ಹಬ್ಬದೂಟವಿದ್ದಂತೆ ಮಾದೇಶನಿಗೆ. ಕಾಸು ಕೈ ಸೇರಿದ್ದೇ ತಡ ಅವಳ ಸೊಂಟದಿಂದ ಜಾರಿ ಅವಳ ಹತ್ತಿರವೇ ಇನ್ನೊಂದು ರೂಪಾಯಿ ಕೇಳಿ ಪಡೆದು ಓಡಿಹೋಗಿದ್ದ – ಮತ್ತೊಂದು ರೀಲು ಪಟ ಹಾರಿಸುವ ಮಾಂಜಾ ದಾರ ತರಲು..!

ಮಾದೇಶನಿಗೆ ಆವಳು ಪ್ರಿಯವಾಗಲು ಮತ್ತೊಂದು ಬಲವಾದ ಕಾರಣವೂ ಇತ್ತು.. ಮನೆಯಲ್ಲಿ ಅಪ್ಪ, ಅಮ್ಮ ಇಬ್ಬರೂ ತುಂಬಾ ಕಟ್ಟುನಿಟ್ಟು. ಅವನನ್ನು ಬೆಳೆಸುತ್ತಿರುವುದೆ ಒಂದು ಬಲವಾದ ಶಿಸ್ತಿನಿಂದ. ಆದರೆ ತುಡುಗು ಮನದ ಹುಡುಗ ಬುದ್ಧಿಯ ಮಾದೇಶನ ಚೆಲ್ಲಾಟದ ಸ್ವಭಾವಕ್ಕೆ ಅದು ಒಗ್ಗದ ವಿಷಯ.. ಹಾಗೆಂದು ಅನುಕರಿಸದೆ ಇರಲೂ ಸಾಧ್ಯವಿಲ್ಲ – ಅನುಕರಿಸುವಂತೆ ಮಾಡುವ ಪ್ರೇರಣೆಗೇನೊ ಎಂಬಂತೆ ಗೋಡೆಗೆ ನೇತುಹಾಕಿರುವ ಬಾರುಕೋಲು ಸದಾ ಎಚ್ಚರದಲ್ಲಿರಿಸಿರುತ್ತದೆ.. ಆದರೆ ಸುಬ್ಬತ್ತೆ ಮನೆಗೆ ಬಂದಾಗ ಮಾತ್ರ ಆ ಕೋಲಿಗೆ ಪೂರ್ಣ ರಜೆ..! ಅವಳೆಂದು ಅದರ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲ.. ‘ತುಂಟಾಟ ಹುಡುಗರು ಮಾಡದೆ ದೊಡ್ಡೊರಾ ಮಾಡ್ತಾರೆ ? ಅದಕ್ಕೆ ಮಕ್ಕಳಿಗೆಲ್ಲ ಈ ತರದ ಕೋಲಿನಲ್ಲಿ ಹೊಡೀತಾರೇನೊ ರಾಮಣ್ಣ ? ಎ ಚಂದ್ರೀ , ನೀನಾದರೂ ಹೆಣ್ಣೆಂಗಸು ತಡಿಬಾರದಾ ?’ ಎಂದು ಮಾದೇಶನ ಪರ ವಹಿಸಿ ಏಟು ಬೀಳುವುದನ್ನು ತಪ್ಪಿಸಿದ್ದಾಳೆ ಅನೇಕ ಸರಿ.. ಅವಳಿಗೆ ಗೊತ್ತಿಲ್ಲದ ವಿಷಯವೆಂದರೆ ಹೊಡೆಯುವ ವಿಷಯ ಬಂದಾಗ ರಾಮಣ್ಣನಿಗಿಂತ ‘ಚಂದ್ರಿಯೆ ಒಂದು ಕೈ ಮೇಲು’ ಎಂದು. ಈಗಲೂ ಮಸುಕಾಗಿ ಕಾಣುವ ಎಷ್ಟೋ ಬಾಸುಂಡೆಯ ಗುರುತುಗಳೆಲ್ಲ ಅವ್ವನ ಕಾಣಿಕೆಯೆ. ಪಾಪ ಅಪ್ಪನ ಅವನದೇ ಆದ ತಲೆ ಬಿಸಿಯಲ್ಲಿ ಅವನಿಗಿದಕ್ಕೆಲ್ಲ ವೇಳೆಯಾದರೂ ಇರುವುದೆಲ್ಲಿ ? ದಿನಕ್ಕೊಂದು ಸಾರಿಯಾದರೂ ಏನಾದರೂ ನೆಪದಲ್ಲಿ ವದೆ ತಿನ್ನುತ್ತಿದ್ದ ಮಾದೇಶನಿಗೆ ಸುಬ್ಬತ್ತೆ ಬಂದಾಗ ಮನೆಯೇ ಸ್ವರ್ಗ.. ಏನು ಮಾಡಿದರು ನಿಭಾಯಿಸಿಕೊಳ್ಳಬಹುದು ಅವಳ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡು… ಅದಕ್ಕೆ ಅವನಿಗೆ ಭಂಢ ಧೈರ್ಯ, ಅವಳಿದ್ದಾಗ ಏನು ಮಾಡಿದರೂ ನಡೆಯುತ್ತೆ ಎಂದು. ಅದನ್ನೆ ಚಾಣಾಕ್ಷತೆಯಿಂದ ಬಳಸಿಕೊಂಡು ಒಂದೆರಡು ಬಾರಿ ಬೇಕೆಂತಲೇ ಏನೋ ತರಲೆ ಮಾಡಿ ನಿಭಾಯಿಸಿಕೊಂಡಿದ್ದಾನೆ.. ಅವಳಿಗಂತು ಇವನೆಂದರೆ ಪ್ರಾಣಿ… ಎಲ್ಲಾದಕ್ಕೂ ಅವನಿಗೆ ಬೆಂಬಲ ನಿಂತು ತತಾಯ ಗತಾಯ ಅವನನ್ನು ರಕ್ಷಿಸಿಕೊಳ್ಳುತ್ತಾಳೆ..

ಅವಳು ತಂದಿದ್ದ ತಿಂಡಿಗೆಲ್ಲಾ ಕೈಯಾಡಿಸಿ ಜತೆಗೆ ಸ್ಕೂಲಿಗೆ ಸಂಬಂಧಿಸಿದಂತೆ ಏನೇನೊ ಪ್ರಶ್ನೆ ಕೇಳಿದ್ದ ದೊಡ್ಡಪ್ಪನಿಗೆ ಚುಟುಕಾಗಿ ಉತ್ತರಿಸಿ ಮತ್ತೆ ತಾನು ಕಂಬಕ್ಕೆ ಕಟ್ಟಿ ಬಂದಿದ್ದ ಗಾಳಿಪಟದ ಯೋಗಕ್ಷೇಮ ವಿಚಾರಿಸಿಕೊಳ್ಳಲು ಓಡಿದ್ದ.. ಅಲ್ಲಿಗೆ ಬರುವ ಹೊತ್ತಿಗೆ, ಪಟದ ದಾರ ಹಿಡಿದುಕೊಂಡು ಕಂಬದ ಹತ್ತಿರ ನಿಂತಿದ್ದ ಆಪ್ತ ಗೆಳೆಯ ಗೋಪಾಲ ಕಾಣಿಸಿದ್ದ…

” ಎಲ್ಲಿಗೆ ಹೋಗಿದ್ಯೊ ಪಟ ಬಿಟ್ಬಿಟ್ಟು? ಆಚೆಬೀದಿ ಗೋವಿಂದ ಪೋಟ್ ಹೊಡ್ಕೊಂಡು ಹೋಗೊದ್ರಲ್ಲಿದ್ದ, ನಾ ಬಂದು ಗದರಿಸಿ ಓಡಿಸ್ದೆ ” ಅಂದ..

” ಸಿಕ್ಲಿ ನನ್ಮಗ ವಿಚಾರಿಸಿಕೊಳ್ತೀನಿ ಗೋಪಾಲ, ಯಾಕೆ ಹೋದ್ಸಾರಿ ಕೊಟ್ಟಿದು ಸಾಕಾಗ್ಲಿಲ್ವಂತಾ ಗಲಿತಗಳು ? ‘

ಎಂದವನ ಮಾತಿಗೆ ನಕ್ಕು ‘ ಅದು ಹಾಳಾಗ್ಲಿ.. ನಾಳೆ ಪಟದ ಹಬ್ಬಕ್ಕೆ ಭೂತಯನ ಪಿಚ್ಚಲ್ಲಿ ‘ಪಟ ಹಾರಿಸೋ ಪಂಥ ‘ ಇದೆ.. ನಿಂದೂ ಹೇಗೂ ದೊಡ್ಡ ಪಟಾನು ಇದೆ, ಜೋರಾಗಿ ಹಾರ್ತಾನೂ ಇದೆ… ನೀನು ಬಾರೋ ?’ ಅಂದಿದ್ದ ಗೋಪಾಲ..

ಹಾಗೆಂದಿದ್ದೆ ತಡ ಆಸೆಯ ಹಕ್ಕಿ ಗರಿಗೆದರಿತು ಮಾದೇಶನಲ್ಲು – ನೂರಾರು ಪಟಗಳ ಮಧ್ಯದೆ ತನ್ನದು ಎತ್ತರಕ್ಕೆ ಹಾರಿ ಬಹುಮಾನ ಗಿಟ್ಟಿಸಿದರು ಗಿಟ್ಟಿಸಬಹುದೇನೊ..? ಆದರೆ ಹಿಂದೆಯೆ ತಟ್ಟನೆ ನನಪಾಗಿತ್ತು.. ಸ್ಕೂಲಿಗಂದು ರಜಾ ಇರಲಿಲ್ಲವಾಗಿ ‘ಹೋಗಬೇಕೆಂದರು ಆಗದು’ ಎಂದು..ಮನೆಯಲ್ಲಿ ‘ಜಪ್ಪಯ್ಯ’ ಎಂದು ಕುಣಿದಾಡಿದರು ರಜಾ ಹಾಕಲು ಬಿಡುವುದಿಲ್ಲ.. ‘ ಅಲ್ಲಿಗೆ ಹೋಗಲಾದರೂ ಹೇಗೆ ಸಾಧ್ಯಾ ?

‘ ಇಲ್ಲವೊ ಗೋಪಾಲ, ಸ್ಕೂಲಿದೆ , ಹಬ್ಬಕ್ಕೆ ರಜೆಯಿಲ್ಲ.. ಮನೇಲಿ ಬಿಡಲ್ಲ …’ ಎಂದ ಅಳು ಮುಖದಲ್ಲಿ..

ಅವನ ಮುಖವನ್ನೇ ಒಮ್ಮೆ ದಿಟ್ಟಿಸಿದ ಗೋಪಾಲ, ‘ ಈಗ್ಯಾಕೆ ಹೆದರ್ತೀಯೊ ? ಹೇಗಿದ್ರೂ ನಿಮ್ಮ ಸುಬ್ಬತ್ತೆ ಬಂದಿದಾರಲ್ಲ ? ಅವರ ಬೆನ್ನು ಹಿಡಿದು ಒಪ್ಪಿಸ್ಕೋ. ಆಮೇಲೆ ಇಬ್ರೂ ಜೊತೆಗೆ ಹೋಗಣ..’ ಎಂದಿದ್ದ..

ಮಾದೇಶನಿಗೆ ಅದು ಸರಿಯೆನಿಸಿತು.. ಸುಮ್ಮಸುಮ್ಮನೆ ಸ್ಕೂಲಿಗೆ ಚಕ್ಕರು ಹಾಕುತ್ತೇನೆಂದರೆ ಬಿಡುವುದಿಲ್ಲ ; ನಾಲ್ಕು ಬಿಗಿದು ಎಳೆದೊಯ್ಯುತ್ತಾರೆ.. ಇನ್ನು ಪಟ ಹಾರಿಸೋ ಸ್ಪರ್ಧೆಗೆ ಅಂದರೆ ಮಾತಾಡೊ ಹಾಗೆ ಇಲ್ಲ, ನಿಂತಲ್ಲೆ ಚರ್ಮಾ ಸುಲಿದರೂ ಸುಲಿದರೆ. ಆದರೆ ಸುಬ್ಬತ್ತೆ ಬಂದ ನೆಪ ಮಾಡ್ಕೊಂಡು ಸ್ಕೂಲು ಬೇಡ ಮನೇಲೆ ಇರ್ತೀನಿ ಅಂತ ಹಟ ಹಿಡಿದರೆ, ಅತ್ತೆ ಬಂದಿದ್ದಕ್ಕೋಸ್ಕರ ಹಾಗೆ ಮಾಡ್ತಾ ಇರೋದು ಅಂತ ಅನ್ಕೋತಾರೆ. ಅತ್ತೆ ಕೂಡ ಹಿಂದೆ ಮಾಡಿದ ಹಾಗೆ ‘ಬಾರು ಕೋಲು ಸೇವೆ’ ಯಿಂದ ‘ಬಚಾವ್’ ಮಾಡಿ, ‘ಹೋಗ್ಲಿ ಬಿಡೆ ಚಂದ್ರಿ.. ಒಂದು ದಿನ ತಾನೆ ? ಮಗು ಆಸೆ ಪಡ್ತಾ ಇದೆ, ಇವತ್ತೊಂದು ದಿನ ಮನೇಲಿರುತ್ತಂತೆ.. ಈಗಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಅದೇನು ಪಾಠ ಹೇಳ್ಕೊಡ್ತಾರೊ, ಇಲ್ಲ ಓದೊ ಕುಲುಮೆಲಿ ಹಾಕಿ ರುಬ್ತಾರೊ ಗೊತ್ತಾಗಲ್ಲ..ಮಕ್ಕಳು ಸ್ಕೂಲಿಗೆ ಹೋಗಕೆ ಹೆದರುತ್ವೆ…’ ಅಂತೆಲ್ಲ ಭಾಷಣ ಬಿಗಿದು ನನ್ನ ಪಾರ್ಟಿಗೆ ಸಪೋರ್ಟು ಮಾಡ್ತಾರೆ.. ಒಂದುವೇಳೆ ಒಂದೆರಡು ಮೂಗೇಟು ಬಿದ್ರೂ , ರಜಾ ಅಂತೂ ಸಿಗುತ್ತೆ…

ಹೀಗೆಲ್ಲ ಆಲೋಚಿಸಿದ ಮಾದೇಶ ಗೋಪಾಲನಿಗೆ, ‘ನಾ ಏನಾದ್ರೂ ನೆಪ ಹಾಕಿ ಬರ್ತೀನಿ… ಆಮೇಲೆ ಇಬ್ರೂ ಹೋಗಣ,,, ಈ ಪಟ ದಾರ ನಿನ್ಹತ್ರಾನೆ ಇರಲಿ , ನಾಳೆ ತೊಗೊಂಬಾ… ಅವರ ಕಣ್ಣೆದುರಿಗೆ ನಾ ತರಕೆ ಆಗೋದಿಲ್ಲ..’ ಎಂದು ಮತ್ತೆ ಮನೆ ಕಡೆ ಓಡಿದ್ದ. ನಾಳೆಗೆಂದು ಮಾಡಬೇಕಿದ್ದ ಕೆಲವು ಹೋಮ್ವರ್ಕುಗಳಿದ್ದವು – ಆದರೆ ಈ ನಿರ್ಧಾರಕ್ಕೆ ಬಂದ ಮೇಲೆ ಅವನ್ನೇನು ಮಾಡುವ ಅವಶ್ಯಕತೆ ಇಲ್ಲ ಅನಿಸಿತು. ತೆರೆದಿದ್ದ ಚೀಲವನ್ನು ಮತ್ತೆ ಮುಚ್ಚಿ ಬೇಗನೆ ನಿದ್ದೆ ಹೋಗಿದ್ದ. ಅಂದು ರಾತ್ರಿಯೆಲ್ಲ ಬರಿ ಸ್ಪರ್ಧೆಯ ಕನಸೆ..! ಹೋದ ಹಾಗೆ, ಗೆದ್ದ ಹಾಗೆ, ಬಹುಮಾನದ ದುಡ್ಡಿನ ಹಾರ ಹಾಕಿಕೊಂಡು ಕುಣಿದ ಹಾಗೆ…

ನೇಸರನೊಡಮೂಡಿ ಹುಲ್ಲುಗರಿಕೆಯ ಮೇಲಿನ ಇಬ್ಬನಿಯನ್ನು ಮುಟ್ಟಿ ಮೃದುವಾಗಿಸಿ, ಕರಗಿಸಿ ಎಬ್ಬಿಸುವ ಹೊತ್ತು.. ಚಂದ್ರವ್ವ ಮಗನ ಪಕ್ಕ ಕುಳಿತು ಆಗಲೆ ಎಬ್ಬಿಸಲಿಕ್ಕೆ ಸುಪ್ರಭಾತದ ಮಂತ್ರ ಆರಂಭಿಸಿಕೊಂಡಿದ್ದರು.. ‘ ಏಯ್ .. ಏಳೊ ಆಗಲೆ ಹೊತ್ತಾಯ್ತು ಸ್ಕೂಲಿಗೆ …. ಇವತ್ತು ಟೆಸ್ಟು ಬೇರೆ ಇದೆಯಂತೆ.. ಮೂರ್ಹೊತ್ತು ಆಟ ಆಟ ಅಂತ ಬುಕ್ಕು ಹಿಡಿದು ಓದಿದ್ದೆ ಇಲ್ಲ, ಅದೇನು ಕಡಿದು ಕಟ್ಟಿಹಾಕ್ತಿಯೊ ಟೆಸ್ಟಲ್ಲಿ..’ ಎಂದು ಅವನು ಬಹುತೇಕ ಮರೆತೇ ಹೋಗಿದ್ದ ಟೆಸ್ಟನ್ನು ನೆನಪಿಸುತ್ತಲೆ ಸಹಸ್ರನಾಮಾರ್ಚನೆ ಆರಂಭಿಸಿದ್ದರು.. ಪಟದ ಸ್ಪರ್ಧೆಗೆ ಎಂದುಕೊಂಡು ಗಾಢ ನಿದ್ದೆಯಲ್ಲೂ ಸ್ವಯಂಪ್ರೇರಿತನಾಗಿಯೆ ಅರ್ಧ ಆಗಲೆ ಎದ್ದಿದ್ದ ಮಾದೇಶನಿಗೆ ಹೋಮ್ವರ್ಕಿನ ಜತೆಗೆ ಟೆಸ್ಟು ಕೂಡ ಇದೆ ಎಂಬ ನೆನಪೋಲೆ ಕಿವಿಗೆ ಬೀಳುತ್ತಲೆ, ಎದೆ ಧಸಕ್ಕೆಂದಿತ್ತು.. ಇನ್ನೇನು ಮಾಡಿದರೂ ಸ್ಕೂಲಿಗೆ ಮಾತ್ರ ಹೋಗೋಕೆ ಸಾಧ್ಯವೇ ಇಲ್ಲಾ.. ಹೋಂವರ್ಕ್ ಮಾಡಿಲ್ಲ, ಟೆಸ್ಟಿನ ಬಗ್ಗೆ ನೆನಪೇ ಇರಲಿಲ್ಲ… ಆಬ್ಸೆಂಟ್ ಆಗಿಬಿಟ್ರೆ ಎರಡರಿಂದಲೂ ಬಚಾವು…!

ಹಾಗೆಂದುಕೊಳ್ಳುತ್ತಲೆ ‘ ಅವ್ವಾ ನಾ ಇವತ್ತು ಸ್ಕೂಲಿಗೆ ಹೋಗಲ್ಲ , ಮನೇಲೆ ಇರ್ತೀನಿ ಅತ್ತೆ ಜೊತೆ..’ ಎಂದ ರಾಗ ಎಳೆಯುತ್ತ..

‘ ಯಾಕೋ… ? ನೀನೇನು ಮನೆಲಿದ್ದು ಕಾರದಪುಡಿ, ಹಪ್ಪಳ, ಸಂಡಿಗೆ ಕರೀಬೇಕಿತ್ತಾ? ಎರಡು ಕೊಟ್ರೆ ದವಡೆ ಹಲ್ಲು ಮುರಿದು ಹೋಗಬೇಕು… ಎದ್ದು ಪಟಪಟಾ ಅಂತ ರೆಡಿ ಆಗ್ತಿಯೋ , ಇಲ್ಲಾ ದೊಣ್ಣೆ ಸೇವೆ ಆಗಬೇಕೋ ?’ ಎಂದು ನೇರ ಬೆದರಿಕೆಯ ಎಚ್ಚರಿಕೆ ನೀಡಿದರು.. ಆದರೆ ಅದಕ್ಕೆಲ್ಲ ಬಗ್ಗುವಂತ ಪರಿಸ್ಥಿತಿಯಿರಲಿಲ್ಲ ಅಂದು.. ಹೋಮ್ವರ್ಕ್ ಮಾಡಿಲ್ಲ, ಟೆಸ್ಟ್ ಬೇರೆ, ಪಟದ ಹಬ್ಬದ ಸ್ಪರ್ಧೆ – ಹೇಗಾದರು ತಪ್ಪಿಸಿಕೊಳ್ಳುವ ದಾರಿ ಹುಡುಕಲೇ ಬೇಕಿತ್ತು…

‘ ಇಲ್ಲಾ, ಯಾಕೋ ಸ್ವಲ್ಪ ಹೊಟ್ಟೆ ನುಲುಸ್ತಾಯ್ತೆ ಕಣವ್ವಾ.. ಇವತ್ತೊಂದಿನ… ‘ದಮ್ಮಯ್ಯ’ ಅಂತೀನಿ.. ಮನ್ಲೆ ಇದ್ದು ರೆಸ್ಟ್ ತಕ್ಕಂತೀನಿ ‘ ಎಂದ ಸಾಧ್ಯವಾದಷ್ಟು ಮುಖ ಕಿವುಚಿ ಹೊಟ್ಟೆ ನೋವಿನೆಲ್ಲಾ ತೀವ್ರತೆ, ತೀಕ್ಷ್ಣತೆಯನ್ನು ಗಡಿಗೆ ಮುಖದ ಮೇಲೆ ತಂದು ಪ್ರದರ್ಶಿಸುವ ಕಲಾ ಪ್ರದರ್ಶನದಲ್ಲಿ ತೊಡಗಿಸಿಕೊಂಡ.. ಆದರೆ ಆ ಕಲಾವಿದನನ್ನೆ ಹೆತ್ತ ಮಹಾತಾಯಿ, ಆಕೆ… ಅಷ್ಟಕ್ಕೆಲ್ಲ ಬಿಡುವಳೆ ?

‘ ಎದ್ದು ಒಂದು ಗೋಲಿ ಸೋಡಾ ಕುಡುದ್ರೆ ಎಲ್ಲಾ ಸರಿಹೋಗುತ್ತೆ , ಏಳೊ ಮೇಲೆ.. ಗಂಜಿ ಮಾಡ್ಕೊಡ್ತೀನಿ ಕುಡಿದು ಹೋಗುವೆಯಂತೆ’ ಎಂದು ಗದರಿಕೊಂಡರು.. ಹೀಗೆ ಒಂದೈದು ಹತ್ತು ನಿಮಿಷ ನಡೆದ ತಿಕ್ಕಾಟ ಫಲ ಕೊಡದೆ , ಚಂದ್ರವ್ವನ ಸಹನೆಯ ನಾಮಾರ್ಚನೆಯ ಮಿತಿಯ ಗಡಿ ದಾಟಿಸಿ, ಅಡಿಗೆ ಮನೆಯಲಿದ್ದ ದೋಸೆ ತಿರುವುವ ಲೋಹದ ಕೈ ಹಿಡಿದುಕೊಂಡು ಆಯುಧಸಮೇತ ರಂಗಪ್ರವೇಶ ಮಾಡುವ ಹಂತಕ್ಕೆ ತಲುಪಿಸಿತ್ತು.. ಅದನ್ನು ನೋಡುತ್ತಿದ್ದಂತೆ ‘ಸದ್ಯ ! ಬಾರು ಕೋಲಿಲ್ಲ ಇವತ್ತು.. ದೋಸೆ ಮೊಗಚೋ ಕೈಯಲ್ಲಿ ಏಟು ಜೋರಾಗಿ ಬಿದ್ರು ಬರಿ ತೊಡೆ ಮೇಲೆ, ಕುಂಡಿ ಮೇಲೆ ತೊಗೊಂಡ್ಬಿಟ್ರೆ ಅಷ್ಟು ನೋವಾಗಲ್ಲ.. ಚೂಪು ತುದಿ ಕುಯ್ದೆ ಇರೋ ಹಾಗೆ ನೋಡ್ಕೊಂಡ್ರೆ ಸರಿ.. ಆದರೆ ಅತ್ತೆ ಯಾಕೆ ಇನ್ನೂ ಎಂಟ್ರಿ ಕೊಡಲಿಲ್ಲ? ಅವಳು ಬಂದ್ರೆ ಈ ಶುರುನ ಏಟೂ ತಪ್ಪುತ್ತೆ.. ಜಪ್ಪೊ ಮೊದಲೇ ಬೀದಿಗೆಲ್ಲ ಕೇಳೊ ಹಂಗೆ ಕಿರುಚ್ಕೊಂಡುಬಿಟ್ರೆ ಸಾಕು..’ ಎಂದು ಮಾನಸಿಕವಾಗಿ ತನ್ನ ಪಾತ್ರಾಭಿನಯಕ್ಕು ಸಿದ್ದವಾಗುತ್ತಿದ್ದ ಮಾದೇಶ.

ಅವನ ಅನಿಸಿಕೆಗೆ ಪೂರಕವಾಗಿ ಒಳಗೇನೊ ಕೆಲಸ ಮಾಡುತ್ತಿದ್ದ ಅತ್ತೆ ಅಲ್ಲಿಂದಲೆ, ‘ಗರಿ ಗರಿ ದೋಸೆ ಮಾಡ್ಕೊಡ್ತೀನಿ ಎದ್ದೇಳೋ ಮಾದೇಸಾ.. ಹಂಗೆಲ್ಲ ಸ್ಕೂಲು ತಪ್ಪಿಸ್ಕೊಬಾರದು ‘ ಅಂದ ಮಾತು ಕೇಳಿಸಿತು..

ಅಲ್ಲಿಂದ ಮುಂದಿನದೆಲ್ಲ ಗತ ಇತಿಹಾಸದ ಅದೇ ಸೀನುಗಳ ಪುನರಾವರ್ತನೆ… ಇನ್ನು ಸರಿಯಾಗಿ ನಾಲ್ಕು ಬೀಳುವ ತನಕ ಇದು ಮೇಲೇಳುವ ಜೀವವಲ್ಲ ಎಂದು ನುರಿತ ಅನುಭವದಿಂದಲೆ ಗ್ರಹಿಸಿದ್ದ ಚಂದ್ರವ್ವ, ಎಡದ ಕೈನಿಂದ ಅವನು ಹೊದ್ದಿದ್ದ ರಗ್ಗು ಕಿತ್ತೆಸೆದವರೇ, ಬಲದ ಕೈಲಿದ್ದ ದೋಸೆ ಮೊಗುಚಿನಿಂದ ಸಿಕ್ಕಸಿಕ್ಕ ಕಡೆ, ಎಲ್ಲೆಲ್ಲಿ ಚರ್ಮ ಕಣ್ಣಿಗೆ ಕಾಣಿಸುತ್ತದೆಯೊ ಅಲ್ಲೆಲ್ಲ ಮುಖ ಮೂತಿ ನೋಡದೆ ‘ಅಂಗ ಸೇವೆ’ ನಡೆಸತೊಡಗಿದ್ದರು..ಅಷ್ಟು ಬೇಗನೆ ಮಾತಿನ ‘ವಾಗ್ಯುದ್ಧ’ ಮುಗಿದು ಹೊಡೆಯುವ ‘ಆಯುಧ ಕಾಂಡ’ ಆರಂಭವಾಗುವುದೆಂದು ನಿರೀಕ್ಷಿಸಿರದಿದ್ದ ಮಾದೇಶನಿಗೆ, ಮೊದಲ ಹೊಡೆತ ಬೀಳುವ ಮೊದಲೇ, ಏಳು ಬೀದಿಗೆ ಕೇಳುವಷ್ಟು ಜೋರಾಗಿ ಕಿರುಚಬೇಕಿತ್ತೆಂದು ಏಟಿನ ಮಧ್ಯೆಯೆ ನೆನಪಾಗಿ, ‘ ಅಯ್ಯಪ್ಪಾ! ಅಯ್ಯಮ್ಮಾ! ಬೇಡ ವಡೀಬ್ಯಾಡ ಕಣವ್ವಾ ನೋಯ್ತದೆ.. ನಿನ್ ದಮ್ಮಯ್ಯ ಅಂತೀನಿ..ಇವತ್ತೊಂದಿನ ಬುಟ್ಬುಡು..’ ಎನ್ನುತ್ತಲೆ ತನ್ನ ದನಿ ಒಳಗಿರೊ ಅತ್ತೆಗೆ ಕೇಳಿಸಿತೋ ಇಲ್ಲವೊ ಎನ್ನುವ ಕುತೂಹಲಕ್ಕೆ ಬಾಗಿಲಿನತ್ತ ನೋಡತೊಡಗಿದ.

ಆ ಹೊತ್ತಿಗೆ ಸರಿಯಾಗಿ ಒಳಗಿಂದ ಬಂದ ಸುಬ್ಬತ್ತೆ, ಅವನ ನಿರೀಕ್ಷೆಗೆ ವ್ಯತಿರಿಕ್ತವಾಗಿ, ಚಂದ್ರವ್ವನನ್ನು ತಡೆಯದೆ ತಮ್ಮ ಪಾಡಿಗೆ ತಾವು ಹಾಸಿಗೆ, ಚಾಪೆ, ಬೆಡ್ ಷೀಟು ಮಡಿಸೆತ್ತಿಡುವ ಕಾಯಕದಲ್ಲಿ ನಿರತರಾದರು. ಇದರಿಂದ ಬೆಚ್ಚಿ ತನ್ನ ದನಿಯನ್ನು ಮತ್ತಷ್ಟು ತಾರಕಕ್ಕೆರಿಸಿದ ಮಾದೇಶನ ಹುನ್ನಾರವು ಫಲಕಾರಿಯಾಗದೆ, ಅಂದು ಚಂದ್ರವ್ವನಿಂದ ಮಾಮೂಲಿಗಿಂತ ಕೊಂಚ ‘ಹೆಚ್ಚೇ’ ಹೊಡೆತ ಬಿದ್ದಿತ್ತು.. ಏಟು ಬಿದ್ದ ಕಡೆಯೆಲ್ಲ ಬಾಸುಂಡೆಯಂತಾಗಿ ಕೆಂಪಗೆ ಮುಟ್ಟಿದರು ನೋಯುವಂತಾಗಿದ್ದರು ಹಲ್ಲುಮುಡಿ ಕಚ್ಚಿ ಸಹಿಸುತ್ತ ನಿರಂತರ ಆಕ್ರಂದನದಲ್ಲಿ ತೊಡಗಿದ್ದ ಆರೇಳು ನಿಮಿಷಗಳು ಗಂಟೆಗಳಂತೆ ಭಾಸವಾಗಿ ಕೊನೆಗೆ ಕೈಸೋತು ಬೇಸತ್ತು ಚಂದ್ರವ್ವನೆ ಹೊಡೆಯುವುದನ್ನು ನಿಲ್ಲಿಸಿ , ‘ ಈಗೆದ್ದು ರೆಡಿ ಆದೆ ಸರಿ ಇಲ್ದಿದ್ರೆ ತಿರುಗಾ ಬಂದು ಬುಲ್ಡೆಗೆ ಬಿಸಿನೀರು ಕಾಯಿಸ್ತೀನಿ ‘ ಎಂದು ಎಚ್ಚರಿಕೆ ಕೊಟ್ಟು ಒಳಗೆ ನಡೆದರು..

ಅಷ್ಟರಲ್ಲಿ ಅಲ್ಲಿದ್ದ ಸುಬ್ಬತ್ತೆಯೂ ಮಾತಾಡಿ, ‘ ಯಾಕೋ ಸ್ಕೂಲಿಗೆ ಹೋಗೋಕೆ ಇಷ್ಟು ಹಠ ಮಾಡ್ತೀ? ನೀನು ಓದಿ ದೊಡ್ಡೋನಾಗಿ ಆಫೀಸರಾಗೋಕೆ ಆಸೆಯಿಲ್ವೇನೊ ? ಏಳು, ಎದ್ದು ಬೇಗ ಹೊರಡು ‘ ಎಂದಾಗ ತನ್ನ ನಿರೀಕ್ಷೆಗೆ ವಿರುದ್ಧವಾಗಿ ವರ್ತಿಸಿದ ಅವಳ ಮೇಲೂ ಕೋಪ ಬಂದು ಬಿಕ್ಕುತ್ತಲೆ, ‘ನೋಡತ್ತೆ ಹ್ಯಾಗೆ ಹೊಡೆದಿದಾಳೆ.. ಬಾಸುಂಡೆ ಬರೊ ಹಾಗೆ ? ಈಗ ನಾ ಹೋಗಿ ಸ್ಕೂಲಲ್ಲಿ ಕೂರೋದಾದ್ರು ಹೇಗೆ ? ನೀನಾದ್ರೂ ಏಳತ್ತೆ ಇವತ್ತೊಂದು ದಿನ ನನ್ನ ಬಿಟ್ಬಿಡು ಅಂತ..ಈ ಬಾಸುಂಡೆ ಅಂಡೂರ್ಕೊಂಡು ನಾ ಹೆಂಗತ್ತೆ ಕೂರಲಿ ?’ ಎಂದ ದಯನೀಯವಾಗಿ ಕಾಣುವಂತೆ ನಟಿಸುತ್ತಾ.. ಬಾಸುಂಡೆಗಳೇನೊ ಬಲವಾಗಿಯೇ ಎದ್ದಿರುವುದು ಕಾಣಿಸುತ್ತಿತ್ತು..

‘ಹೋಗ್ಲಿಬಿಡೆ ಚಂದ್ರಿ, ಇವತ್ತೊಂದು ದಿನ..ಬಾಸುಂಡೆ ಬಂದು ಕೆಂಪಾಗಿಬಿಟ್ಟಿದೆ, ಸ್ವಲ್ಪ ಹರಳೆಣ್ಣೆನಾದ್ರು ಹಚ್ತೀನಿ.. ‘ ಅನ್ನುತ್ತಲೇ ಮಾದೇಶನತ್ತ ತಿರುಗಿದವರೆ, ‘ ತಿರುಗಾ ಹೀಗೆಲ್ಲ ಮಾಡ್ಬೇಡ ನೀನು ಗೊತ್ತಾಯ್ತಾ ?’ ಎಂದವರೇ ಎಣ್ಣೆ ಬಟ್ಟಲು ಹಿಡಿದು ಉರಿಯುತ್ತಿದ್ದ ಬಾಸುಂಡೆಗಳ ಮೇಲೆ ಸವರತೊಡಗಿದರು.

‘ನೀವು ಸುಮ್ಮನಿರಿ ಸುಬ್ಬಕ್ಕ ಮುದ್ದಿನಿಂದಲೆ ಇವನು ಅರ್ಧ ಹಾಳಾಗಿರೋದು… ‘ ಅಂದರೂ ಅರೆಬರೆ ಮನದಲ್ಲೆ ಒಪ್ಪಿಕೊಂಡ ಸುಳಿವಿತ್ತಂತೆ ತಮ್ಮ ಸಂಗ್ರಾಮಕ್ಕೆ ವಿರಾಮವಿತ್ತು ಅಡಿಗೆಮನೆಗೆ ನಡೆದರು..

ಉರಿಯುತ್ತಿದ್ದ ಗಾಯಕ್ಕೆ ಎಣ್ಣೆ ಹಚ್ಚುತ್ತಿದ್ದ ಸುಬ್ಬತ್ತೆ,’ನೋಯುತ್ತೇನೊ?’ ಅಂದಾಗ ‘ಯಾಕೆ ಇವತ್ತು ಸುಬ್ಬತ್ತೆ ನನ್ ಪಾರ್ಟಿಗೆ ಸೇರಲಿಲ್ಲ? ಹಾಕ್ಕೊಂಡು ರುಬ್ಬುತಾ ಇದ್ರೂ ಸುಮ್ನೆ ಇದ್ರಲ್ಲ?’ ಅಂದುಕೊಳ್ಳುತ್ತಿದ್ದವನು ‘ಹೌದು’ ಅನ್ನುವಂತೆ ತಲೆಯಾಡಿಸಿದ. ನಿಜಕ್ಕೂ ನೋವು ಹೆಚ್ಚಾಗೆ ಇತ್ತು.

‘ಹರಳೆಣ್ಣೆ ಅರ್ಧ ಗಂಟೆಲಿ ನೋವು ಕಮ್ಮಿ ಮಾಡುತ್ತೆ.. ಇನ್ಮೇಲೆ ಹೀಗೆಲ್ಲ ಮಾಡ್ಬೇಡ …’ ಎಂದವಳೆ ಎದ್ದುಹೋದಳು ಸುಬ್ಬತ್ತೆ..

ಕೊರೆಯುತ್ತಿದ್ದ ಗೋದ್ರೆಜ್ ಸ್ಟೀಲು ಕುರ್ಚಿಯ ಮೇಲೊಂದು ಬೆಡ್ ಶೀಟ್ ಹಾಕಿ ಕೂತುಕೊಂಡವನೆ, ‘ ಇನ್ನು ಮನೆಯಿಂದ ಯಾವ
ನೆಪ ಹುಡುಕಿ ಹೊರಗೆ ಹೋಗಬಹುದು ? ತಡವಾಗದ ಹಾಗೆ ಪಟ ಹಾರಿಸೊ ಸ್ಪರ್ಧೆಯ ಜಾಗಕ್ಕೆ ಹೋಗಬೇಕಾದರೆ ಹೇಗೆ ಕಾರಣ ಹೇಳೋದು ? ‘ ಎನ್ನುವ ಅಲೋಚನೆ , ಅನ್ವೇಷಣೆಯಲ್ಲಿ ತೊಡಗಿದ..

‘ನಾ ಗೋಪಾಲನ ಮನೆಗೆ ಹೋಗಿ ಬರ್ತೀನಿ.. ಹೋಮ್ವರ್ಕ್ ಮಾಡಕೆ ಗೊತ್ತಾಗ್ತಿಲ್ಲ.. ಗೋಪಾಲನ ಅಕ್ಕನ ಹತ್ರ ಹೇಳಿಸ್ಕೊಂಡು ಮಾಡಿ ತರ್ತೀನಿ…’ ಅಂದ್ರೆ ಅವ್ವ ಕೂಗಾಡದೆ ಕಳಿಸ್ತಾಳೇನೊ ? ಅಂದುಕೊಳ್ಳುತ್ತ ಎಣ್ಣೆ ಹಾಕಿದ್ದ ಬಾಸುಂಡೆಗಳನ್ನು ಮೆಲುವಾಗಿ ಸವರಿಕೊಳ್ಳತೊಡಗಿದ ಮಾದೇಶ..

ಅಂದು ಮಧ್ಯಾಹ್ನ ಅಡಿಗೆ ಮನೆಯಲ್ಲಿ ಪಾತ್ರೆ ತಿರುವುತ್ತಿದ್ದ ಚಂದ್ರವ್ವನತ್ತ ನೋಡುತ್ತ ಸುಬ್ಬತ್ತೆ, ‘ ಹೊಡೆಯುವಾಗ ಮುಖಾಮೂತಿ ನೋಡದೆ ಚಚ್ಚಬಾರದೆ ಚಂದ್ರಿ.. ಸ್ವಲ್ಪ ಹುಷಾರು ಹೆಚ್ಚು ಕಮ್ಮಿಯಾದರೆ ನಾವೇ ನೋಡ್ಬೇಕಲ್ವಾ ? ‘ 

‘ಹೂ ಸುಬ್ಬಕ್ಕಾ..ಆದರೆ ನನಗೊಂದು ಕುತೂಹಲ..’

‘ಏನು ?’

‘ಅಲ್ಲಾ…ಯಾವಾಗಲೂ ಅವನ ಪಕ್ಷನೆ ವಹಿಸ್ಕೊಂಡು ಅವನಿಗೆ ಒಂದು ಚೂರು ಏಟು ಬೀಳದ ಹಾಗೆ ನೋಡ್ಕೊತಿದ್ರಿ..ಇವತ್ಯಾಕೆ ಹೊಡಿತಿದ್ರು ಸುಮ್ಮನಿದ್ರಿ ಅಂತ ಆಶ್ಚರ್ಯ ಆಯ್ತು..’

‘ ಅದರಲ್ಲೇನೆ ಚಂದ್ರಿ ವಿಶೇಷ ? ನನ್ನ ಮೂರು ಜನ ಮೊಮ್ಮಕ್ಕಳು ಸ್ಕೂಲು ಓದು ಅಂತ ಹೋಗದೆ ಪೋಲಿ ಬಿದ್ದು ಹಾಳಾಗಿದ್ದು ನಾನೇ ನೋಡಲಿಲ್ವಾ ? ಮಾದೇಶ ಚುರುಕು ಹುಡುಗ ಆದರೆ ಸ್ವಲ್ಪ ತುಂಟ ಅಷ್ಟೆ.. ಅವನಿಗೆ ನಾ ಎಲಾ ವಿಷಯಕ್ಕೂ ಅವನ ಹಿಂದೇನೆ ಇರ್ತೀನಿ ಅನ್ನೊ ಭ್ರಮೆ ಇರಬಾರದು ಅಲ್ವಾ ? ಮುದ್ದು ಊಟ ತಿಂಡಿಲಿ, ಆದ್ರೆ ಓದೋ ವಿಷಯದಲ್ಲಿ ಅಲ್ಲಾ ಅಂತ ಗೊತ್ತಾಗಲಿ ಅನ್ಕೊಂಡು , ಕರುಳು ‘ಚುರ್ರ್ ‘ ಅಂದ್ರು ಬಲವಂತವಾಗಿ ತಡ್ಕೊಂಡು ಸುಮ್ಮನಿದ್ದೆ… ಇಲ್ದಿದ್ರೆ ಮುಂದೆ ಬಗ್ಸೋಕಾಗುತ್ತೇನೆ ಅವನ್ನಾ ?’

‘ಸುಬ್ಬಕ್ಕಾ.. ನಾ ನಿಮ್ಮನ್ನ ಏನೊ ಅನ್ಕೊಂಡಿದ್ದೆ … ನೀವು ಓದಲ್ಲ, ಬರೆಯಲ್ಲ ನಿಮಗೇನು ಗೊತ್ತಾಗುತ್ತೆ ಅಂತ..ಆದರೆ ನೀವು ನನಗಿಂತ ಜೋರಿದೀರಿ ಬಿಡಿ’ ಎಂದು ನಕ್ಕಳು ಚಂದ್ರವ್ವ..

ಆ ನಗೆಗೆ ತನ್ನ ನಗೆ ಜೋಡಿಸಲೆಂದು ತಿರುಗಿದ ಸುಬ್ಬತ್ತೆಯ ತಲೆಯ ಮೇಲೆ ಬಿಸಿಲು ಮಚ್ಚಿನ ಸಂದಿಯಿಂದ ಹಾದು ಬಂದ ಬಿಸಿಲು ಕೋಲೊಂದು ಹಾಯ್ದು , ಅವಳ ನರೆತ ಕೂದಲಿನ ಬೆಳ್ಳಿ ರೇಖೆಯನ್ನು ಅರೆಕ್ಷಣದ ಮಟ್ಟಿಗೆ ಫಳಗುಟ್ಟಿಸಿತು – ಅವಳ ಮಾತಿನ ಹಿಂದಿನ ಅನುಭವಕ್ಕೆ ಸಾಕ್ಷಿ ಎನ್ನುವಂತೆ.. 

*************

00537. ಸಣ್ಣ ಕಥೆ :ಇಪ್ಪತ್ತೊಂದನೆ ಕೋಳಿ ಮೊಟ್ಟೆ…


00537. ಸಣ್ಣ ಕಥೆ :ಇಪ್ಪತ್ತೊಂದನೆ ಕೋಳಿ ಮೊಟ್ಟೆ…
_____________________________________

  
(picture from http://www.letstalkagric.com/wp-content/uploads/2016/01/hatching.jpg)

ಶಂಕರ ತೀರಾ ಖುಷಿಯಿಂದ ಬೀಗುತ್ತಿದ್ದ, ಅಕ್ಕಿಯ ಪುಟ್ಟಿಯೊಳಗಿನ ಅಕ್ಕಿಯ ಮೇಲೆ ಸಾಲಾಗಿ ಕೂತ ಸಣ್ಣ ಗಾತ್ರದ ನಾಟಿ ಕೋಳಿಮೊಟ್ಟೆಗಳನ್ನು ನೋಡುತ್ತ.. ಅರಳಿದ ಕಣ್ಣುಗಳಿಂದ ನೋಡುತ್ತಿದ್ದವನ ಅಚ್ಚರಿಗು ಕಾರಣವಿತ್ತು.. ಆಗಲೆ ಹತ್ತು ಬಾರಿ ಎಣಿಸಿ ನೋಡಿದ್ದಾನೆ – ಆಗಲೆ ಹದಿನಾರು ಮೊಟ್ಟೆಗಳು ಸೇರಿವೆ.. ಈ ಸಾರಿ ಸಾಕಿದ್ದು ಪರಮಾಯಿಶಿ ಕೋಳಿಯೆ ಇರಬೇಕು.. ಇನ್ನೂ ದಿನವೂ ಮೊಟ್ಟೆಯಿಕ್ಕುತ್ತಲೆ ಇದೆ.. ‘ಹೋದ ಸಾರಿಯ ಮೂದೇವಿ ಕೋಳಿ ಬರಿ ಏಳಕ್ಕೆ ಸುಸ್ತಾಗಿ ಹೋಗಿತ್ತು.. ಇದೇ ವಾಸಿ ಹದ್ನಾರಿಕ್ಕಿದ್ರು ಇನ್ನು ಜಡಿತಾನೆ ಇದೆ ಬಂಪರ ಲಾಟರಿ ತರ.. ಏನು ಇಪ್ಪತ್ತುಕ್ಕೂ ಹೋಗ್ಬಿಡುತ್ತೊ ಏನೊ ..’ ಎಂದು ಹಿರಿಹಿರಿ ಹಿಗ್ಗುತ್ತಿತ್ತು ಶಂಕರನ ಮನಸು..

ಕಳೆದ ಬಾರಿಯ ಆ ಕೋಳಿ ಸಿಕ್ಕಿದ್ದೆಲ್ಲಾ ತಿಂದು ಗಾತ್ರದಲ್ಲಿ ಯಮನಂತೆ ದಷ್ಟಪುಷ್ಟವಾಗಿದ್ದರು, ಮೊಟ್ಟೆಯಿಕ್ಕುವ ವಿಚಾರದಲ್ಲಿ ಮಾತ್ರ ತೀರಾ ಚೌಕಾಸಿ ಮಾಡಿ ನಿರಾಸೆ ಮಾಡಿಬಿಟ್ಟಿತ್ತು.. ಸಾಲದ್ದಕ್ಕೆ ಮೊಟ್ಟೆಯೊಡೆದು ಮರಿಯಾದಾಗ ಕನಿಷ್ಟ ಏಳಾದರು ಕೋಳಿ ಪುಳ್ಳೆಗಳು ಸಿಕ್ಕಿ, ಆ ಏಳೂ ದೊಡ್ಡವಾಗಿ ಇಡಿ ಕೇರಿಯ ತುಂಬಾ ಓಡಾಡಿಕೊಂಡಿರುವ ದೊಡ್ಡ ಗುಂಪನ್ನೆ ಈದುಬಿಟ್ಟಾಗ ಎರಡು ಮೂರು ಕೆಜಿ ತೂಗುವ ಪ್ರತಿ ಕೋಳಿಯು ಎಷ್ಟು ದುಡ್ಡು ತರಬಹುದೆನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದವನನ್ನು ಒಂದೇ ಏಟಿಗೆ ಮಕಾಡೆ ಮಲಗಿಸುವಂತೆ ಏಳರಲ್ಲಿ ಆರು ಪಿಳ್ಳೆಗಳು ತಿಂಗಳೊಪ್ಪತ್ತು ಬಾಳಾದೆ, ‘ಗೊಟಕ್’ ಎಂದು ಶಿವನ ಪಾದ ಸೇರಿಬಿಟ್ಟಿದ್ದವು.. ಮಿಕ್ಕಿದ್ದೊಂದು ಕೂಡ ಕುಂಟ ಕಾಲಿನದಾಗಿ ಹುಟ್ಟಿ ಕಾಲೆಳೆದುಕೊಂಡು ನಡೆಯುವುದನ್ನು ನೋಡುವುದೆ ಅಸಹ್ಯವೆನಿಸಿ, ಮೂಲೆ ಮನೆಯ ಪಾತಕ್ಕನಿಗೆ ಕೊಟ್ಟಷ್ಟು ಕಾಸಿಗೆ ಮಾರಿ ಕೈ ತೊಳೆದುಕೊಂಡಿದ್ದ..

ನೂರಾರು ಕೋಳಿಗಳ ಒಡೆಯನಾದಾಗ, ದಿನಕ್ಕೊಂದೆರಡು ಕೋಳಿಯಾದರೂ ಮಾರಿ ಬಂದ ಕಾಸಿಗೆ ಮೂರು ಹೊತ್ತು ಕಳ್ಳೆ ಮಿಠಾಯಿ, ಗಾಂಧಿ ಕೇಕು ತಿನ್ನಬೇಕೆಂದು ಕನಸು ಕಾಣುತ್ತಿದ್ದವನ ಆಸೆಯೆಲ್ಲ ಮಣ್ಣುಪಾಲಾಗಿ ಹೋಗಿತ್ತು. ನಯಾಪೈಸೆಗೂ ಅವ್ವನ ಹತ್ತಿರ ಗೋಗರೆಯುವ ಸ್ಥಿತಿ ಬಂದಾಗೆಲ್ಲ ಇದಕ್ಕೆಲ್ಲ ಕಾರಣ ಆ ಬದುಕದೆ ಹೋದ ಕೋಳಿಪಿಳ್ಳೆಗಳೆ ಎಂದೆನಿಸಿ ದಿನವೂ ಅವುಗಳಿಗೆ ಹಿಡಿಶಾಪ ಹಾಕಿಕೊಂಡೆ ಕಳೆದಿದ್ದ. ‘ಮೊಟ್ಟೆಗೆ ನಾಕಾಣಿ ಕೊಡ್ತೀನಿ, ನಾಟಿ ಕೋಳಿ ಮೊಟ್ಟೆ ನನಗೆ ಮಾರಿಬಿಡೊ…’ ಎಂದ ಸೀತಕ್ಕನಿಗು ‘ ಹೋಗಕ್ಕೊ, ಹೋಗು ನಾನೊಲ್ಲೆ… ದೊಡ್ಡದಾಗ್ಲಿ ಬೇಕಾದ್ರೆ ಆಮೇಲೆ ಇಡಿ ಕೋಳಿನೆ ಕೊಳ್ಳೊವಂತೆ…’ ಅಂತ ಧಿಮಾಕು ಮಾತು ಆಡಿದ್ದವನಿಗೆ ‘ಯಾಕ್ಲಾ ? ನಾ ಮೊಟ್ಟೆ ಕೇಳ್ದಾಗ್ಲೆ ಕೊಟ್ಟಿದ್ರೆ ಆಯ್ತಿರ್ಲಿಲ್ವಾ? ಈಗ ನಿಂಗು ಇಲ್ಲ ನಂಗು ಇಲ್ಲ ಅನ್ನೊ ಹಾಗೆ ‘ಗೊಟಕ್’ ಅನಿಸಿಬಿಟ್ಟೆಯಲ್ಲಾ?’ ಎಂದು ಹಂಗಿಸಿದಾಗಂತು ನಾಚಿಕೆ ಅವಮಾನದಿಂದ ತಲೆ ತಗ್ಗಿಸುವಂತಾಗಿ ವಾರಗಟ್ಟಲೆ ಅವಳ ಕಣ್ಣಿಗೇ ಬೀಳದಂತೆ ಅಡ್ಡಾಡಿದ್ದ.. ಆ ಕ್ಯಾಣಕ್ಕೆ ಅರ್ಧ, ಈ ಸಾರಿ ಎಲ್ಲೆಲ್ಲೊ ವಿಚಾರಿಸಿ ‘ಸ್ಪೆಷಲ್’ ಕೋಳಿಯನ್ನೆ ತಂದು ಸಾಕಿಕೊಂಡಿದ್ದ..!

ಆ ಹಿನ್ನಲೆಯಿಂದಲೆ ಈ ಬಾರಿ ಕೋಳಿಯ ಧಾರಾಳತನಕ್ಕೆ ಕುಣಿದು ಕುಪ್ಪಳಿಸುವಂತಾಗಿತ್ತು… ಸರಿಯಾದ ಹತ್ತು ಮೊಟ್ಟೆಯಿಕ್ಕಿದರು ಸಾಕು ಎಂದು ಎದುರು ನೋಡುತ್ತಿದ್ದವನಿಗೆ ಈ ಹುಲುಸಾದ ಫಸಲು ಕಂಡು ಈ ಬಾರಿ ಕನಿಷ್ಠ ಒಂದು ಹತ್ತಾದರು ಪುಳ್ಳೆಗಳು ಕಚ್ಚಿಕೊಳ್ಳಬಹುದೆಂದು ಭರವಸೆಯಾಗಿ ಮತ್ತೆ ನೂರಾರು ಕೋಳಿಗಳ ಒಡೆಯನಾದ ಕನಸು ಮತ್ತಷ್ಟು ಬಣ್ಣ ಹಚ್ಚಿಕೊಂಡು ಕಣ್ಮುಂದೆ ಕುಣಿಯತೊಡಗಿತು. ಈ ಹೊಸ ಕೋಳಿಯೇನು ಸಾಮಾನ್ಯದ್ದಾಗಿರಲಿಲ್ಲ… ದಿನವೂ ಬೆಳಗಿನ ಮೊಟ್ಟೆಯಿಕ್ಕುವ ಹೊತ್ತಿಗೆ ಸರಿಯಾಗಿ ಎಲ್ಲಿದ್ದರೂ, ತನ್ನ ಕುಕ್ಕೆಯ ಗೂಡಿನ ಹತ್ತಿರ ಬಂದು ಮೈಯೆಲ್ಲಾ ಮುದುಡಿಕೊಂಡು ತನ್ನನ್ನೆ ಕಂಬಳಿ ಹೊದ್ದಂತೆ ಕೂತುಕೊಂಡಿತೆಂದರೆ ತನ್ನ ಗುಂಪಿಗೆ ಇನ್ನೊಂದು ಮೊಟ್ಟೆ ಕೂಡಿತೆಂದೇ ಖಚಿತ ಶಂಕರನಿಗೆ – ಪಕ್ಕದಲ್ಲಿದ್ದ ಕುಕ್ಕೆಯನ್ನು ಅದರ ಮೇಲೆ ಕವುಚಿ ಹಾಕಿ, ಎದುರುಗಡೆ ಕುಕ್ಕುರುಗಾಲು ಹಾಕಿ ಕೂತುಬಿಡುತ್ತಿದ್ದ – ಅದರ ಕೆಲಸ ಮುಗಿಸಿದ ‘ಸಿಗ್ನಲ್’ ಕಾಯುತ್ತ.. ಇನ್ನೇನು ಮುಗಿಯಿತು, ಇನ್ನು ಮೊಟ್ಟೆಗಳನ್ನು ಇಕ್ಕುವುದಿಲ್ಲ ಎನ್ನುತ್ತಲೆ ಇಪ್ಪತ್ತೊಂದನೆ ಮೊಟ್ಟೆಯಿಕ್ಕಿದ ನಂತರವಷ್ಟೆ ಸುಮ್ಮನಾಯಿತು ಆ ಗತ್ತಿನ ಕೋಳಿ…!

ವಠಾರದ ಜಗುಲಿಯಿಂದ ದಿನವು ಈ ಕೋಳಿಯ ದಿನಚರಿಯನ್ನೆ ಗಮನಿಸುತ್ತಿದ್ದ ಸೀತಕ್ಕ, ‘ ಲೋ ಶಂಕ್ರಾ…ಈ ಸಾರಿನಾದ್ರೂ ನಾ ಹೇಳಿದ ಮಾತು ಕೇಳೊ… ಬೇಕಾದ್ರೆ ಮೊಟ್ಟೆಗೆ ಎಂಟಾಣಿ ಕೊಡ್ತೀನಿ.. ನನ್ನ ಮಗಳು ಬಸ್ರೊಸಗೆ, ಬಾಣಂತನಕ್ಕೆ ಅಂತ ಬಂದವ್ಳೆ.. ಅವಳಿಗೆ ನಾಡ್ಕೋಳಿ ಮೊಟ್ಟೆನೆ ಆಗ್ಬೇಕು, ಫಾರಂ ಕೋಳಿ ತೀರಾ ವಾಯು… ಹೋದ್ಸಾರಿ ತರ ಮಾಡ್ದೆ ಕೊಡೊ..’ ಅಂದಳು

ಹೋದ ಸಾರಿಯ ಅನುಭವದಿಂದ ಮೆತ್ತಗಾಗಿದ್ದ ಶಂಕರ, ಈ ಬಾರಿ ಯಾವುದೆ ಗತ್ತು ತೋರಿಸದ ಮಾಮೂಲಿ ದನಿಯಲ್ಲಿ, ‘ ಇಲ್ಲ ಕಣಕ್ಕ.. ನಾ ಎಲ್ಲಾ ಮರಿ ಮಾಡಿ ದೊಡ್ಡ ಕೋಳಿ ಗುಂಪು ಮಾಡಿ ಸಾಕ್ಬೇಕು ಅಂತ ಆಸೆ… ಇದ್ರಾಗು ಅದೆಷ್ಟು ಉಳಿತಾವೊ ಗೊತ್ತಿಲ್ಲ… ಬೇಡ ಕಣಕ್ಕ, ಇನ್ನೊಂದ್ ಸಾರಿ ನೋಡಾಣ..’ ಎಂದ

‘ ಅಯ್… ಅದ್ಯಕ್ಯಾಕ್ ಅಳ್ಮೋರೆ ಮಾಡ್ಕೊಂಡ್ ಒದಾಡ್ತಿಯೊ..? ನಾ ಏನು ಹಾಕಿದ್ದೆಲ್ಲ ಕೊಡು ಅಂತಾ ಕೇಳಿದ್ನಾ? ಹೆಂಗು ಇದು ಇಪ್ಪತ್ತೊಂದು ಮೊಟ್ಟೆ ಮಡಗೈತೆ.. ಹತ್ತು ಇಟ್ಕೊಂಡು ಮರಿ ಮಾಡ್ಕೊ, ಮಿಕ್ಕಿದ್ದು ನನಗೆ ಮಾರ್ಬಿಡು… ಅಲ್ಲಿಗೆ ಇಬ್ಬುರ್ದೂ ನಡ್ದಂಗಾಯ್ತಲ್ಲಾ..? ‘ ಎಂದು ಒಂದು ‘ಪ್ರಳಾಯಂತಕ’ ಐಡಿಯಾದ ಬೀಜ ಬಿತ್ತಿದಳು..

ಶಂಕರನಿಗೆ ‘ಹೌದಲ್ಲವಾ?’ ಅನಿಸಿ ಒಂದು ತರದ ಪ್ರಲೋಭನೆ ಶುರುವಾಯಿತು ಒಳಗೊಳಗೆ.. ಜತೆಗೆ ‘ಸೀತಕ್ಕ ಈಗಲೆ ಕಾಸು ಕೊಡ್ತಾಳೆ… ಪಿಳ್ಳೆನ ಬೆಳ್ಸಿ ದೊಡ್ಡದು ಮಾಡಿ ಮಾರೊತನಕ ಕಾಯೋ ಹಂಗಿರಲ್ಲ… ಹೇಗು ಒಂದಷ್ಟು ಮೊಟ್ಟೆ ಮರಿ ಆಗ್ದೇನು ಇರ್ಬೋದಲ್ವಾ? ಅದರ ಲೆಕ್ಕಾಚಾರದಲ್ಲೆ ಯಾಕೆ ಮಾರ್ಬಾರದು?’ ಅನಿಸಿ ಆಸೆಯ ಬತ್ತಿಗೆ ಎಣ್ಣೆ ಹಚ್ಚತೊಡಗಿತು. ಏನೇನನ್ನೊ ಯೋಚಿಸಿ, ಆಲೋಚಿಸಿ ಹಿಂದಿನ ಅನುಭವದಿಂದ ಎಷ್ಟು ಮೊಟ್ಟೆ ಮರಿಯಾಗದೆ ಹೋಗಬಹುದು ಅಥವಾ ‘ಗೊಟಕ್’ ಅಂದು ಬಿಡಬಹುದೆನ್ನುವ ‘ಮ್ಯಾಜಿಕ್ ಫಾರ್ಮೂಲ’ ದ ಲೆಕ್ಕಚಾರ ಹಾಕಿದವನೆ, ‘ನೋಡು ಸೀತಕ್ಕ ನೀ ಮಗಳ್ಗೆ ಅಂತ ಕೇಳ್ತಿದೀಯ ಹೇಗೆ ಇಲ್ಲಾ ಅಂತ ಹೇಳ್ಲಿ ? ಆದರೆ ಹತ್ತೆಲ್ಲ ಕೊಡಕಾಗಾಕಿಲ್ಲ… ಒಂದೈದು ಕೊಡ್ತೀನಿ ನೋಡು ಬೇಕಾದ್ರೆ… ಆದ್ರೆ ಅರವತು ಪೈಸಾದಂಗೆ ಮೂರು ರೂಪಾಯಿ ಕೊಡ್ಬೇಕು… ‘ ಅಂದ..

ನಾಟಿಕೋಳಿ ಮೊಟ್ಟೆ ಬೇಕಂದ್ರೂ ಅಂಗಡೀಲಿ ಸಿಗೊಲ್ಲ ಅಂತ ಗೊತ್ತಿದ್ದ ಸೀತಕ್ಕ ‘ ಆಗಲಿ’ ಅನ್ನುವಂತೆ ತಲೆಯಾಡಿಸಿದಳು.. ಮೂಲೆಯ ಕಾಕನ ಅಂಗಡಿಯಲ್ಲಿ ಫಾರಂಕೋಳಿ ಮೊಟ್ಟೆಯೊಂದಕ್ಕೆ ಐವತ್ತು ಪೈಸೆ ಅಂತ ಗೊತ್ತಿದ್ದ ಶಂಕರ ತಾನು ಅರವತ್ತು ಪೈಸೆಯ ಹಾಗೆ ಮಾರಿದ ಜಾಣತನಕ್ಕೆ ಒಳಗೊಳಗೆ ಖುಷಿಪಟ್ಟುಕೊಂಡಿದ್ದ… ಅದಾಗಲೆ ಅವನ ಮನದಲೊಂದು ಅದ್ಭುತ ಐಡಿಯಾ ಒಂದು ಮೂರ್ತ ರೂಪ ತಾಳುತ್ತಿತ್ತು… ‘ಹೇಗೂ ಫಾರಂ ಮೊಟ್ಟೆ ಐವತ್ತು ಪೈಸೆ… ಸೀತಕ್ಕ ಕೊಟ್ಟ ಕಾಸಲ್ಲಿ ಐದು ಫಾರಂ ಕೋಳಿ ಮೊಟ್ಟೆ ತಂದು ಮಿಕ್ಕಿದ ಮೊಟ್ಟೆಗಳ ಜತೆ ಮರಿಯಾಗೊ ಹಾಗೊ ಸೇರಿಸಿಬಿಟ್ಟರೆ, ಇಪ್ಪತ್ತೊಂದು ಮೊಟ್ಟೆನು ಉಳ್ಕೊಂಡ ಹಾಗಾಗುತ್ತೆ… ಸೀತಕ್ಕ ಕೊಟ್ಟಿರೊ ಲಾಭದ ಕಾಸಲ್ಲಿ ನಾ ಬೇಕಾದಷ್ಟು ಕಳ್ಳೆ ಮಿಠಾಯಿ, ಗಾಂಧಿ ಕೇಕು ತಗೊಂಡು ತಿನ್ಬೋದು… ಕೋಳಿಗೇನು ಗೊತ್ತಾಗುತ್ತೆ ಮೊಟ್ಟೆ ತನ್ನದಾ ಇಲ್ಲಾ ಫಾರಂದಾ ಅಂತ? ಕಾವು ಕೊಟ್ಟು ಮರಿ ಮಾಡುತ್ತೆ… ನಂಗೆ ಕಾಸು ಸಿಕ್ತೂ, ಕೋಳಿ ಮರೀನು ಉಳೀತು ‘.. ಅಂದುಕೊಂಡ ಹಾಗೆ ಐದು ಫಾರಂ ಮೊಟ್ಟೆ ತಂದು ಸೇರಿಸಿಯೂ ಬಿಟ್ಟಾ ಮೊಟ್ಟೆಯ ಪುಟ್ಟಿಗೆ.. ಅವತ್ತಿನ ಕಳ್ಳೆಮಿಠಾಯಿ ಯಾಕೊ ತುಂಬಾ ರುಚಿಯೆನಿಸಿತ್ತು ಶಂಕರನಿಗೆ..!

ಗುಟ್ಟಾಗಿಡಬೇಕೆಂದಿದ್ದರು ಹೆಂಗಸರ ಬಾಯಲ್ಲಿ ಗುಟ್ಟೆಲ್ಲಿ ನಿಲ್ಲುತ್ತದೆ ? ಅದು ಹೇಗೊ ಸೀತಕ್ಕನ ಬಾಯಿಂದ ನಾಟಿಮೊಟ್ಟೆ ಮಾರಿದ ವಿಷಯ ‘ಲೀಕ್’ ಆಗಿ ಹೋಗಿತ್ತು.. ಅದರ ಮುಂದಿನ ದಿನವೆ ಪಕ್ಕದ ಬೀದಿ ಮೀನಕ್ಕ ಗೋಲಿ ಆಡುತ್ತಿದ್ದವನನ್ನು ಹಿಡಿದು, ‘ ನಾ ಎಪ್ಪತ್ ಪೈಸಾ ಕೊಡ್ತೀನಿ ನಂಗೊಂದೈದು ಮೊಟ್ಟೆ ಕೊಡೊ ಶಂಕ್ರಾ..’ ಅಂದಾಗ ಹೇಗೂ ‘ಹೊಸ ಫಾರ್ಮುಲ’ ಇದೆಯಲ್ಲಾ ಅನಿಸಿ ಹಿಂದೆ ಮುಂದೆ ನೋಡದೆ ‘ಹೂಂ’ ಅಂದುಬಿಟ್ಟಿದ್ದ.. ಕಾಕನ ಅಂಗಡಿಗೆ ಹೋಗಿ ಮತ್ತೈದು ಮೊಟ್ಟೆ , ಮಿಠಾಯಿ ಕೊಳ್ಳುವಾಗ, ‘ಏನೊ ಶಂಕ್ರ ನೀನೆ ಕೋಳಿ ಸಾಕ್ತೀಯಾ ನನ್ಹತ್ರ ಮೊಟ್ಟೆ ತೊಗೋತೀಯಾ… ಏನ್ಸಮಾಚಾರ?’ ಎಂದು ಕೀಟಲೆ ಮಾಡಿದ್ದನ್ನು ಲಕ್ಷಿಸದೆ ಓಡಿಬಂದಿದ್ದ. ಅದೇ ಲಾಜಿಕ್ಕಿನಲ್ಲಿ ಬೀದಿ ಕೊನೆಯ ದೊಡ್ಡ ಮನೆಯ ಸಿಂಗಾರಮ್ಮ ಕೂಡ, ‘ನಂಗೊಂದೈದು ಕೋಡ್ತಿಯೇನೊ ಶಂಕ್ರಾ ? ಜಾಸ್ತಿ ಕಾಸು ಕೊಡ್ತೀನಿ’ ಅಂದಾಗ ಮಾತೆ ಆಡದ ಅಷ್ಟು ದೊಡ್ಡ ಮನೆಯವರು ಸ್ವತಃ ಮಾತನಾಡಿಸಿ ಕೇಳುವಾಗ ಇಲ್ಲಾ ಅನ್ನುವುದು ಹೇಗನಿಸಿ ‘ಪ್ರಸ್ಟೀಜಿಗೆ’ ಮತ್ತೈದು ಮೊಟ್ಟೆ ಮಾರಿ ಮತ್ತೆ ಕಾಕನ ಅಂಗಡಿಗೆ ಧಾಳಿಯಿಟ್ಟಿದ್ದ.. ಈಗ ಉಳಿಯುತ್ತಿದ್ದ ಹೆಚ್ಚಿನ ಕಾಸು ಮಿಠಾಯಿಗೆ ಹೋಗುವ ಬದಲು ದೀಪಾವಳಿಗೆ ಕೊಳ್ಳಬೇಕಾದ ಪಟಾಕಿಯ ಲೆಕ್ಕಕ್ಕೆ ಜಮೆಯಾಗತೊಡಗಿತ್ತು..!

ವಿಷಯ ಹಾಗು ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ ಅವ್ವನ ಕಿವಿಗು ಬಿದ್ದು, ‘ ಏನ್ಲಾ ಶಂಕ್ರಾ..? ಊರೋರ್ಗೆಲ್ಲ ನಾಟಿಕೋಳಿ ಮೊಟ್ಟೆ ಮಾರ್ತಿದಿಯಂತೆ ? ಬೇವರ್ಸಿ ನನ್ಮಗನೆ ದಿನಾ ನಿಂಗೆ ಉಣ್ಣಕಿಕ್ಕಿ ಸಾಕಿ ಸಲಹೋಳು ನಾನು… ಅಂತಾದ್ರಾಗೆ ಮನೆಗೆ ತೊಗೊಳವ್ವಾ ತಿನ್ಕೊ ಅಂತ ಒಂದೈದು ಮೊಟ್ಟೆ ಕೊಡದೆ ಊರೋರ್ಗೆಲ್ಲ ದಾನ ಮಾಡ್ಕೊಂಡು ಬಂದಿದೀಯಾ.. ಮನೆಗೆ ಮಾರಿ, ಪರರಿಗೆ ಉಪಕಾರಿ ಅನ್ನೊ ಹಾಗೆ… ‘ ಎಂದು ಉಗಿದು ಉಪ್ಪಿನಕಾಯಿ ಹಾಕಿದಾಗ , ಇವಳ ಕಿವಿಗೆ ಹೇಗೆ ಬಿತ್ತು ವಿಷಯ ಅನ್ನೊ ಗೊಂದಲದ ಜೊತೆಗೆ , ಕೇಳಿದಾಗೆಲ್ಲ ಕಾಸು ಕೊಡದಿದ್ರೂ ಈಗ ಮಾತ್ರ ತರ್ಲೆ ತೆಗೀತಿದಾಳೆ ಎಂದು ಸಿಟ್ಟೆದ್ದು, ‘ ..ಸುಮ್ನೆ ಏನು ಯಾರ್ಗೂ ಕೊಟ್ಟಿಲ್ಲ ತಿಳ್ಕೊ… ಎಲ್ಲಾ ಕಾಸ್ ಕೊಟ್ಟವ್ರೆ… ನೀನು ಕಾಸ್ ಕೊಡು ನಿಂಗೂ ಮಾರ್ತೀನಿ… ಬರಿ ಒಂದು ರೂಪಾಯಿ ಒಂದು ಮೊಟ್ಟೆಗೆ…’ ಎಂದು ನೇರ ವ್ಯವಹಾರದ ಮಾತಾಡಿದ್ದ ‘ ಅವ್ವಾ ಅಂತೇನಾದ್ರೂ ಡಿಸ್ಕೌಂಟ್ ಕೊಡ್ಬೇಕಾ? ಬ್ಯಾಡ್ವಾ? ‘ ಎಂಬ ಗೊಂದಲವನ್ನು ನಿವಾರಿಸಿಕೊಳ್ಳಲಾಗದೆ..

‘ ಅಯ್ಯೊ ಪಾಪಿ ನನ್ಮಗನೆ.. ನನ್ ಹತ್ರನೆ ಕಾಸ್ ಕೇಳ್ತೀಯಾ? ಅದೂ ಒಂದ್ರೂಪಾಯ್ಗೊಂದು ?’ ಎಂದು ಮೂಲೆಯಲಿದ್ದ ಬೆತ್ತದತ್ತ ಕೈ ಹಾಕಿದ್ದನ್ನು ಕಂಡೆ ಒಂದೆ ಏಟಿಗೆ ಬಾಗಿಲಿನತ್ತ ನೆಗೆದವನೆ, ‘ ಅಯ್ಯೊ.. ಸುಮ್ಕಿರು ಧೈಯ್ಯ ಮೆಟ್ಕೊಂಡಂಗೆ ಆಡ್ಬೇಡ… ನೀ ಕೊಡ ಕಾಸು ಪಟಾಕಿಗೆ ಇಟ್ಕೊತೀನಿ… ಹಬ್ಬಕ್ಕೆ ನಿನ್ಹತ್ರ ಕೇಳೋದಿಲ್ಲ …ಅದ್ಯಾಕೆ ಇಷ್ಟೊಂದು ಎಗರಾಡ್ತಿ..?’ ಎಂದ

‘ಹಾಳಾಗೋಗು ಬಡ್ಡಿಮಗನೆ… ಹೋಗ್ಲಿ ಎಂಟಾಣೆ ಕೊಡ್ತೀನಿ ..ಮಿಕ್ಕಿದ್ದೆಲ್ಲಾ ತತ್ತಾ…’ ಎಂದವಳ ಮಾತನ್ನೂ ಲೆಕ್ಕಿಸದೆ, ‘ ಹೋಗವ್ವೊ.. ಮಾಡಿ ಮನೆ ಸಿಂಗಾರವ್ವ ಒಂದ್ರುಪಾಯಿ ಕೊಡ್ತಾರಂತೆ.. ನೀನು ಅಷ್ಟೇ ಕೊಟ್ರೆ ಕೊಡ್ತೀನಿ.. ಇಲ್ದೆ ಇದ್ರೆ ಇಲ್ಲಾ’ ಎಂದವನೆ ಓದಿ ಹೋಗಿದ್ದ…

ಹಾಗೆ ಓಡಿ ಹೋದವನ ಮೇಲೆ ಮತ್ತಷ್ಟು ಹಿಡಿಶಾಪ ಹಾಕಿಕೊಂಡು ಸುಮ್ಮನಾಗಿದ್ದಳು ಚಿಂಕರವ್ವ, ಅದು ಬಗ್ಗುವ ಅಳಲ್ಲವೆಂದು ಗೊತ್ತಿದ್ದ ಕಾರಣ… ಶಂಕ್ರ ಅಲ್ಲಿಂದ ನೇರ ಹೋದವನೆ ಮತ್ತೈದು ಮೊಟ್ಟೆಯನ್ನು ಸಿಂಗಾರವ್ವನ ಮಡಿಲಿಗೆ ಹಾಕಿ ಯಥಾ ರೀತಿ ಇನ್ನೈದು ಬಿಳಿಯ ಮಿರಮಿರ ಮಿಂಚುವ ಫಾರಂ ಕೋಳಿ ಮೊಟ್ಟೆ ತಂದು ಸೇರಿಸಿದ.. ಅಲ್ಲಿಗೆ ಹಾಕಿದ ಇಪ್ಪತ್ತೊಂದು ಮೊಟ್ಟೆಯಲ್ಲಿ ಒಂದನ್ನುಳಿದು ಮಿಕ್ಕೆಲ್ಲಾ ಫಾರಂ ಕೋಳಿಯ ಮೊಟ್ಟೆಗಳಾಗಿಹೋಗಿತ್ತು.. ಅದನ್ನೆಲ್ಲ ಒಟ್ಟುಗೂಡಿಸಿ ಕೋಳಿ ಬಂದು ಕಾವು ಕೊಡುವ ಜಾಗದಲ್ಲಿರಿಸಿ ಎದುರು ಜಗುಲಿಯ ಮೇಲೆ ಹೋಗಿ ಕೂತವನೆ ಒಂದು ಕೈಲಿ ಚಡ್ಡಿ ಜೇಬಿನಲ್ಲಿ ಸೇರಿದ್ದ ಕಾಸನ್ನು ನೇವರಿಸುತ್ತ ಕೋಳಿ ಬಂದು ಕಾವು ಕೊಡುವುದೊ ಇಲ್ಲವೊ ಎಂದು ಆತಂಕದಿಂದ ಕಾಯುತ್ತಿದ್ದ.. ಎಲ್ಲಾ ಸರಿಯಾಗಿ ನಡೆದರೆ, ಇನ್ನು ಇಪ್ಪತ್ತೊಂದು ದಿನಕ್ಕೆ ಸರಿಯಾಗಿ ತಾಯಿಕೋಳಿಯ ಕಾವಿಗೆ ಎಲ್ಲಾ ಮೊಟ್ಟೆಯೊಡೆದು ಮರಿಯಾಗಿ ಈಚೆ ಬರಬೇಕು.. ಆ ಇಪ್ಪತ್ತೊಂದನ್ನು ಬೆಳೆಸಿದರೆ ಅದರಿಂದ ಇನ್ನಷ್ಟು ಮರಿಗಳಾಗಿ ಹಾಗೆ ಮುಂದುವರೆಸುತ್ತಾ ಹೋದರೆ ದೊಡ್ಡ ಕೋಳಿ ಫಾರಂ ಮಾಡುವಷ್ಟು ಕೋಳಿಗಳಾಗಿಬಿಡುತ್ತದೆ..! ಆದರೆ ಕೋಳಿಗೆ ಮೊಟ್ಟೆ ತನ್ನದಲ್ಲ ಅಂತ ಅನುಮಾನ ಬಂದುಬಿಟ್ರೆ ಕಾವು ಕೊಟ್ಟು ಮರಿ ಮಾಡುತ್ತಾ? ಫಾರಂ ಕೋಳಿ ಬಿಳಿ ಬಣ್ಣ ನೋಡೀನೂ ಕಾವು ಕೊಡುತ್ತಾ? ಎಂದೆಲ್ಲಾ ಅನುಮಾನದಲ್ಲಿ ದಿಟ್ಟಿಸುತ್ತಿದ್ದವನಿಗೆ ಕೊನೆಗು ಕೋಳಿ ಮಾಮೂಲಿನಂತೆ ಬಂದು ತನ್ನ ರೆಕ್ಕೆಗಳನ್ನು ಬಿಚ್ಚಿ ಅಷ್ಟಗಲಕ್ಕೂ ಹರವಿಕೊಂಡು ಒಂದು ಮೊಟ್ಟೆಯೂ ಹೊರಗೆ ಕಾಣದಂತೆ, ಕಾವು ಕೊಡಲು ಕುಳಿತಾಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದ… ಅಲ್ಲಿಂದಾಚೆಗೆ ದಿನವು ಆಗ್ಗಾಗ್ಗೆ ಬಂದು ಕೋಳಿ ಕಾವು ಕೊಡಲು ಕೂತಿದೆಯೊ ಇಲ್ಲವೊ, ನೋಡುವುದೆ ಒಂದು ನಿತ್ಯದ ಕೆಲಸವಾಗಿಬಿಟ್ಟಿತು ಶಂಕರನಿಗೆ..

ಅವನ ಕಾತರದಷ್ಟೆ ವೇಗವಾಗಿ ಕಾವಿಗೆ ಮರಿಗಳು ಹೊರಬರದಿದ್ದರೂ, ದಿನವೂ ತಪ್ಪದಂತೆ ಬಂದು ಕಾವು ಕೊಡುತ್ತಿದ್ದ ಕೋಳಿಯ ನಿಷ್ಠೆ ಮಾತ್ರ ಮೆಚ್ಚಿಗೆಯಾಗಿ ಹೋಗಿತ್ತು ಶಂಕರನಿಗೆ.. ಒಂದೊಂದೆ ದಿನ ಕಳೆದು ಇಪ್ಪತ್ತೊಂದನೆ ದಿನ ಬರುತ್ತಿದ್ದಂತೆ ಕೋಳಿಯಿಟ್ಟಿದ್ದ ಇಪ್ಪತ್ತೊಂದನೆ ಮೊಟ್ಟೆ ಪಕ್ವವಾಗಿ, ಅದರೊಳಗಿನ ಗೋಡೆಯನ್ನು ಭೇಧಿಸಿಕೊಂಡು ಮೊದಲ ಮರಿ ಹೊರಬಂದಾಗ ಶಂಕರನಿಗೆ ಸ್ವರ್ಗಕ್ಕೆ ಮೂರೆ ಗೇಣು ಎನ್ನುವ ಲೆಕ್ಕ… ಅವ್ವ ಅದನ್ನು ಕೈಗೆತ್ತಿಕೊಂಡು ನೋಡಿದವಳೆ ಅದಾವ ಲೆಕ್ಕಾಚಾರದಲ್ಲೊ ‘ಇದು ಯಾಟೆ ಅಲ್ಲಾ ಹುಂಜ..’ ಎಂದು ಖಚಿತ ತೀರ್ಪು ಕೊಟ್ಟರೂ, ಗುಂಪಿಗೊಂದು ಗಂಡು ಹೇಗೂ ದಿಕ್ಕಿರಬೇಕು ಅದು ಇದೇ ಆಗಲಿ ಅಂದುಕೊಂಡು ಸಮಾಧಾನ ಪಟ್ಟುಕೊಂಡ ಶಂಕರ.. ಮಿಕ್ಕವಿನ್ನು ಮೊಟ್ಟೆಯ್ಹೊಡೆದು ಹೊರಬರದಿದ್ದರೂ, ಅವು ಸ್ವಂತ ಮೊಟ್ಟೆಗಳಲ್ಲದ ಕಾರಣ ಸ್ವಲ್ಪ ಹೆಚ್ಚು ಕಾಲ ಬೇಕೇನೊ ಎಂದುಕೊಂಡವನಿಗೆ ಇಪ್ಪತ್ತೆರಡಾಗಿ, ಇಪ್ಪತ್ತ ಮೂರು ದಾಟಿ, ಇಪ್ಪತ್ತನಾಲ್ಕನೆ ದಿನವಾದರು ಅವು ಚಿಪ್ಪೊಡೆದು ಹೊರಬರುವ ಲಕ್ಷಣವೆ ಕಾಣದಾದಾಗ ಯಾಕೊ ಭೀತಿಯಾಗತೊಡಗಿತು… ಅದೂ ಸಾಲದೆನ್ನುವಂತೆ ದಿನವೂ ತಪ್ಪದೆ ಬಂದು ಕಾವು ಕೂರುತ್ತಿದ್ದ ಕೋಳಿ , ಇದ್ದಕ್ಕಿದ್ದಂತೆ ತನ್ನ ದಿನಚರಿ ಬದಲಿಸಿ ಹಗಲಿನಲ್ಲಿ ಅವುಗಳತ್ತ ಹೋಗುವುದನ್ನೆ ನಿಲ್ಲಿಸಿಬಿಟ್ಟಿತು – ಸಂಜೆಯ ಮಾಮೂಲಿ ಒಡನಾಟದ ಹೊರತಾಗಿ.. ಅಂದು ಮಾತ್ರ ಅನುಮಾನ ಬಲವಾದಂತೆನಿಸಿದ ಶಂಕರನಿಗೆ ಯಾರನು ಕೇಳುವುದೆಂದೂ ಗೊತ್ತಾಗಲಿಲ್ಲ.. ತಟ್ಟನೆ ಅಂಗಡಿ ಕಾಕನನ್ನೆ ವಿಚಾರಿಸಿದರೆ ಹೇಗೆ ಎಂದನಿಸಿ ಮಿಠಾಯಿ ಕೊಳ್ಳುವ ನೆಪದಲ್ಲಿ ಅಲ್ಲಿಗೆ ಓಡಿದ್ದ..

‘ ಕಾಕಾ… ನೀ ಮಾರ್ತೀಯಲ್ಲ ಮೊಟ್ಟೆ, ಅವನ್ನ ಮರಿನು ಮಾಡ್ಬೋದು ಅಲ್ವಾ?’ ಅಂದಾ

ಪೆದ್ದನನ್ನು ನೋಡುವಂತೆ ನೋಡಿ ಕಿಸಕ್ಕನೆ ನಕ್ಕ ಕಾಕ, ‘ ಅದೆಲ್ಲಾಯ್ತುದೆ ? ಫಾರಂ ಕೋಳಿ ಮೊಟ್ಟೆ ಅಪ್ಪಿ ತಪ್ಪಿ ಶಾಖಕ್ಕೆ ಮರಿ ಆಗ್ದೆ ಇರಲಿ ಅಂತ ಫಾರಂನಲ್ಲೆ ಪಿನ್ನು ಚುಚ್ಚಿ ಸಣ್ಣ ತೂತಾ ಮಾಡಿ ಕಳಿಸಿಬಿಟ್ಟಿರ್ತಾರಲ್ಲ? ತೂತು ಬಿದ್ಮೇಲೆ ಅಬಾರ್ಶನ್ ಮಾಡಿದಂಗೆ ಅಲ್ವೇನೊ ಗುಗ್ಗು ? ಮರಿ ಹೆಂಗಾಗುತ್ತೆ? ‘ ಎಂದು ತನ್ನ ಆ ವಿಷಯದ ಮೇಲಿದ್ದ ‘ಸ್ಪೆಷಲ್’ ಧ್ಯಾನವನ್ನು ತೋರಿ ಹಲ್ಲು ಕಿರಿದಿದ್ದ . ಅದೆ ಬಿರುಸಲ್ಲಿ, ‘ ನನ್ಹತ್ರ ಅಷ್ಟೊಂದು ಮೊಟ್ಟೆ ತೊಗೊಂಡು ಹೋಗಿದ್ದು , ಮರಿ ಮಾಡೋಕಲ್ಲಾ ತಾನೆ? ‘ ಎಂದು ಅವಹೇಳನ ಅಪಹಾಸ್ಯದ ನಗೆ ನಗತೊಡಗಿದ.

ಶಂಕರನಿಗೆ ಏನು ಹೇಳಲೂ ತೋಚಲಿಲ್ಲ… ಏನಾಗುತ್ತಿದೆಯೆಂದೂ ಅರಿವಾಗದಷ್ಟು ಅಯೋಮಯ ಮಯಕ ಆವರಿಸಿಕೊಂಡಂತಾಗಿತ್ತು… ಐದು ಹತ್ತಿರಲಿ, ಒಂದೆ ಒಂದು ಗಂಡು ಕೋಳಿ ಬಿಟ್ಟರೆ ಮಿಕ್ಕೇನು ಇರದು ಎನ್ನುವುದನ್ನು ನಂಬಿ ಜೀರ್ಣಿಸಿಕೊಳ್ಳಲೆ ಕಷ್ಟವಾಗಿತ್ತು.. ಯಾವುದಕ್ಕು ಮತ್ತೆ ಹೋಗಿ ನೋಡುವುದು ಸರಿಯೆಂದು ಮನೆಯತ್ತ ನಡೆದರೆ, ಮೊಟ್ಟೆಯಿದ್ದ ಕೊಟ್ಟಿಗೆಯ ಕಡೆಯಿಂದ ವಾಚಾಮಗೋಚಾರ ಬೈದುಕೊಂಡು ಬರುತ್ತಿದ್ದ ಅವ್ವ ಕಾಣಿಸಿಕೊಂಡಿದ್ದಳು… ಇವನ ಮುಖ ಕಂಡವಳೆ ಪಕ್ಕಕ್ಕೆ ‘ಥೂ’ ಎಂದು ಉಗಿದವಳೆ ಒಂದೂ ಮಾತಾಡದೆ ವೇಗವಾಗಿ ನಡೆದು ಹೋದದ್ದು ಕಂಡು ಏನಾಗಿರಬಹುದೆಂದು ಗೊತ್ತಗದೆ ಒಳಗೆ ಬಂದು ಬಗ್ಗಿ ನೋಡಿದ್ದ..

ಅಲ್ಲಿ ನೋಡಿದರೆ ಮಿಕ್ಕೆಲ್ಲಾ ಇಪ್ಪತ್ತು ಮೊಟ್ಟೆಗಳು ಕಾವಿಗೊ ಏನೊ ಅರೆಬರೆ ಚಿಪ್ಪೊಡೆದುಕೊಂಡು ತೆರೆದುಕೊಂಡಿದ್ದವು. ಅವುಗಳ ಒಳಗಿನಿಂದ ಮರಿಯ ಬದಲಿಗೆ ಕಪ್ಪು, ಬೂದು ಬಣ್ಣದ ಲೋಳೆಯಂತಹ ಘನ ಮಿಶ್ರಣವೊಂದು ಹೊರಚಾಚಿಕೊಂಡಿತ್ತು.. ಇನ್ನು ಕೆಲವು ಚಿಪ್ಪು ಒಡೆಯದೆ ಹಾಗೆ ಅನಾಥವಾಗಿ ಬಿದ್ದಿದ್ದವು…

ಅವನ್ನೆತ್ತಿ ಎಸೆಯಬೇಕೊ , ಹಾಗೆ ಬಿಡಬೇಕೊ ಅರಿವಾಗದ ಸಂದಿಗ್ದತೆಯಲ್ಲಿ ದಾರಿ ಕಾಣದೆ ಕಂಗಾಲಾದವನಂತೆ ಅವನ್ನೆ ದಿಟ್ಟಿಸಿ ನೋಡುತ್ತಾ ಜಗುಲಿಯ ಮೇಲೆ ಕುಸಿದ ಶಂಕರನ ಕಣ್ಣಲ್ಲಿ ಇದ್ದದ್ದು ನಿರಾಶೆಯೊ, ಕೋಪವೊ, ಅವಮಾನವೊ ಅರಿವಾಗದ ಗೊಂದಲ ದ್ರವರೂಪಾಗಿ ದ್ರವಿಸಿ ನಿಲ್ಲದ ಕಂಬನಿಯ ಧಾರೆಯಾಗಿ ಹರಿಯತೊಡಗಿತ್ತು..

*****************

00533. ಕಿರುಗತೆಗಳು – 02 : ಊರಿಗೆ….


00533. ಕಿರುಗತೆಗಳು – 02 : ಊರಿಗೆ..
_________________________________

ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟವಳಿಗೆ ಎಲ್ಲಿದ್ದೆನೆಂದು ಮನವರಿಕೆಯಾಗಲೆ ಅರೆಗಳಿಗೆ ಹಿಡಿಯಿತು… ಹಿಂದಿನ ದಿನ ಸಂಜೆ ಆಫೀಸು ಮುಗಿಯುತ್ತಿದ್ದಂತೆ, ಯಾಕೊ ರೋಸಿಹೋದಂತೆನಿಸಿ ವಾರದಿಂದ ಊರಿಗೆ ಹೋಗಬೇಕೆನ್ನುವ ತುಡಿತಕ್ಕೆ ಮತ್ತೆ ಚಾಲನೆ ಸಿಕ್ಕಿ , ಉಟ್ಟಬಟ್ಟೆಯಲ್ಲೆ ಮೆಜೆಸ್ಟಿಕ್ಕಿನಲ್ಲಿ ರಾತ್ರಿ ಬಸ್ಸು ಹಿಡಿದು ಹೊರಟಿದ್ದು ನೆನಪಾಯ್ತು..

ಹಾಳು ರಿಸರ್ವೇಶನ್ ಮಾಡಿಸದೆ ಹೊರಟಿದ್ದು.. ಊರಿನ ಡೈರೆಕ್ಟ್ ಬಸ್ಸಲ್ಲಿ ಸೀಟೆ ಇರಲಿಲ್ಲ.. ರಾತ್ರಿ ಹತ್ತರ ಸಮಯ ಬೇರೆ.. ಸಿಟಿ ಬಸ್ಸು ಹಿಡಿದು ಬಂದಿದ್ದೆ ಎರಡು ಗಂಟೆ ಹಿಡಿದಿತ್ತು.. ‘ಒಂದೇ ಒಂದು ಲೇಡಿಸ್ ಸೀಟು ಇದಿಯಾ ನೋಡಿ, ಪ್ಲೀಸ್.. ‘ ಎಂದವಳನ್ನ ಒಂದು ತರಾ ಕುಹಕ ನಗೆಯೊಂದಿಗೆ , ‘ ಆಗಲ್ಲ ಮೇಡಂ ..ಎಲ್ಲಾ ಸೀಟು ರಿಸರ್ವೇಶನ್.. ಪುಲ್ ಆಗಿಬಿಟ್ಟಿದೆ.. ರಾತ್ರಿ ಜರ್ನಿ ಒಬ್ಬರೆ ಹೆಂಗಸು ಹೊರಟಿದ್ದೀರಾ , ರಿಸರ್ವ್ ಮಾಡಿಸೋಕೆ ಗೊತ್ತಾಗಲ್ವಾ?.. ‘ ಎಂದಿದ್ದ ಕಂಡಕ್ಟರ್, ಅವಳ ಕೈಲಿದ್ದ ಮೊಬೈಲನ್ನೆ ದಿಟ್ಟಿಸುತ್ತ.. ‘ಆನ್ಲೈನಿನಲ್ಲಿ ಮೂರ್ಹೊತ್ತು ಆಡುತ್ತ, ಮಾತಾಡ್ತುತ್ತ ಕಳೆಯೊ ಅದೇ ಮೊಬೈಲಲ್ಲಿ ರಿಸರ್ವೇಶನ್ ಮಾಡೀಸಲೇನು ಧಾಡಿ?’ ಎನ್ನುವ ಹಾಗೆ..

ಅಸಹಾಯಕತೆ, ಅಸಹನೆಗೆ ಬಂದ ಕೋಪಕ್ಕೆ ಅವನ ಮೇಲೆ ಕಾರಿಕೊಳ್ಳುವಂತಾದರು ಬಲವಂತದಿಂದ ನುಂಗಿಕೊಂಡಳು.. ‘ಇವನ್ಯಾರು ಅದೆಲ್ಲಾ ಹೇಳೊದಕ್ಕೆ..? ಇದ್ದರೆ ಇದೆ, ಇಲ್ಲಾ ಅಂದ್ರೆ ಇಲ್ಲಾ ಅನ್ಬೇಕು… ಇಲ್ಲದ ತಲೆಹರಟೆಯೆಲ್ಲ ಯಾಕೆ ಬೇಕು?’. ಇದ್ದಕ್ಕಿದ್ದ ಹಾಗೆ ಹೊರಟು, ಮನೆಗೆ ಹೋಗಿ ಬಟ್ಟೆ ತೆಗೆದುಕೊಂಡು ಬರಲು ಆಗಿರಲಿಲ್ಲ. ಆದರೂ ರಿಸರ್ವೇಶನ್ ಮಾಡಿಸದೆ ಬರಬಾರದಿತ್ತು.. ಆಗ ಇಲ್ಲಿ ಕಂಡ ಕಂಡ ಬಸ್ಸಿಗೆಲ್ಲ ‘ಪ್ಲೀಸ್ ಒಂದೆ ಒಂದ್ ಲೇಡೀಸ್ ಸೀಟ್ ಇದೆಯಾ?’ ಅಂತ ಭಿಕ್ಷೆ ಬೇಡುವ ಪ್ರಮೇಯವಿರುತ್ತಿರಲಿಲ್ಲ.. ಎಲ್ಲಾ ಅವನಿಂದಲೆ ಆಗಿದ್ದು.. ಹೊರಡೊ ಮೊದಲು ಗಂಟೆಗಟ್ಟಲೆ ಪೋನಿನಲ್ಲಿ ಕಾಡುತ್ತ, ರಿಸರ್ವೇಶನ್ ಚೆಕ್ ಮಾಡಲೂ ಟೈಮ್ ಇಲ್ಲದ ಹಾಗೆ ಮಾಡಿಬಿಟ್ಟಿದ್ದ.. ಬಸ್ಸಿಗೆ ಹೊರಡೊ ಮೊದಲಷ್ಟು ಟೈಮು ಇದ್ದರು, ಅವನು ಕೆಡಿಸಿದ ಮೂಡಿನಿಂದ ಚೆಕ್ ಮಾಡುವ ಪರಿಜ್ಞಾನವೂ ಕಳೆದುಹೋಗಿತ್ತು.. ಗಂಟೆಗಟ್ಟಲೆ ಮಾತಾಡಿದ್ದಾದರೂ ಏನು? ಅದೇ ಮಾತು, ಅದೆ ಗೋಳಾಟ.. ಪದೇಪದೇ ಒದರಿಕೊಂಡು ಜೀವ ತಿನ್ನುತ್ತಾನೆ.. ನನ್ನ ಪಾಡಿಗೆ ನನ್ನ ಬಿಡು..ನನ್ನ ಮನಸೀಗ ಸರಿಯಿಲ್ಲ ಅಂದರೂ ಕೇಳುವುದಿಲ್ಲ.. ಸ್ವಲ್ಪ ಜೋರಾಗಿ, ಒರಟಾಗಿ ಮಾತಾಡಿದರೆ ಒಂದು ಗಂಟೆ ಬದಲು ಎರಡು ಗಂಟೆ ಹಿಂಸೆ ಅನುಭವಿಸಬೇಕು.. ಹೇಗೊ ತಡೆದುಕೊಂಡು ಮುಗಿಸಿಬಿಡುವುದು ವಾಸಿ.. ಸಹ್ಯವಾಗದಿದ್ದರೂ ಸರಿ ಎಂದು ಅನುಭವಿಸಿದ್ದಾಗಿತ್ತು.. ಅವನ ಮಾತು ಹಾಳಾಗಲಿ , ಈಗ ಬಸ್ಸಿಗೇನು ಮಾಡುವುದು ? ಈಗ ಊರಿಗೆ ಬಸ್ಸು ಸಿಗದಿದ್ದರೆ ಮನೆಗೆ ಹೋಗುವ ಸಿಟಿ ಬಸ್ಸು ಮತ್ತೆರಡು ಗಂಟೆ ಹಿಡಿಯುತ್ತದೆ.. ಇಷ್ಟೊತ್ತಿನಲ್ಲಿ ಬಸ್ಸೂ ಸಿಗುವುದಿಲ್ಲ , ಅದರಲ್ಲು ಹೆಂಗಸರು ಇರುವುದು ಅನುಮಾನ… ಬರಿ ಕುಡಿದು ಕೆಕ್ಕರಿಸಿ ನೋಡುವವರ ನಡುವೆ, ಗಬ್ಬು ವಾಸನೆ ಅನುಭವಿಸಿಕೊಂಡು ಮೂಗು ಮುಚ್ಚಿಕೊಂಡೆ ನಿಲ್ಲಬೇಕು.. ಈ ಹೊತ್ತಿನಲ್ಲಿ ಆಟೊಗೆ ಹೋಗಲೂ ಭಯಾ.. ಎಲ್ಲಕ್ಕಿಂತ ಹೆಚ್ಚಾಗಿ ಊರಿಗೆ ಹೋಗಲೆಬೇಕು ಅನಿಸುತ್ತಿದೆ, ಮನಶ್ಯಾಂತಿಯೆ ಇಲ್ಲದಂತಾಗಿರುವ ಈ ಹೊತ್ತಲ್ಲಿ…

ಸಿಟ್ಟಿಗದು ಸಮಯವಲ್ಲ ಎಂದು ಸಿಕ್ಕಿದ ಬಸ್ಸನ್ನೆಲ್ಲ ಬೇಡಿ ಕೊನೆಗೆ ಶಿವಮೊಗ್ಗಕ್ಕೆ ಹೊರಡುವ ಬಸ್ಸೊಂದನ್ನು ಹಿಡಿದಾಗ ‘ಉಸ್ಸಪ್ಪಾ’ ಎಂದು ನಿಟ್ಟುಸಿರು ಬಿಡುವಂತಾಗಿತ್ತು.. ಅಲ್ಲಿಂದ ಊರಿಗೆ ಇನ್ನೊಂದು ಬಸ್ಸು ಹಿಡಿದು ನಡೆಯಬೇಕು.. ಕನಿಷ್ಠ ಮೂರ್ನಾಲ್ಕು ಗಂಟೆಯಾದರೂ ತಡವಾಗುತ್ತದೆ, ಡೈರೆಕ್ಟ್ ಬಸ್ಸಿಗೆ ಹೋಲಿಸಿದರೆ.. ಜತೆಗೆ ಟಿಕೆಟ್ಟಿಗೆ ಇನ್ನೂರು ರೂಪಾಯಿ ಹೆಚ್ಚು ಬೇರೆ ಆಗುತ್ತೆ.. ಆದರೂ ಸರಿ ಊರಿಗೆ ಮಾತ್ರ ಹೋಗಲೆಬೇಕು.. ಒಂದೆರಡೆ ದಿನವಿದ್ದು ಮತ್ತೆ ವಾಪಸ್ಸು ಬರಬೇಕಾಗಿದ್ದರು ಸರಿ..

ಹಾಗೆಂದುಕೊಂಡವಳು ಸೀಟಿನಲ್ಲಿ ನಿರಾಳ ಕೂತಾಗ ಮತ್ತವನ ನೆನಪಾಗಿತ್ತು. ಮೊಬೈಲು ತೆರೆದು ನೋಡಿದರೆ ಯಥಾರೀತಿ ಮೇಸೇಜುಗಳು.. ‘ ಊರಿಗೆ ಹೊರಟೆಯಾ?’ ‘ಬಸ್ಸು ಸಿಕ್ತಾ?’ ‘ಎಲ್ಲಿದ್ದೀಯಾ ಈಗ?’ ‘ ಉತ್ತರಾನೆ ಕೊಡ್ತಿಲ್ಲ.. ಯಾಕೆ?’ ಇತ್ಯಾದಿ. ಸಿಟಿಬಸ್ಸಿನಲ್ಲಿದ್ದಾಗಲೆ ಉತ್ತರಿಸಲು ಮನಸಿಲ್ಲದೆ, ಸ್ಟೇಟಸಿನಲ್ಲಿ ‘ ಟು ಹೋಮ್’ ಎಂದು ಹಾಕಿ ಸುಮ್ಮನಾಗಿದ್ದಳು.. ಬಸ್ಸು ಹೊರಡತೊಡಗಿತ್ತು.. ಎಲ್ಲಿದ್ದರೊ ಇಷ್ಟು ಜನಗಳು..ಈ ರಾತ್ರಿಯಲ್ಲೂ ಬಸ್ಸು ಪುಲ್.. ಸದ್ಯ ಒಂದು ಸೀಟು ಹೇಗೊ ಸಿಕ್ಕಿತಲ್ಲ..!

ಆಗ ಸರಿಯಾಗಿ ಮತ್ತೆ ಅವನ ಕೊನೆ ಮೇಸೇಜು ಕಣ್ಣಿಗೆ ಬಿದ್ದಿತ್ತು..’ ಸ್ಟೇಟಸ್ ನೋಡಿದೆ.. ಊರಿಗೆ ಹೊರಟಿದ್ದು ಕನ್ಫರ್ಮ್ ಆಯ್ತು.. ನಿನಗೆ ಮೆಸೇಜು ಹಾಕಿ ಕಾಟ ಕೊಡಲ್ಲ.. ಹ್ಯಾಪಿ ಜರ್ನೀ’ ಅಂದಿದ್ದ ಮೇಸೇಜು.. ‘ ಅಯ್ಯೊ ಪಾಪ’ ಅನಿಸಿತ್ತು ಒಂದು ಗಳಿಗೆ.. ಎಷ್ಟೆ ಕಾಡಿದರೂ ಜೀವ ಇಟ್ಟುಕೊಂಡಿದಾನೆ… ಕ್ಷೇಮವಾಗಿದೀನೊ ಇಲ್ವೊ ಅಂತ ಒದ್ದಾಡ್ತಾ ಇರ್ತಾನೆ… ಹೇಳ್ತಾನೆ ಇದೀನಿ.. ನನಗೆ ನನ್ನ ‘ಸ್ಪೇಸ್’ ಬೇಕು ಇಷ್ಟು ‘ಪೊಸೆಸ್ಸಿವ್’ ಆಗಿರ್ಬೇಡ ಅಂತ.. ಕೇಳೋದೆ ಇಲ್ಲಾ.. ಅಷ್ಟೊಂದು ಹಚ್ಕೊಂಡಿದ್ದಾದ್ರು ಯಾಕೊ ? ಅದೇನು ನನ್ನ ತಪ್ಪಾ ?’

ಹೊರಡೊ ಮೊದಲು ಪೋನಲ್ಲು ಮಾತು ಕೊನೆಯಾಗಿದ್ದು ಜಗಳದ ರೀತಿಲೆ.. ಕೊನೆಗೆ ಏನೇನೊ ಒರಟಾಗಿ ಉತ್ತರಿಸಿ ಪೋನಿಡುವಂತೆ ಮಾಡಿದ್ದು… ಹೋದ ಸಲ ಇದೇ ತರ ಊರಿಗೆ ಹೊರಟಾಗ ರಾತ್ರಿ ಪೂರ್ತಿ ಮೇಸೇಜು ಕಳಿಸ್ತಾನೆ ಇದ್ದ ಪಾಪ.. ಅವಳು ಎಷ್ಟು ಖುಷಿಯಿಂದ ಮಾತಾಡಿದ್ದಳು ಇಡೀ ರಾತ್ರಿ ? ಪೋನ್ ಬ್ಯಾಟರಿ ಮುಗಿದು ಹೋದ್ರು ಮತ್ತೊಂದು ಹಳೆ ಪೋನಲ್ಲಿ ಸಿಮ್ ಹಾಕಿ ಮಾತಾಡಿದ್ದು.. ಹಾಗೆ ಇರೋಕೆ ಏನಾಗಿತ್ತು ಅವನಿಗೆ ? ಎಲ್ಲಾ ಅವಸರದಲ್ಲೆ ಮಾಡಿ ಹಾಳು ಮಾಡ್ತಾನೆ.. ಕಾಯಿ ಬಾಳೆಹಣ್ಣನ್ನ ಅರ್ಜೆಂಟು ತಿನ್ನೋಕೆ ಬೇಕು ಅಂತ ಒತ್ತಿ ಒತ್ತಿ ಮೃದು ಮಾಡ್ಬಿಟ್ರೆ ಹಣ್ಣಾಗಿ ಬಿಡುತ್ತಾ..? ಎಲ್ಲಾದಕ್ಕೂ ಕಾಯೊ ಸಹನೆ ಇರ್ಬೇಕು.. ಅವನಿಗೆ ಅದೇ ಇಲ್ಲಾ.. ನಂಗೆ ಟೈಮು ಕೊಡು ಯೋಚಿಸ್ಬೇಕು ಅಂದ್ರೆ ಕೇಳೋದೆ ಇಲ್ಲ… ಹಾಳಾದ್ದು ಕಣ್ಮುಚ್ಚಿ ಸೀಟಲ್ಲೆ ಮಲಗೋಣ ಅಂದ್ರೆ ಯಾಕೊ ಆಗ್ತಾ ಇಲ್ಲಾ ಬೇರೆ..

ಸರಿ ಹಾಳಾಗಲಿ, ನಿದ್ದೆ ಮಾಡದೆ ಸಂಕಟದಲ್ಲಿ ಒದ್ದಾಡ್ತನೆ, ಅನಿಸಿ ಒಂದು ಮೇಸೇಜು ಕಳಿಸೆ ಬಿಟ್ಟಳು.. ‘ಈಗ ಬಸ್ಸು ಸಿಕ್ತು.. ರಾಮ್ರಾಮಾ ಸಾಕಾಗೋಯ್ತು.. ಸಿಕ್ಕಿದ ಬಸ್ಗೆಲ್ಲ ಅಡ್ಡ ಹಾಕಿ ಬೇಡ್ಕೊಂಡ್ರೂ ಸೀಟಿಲ್ಲ..’

‘ಅಯ್ಯೊ.. ಹಾಗಾದ್ರೆ ಬಸ್ಸು ಚೇಂಜ್ ಮಾಡಬೇಕಾ ತಿರ್ಗಾ ? ಡೈರೆಕ್ಟ್ ಬಸ್ಸು ಸಿಗಲಿಲ್ವಾ? ಯಾವ ಬಸ್ಸು ಸಿಕ್ತು ? ಮಲಗಿಕೊಂಡು ಆರಾಮವಾಗಿ ಹೋಗೊ ಹಾಗಾದ್ರೂ ಇದೆಯೊ ಇಲ್ವೊ’ ಹೇಳದಿದ್ದರು ಅವಳ ಪರಿಸ್ಥಿತಿಯನ್ನು ಅರೆಬರೆ ಊಹಿಸಿ ಒಂದೆ ಸಾರಿಗೆ ಪ್ರಶ್ನೆಯ ಮಳೆ ಸುರಿಸಿಬಿಟ್ಟ ಕೂಡಲೆ.. ಬಹುಶಃ ಈ ರಾತ್ರಿ ಉತ್ತರಿಸುವುದೆ ಇಲ್ಲ ಅಂದುಕೊಂಡಿದ್ದಿರಬೇಕು.. ಅಷ್ಟು ಉದ್ದದ ಉತ್ತರ ನೋಡಿ, ಕೋಪವೆಲ್ಲ ಹೊರಟುಹೋಗಿದೆ ಅಂದುಕೊಂಡನೊ ಏನೊ..

ಕೆಲವಕ್ಕೆ ಚುಟುಕಾಗೆ ಉತ್ತರಿಸಿದಾಗ ಏನೊ ನಿರಾಳ… ಹಾಗೆ ಸ್ವಲ್ಪ ಹೊತ್ತು ಮಾತಾಡಿದರೆ ಇನ್ನು ಸಮಾಧಾನವಾದೀತೆಂದುಕೊಳ್ಳುವಾಗಲೆ ಬ್ಯಾಟರಿ ಅರ್ಧಕ್ಕಿಂತಲು ಕಡಿಮೆಯಿರುವುದು ಕಾಣಿಸಿತು.. ಇನ್ನು ಮಾತಿಗಿಳಿದರೆ ಆಮೇಲೆ ಫೋನ್ ಮಾಡಲೂ ಚಾರ್ಜು ಇರುವುದಿಲ್ಲ.. ಅವಸರಕ್ಕೆ ಹೊರಟು ಪವರ್ ಬ್ಯಾಂಕು ಚಾರ್ಜು ಮಾಡಿಕೊಳ್ಳಲು ಆಗಿರಲಿಲ್ಲ….

‘ ಚಾರ್ಜು ಇಲ್ಲಾ.. ಪೋನ್ ಆಫ್ ಮಾಡಬೇಕು.. ‘ ಅಂದಳು

ಆಗಲೂ ಅವನ ಅವಸರದ ಪ್ರಶ್ನೆಗಳು.. ಸದಾ ಕೇಳುತ್ತಲೆ ಇರುತ್ತಾನೆ ಏನಾದರೂ.. ಅವೆಲ್ಲ ಈಗಲೆ ಅರ್ಜೆಂಟಲ್ಲಾ… ಆದರು ಚುಟುಕಾಗಿ ಉತ್ತರಿಸಿದಳು.. ಮಾಮೂಲಿನಂತೆ ಕಾಡದೆ ‘ ಪೋನ್ ಎಮರ್ಜೆನ್ಸಿಗೆ ಬೇಕು.. ಆರಿಸಿಬಿಡು .. ಶಿವಮೊಗ್ಗ ತಲುಪಿದ ಮೇಲೆ ಬಸ್ಸು ಸಿಕ್ತಾ ಮೆಸೇಜು ಕಳಿಸು..’ ಎಂದು ಬೈ ಹೇಳಿದ್ದ..

ಆಮೇಲೇನೊ ನಿರಾಳದ ನಿದ್ದೆ ಇದೀಗ ಎಚ್ಚರವಾಗೊ ತನಕ.. ಶಿವಮೊಗ್ಗ ಬಂದುಬಿಟ್ಟಿದೆ ಎಂದುಕೊಂಡೆ ಟೈಮ್ ನೋಡಿಕೊಂಡಳು – ಅರೆ, ನೇರ ಬಸ್ಸಲ್ಲಿ ಆದರೂ ಈ ಹೊತ್ತಿಗೆ ಬರುತ್ತಿದ್ದುದಲ್ಲವೆ ಎನಿಸಿ… ಬಸ್ಸಿಂದ ಕೆಳಗಿಳಿದು ಊರಿನ ಬಸ್ ಫ್ಲಾಟ್ ಫಾರಮ್ಮಿನತ್ತ ನಡೆದರೆ, ಅದೇ ಕೋತಿ ಮೀಸೆಯ ಡೈರೆಕ್ಟ್ ಬಸ್ಸಿನ ಕಂಡಕ್ಟರ್ ಕಣ್ಣಿಗೆ ಬಿದ್ದಿದ್ದ, ಬಸ್ಸಿನ ಬಾಗಿಲಲ್ಲಿ ಒರಗಿಕೊಂಡು ಹತ್ತುವವರಿಗಾಗಿ ಅಂಗಲಾಚುತ್ತ… ರಿಸರ್ವೇಶನ್ ಸೀಟುಗಳೆಲ್ಲ ಮುಕ್ಕಾಲು ಪಾಲು ಶಿವಮೊಗ್ಗದಲ್ಲೆ ಖಾಲಿಯಾಗುವ ಕಾರಣ ಇಲ್ಲಿಂದ ಹೊಸ ಸೀಟು ಹಿಡಿದೆ ನಡೆಯಬೇಕು.. ಅವನೆದುರಾಗಿ ಅವಳನ್ನು ಕಾಣುತ್ತಿದ್ದಂತೆ ರಾತ್ರಿಯದೆಲ್ಲ ನೆನಪಾಗಿ ಅವಾಕ್ಕಾದವನಂತೆ ಮಾತು ನಿಲ್ಲಿಸಿಯೆಬಿಟ್ಟ ಅರೆ ಗಳಿಗೆ..ಊರಿಗೆ ಟಿಕೆಟ್ಟು ಕೊಳ್ಳಲು ಅವಳ ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಲೆ, ಹಾಗು ಹೀಗು ಸಾವರಿಸಿಕೊಂಡು ಪೆಚ್ಚಾದ ದನಿಯಲ್ಲಿ, ‘ ಬಸ್ಸೆ ಸಿಕ್ಕಿರಲಿಲ್ಲ ಹೇಗ್ ಬಂದ್ಬಿಟ್ರಿ ಮೇಡಂ ? ಅದೂ ಈ ಬಸ್ಸನ್ನೆ ಹಿಡಿದಿದ್ದಿರಾ?’ ಅವಳು ಮಾತಾಡದೆ ವ್ಯಂಗವಾಗಿ ನಕ್ಕು ಒಳಗೆ ಹೋಗಿ ಸೀಟೊಂದರಲ್ಲಿ ಕೂತಳು.. ಇನ್ನು ಅರ್ಧಗಂಟೆಯಿದೆ ಹೊರಡಲು..ಸದ್ಯ ಬೇಗನೆ ಬಂದು ಸೀಟೂ ಸಿಕ್ಕಿತು, ಅಂದುಕೊಂಡ ಹಾಗೆ ಎಂಟರ ಒಳಗೆ ಊರಿಗೆ ತಲುಪಬಹುದು ಅನಿಸಿ ಪ್ರಪುಲ್ಲವಾಯಿತು ಅವಳ ಮನಸು.

ಆ ಖುಷಿಯಲ್ಲೆ ಅವನ ನೆನಪಾಗಿ ‘ಶಿವಮೊಗ್ಗ ಬಂತು’ ಎಂದು ಮೆಸೇಜು ಕಳಿಸಿದಳು.. ತಟ್ಟನೆ ಮಾರುತ್ತರ ಬಂತು ‘ ಗ್ರೇಟ್.. ಇನ್ನು ಎಷ್ಟೊತ್ತು ಕಾಯ್ಬೇಕು…?’

‘ ಬಸ್ಸು ಸಿಕ್ತು, ಸೀಟಲ್ಲಿ ಕೂತಿದೀನಿ…’ ಅಂದಾಗ ಬೆಂಗಳೂರಿನಲ್ಲಿ ಮಿಸ್ ಆಗಿದ್ದ ಅದೇ ಬಸ್ಸು ಶಿವಮೊಗ್ಗದಲ್ಲಿ ಸಿಕ್ಕಿತು ಎಂದವನಿಗರ್ಥವಾಗಲಿಕ್ಕೆ ಕೊಂಚ ಗಳಿಗೆಯೆ ಹಿಡಿಯಿತು.. ಅವನು ಖುಷಿಯಲ್ಲೆ ‘ವಾವ್.. ಸುಪರ್..’ ಎಂದ.. ಆ ಗಳಿಗೆಯ ಖುಷಿಗೆ ಇನ್ನು ಮಾತು ಬೇಕೆನಿಸಿ ತನ್ನನ್ನು ಕಂಡು ಪೆಚ್ಚಾದ ಕಂಡಕ್ಟರನ ಕಥೆಯನ್ನು ಹೇಳಿಕೊಂಡಳು.. ಕೊನೆಗೂ ಊರಿಗೆ ಸಮಯಕ್ಕೆ ಸರಿಯಾಗಿ ಹೋಗುತ್ತಿರುವ ಖುಷಿ ಪ್ರತಿ ಅಕ್ಷರದಲ್ಲು ಎದ್ದು ಕಾಣುತ್ತಿತ್ತು..

‘ ಐಯಾಂ ಸಾರಿ…ರಾತ್ರಿ ನಿನಗೆ ತುಂಬಾ ಪ್ರೆಷರ್ ಕೊಟ್ಟುಬಿಟ್ಟೆ… ಮನೆಯಲ್ಲಾದರು ಆರಾಮವಾಗಿದ್ದು ಬಾ.. ನಾ ಆದಷ್ಟು ಸೈಲೆಂಟಾಗಿ ಇರ್ತೀನಿ.. ಕಾಡಲ್ಲ..’ ಎಂದವನ ಮಾತಿನಲ್ಲಿ ನಿಜಾಯತಿಯ ಎಳೆಯಿತ್ತು.. ‘ ಮನೆ ರೀಚ್ ಆದ ತಕ್ಷಣ ಮೆಸೇಜು ಕಳಿಸು ..’ ಎಂದು ಅರೆಮನದಲ್ಲೆ ಮಾತು ಮುಗಿಸಲ್ಹೊರಟವನನ್ನು , ಮತ್ತೊಂದೆರಡು ಗಳಿಗೆ ಹಿಡಿದಿಟ್ಟುಕೊಂಡಳು – ಮಿಕ್ಕ ಬ್ಯಾಟರಿಯಿನ್ನು ಸಾಕಷ್ಟಿರುವುದನ್ನು ಗಮನಿಸಿ…

‘ ನೀನು ಹೇಳ್ತೀಯಾ ಆದರೆ ಫಾಲೊ ಮಾಡಲ್ಲ… ನೋಡೋಣ ಈ ಸಾರಿ ಏನು ಮಾಡ್ತೀಯಾ ಅಂತ..’ ಎಂದು ಸ್ಮೈಲಿಯೊಂದನ್ನು ಹಾಕಿ ಪೋನು ಆರಿಸಿದಳು..

ಎಷ್ಟೊಬಾರಿ ಊರಿಗೆ ಬಂದು ಹೋಗಿದ್ದರೂ ಏನೂ ಪ್ಲಾನಿಲ್ಲದೆ ಬಂದ ಈ ಬಾರಿಯಂತೆ ಉತ್ಕಟ ತೀವ್ರತೆಯನ್ನು ಯಾವತ್ತೂ ಅನುಭವಿಸಿರಲಿಲ್ಲ.. ಮೊದಲ ಬಾರಿಗೆ ಹೊರಟವಳ ಕುತೂಹಲದಲ್ಲಿ ಕಾಯಲಾಗದೆ ಚಡಪಡಿಸಿತ್ತು ಮನಸು.. ಎರಡು ಗಂಟೆಯ ಪಯಣವೂ ಮೊದಲ ಬಸ್ಸಿನ ಪಯಣಕ್ಕಿಂತ ಹೆಚ್ಚು ಉದ್ದವಿರುವ ಹಾಗೆ.. ಆ ಹೇಳಲಾಗದ ಕಾತರದ ಭಾವ ಕಾಡುತ್ತಿರುವಾಗಲೆ ದೂರದ ಚಿರಪರಿಚಿತ ತಿರುವು ಕಾಣಿಸಿತ್ತು, ಇನ್ನೇನು ಊರು ಬಂದೆಬಿಟ್ಟಿತು ಎಂದು ಸಾರುತ್ತ. ಮತ್ತೆ ಒಳಗಿನ ಹರ್ಷವೆಲ್ಲ ಉಕ್ಕಿಬಂದಂತೆ ಉತ್ಸಾಹದ ಬುಗ್ಗೆಯುಕ್ಕಿ, ಪೋನ್ ಆನ್ ಮಾಡಿ ಒಂದು ಮೆಸೇಜು ಕಳಿಸಿದಳು ‘ಮನೆ ಬಂತು, ಬೈ ಬೈ , ಹ್ಯಾವ್ ಎ ಗುಡ್ ಡೇ’ .. ತಟ್ಟನೆ ಮರುತ್ತರ ಬಂತು, ‘ ಎಂಜಾಯ್ ದ ಸ್ಟೆ ಪೀಸ್ಪುಲೀ..’

ಅದಕ್ಕುತ್ತರಿಸದೆ ನಕ್ಕು ಬ್ಯಾಗೆತ್ತಿಕೊಂಡು ಕೆಳಗಿಳಿಯ ಹೊರಟವಳಿಗೆ ದೂರದ ಜಗುಲಿಯ ಮೇಲಿನಿಂದ ಕೈಯಾಡಿಸುತಿದ್ದ ಅಪ್ಪಾ ಕಾಣಿಸಿದ್ದರು, ಮರೆಯಲ್ಲಿ ಬಾಗಿಲ ಬಳಿ ನಿಂತಿದ್ದ ಅಮ್ಮನ ಗುಲಾಬಿ ಸೀರೆಯ ಸೆರಗಿನ ಹಿನ್ನಲೆಯಲ್ಲಿ..

ಎಂದಿಲ್ಲದ ನಿರಾಳ ಆಹ್ಲಾದತೆಯ ಮನದಲ್ಲಿ ಬಿರಬಿರನೆ ನಡೆಯಹತ್ತಿದಳು ಮನೆಯತ್ತ – ವೇಗವಾಗಿ ಹೋಗದಿದ್ದರೆ ಎಲ್ಲಿ ಆ ರಸ್ತೆಯೆ ಕರಗಿ ಮಾಯವಾಗಿ ಬಿಡುವುದೊ ಎನ್ನುವಂತೆ.

ಊರಿನ ಮೊದಲ ಸಾಲಿನಲ್ಲಿದ್ದ ಆ ಪರಿಚಿತ ಮನೆಗೆ, ಅಪರಿಚಿತಳ ಉತ್ಸಾಹದಲ್ಲಿ ನಡೆದವಳ ಮನಸೂ ಶಾಂತಿಯ ತವರೂರ ತಲುಪಿತ್ತು – ಆ ಗಳಿಗೆಯ ಮಟ್ಟಿಗೆ..!

******