00962. ಹೀಗೇ ಲಹರಿಗೆ…


00962. ಹೀಗೇ ಲಹರಿಗೆ…
___________________

ಭಾವ
ಅಹಂಭಾವ
ಬರಿ ಎರಡಕ್ಷರ ನಡುವೆ ಶಿವ
ಭಾವ ನಾನಾಗಿ ತತ್ಸಮ ತದ್ಭವ..!

ಕಾರ
ಅಹಂಕಾರ
ಇಲ್ಲೂ ಅದೇ ಎರಡಕ್ಷರ
ಕಾರದುಣಿಸು ತಹ ಹಾಹಾಕಾರ..!

ಬ್ರಹ್ಮ
ಅಹಂಬ್ರಹ್ಮ
ಅದೇ ಎರಡಕ್ಷರದಲಿದೆ ತಮ್ಮ
ಸ್ವಯಂ ಬ್ರಹ್ಮವಾಗೆ ತೊಲಗಿ ತಮ..!

– ನಾಗೇಶ ಮೈಸೂರು
07.06.2016

00961. ದೀಪಾವಳಿಗಷ್ಟು..


00961. ದೀಪಾವಳಿಗಷ್ಟು..
_____________


(01)
ದೀಪಾವಳಿಗೆ
ಮಲಿನ ಪರಿಸರ
ಪಟಾಕಿ ಹಬ್ಬ

(02)
ಸಂಪ್ರದಾಯಕೆ
ಹಚ್ಚಬೇಕು ಪಟಾಕಿ
ಮೌನ ಸುಡಲು

(03)
ದುಷ್ಟ ಶಕ್ತಿಗೆ
ಎಚ್ಚರಿಸೆ ಪಟಾಕಿ
ಮೈಲಿಗೆ ಭುವಿ

(04)
ದೀಪ ಹಚ್ಚುವ
ನಾರಿ ಸೀರೆ ಒಡವೆ
ಜಗಮಗಿಸೆ

(05)
ಉಪದೇಶಕೆ
ತಲೆ ಬಾಗದವರು
ದೇಶ ಭಕ್ತಿಗೆ

(06)
ವಿದೇಶಿ ಮಾಲು
ಕೊಳ್ಳಬೇಡಿ ಪಟಾಕಿ
ಬಿಸಿ ಮುಟ್ಟೀತೆ

(07)
ಹಬ್ಬ ಹೋಳಿಗೆ
ಮಾಡೆ ಸಂಭ್ರಮವಿಲ್ಲ
ಕೊಂಡುಂಡರಾಯ್ತು

(08)
ಅಭ್ಯಂಜನಕೆ
ಅಜ್ಜಿ ತೈಲದ ಲೇಹ್ಯ
ಗತ ವೈಭವ

(09)
ದೀಪ ಬೆಳಕು
ಹಚ್ಚೆ ಜೀವನೋತ್ಸಾಹ
ಹಗಲಿರುಳು

(10)
ಆಚರಣೆಗೆ
ಮೌಢ್ಯದ ಹಣೆಪಟ್ಟಿ
ಯಾಂತ್ರಿಕ ಜಗ

– ನಾಗೇಶ ಮೈಸೂರು
(Picture : little India preparations singapore)

00865. ಕಗ್ಗಕೊಂದು ಹಗ್ಗ ಹೊಸೆದು 21


00865. ಕಗ್ಗಕೊಂದು ಹಗ್ಗ ಹೊಸೆದು 21

ಕಗ್ಗಕೊಂದು ಹಗ್ಗ ಹೊಸೆದು… http://bit.ly/2bKMleI

(published in Readoo Kannada)

00864. ಕುಗ್ಗದಿರು ನೀ..


00864. ಕುಗ್ಗದಿರು ನೀ..
____________________


ಸೈನಾ
ನೀ ಹೇಳದಿದ್ದರೂ
ನಿನ್ನ ಕಣ್ಣಲ್ಲಿ ನೋವು..

ನೋವದು
ಹಾಳು ಎಲುಬಿನದಲ್ಲ
ಮುರಿದಾ ಹೊತ್ತಿನದು..

ಅಲ್ಲಿತ್ತು
ಪದಕವಾಗುವ ತವಕ
ಬಿಡದ ಕಾಲ್ತೊಡಕು..

ನಿರಾಶೆ
ಮೆಡಲ್ಲುಗಳ ಬರಕ್ಕೊಂದು
ಹನಿಯಾಗದ ಅಸಹಾಯಕತೆ..

ಆದರೆ ಗೊತ್ತಾ ನಿನಗೆ ?
ಈಗಲೂ ನಮ್ಮದದೆ ನಮನ
ನಿನ್ನ ಯತ್ನಕೆ ಅಭಿಮಾನ..

ನಿನ್ನೆ ನಿನ್ನ ಪಾಳಿ
ಇಂದು ಇನ್ನೊಬ್ಬರದು
ಮತ್ತೆ ನಾಳೆ ನಿಮ್ಮಿಬ್ಬರದು..!

ನಿನ್ನ ಶ್ರಮ ಅಮೂಲ್ಯ
ಚೇತರಿಸಿಕೊಳ್ಳಲಿ ಚೇತನ ಅದಮ್ಯ
ಕಾಯುವ ಮನಗಳಿಗದೆ ಮುಲಾಮು

ಕುಗ್ಗಿ ತಲೆ ತಗ್ಗಿಸದಿರು
ಹೆಮ್ಮೆಯಿಂದಲಿ ಬೀಗು
ಮರೆಯದಿರು ನಾಳೆ ನಿನದು..

ಈ ದೇಶದ ಜನರು
ಅರಿತಿಹರು ನಿನ್ನ ಒಳ ನೋವ
ನಿವಾರಿಸಿಕೊ ಬೇಗ ಹೊರಗಿನೀ ಬೇಗೆಯ..

– ನಾಗೇಶ ಮೈಸೂರು

👍💐Speedy recovery !👏👍👌🙏

(Picture from saina’s official website)

00838. ನಗುವಲ್ಲೆ ಮುಗಿದ ವ್ಯಾಪಾರ…😛


00838. ನಗುವಲ್ಲೆ ಮುಗಿದ ವ್ಯಾಪಾರ…😛
____________________________


(Picture from Internet source – wikihow)

ಏನಿಲ್ಲ ಎಂತಿಲ್ಲ ಬರಿ ನಗೆಯ ಬಂಡವಾಳ
ಹೂಡಿ ನಿರಂತರ ಲಾಭ ಜಾಣೆಯವಳ ಜಾಲ !

ನಗುವಲ್ಲಿ ರಂಗವಲ್ಲಿ ಹಾಕಿದಳು ಮಳ್ಳಿ
ಮೆಲ್ಲ ಮೆಲ್ಲನೆ ಹೆಜ್ಜೆ ಮೈಲಿಗೆ ಮನದಲ್ಲಿ..

ಮಡಿ ಗರಿಗರಿಯಾಗಿತ್ತು ಸ್ವಚ್ಛ ಶುಭ್ರ ವಲ್ಲಿ
ಬಾಡಿಸಿಬಿಟ್ಟಳು ಚಂಚಲ ನಗುವ ಕಸ ಚೆಲ್ಲಿ..

ನಗೆ ಧೂಪ ಹೊಗೆ ಕೋಪ ಚಡಪಡಿಕೆ ಮೊತ್ತ
ಕಾಣಿಕೆಯಿತ್ತು ಅಣಕು ನಗೆಯೆ ಸೆರೆಯಾಗಿಸಿತ್ತ..

ನಗೆ ಮೊಲ್ಲೆ ಸಿಹಿ ಜಲ್ಲೆ ಮಾತಾಗಿತ್ತು ಕೊನೆಗೂ
ಕೊಟ್ಟ ಮಾತಿನ ಬಂಧ ಬಂಧಿಸಿ ಕೊನೆವರೆಗೂ..

– ನಾಗೇಶ ಮೈಸೂರು

ನಗು, ಮುಗಿದ, ವ್ಯಾಪಾರ, ನಾಗೇಶ, ಮೈಸೂರು, ನಾಗೇಶಮೈಸೂರು, nageshamysore,nagesha, mysore

00817. ಲಲಿತೆಗೊಂದು ಬಿನ್ನಹ..


00817. ಲಲಿತೆಗೊಂದು ಬಿನ್ನಹ..
_________________________


ಸಹಸ್ರನಾಮದ ಘನತೆ
ನಿನದಲ್ಲವೇ ಶ್ರೀ ಲಲಿತೆ ?
ಸ್ತುತಿಸುವ ಮನಗಳ ನೋವು ನೂರಂತೆ
ನೀ ಕೈ ಹಿಡಿದು ನಡೆಸಬಾರದೆ ಮಾತೇ ?

ಸಾಧಕ ಸಿದ್ದಿಯ ಹಾದಿ
ಹಿಡಿಯ ಹೊರಡೆ ಬುನಾದಿ
ನಡೆಸುವೆ ಚಕ್ರದಲಾರೋಹಣ ಸಹಸ್ರಾರ
ಸಂಸಾರಚಕ್ರದೆ ಹಿಡಿಯಲೆಲ್ಲಿ ನಮ್ಮ ಬ್ರಹ್ಮರಂಧ್ರ ?

ನಮ್ಮ ನಿರೀಕ್ಷೆಗಳಂತೆ ನೂರಾರು
ನಿನ್ನ ಪರೀಕ್ಷೆಗಳಂತೆ ಹಲವಾರು
ಗೆಲಿಸುತ ನಡೆಸುವ ಜಗಜ್ಜನನಿ ನೀನಿದ್ದೂ
ಮಾಯೆಯ ಮುಸುಕಲಿ ಸಿಲುಕಿಸಲೆಂತೆ ಖುದ್ದು ?

ಪಾಮರ ರಾಜ್ಯದ ಪ್ರಜೆ ನಾವು
ಪಂಡಿತರಲ್ಲ ಆಸೆಗಳೆಮ್ಮ ಬಾವು
ಪರಿಹರಿಸಮ್ಮ ನೀನಲ್ಲವೆ ಚೇತನ ಪರಬ್ರಹ್ಮ ?
ಸೃಷ್ಟಿಯ ಸ್ಥಿತಿ ಲಯ ಪರಿಪಾಲನೆ ನಿನ್ನಯ ಧರ್ಮ ..

ನಿತ್ಯ ನಿರಂತರ ಏರಿದ ಕರ್ಮದ ಬಂಡಿ
ಮದ ಮತ್ಸರ ಮೋಹ ಮಮಕಾರಗಳನೊಡ್ಡಿ
ಏಕಿಂತು ಪರೀಕ್ಷಿಸುವೆ ನಿನ್ನದೆ ಸೃಷ್ಟಿ ಜತೆ ಚೆಲ್ಲಾಟವೇ ?
ಬಿಡದೆ ಕಾಪಾಡು ತಾಯೆ, ಕಾಪಿಟ್ಟರದು ತಂತಾನೆ ನಿನ್ನಯ ಗೆಲುವೇ!

– ನಾಗೇಶ ಮೈಸೂರು

00810. ಮಾತಿಲ್ಲ ಕತೆಯಿಲ್ಲ ಬರಿ ದೂರ..


00810. ಮಾತಿಲ್ಲ ಕತೆಯಿಲ್ಲ ಬರಿ ದೂರ..
_____________________________


ಮಾತಿಲ್ಲ ಕತೆಯಿಲ್ಲ ಬರಿ ಮೌನದ ಸೊಲ್ಲು
ಮೆಲ್ಲ ಮೆಲ್ಲನೆ ಯಾಕೋ ದೂರವಾದ ಗಜಲ್ಲು
ನೆನಪೊಂದೇ ಸಮ ಯಾತನೆ ಮನದೆ ಕಾಡ್ಗಿಚ್ಚು
ಹೊತ್ತಿಸಿ ಹೋದಳೇಕೋ ನಿಟ್ಟುಸಿರ ಕಲಗಚ್ಚಿಟ್ಟು..

ನುಚ್ಚುನೂರಾಗಿ ಮನಸೆ ಹುಡುಕುತ್ತ ಸೊಗಸೆ
ತಡವಿ ತಡಕಿ ಬಚ್ಚಿಟ್ಟಿದ್ದೇನಾದರೂ ಕನವರಿಸೆ
ಹುಡುಕಿಯೂ ಸಿಗದಲ್ಲ ಬರಿ ನಿನ್ನ ಮಾತಷ್ಟೇ
ಬೊಗಸೆ ಕಣ್ಣಿನ ಮಿಂಚು ಮಿಕ್ಕಿದ್ದೆಲ್ಲ ಕನಸೇ… 

ಮಾತು ಮಾತಾಗಿ ಮಾತಾಡಿದ್ದೆಲ್ಲ ಸಮಯ
ಅರ್ಥವೊ ವ್ಯರ್ಥವೊ ಎಲ್ಲ ತಾನಾಗಿ ವಿನಿಮಯ
ಆರ್ತತೆಯಾಗಿತ್ತೆ ದನಿ ಯಾಚನೆಯ ಬೇಲಿ
ದಾಟಿ ಬೇಡಿದ್ದರು ಲೆಕ್ಕಿಸದ ನಿನ ಮನ ಖೋಲಿ..

ಇರದಿರಲೇನು ಸಂವಹನ ? ನೆನಪುಗಳ ಗಡಿಗೆ
ನೋಡಿಸುತ್ತದೆ ಮತ್ತೆ ಅವುಗಳನೆ ಅಡಿಗಡಿಗೆ
ಬಿಡದೊಂದು ಸುಳಿವನ್ನು ಕದ್ದು ಇಣುಕಿ ಹೆಜ್ಜೆಯ
ಗುರುತ ಕಂಡೊ ಕಾಣದೆಯೊ ಚಡಪಡಿಸೊ ಹೃದಯ..

ಮರೆತಿಲ್ಲ ಮರೆತಂತೆ ನಟಿಸುವ ನಟರಲ್ಲವೆ ನಾವು ?
ನಟಿಸುವ ಭರದಲು ಬಿಡದೆ ಕಾಡುವ ಅದೇ ಹಳೆ ನೋವು
ಅನುಕ್ಷಣದ ಚಿತ್ರಹಿಂಸೆ ಅಣುವಣುವಾಗಿ ಕೊಲ್ಲುತ್ತಿಲ್ಲವೀಗ
ಕಣಕಣದಲ್ಲೆಲ್ಲೆಡೆ ಬೆರೆತು ಬದುಕುತಿದೆ ಬಿಟ್ಟುಕೊಡದೆ ಜಾಗ..


– ನಾಗೇಶ ಮೈಸೂರು

(Picture source: http://m.wikihow.com/Get-Over-a-Break-Up)