01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ –


01620. ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

ಅವನ ಸೃಷ್ಟಿಯೊಳಗವನೆ ಸೂತ್ರಧಾರ..

ಮಂಕುತಿಮ್ಮನ ಕಗ್ಗ ೮೪ ರ ಟಿಪ್ಪಣಿ – ರೀಡೂ ಕನ್ನಡದಲ್ಲಿ

https://www.facebook.com/Readoo.Kannada/posts/1131995653603574

01619. ಭಾವಗಳ ಹಕ್ಕಿ..


01619. ಭಾವಗಳ ಹಕ್ಕಿ..

____________________________

(ಅದೇ ಹೃದಯದ ಚಿತ್ರದ ಮತ್ತೊಂದು ಅವತಾರ)

ಭಾವಗಳ ಹಕ್ಕಿ ಚದುರಿ ಚೆಲ್ಲಾಪಿಲ್ಲಿ

ನೋವಿಗೊ ನಲಿವಿಗೊ ನೀವೆ ಹುಡುಕಿಕೊಳ್ಳಿ

ಹಕ್ಕಿಗೂಡದು ಚೊಕ್ಕ ನೂರೆಂಟು ಸಂಸಾರ

ಬಂದು ಹೋಗುವ ನೆಂಟ ನೂರೆಂಟವತಾರ || ೦೧ ||

ಎಚ್ಚರಿಕೆಯ ಗಂಟೆ ಬಾರಿಸಿ ಸತತ

ಮಲಿನ ನುಂಗುತ ಮಡಿಯಾಗುವ ಮೊರೆತ

ಒತ್ತಡವೊ ಕೊರೆಯೊ ಅಚ್ಚ ಬಿಳಿ ಸೂಟು

ಉಟ್ಟಿರಲೆಂದೆಷ್ಟು ಬವಣೆ ಇಟ್ಟರು ಒಗಟು || ೦೨ ||

ಅಸ್ತಿಪಂಜರದಲಿಟ್ಟ ಪರಿ ಬೇಡಿಯೊ ರಕ್ಷಣೆಯೊ?

ಗುಟ್ಟಿನ್ಹಕ್ಕಿಗಳೆಲ್ಲ ಮುಚ್ಚಿಡುವ ಹವಣಿಕೆಯೊ?

ಕಾಣಿಸದ ಭೌತಿಕದೆ ಕಾಣಿಸುವ ಭಾವುಕ ಯಾನ

ಹಕ್ಕಿ ಹಾರುವುದೊ ಕುಕ್ಕುವುದೊ ಅರಿವಾಗದಣ್ಣ || ೦೩ ||

ಕೀಲಿ ಬೇಡದ ಗಡಿಯಾರ ವಿಶ್ರಮಿಸದರೆಗಳಿಗೆ

ಕೀಲಿ ಕೊಡುತೆಲ್ಲಕು ನಡೆಸೊ ರಾಜ್ಯಭಾರದ ಮಳಿಗೆ

ಅಂತವೊ ಅನಂತವೊ ನಿಲದಿರಲೆಂದು ಹೋರಾಟ

ಸೋತು ಕೂತಾ ಗಳಿಗೆ ಬದುಕಿದ ಬಾಳು ವಿಶ್ರಾಂತ || ೦೪ ||

ಬಿಡುತಲಿಹುದಂತೆ ಸತತ ಬಿಟ್ಟೆ ನಮ್ಮಯ ಹಕ್ಕಿ

ಖಾಲಿ ಉಗ್ರಾಣವಾಗುವತನಕ ಎಲ್ಲಾ ತರ ಗಿರಕಿಕೊನೆಯಲಿರುವ ಸರಕು ಮೂರು ಮತ್ತೊಂದು ತಾಳು

ಕಾಡಿ ಕಂಗೆಡಿಸುವ ಮುನ್ನ ಹಾರು, ಗೂಡ ಬಿಟ್ಟೇಳು || ೦೫ ||

– ನಾಗೇಶ ಮೈಸೂರು

೨೧.೦೨.೨೦೧೮

(Nagesha Mn)

(Picture source : Internet / social media received via Yamunab Bsy – thank you 😊👍🙏)

01618. ಮುಗುಳುನಗೆ ಕಾರ್ಖಾನೆ !


01618. ಮುಗುಳುನಗೆ ಕಾರ್ಖಾನೆ !

___________________________________

ಇದು ಉತ್ಪಾದನಾ ಯುಗ

ಕ್ರಾಂತಿ ವೇಗವೆ ಪ್ರಧಾನ

ಸರಸರ ಸರಕು ಸಂಭ್ರಮ

ನೋಟ ಗುಣಮಟ್ಟ ವಿಹಂಗಮ ! || ೦೧ ||

ಯಾಂತ್ರಿಕ ಬಲ ಸನ್ನದ್ಧ

ಕೃತಕ ಬುದ್ಧಿಮತ್ತೆ ಬೆಂಬಲ

ಅಳತೆ ಮಸೂರದಡಿ ಚೊಕ್ಕ

ಇರಬೇಕಲ್ಲ ಪ್ರತಿಶತ ಪಕ್ಕಾ ! || ೦೨ ||

ಸರಕು ಸಾಮಾಗ್ರಿ ಸಾಲದು

ಹೊದಿಕೆಗು ಮಿರಮಿರ ಮೆರುಗು

ಕೊಳ್ಳುವ ಮನ ಬೆರಗಾಗೆ ಚಂದ

ಮುಚ್ಚೆ ಸಾಕು ಒಳಗಿನ ಕುಂದ ! || ೦೩ ||

ಕೊಳ್ಳೊ ಮನ ಡೋಲಾಯಮಾನ

ಬೆಲೆಯಾಗಿರದಲ್ಲ ಅಪ್ಯಾಯತೆ

ಮೌಲ್ಯ ಲೆಕ್ಕಾಚಾರ ಗೊಂದಲ ಸದಾ

ಮಾರುವಾ ಸೈನ್ಯ ನಿವಾರಿಸಲಸಂಬದ್ಧ || ೦೪ ||

ಮಾತಲ್ಲಿ ಗಾರುಡಿ ಮಂತ್ರದ ಮೋಡಿ

ಮುಗುಳುನಗೆಗು ಉತ್ಪಾದನೆ ಜಾಡು

ತೆರೆದ ಬಾಯುದ್ದಗಲ ಗಿಂಜಿದ ದಂತ

ಎಲ್ಲವೂ ಕೃತಕ, ಮಾತೆ ಮಾರುವದ್ಭುತ || ೦೫ ||

– ನಾಗೇಶ ಮೈಸೂರು

೨೧.೦೨.೨೦೧೮

(Picture source: https://goo.gl/images/AqDbtZ)

01617. ನವಿರು ಹಕ್ಕಿ..


01617. ನವಿರು ಹಕ್ಕಿ..

____________________

ಎಂಥ ಚಂದ ಮುದ್ದು ಕೋಳಿ

ಬಿಳಿ ರೆಕ್ಕೆ ಪುಕ್ಕ ಸಾಕಿದ ತಳಿ

ಹೃದಯವದರ ಹೆಸರು ಗೊತ್ತ?

ನಿತ್ಯ ಹಾರಾಟ ರೆಕ್ಕೆ ಬಡಿಯುತ್ತ! || ೦೧ ||

ಸುತ್ತಮುತ್ತದಕೆ ಎಲ್ಲರ ಧಾಳಿ

ಕಂಗೆಡಿಸಲಿದೆ ಭಾವನೆ ಕೊಳ್ಳಿ

ಗರಿಗೆದರಿಸೊ ಉತ್ಸಾಹ ಸಹಜ

ನೋವೊ ನಲಿವೊ ನಿಮಿರು ಸಜಾ || ೦೨ ||

ಉಣಿಸಲೆಷ್ಟೊ ಉಡುಗೆ ತೊಡಿಗೆ

ಬಯಸುತದರ ಫಲ ಅಡಿಗಡಿಗೆ

ಅರಿತವರಾರದರ ನಿಜ ಸಂಕಟ

ಅದಾದರೆ ಸರಿ ಅವರಾ ವೆಂಕಟ || ೦೩ ||

ಗರಿ ಬಿಚ್ಚಿ ಹಾರಿ ಹರ್ಷೋಲ್ಲಾಸ

ಖೇದಕುದುರಿ ಕರಗುವಾ ಕ್ಲೇಷ

ಕುಸಿದ ಗೋಡೆ ತಾನೆ ಕಟ್ಟಬೇಕು

ಕಟ್ಟಿದ ಅಡೆತಡೆ ಮುರಿಯೆ ಸಾಕು || ೦೪ ||

ಎದೆ ಕೋಟೆ ಒಳಗಿಹ ಕುಸುಮ

ಕಾಲಿಕ್ಕದೆ ತುಳಿವ ಜನ ಅಧಮ

ಹಾರಿಹೋಗೆ ಬರಿ ರೆಕ್ಕೆಪುಕ್ಕವಲ್ಲ

ಪ್ರಾಣಪಕ್ಷಿ ಜಾರೀತೊ ಮುಠ್ಠಾಳ ! || ೦೫ ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source: Internet / social media received via Yamunab Bsy – thank you 🙏👍😊)

01616. ಮತ್ಸ್ಯಾವತಾರ…


01616. ಮತ್ಸ್ಯಾವತಾರ…

_________________________

ಯಾರದೊ ಮೂಗಿಗೆ ಬದುಕನು ಕಟ್ಟಿ

ಬಾಳನೌಕೆಯ ನಡೆಸಿದೆ ಅವ್ಯಕ್ತ

ಬೀಳುತೇಳುತ ತೆಪ್ಪವೊ, ತೇರೊ

ಒಪ್ಪವೊ ಓರಣವೊ ಮುಳುಗದೆ ಪೂರ ! || ೦೧ ||

ಮೀನಿಗೆ ಸಹಜ ನೀರೊಡನಾಟ

ನೀರಲುಸಿರೆ ಆಡದಿಹ ಜೀವಕೆ

ಕೂತ ದೋಣಿ ಏರಿಳಿತ ಹೊಯ್ದಾಟ

ಮಳೆ ಗಾಳಿ ಮದ್ದಳೆ ಬಿಸಿಲು ಚಳಿಯಾಟ || ೦೨ ||

ತೇಲಲುಂಟೆ ಅರ್ಧ ಮುಳಗದೆ ನೌಕೆ ?

ಈಜಬಹುದೆ ತುಸು ನೀರಿಗಿಳಿಯದೆ ?

ಬಿದ್ದವರು ಬಿದ್ದರು ಗೆದ್ದವರದೆ ಗೆಲುವು

ಸದ್ದುಗದ್ದಲದೆ ಯಾವುದು ಸರಿ ಗಮ್ಯ ? || ೦೩ ||

ನಾವೆ ನಾವಿಕ ನಾಯಕ ಭ್ರಮೆಯ ಜಗದೆ

ಎಲ್ಲರ ಕೈಯಲು ದಿಕ್ಸೂಚಿ ನಿಯಂತ್ರಣ

ಎಲ್ಲರೊಟ್ಟಿನ ನಡಿಗೆ ನಡೆಸೀತೆ ಮುನ್ನಡೆಗೆ ?

ರೊಟ್ಟಿ ತುಂಡ ಇರುವೆ ಗುಂಪು ಮುತ್ತಿದ ಹಾಗೆ || ೦೪ ||

ಇರಲೇಬೇಕಲ್ಲಿ, ಯಾವುದೊ ಮತ್ಸ್ಯಾವತಾರ

ಇರದಿದ್ದರೆಂತು ಈ ನಾವೆ ನಡೆದೀತು ಇಂತು?

ದಿಕ್ಕುದಿಕ್ಕಿಗೆಳೆದರು ಮೊತ್ತದಲಿ ಅದೆಲ್ಲಿಗೊ

ನಿಚ್ಚಳದೆ ಚಲಿಸುತಿದೆ ವ್ಯಕ್ತಾವ್ಯಕ್ತದ ನಡುವೆ ! || ೦೫ ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source : Internet / social media – taken via a post from Sridhar Bandri – thank you ! 🙏👍😊)

01615. ಮುಸುಕು…


01615. ಮುಸುಕು…

________________________

ತನ್ನಿರುವನರುಹುತಿದೆ

ತಾನಿರದೆ ಕಾಣಿಸದೆ

ಇನಿತು ತೋರದ ಕುರುಹು

ಯಾಕೆ ತೊಟ್ಟಿತೊ ಮುಸುಕು ? ||

ಒಳಗಿದೆ ಹೊರಗಿದೆ

ಸುತ್ತಮುತ್ತೆಲ್ಲ ಅದರಸ್ತಿತ್ವ

ನಾನಲ್ಲ ನಾನೆನಿಸುವ ತಾನು

ತನ್ನೇಕೊ ಬಚ್ಚಿಡುವ ಹಂಗು ? ||

ನಿಲುಕದೆತ್ತರ ಉದ್ದ

ಇಂಗಿತ ಸಾಕ್ಷಿ ಸಮೃದ್ಧ

ಹುಡುಕಿಸಬೇಕೇಕೊ ಮಾಯೆ

ಆವರಿಸಿ ತೊಳಲಾಡಿಸೊ ಪರಿ ||

ತನ್ನದೆ ಚಿಂತನೆ ಯೋಜನೆ

ಸ್ವಂತದಳವಡಿಕೆ ಅನುಷ್ಠಾನ

ಸೂತ್ರದ ಬೊಂಬೆ ದಾಳದ ಪಾತ್ರ

ಕೊಡೆ ಸರಿಯೆ ಸರಿಯಾಡದ ಪಟ್ಟ ? ||

ಹೋಗಲಿ ಇರಲೆಂತೊ ಗುಟ್ಟೆಲ್ಲ

ಬಿಚ್ಚಿಡಬಾರದೆ ನಿನ್ನಾ ಒಗಟ ?

ಕಾಣಿಸಿಕೊಂಡಾಡು ನಿನ್ನಾಟ ನಿನ್ನಿಚ್ಛೆ

ಸ್ವಯಂಭೂ, ನಿನಗೇಕಿತರ ದೂಷಣೆ ಶಿಕ್ಷೆ? ||

– ನಾಗೇಶ ಮೈಸೂರು

೨೦.೦೨.೨೦೧೮

(Nagesha Mn)

(Picture source: Internet / social media received via FB friends- thank you all 🙏👍😊)

01614. ಶಾಪವೆ? ವರವೆ?…


01614. ಶಾಪವೆ? ವರವೆ?…

___________________

ಹಿಂಬಾಲಿಸಿದಾಗ

ಕೆನ್ನೆಗೆ ಬಿಗಿದಿದ್ದು

ಕರವೆ..

ಹಸಿದು ಬಂದಾಗ

ತಟ್ಟೆಗೆ ಬಡಿಸಿದ್ದು

ಕರವೆ..

ಕಂಗೆಟ್ಟು ಕೂತಾಗ

ನೇವರಿಸಿ ಸಂತೈಸಿದ್ದು

ಕರವೆ..

ದಣಿದು ಹಾಸಿಗೆಗೊರಗೆ

ತೋಳಪ್ಪುಗೆಯ ಹಾರ

ಕರವೆ..

ದೇಶ ವಿಕಾಸ ಪ್ರಗತಿಗೆ

ಕಟ್ಟಬೇಕಾದ್ದೆ ನಾವೆಲ್ಲ

ಕರವೆ..

ನೇರವೊ ಪರೋಕ್ಷವೊ

ಎಲ್ಲೆಡೆಯಿಹ ಕೈವಾಡ

ಕರವೆ..

ಕರವೆ,

ನೀ ಶಾಪವೆ?

ವರವೆ?

– ನಾಗೇಶ ಮೈಸೂರು

೧೯.೦೨.೨೦೧೮

01613. ಅಂತಃಕರಣ ಚತುರಂಗಬಲಂ


01613. ಅಂತಃಕರಣ ಚತುರಂಗಬಲಂ

_____________________________________

(ಅಹಂ, ಬುದ್ಧಿ, ಚಿತ್ತ, ಮನಸು ಇವನ್ನು ಅಂತಃಕರಣವೆನ್ನುತ್ತಾರೆ. ಅವೆಲ್ಲ ಸಮನ್ವಯದಿಂದ ಪ್ರವರ್ತಿಸಿದರೆ ಅದ್ಭುತ ಫಲಿತ ಸಾಧ್ಯ. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ ಎನ್ನುವುದು ಕವನದ ಸಾರ – ಎಲ್ಲವು ತಮ್ಮ ತಮ್ಮ ಖಾತೆಯನ್ನು ತಮ್ಮಿಚ್ಚೆಯನುಸಾರ ನಿರ್ವಹಿಸಿದರೆ ಒಳಗೊಂದು ಭಾವ, ಹೊರಗೊಂದು ಭಾವ ಕಾಣಿಸಿಕೊಂಡು ಗೊಂದಲಮಯವಾಗಿಸುವುದರಿಂದ. ಧನ್ಯವಾದಗಳು 🙏👍😊)

ಅಂತಃಕರಣದಂತಃಪುರದಿಂ

ಚತುರಂಗಂ ಬಲಂ ಪ್ರಖರಂ

ಚಿತ್ತಂ ಮನಂ ಅಹಂ ಬುದ್ಧಿಃ

ಸಮರ ಸಿದ್ಧಂ ಸೂಕ್ತಂ ಸಿದ್ಧಿಃ || ೦೧ ||

ಕ್ಷಿಪ್ರೋದಯಂ ಮನೋ ವಿಚಾರಂ

ಮೂರ್ತಾಮೂತಂ ಅನಿಯಮಿತಂ

ಪರಿಸರಂ ಪ್ರೇರಿತಂ ಪ್ರಲೋಭನಂ

ಅಪರಿಚಿತಂ ಆಲೋಚನಾ ಕ್ರಮಂ || ೦೨ ||

ಮನಚಾತುರ್ಯಂ ಚಿತ್ತಚಾಂಚಲ್ಯಂ

ಸೂಕ್ತಾಸೂಕ್ತಂ ಸಂಶಿತಾತ್ಮ ಸಕಲಂ

ಚಪಲಚಿತ್ತಂ ವಿಕಲಕಲ್ಪ ಯೋಜಿತಂ

ಚರಿತ್ರಾ ಸಾದೃಶ್ಯಂ ವಿವೇಕಂ ಅದೃಶ್ಯಂ || ೦೩ ||

ಚಿತ್ತೋತ್ಕಟ ಭಾವಂ ಬುದ್ಧಿಶಕ್ತಿ ಪ್ರಕಟಂ

ವಿವೇಚಿತಂ ಸಂಧರ್ಭಂ ತುಲನಾಕ್ರಮಂ

ಚಿತ್ತೋಪದೇಶಂ ಹಿತೋಪದೇಶಂ ಸ್ವಸ್ಥಂ

ಜಾಗೃತ ಭಾವಂ ಹಿತ ಫಲಾಫಲ ಗಣಿತಂ || ೦೪ ||

ಸಮಾಲೋಚಿತ ಸತ್ವಂ ಅಂತಿಮ ದ್ವಾರಂ

ಚಿತ್ತಂ ಬಂಧಿ ಅಹಂ ತ್ರಿಗುಣಾಸುರ ಸಾರಂ

ವಿಚಾರ ಶೋಧಂ ಅಹಂ ಲೇಪಂ ಸಮವಸ್ತ್ರಂ

ಭಾವಂ ವಾಕ್ಚಾತುರ್ಯಂ ಶುದ್ಧಕೃತಕ ಮಿಶ್ರಂ || ೦೫ ||

– ನಾಗೇಶ ಮೈಸೂರು

೧೭.೦೨.೨೦೧೮

(Nagesha Mn)

(Picture source internet / social media received via FB friends – thanks a lot ! 🙏👍😊)

01612. ಆ ವಯಸೆ ಚೆನ್ನಿತ್ತು…


01612. ಆ ವಯಸೆ ಚೆನ್ನಿತ್ತು…

______________________________

ಅರಿಯದ ವಯಸೆ ಚೆನ್ನಿತ್ತಲ್ಲ..

ಇರುವೆ ಸಾಲಿಗಿಕ್ಕುತ್ತ ಸಕ್ಕರೆ

ಕಾಳೆರಚುತ್ತ ಹಕ್ಕಿಗೂ ಊಟ

ತುಂಡಲಿ ನಾಯಿಗು ಪಾಲು

ಬೆಕ್ಕಿಗು ಬಟ್ಟಲಲಿತ್ತು ಹಾಲು

ಪೂಜೆಯ ಹಣ್ಣು ಮಂಗನಿಗೆ

– ದಯೆಯೆ ಧರ್ಮದ ಮೂಲ ! || ೦೧ ||

ಬೆಳೆದಂತಳೆಯುವ ಬದುಕು

ಕೆಳೆ ಬಳಗದ ಜತೆ ಹಸಿಬಿಸಿ

ಹಂಚಿ ತಿನ್ನುವ ಕೊಸರಾಟ

ಬೈಟು ಟುಬೈತ್ರಿ ಜಟಾಪಾಟಿ

ಖಾಲಿಜೇಬೂ ಕೊಡುಗೈ ದೊರೆ

ಬಿದ್ದ ಹೊತ್ತಲಿ ಹೆಗಲಿತ್ತ ಮೋರೆ

– ಸಮರಸ ಜೀವನ ಆದರ್ಶ ಚಿತ್ತ || ೦೨ ||

ಪ್ರಾಯದಲರಳುವ ಕನಸ ಸೊಗ

ಜತೆಯಾದ ಜೀವದ ಸುತ್ತ ಜೀವ

ಹೆಜ್ಜೆಹೆಜ್ಜೆಗು ಹೂ ಚೆಲ್ಲುವ ತಪನೆ

ಬೇಡುವ ಮುನ್ನ ತಂದಿಕ್ಕುವ ಬೇನೆ

ಬೀಳದಂತಾರ ನೋಟ ಕಾವಲಲಿ

ಕಾದು ಕೆಂಗಣ್ಣು ಬಿಡುವ ಅವತಾರ

– ನಾನು ನನ್ನದು ಸ್ವಾರ್ಥ ಪ್ರೀತಿ ಆರ್ತ || ೦೩ ||

ನೆರಳೀವ ಹೆಮ್ಮರ ಚಾಮರವೀಗ

ಯಾಕೊ ಎಲ್ಲಾ ಅವಸರವಸರ..

ಬೈಕು ಕಾರು ಬಸ್ಸು ತುಂಬಿ ಪಥ

ವೇಗಕಿದ್ದರು ಮಿತಿ ಮನಸಿನೋಟ

ಕಾದ ಮೀಟಿಂಗುಗಳು, ಮತ್ತೊಂದು

ಅವ ಬಿದ್ದನಲ್ಲ ರಸ್ತೆಗೆ, ಕಾರು ಗುದ್ದೆ ಬೈಕು

ಗೊತ್ತಿಲ್ಲವೇಕೊ – ನಾನೂ ನಿಲದೆ ಓಡಿಸಿದೆ ! || ೦೪ ||

ಪಕ್ವ ಪ್ರಬುದ್ಧ ನೀತಿ ನೇಮ ಸಂಹಿತೆ

ಕಾಡುತವೆಲ್ಲ ಒಟ್ಟಾಗಿ ಮುತ್ತಿಗೆ ಧಾಳಿ

ಬೈಕಿನಂತೋಡುತಿದೆ ಮನದ ತಿಪ್ಪೆ

ಬಿಡಲೊಲ್ಲದೇಕೊ ಬಿದ್ದವನ ನೆನಪು

ನಾನು ನನ್ನವರು ಬಿದ್ದರಷ್ಟೆ ತುರುಸೆ ?

ನಗರ ಸಂತೆ ಮನುಜ ಜೀವವೆ ಅಗ್ಗವೆ ?

ಆ ವಯಸೆ ಚೆನ್ನಿತ್ತು – ಮನಸಾಗಿತ್ತಲ್ಲ ಸ್ವಚ್ಚ ! || ೦೫ ||

– ನಾಗೇಶ ಮೈಸೂರು

೧೯.೦೨.೨೦೧೮

(Nagesha Mn)

(Picture source : Internet / social media received via / posted FB friends : picture 1 Muddu Dear, Picture 2 Akshay Balegere – thank you both 🙏👍😊. @Akshay Balegere, this poem is inspired by your post narrating the incident – thanks again 🙏🙏👍)

01611. ಅಡಿಗರಿಗೆ..


01611. ಅಡಿಗರಿಗೆ..

__________________

ಅಡಿಗರ ಜನ್ಮದಿನವಿಂದು. ನನಗೆ ಕನ್ನಡದ ಹಿರಿಯ ಕವಿಗಳ ಹೆಸರು ಗೊತ್ತೆ ಹೊರತು ಅವರ ಕಾವ್ಯಗಳ ಓದುವಿಕೆ, ಅಧ್ಯಯನದ ಅನುಭವವಿಲ್ಲ ( ಅಲ್ಲಿಲ್ಲಿ ಭಾವಗೀತೆಯ ಅಥವ ಶಾಲೆಯ ಪದ್ಯಗಳ ರೂಪಲ್ಲಿ ಓದಿದ್ದು ಬಿಟ್ಟು). ಆದರೂ ಅಡಿಗರ ಕಾವ್ಯಗಳ ಕುರಿತು ನಾನು ಕೇಳಿದ ಚರ್ಚೆ, ವಿಮರ್ಶೆ, ಸಂವಾದ ಇತರರಿಗಿಂತ ಹೆಚ್ಚು. ಮುಂದಿನ ಬಾರಿ ಭಾರತಕ್ಕೆ ಭೇಟಿಯಿತ್ತಾಗ ಅವರ ಕಾವ್ಯದ ಪುಸ್ತಕ ಖರೀದಿಸಿ ಒಂದಷ್ಟನ್ನಾದರು ಅರಗಿಸಿಕೊಳ್ಳಲು ಯತ್ನಿಸುವ ಮನಸಾಗಿದೆ.

ಈ ದಿನದ ನೆನಪಿಗೊಂದು ಬಾಲಭಾಷೆಯ ಪದ್ಯ !

ಅಡಿಗರಿಗೆ..

_________________

ಅಡಿಗಡಿಗೆ ಅಡಿಗರದೆ

ಕವನದ ಸದ್ದು ಸರಹದ್ದು

ಹೆಕ್ಕಿದ್ದಲ್ಲೊಂದಿಲ್ಲೊಂದು

ಮಿಕ್ಕಿದ್ದು ಸಂವಾದ ಮಾತು || ೦೧ ||

ಕಾವ್ಯದ ಮಾತಾಡುವರೆಲ್ಲ

ಹೇಳದೆ ಬಿಡರು ಹೆಸರ

ಬರಿ ಹೆಸರಿನನುರಣದೆ

ಹೆಸರ ನೆನೆವ ಖಾಲಿ ಪಾತ್ರೆ..|| ೦೨ ||

ಉಲ್ಲೇಖಿತ ಭಾಷಣ ಭಾಷ್ಯದ

ಭಾವಗೀತೆಗಳ ದನಿಯಾಚೆ

ರಿಂಗಣ ಮೋಹನ ಮುರಳಿ

ಅಂಗಣಕೇಕಿನ್ನು ಇಳಿಯದಾಯ್ತೆ ? || ೦೩ ||

ಗಾಳಿಯಲಿ ಪಸರಿಸಿ ಕವಿತೆ

ಭೂಮಿಗೀತೆಯಾಗಿ ಮಣ್ಣಲಿ

ಬಿತ್ತಿದ ಬೀಜ ಸಸಿ ಮರವಾಗಿ

ಕಾವ್ಯಲೋಕಕಿನ್ನೂ ಮೆರವಣಿಗೆ.. || ೦೪ ||

ತೊಡೆ ನಾಚಿಕೆ ತೊಡರೆಡರು

ಏನೆಲ್ಲ ದಕ್ಕುವ ಭಾವ ನಿತ್ಯ

ಬಿಡು ಆಘ್ರಾಣಿಸಲೇನಿದೆ ಅಡ್ಡಿ ?

ತಂದೊದಿಬಿಡಲೊಮ್ಮೆ – ದಕ್ಕಲೆಟುಕಿದಷ್ಟು ! || ೦೫ ||

– ನಾಗೇಶ ಮೈಸೂರು

೧೮.೦೨.೨೦೧೮

(Nagesha)

(Picture source – wikipedia : https://kn.m.wikipedia.org/wiki/ಗೋಪಾಲಕೃಷ್ಣ_ಅಡಿಗ#/media/ಚಿತ್ರ%3AGka.jpg)

01610. ಉದರದಲರ್ಧ, ಶಿರದಲಿನ್ನರ್ಧ..


01610. ಉದರದಲರ್ಧ, ಶಿರದಲಿನ್ನರ್ಧ..

______________________________________

ನೋಡೆಷ್ಟು ಚಂದ ಸಖಿ

ನೀನರ್ಧ ನಾನರ್ಧ !

ಮಿಲನ ಮಾಡಿದ ಅಡಿಗೆ

ಕಣಾರ್ಧಗಳ ಮೆರವಣಿಗೆ || ೦೧ ||

ಉತ್ತುಬಿತ್ತಿ ಕ್ಷೇತ್ರಫಲದೆ ಸಖಿ

ಸುಖವೆ ಚಿಗುರ್ಹೊಡೆದಿತ್ತೆ

ಭುವಿ ನೀ ಫಲವಿತ್ತೆ ಸಫಲ

ವಿಸ್ಮಯ ಹಣ್ಣಾಯ್ತೇಗೆ ಚಪಲ ?! || ೦೨ ||

ನಾ ಕೊಟ್ಟೆ ನೀ ಪಡೆದೆ ಸಖಿ

ಬಿಟ್ಟುಕೊಡದೆ ಬಸಿರುಟ್ಟೆ !

ನೋಡಲ್ಲಿ ನಮ್ಮದೆ ಪ್ರತಿಗಣ

ಗುಡಾಣ ಬೆಳೆ ಭ್ರೂಣದುಗ್ರಾಣ ! || ೦೩ ||

ನಿನ್ನುದರದೆ ನನ್ನಾ ಚಿತ್ತದೆ ಸಖಿ

ಹೊತ್ತೆಲ್ಲಾ ಆತಂಕ ಕನಸು

ಹೆರುತಿವೆ ಗಳಿಗೆಗೊಂದು ಪ್ರಸವ

ಬದಲಾಗಿಹೋಯ್ತೆ ಮನೋಭಾವ ! || ೦೪ ||

ಅರ್ಧನಾರಿ-ಅರ್ಧನಾರೀಶ್ವರ ಸಖಿ

ಅರಿವಾಯ್ತೀಗ ತತ್ವ ವಿಭಜಿತ..

ಬೆರೆತಾಯ್ತು ಪರಿ ಅರಿವಾಗದಂತೆ

ನನದೊ ನಿನದೊ ಎಲ್ಲಾ ಅಮೂರ್ತ ! || ೦೫ ||

ಬಂದರೇನು ಸಖಿ ಶಿಶು ಜಗಕೆ

ಮುಕ್ತಾಯವಲ್ಲ ಆರಂಭ..

ಕರುಳಬಳ್ಳಿ ನಿನ್ನ ಜೀವನಪೂರ್ತಿ

ಹೊಣೆಯ್ಹೊತ್ತ ತಲೆಗೆ ನೀ ಜತೆಗಾತಿ ! || ೦೬ ||

– ನಾಗೇಶ ಮೈಸೂರು

೧೮.೦೨.೨೦೧೮

(Nagesha Mn)

(Picture source : Internet / social media , received via Chandrashekar Hs – thank you 🙏😊👍! I think in the past, I wrote another poem for the same picture and hence tried a different version this time. Luckily we have the artist signature in the picture : kudo’s to the artist as well 🙏🙏 🙏)

01609. ಆಸೆಯ ಕಥೆ..


01609. ಆಸೆಯ ಕಥೆ..

______________________

ನಮ್ಮ ಆಸೆಯೆಷ್ಟು ಭಾರ ?

ಬರಿ ಕನಸಿನಷ್ಟು ಹಗುರ !

ಅದು ಇರುವುದೆಷ್ಟು ದೂರ ?

ಬರಿ ನಿದಿರೆಯಷ್ಟು ಹತ್ತಿರ ! || ೦೧ ||

ಹೊರಬೇಕೇನು ಮಣಭಾರ ?

ಹೊರಲಿಲ್ಲವಲ್ಲ ಅದಕೆ ಗಾತ್ರ..

ಅದರುದ್ದ ಅಗಲ ಲೆಕ್ಕಾಚಾರ ?

ಶೂನ್ಯಗುರುತ್ವ ಅದರ ಸಹಚರ ! || ೦೨ ||

ಸಾಕೇನಷ್ಟು ಪುಟ್ಟದಿರೆ ಆಸೆ ?

ಯಾರೆಂದರದ ಸಣ್ಣದೆಂದು..

ಮತ್ತೆ ಹೇಗದರ ಭೌತಿಕಾ ಅದೃಶ್ಯ ?

ಶೂನ್ಯಕಿಟ್ಟಶೂನ್ಯ ಅನಂತದನಂತ || ೦೩ ||

ಸೋಜಿಗವಿದನೆಂತು ನಾ ವಿವರಿಸೇನು ?

ಆದಿ ಅಂತ್ಯವಿಲ್ಲವದೆ ಆಸೆ ಕಾನೂನು..

ಪುಂಖಾನುಪುಂಖ ಸ್ಪೋಟವಿರದೇನು ?

ಇತಿಮಿತಿ ಇರದಲ್ಲ ಆಸೆಯ ಥಾನು ! || ೦೪ ||

ಕಾಣದ್ದು ಕಣ್ಣಿಗೆ ಬಣ್ಣವಿಲ್ಲ ರುಚಿಯಿಲ್ಲ..

ತೂಕವಿಲ್ಲದೆಯು ಭಾರ ಹೊತ್ತರೆ ಕಲ್ಲ !

ಬಂದರೆಬರಲಿ ಆಸೆ ಹೂವಿನಾ ಗಂಧ

ಆಘ್ರಾಣಿಸಿ ತಣಿಸು ದುರಾಸೆ ದುರ್ಗಂಧ || ೦೫ ||

– ನಾಗೇಶ ಮೈಸೂರು

೧೮.೦೨.೨೦೧೮

(Nagesha Mn)

ಚಿತ್ರ: ಸ್ವಯಂಕೃತಾಪರಾಧ (ಮೊಬೈಲ್ ಕ್ಲಿಕ್)

01608. ನಾನಾರು???


01608. ನಾನಾರು???

_______________________

ನಾನನಂತಂ ನಾನನಿತ್ಯಂ

ನಾನಜರಾಮರಂ ನಾನತ್ವಂ!

ನಾನನನ್ಯಂ ನಾನಾನಾಮಂ

ನಾನಿಹೆ ಶ್ಯೂನಂ, ನಾನೆ ಮಾನ್ಯಂ || ೦೧ ||

ನಾನೇಕಂ ನಾನನೇಕಂ

ನಾನೇಕಮೇವ ಅದ್ವಿತೀಯಂ

ನಾನದ್ಭುತಂ ನಾನೇ ಬ್ರಹ್ಮಂ

ನಾನಾಕಾರಂ, ನಾನಿಹ ನಿಜಂ || ೦೨ ||

ನಾ ಪರಬ್ರಹ್ಮಂ ನಾನೆ ಗಮ್ಯಂ

ನಾನರುಣ ಕೋಟಿ ಪ್ರಖರ ಘನಂ

ನಾನುಜ್ವಲಂ ನಾನಿಗೂಢ ತಮಂ

ನಾನೆ ಜಡಂ , ನಾ ಚರಾಚರ ಸಕಲಂ || ೦೩ ||

ನಾನಾದಿಪುರುಷಂ ಮೂಲಪ್ರಕೃತಿಂ

ನಾನೇ ಪ್ರಕಾಶಂ ವಿಮರ್ಶಾರೂಪಂ

ನಾನಂತಕರಣಂ ನಾನೆ ತ್ರಿಗುಣಂ

ನಾನಾದ ಅಹಂ, ನಾನೆ ತ್ರಿಕಾರ್ಯಂ || ೦೪ ||

ನಾನಾರ್ಯಂ ನಾನಾಚಾರ್ಯಂ

ನಾನೆ ಶಿಷ್ಯಕೋಟಿಂ ಗುರುಂಕುಲಂ

ನಾನರಿಯೆಂ ನಾನಾರು ಸ್ವಯಂ

ನನ್ನರಿವಾದೊಡೆಂ, ನಾ ವಿಮುಕ್ತಂ ! || ೦೫ ||

ನಾನಿರಾಕಾರಂ ಸಾಕಾರಂ

ನಾನಿರ್ಗುಣ ಸಗುಣ ಸ್ವರೂಪಂ

ನಾನಮೇಯಂ ಅಪ್ರಮೇಯಂ

ನಾನಣುರೇಣುತೃಣಕಾಷ್ಠ ಬಲಂ || ೦೬ ||

ನಾ ಸಂಭವಾಮಿ ಸರ್ವಾಂತರ್ಯಾಮಿ

ನನ್ನೊಳಾಶ್ರಿತಂ ಕೋಟಿ ಬ್ರಹ್ಮಾಂಡಂ

ನಾನದರಸ್ತಿತ್ವಂ ಜಗಪರಿಪಾಲನಾರ್ಥಂ

ನಾನದರೊಳಗಿಹೆಂ ನೀ ನನ್ನೊಳ ವಿಶ್ವಂ! || ೦೭ ||

– ನಾಗೇಶ ಮೈಸೂರು

೧೭.೦೨.೨೦೧೮

(Nagesha Mn)

(Picture source: Internet / social media received via FB friends – thank you all🙏👍😊)

01607. ನನ್ನ ಜಗದೆ ನಾನೆ..


01607. ನನ್ನ ಜಗದೆ ನಾನೆ..

__________________________________

ಮಳೆಯಾಗುದುರಿವೆ ಕನಸೆಲ್ಲ ಹನಿದು

ನನಸಾಗಿಸುವಾಸೆಗೆ ಬಾಳೆಲೆ ನೆರಳು

ಕಾದು ಕೂತಿರುವೆ ಮೀನಂತೆ ಹಿಡಿದು

ಬಿದಿರು ಬುಟ್ಟಿ ತುಂಬ ತುಂಬಿಸಿಕೊಳ್ಳೆ || ೦೧ ||

ನೆನೆದೊದ್ದೆಮುದ್ದೆ ನಾನಾದೇನು ಸೊಗ

ಮುಗ್ಧ ಕುತೂಹಲ ಜಗ ನಗುವಲಡಗಿದೆ

ಕಾಪಿಡಬೇಕು ಬುಟ್ಟಿ ಜಾರದಂತೆ ತಬ್ಬುತ

ಕಾಲಾಟ ನೀರಲಿರೆ ಉಲ್ಲಾಸ ಸುಖಿಸುತ || ೦೨ ||

ಹೊನ್ನಕಿರಣದ ವರ್ಷಧಾರೆ ಪುಳಕಿಸುತ

ಬೆರೆಸಿದ ಕಾಂತಿ ತೆರೆ ಹೊನ್ನಾಗಿಸಿ ನೀರ

ಅಲ್ಲೆಲ್ಲೊ ಹೊಳಪು ಸುಮವೆಲ್ಲಕು ಜಳಕ

ಮಂದಹಾಸ ತೆರೆಸಿ ಮುದ ಬಾಲೆ ಭಾವ || ೦೩ ||

ಮರದ ಬೊಡ್ಡೆ ಕಲ್ಲಬಂಡೆ ದಡ ನಿಲುಕು

ಮೆಲುಕು ದಿನನಿತ್ಯವದದೆ ಕಾಯಕದಲಿ

ಮೈ ಮರೆವ ಜಗವೆನ್ನ ಜಗವಾಗಿ ಬದುಕು

ನಿಸರ್ಗದೊಡ ಪಯಣ ಸತ್ಯದನಾವರಣ || ೦೪ ||

ನನಗಿದೇ ಶಾಲೆ ಕಲಿಸುತಿದೆ ಬದುಕೆಲ್ಲ

ಬಿಸಿಲುಗಾಳಿಮಳೆ ಎಲ್ಲ ಎದುರಿಸಿ ಬಲ್ಲೆ

ತುತ್ತೆರಡು ಹೊತ್ತು ವಿರಮಿಸೆ ಗುಡಿಸಲು

ತೊಡಲಿಷ್ಟು ವಸ್ತ್ರ ವಿನೋದ ಸಾಕಾಗದೆ ? || ೦೫ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : Internet / social media – received via Muddu Dear – thank you madam 🙏👍😊)

01606. ವೀಣೆ ಹಿಡಿದ ಪುಟ್ಟ ಬೆರಳು..


01606. ವೀಣೆ ಹಿಡಿದ ಪುಟ್ಟ ಬೆರಳು..

__________________________________

ಪುಟ್ಟ ಮುದ್ದು ಶಾರದೆ

ನೀ ಹಿಡಿದ ವೀಣೆ ಯಾರದೆ?

ಚಂದದ ನೋಟ ನೀ ನುಡಿಸೆ

ರಾಗ ಶ್ರುತಿ ಎಂತಿದ್ದರು ಸೊಗಸೆ ! || ೦೧ ||

ಮಾತೆಯವಳು ಸರಸ್ವತಿ

ವಿದ್ಯೆಗಧಿದೇವತೆ ಬೊಮ್ಮನ ಸತಿ

ನೀ ಕೂತಾಗಿಹೆ ಸಾಕ್ಷಾತ್ ದೇವಿ

ಏನ ನುಡಿಸಿದರದೆ ಚರಣ ಪಲ್ಲವಿ || ೦೨ ||

ಶಿಸ್ತಿನ ಸಿಂಗಾರದ ಗೊಂಬೆ

ಘನ ರೇಷಿಮೆಯುಟ್ಟ ಬಾಲೆ ಅಂಬೆ

ನೆರಿಗೆಯ ಸೊಬಗಲಿದೆ ದೃಷ್ಟಿಬೊಟ್ಟು

ಮಿಡಿಸೀ ಸುಸ್ವರ ಪುಟ್ಟ ಬೆರಳ ಮೀಟು || ೦೩ ||

ನಿನ್ನಾ ಮೀರಿದ ವೀಣಾಗಾತ್ರ

ಪುಟ್ಟ ವಯಸಲೇನಿದು ದೊಡ್ಡ ಪಾತ್ರ?

ಯಕ್ಷ ಕಿನ್ನರ ಗಂಧರ್ವ ಲೋಕದ ಕೂಸು

ತಲೆದೂಗುತ ಆಲಿಪೆವೇನಾದರು ನುಡಿಸು || ೦೪ ||

ಝೆಂಕರಿಸಮ್ಮ ನೀ ನಾಕುತಂತಿ

ಮೀಟಿಹ ನೀನೆ ಬದುಕಿಗ್ಹಚ್ಚಿದ ಪ್ರಣತಿ !

ಸಂಸ್ಕಾರ ಸಂಪ್ರದಾಯ ಅಚ್ಚುಕಟ್ಟು ನೆಲೆ

ಮೇಳೈಸಿ ಪರಂಪರೆ ಯುಗಾಂತರ ಹಿನ್ನಲೆ || ೦೫ ||

– ನಾಗೇಶ ಮೈಸೂರು

೧೬.೦೨.೨೦೧೮

(Nagesha Mn)

(Picture source: Internet / multi media – received via Yamunab Bsy – thank you 🙏👍😊)

01605. ಪ್ರಾಯದಲಿ ಮಾತು..


01605. ಪ್ರಾಯದಲಿ ಮಾತು..

_____________________________

ಕೇಳಲಿದೆ ಚಂದ ನಿನ್ನೆಲ್ಲ ಮಾತು

ಮಾತಲೆ ಸುಗಂಧ ನಿನ್ನ ವಸಾಹತು

ಬಿಂಕ ಬಿಗುಮಾನ ಬಿಡು ಕಣ್ಣೆಲ್ಲ ಹೇಳಾಯ್ತು

ಹೇಳು ಸಡಿಲಾಗಲೇನು, ಬೇಕು ರುಜುವಾತು ? || ೦೧ ||

ನೀನುಟ್ಟರೆ ಸೀರೆ ಅಪರೂಪದಪ್ಸರೆ

ಹಾರಾಡಿಸೆ ಕುರುಳ ಬಿಚ್ಚಿಟ್ಟವರಾರೆ ?

ಜೋತಾಡುವರ್ಧ ಮಾತಾಡಿದೆ ತೂಗುತ

ಜೋಕಾಲಿ ಮನಸೆ ಕೇಳದಲ್ಲ ಒಳ್ಳೆಯ ಮಾತ ! || ೦೨ ||

ಮಿಂಚೆಲ್ಲ ಕಣ್ಣಲಿ ಬಗೆ ಸಂಚು ಹೂಡಿದೆ

ಮತ್ತದೆ ಬಿಲ್ಲಾಗಿ ನೋಟದ ಬಾಣ ಖುದ್ಧೆ

ಪುಂಖಾನುಪುಂಖ ನಾಟಿಸಿರೆ ಎದೆ ಮಂಕು

ವಾಸಿ ಮಾಡುವರಾರೆ ನೀ ಹಚ್ಚಿಸಿದ ಸೊಂಕು ? || ೦೩ ||

ನಿನ್ಹೆಜ್ಜೆ ನಡಿಗೆ ತುಳಿದಾಡಿ ಹೃದಯ ಕದ

ಕಂಗೆಟ್ಟು ಮರೆತಿದೆ ಮುಚ್ಚಿ ತೆರೆವ ಸರ್ವದ

ಬಡಿದಾಟ ಮರೆತು ನಿಂತರೇನು ಗತಿ ಮಿಡಿಯೆ

ನೆತ್ತರ ಕಣಕಣದೆ ಬಿತ್ತರವಾಗಲಿ ನಿನ್ನ ನುಡಿಯೆ || ೦೪ ||

ಮಾತಾಡು ಬಾರೆ ಮನದೆ ಮಲ್ಲಿಗೆಯಾಗು

ಮೊಗ್ಗರಳಿ ಕಂಪಲಿ ಕವಿತೆಗಳಿಗು ಬೆರಗು

ನಶ್ವರವಿದೆಲ್ಲ ಸೊಗ ನಡೆವಾಗಷ್ಟೆ ಗಡಿಯಾರ

ನಡೆವ ಮುಳ್ಳಾಗದಿರೆ ಮಿಕ್ಕ ಬದುಕೆ ಪ್ರತೀಕಾರ || ೦೫ ||

– ನಾಗೇಶ ಮೈಸೂರು

೧೬.೦೨.೨೦೧೮

(Nagesha Mn)

(Picture source : Internet / social media received via Madhu Smitha – thanks a lot madam 🙏👍😊)

01604. ಅಂದಿನಿಂದ ಇಂದಿನವರೆಗೂ..


01604. ಅಂದಿನಿಂದ ಇಂದಿನವರೆಗೂ..

_____________________________

ಪೀಳಿಯಿಂದ ಪೀಳಿಗೆ

ಐಷಾರಾಮ ಸಂಗತಿ

ಬಿದ್ದದ್ದೆ ಹೆಚ್ಚು ನಾವು

ಬೀಳಬಿಡದ ತೇರಿವು || ೦೧ ||

ಬಾಡಿಗೆ ಗಾಡಿ ಜಮಾನ

ಕಾಸಿದ್ದಷ್ಟೆ ಕಾಲು ಚಾಚಿ

ಹಂಚಿಕೊಂಡವರ ಕಾಲ

ಎಟುಕದ ಸೀಟು ಬಾರಲಿ || ೦೨ ||

ಬಣ್ಣಬಣ್ಣ ಮಕ್ಕಳ ಬೈಕು

ತೇಲು ಸ್ಕೂಟರ ಬೆರಗು

ದೊಡ್ಡವಾಗೆ ಐಕಳ ಕಾಲೆ

ಮೂಲೆ ಸೇರೊ ಕೊರಗು || ೦೩ ||

ಕಾದಿದ್ದುಂಟಿವೆ ಮಕ್ಕಳ

ಹೊತ್ತು ತಿರುಗಿ ಜಾತ್ರೆಗೆ

ಕಾಯುವದೇ ಕಾಯಕದೆ

ಕಾಯಬೇಕು ಮುಟ್ಟದೆಲೆ || ೦೪ ||

ಬಗೆಹರಿಯದ ಗಹನತೆ

ಗಮನಿಸದ ಮುಗ್ಧ ಮನ

ಆಟ ಮುಗಿಸೊ ಹೊತ್ತಲಿ

ಆಟ ಕಂಡೆ ಮೂಕವಿಸ್ಮಿತ || ೦೫ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : poem written for ‘3K – namma chitra nimma kavana 56’)

01603. ಕಪ್ಪು ಬಿಳಿ, ತಪ್ಪು ಸರಿ…


01603. ಕಪ್ಪು ಬಿಳಿ, ತಪ್ಪು ಸರಿ…

___________________________

ಕಪ್ಪು ಕೃಷ್ಣಕೆ ರಾಧಿಕೆ ಹಂಬಲ

ಮಜ್ಜನಗೈದು ಹುಣ್ಣಿಮೆಯಾಗೆ

ಸಜ್ಜನ ಸಾಧು ಮನದ ವಿಚಾರ

ಬಿತ್ತರ ಜಗಕೆ ಹೊರಗಣ ನೋಟ ||

ಕಸ್ತೂರಿ ಘಮಘಮ ತನದೆಂದು

ಪಸರಿತ ಲೀಲೆಗಳಾಗಿಸಿ ಚಂದ

ಗೌರವ ತಂದಿಕ್ಕಿ ಗೌರಿಯ ಹೆಣ್ಣು

ಗೌರವೆ ಮೆಟ್ಟಿಲು ತೆರೆಸೆ ಒಳಗಣ್ಣು ||

ತನದೆನಲಿಲ್ಲ ತನದಲ್ಲವೆನಲಿಲ್ಲ

ತಲ್ಲೀನತೆಯವಳ ಜಗ ಮೊಗೆದ

ಅವನಾದ ಕಡು ವಾಸ್ತವ ಕಪ್ಪಾಗಿ

ಅವಳುದ್ದೇಪನ ಲೇಪನ ಹೊಳಪು ||

ಗರಿಯುಟ್ಟ ಕೊಳಲಿತ್ತ ಗಾನ ರಮ್ಯ

ಗಾಯನ ನಾಟ್ಯ ಮೋದಾಮೋದ

ಮರೆಸಿ ಜಗವ ತನ್ನೊಬ್ಬನನಿರಿಸುತ

ಕಪ್ಪುಸೀರೆ ರಾರಾಜಿಸೆ ಬಿಳಿಯಂಚು ||

ಕಪ್ಪಿನ ತಪ್ಪೆಲ್ಲ ಬಿಳಿಯಲಿ ಕರಗುತ

ಬಿಳಿಯ ತಪ್ಪು ಒಪ್ಪು ಕಪ್ಪಲಿ ಲೀನ

ಸಂತೃಪ್ತಿ ಮರೀಚಿಕೆ ಬೆನ್ನಟ್ಟೆ ಐಹಿಕ

ಮಾಯಾಜಿಂಕೆ ಹಿಂದೆಮ್ಮ ಪಯಣ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : Internet / social media received via FB friends – thank you 🙏👍😊)

01602. ಮಾತು ಬೆಳ್ಳಿ ಮೌನ ಬಂಗಾರ..


01602. ಮಾತು ಬೆಳ್ಳಿ ಮೌನ ಬಂಗಾರ..

_____________________________________

ನಿಜ, ಮಾತು ಬೆಳ್ಳಿ ಮೌನ ಬಂಗಾರ

ಮಾತಿನ ಮಲ್ಲಿಗ್ಹಾಕಲೆಂತು ನಿರ್ಬಂಧ ?

ಮಾತವಳಾ ಆಕರ್ಷಣೆ ಬಂಡವಾಳ

ಪ್ರಬುದ್ಧ ಮೌನಕಿಂತ ಹುಡುಗಾಟಿಕೆ ಸೊಗ ! ||

ಮಾತವಳರಳು ಹುರಿದಂತೆ ಚಟಪಟ

ಸುಳ್ಳಾಡಿದರೂ ಸತ್ಯದ ತಲೆಗೆ ಸುತ್ತಿಗೆ ಪೆಟ್ಟು

ಕೇಳುತಲೆ ಇರುವ ಅಪೇಕ್ಷೆ ಮನದಲಿ

ಸತ್ಯಾಮಿಥ್ಯದ ಗೊಡವೆ ಬೇಕ್ಯಾರಿಗೆ ಗಣನೆ? ||

ಮೌನವಾದರವಳು ನೀರವ ಮಸಣ

ಚಡಪಡಿಕೆ ನೀರಾಚೆ ಬಿದ್ದ ಮೀನಿನೊದ್ದಾಟ

ಮಾತಾಡಿರೆ ಸರಿ ಅಸಂಬದ್ಧವೂ ಹಿತ

ದಿಟ್ಟಿಸುತ ಮೋಹಕ ಪುಳಕಿತ ಕಳುವಾಗೆ ||

ಬೆಳ್ಳಿಯಾದರು ಸರಿ ಅಗ್ಗದ ವ್ಯಾಪಾರ

ಗುಲಗಂಜಿ ಬಂಗಾರಕು ತೆರಬೇಕು ದ್ರೋಣ

ಒಡವೆಯ ಗೊಡವೆ ಮೋಹವಿರದಿರಲು

ಯಾಕೆ ಗಾಳಿ ಗುದ್ದಾಟ? ವೈಭವದ ಮಾತಾಟ ||

ಮಾತಾಡದ ಗುಮ್ಮಗು ಮಾತ ಕಲಿಸಾಳು

ಮಾತುಮಾತಲಿ ಕವಿತೆಯಾಗಿ ಹೊಮ್ಮಿಯಾಳು

ಎಳಸು ಮಾತಲು ಸೆಳೆದು ಹೃದಯಕೆ ಲಗ್ಗೆ

ಮಗುವಿನಾ ಮನಸೆಂದು ಮೆಚ್ಚುವ ಮನ ಸೋಗೆ! ||

– ನಾಗೇಶ ಮೈಸೂರು

೧೪.೦೨.೨೦೧೮

(Nagesha Mn)

(Picture source internet / social media received via Madhu Smitha – thank you madam 🙏👍😊)

01601. ಬರೆದು ಮುಗಿಯದ ಕಾವ್ಯ..


01601. ಬರೆದು ಮುಗಿಯದ ಕಾವ್ಯ..

__________________________________

ಏನೊ ಕಕ್ಕುತೈತೆ, ಕಣ್ಣಾಳದ ನೋಟ

ಬಿಕ್ಕಿ ಬಿಕ್ಕೀ ಅತ್ತಂಗೆ, ಕನ್ನೆ ಮುಖ ಪುಟ

ಕಪ್ಪು ಚುಕ್ಕಿ ಹಣೆಮ್ಯಾಗೆ, ಪೂರ್ಣಚಂದ್ರ

ಚುಕ್ಕಿಚುಕ್ಕಿ ವೇದನೆ, ಚುಚ್ಚಿಕೊಂಡ ಲಾಂದ್ರ ||

ಕಳುವಾಗೈತೇನೊ ಪಾಪ, ಕಕ್ಕುಲತೆ ಬೇನೆ

ಕಾಡೈತೆ ಬಿಡದೆ, ಹೇಳಲಾಗದ ಶೋಧನೆ

ಏನದವ್ವಾ ಬಾಯ್ಬಿಡದ, ಅನಿವಾರ್ಯ ಮೌನ ?

ಯಾಕೆ ನುಂಗಿ ಗರಳ, ನೀಲಕಂಠನ ಸದನ ? ||

ಮರೆಮಾಚಲ್ಯಾಕವ್ವ, ಹೇರಿಕೊಂಡ ಲೋಲಾಕು?

ತುಟಿಗ್ಹಚ್ಚಿ ತಂಬಾಕು, ಮೋರೆಗೆ ಬಳಿದ ಸರಕು

ಕೆಂಪು ಗಿಣಿಮೂತಿ, ಮಾವಂಥ ಚಂದದ ಮಲ್ಲಿ

ಯಾಕೀ ಸಪೂರ ದೇಹ, ಅಳುಕೈತೆ ಸಂಕಟ ಚೆಲ್ಲಿ ? ||

ಪದವೊಂದರ ಖರ್ಚಿಲ್ಲದೆ, ಕಟ್ಟಿದ್ದೀಯೆಲ್ಲ ಕಥೆಯ

ಮಾತೊಂದರ ಹಂಗಿಲ್ಲದೆ, ಬರೆದಿದ್ದೀ ಮಹಾಕಾವ್ಯ

ನೀನೇನೇನೊ ಹೇಳಿದ್ದಿ, ಇನಿತಿಷ್ಟೂ ಬಿಡಿಸಿಲ್ಲ ಒಗಟ

ಒಡಪೊಡೆದಷ್ಟು ನಿಗೂಢ, ಮತ್ತೆ ಕಾಡೊ ನಿನ್ನೀ ನೋಟ! ||

– ನಾಗೇಶ ಮೈಸೂರು

೧೩.೦೨.೨೦೧೮

(Picture source : Internet / social media – received via Madhu Smitha – thank you very much 😊👍🙏👌)

01600. ಜೊತೆಜೊತೆಗೆ..


01600. ಜೊತೆಜೊತೆಗೆ..

________________________

ಇಳೆಗೆ ಮಳೆಯಾಗಿದೆ

ಹೆಜ್ಜೆಗಳು ಜತೆಯಾಗಿವೆ

ಅರಿವಿಲ್ಲ ಏನೇನಾಗಿದೆ ಒಳಗೆ

ಅರಿವೆಯಲವಿತೂ ಬಚ್ಚಿಡದಲ್ಲ || ೦೧ ||

ಆಗಿದೆ ಹೊತ್ತಿದು ಸ್ತಬ್ಧ

ವರ್ಷಾರಾಗ ಸಶಬ್ಧ ಸುರಿತ

ಅಯೋಮಯ ನಿಶಬ್ದ ಮಾತಾಟ

ನಿಲ್ಲದಾವಿರತ ಮನದಾ ಮೆಲುಕು || ೦೨ ||

ಹನಿಸುತ್ತಿದೆ ಸಿಂಪಡಿಕೆ

ಬೆರೆಸಿ ಬೆವರಿನ ಜೋಪಡಿಗೆ

ಏದುಸಿರು ಬಿಸಿಯುಸಿರು ಅಧರಾಲಿಂಗನ

ಕಟಿ ಬಂಧ ತೋಳಿಂದ ಪ್ರಣಯೋನ್ಮಾದ || ೦೩ ||

ಅವನೊಳಗವಳಾಗಿ ಚಿತ್ತ

ಪುಡಿಯಾಗಿ ಹುಡುಗಿ ಸಂಕಲ್ಪ

ಮಧುರ ಝೇಂಕಾರ ವೀಣಾವೃತ ಅಂಗಾಂಗ

ಪಾನಮೃತ ಅನಂಗ ಸಂಗ ಅದ್ಭುತ ಸಮರ || ೦೪ ||

ಯಾರದು ಗೆಲುವು ಸೋಲು?

ಕೊಚ್ಚಿಹೋಗೆಲ್ಲ ನೈಜ ವಾಸ್ತವದರಿವು

ಮರೆತೆಲ್ಲ ಜಗ ಮಿಕ್ಕುಳಿದವನ ನನ್ನಾ ಸನಿಹ

ಬರಿ ಗಣನೆ ನಿಯಾಮಕನ ಮೂಲ ಪ್ರಕೃತಿ-ಪುರುಷ || ೦೫ ||

– ನಾಗೇಶ ಮೈಸೂರು

೧೩.೦೨.೨೦೧೮

(Nagesha Mn)

(Picture source : Internet / social media received via Ravindra Kumar Elvee – thank you sir 🙏😊👍)

01599. ಜಗನ್ಮಾತಾಪಿತ ನಾಟ್ಯಂ…


01599. ಜಗನ್ಮಾತಾಪಿತ ನಾಟ್ಯಂ…

___________________________________________

ಶಿವಂ ಪ್ರಣವಾತೀತಂ, ಶಿವೆ ಪ್ರಣಯಾಮೃತಂ

ಸ್ವತಃ ಜಗನ್ಮಾತಾಪಿತಃ, ಪಾರ್ವತೀಪರಮೇಶಂ

ತದೇಕ ಚಿತ್ತಂ ದೃಶ್ಯಂ, ಭಾವೋತ್ಕರ್ಷ ಲಾಸ್ಯಂ

ತಾಳಲಯ ಸುಸಂಬದ್ಧಂ, ದ್ವೈತದದ್ವೈತ ಶುದ್ಧಂ ||

ಸುಮ ಸೌಮ್ಯ ಶಿವತಾಂಡವಂ, ಶಾಂತಸ್ಥ ವದನಂ

ರಮ್ಯ ಮೋಹಕ ಗಾನಂ, ಉಮಾಂತರ್ಯ ಪ್ರಕಟಂ

ಸಮ್ಮಿಳಿತಂ ನೇತ್ರಂ, ಸ್ಪುರಿತ ಮನದಿಂಗಿತಾರ್ಥಂ

ಸಮ್ಮೋಹನಾ ಸೆಳೆತಂ, ಪರವಶಂ ಏಕೋ ಚಿತ್ತಂ ||

ಮಯೂರ ಯುಗ್ಮಂ, ಪ್ರತಿ ಚಲನಂ ಮನೋಹರಂ

ಪಂದ್ಯಂ ಮಂದಹಾಸಂ, ಪ್ರತಿವಂದ್ಯ ಕಲಾಲಾಪಂ

ಪ್ರೇರೇಪಣಾಂ ಮೂರ್ತಂ, ಪರಸ್ಪರಂ ಸಹಯೋಗಂ

ಸುರಸಾಂಗತ್ಯ ಸರಸಂ, ಅನಂತಾನೃತ್ಯಂ ಅವಿರತಂ ||

ಅಮೂರ್ತಂ ತ್ರಿಕಾರ್ಯಾರ್ಥಂ, ತಿರೋದಾನನುಗ್ರಹಂ

ಪುನರ್ಸೃಷ್ಟಿ ಕಾರ್ಯಾರ್ಥಂ, ಪ್ರಳಯಾಂತರಾಳ ಶಮನಂ

ಸನ್ನಿಹಿತ ಪ್ರಸನ್ನತಾ ಭಾವಂ, ಅನಾವರಣಂ ಹಿರಣ್ಯಾಗರ್ಭಂ

ಪುನರುತ್ಥಾನಂ ಆರಂಭಂ, ಪ್ರಳಯೋತ್ತರಂ ಸೌಖ್ಯ ಕಾಲಂ ||

ಸ್ವಯಂ ಸರಿಸಾಟಿ ಸರಿಸಮಂ, ಸಕಲಂ ಸಂಜ್ಞಾ ಸರಿಗಮಂ

ಯಕ್ಷ ಕಿನ್ನರ ಗಂಧರ್ವ ದೇವಂ, ಬೆಕ್ಕಸಬೆರಗಿಂ ದಿಟ್ಟಿಪ ಹರ್ಷಂ

ತಕಿಟ ತೋಂ ತಕಧಿಮಿತಕಜಣು, ನಗಾರಿ ಢಮರುಗ ಕಂಪನಂ

ಅದೃಶ್ಯಂ ಭೂಕಂಪನಂ, ಸುಮಾವರ್ಷ ಬ್ರಹ್ಮಾಂಡಂ ಸಂತೃಪ್ತಂ ||

– ನಾಗೇಶ ಮೈಸೂರು

೧೩.೦೨.೨೦೧೮

(Nagesha Mn)

(Picture source : Internet / social media received via Madhu Smitha – thank you 😊🙏👍)

01598. ಶಿವಸ್ತುತಿ


01598. ಶಿವಸ್ತುತಿ

_______________________________

(ಶ್ಲೋಕ, ಮಂತ್ರದ ಪರಿಣಿತಿಯಿಲ್ಲದಿದ್ದರು ಆ ಧಾಟಿಯಲ್ಲೊಂದು ಶಿವಸ್ತುತಿಯ ಯತ್ನ – ಶಿವರಾತ್ರಿಯ ಸಲುವಾಗಿ. ಎಲ್ಲರಿಗು ಶಿವರಾತ್ರಿಯ ಶುಭಾಶಯಗಳು🙏💐👍😊)

ಶಿವಸ್ತುತಿ

_______________________________

ಸರ್ವಂ ಶಿವೋಹಂ, ಸಕಲಂ ಶಿವಾಲಯಂ

ಸಾರಂ ಶಿವಾ ರೂಪಂ, ಸಾನಿಧ್ಯ ಮಧುರಂ

ಸಗುಣಂ ಲಿಂಗಾಕಾರಂ, ನಿರ್ಗುಣಂ ಪರಬ್ರಹ್ಮಂ

ಸಾಕಾರಂ ಅದ್ಬುತಂ, ಗುರು ಆತ್ಮಸಾಕ್ಷಾತ್ಕಾರಂ ||

ಧ್ಯಾನಂ ಹಿಮೋತ್ಕರ್ಷ, ಪರ್ವತಂ ಕೈಲಾಸಂ

ತಪಂ ನಿತ್ಯ ಸಾಂಗತ್ಯ, ಸತ್ಯ ಶಿವಂ ಸುಂದರಂ

ನೇತ್ರಂ ಅರೆನಿಮೀಲಿತಂ, ಯೋಗಿಶ್ವರ ತಲ್ಲೀನಂ

ತ್ರಿನೇತ್ರಂ ಪ್ರಶಾಂತಂ, ಕ್ರೋಧಾವೇಶ ಪ್ರಳಯಂ ||

ಭಜಿತಂ ಸರ್ವಲೋಕಂ, ನಿಜಭಕ್ತ ಪರಾಧೀನಂ

ನಿವಸಿತಂ ಭಕ್ತ ಹೃದಯಂ, ಆತ್ಮೈಕ್ಯಂ ಸರಾಗಂ

ವರದಾತಂ ಪ್ರಸನ್ನಚಿತ್ತಂ, ವಿಧಾತಂ ಸ್ವಯಂಭು

ತ್ರಿಶೂಲಂ ದುಷ್ಟ ದಮನಂ, ಶಿಷ್ಠ ರಕ್ಷಣಂ ಶಂಭು ||

ಧಾರಣಂ ತಾಂಡವರೂಪಂ, ಲಯೋನ್ಮಾದ ನಾಟ್ಯಂ

ಅಲ್ಲೋಲಂ ಕಲ್ಲೋಲಂ, ವಿನಾಶೆ ಬ್ರಹ್ಮಾಂಡ ಕಂಪನಂ

ಪ್ರಶಾಂತಂ ಶಿವೆ ನೃತ್ಯಂ, ಪರವಶಂ ಶಿವ ಶಾಂತಾಕಾರಂ

ಪ್ರಕಟಂ ಮನೋಲ್ಲಾಸಂ, ಜಗನ್ಮಾತಾಪಿತಂ ಸಮಯಂ ||

ಹರಹರ ಮಹಾದೇವಂ, ಶಿವಶಿವ ತ್ರಿಲೋಕಂ ಘೋಷಂ

ಸ್ವಪ್ರಕಾಶಂ ಕೋಟಿಸೂರ್ಯಂ, ಅನುರಣಿತಂ ಓಂಕಾರಂ

ಪಂಚಾಕ್ಷರಿ ಮಂತ್ರೋಚ್ಚಾರಂ, ಶಬ್ಧಬ್ರಹ್ಮಂ ಉದ್ಘೋಷಂ

ಕರುಣಂ ನೈಜ ಶಿವರೂಪಂ, ಶಂಕರಂ ಪದ ಸಾಯುಜ್ಯಂ ||

– ನಾಗೇಶ ಮೈಸೂರು

೧೪.೦೨.೨೦೧೮

(Nagesha Mn)

(Picture source internet / social media)

01597. ಶಿವರಾತ್ರಿ..


01597. ಶಿವರಾತ್ರಿ..

_________________

ಮಂಗಳಕರ ಶಿವರಾತ್ರಿ

ಮಂಗಳವಾರ ಧರಿತ್ರಿ

ಉಡಲಿಹಳಂತೆ ಶಿವನ

ಧ್ಯಾನದುಡುಗೆ ಸಂಪೂರ್ಣ || ೦೧ ||

ಲಿಂಗಕೊಪ್ಪಿಸುತ ಪೂಜೆ

ಬಿಲ್ವಪತ್ರೆ ಹೂವಿನ ಸಜ್ಜೆ

ಪಟ್ಟೆ ವಿಭೂತಿ ಗಂಧಾಕ್ಷತೆ

ಅರಿಶಿನ ಕುಂಕುಮ ಜತೆಜತೆ || ೦೨ ||

ಅಭಿಷೇಕದ ಮೋಹಾವೇಶ

ಜಲ ನಾರಿಕೇಳ ಸಮಾವೇಷ

ಮಧು ಕ್ಷೀರ ಬೆಣ್ಣೆ ಮೊಸರು

ಸೇವೆಗಳಿಗೆಷ್ಟೊಂದು ಹೆಸರು! || ೦೩ ||

ಮಾಡುತಲುಪವಾಸ ದಿನದೆ

ಜಾಗರಣೆ ಪೂಜೆ ಇರುಳಿನದೆ

ನಿದಿರಿಸಬಿಡದೆ ಸ್ಮರಿಸೆ ತೇಜ

ಮರುದಿನ ಪಾರಾಯಣೆ ಭೋಜ || ೦೪ ||

ಶಿವಕಥೆ ಹರಸಾಹಸ ಮೂರ್ತ

ನೆನೆದೆಲ್ಲಾ ತರ ಕಥನದಾಮೃತ

ಕಳೆಯುವರೆಲ್ಲ ಪಾಪದ ಮೂಟೆ

ಮಹಾಶಿವರಾತ್ರಿಗದೆ ತಾನೆ ಜಾಗಟೆ ! || ೦೫ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01596. ಶಿವನಾಗಮನ


01596. ಶಿವನಾಗಮನ

___________________

ಚಳಿಗಾಲವು ಶಿವಶಿವವೆನ್ನೆ

ಮತ್ತಾಗಮನ ಶಿವಮೇನೆ

ಭೂಲೋಕಕೆ ಭಕ್ತಿ ಸಮಯ

ಮನೆ ಮನವೆ ಕೈಲಾಸಮಯ ||

ಶರಣರಿಗಂತೂ ಖಾತ್ರಿ

ಪ್ರತಿ ನಿತ್ಯವು ಶಿವರಾತ್ರಿ

ಮಾಸಕೊಂದು ಘನಭಕ್ತಗೆ

ವರ್ಷಕೊಂದು ಮಿಕ್ಕವರಿಗೆ ||

ಲಿಂಗರೂಪಲಿ ಮಹದೇವ

ಬಿಲ್ವಾರ್ಚನೆ ಪ್ರಸನ್ನ ಭಾವ

ಬೇಡನೊ ಜಾಡನೊ ಬಲಿಜನೊ

ಕೈ ಮುಗಿದವೆಲ್ಲಗು ಒಲಿದಾನೊ ||

ಅಂತರಂಗದಲವನಾ ವಾಸ

ಶುದ್ಧಿಸಲದಕೆ ಮಾಡುಪವಾಸ

ತೂಗೆ ಪಾಪಪುಣ್ಯ ಸ್ತುತಿ ಭಜನೆ

ಮೆಚ್ಚಿಸಲವನ ಇರುಳೆಲ್ಲ ಸಮನೆ ||

ಎಚ್ಚರ ಜಾಗೃತ ಸ್ಥಿತಿ ಜಾಗರಣೆ

ಮಲ ಕಶ್ಮಲ ತನುವಿನ ಬೇನೆ

ಪರಿಶುದ್ಧತೆಗಾಗುತ ಅಡಿಪಾಯ

ಶಿವನನೊಲಿಸುವ ಕ್ಷಿಪ್ರ ಉಪಾಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01595. ನೆಲ ಕುಸಿಯೆ ನೆಲೆಯೆಲ್ಲಿಹುದೊ…?


01595. ನೆಲ ಕುಸಿಯೆ ನೆಲೆಯೆಲ್ಲಿಹುದೊ…?

______________________________________

ಯಾಕವಿತೆಯೊ, ಹೇಳೊ ಮಾಧವ

– ಶಂಖ ಚಕ್ರ ಮುರಳಿ ಪಿಂಛದ ಬೆನ್ನಲಿ ?

ನಾಚಿಸಿತದಾವ ಅಪರಾಧಿ ಭಾವ ?

ಬರೆಯದ ಕವಿತೆ, ನುಡಿಸದ ರಾಗ ಕಾಡಿತೆ..? || ೦೧ ||

ಯಾಕೆ ತಲೆ ತಗ್ಗಿಸಿ ಕೂತೆಯೊ ಕೃಷ್ಣ

– ಮರೆಮಾಚಿದ ಮೊಗಕೆ ಗರಿ ತೆರೆ ಹಿಡಿದು ?

ಮಾಡಬಾರದಂತದ್ದೇನಿತ್ತೊ ಮಾಡಿದ್ದು ?

ಕೊಳಲ ನುಡಿಸದೆಯೂ ಕೂತಿಹೆ ಉದಾಸ.. || ೦೨ ||

ಖೇದವದೇಕೊ ಮುರಾರಿ ನಗು ಮೊಗವಿಲ್ಲ..

ಒಟ್ಟಾದವೇಕೊ ಮೋದಾಮೋದ ಕದನದಲಿ ?

ಗಾನ ಗಾಯನ ವಿನೋದ ಕುಣಿದಾಟದಲೆ

ರಣರಂಗದಲೆ ಶಂಖ ಚಕ್ರ ನಿಭಾವಣೆಗೆ ಬೇಸತ್ತೆಯ ? || ೦೩ ||

ನೀ ನುಡಿದಾ ಪಾಠವದಲ್ಲವೇನೊ ಶ್ರೀಹರಿ ?

ಕರ್ಮದ ಹೊಣೆಯಷ್ಟೆ ಫಲಾಫಲ ವಿಧಿಯಗುಳಿ..

ಹೊಗಳಿಕೆ ತೆಗಳಿಕೆ ಹಿಗ್ಗದ ಜಗ್ಗದ ಸ್ತಿಮಿತತೆ ಸತ್ವ

ಬೋಧಿಸಿ ನೀನೆ, ಕೂರಬಹುದೇನೊ ಹೀಗೆ ಅನಂತ ? || ೦೪ ||

ನಿನ್ನಾ ತುದಿ ಬೆರಳಲಿದೆ, ನೀನಾಡಿಸುವೀ ಜಗ ದೇವ

ನಿನ್ನನೂ ಬಿಡದ ಕರ್ಮಬಂಧ ಮುರಿದು ಅಹಂಭಾವ

ನೀ ತೋರಿದರೆಂತೊ ಖಿನ್ನ ಭಾವ, ಹುಲುಮನುಜ ಗತಿ ?

ನಡುಗಿ ಹೋದಾನು, ತೋರೊ ಸಂತೈಸೊ ನಗೆ ಮೊಗವ ! || ೦೫ ||

– ನಾಗೇಶ ಮೈಸೂರು

(Nagesha Mn)

(Picture from Internet / social media – taken via a post from Shylaja Ramesh

– thank you madam ! 🙏👍😊)

01594. ಜಗಳ…!


01594. ಜಗಳ…!

____________________

ಜಗಳ

ಪದದಗಲ

ಮಾತಾಗಿಸಿ ಚೆಲ್ಲೆ

ಭುಗಿಲೆದ್ದು ಕೊಚ್ಚಿ ಕೊಲ್ಲೆ ! ||

ಜಗಳ

ಜಗದಗಲ

ಆಡದವರಿಲ್ಲ ನಿತ್ಯ

ಆಡದಿರೆ ನಿಸ್ಸಾರ ಸತ್ಯ ! ||

ಜಗಳ

ಮೊಗದಗಲ

ಖಳ ಮೋರೆ ಖೂಳ

ಕ್ರೋಧ ಮುಟ್ಟಿಸಿ ಪಾತಾಳ ||

ಜಗಳ

ದಂಪತಿ ತಾಳ

ನೀರಸ ಸಮರ್ಪಕತೆ

ಮುನಿಸು ಹೆಚ್ಚಿಸೊ ರಸಿಕತೆ ||

ಜಗಳ

ನಿನದೆಂತ ಜಾಲ!

ಬಿಡದೆ ಹಾಕೆಲ್ಲಗು ಗಾಳ

ವಿನೋದಿಪೆ ತೊಡಿಸಿ ಖೋಳ ||

– ನಾಗೇಶ ಮೈಸೂರು

(Nagesha Mn)

Picture source from :

1. https://image.shutterstock.com/z/stock-vector-bad-business-team-conflict-in-office-business-fight-cartoon-cloud-illustration-isolated-on-138440339.jpg)

2. http://clipart-library.com/clipart/kTMKzz5xc.htm

3. http://clipart-library.com/clipart/730913.htm

01593. ನಿರಾಳವಾಗಲಿ ಮನ…


01593. ನಿರಾಳವಾಗಲಿ ಮನ…

_______________________________

ಹಚ್ಚಿಬಿಡು ಕಿಚ್ಚು

ಸುಟ್ಟುಹೋಗಲಿ ಒಮ್ಮೆಗೆ

ಸಿಟ್ಟು ಸೆಡವು ರೋಷ

ಅಸಹಾಯಕತೆ ಕೊರಗು… || ೦೧ ||

ಹೆಚ್ಚಿಬಿಡು ಗೋಳ

ಹೋಳಾಗಿ ಹೋಗಲಿ ಎಲ್ಲಾ

ಚೆಂಡು ಪುಟಿಯದ ತುಂಡು

ಚದುರಿ ಚೆಲ್ಲಾಪಿಲ್ಲಿ ದುರ್ಬಲ.. || ೦೨ ||

ಸೋಲಿನಾ ಮುತ್ತಿಗೆಗೆ

ಎದೆ ಸೆಟೆಸುತ ನಿಲ್ಲು ಬೆಚ್ಚದೆ

ಮೆಟ್ಟಲು ಮೆಟ್ಟಿಲದರಲ್ಲೆ

ಮುತ್ತಿಗೆ ಮುತ್ತಾಗಿ ಜಯಮಾಲೆ || ೦೩ ||

ಮತ್ತಿಗಿಡು ಅಂಕುಶ

ನಿರಂಕುಶ ಪಾತಾಳ ಸ್ವಾರ್ಥ

ಅಹಮಿಕೆ ಗತ್ತಿನ ಸುತ್ತ

ವಿನಯದ ಕೋಟೆ ಪರುಷ || ೦೪ ||

ಚಿಂತೆಗಾಗಲಿ ಚಿತೆ

ಚಿಂತನೆಯ ಉರುವಲಲಿ

ಮಥನ ಮಂಥನ ಸತ್ವ

ಅಧಿಗಮಿಸೆ ಮೊತ್ತ ನಿರಾಳತೆ || ೦೫ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01592. ಬಂದುಬಿಡಿದೊಂದು ಬಾರಿ….


01592. ಬಂದುಬಿಡಿದೊಂದು ಬಾರಿ….

___________________________________

ನಿನ್ನ ಚಂದದ ಚಿತ್ರ

ನಿದ್ದೆ ಕೆಡಿಸಿದೆ ಯಾಕೊ

ಚಂದಾ ಕಟ್ಟುವೆ ಒಲವಲಿ

ಚಂದ್ರಿಕೆಯಾಗು ಬಾ ಚಕೋರಿ! ||

ಎಲ್ಲ ಸಂಧಾನಕು ಸಿದ್ಧ

ಬದ್ಧ ಸಂದಾಯವೇನಿದ್ದರು

ನೀನೊಬ್ಬಳೆ ಸಾಕು ವರದಕ್ಷಿಣೆ

ವಧುರಕ್ಷಣೆ ಸುಸಂಬದ್ಧ ಬದುಕು ||

ಚಿತ್ರದಿಂದೆದ್ದೆದ್ದು ಬಂದು

ನುಗ್ಗೆಬ್ಬಿಸಿ ಗದ್ದಲ ಕನಸಲು

ಸಿಕ್ಕರು ಸಿಗದ ಜಲರಾಶಿ ಸ್ವಪ್ನ

ಕುಡಿಯಲಾಗದಲ್ಲ ಸಾಗರದ ನೀರೆ ||

ಸಕ್ಕರೆ ತುಟಿಯಷ್ಟು ಸಿಹಿ

ರುಚಿಗಷ್ಟು ಲವಣವಿಹ ಮಾತಲಿ

ತುಸು ಬಿಂಕ ಬಿನ್ನಾಣ ಕಲಶಪ್ರಾಯ

ನಡೆ ನುಡಿಯಾಗಿ ಮಾದರಿ ಸಮುದಾಯ ||

ಬಂದುಬಿಡಿದೊಂದು ಬಾರಿ

ಕನಸಾಗದ ನನಸಿನ ಯಾತ್ರೆಗೆ

ಬಿಡು ಯಾವುದೊ ಜನುಮದ ಮಾತ

ಬಂದಿರು ಜತೆ ಅರೆಗಳಿಗೆಯಾದರು ಸರಿಯೆ! ||

– ನಾಗೇಶ ಮೈಸೂರು

೦೩.೦೨.೨೦೧೮

01591. ಮಿಂದರೊ ನೆಂದರೊ ಭಾವ ಸರೋವರದೆ..


01591. ಮಿಂದರೊ ನೆಂದರೊ ಭಾವ ಸರೋವರದೆ..

_______________________________________________

ನೋಡವಳೆ ಪ್ರಕೃತಿ ಅಮಲ ಶ್ವೇತ

ತುಂಬು ಯೌವನ ಹರಿದ ಜಲಪಾತ

ತಾಳಲಾಗದೆ ವಿರಹ ಬಿಸಿಯ ಬೇಗೆ

ತಂಪಾಗಲೆಂದೆ ನೀರಿಗಿಳಿದ ಸೊಬಗೆ ! ||

ಹೊದ್ದ ತೆಳುವಸ್ತ್ರ ಪಾರದರ್ಶಿ ಪ್ರಾಯ

ಹೊದಿಸದಿರೆ ಅರಿವ ಅರಿವೇ ಅಪಾಯ

ಕೊರಕಲಲಿ ಸಿಕ್ಕು ನರಳುವ ಮೊದಲೆ

ಬಂದನಲ್ಲ ಸದ್ಯ ಪುರುಷನವನೆ ಕಡಲೆ ||

ತಡವಾಯಿತೆಂದು ತಡವರಿಸದೆ ಸುಳಿದ

ಎಗ್ಗು ಸಿಗ್ಗಿಲ್ಲದೆ ಕಾಲ ಬುಡ ತಬ್ಬಿ ಕುಸಿದ

ಶರಣಾದನೊ ಆದಳೊ ನಿಲುಕುವ ಮುನ್ನ

ಜುಮ್ಮೆನಿಸಿ ಮೈಮರೆಸಿ ಭಾವದೆ ಮಜ್ಜನ ||

ಪ್ರಣಯ ಸಂಭಾವನೆ ಧಾರೆಯೆರೆದ ಕೋಟಿ

ಒಡ್ಡುಗಟ್ಟಿದ ಕೋಟೆ ತೆರವಾಗುತೆಲ್ಲ ಲೂಟಿ

ಕೊರೆವ ಜಲದೆ ನಿಶ್ಚಲ ತನ್ಮಯತೆ ಜೋಡಿ

ಉಕ್ಕುವಾಸೆ ಜ್ವಾಲೆ ಬೆಚ್ಚಗಾಗಿಸಿ ಮನಚಂಡಿ ||

ಗಿರಿ ಶಿಖರ ಗಗನ ಚಂದ್ರ ತಾರೆ ಮೆರವಣಿಗೆ

ದಟ್ಟೈಸಿ ನಿಂತಿವೆ ರತಿಮನ್ಮಥ ಚಕ್ಕಂದ ನಗೆಗೆ

ಮುದುಡಿದಾ ತಾವರೆಗು ಕುತೂಹಲ ಕೆರಳಿ

ಸಾಕ್ಷಿಯಾದವೆ ಮಿಲನಕೆ ಇರುಳಲೂ ಅರಳಿ ||

– ನಾಗೇಶ ಮೈಸೂರು

೦೩.೦೨.೨೦೧೮

01590. ಲಕ್ಷ್ಮೀದುರ್ಗಾ ಮಾತೆ


01590. ಲಕ್ಷ್ಮೀದುರ್ಗಾ ಮಾತೆ

______________________________

ಪ್ರಪುಲ್ಲ ವದನೆ ಮಾತೆ

ಅಷ್ಟಾದಶ ಕರ ಸಹಿತೆ

ಕಿರೀಟ ಮುಕುಟಧಾರಿಣಿ

ಹೇಮಾಲಂಕೃತ ಭವಾನಿ ||

ಸಿಂಹವಾಹಿನಿ ಜಗತೀ

ಮಹಿಷನ ಮೆಟ್ಟಿದ ಸತಿ

ಸಿರಿ ಸಂಪದದ ಆಗರ್ಭ

ವರದಾತೆ ಲಕ್ಷ್ಮೀದುರ್ಗಾ ||

ಕಮಂಡಲ ಸೌಮ್ಯ ಬಲ

ತ್ರಿಶೂಲ ಜತೆ ಹಿಡಿದವಳ

ಕತ್ತಿಗುರಾಣಿ ದಂಡಾಂಕುಶ

ಶಂಖಚಕ್ರ ಸಹಿತ ಗಧಾವೇಶ ||

ಆಯುಧಾವೃತ್ತ ಸಮರ ಸಿದ್ಧ

ಕುಸುಮ ಕರ ಮೃದು ಸರ್ವದಾ

ದುಷ್ಟದಮನ ಪಾದದಡಿಯಲೆ

ಶಿಷ್ಠರಕ್ಷಣೆ ಸಂತೈಸುತ ಕಣ್ಣಲೆ ||

ಲಕ್ಷ್ಮೀ ದುರ್ಗಾ ಘನ ಸಂಗಮ

ಸರ್ವಾಂಗ ಬಲ ಬೆರೆತ ನಾಮ

ರೇಶಿಮೆ ವಸ್ತ್ರ ನಗ ಜತೆ ತೊಟ್ಟು

ನಿಂತಳೆ ಜನನಿ ಕಿರುನಗೆಯುಟ್ಟು ||

– ನಾಗೇಶ ಮೈಸೂರು

೦೪.೦೨.೨೦೧೮

ಚಿತ್ರ: ಮೊಬೈಲಲ್ಲಿ ವೀರಮ್ಮ ಕಾಳಿಯಮ್ಮ ದೇವಸ್ಥಾನ, ಸಿಂಗಪುರದಲ್ಲಿ ತೆಗೆದಿದ್ದು

01589. ಕವನದ ಕಾರ್ಖಾನೆ..


01589. ಕವನದ ಕಾರ್ಖಾನೆ..

_________________________

ಮನಸೊಂದು ಕವನದ ಕಾರ್ಖಾನೆ

ನಾ ಮಾಲೀಕ ಕಾರಕೂನ ಗ್ರಾಹಕ

ದುರ್ಬಲ ವ್ಯಾಪಾರಿ ಮಾರಬರದು

ಕುಕ್ಕೆಯಲ್ಹೊತ್ತ ಹಣ್ಣಮ್ಮ ಬೀದಿಯಲಿ ||

ಕೂಗಲು ಸಂಕೋಚ ‘ಹಣ್ಣಮ್ಮ ಹಣ್ಣು‘

ಮಾರುವುದೆಂತು ಕೂಸ ಹೆತ್ತ ಮಡಿಲು

ತೋರುವ ಆಶಯ ಚಂದದ ಕಂದನ

ಮಾರದೆ ಮತ್ತೆ ಮುಚ್ಚಿ ಬಟ್ಟೆಯ ಹೊದಿಸೆ ||

ಬೆಳೆಯೊ ಫಸಲೊ ಸಂತಾನ ಸತತ

ಎಳ್ಳೊ ಜೊಳ್ಳೊ ಅಬಾಧಿತ ಶಿಶು ಜನನ

ಹಸುಳೆಗಳಾಕ್ರಂದನ ತೋರಲೆ ಮುಕ್ತಾ

ಬುಟ್ಟಿಗೆ ತುಂಬಿಟ್ಟು ಪ್ರದರ್ಶನ ಫಲಪುಷ್ಪ ||

ನೋಡೀ ಮುಟ್ಟುವ ಕೊಳ್ಳುವ ಸಹೃದಯ

ಆಸ್ವಾದಿಸಿ ನಲ್ನುಡಿಯನಾಡುವ ಘನತೆ

ತುಂಬಿ ಬಂದೆದೆಗೊರಗಿ ಆಹ್ಲಾದ ಮಧುರ

ಬಿಚ್ಚಿಡಲದೆ ನವಿಲ ಗರಿ ಮತ್ತೆ ಧಾರಾಕಾರಕೆ ||

ಬರುವುದೆಲ್ಲ ಬರಲಿ ನಿರಂತರ ಉತ್ಪಾದನೆ

ಯಾರಿಗೆ ಯಾರೊ ಆಗುವ ಕವಿತೆಯೊಳದನಿ

ಪ್ರಕಟವಾಗಿ ನಿರಾಳ ಅನಾವರಣ ಅಂತರಾಳ

ಭಾವನೆ ಬವಣೆ ಕಲ್ಪನೆ ಚಿತ್ತ ವಿಲಾಸದ ಕೃಷಿ ||

– ನಾಗೇಶ ಮೈಸೂರು

(Nagesha Mn)

(Picture credit : http://www.shutterstock.com)

01588. ಭೃಂಗಿ ಬರಲಿಲ್ಲವಿನ್ನು..


01588. ಭೃಂಗಿ ಬರಲಿಲ್ಲವಿನ್ನು..

_______________________________

ದುಷ್ಯಂತನ ಶಕುಂತಲೆ

ಕಾತರದಿ ಕಾದು ನಿಂತಳೆ

ಯಾಕೊ ಬರಲಿಲ್ಲವಿನ್ನೂ ದುಂಬಿ

ಬರದೆ ಬರನಲ್ಲ ಮನಸೆಲ್ಲ ದೊಂಬಿ ! ||

ಜಾರುತಿದೆ ಸುಸಮಯ

ಸಿಂಬಿ ಸುತ್ತಿದ ಸುಮ ಕಾಯ

ನೆಪಕೆ ಹಿಡಿದ ಕೊಡದಲಿಲ್ಲ ನೀರು

ಖಾಲಿಖಾಲಿ ಮನ ಕಸಿವಿಸಿ ತಕರಾರು ||

ಮರೆಯೊಡ್ಡಲಿದೆ ಜಲಪಾತ

ಮರಗಿಡ ಪೊದೆ ಬಳ್ಳಿ ಸುತ್ತಮುತ್ತ

ಬಾ ಭೃಂಗಿ ಬಹರಾರು ಸಖಿಯರಿಲ್ಲಿಗೆ

ನೀ ಬಂದರೆ ಅವ ಬಂದೇ ಬರುವ ರಕ್ಷೆಗೆ ||

ನಿಂತು ಸೋಲುತಿದೆ ಕಾಲು

ನಿನ್ನ ಸುಳಿವಿಲ್ಲದೆಲೆ ಕಂಗಾಲು

ಬರಿ ತಂಗಾಳಿ ತಣಿಸಲೆಂತು ಹರೆಯ

ಅವನಿಲ್ಲದೆ ಜತೆ ನಡೆಯಲೆಂತು ಪ್ರಣಯ? ||

ಬಂದುಬಿಡೆ ತಡಮಾಡದಿನ್ನು

ಬರದಿರೆ ಕಚ್ಚಿ ಗುದ್ದಿ ಕಳಿಸವನನ್ನು

ಕಾಯುವವಳ ಬವಣೆ ಮೋಹಕೆ ತಡವೆ

ಭರತನಾ ದೇಶಕೆ ಮುನ್ನುಡಿ ಬರೆಯಬೇಡವೆ ? ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Nandini Krishnakumar – thank you 🙏👍😊)

01587. ನೋಡಲ್ಲೊಂದು ಗರುಡಾ..!


01587. ನೋಡಲ್ಲೊಂದು ಗರುಡಾ..!

___________________________________

ಗರುಡಾ, ಗಗನದೆ ತೇಲೊ ಗರುಡ

ನಿನ್ನ ಕೊರಳಾ ಬಿಳುಪದೆಷ್ಟು ಗಾಢ !

ಬಿಚ್ಚಿದ ರೆಕ್ಕೆಯಾಗಿ ಚಾಚಿದ ಬೆರಳು

ಹಗುರ ನೌಕೆ ನೀ ಗಗನದ ಬಯಲಲ್ಲು ||

ಗರಿ ಬಿಚ್ಚೆ ಖಾಲಿ ಆಗಸಕೆ ನೀ ಮೋಡ

ಗುರಿಯಾ ಬೆನ್ನಟ್ಟಿ ಹಿಡಿದದೇನೊ ಜಾಡ

ರಜೆಯಿತ್ತನೆ ಹರಿ ನೀ ಬಿಟ್ಟಿರದ ಸಾನಿಧ್ಯ ?

ಶ್ವೇತ ಸಿಂಹಾಸನ ಸನ್ನದ್ಧ ಸ್ವಾಮಿಕಾರ್ಯ! ||

ಸ್ವಚ್ಚಂದ ತೇಲುವ ಹಡಗು ನೀ ಬಾನಲಿ

ಕಂಡಾಗ ಕೈಜೋಡಿಸಿ ನಮಿಸೊ ಜಗವಿಲ್ಲಿ

ನೀನೆಂದರೆ ಪೂಜನೀಯ ಕೃಷ್ಣನವತಾರವೆ

ವ್ಯೋಮಾಶ್ವ ವಿಶ್ವಯಾನ ಮಿತಿ ಬ್ರಹ್ಮಾಂಡವೆ ! ||

ಶುದ್ಧ ಹಾರಾಡುವ ಪಟ ನೀ ಅದೃಶ್ಯಸೂತ್ರ

ಶೂನ್ಯ ಗುರುತ್ವವಿದ್ದಂತಿದೆ ನಿನ್ನದಲ್ಲಿ ಪಾತ್ರ

ನಿರ್ಲಿಪ್ತ ಅವನಂತೆ ನೀ ರಣಹದ್ದಲ್ಲದ ಹದ್ದು

ಹದ್ದು ಮೀರದ ಸಿದ್ಧಿ ದೈವವಾಗಿಸಿತೆ ಖುದ್ಧು ? ||

ನಾ ಕಲಿಯುಗ ನೀ ದೈವಿಕ ಸೇತು ನಡುವೆ

ಪಾಪ ಪುಣ್ಯದ ಬಾಕಿ ಜನ್ಮಾಂತರ ಗೊಡವೆ

ಮೊನೆಚು ಕೊಕ್ಕಲಿ ಕುಕ್ಕಿಬಿಡು ತೀರಲಿ ಕಡ

ಪುರುಸೊತ್ತಲಿ ನಮ್ಮ ಹರಿಯತ್ತ ಹೊತ್ತುಬಿಡ ! ||

– ನಾಗೇಶ ಮೈಸೂರು

೦೩.೦೨.೨೦೧೮

ಚಿತ್ರ : ನಾಗರಾಜ್. ಎಸ್ (ಧನ್ಯವಾದಗಳು Nagaraj Subba Rao 🙏👍😊)

01586. ಗಂಟುಮೋರೆ, ಸಿಡುಕು ಮುಖ


01586. ಗಂಟುಮೋರೆ, ಸಿಡುಕು ಮುಖ

______________________________________

ಅವನದು ಗಂಟು ಮೋರೆ

ಸಿಡುಕು ಮುಖದವಳಿವಳು

ಯಾರಿಟ್ಟರೊ ಕಟ್ಟಿದರೊ ಜತೆ

ಹೆಸರು ಮಾತ್ರ ಬ್ರಹ್ಮಗಂಟು ||

ಅವ ನಕ್ಕರು ನಗೆಯಿಲ್ಲ

ಸಡಿಲಿಸದ ಮೋರೆ ಬಿಗಿ

ನಡುವಿನ ದೂರ ಹತ್ತಿರ

ಅಂತರ ಅನಂತ ದೂರ ||

ಅಸಡ್ಡೆಯವಳದೆ ಸ್ವತ್ತು

ಕಾಪಿಟ್ಟ ಮೋರೆ ನಿಯ್ಯತ್ತು

ನಿರ್ಲಕ್ಷ್ಯದಲೆ ನಿವಾರಣೆ

ಕೊನೆಯಿಲ್ಲ ಮಾತಿಗೆ ಮಾತು ! ||

ಬಡವಾದ ಕೂಸತ್ತರೆ ಜಗ್ಗಿ

ನುಗ್ಗುವರೆ ನಾನು ತಾನು

ಬಡಪಾಯಿ ಮಾಡುವುದೇನ?

ಅಸಹಾಯಕ ಆಕ್ರಂದನ ||

ಸಮೀಕರಣ ಅಸಮಾನತೆ

ಬದುಕಿನ ಕಥೆ ಅಸಾಮಾನ್ಯ

ನೀಸುವರಲ್ಲ ನಿವಾರಿಸದೆ

ವೈಚಿತ್ರವದೆ ಅವನ ಜಗದಲಿ ||

– ನಾಗೇಶ ಮೈಸೂರು

(Nagesha Mn)

(Picture source from: https://thumb7.shutterstock.com/display_pic_with_logo/722080/140039689/stock-photo-angry-indian-couple-having-an-argument-in-their-living-room-140039689.jpg)

01585. ಯಾರೆ? ಅವನಾರೆ?


01585. ಯಾರೆ? ಅವನಾರೆ?

_____________________________

ಯಾರೆ? ಅವನಾರೆ?

ಮರೆಸಿಬಿಟ್ಟನಲ್ಲ ನಾನಾರೆ?

ಮೋಹ ಪರವಶ ಮೈಮರೆಸಿ ಕಾಡಿದನೆ

ಪರಿವೆಯಿಲ್ಲ ಜಾರಿದ ಸೆರಗು ತುಂಬಾ ಅವನೆ ! ||

ಅರಿವಿದ್ದರೇನು ಪ್ರಾಯ?

ನೆಲೆ ನಿಲ್ಲದೇಕೊ ಅರಿವೆ ಮಾಯ

ತಡೆಯಬಲ್ಲದೆ ತೆಳು ಅರಿವೆ ಒತ್ತಾಯ?

ಯೌವ್ವನದ ಭಾರ ಹಾರಿ ತಂಗಾಳಿಗು ಹೃದಯ ! ||

ಬಳ್ಳಿಗಾಸರೆ ಮರ ತಾನೆ?

ಬಳ್ಳಿಯಾಗಿ ಒರಗಿ ಅಪ್ಪಿದೆ ನಾನೆ

ಅವನಲ್ಲ ಬಲ್ಲೆ ಅವನೆಂದುಕೊಂಡ ಸ್ಮೃತಿ

ಅವನಿಲ್ಲದೆಡೆಯಲ್ಲು ಅವನ ಕಾಣುವ ವಿಸ್ಮೃತಿ ||

ವನರಾಶಿ ನಡುವೆ ಲಲನೆ

ಪ್ರಕೃತಿಯೊಳಗೆ ಪ್ರಕೃತಿ ಮೇನೆ

ನಿಸ್ತೇಜಕೊಂದು ಹೊಸ ತೇಜ ಕಣ್ಣಲಿರೆ

ಜಗಮಗಿಸಿ ಪರಿಸರದೆ ಕಾಂತಿಯ ಬಸಿರೆ ||

ಮಾತು ಕೊಟ್ಟನೆಂದು ಸೋತೆ

ಶರಣಾಗಿ ಹೋದೆ ಅವನದಾಗಿ ಕವಿತೆ

ಅವನಿಲ್ಲದೆಡೆಯು ಅವನ ಚಿತ್ತಾರ ಮುಸುಕೆ

ಕಾದವನ ಬರುವಿಕೆಗೆ ವನರಾಣಿ ನಾ ಅವನಾಕೆ! ||

– ನಾಗೇಶ ಮೈಸೂರು

(Nagesha Mn)

(Picture source internet / social media received via Muddu Dear – thank you madam 🙏👍😊)

(ಮುದ್ದು)

01584. ಸಂಗಾತಿ ಸಾಂಗತ್ಯ…


01584. ಸಂಗಾತಿ ಸಾಂಗತ್ಯ…

_______________________________

ಮರದ ನೆರಳು ಮುಸ್ಸಂಜೆ ಕೊರಳು

ಹರಿಯುವ ನದಿ ಬಳಸುತ ನಡುಗಡ್ಡೆ

ಚೆಲ್ಲಾಡಿದ ರಂಗು ಆಗಸ ರಂಗೋಲೆ

ಮೈ ಮರೆತ ಜೋಡಿ ಅಪ್ಪುತ ಕೂತಲ್ಲೆ ||

ಹಕ್ಕಿಗಳ ಕಲರವ ಬಚ್ಚಿಕ್ಕಿ ಪಿಸುಮಾತ

ಪಿಸುಗುಟ್ಟುವ ಗುಟ್ಟ ಹೆಕ್ಕಿ ಮೌನದಾಟ

ಭಾವಯಾನ ಪರವಶ ಪ್ರೇಮ ಕರವಶ

ಮಡಿಲಲಪ್ಪಿ ಕಾಪು ಜಾರಬಿಡ ಸ್ವಾರ್ಥ ||

ನೀರಾಟ ನಟನೆ ತೆಳುವಲೆ ಸಂಚಲನೆ

ತನ್ನೊಡಲಲ್ಲವಿತನೆ ತನ್ನಲ್ಲೆ ಫ್ರತಿಫಲನೆ

ಜಗಮಗಿಸೆಲ್ಲ ಸುತ್ತ ಹೊನ್ನತೇರ ಫಲಿತ

ಕರುಣಿಸಿ ಪ್ರೇಮಿಗಳ ಕತ್ತಲಲಿರಿಸಿ ಸ್ವಸ್ಥ ||

ಬೆರೆತಿಹ ಮನಗಳಲಿ ವಿಸ್ಮಯ ಸಂಹಿತೆ

ಒತ್ತೊತ್ತು ಕೂತ ಸಲಿಗೆ ಅಡಿಗಡಿಗೆ ಕವಿತೆ

ಸಾಮೀಪ್ಯದ ಸಾಂಗತ್ಯ ಮರೆಸಿದೆ ಜಗವ

ನೆಮ್ಮದಿ ನಿರಾಳತೆ ದಡ ಸೇರಿಸಿದ ಭಾವ ||

ಯಾರಿಗುಂಟು ಭಾಗ್ಯ? ಸಿಗದೆಲ್ಲಗು ಲಭ್ಯ

ಸಿಕ್ಕರೆ ನಿಧಿ ಬಂಗಾರ ಸಂಭಾಳಿಸೆ ಪೂರ

ಸಾಂಗತ್ಯದಾ ಮೊತ್ತ ಸಂಗಾತಿ ಅನುರಕ್ತ

ಕಟ್ಟಿಕೊಳ್ಳೆ ಬದುಕು ಸುಖದುಃಖ ಸಹಿತ ||

– ನಾಗೇಶ ಮೈಸೂರು

(Nagesha Mn)

(Picture source internet / social media received via FB friends – thank you 🙏👍😊)

(Second poem for the same picture)

01583. ಆ ದಿವ್ಯ ಗಳಿಗೆ


01583. ಆ ದಿವ್ಯ ಗಳಿಗೆ

_________________________

ಅಪ್ಪಿ ಕೂತಾ ಗಳಿಗೆ

ಒಡ್ಡಿ ಮೈ ತಂಗಾಳಿಗೆ

ಕೂತಾಗಿ ನಾವೆ ನಿಸರ್ಗ

ಅಂಗೈಯಲರಳಿ ಸ್ವರ್ಗ! ||

ಮರ ಚಾಮರ ಪುಳಕ

ಚಿಲಿ ಪಿಲಿ ಹಕ್ಕಿ ಜಳಕ

ಮಂದಮಾರುತ ಚಂದ

ಬಿಗಿಯಾಗಿಸುತ ಬಂಧ ! ||

ಜುಳುಜುಳು ನದಿಗಾನ

ಅಡ್ಡ ನಡುಗಡ್ಡೆ ಸಮ್ಮಾನ

ದೂರದಲರುಣನ ಹಾಸ

ಅರಿಶಿನ ಕುಂಕುಮ ಸ್ಪರ್ಶ! ||

ಮಾತುಗಳಾಗಿವೆ ಮೌನ

ಮೌನವದಾಗಿ ಗಾಯನ

ಬಣ್ಣಿಸಲೆಂತು ದಿವ್ಯ ಕ್ಷಣವ ?

ಕಿನ್ನರ ಗಂಧರ್ವ ಕಲರವ ! ||

ಏಕಾಂತ ಬಿಚ್ಚಿ ಅಗುಳಿ

ನಿರಾಳ ಮನ ಕಚಗುಳಿ

ಸಿಗ್ಗು ಸೋಗೆಲ್ಲ ಮಾಯ

ಎರಡೊಂದಾದ ಸಮಯ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 😊🙏👍

– one more poem will follow)

01582. ಗ್ರಹಣ ಹಿಡಿದಾಗ..


01582. ಗ್ರಹಣ ಹಿಡಿದಾಗ..

___________________________

ಖಗ್ರಾಸ ಗ್ರಹಣ

ಸುಗ್ರಾಸ ಭೋಜನ

ಮಾಡಿರಣ್ಣ ಕಣ್ಣಲೆ

ಬಾಯಿಗಿಟ್ಟು ಬೀಗ ||

ಚಂದ್ರ ನೀಲಿ ಚಿತ್ರ

ಕೆಂಪಾಗುತ ಅರುಣ

ಹುಣ್ಣಿಮೆ ಅವತಾರ

ಅಪರೂಪ ಸಂಭ್ರಮ ||

ಗ್ರಹಣಕೆ ಗ್ರಹಣ

ಹಿಡಿಸುವ ಸಂಭ್ರಮ

ನೋಡಬಹುದು ಬಾರದು

ಗದ್ದಲ ಗೊಂದಲ ಗೌಣ ||

ಅತಿಶಯದ ನೋಟ

ಶತಶತಮಾನದಂತರ

ಚಿಂತಿಸಬೇಡ ಮರುಳೆ

ಮಾಧ್ಯಮದೆ ಪುನರಾವರ್ತ ||

ನೋಡುತಲೆ ಗ್ರಹಣ

ಜ್ಞಾನಾಜ್ಞಾನ ಸಂವಾದ

ಮೌಢ್ಯ ನಂಬಿಕೆ ಒರೆಗೆ ಹಚ್ಚದೆ

ಸುಮ್ಮ ಮೆಚ್ಚಲಾಗದೆ ಸೊಗಡ? ||

– ನಾಗೇಶ ಮೈಸೂರು

೩೧.೦೧.೨೦೧೮

(Photo credit: Nagaraj Subba Rao – thanks a lot Nagaraj 👍👌🙏😊)

01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ


01581. ಮಂಕುತಿಮ್ಮನ ಕಗ್ಗ ೮೩:ನಿತ್ಯ ದ್ವಂದ್ವದೆ ಮಗ್ನ

ಮಂಕುತಿಮ್ಮನ ಕಗ್ಗ ೮೩ ರ ಮೇಲಿನ ನನ್ನ ಟಿಪ್ಪಣಿ..

https://www.facebook.com/story.php?story_fbid=1118406378295835&id=640670512736093&notif_id=1517279530220212&notif_t=notify_me_page&ref=notif

01580. ನಾವೆ, ಇದು ನಾವೆ..!


01580. ನಾವೆ, ಇದು ನಾವೆ..!

_______________________________

ಮುರಿದು ಬಿದ್ದ ನಾವೆ

ನಾವೆ ಕುಸಿದು ಬಿದ್ದರು..

ಮುಕ್ಕಾಗಿ ಮುರಿದರೇನು

ದಡಕದನೆ ಬಾಗಿಲಾಗಿಸುತ ||

ಕೊಳೆಯುತ ಅವಶೇಷ

ಮಂಕಾದರೇನು ಸ್ವಗತ

ತುಸುತುಸೆ ಉದುರಾಟ

ಇದ್ದಷ್ಟು ದಿನ ಉಸಿರಾಟ ||

ಯಾರಾರಿಗೊ ಬೀಡಾಗಿ

ಅಶನ ವಸನ ನೆಲೆಯು

ಬೇಡದೆ ಬಾಡಿಗೆ ವಾಸಕೆ

ಒಡೆಯನಿಲ್ಲ ಒಡೆಯರೆಲ್ಲ ||

ಮೀನ ಬೇಟೆ ಹವ್ಯಾಸಕೆ

ತುಂಬೆ ಬುಟ್ಟಿ ನನ್ನೊಡಲು

ಬಲೆ ಬೀಸಿ ಗೆದ್ದ ಜೋಡಿಗೆ

ಪ್ರಣಯದಂಗಳ ಗುಟ್ಟಿನಲಿ! ||

ನಶಿಸಿದರೇನಲ್ಲಿ ನಾವೆ

ಮಣ್ಣಲ್ಲಿ ಮಣ್ಣಾಗಿ ಕಾಯ

ಪೋಷಿಸೆ ಮತ್ತದೆ ಪ್ರಕೃತಿ

ಮತ್ತೆ ನಾವೇರುವ ನಾವೆ ||

– ನಾಗೇಶ ಮೈಸೂರು

(Nagesha Mn)

(Photo source: 3K namma chitra nimma kavana)

01579. ಅರ್ಧನಾರಿ…


01579. ಅರ್ಧನಾರಿ…

________________________

ಇವಳು ಅರ್ಧನಾರಿ

ಕಾಣುವರ್ಧ ಬಹಿರಂಗ

ಚಂದದ ಸಿಂಗಾರ ಬೊಟ್ಟು

ಬಣ್ಣದ ತುಟಿ ಬಿಡದು ಗುಟ್ಟು ! ||

ಕಾಣುವರ್ಧ ಮಾಯೆ

ತಪ್ಪಿಸಲೆಂತು ಆಕರ್ಷಣೆ?

ಕಣ್ಣೋಟದ ಬಲೆ ಕೆಡವೆ ಖೆಡ್ಡ

ಶರಣಗತ ಪುರುಷ ಅವಳ ಅಡ್ಡಾ ! ||

ಕಾಣದರ್ಧ ನಾರೀಶ್ವರ

ಆಗಿರಬಹುದು ಪುರುಷಚಿತ್ತ

ಮೀನಹೆಜ್ಜೆ ನದಿಮೂಲ ಕಡಲಾಳ

ಅವಳಲೆ ಸಮಷ್ಟಿತ ಅದೃಶ್ಯ ಸ್ವರೂಪ ||

ಜಗದೆಲ್ಲವಲ್ಲೆ ಅಂತರ್ಗತ

ಚಂಚಲ ಚರ ಪ್ರಕೃತಿ ಚಲನೆ

ಸ್ವಾರ್ಥ ಕುಟಿಲ ಕುಹಕ ಮೋಹಕ

ಪ್ರೀತಿಯ ಜಾಡಲಿ ಮಿಕ್ಕೆಲ್ಲವು ಧ್ವಂಸ ! ||

ಬಿಡು, ಅವಳನರಿತವರಾರಿಲ್ಲಿ

ಆ ಶಿವನೆ ಅರ್ಧ ನಾರೀಶ್ವರನಾದ

ಅರಿವ ಕುತೂಹಲಕೊಂದಾದರು ಇಲ್ಲ

ವ್ಯರ್ಥಸಾಹಸ ಯಾರಿಗು ಜಯವಿಲ್ಲ ಇನ್ನೂ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Madhu Smitha – thank you 🙏👍😊)

01578. ನಮ್ಮ ನಿಮ್ಮ ನಡುವಿನ ಕಥನ


01578. ನಮ್ಮ ನಿಮ್ಮ ನಡುವಿನ ಕಥನ

_____________________________________

ಎಲೆ ಮರೆಯಲ್ಲೊಂದು ಕಾಯಿ

ಕೈ ಬೆರಳನದ್ದೆ ಭಾವನೆ ಶಾಯಿ

ಬರೆದವೆಷ್ಟೊ ಮನಗಳ ತಪನ

ನಮ್ಮಾ ನಿಮ್ಮ ನಡುವಿನ ಕಥನ ||

ಬರೆವೆನೆಂಬ ತುಡಿತದ ಬಾಲ

ಬರವಣಿಗೆ ಭಟ್ಟಿ ಇಳಿಸೊ ಕಾಲ

ಮೂಡಿಸದೆ ಮೂಡಣದ ಸಾಲು

ಪದವಾಗುತ ಕುಣಿಸುವ ತೆವಲು ||

ಸಂಕೋಚ ಬಿಗಿ ಕೋಶದ ಭಿತ್ತಿ

ಗೊತ್ತಾಗದಂತೆ ಹೊದಿಕೆ ಸುತ್ತಿ

ಒಳಗೊಳಗೇನೊ ಭೀತಿ ಪ್ರವೃತ್ತ

ಮೀರಿಸಲದ ಪದವಾಗ ನಿವೃತ್ತ ||

ಹೆಸರಾಗಿಬಿಡೊ ಕನಸುಗಳ ಆಸೆ

ಆಗದು ಹೋಗದು ತಡೆದ ನಿರಾಸೆ

ಕುಗ್ಗಿಸಿ ಜಗ್ಗಿಸಿ ತಗ್ಗಿದುತ್ಸಾಹ ಶೂನ್ಯ

ಮತ್ತೆಲ್ಲಿಂದಲೊ ಬಡಿದೆಬ್ಬಿಸಿ ಕ್ರಿಯಾ! ||

ಎಲ್ಲರ ಕಥೆಯ ಪಲುಕಿದೆ ಪಲ್ಲವಿ

ಅಲ್ಲಿಲ್ಲೊಂದು ಹಣ್ಣಾಗುತಲಿ ಸವಿ

ಹೂವೊ ಹಣ್ಣೊ ಪಾಲಿನಲಿಹ ಭಾಗ್ಯ

ನಿನ್ನ ಪಾಡಿಗೆ ನಿನ್ನ ಕರ್ಮವಿರೆ ಸೌಖ್ಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01577. ಹೋರಾಟ..


01577. ಹೋರಾಟ..

________________________

ತೊಟ್ಟಿಕ್ಕುತಿದೆ ಕಂಬನಿ

ಮುತ್ತಿಕ್ಕುತ ಲಲ್ಲೆ ಚುಂಬನ

ಹರಿದ ಧಾರೆ ನದಿಯಲ್ಲ

ಮುತ್ತಿಗೆ ಕದನವೆನ್ನುವುದಿಲ್ಲ ! ||

ಒಡ್ಡಿದ ಕೈಯಲ್ಲೆ ಭೂಪಟ

ಸ್ವತಃ ಬರೆಸಿಕೊಂಡ ಚಿತ್ರಪಟ

ಹಣೆಬರಹದ ಗೆರೆ ಕಾಣದು

ಕಂಡ ಹಸ್ತ ಬದುಕ ಬದಲಿಸದು ||

ಗೆರೆಗಟ್ಟಿದ ನೆರಿಗೆ ಹಣೆಗೆ

ಮುಚ್ಚಲಷ್ಟು ವಿಭೂತಿ ನೊಸಲಿಗೆ

ಉದುರುವ ಹುಡಿ ಭಸ್ಮದಲಿ

ಸುಡಲಾಗ ಸಕಲ ಜನ್ಮದ ಕರ್ಮ ||

ಗೋಳಾಟದ ಬಾಳ ಬವಣೆ

ಮಂದಹಾಸ ಬಚ್ಚಿಟ್ಟ ಪರಿ ಕಾಣೆ

ಹೋರಾಡು ತಲೆ ಬದುಕಲ್ಲಿ

ಬದುಕಾಗ ಬರಿ ಭಾವದಮಲಲಿ ||

ದ್ವಂದ್ವದಲದೆ ಗುದ್ದಾಟ ತೆನೆ

ಸದ್ದ ನಡುವೆ ಬೆಳೆ ಸತ್ವ ಶೋಧನೆ

ಖಾಲಿ ಸಡಗರ ವ್ಯರ್ಥಾಲಾಪ

ಪೂರ್ಣವಾಗ ಬಿತ್ತಿ ಬೆಳೆದ ಸ್ವರೂಪ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01576. ಕಾಡುವ ಪರಿ..


01576. ಕಾಡುವ ಪರಿ..

_______________________

ಕಾಡಲಿ ಕನಸಲ್ಲಿ

ಕಾಡುವವನ ಕನಸು

ಕಾಡಿಸಿರೆ ಮೈಯ ಪುಳಕ

ಕಾಡಲಿ ತನುವಾಗಿ ಜಳಕ! ||

ಕಾಡಲಿ ಬಂದಪ್ಪುತ

ಕಾಡಿಸಿರೆ ಅಪ್ಪಿದ ಹಸ್ತ

ಕಾಡಾಗುತ ಮನ ವಿಹರಿ

ಕಾಡಿದವನಪ್ಪುಗೆ ಆಭಾರಿ !||

ಕಾಡುವಾಟ ಬೆನ್ನಟ್ಟುತ

ಕಾಡಿರಲವ ಬೆನ್ನಲ್ಲಪ್ಪುತ

ಕಾಡದಿರದೆ ಬೆಸೆದ ಹಸ್ತ?

ಕಾಡೆ ಬಳಸಿದ ತೋಳರ್ಥ! ||

ಕಾಡುವದೆ ಮುಂದೆ

ಕಾಡಲಿ ಹುಡುಕಾಡುತ

ಕಾಡಿಸಿರೆ ಸ್ಪಂದನ ಸ್ಪರ್ಶ

ಕಾಡೊಳಗ ಅವ್ಯಕ್ತ ಹಿತ ! ||

ಕಾಡದೆ ಬಿಡನವನು

ಕಾಡಿದ್ದು ಸಾಕೆನಿಸದಲ್ಲ

ಕಾಡಿನೊಳಗ್ಹೊಕ್ಕು ಕಲೆತು

ಕಾಡಿ ಪ್ರಕೃತಿಗಾಗೆ ಪುರುಷ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends – thank you 🙏👍😊)

01575. ಅಪೂರ್ವ ಸಂಗಮ..!


01575. ಅಪೂರ್ವ ಸಂಗಮ..!

____________________________

ಏನಿದು ರಾಗ? ನುಡಿಸಲೆಂತ ಸೊಗ

ಲೀಲಾಜಾಲದೆ ಹರಿಯುತಾ ಸರಾಗ

ಯಾವುದೀ ಕಂಠ? ದೈವದತ್ತ ಸ್ವರವೆ !

ಶಾಪಗ್ರಸ್ತ ಗಂಧರ್ವ ಭುವಿಗಿಳಿದ ತರವೆ ||

ಯಾವುದಿದು ವಾದ್ಯ ವಾದನದ ಖಾದ್ಯ

ಪಂಚಭಕ್ಷ್ಯ ಪರಮಾನ್ನ ಬಡಿಸುತಿರೆ ಧನ್ಯ

ಜನ್ಮದಾ ಸಂಸ್ಕಾರ ಪುಣ್ಯಾ ಯೋಗಾಯೋಗ

ಕಲೆಯಾಗಿ ಕರಗತ ಪರವಶವಾಗಿಸಿ ಸಂಯೋಗ ||

ಏನೀ ಅದ್ಭುತ ಲಯ! ಹೆಜ್ಜೆಯಲೆ ಲಾವಣ್ಯ

ನಾಟ್ಯದ ಹೇಷಾರವ ಸಂಚಲನೆ ಭ್ರಮೆ ಭವ್ಯ

ರಾಗತಾಳಗಾನ ಮೇಳವಿಸೆ ಸಂಭ್ರಮ ಅನನ್ಯ

ಕಟ್ಟಿಕೊಡುವ ವೈಭವ ಅನುಭೂತಿಯ ಅಕ್ಷಯ! ||

ಯಾವುದೀ ಅದ್ಭುತ ರಚನೆ ಪದಭಾವ ತಂತಾನೆ

ಅನುರಣಿಸೆ ಬೆರೆತು ಸುಗಮ ಸಂಗೀತ ಭಾವನೆ

ಯಾವನವನವಳಿಟ್ಟ ರಾಗ ತಾಳ ಸಂಯೋಜನೆ

ತಂದೆಲ್ಲ ಕಲೆಯೊಟ್ಟು ಸಂಭ್ರಮದೌತಣದ ಮೇನೆ ||

ಎಲ್ಲ ಮೀರಿದತಿಶಯ ಅದ್ಭುತ ರಸಿಕ ಹೃದಯ

ಆಸ್ವಾದಿಸುತೆಲ್ಲ ಸಂವೇದನೆ ಧನ್ಯತೆ ಸಂದಾಯ

ಪ್ರೇರಕ ಶಕ್ತಿ ಪೂರಕ ಅಪೂರ್ವ ಸಂಗಮ ಸೇರೆ

ಸಮಾನ ಮಿಡಿತ ಬಂಧದೆ ಬಂಧಿಯಾಗಿ ಮನ ಸೆರೆ! ||

– ನಾಗೇಶ ಮೈಸೂರು

(Nagesha Mn)

(Picture source from Internet / social media mostly received via FB friends – thank you all 😊🙏👍)

01574. ಸಾಕಿದ್ದ ಜೀವಗಳು…


01574. ಸಾಕಿದ್ದ ಜೀವಗಳು…

____________________________

ಏನಪ್ಪ ಮಹಿಮೆ ಜೀವಜಾಲ

ಕಂಡಿರ ಚಂದ ಮಾರ್ಜಾಲ?

ಅಕ್ಕರೆ ಸಕ್ಕರೆ ಸುಖಸಂಸಾರ

ಸಾಕಿದವಳ ಮುದಕೆ ಆಧಾರ ||

ಯಾರೆಂದರು ಅಪಶಕುನ ಬೆಕ್ಕು?

ಸಾಕೊಮ್ಮೆ ನೋಡದರ ಗಮ್ಮತ್ತು !

ಮಡಿಲಲಾಡುವ ಕಂದನ ಲೀಲೆ

ಕಣ್ಮುಚ್ಚಿ ನಿದಿರೆ ತೊಡೆಗಿಟ್ಟು ತಲೆ ||

ಕಣ್ಣಿಗಿಟ್ಟಂತೆ ಬಣ್ಣದಾ ಮಸೂರ

ಮಿಂಚು ಗೋಳ ಕಾಂತಿ ವಿಸ್ತಾರ

ಮುತ್ತುರತ್ನಪಚ್ಚೆವಜ್ರವೈಢೂರ್ಯ

ಹೆಸರಿನ್ನು ಇಡದ ನಯನ ಸೂರ್ಯ ||

ಅಂತಿಂತದ್ದಲ್ಲ ಬಂಧದನುಬಂಧ

ಬೇರಾಗಲೆಂತು? ಜೀವಜೀವ ಬೆಸೆದ

ಮಾತಿಲ್ಲ ಸದ್ದಲೆ ಹೊಸೆದ ಬಾಂದವ್ಯ

ಮನುಜರ ಮೀರಿದ ನಂಟಿನ ಕಾವ್ಯ ||

ಬೇರಾದ ಹೊತ್ತಿದು ಕಣ್ಣೀರು ಕೋಡಿ

ಬಳುವಳಿ ಕೊಟ್ಟರು ನೆನಪಿನ ರಾಡಿ

ಜತೆಗಿಲ್ಲವೀಗ ಮಾರ್ಜಾಲ ಸಂಸಾರ

ಒಂಟಿಯಾಗಿಸಿ ಯಾಕಾದವೊ ದೂರ ? ||

– ನಾಗೇಶ ಮೈಸೂರು

(Nagesha Mn)

(Picture source Nalini Magal – thank you very much 🙏👍😊)

01573. ತಂ…ಬಾಕು..


01573. ತಂ…ಬಾಕು..

__________________________

ಬಾಕು ತಂಬಾಕು

ಅಲುಗಿಲ್ಲದೆ ಇರಿವ ಸರಕು

ಸೇದಿದರೆ ಸಿಗರೇಟು

ತನು ಸೇದಿ ಬತ್ತಿ ಎದುರೇಟು! ||

ಸೇದಿಸುವ ಪೊಗರು

ವಯಸಿನ ಹುಲಿಯುಗುರು

ದಮ್ಮು ಕೆಮ್ಮು ಖುದ್ಧು

ಬಿಡದ ದೊಡ್ಡಸ್ತಿಕೆ ಸರಹದ್ದು ||

ಕೈಲಿದ್ದರೆ ಉರಿಬತ್ತಿ

ದೊಡ್ಡವನೆಂಬ ಹುಸಿ ಮಸ್ತಿ

ಹುಚ್ಚುಮುಂಡೆ ಮನಸು

ತಿಕ್ಕಲಾಟ ಅರೆಬರೆ ಕೂಸು ||

ಪ್ರಾಯದಲ್ಲಿ ಚಪಲ

ಶೋಕಿಗಾಗುತ ಮನ ಚಂಚಲ

ಶುರುವಾಗುವ ಹವ್ಯಾಸ

ನೋಡುನೋಡುತೆ ಮಾಡಿ ದಾಸ ||

ಬಿಡಲಾಗದ ಮೋಹ

ತಂದಿಟ್ಟರು ಕಾಯಿಲೆ ತರತರಹಯಾಕೆ ಬೇಕೊ ಪಾಡು ?

ಸೇದಿದ ತನು ಅಸ್ತಿಪಂಜರ ಗೂಡು ||

– ನಾಗೇಶ ಮೈಸೂರು

(Nagesha Mn)

(Picture source – Wikipedia)

01572. ಮೊಗ್ಗೆರಡರ ಮಾತುಕಥೆ…


01572. ಮೊಗ್ಗೆರಡರ ಮಾತುಕಥೆ…

____________________________

ನಾನು ಕಮಲೆ ನೀನು ಕಮಲೆ

ನಮ್ಮಿಬ್ಬರದು ಒಂದೇ ಅಮಲೆ

ನೀ ಕೋಮಲೆ ನಾನೂ ಕೋಮಲೆ

ನೀ ರವಿಯತ್ತ ರವಿ ನನ್ನತ್ತ ಕೊರಳೆ! ||

ನೀ ನಳಿನಿ ಬಳುಕಾಟ ನಿಂತಲ್ಲೆ

ನಾ ಧಾರಿಣಿ ಪಸರಿಸುವ ನೈದಿಲೆ

ನೀನಿರುವೆ ನೀರೊಳಗಿನ ಕುಸುಮ

ನೀರೆ ನಾನಾಗಿಹೆ ಸುಮ ಸಂಗಮ ||

ನೀ ಬಳ್ಳಿಯ ತುದಿಗಿಟ್ಟಿಹ ಕಿರೀಟ

ನನ್ನಂದ ಸೊಬಗೊದ್ದಿಹ ಮುಕುಟ

ನೀ ಕಮಲದೆಲೆ ನಡುವಿನ ಕುಸುರಿ

ನಾ ಬಳ್ಳಿ ಬಳುಕು ನಡುವ ವೈಯಾರಿ ||

ಬಿಡೆಂತ ಹೋಲಿಕೆ ನಮ್ಮಿಬ್ಬರ ಮಧ್ಯೆ

ಬೇಕಿಲ್ಲ ನಮಗೆ ವಿಶ್ವ ಸುಂದರಿ ಸ್ಪರ್ಧೆ

ನೀನು ನಾನು ಆನು ತಾನು ಸೃಷ್ಟಿ ಕುಣಿಕೆ

ಸಿರಿಯೆಮ್ಮ ಸೊಗಡು ಚಂದ ಯೌವನಕೆ ||

ನಿನ್ನೊಡನಿಂದು ಬರೆವೆ ನಾ ಹೊಸ ಭಾಷ್ಯ

ನಿನ್ನ ಮುಡಿದು ಮೇಲೇರಿಸುತ ಸಾಂಗತ್ಯ

ಖಾಲಿ ಕೇಶದೊಡವೆ ನೀನಾಗು ಮೆರುಗು

ಮಿಕ್ಕಿದೊಡವೆ ಜತೆ ನಾವಾಗಿ ಜಗದ ಬೆರಗು ||

– ನಾಗೇಶ ಮೈಸೂರು

೨೪.೦೧.೨೦೧೮

(ಚಿತ್ರ ಪಟ ರಾಜ್ ಆಚಾರ್ಯ ರ ಕವನದ ಪೋಸ್ಟಿನಿಂದ ಎರವಲು ಪಡೆದಿದ್ದು – ಧನ್ಯವಾದ ರಾಜ್ ಸಾರ್🙏👍😊)

01571. ಚಂದಿರನೊಡನೆ ಚಂದ್ರಿಕೆಗೆ ಸ್ಪರ್ಧೆ..!


01571. ಚಂದಿರನೊಡನೆ ಚಂದ್ರಿಕೆಗೆ ಸ್ಪರ್ಧೆ..!

_____________________________________________

ಹುಡುಕುತ್ತಿದ್ದಾಳವಳು ಹುಡುಗಿ

ಕಳುವಾಗಿ ಹೋಗಿದೆಯಂತೆ..

ಯಾರೊ ಕದ್ದವಳ ಮುಖಚಂದ್ರಿಕೆ

ಹೊದಿಸಿಬಿಟ್ಟಿಹರಂತೆ ಚಂದ್ರಗೆ! ||

ಗೊತ್ತಾಗದಿರಲೆಂದು ಕೊರಮ

ಮೋಡದ ಪರದೆ ಅಡ್ಡ ಹಿಡಿದು

ಸೆರಗೊ ಮುಸುಕೊ ಸರಿ ಹೊದ್ದು

ಮರೆಮಾಚಿಹನಂತೆ ಮೋಸದಲಿ.. ||

ಬಿಡು ಅವಳೆನಲ್ಲ ಅರಿಯದ ಹೆಣ್ಣು

ತನ್ನದೆ ಕಣ್ಕಾಂತಿ ಗುರುತ್ಹಿಡಿದು

ಯೋಜನ ದೂರದಲಿಹ ಸುಧೆಗು

ಬಲೆ ಹಾಕಿ ಛವಿ ಸೆಳೆದಿಹಳು ಕಣ್ಣಲ್ಲೆ ! ||

ಅವನೊ ತಿಂಗಳ ಹುಣ್ಣಿಮೆ ಪ್ರಖರ

ದೂರವಿರುವ ಭರವಸೆ ಆಧಾರ

ಅವಳೊ ದಿನನಿತ್ಯದ ಪೌರ್ಣಮಿ

ಸುಲಭಕೆ ಬಿಡಳು ಕಾಯುವ ಸಹನೆ ! ||

ಯಾರು ಗೆಲುವರೊ ಕುತೂಹಲ ಸ್ಪರ್ಧೆ

ನೋಡೆ ನೆರೆದ ಗಗನದ ಬಯಲು

ಗೊತ್ತವಳಿಗಿಲ್ಲ ಕ್ಷಯವೃದ್ಧಿ ಕರ್ಮ

ಇಂದಲ್ಲ ನಾಳೆ ಗೆಲ್ಲುವ ಮನೋಧರ್ಮ ||

– ನಾಗೇಶ ಮೈಸೂರು

(Nagesha Mn)

(Picture source : Internet / social media (Pinterest) received via Madhu Smitha – thank you 🙏😊👍)

01570. ಬಸವನೊಡನೆ ಬಸವ..


01570. ಬಸವನೊಡನೆ ಬಸವ..

________________________________

ನೀ ಮೂಗ ಬಸವಣ್ಣ

ನಾ ಸಜೀವ ಹಸುವಣ್ಣ

ನಿನಗೊ ನಿತ್ಯ ದಸರಾ ವೈಭವ

ನನಗೊ ಬೀದಿ ಹುಲ್ಲು ಸಿಕ್ಕರೆ ಪುಣ್ಯ! ||

ನೋಡು ಕುತ್ತಿಗೆಗೆ ಹಾರ

ಮಿರಮಿರ ಮಿಂಚುವ ಸಾರ

ಕಪ್ಪಿದ್ದರು ನೆತ್ತಿಗೆ ಹೂವು ದವನ

ಅಚ್ಚ ಬಿಳುಪಿದ್ದರು ಯಾರೂ ನೋಡರಲ್ಲ ? ||

ನಿನಗೊ ಮಂಗಳಾರತಿ ಪೂಜೆ

ನಮಿಸುವರಡ್ಡಬಿದ್ದು ಬಿಡದೆ ಗೆಜ್ಜೆ

ಕತ್ತ ಸರಪಳಿ ಗಂಟೆ ಸಿಂಗಾರಕೊಡವೆ

ಬತ್ತಲೆ ಮೈಲಿ ಸುತ್ತುವೆ ಯಾರಿಗಿಲ್ಲ ಪರಿವೆ ||

ಕೂತಲ್ಲೆ ಸುಖಾಸನ ನಿನದು

ಸುಖಾಸೀನಕೆಲ್ಲಿ ಹೊಟ್ಟೆಪಾಡು?

ದುಡಿಯದೆ ಪಡೆಯುವೆ ನೀನೆಲ್ಲ ಬಿಟ್ಟಿ

ದಣಿಸಿ ಮಣಿಸಿದರು ನನಗಿಲ್ಲ ದೊರೆ ಖಾತರಿ! ||

ಆದರು ಬಿಡು ನೀ ಮಹಾತ್ಮ

ಮುಗಿಯೆ ಕಾಲಿಗೆ ಮುತ್ತೀವೆ ಹಣೆಗೆ

ನಿಜದಲಿ ಬಂದೆರಗುವೆ ನಿನಗೆ ದಿನನಿತ್ಯ

ಹಾಳು ಹಣೆ ಕೆರೆತಕೆ ಬೇರೆ ದಾರಿ ಮತ್ತಿಲ್ಲಾ ! ||

ನೀ ಪುಣ್ಯಕೋಟಿ ಪುಣ್ಯವಂತ

ಚಿರಂಜೀವಿ ಯುಗಾಂತರ ಮೂರ್ತ

ಕಟುಕನು ಬಂದು ಕೈ ಮುಗಿವನಲ್ಲಾ ನಿನಗೆ

ಅವನ ಕೈಗೆ ಬಂದಾಗ ಕತ್ತಿ ಗುರಿ ನನ್ನ ಕುತ್ತಿಗೆಗೆ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Chandrashekar Hs – thank you 🙏👍😊)

01569. ಬೊಗಸೆ ತುಂಬಿದ ಭಗವಾನ್..


01569. ಬೊಗಸೆ ತುಂಬಿದ ಭಗವಾನ್..

_______________________________________

ಬೊಗಸೆ ತುಂಬಿದ ಭಗವಂತ

ಹಸ್ತದಲೆ ಆಗಸ ಬಂದಿಳಿದಿತ್ತ

ಕರ ಪೂರ ನೆಲೆಸಿ ಸ್ವಾಮಿ ಚಿತ್ತ

ಆರಾಧನೆಗೆ ಸ್ವತಃ ತಾ ನೆಲೆಸಿತ್ತ ||

ಏನೇನಪ್ಪ ನಿನ ಲೀಲೆ ಬಾಲಕ?

ನೋಡು ನೀನೆಷ್ಟು ಜನಕೆ ಚಾಲಕ !

ನಿನ್ನ ವ್ರತ ಹಿಡಿದವರ ಕಥೆ ಪ್ರಭು

ನಖಶಿಖಾಂತ ಆವರಿಸುವೆ ನೀ ವಿಭು ||

ಅಂಗೈ ಹುಣ್ಣಿಗೆ ಬೇಡ ಕನ್ನಡಿ ದೇವ

ಅಂತೆಯೆ ಮುಂಗೈ ನೋಟದ ಭಾವ

ನೀನಿರಲಲ್ಲಿ ನಿತ್ಯ ಸುಪ್ರಭಾತ ಸಂತ

ನಡೆವುದೆಲ್ಲ ಶುಭ ಜಪಿಸೆ ಮಣಿಕಂಠ ||

ಕಟ್ಟುವರು ಇರುಮುಡಿ ಹತ್ತಿ ಮಲೆಯ

ಕಲ್ಲು ಮುಳ್ಳ ಹಾಸಿಗೆ ಹುಡುಕೆ ನೆಲೆಯ

ಹದಿನೆಂಟರ ಎತ್ತರ ಏರುತ ಜಗದೇಕ

ನೀನಿಲ್ಲಿರೆ ಹಸ್ತದೆ ನಿಜಕು ಏರಲೆಬೇಕಾ? ||

ನಮಿಪೆ ಬೊಗಸೆಯಲೆ ಸ್ವಾಮಿ ಅಯ್ಯಪ್ಪ

ಮಡಚಿದ ಹಸ್ತದೆ ನೀ ಬಂಧಿ ಆಗಿರು ತಪ್ಪ

ನೀನಿದ್ದರೆ ನನ್ನಲ್ಲಿ ನಾ ಹತ್ತಲಿ ಬಿಡಲಿ ಬೆಟ್ಟ

ಕಾಯುತ ಹತ್ತಿಸುವೆ ಜೀವನದುದ್ದಕು ದಿಟ್ಟ ||

– ನಾಗೇಶ ಮೈಸೂರು

(Nagesha Mn)

(Picture from Internet / social media sent by Chandrashekar Hs – thank you! 😊👍🙏)

01568. ರಾಸಲೀಲೆ ಗೋಪಾಲ


01568. ರಾಸಲೀಲೆ ಗೋಪಾಲ

________________________________

ರಾಸಲೀಲೆ ಕ್ರೀಡೆ ಗೋಪಾಲ

ಬಾಲೆಯರೊಡನೆ ಆಡುವ ಕಾಲ

ಹಾಡಲಿತ್ತು ಮೋದ ವಿನೋದ

ಕಾಡಲಿತ್ತು ಸರೋವರದೇಕಾಂತ ||

ನಟ್ಟಿರುಳಲಿ ಕಟ್ಟುನಿಟ್ಟು ಬಚ್ಚಿಟ್ಟು

ಬಂದು ಸುತ್ತ ನೆರೆದುಡುಗೆ ಬಿಚ್ಚಿಟ್ಟು

ಸರಿ ಹೊತ್ತಲಿ ಲೆಕ್ಕಿಸರಲ್ಲ ನಡುಕ

ನೋಡಿಹ ಹುಣ್ಣಿಮೆ ಚಂದಿರಗು ಪುಳಕ! ||

ಅವನಿದ್ದೆಡೆ ಭೀತಿಯೆ ನಿರ್ಭೀತಿ

ಅವನೊಬ್ಬನೆ ಸಾಕೆನ್ನುವ ಪ್ರೀತಿ

ಹಂಚಿಕೊಳದ ಪ್ರೇಮಕು ವಂಚನೆ

ಹಂಚಿಕೊಂಡರೆಂತೊ ನಿರ್ವಂಚನೆ? ||

ಚೆಲ್ಲಿದರೆಲ್ಲ ಚೆಲ್ಲು ನಗೆ ಮಲ್ಲಿಗೆಯ

ಚೆಲ್ಲಾಟದಲೆ ಉರುಳಿದೆ ಸಮಯ

ಯಾರಿಗಿಲ್ಲ ಪರಿವೆ ನಲಿವ ಹೃದಯ

ಪ್ರತಿ ವದನದಲಾಗಿ ಚಂದ್ರೋದಯ ||

ಗುಟ್ಟಾಗಿಡದ ಗುಟ್ಟಿದು ಸಗಟು

ರಾಸಲೀಲೆ ಪಂಡಿತರಿಗೆಒಗಟು

ಪಾಮರನಿಗದು ದೇವನದ್ಭುತದಾಟ

ಭಾಮಿನಿಯರಿಗದೆ ಆರಾಧನೆ ತೋಟ ! ||

– ನಾಗೇಶ ಮೈಸೂರು

(Nagesha Mn)

(Picture source : Internet / social media via FB friends / posts)

01567. ಬರಲಿ


01567. ಬರಲಿ

___________________

ಬರಲಿ ಬಿಡಿ ಬರಲಿ

ಪುಂಖಾನುಪುಂಖ ಕಷ್ಟ

ಕೇಶದಂತೆ ಬೆಳೆಯಲಿ

ಬಂದಂತೆ ಕತ್ತರಿಸುತ ||

ಬರಲಂತೆ ಹುಣ್ಣಿನ ರೀತಿ

ಸುಲಭ ತೊಲಗದ ಸುಖ

ತೊಗಲಿಗಂಟಿ ಕಾಡಲಿ ಸದಾ

ಮುಲಾಮು ಹಚ್ಚಿ ಹದಕಿಡುತ ||

ಬರಲಿ ಕಾಡುವ ಪೀಡೆಗಳೆಲ್ಲ

ಒಂದರ ಹಿಂದೊಂದು ಸಾಲು

ಉಗುರಂತೆ ಚಿಗುರಿದರೆ ಸರಿ

ಕತ್ತರಿಸಿ ಎಸೆ ಬೆರಳು ಮುಕ್ತಾ ||

ಬರುತಿರಲಿ ಬೆವರಂತೆ ಧಾರೆ

ಬಿಸಿಲಿನ ಬೇಗೆಯಲಿ ಹರುಷ

ತೊಡೆದು ವರೆಸಿದರು ಉಕ್ಕುತ

ಮತ್ತೆ ಮತ್ತದೆ ಧಾರಾಕಾರದಲಿ ||

ಬರುವುದು ಚರಾಚರ ನಿಯಮ

ಬಾರದಿದ್ದರೆ ಎಲ್ಲಿಯೊ ಲೋಪ

ಹಿತವಾದದ್ದು ಬಂದು ಕಾಡಲಿ

ಅಹಿತ ಕತ್ತರಿಸಿ ಚೆಲ್ಲೊ ಸರಕಾಗಲಿ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Facebook friend- thank you ! 🙏😊👍)

01566. ಹಾಳಾದವನ ದಾರಿ ಕಾದು..


01566. ಹಾಳಾದವನ ದಾರಿ ಕಾದು..

____________________________________

ಬರ್ತಾನಾ? ಬರ್ತಾನಾ?

ಕುಂಕುಮ ಸೀರೆ ತರ್ತಾನಾ?

ದಾರಿ ಇರ್ಲಪ್ಪ ಸುಕ್ಷೇಮ

ಜೀವ ಇರ್ಲಪ್ಪ ಜೋಪಾನ ||

ಹಾಳು ಒಬ್ಬಂಟಿ ಬೇಸರ

ಹೇಳಿ ಹೋದನಲ್ಲ ಹೆಸರ

ಯಾವೂರೊ ಕಾಣೆ ಹುಡುಗ

ಬರಬಾರದೇನೊ ಒಂಟಿ ಜಾಗ ? ||

ನೀರಲಿಟ್ಟ ಕಾಲಲಿ ಕಂಪನ

ನಿಲದೇಕೊ ಎದೆಗೂ ತಲ್ಲಣ

ಕಾಲ ನಿಂತಂತಿದೆ ಸ್ತಂಭನ

ಚುಂಬನ ಸಿದ್ಧ ತುಟಿಗು ಬಣ್ಣ ||

ಯಾವತ್ತೂ ಕಟ್ಟಿರದ ಗಂಟು

ಮುಡಿ ಸುತ್ತ ಮಲ್ಲಿಗೆ ನಂಟು

ನಿನ್ನ ಮೆಚ್ಚಿಸೆ ಬೈತಲೆ ಬೊಟ್ಟು

ನಿನಗೆಂದೆ ಉಟ್ಟ ಸೀರೆ ಸೊಗಡು ||

ಬಾರೊ ಮನೆಹಾಳದ ಭಾವ

ಬಾಯಿಬಿಟ್ಟು ಹೇಳದು ಜೀವ

ನೀನರಿತವನಾದರೆ ಈ ಮನಸ

ಕನಸಿಲ್ಲದೆಯು ಆದಂತೆ ನನಸು ||

ಕೆನ್ನೆಗೊತ್ತಿದ ಹಸ್ತ ನೋಯುತ

ಜಾರಿಸೊ ಮುನ್ನ ಕಂಬನಿ ಮೊತ್ತ

ಬೆನ್ನಿಂದ ಬಂದು ಮುಚ್ಚಿ ಕಣ್ಣನು

ಮೈಮರೆಸಿಬಿಡೊ ಮುಗ್ದ ಹೆಣ್ಣು ನಾ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Mohan Kumar D M – thanks a lot sir 🙏👍😊)

01565. ಓ ! ತೇಜೋಮಯ ದೇವಾ…!!


01565. ಓ ! ತೇಜೋಮಯ ದೇವಾ…!!

__________________________________

ಸೂರ್ಯನೆದುರ ಹಣತೆ

ನಾನೆಂದುಕೊಂಡರೆ ಘನತೆ

ನೀನುಗುಳುವದೇ ಅಗ್ನಿಯಲಿ

ನಿನಗೆ ಮಂಗಳಾರತಿ ಧೂಪ ||

ನೀನುದಯ ಅಸ್ತಮಯ

ಎಂದೆನುವ ಸುಳ್ಳಿನ ವಿಷಯ

ನಿಂತಲ್ಲೆ ನಿನ್ನ ಸುತ್ತುವ ಧರಣಿ

ಕಣ್ಣುಮುಚ್ಚಾಲೆ ಬರಿ ಅವಳಾಟ ||

ನಿನ ನುಂಗಿತೆನ್ನುವ ಗ್ರಹಣ

ಲೆಕ್ಕಾಚಾರದ ಮುಠ್ಠಾಳತನ

ಅಡ್ಡ ನಿಂತವರಾಚಿಚೆ ಕಾಣದು

ನೀನಿದ್ದಲ್ಲೆ ಇರುವ ಗುಂಡುಕಲ್ಲು ||

ನೀನಿರುವ ಅಗಾಧ ದೂರಕು

ಸೇತುವೆ ಪ್ರವಹಿಸುವ ಬೆಳಕು

ನಮಿಸಿ ಪೂಜಿಸುವ ಜೀವ ಜಗಕೆ

ನೀನೆ ಆಧಾರ ಶಕ್ತಿಯ ಒರತೆ ||

ನಿಜ ನೀನಲ್ಲ ಸ್ಥಿರ ನಿಂತ ನೀರು

ಸಾಪೇಕ್ಷದೆ ಚಲಿಸುವ ಕೊಸರು

ಚಲಿಸೊ ನಿಹಾರಿಕೆ ಆಕಾಶಗಂಗೆ

ಸುತ್ತುವ ಬ್ರಹ್ಮಾಂಡ ಚಲನೆ ಸಿಕ್ಕೆ ||

ನೀ ಸಾಂಕೇತಿಕ ಶಕ್ತಿ ಶಾಖ ದ್ಯುತಿ

ನಾ ಸಾಂಕೇತಿಕ ಸೃಷ್ಟಿ ಜಾಗೃತಿ

ಜೀವಾಜೀವ ನಿರ್ಜೀವ ಸೇತುವೆ ನೀ

ತನ್ಮೂಲಕ ಇಹಪರ ಹವಣಿಸಿ ನಾ ! ||

– ನಾಗೇಶ ಮೈಸೂರು

(Nagesha Mn)

(Picture source internet / social media received a received via Mohan Kumar D M – thank you very much sir! 🙏👍😊)

01564. ಕಣ್ಣಿಗೆ ಬಿದ್ದ‘ನಲ್ಲ’


01564. ಕಣ್ಣಿಗೆ ಬಿದ್ದ‘ನಲ್ಲ’

_________________________

ನಗುವನಲ್ಲ ನಗುವನಲ್ಲ

ಬಿದ್ದು ಬಿದ್ದು ನಗುವನು

ನಕ್ಕ ಸದ್ದು ಎದೆಯ ಗುದ್ದಿ

ಎಬ್ಬಿಸಿಹುದು ನೆನಪನು || ನಗುವನಲ್ಲ ||

ಅವನಾವುದೊ ಕಾಲದಲಿ

ಬರಿ ಅವನಾಗಿದ್ದ ನೆನಪದು

ಅವನಿಲ್ಲದೆ ಬದುಕಿಲ್ಲವೆಂಬ

ಹವಣಿಕೆ ತೊಳಲಾಟವದು || ನಗುವನಲ್ಲ ||

ಅವನೊಬ್ಬನೆ ಇದ್ದ ಜಗವದು

ಮಿಕ್ಕವರಿದ್ದರೇನು ಕಾಣಿಸದು

ಕಂಡರೇನು ಮನ ಲೆಕ್ಕಿಸದು

ಅವನ ಹೊರತು ಬಾಕಿ ಬುದ್ಧು || ನಗುವನಲ್ಲ ||

ಅವನ ಹಿಂದಲೆದಾಟ ಸುತ್ತ

ಹಗಲಿರುಳು ಅವನೆ ಮೊತ್ತ

ಅವನಿಲ್ಲದೆ ನಾನಿಲ್ಲ ಎನ್ನುತ

ಕೆಳೆ ಬಳಗವನೆ ದೂರಾಗಿಸಿತ್ತ || ನಗುವನಲ್ಲ ||

ಇಂದವ ಕಣ್ಣಿಗೆ ಬಿದ್ದ ದೂರದೆ

ಎಬ್ಬಿಸಿಬಿಟ್ಟ ಸಂಚಲನ ಮನದೆ

ಇಂದವನಿಲ್ಲದಿರಲೇನು ಬರಿದೆ

ನಕ್ಕು ಮುಂದೆ ಸಾಗಲು ನೆನಪಿದೆ || ನಗುವನಲ್ಲ ||

– ನಾಗೇಶ ಮೈಸೂರು

(Nagesha Mn)

(Picture source internet / social media – received via Madhu Smitha – thanks! 👍😊🙏)

01563. ಮೀರಲಾರೆನೊ ಮಾಧವ..


01563. ಮೀರಲಾರೆನೊ ಮಾಧವ..

________________________________

ಮೀರಲೆಂತೊ ನಿನ್ನಾಣತಿ ಘನ ಚೋರ

ನಾನಲ್ಲವೆ ನಿನಗೆ ಮೀಸಲಿಟ್ಟ ಮೀರಾ?

ನೋಡಿಲ್ಲಿ ನಾ ಕಲಿಯುಗದಲಿಹ ರಾಧೆ

ಜತೆಯಲ್ಲಿ ತಂದ ದ್ವಾಪರದ ನೆರಳಿದೆ ! ||

ನೋಡೊ ಮಾಧವ ಸಾಕೊಂದು ಪಿಂಛ

ಕಾಣಿಸಲದೆ ನಿನ್ನ ಜತೆ ಬ್ರಹ್ಮಾಂಡದಂಚ

ನೀನಿಲ್ಲದಿರಲೇನು ನಿನ್ನ ನೆರಳು ಸತತ

ಜತೆಗಿದೆ ನಿರಂತರ ನನ್ನೊಳು ನಿನ್ನ ಚಿತ್ತ ||

ಕಾಣೆಯ ಗೋಪಾಲ ನನ್ನೀ ತನ್ಮಯತೆ

ನುಡಿಸಿಹ ಬೆರಳಲ್ಲಿ ನಿನ್ನ ಹೆಸರಿನ ಗೀತೆ

ತಲ್ಲೀನ ಮುಚ್ಚಿದ ಕಣ್ಣ ತುಂಬ ನಿನ ಬಿಂಬ

ಅಮಲ ಧಾರಾಕಾರ ಹರಿದ ಭಕ್ತಿ ಸೌರಭ ||

ನಾನು ನಾನಲ್ಲ ನೀನು, ನೀನಾಗಿ ನಾನು

ನೋಡು ನೀನಿಲ್ಲದೆಡೆಯಿಲ್ಲದ ಕಾನೂನು

ಪರವಶತೆಯಲ್ಲ ಪರಕಾಯ ಪ್ರವೇಶವಿದು

ರಾಧೆಯೆ ಮೀರ ಅದೆ ಕೃಷ್ಣನ ಕೊಳಲಿದು ||

ಮೀರದಿರಲು ನಿಯಮ ನಿಯತಿಯ ಧರ್ಮ

ನೀ ದೊರಕದಿದ್ದರು ನಿನ್ನೆ ನೆನೆದು ಸರಿಗಮ

ನಿನ್ನಿಚ್ಚೆಯಂತೆ ಬಡಿಸಿ ಸ್ವಚ್ಚ ಪ್ರೇಮ ಜಗಕೆಲ್ಲ

ಸಾರುತಲೆ ಕಾಯ್ವೆ ಬಹತನಕ ನೀ ಬಹ ಕಾಲ ||

– ನಾಗೇಶ ಮೈಸೂರು

(Nagesha Mn)

(Picture source from Internet / social media received via Tejaswini Kesari – thank you ! 🙏👍😊)

01562. ಬರದಿದ್ದರೇನು ಬರೆವೆ..


01562. ಬರದಿದ್ದರೇನು ಬರೆವೆ..

____________________________

(ಈ ಚಿತ್ರ ನಂದಾ ದೀಪಾ ರವರ ಪೋಸ್ಟೊಂದರಿಂದ ಎರವಲು ಪಡೆದದ್ದು (thank you!) – ಬೇಕೆಂತಲೆ ಬರಿ ‘ಬ, ಭ‘ ಕಾರದ ಪದಗಳನ್ನು ಮಾತ್ರ ಬಳಸಿದೆ – ಸ್ವಲ್ಪ ಅಸಂಗತವೆನಿಸಿದರೆ ‘ಹೊಟ್ಟೆಗ್ ಹಾಕ್ಕೊಳೀ 😁l)

ಬರದೆ ಬರದೆ ಬರದೆ ಬರದೆ..

ಬರದಿದ್ದರು ಬರೆದೇ ಬರೆದೆ !

ಬರೆದೆಲ್ಲವ ಬರಿದಾಗುವ ಭರದೆ

ಭರವಸೆ ಭರಪೂರ ಬರಬಾರದೆ ? ||

ಬರಿದಾಗಲೆಂತು ಭರಿಸಿದೊಳಗ

ಭಾರ ಬವಣೆ ಬಾಧಿಸಿ ಬುರುಗು

ಬಳಸದಾ ಬಳಪ ಬರೆಯಲೇನ ?

ಬರೆದುಬಿಡುವೆ ಬಂದದ್ದ ಬರೆಯುತ ||

ಬಣ್ಣಬಣ್ಣ ಬಣ್ಣಿಸದೇನನು ಬಣ್ಣನೆ

ಬಣ್ಣವಿಲ್ಲದೆ ಭಾವನೆ ಬರಲೆಲ್ಲಿ?

ಬಂತು ಬರಲಿಲ್ಲೆಂದು ಭೋರಿಡದೆ

ಬಾರದಿದ್ದರು ಬಿಡದೆ ಬರೆಯುವಾಟ ||

ಬಾಲವಲ್ಲ ಬದುಕು ಬದಿಯಲಿಲ್ಲ

ಬದಿಗೊತ್ತಬಿಡದೆ ಬೇಧಿಸುವ ಬಹಳ

ಬಲವಡಗಿದ ಬಾಗಿಲಲಿ ಬುಡಕಿಳಿದು

ಬೆಡಗು ಬಿನ್ನಾಣ ಬಹಿರಂಗವಾಗಿಸುತ ||

ಬರೆದರಸಂಬದ್ಧ ಬೈದಾಟ ಬರದಿರದು

ಬರೆಸುವಾತನ ಬರಹ ಬರವಣಿಗೆ ಬಂಧು

ಬಂದದ್ದೆಲ್ಲ ಬರಲಿ ಭಗವಂತನಿರಲಿ ಬಗಲಲಿ

ಬರೆದೇ ಬರೆವೆ ಬರಹ ಬಾನಿಂದವ ಬರೆಸಲಿ ||

– ನಾಗೇಶ ಮೈಸೂರು

೧೩.೦೧.೨೦೧೮

01561. ಮತ್ತೆ ಬಂತು ಸಂಕ್ರಾಂತಿ!


01561. ಮತ್ತೆ ಬಂತು ಸಂಕ್ರಾಂತಿ!

__________________________________

(ಎಲ್ಲರಿಗು ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು👍😊🌷)

ಬಂತು ಬಂತು ಮತ್ತೆ ಸಂಕ್ರಾಂತಿ

ಮನವಾಗುತಿದೆ ಗಾಳಿಪಟದ ರೀತಿ

ಹಾರಾಡುತಿದೆ ನಭದ ಬಯಲಲಿ

ಸೂತ್ರದಲಿ ಬಂಧಿ ನಿರ್ಭೀತ ತೇಲಿ ||

ಸುಗ್ಗಿ ತಂದೊಗೆದ ಫಸಲ ರೀತಿಯೆ

ಹಿಗ್ಗು ಉಕ್ಕುಕ್ಕಿ ಸುರಿದ ಕುಸುರಿಯೆ

ಅದುರಿಸೊ ಚಳಿಯನ್ಹೆದರಿಸೆ ಬಿಸಿಲ

ತಂದೊಡ್ಡಲೊಟ್ಟುಗೂಡಿಸಿ ಉರುವಲ ||

ಸಿಹಿ ಎಳ್ಳು ಬೆಲ್ಲ ಕಾಳು ಕಬ್ಬಿನ ಜಲ್ಲೆ

ಸುಖ ಶಾಂತಿ ಸಮೃದ್ಧಿ ನಗುತಿಹ ನಲ್ಲೆ

ಮುಡಿದ ಹೂವೆಲ್ಲ ಘಮಘಮಿಸಿ ಸೊಗ

ಉಡುಗೆ ಮತ್ತೆಮತ್ತೆ ನೋಡಿಸುತೆ ಮೊಗ ||

ತ್ರಿವೇಣಿ ಸಂಗಮ ತೀರ್ಥಸ್ನಾನ ಸಂಭ್ರಮ

ನಂದಿನಿ ಪೂಜೆ ಗೃಹಿಣಿ ಅರಿಶಿನಕುಂಕುಮ

ಹೊಲದೆತ್ತುಗಳ ಸಿಂಗಾರ ಬಣ್ಣದಲಿ ಬೆರಗು

ಹುಲ್ಲ ಸುಟ್ಟ ಬೆಂಕಿ ದಾಟಿಸುವ ಪರಿ ಸೊಬಗು ||

ಮೊಟ್ಟಮೊದಲ ಸಂಕ್ರಾಂತಿ ಮಾವನ ಮನೆ

ಹಬ್ಬದೂಟದೊಡನೆ ಉಡುಗೊರೆಯ ಕಾಮನೆ

ಏನೆಲ್ಲ ನೆಪಗಳೊ? ಸಂಪ್ರದಾಯದ ಸೊಗಡು

ಚಳಿಯೋಡಿಸೊ ತಿನಿಸ ತಿನಲು ನೆಪ ನೋಡು ||

– ನಾಗೇಶ ಮೈಸೂರು

(Nagesha Mn)

(Picture source : Internet / social media )

01560. ಪರಿಚಯ…


01560. ಪರಿಚಯ…

____________________________

ನಾನಿಲ್ಲ ನೀನಿಲ್ಲ ಯಾರಿಲ್ಲ ಇಲ್ಲಿ

ಎಲ್ಲವು ಮಾಯೆ ಮೋಹದ ಅಮಲು

ನಾನು ನಾನೆಂದು ಮೀಸೆ ತಿರುವಿದವರು

ನೀನು ನೀನೆಂದು ಓಲೈಸುವಾ ಭಟರು ||

ನೀನಾಗಬೇಕು ನಾನು ಬಿಟ್ಟರೆ ನೀನು

ನೀನು ನೀನಾಗಿರಲು ಬಿಡದ ಕಾನೂನು

ಹೊರಳು ಎಡಕೆ ಇಲ್ಲ ತೆರಳು ಬಲಕೆ

ಅಂಗಾತ ಮಲಗೆ ನಡುವೆ ಬಿಡರು ಜೋಕೆ ||

ಸುಮ್ಮನಿರಲಾಗದು ನಿಶ್ಚಲ ಮಿಡುಕು ಜೀವ

ಕೂರಲಾಗದು ನಿರ್ಲಿಪ್ತ ತಡಕಾಟ ಬಾಂದವ್ಯ

ಹುಡುಕಾಟ ಹುಡುಗಾಟ ಬೇಲಿ ನಿಸ್ವಾರ್ಥ

ಬಂದು ಕೂರುವುದಲ್ಲಿ ಸ್ವಾರ್ಥ ಹಿತಾಸಕ್ತಿ ||

ಕೂರಲಾಗದು ತಪಕೆ ಕಾಡಲ್ಲ ಕಾಡುಮನೆ

ಐಹಿಕ ಭೋಗ ಯೋಗ ಕಾಡದೆ ಬಿಡ ಸಮನೆ

ನೀನು ಎಂದರೆ ಏನು ನಿರ್ಧರಿಸೆ ನೂರಾರು

ನಿನ್ನೊಬ್ಬನ ಹೊರತು ಮಿಕ್ಕವರದೆ ತಕರಾರು ||

ಅರಿವಿಗಿಳಿವುದು ಬರಿಯ ಹೆಸರಷ್ಟೆ ನೀನು

ತಾಳ ಪಲ್ಲವಿ ರಾಗ ಈ ಜಗದ ನುಡಿ ಸದ್ದು

ಗದ್ದಲದೊಳಗಲ್ಲೆಲ್ಲೊ ನಿನ್ನೊಳಗಿನ ನೀನು

ಅಡಗಿರುವೆ ಕೈಗೆ ಸಿಕ್ಕರೆ ಭಾಗ್ಯಶಾಲಿ ಬಾನು ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via Yamunab Bsy Thank you 🙏👍😊)

01559. ಕವಿಗೋಷ್ಠಿಯ ಭೀತಿ..!


01559. ಕವಿಗೋಷ್ಠಿಯ ಭೀತಿ..!

___________________________

ಕರೆಯಬೇಡಿ ಕವಿಗೋಷ್ಠಿಗೆ ನನ್ನ

ಕವನ ಓದಲು ಬರದು ನನಗೆ !

ಗುಟ್ಟಲಿ ಬರೆದಂತಲ್ಲ ಓದುವ ವೈಭವ

ನೆನೆದೇ ನಡುಗಿದೆ ಕಾಲು, ಸಭಾಕಂಪ ! ||

ನನ್ನಾಣೆ ಗೊತ್ತಿಲ್ಲ ಓದುವ ಬಗೆಯೆಂತು?

ಇಂದಿಗೂ ಅರಿವಿಲ್ಲ ಓದೇ ಹೇಗಿದ್ದೀತು !

ನಿಮಗೇನಾದರು ಗೊತ್ತೆ ಯಾಕಲ್ಲಿ ಸಾಲು

ಎರಡೆರಡು ಸಲ ಒತ್ತಿ ಹೇಳುವಹವಾಲು ? ||

ಹಾಳಾಗಲೆಂತೊ ಓದುವ ಎಂದರೆ ನಡುಕ

ಅದುರುವ ತುಟಿಯಿಂದ ಕಾಗುಣಿತ ನರಕ

ಕೇಳುಗರಿಗನುಮಾನ ಬರೆದವನಿವನೇನಾ?

ಅಂದುಕೊಂಡರೆ ಅಷ್ಟೆ ಮುಕ್ತಾಯ ಕವಿಜನ್ಮ! ||

ಮಜ್ಜನದ ಹೊತ್ತಿನ ಸಜ್ಜನ ಹಾಡುವಂತಲ್ಲ

ಕಣ್ಣ ಮುಂದೆಯೆ ಕೂತ ನೂರಾರು ಜಂಗುಳಿ

ನೋಟವೊಂದೆ ಸಾಕು ನಖಶಿಖಾಂತ ಬೆವರು

ನಿಂತಲ್ಲೆ ಎಲ್ಲಾ ಆದಂತೆ ದನಿಯಲಿ ಗೊಗ್ಗರು ||

ಯಾಕೆ ಸುಮ್ಮನೆ ಬಾಧೆ ಕವಿಗು ಕೇಳುಗರಿಗು ?

ಕರೆಯಬೇಡಿ ಪಾಡಿಗೆ ಬಿಟ್ಟುಬಿಡಿ ಅವನನು…

ಆಡಿಕೊಳಲಿ ಹಾಡಿಕೊಳಲಿ ತನ್ನಂಗಳದ ಹಕ್ಕಿ

ಸಾಕಲ್ಲೆ ಬಿದ್ದ ಕಾಳ ಹೆಕ್ಕಿ ತುಂಬಿಕೊಳುವ ಹೊಟ್ಟೆ ||

– ನಾಗೇಶ ಮೈಸೂರು

(Nagesha Mn)

(Picture source – internet/social media)

01558. ಸಂಕ್ರಾಂತಿ


01558. ಸಂಕ್ರಾಂತಿ

_______________________

ಖಾರ ಸಿಹಿ ಪೊಂಗಲೊ

ಕಿಚಡಿಯೊ ಪಚಡಿಯೊ

ಸಂಕ್ರಾಂತಿ ಎಳ್ಳು ಬೆಲ್ಲ

ತಿಂದು ಒಳ್ಳೆ ಮಾತಾಡು ||

ಬೆಲ್ಲದ ತುರಿ ಸಕ್ಕರೆಯಚ್ಚು

ಕಬ್ಬಿನ ಜತೆ ಉಂಡೆ ನಂಟು

ಸುಗ್ಗಿಯ ಮಾತಾಡೊ ಹಿಗ್ಗಿ

ಉಕ್ಕಲಿ ಮಡಿಕೆಯಾಚೆ ಚೆಲ್ಲಿ ||

ರಾಸುಗಳೆಲ್ಲವ ಸಿಂಗರಿಸೊ

ಕೊಂಬಿಗೆ ಬಣ್ಣ ಶಾಲ್ಹೊದಿಸೊ

ಒಣ ಹುಲ್ಲನು ಹರಡಿ ಇರುಳು

ಬೆಂಕಿ ದಾಟೆ ಹಿಡಿದು ಕೊರಳು ||

ಮಾಡೊ ಮೆರವಣಿಗೆ ಸಂತಸದೆ

ಸುಗ್ಗಿ ಫಸಲೊ ಸಿಂಗಾರ ರಾಸೊ

ಸಂಭ್ರಮ ಗೃಹಿಣಿ ತರುಣಿ ಮತ್ತು

ಸಂಕ್ರಾಂತಿ ಮನಸಾಗಲಿ ಮಾತು ||

ಚಳಿ ಬಿಡಿಸುವ ಬೇಸಿಗೆಗೆ ಮುನ್ನುಡಿ

ಉತ್ತರಾಯಣ ಸಂಕ್ರಮಣಕೆ ಕನ್ನಡಿ

ದಿನಕರನಾಗುವ ಹತ್ತಿರದ ನೆಂಟ

ಸೇರಲಿ ದೂರದಲಿಹ ಮನ ಮುಕ್ತ ||

– ನಾಗೇಶ ಮೈಸೂರು

(Nagesha Mn)

(Picture source : internet / social media posts)

01558. ಬಾ ಸಂಕ್ರಮಣಕೆ


01558. ಬಾ ಸಂಕ್ರಮಣಕೆ

___________________________

ಸಂಕ್ರಾತಿ ಹೊಸಿಲಲಿ

ಸಂಭ್ರಮವ ಚೆಲ್ಲಿ

ಎಳ್ಳು ಬೆಲ್ಲವ ಬೀರೆ

ನೀ ಬರುವೆಯೇನೆ ? ||

ಚುಮುಗುಟ್ಟೊ ಚಳಿಯಲಿ

ಬೆಚ್ಚಗಾಗಿಸೆ ದಿನಗಳ

ಬರುವಂತೆ ಆ ದಿನಕರ

ಹೊಂಬಿಸಿಲಾಗಿ ಬರುವೆಯಾ? ||

ಭಾವಗಳ ಸಂಭ್ರಮಕೆ ಜತೆ

ಹಬ್ಬದುಡುಗೆಯ ಮೋಡಿ

ತೊಟ್ಟೊಡವೆ ನಕ್ಕ ಮೊಡವೆ

ನಕ್ಕು ಬಂದಪ್ಪುವೆಯ ಮನಸಾ ? ||

ಕಬ್ಬಿನ ಸಿಹಿ ತುಟಿ ಮಾತಲಿಟ್ಟು

ಕಣ್ಣೋಟ ಬಡಿಸುತಲಿ ಪ್ರಳಯ

ಉಣಿಸಿರಲೇನೊ ಮತ್ತು ತಲ್ಲೀನ

ವಿಲೀನದಲಾಗುತ ಅಂತರ್ಧಾನ !? ||

ಬಾ, ಒಳ್ಳೊಳ್ಳೆ ಮಾತಾಡಲಿದೆ ತಿಂದು

ನೀನೆ ಎಳ್ಳು ನೀನೆ ಬೆಲ್ಲ ಎಲ್ಲವು ನೀನೆ

ತಬ್ಬಿಬ್ಬಾಗಿಸದೆ ಸಂಕ್ರಮಣದೆ ಪರಸ್ಪರ

ಮಿಂದು ಮನ ಸಂಗಮಿಸಲದೆ ಸಂಕ್ರಾಂತಿ ||

– ನಾಗೇಶ ಮೈಸೂರು

೧೩.೦೧.೨೦೧೮

(Picture source : hallikatte.com)

01557. ಅರಿಯದಾದೆ ಸಂದಿಗ್ಧ..


01557. ಅರಿಯದಾದೆ ಸಂದಿಗ್ಧ..

________________________________

ನೀನರಿಯದೆ ಹೋದೆ ನನ್ನಾ ಸಂದಿಗ್ಧ

ಬರಿ ದೂರುತಲಿರುವೆ ನೋಡದೆ ನನ್ನ ಕಣ್ಣಿಂದ ||

ಅಸಹಾಯಕತೆ ಕಟ್ಟಿ ಹಾಕಿ ಪರಿಸ್ಥಿತಿ

ಮಾತನಾಡೆ ಭುಗಿಲುಕ್ಕುವ ಜ್ವಾಲಾಮುಖಿ

ಮೌನ ದಳ್ಳುರಿ ಅಂತರಂಗದ ಬೇನೆ

ಹೇಗಿದ್ದರೇನು, ಅಪರಾಧಿ ನಿನ್ನ ಕಣ್ಣಲಿ || ನೀನರಿಯದೆ ||

ನೈತಿಕವೊ ನಿಜಾಯತಿಯೊ ಗಣನೆ

ಒಗಟದಲ್ಲ ಸಿಕ್ಕುಸಿಕ್ಕಾದ ಬಾಳಿನ ಸೂತ್ರ

ಗೋಜಲು ಬಿಡಿಸೆ ಹೋಗಿ ಗೊಂದಲದೆ

ಸಿಕ್ಕು ಗೋಜಲಾಗಿ ಹೋದ ಕಥೆ ನೀ ಕಾಣೆ || ನೀನರಿಯದೆ ||

ಭಾವಾತಿರೇಕದಲೆಲ್ಲ ಸುಲಭ ಸಂಭ್ರಮ

ವಾಸ್ತವದಲೆಲ್ಲ ಕಾಡಿ ಕೊಲ್ಲುವ ತಲ್ಲಣ

ಬಿಡು ಭ್ರಮೆಯ ದಾರಿ ಹಿಡಿಯ ಗುಟ್ಟಲ್ಲ

ಅಂಗೈ ಹುಣ್ಣಾಗೆ ಕನ್ನಡಿಯಿಲ್ಲದೆಯೆ ಗುಲ್ಲು || ನೀನರಿಯದೆ ||

ನೂರಾರು ಕಣ್ಣು ಸಹಸ್ರ ಯೋನಿ ಇಂದ್ರ

ಅಡಿಗಡಿಗೆ ಎಡವಿ ತಪಿಸಿ ಪದವಿಗೆ ಕುತ್ತು

ಬಿಟ್ಟೆಲ್ಲ ಕಿತ್ತೊಗೆದು ಹೋಗುವ ಮಾತಿದಲ್ಲ

ಹೋಗಲೆಲ್ಲಿ ಬದುಕಬೇಕಿಲ್ಲೆ ಬೇರೆ ಜಗವಿಲ್ಲ ! || ನೀನರಿಯದೆ ||

ದೂರುವುದು ಸುಲಭ ಹಪಹಪಿಸುತ ನಿತ್ಯ

ಜಾರುವುದು ಕಠಿಣ ಸಿಲುಕಿದ ಬಲೆ ಕಟುಕ

ನಗೆಪಾಟಲಲ್ಲ ವಿಷಯ ನಂಬಿಕೆ ಪರಂಪರೆ

ಜಾಡ ಬಿಟ್ಟು ನಡೆದವರೆಲ್ಲರದದೇ ಗೋಳು || ನೀನರಿಯದೆ ||

– ನಾಗೇಶ ಮೈಸೂರು

(Nagesha Mn)

(Photo source internet / social media received via Yamunab Bsy – thank you 🙏😊👍)

01556. ತಿರುಗು ಬಾಣದ ನೋಟ


01556. ತಿರುಗು ಬಾಣದ ನೋಟ

_________________________________

ನೀ ತಿರುಗಿ ನೋಡಿದರೆ ಹಿಂಗೆ

ನಾ ತಿರುಗಿ ಹೋಗುವುದು ಹೆಂಗೆ?

ನೀ ತಿರುಗಿ ನಡೆಯೆ ನಿನ್ನಾ ಹಟ್ಟಿಗೆ

ಹಿಂದಿಂದೆ ಬರುವೆ ನೀ ತಟ್ಟೊ ರೊಟ್ಟಿಗೆ ||

ನೀ ಮಾತನಾಡದ ಚತುರ ನಾರಿ

ನಿನ ಮೌನ ಗುಟ್ಟು ನೋಡೆಷ್ಟು ದಾರಿ

ನೋಡಿದರೆ ಹೀಗೆ ಬಿಡದೆ ಬಾರಿಬಾರಿ

ಬಿಟ್ಟಪದ ತುಂಬೆಲೆ ನಿನದಿದೆ ಜರೂರಿ ||

ಯಾಕನಿಸುತಿದೆ ನಿನ್ನ ಕಣ್ಣಲಿ ಮಾತು

ಮಾತಿನ ಪದರ ಮುಗುಳ್ನಗುವಡಿ ಹೂತು

ಕಟ್ಟುಮಸ್ತು ಶಿಸ್ತು ಕಟ್ಟುನಿಟ್ಟಿನ ಹೂನಗೆ

ನೈಜವಿದೆಯೇನು ಬಾಯಿ ಬಿಡೆ ಸೊಬಗೆ ||

ನೀನಿಟ್ಟಂತಿದೆ ಹೆಜ್ಜೆ ಮುಂದಿನ ನಡೆಗೆ

ಕಾದಂತಿದೆ ಕರೆದು ಬರುವೆಯಾ ಜತೆಗೆ

ಬರಲೇನು ಜತೆಗೆ ಬಯಕೆ ಹರಕೆ ಕುರಿ?

ನೀನಡೆದ ಹಾದಿಯೆ ನಮ್ಮದಾಗುತ ಗುರಿ ||

ಹೆಂಗೆಂಗೊ ಆಗುತಿದೆ ನೀ ಹಿಂಗೆ ನೋಡೆ

ಪದವೆ ತಡಕಾಡುತಿದೆ ಮಾತಿಗೆ ಸಿಗದೆ

ಹೇಳದೆಲ್ಲ ಸೊಗಡ ಹಿಡಿದಿಟ್ಟ ನಾರಿ ಸ್ಪುಟ

ಕಂಡಂತಿದ್ದರೇನು ಬಿಡಿಸಲಾಗದ ಒಗಟ ! ||

– ನಾಗೇಶ ಮೈಸೂರು

(Nagesha Mn)

(Picture source: Internet / social media received via FB friends)

01555. ನೋಡಲು ಬರದೆ ಕಾಡಿದ ನಲ್ಲ..


01555. ನೋಡಲು ಬರದೆ ಕಾಡಿದ ನಲ್ಲ..

____________________________________

ನೋಡಲು ಬಂದು ಹೋದವರದೆಷ್ಟೊ..

ನಯಭಯದಿ ತಲೆತಗ್ಗಿಸಿ ತಂದಿಟ್ಟೆ ತಟ್ಟೆ

ಅಮೇಯವನಳೆವಂತೆ ಅಳೆದರಲ್ಲ ಕಣ್ಣಲ್ಲೆ

ಅಳೆದರೇನ ಪಡೆದರೇನ ಅವರೆ ಬಲ್ಲರು ||

ನೀ ನೋಡಿಹೋದೆ ನನ್ನ ತೇರ ಬೀದಿಯಲಿ

ಮೂಡಿತೇನಲ್ಲಿ ವಧುವಾಗಿಸೊ ಆಶಯ ?

ಅರಿವೆ ಇರದೆ ಮೂಗು ಮುರಿದಿದ್ದೆನಲ್ಲ..

ಮನೆಬಾಗಿಲತನಕ ಹಿಂಬಾಲಿಸಿತೆ ಹಂಬಲ ? ||

ನೋಡಲು ಬರದೆ ಬೇಡಲು ಬಂದವ ನೀನು

ಬೆದರಿಸಿಬಿಟ್ಟೆ ಅಪ್ಪ ಅಮ್ಮನಿಗು ಬೆಪ್ಪಾಗಿಸಿ !

ಹೆಣ್ಣು ಕೇಳುವ ತರವೇನದು ಹಣ್ಣಿನ ಪಣ್ಯ?

ಕೆಲಸದಲಿರುವೆ ಕೊಡುವಿರ ಮಗಳನೆಂದ ಗಣ್ಯ ! ||

ಅಂತೂ ಇಂತು ಯಾರೊ ಗೆಳೆಯರಂದಾಗ

ಹುಚ್ಚನಲ್ಲನಿವ ತುಸು ವಯಸ ತಿಕ್ಕಲವನೆಂದು

ತಟ್ಟನೆ ಮೂಡಿತ್ತಲ್ಲ ಅನುರಾಗದ ಎಳೆ ಕುಸುಮ

ಹುಚ್ಚುತನದಲು ಪ್ರೇಮದ ಸಹಚರ್ಯ ಸಂಭ್ರಮ ||

ಮೆಚ್ಚುಗೆಯಾಗಿ ಒಲುಮೆ ಹೆಚ್ಚಿ ಮನಸೆಲ್ಲ ಹೋಳು

ನೋಡೀಗ ನಿನ್ನದೆ ನೆನಪವಿರತ ಬಾಳಲು ಕಾದಿರುವೆ

ಅಪರಿಚಿತ ಭಾವ ಕರಗಿ ಚಿರಪರಿಚಿತನಾದೆಯದೆಂತು ?

ಬಾಗಿಲು ಕಾವುದಾಗಿದೆ ನಿತ್ಯ ಬರುವುದಿಲ್ಲವೆಂದರಿತಿದ್ದರು ! ||

– ನಾಗೇಶ ಮೈಸೂರು

(Nagesha Mn)

ಪಣ್ಯ = ವ್ಯಾಪಾರ

(Picture source: Internet / social media link as displayed in Picture, received via Yamunab Bsy – thank you 🙏👌👍😊)

01554. ನಿಸರ್ಗ


01554. ನಿಸರ್ಗ

____________________

ನಿಸರ್ಗ ನಿಸರ್ಗ ನಿಸರ್ಗ

ನೀನಲ್ಲವೆ ನಿಜವಾದ ಸ್ವರ್ಗ

ನೀನಿಲ್ಲದೆ ಹೋದರೆ ನಿಸರ್ಗ

ಹುಡುಕಲೆಲ್ಲಿ ನೇಣಿಗು ಹಗ್ಗ ! ||

ನಿಸರ್ಗ ನಿನಗೆಷ್ಟು ಹೆಸರ ?

ತಂಗಾಳಿ ಹೊಂಬಿಸಿಲು ಮಳೆ

ಹಸಿರು ವನರಾಜಿ ಪಶು ಪಕ್ಷಿ

ಸುತ್ತುವರೆದಿರಲದೆ ಸುರಕ್ಷೆ ||

ಒತ್ತೊತ್ತು ನಿಭಿಢ ವನರಾಜಿ

ಹಳ್ಳ ಕೊಳ್ಳ ಕಾಲುವೆ ನದಿ

ಸಾಗರ ಸರೋವರ ಮರಳು

ಕಾಡು ಗುಡ್ದ ಗುಹೆ ಗಿರಿಶಿಖರ ||

ನೀಲ ನಭ ಮೇಘ ತಾರಾಗಣ

ಗ್ರಹ ಧೂಮಕೇತು ಬ್ರಹ್ಮಾಂಡ

ತಮ್ಮೊಳಗಿಹ ತಮ್ಮನೆ ಬಿಚ್ಚಿಟ್ಟ

ನಿಸರ್ಗದೊಳಗುಟ್ಟೆ ನಿಸರ್ಗ ||

ಯಾವುದೆಲ್ಲ ನಿಸರ್ಗದ ಸರಕು

ಪಂಚಭೂತಗಳದೆ ಕರಾರುವಾಕ್ಕು

ಅದರಲಾದ ಅಂತರಂಗ ಸಂಸರ್ಗ

ಮನುಜನಿರಲಂತೆ ಕಾಪಿಟ್ಟು ನಿಸರ್ಗ ||

– ನಾಗೇಶ ಮೈಸೂರು

(Nagesha Mn)

(Picture source no.1&2 Internet / social media, Pic 2 received via Chandrashekar Hs, 3 & 4 clicked by self)

01553. ಆ ಗಳಿಗೆಯ ತಳಮಳ..


01553. ಆ ಗಳಿಗೆಯ ತಳಮಳ..

_______________________________

ದೂಕಬೇಕಂತಲ್ಲ ಹೊಸಿಲ

ನಡುವಿಲಿಟ್ಟ ತಂಡುಲ

ಬಲಗಾಲ? ಎಡಗಾಲ? ಗೊಂದಲ

ಚೆಲ್ಲದಿರೆ ಭೀತಿ ಶಕುನಕೇನು ಫಲಾಫಲಾ? ||

ಹೇಳುವವರೆ ಎಲ್ಲಾ ಸುತ್ತ

ಕೇಳಿದ್ದೆಲ್ಲ ಮರೆತು ಹೋಗುತ್ತ

ಭಯ ಮಿಶ್ರಿತ ಖುಷಿ ಗದ್ದಲ

ತಳ್ಳಲ್ಹೇಗೆ? ಪಾದ? ಹೆಬ್ಬೆರಳ? ||

ಸುಮ್ಮ ನೂಕಿದರೆ ಸಾಕೇನು?

ಇಲ್ಲಾ ಜೋರು ಒದೆಯಬೇಕೇನು?

ನಯಭಯಕಿಟ್ಟ ಪರೀಕ್ಷೆಯೆ?

ಜಾಡಿಸಿ ಒದ್ದವಳು ಗಂಡುಭೀರಿಯೆ? ||

ಏನು ಶಾಸ್ತ್ರವೊ? ಎಲ್ಲಾ ಗದ್ದಲ

ಒಳಗೊಳಗೇನೊ ಪುಳಕದ ಚೀಲ

ಎಲ್ಲರ ಗಮನದ ಪುತ್ಥಳಿ ನಾನಾಗಿ

ನಾಚಿಸಿ ಕೆನ್ನೆ ಕೆಂಪಿಡರಿದ ಮೀನಾಗಿ ||

ಒದ್ದೆನೊ ನೂಕಿದೆನೊ ದೂಕಿದೆನೊ

ಚೆಲ್ಲಿತೊ ಬಿಟ್ಟಿತೊ ನೆಲದಲಕ್ಕಿ ತಾನು

ನಕ್ಕರೊ ಕೂಗಿದರೊ ಕಂಗೆಟ್ಟ ವಧು ನಾ

ಓಡಿ ಸೇರಿದೆ ಖೋಲಿ ಎಂತದ್ದೊ ನಿರಾಳ! ||

– ನಾಗೇಶ ಮೈಸೂರು

(Nagesha Mn)

(ಆ ಗಳಿಗೆಯಲ್ಲಿ ಮನದಲ್ಲಿರುವ ಭಾವಗಳೆಲ್ಲಕ್ಕು ಪದರೂಪಕೊಟ್ಟ ಮತ್ತೊಂದು ಕವನ – ಅದರ ತುಣುಕುಗಳನ್ನು ಹಂಚಿಕೊಂಡು ಕವನಕ್ಕೆ ವಸ್ತು ನೀಡಿದ Jayasree Jaya ರವರಿಗೆ ಧನ್ಯವಾದಗಳು)

(Photo already used in another poem in response to weekend picture poem request by ಹೊಳೆನರಸೀಪುರ ಮಂಜುನಾಥ )

01552. ಕಳೆದು ಹೋದ ಗಳಿಗೆ


01552. ಕಳೆದು ಹೋದ ಗಳಿಗೆ

_______________________________

ಜಗುಲಿ ಕಟ್ಟೆಯ ಮೇಲೆ

ಕವುಚಿ ಕುಳಿತ ಹೊತ್ತು

ಮಂಡಿಗಾನಿಸುತ ಗಲ್ಲ

ಕಾಲ ತೋಳಪ್ಪಿದ ಕಾಲ ||

ಯಾವ ವಿಸ್ಮೃತಿ ಅಗಾಧ

ಯಾವುದೊ ಲೋಕದಲೆ

ಯಾನವದೇನೊ ವಿಸ್ಮಯ

ಯಾರೆತ್ತೊಯ್ದರೊ ಮನಸ ||

ತೋಯ್ದಾಟ ಹೊಯ್ದಾಟದೆ

ಏನೆಲ್ಲಾ ಬಗೆ ಬಗೆ ವಿವಶತೆ

ಮರುಳು ಹಿಡಿದಂತೆ ಮನ

ಮಂಕು ಹಿಡಿದೆಲ್ಲೊ ತಲ್ಲೀನ ||

ಎಲ್ಲಿಯದೊ ದ