01460. ಸಾಕಪ್ಪ ಸಾಕು ಅಡಿಗೆ


01460. ಸಾಕಪ್ಪ ಸಾಕು ಅಡಿಗೆ
_______________________


ಅಡಿಗೆ ಅಡಿಗೆ ಅಡಿಗೆ
ಮಾಡಬೇಕು ಅಡಿಗಡಿಗೆ
ಸಿಕ್ಕಿದರೆ ಕಂಡು ಹಿಡಿದವನ
ಮಾಡಬೇಕು ಸಾಷ್ಟಾಂಗ ನಮನ ||

ಬೆಳಗೆದ್ದು ಬಿಸಿ ಪೇಯ
ಬೇಕೆಲ್ಲರಿಗು ಮಹನೀಯ
ಇದ್ದರೇನು ಚಳಿಮಳೆಬಿಸಿಲು
ತಿಂಡಿ ಜತೆ ಮತ್ತೊಮ್ಮೆ ಫಸಲು ||

ಸಾಲಾಗಿ ಮನೆ ಮಂದಿ
ಮಾಡಿ ಹಂಚಬೇಕು ಬುದ್ಧಿ
ಮಾಡಿದ್ದು ಮುಗಿವ ಮೊದಲೆ
ತಿನ್ನದಿರೆ ಉಪವಾಸದ ಕೋಟಲೆ ||

ಮುಗಿಯಿತಪ್ಪ ಉಸ್ಸಪ್ಪ
ಸರಿ ಪಾತ್ರೆ ತೊಳೆದೆತ್ತಿಟ್ಟಪ್ಪ
ಉಸಿರಾಡಲಿಲ್ಲವೆ ಪುರುಸೊತ್ತು
ಮಧ್ಯಾಹ್ನದಡಿಗೆ ಊಟದ ಹೊತ್ತು ! ||

ಮತ್ತದೆ ಹಳೆ ರಾಮಾಯಣ
ಸಾಯಂಕಾಲ ಚಹಾಪುರಾಣ
ರಾತ್ರಿಯಡಿಗೆ ಮಾಡಲೇನ ಶಿವನೆ
ನಿಂತು ಪಾತ್ರೆ ತೊಳೆದು ಬೆನ್ನಿನ ಬೇನೆ ||

ಸಾಲದ್ದಕ್ಕೆ ಟೀವಿ ಪುರಾಣ
ಅಕ್ಕಪಕ್ಕ ಗುಸುಗುಟ್ಟೊ ಧ್ಯಾನ
ಮಡಿ ಮಜ್ಜನ ಪೂಜೆ ಪುನಸ್ಕಾರ
ಸಾಕಪ್ಪಾ ಸಾಕು ಹಾಳು ಸಂಸಾರ ||


– ನಾಗೇಶ ಮೈಸೂರು
(Nagesha Mn)

(Picture source : internet / social media)

00419. ಎಲೆಲೆಲೆ ಎಲೆ – ಹಗಲಲಿ! (ದ್ಯುತಿ ಸಂಶ್ಲೇಷಣ ಕ್ರಿಯೆ)


00419. ಎಲೆಲೆಲೆ ಎಲೆ – ಹಗಲಲಿ! (ದ್ಯುತಿ ಸಂಶ್ಲೇಷಣ ಕ್ರಿಯೆ)
______________________________________________
(ವಿದ್ಯಾರ್ಥಿ ಮಕ್ಕಳಿಗಾಗಿ ಒಂದು ವಿಜ್ಞಾನ ಕವನ)

ಎಲೆಲೆಲೆ ಎಲೆ
ಸಸಿ ಬದುಕಿನ ಜೀವ ಸೆಲೆ
ಮಾಡಿಡುವೆ ಅಡುಗೆ ಹಚ್ಚದೆ ಒಲೆ
ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ ||

ನೀ ಮಾಡದೆ ಆಹಾರ
ಸಸಿಗೆಲ್ಲಿದೆ ದಿನ ವ್ಯವಹಾರ
ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ
ಮೈ ತುಂಬಿ ಸ್ಟಮೋಟ ದ್ವಾರದ ಪೂರ ||

ಬೇರಿಂದ ನೀರ
ಹೀರುತ ಖನಿಜದ ಸಾರ
ಕುಡಿದು ಗಾಳಿ ಇಂಗಾಲದ ಸಾರ
ರವಿ ಬಿಚ್ಚೆ ಕಿರಣ ಸಿದ್ದ ಪಾಕಶಾಲೆ ವ್ಯಾಪಾರ ||

ಹಚ್ಚೇ ಮೂಡಣದೊಲೆ
ಶುರು ಹಚ್ಚುವಳಡಿಗೆಗೆ ಎಲೆ
ಸಿಓಟು ಜತೆಗೆ ನೀರಿಟ್ಟು ಬಿಸಿಗೆ
ಸ್ಟವ್ವಚ್ಚಿದಳೆನ್ನೇ ಬಿಸಿಬಿಸಿ ಸಕ್ಕರೆ ಎಲೆಗೆ ||

ಸಿಹಿ ಸಕ್ಕರೆ ಬಾಲೆ
ಎಲೆ ಬಿಡಿಸುತ ನೀರ್ಹಾಳೆ
ಕಕ್ಕುವಳು ಆಮ್ಲಜನಕದ ಪಾಲೆ
ಪ್ರಾಣಿ ಜಗಕುಣಿಸಿ ಉಸಿರಿನ ಜೀವ ಸೆಲೆ ||

– ನಾಗೇಶ ಮೈಸೂರು 

ಚಿತ್ರ ಕೃಪೆ: ಸ್ವಂತದ್ದು

00355. ಇರುಸು ಮುರುಸಡಿಗೆ..


00355. ಇರುಸು ಮುರುಸಡಿಗೆ..
_________________________________

ಯಾವಾವುದೊ ಸಲ್ಲುವ, ಸಲ್ಲದ ಕಾರಣಕ್ಕಾಗಿ ಇರುಸು ಮುರಿಸಿಗೆ ಒಳಗಾಗದ ಜೋಡಿಯಾದರೂ ಎಲ್ಲುಂಟು ಈ ಜಗದಲ್ಲಿ ? ಪ್ರೇಮಿಗಳಲ್ಲಿ, ದಂಪತಿಗಳಲ್ಲಿ, ನೆಂಟಸ್ತಿಕೆ, ಸ್ನೇಹಗಳಲ್ಲಿ ಇರುಸುಮುರುಸಾಗುವುದು ಸರ್ವೆ ಸಹಜವಾದರೂ, ದಂಪತಿಗಳಲ್ಲಿ ಅದು ತಾಳುವ ವೈವಿಧ್ಯಮಯ ರೂಪಕ್ಕೆ ಸರಿಸಾಟಿಯಾದದ್ದು ಮತ್ತೊಂದಿರಲಾರದು. ಅದರಲ್ಲು ನಮ್ಮ ಭಾರತೀಯ ದಂಪತಿಗಳ ವಿಷಯಕ್ಕೆ ಬಂದರೆ, ಆ ರಣರಂಗದ ಕಾರ್ಯ ಭೂಮಿಕೆ ನಡೆಯುವುದೆ ಅಡಿಗೆ ಮನೆ ಮತ್ತು ಅಡಿಗೆಯ ಬಗೆ ಮತ್ತು ರುಚಿಗಳಲ್ಲಿನ ವೈವಿಧ್ಯಗಳ ಅನಾವರಣವಾಗುವ ಮೂಲಕ. ಅದುವರೆವಿಗು ತೆರೆಮರೆಯಲಿದ್ದ ಸೃಜನಶೀಲತೆಯ ಅಂಶಗಳೆಲ್ಲಾ ‘ಕಲಾಕಾರ್’ ಭಾಷೆಯಲ್ಲಿ ವ್ಯಕ್ತವಾಗುವ ಈ ‘ಘನ ಘೋರ’ ಮೌನ ಕದನದಲ್ಲಿ ಅಂತಿಮವಾಗಿ ಶಾಂತಿ ಸಂಧಾನವೆ ಗೆದ್ದು ಬರುವುದು ಸಾಮಾನ್ಯವಾದರೂ, ಅದು ಬರುವವರೆಗಿನ ಹೊಯ್ದಾಟ, ತಾಕಲಾಟಗಳು ಮಾತ್ರ ಒಂದು ವಿಧದ ಅದ್ಭುತ ಅನುಭೂತಿಯ ಸರಕೆಂದೆ ಹೇಳಬೇಕು.

ಆ ನೂರಾರು ವೈವಿಧ್ಯಗಳಲ್ಲೊಂದು ತರವಾದ, ಅಂತದ್ದೊಂದು ದೃಶ್ಯವನ್ನು ಸರಳ ಕವನದಲ್ಲಿ ಹಿಡಿದಿಡುವ ಯತ್ನ ಈ ಕೆಳಗೆ..

ಇದ್ದರೇನಂತೆ ಇರಿಸು ಮುರಿಸು
ಪ್ರೇಮದಡಿಗೆ ಮಾಡಿ ಬಡಿಸು
ಉಣಿಸಲಿರಲಿ ತಿನಿಸು ಮುನಿಸು
ತಟ್ಟೆ ಮುಂದೆ ಕೂತೆ ನಿಭಾಯಿಸು ||

ಹಾಕಿಷ್ಟು ಉಪ್ಪು ಹೆಚ್ಚು ಕಮ್ಮಿ
ದುಮುಗುಟ್ಟಿಸುತಳುವಾ ಡಮ್ಮಿ
ಹೆಚ್ಚಿರಲಿ ಅನ್ನ ಸಾಲದ ಸಾರು
ಗೊತ್ತಾಗುವಂತೆ ಒಡತಿ ಯಾರು ||

ಹಾಕಿದೊಗ್ಗರಣೆಗು ಏರುಪೇರು
ಮಾತಿನಲಂತು ಬರಿ ಕಹಿ ಒಗರು
ಕಣ್ಣೋಟವಿರಲಿ ಹುಲಿಯುಗುರು
ಅಪ್ಪಿ ತಪ್ಪಿಯೂ ಇಡದೆ ನೀರು ||

ಬಲಮೂಲೆ ಖಾಲಿ ಬರಿ ಗಲಿಬಿಲಿ
ಮಿಡಿಯುಪ್ಪಿನ ಕಾಯೂ ತಬ್ಬಲಿ
ಮೊಸರನ್ನವಿಲ್ಲ ಹುಳಿ ಮಾತಲ್ಲ
ಸಾಕೆ ಮಾರಾಯ್ತಿ ಸಿಡಿದೆದ್ದ’ನಲ್ಲ’ ||

ಸಾರಿ ಕ್ಷಮಿಸು ಬರಿ ಲೆಕ್ಕಾಚಾರ
ಬಾಯ್ಬಿಟ್ಟರೆ ಸರಿ ದುಃಖ ದೂರ
ತಂದೊಳಗಿಂದ ಬಡಿಸು ಈಗವಶ್ಯ
ಮುನಿಸಲು ಮಾಡಿಟ್ಟ ಭಕ್ಷ್ಯ ಭೋಜ್ಯ ||