01540. ಅವನ ಕೆತ್ತಿದನಿವ ಪರಬ್ರಹ್ಮ..


01540. ಅವನ ಕೆತ್ತಿದನಿವ ಪರಬ್ರಹ್ಮ..

___________________________________

ಬ್ರಹ್ಮನಿವನ ಕೆತ್ತಿದ

ಇವನವನನ್ನೆ ಕೆತ್ತಿಹನಲ್ಲ !

ಸೃಜಿಸಿದಾತನ ಸೃಜಿಸಿದ

ಪರಬ್ರಹ್ಮ ಇವನಲ್ಲವೆ ? ||

ಅವನಿದ್ದರೇನು ಅಮೂರ್ತ?

ವಿವರಣೆ ಜಗ ಕಲ್ಪನಾತೀತ

ಉಳಿಯೊಂದಿರೆ ಕರಸೇವೆ

ಪರಿಕಲ್ಪನೆಯೆಲ್ಲಾ ಮೂರ್ತ ! ||

ಮರವೊ ಲೋಹವೊ ಮಣ್ಣೊ

ಪಂಚಭೂತ ಮಿಳಿತ ಕಣ್ಣೊ

ಕಣ್ಣು ಮೂಗು ಬಾಯಿ ಸೂತ್ರ

ಶಿಲ್ಪಶಾಸ್ತ್ರ ವಸ್ತ್ರ ವೈವಿಧ್ಯ ಪರಾ ||

ವಯೋವೃದ್ಧ ಕಲೆ ಸಮೃದ್ಧ

ಸ್ವಾನುಭವ ಸ್ವಯಂಭು ಸ್ವತಃ

ಬೊಮ್ಮನವನ ಮಾದರಿಯಿವ

ಕರಕುಶಲ ತಂತ್ರದ ಸಜೀವ ||

ಯುಗದಾ ಕೊನೆಗೊಮ್ಮೆ ಕಲ್ಪ

ಆಯಾಸಕೆ ಮಲಗುವ ಅವ

ಇವನುದರಕಿದೆ ಅಡಿಪಾಯ

ಕಸುಬಾಗಿ ಕಾಪಾಡೊ ದೈವ ||

– ನಾಗೇಶ ಮೈಸೂರು

(Nagesha Mn)

(೩ಕೆ – ನಮ್ಮ ಚಿತ್ರ ನಿಮ್ಮ ಕವನ ೫೪ ಕ್ಕೆ ಹೊಸೆದ ಕವನ)

01490. ಎಟುಕದೇಕೆ ಅವನ ಚಿತ್ರ?


01490. ಎಟುಕದೇಕೆ ಅವನ ಚಿತ್ರ?

________________________________

ಯಾಕೊ ಮತ್ತೆ ಮತ್ತೆ ಮರೆತು

ಹೋಗುತಿರುವುದವನ ಮುಖ

ನೆನೆದು ನೆನಪಲಿಟ್ಟರು ಚಹರೆ

ಯಾಕೊ ಕಾಣೆ ಮಸುಕು ಕಣೆ ||

ನೋಡಿದ್ದೆ ಗೊತ್ತಾ ಕದ್ದು ಕದ್ದೂ

ಮೂಗು ಕಣ್ಣು ಬಾಯಿ ಕಿವಿ ಗಲ್ಲ

ಒಂದಾದರು ಎಟುಕಿಗೆ ನಿಲುಕೆ

ಮೊಗದ ಚಿತ್ರ ಬರೆದೀತು ಮನ ||

ಏನೋ ಅಸ್ಪಷ್ಟ ಆಕಾರ ರೂಪ

ಆಜಾನುಬಾಹು ಸಾಕಾರ ಘನ

ಭುಜದ ಮೇಲಿಟ್ಟ ಶಿರವೇ ಗೌಣ

ಕಲಸುತೆಲ್ಲ ಮರೆಮಾಚಿ ಅವನನು ||

ಮೆಚ್ಚಿ ನೆಚ್ಚಿ ಹತ್ತಿರವಾದ ಸಖನೆ

ಅದೆಷ್ಟೊ ಬಾರಿ ಮಾತಾಡಿ ಜೊತೆ

ಕಳೆದ ಕಾಲ ಪರಿಚಿತ ಅನವರತ

ಅಪರಿಚಿತನಂತೆ ಯಾಕೆ ಕಾಡುವ ? ||

ಬಯಸಿ ಪಡೆದ ಪ್ರೀತಿಯ ಪರಿಯೆ ?

ಸಾಲದೆನುವ ಅದಮ್ಯತೆ ಕುರುಹೆ ?

ಅಪರಿಮಿತತೆ ಅವನಾದನೆ ಅಮೇಯ?

ಮೇಯವಾಗದೆ ಮನ ಚಡಪಡಿಕೆ ಪ್ರಾಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via one of the FB friend some time before – sorry forgotten the name 😊🙏👌)