02095. ನಾವು ನೀವು ಅವರ ಕಥೆ..


02095. ನಾವು ನೀವು ಅವರ ಕಥೆ..
_________________________


ಸರಸರಸರ
ಬುರಬುರಬುರನೆ
ಬೆಳೆದುಬಿಟ್ಟವಲ್ಲೋ ಐಕಳು
ನಿನ್ನೆ ಮೊನ್ನೆ ಚಿಕ್ಕಿಗಳು !

ಪುಸಕ್ಕೆಂದು ಮೊಳಕೆಯಾಗಿ
ಗಿಡವೆದ್ದಾಗ ಭುವಿಯೆದೆ ಸೀಳಿ
ಬೆಳೆವ ನೋವೆಂದು ಅಳಲಿಲ್ಲ ಇಳೆ
ಭರಿಸಿದ ಬೇರು ಮರದೆತ್ತರಕು !


ಎದೆಯೆತ್ತರಕು ಬೆಳೆದವಲ್ಲೊ
ಅನ್ನುವ ಮೊದಲೇ ತಲೆಯೆತ್ತರ
ಬೆಳೆದ ಮರ ಫಲ ತಲೆಯೆತ್ತಿ ಹೆಮ್ಮೆ
ನೋಟದ ಸಂತೃಪ್ತಿ ನಮದೇ ಸೃಷ್ಟಿ !

ಎದುರಾಡುತಾ ಎಗರಾಡುತಾ
ದಾಟಿ ಲಕ್ಷ್ಮಣ ರೇಖೆಯ ಗೀಟು
ಎದುರುತ್ತರ ಕೊಟ್ಟ ಯಾತನೆ
ಪ್ರೀತಿ ಪ್ರೇಮ ಮಮತೆಯ ಹೊನಲು !


ಸರಸರ ಹಚ್ಚಿಕೊಂಡು ಹಚ್ಚೆ
ಕೈಗೊಂದು ಕಂಕುಳಿಗೊಂದು ಹೊತ್ತಾಗ
ನಮ್ಮದಾಯ್ತು ನಿಮ್ಮ ಸರದಿ
ಚಿಗುರೊಡನಾಡುವ ಬೇರಿನ ಪರಿಧಿ !

– ನಾಗೇಶ ಮೈಸೂರು
೦೪.೦೭.೨೦೧೭
(Picture source : internet / social media)