00419. ಎಲೆಲೆಲೆ ಎಲೆ – ಹಗಲಲಿ! (ದ್ಯುತಿ ಸಂಶ್ಲೇಷಣ ಕ್ರಿಯೆ)


00419. ಎಲೆಲೆಲೆ ಎಲೆ – ಹಗಲಲಿ! (ದ್ಯುತಿ ಸಂಶ್ಲೇಷಣ ಕ್ರಿಯೆ)
______________________________________________
(ವಿದ್ಯಾರ್ಥಿ ಮಕ್ಕಳಿಗಾಗಿ ಒಂದು ವಿಜ್ಞಾನ ಕವನ)

ಎಲೆಲೆಲೆ ಎಲೆ
ಸಸಿ ಬದುಕಿನ ಜೀವ ಸೆಲೆ
ಮಾಡಿಡುವೆ ಅಡುಗೆ ಹಚ್ಚದೆ ಒಲೆ
ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ ||

ನೀ ಮಾಡದೆ ಆಹಾರ
ಸಸಿಗೆಲ್ಲಿದೆ ದಿನ ವ್ಯವಹಾರ
ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ
ಮೈ ತುಂಬಿ ಸ್ಟಮೋಟ ದ್ವಾರದ ಪೂರ ||

ಬೇರಿಂದ ನೀರ
ಹೀರುತ ಖನಿಜದ ಸಾರ
ಕುಡಿದು ಗಾಳಿ ಇಂಗಾಲದ ಸಾರ
ರವಿ ಬಿಚ್ಚೆ ಕಿರಣ ಸಿದ್ದ ಪಾಕಶಾಲೆ ವ್ಯಾಪಾರ ||

ಹಚ್ಚೇ ಮೂಡಣದೊಲೆ
ಶುರು ಹಚ್ಚುವಳಡಿಗೆಗೆ ಎಲೆ
ಸಿಓಟು ಜತೆಗೆ ನೀರಿಟ್ಟು ಬಿಸಿಗೆ
ಸ್ಟವ್ವಚ್ಚಿದಳೆನ್ನೇ ಬಿಸಿಬಿಸಿ ಸಕ್ಕರೆ ಎಲೆಗೆ ||

ಸಿಹಿ ಸಕ್ಕರೆ ಬಾಲೆ
ಎಲೆ ಬಿಡಿಸುತ ನೀರ್ಹಾಳೆ
ಕಕ್ಕುವಳು ಆಮ್ಲಜನಕದ ಪಾಲೆ
ಪ್ರಾಣಿ ಜಗಕುಣಿಸಿ ಉಸಿರಿನ ಜೀವ ಸೆಲೆ ||

– ನಾಗೇಶ ಮೈಸೂರು 

ಚಿತ್ರ ಕೃಪೆ: ಸ್ವಂತದ್ದು