02118. ಆಷಾಢ, ಶ್ರಾವಣ ಇತ್ಯಾದಿ..


02118. ಆಷಾಢ, ಶ್ರಾವಣ ಇತ್ಯಾದಿ..
__________________________


ಭೂಮಿ ತೂಕದ ಹುಡುಗಿ
ಅಂತರಿಕ್ಷ ಬಯಲು ಹುಡುಗ
ಆಷಾಢದುದ್ದದ ವಿರಹ
ಶ್ರಾವಣ ಹಾಡದ ಸಂಗೀತ..

ಕೂತವಳೇಕೋ ಏಳದವಳು
ಮುಗುದೆ ಬಯಲ ಬಿಟ್ಟು ಸೊಗದೆ
ಮಳೆ ಹನಿ ಮುತ್ತಿನಹಾರ ಕಟ್ಟುತ
ತೊಡಿಸಿದ ಚಂದ ಮುಗಿಲಮೋಡ..

ಬಯಲಾದವನು ಬಾಹುಬಲಿ
ಹೋರಾಡದೆ ಶರಣಾಗುವ ಇಂಗಿತ
ಬಾಚುತ ಮೇಘದ ಕನಸ ಗಗನದೆ
ಬರೆದ ಪ್ರೇಮಪತ್ರ ನಿಲದ ವರ್ಷಧಾರೆ..

ಕಂಡಳೋ ಕಾಣಳೋ ಪುಟಿದ ಚೆಂಡವನ
ಕಂಡರೂ ಕಾಣದ ಚಂಡಿ ನಟನೆ ಸೋಜಿಗ
ಮುಡಿಯಲಿಟ್ಟ ಹೂ ಮೊಗದೆ ಮುನಿಸು
ಸೊಗದೆ ಚಾಚಿದ ಕೈ ತುಂಬಿಸಿ ತುಂತುರು..

ಸುರಿಯುತ್ತಿದ್ದಾನೆ ಕನಸಿನ ಬಿಡಿ ಹೂವ
ರಂಗು ಹಚ್ಚಿದ ಕೈ ತೊಳೆದು ತೊಟ್ಟಿಕ್ಕಿಸುತಾ
ಒಲುಮೆಯದರ ಹೆಸರಾಗೆ ದೂರ ಮಧುರ
ಆಷಾಢಜಾಣೆ ಜಾರಿ ಶ್ರಾವಣಭ್ರೂಣ ಸಂಭ್ರಮಣ..

– ನಾಗೇಶ ಮೈಸೂರು
೧೭.೦೭.೨೦೧೭

00848. ಆಷಾಢ ಶ್ರಾವಣ ಇತ್ಯಾದಿ..


00848. ಆಷಾಢ ಶ್ರಾವಣ ಇತ್ಯಾದಿ..
_________________________


ದತ್ತಿ ದವನ ಹಣ್ಣು ಹಂಫಲ
ಮುಡಿ ಬಿಡಿ ಹೂ ಮಾಲೆಯಾ ಗುಲಾಮ
ಎಲ್ಲಾ ಕಾದು ಕನವರಿಸಿ ಮುದುಡಿವೆ
ದುಗುಡದಲಿ ಅವಸರಿಸಿವೆ
ಅವತರಿಸಿವೆ ಕನವರಿಸಿವೆ
ಅವಕು ಗೊಂದಲ
ಯಾಕಿನ್ನೂ ಬರಲೇ ಇಲ್ಲ
ಆಷಾಢ ಶ್ರಾವಣಗಳ ಜಾಲ..

ಆಷಾಢ !
ಆಷಾಢಭೂತಿತನ ಬೇಡ..
ಬರಲಿ ಬರಲಿ ಶ್ರಾವಣ
ಎಂದು ಬಿಕ್ಕಿದ ಗಳಿಗೆ ಮರೀಬೇಡ..
ಅಲ್ಲೂ ನಾಟಕ ಮೇಳ
ಮೋಡದಲ್ಲೂ ಇಲ್ಲ ತಾಳಮೇಳ
ಕದ್ದು ಮುಚ್ಚಿ ಸುರಿಸಿದ್ದು ಉದುರಿ
ಉಸ್ಸಪ್ಪ ಅನಿಸೊ ಮೊದಲೇ ಚದುರಿ
ಎಲ್ಲಾ ಗುಟ್ಟಿನ ಬಣ್ಣ ಬಯಲಾಗಿತ್ತಲ್ಲೆ
ಅತ್ತೆ ಅಳಿಯ ನೋಡದ ಕಪಟ
ಹೆಣ್ಣಿನ ದೂರ ಅಕಟಕಟಾ !

ಬರುವೆನೆಂದವಳಲ್ಲ
ಬಾರದೆ ನಿಂದವಳು ಅಲ್ಲ
ಬಿಕ್ಕಿ ಗಿಕ್ಕಿ ರೋಧಿಸೊ ಗಿರಾಕಿ ಅವಳಲ್ಲ
ಬಂದಳು ಸುಯ್ಯೆಂದು ಸುಲಿದು
ಹೊಡೆದದ್ದೆ ಮಳೆ ಬಿರುಸು
ತೇವದ ನಾಲಿಗೆ ಬಿರಿದದ್ದು
ಬೆವರಾಗಿ ಹರಿಯುವ ಹಾಗೆ..
ಜನ್ಮಾಂತರ ಕಾದ ಭೂಮಿಗೆ
ಉತ್ತು ಬಿತ್ತು ಬೆಳೆ ನೆಟ್ಟು ಬಸಿರು
ನಿಟ್ಟುಸಿರಿಟ್ಟಳು ನಿರುಮ್ಮಳ ಹುಡುಗಿ
ಎದ್ದು ಹಬ್ಬದ ಸಂಭ್ರಮದಡಿಗೆ
ಎಣ್ಣೆ ನೀರು ಅರಿಶಿನ ಅಭ್ಯಂಜನ
ಸೀರೆಯುಟ್ಟ ನೆರಿಗೆ ಚಿಮ್ಮುತ
ಬಂದವಳು ಶ್ರಾವಣ..
ಹೌದು.. ಅವಳದೆ ತಿಲ್ಲಾನ..

ಅಕ್ಕತಂಗಿಯರಿಬ್ಬರ ಸಂಚು
ಹುನ್ನಾರವ್ಯಾಕೊ ಇನ್ನೂ ನಿಗೂಢ..
ಅದಕೆ ಬಾಗಿಲಿಕ್ಕುತ ಆಷಾಢ
ಕಾಯುವಳಂತೆ ಶ್ರಾವಣಕೆ
ನೆಮ್ಮದಿಯಿಂದ ಬಿಕ್ಕುತ್ತಾ
ಹನಿ ಹನಿಯೆ
ದನಿಯೆ
ರೂಪಾಂತರ ಮಣಿಯೆ…

– ನಾಗೇಶ ಮೈಸೂರು

00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ..


00321. ಸಣ್ಣಕತೆ: ಚರ್ಚೂ, ಟಿಶ್ಯೂ ಪೇಪರು, ಮುದುಕಿ, ಮೌಲ್ಯ ಇತ್ಯಾದಿ..
_____________________________________________

ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ‘ ಓಹ್.. ಆಗಲೆ ಆರೂವರೆ..’ ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ. ಅದು ಅವನ ನಿತ್ಯದ ದಿನಚರಿ – ಆರರಿಂದ ಆರೂವರೆಗೂ ಮೊದಲೆ ಆಫೀಸು ಬಿಟ್ಟು ಹೊರಟುಬಿಡುವುದು. ಆಗಲೆ ಇನ್ನು ಚೆನ್ನಾಗಿ ಬೆಳಕಿರುವುದರಿಂದ ಸಂಜೆಯ ತಂಪು ಹವೆಯಲ್ಲಿ ತೀರಾ ಬೆವರದೆ ನಡೆದು ಮನೆ ಸೇರಿಬಿಡಬಹುದು. ಅದೇ ಆರೂವರೆ ದಾಟಿತೆಂದರೆ ಯಾಕೊ ವಾಕಿಂಗ್ ಹೊರಡಲು ಮನಸಾಗುವುದಿಲ್ಲ.. ಆ ನಂತರದ ವಾಕಿಂಗಿನಲ್ಲಿ ಬೆನ್ನಿನಲ್ಲಿ ಬ್ಯಾಗು ನೇತು ಹಾಕಿಕೊಂಡು ಎಷ್ಟೆ ಬೇಗನೆ ನಡೆದು ಹೊರಟರೂ ಆರು ಕಿಲೊಮೀಟರು ದೂರದ ಸಿಟಿಯ ಮಧ್ಯದಲ್ಲಿರುವ ಮನೆ ಸೇರುವ ಹೊತ್ತಿಗೆ ಕನಿಷ್ಠ ಒಂದು ಗಂಟೆ ಹತ್ತು ನಿಮಿಷವಾದರೂ ಬೇಕು. ಜತೆಗೆ ಹೋಗುವ ದಾರಿಯಲ್ಲೆ ಮಗನಿಗೆಂದು ಏನಾದರೂ ತಿನ್ನಲು ಕಟ್ಟಿಸಿಕೊಂಡು ಹೋಗುವ ಕಾರಣ ಮತ್ತೊಂದು ಹದಿನೈದಿಪ್ಪತ್ತು ನಿಮಿಷವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರೂವರೆಯ ನಂತರ ಹೊರಟರೆ ಮನೆಯಲ್ಲಿ ಕಾದಿರುವ ಮಗನ ಊಟದ ಸಮಯದಲ್ಲಿ ಏರುಪೇರಾಗಿಬಿಡುತ್ತದೆ. ಅದಕ್ಕೆ ಅವಕಾಶ ಕೊಡದೆ ಒಂದೊ ಆರೂವರೆಗೆ ಮೊದಲೆ ಹೊರಡುತ್ತಾನೆ ಇಲ್ಲವೆ ತಡವಾಯ್ತೆಂದರೆ ಬಸ್ಸಿನಲ್ಲೊ, ಟ್ರೈನಿನಲ್ಲೊ ಹೊರಟುಬಿಡುತ್ತಾನೆ. ಆ ಕಾರಣಕ್ಕಾಗಿಯೆ ಎಂಟಕ್ಕು ಮೊದಲೆ ಆಫೀಸಿಗೆ ಬರುವುದನ್ನು ರೂಢಿಸಿಕೊಂಡಿದ್ದಾನೆ – ಕಡ್ಡಾಯವಾಗಿ ನಿರ್ವಹಿಸಲೆಬೇಕಾದ ದೈನಿಕ ಗಂಟೆಗಳ ಅವಧಿಯಲ್ಲಿ ಯಾವುದೆ ವ್ಯತ್ಯಯವಾಗಲಿ, ಖೋತಾವಾಗಲಿ ಆಗದಂತೆ ನೋಡಿಕೊಳ್ಳಲು. ಎಲ್ಲಕ್ಕಿಂತ ಹೆಚ್ಚಿನ ಪ್ರೇರಣೆಯೆಂದರೆ ಈ ನೆಪದಲ್ಲಿಯಾದರು ಸ್ವಲ್ಪ ದೈಹಿಕ ವ್ಯಾಯಾಮ ಸಿಕ್ಕಂತಾಗುವುದಲ್ಲ ಎನ್ನುವುದು. ಕನಿಷ್ಠ ವಾರಕ್ಕೆ ಮೂರು ದಿನ ನಡೆದರು ಸಾಕು ದೈನಂದಿನ ಆರೋಗ್ಯದ ಕೋಟಾ ಮುಗಿಸಲು ಸಾಧ್ಯ – ದಿನಕ್ಕರ್ಧ ಗಂಟೆಯ ಲೆಕ್ಕದಲ್ಲಿ…

(Click the page link to read the rest of the story: https://nageshamysore.wordpress.com/00321-%e0%b2%b8%e0%b2%a3%e0%b3%8d%e0%b2%a3%e0%b2%95%e0%b2%a4%e0%b3%86-%e0%b2%9a%e0%b2%b0%e0%b3%8d%e0%b2%9a%e0%b3%82-%e0%b2%9f%e0%b2%bf%e0%b2%b6%e0%b3%8d%e0%b2%af%e0%b3%82-%e0%b2%aa%e0%b3%87/ )

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com