01646. ಇದು ಘಜಲ್ಲು, ಇದು ಘಜಲ್ಲು..!


01646. ಇದು ಘಜಲ್ಲು, ಇದು ಘಜಲ್ಲು..!

________________________________________

ಮೂರ್ಖತನದ ಪರಮಾವಧಿ ಯಾವುದು? ಘಜಲೆಂದರೇನೆಂದೇ ಗೊತ್ತಿರದವನು ಘಜಲಿನ ಮೇಲೊಂದು ಘಜಲ್ ಬರೆಯಲು ಹೊರಡುವುದು! ಅಂತದ್ದೊಂದು ಮಹಾಪಾಪವನ್ನು ಮೊದಲೇ ಮನಸಾರೆ ಮನ್ನಿಸಿ ನಂತರ ಓದಿ – ಅರ್ಥವಾದರೆ ಪುಣ್ಯ , ಆಗದಿದ್ದರೆ ನಷ್ಟವೇನಿಲ್ಲ! 😁

ಇದು ಘಜಲ್ಲು, ಇದು ಘಜಲ್ಲು..!

________________________________

ಎರಡು ಸಾಲ ಪಂಕ್ತಿ ಸರಿಸಮದ ಮಾತ್ರೆ ಸಾಲು..ಇದು ಘಜಲ್ಲು ಇದು ಘಜಲ್ಲು

ಪಂಕ್ತಿ ಕೊನೆ ರಿಂಗಣ ಅದದೇ ಅನುರಣ ಅಮಲು.. ಇದು ಘಜಲ್ಲು ಇದು ಘಜಲ್ಲು ||

ಅನುರಣದ್ಹಿಂದೆ ಇರಬೇಕೊಂದೆ ಪ್ರಾಸ ಜಿಗುಟಲು

ಪದ ಮರುಕಳಿಸಬಿಡದ ತ್ರಾಸ ಹೆಣಗಿಸಲು.. ಇದು ಘಜಲ್ಲು ಇದು ಘಜಲ್ಲು ||

ಮೊದಲ ಪಂಕ್ತಿಗೆ ಪ್ರತಿಸಾಲಿಗು ರಿಂಗಣ ಫಸಲು

ಮಿಕ್ಕ ಪಂಕ್ತಿಗೆ ಅನುರಣಿಸೊಮ್ಮೆ ಸಾಕಷ್ಟೆ ಘಜಲ್ಲು.. ಇದು ಘಜಲ್ಲು ಇದು ಘಜಲ್ಲು ||

ಪಂಕ್ತಿಯಿಂದ ಪಂಕ್ತಿಗಿರಬೇಕಿಲ್ಲ ಕೊಂಡಿ ಹೊಸೆಯಲು

ಪ್ರೀತಿ ಪ್ರೇಮ ಮದಿರೆ ವಿರಹ ಮೃದುಬರಹ ಸಿಕ್ಕಲು.. ಇದು ಘಜಲ್ಲು ಇದು ಘಜಲ್ಲು ||

ಕೊನೆ ಪಂಕ್ತಿಗಿರಲಿ ಗುಬ್ಬಿ ಕಾವ್ಯನಾಮದ ಸೊಲ್ಲು

ಪಡಖಾನೆ ಸಾಕಿ ಮತ್ತಿನ ಗಾನದ ಘಮಲು.. ಇದು ಘಜಲ್ಲು ಇದು ಘಜಲ್ಲು ||

– ನಾಗೇಶ ಮೈಸೂರು

೧೧.೦೩.೨೦೧೮

(Picture source: https://goo.gl/images/356iNq)

01580. ನಾವೆ, ಇದು ನಾವೆ..!


01580. ನಾವೆ, ಇದು ನಾವೆ..!

_______________________________

ಮುರಿದು ಬಿದ್ದ ನಾವೆ

ನಾವೆ ಕುಸಿದು ಬಿದ್ದರು..

ಮುಕ್ಕಾಗಿ ಮುರಿದರೇನು

ದಡಕದನೆ ಬಾಗಿಲಾಗಿಸುತ ||

ಕೊಳೆಯುತ ಅವಶೇಷ

ಮಂಕಾದರೇನು ಸ್ವಗತ

ತುಸುತುಸೆ ಉದುರಾಟ

ಇದ್ದಷ್ಟು ದಿನ ಉಸಿರಾಟ ||

ಯಾರಾರಿಗೊ ಬೀಡಾಗಿ

ಅಶನ ವಸನ ನೆಲೆಯು

ಬೇಡದೆ ಬಾಡಿಗೆ ವಾಸಕೆ

ಒಡೆಯನಿಲ್ಲ ಒಡೆಯರೆಲ್ಲ ||

ಮೀನ ಬೇಟೆ ಹವ್ಯಾಸಕೆ

ತುಂಬೆ ಬುಟ್ಟಿ ನನ್ನೊಡಲು

ಬಲೆ ಬೀಸಿ ಗೆದ್ದ ಜೋಡಿಗೆ

ಪ್ರಣಯದಂಗಳ ಗುಟ್ಟಿನಲಿ! ||

ನಶಿಸಿದರೇನಲ್ಲಿ ನಾವೆ

ಮಣ್ಣಲ್ಲಿ ಮಣ್ಣಾಗಿ ಕಾಯ

ಪೋಷಿಸೆ ಮತ್ತದೆ ಪ್ರಕೃತಿ

ಮತ್ತೆ ನಾವೇರುವ ನಾವೆ ||

– ನಾಗೇಶ ಮೈಸೂರು

(Nagesha Mn)

(Photo source: 3K namma chitra nimma kavana)

01535. ಇದು ಸ್ವಚ್ಚ, ಇದು ಅಮಲ…


01535. ಇದು ಸ್ವಚ್ಚ, ಇದು ಅಮಲ…

___________________________________

ಇದು ಮಹಲೊ?

ಇದು ಬಯಲೊ?

ಬಯಲೊಳಗಾಲಯವೊ?

ಆಲಯದಲಿಹ ಬಯಲೊ? ||

ಇದು ಭವನ ಸುಂದರಿ

ಇದು ಭುವನ ಲಹರಿ

ಭೂವನವಿದರಲ್ಲಿದೆ ನಿಸರ್ಗ

ಬಿಚ್ಚಲದು ತಂತಾನೆ ಸ್ವರ್ಗ ||

ಇದು ಗೋಪುರ ಭಾಸ

ನಭ ನಂಟಿನ ವಿನ್ಯಾಸ

ಸ್ವಚ್ಚ ಅಮಲ ಚೆಲ್ಲಿದೆ ಪ್ರಕೃತಿ

ಕಂಡಿತೇನಿನಿತಾದರು ವಿಕೃತಿ? ||

ಮುಂಗುರುಳ ಪ್ರಶಾಂತ

ಹಿಂದಲೆ ನಿಗೂಢ ಮೂರ್ತ

ಕಂಡಿದ್ದೆಲ್ಲ ಸ್ಪುಟವೊ ದಿಟವೊ

ಕಾಣದ್ದೆಲ್ಲ ವಿಸ್ಮೃತಿಯ ಪಟವೊ ||

ಏನಿದೆ ಇಲ್ಲಿ, ಕಾಡು?

ಏನಿಲ್ಲದ ಖಾಲಿ ಮೇಡು

ಒಳಗಣ್ಣ ಬಿಚ್ಚಿದರೆಲ್ಲ ಅಂತರ್ಗತ

ನಿಜ ಮಾದರಿ ಇದೆ ಸ್ವಚ್ಚ ಭಾರತ ||

– ನಾಗೇಶ ಮೈಸೂರು

(Nagesha Mn)

(ಚಿತ್ರ : ಸ್ವಯಂಕೃತಾಪರಾಧ)