01214. ಸದ್ದೇ ಇಲ್ಲದ ಹರಟೆ..


01214. ಸದ್ದೇ ಇಲ್ಲದ ಹರಟೆ..
______________________


ಉಂಟೇನು, ನನ್ನೊಳಗೆ ನಾನು
ಮಾತಾಡಿಕೊಳ್ಳದ ಗಳಿಗೆ ?
ನಿತ್ಯ ಸತ್ಯದ ಹಾಗೆ ಅನವರತ
ಬೇಕಿದ್ದು, ಬೇಡದ್ದು, ಗೊತ್ತಾಗದೆ ಹೋದದ್ದು..

ಒಂದಾದರು ಗಳಿಗೆ ವಿರಾಮ
ಕೊಟ್ಟಿದ್ದನ್ನೇ ಕಾಣೆ ಕೊರಮ
ದಣಿವಿಲ್ಲವೊ ದಣಿವಾಗದವನೊ
ಈ ಕ್ಷಣದಲ್ಲೂ ಅದೆ ಸೂತ್ರ ತಂತ್ರ

ಯಾರೊಡನಾಟವೊ ಮಾತೊ ಕಾಣೆ
ಮರುಳೆನ್ನುತಿದ್ದರು ಹೊರ ಜಗದಲ್ಲಿ
ಆಡುವ ಅರಿವಷ್ಟೆ ಗ್ರಹಿಕೆ ಮೊತ್ತದೆ
ಕೇಳಿಸಿಕೊಳ್ಳುವನಾರೊ ಅಪರಿಚಿತ..

ಕುತೂಹಲಕೊಮ್ಮೊಮ್ಮೆ ಒಗಟಾ
ಬಿಡಿಸಹೊರಟರೆ ನಿಗೂಢ ಹಾದಿ
ಮಾತೊಳಗೊಂದು ಮಾತದರೊಳಗೆ
ಮಾತಿಲ್ಲದೆ ಗದ್ದಲ ಗೊಂದಲ ನೂರು..

ಬಿಟ್ಟು ಹೊರಳಿದೆ ಮತ್ತೆ ಜಗದ
ಬೇಕು ಬೇಡದ ಮಾತಿಗೆ ಕಟ್ಟು ಬಿದ್ದು
ಮತ್ತಾರೊ ಮಾತಾಡಿದಂತಾಗುತಿದೆ ಒಳಗೆ
ನನ್ನೊಡನಾಡಿದ ನನ್ನ ಮಾತೆ ಇರಬೇಕು !


– ನಾಗೇಶ ಮೈಸೂರು
೧೨.೦೪.೨೦೧೭
(Picture source: internet / social media)

00668. ರಾಜ್ ಇಲ್ಲದ ಕನ್ನಡವೆಂತು ?


00668. ರಾಜ್ ಇಲ್ಲದ ಕನ್ನಡವೆಂತು ?
___________________________

ಏನಪ್ಪಾ ಗತಿ ಕನ್ನಡ ?
ನಿನ್ನ ಹೆಸರಿಲ್ಲದಿದ್ದರೆ ಅಡ್ಡ
ನುಂಗಿ ನೀರು ಕುಡಿದು ಸಕಲ
ಕನ್ನಡ ಹುಡುಕಿದರೂ ಸಿಗದ ಕಾಲ..

ಕಾಲಾಡಿಸಲು ಬಂದವರು
ಜೀವಕಾಲವಿಲ್ಲೇ ಕಳೆವ ಜನರು
ಕಲಿತಾಡಲಿ ಕನ್ನಡನುಡಿ ಬೆರೆಯುತ್ತೆ
ನೋಡಲಿ ಸಾಕು ಸಿನಿಮಾಗಳೆ ಕಲಿಸುತ್ತೆ..

ಮಕ್ಕಳು-ಮರಿಗು ರೀತಿ
ಜೀವನಮೌಲ್ಯದ ಪಾಠ ನೀತಿ
ಬೇಕಲ್ಲವೆ ಬದುಕಿನಡಿಪಾಯ ಸೂತ್ರ
ತೋರಿಸಿ ಸಾಕು ರಾಜಣ್ಣನ ಜೀವನ ಚೈತ್ರ..

ಜನುಮ ದಿನ ಬರಿ ನೆಪ
ನಿತ್ಯ ಸಿನಿಮ ಹಾಡಲಿ ಜಪ
ನೋಡಿ ಕನ್ನಡ ಟೀವಿ ಚಂದದಲಿ
ಚಂದನ ಸುಗಂಧ ಕಸ್ತೂರಿ ಹರಡಲಿ..

ಬೇಡಿನ್ನೇನು ಸ್ಮರಣೆ ನೆನಪು
ಕನ್ನಡ ಮಾತಾಡಿದರದೆ ಕಂಪು
ನಾಡುನುಡಿ ಉಳಿಸೆ ಜೊತೆಗೂಡೆ
ಜತೆಯಾಗಿ ಸದಾ ಕನ್ನಡ ರಾಜನ ಹಾಡೆ..

– ನಾಗೇಶ ಮೈಸೂರು

00654. ಅಪ್ಪನಿಲ್ಲದ ಚಿತ್ರಗಳು..


00654. ಅಪ್ಪನಿಲ್ಲದ ಚಿತ್ರಗಳು..
________________________

  
(Picture from: http://www.prajavani.net )

ನಮ್ಮ ಬಾಲ್ಯವೆಲ್ಲ ಬರಿ ನೆನಪು
ಸ್ಮೃತಿಗಷ್ಟೆ ದಾಖಲೆ ಅರೆಬರೆ ಮಸುಕು
ಅವ್ವಾ ಅಪ್ಪಾ ಅಜ್ಜಿ ತಾತಾ ಬಳಗ
ಹೇಳುವ ಕಥೆಗಳ ತಳುಕು
ಬಾಲ್ಯದ ಪೋಟೊ ವೈಭವಾ..

ಎಲ್ಲಿತ್ತು ಟೀವಿ, ವಿಡಿಯೊ ಪುಟಗೋಸಿ
ಸೈಕಲ್ಲು ರೇಡಿಯೊಗಳೆ ಜೂರತ್ತು
ಬಿದ್ದು ಬೀದಿಗೆ ಹಾಡಿದ್ದೆ ಲಗೋರಿ
ಗೋಲಿ ಬುಗುರಿ ಚಿನ್ನಿದಾಂಡು ಕ್ರಿಕೆಟ್ಟು
ಅವಲಕ್ಕಿ ಪವಲಕ್ಕಿ ಅಳಿಗುಳ್ಳಿ ಕವಡೆ
ನೆನಪಷ್ಟೆ ಮೊತ್ತದೆ..

ಇಂದು ವಿಡಿಯೊ ಕ್ಯಾಮರ ಪೋನಲಿ
ಕಂದಮ್ಮಗಳಾಟವೆಲ್ಲ ಸೆರೆಯಾಗಿ
ಹೆಜ್ಜೆಹೆಜ್ಜೆಗೂ ದಾಖಲೆ ಪುರುಸೊತ್ತಿಲ್ಲ
ನೋಡಿದರೋ ಬಿಟ್ಟರೊ ಡಿಜಿಟಲ್ಲಲಿ
ಸೇರಿತ್ತ ಸರಕು ಧೂಳು ಹಿಡಿದ
ಅಲ್ಬಮ್ಮುಗಳ ಜತೆಯಲ್ಲಿ..

ಧೂಳು ಬಡಿಯುತ ಮೊನ್ನೆ ಸಿಕ್ಕಾಗ
ಎಳೆದು ಕೂರಿಸಿದೆ ಮಗನ
ನೋಡೆನ್ನುತ್ತ ನಿನ್ನದೇ ಪುರಾಣ;
ವಾಚಿಸಿ ಅಚ್ಚರಿ ‘ಬರಿ ಅಮ್ಮ ನಾನು !’
ಉದ್ಗಾರ ಮುಗಿವ ಮೊದಲೇ ನುಡಿದೆ
‘ಹೌದು ವಿಡಿಯೊ ತೆಗೆದಿದ್ದು ನಾನು!’

ಅಪ್ಪಗಳೆಲ್ಲ ಹಾಗೆ ಹಿನ್ನಲೆಗೆ
ಸರಿವುದೇನು ಪ್ರಕೃತಿ ನಿಯಮ ?
ನೇಪಥ್ಯದಲಿ ಮಾಡಿಟ್ಟು ಪೆಚ್ಚಾಗಿ
ನಗುತ ಮೂಲೆ ಹಿಡಿಯುವ ಕರ್ಮ ?
ಅಂದುಕೊಂಡೆ ತೆರೆದೇ ಮನದ ಅಲ್ಬಮ್ಮು
ಕಂಡಿತ್ತಲ್ಯಾಕೊ ಬರಿ ಅಪ್ಪನಿಲ್ಲದ ಚಿತ್ರಗಳು..

– ನಾಗೇಶ ಮೈಸೂರು