01668. ಯಾಕೊ ಈ ಋತು..


01668. ಯಾಕೊ ಈ ಋತು..

__________________________________

ಯಾಕೊ ಈ ಋತು, ಮಾತಿಗು ಸಿಗುತಿಲ್ಲ

ಅದೇಕೊ ಈ ಪ್ರಕೃತಿ, ಒಡನಾಟಕು ಒಲವಿಲ್ಲ

ಸಿಕ್ಕದೆಡೆ ಬದುಕಲಿ, ಮೂಡಲೆಂತು ಪ್ರೀತಿ ?

ನಿಸರ್ಗದ ಹೆಸರಲಿ, ಸರಿಯೇನೇ ಈ ರೀತಿ ? ||

ಅರಳಿದವೆ ಹೂಗಳು, ಗುಟ್ಟಲಿ ನಟ್ಟಿರುಳಲಿ

ಕಾಣಲೆಂತೆ ಕಂಗಳು, ನಿಶೆಯ ಕರಿ ನೆರಳಲಿ

ನಿನ್ನ ಸೆರಗಲೆಷ್ಟು ಬೆರಗು, ಯಾರಿಟ್ಟರೆ ಯಂತ್ರ ?

ಸಾಗಿಸಿರುವೆ ಪ್ರತಿ ಕ್ಷಣ, ನಿಭಾಯಿಸೆಲ್ಲ ಕುತಂತ್ರ! || ಯಾಕೊ ||

ಬಿಸಿಲಲ್ಲಿ ಬಾಡುವ, ಜಗದಲಿ ಬಿಸಿಲೆ ಮಳೆ

ಕುಡಿದದನೆ ಪಾಕವ, ಮಾಡುವ ನೀನೆಂಥ ಜಾಣೆ

ಬೆವರುತ ನಿಡುಸುಯ್ಯುತ, ಶಪಿಸುತಲೆ ಕಾಲ

ಕಳೆದುಹೋಯಿತೆ ಬೆಸುಗೆ, ದಣಿಸಲು ಬಿಸಿಲಿಲ್ಲ || ಯಾಕೊ ||

ಬಂತಲ್ಲೆ ಬಸವಳಿದ, ಭುವಿಗಿಕ್ಕುತ ಸುರಿಮಳೆ

ಒಣಗಿ ನಿಂತ ತರುನಿಕರ, ಮೊಗೆದು ಕುಡಿವ ವೇಳೆ

ನೋಡುತ ಮಾಡಿನ ಕಿಂಡಿ, ಕಳೆದುಹೋಯ್ತೆ ಗಳಿಗೆ

ನೆನೆಯದೆ ಹನಿ ನೆನೆದು ದನಿ, ಒದ್ದೆಮುದ್ದೆ ಕಚಗುಳಿಗೆ || ಯಾಕೊ ||

ಬೇಡವೆನ್ನಲೆಂತೆ ನಡುಕ, ಚಳಿ ತಾನೆ ಅಮಾಯಕ

ಅಪ್ಪಿದರೇನೊ ಹೊದಿಕೆ, ಬೆಚ್ಚಗಿರಿಸೊ ನೆನಪ ಪುಳಕ

ಅಚ್ಚರಿಯದನೆಲ್ಲ ಮೆಚ್ಚಿ, ಆಸ್ವಾದಿಸೆ ಬಿಡಬಾರದೆ ?

ಕಟ್ಟಿ ಕೂರಿಸೆ ಜಡ್ಡಿನ, ನೆಪದಲಿ ಕಾಲವೆಲ್ಲಾ ಬರಿದೆ ! || ಯಾಕೊ ||

ನೀನೊಬ್ಬಳೆ ನಿಜದಲಿ, ಪ್ರಕೃತಿಯೆ ನಿಸರ್ಗ ಸಹಜ

ಹೂವು ಕಾಯಿ ಹಣ್ಣು ಋತು, ಕಾಲಮಾನದ ತಾಜ

ಜೋಡಿಸಿಟ್ಟ ವಿಭುವವನೆ, ಮರೆತುಬಿಟ್ಟ ಗಡಿಯಾರ

ನೀನಿದ್ದೂ ಚಂಚಲಿನಿ, ಬೇಕಾದ ಋತುವ ತರುವ ವರ || ಯಾಕೊ ||

– ನಾಗೇಶ ಮೈಸೂರು

೨೪.೦೩.೨೦೧೮

(Picture source : internet social media)

01198. ಯಾರದು ಗೊತ್ತೇ ಈ ಹಾಡು?


01198. ಯಾರದು ಗೊತ್ತೇ ಈ ಹಾಡು?
________________________________


ಯಾರಾದರೂ ಒಮ್ಮೆ ಕೇಳಬಾರದೇ ಈ ಹಾಡು ?
ಸುಳ್ಳು ನಗೆ ಮುಚ್ಚಿಟ್ಟ ಬಗೆ, ವೇದನೆಯ ಜಾಡು..
ಹೇಳಲಾಗದ ಸಂತೆ, ಹಾಳು ಮನಸಿನೊಳಗಂತೆ
ಕಿಕ್ಕಿರಿದು ನೆರೆದ ಪರಿ, ತುಂಬಿ ತುಳುಕೇ ಹಾಡಲಿ..||

ಕಾಣುವರೆಲ್ಲರು ರಾಗ, ಹಾಡುವ ದನಿಯಾವೇಗ
ಮೀಟಿದಾಗ ಮನಸ, ಗ್ರಹಿಸಿ ಪದ ವೈಭವ ಸೊಗ
ಮೆಚ್ಚಿ ಕರತಾಡನ ಶುದ್ಧ, ತುಟಿಯಂಚಲುಲಿವ ಪದ
ಕವಿ ಕಾಣದಿದ್ದರು ಕಾವ್ಯ, ತೆರೆಸುತಿರೆ ಹೃದಯ ಕದ..||

ಮೈಮರೆತ ಗುಂಗಲಿ ತಲ್ಲೀನ, ಆವರಿಸಿತೇನೊ ಲೀನ
ಅರಿವಾಗಲೆಂತು ಬರೆದ, ಕವಿಯೊಡಲ ತಲ್ಲಣ ಸದ್ದು ?
ಸಜ್ಜನ ಸಂಭಾವಿತ ಮರುಳ, ಬಿಚ್ಚಿಡದೆ ವಾಸ್ತವ ಘೋರ
ಕಟ್ಟುವ ಕಲ್ಪನೆ ಮಹಲಲಿ, ಬೇಸ್ತು ಬೀಳುವವರೆ ಎಲ್ಲಾ..||

ಹೇಳಲದೆ ಸಂಕೋಚ, ಹೇಳದಿರೆ ಮುಸುಕಿನ ಗುದ್ದಾಟ
ಲಜ್ಜಿತನೆ ಕೀಳರಿಮೆಗೆ ಸಿಕ್ಕು ಬಲಿಯಂತೆ ವಾಮನನಡಿ
ನಲುಗಿದರು ಮುಲುಗಿದರು, ಪುಳಕಿತ ಹರ್ಷೋದ್ಗಾರ
ಮೆಚ್ಚುಗೆಯಲಿ ನುಚ್ಚುನೂರು, ಕಷ್ಟ ಕಾರ್ಪಣ್ಯಗಳ ದೂರು..||

ಕವಿಗಳದೆಷ್ಟೊ ಕೋಟಿ, ಬೆಳಕಿಗೆ ಬರದ ಕಾವ್ಯದ ಲೂಟಿ
ಅಜ್ಞಾತವಾಸದೆ ಬೇಯುತ, ಬರೆಬರೆದು ಚಿಗುರೊ ಸ್ಪೂರ್ತಿ
ಓದುವರಿಲ್ಲ, ಹಾಡುವರಿಲ್ಲ, ಕೇಳುವರಿಲ್ಲ ಕಾನನ ಧೂಮ
ಬಯಲಾಗುವುದುಂಟೆ ಬದುಕಲಿ? ಕವಿಯದಲ್ಲ ಪರಾಧೀನ ||

– ನಾಗೇಶ ಮೈಸೂರು
(Nagesha Mn)
(Picture source: Internet / social media)

02189. ಈ ಲೋಕ ವ್ಯಾಪಾರ


02189. ಈ ಲೋಕ ವ್ಯಾಪಾರ
__________________________
(‘೩ಕೆ – ನಮ್ಮ ಚಿತ್ರ ನಿಮ್ಮ ಕವನ’)


ಬಂದಿದ್ದೇನೊ ? ಹೋಗಿದ್ದೇನೊ ?
ಬದುಕೆ ಓಟದ ಮೂಟೆ
ಯಾರೊ ಓಡುತ್ತಾರೆ
ಇನ್ಯಾರೊ ಓಡಿಸುತ
ಮತ್ತಾರೊ ಬೆನ್ನಾಗೊ ಮಂದಿ..

ಕೆಲ ಸಮತಟ್ಟು ರಸ್ತೆ
ಉರುಳೋ ಚಕ್ರದ ಜತೆ
ಹೊರಟಿದ್ದರೆ ಅರಸಿ ಗಮ್ಯ..
ಗೊತ್ತಿದೆಯೊ ಇಲ್ಲವೊ
ಸರಿ ಗುರಿಯಿಲ್ಲದಿರೆ ಮೊತ್ತ
ತಪ್ಪು ಜಾಗಕೆ ತಲುಪೊ ಬೇಗ !

ಹಾಸಿಕೊಂಡ ಪರಂಪರೆ
ಪೂರ್ವನಿಶ್ಚಿತ ನಿಲ್ದಾಣ
ಗೊತ್ತಿಲ್ಲದೆಯು ತಲುಪಿಸುವ;
ಇರದಿದ್ದರೇನು ಅಚ್ಚರಿ ರೋಮಾಂಚನ ?
ಸಮಷ್ಟಿಯನೊಯ್ಯುವ ದೂತ
– ತಾನಾಗದಿದ್ದರೆ ಧೂರ್ತ !

ಇದುವೆ ವಿಚಿತ್ರ ಒಂದೇ ಜಗ
ವಿಭಜಿಸಿಬಿಟ್ಟಿದೆ ಜೀವನ ಸೊಗ!
ಅವರವರವರು, ಅವರವರ ದಾರಿ
ಧನಿಕ ಶ್ರಮಿಕ ನಿರ್ಗತಿಕ ಬೀದಿ
ಹರಿಯುತೆಲ್ಲ ಸಮನಾಂತರ ಪಥ
ವಿವಿಧತೆಯಲಿ ಏಕತೆ ಸಮಗ್ರ ತತ್ತ್ವ !

ಒಗಟೊಂದು ನಿಶ್ಚಿತ ಚಿತ್ರ ಪಥ
ಹೋಗುತಿದೆಯೊ ಬರುತಿದೆಯೊ ಅನಿಶ್ಚಿತ..
ಹೋಗುತಿದೆಯೆಂದು ಹೋದವರ ಕಂಡೇ
ಬರುತಿರುವುದೆಂಬ ಭ್ರಮೆಯನೂ ಉಂಡೆ
ನಿಜದಲ್ಲಿ ಬಂದು ಹೋಗುವರ ಸಂತೆ
ಈ ಸಂತೆಯಾ ಬದುಕು ಮೂರೇ ದಿನವಂತೆ !

– ನಾಗೇಶ ಮೈಸೂರು
೨೬.೦೮.೨೦೧೭

01117. ಈ ವಯಸಿಗೊಬ್ಬ ಹೊಸ ಮಡದಿ..!


01117. ಈ ವಯಸಿಗೊಬ್ಬ ಹೊಸ ಮಡದಿ..!
___________________________

ಇವಳೆನ್ನ ಮೋಹದ್ಹೊಸ ಮಡದಿ
ನಿತ್ಯ ನನ್ನೆಡೆಯಲ್ಲಿವಳಾ ಬಿಡದಿ
ಹಾಸಿ ಹೊದ್ದು ಮಲಗೆದ್ದುಬಿದ್ದು
ಜೊತೆಗೊದ್ದಾಡುವ ಬಲು ಮುದ್ದು !

ಅಂಟಿಕೊಂಡೇ, ಸುಖಾಸುಮ್ಮನೆ
ಅತ್ತೂ ನಕ್ಕು, ಸಮಪಾಲು ತಾನೆ
ಮೆಚ್ಚದಿರಲೆಂತವಳ ಮುಚ್ಚಟೆಗೆ ?
ಅಪ್ಪಿ ಎದೆಗೂಡಲಿ ಬೆಚ್ಚಗಿರಿಸುತ !

ನೆನಪಿದೆಯಾ, ಅರೆಗಳಿಗೆ ನಿನ್ನ
ಕೈ ಬಿಟ್ಟ ಗಳಿಗೆ, ಎಲ್ಲಿತ್ತೂ ಚಿನ್ನ ?
ಬಿಡದೆ ಹಿಡಿದ, ಹಠಯೋಗ ಬೆಕ್ಕೆ
ಮರೆತುಬಿಟ್ಟಾಗ, ಗೊತ್ತಲ್ಲ ಚಡಪಡಿಕೆ !


ಮರೆತ ಹೊತ್ತಲ್ಲೂ, ಕರೆದಾರ್ತ ದನಿ
ಎಡತಾಕುತಾ, ಸಿಕ್ಕಸಿಕ್ಕವರ ಸಂದಣಿ
ಸಿಕ್ಕಾಗ ಕೊನೆಗೆಂಥ ನಿರಾಳ ಗೊತ್ತಾ ?
ನೀನಿಲ್ಲದ ಶೂನ್ಯ ಅರಿವಾಗಿ ಅದ್ಭುತ..!

ಅಂದಿನಿಂದೆಚ್ಚರ, ಬಿಡದೇ ನಿನ್ನ ಸತಿ
ಕಾದೂ ಹಗಲಿರುಳು, ನನ್ನಲ್ಲೇ ವಸತಿ
ನೀನಿಲ್ಲದೆ ಹೇಗೆ ? ಮಾತಾಡಲೆ ದೂರ
ಜಂಗಮವಾಣೀ ನೀನೀಗ, ಮಡದಿಯಾ ತರ..!

– ನಾಗೇಶ ಮೈಸೂರು
೩೦.೦೧.೨೦೧೭
( ಡಿಸ್-ಕ್ಲೈಮರ್ : ಸುಮ್ನೆ ತಮಾಷೆಗೆ )
(Picture source: Creative comment he)

01048. ಈ ಡಿಸೆಂಬರ


01048. ಈ ಡಿಸೆಂಬರ
__________________


(೦೧)
ಎಂದಿನಂತಿಲ್ಲ
ಡಿಸೆಂಬರದ ಚಳಿ
– ಬೆವರುತಿದೆ

(೦೨)
ಸ್ವೆಟರು ಹಾಕಿ
ಅಲೆದಾಡಲಿತ್ತಲ್ಲ
– ಲಗೇಜು ಭಾರ

(೦೩)
ಗೊರಗುಟ್ಟುವ
ನಲ್ಲಿ ಮೂಗಿಗೆ ಮುಕ್ತಿ
– ಯಾಕೋ ನಿರಾಸೆ

(೦೪)
ಅದುರಿಸುವ
ಮುಂಜಾವ ಚಳಿ ಧಾಳಿ
– ಬೊಚ್ಚು ಬಾಯಲಿ

(೦೫)
ಪೇರಿಸಿ ಇಟ್ಟ
ಕಂಬಳಿ ಸ್ವೆಟರಾಗಿ
– ಬಿಕ್ಕುವ ಸದ್ದು


(೦೬)
ನೋಟು ನಿಷೇದ
ನಡುಗಿಸಿದ ಬಗೆ
– ಚಳಿಯು ಚುಪ್

(೦೭)
ಶೀತಲ ನೆಲ
ಚಡಪಡಿಸೋ ಜೀವ
– ಈಗ್ಯಾಕೋ ನಿದ್ರೆ

(೦೮)
ಬರಬಹುದು
ಕೊಟ್ಟ ಕೊನೆಗಾದರು
– ಸಂಕ್ರಾಂತಿ ಬಂತು

(೦೯)
ಸಂಕ್ರಮಣಕೆ
ಯಾಕವಸರ ಕಾಣೆ
– ತತ್ತರ ಬೇಡ

(೧೦)
ಡಿಸೆಂಬರಕೆ
ವಿದಾಯ ಹೇಳಿದ್ದು
– ನಡುಕವಿಲ್ಲ

– ನಾಗೇಶ ಮೈಸೂರು
೦೩.೦೧.೨೦೧೭
(This picture is licensed under a Creative Commons Attribution-NonCommercial-ShareAlike 3.0 Unported License)

00957. ಈ ಬದುಕೇ ಬೇರೇನಲ್ಲ, ನೀರು..


00957. ಈ ಬದುಕೇ ಬೇರೇನಲ್ಲ, ನೀರು..
_____________________


ಕಾಡುವಾಗ ತಾಪತ್ರಯದ ಗಳಿಗೆ
ಕರಗಿ ಹರಿದಂತೆ ಬೆವರು ಕಣ್ಣೀರು
ಬದುಕೆಲ್ಲ ಬರಿ ಹರಿಯುವ ನೀರು.

ಕುದಿಕುದಿಸುವ ಬೇಗುದಿ ಸಂಕಷ್ಟ
ಸಹನೆಯೆಲ್ಲಿ ಕುದಿಗಾವಿಯಾಗುತ್ತ
ಬದುಕೆಲ್ಲ ಹಬೆಯಾಗಿ ಮಾಯಾವಿ.


ಬಿದ್ದ ಪೆಟ್ಟ ಮೇಲಿನ ಪೆಟ್ಟಿನ ಮೊತ್ತ
ಶೀತಲವಾಗಿ ಹಬೆ ನೀರು ಕುಗ್ಗುತ್ತಾ
ನಿರ್ಗಲ್ಲಾಗಿ ಬದುಕೆಲ್ಲಾ ಮಂಜುಗಡ್ಡೆ.

ಬದುಕೇ ನೀರು ನೀರ್ಗಲ್ಲು ನೀರಾವಿ
ರೂಪಾಂತರ ಪೋಷಾಕು ಅನುದಿನ
ನಿನಗೆ ನೀ ತೊಟ್ಟರೆ ನಿನ್ನದೆ ಬಾಳುವೆ
ವಿಧಿಗೆ ತೊಡಿಸೆ ಬಿಟ್ಟರೆ ಹಾಳಾಗುವೆ !


– ನಾಗೇಶ ಮೈಸೂರು
27.10.2016
This work is licensed under a Creative Commons Attribution-NonCommercial-ShareAlike 3.0 Unported License

00947. ಈ ಹೊತ್ತಿನ ತಲ್ಲಣ


00947. ಈ ಹೊತ್ತಿನ ತಲ್ಲಣ
__________________________


ಬೆಕ್ಕಸಬೆರಗಾಗುವ ಸರದಿ ಬದುಕಿಗೆ
ಕೊನೆ ಮೊದಲಿಲ್ಲದ ಯಾವತ್ತಿನ ತಲ್ಲಣ
ಮೊಬೈಲುಗಳು ಸ್ಮಾರ್ಟಾಗಿ ಬದಲು
ನಾವಾಗದಿದ್ದರೆ ನಮದೂ ಕಂದನ ತೊದಲಾಟ..

ಸುಮ್ಮನೆ ಬಟ್ಟೆ ತೊಟ್ಟಂತಲ್ಲ ಠಾಕುಠೀಕಾಗಿ
ಕಿತ್ತೆಸೆಯಬೇಕಂತೆ ಒಳಗಿನ ನೋಕಿಯಾ !
ನಿನ್ನೆ ಮೊನ್ನೆ ಅದರಾಚೆ ಕಲಿತಿದ್ದೆಲ್ಲ ಶಿಸ್ತು ಶೂನ್ಯ
ಗೊತ್ತಿರದ ಹೊಸ ತಲ್ಲಣ ಅಶಿಸ್ತಿಗೀಯುತ ಜಾಗ …

ಪ್ರಗತಿ ವಿಕಾಸ ಬಂಡವಾಳಶಾಹಿ ಸಮಾನತೆ
ಅವರವರ ಬಾವುಟ ಹಿಡಿದು ನಡಿಗೆ ಓಟ ಕೂಟ
ಯಾರು ನಾಯಕ ? ಯಾರ ಹಿಂಬಾಲಕ ಯಾರು ?
ನಂಬುವುದಾರನು ಬಿಡುವುದಾರನು ಗೊಂದಲ ಶುದ್ಧ..

ಕಾಲು ಚಾಚಿದ್ದು ಮೊದಲು ನಮ್ಮ ಮನೆಯೊಳಗಷ್ಟೆ
ಊರಾಯ್ತು ಗಡಿ ದಾಟಿ ದೇಶಾತೀತ ಜಾಗತಿಕವೀಗ
ವ್ಯಾಪ್ತಿ ದಾಟಿ ಎಲ್ಲೆ ಮೀರಿ ನಿಸ್ತಂತುವಿನ ಜತೆಗೆ ಲಲ್ಲೆ
ದವಸ ಧಾನ್ಯ ತಿನ್ನುವನ್ನಕು ಪೇಟೆಂಟಿಗೆ ಸಹಯೋಗ ..

ತಲ್ಲಣಗಳ ತಲ್ಲಣ ವಯಸು ಅನುಭವ ಶೂನ್ಯ
ಬದಲಾಗುವ ವೇಗ ಅಪ್ರಸ್ತುತವಾಗಿಸುವ ಸಕಲ
ವೃದ್ಧಾಪ್ಯ ಓಡಬೇಕು ಪ್ರಾಯದ ಜತೆಗೆ ಸ್ಪರ್ಧೆಯಲಿ
ಯೌವ್ವನ ಬಾಲ್ಯದ ಜತೆ ಹೆಣಗಾಡಬೇಕು ಉಳಿವಿಗೆ..

ತಲ್ಲಣಗಳೇನೆಂದೆ ಅರಿವಾಗದ ತಲ್ಲಣ ವಾಸ್ತವ
ತಲ್ಲಣವಿಲ್ಲದ ದಿನವಿಲ್ಲ ಬದುಕಿಲ್ಲ ಭವಿತದ ಸತ್ಯ
ತಲ್ಲಣವೆ ಬದುಕಾದರೆ ತಲ್ಲಣಕಷ್ಟೆ ಬಾಳುವೆ ಸುಲಭ
ಆ ಕಾಲದ ಶಾಂತಿ ನೆಮ್ಮದಿ – ಪಳೆಯುಳಿಕೆ ಹುಡುಕೆ ..

ತಲ್ಲಣಿಸದಿರು ಕಂಡ್ಯಾ ತಾಳು ಮನವೆ ಎಂದರೂ
ತಲ್ಲಣಿಸದಿರಲಾಗದ ಕಾಲ ನಿಯಮ ಬಂದಂತಿದೆ
ತಲ್ಲಣಿಸದೆ ದಿನ ದೂಡಲು ರಾಮಾ ಕೃಷ್ಣ ಶಿವಧ್ಯಾನಕು
ಬಿಡದೆ ದುಡಿತಕೆ ಹಚ್ಚಲಿದೆ ತಲ್ಲಣ ಕೊನೆಯುಸಿರತನಕ..

– ನಾಗೇಶ ಮೈಸೂರು
20.10.2016
(Send to competition of same title)
This work is licensed under a Creative Commons Attribution-NonCommercial-ShareAlike 3.0 Unported License

00945. ಈ ದಿನದ ಸಲುವಾಗಿ ಸಖಿ


00945. ಈ ದಿನದ ಸಲುವಾಗಿ ಸಖಿ
________________________


ಎಷ್ಟೊಂದು ಪ್ರಶ್ನೆ ಕೇಳುವೆ ಗೆಳತಿ ?
ಉತ್ತರವಿಲ್ಲದ ದಕ್ಷಿಣ ದಿಕ್ಕಲಿ
ನಿಖರತೆ ಸ್ಪಷ್ಟತೆ ಸರಿಯುತ್ತರ ಕಾದರೆ
ಉತ್ತರ ದಕ್ಷಿಣ ನಡಿಗೆ ನಮ್ಮ ಪ್ರೀತಿಗೆ..

ದುರ್ಭರ ಬದುಕಲಿ ಬರಿ ಪಂಥಗಳು
ಯಾರು ತಾನೆ ಸಂತ ಸತ್ಯವಾನರು
ಅಂತೆಂದು ಪ್ರತಿಹೆಜ್ಜೆ ಯೋಜಿಸುವುದುಂಟೆ ?
ಇಟ್ಟರಾಯ್ತು ಎದುರಾಗೊ ಹಾಡಿಗನುಸಾರ..

ವಿರಮಿಸು ವಿಶ್ರಮಿಸು ಅರೆಗಳಿಗೆ ಮೌನ
ಕಟ್ಟಬೇಕಿಲ್ಲ ಒಂದೇ ದಿನದಲ್ಲಿ ಜೀವನ
ಏಕೀ ಧಾವಂತ ಅವಸರದ ಆಯಾಸ
ಅನುಭವಿಸಬಾರದೇ ಈ ಕ್ಷಣದ ಹರ್ಷ ದನಿ..

ಸಿರಿಯಿಲ್ಲ ನೆರಳಿಲ್ಲ ಹೊರುವ ರಥವಿಲ್ಲ
ಪಲ್ಲಕ್ಕಿ ಪಲ್ಲಂಗ ನಿರಾಳತೆಗೂ ಕಲ್ಲು
ಹಾಗೆಂದು ಕೂತರೆ ತಲೆ ಮೇಲೆ ಕೈಹೊತ್ತು
ನಾಳೆಯಾಗುವುದು ಇಂದು ನರೆದ ತಲೆ ಸುತ್ತು..

ಬದುಕುವ ಬಾರೆ ಸಖಿ ಈ ದಿನದ ಸಲುವಾಗಿ
ಸಣ್ಣ ಸಣ್ಣ ಸುಖದಲುಂಟು ಜೀವನ ಭೋಗ
ಹಿಡಿದುಕೊ ಕೈ ಅಪ್ಪಿ ನೇವರಿಸಿಕೊ ಮೈ ಮನ
ಕೇಶದಡಿ ಮುಗುಳುನಗೆ ಮರೆಸಲಿಲ್ಲ ಬವಣೆ..

– ನಾಗೇಶ ಮೈಸೂರು
19.10.2016
(Picture source Creative common)