01630. ಉದಾಸಿ ಮನ..


01630. ಉದಾಸಿ ಮನ..

______________________

ಮನಕೇಕೊ ಉದಾಸ ಭಾವ

ತಿನ್ನುತಿದೆ ಸುಮ್ಮನೆ ಜೀವ

ಒಂದೇ ಸಮನೆ ಸುರಿತ ಸತತ

ಹೇಳಲಾಗದದೇನೊ ಮೊರೆತ ||

ಬೇಡವೆನ್ನುತ ಕೂತಾಗ ನಿಂತ

ನಿಂತ ಚಡಪಡಿಕೆ ನಡೆದಾಡಿಸುತ್ತ

ನಡೆದೆಲ್ಲಿ ಮುಗಿದೀತು ನಿಲ್ಲದೋಟ ?

ಉತ್ತರವಿಲ್ಲದ ಪ್ರಶ್ನೆ, ಗೊತ್ತು ಗುರಿಯೆತ್ತ?! ||

ಮನಸಾಗದಲ್ಲ ತಿನ್ನೆ ತಿನಿಸು

ವಿನಾಕಾರಣ ಎಲ್ಲಕು ಮುನಿಸು

ತಕ್ಕಡಿ ತಟ್ಟೆಗ್ಹಾಕಿದ ಕಪ್ಪೆ ಮನ

ಚಿಂತನೆಗೆಲ್ಲ ಚಿಂತೆಯ ಲೇಪನ ||

ಖೇದವೆಂದರೆ ಖೇದ ವಿಷಾದ

ಮೋದವೆನ್ನೆ ವಿನೋದ ಸಂಪದ

ಎರಡರ ನಡುವಿನದಲ್ಲದ ತ್ರಿಶಂಕು

ಯಾವುದಲ್ಲದಾ ಎಡಬಿಡಂಗಿ ತುಕ್ಕುq ||

ಉದಾಸವಾಗೆ ಉಲ್ಲಾಸ ಒಳಿತು

ಆಗುವ ಬಗೆ ಅರಿವಾಗದ ವಸ್ತು

ಸುಸ್ತಾದರು ಕಾಯೆ ಮೌನ ಹೊತ್ತು

ಬೇಡಿಕೊಳ್ಳುತ ಆಗಲೆಂದು ತುರ್ತು ! ||

– ನಾಗೇಶ ಮೈಸೂರು

Nagesha Mn

(Picture source: Internet / social media)