02163. ನೆನಪು : ಎರಡು ಕವಿತೆಗಳು


02163. ನೆನಪು : ಎರಡು ಕವಿತೆಗಳು
==================

01. ಕಾಡಬೇಡಿ
_______________

ಕಾಡಬೇಡಿ ಮತ್ತೆ
ಖೇಡಿ ನೆನಪುಗಳೆ
ನೆರೆದೇನು ಸುತ್ತ ಫಲ ?
ಸಂತೆಯಲಿದ್ದು ಒಬ್ಬಂಟಿ..

ನೆಪ ಹಿಡಿದ ನೆನಪು
ಚಟವಾಗಿ ಒನಪು
ಇಡಿಯಾಗಿ ನುಂಗುತ
ಕಬಳಿಸುವ ಸನ್ನಾಹ..

ಭೂತಗಳೆ ಭವಿತ
ನುಂಗುತಾ ಪ್ರಸ್ತುತ
ಮುಗಿಸಿಬಿಡೆ ಬದುಕ
ಮಿಕ್ಕಿದ್ದೇನು ಜೀವನ ?

ದಮ್ಮಿದ್ದರೇ ನಿಮಗೆ
ಹಾಕಿ ನೋವಡಿಪಾಯ
ಕಟ್ಟಿ ಮಹಲು ಸ್ಮಾರಕ
ಬಿತ್ತಿ ಬೆಳೆಯುತ ಹಸಿರ..

ಕರೆದುಕೊಳ್ಳದೆ ನೋವ
ಸುಖವ ನೆನೆಯಲಿ ಜೀವ
ಕರಗಲಿ ಪದರ ಚದರ
ನೋವಿನಸಲು ಬಡ್ಡಿ ಸಾಲ !

– ನಾಗೇಶ ಮೈಸೂರು

02. ಕಾಡುತಾವ ನೆನಪು
______________________

ಕಾಡುತಾವ ನೆನಪು..
ಆಡಾಡುತಾವ, ಕಲಕಿ ಕೆದಕಿ.
ಜಾಡು ಹಿಡಿದು ನಡೆದಷ್ಟೂ ದೂರ
ದೂರು ದುಃಖ ದುಮ್ಮಾನ ಸಾಹುಕಾರ..

ಮಲ್ಲೆ ಮೊಲ್ಲೆ ಗೊಂಚಲು ;
ಬರಿ ಬಿಡಿ ಹೂವ-ನಲ್ಲೆ ಹಂಚಿ
ಒಂದೊಂದೆ ಮೊಗ್ಗು, ಅರಳಿ ಹಿಗ್ಗು
ಯಾಕೊ ಮತ್ತೆ ಬಾಡಿ, ಹೊಸತಿಗೆ ಸರದಿ..

ಹೂವು ಮುಳ್ಳು ಜತೆಯಾಟ;
ಪಕ್ಕದಲ್ಲಿರೆ ಚುಚ್ಚದು ತನ್ನ ತಾನೆ !
ಕಿಲಾಡಿ ದಳಗಳು ನೆನಪಾಗದು ಮತ್ತೆ
ತೊಟ್ಟಲಿದ್ದ ಮೊನೆ, ತಿವಿಯುವಾ ಸತತ..

ಕಲೆಯಂತೆ ಉಳಿದ ನೆನಪು;
ಕಲೆಯಾಗಿ ಉಲಿಯುತ ಸಂಧಾನ..
ರೂಪಾಂತರದಲಿದ್ದರು ಅಜಗಜಾಂತರ
ನೆನಪ ಮರೆಸಲು, ಮತ್ತೊಂದರ ಸವಾರಿ !

– ನಾಗೇಶ ಮೈಸೂರು

(Picture Source: http://reconstellation.com/transforming-memories/)