00779. ವಿಸರ್ಜಿಸೆ ಅಸಹಾಯಕತೆ, ಏಕಾಂತದೆ ಪ್ರಬುದ್ಧತೆ..


00779. ವಿಸರ್ಜಿಸೆ ಅಸಹಾಯಕತೆ, ಏಕಾಂತದೆ ಪ್ರಬುದ್ಧತೆ..
___________________________________________


ಒಬ್ಬಂಟಿಯೆಂದೆಕೊ ವಿಲಪಿಸುವೆ ?
ದಾರಿ ಕಾಣದವನಂತೆ ಕಂಗೆಟ್ಟು ತಪಿಸುವೆ ?
ಒಂಟಿತನ ಏಕಾಂಗಿತನಕಿಂತ ಕೆಟ್ಟದು – ಅಸಹಾಯಕತೆ
ಏಕಾಂತ ಬೇಕೆಂದು ಹಪಹಪಿಸಿದರು ಸಿಗದು, ಧೂರ್ತ ಮಾಯೆ ..

ನಿಜವಿರಬಹುದು ಬಿಟ್ಟು ಹೋದ ಸಖ್ಯ
ಸರಿ ತಪ್ಪು ವಿಷಾದ ಖೇದ ಕ್ರೋಧಾಪರಾಧ
ಹೋಗಲೆಂದು ಹೊರಟ ಮೇಲೆಲ್ಲ ನೆಪ ಕುಣಿಕೆ ಗಾಳ
ಎಣಿಸಲೇಕೊ ಮೂಢ, ಜಗದನ್ನ್ಯಾಯ ಬಿದ್ದಂತೆ ನಿನ್ನ ಬುಡದೇ ?

ದೂರವಾದದ್ದಕ್ಕಿಂತಲು ದೂರವೆನ್ನೊ ಭಾವ
ಕಾಡುವ ಮಾಯಾಜಾಲ, ದೂರವೇನಲ್ಲ ಯಾತನೆ
ಯಾತನೆಯ ಭಾವದ ಗಳಿಕೆ, ಘಾಸಿಯಾಗೋ ಅಹಮಿಕೆಗೆ
ಒಬ್ಬಂಟಿತನ ಸವರೋ ಗಾಯದುಪ್ಪು, ಬದಲಿಸಿಕೊ ಏಕಾಂತಕೆ..

ಬರೆದುಬಿಡೆಲ್ಲ ಆಲಾಪ ವಿಲಾಪ ಪ್ರಲಾಪ ಮೊತ್ತ
ಕಥೆ ಕವನ ಪೀಡನೆಗಳಾಗಲಿ ಪುಟದಕ್ಷರದಲಿ ವಿಶ್ರಾಂತ
ಮಿಕ್ಕುವುದಾಗ ಶಾಂತ ಮನದಲಿ ಹುಡುಕು ಏಕಾಂತದ ನೆಲೆ
ನೀನೆನಲ್ಲ ಅಸಹಾಯಕ ಬದುಕಿತ್ತು ಮೊದಲೂ, ಬೇರಾಗೊ ಮೊದಲು..

ಕಟ್ಟಿಕೊಟ್ಟಿದ್ದು ಅನುಭವ ತುಲನೆಯಾಗಲಿ ಸುತ್ತ
ಯಾವುದಿತ್ತು ಸರಿ ತಪ್ಪು ಮನವರಿಕೆಯಾಗಿ ಸಮಚಿತ್ತ
ಅಸಹಾಯಕ ಕ್ಷಣವದು ನೀನಲ್ಲ, ನಿನ್ನರಿವೆ ಗುರುವಾಗುತ
ಮೇಲೆದ್ದು ಬಾ ಏಕಾಂತದ ಸಮಾಧಿಯಿಂದೆದ್ದು ಮತ್ತದೇ ಬದುಕಿಗೆ..

– ನಾಗೇಶ ಮೈಸೂರು

(Picture source : https://en.m.wikipedia.org/wiki/File:Thoma_Loneliness.jpg)