01346. ನನ್ನ ತನು ಕಣ ಕಣದಿ..


01346. ನನ್ನ ತನು ಕಣ ಕಣದಿ..
____________________________


ನನ್ನ ತನು ಕಣಕಣದಿ
ಜಿಗಿದಾಡುತಿಹ ಸೂಕ್ಷ್ಮಾಶ್ವ
ದೇಕದಿರು ದಣಿಯದಿರು ಕೊನೆಯವರೆಗೆ..
ಅಡಿಗಡಿಗೆ ಪುಟಿಪುಟಿದು
ಖುರಪುಟದ ದನಿ ತೆರೆದು
ನಡೆಸೆನ್ನ ಸ್ಥೂಲಕಾಯವನು ಅವನೆಡೆಗೆ ||

ಸೂಕ್ಷ್ಮಗಳ ಪೇರಿಸುತ ಕಟ್ಟಿದಾ ಕೋಟೆಯಿದು
ಸ್ಥೂಲದನಾವರಣದಲಿ ಕಾಡಿ ಫಲಿತ
ನೀನಾಗೆ ಸಮಚಿತ್ತ ಕಣ
ವಿಸ್ತರಿಸುತದನೆ ಅನುರಣ
ಒಂದಾಗಬಹುದಾಗ ಸೂಕ್ಷ್ಮ ಸ್ಥೂಲದ ಸೂತ್ರ
ಒಳಗು ಹೊರಗೆಲ್ಲ ಪರಿಣಮಿಸುತೊಂದೆ ಪಾತ್ರ || ನನ್ನ ||

ಹೆಸರನಿಡಲೇನು ಪ್ರತಿಯೊಂದು ಅಂಗಾಂಗಕು
ಕಣದೊಗಟನೊಡೆಯಲದು ಅದದೆ ವಿನ್ಯಾಸ
ಇಂದ್ರೀಯ ಕರ್ಮೇಂದ್ರಿಯ ಭೌತಿಕತೆ ತೊಗಲು
ಅಂತಃಕರಣದ ಮೇಳ ಅಲೌಕಿಕತೆ ಬಗಲು
ಎಲ್ಲದರೊಳಗೊಂದಾಗು ಏಕರೂಪ
ಕಾಡುವಾ ಮಾಯೆಗು ಸ್ಪುರಿಸಿ ಸಂತಾಪ || ನನ್ನ ||

ನಿಲ್ಲದಿರು ಓಡುತಿರು ಚದುರಾಶ್ವ ನಿರಂತರ
ಪಾರದರ್ಶಕ ನಡಿಗೆ ನನದಾಗಿಸುವವಸರ
ಇಹವಿರಲಿ ಪರವಿರಲಿ ಗುರಿ
ನೈತಿಕತೆ ನಿಜಾಯತಿ ದಾರಿ
ಸಾರ ಸೃಷ್ಟಿಯ ಕುಸುರಿಯದ್ಭುತದ ನಿದರ್ಶನ
ಅದರೊಂದು ತುಣುಕು ನಾನಾಗುತದರ ಭ್ರೂಣ || ನನ್ನ ||

– ನಾಗೇಶ ಮೈಸೂರು
(Nagesha Mn)

(Picture source: This work is licensed under a Creative Commons Attribution 3.0 Unported License)

00670. ನಾನೆಂಬ ಕಣರೂಪಿ ಮೊತ್ತ


00670. ನಾನೆಂಬ ಕಣರೂಪಿ ಮೊತ್ತ
_________________________


(Picture source: https://en.m.wikipedia.org/wiki/File:Helium_atom_QM.svg)

ನಾನೆಂಬ ಕಣರೂಪಿ ಮೊತ್ತ
ಅಣುಅಣು ಕಣವಾದ ಸಮಷ್ಟಿ
ನೋಡೀ ಅಚ್ಚರಿ ಜಗ ನಿಯಮ
ಕೈ ಕಾಲು ಮನ ಹೃದಯ ಸಂಗಮ !

ಯಾರೋ ಕಲಸಿಟ್ಟನ್ನ ಸೊಬಗು
ಯಾವ ಸಂಭ್ರಮದ ಬೆಡಗು ಬಸಿದು
ಸೋಸಿ ಬಗ್ಗಡ ಬೆರೆಸೋ ಮದ್ದೇನೊ ಕಾಣೆ
ಜೀವ ರೂಪಲಿ ಭೌತಿಕ ಲೌಕಿಕ ಜಾಗರಣೆ !

ಅಲೌಕಿಕ ಅಭೌತಿಕ ಒಳಗಿಟ್ಟ ಗುಟ್ಟು
ಅಂತರಂಗ ಬಹಿರಂಗದ ಒಗಟಲಿ ಹೊಸೆದು
ಕುಣಿಸೊ ಕುಣಿದಾಡಿಸೊ ಒಳಗ ಹೊರಗಣ ಜಾಲ
ಇದ್ದೂ ಇರದಂತೆ ಕಡಿವಾಣ ಬಡಿದಾಟದ ಕಾಲ !

ಕದನ ಕುತೂಹಲ ಮನ ಒಂದೇ ಏನು ಪ್ರತಿ ಕಣ ?
ಜೀವ ನಿರ್ಜೀವ ರೂಪದ ವಿಶ್ವ ಸಮಗ್ರತೆ ಪಾಕ
ನಾನಾರು, ನಾನೆಲ್ಲಿ ನೀಲಿ ಗಗನದ ನೀಲಿ ಕೆಂಪು ಮಣ್ಣಲ್ಲಿ ?
ಹಾರುವ ಹಕ್ಕಿ ಬಿಚ್ಚಿದ ರೆಕ್ಕೆ ಒಳಗೇನೊ ಬಿಡಿಸದ ಒಗಟಲ್ಲಿ..

ಹೊರಟ ಯಾತ್ರೆ ಹುಡುಕಾಟ ಕಣಕೂಟದ ಜಂಜಾಟ
ಪ್ರತಿ ಕಣದ ಗಮನ ಎತ್ತಲೋ, ಒಂದಾಗಿಸೊ ಕಸರತ್ತಲಿ
ಒಂದಾಗುವುದೆ ನಾನು, ನಾನೆಂಬ ಅಪರಿಚಿತ ಅತಿಥಿ
ನನ್ನರಿವಾಗಿಸಿ ನನ್ನನ್ನೆ, ಬಿಡಿಸಿಟ್ಟು ತೊಳೆಯಂತೆ ಮುಕುತಿ..

– ನಾಗೇಶ ಮೈಸೂರು