01609. ಆಸೆಯ ಕಥೆ..


01609. ಆಸೆಯ ಕಥೆ..

______________________

ನಮ್ಮ ಆಸೆಯೆಷ್ಟು ಭಾರ ?

ಬರಿ ಕನಸಿನಷ್ಟು ಹಗುರ !

ಅದು ಇರುವುದೆಷ್ಟು ದೂರ ?

ಬರಿ ನಿದಿರೆಯಷ್ಟು ಹತ್ತಿರ ! || ೦೧ ||

ಹೊರಬೇಕೇನು ಮಣಭಾರ ?

ಹೊರಲಿಲ್ಲವಲ್ಲ ಅದಕೆ ಗಾತ್ರ..

ಅದರುದ್ದ ಅಗಲ ಲೆಕ್ಕಾಚಾರ ?

ಶೂನ್ಯಗುರುತ್ವ ಅದರ ಸಹಚರ ! || ೦೨ ||

ಸಾಕೇನಷ್ಟು ಪುಟ್ಟದಿರೆ ಆಸೆ ?

ಯಾರೆಂದರದ ಸಣ್ಣದೆಂದು..

ಮತ್ತೆ ಹೇಗದರ ಭೌತಿಕಾ ಅದೃಶ್ಯ ?

ಶೂನ್ಯಕಿಟ್ಟಶೂನ್ಯ ಅನಂತದನಂತ || ೦೩ ||

ಸೋಜಿಗವಿದನೆಂತು ನಾ ವಿವರಿಸೇನು ?

ಆದಿ ಅಂತ್ಯವಿಲ್ಲವದೆ ಆಸೆ ಕಾನೂನು..

ಪುಂಖಾನುಪುಂಖ ಸ್ಪೋಟವಿರದೇನು ?

ಇತಿಮಿತಿ ಇರದಲ್ಲ ಆಸೆಯ ಥಾನು ! || ೦೪ ||

ಕಾಣದ್ದು ಕಣ್ಣಿಗೆ ಬಣ್ಣವಿಲ್ಲ ರುಚಿಯಿಲ್ಲ..

ತೂಕವಿಲ್ಲದೆಯು ಭಾರ ಹೊತ್ತರೆ ಕಲ್ಲ !

ಬಂದರೆಬರಲಿ ಆಸೆ ಹೂವಿನಾ ಗಂಧ

ಆಘ್ರಾಣಿಸಿ ತಣಿಸು ದುರಾಸೆ ದುರ್ಗಂಧ || ೦೫ ||

– ನಾಗೇಶ ಮೈಸೂರು

೧೮.೦೨.೨೦೧೮

(Nagesha Mn)

ಚಿತ್ರ: ಸ್ವಯಂಕೃತಾಪರಾಧ (ಮೊಬೈಲ್ ಕ್ಲಿಕ್)

01384. ಸೂಜಿ ದಾರದ ಕಥೆ..


01384. ಸೂಜಿ ದಾರದ ಕಥೆ..
_________________________


ನೀ ಸೂಜಿ ನಾ ದಾರ
ಯಾರೋ ನಮ್ಮ ಪೋಣಿಸಿದವರು ?
ನೋಡು ಬಾಳ ಹರಿದ ಬಟ್ಟೆ
ನಾವು ಹಚ್ಚಿದ ತೇಪೆ ಸುಂದರ ಚಿತ್ತಾರ ! ||

ನೀನೆಲ್ಲೊ ಬಿದ್ದಿದ್ದ ಸೂಜಿ
ಒಂಟಿ ಕಣ್ಣಲ್ಲೆ ಮಾಡಿದ್ದೆ ಮೋಡಿ
ನಾನೆಲ್ಲೊ ಬಿದ್ದಿದ್ದೆ ಅನಾಥ
ಕುರುಡು ದಾರ ಕಣ್ಣಾದೆ ಜೋಡಿ ||

ನಿಜ ನಾ ಖರ್ಚಾಗುವ ದಾರ
ಆಗೀಗೊಮ್ಮೆ ದೂರಾದರು ದೂರಿ
ಮುನಿಸಿ ಕಣ್ತಪ್ಪಿಸಿ ಹುಡುಗಾಟ
ಮತ್ತೆ ಮಡಿಲಲಿ ತೂರಿ ನಿರಾಳ ||

ನೋಡಿದೆಯಾ ವಿಚಿತ್ರ ಸತ್ಯ?
ನೀನದೆ ಜಡ ಸೂಜಿ ಸ್ಥಿರ ಪುರುಷ
ನಾ ಅಸ್ಥಿರ ಚಂಚಲ ಪ್ರಕೃತಿ
ನಿರಂತರ ಬದಲಾಗುವದೇ ಸೂತ್ರ ||

ಪ್ರಕೃತಿ ಪುರುಷದಾಟ ಎಲ್ಲೆಡೆ
ಸೂಜಿ ದಾರ ವಸ್ತ್ರ ಬಂಧಿಸುವಾಟ
ಸಹಬಾಳುವೆಯಿರೆ ಸಮರಸ
ದಾರವಿಲ್ಲದ ಸೂಜಿ ಅನಾಥ ಪ್ರೇತ ||


– ನಾಗೇಶ ಮೈಸೂರು
(Nagesha Mn)

(Picture 1: https://thenounproject.com/term/needle-and-thread/
Picture 2: Internet / social media)

01382. ಬಾಟಲಿ-ಮದ್ಯದ ಕಥೆ…


01382. ಬಾಟಲಿ-ಮದ್ಯದ ಕಥೆ…
_____________________________


ಅವನ ಕೈಯಲಿ ನಾನು ಬಾಟಲಿ
ತಿರುಗಿಸಿಬಿಟ್ಟ ತಲೆ ಬಿರಡೆ ತರ…
ಬಾಟಲಿಯೊಳಗಿನ ಮದಿರೆ ಕುಡಿಸಿ
ಮತ್ತೇರಿಸಿಬಿಟ್ಟ ಹುಚ್ಚು ಕುದುರೆ ಸ್ವರ ||

ಜತೆ ಕುದುರಿಸಿಬಿಟ್ಟ ಕಥೆ ಕಾವ್ಯ ಕಟ್ಟಿ
ಕುಡಿಸಿದಾ ಮಾತಲೆ ಮದಿರೆ ಗಮ್ಮತ್ತು
ಹೊಗಳಿದನೊ ನಟಿಸಿದನೊ ಎಲ್ಲಾ ಮಂಪರು
ಎಚ್ಚೆತ್ತುಕೊಳ್ಳುವ ಹೊತ್ತಿಗೆ ನಾನಾಗಿಲ್ಲ ನಾನು ||

ಮರೆಸಿಬಿಟ್ಟ ಹುಟ್ಟು-ಮನೆ-ಮಠದ ಔದಾರ್ಯ
ತೆರೆದಿಟ್ಟನೇನೊ ಒಳಗೆಲ್ಲಾ ಪುಳಕ ಜ್ವರ ತರ
ಅದದ್ದಾಗಲಿ ಬಿಡು ಎನಿಸೊ ಭಂಡ ಮಾಯಾಜಾಲ
ಮಾರ್ಜಾಲವೊ ಮಾಧುರ್ಯವೊ ಎಲ್ಲಾ ಅಯೋಮಯ! ||

ಕುಡಿದಷ್ಟೂ ಮತ್ತು, ತಲೆ ತಿರುತಿರುಗಿ ಸುತ್ತು
ನೆಟ್ಟಗಾಗುವ ಮೊದಲೆ ಹೊಸ ಮದಿರೆ ಮತ್ತಷ್ಟು
ಎಚ್ಚೆತ್ತುಕೊಳ್ಳಲಾಸೆ, ಎಚ್ಚರಕೆ ಬಿಡದಾ ಪ್ರಲೋಭನೆ
ಹಾಳು ವಯಸಿನ ಗಮಕ, ತುಸುತುಸುವೆ ಪ್ರಚೋದನೆ ||

ಮದಿರೆ ಹಳತಾಗಿ ಬಾಟಲಿಯೂ ಬರಿ ಮಂಕು
ತಿರುಗಿಸಲೊಲ್ಲದ ಮನಸ ಪೀಡಿಸುವ ಚೀತ್ಕಾರ
ಘಮಗುಟ್ಟುತಿದ್ದ ಭಾವನೆ ಪೆಟ್ಟಿಗೆಯಲೆ ಕೊಳೆದಿದೆ
ಹಳೆ ಬಾಟಲಿನ ಬಿನ್ನಾಣ ಗಣಿಸುವರಿಲ್ಲ ಕೊರಗ ||

– ನಾಗೇಶ ಮೈಸೂರು
(Nagesha Mn)

(picture source from internet : https://www.google.com.sg/search?q=girl+inside+wine+bottle&prmd=ivn&source=lnms&tbm=isch&sa=X&ved=0ahUKEwjmi8HX8uDWAhXBf7wKHdsJA0MQ_AUIESgB&biw=375&bih=553#imgrc=RSQ6PRHg_ICTeM:)

02162. ಇಳೆ ಮಳೆ ಕಥೆ


02162. ಇಳೆ ಮಳೆ ಕಥೆ
________________________

ಮಳೆ ಮಾತಾಡಿತು
ಇಳೆಯ ಜತೆ ಸಮನೆ
ಲೆಕ್ಕಿಸಬೇಡವೆ ಇನಿತೂ ?
ಹಳ್ಳ ಕೊಳ್ಳ ಹೊಂಡದ ಕಥೆ !

ಇಳೆ ಮಳೆ ಹೆಣ್ಣೆರಡು
ಇಜ್ಜೋಡಿನ ಸಂಭಾಷಣೆ
ಎರಚಾಟಾ ಅರಚಾಟಾ ಆಟ
ಇರಬಹುದಪರೂಪದ ಭೇಟಿ !

ಕಾರುವವಳವಳು ಇಳೆಗೆ
ಮಳೆ ಹೀರುವವಳು ಕೆಳಗೆ
ಇವರಿಬ್ಬರ ತಾಳಮೇಳ ಜಿದ್ದಿಗೆ
ದೈನಂದಿನವಾಗದಿರಲಿ ಕೊರಗು !

ಕೊಟ್ಟುಕೊಳ್ಳುವರವರು
ಕೆಟ್ಟರೆ ತಪಿಸುವರು ಜನರು
ಹಾದಿ ಬೀದಿ ನಡಿಗೆ ತೇಲಾಡಿಸೆ
ಕೊಚ್ಚಿ ಹೋಗುವ ಸಹನೆ ದುಮ್ಮಾನ !

ನೀವಿಬ್ಬರು ಮಾತೆಯರು
ಭುವಿಯಾಗಸ ಬೆಸೆದ ಬಂಧ
ನಿಮ್ಮಲಿರೆ ಹೊಂದಾಣಿಕೆ ಸತತ
ಪಾಮರರ ಜಗದಲಿ ಬದುಕೆ ಚಂದ !

– ನಾಗೇಶ ಮೈಸೂರು
(Picture source : internet / social media)

02155. ಮಾತು ಮುತ್ತಾದ ಕಥೆ


02155. ಮಾತು ಮುತ್ತಾದ ಕಥೆ
_____________________________

ನಿನ್ನಧರಗಳದುರುತಲಿ
ಉದುರಿಸುತಿದೆ ಮುತ್ತು
ಹೆಕ್ಕಲೆಂದೇ ಬಾಗಿದರು
ದಕ್ಕದೆ ಹೋಯ್ತೆ ಅಡಿಗಡಿಗೆ !

ನಿನ್ನ ಮಾತಾಗಿ ಹರಿದ ಸುಧೆ
ತುಟಿ ಸಿಹಿಯಲದ್ಧಿ ತೆಗೆದಂತೆ
ಜುಳುಜುಳು ಮಂಜುಳ ಗಾನ
ಬೊಗಸೆಯೊಡ್ಡಿಯೂ ತುಂಬಲಿಲ್ಲ..!

ಅರಿವಾಗಲೊಲ್ಲದು ಏನೊಂದೂ
ತುಟಿಯಲುಗಾಟದಲಿ ಮಿಂಚು
ಸುಳಿದಂತೆ ಮಾಯಾ ಗಾಂಭೀರ್ಯ
ಮತ್ತೆ ಕಾತರದಿ ಕಾಯುವ ತಪನೆ..

ಕಾದು ಬಾಯಾರಿ ಯಾತನೆ
ಏನೇನೆಲ್ಲಾ ಹುನ್ನಾರ ಕಾಡಿದೆ ?
ಕೊನೆಗೂ ಹೆಣಗಾಡಿಸಿ ಸಿಕ್ಕಳು ಮೊತ್ತ
ಕೊಟ್ಟು ಮೊದಲ ಮುತ್ತ, ಲಾಲಿಸುತ !

ಮೊದಲ ಚುಂಬನ ಸ್ಪಂದನದೆ
ಕಾಣದ ಹೃದಯ ಸ್ತಂಭನವಿತ್ತೆ
ಮಾತಿಲ್ಲದ ಮಧುರ ಸವಿ ಕವಿತೆ
ಅದ ಬಣ್ಣಿಸಲೆಂತೇ ? ಬರಿದೇ ಮಾತೆ !

ಲಾಲನೆ ಪಾಲನೆ ಪೋಷಣೆ
ಈಗ ಬದುಕಾಗಿ ಹೋಗಿದೆ ಪ್ರೀತಿ
ಬವಣೆ ನಡುವೆ ಅದೇ ಮತ್ತು
ಇದು ತಾನೇ ಬದುಕುವ ರೀತಿ ?

– ನಾಗೇಶ ಮೈಸೂರು

(Picture source: internet / social media)

02095. ನಾವು ನೀವು ಅವರ ಕಥೆ..


02095. ನಾವು ನೀವು ಅವರ ಕಥೆ..
_________________________


ಸರಸರಸರ
ಬುರಬುರಬುರನೆ
ಬೆಳೆದುಬಿಟ್ಟವಲ್ಲೋ ಐಕಳು
ನಿನ್ನೆ ಮೊನ್ನೆ ಚಿಕ್ಕಿಗಳು !

ಪುಸಕ್ಕೆಂದು ಮೊಳಕೆಯಾಗಿ
ಗಿಡವೆದ್ದಾಗ ಭುವಿಯೆದೆ ಸೀಳಿ
ಬೆಳೆವ ನೋವೆಂದು ಅಳಲಿಲ್ಲ ಇಳೆ
ಭರಿಸಿದ ಬೇರು ಮರದೆತ್ತರಕು !


ಎದೆಯೆತ್ತರಕು ಬೆಳೆದವಲ್ಲೊ
ಅನ್ನುವ ಮೊದಲೇ ತಲೆಯೆತ್ತರ
ಬೆಳೆದ ಮರ ಫಲ ತಲೆಯೆತ್ತಿ ಹೆಮ್ಮೆ
ನೋಟದ ಸಂತೃಪ್ತಿ ನಮದೇ ಸೃಷ್ಟಿ !

ಎದುರಾಡುತಾ ಎಗರಾಡುತಾ
ದಾಟಿ ಲಕ್ಷ್ಮಣ ರೇಖೆಯ ಗೀಟು
ಎದುರುತ್ತರ ಕೊಟ್ಟ ಯಾತನೆ
ಪ್ರೀತಿ ಪ್ರೇಮ ಮಮತೆಯ ಹೊನಲು !


ಸರಸರ ಹಚ್ಚಿಕೊಂಡು ಹಚ್ಚೆ
ಕೈಗೊಂದು ಕಂಕುಳಿಗೊಂದು ಹೊತ್ತಾಗ
ನಮ್ಮದಾಯ್ತು ನಿಮ್ಮ ಸರದಿ
ಚಿಗುರೊಡನಾಡುವ ಬೇರಿನ ಪರಿಧಿ !

– ನಾಗೇಶ ಮೈಸೂರು
೦೪.೦೭.೨೦೧೭
(Picture source : internet / social media)

00967. ಹಣತೆಯ ಕಥೆ


00967. ಹಣತೆಯ ಕಥೆ
________________________________


ಶತಶತಮಾನಗಳಿಂದ ಉರಿದಿವೆ ನೋಡಲ್ಲಿ ಹಣತೆ
ತಾರೆಗಳೂರಿನ ಸಂತೆ ಆರಿದ್ದಾದರೂ ಎಂದು ?
ಬತ್ತದ ಶಕ್ತಿಯ ತೇಜ ಬರಿದಾದರೂ ಕುಸಿದು
ತಂದಿರಿಸಿ ಮತ್ತೊಂದು ಸಮತೆ ಕಾಯ್ದ ವಿಶ್ವ ಚಿತ್ತ

ಅದೇ ಬೆಳಕು ಅದೇ ತತ್ವ ಮೂಲ ಬೆಳಕಿನ ಸತ್ವ
ಹರಿದು ಬಂದ ಧಾರೆ ಕೋಟಿ ಯೋಜನ ದಾಟಿ
ತಲುಪುವ ಹೊತ್ತಿಗದು ಇದೆಯೊ ಇಲ್ಲವೊ ಶಂಕೆ
ಸೃಷ್ಟಿಯಾಟವದು ಮಂಕೆ ಮಂಕಾದರು ಅರಿಯೆ ತಡ

ಹಿಂಬಾಲಿಸಿ ಅನುಕರಿಸಿ ಶೋಧಿಸಿ ಸಂಶೋಧಿಸಿ
ಕಂಡುಕೊಂಡ ಸತ್ಯ ಹಿಮಗಲ್ಲಿನ ತುದಿಯ ತುಣುಕು
ಸಾಗರದಗಲದ ವಿಸ್ತಾರ ಕೈಗೆಟುಕಿದ್ದು ಹನಿ ದಾರ
ಪೋಣಿಸಬೇಕಿದೆ ಇನ್ನು ಯುಗ ಯುಗಾಂತರ ಕಾಲ

ಗೂಢ ನಿಗೂಢಗಳೆಲ್ಲ ಕಾಡುತಲಿ ಮನುಜ ಸ್ಮೃತಿಯ
ಬೆಂಬಿಡದೆ ಬೆನ್ನಟ್ಟಿವೆ ಕುತೂಹಲ ಕೌತುಕ ಸಾಲಾಗಿ
ಎಲ್ಲೊ ಹೆಕ್ಕಿದ ಚೂರು ಇನ್ನೆಲ್ಲೊ ಕಂಡ ಹನಿ ತುಣುಕು
ಜೋಡಿಸೆ ಪದಬಂಧವಾಗುತಿದೆ ಹವಣಿಕೆಗಳೆ ಬದುಕು..

ತತ್ವ ಸತ್ಯಗಳೆಲ್ಲ ನಿತ್ಯ ಹಣತೆಗಳಾಗಿ ಬೆಳಗುತಿವೆಯಿಲ್ಲಿ
ದಾಟಿ ಬಂದ ಕಾಲ ಅದೆ ಬೆಳಕು ಅದೆ ಕತ್ತಲ ಜಾಲ
ಅರಿವ ಮನಸುಗಳಿಗದುವೆ ವಿಸ್ಮಯದ ಸಾಯಂಕಾಲ
ಅದಕೆ ಹಚ್ಚುತಲಿವೆ ಹಣತೆ ಮತ್ತೊಂದಕೆ ದಾಟಿಸಿ ಬೆಳಕ

– ನಾಗೇಶ ಮೈಸೂರು
31.10.2016
(Picture from : deepavali lamps picture)