01745. ಕನ್ನಡ ತಾಯೆ, ನೀಡೆ ಭಿಕ್ಷೆ..


01745. ಕನ್ನಡ ತಾಯೆ, ನೀಡೆ ಭಿಕ್ಷೆ..

_________________________________

ನೀಡು ಭಿಕ್ಷವ ತಾಯಿ ನೀಡು ಮಾತೆ ಭಿಕ್ಷ

ಅನ್ನ ಬೇಡೆನು ಮಾಡು ಕನ್ನಡವ ಸುಭೀಕ್ಷ

ತಪ ಜಪದ ಹಂಗಿರದೆ ನೀಡಮ್ಮ ಮೋಕ್ಷ

ದೊರಕುವಂತಿರಲಿ ನಿನ್ನ ಕರುಣಾ ಕಟಾಕ್ಷ ||

ಮಾತಾಳಿ ವಾಚಾಳಿ ಮನಸಾರೆ ನುಡಿವ

ಪರಭಾಷೆಯ ಚಾಳಿ ಅಮ್ಮನಾ ಕೊಲುವ

ಮಾತಾಟದಲಿ ಬೇಕೆ ಪರಕೀಯತೆ ಹಂಗು ?

ಮರೆತರೂ ಸರಿಯೆ ಮಾವು ಹಲಸು ತೆಂಗು ? ||

ಇತಿಹಾಸ ಚರಿತೆಯಲಿ ಅಮರವಾಗಿಸಿದೆ

ಅಷ್ಟ ದಿಗ್ಗಜರಂತೆ ಜ್ಞಾನಪೀಠ ಕರುಣಿಸಿದೆ

ಹಲ್ಮಿಡಿ ಶಾಸನ ನಲ್ನುಡಿ ದಾಸ ಶರಣತನ

ಪದ ವಚನ ಸಾಮಾನ್ಯನಧಿಗಮಿಸೆ ಅಜ್ಞಾನ ||

ನವಿರಲಿ ನಯ ನುಡಿ ಕನ್ನಡಿಗರೆದೆಗೆ ಶಿಖರ

ಕುಸುಮ ಪೋಣಿತ ಹಾರ ಸುಂದರಾ ಅಕ್ಷರ

ಹಿರಿಮೆ ಪಡಲೆನಿತಿದೆಯೊ ಅಗಣಿತ ಕೋಟಿ

ಸುಮ್ಮನಿಹನೇಕೊ ಕಂದ ಆದಾಗಲೂ ಲೂಟಿ ? ||

ಎಚ್ಚರಿಸಬೇಕೇಕೊ ಮುಚ್ಚಳಿಕೆ ಬರೆದುಕೊಡು

ಎಚ್ಚರ ತಪ್ಪದ ಕಟ್ಟೆಚ್ಚರದೆ ಕಾವಲು ಸೊಗಡು

ಮಲಗಲಿ ಹೆಮ್ಮೆಯಲವಳು ನೆಮ್ಮದಿ ನಿದಿರೆ

ನಮ್ಮ ಜೋಗುಳದಲಿ ಸ್ವಾವಲಂಬನೆ ಕುದುರೆ ||

– ನಾಗೇಶ ಮೈಸೂರು

೩೦.೦೫.೨೦೧೮

(Picture source: https://goo.gl/images/Kw2YLo)

01492. ಕನ್ನಡ ನಾಡು


01492. ಕನ್ನಡ ನಾಡು

___________________________

ಕನ್ನಡ ನಾಡಿಗೆ ಕನ್ನಡವೆ ಗಾರುಡಿ

ಧಮನಿ ಧಮನಿ ಹರಿದಾಡುವ ಹೊನ್ನುಡಿ

ನೆತ್ತರ ಕಣಕಣ ಬರೆದ ಮುನ್ನುಡಿ

ನರ ನಾಡಿಗಳಲಿ ಅನುರಣಿತ ಜೇನ ನುಡಿ || ಕನ್ನಡ ||

ಭುವನೇಶ್ವರಿ ತಾನಾಡುವ ಭಾಷೆ

ಕವಿಕಾವ್ಯ ಲಹರಿಯಲಿ ಮೆರೆದು ಪರಿಷೆ

ಆಡು ಮಾತೇನು ಬೌದ್ಧಿಕತೆ ಶುದ್ಧ

ಮಿಕ್ಕಿ ಮೂರು ಸಾವಿರ ವರ್ಷ ಪಕ್ವ ಪ್ರಬುದ್ಧ || ಕನ್ನಡ ||

ನಾಡೋಜರಾಳಿದ ಸಾಹಿತ್ಯಲೋಕ

ಪೀಳಿಗೆಯಿಂದ ಪೀಳಿಗೆಗೆ ದಾಟಿಸಿ ಬೆಳಕ

ನಿಂತ ನೀರಲ್ಲ ನಿರಂತರ ಹರಿವು

ಹಳೆ ನಡು ಹೊಸತಲಿ ಕನ್ನಡತನ ಗೆಲುವು || ಕನ್ನಡ ||

ಲಿಪಿಗಳಾ ರಾಣಿ ಮುತ್ತ ಜೋಡಿಸಿತೆ

ದುಂಡುಮಲ್ಲೆ ದಂಡೆ ಸಾಲಾಗಿ ರಾರಾಜಿಸಿತೆ

ಪೋಣಿಸಿ ಕನ್ನಡಿಗರ ಹೃದಯ ಭವ್ಯ

ಕನ್ನಡನಾಡಾಯ್ತೆ ಕನ್ನಡಿಗರೆದೆ ಬರೆದಾ ಕಾವ್ಯ || ಕನ್ನಡ ||

ನಾಡಭಾಷೆ ನಾಡು ಕಟ್ಟಿದ ಚಂದ

ಬೇಧ ಭಾವ ಮರೆಸಿ ಒಗ್ಗೂಡಿಸಿದ ಆನಂದ

ಕರುನಾಡ ಸೀಮೆ ಬೆಸೆದಾಯ್ತು ಏಕ

ಕನ್ನಡಮ್ಮನ ತೇರು ಎಳೆದಾಯ್ತು ಕರ್ನಾಟಕ || ಕನ್ನಡ ||

– ನಾಗೇಶ ಮೈಸೂರು

೨೦.೧೨.೨೦೧೭

02035. ಕಗ್ಗ ೫೮ ರ ಟಿಪ್ಪಣಿ ರೀಡೂ ಕನ್ನಡದಲ್ಲಿ…(ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!)


02035. ಕಗ್ಗ ೫೮ ರ ಟಿಪ್ಪಣಿ ರೀಡೂ ಕನ್ನಡದಲ್ಲಿ…(ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!)

http://kannada.readoo.in/2017/05/೫೮-ಸೌಮ್ಯ-ರೌದ್ರ-ಕೆಳೆಕೂಟಬೆ

01094. ಚಿನ್ನಾರಿ – ಮುತ್ತು – ಗಡಗಡ – ಕನ್ನಡ


01094. ಚಿನ್ನಾರಿ – ಮುತ್ತು – ಗಡಗಡ – ಕನ್ನಡ

ಚೆಂದದ ಚಿನ್ನಾರಿ ಹೆಂಡತಿಗೆ, ಬೇಕಂತೆ ಬರಿ ಚಿನ್ನದ ಒಡವೆಗಳೆ
ತುಟಿಮುತ್ತು ಸಾಲದು ಆಮಿಷ, ಕೇಳುತ್ತಾಳೆ ಮುತ್ತಿನ ಮಾಲೆ
ಯಾಕಪ್ಪ ನಡುಗುವೆ ಗಡಗಡ, ಪತಿರಾಯ ತಂದುಕೊ ಧೈರ್ಯ
ಹೊಗಳಿ ಓಲೈಸೆ ಕನ್ನಡ ಸತಿ, ಕರಗುವಳು ಸಡಿಲಿಸಿ ಪಟ್ಟಿಯ!

– ನಾಗೇಶ ಮೈಸೂರು
೨೩.೦೧.೨೦೧೭
chouchoupadi

(ಚಿನ್ನಾರಿ – ಮುತ್ತು – ಗಡಗಡ – ಕನ್ನಡ) (೨)

ಕೊಳ್ಳೋಣ ಅಪ್ಪಟ್ಟ ಚಿನ್ನಾರಿ, ಅಗ್ಗವಾಗಿದೆಯಂತೆ ರೇಟು !
ಮುತ್ತು ರತ್ನ ಹವಳ ವಜ್ರದಂತೆ ಏರಿಲ್ಲ ಬೆಲೆ ಸಗಟು 😻😍
ಗಡಗಡ ನಡುಗಿದ ಗಂಡ ಚಿಂತಿಸುತ ಪಾರಾಗೆ ಈ ಕುತ್ತು 😧
ಕನ್ನಡಕದೆ ನುಡಿದ ‘ಚಿಂತೆ ಬಿಡೀಗಲ್ಲ ನಮ್ಚಿನ್ನ ಮಾರೊ ಹೊತ್ತು!’

– ನಾಗೇಶ ಮೈಸೂರು
೨೩.೦೧.೨೦೧೭

00971. ಬಾ ಎಳೆಯುವ ಕನ್ನಡ ರಥ


00971. ಬಾ ಎಳೆಯುವ ಕನ್ನಡ ರಥ
_____________________


ಬಾ ಎಳೆಯುವ ವ್ರತ ಕನ್ನಡ ರಥ
ಇತಿಹಾಸದುಳಿ ಕೆತ್ತಿದ ಶಿಲಾರಥ
ಸಾಕಾರವಾಗೆ ಕಲ್ಪನೆ ಅಮೂರ್ತ
ಮೂರ್ತವಾಗಿ ಸಿರಿಗನ್ನಡ ಸಮರ್ಥ || ಬಾ ಎಳೆಯುವ ||

ಎಡಗೈಯೊ ಬಲದ ಕೈಯೊ
ಹಗ್ಗ ಕಟ್ಟಿ ಎಳೆಯುವ ಮೈಯೊ
ಕಾಲದ ಜತೆ ಹೆಜ್ಜೆ ಹಾಕಿ ಮತ್ತೆ
ನಡೆವ ಕನ್ನಡ ರಥ ಉರುಳಿಸುತ್ತೆ || ಬಾ ಎಳೆಯುವ ||

ತೇರಲ್ಲೊಳಗೆ ಭುವನೇಶ್ವರಿ ಮಾತೆ
ಕಟ್ಟು ಸೇವೆಗೆ ಕಂಕಣ ಭಾಗ್ಯದಾತೆ
ಮುಡಿಪಿಡು ಮನಸು ನುಡಿ ಕನ್ನಡ
ಮಾತಾಗುತಲಿರೆ ಕುಣಿತ ಮೋದ || ಬಾ ಎಳೆಯುವ ||

ಹಳೆಗನ್ನಡವಾಗುತ ನಡುಗನ್ನಡ
ಹೊಸಕನ್ನಡವಾಗಿ ನೆಲೆಸಿ ಗಾಢ
ತಾಯ್ನುಡಿಗೆ ತನು ಮನ ಅರಳೆ
ಬೆನ್ನಟ್ಟೆ ಬೇರೆ ಮುಜುಗರ ಮರುಳೆ || ಬಾ ಎಳೆಯುವ ||

ಬನ್ನಿ ಎಳೆಯುವ ಹಿರಿಕಿರಿ ಜೀವ
ತಾಯ್ಪಲ್ಲಕ್ಕಿಗೇಕೆ ಕಿರಿಕಿರಿ ಭಾವ
ಹೆಮ್ಮೆಯಾಗಿ ಹಗ್ಗ ಗರ್ವಕೆ ಬೇರು
ನಾವು ನಡೆದಲ್ಲೆಲ್ಲ ಕನ್ನಡ ತೇರು || ಬಾ ಎಳೆಯುವ ||

ಬೆಳಗಾವಿ ಮಂಡ್ಯ ಚಿಕ್ಕಬಳ್ಳಾಪುರ
ಕಲಬುರ್ಗಿ ಗದಗ ವಿಜಯಪುರ
ಧಾರವಾಡ ದಾವಣಗೆರೆ ರಾಯಚೂರು
ಉಡುಪಿ ಬೀದರ ಬೆಂಗಳೂರು || ಬಾ ಎಳೆಯುವ ||

ಕೊಪ್ಪಳ ಹಾಸನ ಕೋಲಾರ
ಬಳ್ಳಾರಿ ಕೊಡಗು ರಾಮನಗರ
ತುಮಕೂರು ಹಾಸನ ಹಾವೇರಿ
ಮೈಸೂರು ಶಿವಮೊಗ್ಗ ಯಾದಗಿರಿ || ಬಾ ಎಳೆಯುವ ||

ಚಿಕ್ಕಮಗಳೂರು ಉತ್ತರಕನ್ನಡ
ಬಾಗಲಕೋಟೆ ದಕ್ಷಿಣಕನ್ನಡ
ಚಾಮರಾಜನಗರ ಚಿತ್ರದುರ್ಗ
ಕನ್ನಡ ಜಿಲ್ಲೆ ಹೆಸರುಗಳಲೆ ಸ್ವರ್ಗ || ಬಾ ಎಳೆಯುವ ||

– ನಾಗೇಶ ಮೈಸೂರು

(ಚಿತ್ರ ಮೂಲ: ಕನ್ನಡ ಮೇಮ್ಸ್ ನ ಮೂಲಚಿತ್ರ ಪರಿಷ್ಕರಿಸಿದ್ದು )

00934. ಕನ್ನಡ ರಾಜ್ಯೋತ್ಸವ – 31 ದಿನ ಬಾಕಿ !


00934. ಕನ್ನಡ ರಾಜ್ಯೋತ್ಸವ – 31 ದಿನ ಬಾಕಿ !
______________________________


ನವೆಂಬರ ಒಂದು –
ಮುವ್ವತ್ತೊಂದೆ ದಿನ ಬಾಕಿ
ಏಳಿ ಎದ್ದೇಳಿ ಮೈ ಕೊಡವಿ
ಹಳದಿ ಕೆಂಪು ಕೈಗೆತ್ತಿಕೊಂಡು
ಬಣ್ಣ ಬಾವುಟ ಘೋಷಣೆ ಸದ್ದು.. ||

ಅರಿಶಿನ ಕುಂಕುಮ
ಹಳದಿ ಕೆಂಪು ಅಮಿತ
ದೇವಿ ಪೂಜೆಗವೆರಡೇ ಸಾಕು
ಅರ್ಚನೆ ಪ್ರಸಾದ ತೀರ್ಥ
ಪೂಜನೀಯ ಭಕ್ತಿಯ ಸರಕು ||

ಅರಿಶಿನ ದಿನಕರನಂತೆ
ಉದಯ ನಾಡಾಗಿ ಚೆಲುವು
ಮುತ್ತೈದೆಯ ಭಾಗ್ಯಕು ನೆಲೆ
ಹಚ್ಚಿದ ಹೆಣ್ಣು ಪೂಜನೀಯ
ಅದೆ ಗೌರವ ನೆಲೆ ಮನನೀಯ||

ನೆತ್ತರಂತೆ ಕುಂಕುಮ
ದುಷ್ಟ ದಮನ ದೇವಿ ಘನ
ನೊಸಲಿಗದೆ ಸುರಕ್ಷೆ ತಿಲಕ
ಭಾವಕೂ ಭಕ್ತಿಗೂ ಪುಳಕ
ಸಂಬಂಧಗಳ ಮನೋಧರ್ಮ ||

ಪೂಜನೀಯ ಸಂಕರ
ಪವಿತ್ರ ಮಿಲನ ದ್ವೈತ
ಕನ್ನಡ ಬಾವುಟ ಅದ್ವೈತ
ಭುವನೇಶ್ವರಿ ಪರಕಾಯ
ಕನ್ನಡ ನಾಡು ನುಡಿ ಧ್ಯೇಯ ||

– ನಾಗೇಶ ಮೈಸೂರು
01.10.2016
http://mba.ind.in/forum/karnataka-rajyotsava-images-21683.html

00931. ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..


00931. ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ..
________________________


ದೀಪ ಹಚ್ಚುವ ವೇಳೆ
ಧೂಪ ಹಾಕುವ ಸಮಯ
ಹೊತ್ತಿಸು ಊದಿನಕಡ್ಡಿ
ಬೆಳಗಿಸು ಮಂಗಳಾದಾರತಿ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||

ಜ್ವಾಜಾಲಮಾಲಾ ಬೆಳಗಲಿ
ಉಜ್ವಲ ಕಾಂತಿ ಹೊಮ್ಮಲಿ
ದಿಕ್ಕುದಿಕ್ಕುಗಳೆಡೆ ಪಸರಿಸಲಿ
ಕನ್ನಡ ಕಂಪ ಹೊತ್ತು ಮೆರೆಸಲಿ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||

ಜೊಳ್ಳೆಲ್ಲ ಉರಿದು ಹೋಗಲಿ
ಎಳ್ಳುಬತ್ತಿ ಹರಕೆ ತೀರಿಸಲಿ
ಪುಟಕ್ಕಿಟ್ಟ ಅಪರಂಜಿ ಹೇಮ
ಜಗಮಗಿಸಲಿ ಕನ್ನಡದ ಪ್ರೇಮ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||

ಕಿಚ್ಚುರಿಸಲಿ ನೀರಸ ನಿರ್ಲಿಪ್ತತೆ
ತುಡಿಸುತ್ತ ಹೃದಯದಲಾಪ್ತತೆ
ಉರಿದ್ಹೋಗಲಿ ಸಂಕೋಚ ಕೀಳರಿಮೆ
ತೊಲಗಿಸಲಿ ಸೌಜನ್ಯದ ಹುಸಿ ಸೀಮೆ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||

ಹಿಂದೆಂದಿಗಿಂತ ಇಂದು ಏ ಬಂಧು
ಅನಿವಾರ್ಯ ಒಗ್ಗೂಡಿಸೆ ಸುಸಿಂಧು
ಬಿಡು ಮತ ಜಾತಿ ಒಕ್ಕಲು ಪ್ರಾಂತ್ಯ
ಮಾಡಿಸುತೆಲ್ಲ ಬೇಧ ಭಾವಕೆ ಅಂತ್ಯ
ಕಿಚ್ಚು ಹಚ್ಚುವ ಬಾ ಕನ್ನಡ ಪ್ರೇಮಕೆ ||

– ನಾಗೇಶ ಮೈಸೂರು
30.09.2016
(Pictures source Internet / Facebook)