01508. ಬರೆಯಲೇಕೆ ಕವಿ, ಕವಿತೆ?


01508. ಬರೆಯಲೇಕೆ ಕವಿ, ಕವಿತೆ?

________________________________

ಕವಿಯೊಬ್ಬನ ಕವಿತೆ

ಜೀವಕೋಶದ ಮಾತೆ

ಮಾತಾಗಿ ಸೇರಿದ ಮಾತೆ

ಯಾರೊ ಕಾಣೆ ಹರಸುತೆ ||

ಪದ ಲಾಸ್ಯ ತುಸು ಹಾಸ್ಯ

ಜೀವಂತಿಕೆ ಭಾವದ ಮೋಹ

ಕೋಶದುತ್ಪನ್ನ ಜೀವದ ರಸ

ನಿಲದೇ ಹರಿದೆಲ್ಲೆಡೆ ತುಂಬುತ್ತ ||

ಬರೆಯದಿರಲೆಂತು ಕವಿಗೆ ?

ಬಿಗಿದು ಕಟ್ಟಲು ಅನಾಹುತ

ಓದಲಿ ಬಿಡಲಿ ಸಾರಸ್ವತರು

ಎದೆ ಹಗುರ ಮಾತಾಗೆ ಮೂರ್ತ ||

ಮೆಚ್ಚಿಸಲಲ್ಲ ಪದಕ ಪದವಿಗೆ

ಬರುವ ಪದದಲಿಲ್ಲ ಪಗಾರ

ಉಸಿರಾಡುವ ಪರಿ ಪದಗಾರಿಕೆ

ಹೈನುಗಾರಿಕೆ ಪದವೇ ಬೇಸಾಯ ||

ಸ್ರವಿಸುವ ತನಕ ಜೀವಕೋಶ

ತುಂಬುತಲಿ ಕವಿ ಭಾವಕೋಶ

ಬರೆಯುವ ತನಗಾಗಿಯೆ ಖುದ್ಧು

ತಾನಾಗದಿರೆ ತನದೇ ಸರಹದ್ದು ||

– ನಾಗೇಶ ಮೈಸೂರು

೨೪.೧೨.೨೦೧೭

01499. ಕವಿತೆ ಇದ್ದರೆ ಸಾಕು..


01499. ಕವಿತೆ ಇದ್ದರೆ ಸಾಕು..

_____________________________

ಕವಿತೆ ಇದ್ದರೆ ಸಾಕು

ಕವಿಗಿನ್ನೇನು ಬೇಕು ?

ಧಾರಾಕಾರ ಕವಿತೆಗಳು

ಕವಿ ತೆಗಳ ಓದದಿದ್ದರು ! ||

ಕವಿತೆ ಅವಳಿದ್ದರೆ ಸಾಕು

ಕವಿಗಿನ್ನೇನು ಜತೆ ಬೇಕು ?

ಮನಭಾವದ ಮಿಲನೋತ್ಸವ

ಶಿಶುವಿನಂತೆ ಪ್ರಸವ ಕಾವ್ಯ ||

ಕವಿತೆ ಕವಿಯುಟ್ಟಂತೆ ಸೀರೆ

ಹೊಕ್ಕವಳೊಳಗಾಗುವ ತದ್ಭವ

ತಂಗಾಳಿ ಸೆರಗು ಮುಂಗುರುಳಲೆ

ಜೊಂಪೆ ಜೊಂಪೆ ತತ್ಸಮ ಕವಿತೆ ||

ಕ’ವಿ’ತೆಯೊಳಗವಿತಿಹನೆ ಕತೆ

ನಡು ‘ವಿ’ಸ್ಮಯ ಹೊರದೂಡೆ

ಕತೆಯಾಗಲಲ್ಲಿ ಕವಿ ನಿರುಪಾಯ

ವಿದಾಯ ಗೀತೆ ಬರೆವಾ ಸಮಯ ||

ಕವಿತೆ ಲೋಕದ ಕನ್ನಡಿ

ಬಿಚ್ಚಿಡೆ ನೈಜ ಕಲ್ಪನೆ ಲಹರಿ

ತನ್ನಂದ ತಾನೆ ಕಾಣದ ನೀರೆ

ಚಂದ ಕವಿತೆ ಕಾಣದು ತನ್ನನ್ನೆ ||

ಕವಿಗಿಲ್ಲ ಸುಖ ದುಃಖ

ಭಾವನೆ ಪುಂಖಾನುಪುಂಖ

ಸಂಭಾವನೆ ಆಸ್ವಾದಿಸೆ ಘನತೆ

ಅಭಾವದಲು ಸೃಜಿಸುವ ಕವಿತೆ ||

– ನಾಗೇಶ ಮೈಸೂರು

(Nagesha Mn)

(Picture source : Internet / social media / Creative Commons)

01135. ಕವಿತೆ ನೀ ಮೋಸ


01135. ಕವಿತೆ ನೀ ಮೋಸ
_____________________________

ಕವಿತೆಗಳೆಲ್ಲ ಮೋಸ
ಬರಿ ಬಣ್ಣದ ಲೋಕದ ಕಥೆ
ಇದ್ದ ವಾಸ್ತವ ಹತ್ತಾದರೆ
ಮೇಲೆದ್ದ ಕಲ್ಪನೆ ತೊಂಭತ್ತು..


ಪ್ರೀತಿ ಪ್ರೀತಿಸಿತ್ತು
ಸುಮ್ಮನೆ ನಿಸರ್ಗ ಸಹಜ
ನಿರೀಕ್ಷೆಯ ರೆಕ್ಕೆ ಪುಕ್ಕ ಹಚ್ಚಿ
ಪರೀಕ್ಷೆಯಾಗಿಸಿದ್ದು ತಪ್ಪು ಕವಿತೆ..

ಪ್ರೇಮ ಹಾರಾಡುತ್ತ
ಮುಗ್ದ ಲೋಕದ ವಿಹಾರ
ಹಾರಿದ್ದೆ ಸೋಲು ಸತ್ಯ ಬಚ್ಚಿಟ್ಟು
ಹಾರಾಡಿಸಿದ ಕವಿತೆಯದು ಸಣ್ಣತಪ್ಪೇ ?


ಪ್ರಣಯ ಕಾಮನೆಯ
ತೆವಲಿನ ತೀರುವಳಿ ಮಾರಾಟ
ಕವಿತೆಯ ಮಾತಾಟ ಸುಳ್ಳಿನ ಜಾಡಿ
ಕರಗತ ವಶವಾಗಿಸಿಕೊಳ್ಳೆ ಹೊಡೆದಿತ್ತ..

ಪರಿಣಯ ತೀರಾ ಮೋಸ
ಹುಳುಕೊಂದನು ತೋರದೆ ಬರಿ
ಕನಸಿನ ಬಲೆ ನೇಯ್ದು ಸೆರೆ ಸುತ್ತ
ಅರಿವಾಗುವ ಹೊತ್ತಿಗೆ ಹೊತ್ತೆ ಮೀರಿತ್ತು..


ಶೃಂಗಾರದ ರಸಸಾಗರ
ನವರಸದುನ್ನತ ತೀರದ ಭ್ರಮೆ
ಸೋತು ಸೊರಗುರುಳುವ ನಿಜವ
ಉದರದ ಶಿಶುವಾಗಿಸಿ ಕವಿತೆ ನಗುವ..

ಮುನಿಸು ಮನಸು ಸೊಗಸು
ಕನಸು ನನಸು ಮೈ ಮರೆಸು
ಸಿಕ್ಕಿದ್ದನ್ನೆಲ್ಲ ಸಿಕ್ಕಸಿಕ್ಕಂತೆ ಸಿಕ್ಕಾಗಿಸಿ
ನಕ್ಕು ಅಣಕಿಸುವ ಕವಿತೆ ನೀ ತೀರಾ ಮೋಸ !


– ನಾಗೇಶ ಮೈಸೂರು
೧೧.೦೨.೨೦೧೭
(Pictures from internet/ social media / Creative Commons)

01072. ಅರ್ಥವಾಗದ ಕವಿತೆ


01072. ಅರ್ಥವಾಗದ ಕವಿತೆ
________________


ಕವನದೊಳಗರ್ಥ
ಕವನದ ಒಳಾರ್ಥ
ಅರ್ಥವಾದರೆ ಗರ್ಭಿತ
ಅರ್ಥವಾಗದೆ ವ್ಯರ್ಥ ..

ಅರ್ಥವಾಗಿಸಲೆಂದು
ಅರ್ಥೈಸುವ ಸತತ
ಅರ್ಥವಾಗುವುದೊಂದು
ಅರ್ಥವಾಗದ ನೂರು..!

ಅನರ್ಥವಾಗದ ರಚಿತ
ಬಹಿರಂಗಕೆ ಉಚಿತ
ಅಸಮಾಧಾನ ಖಚಿತ
ಅರೆಬರೆಯುಗುಳಿ ಕವಿಚಿತ್ತ..

ಪರರಿಗಾದರು ಅರ್ಥ
ಕವಿಗಾಗಬೇಕಿಲ್ಲ ‘ಅರ್ಥ’
ತೆವಲಿನ ಪಾಡು ನಿಸ್ವಾರ್ಥ
ಪುಕ್ಕಟೆ ಮೆಚ್ಚುಗೆ ಅನಂತ..

ಈ ಕವನ ಅರ್ಥಗರ್ಭಿತ
ಆಗಬಹುದರೆಬರೆ ಅರ್ಥ
ಚಿಂತೆ ಬಿಡು ಕವಿಯ ಪಾಡದೆ
ಕಾಣದ್ದವಗೂ ನೀ ಕಾಣುವೆ..

– ನಾಗೇಶ ಮೈಸೂರು
೧೫.೦೧.೨೦೧೬
(Picture source: Creative Commons)
ಹೀಗೆ ಸುಮ್ನೆ: ಕಠಿಣ ಪದಗಳ ಅರ್ಥ (ಕಠಿಣ ಪದಾರ್ಥ) : ಅರ್ಥ = ಹಣ, ದ್ರವ್ಯ 😛

01069. ಬಂತೀಗೊಂದು ಕವಿತೆ ಹೆಣ್ಣಾಗಿ..


01069. ಬಂತೀಗೊಂದು ಕವಿತೆ ಹೆಣ್ಣಾಗಿ..
________________________________


ಯಾರೀಕೆ ? ಯಾವ ಯುಗದ ಕವಿತೆ
ಗಂಧರ್ವ ಕಿನ್ನರಿ ಅಪ್ಸರಲೋಕದ ಸೊಗಡು
ಮುಡಿಯ ತುಂಬ ಮಲ್ಲಿಗೆ ಹೆರಳ ಮಾತು
ಮೌನದಲೆ ಆಡುತ ಬಂದ ಅಪರಿಮಿತೆ..

ದಾರಿಹೋಕನ ದಾಹದಾಳವ ಅಳೆದು
ತಣಿಸೋ ನೀರಿನ ಪಾತ್ರದತ್ತ ನಡೆಸುತ್ತ
ಸುರಿದಳಾ ಕಣ್ಣಲಿ ಮುತ್ತು ರತ್ನ ಸಕಾಂತಿ
ಮೆಚ್ಚುಗೆಯ ಭರಪೂರ ಕ್ರಾಂತಿಯ ಹುನ್ನಾರ..

ಧುತ್ತೆಂದವತರಿಸಿದದೆಲ್ಲಿಂದಲೋ ಪ್ರಕಟ
ನಿಯಾಮಕ ಕರುಣೆ ಮಿಂಚಂತೆರಗುವ ಪರಿ
ಗೊತ್ತು ಗುರಿಯಿತ್ತೇನು? ಕತ್ತಲಲ್ಹೂಡಿದ ಬಾಣವೆ ?
ಖಾಲಿ ಬತ್ತಳಿಕೆಯ ತುಂಬೆ ಶರವರ್ಷವಾದಂತೆ..!

ಕಾದು ಬಿರುಕಾದ ನೆಲ ತತ್ತರಿಸಿ ಬರಿ ಬಿರುಸು
ಉಣಿಸಲಿಲ್ಲ ಧರಣಿ ಜಲದವಶೇಷ ಬಿರುಕು ತುಟಿ
ಮುಗಿಯಿತ್ತಿನ್ನೆಲ್ಲ ಮೂಟೆ ಕಟ್ಟುವ ಹೊತ್ತೆಂದ ಸತ್ಯ
ಸುಳ್ಳಾಗಿಸುವಂತೆ ನೀರೆ ಹನಿ ನೀರಾಗಿ ಜಿನುಗುತಾ..

ಇಣುಕಿ ನೋಡಲೊಲ್ಲೆ ಆಳಕೆ, ಬಂದಂತೆ ಬದುಕು
ಒಂದು ಕ್ಷಣ ಗಳಿಗೆ ದಿನ ಋತು, ಪಾಲಿನಷ್ಟು ಪಾಕ
ಯುಗಾಂತರದ ಕಾತರ ವೇದನೆ ಕಾದ ಯಾತನೆ
ಕರಗಿಸಿಬಿಟ್ಟಳರೆಕ್ಷಣದಲಿ ಸರಿದು ಹೋದಂತೆ ತಂಗಾಳಿ !


– ನಾಗೇಶ ಮೈಸೂರು
೧೫.೦೧.೨೦೧೬
(Picture from Creative Commons / internet sources)

00779. ವಿಸರ್ಜಿಸೆ ಅಸಹಾಯಕತೆ, ಏಕಾಂತದೆ ಪ್ರಬುದ್ಧತೆ..


00779. ವಿಸರ್ಜಿಸೆ ಅಸಹಾಯಕತೆ, ಏಕಾಂತದೆ ಪ್ರಬುದ್ಧತೆ..
___________________________________________


ಒಬ್ಬಂಟಿಯೆಂದೆಕೊ ವಿಲಪಿಸುವೆ ?
ದಾರಿ ಕಾಣದವನಂತೆ ಕಂಗೆಟ್ಟು ತಪಿಸುವೆ ?
ಒಂಟಿತನ ಏಕಾಂಗಿತನಕಿಂತ ಕೆಟ್ಟದು – ಅಸಹಾಯಕತೆ
ಏಕಾಂತ ಬೇಕೆಂದು ಹಪಹಪಿಸಿದರು ಸಿಗದು, ಧೂರ್ತ ಮಾಯೆ ..

ನಿಜವಿರಬಹುದು ಬಿಟ್ಟು ಹೋದ ಸಖ್ಯ
ಸರಿ ತಪ್ಪು ವಿಷಾದ ಖೇದ ಕ್ರೋಧಾಪರಾಧ
ಹೋಗಲೆಂದು ಹೊರಟ ಮೇಲೆಲ್ಲ ನೆಪ ಕುಣಿಕೆ ಗಾಳ
ಎಣಿಸಲೇಕೊ ಮೂಢ, ಜಗದನ್ನ್ಯಾಯ ಬಿದ್ದಂತೆ ನಿನ್ನ ಬುಡದೇ ?

ದೂರವಾದದ್ದಕ್ಕಿಂತಲು ದೂರವೆನ್ನೊ ಭಾವ
ಕಾಡುವ ಮಾಯಾಜಾಲ, ದೂರವೇನಲ್ಲ ಯಾತನೆ
ಯಾತನೆಯ ಭಾವದ ಗಳಿಕೆ, ಘಾಸಿಯಾಗೋ ಅಹಮಿಕೆಗೆ
ಒಬ್ಬಂಟಿತನ ಸವರೋ ಗಾಯದುಪ್ಪು, ಬದಲಿಸಿಕೊ ಏಕಾಂತಕೆ..

ಬರೆದುಬಿಡೆಲ್ಲ ಆಲಾಪ ವಿಲಾಪ ಪ್ರಲಾಪ ಮೊತ್ತ
ಕಥೆ ಕವನ ಪೀಡನೆಗಳಾಗಲಿ ಪುಟದಕ್ಷರದಲಿ ವಿಶ್ರಾಂತ
ಮಿಕ್ಕುವುದಾಗ ಶಾಂತ ಮನದಲಿ ಹುಡುಕು ಏಕಾಂತದ ನೆಲೆ
ನೀನೆನಲ್ಲ ಅಸಹಾಯಕ ಬದುಕಿತ್ತು ಮೊದಲೂ, ಬೇರಾಗೊ ಮೊದಲು..

ಕಟ್ಟಿಕೊಟ್ಟಿದ್ದು ಅನುಭವ ತುಲನೆಯಾಗಲಿ ಸುತ್ತ
ಯಾವುದಿತ್ತು ಸರಿ ತಪ್ಪು ಮನವರಿಕೆಯಾಗಿ ಸಮಚಿತ್ತ
ಅಸಹಾಯಕ ಕ್ಷಣವದು ನೀನಲ್ಲ, ನಿನ್ನರಿವೆ ಗುರುವಾಗುತ
ಮೇಲೆದ್ದು ಬಾ ಏಕಾಂತದ ಸಮಾಧಿಯಿಂದೆದ್ದು ಮತ್ತದೇ ಬದುಕಿಗೆ..

– ನಾಗೇಶ ಮೈಸೂರು

(Picture source : https://en.m.wikipedia.org/wiki/File:Thoma_Loneliness.jpg)

00777. ಎಲ್ಲ ಮೀರಿದ ಗೆಳತಿ ನೀ…


00777. ಎಲ್ಲ ಮೀರಿದ ಗೆಳತಿ ನೀ…
________________________________

ಪ್ರಕೃತಿಗೆ ಪುರುಷ ಬರೆದ ಪುರವಣಿ, ವಿಶ್ವಸೃಷ್ಟಿಯ ನಿತ್ಯೋತ್ಸವದ ಉರವಣಿ…ಪ್ರಕೃತಿ ಹೆಣ್ಣೊ, ಹೆಣ್ಣೆ ಪ್ರಕೃತಿಯೊ ? ಪುರುಷನ ಆರಾಧನೆ ಮಾತ್ರ ಅವಿರತ..

ಎಲ್ಲ ಮೀರಿದ ಗೆಳತಿ ನೀ…
________________________________


ನೀನೆ ಭುವಿಯಾಗಿರುವೆ ಗೆಳತಿ, ಭುವನ ಸುಂದರಿ ಸಖಿ
ಧರಣಿ ಮಿಡುಕಿದಳೇಕೊ, ಗಣಿಸುತಲಿ ನಿನ್ನನೆ ಸವತಿ
ಚಂದ್ರಮನ ಮೊಗದಲದೇನೊ, ಅಸಹನೆ ಸಿಡುಕು
ಚಂದ್ರಮುಖಿ ನಿನ್ನ ವದನ, ತಂದಂತೇನೊ ಕೀಳರಿಮೆ !

ಕ್ಷಮಯಾ ಧರಿತ್ರಿ ನೀ, ಕ್ಷಮಿಸಿಬಿಡು ಅವನೀ ಪಾಡು
ಸಿಕ್ಕಸಿಕ್ಕವರೆಲ್ಲ ಮಾಡಿಟ್ಟವಳ, ಬೆತ್ತಲೆ ಸಹಜ ಸಿಟ್ಟು
ವರ್ಷಾಂತರಗಳ ವಯೋವೃದ್ಧೆ, ನಿನ್ನಂತಹ ತರುಣಿ
ಕಣ್ಣಿಗೆ ಬಿದ್ದಾಗ ಸಹಜ, ನೆನಪಾಗದಿಹುದೇ ಪ್ರಾಯ…?

ಇನ್ನು ಶಶಿಯ ಮಾತು ಬಿಡು, ಮೊದಲೇ ಮಂಕಾಗಿ
ಎರವಲು ದ್ಯುತಿಗೆ ಕಾದು, ಕ್ಷಯವೃದ್ಧಿ ಹಗಲಿರುಳು
ಮಾಸಕೊಮ್ಮೆ ಹುಣ್ಣಿಮೆ, ಪೂರ್ಣಚಂದ್ರನಾಗುವ ಭಾಗ್ಯ
ನಿತ್ಯ ಪೌರ್ಣಿಮೆ ಮೊಗದ, ನಿನ್ನ ಕಂಡಾಗ ಅಸೂಯೆಯೆ..!

ಇನ್ನು ನಿನ್ನ ನಗೆಯ ಕಾಂತಿಗೆ, ಸೋತು ಸುಸ್ತಾಗಿ ರವಿ
ನಗುವನ್ನೇ ಮರೆತ ಮಂಕು, ದೀಪವಾಗಿ ಮೋಡದಲಿ
ಮರೆಯಲಡಗಿ ತನ್ನನ್ನೇ, ಬಚ್ಚಿಟ್ಟುಕೊಂಡು ಮಾನವನು
ಉಳಿಸಿಕೊಳ್ಳುವ ವಿಫಲ, ಯತ್ನದಲಿ ಇಣುಕಿ ನಿರಾಶೆ..

ಮಿಕ್ಕೆಲ್ಲ ಗ್ರಹ ತಾರೆ ನೀಹಾರಿಕೆ, ನೆರೆದಿವೆ ಕುತೂಹಲ
ಏನೀ ಸೃಷ್ಟಿಯ ಅದ್ಭುತ? ಎಂದೆನ್ನುತ ಬಣ್ಣಿಸಿ ನಿನ್ನನ್ನೆ
ಚಲನೆಯ ಮರೆತಂತೆ, ನಿನ್ನ ರೆಪ್ಪೆಯ ಅದುರಲಿ ಕರಗಿ
ನಿನ್ನೆ ವಿಶ್ವದ ಸೃಷ್ಟಿಯ, ಮೂಲಬೀಜವೆಂದು ಅರಾಧಿಸಿವೆ..

– ನಾಗೇಶ ಮೈಸೂರು

(Picture source: http://www.freestockphotos.name/wallpaper/2120/woman-with-painted-birds-and-butterflies-images-photography.html)