01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)


01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)

_______________________________________

ಕವಿಯ ಮೀರಿಸಿದ ಚೋರರಿನ್ನಾರಿಹರು?

ತನ್ನ ಮನಸನೂ ಬಿಡದ ಚೋರಾಗ್ರೇಸರ

ಅಕ್ಕನ ಸರವನು ಬಿಡದಕ್ಕಸಾಲಿ ಹಾಗೆ

ಆಳದಲೊಕ್ಕು ಪದ ಕದಿವ ವೃತ್ತಿಧರ್ಮ ! ||

ನೋಡಲಾಗದ ತನ್ನಾಳವ ಬಿಡದೆ ಸೋಸಿ

ತನ್ನದೇ ಸಿದ್ದಾಂತ ತತ್ವಗಳ ಕಸಿಯೆರಚಿ

ತೆಗಳಿಯೊ ಹೊಗಳಿಯೊ ರಗಳೆ ರಂಪಾಟ

ಪದದರಿವೆ ಹೊದಿಸಿ ಕೈತೊಳೆದುಬಿಡುವ ! ||

ತನ್ನದೆ ಮಾಲು ಬೇಸತ್ತಾಗ ಪರದಾಟ ಕಾಲ

ಚಡಪಡಿಸುತಾ ಹುಡುಕಿ ಸ್ಪೂರ್ತಿಗೆ ಮೂಲ

ಇಣುಕಲ್ಲಿಲ್ಲಿ ಅವರಿವರ ಅಂತರಾಳದ ಬಣ್ಣ

ಅವರಿಗೂ ಕಾಣದ್ದ ಕದ್ದು ಕವಿತೆಯಾಗಿಸಿಬಿಟ್ಟ ! ||

ಪ್ರೇಮಿ ಮನಸ ಕದಿವ ತಾತ್ಕಲಿಕ ಕವಿ ನೂರು

ಕವಿಗಳಂತೆ ಭಾವದ ಮೇನೆ ಕದಿವಾ ಜರೂರು

ಯಾರದಿಲ್ಲ ತಕರಾರು ಕದ್ದದ್ದನೆ ಕದಿಯೆ ಮತ್ತೆ

ಮತ್ತೆ ಬರೆವದೆ ಸರಕು ಹಳೆಮದ್ಯ ಹೊಸಶೀಷೆ ! ||

ಕವಿ ಸಂಭಾವಿತ ಕಳ್ಳ ಕದ್ದು ನಗಿಸೆ ಒಮ್ಮೊಮ್ಮೆ

ಕಣ್ಣೀರ ಹಾಕಿಸುವ ಗೋಳ ಸರದಾರನ ಜಾಣ್ಮೆ

ಕಲಿವ ಕಲಿಸುವ ಸಭ್ಯ, ಹಗರಣಕೆಳೆವ ಅವಜ್ಞ

ಕದ್ದಾದ ಬುದ್ಧಿಗೆ ಭಾವಿಸದಿರಲಿ ಕವಿ ಸರ್ವಜ್ಞ ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: internet / social media)

01631. *ಕುಡಿದ ಕವಿ ತೊದಲಾಟ…*


01631. *ಕುಡಿದ ಕವಿ ತೊದಲಾಟ…*

*ಕುಡಿದ ಕವಿ ತೊದಲಾಟ…*

_________________________

(ಉದಾಸ ಮನಕ್ಕೊಂದು ‘ಶಾಶ್ವತ’ ತಾತ್ಕಾಲಿಕ ಪರಿಹಾರ..)

ಕುಡಿದು ಮರೆಯುವ ಸೊಗಸು

ಭ್ರಮೆ ಲೋಕದಡಿ ಗುಣುಗುಣಿಸು

ಮೈ ಮರೆಸೆಲ್ಲ ತರ ಮುನಿಸು

ತೊದಲು ಮಾತಾಗಿ ಸ್ಪುರಿಸು.. ||

ಕವನೆ ತಾನೆ ಮತ್ತಿನ ಮದಿರೆ

ಜತೆ ನೀಡೆ ಬೇಡವೆ ಮದಿರೆ ?

ಗುಟುಕರಿಸೆ ಹನಿ ಮುಖ ಕಿವುಚಿ

ಹುಳಿ ಕಹಿ ಒಳಗೇನೊ ತಿರುಚಿ..||

ಹೊಕ್ಕಂತೇನೊ ಬಿಸಿ ಬುಗ್ಗೆ

ಉಕ್ಕಿದಂತೆ ಸುಡುಬೆಂಕಿ ನುಗ್ಗೆ

ಬೆಚ್ಚನೆಯಾಟದಲೇನೊ ಹಗುರ

ಹೂವಾಗಿ ಮೇಲೆದ್ದಂತೆಲ್ಲ ಭಾರ..||

ಅದು ಭೌತ ಶಾಸ್ತ್ರದ ನಿಯಮ

ಎರಡಕಿಲ್ಲ ಒಂದೆ ತಾಣದ ಕರ್ಮ

ಒಳಗಿಳಿದಂತೆ ಮದಿರೆಯ ತಳ್ಳಾಟ

ಕವಿತೆಯಾಗಿ ಹೊರಬೀಳೊ ಕಳ್ಳಾಟ..||

ಮದಿರೆಗು ಕಾವ್ಯಕು ಅವಿನಾಭಾವ

ನಂಟೇನೊ ಗಂಟು ಹಾಕಿ ಸುಶ್ರಾವ

ಬಿಸಿರಕ್ತಸ್ರಾವ ಹನಿಯಾಗುತ ಪದ

ಕೊರೆದೊ ಕುಡಿದೊ ನೀಡುತ ಮುದ..||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01508. ಬರೆಯಲೇಕೆ ಕವಿ, ಕವಿತೆ?


01508. ಬರೆಯಲೇಕೆ ಕವಿ, ಕವಿತೆ?

________________________________

ಕವಿಯೊಬ್ಬನ ಕವಿತೆ

ಜೀವಕೋಶದ ಮಾತೆ

ಮಾತಾಗಿ ಸೇರಿದ ಮಾತೆ

ಯಾರೊ ಕಾಣೆ ಹರಸುತೆ ||

ಪದ ಲಾಸ್ಯ ತುಸು ಹಾಸ್ಯ

ಜೀವಂತಿಕೆ ಭಾವದ ಮೋಹ

ಕೋಶದುತ್ಪನ್ನ ಜೀವದ ರಸ

ನಿಲದೇ ಹರಿದೆಲ್ಲೆಡೆ ತುಂಬುತ್ತ ||

ಬರೆಯದಿರಲೆಂತು ಕವಿಗೆ ?

ಬಿಗಿದು ಕಟ್ಟಲು ಅನಾಹುತ

ಓದಲಿ ಬಿಡಲಿ ಸಾರಸ್ವತರು

ಎದೆ ಹಗುರ ಮಾತಾಗೆ ಮೂರ್ತ ||

ಮೆಚ್ಚಿಸಲಲ್ಲ ಪದಕ ಪದವಿಗೆ

ಬರುವ ಪದದಲಿಲ್ಲ ಪಗಾರ

ಉಸಿರಾಡುವ ಪರಿ ಪದಗಾರಿಕೆ

ಹೈನುಗಾರಿಕೆ ಪದವೇ ಬೇಸಾಯ ||

ಸ್ರವಿಸುವ ತನಕ ಜೀವಕೋಶ

ತುಂಬುತಲಿ ಕವಿ ಭಾವಕೋಶ

ಬರೆಯುವ ತನಗಾಗಿಯೆ ಖುದ್ಧು

ತಾನಾಗದಿರೆ ತನದೇ ಸರಹದ್ದು ||

– ನಾಗೇಶ ಮೈಸೂರು

೨೪.೧೨.೨೦೧೭

00985. ಕವಿ ಕಾಟ


00985. ಕವಿ ಕಾಟ
___________


ಅವಳೆಂದಳು
ಕುಟ್ಟುತ್ತ ಕೂರುವ
ಹಾಳು ಚಟ
ಬರಿ ಸಮಯ ಹಾಳೆ;
😡😡😡
ಗದರಿದೆ ಕೆಂಗಣ್ಣಲಿ
ಉಳಿಸುತ್ತಿಲ್ಲವೆ ?
ರೀಮುಗಟ್ಟಲೆ
ಹಾಳೆ !

– ನಾಗೇಶ ಮೈಸೂರು

00876. ಹಾಳು ಕವಿ ಸಮಯ


00876. ಹಾಳು ಕವಿ ಸಮಯ
_____________________


ಕವಿ ಕಲ್ಪನೆ –
ಯಾರಪ್ಪನ ಮನೆ ಆಸ್ತಿ ?
ಅದೇ ನಮ್ಮ ಬಂಡವಾಳ !

ಕಲ್ಪನೆ ವಾಸ್ತವ
ಅಜಗಜಾಂತರ ದೋಸ್ತಿ
ಭಾವಾಭಾವ ಅವಿನಾಭಾವ !

ವಾಸ್ತವ ದುಸ್ತರ
ಹೊರಲಾಗದ ಹೆಣಭಾರ
ಹೆಣೆಸುತ್ತಾ ರೋಮಾಂಚಕರ !


ದುಸ್ತರವಿದ್ದೂ ವಿಸ್ತಾರ
ರೋಚಕ ಕತೆಗೆಲ್ಲಿದೆ ಬರ ?
ಬದುಕು ಬವಣೆ ತರ ಹಣೆಬರ !

ವಿಸ್ತಾರದ ಸಾಗರ
ಸುಸ್ತಾಗಿಸೋ ಬಾಳ ಅಪಾರ
ಯಾತನೆ ವೇದನೆ ವ್ಯವಹಾರ !

ಸಾಗರದಾಳ ವಿಶಾಲ
ಇದ್ದರು ಸಂಬಂಧಗಳ ಕೊಳ
ಪ್ರೀತಿ ಪ್ರೇಮ ಕಲ್ಲೆಸೆಯುತ ಖಳ !

ವಿಶಾಲ ಹೃದಯ
ಕವಿ ಮನಸಿನ ಕದ ಕಂದಾಯ
ಲಲನೆಯ ಕಣ್ಣೋಟದೆ ಸಂದಾಯ !


ಹೃದಯವಾಗಿ ವ್ಯತ್ಯಯ
ಖೇದ ವಿಷಾದಗಳ ಆಲಯ
ಆದರೂ ಬರೆಯುವ ಕವಿ ಸಮಯ !

ವ್ಯತ್ಯಯ ಖೆಡ್ಡಾ ರೋಧನ
ನೆನಪುಗಳಲೆಲ್ಲಾ ಆರಾಧನಾ
ನೈಜಕೆ ಸಮಾಧಿ ಊಹಾ ದಾರುಣ !

ರೋಧನದಲ್ಲು ಕರುಣಾ
ಕವಿ ಬರೆದೆಲ್ಲಾ ಸೆಗಣಿ ಹೂರಣ
ಹೂವೆಂದು ಅಘ್ರಾಣಿಸೊ ಸಹೃದಯಿ ಜನ !

– ನಾಗೇಶ ಮೈಸೂರು

(All pictures : Internet / Facebook)

00764. ಕವಿ ಪುರಾಣ..


00764. ಕವಿ ಪುರಾಣ..
_____________________

ಕವಿಗಳದೇನಾದರೂ ಕಪಿಚೇಷ್ಟೆ ಇರಬೇಕಲ್ಲಾ ? 😜😊


ಯಾರು ಇಟ್ಟ ಹೆಸರೋ ಕವಿಗೆ
ಕವಿತೆಯವನ ಆಶಯ
ಭಾವಗಳಿಗೆ ತೇಪೆ ಹೊಲಿಗೆ
ಹಾಕುತ ದಿನದಿನ ವಿಸ್ಮಯ..

ಹೊಲಿದುದನೆ ಹೊಲಿಯುತಲಿ
ಬಡಿಸುತಡಿಗೆ ಅದನೆ
ಒಲಿದವಳನೆ ಓಲೈಸುವಂತೆ
ಪ್ರಿಯತಮೆಯ ಗೆಲ್ಲಲಡಿಗಡಿಗೆ..

ಪದಗಳಲಿಡೆ ಸಿರಿವಂತಿಕೆ
ಎದೆಯೊಳಗೆ ಭಾವದ ವಂತಿಕೆ
ಮೊಗೆದಷ್ಟೂ ಸಮೃದ್ಧ ಫಸಲು
ತೀರದ ಸ್ಪೂರ್ತಿ ಕಾವ್ಯದ ಅಸಲು..

ಹತಾಶೆ ನೋವು ಸಿಟ್ಟು ನಲಿವು
ಪದಗಳಾಗಿ ದುಡಿಯುವಾಳು
ಕವನ ಬದುಕೊ ? ಬದುಕೇ ಕವನವೊ ?
ಕವಿವಾಣಿ ದಿಟ ಅದಕೂ ಇದಕೂ ಎದಕೂ !

ಬರಲೊಲ್ಲದ ಲಕುಮಿಯ ಬದಲು
ಕೈ ಹಿಡಿದ ಶಾರದೆಯ ಕಥೆ
ಬರೆದು ಬದುಕುವರುಂಟೆ ? ನಿಜ, ಇಲ್ಲಾ
ಬರೆಯದೆ ಕವಿ ಬದುಕುವುದಿಲ್ಲ.. !

– ನಾಗೇಶ ಮೈಸೂರು

http://folhadepoesia.blogspot.com/2015/06/poet-voice.html?m=1