00863. ಭೈರಪ್ಪನವರ ಕಾದಂಬರಿ ಕೊಲೇಜ್ (poem)


00863. ಭೈರಪ್ಪನವರ ಕಾದಂಬರಿ ಕೊಲೇಜ್ (Poem)
________________________________

ಇಂದು ನೆನೆದೊಡನೆ ಮನದಲ್ಲಿ ಗೌರವಾದರದ ಪಲುಕೆಬ್ಬಿಸುವ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ ಎಸ್. ಎಲ್. ಭೈರಪ್ಪನವರ ಜನ್ಮದಿನ. ಆ ಪ್ರಯುಕ್ತ ಅವರ ಕಾದಂಬರಿ ಮತ್ತು ಆತ್ಮಕಥೆಯ ಹೆಸರುಗಳನ್ನೂ ಜೋಡಿಸಿ ಪೋಣಿಸಿದ ಒಂದು ನುಡಿ ನಮನ ಪದ್ಯ – ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ! (ಮಾಹಿತಿ ಮೂಲ ವಿಕಿಪೀಡಿಯ)

ಭೀಮಕಾಯನ ಯಾನ !
________________________________


ಶತ -‘ಗತಜನ್ಮ’ಗಳ ಪುಣ್ಯ ವಿಶೇಷ
‘ಭೀಮ ಕಾಯ’ ಜನಿಸಿದ ಕನ್ನಡ ದೇಶ
ತಟ್ಟನೆ ‘ಬೆಳಕು ಮೂಡಿತು’ ನಾಡಿನ ತುಂಬ
ಕಾಲಿಟ್ಟಳು ‘ಧರ್ಮಶ್ರೀ’ ಜಗದಾನಂದ..

‘ದೂರ ಸರಿದರು’ ಸೃಜಿಸಿದ ಪಾತ್ರಗಳಿಂದ
ಸೂಕ್ತ ‘ಮತದಾನ’ ಮಾಡುತ ನಿಷ್ಠೆಯಿಂದ
ಚಿಗುರೊಡೆದಂತೆ ಸಸಿಯರಳಿಸಿ ‘ವಂಶವೃಕ್ಷ’
‘ಜಲಪಾತ’ದೊಂದಿಗೆ ಧುಮ್ಮಿಕ್ಕಿ ಕಲಾ ಸುಭಿಕ್ಷ..

ಕಾಡಿದ್ದುಂಟು ಉದ್ದ ನೂರಾರು ‘ನಾಯಿ ನೆರಳು’
‘ತಬ್ಬಲಿಯು ನೀನಾದೆ ಮಗನೆ’ ಅಂದವೆಷ್ಟೊ ಕೊರಳು
‘ಗೃಹಭಂಗ’ವಾದಿತೆಂದಾಶಿಸಿ ಕಾದವರಿಗೆಯೆ ಮಾಯೆ
‘ನಿರಾಕರಣ’ ಕಾಡಿತ್ತು ಹಿಡಿಸುತ್ತ ‘ಗ್ರಹಣ’ದ ಛಾಯೆ..

ಕ್ರಮಿಸಿದ ಹಾದಿ ಘಾಟು ಬಿಡದೆ ನಡೆದೇ ‘ದಾಟು’
ಮಾಡುತ್ತುದ್ದಕು ‘ಅನ್ವೇಷಣೆ’, ‘ಪರ್ವ’ದೊಳಡಗಿಹ ‘ನೆಲೆ’
ಹುಡುಕಿದ್ದೇನೆಲ್ಲ ‘ಸಾಕ್ಷಿ’, ಒತ್ತಾಸೆ ಅಂತಃಸಾಕ್ಷಿ, ಮನಃಸಾಕ್ಷಿ
‘ಅಂಚು’ ಅಂಚಿನ ‘ತಂತು’ ಮಿಡಿದು ‘ಸಾರ್ಥ’ಕತೆ ‘ಮಂದ್ರ’ದಲಿ..

ಪರಿಪಕ್ವತೆ ಪ್ರಬುದ್ಧತೆ ನೈಜ ಚರಿತ್ರೆ ತೆರೆದಿಟ್ಟ ‘ಆವರಣ’
‘ಕವಲು’ ಹಾದಿಯ ನಡಿಗೆಯ ಪ್ರತಿಹೆಜ್ಜೆಯು ಭಿನ್ನ
ಖಂಡಾಂತರವಲ್ಲ ಲೋಕಾಂತರ ಬ್ರಹ್ಮಾಂಡ ‘ಯಾನ’
ಅನುಭವದ ‘ಭಿತ್ತಿ’ ತೆರೆದಿಟ್ಟ ಆತ್ಮಕತೆಯ ಅನಾವರಣ !


– ನಾಗೇಶ ಮೈಸೂರು

(Picture and information source: https://en.m.wikipedia.org/wiki/S._L._Bhyrappa, second picture – udayavani )

00713. ಅಹಲ್ಯಾ_ಸಂಹಿತೆ_೪೨ (ಫಲಿತಾಂಶದ ಯಶಸ್ವಿ ಕ್ರೋಢೀಕರಣ)


00713. ಅಹಲ್ಯಾ_ಸಂಹಿತೆ_೪೨ (ಫಲಿತಾಂಶದ ಯಶಸ್ವಿ ಕ್ರೋಢೀಕರಣ)
________________________________________________
(Link to previous episode no. 41: https://nageshamysore.wordpress.com/2016/04/24/00669-0041_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a7/)

ಅಂದಿನ ಸಭೆಯಲ್ಲೇನೊ ವಿದ್ಯುತ್ಸಂಚಾರವಾಗಿರುವಂತೆ ಇಡಿ ಪರಿಸರವೇ ಉತ್ಸಾಹ, ಉಲ್ಲಾಸದಿಂದ ತುಂಬಿ ತುಳುಕುತ್ತಿದೆ. ಸಮಾನಾಂತರ ಸ್ತರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ಕು ತಂಡಗಳ ಎಲ್ಲಾ ಸದಸ್ಯರು ಆಗಲೆ ಅಲ್ಲಿ ಬಂದು ಸೇರಿಬಿಟ್ಟಿದ್ದಾರೆ. ಪ್ರತಿ ತಂಡವೂ ತಮ್ಮ ಪಾಲಿನ ಕೆಲಸವನ್ನು ಈಗಾಗಲೆ ಯಶಸ್ವಿಯಾಗಿ ಮುಗಿಸಿಬಿಟ್ಟ ಕಾರಣ ಪ್ರತಿಯೊಬ್ಬರ ಕುತೂಹಲವೂ ಮಿಕ್ಕ ತಂಡಗಳ ಫಲಿತದ ಕುರಿತು ಮತ್ತು ಅವೆಲ್ಲವನ್ನು ಹೇಗೆ ಸಮನ್ವಯಿಸಲಾಗುತ್ತಿದೆ ಎಂಬುದರ ಬಗ್ಗೆ. ಸಭೆಯ ಆರಂಭಕ್ಕೆ ಇನ್ನು ಸಮಯವಿರುವ ಕಾರಣ ಎಲ್ಲಾ ಸಣ್ಣ ಸಣ್ಣ ಗುಂಪುಗಳಲ್ಲಿ ಸೇರಿಕೊಂಡು ಪರಸ್ಪರ ಮಾತಿಗಿಳಿದಿದ್ದಾರೆ ಕಾಲಹರಣಕ್ಕೆಂಬಂತೆ.

ಆ ಸಭೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸಬೇಕಾದ ತಂಡ ಮಾತ್ರ ಇನ್ನೂ ಅಲ್ಲಿಗೆ ಬಂದಿಲ್ಲ. ವೇದಿಕೆಯ ಹಿಂದಿರುವ ಮತ್ತೊಂದು ಚಿಕ್ಕ ಸಭಾಕೋಣೆಯಲ್ಲಿ ಕಡೆಯ ಗಳಿಗೆಯ ಚರ್ಚೆ, ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಊರ್ವಶಿ, ಬ್ರಹ್ಮದೇವ, ಸೂರ್ಯ, ದೇವೇಂದ್ರ, ಗೌತಮರ ಜತೆ ನಾಲ್ಕು ತಂಡದಿಂದಲು ಆಯ್ದ ಪ್ರತಿನಿಧಿಗಳು ಸಿದ್ದರಾಗುತ್ತಿದ್ದಾರೆ, ತಮ್ಮ ಪ್ರಯೋಗದ ಫಲಿತಗಳನ್ನು ವೇದಿಕೆಯ ಮೇಲಿನ ಪ್ರಾಯೋಗಿಕ ಪ್ರತ್ಯಕ್ಷದರ್ಶಿಯ ಅವತರಣಿಕೆಯಲ್ಲಿ ಪ್ರದರ್ಶಿಸಲು. ಆ ಪ್ರಾಯೋಗಿಕತೆಯ ಕಾರಣದಿಂದಲೆ ಕಡೆಯ ಗಳಿಗೆಯ ಪರೀಕ್ಷೆ ನಡೆಸುತ್ತಿದ್ದಾರೆ – ಎಲ್ಲವೂ ಸರಿಯಾಗಿ ಕಾರ್ಯ ನಿರ್ವಹಿಸುವಂತೆ. ಅದರೆಲ್ಲದರ ಉಸ್ತುವಾರಿ ನೋಡುತ್ತಿದ್ದ ಊರ್ವಶಿ ಕೊನೆಗೊಮ್ಮೆ ಎಲ್ಲಾ ಸಮರ್ಪಕವಾಗಿದೆಯೆಂದು ಖಚಿತ ಪಡಿಸಿಕೊಂಡ ನಂತರ ಗೌತಮನತ್ತ ತೆರಳಿ ಮುಂದಿನ ಕಾರ್ಯ ನಿರೂಪಣೆಯ ಪಟ್ಟಿಯನ್ನು ಅವನ ಕೈಗಿತ್ತಳು. ಅಂದಿನ ಪೂರ್ಣ ನಿರೂಪಣೆಯ ಹೊಣೆ ಗೌತಮನದು – ಸಿದ್ದಪಡಿಸಿದ್ದೆಲ್ಲ ಊರ್ವಶಿಯೆ ಆದರು. ವೇದಿಕೆಯ ಹಿಂದಿನ ಸಹಾಯಕಿಯಾಗಿ ಮಾತ್ರ ಅವಳ ಪಾತ್ರ. ಪಿತಾಮಹನಾಗಿ ಮಿಕ್ಕವರೆಲ್ಲರದು ಅಂದು ಪ್ರೇಕ್ಷಕರ ಪಾತ್ರವೆ. ಅಂತೂ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಆರಂಭವಾಗುವಂತೆ ಚಾಲನೆ ನೀಡಿದ ಊರ್ವಶಿ, ನಿರೂಪಕನಾಗಿ ಗೌತಮನನ್ನು ವೇದಿಕೆಗೆ ಆಹ್ವಾನಿಸಿ ತಾನು ನೇಪಥ್ಯಕ್ಕೆ ಸರಿದುಬಿಟ್ಟಳು.

ಗೌತಮನ ನಿರೂಪಣೆಯೇನು ನೀರಸವಾಗಿರಲಿಲ್ಲ. ಹಾಗಿರಬಾರದೆಂದೆ ಹೆಚ್ಚಿನ ತಾಂತ್ರಿಕ ವಿವರಣೆಯ ಗೋಜಿಗೆ ಹೋಗದೆ ಪ್ರತಿ ತಂಡದ ಪ್ರಾತ್ಯಕ್ಷಿಕ ದರ್ಶಿಕೆಗೆ ನೇರ ಅನುವು ಮಾಡಿಕೊಟ್ಟು ನಡುನಡುವೆ ಅದರ ವಿವರಣೆಗೆ ತನ್ನ ಮಾತು ಸೇರಿಸತೊಡಗಿದ. ಆ ನಿಟ್ಟಿನಲ್ಲಿ ಮೊದಲು ಅವಕಾಶ ಪಡೆದ ಮೊದಲನೇ ತಂಡ ಜೀವಕೋಶದ ಕಸಿಯ ಕುರಿತಾದ ವಿವರಗಳನ್ನು ದೃಶ್ಯರೂಪದಲ್ಲಿ ಪ್ರದರ್ಶಿಸತೊಡಗಿತ್ತು. ಎಲ್ಲರಿಗು ಅರ್ಥವಾಗುವ ಸರಳ ರೂಪಿನಲ್ಲಿರಬೇಕೆಂಬ ಮೂಲ ನಿಯಮಕ್ಕೆ ಬದ್ಧರಾಗಿ ಮೊದಲು ಉಚ್ಚೈಶ್ರವಸ್ಸುವಿನ ಸೃಜಿಸುವಿಕೆಯನ್ನು ಉದಾಹರಣೆಯಾಗಿ ತೋರಿಸಲು ಮೊದಲ್ಗೊಂಡು, ಅದರ ಸಲುವಾಗಿ ಒಂದು ಕಡೆಯಿಂದ ಕುದುರೆ ಮತ್ತು ಇನ್ನೊಂದು ಕಡೆಯಿಂದ ಹಕ್ಕಿಯ ಸಾಂಕೇತಿಕ ರೂಪಗಳು ಮೂಡಿಬಂದು ಅವೆರಡು ಅಂಗಾಂಗಿಕ ಮಟ್ಟದಲ್ಲಿ ಸಮ್ಮಿಳನವಾಗುವ ಸ್ಥೂಲ ಚಿತ್ರಣವನ್ನು ಪ್ರದರ್ಶಿಸಿತು. ಕಸಿ ಹಾಕಿದ ವಿಭಿನ್ನ ಅಂಗಾಂಗಗಳು ಹೊಂದಿಕೊಳ್ಳುವ ಬಗೆಯ ವಿನ್ಯಾಸ, ತಂತ್ರಗಳ ಅನಾವರಣ ಮಾಡುತ್ತಲೇ ಕಾಲನುಕ್ರಮಣದಲ್ಲಿ ಅವು ಹೇಗೆ ನೈಸರ್ಗಿಕ ಬಂಧವನ್ನು ಏರ್ಪಡಿಸಿಕೊಂಡಿವೆಯೆಂದು ನಿರೂಪಿಸಿತು. ಹಾಗೆ ನಿರೂಪಿಸಿದ ಚಿತ್ರಣವನ್ನೆ ಆಂಗಿಕ ಮಟ್ಟದಿಂದ ಅಂಗಾಂಗ, ಅಂಗಾಶ, ಜೀವಕೋಶಗಳ ಮಟ್ಟಕ್ಕೆ ಒಯ್ದು ಹೇಗೆ ಎರಡು ವಿಭಿನ್ನ ಜೀವಕೋಶಗಳು ಕಸಿಯಾಗಿ ಒಂದು ಹೂಸ ಜೀವಕೋಶವಾಗಿ ಉತ್ಪನ್ನವಾಯ್ತು ಎಂಬುದರ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯ್ತು. ಅದನ್ನು ನೋಡಿದ ಪ್ರತಿಯೊಬ್ಬರೂ ಜೀವಕೋಶಗಳೆರಡರ ಕಸಿಯಿಂದ ಹೊಸ ಜೀವಕೋಶವೊಂದರ ಉತ್ಪತ್ತಿ ಮಾಡಲು ಸಾಧ್ಯ ಎನ್ನುವುದನ್ನು ಸರಳ ರೂಪದಲ್ಲಿ ಅರಿಯಲು ಸಾಧ್ಯವಾಗುವಂತೆ ಸಂಯೋಜಿಸಿದ ಚಿತ್ರಣವದು.

ಅಲ್ಲಿಂದ ಮುಂದುವರೆದು ಅದೇ ಸಿದ್ದಾಂತವನ್ನು ಅಳವಡಿಸಿಕೊಂಡ ಊರ್ವಶಿ ಮತ್ತು ಬ್ರಹ್ಮದೇವರ ಕೋಶಗಳ ಕಸಿ ಮಾಡಿದ ವಿವರಗಳ ಪ್ರದರ್ಶನವಾಯ್ತು. ಒಂದೇ ಬಾರಿಗೆ ನಿಗದಿತ ಮಟ್ಟದ ಕಸಿ ದೊರಕದ ಕಾರಣ, ಹಲವಾರು ಮಜಲುಗಳಾಗಿ ನಡೆಸಿದ ಯತ್ನಗಳನ್ನು ಅನುಕ್ರಮವಾಗಿ ತೋರಿಸಿ , ಹೇಗೆ ಅಂತಿಮ ಮಜಲಿನ ಹೊಸ ಕೋಶದ ಸೃಷ್ಟಿಯತನಕ ತಲುಪಿದರೆನ್ನುವುದನ್ನು ಸಾದರಪಡಿಸಲಾಗಿತ್ತು. ತದನಂತರ ಹಳೆಯ ಜೀವಕೋಶ ಮತ್ತು ಹೊಸ ಜೀವಕೋಶಗಳನ್ನು ತುಲನಾತ್ಮಕವಾಗಿ ಪ್ರದರ್ಶಿಸಿ ಅವೆರಡರ ನಡುವಿನ ಅಂತರವನ್ನು ವಿವರಿಸಲಾಯ್ತು. ಸಾಧಾರಣವಾಗಿ ನೈಸರ್ಗಿಕ ವಿಕಸನ ಹಾದಿ ಹಿಡಿದಿದ್ದಾರೆ ಎಷ್ಟು ಕಾಲ ಹಿಡಿಯಬಹುದಿತ್ತು ಮತ್ತು ಈ ಕಸಿ ವಿಧಾನದಿಂದ ಎಷ್ಟು ಬೇಗನೆ ಅದೇ ವಿಕಸನ ಮಟ್ಟವನ್ನು ಸಾಧಿಸಲು ಸಾಧ್ಯವಾಯಿತೆಂಬುದರ ವರ್ಣನೆಯೇ ರೋಚಕ ಕಥಾನಕದಂತೆ ಭಾಸವಾಗಿತ್ತು ಅಲ್ಲಿ ನೆರೆದಿದ್ದ ವಿಜ್ಞಾನಿಗಳಿಗೆ.

ನಂತರದ ಸರದಿ ಎರಡನೆ ತಂಡದ ಬದಲು ಮೊದಲು ಮೂರನೆ ತಂಡದ್ದಾಗಿತ್ತು. ಮೂರನೆ ತಂಡದ ಫಲಿತವನ್ನು ಬಳಸಿಕೊಂಡು ಎರಡನೆ ತಂಡ ತನ್ನ ಗುರಿ ಸಾಧಿಸಿದ್ದ ಕಾರಣಕ್ಕೆ. ವೇದಿಕೆಗೆ ಬಂದ ಮೂರನೆ ತಂಡ ಮೊದಲು ಪ್ರದರ್ಶಿಸಿದ್ದು ಸಾಧಾರಣ ಜೀವಕೋಶದ ದೈನಂದಿನ ಹುಟ್ಟು – ಸಾವಿನ ಕುರಿತಾಗಿ. ಜೀವಕೋಶವೊಂದು ಹೊಸಕೋಶವಾಗಿ ಹೊರಹೊಮ್ಮಿದಂತೆ ಹೇಗೆ ತನ್ನ ಜೀವನ ಚಕ್ರ ಸವೆಸುತ್ತದೆ ಮತ್ತು ಅದರ ಜೀವಿತದ ಕಾಲಾವಧಿ ಎಷ್ಟು ಎಂಬುದರ ಚಿತ್ರಣ ಮೊದಲು ಮೂಡಿಬಂದಿತ್ತು. ತದನಂತರ ಅದರ ಜೀವಿತಾವಧಿಯನ್ನು ಸಕ್ರಿಯವಾಗಿಡುವ ರಾಸಾಯನಿಕದ ಮಾಹಿತಿಯನ್ನು ತೋರಿಸುತ್ತ, ಯಾವಾಗ ಆ ರಾಸಾಯನಿಕ ತನ್ನ ಕಾರ್ಯ ನಿಲ್ಲಿಸಿ ಸ್ಥಬ್ಧವಾಗುವುದೊ ಆಗ ಜೀವಕೋಶವು ನಿಷ್ಕ್ರಿಯವಾಗಿ ಸಾವಿಗೀಡಾದಂತೆ ನಶಿಸಿಹೋಗುವುದನ್ನು ತೋರಿಸುವ ಚಿತ್ರಣ ಮುಂದಿನದು. ಇವೆರಡೂ ಪ್ರಸ್ತುತ ಕೋಶದ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಿತ್ತು.

ನಂತರದ ಸರದಿ ಅವರು ಕಂಡು ಹಿಡಿದ ಹೊಸ ರಾಸಾಯನಿಕದ್ದು. ಪ್ರಸ್ತುತ ನಶಿಸಿಹೋಗಿದ್ದ ಜೀವಕೋಶವೊಂದಕ್ಕೆ ಆ ರಾಸಾಯನಿಕವನ್ನು ಸೇರಿಸುವುದರ ಮೂಲಕ ಅದು ಹೇಗೆ, ನಿಷ್ಕ್ರಿಯವಾಗಿದ್ದ ಮೂಲ ರಾಸಾಯನಿಕವನ್ನು ಪ್ರಚೋದಿಸಿ, ಉದ್ದೇಪಿಸಿ, ಚೇತನಶೀಲವಾಗಿಸಿ ಮತ್ತೆ ಸಕ್ರೀಯವಾಗಿಸಬಹುದೆಂಬ ಮಾಹಿತಿಯ ಪ್ರದರ್ಶನ. ಆ ರಾಸಾಯನಿಕವನ್ನು ಸೇರಿಸುತ್ತಿದ್ದ ಹಾಗೆ ಅದುವರೆಗೆ ಸಾವಿಗೀಡಾದಂತಿದ್ದ ಕೋಶದಲ್ಲು ಮತ್ತೆ ಚಟುವಟಿಕೆ ಆರಂಭವಾಗಿ ಜೀವಿತವಿದ್ದ ಮೊದಲಿನ ಹಾಗೆ ಕಾರ್ಯ ನಿರ್ವಹಿಸತೊಡಗಿತ್ತು…! ಈ ಹಂತದಲ್ಲಿ ಮತ್ತೆ ಗೌತಮನೆ ವೇದಿಕೆಗೆ ಬಂದು ಪುಟ್ಟ ವಿವರಣೆ ನೀಡಿದ – ಇದರರ್ಥ ಜೀವಕೋಶ ತನ್ನ ಕಾಲಾವಧಿಯಲ್ಲಿ ನಶಿಸಿಹೋಗುವ ಬದಲು ಮತ್ತಷ್ಟು ಜೀವ ಬಂದಂತೆ ತನ್ನ ಆಯಸನ್ನು ವೃದ್ಧಿಸಿಕೊಂಡು ದುಪ್ಪಟ್ಟಾಗಿಸಿಕೊಳ್ಳುತ್ತದೆ ಎಂದು. ಅದನ್ನೇ ಸರಳವಾಗಿ ವಿವರಿಸುತ್ತ ಜೀವಿಯೊಂದರ ಆಯಸ್ಸನ್ನು ಎರಡರಷ್ಟು ಮಾಡಿದಂತೆಯೆ ಈ ಲೆಕ್ಕ ಎಂದು ವಿವರಿಸಿದ.

ಆದರೆ ಅದನ್ನು ಮೀರಿದ ಆಶ್ಚರ್ಯ ಮುಂದಿನ ಹಂತದ ಪ್ರದರ್ಶನದಲ್ಲಿತ್ತು. ಹೊಸದಾಗಿ ಸೇರಿಸಿದ ರಾಸಾಯನಿಕ ಕೋಶದ ಜೀವಾವಧಿ ಕಾಲಮಾನವನ್ನೇನೊ ಎರಡರಷ್ಟಾಗಿಸಿತ್ತು; ತಾರ್ಕಿಕವಾಗಿ ದುಪ್ಪಟ್ಟು ಕಾಲವಾದ ನಂತರ ಕೋಶ ಮತ್ತೆ ನಶಿಸಿಹೋಗಬೇಕಿತ್ತು. ಆದರೆ ಹಾಗಾಗಲಿಲ್ಲ – ಬದಲು ಆ ಹೊಸ ರಾಸಾಯನಿಕದ ಮತ್ತೊಂದು ಪ್ರಚೋದಕ ತತ್ವದಿಂದಾಗಿ ಒಂದು ವಿಧದ ಸ್ವಯಂಭುತ್ವ ಪ್ರಾಪ್ತವಾದಂತೆ, ನಶಿಸಿಹೋಗಬೇಕಾಗಿದ್ದ ಜೀವಕೋಶ ಮತ್ತೆ ಪುನರುಜ್ಜೀವನಗೊಂಡಂತೆ ಸಕ್ರಿಯಗೊಂಡು ಮತ್ತೊಂದು ಜೀವನ ಚಕ್ರವನ್ನು ಆರಂಭಿಸಿಬಿಟ್ಟಿತ್ತು…! ಈ ಪ್ರಕ್ರಿಯೆ ಹೀಗೆ ಮುಂದುವರೆಯುತ್ತ ಸುಮಾರು ಒಂಭತ್ತು ಜೀವನ ಚಕ್ರಗಳ ಆವರ್ತನದ ನಂತರವಷ್ಟೆ ಆ ಮೂಲ ಜೀವಕೋಶ ಮತ್ತೆ ನಿಷ್ಕ್ರಿಯ ಸ್ಥಿತಿ ತಲುಪಿ ಸ್ತಬ್ದವಾಯ್ತು. ಅದು ಮುಗಿಯುತ್ತಿದ್ದಂತೆ ಮತ್ತೆ ವೇದಿಕೆಗೆ ಬಂದ ಗೌತಮ ಅದರ ಮಹತ್ವವನ್ನು ಎತ್ತಿ ತೋರಿಸಿದ. ಹೊಸ ರಾಸಾಯನಿಕದ ಫಲವಾಗಿ ಕೋಶ ಅರ್ಥಾತ್ ಜೀವಿಯ ಆಯಸ್ಸು ಹತ್ತುಪಟ್ಟು ಹೆಚ್ಚಾದಂತೆ ಎಂದು ವಿವರಿಸಿದ. ಜತೆಗೆ ಸೇರಿಸಿದ ಗಾತ್ರಕ್ಕನುಗುಣವಾಗಿ ಅದನ್ನು ಸ್ವಲ್ಪಸ್ವಲ್ಪವೇ ಬಳಸಿಕೊಳ್ಳುತ್ತ ಹಲವಾರು ಚಕ್ರಗಳಲ್ಲಿ ಪುನರಾವರ್ತಿಸಿಕೊಳ್ಳುವ ಅದರ ಸ್ವಯಂಭುತ್ವದ ಮಹತ್ವವನ್ನು ವಿವರಿಸುತ್ತ ಈ ತತ್ವ ಹೇಗೆ ಜೀವಿಗಳ ಕಾಲಾವಧಿಯನ್ನು ತನಗೆ ತಾನೇ ವಿಸ್ತರಿಸಿಕೊಳ್ಳುತ್ತ ಹೋಗಬಹುದೆನ್ನುವುದನ್ನು ವಿಷದೀಕರಿಸಿದ – ರಾಸಾಯನಿಕದ ಗಾತ್ರಕ್ಕನುಗುಣವಾಗಿ.

ಅದನ್ನು ಪ್ರಮಾಣೀಕರಿಸುವ ಮುಂದಿನ ಮಾಹಿತಿ ನಂತರ ಪ್ರದರ್ಶಿತವಾಯ್ತು. ಈ ಬಾರಿ ಹೊಸ ರಾಸಾಯನಿಕವನ್ನು ಹೊರಗಿನಿಂದ ಸೇರಿಸುವ ಬದಲು, ಜೀವಕೋಶವು ಅದನ್ನು ತಂತಾನೆ ಉತ್ಪಾದಿಸಿಕೊಳ್ಳುವಂತೆ ಮಾಡಿದ ಸಂಶೋಧನೆಯನ್ನು ತೋರಿಸಲಾಯ್ತು. ಜೀವಕೋಶದಲ್ಲೆ ಈ ತತ್ವ ಬೀಜರೂಪದ ಮಟ್ಟದಲ್ಲಿ ಸೇರಿಬಿಟ್ಟಿತೆಂದರೆ ಅದರರ್ಥ ಸಾವಿಲ್ಲದ ಅಮರತ್ವವನ್ನು ಸಾಧಿಸಿದ ಹಾಗೆ. ಆ ಕೋಶ ನಿರಂತರ ಜೀವನ ಚಕ್ರದ ಪುನಾರಾವರ್ತನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನೈಸರ್ಗಿಕ ಸಾವೆನ್ನುವುದೆ ಇಲ್ಲವಾಗಿಬಿಡುತ್ತದೆ. ಹೀಗೆ ಜೀವಿಯ ಆಯಸ್ಸಿನ ವೃದ್ಧಿಗೆ ಇದು ಸ್ವಯಂಚಾಲಕತ್ವ ನೀಡುವ ಅದ್ಭುತ ಸಂಶೋಧನೆಯೆಂದು ಮನದಟ್ಟಾಗಿಸುತ್ತಿದ್ದ ಹಾಗೆಯೆ ಸಭೆಯೆಲ್ಲ ಪ್ರಚಂಡ ಕರತಾಡನದಿಂದ ತುಂಬಿಹೋಯ್ತು.

ಇನ್ನು ನಂತರದ ಸರದಿ ಎರಡನೆ ತಂಡದ್ದು. ಮೂರನೆ ತಂಡದ ಫಲಿತಗಳೆಲ್ಲ ಜೀವಕೋಶದ ಮಟ್ಟದ್ದು. ಮೂಲರೂಪದಲ್ಲಿ ಅದನ್ನು ಬಳಸಿಕೊಳ್ಳುತ್ತ ಹೇಗೆ ಅಂಗ, ಅಂಗಾಶಗಳ ಮಟ್ಟಕ್ಕೆ ವಿಸ್ತರಿಸಬಹುದೆನ್ನುವ ಸಂಶೋಧನೆ, ಪ್ರಯೋಗ ಈ ತಂಡದ್ದು. ಮೊದಲ ತಂಡದ ಕಸಿ ಮಾಡಿದ ಜೀವಕೋಶಗಳನ್ನು ತೆಗೆದುಕೊಂಡು, ಅದಕ್ಕೆ ಎರಡನೆ ತಂಡದ ಫಲಿತಾಂಶವನ್ನು ಸಮೀಕರಿಸಿ ನಂತರ ಕಣ್ಣು, ಕೈ, ಹೃದಯದಂತಹ ಕೆಲವು ಉದಾಹರಣೆಗಳನ್ನು ಬಳಸಿ, ಈ ತತ್ವಗಳು ಕಾರ್ಯ ನಿರ್ವಹಿಸುತ್ತವೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು, ಸಾಧಿಸಿ ತೋರಿಸುವುದು ಈ ತಂಡದ ಗುರಿಯಾಗಿದ್ದ ಕಾರಣ ಎಲ್ಲರಿಗೂ ಇಲ್ಲಿ ವಿಶೇಷ ಆಸಕ್ತಿ. ಹಸ್ತವೊಂದನ್ನು ಉದಾಹರಣೆಯಾಗಿಟ್ಟುಕೊಂಡು ಹೇಗೆ ಅದು ಹೆಚ್ಚುಕಾಲ ತನ್ನನ್ನೆ ಜೀವಂತವಾಗಿಟ್ಟುಕೊಳ್ಳುತ್ತದೆಂಬುದನ್ನು ನಿರೂಪಿಸುತ್ತ ಇದೇ ಮಾದರಿ ಎಲ್ಲಾ ಅಂಗಾಗಗಳಲ್ಲು ಪುನರಾವರ್ತಿಸಬಹುದೆಂದು ವಿವರಿಸಲಾಯ್ತು. ಅಲ್ಲೂ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು – ಕಡಿದು ಹಾಕಿದ್ದ ಬೆರಳಿನ ಭಾಗವೊಂದು ತಂತಾನೆ ಮತ್ತೆ ಚಿಗುರಿಕೊಂಡಂತೆ ಬೆಳೆದು ಮೊದಲಿನ ಆಕಾರಕ್ಕೆ ಕುದುರಿಕೊಂಡಿದ್ದು. ಈ ಬಾರಿ ಮತ್ತೆ ಗೌತಮ ವೇದಿಕೆಗೆ ಬಂದು ಈ ಸಂಶೋಧನೆಯ ಸಾಧಕಭಾಧಕತೆ , ಮಿತಿಗಳನ್ನು ವಿವರಿಸಿದ ನಂತರ ಮುಂದಿನ ನಾಲ್ಕನೇ ತಂಡದ ಸರದಿ. ಇದರ ನಾಯಕತ್ವ ಗೌತಮನದೆ ಆದ ಕಾರಣ ಅವನೆ ಮುಂಚೂಣಿಯಲ್ಲಿ ನಿಂತು ವಿವರಿಸತೊಡಗಿದ.

ನಾಲ್ಕನೇ ತಂಡವಾಗಿ ಪ್ರತಿಯೊಂದರ ಗುಣಮಟ್ಟ ಮಾಪನೆ ಮತ್ತು ಸಂಯೋಜಿತ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಜವಾಬ್ದಾರಿಯನ್ನು ವಿವರಿಸಿದ ಗೌತಮ ತಮ್ಮ ತಂಡದ ನಿಜವಾದ ಕಾರ್ಯ ಇನ್ನು ಮುಂದಿನ ಹಂತದಲ್ಲಿ ಎಂದು ವಿವರಿಸುತ್ತ, ಆ ಹಂತದಲ್ಲಿ ಏನು ಮಾಡಲಿದೆ ಎನ್ನುವುದನ್ನು ಸಾಂಕೇತಿಕವಾಗಿ ಚಿತ್ರಿಸತೊಡಗಿದ. ಅದಕ್ಕೂ ಮುನ್ನ ಇದುವರೆಗೂ ನಡೆದ ಕಾರ್ಯಗಳು ಮೊದಲಿನ ಹಂತದ್ದಾಗಿ ಕೇವಲ ನಾಲ್ಕು ತಂಡಗಳಿಗೆ ಸೀಮಿತವಾಗಿದ್ದ ಹಿನ್ನಲೆ ವಿವರಿಸುತ್ತ, ಮುಂದಿನ ಮಹಾನ್ ಹಂತದಲ್ಲಿ ಮಿಕ್ಕವರೆಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳಬೇಕಾದ ಮಾಹಿತಿ ನೀಡುತ್ತ ತನ್ನ ವಿಶಾಲ ಕಾರ್ಯಯೋಜನೆಯನ್ನು ಬಿಚ್ಚಿಡತೊಡಗಿದ. ಸಾರಾಂಶದಲ್ಲಿ ಮೊದಲ ಹಂತದ ಫಲಿತಾಂಶಗಳನ್ನೆ ಮೂಲ ಸರಕಾಗಿ ಬಳಸುತ್ತ ಮಿಕ್ಕವರೆಲ್ಲರೂ ತಂತಮ್ಮ ವಿಭಾಗದಲ್ಲಿ ಕಾರ್ಯ ಮುಂದುವರೆಸಬೇಕಿತ್ತು. ಅದನ್ನು ಸಮಗ್ರ ರೂಪದಲ್ಲಿ ಆಯೋಜಿಸಿ, ಪರೀಕ್ಷಿಸುವ ಕಾರ್ಯವನ್ನು ನಾಲ್ಕನೇ ತಂಡ ಮುಂದುವರೆಸಲಿತ್ತು. ಎಲ್ಲಾ ತಾಂತ್ರಿಕ ವಿಷಯಗಳನ್ನು ವಿವರಿಸುತ್ತ ಕೊನೆಗೆ ಮುಂದಿನ ಹಂತದ ಕಾರ್ಯಯೋಜನೆಯನ್ನು ಸಾಧಿಸಬೇಕಾದ ಗುರಿಗಳ ಸಾರರೂಪದಲ್ಲಿ ಮಂಡಿಸಿದ ಗೌತಮ;

– ಮೊದಲ ಹಂತದ ಫಲಿತ ಬಳಸಿ ಪ್ರತಿ ಅಂಗಾಂಗಗಳನ್ನು ಹೊಸತಾಗಿ ನಿರ್ಮಿಸುವುದು

– ಎಲ್ಲವನ್ನು ಒಗ್ಗೂಡಿಸಿ ಮಾನವ ಜೀವಿಯಾಗಿಸಿ ಅದು ಸಮಷ್ಟಿತ ರೂಪದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುವುದು

– ಹಾಗೆ ಕ್ರೋಢೀಕರಿಸಿದ ಮಾದರಿಯನ್ನು ‘ಅಹಲ್ಯೆ’ಯೆಂಬ ಹೆಸರಿನ ಜೀವಿಯಾಗಿಸಿ ಭುವಿಯ ವಾತಾವರಣದಲ್ಲಿ ಒಂದು ಜೀವಿತ ಕಾಲ ಪರೀಕ್ಷಿಸುವುದು

– ಕೊನೆಗೆಲ್ಲವನ್ನು ಸೂಕ್ಷ್ಮಾತಿಸೂಕ್ಷ್ಮ ಸೂತ್ರ ಬೀಜರೂಪಕ್ಕೆ ಪ್ರಕ್ಷೇಪಿಸಿ ವೀರ್ಯಾಣು, ಅಂಡಾಣುಗಳ ಮಟ್ಟಕ್ಕೆ ಬೇರ್ಪಡಿಸಿಟ್ಟು ಅಹಲ್ಯಾ ಸಂತಾನ ಅಥವಾ ಮುಂದಿನ ಸಂತತಿಯ ಆಯ್ದ ಮಾನವ ಜೀವಿಗಳಲ್ಲಳವಡಿಸಿ, ಸೃಷ್ಟಿಕ್ರಿಯೆಯ ನಿಯಂತ್ರಿತ ಸ್ವಯಂಚಾಲಿಕತ್ವವನ್ನು ಸಾಧಿಸುವುದು.

– ಭುವಿಯ ಸುತ್ತಲಿನ ಚರಾಚರ ಪರಿಸರದ ಮಟ್ಟದಲ್ಲಿ ಅದು ಹೊಂದಿಕೊಳ್ಳುವಂತೆ ಸೂಕ್ತವಾಗಿ ಮಾರ್ಪಡಿಸುವುದು.

– ಈ ಸೃಷ್ಟಿಕ್ರಿಯೆ ಸರ್ವತಂತ್ರ ಸ್ವತಂತ್ರವಾಗಿ, ಸ್ವಯಂ ನಿಯಂತ್ರಿತವಾಗಿ, ಸ್ವಯಂಚಾಲಿತವಾಗಿ ನಡೆಯುವಂತೆ ಬೇಕಾದ ಸಾಮಾಜಿಕ ಪರಿಸರ, ನೀತಿ ಸಂಹಿತೆ ಮತ್ತಿತರ ಪೂರಕಾಂಶಗಳನ್ನು ಆಯೋಜಿಸುವುದು.

ಇಷ್ಟೆಲ್ಲ ಆದ ಮೇಲೆ ಎಲ್ಲರಿಗು ತಮ್ಮ ಮುಂದಿನ ಹಂತದ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಕೊಟ್ಟು ನಂತರ ಸಭೆ ಮುಕ್ತಾಯವಾಗಿತ್ತು – ದೊಡ್ಡ ಔತಣಕೂಟದೊಂದಿಗೆ.

(ಇನ್ನೂ ಇದೆ)

00669. ಅಹಲ್ಯಾ_ಸಂಹಿತೆ_೪೧ (ಕೋಶದ ಜೀವಾವಧಿ ವಿಸ್ತರಣಾ ತಂತ್ರ !) 


00669. ಅಹಲ್ಯಾ_ಸಂಹಿತೆ_೪೧ (ಕೋಶದ ಜೀವಾವಧಿ ವಿಸ್ತರಣಾ ತಂತ್ರ !) 
_______________________________________

(Link to last episode 40: https://nageshamysore.wordpress.com/2016/04/09/00646-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a6-%e0%b2%9c%e0%b3%80%e0%b2%b5%e0%b2%95%e0%b3%8b%e0%b2%b6%e0%b2%a6/)

ಅಧ್ಯಾಯ – ೧೨
____________

ಅಲ್ಲಿಂದಾಚೆಗೆ ಎಲ್ಲಾ ಕ್ಷಿಪ್ರಗತಿಯಲ್ಲಿ ಸಾಗತೊಡಗಿತು – ಸಮಾನಾಂತರ ಕಿರುಪಥಗಳಲ್ಲಿ. ಗೌತಮ ಊರ್ವಶಿಯ ಮುಖೇನ ಎಲ್ಲರಿಗು ಸುತ್ತೋಲೆ ಕಳಿಸಿ ಸ್ಪಷ್ಟಪಡಿಸುವಂತೆ ಹೇಳಿದ್ದ – ಪ್ರತಿ ತಂಡದ ಪ್ರಯೋಗಕ್ಕೂ ಜೀವಕೋಶದ ಮೂಲಸಿದ್ದಾಂತ ಒಂದೇ ಇರಬೇಕೆಂದು. ಹೀಗಾಗಿ ಯಾರೂ ತಮತಮಗೆ ತೋಚಿದ ವಿಭಿನ್ನ ಹಾದಿ ಹಿಡಿಯದೆ ಒಂದೆ ನೆಲೆಗಟ್ಟಿನ ಮೂಲತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಿತ್ತು. ಇದರಿಂದಾಗಿ ಸ್ಥಳೀಯವಾಗಿ ತಾತ್ಕಾಲಿಕ ವೇಗದ ಕುಂಠಿತವಾಗುವುದಾದರು ತದನಂತರದ ಕ್ಲೇಷಗಳಿಗೆ ಆರಂಭದಲ್ಲೇ ತಡೆ ಹಾಕಲು ಇದೇ ಸೂಕ್ತ ದಾರಿಯಾಗಿತ್ತು. ಆದರು ಅವರೆಲ್ಲ ತಂತಮ್ಮ ಪ್ರಯೋಗಗಳನ್ನು ಸೀಮಿತ ಮಟ್ಟದಲ್ಲಿ ಸದ್ಯದ ಮಾದರಿಯ ಆಧಾರದಲ್ಲೇ ನಡೆಸಿಕೊಳ್ಳುತ್ತ ಪೂರ್ವಸಿದ್ದತಾ ತೀರ್ಮಾನಗಳನ್ನು , ಅಂತಿಮ ಪ್ರಯೋಗದ ಸಿದ್ದತೆಯ ರೂಪುರೇಷೆಗಳನ್ನು ಮಾಡಿಕೊಳ್ಳಲು ಅಡ್ಡಿಯಿರಲಿಲ್ಲ.

ಈ ಅವಸರದ ಪ್ರತಿಬಂಧಕವನ್ನು ಅಳವಡಿಸಿಕೊಂಡಾದ ಮೇಲೆ ಪ್ರತಿತಂಡದಿಂದಾಯ್ದ ಎಲ್ಲಾ ಜೀವಕೋಶ ತಜ್ಞರ ತಂಡದ ಸಮಷ್ಟಿತ ಗುಂಪಿನ ಜತೆ ಪ್ರಮುಖ ಅಂಶದ ಮೊದಲ ಹಂತದ ಪ್ರಯೋಗ ಆರಂಭವಾಯ್ತು. ಗೌತಮನೆ ಅದರ ಮುಂದಾಳತ್ವ ವಹಿಸಿ ಕೆಲವು ಖಚಿತ ಗುರಿಗಳನ್ನು ನಿಗದಿಪಡಿಸಿ, ಪ್ರತಿ ಗುರಿಗೂ ಒಂದೊಂದು ಸಣ್ಣಗುಂಪನ್ನು ಪುನರ್ವಿಂಗಡಣೆ ಮಾಡಿ ಪ್ರತಿಯೊಬ್ಬರೂ ಒಂದು ವಿಷಯದ ಮೇಲೆ ಮಾತ್ರ ಕಾರ್ಯ ನಿರ್ವಹಿಸುವಂತೆ ಆಯೋಜಿಸಿದ. ಆ ಪ್ರಮುಖ ವಿಷಯಗಳು ಅವರು ಅದುವರೆವಿಗೂ ಚರ್ಚಿಸಿ ನಿರ್ಧರಿಸಿದ ವಿಷಯಗಳ ಸಾರವೇ ಆಗಿತ್ತು.

೧. ಮೊದಲ ಕಿರುತಂಡ : ಎರಡು ವಿಭಿನ್ನ ಸ್ತರದ ಜೀವಕೋಶಗಳನ್ನು ಕಸಿ ಮಾಡುವುದು ಮತ್ತು ಪರಿಪೂರ್ಣವಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ಹೊಸ ಸಂಯುಕ್ತ ಜೀವಕೋಶದ ಸೃಷ್ಟಿ ಮಾಡುವುದು ಮತ್ತದರ ಬೀಜವಿನ್ಯಾಸವನ್ನು ಸಿದ್ದಪಡಿಸುವುದು ( ಅದನ್ನು ಪ್ರತಿ ತಂಡವೂ ತಮ್ಮ ಕ್ಷೇತ್ರಕ್ಕೆ ಅಳವಡಿಸಿಕೊಳ್ಳುವ ಹಾಗೆ).

೨. ಎರಡನೆ ಕಿರುತಂಡ : ಜೀವಕೋಶದ ಆಯಸ್ಸು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಿ ಅದರ ಮೂಲಸಿದ್ದಾಂತದ ಅಳವಡಿಕೆಯ ಸಾಧ್ಯತೆಯ ಪ್ರಯೋಗ ನಡೆಸುವುದು. ಪ್ರಯೋಗದ ಪೂರಕ ಫಲಿತಾಂಶವನ್ನು ಹೊಸತಾಗಿ ಸೃಜಿಸಿದ ಜೀವಕೋಶಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಬೀಜವಿನ್ಯಾಸವನ್ನು ಸಿದ್ದಪಡಿಸುವುದು.

೩. ಮೂರನೆ ಕಿರುತಂಡ : ಜೀವಕೋಶದ ಸ್ವಯಂ-ನಿಯಂತ್ರಣ ಸಾಧ್ಯವಾಗುವಂತಹ ಸ್ವಯಂಭುತ್ವದ ಪರಿಶೀಲನೆ, ಪ್ರಯೋಗ ನಡೆಸಿ ಅದರ ಪೂರಕ ಫಲಿತಾಂಶವನ್ನು ಮೂಲಸಿದ್ದಂತದ ರೂಪದಲ್ಲಿ ಕಸಿ ಮಾಡಿದ ಹೊಸ ಜೀವಕೋಶಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುವಂತಹ ಬೀಜವಿನ್ಯಾಸವನ್ನು ಸಿದ್ದಪಡಿಸುವುದು.

೪. ನಾಲ್ಕನೇ ಕಿರುತಂಡ: ಮಿಕ್ಕ ಮೂರರ ಫಲಿತವನ್ನು ಸಂಯುಕ್ತ ರೂಪದಲ್ಲಿ ಕ್ರೋಢೀಕರಿಸಿ ಹೊಸದಾಗಿ ಕಸಿಯಾದ ಕೋಶದಲ್ಲಿ ಸೂಕ್ತವಾಗಿ ಅಳವಡಿಸಿ, ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆ. ಜತೆಗೆ ನಂತರದ ಹಂತದ ಪ್ರಯೋಗಗಳಿಗೆ ಮತ್ತದರ ತಂಡಗಳ ಅಗತ್ಯಗಳಿಗೆ ಅನುಸಾರವಾಗಿ ಸೂಕ್ತ ಹೊಂದಾಣಿಕೆ, ಮಾರ್ಪಾಡುಗಳನ್ನು ನೋಡಿಕೊಳ್ಳುವ ಜವಾಬ್ದಾರಿ. ಈ ನಾಲ್ಕನೇ ತಂಡವನ್ನು ಸ್ವತಃ ಗೌತಮನೆ ಮುನ್ನಡೆಸಲು ನಿರ್ಧರಿಸಿದ್ದ.

ಈ ಹಂತದ ನಾಲ್ಕು ಕಿರುತಂಡಗಳ ಕಾರ್ಯ ಮುಗಿಯುತ್ತಿದ್ದಂತೆ ಎರಡನೆ ಹಂತದಲ್ಲಿ ಪ್ರತಿಯೊಬ್ಬರೂ ಅದರ ಫಲಿತವನ್ನು ಬಳಸಿ, ಯಥಾನುಸಾರ ಅಳವಡಿಸಿಕೊಂಡು ತಂತಮ್ಮ ಸಂಶೋಧನೆಯನ್ನು ಮುಂದುವರೆಸಬೇಕೆಂದು ಈಗಾಗಲೇ ನಿರ್ಧರಿಸಿಯಾಗಿದ್ದ ಕಾರಣ ಎಲ್ಲರೂ ಈ ಹಂತದ ಫಲಿತಕ್ಕೆ ಕಾತರದಿಂದ ಕಾಯುವ ಸ್ಥಿತಿ ನಿರ್ಮಾಣವಾಗಿಹೋಗಿತ್ತು.

ಇಷ್ಟೆಲ್ಲಾ ಸಿದ್ದತೆಗಳಾದ ಬಳಿಕ ಎಲ್ಲಾ ನಾಲ್ಕು ತಂಡಗಳು ತಂತಮ್ಮ ವ್ಯಾಪ್ತಿಯಲ್ಲಿ ಕಾರ್ಯಯೋಜನೆಯನ್ನು ಆರಂಭಿಸಿಬಿಟ್ಟವು – ಸಾಧ್ಯವಿದ್ದಷ್ಟು ವೇಗದಲ್ಲಿ. ಆ ವೇಗದ ತೀವ್ರತೆ ಎಷ್ಟಿತ್ತೆಂದರೆ ಅದರಲ್ಲಿ ತೊಡಗಿಸಿಕೊಂಡವರಾರಿಗು ಸಮಯ ಕಳೆದುದಾಗಲಿ, ಉರುಳಿದ್ದಾಗಲಿ ಅರಿವಿಗೆ ನಿಲುಕದಷ್ಟು ಕ್ಷಿಪ್ರವಾಗಿ. ಅದನ್ನು ಅದ್ಭುತವಾಗಿ ಸಂಯೋಜಿಸಿ, ಸೂತ್ರಧಾರಿಯಂತೆ ಪ್ರತಿಯೊಂದು ಕೊಂಡಿಯನ್ನು ಅಚ್ಚುಕಟ್ಟಾಗಿ ಸಮಷ್ಟಿಸುತ್ತ ನಿಭಾಯಿಸಿಕೊಂಡು ಹೋದ ಗೌತಮನಿಗೆ ನಿಜಕ್ಕೂ ಬೆನ್ನೆಲುಬಾಗಿ ಸಹಕರಿಸಿದವಳು ಊರ್ವಶಿಯೆ. ಆದರೆ ಗೌತಮನ ನಿರೀಕ್ಷೆಗೂ ಮೀರಿದ ಅಮೋಘ ಸಹಕಾರ ದೊರಕಿದ್ದು ದೇವರಾಜನ ಮೂಲಕ. ಎಲ್ಲಾ ಬಿಡಿ ಭಾಗಗಳು ಯಾವ ರೀತಿಯ ಕೊಂಡಿಯಲ್ಲಿ ಸಂಪರ್ಕವಿರಿಸಿಕೊಳ್ಳಬೇಕು, ಯಾವ ರೀತಿ ಸಂವಹಿಸಬೇಕು, ಹೇಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು, ಹೇಗೆ ಸಹಕರಿಸಬೇಕು – ಎಂಬೆಲ್ಲಾ ಮೂಲ ನೀತಿಸಂಹಿತೆಯನ್ನು ರೂಪಿಸಿ ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಯೋಜನೆ ರೂಪಿಸಿ, ಹಾಗೆಯೇ ನಡೆಯುವಂತೆ ನೋಡಿಕೊಂಡವನು ಅವನೇ. ಅವನ ಶಿಸ್ತುಬದ್ಧ ವ್ಯವಸ್ಥಾಪಕ ವಿಧಾನಕ್ಕೆ ಮಾರುಹೋದ ಗೌತಮನೂ, ಮೊದಲಿಗಿಂತ ಹೆಚ್ಚಾಗಿಯೇ ಅವನ ಸಲಹೆ, ಸಹಕಾರದ ನೆರವು ಪಡೆಯತೊಡಗಿದ.

************

ಸಮಯ ಉರುಳಿದಂತೆ ಸಂಶೋಧನೆಯ ಪ್ರಯೋಗಗಳೆಲ್ಲ ಭರದಿಂದ ಸಾಗತೊಡಗಿದ್ದವು – ನಿರೀಕ್ಷೆಗೂ ಮೀರಿದ ವೇಗದಲ್ಲಿ ಫಲಿತಾಂಶ ನೀಡುತ್ತ. ಅದರಲ್ಲೆಲ್ಲ ಪ್ರಮುಖವಾದದ್ದೆಂದರೆ ಮೊದಲ ಕಿರುತಂಡದ ಜೀವಕೋಶದ ಕಸಿಮಾಡುವ ಪ್ರಯತ್ನ. ಉಚ್ಚೈಶ್ರವಸ್ಸನ್ನು ಸೃಜಿಸಿದ ಮಾದರಿಯಲ್ಲಿ ಊರ್ವಶಿಯ ಉನ್ನತ ಶ್ರೇಣಿಯ ಪರಿಪಕ್ವ ಜೀವಕೋಶದ ತಳಿಯನ್ನು ಚಾಲ್ತಿಯಲ್ಲಿರುವ ಅಪಕ್ವ ಜೀವಕೋಶದ ತಳಿಯ ಜೊತೆ ಸಮೀಕರಿಸಿ ಕಸಿ ಮಾಡಬೇಕಿತ್ತು. ಆದರೆ ಆಗ ಮೊದಲು ಎದುರಾದ ಪ್ರಶ್ನೆ – ಊರ್ವಶಿಯ ಕೋಶದ ಜತೆ ಕಸಿ ಮಾಡಲು ಯಾರ ಕೋಶ ಬಳಸುವುದು? ಎಂದು.

” ನಮ್ಮ ಸಂಶೋಧನೆಯ ಪ್ರಗತಿಗೆ ಇದು ಬಹು ಮುಖ್ಯ ಅಂಶ.. ಊರ್ವಶಿಯ ತಳಿಯ ಶ್ರೇಷ್ಠತೆ ಬಗ್ಗೆ ಎರಡು ಮಾತಿಲ್ಲ. ಆದರೆ ಅದರ ಜತೆಗೆ ಹೊಂದಾಣಿಸುವ ಕೋಶದ ಪಕ್ವತೆ ಅಥವಾ ಸಿದ್ದತೆ ತೀರಾ ಕನಿಷ್ಠ ಮಟ್ಟದ್ದಾದರೆ, ನಾವು ನಡೆಸಬೇಕಾದ ಕಸಿ ಆವರ್ತಗಳ ಸಂಖ್ಯೆ ಹೆಚ್ಚಾಗಬೇಕಾಗುತ್ತದೆ. ಅರ್ಥಾತ್ ಮೊದಲ ಯತ್ನದಲ್ಲಿ ಸಿಕ್ಕ ಯಶಸನ್ನು ಮೂಲವಸ್ತುವನ್ನಾಗಿಸಿಕೊಂಡು ಎರಡನೆ ಪ್ರಯೋಗ, ತದನಂತರ ಅದೇ ರೀತಿ ಮೂರು, ನಾಲ್ಕು, ಐದನೆಯದನ್ನು ನಡೆಸಬೇಕಾಗುತ್ತದೆ – ನಾವು ಎದುರು ನೋಡುತ್ತಿರುವ ಅಂತಿಮ ಫಲಿತಾಂಶವನ್ನು ಸಾಧಿಸುವತನಕ. ಆದರೆ ಆರಂಭದಲ್ಲಿಯೇ ಸಾಧ್ಯವಾದಷ್ಟು ಉತ್ತಮ ತಳಿಯನ್ನು ಬಳಸಲು ಸಾಧವಾಗುವುದಾದರೆ ಆ ಆವರ್ತಗಳ ಸಂಖ್ಯೆಗೆ ಕಡಿವಾಣ ಹಾಕಬಹುದು..” ಎಂದು ಮಾತಿಗಾರಂಭಿಸಿದ ಗೌತಮ. ಯಾರ ಕೋಶ ಬಳಸಬೇಕೆಂಬುದರ ಚರ್ಚೆಗಾಗಿಯೇ ಆ ಸಭೆ ಕರೆಯಲಾಗಿತ್ತು ಬ್ರಹ್ಮದೇವ, ದೇವರಾಜ, ಸೂರ್ಯದೇವ, ಗೌತಮ ಮತ್ತು ಊರ್ವಶಿಯರ ಉಪಸ್ಥಿತಿಯಲ್ಲಿ.

ಗೌತಮನ ಪ್ರಶ್ನಾರ್ಥಕ ಮಾತಿನಿಂದ ಆರಂಭವಾದ ಈ ಸಂವಾದ ಪರಸ್ಪರರ ಅಭಿಪ್ರಾಯ, ಆಲೋಚನೆಗಳನ್ನು ಮಂಡಿಸುವ ಧೀರ್ಘ ಚರ್ಚೆಯಾಗಿ ಪ್ರತಿ ಸಾಧ್ಯತೆಯ ಸಾಧಕ ಬಾಧಕಗಳ ಮಂಡನೆ, ತುಲನೆಯ ಅಖಾಡವಾಗಿ ಪರಿವರ್ತಿತವಾಗಿತ್ತು. ಆವರ್ತನ ಯತ್ನಗಳ ಗಣನೆಯನ್ನು ಲೆಕ್ಕಿಸದೆ ಯಾವುದಾದರೊಂದು ಆಯ್ಕೆಯೊಡನೆ ಮುಂದುವರೆಯಬೇಕೆಂಬುದು ದೇವರಾಜನ ಅಭಿಪ್ರಾಯವಾಗಿದ್ದರೆ ಸೂರ್ಯದೇವನದು ಅದಕ್ಕೆ ತದ್ವಿರುದ್ಧವಾದ ಉತ್ಕೃಷ್ಟವಾದ ಆಯ್ಕೆಯನ್ನೇ ಪರಿಗಣಿಸಬೇಕೆಂಬ ವಾದವಾಗಿತ್ತು.

” ಸೂರ್ಯದೇವ..ನಿನ್ನ ಮಾತು ಕೇಳುತ್ತಿದ್ದರೆ, ನಿನ್ನ ಮನದಲ್ಲಾಗಲೇ ಯಾವುದೋ ಒಂದು ಆಯ್ಕೆಯ ಸಾಧ್ಯತೆಯನ್ನು ಪರಿಗಣಿಸಿಕೊಂಡೆ ಈ ಮಾತಾಡುತ್ತಿರುವಂತಿದೆ. ಹಾಗೇನಾದರು ಇದ್ದಲ್ಲಿ ಸೂಚಿಸಬಹುದಲ್ಲ ?” ಎಂದು ಸೂರ್ಯದೇವನನ್ನೆ ಪ್ರಚೋದಿಸಿದ ದೇವರಾಜ.

ಅವನ ಮಾತಿಗೆ ಹೌದೆನ್ನುವಂತೆ ತಲೆಯಾಡಿಸುತ್ತ, “ಇರುವುದೇನೋ ನಿಜವೇ ಮಹೇಂದ್ರ.. ಬ್ರಹ್ಮದೇವನ ಅಭ್ಯಂತರವೇನು ಇಲ್ಲವೆಂದಾದರೆ ನನ್ನ ಅನಿಸಿಕೆಯನ್ನು ನಿವೇದಿಸಿಕೊಳ್ಳಬಲ್ಲೆ..” ಎಂದ ಸೂರ್ಯ.

” ಇಲ್ಲಿ ಬಿಚ್ಚು ಮಾತಿನ ಅಭಿಪ್ರಾಯ ಮಂಡನೆಗೆ ಯಾವತ್ತೂ ಅಡ್ಡಿ ಆತಂಕಗಳಿರುವುದಿಲ್ಲ ಸೂರ್ಯದೇವ.. ನಿನ್ನ ಅಭಿಪ್ರಾಯವನ್ನು ನಿರಾಳವಾಗಿ ಹೇಳುವಂತವನಾಗು” ಎಂದು ಸ್ವತಃ ಅನುಮತಿಯಿತ್ತ ಬ್ರಹ್ಮದೇವ.

“ಬ್ರಹ್ಮದೇವಾ.. ಇದರಲ್ಲಿ ಯೋಚಿಸಿ ಹೇಳಲಿಕ್ಕೆ ತಾನೇ ಏನಿದೆ? ಈ ಸಂಶೋಧನೆಯ ಪ್ರಮುಖ ರೂವಾರಿ ನೀನೆ ತಾನೇ ? ನಮ್ಮಲ್ಲಿರುವ ಯಾವುದೇ ವ್ಯಕ್ತಿಯನ್ನು ಪರಿಗಣಿಸಿದರೂ ಅದರಲ್ಲಿ ವಯೋವೃದ್ಧ, ಜ್ಞಾನವೃದ್ಧಾ, ಅನುಭವಿ ಮತ್ತು ಪರಿಪಕ್ವ ವ್ಯಕ್ತಿತ್ವವೆಂದರೆ ನಿನ್ನದೇ ತಾನೇ? ಪ್ರಯೋಗದ ಒಡೆತನವೂ ನಿನ್ನದೇ ಆಗಿರುವುದರಿಂದ ಈ ತಳಿ ಕಸಿಗೆ ಬೇಕಾದ ಜೀವಕೋಶ ನಿನ್ನದೇ ಏಕಾಗಬಾರದು ? ನಿನಗಿಂತಲೂ ಉತ್ಕೃಷ್ಠ ಮಟ್ಟ ಇಲ್ಲಿ ಸಿಕ್ಕುವುದಾದರೂ ಉಂಟೆ..? ನನ್ನ ಅಭಿಪ್ರಾಯದಲ್ಲಿ ಇದು ಚರ್ಚೆಯ ವಿಷಯವೇ ಅಲ್ಲ.. ನೀನೆ ಇದರ ಪೂರಕ ಶಕ್ತಿಯಾದರೆ ಎಲ್ಲವೂ ಬಗೆಹರಿದಂತೆ. ನೀನು ಸೃಷ್ಟಿಕರ್ತನ ಹೊಣೆಗಾರಿಕೆ ಹೊತ್ತವನಾದ ಕಾರಣ ಇದು ನಿನಗೆ ಹೊಂದಿಕೆಯೂ ಆಗುತ್ತದೆ.. ಈ ಸಂಶೋಧನೆಯಲ್ಲಿ ಫಲಿತವಾಗಿ ಬರುವ ಜೀವಿಗೆ ನೀನು ಜೈವಿಕ ಮತ್ತು ಮಾನಸ ಪಿತೃವಾಗಿಬಿಡುವುದರಿಂದ ನಿನ್ನದೇ ಸಂತತಿಯ ಅನಾವರಣವಾದಂತಾಗುತ್ತದೆ – ಉತ್ಕೃಷ್ಟ ತಳಿಯ ರೂಪದಲ್ಲಿ..” ಎಂದು ತನ್ನ ವಾದವನ್ನು ಬಲವಾಗಿಯೇ ಮಂಡಿಸಿದ ಸೂರ್ಯದೇವ.

ಸೂರ್ಯನ ಈ ಅಭಿಪ್ರಾಯ ಎಲ್ಲರಿಗು ಚೆನ್ನಾಗಿ ಹಿಡಿಸಿಬಿಟ್ಟಿತು. ದೇವರಾಜನಂತು ಬಹಿರಂಗವಾಗಿಯೆ ಸೂರ್ಯದೇವನನ್ನು ಅಭಿನಂದಿಸಿಬಿಟ್ಟ. ಗೌತಮನ ಮನಸಿನಲ್ಲೂ ಹೆಚ್ಚುಕಡಿಮೆ ಇದೇ ಅಭಿಪ್ರಾಯವಿದ್ದ ಕಾರಣ ಇದು ಅವನಿಗೂ ಸಮ್ಮತವೇ ಆಗಿತ್ತು. ಮಿಕ್ಕವರಲ್ಲಿ ಊರ್ವಶಿಗೆ ಅದರ ಕುರಿತೂ ಯಾವ ಅಭಿಪ್ರಾಯವೂ ಇರಲಿಲ್ಲ; ಯಾರಾದರೇನು , ಎಲ್ಲವೂ ಸರಿಯೇ ಎನ್ನುವ ನಿರ್ಲಿಪ್ತ ಧೋರಣೆಯಲ್ಲಿ. ಬ್ರಹ್ಮದೇವ ಮಾತ್ರ ಆ ಕುರಿತು ತುಸು ತೀವ್ರವಾಗಿ ಆಲೋಚಿಸಿದಂತಿತ್ತು. ಯಾವ ಕೋನದಿಂದ ನೋಡಿದರೂ ಅವನಿಗೂ ಸೂರ್ಯನ ಮಾತಿನಲ್ಲಿ ತಥ್ಯವಿದೆಯೆನಿಸುತ್ತಿತ್ತು. ಜತೆಗೆ ಸೃಷ್ಟಿಕರ್ತನಾಗಿ ಅದು ತನ್ನ ಜವಾಬ್ದಾರಿಯಾದ ಕಾರಣ ಅದರಲ್ಲಿ ತನ್ನ ಛಾಪನ್ನು ಮೂಡಿಸಲು ನೇರ ಅವಕಾಶವೀಯುತ್ತದೆ. ಹೆಚ್ಚುಕಡಿಮೆ, ಒಳ್ಳೆಯದು ಮತ್ತು ಕೆಟ್ಟದ್ದಕ್ಕೆಲ್ಲ ಯಾರನ್ನು ದೂರುವ ಅವಕಾಶವಿರುವುದಿಲ್ಲ – ತನ್ನ ಹೊರತಾಗಿ…

ಇದೆಲ್ಲಾ ಆಲೋಚನೆಗಳ ನಡುವೆ ಅನುಮಾನ ಪರಿಹರಿಸಿಕೊಳ್ಳುವ ಕಿರು ಚರ್ಚೆ ನಡೆದು ಅದೇ ಸರಿಯಾದ ಹಾದಿಯೆಂಬ ತೀರ್ಮಾನದೊಂದಿಗೆ ಅಂತಿಮವಾಗಿತ್ತು ಅಂದಿನ ಸಭೆ.

ಅಲ್ಲಿಂದಾಚೆಗೆ ಮತ್ತೆ ನಾಗಾಲೋಟದ ಗತಿಯಲ್ಲಿ ಕಸಿಯ ಪ್ರಯೋಗ ಮುಂದುವರೆಯಿತು. ನಿರ್ಧರಿಸಿದಂತೆ ಬ್ರಹ್ಮದೇವನ ಮತ್ತು ಊರ್ವಶಿಯ ಜೀವಕೋಶಗಳ ಮಾದರಿಗಳನ್ನು ಸಂಗ್ರಹಿಸಿ ಅವನ್ನು ಕಸಿ ಮಾಡುವ ಹಲವಾರು ವಿಕಲ್ಪಗಳನ್ನು ಸಮಾನಾಂತರವಾಗಿ ನಡೆಸತೊಡಗಿತ್ತು ಆ ವಿಜ್ಞಾನಿಗಳ ತಂಡ. ಹಂತಹಂತವಾಗಿ ನಡೆಯುತ್ತಿದ್ದ ಈ ಪ್ರಯೋಗಕ್ಕೆ ನರನಾರಾಯಣರು ಮಾಡಿಟ್ಟಿದ್ದ ಟಿಪ್ಪಣಿಗಳು ಅತ್ಯುಪಯೋಗಿ ಸರಕಾಗಿ, ಹಲವಾರು ಅಂಶಗಳನ್ನು ನೇರವಾಗಿ ಅಳವಡಿಸಿಕೊಳ್ಳುವಂತೆ ಮಾಡಿ ಕೆಲಸವನ್ನು ಇನ್ನು ಸುಲಭವಾಗಿಸಿಬಿಟ್ಟಿದ್ದವು. ಮುನ್ನೆಚ್ಚರಿಕೆಯ ಕ್ರಮವಾಗಿ ವಿವಿಧ ವಿಕಲ್ಪದಲ್ಲಿ ನಡೆಸಿದ ಪ್ರಯೋಗದ ಕಾರಣದಿಂದ ಅನೇಕ ಮಾದರಿಗಳು ಲಭ್ಯವಾಗಿ, ಒಂದು ಸೋತಲ್ಲಿ ಮತ್ತೊಂದಕ್ಕೆ ಹೊಸತಾಗಿ ಸಮಯ ವ್ಯಯಿಸದೆ ಪ್ರಯೋಗ ಮುಂದುವರೆಸಲು ಸಾಧ್ಯವಾಗಿತ್ತು.

ಇದೆ ಹೊತ್ತಿನಲ್ಲಿ ಎರಡನೆ ಕಿರುತಂಡವೂ ತಂಬ ಪ್ರಯೋಗದಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸತೊಡಗಿತ್ತು. ಹೇಗಾದರೂ ಮಾಡಿ ಜೀವಕೋಶದ ಆಯಸ್ಸು ಹೆಚ್ಚಿಸಬೇಕೆಂಬುದು ಅದರ ಗುರಿ. ಅದರ ಹಿನ್ನಲೆಯೂ ಸರಳವಾಗಿಯೇ ಇತ್ತು. ದೇಹದ ರಚನೆಯಲ್ಲಿ ಪ್ರತಿನಿತ್ಯವೂ ಹೊಸ ಜೀವಕೋಶಗಳು ಹುಟ್ಟುತ್ತಲೇ ಇರುತ್ತವೆ ಮತ್ತು ಹಳತಾದವು ಸಾಯುತ್ತಲೇ ಇರುತ್ತವೆ. ಬಾಲ್ಯದಲ್ಲಿ, ಪ್ರಾಯದಲ್ಲಿ ಹೊಸದಾಗಿ ಹುಟ್ಟುವ ಕೋಶಗಳ ಸಂಖ್ಯೆ ಹೆಚ್ಚಿರುವುದರಿಂದ ಅದರನುಸಾರ ದೇಹದ ಬೆಳವಣಿಗೆಯೂ ಆಗುತ್ತಿರುತ್ತದೆ. ಆದರೆ ಕ್ರಮೇಣ ವೃದ್ಧಾಪ್ಯದತ್ತ ನಡೆಯುವ ಹೊತ್ತಿಗೆ ಹೊಸತರ ಉತ್ಪಾದನೆ ಕುಂಠಿತವಾಗಿಬಿಡುತ್ತದೆ ಮತ್ತು ನಶಿಸಿಹೋಗುವ ಹಳತರ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ. ಯಾವಾಗ ಇವೆರಡರ ನಡುವಿನ ಅಂತರ ಜೀವಿಯ ಉಳಿವಿಗೆ ಸಾಕಾಗುವಷ್ಟು ಶಕ್ತಿಮೂಲವನ್ನು ಒದಗಿಸಲಾಗುವುದಿಲ್ಲವೋ ಆಗ ಆ ದೇಹಕ್ಕೆ ಸಾವು ಹತ್ತಿರವಾಯ್ತೆಂದು ಅರ್ಥ. ಅದನ್ನು ವಿಲಂಬಿಸಬೇಕೆಂದರೆ ಒಂದು ಕಡೆ ಹೊಸ ಕೋಶದ ಉತ್ಪಾದನೆ ನಿರಂತರವಿರುವಂತೆ ನೋಡಿಕೊಳ್ಳಬೇಕು. ಮತ್ತೊಂದೆಡೆ ಜೀವಕೋಶದ ನಶಿಸುವ ಕಾಲದ ಅವಧಿಯನ್ನು ವಿಸ್ತರಿಸುವ ಸಾಧ್ಯತೆಯನ್ನು ಗಮನಿಸಬೇಕು. ಇವೆರಡು ಯಶಸ್ವಿಯಾದರೆ ಅಷ್ಟರ ಮಟ್ಟಿಗೆ ಧೀರ್ಘಾಯಸ್ಸಿನ ಪ್ರಯೋಗ ಯಶಸ್ಸು ಕಂಡಂತೆ. ಆದರೆ ಅದನ್ನು ಸಾಧ್ಯವಾಗಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರವಿದ್ದಿದ್ದು ಮೂರನೆಯ ಕಿರುತಂಡದ ‘ಜೀವಕೋಶದ ಸ್ವಯಂಭುತ್ವ’ ಪ್ರಯೋಗದ ಫಲಿತದಲ್ಲಿ !

ಮೂರನೆಯ ಕಿರುತಂಡದ ಉತ್ಸಾಹದ ಪ್ರಯೋಗದಲ್ಲಿ ಒಂದು ಉಪಯುಕ್ತ ಮಾಹಿತಿ ಅನಾವರಣವಾಗಿಹೋಗಿತ್ತು. ಅದೆಂದರೆ – ಜೀವಕೋಶ ಬದುಕಲು ಮತ್ತು ಸಾಯಲು ಮೂಲಕಾರಣವಾದ ಒಂದು ರಾಸಾಯನಿಕ ಬೀಜವಸ್ತು. ಹೊಸದಾಗಿ ಹುಟ್ಟಿದ ಜೀವಕೋಶದಲ್ಲಿ ಈ ರಾಸಾಯನಿಕ ತಂತು ತೀರಾ ಚುರುಕಾಗಿ, ಸಕ್ರಿಯವಾಗಿರುವತನಕ ಜೀವಕೋಶವೂ ಲವಲವಿಕೆಯಿಂದ ಚಟುವಟಿಕೆಯಿಂದ ಬದುಕಿಕೊಂಡು ಇರುತ್ತಿತ್ತು. ಅದೇಕೋ ಎಂತೋ ಈ ರಾಸಾಯನಿಕ ತಂತು ನಡುವಲ್ಲೊಮ್ಮೆ ಇದ್ದಕ್ಕಿದ್ದಂತೆ ನಿಷ್ಕ್ರಿಯವಾಗಿ, ತನ್ನ ಚಟುವಟಿಕೆಗಳ ಕಾರ್ಖಾನೆಯನ್ನು ನಿಲ್ಲಿಸಿಬಿಡುತ್ತಿತ್ತು. ಆಗಲೆ ಆ ಕೋಶದ ಸಾವಿಗೆ ಮುನ್ನುಡಿ ಆಗುತ್ತಿದ್ದುದ್ದು. ಅದನ್ನು ಯಾವುದಾದರೊಂದು ರೀತಿಯಲ್ಲಿ ಮತ್ತೆ ಉದ್ರೇಕಿಸಿ ಸಕ್ರೀಯಗೊಳಿಸಿಬಿಟ್ಟರೆ ಅದು ಸಾವಿನತ್ತ ನಡೆಯುವ ಬದಲು ಮತ್ತೆ ಚೈತನ್ಯದ ಚಿಲುಮೆಯಾಗಿಬಿಡುತ್ತಿತ್ತು. ಹಾಗೆ ಮಾಡಬಲ್ಲ ಮತ್ತೊಂದು ರಾಸಾಯನಿಕವನ್ನು ಕಂಡುಹಿಡಿದು ಅದನ್ನು ಸಫಲವಾಗಿ ಬಳಸುವ ವಿಧಾನವನ್ನು ಕಂಡುಹಿಡಿದಿದ್ದೆ ಈ ತಂಡದ ಸಾಧನೆ.. ಹೀಗಾಗಿ ಈ ವಿಧಾನದಲ್ಲಿ ಜೀವಕೋಶದ ಜೀವಾವಧಿಯನ್ನು ಲಂಬಿಸುವುದು ಹೇಗೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಹೋಗಿತ್ತು. ಮಿಕ್ಕಿದ್ದೇನಿದ್ದರು ಅಳವಡಿಕೆಯಲ್ಲಿ ಸರಿಯಾಗಿ ಪ್ರವರ್ತಿಸುವ ನಿಗದಿತ ಪ್ರಮಾಣವನ್ನು ನಿರ್ಧರಿಸುವುದಷ್ಟೆ ಕಂಡುಕೊಳ್ಳಬೇಕಾಗಿತ್ತು. ಇದೇ ಸೂತ್ರದ ಮಾದರಿಯನ್ನು ಅನುಕರಿಸಿ ಹೊಸ ಜೀವಕೋಶಗಳ ಸೃಷ್ಟಿಗೂ ಕೂಡ ಇದೇ ಪ್ರಚೋದಕ ರಾಸಾಯನವನ್ನೆ ಬಳಸಬಹುದೆಂದು ಕಂಡುಕೊಂಡಿದ್ದರಿಂದ ಎರಡನೆಯ ತಂಡದ ಎರಡು ಪ್ರಶ್ನೆಗಳಿಗೂ ಒಂದೇ ಉತ್ತರ ಸಿಕ್ಕಂತಾಗಿ ಅವರ ಪ್ರಯೋಗ ನಿರಾಯಾಸವಾಗಿ ಸಾಗಿಸಲು ಅನುಕೂಲವಾಗಿ ಹೋಯ್ತು.

ಇವನ್ನೆಲ್ಲ ಸಮಷ್ಟಿಸುತ್ತಿದ್ದ ನಾಲ್ಕನೇ ಕಿರಿತಂಡದ ಮೇಲ್ವಿಚಾರಣೆಯ ಚಾಕಚಕ್ಯತೆಯಿಂದಾಗಿ ಮೂರು ತಂಡಗಳೂ ಅತಿ ಶೀಘ್ರದಲ್ಲೆ ತಂತಮ್ಮ ಗಮ್ಯ ತಲುಪಿ ಮೊದಲ ಫಲಿತಾಂಶಗಳೊಂದಿಗೆ ಪ್ರಾಥಮಿಕ ಪರೀಕ್ಷೆ , ವಿಮರ್ಶೆಗೆ ತಯಾರಾಗಿಬಿಟ್ಟಿದ್ದವು – ಅನತಿ ಕಾಲದಲ್ಲೇ..!

(ಇನ್ನೂ ಇದೆ)

(Link to next episode no. 42: https://nageshamysore.wordpress.com/2016/04/24/00669-0041_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a7/)

00646. ಅಹಲ್ಯಾ_ಸಂಹಿತೆ_೪೦ (ಜೀವಕೋಶದ ಕಸಿ!)


00646. ಅಹಲ್ಯಾ_ಸಂಹಿತೆ_೪೦ (ಜೀವಕೋಶದ ಕಸಿ!)
___________________________________________

(Link to previous episode 39: https://nageshamysore.wordpress.com/2016/03/31/00628-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%af-%e0%b2%85%e0%b2%82%e0%b2%a4%e0%b2%bf%e0%b2%ae-%e0%b2%b0/)

“ಊರ್ವಶಿಯನ್ನು ನೋಡುವವರೆಗೆ ಅವಳೊಂದು ಅದ್ಭುತ ಸೃಷ್ಟಿಯೆಂಬ ಪ್ರಜ್ಞೆಯುದಿಸಿತ್ತೆ ಹೊರತು ಅದನ್ನು ನೈಸರ್ಗಿಕವಾಗಿ, ಸ್ವನಿಯಂತ್ರಿತ ಪ್ರಕ್ರಿಯೇಯನ್ನಾಗಿ ಸಾಧಿಸಬೇಕಾದರೆ ಏನು ಮಾಡಬೇಕೆಂಬ ಸುಳಿವು ಸಿಕ್ಕಿರಲಿಲ್ಲ.. ಆದರೆ ನರ ಮುನಿಂದ್ರನ ಭೇಟಿಯ ತರುವಾಯ ನನ್ನನ್ನು ಕೊರೆಯುತ್ತಿದ್ದ ಒಂದು ಪ್ರಶ್ನೆ – ಯಾಕೆ ಉಚ್ಚೈಶ್ರವಸ್ಸನ್ನು ಮಾದರಿಯನ್ನಾಗಿ ಪರಿಗಣಿಸಿ ಬಳಸಿಕೊಳಿರೆಂದು ಸಲಹೆ ನೀಡಿದನೆಂದು ಮನವರಿಕೆಯಾಗಿರಲಿಲ್ಲ..” ಬ್ರಹ್ಮದೇವ ತನ್ನ ವಿವರಣೆಯನ್ನು ಆರಂಭಿಸಿದ.

” ಪಿತಾಮಹ.. ನಿಜ ಹೇಳುವುದಾದರೆ ಇದುವರೆವಿಗೂ ನನಗೂ ಅದೇ ಪ್ರಶ್ನೆಯಿದೆ ಮನದಲ್ಲಿ.. ಸೈದ್ದಾಂತಿಕವಾಗಿ ಏನೇ ಹೋಲಿಕೆ ಸಾಧ್ಯವಿದ್ದರೂ ಧ್ರುವಾಂತರವಿರುವ ಎರಡು ಜೀವಗಣಗಳನ್ನು ಹೋಲಿಸಿ ನೋಡಿ, ಮಾದರಿಯನ್ನಾಗಿ ಹೇಗೆ ಬಳಸುವುದೊ ಎಂದು ಇನ್ನೂ ನನಗೆ ಹೊಳೆದಿಲ್ಲ..” ಬ್ರಹ್ಮನ ಮಾತು ಮುಂದುವರೆಯುವ ಮೊದಲೇ ಮಾತು ಜೋಡಿಸಿದ ದೇವರಾಜ.

“ಹೌದು ದೇವರಾಜ.. ನನಗು ಮೊದಲಿದ್ದ ಅನಿಸಿಕೆ ಅದೇ.. ಆದರೆ ಆ ಭೇಟಿಯಲ್ಲಿ ನಡೆಸಿದ ಚರ್ಚೆ, ಮತ್ತೀಗ ಉಚ್ಚೈಶ್ರವಸ್ಸಿನ ಪ್ರತ್ಯಕ್ಷ್ಯ ದರ್ಶನದಿಂದ ಎಲ್ಲವೂ ಕೊಂಚಕೊಂಚವೆ ನಿಲುಕಿಗೆ ಸಿಗುತ್ತಿದೆ… ”

“ಅಂದರೆ.. ನಾವು ಬಳಸಬಹುದಾದ ಸುಳಿವಿನ ಅಂಶವೇನಾದರು ದೊರಕಿತೆ ಬ್ರಹ್ಮದೇವ ?” ಈ ಬಾರಿಯ ಕುತೂಹಲದ ದನಿ ಗೌತಮನದಾಗಿತ್ತು..

” ಸುಳಿವೆನ್ನಬಹುದಾದರೆ ಅಹುದೆನ್ನು.. ಅಥವಾ ಬರಿಯ ಮರೀಚಿಕೆಯೇ ಎಂದೂ ಹೇಳಲಾಗದು ಈ ಕ್ಷಣದಲ್ಲಿ.. ಆದರೆ ನಾವು ಮುಂದುವರೆಯಲು ಬೇಕಾದ ದಾರಿಯ ಮತ್ತೊಂದು ಕವಲು ಕಾಣಿಸುತ್ತಿದೆಯೆಂದು ಮಾತ್ರ ಹೇಳಬಲ್ಲೆ…” ಎಂದ ಬ್ರಹ್ಮದೇವ..

ಅದುವರೆಗೂ ಮೌನದಲ್ಲಿ ಅವನ ಮಾತು ಕೇಳುತ್ತಿದ್ದ ಸೂರ್ಯದೇವ, ” ಪಿತಾಮಹ..ಇಷ್ಟು ಕುತೂಹಲ ಕೆರಳಿಸಿದ್ದು ಸಾಕು.. ಇನ್ನಾದರು ಅದೇನೆಂದು ಬಿಡಿಸಿ ಹೇಳು.. ನಮ್ಮೆಲ್ಲರ ಕುತೂಹಲ ಈಗಾಗಲೇ ಕೆರಳಿ ನಿಂತಿದೆ ” ಎಂದ..

ಇನ್ನು ಎಲ್ಲರ ಗಮನ ತನ್ನ ಮಾತಿನತ್ತ ಕೇಂದ್ರೀಕೃತವಾಗಿದೆಯೆಂದರಿತ ಬ್ರಹ್ಮದೇವ ತನ್ನ ಮಾತನ್ನು ಮುಂದುವರೆಸಿದ, ” ನೀವೀಗಾಗಲೆ ಸೂಕ್ಷ್ಮವಾಗಿ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ… ಉಚೈಶ್ರವಸ್ಸಿನಲ್ಲಿ ಎರಡು ವಿಭಿನ್ನ ಜೀವ ತತ್ವಗಳು ಸೀಮಾತೀತವಾಗಿ ಅಂತರ್ಗತವಾಗಿವೆ…”

ಅವನ ಮಾತಿನ ಎಳೆ ಹಿಡಿದವಳಂತೆ ಈಗ ಚಕ್ಕನೆ ನುಡಿದವಳು ಊರ್ವಶಿ ..” ಅಂದರೆ ಸಾಮಾನ್ಯ ಅಶ್ವದ ತತ್ವ ಮತ್ತು ಹಾರಾಡಬಲ್ಲ ಪಕ್ಷಿಯ ತತ್ವಗಳ ಸಂಗಮವಾಗಿಸಿದ ಸಂಗತಿಯೇನು ?”

ಅವಳತ್ತ ಮತ್ತೆ ಮೆಚ್ಚುಗೆಯ ದಿಟ್ಟಿ ಹರಿಸಿದ ಬ್ರಹ್ಮ..” ಭೇಷಾಗಿ ಹೇಳಿದೆ ಊರ್ವಶಿ … ನಿಜ.. ಒಂದು ನೆಲದಲ್ಲಿ ನಡೆದಾಡುವ ಜೀವತತ್ವವನ್ನು ಮತ್ತೊಂದು ಹಾರಾಡುವ ಜೀವತತ್ವದೊಡನೆ ಸಮೀಕರಿಸಿ ಅವೆರಡು ಜೊತೆಜೊತೆಯಾಗಿ ಪರಸ್ಪರ ಪೂರಕವಾಗಿ ಅಸ್ತಿತ್ವದಲ್ಲಿರುವಂತೆ ಮಾಡಿರುವ ಈ ಸಂಯೋಜನೆಯ ಸಂಶೋಧನೆ ಅದ್ಭುತವೆನಿಸುವುದಿಲ್ಲವೇ ?”

ಈಗ ಮತ್ತೆ ಬಾಯಿ ಹಾಕಿದವನು ದೇವರಾಜ..” ಅದು ಸರಿ ಪಿತಾಮಹ.. ಇದೊಂದು ಅದ್ಭುತ ಪರಿಕಲ್ಪನೆಯೆಂದು ಇಡೀ ಜಗವೇ ಕೊಂಡಾಡುತ್ತಿದೆ. ಅದೊಂದು ಅದ್ಭುತವೆನ್ನುವುದರಲ್ಲಿ ಅಚ್ಚರಿಯೇ ಇಲ್ಲ ಬಿಡಿ.. ಆದರೆ ಇದು ನಮ್ಮ ಸಂಶೋಧನೆಗೆ ಹೇಗೆ ಸಹಾಯಕವಾದೀತು ಎನ್ನುವ ಪ್ರಶ್ನೆ ಇನ್ನೂ ಬಗೆಹರಿಯದೆ ಹಾಗೆಯೇ ಉಳಿದಿದೆಯಲ್ಲಾ?”

” ತಾಳ್ಮೆ ದೇವರಾಜ ತಾಳ್ಮೆ… ನಾನೂ ಅಲ್ಲಿಗೆ ಬರುತ್ತಿದ್ದೇನೆ.. ಅವಸರಿಸುವ ಮೊದಲು ನನ್ನ ಮಾತಿನ ಹಿಂದಿರುವ ತರ್ಕವನ್ನೇ ಗಮನಿಸುತ್ತಿರು.. ನಿನಗೇ ಅರಿವಾಗುತ್ತದೆ ಹೇಗೆ ಸಂಬಂಧ ಕಲ್ಪಿಸಬಹುದು ಎಂದು..” ಎಂದೆನ್ನುತ್ತ ಗೌತಮನತ್ತ ತಿರುಗಿದ ಬ್ರಹ್ಮದೇವ..

” ತಾಳ್ಮೆ ದೇವರಾಜ ತಾಳ್ಮೆ… ನಾನೂ ಅಲ್ಲಿಗೆ ಬರುತ್ತಿದ್ದೇನೆ.. ಅವಸರಿಸುವ ಮೊದಲು ನನ್ನ ಮಾತಿನ ಹಿಂದಿರುವ ತರ್ಕವನ್ನೇ ಗಮನಿಸುತ್ತಿರು.. ನಿನಗೇ ಅರಿವಾಗುತ್ತದೆ ಹೇಗೆ ಸಂಬಂಧ ಕಲ್ಪಿಸಬಹುದು ಎಂದು..” ಎಂದೆನ್ನುತ್ತ ಗೌತಮನತ್ತ ತಿರುಗಿದ ಬ್ರಹ್ಮದೇವ..

“ಬ್ರಹ್ಮದೇವ ನನ್ನನಿಸಿಕೆ ಸರಿಯಿರುವುದಾದರೆ – ನೀವು ಬೊಟ್ಟು ಮಾಡಿ ತೋರಿಸುತ್ತಿರುವುದು ಇವೆರಡು ಸತ್ವಗಳು ಬೆರೆತು ಹೊಸತೊಂದು ತತ್ವವಾಗಿ ಉಗಮಿಸಿದ ವೇಗದ ಕುರಿತಲ್ಲವೇ ? ಒಂದು ವೇಳೆ ಇದೆ ಕ್ರಿಯೆ ನೈಸರ್ಗಿಕವಾಗಿ ನಡೆಯಬೇಕಿದ್ದಲ್ಲಿ ಲಕ್ಷಾಂತರ, ಕೋಟ್ಯಾಂತರ ವರ್ಷಗಳು ಕಳೆದರೂ ತಂತಾನೆ ಆಗುತ್ತಿತ್ತೋ ಇಲ್ಲವೋ ಖಚಿತವಾಗಿ ಹೇಳುವುದು ಅಸಾಧ್ಯ.. ಇಂತಿರುವಲ್ಲಿ ನರನಾರಾಯಣರ ಈ ಸೃಷ್ಟಿ ಅಷೆಲ್ಲಾ ವರ್ಷಾಂತರಗಳ ಹಂಗಿಲ್ಲದೆ ತನ್ನದೇ ಆದ ರೀತಿಯಲ್ಲಿ, ತನ್ನದೇ ಆದ ವೇಗದಲ್ಲಿ ವಿಕಾಸವನ್ನು ಸಾಧಿಸಿಕೊಂಡುಬಿಟ್ಟಿದೆ – ಕೃತಕವಾಗಿಯಾದರೂ.. ಅದನ್ನು ತಾನೇ ನೀವು ಎತ್ತಿ ತೋರಿಸಬಯಸುತ್ತಿರುವುದು ? ” ಗೌತಮ ತನ್ನ ತಳಿವಿಜ್ಞಾನ ಜ್ಞಾನದ ಸಂಪತ್ತನ್ನು ಬಳಸಿಕೊಂಡು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಣೆಗೊಳಪಡಿಸುತ್ತ ನಿಷ್ಕರ್ಷಿಸಿದ ತೀರ್ಮಾನವನ್ನು ಮುಂದಿಡುತ್ತ ನುಡಿದಿದ್ದ.

ಅವನ ಮಾತು ಕೇಳುತ್ತಿದ್ದಂತೆಯೆ ಅದು ಸರಿಯಾದ ತರ್ಕವೆನ್ನುವ ಭಾವನೆ ಮೂಡಿಸುವಂತೆ ಬ್ರಹ್ಮದೇವನ ಮುಖದಲ್ಲಿ ಸಂತೃಪ್ತಿಯ ಮುಗುಳ್ನಗೆಯೊಂದು ಹಾದುಹೋಯ್ತು… ” ನಿಜಾ ಗೌತಮ.. ನೀನು ಸರಿಯಾಗಿಯೇ ಗ್ರಹಿಸಿದೆ.. ಎಷ್ಟೆ ಆಗಲಿ ಪರಿಪಕ್ವ ತಳಿಶಾಸ್ತ್ರಜ್ಞನಲ್ಲವೆ ನೀನು ? ಈಗ ನೀನು ವಿವರಿಸಿದ ಆಲೋಚನೆಯ ಧಾಟಿಯನ್ನೆ ಹಿಡಿದು ನಮ್ಮ ಸಂಶೋಧನೆಯಲ್ಲಿ ಇದನ್ನು ಹೇಗೆ ಬಳಸಬಹುದೆಂದು ಊಹಿಸಿ ಹೇಳಬಲ್ಲೆಯಾ? ” ಎಂದು ಗೌತಮನನ್ನೆ ಮತ್ತೆ ಪ್ರಚೋದಿಸಿದ ಬ್ರಹ್ಮದೇವ.

ಗೌತಮ ತುಸುಹೊತ್ತು ಆಲೋಚನಾಮಗ್ನನಾಗಿದ್ದವನು ನಂತರ, ” ಇದು ಸರಿಯಾದ ಪರಿಪೂರ್ಣ ಊಹೆಯೆಂದು ಹೇಳಲಾರೆ.. ಆದರೆ ತಾತ್ವಿಕ ಮಟ್ಟದಲ್ಲಿ ಉಚ್ಚೈಶ್ರವಸ್ಸಿನ ಎರಡು ತತ್ವಗಳನ್ನು ಬೆಸೆಯುವಲ್ಲಿ ಸಿಕ್ಕಿರುವ ಯಶಸ್ಸು ನಮಗೂ ದಾರಿದೀಪವಾದೀತೆಂದು ನನ್ನ ಅನಿಸಿಕೆ.. ಅದರ ಪ್ರತಿಫಲವಾಗಿ ನಮಗೂ ನರನಾರಾಯಣರಿಗೆ ಸಿಕ್ಕ ವೇಗದ ಫಲಿತಾಂಶ ಸಿಕ್ಕುವ ಸಾಧ್ಯತೆ… ಆದರೆ ಸೂಕ್ಷ್ಮಮಟ್ಟದಲ್ಲಿ ಅದನ್ನು ಹೇಗೆ ಸಾಧಿಸಬಹುದೆನ್ನುವ ಸಿದ್ದಾಂತವಾಗಲಿ, ಊಹೆಯಾಗಲಿ ನನಗಿನ್ನೂ ತೋಚುತ್ತಿಲ್ಲ.. ಅದೇನೆ ಇದ್ದರು ಉಚ್ಚೈಶ್ರವಸ್ಸಿನ ಅಧ್ಯಯನದಿಂದ ದೊರಕುವ ಜ್ಞಾನ ಮತ್ತು ಸುಳಿವುಗಳನ್ನು ಬಳಸಿ ನಮ್ಮ ಸಂಶೋಧನೆಗೂ ಅನ್ವಯಿಸಿಕೊಂಡರೆ ವೇಗದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದೆನ್ನುವ ಆತ್ಮವಿಶ್ವಾಸ ನನ್ನಲ್ಲೂ ಹುಟ್ಟುತ್ತಿದೆ.. ಆದರೆ ಅದು ಉಚ್ಚೈಶ್ರವಸ್ಸಿನ ಉದಾಹರಣೆಯ ಹಾಗೆ ಸುಲಭವೆಂದು ಹೇಳುವಂತಿಲ್ಲ.. ಏಕೆಂದರೆ ಅಲ್ಲಿ ಎರಡು ವಿಭಿನ್ನ ತತ್ವಗಳನ್ನು ಹೊಂದಿಸಬೇಕೆನ್ನುವ ಆಶಯವಿತ್ತು – ಒಂದು ಅಶ್ವ ಮತ್ತೊಂದು ಹಾರುವ ಜೀವಿ. ಆದರೆ ನಮ್ಮ ಪ್ರಯೋಗ ಜೀವಕೋಶಗಳ ಮಟ್ಟದಲ್ಲಿ… ಅದರಲ್ಲೂ ನಮ್ಮಲ್ಲಿ ಆ ಎರಡು ವಿಭಿನ್ನ ತತ್ವಗಳ ಬಳಕೆಯಾಗುವಂತಿಲ್ಲ.. ನಮ್ಮಲ್ಲಿರುವುದು ಒಂದೆ ತತ್ವ – ಈ ಜೀವಕೋಶದ ಸುತ್ತಲ ತತ್ವ.. ಇದಕ್ಕೆ ಮೀರಿದ್ದೇನಾದರು ಇದ್ದರೆ ಬ್ರಹ್ಮದೇವನೆ ಬೆಳಕು ಚೆಲ್ಲಬೇಕು” ಎಂದು ಸುದೀರ್ಘ ವಿವರಣೆಯಿತ್ತು ಸುಮ್ಮನಾದ.

ಬ್ರಹ್ಮದೇವನಿಗೆ ಅಷ್ಟು ಸಾಕಿತ್ತು ಮಿಕ್ಕ ಆಲೋಚನೆಯ ಚಿತ್ರಣವನ್ನು ಅವರ ಮುಂದೆ ತಂಡಿಡಲು.. ” ನೀನು ಹೇಳಿದ ಸೈದ್ಧಾಂತಿಕ ಮಟ್ಟದ ತರ್ಕ ಹೊಂದಾಣಿಕೆಯಾಗುವ ಮಾತೇನೋ ಸತ್ಯ ಗೌತಮ.. ಆದರೆ ಕೊನೆಯಲ್ಲಿ ನುಡಿದೆಯಲ್ಲ, ‘ನಮ್ಮಲ್ಲಿ ಆ ಎರಡು ವಿಭಿನ್ನ ತತ್ವಗಳ ಬಳಕೆಯಾಗುವಂತಿಲ್ಲ’ ಎನ್ನುವ ಮಾತು ? ಅದು ನನಗೆ ಸಮ್ಮತವಾಗದ ತೀರ್ಮಾನ. ಯಾಕೆಂದರೆ ಸೂಕ್ಷ್ಮಸ್ತರದಲ್ಲಿ ಅದನ್ನು ಅನ್ವಯಿಸಲು ಸಾಧ್ಯವಾಗುವಂತಿದ್ದರೆ ಮಾತ್ರ ನಮ್ಮ ಸಂಶೋಧನೆಯಲ್ಲಿ ಅದನ್ನು ಬಳಸಿಕೊಳ್ಳಲು ಸಾಧ್ಯ..”

ಎಲ್ಲಾ ಮಾತನ್ನು ತದೇಕಚಿತ್ತದಲ್ಲಿ ಆಲಿಸುತ್ತ ನಡುನಡುವೆ ಅದರ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದ ಊರ್ವಶಿ ತಲೆಯೆತ್ತಿದವಳೆ ತಟ್ಟನೆ ಕೇಳಿದಳು..” ಬ್ರಹ್ಮದೇವ.. ಹಾಗೆ ಬಳಸಿಕೊಳ್ಳುವ ರೀತಿಯೊಂದು ನಿನಗಾಗಲೇ ಹೊಳೆದಿರುವಂತೆ ಕಾಣಿಸುತ್ತಿದೆ.. ಹೌದೆ ? ”

” ಹೌದು ಊರ್ವಶಿ.. ನಮಗೀಗ ಅತ್ಯುತ್ಕೃಷ್ಟ ಮಟ್ಟದ ನಿನ್ನ ಜೀವಕೋಶದ ಜತೆಗೆ ಸದ್ಯದ ಅಪರಿಪಕ್ವತೆಯ ಮಟ್ಟದ ಜೀವಕೋಶದ ಲಭ್ಯತೆಯಿದೆಯಲ್ಲವೇ ? ಅರ್ಥಾತ್ ನಮ್ಮಲ್ಲೂ ಎರಡು ತತ್ವವಿದ್ದಂತೆ ಆಗಲಿಲ್ಲವೇ ? ಉಚ್ಚೈಶ್ರವಸ್ಸಿನಂತೆ ತೀರಾ ವಿಭಿನ್ನ ತತ್ವಗಳಲ್ಲವಾದರೂ ನಮ್ಮಲ್ಲಿರುವ ಇವೆರಡೂ ಜೀವಕೋಶದ ಮಾದರಿಗಳ ನಡುವೆ ಅಜಗಜಾಂತರ ಎನ್ನುವುದನ್ನು ಮರೆಯುವಂತಿಲ್ಲ.. ಇವೆರಡರ ಅಂತರವನ್ನು ಕುಗ್ಗಿಸಲು ನಾವು ಉಚ್ಚೈಶ್ರವಸ್ಸಿನಲ್ಲಿ ಬಳಸಿಕೊಂಡಿರುವ ತತ್ವವನ್ನು ಅಳವಡಿಸಿಕೊಂಡರೆ ನಮಗೂ ಅದೇ ರೀತಿಯ ವೇಗ ಸಿದ್ದಿಸಬೇಕಲ್ಲವೆ..? ”

ಈಗ ಸೂರ್ಯದೇವನ ಸರದಿ..” ಪಿತಾಮಹಾ ನಿನ್ನ ಮಾತೇನೋ ಸರಿ.. ಸೂಕ್ಷ್ಮಮಟ್ಟದಲ್ಲಿ ಅದನ್ನು ಸಾಧಿಸುವ ಬಗೆಯೆಂತು ಅನ್ನುವುದಕ್ಕೂ ಸೂಕ್ಷ್ಮ ಸಿದ್ಧಾಂತದ ಅಗತ್ಯವಿದೆಯಲ್ಲವೇ ?” ಎಂದು ಪ್ರಶ್ನಿಸಿದ..

” ಸಿದ್ದಾಂತ ಇದೆ ಸೂರ್ಯದೇವ.. ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಆ ಸಿದ್ದಾಂತವನ್ನು ಕಸಿ ವಿಜ್ಞಾನವೆನ್ನುವರು – ತಳಿಶಾಸ್ತ್ರದಲ್ಲಿ… ಒಂದು ವಿಧದಲ್ಲಿ ಅದನ್ನು ಮೊದಲಬಾರಿಗೆ ಬಳಸಿರುವುದು ಉಚ್ಚೈಶ್ರವಸ್ಸಿನ ಸೃಷ್ಟಿಯಲ್ಲೆ ಎನ್ನಬಹುದು.. ” ಎಂದು ತನ್ನ ಮೂಲ ಆಲೋಚನೆಯ ಒಡಪನ್ನು ತೆರೆದಿಟ್ಟ ಬ್ರಹ್ಮದೇವ..

ಅವನು ಕಸಿಶಾಸ್ತ್ರವೆನ್ನುತ್ತಿದ್ದಂತೆ ಏಕಾಏಕಿ ಚುರುಕಾಗಿದ್ದು ಗೌತಮನ ಕಿವಿ ಮತ್ತು ಮನಸಿನ ಚಿಂತನೆ.. ” ಅರೆರೆ.. ಅರ್ಥಾತ್ ಊರ್ವಶಿಯ ಉನ್ನತ ಸ್ತರದ ಜೀವಕೋಶಗಳ ಜತೆಗೆ ಈಗಿನ ಮಟ್ಟದ ಜೀವಕೋಶಗಳನ್ನು ಕಸಿಮಾಡಲು ಪ್ರಯತ್ನಿಸಬಹುದು ಎಂದು ನಿನ್ನಿಂಗಿತವಲ್ಲವೆ ಬ್ರಹ್ಮದೇವ ? ಹೀಗೆ ಕಸಿಯಾಗಿ ಅದರ ಫಲಿತವಾಗಿ ಉತ್ಪನ್ನವಾದ ಕೋಶಗಳು ಎರಡರ ಸತ್ವದಿಂದ ಈಗಿರುವುದಕ್ಕಿಂತ ಉತ್ತಮ ತಳಿಯಾಗಿ ಹೊರಹೊಮ್ಮಲೇಬೇಕು – ಅದಕ್ಕಾಗಿ ನಿಧಾನ ಮತ್ತು ಸಹಜ ವಿಕಾಸದ ಹಾದಿ ಹಿಡಿಯದೆ ಇದ್ದರೂ ಸಹ.. ಇದೆ ತರ್ಕವನ್ನು ವಿಸ್ತರಿಸಿಕೊಂಡು ಹೋದರೆ ನಾವು ಬಯಸುವ ಮಟ್ಟದ ಜೀವಕೋಶದ ಮಾದರಿ ಉತ್ಪತ್ತಿಯಾಗುವವರೆಗೂ ಈ ತಳಿ ಕಸಿಯನ್ನು ಮುಂದುವರೆಸಿಕೊಂಡು ಹೋಗಬೇಕು.. ಆಗ ಕೆಲವೇ ಕಾಲದಲ್ಲಿ ನಮಗೆ ಬೇಕಾದ ಫಲಿತ ದೊರಕುತ್ತದೆ – ಲಕ್ಷಾಂತರ, ಕೋಟ್ಯಾಂತರ ವರ್ಷಗಳ ಲೆಕ್ಕದಲ್ಲಿ ಅಲ್ಲ..” ಎಂದ ಬ್ರಹ್ಮದೇವನ ತರ್ಕಕ್ಕೆ ಮತ್ತಷ್ಟು ಸ್ಪಷ್ಟ ರೂಪು ನೀಡುತ್ತ.

ಅದಕ್ಕೊಂದು ಅಂತಿಮ ವ್ಯಾಖ್ಯೆ ನೀಡುವವನಂತೆ ನುಡಿದ ಬ್ರಹ್ಮದೇವ..” ನಾವು ಮಾಡುವ ಕಸಿಯಲ್ಲಿ ಊರ್ವಶಿಯ ತಳಿಪ್ರಜ್ಞೆ ಹೆಚ್ಚು ಜಾಗೃತವಿದ್ದು ಮಿಕ್ಕದ್ದು ಹಿನ್ನಲೆಯಲ್ಲಿರುವಂತೆ ಎರಡರ ಕಸಿ ಮಾಡಬೇಕು.. ಅರ್ಥಾತ್ ಈ ಸಿದ್ದಾಂತಕ್ಕು ಸಾಕಷ್ಟು ಸಮಯ ಮತ್ತು ಪ್ರಯೋಗದ ಅವಶ್ಯಕತೆಯಿದೆ… ಸರ್ವರೀತಿಯಲ್ಲು ಉತ್ಕೃಷ್ಟ ಕೋಶದ ಬೀಜರೂಪವನ್ನು ಅನ್ವೇಷಿಸಬೇಕು ನಾವು.. ಅದಾದಲ್ಲಿ ನಮ್ಮ ಬಹುದೊಡ್ಡ ಆತಂಕ ನಿವಾರಣೆಯಾದ ಹಾಗೆ.. ಆ ದಿಕ್ಕಿನಲ್ಲಿ ನಮ್ಮೆಲ್ಲರ ಪ್ರಯತ್ನವನ್ನು ಕೇಂದ್ರೀಕರಿಸೋಣ” ಎಂದ.

ಅಲ್ಲಿಂದಾಚೆಗೆ ಮತ್ತಷ್ಟು ಚರ್ಚೆಗಳು ನಡೆದು ಪ್ರತಿಯೊಬ್ಬರಿಗೂ ಅದರ ಪೂರ್ಣ ಮಾಹಿತಿ ಮತ್ತು ಜ್ಞಾನ ದೊರಕುವಂತೆ ಮಾಡಿದ ನಂತರ ಆ ದಿನದ ಮಟ್ಟಿಗೆ ಸಭೆ ಮುಕ್ತಾಯವಾಗಿತ್ತು.

(ಇನ್ನೂ ಇದೆ)

(Link to next episode no. 41: https://nageshamysore.wordpress.com/2016/04/24/00669-0041_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%aa%e0%b3%a7/)

00628: ಅಹಲ್ಯಾ_ಸಂಹಿತೆ_೩೯ (ಅಂತಿಮ ರೂಪುರೇಷೆ) (ಪ್ರಯೋಗಕ್ಕೆ ಜತೆಯಾದ ಉಚ್ಚೈಶ್ರವಸ್ಸು)


00628: ಅಹಲ್ಯಾ_ಸಂಹಿತೆ_೩೯ (ಅಂತಿಮ ರೂಪುರೇಷೆ) (ಪ್ರಯೋಗಕ್ಕೆ ಜತೆಯಾದ ಉಚ್ಚೈಶ್ರವಸ್ಸು)
______________________________________________________________

(Link to the previous episode no.38: https://nageshamysore.wordpress.com/2016/03/27/00621-0038_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ae-%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae/ )

ಅಂದು ಬ್ರಹ್ಮದೇವನ ವಿಶೇಷ ಆಹ್ವಾನದನುಸಾರ ಗೌತಮ, ದೇವೇಂದ್ರ, ಸೂರ್ಯದೇವ ಮತ್ತು ಊರ್ವಶಿಯರು ಪ್ರಾತಃಕಾಲಕ್ಕೆ ಬಂದು ಸೇರಿದ್ದಾರೆ ಸಭಾಮಂದಿರದಲ್ಲಿ… ನರನ ಭೇಟಿಯಾಗಿ ಬಂದ ಮೇಲೆ ಪಿತಾಮಹನಿಗೆ ನಿಗದಿಪಡಿಸಿದ್ದ ಸಮಯದವರೆಗೂ ಕಾಯುವ ಸಹನೆಯಿಲ್ಲದೆ ಮರುದಿನವೇ ಅವಸರದ ಭೇಟಿಗೆ ಸಿದ್ದತೆ ನಡೆಸುವವನಂತೆ ಊರ್ವಶಿಗೆ ಸುದ್ದಿ ಕಳಿಸಿದ್ದಾನೆ ಹಿಂದಿನ ದಿನವೇ.. ಈ ಬಾರಿಯ ಮತ್ತೊಂದು ಸೋಜಿಗವೆಂದರೆ ‘ತಂಡದ ಜತೆಗೆ ಉಚ್ಚೈಶ್ರವಸ್ಸಿನ ಜತೆಗೆ ಭೇಟಿ ಸಾಧ್ಯವೇ? ‘ಎಂದು ಬೇರೆ ಪ್ರಶ್ನೆ ಕೇಳಿದ್ದಾನೆ.

ಊರ್ವಶಿ ಮಿಕ್ಕವರಿಗೆಲ್ಲ ಸುದ್ಧಿ ಕಳಿಸಿ ಅವಸರದ ಸಭೆಯ ಮಾಹಿತಿ ಮುಟ್ಟಿಸಿದ್ದಾಳಾದರು ಉಚ್ಚೈಶ್ರವಸ್ಸುವನ್ನು ಹೇಗೆ ಸಂಪರ್ಕಿಸುವುದೊ ಗೊತ್ತಾಗಿಲ್ಲ.. ಪ್ರತಿನಿತ್ಯದಂತೆ ಬೆಳಗಿನ ಹೊತ್ತು ಗಗನದಲ್ಲೇ ದರ್ಶನ ಕೊಟ್ಟುಹೋಗುವ ಆ ಮಾಯಾಕುದುರೆಗೆ ಮರುದಿನ ಬೆಳಗಿನವರೆಗೂ ಕಾಯಬೇಕು.. ಆದರೆ ಅದಕ್ಕೂ ಮುನ್ನ ಸಭೆಯ ಆರಂಭವಾಗಿ ಹೋಗಿರುತ್ತದೆ. ಅದಕ್ಕೆ ಚಾಣಾಕ್ಷತೆಯಿಂದ ದಿನವೂ ಹಾದುಹೋಗುವ ಗವಾಕ್ಷಿಯಿರುವ ಸಭಾಮಂದಿರವನ್ನೆ ಆರಿಸಿದ್ದಾಳೆ ಊರ್ವಶಿ.. ಸಭೆ ನಡೆಯುವಾಗ ಕಣ್ಣಿಗೆ ಬಿದ್ದರೂ ಸಾಕು ಗಮನ ಸೆಳೆಯಲೆತ್ನಿಸಬಹುದು.

ಎಲ್ಲರೂ ಬಂದು ಸೇರುತ್ತಿದ್ದಂತೆ ಬ್ರಹ್ಮದೇವ ತನ್ನ ಮತ್ತು ನರನೊಂದಿಗಿನ ಭೇಟಿಯ ವಿವರಗಳನ್ನೆಲ್ಲ ಸಂಕ್ಷಿಪ್ತವಾಗಿ ಬಿತ್ತರಿಸಿದ . ಅದರಲ್ಲೂ ಮುಂದಿನ ಭೂಮಿಕೆ ನಿಭಾಯಿಸಬೇಕಿದ್ದ ಸೂರ್ಯದೇವ ಮತ್ತು ದೇವರಾಜರ ಪಾತ್ರಗಳನ್ನು ವಿವರಿಸಿ ಎಲ್ಲರು ಸಮಾನ ಸ್ತರದ ಮಾಹಿತಿ ಹೊಂದಿರುವಂತೆ ಮಾಡಿ ನಂತರ ಸಂಶೋಧನೆಯ ವಿಷಯಕ್ಕೆ ಬಂದ..

” ನರ ಮುನೀಂದ್ರನಿಗೆ ಸಂಶೋಧನೆಗೆ ನಾವು ಹಿಡಿದ ಹಾದಿಯ ಸಂಕ್ಷಿಪ್ತ ವಿವರಣೆ ನೀಡಿ, ಅದು ಸರಿಯಾದದ್ದೇ, ಅಲ್ಲವೇ ಎಂದು ಚರ್ಚಿಸಿದ್ದೇನೆ.. ನಾವು ಇಟ್ಟ ಹೆಜ್ಜೆಗೆ ನರನೂ ಕೂಡ ಸಹಮತ ತೋರಿಸಿ ಅದು ಸಾಧುವಾದದ್ದೇ ಎಂದು ಅಭಿಪ್ರಾಯಪಟ್ಟಿದ್ದಾನೆ.. ಅವನಿತ್ತ ಸಲಹೆ ಸೂಚನೆಗಳಲ್ಲಿ ಎರಡು ಅಂಶಗಳು ಮಾತ್ರ ಪ್ರಮುಖವಾದವು..”

” ಅವನಂತಹ ಜ್ಞಾನವೇತ್ತನಿಂದ ಅನುಮೋದನೆ ಪಡೆಯುವುದೆಂದರೆ ಒಂದು ದೊಡ್ಡ ಅನುಮಾನವನ್ನೇ ಪರಿಹರಿಸಿಕೊಂಡ ಹಾಗೆ.. ಅಲ್ಲಿಗೆ ನಾವು ನಿರ್ಧರಿಸಿದ ದಾರಿಯಲ್ಲಿ ಸರಾಗವಾಗಿ ಮುಂದುವರೆಯಬಹುದು ಎಂದಾಯ್ತು.. ಆ ಎರಡು ಅಂಶಗಳು ಯಾವುವು ಬ್ರಹ್ಮದೇವಾ? ” ನರನ ಅಭಿಪ್ರಾಯವನ್ನು ಅರಿಯಲು ಅತೀವ ಆಸಕ್ತಿಯಿಂದ ಆಲಿಸುತ್ತಿದ್ದ ಗೌತಮ ಕೇಳಿದ. ಎಲ್ಲರ ಮನದಲ್ಲೂ ಅದೇ ಪ್ರಶ್ನೆಯಿರುವುದೆಂದರಿತಿದ್ದ ಪಿತಾಮಹ ಅದರ ಸಾರವನ್ನು ಸಂಕ್ಷಿಪ್ತವಾಗಿಯೆ ವಿವರಿಸಿದ…

” ಮೊದಲಿಗೆ ನಾವು ಚರ್ಚಿಸಿದ ಜೀವಕೋಶದ ಸ್ವಯಂಭುತ್ವದ ವಿಷಯ. ಇದನ್ನು ಸಾಧಿಸುವ ಕುರಿತು ಅವನಿಗೆ ಅನುಮಾನವಿದ್ದಂತಿಲ್ಲವಾದರು, ತದನಂತರ ಅದು ಹೇಗೆ ತಂತಾನೆ ಕಡಿವಾಣ ಹಾಕಿ ನಿರ್ವಹಿಸಿಕೊಳ್ಳಬಹುದೆಂಬ ಬಗ್ಗೆ ಆತಂಕವಿರುವಂತಿದೆ. ಅದರ ಯಶಸ್ಸಿನ ಮೇಲೆ ನಮ್ಮ ಪ್ರಯೋಗದ ಯಶಸ್ಸು ಅವಲಂಬಿಸಿದೆ ಎಂದವನ ಅನಿಸಿಕೆ..”

ಬ್ರಹ್ಮದೇವನು ಹೇಳುತ್ತಿರುವ ಪ್ರತಿ ಮಾತನ್ನು ಟಿಪ್ಪಣಿಯಾಗಿಸಿಕೊಳ್ಳುತ್ತಿದ್ದಾಳೆ ಊರ್ವಶಿ – ಮುಂದಿನ ಪರಾಮರ್ಶೆಗೆ ಸುಲಭವಾಗಿ ಸಿದ್ದವಾಗಿ ದೊರಕುವಂತೆ..

” ಇನ್ನು ಎರಡನೆ ಅಂಶ ನಿಜದಲ್ಲಿ ಅವನಿತ್ತ ಸಲಹೆಯ ರೂಪದ ಸುಳಿವು.. ನಾವು ಸಂಶೋಧನೆಯ ವೇಗದ ಕುರಿತು ಮಾತಾಡುತ್ತ ಊರ್ವಶಿಯನ್ನು ಮಾನದಂಡವಾಗಿರಿಸಿಕೊಂಡಿರುವುದನ್ನು ತಿಳಿಸಿದೆ. ಅದಕ್ಕೆ ಜತೆಯಾಗಿ ಉಚ್ಚೈಶ್ರವಸ್ಸಿನಂತಹ ಸೃಷ್ಟಿಯನ್ನು ಪರಾಮರ್ಶಿಸಿದರೆ ಕೆಲವು ಹೆಚ್ಚಿನ ಸುಳಿವು ಸಿಗುವುದೆಂದು ನುಡಿದ. ಅತ್ಯುತ್ಕೃಷ್ಟ ಸೃಷ್ಟಿಯ ಗಮ್ಯದಲ್ಲಿ ಉಚ್ಚೈಶ್ರವಸ್ಸು ಉತ್ತಮ ಮಾದರಿಯಾಗಬಲ್ಲದು – ಯಾಕೆಂದರೆ ಅದರ ಸೃಷ್ಟಿಯ ಹಿನ್ನಲೆಯಲ್ಲೂ ಅಂತದ್ದೆ ಉದ್ದೇಶವಿತ್ತು ಎಂದ..”

ಅದನ್ನು ಕೇಳುತ್ತಿದ್ದಂತೆ ಎಲ್ಲರೂ ಮುಖಾಮುಖ ನೋಡಿಕೊಂಡರು ಊರ್ವಶಿಯೊಬ್ಬಳ ಹೊರತಾಗಿ. ಹಾರುವ ಕುದುರೆಯೇ ಇರಬಹುದು, ಹಾಗೆಂದು ಅದರ ಮಾದರಿ ಮಾನವ ಜೀವಿಯ ಸೃಷ್ಟಿಗೆ ಮಾದರಿಯಾಗಲೂ ಸಾಧ್ಯವಾದೀತೆ ? ಎಂಬ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಖದಲ್ಲೂ ಕಾಣಿಸಿಕೊಂಡಿತ್ತು..

ಆಗ ಊರ್ವಶಿಯೆ ಮಾತನಾಡಿದಳು.. ” ನಾವೀಗ ತತ್ವದ ಮಟ್ಟದಲ್ಲಿ ಚರ್ಚಿಸುತ್ತಿರುವುದು.. ಉಚ್ಚೈಶ್ರವಸ್ಸು ಯಾವ ತರದಲ್ಲೂ ನಮ್ಮ ಸಂಶೋಧನೆಯ ನೇರ ಮಾದರಿ ಆಗದಿದ್ದರೂ, ಅದರ ಸೃಷ್ಟಿ ಕ್ರಿಯೆಯೇ ಒಂದು ದೊಡ್ಡ ಪ್ರಯೋಗವೆನ್ನುವುದನ್ನು ಮರೆಯಬೇಡಿ.. ಆ ಅಂಶಗಳು ನಮ್ಮ ಪ್ರಯೋಗಕ್ಕೂ ಸುಳಿವು, ಉಪಾಯಗಳನ್ನು ಒದಗಿಸಬಹುದೆಂದಿರಬೇಕು ನರಮುನೀಂದ್ರನ ಅಭಿಪ್ರಾಯ.. ಸಂಶ್ಲೇಷಿಸಿ ನೋಡುವುದರಲ್ಲಿ ತಪ್ಪಿಲ್ಲವೆಂದು ನನ್ನ ಅನಿಸಿಕೆ..” ಎಂದಳು.

ಅವಳತ್ತ ಮೆಚ್ಚುಗೆಯ ದೃಷ್ಟಿ ಹರಿಸಿದ ಬ್ರಹ್ಮದೇವ, ” ಅದು ಸರಿಯಾದ ಗ್ರಹಿಕೆ ಊರ್ವಶಿ.. ಸರಿ, ಇದೋ ಇಲ್ಲಿದೆ

ನೋಡಿ ನರಮುನಿಂದ್ರನು ನೀಡಿದ ಅವನ ಸಂಶೋಧನಾ ವಿವರಗಳ ಕಟ್ಟು, ಜ್ಞಾನ ಭಂಢಾರ.. ಇದೆಲ್ಲವನ್ನು ಅಭ್ಯಸಿಸಿ ಟಿಪ್ಪಣಿ ಮಾಡುವಂತೆ ಮಿಕ್ಕ ತಂಡಗಳಿಗೆ ಆದೇಶ ಕೊಡಿ.. ” ಎನ್ನುತ್ತಿದ್ದಂತೆ ಅವನ ಮಾತಿನ ನಡುವೆಯೇ ಸರಕ್ಕನೆ ಎದ್ದು ಗವಾಕ್ಷಿಯ ಹತ್ತಿರ ಓಡಿ ಕೈಯಾಡಿಸುತ್ತ ಸನ್ನೆ ಮಾಡತೊಡಗಿದ್ದಳು ಊರ್ವಶಿ..

ಕೂತಲ್ಲಿಂದಲೆ ಅವಳಿಗೆ ಉಚ್ಚೈಶ್ರವಸ್ಸಿನ ಹಾರುವಿಕೆಯ ದೃಶ್ಯ ಗೋಚರಿಸಿತ್ತು ಗವಾಕ್ಷದ ಮೂಲಕ.. ದಿನವೂ ಅವಳು ನಿಂತು ನೋಡುತ್ತಿದ್ದ ಜಾಗಕೆದುರಾಗಿ ಗಗನದಲ್ಲೇ ತುಸು ಹೊತ್ತು ನಿಂತು ಹೋಗುತ್ತಿದ್ದ ಉಚ್ಚೈಶ್ರವಸ್ಸಿಗೆ ಅವಳ ಇಂದಿನ ಚರ್ಯೆ ವಿಚಿತ್ರವೆನಿಸಿದರೂ , ಕಡೆಗವಳು ತನ್ನನ್ನೇ ಕರೆಯುತ್ತಿರಬಹುದೆನ್ನುವ ಪ್ರಜ್ಞೆಯುದಿಸಿ ತಾನು ಹಾರುತ್ತಿದ್ದ ಪಥದಿಂದ ಕೋನದಲ್ಲಿ ಕೆಳಗಿಳಿಯುತ್ತ ಗವಾಕ್ಷದ ದಿಕ್ಕಿನಲ್ಲೇ ತನ್ನ ರೆಕ್ಕೆ ಹಾರಿಸಿಕೊಂಡು ಬರತೊಡಗಿತು..

ಉಚ್ಚೈಶ್ರವಸ್ಸುವನ್ನು ಅವರೆಲ್ಲ ದೂರದಿಂದ ಅನೇಕ ಬಾರಿ ನೋಡಿದ್ದರೂ ಯಾರಿಗೂ ಅದು ಇಷ್ಟರ ಮಟ್ಟಿಗಿನ ಅದ್ಭುತವೆಂದು ಊಹೆಗೂ ನಿಲುಕಿರಲಿಲ್ಲ – ಅಷ್ಟು ಹತ್ತಿರದಿಂದ ನೋಡುವತನಕ… ಅಷ್ಟರಮಟ್ಟಿಗಿನ ದೃಶ್ಯಾದ್ಭುತವಾಗಿತ್ತು ಕಣ್ಣೆದುರೆ ನಿಂತ ಅದರ ಅಸ್ತಿತ್ವ. ಒಬ್ಬೊಬ್ಬರು ಒಂದೊಂದು ಅಂಗವನ್ನು, ವಿನ್ಯಾಸವನ್ನು, ರಚನೆಯನ್ನು ಅಚ್ಚರಿ ಮತ್ತು ದಿಗ್ಭ್ರಾಂತಿಯಿಂದ ನೋಡುತ್ತಿದ್ದರೆ ಆ ಹೊತ್ತಿನ ವಿಸ್ಮೃತಿಗೆ ವಾಸ್ತವದ ತೇರುಕಟ್ಟಿ ಮತ್ತೆ ಭೂಮಿಗಿಳಿಸಿದವನು ಸ್ವತಃ ಬ್ರಹ್ಮದೇವನೆ.

“ಸುಮ್ಮನೆ ಎಲ್ಲಾ ಹೀಗೆ ನೋಡುತ್ತಾ ನಿಂತುಬಿಟ್ಟಿರೇಕೆ ? ನಾ ಮೊದಲೇ ನುಡಿದ ಹಾಗೆ ಉಚ್ಚೈಶ್ರವನ ಆಗಮನವೂ ನರ ಮುನೀಂದ್ರನ ಸಲಹೆಯನುಸಾರವೆ; ಆದರೆ ವಿಶೇಷ ಸಿದ್ದತೆಯಿರದೆ ಉಚ್ಚೈಶ್ರವಸ್ಸನ್ನು ಈ ದಿನ ಕರೆಸಿಕೊಳ್ಳಲು ಸಾಧ್ಯವಾಗುವುದೋ ಇಲ್ಲವೋ ಅನುಮಾನವಿತ್ತು.. ಊರ್ವಶಿಯ ಕಾರ್ಯಕ್ಷಮತೆಯಿಂದ ಅದೂ ಆದಂತಾಯ್ತು.. ಬಾ ಉಚ್ಚೈಶ್ರವ, ನಿನಗೆ ಸುಸ್ವಾಗತ..”

” ಇದು ಪೂರ್ವನಿಯೋಜಿತವೇನೂ ಅಲ್ಲ ಬ್ರಹ್ಮದೇವ.. ಈ ಹೊತ್ತಿಗೆ ಸರಿಯಾಗಿ ಆಕಾಶದಲ್ಲಿ ಹಾರುವ ಉಚ್ಚೈಶ್ರವಸ್ಸನ್ನು ಪ್ರತಿದಿನವೂ ನೋಡುತ್ತಿದ್ದೆ… ಇಂದೂ ಆ ಜಾಡನ್ನೆ ಹಿಡಿದು ನೋಡಿದೆ , ಯಾವ ಯೋಜನೆಯೂ ಇಲ್ಲದೆ ಬರಮಾಡಿಕೊಳ್ಳಲು ಸಾಧ್ಯವಾಯಿತು – ಇದು ಬರಿ ಕಾಕತಾಳೀಯವಷ್ಟೆ ” ಎಂದು ನಕ್ಕಳು ಊರ್ವಶಿ.

ಅಲ್ಲಿಂದ ಮುಂದಿನದೆಲ್ಲ ಚಟಪಟನೆ ನಡೆದು ಹೋಯ್ತು. ಎಲ್ಲಕ್ಕೂ ಮುಖ್ಯವಾಗಿ ಉಚ್ಚೈಶ್ರವಸ್ಸು ದಿನನಿತ್ಯವೂ ಬೆಳಗಿನ ಹೊತ್ತು ನಿಗದಿತ ವೇಳೆಯಲ್ಲಿ ಬಂದು ಹೋಗುವುದಕ್ಕೆ, ಜತೆಗೆ ಪ್ರಯೋಗದಲ್ಲಿ ಊರ್ವಶಿಯ ಹಾಗೆ ನಮೂನೆ, ಮಾದರಿಯ ರೀತಿ ಸಹಕರಿಸಲು ಕೂಡ ಬೇಡಿಕೆಯಿತ್ತಿದ್ದ ಗೌತಮ. ಇದನ್ನೆಲ್ಲಾ ಆಗಲೇ ಎದುರು ನೋಡುತ್ತಿದ್ದವನಂತೆ ಆಗಲೆಂದು ಒಪ್ಪಿಗೆ ಸೂಚಿಸಿದ್ದ ಉಚ್ಚೈಶ್ರವಸ್ಸು. ಅದರ ಮಿಕ್ಕ ವಿವರಗಳನೆಲ್ಲ ಊರ್ವಶಿಯೆ ವ್ಯವಸ್ಥೆ ಮಾಡುವುದೆಂದು ನಿರ್ಧರಿಸಿ ಅವಳಿಗೆ ಹೊಣೆಯೊಪ್ಪಿಸಿದ ಮೇಲೆ ಎಲ್ಲರೂ ಉಚ್ಚೈಶ್ರವಸ್ಸಿನ ಸುತ್ತ ನೆರೆದು ಕೂಲಂಕುಷವಾಗಿ, ಬಲು ಹತ್ತಿರದಿಂದ ಪರೀಕ್ಷಿಸಿ ನೋಡತೊಡಗಿದರು. ತಮ್ಮತಮ್ಮಲೆ ಚರ್ಚಿಸುವ ಸಿದ್ದತೆಗೆಂಬಂತೆ ತಮ್ಮ ಸಂಶಯ, ಅನುಮಾನಗಳನ್ನೆಲ್ಲ ಪ್ರಶ್ನೋತ್ತರದ ಮೂಲಕವೂ ಪರಿಹರಿಸಿಕೊಳ್ಳುತ್ತ ಅದರ ಕಿರು ಟಿಪ್ಪಣಿಗಳನ್ನು ಮಾಡಿಕೊಂಡರು. ಸುಮಾರು ಹೊತ್ತಿನ ಪರೀಕ್ಷಣೆ, ಪರಿವೀಕ್ಷಣೆಗಳ ನಂತರ, ತಮಗೆ ಸಾಕಷ್ಟು ಮಾಹಿತಿ ಸಂಗ್ರಹಿತವಾಯ್ತೆಂದು ಮನದಟ್ಟಾದ ಮೇಲೆ ಉಚ್ಚೈಶ್ರವನಿಗೆ ಅಂದಿನ ದಿನಕ್ಕೆ ಬಿಡುಗಡೆಯಿತ್ತರು – ಮತ್ತೆ ತನ್ನ ಸ್ವೇಚ್ಚೆಯ ಹಾರಾಟಕ್ಕೆ.

ಉಚ್ಚೈಶ್ರವಸ್ಸು ಹಾರಿಹೋಗುತ್ತಿದ್ದ ಹಾಗೆಯೇ ಮಿಕ್ಕ ಐವರು ಮತ್ತೆ ಚರ್ಚೆಗಿಳಿದಿದ್ದರು – ತಾವು ಸಂಗ್ರಹಿಸಿದ್ದನ್ನೆಲ್ಲ ಕ್ರೋಢೀಕರಿಸಿ ಏನು ಮಾಡಬೇಕೆಂದು ನಿರ್ಧರಿಸುವ ಸಲುವಾಗಿ..

” ಮೂಲತಃ ಕೋಶರಚನೆ , ವಿನ್ಯಾಸದಲ್ಲಿ ನನಗೆ ಹೆಚ್ಚೇನು ವ್ಯತ್ಯಾಸವಿರುವಂತೆ ಕಾಣುತ್ತಿಲ್ಲ.. ಊರ್ವಶಿಯಲ್ಲಿರುವ ಉತ್ತಮ ತಳಿಯ ಲಕ್ಷಣಗಳೆಲ್ಲ ಇಲ್ಲೂ ಇರುವಂತಿದೆ.. ತನ್ನಂತಾನೆ ಸ್ವಯಂಶುದ್ಧಿಕರಿಸಿಕೊಳ್ಳುವ ಸ್ವಯಂಭುತ್ವದ ಲಕ್ಷಣವೂ ಸೇರಿದಂತೆ” ಎಂದ ಗೌತಮ..

” ನಿಜ ಗೌತಮ.. ನೋಡುತ್ತಿದ್ದಂತೆಯೇ ಅದ್ಭುತ ಸೃಷ್ಟಿಯೆಂಬ ಕಾಣ್ಕೆ ಇಬ್ಬರಲ್ಲೂ ಎದ್ದು ಕಾಣುವ ಸಮಾನ ಅಂಶ” ಈ ಬಾರಿ ದನಿಗೂಡಿಸಿದ ದೇವರಾಜ.

” ನಿಜವೇ.. ಆದರೆ ನನಗೆ ಅಚ್ಚರಿ ತಂದ ಅದ್ಭುತ ಅದಲ್ಲ.. ನರನಾರಾಯಣರು ಬರಿ ಅದೊಂದನ್ನೆ ಸಾಧಿಸಿಲ್ಲ.. ಕುದುರೆ ಮತ್ತು ಹಾರುವ ಹಕ್ಕಿಗಳೆಂಬ ಎರಡು ವಿಭಿನ್ನ ಜೀವರಾಶಿಗಳ ಸಮೂಲವನ್ನು ಪ್ರತ್ಯೇಕಿಸಿ ಅವೆರಡನ್ನು ಒಂದಾಗಿ ಜೋಡಿಸುವ ಅದ್ಭುತವನ್ನು ಸಾಧಿಸಿದ್ದಾರೆ .. ಈ ತರದ ಜೋಡಣೆಯ ಸಜಾತಿ ಪ್ರಕ್ರಿಯೆಗೆ ನಾನೆಷ್ಟು ಪಾಡುಪಟ್ಟಿರುವೆನೆಂದು ಹೇಳಲಸದಳ. ಆದರಿಲ್ಲಿ ಅವರು ವಿಜಾತಿ ತಳಿಗಳನ್ನು ಕೂಡಿಸಿದ್ದು ಮಾತ್ರವಲ್ಲದೆ ಜೀವಂತ ಕಾರ್ಯ ನಿರ್ವಹಿಸುವ ಹಾಗೆ ಸೃಜಿಸಿಯೂ ಬಿಟ್ಟಿದ್ದಾರೆ ..ಇದು ನಾವು ಗಮನದಲ್ಲಿರಿಸಬಹುದಾದ ಪ್ರಮುಖ ಅಂಶವೆಂದು ನನ್ನ ಭಾವನೆ..” ತನ್ನ ಪ್ರಯೋಗದ ಜತೆ ತುಲನೆ ಮಾಡುತ್ತ ನುಡಿದಿದ್ದ ಸೂರ್ಯದೇವ.

ಅವನ ಮಾತನ್ನೇ ಗಮನವಿಟ್ಟು ಆಲಿಸುತ್ತಿದ್ದ ಬ್ರಹ್ಮದೇವ ಈಗ ನುಡಿದ,”ಹೌದು ಸೂರ್ಯ..ನಿನ್ನ ಮಾತು ನಿಜ.. ಆ ಅಂಶ ಅತ್ಯಾಮೂಲ್ಯ ಮಾಹಿತಿಯೆಂದು ನನಗೂ ಅನಿಸುತ್ತಿದೆ.. ಯಾಕೆಂದರೆ ನಾವೀಗ ಎದುರಿಸುತ್ತಿರುವ ಸಂಶೋಧನೆಯ ವೇಗದ ಸಮಸ್ಯೆಗೂ ಅದರಲ್ಲೇ ಉತ್ತರವಿರಬಹುದೆಂದು ನನ್ನ ಭಾವನೆ..”

‘ವೇಗ ಸಾಧನೆ’ ಅನ್ನುತ್ತಿದ್ದಂತೆ ಎಲ್ಲರ ಕಿವಿ ನಿಮಿರಿ ಕತ್ತು ಮುಂದಕ್ಕೆ ಚಾಚಿಕೊಂಡಿತು , ‘ಅದೇನು ವಿವರಿಸಿ ಹೇಳು’ ಎಂದು ಕೇಳುವಂತೆ. ಅದನ್ನರಿತವನಂತೆ ತನ್ನ ಗ್ರಹಿಕೆಯನ್ನು ವಿವರಿಸತೊಡಗಿದ ಬ್ರಹ್ಮದೇವ – ಎಲ್ಲರಿಗು ಅರ್ಥವಾಗುವ ಸರಳ ರೂಪದಲ್ಲಿ..

(ಇನ್ನೂ ಇದೆ)

00621. ಅಹಲ್ಯಾ_ಸಂಹಿತೆ_೩೮ (ಬ್ರಹ್ಮನಿಗೆ ನರನ ಸಲಹೆ, ಸಹಕಾರ)


00621. ಅಹಲ್ಯಾ_ಸಂಹಿತೆ_೩೮ (ಬ್ರಹ್ಮನಿಗೆ ನರನ ಸಲಹೆ, ಸಹಕಾರ)

(Link to previous episode no. 37: https://nageshamysore.wordpress.com/2016/03/26/00618-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ad-%e0%b2%a8%e0%b2%b0%e0%b2%ae%e0%b3%81%e0%b2%a8%e0%b2%bf-%e0%b2%ac/)

ಬ್ರಹ್ಮದೇವನ ಮನಮಥನದಲ್ಲಿ ಮೂಡುತ್ತಿದ್ದ ಕಾರ್ಯಯೋಜನೆಯ ಮಸುಕಾದ ಚಿತ್ರ ಯುಗಾಂತರ ಭವಿತದ ತನ್ನ ರೂಪುರೇಷೆಗಳನ್ನು ಆಗಲೇ ಹಾಕತೊಡಗಿತ್ತು..

ಅಲ್ಲಿ ಪ್ರಸ್ತಾವಗೊಂಡ ಕಲ್ಪನೆಯಲ್ಲಿ ಕುಂತಿಯೆಂಬ ಹೆಸರಿನಿಂದ ಹೆಸರಾಗುವ ಕನ್ಯೆಯ ಚಿತ್ರ ಮತ್ತವಳು ದೂರ್ವಾಸನಿಂದ ಪಡೆಯುವ ವರದ ಕಲ್ಪನೆ.. ದೂರ್ವಾಸ ಮುನಿ ಅವಳು ಇನ್ನೂ ಕನ್ನೆಯಾಗಿರುವಾಗಲೇ ವರ ನೀಡಿ ಅವಳ ಕುತೂಹಲ ಕೆರಳುವಂತೆ ಪ್ರೇರೇಪಿಸಿ ಸೂರ್ಯನೊಡನೆ ವರವನ್ನು ಫಲಿಸುವಂತೆ ಮಾಡಿಬಿಡಬೇಕು ಎನ್ನುವ ಮೂರ್ತಾಲೋಚನೆ…ಆಗ ಸಂದಿಗ್ದದಲ್ಲಿ ಸಿಕ್ಕಿ ಹುಟ್ಟುವ ಮಗುವನ್ನು ಅವಳು ತ್ಯಜಿಸಲೆಬೇಕು – ಕೇವಲ ಕರ್ಣಕುಂಡಲಗಳ ನೆನಪೊಂದನ್ನು ಮಾತ್ರ ಮನದಲ್ಲಿರಿಸಿಕೊಂಡು ಎನ್ನುವ ಧೂರ್ತಾಲೋಚನೆ..

ಹೀಗೆ ಸೂರ್ಯಪುತ್ರ ಕರ್ಣನೆಂಬ ಹೆಸರಿನಲ್ಲಿ ಸಹಸ್ರಕವಚ ಹೆತ್ತವಳಿಂದ ಬೇರಾಗಿ ಹೋದನೆಂದರೆ ಅಲ್ಲಿಗೆ ದೇವರಾಜನ ಮುಖೇನ ನರಮುನಿಂದ್ರನ ಜನನಕ್ಕೆ ದಾರಿ ಸುಗಮವಾಗುತ್ತದೆ – ಅರ್ಜುನನೆಂಬ ಹೆಸರಿನಲ್ಲಿ. ಹೌದು ಈಗ ಪೂರ್ಣ ದೇವಸ್ವರೂಪಿಯಾದ ನರಮುನಿಂದ್ರ ಆ ಜನ್ಮದಲ್ಲಿ ಅರೆ ನರನಾಗಿ ಸಾಮಾನ್ಯ ‘ಜನ’ರಂತೆ ಜನಿಸಬೇಕು, ಅರೆ ದೇವನ ಮುಸುಕನ್ನು ಬದಿಗಿಟ್ಟು.. ಆ ‘ಅರೆ-ಜನ’ನವನ್ನೇ ಹೆಸರಾಗಿಸಿ ಅರೆ..ಜನ್ಯ, ಅರೆ..ಜನ, ಅರ್ಜನ, ಅರ್ಜುನ ಎಂದು ಕರೆದುಬಿಡಬಹುದು.. ಆ ಹೆಸರೇ ಚೆನ್ನಾಗಿದೆ – ಕರಂಡಕದಲ್ಲಿ ನರನ ಶಕ್ತಿಶೇಷ ಕಾದಿಟ್ಟಾಗ ಆ ಹೆಸರನ್ನೇ ಬಳಸಬಹುದು..

ಹೀಗಾದಾಗ ಒಂದೆ ಶಕ್ತಿಮೂಲದ ಕರ್ಣಾರ್ಜುನರು ಕುಂತಿಯೆಂಬ ಒಂದೇ ಯೋನಿಮೂಲದಿಂದ ಜನಿಸಿಯೂ ಅದರ ಅರಿವಿಲ್ಲದೆ ಹೋಗಿ, ಮುಂದಿನ ಅವರ ಕಾಳಗಕ್ಕೆ ವೇದಿಕೆ ನಿರ್ಮಿಸಿದಂತಾಗುತ್ತದೆ… ಅದನ್ನು ಹೇಗೆ ನಿಭಾಯಿಸಬೇಕು, ಅದಕ್ಯಾವ ಜಂಜಾಟಗಳ ಆವರಣ ನಿರ್ಮಿಸಬೇಕೊ ಎನ್ನುವುದು ಈಗಿನ ಅವಸರವಲ್ಲ. ಅದರಲ್ಲಿ ಎಷ್ಟೊ ಸಂಧರ್ಭಾನುಸಾರ ತಾನೇ ಅನಾವರಣವಾಗುತ್ತದೆ.. ತಾನಿಲ್ಲಿ ನಿಗಾ ವಹಿಸಬೇಕಾದದ್ದು ಮುಖ್ಯವಾಹಿನಿಯ ವಸ್ತು ವಿಷಯಕ್ಕೆ… ಅಲ್ಲಿರುವ ಮುಖ್ಯ ಪಾತ್ರಗಳು ನರನಾರಾಯಣ ಸಹಸ್ರಕವಚರು ಮಾತ್ರ…

ಇನ್ನು ಆ ಜನ್ಮದಲ್ಲಿ ನರನ ಜತೆಗಿರುವ ನಾರಾಯಣ ದೇವಮಾನವನಂತಿದ್ದರು ಪ್ರಕಟವಾಗಿ ಹಾಗೆ ತೋರಿಸಿಕೊಳ್ಳುವಂತಿಲ್ಲ.. ಹುಣ್ಣಿಮೆ ಚಂದ್ರನ ಸಾಮರ್ಥ್ಯವಿದ್ದರೂ ಕೃಷ್ಣಪಕ್ಷದ ಚಂದಿರನ ಮುಖವಾಡವನ್ನು ಹೊತ್ತೆ ತನ್ನ ಭೂಮಿಕೆ ನಿಭಾಯಿಸಬೇಕು – ಅವನು ದೇವಮಾನವನೇ ಅಥವಾ ನರಮಾನವನೆ ಎಂಬ ಗೊಂದಲ, ಸಂಶಯ ಅವನ ಜೀವಿತದ ಸದಾಕಾಲವೂ ಜೀವಂತವಾಗಿರಬೇಕು.. ಎಲ್ಲವನ್ನು ಅಮಾವಾಸೆಯ ಚಂದ್ರನಂತೆ ಮುಚ್ಚಿಡುವ ಅನಿವಾರ್ಯವಿರುವ ಅವನ ಜನನವನ್ನು ಕೃಷ್ಣಪಕ್ಷದಲ್ಲೆ ಆಗಿಸಿ ಅವನ ಹೆಸರಲ್ಲೇ ಅವನ ಜನ್ಮದಿಂಗಿತವನ್ನು ಹುದುಗಿಸಿಟ್ಟುಬಿಡಬೇಕು – ಕೃಷ್ಣಪಕ್ಷದಲ್ಲಿ ಹುಟ್ಟಿ ತೆರೆಮರೆಯ ಚಂದ್ರನಂತೆ ಕಾರ್ಯ ನಿಭಾಯಿಸುವವನ ಹೆಸರು ಕೃಷ್ಣಾ ಎಂದೆ ಆಗಲಿ…ಕರಂಡಕದಲ್ಲಿ ನಾರಾಯಣನ ಶಕ್ತಿಶೇಷ ಕಾದಿಟ್ಟಾಗ ಆ ಹೆಸರನ್ನೇ ಬಳಸಬಹುದು..

ಹೀಗೆಲ್ಲಾ ಚಿಂತನೆ ನಡೆಸಿದ್ದ ಬ್ರಹ್ಮನನ್ನು ಮತ್ತೆ ವಾಸ್ತವಕ್ಕೆಳೆದಿತ್ತು ನರನ ದನಿ..” ಬ್ರಹ್ಮದೇವ.. ಅದಕ್ಕೇನಾದರೂ ದಾರಿ ಕಾಣಿಸಲು ಇನ್ನೂ ಸಮಯವಿದೆ.. ಅದನ್ನು ಸದ್ಯಕ್ಕೆ ಬದಿಗಿಡುವ.. ನಿನ್ನ ಸಂಶೋಧನಾ ಪ್ರಯೋಗದಲ್ಲೇ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ನನ್ನ ಸಹಾಯ ಬೇಕೆಂದಿದ್ದೆಯಲ್ಲ ? ಆ ಕುರಿತು ಚರ್ಚಿಸೋಣವೇ ?” ಎಂದಿದ್ದ ನರ.

ಅವನ ಮಾತು ಕೇಳುತ್ತಿದ್ದಂತೆಯೆ ತಾನು ಕೇಳಬೇಕೆಂದುಕೊಂಡಿದ್ದ ಪ್ರಶ್ನೆಗಳೆಲ್ಲವು ಒತ್ತರಿಸಿಕೊಂಡು ಬಂದಂತಾಗಿ ತನ್ನ ಭವಿತ ಚಿತ್ರದ ಸಾಧ್ಯತೆಯನ್ನು ಬದಿಗೊತ್ತಿದವನೇ ವಾಸ್ತವಕ್ಕೆ ಬಂದ ಬ್ರಹ್ಮದೇವ. ಮೊದಲಿಗೆ ಅವನ ಮಾತಾಗಿ ಬಂದದ್ದು ಊರ್ವಶಿಯ ಕುರಿತಾದ ಪ್ರಶಂಸೆ..

“ನರ ಮುನೀಂದ್ರ.. ಮೊದಲಿಗೆ ಊರ್ವಶಿಯಂತಹ ಉತ್ಕೃಷ್ಟ ಸೃಷ್ಟಿಗೆ ನನ್ನ ಅಭಿನಂದನೆಗಳು… ಮಂತ್ರದಿಂದ ಸೃಜಿಸಿದಂತೆ ಅನಾವರಣವಾದ ಆ ಚಿತ್ರವನ್ನು ನಾನು ನೋಡಿರದಿದ್ದರೆ ಖಂಡಿತ ಅದರ ಹಿನ್ನಲೆಯಲ್ಲಿರಬಹುದಾದ ವಿಜ್ಞಾನವನ್ನು ಮರೆತು ಅದ್ಭುತ ಪವಾಡವೆಂದೆ ಭಾವಿಸಿಬಿಡುತ್ತಿದ್ದೆ..” ಎಂದ.

ಅದನ್ನು ಕೇಳಿದ ನರ ಜೋರಾಗಿ ನಕ್ಕು..” ಇಲ್ಲ ಬ್ರಹ್ಮದೇವಾ.. ಅದು ನಡೆದದ್ದೇ ಒಂದು ದುರಂತ.. ಅಲ್ಲಿಯತನಕ ಹೋಗಬಾರದಿತ್ತು.. ಸರಿ ಆದದ್ದಾಯಿತು, ಅದರ ಕುರಿತೀಗ ಚರ್ಚಿಸಿ ಫಲವಿಲ್ಲ.. ನನ್ನ ತಪಸ್ಸಿನ ವಿರಾಮ ಹೆಚ್ಚಿದಷ್ಟು ಏಕಾಗ್ರತೆಯ ಮರುಕಳಿಕೆ ಕಠಿಣವಾಗುತ್ತದೆ. ಹಾಗಾಗಿ ನಿನ್ನ ಪ್ರಶ್ನೆಗಳೇನಿದ್ದರೂ ನೇರ ಚರ್ಚಿಸಿಬಿಡುವಾ ” ಎಂದ .

“ನರ ಮುನಿಂದ್ರ ಎಲ್ಲಾ ಸಂಕ್ಷಿಪ್ತದಲ್ಲೆ ವಿವರಿಸಿಬಿಡುವೆ.. ನೀನೀಗ ಸೃಷ್ಟಿಸಿರುವ ಊರ್ವಶಿಯ ಮಾನದಂಡವೇ ನಮ್ಮ ಸೃಷ್ಟಿಕ್ರಿಯೆಯ ಅಂತಿಮಗುರಿ. ಸರ್ವೋತ್ಕೃಷ್ಟ ತಳಿಯೊಂದನ್ನು ಸೃಷ್ಟಿಸಿ ಭೂಮಿಯಲ್ಲಿ ಅನಾವರಣ ಮಾಡುವುದು ಯಾವತ್ತೂ ನಮ್ಮ ಧ್ಯೇಯವಾಗಿತ್ತಲ್ಲವೆ? ಅದರಲ್ಲೂ ಮುಖ್ಯವಾಗಿ ಅದು ತಂತಾನೆ ನಿಭಾಯಿಸಿಕೊಂಡು ಸ್ವಯಂಭುವಿನಂತೆ ಮುಂದುವರೆಯುವ ಹಾಗೆ. ದುರದೃಷ್ಟಕ್ಕೆ ಕೋಟ್ಯಾಂತರ ಯುಗಾಂತರ ವರ್ಷಗಳ ಸತತ ಪ್ರಯತ್ನದಿಂದಲು ಇದು ಸಾಧ್ಯವಾಗಿಲ್ಲ. ಜೀವಿಯ ವಿಕಾಸ ಹಂತಹಂತದಲ್ಲಿ ಉನ್ನತವಾಗುತ್ತ ಸಾಗಿದೆಯೇ ವಿನಃ ನಾವಂದುಕೊಂಡ ಗುರಿಯನ್ನು ಮುಟ್ಟಲು ಇದುವರೆವಿಗೂ ಸಾಧ್ಯವಾಗಿಲ್ಲ.. ಅದೆಷ್ಟು ಸಹಸ್ರ ಕೋಟಿ ವರ್ಷಗಳು ಹಿಡಿದೀತೊ ಎಂದೂ ಗೊತ್ತಿಲ್ಲ.. ಆದರೆ ನಿನ್ನ ಕೈಯಿಂದಾದ ಊರ್ವಶಿಯ ಸೃಷ್ಟಿಯನ್ನು ನೋಡಿ ಈ ಪ್ರಕ್ರಿಯೆಯನ್ನು ತೀವ್ರವಾಗಿಸಿ ವೇಗವನ್ನು ಸಾಧಿಸಬಹುದೇನೊ ಎನ್ನುವ ಆಸೆ ಹುಟ್ಟಿದೆ.. ಆ ಆಶಯವನ್ನು ಸಾಕಾರಗೊಳಿಸಲು ಹುಟ್ಟು ಹಾಕಿದ ಮಹಾನ್ ಸಂಶೋಧನೆ – ಅಹಲ್ಯ. ಊರ್ವಶಿಯ ಸೃಷ್ಟಿಯನ್ನೆ ಮಾನದಂಡವಾಗಿರಿಸಿಕೊಂಡು ನಮ್ಮ ಈಗಿರುವ ಸೃಷ್ಟಿಯ ಅಂತರ – ನ್ಯೂನತೆಗಳನ್ನು ತೊಡೆದು ಹಾಕಿದರೆ, ಏಕಾಏಕಿ ನಮ್ಮೀಗಿನ ಸೃಷ್ಟಿಯ ಗುಣಮಟ್ಟವನ್ನು ಹೆಚ್ಚಿಸಬಹುದೆನ್ನುವ ಆಶಯ… ಆದರೆ ಇರುವ ಅಗಾಧ ಅಂತರ ಮತ್ತು ಕಾರ್ಯಬಾಹುಳ್ಯ ನೋಡಿದರೆ ಈ ಸಂಶೋಧನೆಯೇ ಲಕ್ಷಾಂತರ ವರ್ಷಗಳಾಗುವ ಸೂಚನೆ ಕಾಣಿಸುತ್ತಿದೆ.. ಅದರ ವೇಗವರ್ಧನೆಗೆ ನಿನ್ನ ಸಲಹೆ, ಸಹಾಯ, ಸಹಕಾರ ಬೇಕು…” ಎಂದವನೇ ಧೀರ್ಘವಾಗಿ ಉಸಿರೆಳೆದುಕೊಂಡ ಬ್ರಹ್ಮದೇವ.

” ಅರ್ಥವಾಯಿತು ಬ್ರಹ್ಮದೇವ.. ನಿಜ ಹೇಳುವುದಾದರೆ ನಮ್ಮ ಪ್ರಯೋಗದ ಮೂಲ ಉದ್ದೇಶವೇ ಇಂತದ್ದೊಂದು ಉತ್ತರ ಕಂಡು ಹಿಡಿದು ನಿನಗೊಪ್ಪಿಸುವುದಾಗಿತ್ತು… ಆದರೆ ಬೇಡದ ಅನಿವಾರ್ಯದ ಕದನದಲ್ಲಿ ಸಿಕ್ಕಿ ನಮ್ಮ ಶ್ರಮ ಯತ್ನಗಳೆಲ್ಲ ಎಲ್ಲೆಲ್ಲೊ ವ್ಯಯವಾಗಿಹೋಗುತ್ತಿವೆ. ಆದರೆ ಶಕ್ತಿಯ ತೇಜಸ್ಸಿನ ಕೋಲಾಟದಲ್ಲಿ ನಾವು ಅಸಹಾಯಕರು.. ಎಲ್ಲಿಯವರೆಗೆ ತಾಮಸ ಶಕ್ತಿಯನ್ನು ಮಟ್ಟಹಾಕುವುದಿಲ್ಲವೊ ಅಲ್ಲಿಯವರೆಗೂ ನಾವು ಸೃಜಿಸುವ ಸಾತ್ವಿಕ ಶಕ್ತಿಗೂ ಉಳಿಗಾಲವಿಲ್ಲ. ಹೀಗಾಗಿ ಯುದ್ಧದ ನೆಪದಲ್ಲಿ ಮತ್ತದರ ಹಂಗಿನಲ್ಲಿ ತಾಮಸವನ್ನು ನಿಷ್ಕ್ರಿಯವಾಗಿಸದೆ ವಿಧಿಯಿಲ್ಲ. ಸುದೈವಕ್ಕೆ ನಾವು ಈ ತರತರದ ಅವತಾರಗಳನ್ನು ತಾಳುವ ಪ್ರವೃತ್ತಿಯ ಬೆನ್ನಟ್ಟಿ ಬೇಡದ ಶಕ್ತಿಯ ದಮನಕ್ಕೆ ಹೋರಾಡುತ್ತ ಸೃಷ್ಟಿಯ ಸುಸ್ಥಿತಿಯನ್ನು ಕಾಪಾಡಲು ಯತ್ನಿಸುವಾಗಲೇ, ನಿನ್ನ ಕಡೆಯಿಂದ ಸೃಷ್ಟಿಯ ಮೂಲದಲ್ಲೆ ಬೇಡದ ಜೊಳ್ಳನ್ನು ಸೋಸಿ ಬರಿ ಉತ್ಕೃಷ್ಟ ಕಾಳನ್ನು ಸೃಜಿಸುವ ಪ್ರಯೋಗಕ್ಕೆ ನಾಂದಿಯಾಗುತ್ತಿದೆ. ಇವೆರಡು ಸಮಾನಾಂತರದಲ್ಲೆ ನಡೆಯಬೇಕಿರುವ ಕಾರ್ಯ – ಅಂತಿಮ ಗುರಿ ತಲುಪುವತನಕ…” ದನಿಯಲ್ಲಿನ ತನ್ನ ಮೆಚ್ಚುಗೆಯನ್ನು ಬಚ್ಚಿಡದೆ ನುಡಿದಿದ್ದ ನರ.

” ಹೌದು ನರ, ಮೂಲತಃ ಸರ್ವೋತ್ಕೃಷ್ಟ ಸಾತ್ವಿಕ ಶಕ್ತಿತೇಜವೆ ಮೂಲಗುರಿಯಾಗಿದ್ದರೂ ನಾವದನ್ನು ಸಾಧಿಸಲಾಗದೆ ತಡಕುವಂತಾಗಿದೆ.. ಅಲ್ಲದೆ ಈ ತಾಮಸ ಶಕ್ತಿಯ ಅಟ್ಟಹಾಸ ಈ ಮಟ್ಟಕ್ಕಿರಬಹುದೆನ್ನುವ ಕಲ್ಪನೆಯೇ ನಮಗಾರಿಗೂ ಇರಲಿಲ್ಲ.. ಆ ಪ್ರಜ್ಞೆ ಮೂಡಲು, ನಾವಿರುವ ಕಡೆ ತಾಮಸವಾದರೂ ಎಲ್ಲಿತ್ತು ? ಈಗ ಒಂದೆಡೆ ಸಹಸ್ರಕವಚನಂತಹವರನ್ನು ಕದನದಲ್ಲಿ ಮಟ್ಟಹಾಕುತ್ತ ಬಂದರು, ಮಿಕ್ಕೆಲ್ಲೆಡೆ ಅದು ಸಣ್ಣ ಪ್ರಮಾಣದಲ್ಲಾದರು ವ್ಯಾಪಕವಾಗಿ ಹಬ್ಬಿ ಪ್ರತಿಸೃಷ್ಟಿಯ ಅಂತಃಸತ್ವವೆ ಆಗಿ ಹೋಗುವಾಗ, ವಿಧಿಯಿಲ್ಲದೇ ಶಿವನ ಲಯದ ಪ್ರಯೋಗ ನಡೆಸಿ ಪ್ರಳಯದ ಹೆಸರಲ್ಲಿ ಎಲ್ಲವನ್ನು ಒಂದೇ ಏಟಿಗೆ ಅಳಿಸಿಹಾಕಿ ಮತ್ತೆ ಹೊಸತಾಗಿ ಆರಂಭಿಸುವ ಅನಿವಾರ್ಯ ಉಂಟಾಗಿಬಿಟ್ಟಿದೆ. ಶಿವನೇನೊ ಭುವಿಯ ಮಟ್ಟಿಗಿನ ಸಂಚಲನೆ ನಡೆಸಿ ಚೊಕ್ಕವಾಗಿಸಿ ಕೊಡುತ್ತಿದ್ದಾನಾದರು ಮರುಸೃಷ್ಟಿಯಲ್ಲಿ ಮತ್ತೆ ಮತ್ತೆ ನಾವದೇ ಶಕ್ತಿಗಳ ನಡುವಿನ ತಾಕಲಾಟಕ್ಕೆ ಸಿಕ್ಕಿ, ಮತ್ತದೇ ಚಕ್ರದಲ್ಲಿ ಸುತ್ತಿ ನರಳುವಂತಾಗಿದೆ.. ಪ್ರತಿ ಪ್ರಳಯದ ನಂತರವೂ ಮುಂದಿನ ಸೃಷ್ಟಿಚಕ್ರ ಹೆಚ್ಚು ದಕ್ಷತೆ ಮತ್ತು ಗುಣಮಟ್ಟದಿಂದ ಹೊರಹೊಮ್ಮುತ್ತಿದ್ದರೂ ಅದು ತೀರಾ ಸಣ್ಣ ಪ್ರಮಾಣದ ಪ್ರಗತಿಯ ಹಂತಗಳಲ್ಲಿ ನಡೆಯುತ್ತಿದೆ. ಹೀಗಾಗಿ ಅದೆಷ್ಟು ಚಕ್ರಗಳ, ಯುಗಗಳ ಪುನರಾವರ್ತನೆಯಾಗಬೇಕೊ ತಿಳಿಯದು. ಜತೆಗಿರುವ ಮತ್ತೊಂದು ತೊಡಕೆಂದರೆ ಪ್ರತಿ ಚಕ್ರದಲ್ಲೂ ಬೇಡದ ತಾಮಸತ್ವವು ತನ್ನ ಅಂತಃಸತ್ವವನ್ನು ವೃದ್ಧಿಸಿಕೊಂಡು ಬಲವಾಗುತ್ತಿದೆ.. ಹೀಗಾಗಿ, ಇದಕ್ಕೆಲ್ಲ ಮೂಲರೂಪದಲ್ಲಿ ಒಂದೇ ಬಾರಿಗೆ ಪರಿಹಾರ ಒದಗದಿದ್ದರೆ ಇದು ಮುಗಿಯದ ನಿರಂತರ ಚಕ್ರವಾಗಿಬಿಡುತ್ತದೆ… ಈಗ ಆ ದಿಸೆಯಲ್ಲಿ ನಿನ್ನ ಊರ್ವಶಿ ಒಂದು ದೊಡ್ಡ ಆಶಾಕಿರಣ. ಅಹಲ್ಯ ಪ್ರಯೋಗದಲ್ಲಿ ನಾವು ಊರ್ವಶಿಯ ಮಟ್ಟವನ್ನು ಸ್ವಯಂನಿಯಂತ್ರಿತ ಸ್ವಯಂಭು ಪರಿಸರದಲ್ಲಿ ಮರುಕಳಿಸಲು ಸಾಧ್ಯವಾದರೆ ನಮ್ಮ ಯತ್ನ ಫಲ ಕಂಡಂತೆ.. ಅದಕ್ಕೇನು ಮಾಡಬೇಕೆಂಬ ಸಲಹೆ, ಮಾರ್ಗದರ್ಶನ, ಕಾರ್ಯತಂತ್ರಕ್ಕೆ ನಿನ್ನ ಸಹಾಯ ಬೇಕು..”

“ಸರಿ ಬ್ರಹ್ಮದೇವ.. ಈ ವಿಷಯದ ಕುರಿತಾದ ನಮ್ಮ ಸಂಶೋಧನೆ, ಫಲಿತಗಳ ತಾಳೆಗರಿಗಳನ್ನೆಲ್ಲ ನಿನಗೆ ಹಸ್ತಾಂತರಿಸುತ್ತೇನೆ..ನಿನಗದು ಉಪಯೋಗಕ್ಕೆ ಬರುತ್ತದೆ… ಜತೆಗೆ ನಿನಗೊಂದು ಮುಖ್ಯವಾದ ಸುಳಿವನ್ನು ಕೊಡುತ್ತೇನೆ.. ನೀನು ಉಚ್ಚೈಶ್ರವಸ್ಸನು ನೋಡಿರುವೆಯಲ್ಲವೆ ? ನಾವದನ್ನು ಸೃಜಿಸಿದ್ದು ಕೂಡ ನೀನು ಹೇಳುತ್ತಿರುವ ಇದೇ ಉತ್ಕೃಷ್ಟ ಸೃಷ್ಟಿಯ ಪರಿಕಲ್ಪನೆಯ ಸಾಕಾರಕ್ಕಾಗಿ. ಊರ್ವಶಿಯ ಜತೆಗೆ ಅದನ್ನೂ ಪರಿಗಣಿಸಿದರೆ ನಿನ್ನ ಸಂಶೋಧನೆಯ ವೇಗವರ್ಧನೆಗೆ ಸಹಕಾರಿಯಾದೀತು.. ಇನ್ನು ನಿನ್ನ ಸಂಶೋಧನೆ ಹಿಡಿದಿರುವ ದಿಕ್ಕು, ದೆಸೆಯನ್ನು ಸಾರಾಂಶದಲ್ಲಿ ಹೇಳಿಬಿಡು.. ಅಲ್ಲೇನಾದರು ಸಲಹೆ, ಸೂಚನೆಯಿದ್ದರೆ ನೀಡುತ್ತೇನೆ..” ಎಂದ ನರ ಮುನೀಂದ್ರ.

ಬ್ರಹ್ಮದೇವ ಅದುವರೆಗಿನ ಮಾಹಿತಿಯನ್ನೆಲ್ಲ ಒಟ್ಟಾಗಿಸಿ ಅದನ್ನೆಲ್ಲ ಸಾರಾಂಶದ ರೂಪದಲ್ಲಿ ನರನಿಗರುಹಿದ. ಅದರಲ್ಲೂ ತಾವು ಕಂಡ ಜೀವಕೋಶದ ಮಟ್ಟದ ವ್ಯತ್ಸಾಸ, ಅದರ ಕಾಲಗತಿಯ ವೇಗ ಮತ್ತು ಆಯಸ್ಸಿನ ಮಾಹಿತಿಯ ಜತೆಗೆ ಊರ್ವಶಿಯ ಸೃಷ್ಟಿಯಲ್ಲಿ ಪ್ರತಿಕೋಶದ ಮಟ್ಟದಲ್ಲೂ ಸಾಧಿಸಿರುವ ಸ್ವಯಂಭುತ್ವದ ಬಗ್ಗೆಯೂ ವಿವರಿಸಿದ. ಎಲ್ಲವನ್ನು ಸಹನೆಯಿಂದ ಆಲಿಸಿದ ನರ ನಡುವೆ ಉದ್ದಕ್ಕೂ ಸಲಹೆ, ಸೂಚನೆ ನೀಡುತ್ತ ಯಾವ ಅಂಶಕ್ಕೆ ಗಮನವೀಯಬೇಕೆಂದು ಸುಳಿವು ನೀಡಿದವನೆ ಕೊನೆಯಲ್ಲೊಂದು ಮಾತು ನುಡಿದ..

“ಬ್ರಹ್ಮದೇವ.. ಈ ಗಳಿಗೆಯಲ್ಲಿ ಇಷ್ಟು ಮಾತ್ರ ಹೇಳಬಲ್ಲೆ.. ನಿನ್ನ ಸಂಶೋಧನೆ ಹಿಡಿದ ಹಾದಿ ಸರಿಯಾಗಿಯೇ ಇದೆ. ಆದರೆ ಒಂದು ವಿಷಯದತ್ತ ಮಾತ್ರ ಎಚ್ಚರವಿರಲಿ. ಜೀವಕೋಶಮಟ್ಟದ ಸ್ವಾಯತ್ತತೆ ಮತ್ತು ಸ್ವಯಂಭುತ್ವದ ಸಾಧನೆಯೇನು ಕಠಿಣವಲ್ಲ.. ನಿಜವಾದ ತೊಡಕು ಬರುವುದು ಅದರ ಸ್ವನಿಯಂತ್ರಣ ಮತ್ತು ಪರಿಮಿತಿಯ ಕಡಿವಾಣದ ಪರಿಧಿಯನ್ನು ನಿರ್ಧರಿಸುವಲ್ಲಿ… ಅಲ್ಲಿರುವ ಸುವರ್ಣ ಮಧ್ಯಮ ಮಾರ್ಗ ಗೋಚರಿಸುವತನಕ ನಿನ್ನ ಪ್ರಯೋಗ ಬರಿ ತಾಂತ್ರಿಕ ಯಶಸ್ಸನ್ನಷ್ಟೆ ಕಾಣಲು ಸಾಧ್ಯ… ಇದನ್ನು ಗಮನದಲ್ಲಿರಿಸಿಕೊಂಡು ಮುಂದುವರೆಯಲು ಹೇಳು ನಿನ್ನ ಸಂಶೋಧನಾ ತಂಡಗಳಿಗೆ..” ಎಂದವನೇ ಮಾತು ಮುಗಿಸಿದ.

ಅವನಿತ್ತ ತಾಳೆಗರಿಯೋಲೆಗಳ ಅಪಾರ ಜ್ಞಾನ ಸಂಪತ್ತಿನ ಭಾರವನ್ನು ಹೊತ್ತು ಹೊರನಡೆದ ಬ್ರಹ್ಮದೇವನ ಮನಸು ಮಾತ್ರ ಹೂವಿನಂತೆ ಹಗುರಾಗಿತ್ತು – ಆ ಫಲಪ್ರದ ಭೇಟಿಯ ನಂತರ.

(ಇನ್ನೂ ಇದೆ)

00618. ಅಹಲ್ಯಾ_ಸಂಹಿತೆ_೩೭ (ನರಮುನಿ ಬ್ರಹ್ಮದೇವರ ದಿಢೀರ್ ಭೇಟಿ)


00618.ಅಹಲ್ಯಾ_ಸಂಹಿತೆ_೩೭ (ನರಮುನಿ ಬ್ರಹ್ಮದೇವರ ದಿಢೀರ್ ಭೇಟಿ)
_____________________________________________________

(Link to previous episode 36: https://nageshamysore.wordpress.com/2016/03/21/00606-%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ac/)

ಈ ನಡುವೆ ಘಟಿಸಿದ ಮತ್ತೊಂದು ಅನಿರೀಕ್ಷಿತ ಘಟನೆಯೆಂದರೆ ಬ್ರಹ್ಮದೇವ ಮತ್ತು ನರನ ಜತೆಗಿನ ಭೇಟಿ.

ಸೂರ್ಯದೇವನ ಭೇಟಿಯ ನಂತರ ನರನಾರಾಯಣರಿಬ್ಬರಿಗು ಅನಿಸಿತ್ತು – ಒಮ್ಮೆ ಬ್ರಹ್ಮದೇವನ ಜೊತೆ ಮಾತನಾಡುವುದೊಳಿತು ಎಂದು. ಸೃಷ್ಟಿಯ ಹೊಣೆಗಾರಿಕೆ ಹೊತ್ತ ಅವನ ಪಾತ್ರ ತುಂಬಾ ಹಿರಿದಾದದ್ದು. ಅವನ ಮೂಲಕವೆ ಸಹಸ್ರಕವಚನ ಮಿಕ್ಕ ಶೇಷ ಶಕ್ತಿ ಮುಂದಿನ ಯುಗಕ್ಕೆ ವರ್ಗಾಯಿಸಲ್ಪಡಬೇಕು. ಸೂರ್ಯದೇವ ಏನಿದ್ದರು ವಿನಿಮಯದ ಮೂಲಕ ಪರಿವರ್ತನೆಯನ್ನು ಸಾಧಿಸಬಹುದೇ ಹೊರತು ಅದನ್ನು ವರ್ಗಾಯಿಸುವ ಹೊಣೆ ಅವನ ಪರಿಧಿಗೆ ಬರುವುದಿಲ್ಲ.

ನಾರಾಯಣ ಕದನಕ್ಕೆ ಮರಳುವ ಮುನ್ನ ನರನೊಡನೆ ಚರ್ಚಿಸಿ ಆ ಸಲಹೆಯಿತ್ತೆ ನಿರ್ಗಮಿಸಿದ್ದ. ಅವನಿಗೇಕೊ ಅನಿಸಿತ್ತು – ಬ್ರಹ್ಮದೇವನ ಪ್ರಯೋಗದ ಜತೆ ತಮ್ಮ ಭವಿಷ್ಯದ ಕಾರ್ಯಭಾರವೂ ತಳುಕು ಹಾಕಿಕೊಂಡಿದೆಯೆಂದು. ಎಲ್ಲಕ್ಕಿಂತ ಮಿಗಿಲಾಗಿ ಆ ಮುಂದಿನ ಯುಗದಲ್ಲಿ ಸಹಸ್ರಕವಚನ (ಅರ್ಥಾತ್ ಕರ್ಣನ) ವಧೆಯಾಗಬೇಕಾದರು, ತಾವು ಮೂವರು ಒಂದೆ ಕಾಲಮಾನದಲ್ಲಿ ಜನಿಸುವ ಹಾಗೆ ಯಾರಾದರೂ ಉಸ್ತುವಾರಿ ವಹಿಸಿಕೊಳ್ಳಬೇಕಲ್ಲ ? ಅದು ಬ್ರಹ್ಮನ ಕಾರ್ಯಕ್ಷೇತ್ರವಾದ ಕಾರಣ ಅವನೊಡನೆ ಸಮಾಲೋಚಿಸಿ ಕಾರ್ಯತಂತ್ರ ನಿರೂಪಿಸುವುದೆ ಒಳಿತೆಂದು ನಾರಾಯಣ ನುಡಿದಾಗ ನರನಿಗು ಅದು ಸರಿಯೆನಿಸಿ ಬ್ರಹ್ಮದೇವನಿಗೊಂದು ಸಂದೇಶ ಕಳಿಸಿದ್ದ – ಬದರೀಕಾಶ್ರಮದಲೊಂದು ಭೇಟಿ ಸಾಧ್ಯವೇ ? ಎಂದು.

ಅದರಿಂದ ಅಚ್ಚರಿಯೊಂದಿಗೆ ಸಂತಸಗೊಂಡವನು ಬ್ರಹ್ಮದೇವನೆ. ಊರ್ವಶಿಯ ಸೃಜಿಸಿದ ಕುರಿತು ನೂರೆಂಟು ಪ್ರಶ್ನೆ ಕೇಳುವುದಿತ್ತು ಅವನ ಮನದಲ್ಲಿ; ತಪಸಿನ ನಡುವೆ ಹೇಗೆ ಸಂಪರ್ಕಿಸುವುದೆಂಬ ಸಂದಿಗ್ದದಲ್ಲಿ ಇದ್ದವನಿಗೆ ಈ ಆಯಾಚಿತ ಆಹ್ವಾನ ಅವನ ನೂರೆಂಟು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ ಜ್ಞಾನಮೂಲವು ಆಗಬಹುದೆನಿಸಿ ಅನಂದತುಂದಿಲನಾಗಿ ಶೀಘ್ರಭೇಟಿಯ ಸಮಯ ನಿಗದಿಪಡಿಸಿ ಸಂದೇಶ ರವಾನಿಸಿದ್ದ. ಹೊರಡುವ ಮೊದಲು ಗೌತಮನಿಂದ ತಮ್ಮ ಪ್ರಯೋಗದ ಪ್ರಗತಿ ಮತ್ತು ಸಾರವನ್ನೆಲ್ಲ ಸಂಗ್ರಹಿಸಿ ಸಿದ್ದಮಾಡಿಟ್ಟುಕೊಂಡ ಬ್ರಹ್ಮದೇವ – ಚರ್ಚೆಗೆ ಸಿದ್ದಮಾಹಿತಿಯ ಲಭ್ಯ ಸುಲಭವಾಗುವಂತೆ..

“ಬಾ ಬ್ರಹ್ಮದೇವ , ಸುಸ್ವಾಗತ.. ಎಲ್ಲಾ ಸುಗಮ ಕ್ಷೇಮ ತಾನೇ ?” ಎಂದು ಔಪಚಾರಿಕತೆಯ ಮಾತಿನೊಡನೆ ಆಹ್ವಾನಿಸುತ್ತಾ ನೇರ ಮಾತಿಗಿಳಿದಿದ್ದ ನರ.

” ಕ್ಷೇಮಕ್ಕೇನು ಕೊರತೆ ನರ ಮುನಿಂದ್ರ ? ಅಗಾಧ ಗಮ್ಯದ ಗುರಿಯ ಮತ್ತು ನಿರಂತರ ನಡೆಸಬೇಕಾದ ಕಾರ್ಯಚಟುವಟಿಕೆಗಳ ದೆಸೆಯಿಂದ ಸದಾ ಬಿಡುವಿಲ್ಲದ ಕೆಲಸವಾದರೂ ಅದರಲ್ಲೇ ಏನೋ ತೃಪ್ತಿ.. ಹೇಗೊ ನಡೆಯುತ್ತಿದೆ ಎಲ್ಲವೂ ” ಎಂದ

” ಮಾತಿನ ಧಾಟಿ ನೋಡಿದರೆ ಮೇಲೆಲ್ಲ ಸ್ವಸ್ಥದಂತೆನಿಸಿದರು ಒಳಗೆ ಏನೋ ತೀವ್ರವಾಗಿ ಭಾಧಿಸುತ್ತಿರುವ ಹಾಗೆ ಅನಿಸುತ್ತಿದೆ ? ಅದಿರಲಿ, ಮೊದಲು ಕರೆಸಿದ ಮಾತಾಡಿಬಿಡುವೆ.. ” ಎಂದು ನುಡಿದ ನರ ಸೂರ್ಯದೇವನ ಜತೆಗಿನ ಸಂಭಾಷಣೆಯವರೆಗೆ ನಡೆದ ಎಲ್ಲಾ ಮಾತುಕತೆಯ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ.

ಅದರ ಹಿನ್ನಲೆ ಅರಿತಿದ್ದ ಬ್ರಹ್ಮನು ಅದನ್ನೆಲ್ಲ ಆಸಕ್ತಿಯಿಂದ ಆಲಿಸುತ್ತ ನಡುನಡುವೆ ಪ್ರಶ್ನೆ ಕೇಳುತ್ತ ವಿಷಯವನ್ನು ಸ್ಪಷ್ಟಪಡಿಸಿಕೊಂಡ. ಎಲ್ಲವೂ ತಮ್ಮ ಮೂಲ ಯೋಜನೆಯನುಸಾರ ನಡೆಯುತ್ತಿದೆಯೇ ಇಲ್ಲವೇ ಎಂದು ತಾಳೆ ನೋಡಲು ಇದು ಅಗತ್ಯವೂ ಆಗಿತ್ತು. ಎಲ್ಲಾ ಮುಗಿಸಿ ಕೊನೆಯ ಹಂತಕ್ಕೆ ಬಂದ ನರಮುನಿ ಬ್ರಹ್ಮದೇವನನ್ನು ಕೇಳಿದ..

“ಬ್ರಹ್ಮದೇವ ಎಲ್ಲವು ನಾವಂದುಕೊಂಡಂತೆ ನಡೆದರೆ ಕದನಾನಂತರ ಬಲಗುಂದಿದ ಸಹಸ್ರತೇಜನ ಶೇಷಶಕ್ತಿ ಮೊದಲು ಸೂರ್ಯದೇವನ ಕೈ ಸೇರುತ್ತದೆ – ವಿನಿಮಯದ ಮುಖೇನ ತಾಮಸ , ಸಾತ್ವಿಕದ ಅದಲು ಬದಲುವಿಕೆಗಾಗಿ. ಆ ಹಂತದಲ್ಲಿ ವಿನಿಮಯಕ್ಕೆ ಸಿದ್ದತೆ ಪೂರ್ಣವಾಗುತ್ತಿದ್ದಂತೆ ನಾನು ಕೈಗೂಡಿಸಬೇಕು – ಸಹಸ್ರಕವಚನ ಆ ತಾಮಸವನ್ನು ಆವಾಹಿಸಿಕೊಳ್ಳುತ್ತ. ಆ ನಂತರ ನಾವು ಮೂವರು ಯುಗಾಂತರದ ಪ್ರಕ್ಷೋಭನೆಯಿಂದ ಪ್ರಳಯ ಕಾಲ ಪೂರ್ತಿ ಸಂರಕ್ಷಿಸಲ್ಪಟ್ಟು , ತದನಂತರ ಒಂದೆ ಕಾಲಮಾನದಲ್ಲಿ ಮತ್ತೆ ಜನಿಸುವಂತೆ ನಿಭಾಯಿಸಬೇಕು. ಇದನ್ನೆಲ್ಲಾ ಕ್ರಮಬದ್ಧವಾಗಿ ನಡೆಸಲು ನಿನ್ನ ಉಸ್ತುವಾರಿ, ಸಹಕಾರ ಅಗತ್ಯ. ಅದರ ಸಾಧಕಬಾಧಕಗಳ ಚರ್ಚೆಗಾಗಿಯೇ ಈ ಭೇಟಿ…”

ಅವನ ಮಾತನ್ನು ಗಮನವಿಟ್ಟು ಆಲಿಸಿದ ಬ್ರಹ್ಮದೇವ ಉತ್ತರಿಸಿದ, “ನರಮುನಿಂದ್ರ.. ಈ ವ್ಯೋಮ ಪ್ರಳಯದ ತಲ್ಲಣ ಸೌರವ್ಯೂಹದ ಮಟ್ಟಕ್ಕೆ ಮಾತ್ರ ಸೀಮಿತವಾಗಿರುವುದರಿಂದ ನಾವು ಮಾಡಬೇಕಾಗಿರುವುದು ಇಷ್ಟೆ.. ಪ್ರಳಯಕ್ಕೆ ಮೊದಲೇ ಸೂರ್ಯದೇವನ ವಿನಿಮಯ ಪ್ರಯೋಗವನ್ನು ಮುಗಿಸಿಬಿಡಬೇಕು.ನಂತರ ನೀವು ಮೂವರ ಶೇಷಶಕ್ತಿಯನ್ನು ಶಕ್ತಿಯ ಮೂಲರೂಪಕ್ಕೆ ಸಂಕ್ಷಿಪ್ತಿಸಿ ಸೂಕ್ತ ರಕ್ಷಣಾ ಕರಂಡಕಗಳಲ್ಲಿರಿಸಬೇಕು – ಯುಗಾಂತರದ ಪೂರ ಜತನದಿಂದಿರುವ ಹಾಗೆ. ನಂತರ ಪ್ರಳಯಬಾಧೆಯಿರದ ಜಾಗಕ್ಕೆ ಅವನ್ನು ರವಾನಿಸಿ ಸಂರಕ್ಷಿಸಿಡಬೇಕು. ಇದನ್ನು ಸತ್ಯಲೋಕದ ಸುಭದ್ರತೆಯಲ್ಲಿ ಕಾಪಾಡಿಕೊಂಡರೆ ಆಯ್ತು. ಅದೇನು ಕಷ್ಟವಾಗಿ ತೋರುತ್ತಿಲ್ಲ.. ಆ ನಂತರ ಸೂಕ್ತ ಸಮಯದಲ್ಲಿ ಅವು ಮೂರನ್ನು ಒಟ್ಟಿಗೆ ಬಿಡುಗಡೆ ಮಾಡಿ ಯೋನಿಜ ಸೃಷ್ಟಿಗೆ ನಾಂದಿ ಹಾಕಿದರೆ ಆಯ್ತು… ಇದಾವುದರಲ್ಲೂ ನನಗೆ ಅಡ್ಡಿ ಆತಂಕಗಳು ಕಾಣುತ್ತಿಲ್ಲ – ಒಂದನ್ನು ಬಿಟ್ಟು… ಇಲ್ಲಿ ನಿಜವಾದ ತೊಡಕಿರುವುದು ಸಂಕ್ಷಿಪ್ತೀಕರಣದಲ್ಲಿ…”

” ಅದೇನು ತೊಡಕು ಬ್ರಹ್ಮದೇವ ? ಪ್ರತಿ ಜೀವಿಯೂ ದೇಹ ಕಳೆದುಕೊಂಡಾಗ ಮಿಕ್ಕ ಶೇಷಶಕ್ತಿಯನ್ನು ಆತ್ಮರೂಪದಲ್ಲಿ ಸಂಕ್ಷಿಪ್ತವಾಗಿಸಿ ತಾನೇ ಮತ್ತೊಂದು ದೇಹಕ್ಕೆ ರವಾನಿಸುವುದು ? ಇದರಲ್ಲಿ ಹೊಸತೇನಿದೆ ?”

” ಅದೇನೊ ನಿಜ ನರಮುನಿ.. ದೇಹದ ಮಿಕ್ಕುಳಿದ ನಿವ್ವಳ ಶಕ್ತಿಯನ್ನು ಅವಿನಾಶಿ ಆತ್ಮದ ಸಾಂಗತ್ಯದಲ್ಲಿ ಸಂಕ್ಷಿಪ್ತಿಸಿ ಮುಂದಿನ ದೇಹಕ್ಕೆ ರವಾನಿಸುವುದು ಈಗ ನಿಸರ್ಗ ಸಹಜವಾಗಿ ನಡೆಯುತ್ತಿರುವ ಪ್ರಕ್ರಿಯೆ.. ಆದರೆ ಇಲ್ಲಿ ಆ ಸಂಕ್ಷಿಪ್ತ ಶಕ್ತಿ ಕಾಯುವ ಅಗತ್ಯವಿಲ್ಲ.. ತನ್ನ ನಿವ್ವಳ ಶೇಷಶಕ್ತಿ ಸಾತ್ವಿಕವೋ, ತಾಮಸವೋ, ರಾಜಸವೋ ಎಂಬುದರ ಮೇಲೆ ಮತ್ತು ಇಚ್ಚಾ-ಕ್ರಿಯಾ-ಜ್ಞಾನ ಶಕ್ತಿಗಳ ಸಮಷ್ಟಿತ ಫಲಿತ ಸ್ವರೂಪದನುಸಾರ ತನಗೆ ಹೊಂದುವ ಮತ್ತು ಅನುಮತಿಸುವ ಜೀವಿ ದೇಹವನ್ನು ಹೊಕ್ಕಿಕೊಳ್ಳುತ್ತದೆ. ಅದರ ಸಂಪೂರ್ಣ ನಿಯಂತ್ರಣ ತಂತಾನೆ ನಡೆಯುವ ಹಾಗೆ ಇದೆ ಈಗಿನ ಸಮತೋಲಿತ ವ್ಯವಸ್ಥೆ…”

“ಮತ್ತೆ..?”

” ಆದರೆ ನಿಮ್ಮ ಮೂವ್ವರ ವಿಷಯದಲ್ಲಿ ಹಾಗಲ್ಲ.. ಧೀರ್ಘಕಾಲದವರೆಗು ಸಂಕ್ಷಿಪ್ತ ರೂಪದಲ್ಲಿ ಹಾಳಾಗದಂತೆ ಕಾಪಾಡುವುದು ಒಂದು ಪಂಥವಾದರೆ..ಅಷ್ಟು ಧೀರ್ಘ ಕಾಲದ ನಂತರ ಮತ್ತೆ ಸಕ್ರೀಯಗೊಳಿಸಿ ಎಂದಿನ ಹಾಗೆ ನಡೆಯುವಂತೆ ಮಾಡುವುದು ಮತ್ತೊಂದು ಪಂಥ..ಒಂದು ರೀತಿ ಸುಧೀರ್ಘ ಶೀಥಲಿಕರಣದ ಶೈತ್ಯಾಗಾರದಲಿರಿಸಿ ತೆಗೆಯುವ ಹಾಗೆ.. ಇದುವರೆವಿಗೂ ಈ ಯತ್ನ ಮಾಡಿರದ ಕಾರಣ ಇದು ಹೇಗೆ ಪ್ರವರ್ತಿಸುವುದೋ ಗೊತ್ತಿಲ್ಲ..”

ನರ ಒಂದರೆಕ್ಷಣ ಕಣ್ಣುಮುಚ್ಚಿ ಕುಳಿತ ಬ್ರಹ್ಮದೇವನ ಮಾತನ್ನೇ ಮಥಿಸುತ್ತ.. ತಮ್ಮ ಪ್ರಯೋಗದ ಯಾವುದಾದರು ಅಂಶ ಇದರಲ್ಲಿ ಬ್ರಹ್ಮದೇವನಿಗೆ ಪೂರಕವಾಗಿ ಒದಗಬಹುದೇ ? ಎಂದು ಚಿಂತಿಸುತ್ತಿತ್ತು ಅವನ ಮನ. ಬಾಯಿ ಮಾತ್ರ ಯಾಂತ್ರಿಕವಾಗಿ ಕೇಳಿತ್ತು….”ಹಾಗಾದರೆ ಇದಕ್ಕೇನು ಉಪ್ಪಾಯ ಬ್ರಹ್ಮದೇವ ? ಇದನ್ನು ಸಾಧಿಸುವ ದಾರಿಯೇನಾದರೂ ಹುಡುಕಲೇ ಬೇಕಲ್ಲಾ?”

ಬ್ರಹ್ಮದೇವನೂ ಅದನ್ನೇ ಚಿಂತಿಸುತ್ತಿದ್ದ. ಸದ್ಯಕ್ಕವನಲ್ಲು ಉತ್ತರವಿದ್ದಂತೆ ಕಾಣಲಿಲ್ಲವಾದರು ತನ್ನ ಆಲೋಚನೆಯನ್ನು ಅನಾವರಣಗೊಳಿಸುತ್ತ ನುಡಿದ…” ಸದ್ಯಕ್ಕೆ ನಾನು ನಡೆಸುತ್ತಿರುವ ಅ-ಹಲ್ಯೆಯ ಪ್ರಯೋಗದಲ್ಲಿ ಜೀವಕೋಶಾದಿ ಸೂಕ್ಷ್ಮಮಟ್ಟದಲ್ಲಿ ಕೆಲವು ಸಂಶೋಧನೆಗಳು ನಡೆಯುತ್ತಿವೆ.. ಆ ಸಂಶೋಧನೆಗೆ ಈ ಅಂಶವನ್ನು ಸೇರಿಸುತ್ತೇನೆ… ಬಹುಶಃ ಅಲ್ಲೇನಾದರೂ ಉತ್ತರ ಸಿಕ್ಕೀತೂ… ಸದ್ಯಕ್ಕೆ ಈ ಪ್ರಶ್ನೆಗೆ ಖಚಿತ ಉತ್ತರ ಸಿಗುವವರೆಗೆ ನಿಮ್ಮ ಮೂವ್ವರ ಮರುಜನ್ಮ ಸಾಧ್ಯವಾಗದು ಎಂದು ಮಾತ್ರ ಅರಿವಿರಲಿ.. ”

“ಸರಿ ಬ್ರಹ್ಮದೇವಾ.. ಸದ್ಯಕ್ಕೆ ಅದಕ್ಕಿಂತ ಹೆಚ್ಚಿನದೇನನ್ನು ಮಾಡುವ ಸ್ಥಿತಿಯಲ್ಲಿ ನಾವಿಲ್ಲ.. ಆದರೆ ನನ್ನ ಪ್ರಯೋಗದಲ್ಲಿ ನಡೆದ ಕೆಲವು ಸಂಬಂಧಿ ಫಲಿತಾಂಶಗಳ ತಾಳೆಗರಿಯ ಪ್ರತಿಯನ್ನು ನಿನಗೆ ನೀಡುತ್ತೇನೆ. ಅದರ ಕೆಲವು ಅಂಶಗಳು ನಿನಗೆ ಸಹಾಯಕವಾಗಬಹುದು..” ಎಂದ ನರ ತನ್ನ ಸಂಶೋಧನಾ ಗ್ರಂಥಾಲಯದ ದಿಕ್ಕಿನತ್ತ ದೃಷ್ಟಿ ಹಾಯಿಸುತ್ತ.

“ಸರಿ.. ಹಾಗೆಯೇ ಆಗಲಿ.. ಆದರೆ ನನಗೊಂದು ಸೋಜೀಗ …”

“ಏನದು ?”

” ಸೂರ್ಯದೇವನ ಪ್ರಯೋಗದಲ್ಲಿ ನಿನ್ನ ಮತ್ತು ಸಹಸ್ರಕವಚನ ನಡುವೆ ನಡೆವ ಶಕ್ತಿಯ ವಿನಿಮಯದಲ್ಲಿ ಸಾತ್ವಿಕ ಮತ್ತು ತಾಮಸ ಸ್ವರೂಪದ ಅದಲು ಬದಲಾಗುತ್ತದೆಯಲ್ಲವೇ ?”

“ಹೌದು…?”

” ಹಾಗಾದಾಗ ನೀವಿಬ್ಬರೂ ಪರಸ್ಪರರ ಶಕ್ತಿಯ ಭಾಗವನ್ನು ಹಂಚಿಕೊಂಡು ಅದನ್ನು ನಿಮ್ಮದೇ ಭಾಗವಾಗಿಸಿಕೊಂಡು ಬಿಡುತ್ತೀರ..ಅಂದರೆ ತದನಂತರ ನೀವಿಬ್ಬರೂ ಒಂದು ರೀತಿಯ ಭಾತೃತ್ವದ ಸಂಬಂಧಿಗಳಾದ ಹಾಗೆ ಲೆಕ್ಕವಲ್ಲವೇ ? ”

ನರ ಆ ದಿಸೆಯಲ್ಲೆಂದೂ ಯೋಚಿಸಿಯೇ ಇರಲಿಲ್ಲ..” ಹೌದಲ್ಲವೆ..? ಅಂದರೆ ನನ್ನ ಮೇಲೆ ನಾನೇ ಯುದ್ಧ ಮಾಡಿದ ಹಾಗೆ!”

ಬ್ರಹ್ಮದೇವ ಅಲ್ಲಿಯತನಕ ಹೋಗಿಯೇ ಇರಲಿಲ್ಲ..ಅವನಿನ್ನೂ ಜನ್ಮದ ಸಂಭವನೀಯತೆಯಲ್ಲೆ ಚಿಂತನೆ ನಡೆಸಿದ್ದ.. ” ಅದಿರಲಿ ನರ ಮುನೀಂದ್ರ.. ನೀವಿಬ್ಬರು ಒಂದೇ ಶಕ್ತಿಶೇಷವನ್ನು ಹಂಚಿಕೊಂಡಿರೆಂದರೆ ನಿಮ್ಮಿಬ್ಬರ ಜನ್ಮವೂ ಒಂದೇ ಗರ್ಭದಲ್ಲಿ ಆಗಬೇಕು.. ಅಂದರೆ ನಿಮ್ಮ ಜನ್ಮಕಾರಣ ಮಾತೆ ಒಂದೇ ಆಗಬೇಕು..”

“ಅದನ್ನೇ ನಾನು ಹೇಳಿದ್ದು.. ಸೋದರರಾಗಿ ಹುಟ್ಟಿ ವಧೆಯ ಕಾರ್ಯ ನಿಭಾಯಿಸುವುದಾದರೂ ಎಂತು ? ಈ ಉದ್ದೇಶದ ಬುಡಕ್ಕೆ ಪೆಟ್ಟು ಕೊಡುವಂತಿದೆಯಲ್ಲ ಸೂರ್ಯದೇವನ ಈ ವಿನಿಮಯದ ಪ್ರಸಂಗದಲ್ಲಿ ? ” ಎಂದ ನರ.

” ಹೂಂ… ಇದನ್ನು ಹೇಗೆ ನಿಭಾಯಿಸುವುದೆಂದು ನಾನು ಸೂರ್ಯದೇವ ದೇವೇಂದ್ರರ ಜತೆ ಚರ್ಚಿಸುತ್ತೇನೆ.. ಇದರ ಅರ್ಥವೇನೆಂದರೆ ನೀವಿಬ್ಬರೂ ಜನಿಸಿದ ಗರ್ಭ ಒಂದೇ ಆದರೂ ನೀವಿಬ್ಬರೂ ಒಂದಾಗಿ ಸೋದರರಂತೆ ಇರದ ಹಾಗೆ ಸನ್ನೀವೇಶ ನಿರ್ಮಾಣವಾಗಬೇಕು… ಅಂದರೆ ಹುಟ್ಟಿನಿಂದಲೆ ನೀವೂ ಬೇರಾಗಿಬಿಟ್ಟಿರಬೇಕು.. ಇದು ಸೂಕ್ತವಾಗಿ ನಡೆಯಬೇಕಾದರೆ ಮೊದಲು ಸಹಸ್ರಕವಚನ ಜನನವಾಗಿ ನಂತರ ನೀನು ಜನಿಸುವ ಮೊದಲೇ ಅವನು ಬೇರ್ಪಟ್ಟುಹೋಗುವ ಹಾಗೆ ಸಂಧರ್ಭ ನಿರ್ಮಿಸಬೇಕು.. ನೀನು ಜನಿಸುವ ಕಾಲಕ್ಕೆ ನಿನಗಾದರ ಅರಿವೇ ಇಲ್ಲದ ಹಾಗೆ ನೋಡಿಕೊಳ್ಳಬೇಕಲ್ಲಾ? ಹೀಗಾಗಿ ಕೆಲವು ಪಾತ್ರಗಳು ಗುಟ್ಟಾಗಿಯೇ ತಮ್ಮ ಭೂಮಿಕೆ ನಿಭಾಯಿಸಬೇಕು.. ನಿನ್ನ ಜನ್ಮಕ್ಕೆ ದೇವರಾಜನು ಹೊಣೆ ಹೊರುವೆನೆಂದಿದ್ದಾನೆ.. ಸಹಸ್ರಕವಚನಿಗೆ ಸೂರ್ಯದೇವ.. ಹೀಗಾಗಿ ಅವರಿಬ್ಬರೂ ಇದನ್ನು ಸೂಕ್ತವಾಗಿ ನಿಭಾಯಿಸುವಂತೆ ನೋಡಿಕೊಳ್ಳಬೇಕು…” ಎಂದು ಹೇಳಿ ಮೌನ ತಾಳಿದ ಬ್ರಹ್ಮದೇವ.

(ಇನ್ನೂ ಇದೆ)

(Link to the next episode no. 38: https://nageshamysore.wordpress.com/2016/03/27/00621-0038_%e0%b2%85%e0%b2%b9%e0%b2%b2%e0%b3%8d%e0%b2%af%e0%b2%be_%e0%b2%b8%e0%b2%82%e0%b2%b9%e0%b2%bf%e0%b2%a4%e0%b3%86_%e0%b3%a9%e0%b3%ae-%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae/)

ನಾಗೇಶಮೈಸೂರು,ಅಹಲ್ಯಾ,ನಾಗೇಶ,ಮೈಸೂರು,ಕಾದಂಬರಿ,ಸಂಹಿತೆ,mysore,nagesha,samhite,ahalya,novel,nageshamysore