01534. ಕಾಲದ ಮರಳು


01534. ಕಾಲದ ಮರಳು

__________________________

ಹಿಡಿ ಹಿಡಿದಷ್ಟೆ ಕಾಲದ ಮರಳು

ಮರಳುವುದು ಮರಳಿ ಗೂಡಿಗೆ

ಸಂದಿಗೊಂದಿ ರಾಜವೀಧಿ ಹಾದು

ಗಳಿಗೆ ಗಂಟೆ ಕ್ಷಣ ಕಳೆದು ವಿದಾಯ ||

ಹಿಡಿಯಲ್ಲಿದೆ ಎಲ್ಲ ಹಿಡಿಯಲಿಲ್ಲ

ಹಿಡಿಯಲಿ ಬಿಡಲಿ ನಿಲ್ಲದ ಸರದಾರ

ಮುಷ್ಟಿ ಸಮಷ್ಟಿ ಅಸ್ಪಷ್ಟ ಅನುಭವ ಗಮ್ಯ

ಲೆಕ್ಕಾಚಾರ ತಪ್ಪದೆ ನಿತ್ಯ ಜಾರುವ ಗಣ್ಯ ||

ಮರಳ ಕಣ ಕಣ ನಿನ್ನ ಖಾತೆಗಾಗಿ ಜಮೆ

ಬಳಸು ಬಿಡು ಲೆಕ್ಕಿಸದೆ ಖರ್ಚಾಗೊ ದ್ರವ್ಯ

ಬಳಸಿದರುಚಿತ ಕಳೆದು ಹೋಗುವ ಖಚಿತ

ಹಂಚಿ ಸರಿಸಮನೆಲ್ಲಗು ನಿಸ್ವಾರ್ಥ ಖಜಾನೆ ||

ವಿಸ್ಮಯ ಶಕ್ತಿ ಸಂಚಯ ಮರಳುಗಾಡು

ಮೊಗೆದಲ್ಲಿಂದಲ್ಲಿಗೆ ಸುರಿವ ಸೊಗಡು

ಸರಿದಿದ್ದು ಭೂತ ಮೊಗೆದದ್ದಲ್ಲೆ ಪ್ರಸ್ತುತ

ಮಿಕ್ಕಿದ್ದು ಭವಿತ, ನೆರಳಷ್ಟೆ ಜನುಮದ ಕರ್ಮ ||

ಕೈಗೆ ಸಿಕ್ಕರು ಸಿಗದಲ್ಲ, ಸಿಕ್ಕಿದ ಕಣ ನಿನದಲ್ಲ

ನಿನ್ನ ಲೆಕ್ಕದಲೆಲ್ಲ ಬರೆದು ಜರುಗೊ ನೆರಳು

ಸದ್ವಿನಿಯೋಗ ದುರ್ವಿನಿಯೋಗ ನಿನಗಿಹ ಸ್ವೇಚ್ಛೆ

ಮೊಹರುಳಿಸೆ ಇತಿಹಾಸ ತಪ್ಪೆ ಕುರುಹಿಲ್ಲದೆ ಮಾಯ ||

– ನಾಗೇಶ ಮೈಸೂರು

೩೧.೧೨.೨೦೧೭

(Photo credit / Photo right belongs to: @Mayush Jain, Thank you and happynew year 2018)

01532. ಕಾಲದ ಹಕ್ಕಿಗೆ..


01532. ಕಾಲದ ಹಕ್ಕಿಗೆ..

_______________________

ಹಕ್ಕೇನಿದೆ ನಿನ್ನ ದೂರಲು

ಹದಿನೇಳರ ಹರೆಯದ ಹಕ್ಕಿ?

ಹಕ್ಕಿಯಾಗಿ ಹಕ್ಕಿಗಾಗಿ ಹಾರಿದೆ

ಕತ್ತಲನಟ್ಟಿ, ಬೆಳಕ ಬೆನ್ನಟ್ಟಿ..||

ಕೂತಿದ್ದುಂಟು ದೇಕಿ ದಣಿದು

ಅನಿಸಿದ್ದುಂಟು ಬರಿ ಕಗ್ಗತ್ತಲು

ಕಾಡಿರಲಾರೊ ಪಾತಾಳ ಭೈರವಿ

ಹರಿದೆಲ್ಲಿಂದಲೊ ದ್ಯುತಿ ಪ್ರವಾಹ ! ||

ತಮ ದುರ್ಗಮದಲು ಕಿಡಿ ಕಿಂಡಿ

ಸೆಳೆ ತೆರೆದು ಕದ ನಿರಾಳ ತಂಗಾಳಿ

ತೇಪೆ ಹಚ್ಚಿದ ರಂಗು ಹೊಂಬಿಸಿಲು

ಹಚ್ಚಿ ಬೆಳಗಿದ ಜ್ಯೋತಿ ದಾರಿ ದೀಪ ||

ಕಾಲದ ಹಕ್ಕಿ ಹಾರಿ ಗಾಯ ಮಾಯ

ಮಾಯದ ಗುರುತಿಗೆ ಪ್ರೀತಿ ಲೇಪನ

ಬೆಸೆದ ಹೃದಯ ಸಂವಾದ ಸಾಂಗತ್ಯ

ನಿಂತ ನೀರಲ್ಲ ಬದುಕು ಭ್ರೂಣ ಬಾಲ ||

ದಾಟಿಲ್ಲವಿನ್ನು ಕಾನನ ಕಾಲು ದಾರಿ ಸ್ಪಷ್ಟ

ಅಭೇದ್ಯವಿತ್ತೆನಿಸಿದ ಸರಕೀಗ ಸಹನೀಯ

ಹದಿನೆಂಟರ ಹೊತ್ತಗೆ ಹೊತ್ತಂತೆ ಆಶಯ

ಪ್ರಖರ ಭರವಸೆ ಕಾಂತಿ ಹಕ್ಕಿ ಕಾಲುಂಗುರ ||

– ನಾಗೇಶ ಮೈಸೂರು

(Nagesha Mn)

(ಹೊಳೆನರಸೀಪುರ ಮಂಜುನಾಥ ರವರ ವಾರಾಂತ್ಯದ ಚಿತ್ರಕ್ಕೆ ಹೊಸೆದ ಕವನ..)

01477. ಕಾಲದ ಮುಖವಾಡ ಮಾಯೆ


01477. ಕಾಲದ ಮುಖವಾಡ ಮಾಯೆ

__________________________________

ತಲೆಯಲಿ ಹೊತ್ತವಳೊಬ್ಬಳು

ಹೆಗಲಲಿ ಇಟ್ಟವಳಿನ್ನೊಬ್ಬಳು

ಎದೆ ಕಲಶವಾಗಿಸಿ ಮತ್ತೊಬ್ಬಳು

ಯಾವುದವಳ ನಿಜರೂಪ ಸ್ವರೂಪ ? ||

ಕೊಡಪಾನ ಹಾಲೂಡಿಸಿದವಳು

ಹೆಗಲಲೆತ್ತಿ ಕುಣಿದಾಡಿಸಿದವಳು

ಮುದ್ದಲಿ ಕೆಡಿಸಿ ತಲೆಗೇರಿಸಿದವಳು

ಮೂವರಲ್ಲ ಅವಳೊಬ್ಬಳೆ ತಾಳು! ||

ರಮಣನಿಗದೆ ಕೊಡವಿತ್ತಾ ಮಹಿಳೆ

ಹೆಗಲಿಗ್ಹೆಗಲು ಕೊಡ ಹೊತ್ತಾಗಲೆ

ಶಿರದೆ ಹೊತ್ತು ನಿಭಾಯಿಸಿ ಒಬ್ಬಳೆ

ನೋಡು ಮೂವರಲ್ಲ ಅವಳೊಬ್ಬಳೆ! ||

ಮುಂದಾಲೋಚನೆ ನೋಟದೆ ಸಾಕಾರ

ಹಿನ್ನಲೆಯ ಇತಿಹಾಸ ಕೆದಕುವ ಕೊಸರ

ಪಾರ್ಶ್ವ ನೋಟದೆ ಗಮನಿಸುತ ಪರಿಸರ

ಮೂರಲ್ಲ ಒಂದೆ ಕೊಡದಾಚಾರ ವಿಚಾರ ! ||

ಬದುಕ ಕೊಡವೊಂದೆ ಪಾತ್ರಗಳ್ಹಲವು

ಪಾತ್ರೆಯ ನೀರಾಗಿ ಪಸರಿಸುವ ಸೊಗವು

ಭೂತ ಭವಿತ ಪ್ರಸ್ತುತ ಏಕೀಕೃತ ಸ್ತ್ರೀ ಕಲಶ

ಕಾಲದ ಮುಖವಾಡ ತೊಟ್ಟ ಮಾಯೆಯ ವೇಷ ||

– ನಾಗೇಶ ಮೈಸೂರು

(Nagesha Mn)

(Picture source from Internet / social media – received via Suma B R – thank you madam !!😍👌🙏👍😊)

00953. ಕಾಲದ ಬಾಲ


00953. ಕಾಲದ ಬಾಲ
_________________


ಹಿಡಿದು ಕಾಲದ ಬಾಲ
ಯಾತ್ರೆ ಹೊರಟೋರೆ ಎಲ್ಲ
ತೇಜಿ ಕುದಿರೆಯ ಬಾಲಕೆ
ಪಣ ಕಟ್ಟಿ ಜೂಜಾಡುವ ಜಾಲ..

ಕಾಲದ ಬಾಲ ತಲೆಯಲಿ
ತಲೆ ಹೊಕ್ಕಿದ್ದು ಬಾಲದಲಿ
ಕಾಲಚಕ್ರದ ಒಗಟೊಗಟು
ಸುತ್ತಿ ತಲೆಸುತ್ತೋ ಖಯಾಲಿ

ಕಳೆದುಹೋದರೆ ಚರಿತ್ರೆ ಹಳೆ
ಮರಳಿ ಬರುವಂತಿದ್ದರೆ ನಾಳೆ
ಕೈಲಿದ್ದಾಗಲೆ ಪದಕ, ಬಹುಮಾನ
ಹಿಡಿಯೊ ಬಿಟ್ಟು ಮಾತಿನ ಬೊಗಳೆ ..

ಕಿಲಾಡಿ ವೃದ್ಧ ಬಾಲಕ ಪ್ರಬುದ್ಧ
ಪ್ರಾಯ ಯೌವ್ವನ ಅಸಂಬದ್ಧ
ಎಲ್ಲವು ತಾನಾಗಿ ಎಲ್ಲರ ಭಾವ
ಕಳಚದ ಕೊಂಡಿ ಕಳಚೆ ನಿರ್ಯಾಣ..

ಕಾಲಕ್ಕಿಲ್ಲ ಕೊನೆಮೊದಲು ವೃತ್ತ
ಸುತ್ತುತ್ತೆ ತನ್ನಲ್ಲೆ ಲೆಕ್ಕಾಚಾರ ಪ್ರವೃತ್ತ
ಧೂರ್ತಾಧೂರ್ತತೆ ಸಜ್ಜನಿಕೆ ದೌರ್ಜನ್ಯ
ಎಲ್ಲಕೂ ನಿರ್ಲಿಪ್ತ ಕಂಡೂ ಕಾಣದ ಮಳ್ಳ

– ನಾಗೇಶ ಮೈಸೂರು

– ನಾಗೇಶ ಮೈಸೂರು
22.10.2016
(Picture source Creative Commons)

00856. ತಾತನ ಕಾಲದ ಆರಾಮ ಕುರ್ಚಿ


00856. ತಾತನ ಕಾಲದ ಆರಾಮ ಕುರ್ಚಿ
____________________________

Satya HG ಸಾರ್ ಅವರ ಹತ್ರ ಇರೋ ಒಂದು ಆರಾಮ ಚೇರಿನ ಚಿತ್ರದ ಜೊತೆಗೊಂದು ಪೋಸ್ಟ್ ಹಾಕಿದ್ರು (FB). ಅದರ ಜತೆಗೆ ನನಗು ಸ್ವಲ್ಪ ಹಳೆ ನೆನಪು ಕೆದಕಿದಂತಾಗಿ ಆರಾಮ ಕುರ್ಚಿ ಮೇಲೊಂದು ಪದ ಕಟ್ಟಿಸಿಬಿಡ್ತು. ಅದು ಇಲ್ಲಿದೆ – ಸತ್ಯ ಸಾರ್ ಪ್ರೇರಣೆಯಾಗಿದ್ದಕ್ಕೆ ಥ್ಯಾಂಕ್ಸ್ 🙏😊 !


ಆರಾಮ ಚೇರು
ನೆನಪುಗಳದೇ ತೇರು
ತಾತನ ಕಾಲದ ಆಸ್ತಿ
ಮೊಮ್ಮಕ್ಕಳಾಡಿದ್ದೆ ಜಾಸ್ತಿ ! ||

ಹಳೆ ಮರದ ಫ್ರೇಮು
ಆಯತದ ಉದ್ದನೆ ರಿಮ್ಮು
ಮೂರನೆ ಒಂದಳತೆ ತುದಿಗೆ
ಮತ್ತೊಂದಾಯುತ ಕಟ್ಟಿತ್ತೆ ಕೆಳಗೆ ! ||

ಅದರಾ ಹಿಂದಿನ ತುದಿಗೆ
ಚಕ್ಕೆ ಮೆಟ್ಟಿಲು ಕೆತ್ತಿದ ಹಾಗೆ
ಮೂರನೆ ಒಂದುದ್ದದ ಮೇಲಿಂದ
ಮೂರ್ಕಡ್ಡಿಯ ಆಯತ ಕೆಳ ಬಂದ ! ||

ಮೊದಲ ಮೆಟ್ಟಿಲ ಮೇಲೆ ಕೂತ
ನಡು ಮೆಟ್ಟಿಲಿಗೆ ಜಾರಿ ಒರಗುತ್ತಾ
ಮೂರನೆ ಮೆಟ್ಟಿಲಿಗರ್ಧ ಮಲಗುತ್ತಾ
ಕೊನೆ ಮೆಟ್ಟಿಲಿಗಿಡೆ ನಿದಿರಾ ಚಕ್ಕಂದ ! ||

ಹಾಸಿದ ಬಟ್ಟೆ ಸೊಗ ತೂಗಾಟ
ತೂಕಡಿಕೆ ತೊಟ್ಟಿಲ ಮಗುವಾಟ
ತುದಿ ಮಡಚಿ ಹೊಲಿಗೆ ಕೊಳವೆ ತೂಬು
ದುಂಡುದ್ದನೆ ದೊಣ್ಣೆ ತುರುಕೊ ತೂತಿನ ಜೇಬು ! ||

ನೆನಪಲ್ಲಿದೆ ಮಕ್ಕಳದೊಂದೇ ಆಟ
ಕಳಚವಿತಿಟ್ಟು ದೊಣ್ಣೆ ಬಟ್ಟೆಯ ಹಾಸಿಟ್ಟ
ಕೂತವರಲ್ಲೆ ದೊಪ್ಪನೆ ಕುಸಿದು ಅಂಡು
ಸದ್ದಾಗುತ ಲಬಲಬ ಕೂಗೆ ಸೈನ್ಯವೆ ದೌಡು ! ||

ಇತಿಹಾಸ ಚರಿತೆ ಪರಿಕರವಿದ್ದು ದಹ್ಯ
ರಂಗಿನ ಹಂಗಿಲ್ಲದೆ ಹಳೆಬೇರಿನ ಸಾಹಿತ್ಯ
ಹೊಸ ಚಿಗುರುಗಳರಿತಾವೆ ಅಗ್ಗದ ಈ ಸೌಖ್ಯ ?
ಹಳತು ಹೊಸತಿಗೆ ಸೇತುವೆಯಾಗೋ ಸಾಂಗತ್ಯ ! ||

– ನಾಗೇಶ ಮೈಸೂರು